children ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
children ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜನವರಿ 7, 2008

ತಾರೆ ಜಮೀನ್ ಪರ್ ಎಂಬ 'must watch' ಸಿನೆಮಾ

तारे जमीन पर
ಭುವಿಯಲ್ಲಿನ ನಕ್ಷತ್ರಗಳು


ಸತ್ತು ಹೋದ ಪ್ರೇಮ ಕಥೆಗಳು, ಕಿತ್ತು ಹೋದ ಸಂಸಾರದ ಕಥೆಗಳು, ಬಾಲಿಶ ಹಾಸ್ಯ ಕಥೆಗಳು, ಅಪರಾಧ/ಹಿಂಸೆ ವಿಜೃಂಭಿತ ಕಥೆಗಳು, ಅನೈತಿಕ ಸಂಬಂಧಗಳ ಕಥೆಗಳು, NRI ಕಥೆಗಳು, ವಿವಾಹೇತರ ಸಂಬಂಧದ ಕಥೆಗಳು , ಅರೆಬೆತ್ತಲೆ ನೃತ್ಯ, ಅತಿಅತಿ ಗ್ಲಾಮರ್, ಸೆಕ್ಸು, ಅರ್ಧ ಇಂಗ್ಲೀಷ್ ತುಂಬಿದ ಸಂಭಾಷಣೆ, ಅಶ್ಲೀಲತೆ, ಬೊಗಳೆ ... ಇತ್ಯಾದಿಗಳಿಂದ ತುಂಬಿಹೋಗಿರುವ ಹಿಂದಿ ಚಿತ್ರರಂಗದಲ್ಲಿ ಒಂದು ಒಳ್ಳೆಯ ಚಿತ್ರ ಬಂದಿದೆ.

ಕೆಲ ವರುಷಗಳಿಂದ ಹಿಂದಿ ಚಿತ್ರರಂಗದ ಬಗ್ಗೆ ಬೇಸರ ಬಂದಿದ್ದ ನಾನು ಯಾರಿಗೂ ಯಾವ ಚಿತ್ರವನ್ನೂ ಸಲಹೆ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ "ತಾರೆ ಜಮೀನ್ ಪರ್" ಎಂಬ ಚಿತ್ರ ಮಾತ್ರ ಇದಕ್ಕೆಲ್ಲಾ ಅಪವಾದವಾಗಿದ್ದು ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ದಿನದಿಂದಲೇ ಆ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬರುತ್ತಿದ್ದವು. ಹಿಂದಿ ಚಿತ್ರ ರಂಗದಲ್ಲಿ ಅಮೀರ್ ಖಾನ್ ಎಂಬ ಹೆಸರಿನ ಮೇಲೆ ಒಳ್ಳೆಯ ಅಭಿಪ್ರಾಯ, ಭರವಸೆಗಳಿವೆ. ಅದಕ್ಕೆ ಕಾರಣ ಅವನ ಸರ್ಫರೋಷ್, ದಿಲ್ ಚಾಹ್ತಾ ಹೈ, ಲಗಾನ್, ಮಂಗಲ್ ಪಾಂಡೆ ಇನ್ನಿತರ ಉತ್ತಮ ಚಿತ್ರಗಳು. ಅದೇ ಧೈರ್ಯದಿಂದ ತಾರೆ...... ಚಿತ್ರಕ್ಕೆ ಹೋಗಿ ನೋಡಿದಾಗ ಅವನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಇದು ಇನ್ನೂ ಚೆನ್ನಾಗಿದ್ದುದು ಸಂತೋಷ ತಂದಿತು.



ತನ್ನ ಮೊದಲ ನಿರ್ದೇಶನದ ಈ ಚಿತ್ರದಲ್ಲಿ ಅಮಿರ್ ಖಾನ್ ಜಗತ್ತಿನ ಕಣ್ಣಿಗೆ ಅಸಹಜ ಎನ್ನಿಸುವ ಹುಡುಗನೊಬ್ಬನ ಕಥೆಯೊಂದನ್ನು ತೆಗೆದುಕೊಂಡು ಪ್ರತಿ ಮಗುವೂ ಕೂಡ ವಿಶೇಷವಾಗಿಯೇ ಇರುತ್ತದೆ ಎಂಬುದನ್ನು ತೋರಿಸಿದ್ದಾನೆ.
ಎಲ್ಲರಲ್ಲೂ ಅವರದ್ದೇ ಆದ ಪ್ರತಿಭೆಗಳಿದ್ದು ಅದಕ್ಕೆ ತಕ್ಕ ಪ್ರೋತ್ಸಾಹ ಸಿಗಬೇಕೆಂಬುದು ಇದರ ಉದ್ದೇಶ. ಇದರಲ್ಲಿ ಮಕ್ಕಳಿಗೆ ಖುಷಿ ಇದೆ, ಅಪ್ಪ ಅಮ್ಮರಿಗೆ ಬುದ್ದಿವಾದವಿದೆ, ಶಿಕ್ಷಕರಿಕೆ ತಿಳುವಳಿಕೆ ಇದೆ, ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠವಿದೆ. ಬರಿ ಗುಮಾಸ್ತರನ್ನು ತಯಾರು ಮಾಡುತ್ತಿರುವ, ಉದ್ಯೋಗಕ್ಕೆ ಮಾತ್ರವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳಿವೆ. ಮಕ್ಕಳ ಕುತೂಹಲಗಳಿಗೆಲ್ಲಾ ಉತ್ತರ ಸಿಗದಂತೆ ಮಾಡಿರುವ, ಪ್ರಕೃತಿಯಿಂದ ಅವರನ್ನು ದೂರ ಮಾಡಿ ಕೃತಕ ಜೀವನ ಶೈಲಿಯನ್ನು ಹೇರಿರುವ ಈ ಸಮಾಜ ವ್ಯವಸ್ಥೆಯ ಬಗ್ಗೆ ವಿಷಾದವಿದೆ. ಮಕ್ಕಳಲ್ಲಿನ ಪ್ರತಿಭೆಗೆ ತಕ್ಕನಾಗಿ ಆಸಕ್ತಿಗೆ ತಕ್ಕನಾಗಿ ಬದುಕು ರೂಪಿಸಿಕೊಳ್ಳಲು ಅವಕಾಶ ಸಿಗದಿರುವ, ಹಣಗಳಿಕೆಯ ಅನಿವಾರ್ಯತೆಯ ವಿಷಯವಿದೆ. ಆದರೆ ಎಲ್ಲಿಯೂ ಬೋಧನೆ ಮಾಡಲಾಗಿಲ್ಲ. ಒಂದು ಕ್ಷಣವೂ ಬೇಸರವೆನಿಸದಂತೆ ನಿರೂಪಣೆ ಮಾಡಲಾಗಿದೆ. ಅರ್ಥಗರ್ಭಿತ ಹಾಡುಗಳಿವೆ. ಆ ಚಿತ್ರದಲ್ಲಿನ ಹುಡುಗ ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದಂತೆಯೇ ಅನ್ನಿಸುತ್ತಾನೆ. ಶಾಲೆಯಲ್ಲಿದ್ದಾಗ ನಮ್ಮ ತರಗತಿಯಲ್ಲೂ ಅದೇ ತರಹದ ಮಕ್ಕಳಿದ್ದಿದ್ದು ನೆನಪಾಗುತ್ತದೆ. ಅವರ ಪ್ರತಿಭೆಗೆ ತಕ್ಕನಾದ ಪ್ರೋತ್ಸಾಹ, ಅವಕಾಶ ಸಿಗದೆ ದುಸ್ಥಿತಿಯಲ್ಲಿರುವುದನ್ನು ಕಂಡು ಮನ ಮರುಗುತ್ತದೆ. ಬಾಲಕನ ಅದ್ಭುತಾಭಿನಯ ಬಲು ಮೆಚ್ಚುಗೆಯಾಗುತ್ತದೆ. ಜೊತೆಗೆ ಮನಸ್ಸಿನ ತುಂಬ ವಿಷಾದ ವಿಷಾದ :(

ಕನ್ನಡದಲ್ಲಿಯೂ ಹಿಂದೆ ಸುರೇಶ್ ಹೆಬ್ಳೀಕರ್ ಅಂತವರಿಂದ ’ಚುಕ್ಕಿ ಚಂದ್ರಮ’ ಇತ್ಯಾದಿ ಚಿತ್ರಗಳು ಇದೇ ನಿಟ್ಟಿನಲ್ಲಿ ಬಂದಿದ್ದರೂ ಕೂಡ ಅವು ಸ್ಟಾರ್ ಗಳ, ಪ್ರಚಾರದ ಕೊರತೆಯಿಂದ ಬರೀ ಡಾಕ್ಯುಮೆಂಟರಿಗಳಾಗಿ,’ಕ್ಲಾಸ್ ಫಿಲಂ’ ಗಳಾಗೇ ಉಳಿದುಬಿಟ್ಟಿದ್ದವು. ’ಲಗಾನ್’ ನಂತರ ಬಹಳ ದಿನಗಳ ಮೇಲೆ ನಾನು ನನ್ನ ಅಪ್ಪ ಅಮ್ಮರಿಗೂ Taare zameen par ಚಿತ್ರವನ್ನು ಸಲಹೆ ಮಾಡಿದ್ದೇನೆ. ನಿನ್ನೆ ಭಾನುವಾರ ಯಾವುದೋ ಪತ್ರಿಕೆಯೊಂದು ಚಿತ್ರ ವಿಮರ್ಶೆಯಲ್ಲಿ ಇದೊಂದು ಉತ್ತಮ ಮಕ್ಕಳ ಚಿತ್ರವೆಂದು ಬರೆದಿತ್ತು. ಆದರೆ ಇದು ಖಂಡಿತ ಮಕ್ಕಳ ಚಿತ್ರವಲ್ಲ, ಇದು ’ಎಲ್ಲರ ’ ಚಿತ್ರ. ಟಾಕೀಸೋ, ಸೀಡಿನೋ , ಡೀವೀಡಿನೋ, ಇಂಟರ್ನೆಟ್ಟೋ ಯಾವುದ್ರಲ್ಲೋ ಒಂದರಲ್ಲಿ ತಪ್ಪದೇ ನೋಡಿ. ಮಧ್ಯದಲ್ಲಿ ಸುಮಾರು ಬಾರಿ ಮನಸ್ಸನ್ನು ತಟ್ಟಿದ ಕುರುಹಾಗಿ ಕಣ್ಣಂಚಿನಿಂದ ಸಣ್ಣದೊಂದು ನೀರಹನಿ ಜಾರದಿದ್ದರೆ ಕೇಳಿ.

*********
ನಾನು ಭಾರತ ಚಿತ್ರರಂಗದಲ್ಲಿ ಬಹುವಾಗಿ ಮೆಚ್ಚುವುದು 'ಜೀವಂತ ದಂತಕಥೆ' ಎನಿಸಿಕೊಂಡಿರುವ "ಕಮಲ್ ಹಾಸನ್”. ಅವನ ನಂತರ ಯಾಕೋ ಅಮೀರ್ ಖಾನ್ ಇಷ್ಟವಾಗತೊಡಗಿದ್ದಾನೆ ;)