ಪ್ರಕಾಶಕರು: Techfiz Inc
ಪುಟಗಳು: ೨೦೧
ಬೆಲೆ: ೪೯ ರೂ.
ಜಗತ್ತಲ್ಲಿ ಹಲವಾರು ಹೊಸಹೊಸ ಆವಿಷ್ಕಾರಗಳು ಹಿಂದಿನಕಾಲದಿಂದಲೂ ಆಗುತ್ತಿವೆ, ಆಗುತ್ತಿರುತ್ತವೆ. ಮಾನವನ ದೈನಂದಿನ ಜೀವನದಿಂದ ಹಿಡಿದು ವಿವಿಧೋದ್ದೇಶಗಳಿಗೆ ಸಹಾಯವಾಗಬಲ್ಲಂತಹ ಉಪಕರಣಗಳನ್ನು, ವಸ್ತುಗಳನ್ನು, ಯಂತ್ರಗಳನ್ನು ವಿಜ್ಷಾನಿಗಳು, ಸಂಶೋಧಕರೆನೆಸಿಕೊಂಡವರು ಬೇರೆಬೇರೆ ದೇಶಗಳಲ್ಲಿ ಕಂಡುಹಿಡಿದು ತಯಾರಿಸಿದ್ದಾರೆ. ಅದರಲ್ಲಿ ಕೆಲವೊಂದು ಆಕಸ್ಮಿಕಗಳಾದರೆ, ಹಲವು ಹತ್ತಾರು ವರ್ಷಗಳ ಹಲವಾರು ಜನರ ಶ್ರಮದ, ಅಧ್ಯಯನದ, ಸಂಶೋಧನೆಯ ಫಲಗಳು. ಆದರೆ ಒಂದಿಷ್ಟು ಅಗತ್ಯಗಳಿಗೆ ಹೊಸದೇನನ್ನೋ ಕಂಡುಹಿಡಿಯುವಾಗ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಾಗ, ಇರುವುದನ್ನು ಇನ್ನೂಸುಧಾರಣೆ ಮಾಡುವಾಗ ಪ್ರಕೃತಿಯನ್ನೇ ಅದಕ್ಕೆ ಗುರುವಾಗಿಸಿಕೊಂಡು ಈ ಸೃಷ್ಟಿಯನ್ನೇ ಅನುಕರಿಸಿ ತಮ್ಮ ಗುರಿಯನ್ನು ಸಾಧಿಸಿರುವುದು, ತಕ್ಕ ಫಲಗಳನ್ನು ಪಡೆದುಕೊಂಡಿರುವುದಕ್ಕೆ ಅನೇಕ ನಿದರ್ಶನಗಳಿವೆ. ಇಂತಹ ಒಂದಿಷ್ಟು ಕುತೂಹಲಕಾರಿ ನಿದರ್ಶನಗಳ ಕಥಾನಕವೇ 'ಬಯೋಮಿಮಿಕ್ರಿ'. ಹೇಗೆ ಸಂಶೋಧಕರು, ವಿಜ್ಞಾನಿಗಳು ಅಥವಾ ಒಟ್ಟಾರೆ ಮಾನವನು ಪ್ರಕೃತಿಯಲ್ಲಿ ಬೇರೆ ಬೇರೆ ಪರಿಸರದಲ್ಲಿ ವಿಕಾಸಗೊಂಡು ಅಲ್ಲಿನ ವಾತಾವರಣಕ್ಕೆ ತಕ್ಕುದಾದ ಬದಲಾವಣೆಗಳಿಗೊಳಲ್ಪಟ್ಟ ಜೀವಿಗಳನ್ನು, ಅವುಗಳ, ದೇಹರಚನೆಗಳನ್ನು, ಗುಣಲಕ್ಷಣಗಳನ್ನು ಮಿಮಿಕ್ರಿ ಮಾಡಿ ತನಗೆ ಬೇಕಾದ್ದನ್ನು ಕೃತಕವಾಗಿ ಪಡೆದುಕೊಂಡ ಮತ್ತು ತಯಾರಿಸಿಕೊಂಡ ಎಂಬುದನ್ನೇ ಬಯೊಮಿಮಿಕ್ರಿಗಳು ಎನ್ನಲಾಗಿದೆ.
ಹಕ್ಕಿಗಳಂತೆ ಹಾರಬೇಕೆಂದು ಹೊರಟ ಮನುಷ್ಯನ ಮಹದಾಸೆ ವಿಮಾನದಂತಹ ಯಂತ್ರಕ್ಕೆ ಕಾರಣವಾಗಿದ್ದು, ಜಪಾನಲ್ಲಿ ಬುಲೆಟ್ ಟ್ರೇನಿನ ವಿಪರೀತ ಸದ್ದನ್ನು ಕಡಿಮೆಗೊಳಿಸಲು ಮಿಂಚುಳ್ಳಿ, ಗೂಬೆ, ಪೆಂಗ್ವಿನ ಹಕ್ಕಿಗಳ ದೇಹರಚನೆಗಳನ್ನು ಬಳಸಿಕೊಂಡದ್ದು, ಕಟ್ಟಡಗಳ ತಾಪಮಾನ ನಿರ್ವಹಣೆಗೆ ಗೆದ್ದಲಿನ ಹುತ್ತದ ರಚನೆಯನ್ನು ಮಾದರಿಯಾಗಿರಿಸಿಕೊಂಡು ಯಶಸ್ಸು ಸಾಧಿಸಿದ್ದು, ಕಮಲದ ಎಲೆಗಳು, ಶಾರ್ಕ್ ಮೀನಿನ ಮೇಲ್ಮೈ, ಸಮುದ್ರದ ಮೃದ್ವಂಗಿಗಳು, ಕೀಟಗಳನ್ನು ತಿನ್ನುವ ಗಿಡ, ತಿಮಿಂಗಿಲದ ರೆಕ್ಕೆಯ ರಚನೆ ಎಲ್ಲವೂ ಇಲ್ಲಿ ಹೊಸ ಆವಿಷ್ಕಾರಗಳಿಗೆ ಮಾರ್ಗದರ್ಶಿಯಾದವು. ಆರೋಗ್ಯ ಕ್ಷೇತ್ರದ ಶಸ್ತ್ರಚಿಕಿತ್ಸೆಗಳಂತಹ ಸೂಕ್ಷ್ಮತೆಗಳಿಂದ ಹಿಡಿದು ವೆಲ್ ಕ್ರೋದಂತಹ ದಿನನಿತ್ಯದ ಬಳಕೆಯ ವಸ್ತುಗಳ ಕಂಡುಹಿಡಿಯುವಿಕೆಯನ್ನು ಸಾಧ್ಯವಾಗಿಸಿದ್ದು ಈ ಪ್ರಕೃತಿಯ ಮಿಮಿಕ್ರಿಗಳ ಮೂಲಕವೇ! ಇಲ್ಲಿ ಸೊಳ್ಳೆ, ಬ್ಯಾಕ್ಟೀರಿಯಾಗಳಂತಹ ಜೀವಿಗಳೂ ಕೂಡ ನಮ್ಮ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಕಾರಣವಾದವು ಎಂಬುದನ್ನು ಓದಿದರೆ ಬಹಳ ಆಶ್ಚರ್ಯವಾಗುತ್ತದೆ. ಕಡಿಮೆ ಸಂಖ್ಯೆಯಲ್ಲಿ ಅತಿಹೆಚ್ಚು ವಿಸ್ತೀರ್ಣದ ಭಾರವನ್ನು ಹೊರಬಲ್ಲಂತಹ ಲೋಹದ ಮರಗಳ ಆವಿಷ್ಕಾರವಂತೂ ಸಿವಿಲ್, ಸ್ಟಕ್ಚರಲ್ ಎಂಜಿನಿಯರಿಂಗಿನ ದೊಡ್ಡ ಸಾಧನೆ. ಅದರಲ್ಲಿ ಅದೆಷ್ಟೇ ಗಣಿತ, ಭೌತಶಾಸ್ತ್ರಗಳನ್ನು ಬಳಸಿಕೊಂಡರೂ ಅದಕ್ಕೆಲ್ಲಾ ಮೂಲ ಪ್ರೇರಣೆ ಮತ್ತು ಮಾದರಿ ಪ್ರಕೃತಿಯೇ ಎಂಬುದು ನಿಜಕ್ಕೂ ಬೆರಗು ಮೂಡಿಸುತ್ತದೆ.
ಹಲವು ಅಧ್ಯಾಯಗಳಲ್ಲಿ ಅವಶ್ಯಕವಿರುವ ವಿಜ್ಞಾನ ವಿವರಣೆಗಳನ್ನು ಸರಳಗೊಳಿಸಿ ವಿವರಿಸಲು ಪ್ರಯತ್ನಿಸಿದ್ದಾರೆ. ಹಾಗಿದ್ದರೂ ವಿಜ್ಞಾನೇತರ ಓದುಗರಿಗೆ ಕೊಂಚ ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಿದರೆ ಆ ಭಾಗಗಳನ್ನು ಮೇಲ್ಮೇಲೆ ಓದಿಕೊಂಡರೂ ಒಟ್ಟಾರೆ ವಿಷಯ ಅರ್ಥಮಾಡಿಕೊಳ್ಳಲು ತೊಂದರೆಯೇನಿಲ್ಲ. ಈ ಇ-ಪುಸ್ತಕದ ವಿಶೇಷವೆಂದರೆ ವಿಷಯಗಳ ವಿವರಣೆಗಳ ನಡುವೆ ಮತ್ತು ಅಧ್ಯಾಯದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಯು-ಟ್ಯೂಬ್ ಲಿಂಕುಗಳನ್ನು ಕೊಡಲಾಗಿದ್ದು ಅದರ ಮೂಲಕ ನೇರವಾಗಿ ಆ ವಿಷಯಕ್ಕೆ ಸಂಬಂಧಿಸಿದ ವಿವರ ಮಾಹಿತಿಗಳ ವೀಡಿಯೋಗಳನ್ನು ನೋಡಬಹುದು. ಹೆಚ್ಚಿನ ಆಸಕ್ತಿಯಿದ್ದಲ್ಲಿ, ಕುತೂಹಲವಿದ್ದಲ್ಲಿ ವಿವರಗಳನ್ನು ವೀಡಿಯೋಗಳಲ್ಲಿ ವಿಸ್ತಾರವಾಗಿ ಪಡೆದುಕೊಳ್ಳಬಹುದು.
ಮನುಷ್ಯ ಪ್ರಕೃತಿಯಿಂದ ಎಷ್ಟೇ ದೂರವಾಗುತ್ತಿದ್ದಾನೆ ಅಂದುಕೊಂಡರೂ ಅವನ ಬಹಳಷ್ಟು ಆವಿಷ್ಕಾರಗಳಿಗೆ, ಹುಡುಕಾಟಗಳಿಗೆ, ಸಮಸ್ಯೆಗಳಿಗೆ ಪ್ರಕೃತಿಯೇ ಆಕರ, ಪ್ರಕೃತಿಯೇ ಪರಿಹಾರ. ಪ್ರಕೃತಿಗೆ ಹತ್ತಿರವಿದ್ದಷ್ಟೂ ಅವನ ಬದುಕು ಸುಂದರ ಎಂದು ಕೂಡ ಈ ಬಯೋಮಿಮಿಕ್ರಿ ಮೂಲಕ ವಿಶ್ಲೇಷಿಸಬಹುದು. ಕನ್ನಡದಲ್ಲಿ ಬಂದಂತಹ ಅತ್ಯಂತ ವಿಶಿಷ್ಟ ಪುಸ್ತಕ ಇದು ಎಂದು ಹೇಳುತ್ತೇನೆ. ಈತರಹದ ಬೌದ್ಧಿಕ ಮಟ್ಟದ ಕೃತಿಗಳು ಕನ್ನಡದಲ್ಲಿ ಹೆಚ್ಚುತ್ತಲೇ ಹೋಗಬೇಕು.
'ಋತುಮಾನ' ಆಪ್, 'ಮೈಲ್ಯಾಂಗ್ಯ್', 'ಗೂಗಲ್ ಬುಕ್ಸ್' ತಾಣಗಳಲ್ಲಿ ಇ-ಪುಸ್ತಕದ ರೂಪದಲ್ಲಿ ದೊರಕುತ್ತದೆ. ಲೇಖಕರ ಹಿಂದಿನ ಪುಸ್ತಕ 'ಸೆರೆಂಡಿಪಿಟಿ' ಮತ್ತು ಈ 'ಬಯೋಮಿಮಿಕ್ರಿ'ಗಳನ್ನು ಓದಿದಮೇಲೆ ಈಗ ಅವರ ಮೊದಲ ಪುಸ್ತಕವಾದ 'ನಿರಾಮಯ' ಓದಬೇಕೆಂಬ ಕುತೂಹಲ ಬಂದಿದೆ. ಓದಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ