ಗೂಗಲ್ ಕಂಪನಿಯು ತನ್ನ ಹಲವಾರು ಬಗೆಯ ಸೇವೆಗಳನ್ನು, ಉತ್ಪನ್ನಗಳನ್ನು ಸುಧಾರಣೆ ಮಾಡುವುದಕ್ಕೆ ಮತ್ತು ಕೃತಕ ಬುದ್ಧಿಮತ್ತೆ (AI) ಬೆಳೆಸುವ ಕೆಲಸಗಳಿಗಾಗಿ ಜನರನ್ನು ತೊಡಗಿಸಿಕೊಳ್ಳುವ ಒಂದು ಯೋಜನೆ ಮಾಡಿ ಕೆಲವು ವರ್ಷಗಳಿಂದ ನಡೆಸುತ್ತಿದೆ. ಗೂಗಲ್ ಕ್ರೌಡ್ ಸೋರ್ಸ್ ಎಂದು ಆ ಯೋಜನೆಯ ಹೆಸರು. ಇದು ಯಾರು ಬೇಕಾದರೂ ಸಹ ತೊಡಗಿಕೊಳ್ಳಬಹುದಾದಂತಹ ಸರಳ ಕೆಲಸ. ಗೂಗಲ್ ಕ್ರೌಡ್ ಸೋರ್ಸ್ ಕೆಲಸದಲ್ಲಿ ಕನ್ನಡಕ್ಕೆ ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ.
ಇದರಲ್ಲಿ ಭಾಷೆ ಸಂಬಂಧಿತ ಸೇವೆಗಳಿಗೆ ಆಯಾ ಭಾಷಾ ಸಮುದಾಯದ ಬಳಕೆದಾರರ ಅನುಭವ, ಸಾಮರ್ಥ್ಯ ಮತ್ತು ತಿಳುವಳಿಕೆಗಳ ಮೂಲಕ ಕೊಡುಗೆಗಳನ್ನು ಪಡೆಯುವುದಾಗಿದೆ. ಅಂದರೆ, ಸರಳವಾಗಿ ಹೇಳುವುದಾದರೆ ಗೂಗಲ್ಲಲ್ಲಿ ಕನ್ನಡ ಸಂಬಂಧಿತ ಅನುವಾದಗಳು, ಅನುವಾದದ ಮೌಲ್ಯಮಾಪನ, ಕೈಬರಹ ಗುರುತಿಸುವಿಕೆ, ಕೀಬೋರ್ಡ್, ದನಿ ಗುರುತಿಸುವಿಕೆ ಮುಂತಾದ ಉತ್ಪನ್ನಗಳ ಸುಧಾರಣೆಗೆ ನಾವು ನೇರವಾಗಿ ಕೊಡುಗೆ ನೀಡಬಹುದು. ಇದರ ಜೊತೆ 'ಚಿತ್ರ ಗುರುತಿಸುವಿಕೆ' ಮುಂತಾದ ಜೆನೆರಲ್ ಕೆಲಸಗಳೂ ಇವೆ. ಇದೆಲ್ಲವನ್ನೂ ಚಿಕ್ಕ ಚಿಕ್ಕ ಫನ್ ಗೇಮ್ಸ್ ರೀತಿಯಲ್ಲಿ, ಕ್ವಿಜ್ ರೀತಿಯಲ್ಲಿ ಈ ಆ್ಯಪ್ ಮೂಲಕ ಮಾಡುವಂತೆ ರೂಪಿಸಿದ್ದಾರೆ. ಒಂಥರಾ ಟೈಂಪಾಸಿಗೂ ಚೆನ್ನಾಗಿದೆ, ಮೆದುಳಿಗೂ ಕೊಂಚ ಕೆಲಸ ಕೊಡಬಹುದಾಗಿದೆ.
ಅಕ್ಟೋಬರ್ ೨೦೨೧ ರಲ್ಲಿ ಈ ಕ್ರೌಡ್ ಸೋರ್ಸ್ ಯೋಜನೆಯಲ್ಲಿ 'ಸ್ಮಾರ್ಟ್ ಅಸಿಸ್ಟೆಂಟ್' ಎನ್ನುವ ಅಭಿಯಾನವೊಂದು ನಡೆದಿತ್ತು. ಅದರಲ್ಲಿ ಪಾಲ್ಗೊಂಡು ಗಣನೀಯ ಕೊಡುಗೆ ಸಲ್ಲಿಸಿದವರಿಗೆ ಗೂಗಲ್ ವತಿಯಿಂದ ಉಡುಗೊರೆ ಕಳಿಸಿಕೊಟ್ಟರು. ನನಗೆ ಬಂದ ಉಡುಗೊರೆ ಇದು.
ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಬಯಸಿದಲ್ಲಿ ಪ್ಲೇಸ್ಟೋರ್ ಇಂದ 'Crowd Source' Google app ಹಾಕಿಕೊಳ್ಳಬಹುದು. ಸೆಟ್ಟಿಂಗ್ಸಲ್ಲಿ ಕನ್ನಡ, ಇಂಗ್ಲೀಷ್ ಮುಂತಾದ ನಿಮ್ಮಿಷ್ಟದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅನಂತರ ಅದರಲ್ಲಿನ ಹಲವು ಬಗೆಯ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದು ತಂತ್ರಜ್ಞಾನ ಬಹುವೇಗವಾಗಿ ಬೆಳೆಯುತ್ತಿರುವ ಕಾಲ. ಕನ್ನಡವೂ ಅದರ ಜೊತೆಗೆ ಹೆಜ್ಜೆಹಾಕುವುದು ಮುಖ್ಯ. ಇದು ಕ್ರಮೇಣ ಹಲವಾರು ಅವಕಾಶಗಳನ್ನು, ಉದ್ಯೋಗಗಳನ್ನು, ತಂತ್ರಜ್ಞಾನಗಳನ್ನು, ಸಾಧ್ಯತೆಗಳನ್ನು ಕನ್ನಡಕ್ಕೂ ತೆರೆದಿಡುವುದಕ್ಕೆ ಖಂಡಿತ ಬಹಳ ಸಹಕಾರಿಯಾಗುತ್ತದೆ.
2 ಕಾಮೆಂಟ್ಗಳು:
ನೀವು ಇಂತಹ ತಾಂತ್ರಿಕ ಲೇಖನಗಳನ್ನು ನೀಡುತ್ತಿರುವುದು ಸಂತೋಷದ ಸಂಗತಿ.
ಧನ್ಯವಾದಗಳು ಕಾಕಾ.
ಕಾಮೆಂಟ್ ಪೋಸ್ಟ್ ಮಾಡಿ