ಕನ್ನಡದ ಹಲವಾರು ಹಳೆಯ ಮ್ಯಾಗಜೀನ್ ಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್ ನ 'ಕಸ್ತೂರಿ' ಮ್ಯಾಗಜೀನ್ ಕೂಡ ಒಂದು. ಇದು ಅರ್ಧ ಶತಮಾನದಿಂದ ಪ್ರಕಟವಾಗುತ್ತಿದೆ. ರೀಡರ್ಸ್ ಡೈಜೆಸ್ಟ್ ಮಾದರಿಯ ಪತ್ರಿಕೆಯೊಂದನ್ನು ಕನ್ನಡದಲ್ಲಿ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶುರುವಾಗಿ, ಇವತ್ತು ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನೇ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ತಲುಪಿದ್ದರೂ ನಮ್ಮ ’ಕಸ್ತೂರಿ’ ಮಾತ್ರ ತಡೆಯಿಲ್ಲದೇ ನೆಡೆಯುತ್ತಿದೆ. ಪತ್ರಿಕೋದ್ಯಮದ ಹಲವು ಘಟಾನುಘಟಿಗಳೆಲ್ಲಾ ಇದರಲ್ಲಿ ಕೆಲಸ ಮಾಡಿದ್ದಾರೆ. ಉತ್ತರಕರ್ನಾಟಕದ ಬಹುತೇಕ ವಿದ್ಯಾವಂತರ ಮನೆಗಳಲ್ಲಿ ಮೊದಲಿನಿಂದಲೂ ಕಸ್ತೂರಿ ಒಂಥರಾ ಸಹಜ ಓದಿನ ಮ್ಯಾಗಜೀನ್. ಕತೆ, ಅನುಭವ, ಲಲಿತ ಪ್ರಬಂಧ, ಹಾಸ್ಯಗಳಿಂದ ಹಿಡಿದು ಜ್ಞಾನ-ವಿಜ್ಞಾನ, ಇತಿಹಾಸ, ಫಿಕ್ಷನ್, ಆಧ್ಯಾತ್ಮ, ಪರಿಸರ, ವೈದ್ಯಕೀಯ ಮುಂತಾದ ಎಲ್ಲಾ ರೀತಿಯ ವಿಷಯಗಳನ್ನೂ ತುಂಬಿಕೊಂಡು ಬರುವ ಕಸ್ತೂರಿಯ ಪ್ರತಿ ಸಂಚಿಕೆಯೂ ಒಂದು ವಿಶೇಷ ಡೈಜೆಸ್ಟ್. ವಿಷಯ ವೈವಿಧ್ಯಗಳು, ಮಾಹಿತಿಪೂರ್ಣ ಲೇಖನಗಳು ಅದರ ಹೈಲೈಟ್ಸ್.
ವಿಷಯ ಏನೆಂದರೆ, ನಮ್ಮ ಮನೆಯಲ್ಲಿಯೂ ಎಷ್ಟೋ ವರ್ಷಗಳಿಂದ ಕಸ್ತೂರಿ ಓದುತ್ತಿದ್ದೇವೆ. ಹಿಂದಿನ ಹಲವು ವರ್ಷಗಳ ಕಸ್ತೂರಿಗಳು ಮನೆಯಲ್ಲಿ ಇವೆ. ಎಷ್ಟೋ ಸಲ ಅದನ್ನು ರದ್ದಿಗೆ ಹಾಕಬೇಕು ಅನಿಸಿದ್ದರೂ ಅಷ್ಟು ಮಾಹಿತಿಗಳ ಪುಸ್ತಕಗಳನ್ನು ಸುಮ್ಮನೇ ವ್ಯರ್ಥವಾಗಿ ರದ್ದಿಗೆ ಹಾಕಲು ಮನಸಾಗದೇ ಹಾಗೇ ಇದೆ. ಈಗೊಂದು ಆರೇಳು ವರ್ಷಗಳ ಹಿಂದೆ ರವಿಬೆಳಗೆರೆಯವರು 'ಓ ಮನಸೇ' ಎಂಬ ಪತ್ರಿಕೆ ಮತ್ತೆ ಶುರುಮಾಡಲು ಹೊರಟಿದ್ದಾಗ ಹಳೆಯ ಕಸ್ತೂರಿಗಳನ್ನು ಯಾರಾದರೂ ಕೊಡುವುದಾದರೆ ಕೊಳ್ಳುವುದಾಗಿ ಪ್ರಕಟಿಸಿದ್ದರು. ಆಗಲೂ ಕೊಡಲು ಮನಸ್ಸಿಲ್ಲದೇ ಹಾಗೇ ಇಟ್ಟುಕೊಂಡಿದ್ದರ ಪರಿಣಾಮ ಇವತ್ತು ಸುಮಾರು ೧೫ ವರ್ಷಗಳ 'ಕಸ್ತೂರಿ' ಮನೆಯ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಈ ಬಾರಿ ಮನೆಗೆ ಹೋದಾಗ ಇನ್ನೂ ಇದನ್ನು ಇಟ್ಟುಕೊಳ್ಳುವುದು ಬೇಡ, ರದ್ದಿಗೆ ಹಾಕೇ ಬಿಡೋಣ ಅಂತ ಹೊರಟವನಿಗೆ ಅದಕ್ಕೂ ಮೊದಲು ಯಾರಿಗಾದರೂ ಪ್ರಯೋಜನವಾಗುವುದಿದ್ದರೆ ಒಮ್ಮೆ ಕೇಳಿನೋಡೋಣ ಎನ್ನಿಸಿತು.
ಆದ್ದರಿಂದ ಈ ಬ್ಲಾಗ್ ಓದಿದವರು, ಯಾರಾದರೂ ಆಸಕ್ತರು, ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಸಂಗ್ರಹಕಾರರು ಅಥವಾ ಮತ್ಯಾರಿಗೇ ಆಗಲಿ ಹಳೆಯ ಕಸ್ತೂರಿಗಳು (೧೯೯೪ರಿಂದ ೨೦೦೯) ಬೇಕೆನಿಸಿದರೆ, ಅದರಿಂದ ಉಪಯೋಗವಾಗುತ್ತದೆ ಎಂದೆನಿಸಿದರೆ ನನ್ನನ್ನು ಸಂಪರ್ಕಿಸಿ ಅಥವಾ ಈ ಬಗ್ಗೆ ಏನಾದರೂ ಸಲಹೆಗಳಿದ್ದರೆ ತಿಳಿಸಿ.
ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಮಾತ್ರ ಕೊಡಲ್ಲ ;)
ವಿಕಿಪಿಡಿಯಾದಲ್ಲಿ ಕಸ್ತೂರಿ
ಮಂಗಳವಾರ, ಅಕ್ಟೋಬರ್ 19, 2010
ಬುಧವಾರ, ಅಕ್ಟೋಬರ್ 6, 2010
ಭೈರಪ್ಪ ಎಂಬ STAR WRITER
ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ - ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ 'ಆವರಣ'ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.
ನಾನು ಓದಿದ ಇವರ ಮೊದಲ ಕಾದಂಬರಿ 'ಧರ್ಮಶ್ರೀ'. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.
ಅವರು ಬರೆಯುವ ವಿಷಯಗಳು ಕೆಲವರ ಬುದ್ಧಿಗೆ ನಿಲುಕದೇ ಇರಬಹುದು, ಇಷ್ಟೇ ಅನ್ನಿಸಬಹುದು, ಒಪ್ಪಿಗೆಯಾಗದಿರಬಹುದು, ಕೆಲವರಿಗೆ ಎಲ್ಲಾ ಬಿಟ್ಟು ಬರೀ 'ಅದು' ಮಾತ್ರ ಕಾಣಬಹುದು, ಆ ವಾದಿ, ಈ ವಿರೋಧಿ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ಲಬೋ ಲಬೋ ಎನ್ನಬಹುದು, ಪುಸ್ತಕ ಮಾರಾಟ, ಜನಪ್ರಿಯತೆ ಇವು ಗುಣಮಟ್ಟದ ಮಾನದಂಡವಲ್ಲ ಅಂತ ವಾದಿಸಬಹುದು, ಪೂರ್ವಗ್ರಹಗಳಿರಬಹುದು, ’ಆವರಣ’ದ ಆಫ್ಟರ್ ಎಫೆಕ್ಟುಗಳೂ ಇರಬಹುದು ಅಥವಾ ಅದು ನಿಜವೇ ಆಗಿರಬಹುದು. ಇರಲಿ. ಎಷ್ಟೋ ಜನಕ್ಕೆ 'ಪರ್ವ' ಇಷ್ಟವಾಗುವುದಿಲ್ಲ, ಮತ್ಯಾರಿಗೋ 'ಕವಲು' ಸಮಾಧಾನವಾಗುವುದಿಲ್ಲ. ಅದೆಲ್ಲಾ ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಅವರ ವಿರೋಧಿಗಳೂ ಕೂಡ ನಿರ್ಲಕ್ಷಿಸಲಾಗದ ಬರಹಗಾರ. ನೀವು ರೈಟಿಸ್ಟ್ ಅನ್ನುವ ಆರೋಪವಿದೆಯಲ್ಲಾ ಅಂತ ಸಂದರ್ಶನದಲ್ಲಿ ಭೈರಪ್ಪನವರಿಗೆ ಕೇಳಿದ್ದಕ್ಕೆ, "ನನಗೆ ರೈಟು ಲೆಫ್ಟು ಅನ್ನುವುದರಲ್ಲಿ ನಂಬಿಕೆಯಿಲ್ಲ. ಆದರೆ ನೀವು ರೈಟ್ ಅಥವಾ ರಾಂಗ್ ಅನ್ನುವ ಅರ್ಥದಲ್ಲಿ ಕೇಳುತ್ತೀರೆಂದಾದರೆ, ಹೌದು ನಾನು ರೈಟಿಸ್ಟು" ಎಂದರು. ಹೌದು, ನನಗೂ ಸೇರಿದಂತೆ ಬಹುತೇಕ ಓದುಗರಿಗೆ ಈ ರೈಟು ಲೆಫ್ಟು ಬೇಡ, ನಮಗೆ ಬೇಕಾಗಿರುವುದು ರೈಟ್ ಆಗಿ ಬರೆಯುವ ರೈಟರ್ ಗಳು ಮಾತ್ರ.
ಯಾರೇ ಕನ್ನಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾದರೆ ನಾನು ಅವರಿಗೆ ಮೊದಲು ಸಲಹೆ ಮಾಡುವುದು ಭೈರಪ್ಪ ಮತ್ತು ತೇಜಸ್ವಿಯವರ ಪುಸ್ತಕಗಳನ್ನು. ಅದನ್ನು ಓದಿದವ ತಾನಾಗೇ ಓದುವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಗ್ಯಾರಂಟಿ ಹೇಳಬಹುದು. ಬೆಂಗಳೂರು ಮಂಗಳೂರು ಶಿವಮೊಗ್ಗದಂತಹ ಊರುಗಳಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪತ್ರಿಕೆಗಳು ಕೂಡ ಇವತ್ತಿಗೂ ಸಾಹಿತ್ಯವನ್ನು ಸಪ್ಪೆಸಾರಿನಂತೆಯೇ ಬಡಿಸುತ್ತಾ ಬಂದಿವೆ. ನಮ್ಮಲ್ಲಿ ಬಹಳ ಜನ ಉತ್ತಮ ಬರಹಗಾರರಿದ್ದಾರೆ. ಇಷ್ಟೆಲ್ಲಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಇದ್ದರೂ ಪುಸ್ತಕಗಳ ಪ್ರಚಾರಕ್ಕೆ ಮತ್ತು ಓದುವಿಕೆಯನ್ನು ಜನಪ್ರಿಯಗೊಳಿಸಲು ಹೆಚ್ಚು ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲೂ ಒಬ್ಬ ಲೇಖಕನನ್ನು ಜನ ಅಷ್ಟು ಇಷ್ಟಪಟ್ಟು ಕಾದು ಓದುತ್ತಾರೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಲೇಖಕರು ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆ.
ಅವರೊಬ್ಬ ಸ್ಟಾರ್ ರೈಟರ್ !

ಮಂಗಳವಾರ, ಆಗಸ್ಟ್ 31, 2010
" ಆ ಮತ್ತೊಂದು ಬಾಗಿಲು "
"ಸ್ವಲ್ಪ ಹೊತ್ತು, ಇನ್ನೇನು ಚಿಕ್ಕಮ್ಮ ಬಂದೇ ಬಿಡ್ತಾರೆ" ಅಂದಳು ಆ ಹುಡುಗಿ.
ಆಕೆ ಸುಮಾರು ಹದಿನೈದು ಹದಿನಾರು ವರ್ಷದವಳಂತೆ ಕಂಡಳು.
ನಟ್ಟೆಲ್ ಸುಮ್ಮನೇ ಕೂತ.
"ಅಲ್ಲಿವರೆಗೆ ನಾವಿಬ್ರೂ ಮಾತಾಡೋಣ, ಏನಾದ್ರೂ ಮಾತಾಡಿ", ಅಂದಳು ಹುಡುಗಿ.
ಆ ಹುಡುಗಿಯ ಉತ್ಸಾಹಕ್ಕೆ ತೊಂದರೆ ಮಾಡಲು ಅವನಿಗೂ ಇಷ್ಟವಾಗಲಿಲ್ಲ. ಆಕೆಯ ಚಿಕ್ಕಮ್ಮ ಬರುವವರೆಗೂ ಕಾಯೋಣ ಎಂದುಕೊಂಡ. ಆದರೆ ಹೀಗೆ ಸುಮ್ಮನೇ ಅಪರಿಚಿತರ ಮನೆಗೆ ಹೋಗುವುದು, ಅವರ ಮನೆಯಲ್ಲಿ ಕೂರುವುದರಿಂದ ಅವನು ಆ ಹಳ್ಳಿಗೆ ಬಂದ ಉದ್ದೇಶಕ್ಕೆ ಏನಾದರೂ ಸಹಾಯವಾಗುವುದಾ ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡ.
"ನಿಂಗೆ ಅಲ್ಯಾರೂ ಪರಿಚಯದವರಿಲ್ಲ. ಅದು ಸಣ್ಣ ಹಳ್ಳಿ. ಆ ಊರಿನಲ್ಲಿ ಜನ ಕಡಿಮೆ ಇದ್ದಾರೆ. ಮನೆಗಳಂತೂ ಒಂದಂಕ್ಕೊಂದು ದೂರ ದೂರ ಇವೆ. ಸುಮ್ಮನೇ ಒಬ್ಬನೇ ಹೋಗಿ ಯಾರೂ ಪರಿಚಯ ಇಲ್ಲದಿದ್ದರೆ ಆ ಊರಿನ ಭೂತಗಳ ಜೊತೆ ನೀನೂ ಭೂತದ ತರಹ ಒಬ್ಬನೇ ಬದುಕಬೇಕಾಗಬಹುದು. ನನಗೆ ಪರಿಚಯದವರು ಕೆಲವರು ಅಲ್ಲಿದ್ದಾರೆ. ಕೆಲವು ಒಳ್ಳೆಯ ಜನರಿದ್ದಾರೆ. ನಿನಗೆ ನನ್ನ ಪರಿಚಯ ಪತ್ರ ಕೊಡ್ತೀನಿ. ಅವರಿಗೆ ಇದನ್ನು ತೋರಿಸಿ ಪರಿಚಯ ಮಾಡಿಕೋ", ಎಂದು ಅವನು ಈ ಹಳ್ಳಿಗೆ ಬರುವುದಕ್ಕಿಂತ ಮೊದಲು ಅವನ ಅಕ್ಕ ಹೇಳಿದ್ದಳು..
ಅಕ್ಕ ಹೇಳಿದ್ದ ಒಳ್ಳೆಯ ಜನರಲ್ಲಿ ಈ ಹುಡುಗಿಯ ಚಿಕ್ಕಮ್ಮನೂ ಇರಬಹುದಾ ಎಂದು ನಟ್ಟೆಲ್ ಯೋಚಿಸಿದ .
ಇವನು ಏನೂ ಮಾತಾಡದೇ ಕುಳಿತದ್ದನ್ನು ನೋಡಿ ಆ ಪುಟ್ಟ ಹುಡುಗಿ ಕೇಳಿದಳು, "ಈ ಊರಿನಲ್ಲಿ ನಿಮಗೆ ಯಾರೂ ಪರಿಚಯದವರಿಲ್ವಾ?"
"ಇಲ್ಲಮ್ಮ , ಈ ಊರಿನ ಜನ ಇರಲಿ, ಒಂದು ಭೂತ ಕೂಡ ಪರಿಚಯ ಇಲ್ಲ,
"ಹಾಗಿದ್ದರೆ ನನ್ನ ಚಿಕ್ಕಮ್ಮನೂ ನಿಮಗೆ ಗೊತ್ತಿಲ್ಲ ಅಂತ ಆಯಿತು" ಅಂದಳು ಹುಡುಗಿ.
"ಇಲ್ಲ, ಬರೀ ಅವರ ಹೆಸರು, ವಿಳಾಸ ಅಷ್ಟೇ ನನಗೆ ಗೊತ್ತಿರುವುದು, ನನ್ನ ಅಕ್ಕ ಐದು ವರ್ಷಗಳ ಹಿಂದೆ ಇಲ್ಲೇ ಹತ್ತಿರದಲ್ಲಿ ಇದ್ದಳಂತೆ. ಅವಳು ಈ ಹಳ್ಳಿಗೆ ಕಳಿಸಿದಳು", ಎಂದು ಉತ್ತರಿಸಿದ.
ಅವನಿಗೆ ಆ ಚಿಕ್ಕಮ್ಮ ಎಷ್ಟು ವಯಸ್ಸಿನವಳು, ಮದುವೆ ಆದವಳೋ, ವಿಧವೆಯೋ ಏನೂ ಗೊತ್ತಿರಲಿಲ್ಲ. ಆದರೂ ಆ ಮನೆಯನ್ನು ಗಮನಿಸಿದಾಗ ಯಾರೋ ಗಂಡಸರಂತೂ ಇರುವ ಮನೆ ಎಂದು ಅಂದಾಜಾಯಿತು.
ಮತ್ತೆ ಸುಮ್ಮನೇ ಕೂತ.
ಹುಡುಗಿ ಮಾತನಾಡಿದಳು, "ಮೂರು ವರ್ಷದ ಹಿಂದೆ ಆ ದುರಂತ ನೆಡೆದದ್ದು, ಪಾಪ, ಚಿಕ್ಕಮ್ಮ ಆವಾಗಿನಿಂದ ಒಂಥರಾ ಆಗಿಹೋಗಿದ್ದಾರೆ".
"ದುರಂತ? ಏನದು?", ಕೇಳಿದ ನಟ್ಟೆಲ್.
"ಅಲ್ಲಿರುವ ಬಾಗಿಲು ನೋಡಿದ್ದೀರಾ?", ನಟ್ಟೆಲ್ ನೋಡಿದ, ಅವರು ಕುಳಿತ ಜಗುಲಿಯಲ್ಲಿ ಪಕ್ಕದಲ್ಲಿ ಮತ್ತೊಂದು ದೊಡ್ಡ ಬಾಗಿಲಿತ್ತು, ಪೂರ್ತಿ ತೆರೆದಿತ್ತು.
ಆ ಕಡೆಯಿಂದ ಹೊರಗೆ ಹೋಗುವ ದಾರಿ ಕಾಣುತ್ತಿತ್ತು.
"ಈ ಚಳಿಯಲ್ಲೂ ಆ ಬಾಗಿಲು ಯಾಕೆ ಹಾಗೆ ತೆರೆದಿಟ್ಟಿದ್ದಾರೆ ಅಂತ ನೀವು ಯೋಚಿಸಬಹುದು", ಬಾಗಿಲನ್ನೇ ನೋಡುತ್ತಾ ಕೇಳಿದಳು ಹುಡುಗಿ.
ನಟ್ಟೆಲ್ ಗೆ ಆಶ್ಚರ್ಯವಾಯಿತು. ಈಕೆಯ ಚಿಕ್ಕಮ್ಮನ ಬಗ್ಗೆ ಹೇಳುತ್ತಿರುವ ಘಟನೆಗೂ ಆ ಬಾಗಿಲಿಗೂ ಏನೋ ಸಂಬಂಧ ಇರಬಹುದೆಂದುಕೊಂಡ.
ಹುಡುಗಿ ಮುಂದುವರೆಸಿದಳು, "ಇವತ್ತಿನ ಸರಿಯಾಗಿ ಮೂರು ವರ್ಷದ ಹಿಂದೆ ಚಿಕ್ಕಮ್ಮನ ಗಂಡ, ಅವಳ ಇಬ್ಬರು ತಮ್ಮಂದಿರು ಕಾಡಿಗೆ ಬೇಟೆಗೆ ಹೋಗಿಬರುತ್ತೇವೆಂದು ಇದೇ ಬಾಗಿಲಿನ ಮೂಲಕ ಹೋದವರು ಹಿಂದಿರುಗಿ ಬರಲೇ ಇಲ್ಲ!. ಅವರು ಎಲ್ಲಿ ಹೋದರೆಂಬುದೂ ಗೊತ್ತಾಗಲಿಲ್ಲ. ಹೊಳೆ ದಾಟುವಾಗ ಕೊಚ್ಚಿಕೊಂಡು ಹೋಗಿರಬೇಕು ಅಂದರು ಮೊದಲು. ಆದರೆ ಆ ಹೊಳೆ ಅಂಥಾ ದೊಡ್ಡದೇನೂ ಅಲ್ಲ. ಯಾರೂ ಯಾವತ್ತೂ ಅದರಲ್ಲಿ ಸತ್ತಿಲ್ಲ. ಅಂದ ಮೇಲೆ ಇವರು ಕೊಚ್ಚಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಅಮೇಲೆ ತಿಳಿದದ್ದು, ಅವರು ಅಲ್ಲಿನ ಜೌಗಿನ ನೆಲದಲ್ಲಿ ಹೂತು ಸತ್ತುಹೋದ್ರಂತೆ. ಒಟ್ಟಿನಲ್ಲಿ ಕೊನೆಗೂ ಅವರ ದೇಹಗಳೂ ಸಿಗಲಿಲ್ಲ". ಹುಡುಗಿಯ ಧ್ವನಿಯಲ್ಲಿ ಬದಲಾವಣೆ ಆಗಿದ್ದನ್ನು ನಟ್ಟೆಲ್ ಗಮನಿಸಿದ.
"ಅವತ್ತಿಂದ ಚಿಕ್ಕಮ್ಮ ಅವರು ಬರೋದನ್ನೇ ಕಾಯುತ್ತಿದ್ದಾರೆ, ಯಾವತ್ತೋ ಒಂದು ದಿನ ಬಂದೇ ಬರ್ತಾರೆ ಅಂತ ನಂಬಿಕೊಂಡಿದ್ದಾರೆ, ಅವರ ಗಂಡ, ತಮ್ಮಂದಿರು ಮತ್ತು ಅವರ ಪ್ರೀತಿಯ ನಾಯಿ ಮರಿ ವಾಪಸ್ಸು ಬರುವುದನ್ನೇ ಪ್ರತಿದಿನ ಕಾಯ್ತಿರ್ತಾರೆ. ಅವರಿಗಾಗೇ ಆ ಬಾಗಿಲನ್ನು ದಿನಾ ಸಂಜೆ ತೆಗೆದಿಟ್ಟಿರುತ್ತಾರೆ. ಹೋಗುವಾಗ ಚಿಕ್ಕಪ್ಪ ಬಿಳೀ ರೈನ್ ಕೋಟು ಹಾಕಿಕೊಂಡಿದ್ದರಂತೆ, ಅವರ ಚಿಕ್ಕ ತಮ್ಮ ಜೋರಾಗಿ ಹಾಡು ಹೇಳುತ್ತಾ ಚಿಕ್ಕಮ್ಮನನ್ನು ಅಣಗಿಸುತ್ತಾ ಹೋದನಂತೆ. ಇದನ್ನು ಚಿಕ್ಕಮ್ಮ ಯಾವಾಗ್ಲೂ ಹೇಳ್ತಿರ್ತಾರೆ. ಅದನ್ನು ಕೇಳೀ ಕೇಳೀ ಒಬ್ಬಳೇ ಕೂತಿದ್ದಾಗ ನನಗೂ ಒಂದು ದಿನ ಇದೇ ಬಾಗಿಲಲ್ಲಿ ಅವರು ಹಾಗೇ ನೋಡನೋಡುತ್ತಿದ್ದಂತೆ ಬಂದುಬಿಡುತ್ತಾರೆನೋ ಅನ್ನಿಸಿಬಿಡುತ್ತದೆ."
ಮಾತಾಡುತ್ತಿದ್ದವಳ ಧ್ವನಿ ಸಣ್ಣದಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು.
*****
ಅಷ್ಟರಲ್ಲೇ ಒಂದು ಹೆಂಗಸು ಮುಂದಿನ ಬಾಗಿಲಿನಿಂದ ಅವಸರದಲ್ಲಿ ಒಳಗೆ ಬಂದಳು. ನಟ್ಟೆಲ್ ನನ್ನು ನೋಡಿ ಅವನನ್ನು ಇಷ್ಟು ಹೊತ್ತು ಕಾಯಿಸಿದ್ದಕ್ಕೆ ಮೂರ್ನಾಲ್ಕು ಬಾರಿ ಕ್ಷಮೆ ಕೇಳಿದಳು. ಆ ಹೆಂಗಸೇ ಆ ಹುಡುಗಿಯ ಚಿಕ್ಕಮ್ಮ ಎಂದು ನಟ್ಟೆಲ್ ನಿಗೆ ತಿಳಿಯಿತು. ತಾನು ಬಂದಿದ್ದು ಇವಳಿಗೆ ಹೇಗೆ ಗೊತ್ತಾಯಿತು ಎಂದು ಯೋಚಿಸಿದ ನಟ್ಟೆಲ್, ತಾನು ಮನೆಯೊಳಗೆ ಬರುವುದನ್ನು ನೋಡಿದ ಯಾರೋ ಹೋಗಿ ಹೇಳಿರಬಹುದು ಎಂದುಕೊಂಡ.
"ನಮ್ಮ ಪುಟ್ಟಿ ನಿಮ್ಮ ಜೊತೆ ಚೆನ್ನಾಗಿ ಮಾತಾಡ್ತಾ ಇದ್ದಳಾ, ಕಾಯುವಾಗ ಏನೂ ಬೇಸರವಾಗಲಿಲ್ಲ ತಾನೆ?" ಎಂದು ಕೇಳಿದಳು ಆ ಹೆಂಗಸು.
"ಇಲ್ಲ, ಬಹಳ ಚೆನ್ನಾಗಿ ಮಾತಾಡುತ್ತಾಳೆ, ಹೊತ್ತು ಹೋದದ್ದೇ ತಿಳಿಯಲಿಲ್ಲ" ಎಂದ ನಟ್ಟೆಲ್.
ಆ ಹೆಂಗಸು ಹುಡುಗಿ ತೋರಿಸಿದ್ದ ದೊಡ್ಡ ಬಾಗಿಲನ್ನೇ ತೋರಿಸುತ್ತಾ ಕೇಳಿದಳು, "ಆ ದೊಡ್ಡ ಬಾಗಿಲು ತೆಗೆದೇ ಇತ್ತು, ಅಲ್ಲಿಂದ ಗಾಳಿ ಬೀಸುತ್ತದೆ, ನಿಮಗೆ ಚಳಿಯಾಗಿರಬಹುದು, ನನ್ನ ಗಂಡ, ತಮ್ಮಂದಿರು ಬರುವ ಹೊತ್ತಾಯಿತು, ಅವರು ಬೇಟೆಗೆ ಹೋದವರು ಈ ಕಡೆ ಬಾಗಿಲಿನಿಂದ ಬರುತ್ತಾರೆ, ಅದಕ್ಕೇ ತೆರೆದಿಟ್ಟಿದ್ದೆ",
ನಟ್ಟೆಲ್ ನಿಗೆ ಆಶ್ಚರ್ಯವಾಯಿತು, ಸಣ್ಣಗೆ ಭಯವೂ ಆಯಿತು.
"ಕೊಳಕು ಕಾಲುಗಳಲ್ಲೇ ಒಳಬಂದು ಇಲ್ಲೆಲ್ಲಾ ಮಣ್ಣು ಮಾಡ್ತಾರೆ, ಎಷ್ಟು ಬಾರಿ ಹೇಳಿದರೂ ಕೇಳಲ್ಲ, ನೀವು ಗಂಡಸರೇ ಹೀಗೆ ಅಲ್ವೆ?" ಎಂದು ನಕ್ಕಳು. ಅವರ ಬೇಟೆಯ ಬಗ್ಗೆ, ಇತ್ತೀಚೆಗೆ ಯಾವುದೂ ಹಕ್ಕಿಗಳು ಸರಿಯಾಗಿ ಬೇಟೆಗೆ ಸಿಗದಿರುವ ಬಗ್ಗೆ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಬಾತುಕೋಳಿಗಳ ಬಗ್ಗೆ ಒಂದೇ ಸಮನೆ ಏನೇನೋ ಹೇಳಿದಳು. ಮಾತನಾಡುವಾಗಲೂ ಅವಳ ಕಣ್ಣು ಆ ತೆರೆದ ಬಾಗಿಲ ಕಡೆಗೇ ಇದ್ದವು. ಮನೆಗೆ ಅತಿಥಿಯಾಗಿ ಬಂದಿದ್ದ ನಟ್ಟೆಲ್ ನ ಕುಶಲ ವಿಚಾರಿಸುವುದರ ಬಗ್ಗೆ ಆಕೆಗೆ ಹೆಚ್ಚಿನ ಗಮನ ಇದ್ದಂತಿರಲಿಲ್ಲ. ಆಗಾಗ ಬಾಗಿಲಿನ ಬಳಿ ಬಗ್ಗಿ ಕಣ್ಣು ಕಿರಿದಾಗಿಸಿ ನೋಡುತ್ತಿದ್ದಳು. ಅವಳ ಗಂಡ, ತಮ್ಮಂದಿರು ಹೋಗಿ ಸರಿಯಾದ ಮೂರು ವರ್ಷವಾದ ದಿನಕ್ಕೇ ನಟ್ಟೆಲ್ ಅವರ ಮನೆಗೆ ಭೇಟಿ ಕೊಟ್ಟದ್ದು ಕೇವಲ ಕಾಕತಾಳೀಯವಾಗಿತ್ತು.
ನಟ್ಟೆಲ್ ತಾನಾಗೇ ತನ್ನ ಪರಿಸ್ಥಿತಿಯನ್ನು ವಿವರಿಸತೊಡಗಿದ."ನನಗೆ ನಗರದ ವಾತಾವರಣದಿಂದ ದೂರ ಹೋಗಿ ಇರುವಂತೆ ವೈದ್ಯರು ಹೇಳಿದ್ದಾರೆ. ಅಲ್ಲೇ ಇದ್ದರೆ ಹೆಚ್ಚು ಕಾಲ ಬದುಕುವುದಿಲ್ಲ, ಆದ್ದರಿಂದ ಯಾವುದಾದರೂ ಹಳ್ಳಿಗೆ ಹೋಗಿ ಇರಿ ಎಂದಿದ್ದಾರೆ. ಅದಕ್ಕೇ ಇಲ್ಲಿಗೆ ಬಂದಿದ್ದೇನೆ. ನನ್ನ ಖಾಯಿಲೆಗೆ ಇಂತಹ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಂತೆ. ಜೊತೆಗೆ ನನ್ನ ಮನಸ್ಸಿಗೆ ಹೆಚ್ಚಿನ ಒತ್ತಡ ಅಥವಾ ಆಘಾತ ಆಗಬಾರದಾದೆಂದೂ ಹೇಳಿದ್ದಾರೆ. ನನ್ನ ಅಕ್ಕನಿಗೆ ಈ ಹಳ್ಳಿ ಗೊತ್ತಿದ್ದರಿಂದ ಈ ಇಲ್ಲಿಗೆ ಕಳಿಸಿಕೊಟ್ಟಳು".
"ಅಲ್ನೋಡಿ, ಅವರು ಬಂದೇ ಬಿಟ್ಟರು" , ಅವನು ಮಾತಾಡುತ್ತಿದ್ದಂತೇ ಆ ಹೆಂಗಸು ಆ ದೊಡ್ಡ ಬಾಗಿಲಿನ ಕಡೆ ನೋಡುತ್ತಾ ಜೋರಾಗಿ ಹೇಳಿದಳು. "ಅಂತೂ ಬೇಗನೇ ಬಂದರು, ರಾತ್ರಿ ಊಟದ ಹೊತ್ತಿಗಾದರೂ ಬರುತ್ತಾರೋ ಇಲ್ಲವೋ ಅಂದುಕೊಂಡಿದ್ದೆ, ಇವತ್ತೂ ಮೈಯೆಲ್ಲಾ ಕೊಳೆ ಮಾಡಿಕೊಂಡೇ ಬಂದಿರ್ತಾರೆ" .
ಈ ಬಾರಿ ನಟ್ಟೆಲ್ ಗೆ ಆಶ್ಚರ್ಯದ ಜೊತೆ ಜೋರು ಭಯವಾಗತೊಡಗಿತು. ಅವರೆಲ್ಲಾ ಸತ್ತುಹೋಗಿ ಮೂರುವರ್ಷವಾಯಿತು ಎಂದು ಸ್ವಲ್ಪ ಹೊತ್ತಿನ ಮುಂಚೆ ಹುಡುಗಿ ಹೇಳಿದ್ದಳು. ಇಷ್ಟು ಹೊತ್ತು ಈ ಪಾಪದ ಹೆಂಗಸು ತನ್ನ ಗಂಡ, ತಮ್ಮಂದಿರ ನೆನಪಿನಲ್ಲಿ ಏನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದ. ಈಗ ನೋಡಿದರೆ ಅವರು ಬರುತ್ತಿದ್ದಾರೆ ಅನ್ನುತ್ತಿದ್ದಾಳೆ!. ಸಣ್ಣಗೆ ನಡುಕ ಶುರುವಾಯಿತು. ಆ ಹುಡುಗಿಯ ಕಡೆ ನೋಡಿದ. ಆ ಹುಡುಗಿಯೂ ಹೆದರಿದಂತೆ ಕಂಡಳು. ಆಕೆಯೂ ಆತಂಕದಿಂದ ಆ ಬಾಗಿಲಿನ ಕಡೆಗೇ ನೋಡುತ್ತಿದ್ದಳು. ನಟ್ಟೆಲ್ ತಡೆಯಲಾರದೇ ಎದ್ದು ಹೋಗಿ ಬಾಗಿಲಿನಿಂದ ನೋಡಿದ. ದೂರದಲ್ಲಿ ಮಬ್ಬುಗತ್ತಲಿನಲ್ಲಿ ಮೂರು ಆಕೃತಿಗಳು ಬರುತ್ತಿದ್ದವು. ಆ ಹುಡುಗಿ ಹೇಳಿದ ರೀತಿಯಲ್ಲೇ ಒಬ್ಬ ಬಿಳೀ ರೈನ್ ಕೋಟು ತೊಟ್ಟಿದ್ದ, ಹುಡುಗನೊಬ್ಬ ಯಾವುದೋ ಹಾಡನ್ನು ಜೋರಾಗಿ ಹೇಳುತ್ತಿದ್ದ. ಆ ಮೂರು ಜನರ ಜೊತೆಯಲ್ಲೇ ನಾಯಿಯೊಂದು ಪುಟಪುಟನೇ ಓಡುತ್ತಾ ಬರುತ್ತಿತ್ತು.
ನಟ್ಟೆಲ್ ನಿಗೆ ವಿಪರೀತ ಭಯವಾಗತೊಡಗಿತು. ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಆ ಮನೆಯ ವಾತಾವರಣ ಏಕೋ ಸರಿಯಿಲ್ಲ ಅನ್ನಿಸಿತು. ಗಂಟಲು ಒಣಗಿತು. ಆ ಹೆಂಗಸು, ಮತ್ತು ಹುಡುಗಿಯನ್ನು ತಿರುಗಿ ನೋಡಲೂ ಭಯವಾಗಿ ತನ್ನ ಕೋಲು ಮತ್ತು ಕೈಚೀಲವನ್ನು ಎತ್ತಿಕೊಂಡವನೇ ಮುಂದಿನ ಬಾಗಿಲಿನಿಂದ ಹೊರಕ್ಕೆ ಓಡಿದ. ರಸ್ತೆ ನಿರ್ಜನವಾಗಿತ್ತು. ತೋಚಿದ ಕಡೆ ಓಡಿದ. ಓಡುವಾಗ ದಾರಿಯಲ್ಲಿ ಬರುತ್ತಿದ್ದ ಸೈಕಲ್ ಒಂದಕ್ಕೆ ಅಡ್ಡಸಿಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ.
ಈಗ ಇಲ್ಲಿ ಆ ಮೂರೂ ಜನ ತೆರೆದ ಬಾಗಿಲಿನಿಂದ ಮನೆ ಒಳಗೆ ಬಂದರು. ಬಿಳೀಕೋಟು ತೊಟ್ಟಿದ್ದ ವ್ಯಕ್ತಿ ಆ ಹೆಂಗಸಿಗೆ ಹೇಳಿದ, "ನೋಡು ಇವತ್ತು ಬೇಗನೇ ಬಂದುಬಿಟ್ಟೆವು. ಮನೆಗೆ ಯಾರೋ ಬಂದಂತಿತ್ತಲ್ಲ, ನಾವು ಬರುತ್ತಿದ್ದಂತೆ ಮುಂದಿನ ಗೇಟು ತೆರೆದು ಓಡಿಹೋದರು?"
"ಅವನ್ಯಾರೋ ನಗರದಿಂದ ಬಂದಿದ್ದಾನಂತೆ. ಅವನಿಗೇನೋ ಖಾಯಿಲೆಯಂತೆ. ಹಳ್ಳಿಗೆ ಹೋಗಿ ಇರಬೇಕೆಂದು ಡಾಕ್ಟರು ಹೇಳಿದ್ದಾರಂತೆ. ತನ್ನ ಖಾಯಿಲೆ ಬಗ್ಗೆ ಏನೋ ಹೇಳುತ್ತಿದ್ದ. ನೀವು ಬರುತ್ತಾ ಇದ್ದದ್ದು ನೋಡಿ ಅವನ ಕತೆಯೆಲ್ಲಾ ನಿಂತು ಹೋಯ್ತು. 'ಹೋಗಿ ಬರ್ತೇನೆ' ಅಂತ ಕೂಡ ಹೇಳದೇ ಯಾವುದೋ ಭೂತ ಕಂಡವನಂತೆ ಹೆದರಿ ಹಾಗೇ ಓಡಿಬಿಟ್ಟ, ವಿಚಿತ್ರ ಮನುಷ್ಯ", ಅಂದಳು ಹೆಂಗಸು.
ಅದುವರೆಗೂ ಸುಮ್ಮನಿದ್ದ ಹುಡುಗಿ ನಗುತ್ತಾ ಹೇಳಿದಳು, "ಅವನು ನಮ್ಮ ನಾಯಿ ಕಂಡು ಹೆದರಿರಬೇಕು. ನನಗೆ ಹೇಳಿದ್ದ, ಅವನಿಗೆ ನಾಯಿ ಕಂಡರೆ ಮೊದಲಿಂದಲೂ ಹೆದರಿಕೆಯಂತೆ. ಒಂದು ಸಲ ಅವನು ಎಲ್ಲೋ ರಾತ್ರಿ ಒಬ್ಬನೇ ಹೋಗುವಾಗ ಕತ್ತಲಿನಲ್ಲಿ ನಾಯಿಗಳು ಧಾಳಿ ಮಾಡಿದವಂತೆ. ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಸ್ಮಶಾನದೊಳಕ್ಕೆ ನುಗ್ಗಿ ಯಾವುದೋ ಗೋರಿಯಲ್ಲಿ ಅಡಗಿ ಕುಳಿತಿರಬೇಕಾಯಿತಂತೆ. ರಾತ್ರಿಯೆಲ್ಲಾ ನಾಯಿಗಳ ಭಯದೊಂದಿಗೆ ಸ್ಮಶಾನದಲ್ಲೇ ಕುಳಿತಿದ್ದನಂತೆ. ಅವತ್ತಿಂದ ನಾಯಿ ಎಂದರೆ ಅವನಿಗೆ ಇನ್ನೂ ಭಯವಂತೆ".
"ಯಾರಿಗೇ ಆದ್ರೂ ಹಾಗೆಲ್ಲಾ ಆದರೆ ಭಯ ಆಗೇ ಆಗುತ್ತೆ ಅಲ್ವಾ?" ಆಕೆಯ ಧ್ವನಿ ತಣ್ಣಗೆ ಅತ್ಯಂತ ಸಹಜವಾಗಿತ್ತು.
****
ಮನಸಿಗೆ ಬಂದಂತೆ ಕತೆಕಟ್ಟಿ, ತಕ್ಷಣಕ್ಕೆ ಅದನ್ನೇ ನಿಜವೆಂಬಂತೆ ಹೇಳುವುದರಲ್ಲಿ ಅವಳು ನಿಸ್ಸೀಮಳಾಗಿದ್ದಳು.
-------------------
Saki ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾಗಿರುವ ಬ್ರಿಟಿಷ್ ಲೇಖಕ Hector Hugh Munro (1870 – 1916), ಸಣ್ಣ ಕತೆಗಳ ಮಾಸ್ಟರ್ ಎಂದು ಕರೆಯಲ್ಪಡುವಾತ. ಆತನ ಹಲವಾರು ಸಣ್ಣಕತೆಗಳು ಇಂದಿಗೂ ಅತೀ ಹೆಚ್ಚು ಓದಿಸಿಕೊಂಡ ಖ್ಯಾತಿ ಹೊಂದಿವೆ. ಕುತೂಹಲ ಹುಟ್ಟಿಸುವ ನಿರೂಪಣೆ ಆತನ ಕತೆಗಳ ವಿಶೇಷತೆ. The Open Window ಎಂಬುದು ಅವರ ಬಹಳ ಪ್ರಸಿದ್ಧ ಕತೆ. ಇಂಗ್ಲಿಷಿನಲ್ಲಿ ಈ ಕತೆಯ ಕೊನೆಯ ಸಾಲು ಆ ಕಾಲದಲ್ಲಿ ಬಲು ಪ್ರಸಿದ್ಧವಾಗಿ ಇಂಗ್ಲಿಷ್ ಭಾಷಾಸಂಪತ್ತಿಗೆ ಸೇರಿಸಲ್ಪಟ್ಟಿತು ಎಂದು ವಿಕಿಪಿಡಿಯಾ ಹೇಳುತ್ತದೆ. ಆ ಕತೆಯ ಕನ್ನಡಾನುವಾದ ಇದು.
(ಆಗಸ್ಟ್ ’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದ್ದು).

ಶನಿವಾರ, ಜುಲೈ 31, 2010
" ವ್ಯವಹಾರ "
ಮಧ್ಯಾಹ್ನ ಸೂರ್ಯನ ಉರಿಬಿಸಿಲು ಸುರಿದಿತ್ತು. ಕಣ್ಣಿನ ನಿಲುಕಿನವರೆಗೂ ಹೊಲಗದ್ದೆಗಳು ಹರಡಿದ್ದವು. ಮರಗಳ ಸಾಲಿನಿಂದ
ಬೇರ್ಪಡಿಸಲ್ಪಟ್ಟ ಆ ಹೊಲಗಳಲ್ಲಿ ಹಳದಿ ಗೋಧಿ, ಮಾಸಲು ಹಸಿರು ಓಟ್, ದಟ್ಟ ಹಸಿರಿನ ಕ್ಲೋವರ್ ಮುಂತಾದ ಬೆಳೆಗಳು ನಳನಳಿಸುತ್ತಿದ್ದವು. ದೂರದಲ್ಲಿ, ಒಂದು ದೊಡ್ಡ ಇಳಿಜಾರಿನ ಮೇಲ್ತುದಿಯಲ್ಲಿ ಅಸಂಖ್ಯ ರಾಸುಗಳ ಹಿಂಡು ಮೇಯುತ್ತಿದ್ದವು. ಕೆಲವು ನಿಂತು, ಕೆಲವು ಕೂತು ಮೆಲುಕು ಹಾಕುತ್ತಿದ್ದವು. ಬಿಸಿಲಿನ ಝಳಕ್ಕೆ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳುಕಿಸುತ್ತಾ ಒಂದು ಸರೋವರದಂತೆ ಹರಡಿಕೊಂಡಿದ್ದವು.
ಇಬ್ಬರು ಹೆಂಗಸರು, ಅಮ್ಮ ಮಗಳು, ಒಬ್ಬರ ಹಿಂದೊಬ್ಬರು ಬಿರುಸಾಗಿ ದನಗಳ ಹಿಂಡಿನೆಡೆಗೆ ನೆಡೆಯುತ್ತಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ದೊಡ್ಡ ಹಿತ್ತಾಳೆಯ ಪಾತ್ರೆಗಳಿವೆ. ಅವರ ಒಂದೊಂದು ಹೆಜ್ಜೆಗೂ ಆ ಲೋಹದ ಪಾತ್ರೆಗಳು ಸೂರ್ಯನ ಬೆಳಕಿಗೆ ಫಳಕ್ಕನೆ ಮಿಂಚುತ್ತಿವೆ. ಆ ಇಬ್ಬರು ಮಾಲಿವೋಯಿರೆ* ಹೆಂಗಸರು ಏನೂ ಮಾತನಾಡದೇ ಹಾಲು ಕರೆಯಲು ಬರುತ್ತಿದ್ದಾರೆ. ಹಸುಗಳ ಹಿಂಡಿನೆಡೆಗೆ ಬಂದೊಡನೆ ತಮ್ಮ ಕೈಲಿದ್ದ ಪಾತ್ರೆಗಳನ್ನು ಕೆಳಗಿಟ್ಟರು. ಸಾಲಿನಲ್ಲಿ ಮುಂದೆ ಕೂತು ಮೆಲುಕು ಹಾಕುತ್ತಿದ್ದ ಎರಡು ಹಸುಗಳ ಪಕ್ಕೆಯ ಮೇಲೆ ಕೋಲಿನಿಂದ ಮೆಲ್ಲಗೆ ತಟ್ಟಿದರು. ಅವು ತಮ್ಮ ಮುಂಗಾಲುಗಳನ್ನು ಊರಿ ಅನಂತರ ತಮ್ಮ ಹಿಂಭಾರವನ್ನು ಎತ್ತುತ್ತಾ ನಿಧಾನಕ್ಕೆ ಎದ್ದವು. ಹಿಂದಿನ ಕಾಲುಗಳ ಮಧ್ಯೆ ಭಾರದಿಂದ ಜೋತುಬಿದ್ದಂತಹ ಸಮೃದ್ಧವಾದ ಕೆಚ್ಚಲು ತೂಗುತ್ತಿತ್ತು. ಹಸುಗಳ ಹೊಟ್ಟೆಯಡಿ ಮಂಡಿಯೂರಿ ಪಾತ್ರೆಗಳನ್ನಿಟ್ಟು ಹಾಲು ಕರೆಯಲು ಶುರುಮಾಡಿದರು. ಒಂದೊಂದು ಬಾರಿ ಹಿಂಡಿದಾಗಲೂ ಹಾಲು ಪಿಚಕಾರಿಯಂತೆ ಹಾರಿ ಪಾತ್ರೆ ತುಂಬಿಸುತ್ತಾ ಹೋದಂತೆ ಹಳದಿ ನೊರೆ ಮೇಲೇರುತ್ತಾ ಬಂತು. ಇದೇ ರೀತಿ ಸಾಲಿನಲ್ಲಿರುವ ಕೊನೆಯ ಹಸುವಿನ ತನಕ ಎಲ್ಲಾ ಹಸುಗಳ ಹಾಲನ್ನು ಹಿಂಡುತ್ತಾ ಹೋದರು ಅಮ್ಮ ಮತ್ತು ಮಗಳು. ಒಂದೊಂದು ಹಸುವಿನ ಹಾಲು ಕರೆದಾದ ಮೇಲೂ ಅವುಗಳನ್ನು ಹಸಿರು ಹುಲ್ಲಿನೆಡೆಗೆ ಕರೆದೊಯ್ದು ಮೇಯ್ದುಕೊಳ್ಳಲು ಬಿಡುತ್ತಿದ್ದರು.
ಎಲ್ಲಾ ಮುಗಿದಾದ ಮೇಲೆ ಹಾಲು ತುಂಬಿದ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ನಿಧಾನಕ್ಕೆ ನಡೆಯುತ್ತಾ ಮನೆಯ ಕಡೆ ಹೊರಟರು. ಅಮ್ಮ ಮುಂದೆ ನೆಡೆಯುತ್ತಿದ್ದಳು. ಮಗಳು ಹಿಂದೆ. ಸ್ವಲ್ಪ ದೂರ ನೆಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೇ ಹಿಂದೆ ನೆಡೆಯುತ್ತಿದ್ದ ಮಗಳು ತನ್ನ ಹೊರೆಯನ್ನೆಲ್ಲಾ ಥಟ್ಟನೆ ಕೆಳಕ್ಕಿಟ್ಟು ಕುಸಿದು ಕುಳಿತುಬಿಟ್ಟಳು. ಮುಂದೆ ನೆಡೆಯುತ್ತಿದ್ದ ಮಾಲಿವೋಯಿರೆ ಹೆಂಗಸು, ತನ್ನ ಮಗಳ ಹೆಜ್ಜೆ ಸಪ್ಪಳ ನಿಂತುದ್ದನ್ನು ಗಮನಿಸಿ, ಹಿಂದಿರುಗಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.
"ಏನಾಯ್ತು ನಿಂಗೆ?" ಕೇಳಿದಳು ಅಮ್ಮ.
ಕೆಂಚು ಕೂದಲಿನ, ಕೆಂಪುಕೆನ್ನೆಯ ಮಗಳು ಸೆಲೆಸ್ಟಿ ಒದೆ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಸಣ್ಣಗೆ ಅಳುತ್ತಾ ಕೂತಿದ್ದಳು. ಉರಿಬಿಸಿಲಿನಲ್ಲಿ ಬಸವಳಿದ ಅವಳ ಮುಖ ಬೆಂಕಿ ಕೆಂಡದಂತಾಗಿತ್ತು.
"ನನ್ನ ಕೈಯಲ್ಲಿ ಈ ಪಾತ್ರೆ ಹೊತ್ತುಕೊಂಡು ಬರಲಿಕ್ಕಾಗಲ್ಲ"
ಅಮ್ಮ ತನ್ನ ಮಗಳನ್ನು ಸಂಶಯದಿಂದ ನೋಡಿದಳು.
"ಏನು ತೊಂದರೆ ನಿಂಗೆ ಹೇಳು", ಕೇಳಿದಳು.
"ಇದು ಬಹಳಾ ಭಾರ, ನನ್ನ ಕೈಲಾಗೋಲ್ಲ, ಸುಸ್ತಾಗ್ತಿದೆ". ಭಾರದ ಎರಡು ಹಾಲಿನ ಪಾತ್ರೆಗಳನ್ನ ನೆಲದ ಮೇಲೆ ಇಟ್ಟು ಅದರ ಮಧ್ಯದಲ್ಲಿ ಕುಳಿತು ತನ್ನ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಸೆಲೆಸ್ಟಿ ಉತ್ತರಿಸಿದಳು. ದನಿ ಉಡುಗಿಹೋಗಿತ್ತು. ದುಃಖ ತುಂಬಿತ್ತು.
"ಯಾಕೆ ಏನಾಗಿದೆ ನಿಂಗೆ ಹೇಳು" ಮತ್ತೊಮ್ಮೆ ಕೇಳಿದಳು ಅಮ್ಮ.
ಮಗಳು ಸಣ್ಣಗೆ ಮುಲುಗಿದಳು. "ನಾನೀಗ ಬಸುರಿ, ನನ್ನ ಹೊಟ್ಟೆಯಲ್ಲಿ ಮಗು ಇದೆ". ಇಷ್ಟು ಹೇಳಿ ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದಳು.
ಇದ್ದಕ್ಕಿದ್ದ ಹಾಗೇ ಇದನ್ನು ಕೇಳಿದ ಅಮ್ಮ ಸ್ವಲ್ಪ ಹೊತ್ತು ಏನು ಹೇಳಬೇಕೆಂದು ತೋಚದೇ ದಂಗಾಗಿ ನಿಂತಳು. ಸುಧಾರಿಸಿಕೊಂಡು ತನ್ನ ಕೈಲಿದ್ದ ಭಾರವನ್ನು ಕೆಳಗಿಟ್ಟು "ನಿನ್ನ ಹೊಟ್ಟೆಯಲ್ಲಿ ಮಗು ಇದೆಯಾ? ಇದು ಹೇಗಾಯ್ತು? ಹಾಳಾದವಳೇ" ಎಂದು ಬೈಯತೊಡಗಿದಳು.
ಮಾಲಿವೋಯಿರೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ, ನಿಯತ್ತಿನ ವ್ಯಾಪಾರದ, ಸಾಕಷ್ಟು ಸಂಪತ್ತುಳ್ಳ ರೈತರಾಗಿದ್ದರು. ಅವರಿಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು.
ಬಿಳುಚಿದ ಮುಖದೊಡನೆ ತಾಯಿ ಅಳುತ್ತಿದ್ದ ಮಗಳನ್ನು ನೋಡಿದಳು. "ಇದು ಹೇಗಾಯ್ತು ಹೇಳು, ದರಿದ್ರ ರಂಡೆ" ಎಂದು ತಾನೂ ಅಳುತ್ತಾ ಕೂಗಲು ಶುರುಮಾಡಿದಳು.
ಅಮ್ಮನ ಈ ಅವತಾರ ನೋಡಿದ ಮಗಳು ಸೆಲೆಸ್ಟಿ ಹೆದರಿದಳು.
ಆ ತಾಯಿ ಯೋಚಿಸತೊಡಗಿದಳು. ತನ್ನ ಮಗಳನ್ನು ಈ ಸ್ಥಿತಿಗೆ ತಂದಿಟ್ಟವರು ಯಾರಿರಬಹುದು. ಮೊದಲೇ ಗೊತ್ತಾಗಿದ್ದರೆ ಅದನ್ನು ತೆಗೆಸಿ ಹಾಕಿಬಿಡಬಹುದಿತ್ತು. ಆದರೂ ಈಗಲೂ ಕಾಲ ಮಿಂಚಿಲ್ಲ. ಇಂತಹ ಕೆಲಸ ಮಾಡಿಕೊಂಡಿರುವುದು ತನ್ನ ಮಗಳು ಒಬ್ಬಳೇ ಏನಲ್ಲ. ಆದರೆ ಸಮಾಜದಲ್ಲಿ ಗೌರವ ಹೊಂದಿರುವ ತಮಗೆ ಈ ವಿಷಯದಲ್ಲಿ ಜನರನ್ನು ಎದುರಿಸುವುದು ಅಷ್ಟು ಸುಲಭವಲ್ಲ.
"ಯಾರದು ಹೇಳು, ಹಾದರಗಿತ್ತಿ" ಮತ್ತೆ ಕೂಗಿದಳು.
ಅಳುತ್ತಾ ಕೂತಿದ್ದ ಸೆಲೆಸ್ಟಿ ಏನಾದರಾಗಲಿ ಹೇಳಲೇಬೇಕೆಂದುಕೊಂಡು ಒಂದು ಕ್ಷಣಕ್ಕೆ ಧೈರ್ಯ ತಂದುಕೊಂಡು ನಡುಗುವ ದನಿಯಲ್ಲಿ ಹೇಳಿದಳು.
"ಇದು ಪೋಲೈಟ್ ನಿಂದ ಆಗಿದ್ದು"
ಮಗಳ ಮಾತು ಕೇಳಿ ತಾಯಿಗೆ ಸಿಟ್ಟು ತಾರಕಕ್ಕೇರಿತು. ಮಗಳ ಬಳಿ ನುಗ್ಗಿದವಳೇ ಅವಳನ್ನು ಹೊಡೆಯತೊಡಗಿದಳು. ಕಾಲುಗಳ ನಡುವೆ ಮುಖ ಮುಚ್ಚಿಕೊಂಡು ಕೂತ ಸೆಲೆಸ್ಟಿಗೆ ತಲೆ ಮೇಲೆ, ಬೆನ್ನಿನ ಮೇಲೆ ಎಲ್ಲಾ ಕಡೆ ತಾಯಿಯ ಮುಷ್ಟಿಯ ಗುದ್ದುಗಳು ಬಿದ್ದವು.
ಏನೋ ಗಲಾಟೆಯಾಗುತ್ತಿದ್ದುದನ್ನು ಕೇಳಿದ ಹಸುಗಳು ಮೇಯುವುದನ್ನು ನಿಲ್ಲಿಸಿ ಒಮ್ಮೆ ತಲೆ ಎತ್ತಿ ಈ ಕಡೆಗೆ ನೋಡಿದವು. ಇವರಿಗೆ ಹತ್ತಿರವಿದ್ದ ಹಸು ತನ್ನ ಕುತ್ತಿಗೆ ಉದ್ದ ಮಾಡಿ ಒಮ್ಮೆ ಹೂಂಕರಿಸಿತು.
ಸುಸ್ತಾಗುವವರೆಗೂ ಹೊಡೆದು ತಾಯಿ ಕುಸಿದು ಕೂತಳು. ಸ್ವಲ್ಪ ಹೊತ್ತಿಗೆ ಕೋಪವು ಇಳಿದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡತೊಡಗಿದಳು.
"ಇದು ಹೇಗೆ ಸಾಧ್ಯ? ನಿನಗೆ ಬುದ್ದಿ ಇಲ್ಲ. ಆ ಪೋಲೈಟ್ ನಿನಗೆ ಏನೋ ಮೋಸ ಮಾಡಿದ್ದಾನೆ, ದರಿದ್ರದವನು, ಅಯ್ಯೋ ದೇವರೇ" ಎಂದಳು.
ಹೊಡೆತ ತಿಂದು ನೆಲದ ಮೇಲೆ ಬಿದ್ದುಕೊಂಡಿದ್ದ ಸೆಲೆಸ್ಟಿ ಹಾಗೆಯೇ ಸಣ್ಣಗೆ ಹೇಳಿದಳು, "ನಾನು ಅವನಿಗೆ ದುಡ್ಡು ಕೊಡುತ್ತಿರಲಿಲ್ಲ" .
ಅಮ್ಮನಿಗೆ ಈಗ ಅರ್ಥವಾಯಿತು.
****
ಪ್ರತಿವಾರದಲ್ಲಿ ಎರಡು ದಿನ, ಅಂದರೆ, ಬುಧವಾರ ಮತ್ತು ಶನಿವಾರ, ಅವರು ಬೆಳೆದ ಕೆಲವು ಬೆಳೆಗಳನ್ನು, ಕೋಳಿಗಳನ್ನು, ಮೊಟ್ಟೆಗಳನ್ನು ತೆಗೆದುಕೊಂಡು ಮಾರಲು ಪಟ್ಟಣಕ್ಕೆ ಸೆಲೆಸ್ಟಿ ಹೋಗುತ್ತಿದ್ದಳು. ಅದಕ್ಕಾಗಿ ಅವಳು ಪೋಲೈಟ್ ನ ಕುದುರೆಗಾಡಿಯನ್ನೇ ಆಶ್ರಯಿಸಿದ್ದಳು. ಅದರಲ್ಲೇ ಅವಳು ಹೋಗಿಬರಬೇಕಾಗಿತ್ತು. ಬೆಳಗ್ಗೆ ಮುಂಜಾನೆಯೇ ಎರಡು ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೊರಡುತ್ತಿದ್ದಳು. ಒಂದರಲ್ಲಿ ಡೈರಿ ಉತ್ಪನ್ನಗಳು, ಮತ್ತೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ದೊಡ್ಡರಸ್ತೆವರೆಗೆ ನೆಡೆದುಕೊಂಡು ಹೋಗಿ ಅಲ್ಲಿ ಪಟ್ಟಣಕ್ಕೆ ಹೋಗಲು ಬಂಡಿಗಾಗಿ ಕಾಯುತ್ತಿದ್ದಳು. ರಸ್ತೆ ಪಕ್ಕದಲ್ಲೇ ತನ್ನ ಸಾಮಾನುಗಳನ್ನು ರಾಶಿಹಾಕಿಕೊಂಡು ಕುಲಿತಿರುತ್ತಿದ್ದಳು. ಹಳದಿ ಬಣ್ಣದ ಗಾಡಿ ಕುಂಟುತ್ತಾ ಬರುತ್ತಿತ್ತು. ಆ ಗಾಡಿಯನ್ನು ಓಡಿಸುವ ಮನುಷ್ಯ ಪೋಲೈಟ್ ಇನ್ನೂ ಯುವಕ. ಕೊಳಕು ಬಟ್ಟೆಗಳನ್ನು ಹಾಕಿಕೊಂಡು, ಬಿಸಿಲಿನಲ್ಲಿ ಸೀದುಹೋದಂತೆ ಕಾಣುತ್ತಿದ್ದ. ಇವಳನ್ನು ಕಾಣುತ್ತಲೇ ಅಷ್ಟು ದೂರದಿಂದಲೇ ತನ್ನ ಚಾಟಿ ಬೀಸುತ್ತಾ ಕೂಗುತ್ತಿದ್ದ, "ಗುಡ್ ಮಾರ್ನಿಂಗ್ ಮೇಡಂ ಸೆಲೆಸ್ಟಿ, ಚೆನ್ನಾಗಿದ್ದೀರಾ"...? ತಕ್ಷಣವೇ ಸೆಲೆಸ್ಟಿ ಎದ್ದು ತನ್ನ ಸಾಮಾನುಗಳನ್ನೆಲ್ಲಾ ಒಂದೊಂದಾಗಿ ಎತ್ತಿ ಕೊಡುತ್ತಿದ್ದಳು. ಪೋಲೈಟ್ ಅದನ್ನೆಲ್ಲಾ ಬಂಡಿಯಲ್ಲಿ ಹಾಕಿಕೊಂಡು ಅನಂತರ ಕೆಳಗಿಳಿದು ಅವಳನ್ನು ಬಂಡಿ ಹತ್ತಿಸುತ್ತಿದ್ದ. ಹತ್ತಿಸುವಾಗ ಅವಳ ನಯವಾದ ಕಾಲುಗಳು ದರ್ಶನವಾಗುತ್ತಿದ್ದಂತೇ ತಮಾಷೆ ಮಾಡುತ್ತಿದ್ದ, "ಕಾಲುಗಳು ಮೊದಲಿಗಿಂತ ಸಣ್ಣವೇನೂ ಆಗಿಲ್ಲ".
ಅದನ್ನು ಕೇಳಿ ಅವಳು ಅವಳು ನಗುತ್ತಿದ್ದಳು.
"ಗಟ್ಟಿಯಾಗಿ ಕುಳಿತುಕೋ ಹುಡುಗಿ" ಎಂದು ಹೇಳಿ ಕುದುರೆಗಳನ್ನು ಹೊರಡಿಸುತ್ತಿದ್ದ. ಸೆಲೆಸ್ಟಿ ತನ್ನ ಪರ್ಸಿನಿಂದ ಐದು ಪೆನ್ನಿ* ನಾಣ್ಯಗಳನ್ನು ತೆಗೆಯುತ್ತಿದ್ದಳು.. ಮೂರು ಪೆನ್ನಿ ಅವಳ ಪ್ರಯಾಣದ ದರ ಮತ್ತು ಎರಡು ಪೆನ್ನಿ ಸಾಮಾನುಗಳಿಗಾಗಿ. ಅದನ್ನು ಪೋಲೈಟ್ ಗೆ ಕೊಡುತ್ತಿದ್ದಳು. . ಅದನ್ನು ತೆಗೆದುಕೊಂಡು ಅವನು ತುಂಟತನದಿಂದ ಕಣ್ಣುಹೊಡೆದು ಕೇಳುತ್ತಿದ್ದ, "ಇವತ್ತು ಏನಾದ್ರೂ ಆಟ ಆಡೋಣವೇ?"
ಅಷ್ಟು ದುಡ್ಡುಕೊಟ್ಟು ಪ್ರಯಾಣ ಮಾಡುವುದು ಸೆಲೆಸ್ಟಿಗೆ ಜಾಸ್ತಿ ಎನಿಸುತ್ತಿತ್ತು. ಎರಡು ಮೈಲು ಪ್ರಯಾಣಕ್ಕೆ ಅರ್ಧ ಫ್ಯ್ರಾಂಕ್*ಗಳಷ್ಟು ಹಣವನ್ನು ಕೊಡಲು ದುಬಾರಿಯೆನಿಸುತ್ತಿತ್ತು .
"ನನ್ನಂತಾ ಒಳ್ಳೆಯ ಗಿರಾಕಿಯಿಂದ ನೀನು ಮೂರು ಪೆನ್ನಿಗಳಿಗಿಂತ ಜಾಸ್ತಿ ತೆಗೆದುಕೊಳ್ಳಬಾರದಪ್ಪಾ", ಒಂದು ದಿನ ದುಡ್ದು ಕೊಡುತ್ತಾ ಅವಳು ಕೇಳಿದಳು.
ಪೋಲೈಟ್ ನಗುತ್ತಾ ಹೇಳಿದ. "ಬರೀ ಮೂರು ಪೆನ್ನಿಗಳಾ? ನಿನ್ನ ಬೆಲೆ ಅದಕ್ಕಿಂತಾ ಜಾಸ್ತಿ ಸುಂದರಿ !"
ಅವಳು ಮತ್ತೆ ಹೇಳಿದಳು. "ನೀನು ನನ್ನಿಂದಲೇ ತಿಂಗಳಿಗೆ ಎರಡು ಫ್ಯ್ರಾಂಕ್ ಗಳಷ್ಟು ಸಂಪಾದಿಸುತ್ತೀಯ."
ಕುದುರೆಗಳ ಬೆನ್ನ ಮೇಲೆ ಚಾಟಿಯಾಡಿಸುತ್ತಾ ಆತ ಹೇಳಿದ, "ಒಂದು ಕೆಲಸ ಮಾಡೋಣ, ನಾನು ನಿನ್ನ ಸೇವೆ ಮಾಡುತ್ತೇನೆ, ನಾವು ನಿನ್ನ ದುಡ್ದಿನ ಬದಲಾಗಿ ಆಟ ಆಡೋಣ"
"ಆಟ? ಹಾಗಂದ್ರೆ ಏನು ?" ಅವಳು ಮುಗ್ಧವಾಗಿ ಕೇಳಿದಳು.
ಪೋಲೈಟ್ ಜೋರಾಗಿ ನಕ್ಕ.
ಆಟ ಅಂದ್ರೆ ಅದೊಂಥರಾ ಆಟ, ನಮ್ಮಿಬ್ಬರ ಆಟ, ಸಂಗೀತವಿಲ್ಲದೇ ಕುಣಿಯುವಂತದ್ದು, ಹುಡುಗ ಹುಡುಗಿ ಆಟ.
ಅವಳಿಗೆ ಅದು ಈಗ ಅರ್ಥವಾಗಿ ನಾಚಿಕೆಯಿಂದ ಮುಖ ಕೆಂಪಾಯಿತು. "ನಂಗೆ ಅಂತಹ ಆಟ ಎಲ್ಲಾ ಬೇಡ" ಅವಳು ಹೇಳಿದಳು.
ಪೋಲೈಟ್ ಮತ್ತದೇ ತುಂಟ ದನಿಯಲ್ಲಿ ಘೋಷಿಸಿದ, "ಒಂದಲ್ಲಾ ಒಂದು ದಿನ ಬಂದೇ ಬರ್ತೀಯ ಸುಂದರಿ, ಆಟ ಆಡೇ ಆಡ್ತೀವಿ" .
ಅದಾದ ಮೇಲೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಅವಳು ದುಡ್ಡು ಕೊಡಲು ಹೋದಾಗಲೆಲ್ಲಾ "ಇವತ್ತು ಆಟ ಆಡೋಣವೇ" ಎಂದು ಕೇಳುತ್ತಿದ್ದ. ಅವಳೂ ಕೂಡ ತಮಾಷೆಯಾಗಿ "ಇವತ್ತು ಬೇಡ ಪೋಲೈಟ್, ಇನ್ನೊಂದು ದಿನ ಆಡೋಣ" ಎನ್ನುತ್ತಿದ್ದಳು. ಸರಿ ಎಂದು ಅವನು ನಗುತ್ತಿದ್ದ.
ಸೆಲೆಸ್ಟಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಳು. ಈ ಎರಡು ವರ್ಷಗಳಲ್ಲಿ ಅವನು ಪೋಲೈಟನಿಗೆ ನಲ್ವತ್ತೆಂಟು ಫ್ಯ್ರಾಂಕ್ ಗಳನ್ನು ಕೊಟ್ಟಿದ್ದಳು. ಇನ್ನೂ ಎರಡು ವರ್ಷಗಳು ಹೀಗೇ ಹೋದರೆ ಸುಮಾರು ನೂರು ಫ್ಯ್ರಾಂಕ್ ಗಳನ್ನು ಅವನಿಗೆ ಕೊಟ್ಟಂತಾಗುತ್ತಿತ್ತು. ಅದು ದೊಡ್ಡ ಮೊತ್ತವಾಗಿತ್ತು.
ಒಂದು ದಿನ ಹೀಗೆ ಅವರಿಬ್ಬರೇ ಹೋಗುತ್ತಿದ್ದಾಗ ಆತ ಎಂದಿನಂತೆ ಮತ್ತೆ ಕೇಳಿದ , "ಇನ್ನೂ ನಾವು ಆಟ ಆಡೇ ಇಲ್ಲ"
"ಇವತ್ತು ಆಡೋಣ" ಅವಳು ಉತ್ತರಿಸಿದಳು. ಗಾಡಿಯ ಬಿಳಿ ಕುದುರೆ ಒಮ್ಮೆ ತನ್ನ ಎರಡೂ ಕಾಲುಗಳನ್ನು ಮೇಲೆತ್ತಿ ಕೆನೆಯಿತು. ಅವಳಿಗೆ ಒಮ್ಮೆ ತಾನಿದ್ದ ಸ್ಥಳವೇ ನಡುಗಿದಂತಾಯಿತು. "ಬಾ ಹುಡುಗೀ ಬಾ..." ಎಂದು ಪೋಲೈಟನ ದನಿ ಪ್ರತಿಧ್ವನಿಸಿತು. ಗಾಡಿಯ ಬೇರೆ ಯಾವ ಶಬ್ದವೂ ಕೇಳದಂತಾಯಿತು. ಸೆಲೆಸ್ಟಿಗೆ ಸ್ವಲ್ಪ ಕಾಲ ಮೈ ಭಾರವಾಗಿ ನಿಧಾನಕ್ಕೆ ಹಗುರಾಗುತ್ತಾ ಹೋಯಿತು.
ಅನಂತರ ಅವಳಿಗೆ ತಾನು ಬಸುರಿಯಾಗಿರುವುದು ಗೊತ್ತಾದಾಗ ಮೂರು ತಿಂಗಳಾಗಿತ್ತು.
****
ಇದೆಲ್ಲವನ್ನೂ ಅಳುತ್ತಾ ತನ್ನ ತಾಯಿಗೆ ಹೇಳಿದಳು.
ತಾಯಿ ಕೇಳಿದಳು, "ಎಷ್ಟು ಉಳಿತಾಯ ಮಾಡಿದೆ?"
"ನಾಲ್ಕು ತಿಂಗಳು, ಅಂದರೆ ಒಟ್ಟು ಎಂಟು ಫ್ಯ್ರಾಂಕ್" ಉತ್ತರಿಸಿದಳು ಸೆಲೆಸ್ಟಿ.
ಮತ್ತೆ ತಾಯಿಗೆ ಕೋಪ ನೆತ್ತಿಗೇರಿ ಮಗಳಿಗೆ ಸರಿಯಾಗಿ ಬಡಿದಳು.
"ಈ ವಿಷಯ ಅವನಿಗೆ ಹೇಳಿದ್ದೀಯಾ?"
"ಇಲ್ಲ ಹೇಳಿಲ್ಲ"
"ಯಾಕೆ ಹೇಳಿಲ್ಲ?"
"ಈ ವಿಷಯ ಗೊತ್ತಾದರೆ ಅವನು ಇನ್ಮುಂದೆ ಹಣ ಕೇಳಬಹುದು!"
ತಾಯಿ ಸ್ವಲ್ಪಹೊತ್ತು ಸುಮ್ಮನೇ ಯೋಚಿಸಿದಳು. ಒಂದು ನಿಟ್ಟುಸಿರಿಟ್ಟು ಹಾಲಿನ ಪಾತ್ರೆಗಳನ್ನು ಎತ್ತಿಕೊಂಡಳು.
"ಎದ್ದೇಳು, ಮನೆಗೆ ನೆಡಿ" ಎಂದು ಮಾತು ನಿಲ್ಲಿಸಿದವಳು ಮತ್ತೆ ಮುಂದುವರೆಸಿದಳು.
"ಅವನಿಗೆ ಈ ವಿಷಯ ಹೇಳಲು ಹೋಗಬೇಡ, ಆರೆಂಟು ತಿಂಗಳು ಅವನಿಗೇ ಈ ವಿಷಯ ಗೊತ್ತಾಗುವವರೆಗೂ ಹಣ ಕೊಡುವುದು ಬೇಡ"
ಸೆಲೆಸ್ಟಿ ನಿಧಾನಕ್ಕೆ ಎದ್ದು ನಿಂತಳು. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡಿದ್ದವು. ಭಾರವಾದ ಹೆಜ್ಜೆಯಿಡುತ್ತಾ ನೆಡೆಯತೊಡಗಿ ಗೊಣಗಿಕೊಂಡಳು.
"ಆಯ್ತು, ಖಂಡಿತ ನಾನು ಅವನಿಗೆ ಹೇಳೋಲ್ಲ".
=============================
(ಇಂಗ್ಲೀಷ್ ನಿಂದ ಅನುವಾದಿತ)
ಮೂಲ ಕತೆ: Confessing
ಲೇಖಕ: Guy de Maupassant
*ಫ್ರ್ಯಾಂಕ್ಸ್ (Francs)/ ಪೆನ್ನಿ (Penny) = ಹಳೆಯ ಫ್ರೆಂಚ್ ಕರೆನ್ಸಿಗಳು
*ಮಾಲಿವೋಯಿರೆ = ಫ್ರಾನ್ಸ್ ದೇಶದ ಒಂದು ಜನಜಾತಿ
ಬೇರ್ಪಡಿಸಲ್ಪಟ್ಟ ಆ ಹೊಲಗಳಲ್ಲಿ ಹಳದಿ ಗೋಧಿ, ಮಾಸಲು ಹಸಿರು ಓಟ್, ದಟ್ಟ ಹಸಿರಿನ ಕ್ಲೋವರ್ ಮುಂತಾದ ಬೆಳೆಗಳು ನಳನಳಿಸುತ್ತಿದ್ದವು. ದೂರದಲ್ಲಿ, ಒಂದು ದೊಡ್ಡ ಇಳಿಜಾರಿನ ಮೇಲ್ತುದಿಯಲ್ಲಿ ಅಸಂಖ್ಯ ರಾಸುಗಳ ಹಿಂಡು ಮೇಯುತ್ತಿದ್ದವು. ಕೆಲವು ನಿಂತು, ಕೆಲವು ಕೂತು ಮೆಲುಕು ಹಾಕುತ್ತಿದ್ದವು. ಬಿಸಿಲಿನ ಝಳಕ್ಕೆ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳುಕಿಸುತ್ತಾ ಒಂದು ಸರೋವರದಂತೆ ಹರಡಿಕೊಂಡಿದ್ದವು.ಇಬ್ಬರು ಹೆಂಗಸರು, ಅಮ್ಮ ಮಗಳು, ಒಬ್ಬರ ಹಿಂದೊಬ್ಬರು ಬಿರುಸಾಗಿ ದನಗಳ ಹಿಂಡಿನೆಡೆಗೆ ನೆಡೆಯುತ್ತಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ದೊಡ್ಡ ಹಿತ್ತಾಳೆಯ ಪಾತ್ರೆಗಳಿವೆ. ಅವರ ಒಂದೊಂದು ಹೆಜ್ಜೆಗೂ ಆ ಲೋಹದ ಪಾತ್ರೆಗಳು ಸೂರ್ಯನ ಬೆಳಕಿಗೆ ಫಳಕ್ಕನೆ ಮಿಂಚುತ್ತಿವೆ. ಆ ಇಬ್ಬರು ಮಾಲಿವೋಯಿರೆ* ಹೆಂಗಸರು ಏನೂ ಮಾತನಾಡದೇ ಹಾಲು ಕರೆಯಲು ಬರುತ್ತಿದ್ದಾರೆ. ಹಸುಗಳ ಹಿಂಡಿನೆಡೆಗೆ ಬಂದೊಡನೆ ತಮ್ಮ ಕೈಲಿದ್ದ ಪಾತ್ರೆಗಳನ್ನು ಕೆಳಗಿಟ್ಟರು. ಸಾಲಿನಲ್ಲಿ ಮುಂದೆ ಕೂತು ಮೆಲುಕು ಹಾಕುತ್ತಿದ್ದ ಎರಡು ಹಸುಗಳ ಪಕ್ಕೆಯ ಮೇಲೆ ಕೋಲಿನಿಂದ ಮೆಲ್ಲಗೆ ತಟ್ಟಿದರು. ಅವು ತಮ್ಮ ಮುಂಗಾಲುಗಳನ್ನು ಊರಿ ಅನಂತರ ತಮ್ಮ ಹಿಂಭಾರವನ್ನು ಎತ್ತುತ್ತಾ ನಿಧಾನಕ್ಕೆ ಎದ್ದವು. ಹಿಂದಿನ ಕಾಲುಗಳ ಮಧ್ಯೆ ಭಾರದಿಂದ ಜೋತುಬಿದ್ದಂತಹ ಸಮೃದ್ಧವಾದ ಕೆಚ್ಚಲು ತೂಗುತ್ತಿತ್ತು. ಹಸುಗಳ ಹೊಟ್ಟೆಯಡಿ ಮಂಡಿಯೂರಿ ಪಾತ್ರೆಗಳನ್ನಿಟ್ಟು ಹಾಲು ಕರೆಯಲು ಶುರುಮಾಡಿದರು. ಒಂದೊಂದು ಬಾರಿ ಹಿಂಡಿದಾಗಲೂ ಹಾಲು ಪಿಚಕಾರಿಯಂತೆ ಹಾರಿ ಪಾತ್ರೆ ತುಂಬಿಸುತ್ತಾ ಹೋದಂತೆ ಹಳದಿ ನೊರೆ ಮೇಲೇರುತ್ತಾ ಬಂತು. ಇದೇ ರೀತಿ ಸಾಲಿನಲ್ಲಿರುವ ಕೊನೆಯ ಹಸುವಿನ ತನಕ ಎಲ್ಲಾ ಹಸುಗಳ ಹಾಲನ್ನು ಹಿಂಡುತ್ತಾ ಹೋದರು ಅಮ್ಮ ಮತ್ತು ಮಗಳು. ಒಂದೊಂದು ಹಸುವಿನ ಹಾಲು ಕರೆದಾದ ಮೇಲೂ ಅವುಗಳನ್ನು ಹಸಿರು ಹುಲ್ಲಿನೆಡೆಗೆ ಕರೆದೊಯ್ದು ಮೇಯ್ದುಕೊಳ್ಳಲು ಬಿಡುತ್ತಿದ್ದರು.
ಎಲ್ಲಾ ಮುಗಿದಾದ ಮೇಲೆ ಹಾಲು ತುಂಬಿದ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ನಿಧಾನಕ್ಕೆ ನಡೆಯುತ್ತಾ ಮನೆಯ ಕಡೆ ಹೊರಟರು. ಅಮ್ಮ ಮುಂದೆ ನೆಡೆಯುತ್ತಿದ್ದಳು. ಮಗಳು ಹಿಂದೆ. ಸ್ವಲ್ಪ ದೂರ ನೆಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೇ ಹಿಂದೆ ನೆಡೆಯುತ್ತಿದ್ದ ಮಗಳು ತನ್ನ ಹೊರೆಯನ್ನೆಲ್ಲಾ ಥಟ್ಟನೆ ಕೆಳಕ್ಕಿಟ್ಟು ಕುಸಿದು ಕುಳಿತುಬಿಟ್ಟಳು. ಮುಂದೆ ನೆಡೆಯುತ್ತಿದ್ದ ಮಾಲಿವೋಯಿರೆ ಹೆಂಗಸು, ತನ್ನ ಮಗಳ ಹೆಜ್ಜೆ ಸಪ್ಪಳ ನಿಂತುದ್ದನ್ನು ಗಮನಿಸಿ, ಹಿಂದಿರುಗಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.
"ಏನಾಯ್ತು ನಿಂಗೆ?" ಕೇಳಿದಳು ಅಮ್ಮ.
ಕೆಂಚು ಕೂದಲಿನ, ಕೆಂಪುಕೆನ್ನೆಯ ಮಗಳು ಸೆಲೆಸ್ಟಿ ಒದೆ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಸಣ್ಣಗೆ ಅಳುತ್ತಾ ಕೂತಿದ್ದಳು. ಉರಿಬಿಸಿಲಿನಲ್ಲಿ ಬಸವಳಿದ ಅವಳ ಮುಖ ಬೆಂಕಿ ಕೆಂಡದಂತಾಗಿತ್ತು.
"ನನ್ನ ಕೈಯಲ್ಲಿ ಈ ಪಾತ್ರೆ ಹೊತ್ತುಕೊಂಡು ಬರಲಿಕ್ಕಾಗಲ್ಲ"
ಅಮ್ಮ ತನ್ನ ಮಗಳನ್ನು ಸಂಶಯದಿಂದ ನೋಡಿದಳು.
"ಏನು ತೊಂದರೆ ನಿಂಗೆ ಹೇಳು", ಕೇಳಿದಳು.
"ಇದು ಬಹಳಾ ಭಾರ, ನನ್ನ ಕೈಲಾಗೋಲ್ಲ, ಸುಸ್ತಾಗ್ತಿದೆ". ಭಾರದ ಎರಡು ಹಾಲಿನ ಪಾತ್ರೆಗಳನ್ನ ನೆಲದ ಮೇಲೆ ಇಟ್ಟು ಅದರ ಮಧ್ಯದಲ್ಲಿ ಕುಳಿತು ತನ್ನ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಸೆಲೆಸ್ಟಿ ಉತ್ತರಿಸಿದಳು. ದನಿ ಉಡುಗಿಹೋಗಿತ್ತು. ದುಃಖ ತುಂಬಿತ್ತು.
"ಯಾಕೆ ಏನಾಗಿದೆ ನಿಂಗೆ ಹೇಳು" ಮತ್ತೊಮ್ಮೆ ಕೇಳಿದಳು ಅಮ್ಮ.
ಮಗಳು ಸಣ್ಣಗೆ ಮುಲುಗಿದಳು. "ನಾನೀಗ ಬಸುರಿ, ನನ್ನ ಹೊಟ್ಟೆಯಲ್ಲಿ ಮಗು ಇದೆ". ಇಷ್ಟು ಹೇಳಿ ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದಳು.
ಇದ್ದಕ್ಕಿದ್ದ ಹಾಗೇ ಇದನ್ನು ಕೇಳಿದ ಅಮ್ಮ ಸ್ವಲ್ಪ ಹೊತ್ತು ಏನು ಹೇಳಬೇಕೆಂದು ತೋಚದೇ ದಂಗಾಗಿ ನಿಂತಳು. ಸುಧಾರಿಸಿಕೊಂಡು ತನ್ನ ಕೈಲಿದ್ದ ಭಾರವನ್ನು ಕೆಳಗಿಟ್ಟು "ನಿನ್ನ ಹೊಟ್ಟೆಯಲ್ಲಿ ಮಗು ಇದೆಯಾ? ಇದು ಹೇಗಾಯ್ತು? ಹಾಳಾದವಳೇ" ಎಂದು ಬೈಯತೊಡಗಿದಳು.
ಮಾಲಿವೋಯಿರೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ, ನಿಯತ್ತಿನ ವ್ಯಾಪಾರದ, ಸಾಕಷ್ಟು ಸಂಪತ್ತುಳ್ಳ ರೈತರಾಗಿದ್ದರು. ಅವರಿಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು.
ಬಿಳುಚಿದ ಮುಖದೊಡನೆ ತಾಯಿ ಅಳುತ್ತಿದ್ದ ಮಗಳನ್ನು ನೋಡಿದಳು. "ಇದು ಹೇಗಾಯ್ತು ಹೇಳು, ದರಿದ್ರ ರಂಡೆ" ಎಂದು ತಾನೂ ಅಳುತ್ತಾ ಕೂಗಲು ಶುರುಮಾಡಿದಳು.
ಅಮ್ಮನ ಈ ಅವತಾರ ನೋಡಿದ ಮಗಳು ಸೆಲೆಸ್ಟಿ ಹೆದರಿದಳು.
"ಯಾರದು ಹೇಳು, ಹಾದರಗಿತ್ತಿ" ಮತ್ತೆ ಕೂಗಿದಳು.
ಅಳುತ್ತಾ ಕೂತಿದ್ದ ಸೆಲೆಸ್ಟಿ ಏನಾದರಾಗಲಿ ಹೇಳಲೇಬೇಕೆಂದುಕೊಂಡು ಒಂದು ಕ್ಷಣಕ್ಕೆ ಧೈರ್ಯ ತಂದುಕೊಂಡು ನಡುಗುವ ದನಿಯಲ್ಲಿ ಹೇಳಿದಳು.
"ಇದು ಪೋಲೈಟ್ ನಿಂದ ಆಗಿದ್ದು"
ಮಗಳ ಮಾತು ಕೇಳಿ ತಾಯಿಗೆ ಸಿಟ್ಟು ತಾರಕಕ್ಕೇರಿತು. ಮಗಳ ಬಳಿ ನುಗ್ಗಿದವಳೇ ಅವಳನ್ನು ಹೊಡೆಯತೊಡಗಿದಳು. ಕಾಲುಗಳ ನಡುವೆ ಮುಖ ಮುಚ್ಚಿಕೊಂಡು ಕೂತ ಸೆಲೆಸ್ಟಿಗೆ ತಲೆ ಮೇಲೆ, ಬೆನ್ನಿನ ಮೇಲೆ ಎಲ್ಲಾ ಕಡೆ ತಾಯಿಯ ಮುಷ್ಟಿಯ ಗುದ್ದುಗಳು ಬಿದ್ದವು.
ಏನೋ ಗಲಾಟೆಯಾಗುತ್ತಿದ್ದುದನ್ನು ಕೇಳಿದ ಹಸುಗಳು ಮೇಯುವುದನ್ನು ನಿಲ್ಲಿಸಿ ಒಮ್ಮೆ ತಲೆ ಎತ್ತಿ ಈ ಕಡೆಗೆ ನೋಡಿದವು. ಇವರಿಗೆ ಹತ್ತಿರವಿದ್ದ ಹಸು ತನ್ನ ಕುತ್ತಿಗೆ ಉದ್ದ ಮಾಡಿ ಒಮ್ಮೆ ಹೂಂಕರಿಸಿತು.
ಸುಸ್ತಾಗುವವರೆಗೂ ಹೊಡೆದು ತಾಯಿ ಕುಸಿದು ಕೂತಳು. ಸ್ವಲ್ಪ ಹೊತ್ತಿಗೆ ಕೋಪವು ಇಳಿದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡತೊಡಗಿದಳು.
"ಇದು ಹೇಗೆ ಸಾಧ್ಯ? ನಿನಗೆ ಬುದ್ದಿ ಇಲ್ಲ. ಆ ಪೋಲೈಟ್ ನಿನಗೆ ಏನೋ ಮೋಸ ಮಾಡಿದ್ದಾನೆ, ದರಿದ್ರದವನು, ಅಯ್ಯೋ ದೇವರೇ" ಎಂದಳು.
ಹೊಡೆತ ತಿಂದು ನೆಲದ ಮೇಲೆ ಬಿದ್ದುಕೊಂಡಿದ್ದ ಸೆಲೆಸ್ಟಿ ಹಾಗೆಯೇ ಸಣ್ಣಗೆ ಹೇಳಿದಳು, "ನಾನು ಅವನಿಗೆ ದುಡ್ಡು ಕೊಡುತ್ತಿರಲಿಲ್ಲ" .
ಅಮ್ಮನಿಗೆ ಈಗ ಅರ್ಥವಾಯಿತು.
****
ಪ್ರತಿವಾರದಲ್ಲಿ ಎರಡು ದಿನ, ಅಂದರೆ, ಬುಧವಾರ ಮತ್ತು ಶನಿವಾರ, ಅವರು ಬೆಳೆದ ಕೆಲವು ಬೆಳೆಗಳನ್ನು, ಕೋಳಿಗಳನ್ನು, ಮೊಟ್ಟೆಗಳನ್ನು ತೆಗೆದುಕೊಂಡು ಮಾರಲು ಪಟ್ಟಣಕ್ಕೆ ಸೆಲೆಸ್ಟಿ ಹೋಗುತ್ತಿದ್ದಳು. ಅದಕ್ಕಾಗಿ ಅವಳು ಪೋಲೈಟ್ ನ ಕುದುರೆಗಾಡಿಯನ್ನೇ ಆಶ್ರಯಿಸಿದ್ದಳು. ಅದರಲ್ಲೇ ಅವಳು ಹೋಗಿಬರಬೇಕಾಗಿತ್ತು. ಬೆಳಗ್ಗೆ ಮುಂಜಾನೆಯೇ ಎರಡು ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೊರಡುತ್ತಿದ್ದಳು. ಒಂದರಲ್ಲಿ ಡೈರಿ ಉತ್ಪನ್ನಗಳು, ಮತ್ತೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ದೊಡ್ಡರಸ್ತೆವರೆಗೆ ನೆಡೆದುಕೊಂಡು ಹೋಗಿ ಅಲ್ಲಿ ಪಟ್ಟಣಕ್ಕೆ ಹೋಗಲು ಬಂಡಿಗಾಗಿ ಕಾಯುತ್ತಿದ್ದಳು. ರಸ್ತೆ ಪಕ್ಕದಲ್ಲೇ ತನ್ನ ಸಾಮಾನುಗಳನ್ನು ರಾಶಿಹಾಕಿಕೊಂಡು ಕುಲಿತಿರುತ್ತಿದ್ದಳು. ಹಳದಿ ಬಣ್ಣದ ಗಾಡಿ ಕುಂಟುತ್ತಾ ಬರುತ್ತಿತ್ತು. ಆ ಗಾಡಿಯನ್ನು ಓಡಿಸುವ ಮನುಷ್ಯ ಪೋಲೈಟ್ ಇನ್ನೂ ಯುವಕ. ಕೊಳಕು ಬಟ್ಟೆಗಳನ್ನು ಹಾಕಿಕೊಂಡು, ಬಿಸಿಲಿನಲ್ಲಿ ಸೀದುಹೋದಂತೆ ಕಾಣುತ್ತಿದ್ದ. ಇವಳನ್ನು ಕಾಣುತ್ತಲೇ ಅಷ್ಟು ದೂರದಿಂದಲೇ ತನ್ನ ಚಾಟಿ ಬೀಸುತ್ತಾ ಕೂಗುತ್ತಿದ್ದ, "ಗುಡ್ ಮಾರ್ನಿಂಗ್ ಮೇಡಂ ಸೆಲೆಸ್ಟಿ, ಚೆನ್ನಾಗಿದ್ದೀರಾ"...? ತಕ್ಷಣವೇ ಸೆಲೆಸ್ಟಿ ಎದ್ದು ತನ್ನ ಸಾಮಾನುಗಳನ್ನೆಲ್ಲಾ ಒಂದೊಂದಾಗಿ ಎತ್ತಿ ಕೊಡುತ್ತಿದ್ದಳು. ಪೋಲೈಟ್ ಅದನ್ನೆಲ್ಲಾ ಬಂಡಿಯಲ್ಲಿ ಹಾಕಿಕೊಂಡು ಅನಂತರ ಕೆಳಗಿಳಿದು ಅವಳನ್ನು ಬಂಡಿ ಹತ್ತಿಸುತ್ತಿದ್ದ. ಹತ್ತಿಸುವಾಗ ಅವಳ ನಯವಾದ ಕಾಲುಗಳು ದರ್ಶನವಾಗುತ್ತಿದ್ದಂತೇ ತಮಾಷೆ ಮಾಡುತ್ತಿದ್ದ, "ಕಾಲುಗಳು ಮೊದಲಿಗಿಂತ ಸಣ್ಣವೇನೂ ಆಗಿಲ್ಲ".
ಅದನ್ನು ಕೇಳಿ ಅವಳು ಅವಳು ನಗುತ್ತಿದ್ದಳು.
"ಗಟ್ಟಿಯಾಗಿ ಕುಳಿತುಕೋ ಹುಡುಗಿ" ಎಂದು ಹೇಳಿ ಕುದುರೆಗಳನ್ನು ಹೊರಡಿಸುತ್ತಿದ್ದ. ಸೆಲೆಸ್ಟಿ ತನ್ನ ಪರ್ಸಿನಿಂದ ಐದು ಪೆನ್ನಿ* ನಾಣ್ಯಗಳನ್ನು ತೆಗೆಯುತ್ತಿದ್ದಳು.. ಮೂರು ಪೆನ್ನಿ ಅವಳ ಪ್ರಯಾಣದ ದರ ಮತ್ತು ಎರಡು ಪೆನ್ನಿ ಸಾಮಾನುಗಳಿಗಾಗಿ. ಅದನ್ನು ಪೋಲೈಟ್ ಗೆ ಕೊಡುತ್ತಿದ್ದಳು. . ಅದನ್ನು ತೆಗೆದುಕೊಂಡು ಅವನು ತುಂಟತನದಿಂದ ಕಣ್ಣುಹೊಡೆದು ಕೇಳುತ್ತಿದ್ದ, "ಇವತ್ತು ಏನಾದ್ರೂ ಆಟ ಆಡೋಣವೇ?"
ಅಷ್ಟು ದುಡ್ಡುಕೊಟ್ಟು ಪ್ರಯಾಣ ಮಾಡುವುದು ಸೆಲೆಸ್ಟಿಗೆ ಜಾಸ್ತಿ ಎನಿಸುತ್ತಿತ್ತು. ಎರಡು ಮೈಲು ಪ್ರಯಾಣಕ್ಕೆ ಅರ್ಧ ಫ್ಯ್ರಾಂಕ್*ಗಳಷ್ಟು ಹಣವನ್ನು ಕೊಡಲು ದುಬಾರಿಯೆನಿಸುತ್ತಿತ್ತು .
"ನನ್ನಂತಾ ಒಳ್ಳೆಯ ಗಿರಾಕಿಯಿಂದ ನೀನು ಮೂರು ಪೆನ್ನಿಗಳಿಗಿಂತ ಜಾಸ್ತಿ ತೆಗೆದುಕೊಳ್ಳಬಾರದಪ್ಪಾ", ಒಂದು ದಿನ ದುಡ್ದು ಕೊಡುತ್ತಾ ಅವಳು ಕೇಳಿದಳು.
ಪೋಲೈಟ್ ನಗುತ್ತಾ ಹೇಳಿದ. "ಬರೀ ಮೂರು ಪೆನ್ನಿಗಳಾ? ನಿನ್ನ ಬೆಲೆ ಅದಕ್ಕಿಂತಾ ಜಾಸ್ತಿ ಸುಂದರಿ !"
ಅವಳು ಮತ್ತೆ ಹೇಳಿದಳು. "ನೀನು ನನ್ನಿಂದಲೇ ತಿಂಗಳಿಗೆ ಎರಡು ಫ್ಯ್ರಾಂಕ್ ಗಳಷ್ಟು ಸಂಪಾದಿಸುತ್ತೀಯ."
ಕುದುರೆಗಳ ಬೆನ್ನ ಮೇಲೆ ಚಾಟಿಯಾಡಿಸುತ್ತಾ ಆತ ಹೇಳಿದ, "ಒಂದು ಕೆಲಸ ಮಾಡೋಣ, ನಾನು ನಿನ್ನ ಸೇವೆ ಮಾಡುತ್ತೇನೆ, ನಾವು ನಿನ್ನ ದುಡ್ದಿನ ಬದಲಾಗಿ ಆಟ ಆಡೋಣ"
"ಆಟ? ಹಾಗಂದ್ರೆ ಏನು ?" ಅವಳು ಮುಗ್ಧವಾಗಿ ಕೇಳಿದಳು.
ಪೋಲೈಟ್ ಜೋರಾಗಿ ನಕ್ಕ.
ಆಟ ಅಂದ್ರೆ ಅದೊಂಥರಾ ಆಟ, ನಮ್ಮಿಬ್ಬರ ಆಟ, ಸಂಗೀತವಿಲ್ಲದೇ ಕುಣಿಯುವಂತದ್ದು, ಹುಡುಗ ಹುಡುಗಿ ಆಟ.
ಅವಳಿಗೆ ಅದು ಈಗ ಅರ್ಥವಾಗಿ ನಾಚಿಕೆಯಿಂದ ಮುಖ ಕೆಂಪಾಯಿತು. "ನಂಗೆ ಅಂತಹ ಆಟ ಎಲ್ಲಾ ಬೇಡ" ಅವಳು ಹೇಳಿದಳು.
ಪೋಲೈಟ್ ಮತ್ತದೇ ತುಂಟ ದನಿಯಲ್ಲಿ ಘೋಷಿಸಿದ, "ಒಂದಲ್ಲಾ ಒಂದು ದಿನ ಬಂದೇ ಬರ್ತೀಯ ಸುಂದರಿ, ಆಟ ಆಡೇ ಆಡ್ತೀವಿ" .
ಅದಾದ ಮೇಲೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಅವಳು ದುಡ್ಡು ಕೊಡಲು ಹೋದಾಗಲೆಲ್ಲಾ "ಇವತ್ತು ಆಟ ಆಡೋಣವೇ" ಎಂದು ಕೇಳುತ್ತಿದ್ದ. ಅವಳೂ ಕೂಡ ತಮಾಷೆಯಾಗಿ "ಇವತ್ತು ಬೇಡ ಪೋಲೈಟ್, ಇನ್ನೊಂದು ದಿನ ಆಡೋಣ" ಎನ್ನುತ್ತಿದ್ದಳು. ಸರಿ ಎಂದು ಅವನು ನಗುತ್ತಿದ್ದ.
ಸೆಲೆಸ್ಟಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಳು. ಈ ಎರಡು ವರ್ಷಗಳಲ್ಲಿ ಅವನು ಪೋಲೈಟನಿಗೆ ನಲ್ವತ್ತೆಂಟು ಫ್ಯ್ರಾಂಕ್ ಗಳನ್ನು ಕೊಟ್ಟಿದ್ದಳು. ಇನ್ನೂ ಎರಡು ವರ್ಷಗಳು ಹೀಗೇ ಹೋದರೆ ಸುಮಾರು ನೂರು ಫ್ಯ್ರಾಂಕ್ ಗಳನ್ನು ಅವನಿಗೆ ಕೊಟ್ಟಂತಾಗುತ್ತಿತ್ತು. ಅದು ದೊಡ್ಡ ಮೊತ್ತವಾಗಿತ್ತು.
ಒಂದು ದಿನ ಹೀಗೆ ಅವರಿಬ್ಬರೇ ಹೋಗುತ್ತಿದ್ದಾಗ ಆತ ಎಂದಿನಂತೆ ಮತ್ತೆ ಕೇಳಿದ , "ಇನ್ನೂ ನಾವು ಆಟ ಆಡೇ ಇಲ್ಲ"
"ಇವತ್ತು ಆಡೋಣ" ಅವಳು ಉತ್ತರಿಸಿದಳು. ಗಾಡಿಯ ಬಿಳಿ ಕುದುರೆ ಒಮ್ಮೆ ತನ್ನ ಎರಡೂ ಕಾಲುಗಳನ್ನು ಮೇಲೆತ್ತಿ ಕೆನೆಯಿತು. ಅವಳಿಗೆ ಒಮ್ಮೆ ತಾನಿದ್ದ ಸ್ಥಳವೇ ನಡುಗಿದಂತಾಯಿತು. "ಬಾ ಹುಡುಗೀ ಬಾ..." ಎಂದು ಪೋಲೈಟನ ದನಿ ಪ್ರತಿಧ್ವನಿಸಿತು. ಗಾಡಿಯ ಬೇರೆ ಯಾವ ಶಬ್ದವೂ ಕೇಳದಂತಾಯಿತು. ಸೆಲೆಸ್ಟಿಗೆ ಸ್ವಲ್ಪ ಕಾಲ ಮೈ ಭಾರವಾಗಿ ನಿಧಾನಕ್ಕೆ ಹಗುರಾಗುತ್ತಾ ಹೋಯಿತು.
ಅನಂತರ ಅವಳಿಗೆ ತಾನು ಬಸುರಿಯಾಗಿರುವುದು ಗೊತ್ತಾದಾಗ ಮೂರು ತಿಂಗಳಾಗಿತ್ತು.
****
ಇದೆಲ್ಲವನ್ನೂ ಅಳುತ್ತಾ ತನ್ನ ತಾಯಿಗೆ ಹೇಳಿದಳು.
ತಾಯಿ ಕೇಳಿದಳು, "ಎಷ್ಟು ಉಳಿತಾಯ ಮಾಡಿದೆ?"
"ನಾಲ್ಕು ತಿಂಗಳು, ಅಂದರೆ ಒಟ್ಟು ಎಂಟು ಫ್ಯ್ರಾಂಕ್" ಉತ್ತರಿಸಿದಳು ಸೆಲೆಸ್ಟಿ.
ಮತ್ತೆ ತಾಯಿಗೆ ಕೋಪ ನೆತ್ತಿಗೇರಿ ಮಗಳಿಗೆ ಸರಿಯಾಗಿ ಬಡಿದಳು.
"ಈ ವಿಷಯ ಅವನಿಗೆ ಹೇಳಿದ್ದೀಯಾ?"
"ಇಲ್ಲ ಹೇಳಿಲ್ಲ"
"ಯಾಕೆ ಹೇಳಿಲ್ಲ?"
"ಈ ವಿಷಯ ಗೊತ್ತಾದರೆ ಅವನು ಇನ್ಮುಂದೆ ಹಣ ಕೇಳಬಹುದು!"
ತಾಯಿ ಸ್ವಲ್ಪಹೊತ್ತು ಸುಮ್ಮನೇ ಯೋಚಿಸಿದಳು. ಒಂದು ನಿಟ್ಟುಸಿರಿಟ್ಟು ಹಾಲಿನ ಪಾತ್ರೆಗಳನ್ನು ಎತ್ತಿಕೊಂಡಳು.
"ಎದ್ದೇಳು, ಮನೆಗೆ ನೆಡಿ" ಎಂದು ಮಾತು ನಿಲ್ಲಿಸಿದವಳು ಮತ್ತೆ ಮುಂದುವರೆಸಿದಳು.
"ಅವನಿಗೆ ಈ ವಿಷಯ ಹೇಳಲು ಹೋಗಬೇಡ, ಆರೆಂಟು ತಿಂಗಳು ಅವನಿಗೇ ಈ ವಿಷಯ ಗೊತ್ತಾಗುವವರೆಗೂ ಹಣ ಕೊಡುವುದು ಬೇಡ"
ಸೆಲೆಸ್ಟಿ ನಿಧಾನಕ್ಕೆ ಎದ್ದು ನಿಂತಳು. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡಿದ್ದವು. ಭಾರವಾದ ಹೆಜ್ಜೆಯಿಡುತ್ತಾ ನೆಡೆಯತೊಡಗಿ ಗೊಣಗಿಕೊಂಡಳು.
"ಆಯ್ತು, ಖಂಡಿತ ನಾನು ಅವನಿಗೆ ಹೇಳೋಲ್ಲ".
=============================
(ಇಂಗ್ಲೀಷ್ ನಿಂದ ಅನುವಾದಿತ)
ಮೂಲ ಕತೆ: Confessing
ಲೇಖಕ: Guy de Maupassant
*ಫ್ರ್ಯಾಂಕ್ಸ್ (Francs)/ ಪೆನ್ನಿ (Penny) = ಹಳೆಯ ಫ್ರೆಂಚ್ ಕರೆನ್ಸಿಗಳು
*ಮಾಲಿವೋಯಿರೆ = ಫ್ರಾನ್ಸ್ ದೇಶದ ಒಂದು ಜನಜಾತಿ
ಬುಧವಾರ, ಜೂನ್ 30, 2010
ಮಳೆಗಾಲಕ್ಕೆ....
ಬ್ಲಾಗ್ ಒಣಗಿ ನಿಂತಿದೆ. ಮಳೆಗಾಲ ಶುರುವಾಗುತ್ತದೆ, ನೀರು ಹರಿಯುತ್ತದೆ ಎಂದು ಕಾಯುತ್ತಿದ್ದರೆ ಒಂದ್ನಾಲ್ಕು ದಿನ ಹನಿ ಉದುರಿಸಿ ಮಳೆ ನಾಪತ್ತೆಯಾಗಿದೆ. Only few people can feel the rain, others just get wet ಅಂತ ಉಪನಿಷತ್ತಿನಲ್ಲಿ ಒಂದು ಮಾತಿದೆ :) . ಅದು ಆಗಾಗ ಎಸ್ಸೆಮ್ಮೆಸ್ಸಿನಲ್ಲೂ ಹರಿದಾಡುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ feeling the rain ಯಾಕೋ ಕಷ್ಟ. ಇಲ್ಲೇನಿದ್ದರೂ feel ಅಲ್ಲ fear ಮಾತ್ರ. ಆಫೀಸಿನಲ್ಲಿ ಕೂತಾಗ ಹೊರಗೆ ಮಳೆ ಶುರುವಾದರೆ ಒಂದು ಬಿಸಿಬಿಸೀ ಕಾಫಿ ಹಿಡಿದುಕೊಂಡು ಕಿಟಕಿಯಿಂದ ಹೊರಗೆ ನೋಡುತ್ತಾ ಹಿತವಾಗುವ ಹೊತ್ತಿಗೆ ಆತಂಕವೂ ಶುರುವಾಗುತ್ತದೆ. ಯಾವ ರಸ್ತೆಯಲ್ಲಿ ನೀರು ತುಂಬಿಕೊಂಡಿದೆಯೋ, ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಿದೆಯೋ, ಮನೆಗೆ ಹೊರಡಬಹುದಾ, ಹೊರಟರೆ ಇವತ್ತಿಗೇ ತಲುಪಬಹುದಾ ಹೀಗೇ ಹಲವಾರು. ಮಳೆ ನಿಂತಮೇಲೆ ಮಿಜಿಮಿಜಿಗುಡುವ ರಸ್ತೆಗಳು, ಸಿಟಿಬಸ್ಸುಗಳು, ವಾಹನ ಸವಾರಿಯೆಂಬ ಸರ್ಕಸ್ಸು ನೆನೆಸಿಕೊಂಡರೆ ಮಳೆಯ feelಗಿಂತ fear ಜಾಸ್ತಿ. ಇರಲಿ.
ಈ ಮಳೆಯ ಬಗ್ಗೆ ಸಾಕಷ್ಟು ಬ್ಲಾಗುಗಳಲ್ಲಿ ಬರಹಗಳಲ್ಲಿ ನೀರು ಹರಿದಿದೆ. ಮತ್ತೆ ನಾನು ಹರಿಸುವುದಕ್ಕೆ ಹೋಗುವುದಿಲ್ಲ. ಮನೆಗೆ ಹೋಗದೇ ರಾಶಿ ದಿನಗಳಾಗಿವೆ. ಪ್ರತೀಸಲವೂ ಈ ಬಾರಿ ನಾಲ್ಕು ದಿನ ಪೂರ್ತಿ ವಿಶ್ರಾಂತಿ ತೆಗೆದುಕೊಂಡುಬಿಡೋಣ ಸುಖವಾಗಿ ಎಂದು ಹೋಗುವುದೇನೋ ಹೌದು. ಆದರೆ ಒಂದೆರಡು ದಿನ ಮಲಗಿ, ಎದ್ದು, ಟೀವಿ ರಿಮೋಟ್ ಹಿಡಿದು ಚಾನಲ್ಲುಗಳನ್ನು ಇಪ್ಪತ್ನಾಲ್ಕು ಸಲ ಬದಲಾಯಿಸಿ, ಅಕ್ಕ ಪಕ್ಕದವರನ್ನೆಲ್ಲಾ ಮಾತನಾಡಿಸಿ, ಊರು ತಿರುಗಿ ಆಗುತ್ತಿದ್ದಂತೆಯೇ ಮತ್ತೆ ಕಾಲು ಕೆರೆಯುತ್ತದೆ. ಎಲ್ಲಾದ್ರೂ ಹೋಗೋಣ ಅನ್ನುತ್ತೇನೆ. ಅಪ್ಪ ತಿರುಗಾಡಲು ಸದಾ ತಯಾರು. ಸ್ಥಳಗಳ ಪಟ್ಟಿ ಕೊಟ್ಟುಬಿಡುತ್ತಾರೆ. ಅಮ್ಮ ಮಾತ್ರ 'ಈ ಮಳೆಲ್ಲಿ ಎಲ್ಲೂ ತಿರ್ಗಲ್ ಹೋಗದ್ ಬೇಡ, ಸುಮ್ನೆ ಮನೆಲ್ ಇರಿ" ಅನ್ನುತ್ತಾಳೆ. ಕೇಳೋರ್ಯಾರು ?
ವಾಪಸ್ಸು ಬೆಂಗ್ಳೂರಿಗೆ ಬಂದ ಮೇಲೆ ಒಂದು ಮಾನ್ಸೂನ್ ಟ್ರೆಕ್ಕು, ಒಂದಿಷ್ಟು ತಿರುಗಾಟ. ಜೊತೆಗೆ ಎರಡು ದಿನ ಶೀತ, ಒಂದು ಸಣ್ಣ ಜ್ವರ optional. ಈ ಬಾರಿ ಮಳೆಗಾಲದಲ್ಲಿ ಗದ್ದೆ ನೆಟ್ಟಿ ಮಾಡುವ ವಾರದಲ್ಲಿ ಅಜ್ಜನ ಮನೆಗೂ ಹೋಗಬೇಕು. ಪ್ರಕೃತಿಯ ಮೇಲೆ ಪ್ರೀತಿ ಜಾಸ್ತಿಯಾಗುತ್ತಲೇ ಇದೆ. ಗಮ್ಯವೆಲ್ಲಿದೆಯೋ ಗೊತ್ತಿಲ್ಲ !
ಯಾವುದಕ್ಕೂ, ಬಾ ಮಳೆಯೇ ಬಾ....

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)