ಶನಿವಾರ, ಮಾರ್ಚ್ 5, 2016

ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ

ವಿಕಿಪೀಡಿಯ - ಇಂದಿನ ಆನ್ ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ,
ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ ಮುಕ್ತವಾಗಿ ಸಿಗುವ ಲೋಕವೊಂದನ್ನು ಕಲ್ಪಿಸಿಕೊಳ್ಳಿ” ಎಂಬ ಘೋಷವಾಕ್ಯದ ವಿಕಿಪೀಡಿಯ ಇಂದು ಹೆಮ್ಮರವಾಗಿ ಬೆಳೆದಿದೆ. ನಾನ್-ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ವಿಕಿಪೀಡಿಯ ಕಾರ್ಯನಿರ್ವಹಿಸುತ್ತಿದೆ. ಇದರ ವಿಶೇಷವೆಂದರೆ ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಸಮುದಾಯ ಕಾರ್ಯ. ಜನರ ಮತ್ತು ಸಂಸ್ಥೆಗಳ ದೇಣಿಗೆಗಳೇ ಇದರ ಆರ್ಥಿಕ ಮೂಲ. ಇದರಲ್ಲಿ ಮಾಹಿತಿ ತುಂಬಿಸುವಿಕೆ ಮತ್ತು ಮಾಹಿತಿ ಪಡೆದುಕೊಳ್ಳುವಿಕೆ ಪ್ರತಿಯೊಬ್ಬನಿಗೂ ಮುಕ್ತ. ಯಾರುಬೇಕಾದರೂ ಸಂಪಾದಕನಾಗಿ ನೊಂದಾಯಿಸಿಕೊಂಡು ಜಗತ್ತಿನ ಯಾವುದೇ ವಿಷಯದ ಬಗ್ಗೆ ಮಾಹಿತಿಪೂರ್ಣ ವಿಷಯಗಳನ್ನು ಹಾಕಬಹುದು. ಹೊಸ ಲೇಖನದ ಪುಟ ರಚಿಸಬಹುದು. ಇರುವ ಲೇಖನ ತಿದ್ದಬಹುದು. ಹೆಚ್ಚಿನ ಮಾಹಿತಿ ಸೇರಿಸಬಹುದು. ಬೇರೆ ಬೇರೆ ದೇಶ ಪ್ರದೇಶಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ಹಾಗಾಗಿ ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ಇಂತಹ ಒಂದು ಸ್ವತಂತ್ರ ಮತ್ತು ಮುಕ್ತ ಆನ್ ಲೈನ್ ವಿಶ್ವಕೋಶ ಇಂದು ಸುಮಾರು ಮುನ್ನೂರು ಭಾಷೆಗಳಲ್ಲಿ ಇದೆ. ಇಂಗ್ಲೀಷ್ ವಿಕಿಪೀಡಿಯಾ ಒಂದರಲ್ಲೇ ಸುಮಾರು ಐವತ್ತು ಲಕ್ಷ ಲೇಖನಗಳಿವೆ ಅಂದರೆ ಅದರ ಮಾಹಿತಿ ಅಗಾಧತೆಯನ್ನು ಊಹಿಸಿಕೊಳ್ಳಬಹುದು! ವಿಕಿಪೀಡಿಯ ಆರಂಭವಾಗಿದ್ದು 2001ರ ಜನವರಿ 15ರಂದು . ಈ ವರ್ಷ ಜನವರಿಯಲ್ಲಿ ಅದು ೧೫ನೇ ಹುಟ್ಟುಹಬ್ಬ ಆಚರಿಸಿಕೊಂಡಿತು. 

ವಿಕಿಪೀಡಿಯದಲ್ಲಿ ಭಾರತೀಯ ಭಾಷೆಗಳ ವಿಕಿಪೀಡಿಯಗಳೂ ಇದ್ದು ನಮ್ಮ ಕನ್ನಡ ವಿಕಿಪೀಡಿಯವೂ ಇರುವುದು ತಿಳಿದಿರುವ ವಿಚಾರ. (https://kn.wikipedia.org). 2003ರ ಜೂನ್‌ನಲ್ಲಿ ಕನ್ನಡ ವಿಕಿಪೀಡಿಯ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೂ ಅನೇಕ ಸ್ವಯಂಸೇವಕ, ಉತ್ಸಾಹಿಗಳ ಶ್ರಮದಿಂದ ಸಾವಿರಾರು ಲೇಖನಗಳೊಂದಿಗೆ ಮುನ್ನಡೆಯುತ್ತಿರುವ ಅಂತರಜಾಲದ ಕನ್ನಡ ವಿಶ್ವಕೋ 'ಕನ್ನಡ ವಿಕಿಪೀಡಿಯ'ಕ್ಕೆ ಈಗ ಹದಿಮೂರರ ಹರೆಯ. ಇದೇ ಸಂಭ್ರಮದಲ್ಲಿ ಹದಿಮೂರನೆಯ ವರ್ಷಾಚರಣೆ ಸಮಾರಂಭವು ಫೆಬ್ರವರಿ ತಿಂಗಳ ಹದಿನಾಲ್ಕನೆಯ ತಾರೀಖು ಭಾನುವಾರ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಆಚರಣೆಯು ನಡೆಯಿತು. ಈ ಆಚರಣೆಯ ಪೂರ್ವಭಾವಿಯಾಗಿ ಅನೇಕ ವಿಷಯಾಧಾರಿತ ಸಂಪಾದನೋತ್ಸವಗಳು (edit-a-thon), ಕಾರ್ಯಾಗಾರಗಳು ಕರ್ನಾಟಕದ ವಿವಿಧೆಡೆಯಲ್ಲಿ ನಡೆದಿದ್ದವು. ಸಾಗರದಲ್ಲಿ ಮೆಕ್ಯಾನಿಕಲ್ ಎಂಜಿಯರಿಂಗ್ ಲೇಖನಗಳು, ಬೆಂಗಳೂರಿನ ಟೆಕ್ಸಾಸ್ ಇನ್‍ಸ್ಟ್ರುಮೆಂಟ್ ನಲ್ಲಿ ವಿಜ್ಞಾನ/ತಂತ್ರಜ್ಞಾನ ಲೇಖನಗಳು, ಮೈಸೂರಿನ ಗಂಗೋತ್ರಿಯಲ್ಲಿ ಕನ್ನಡ ಸಾಹಿತ್ಯ, ಮಂಗಳೂರಿನಲ್ಲಿ  ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಬಗ್ಗೆ, ಬೆಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶೈಕ್ಷಣಿಕ ವಿಜ್ಞಾ ಲೇಖನಗಳ ಸಂಪಾದನೋತ್ಸವಗಳು ಯಶಸ್ವಿಯಾಗಿ ನಡೆದಿದ್ದವು. ಹದಿಮೂರನೇ ವಾರ್ಷಿಕೋತ್ಸವ ಆಚರಣೆಯು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಕನ್ನಡ ವಿಭಾಗದ ನೇತೃತ್ವದಲ್ಲಿ, ವಿಕಿಮೀಡಿಯಾ ಫೌಂಡೇಷನ್ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿಯ ಸಹಯೋಗದೊಂದಿಗೆ ನಡೆದು ಆ ದಿನ ಸಭಾ ಕಾರ್ಯಕ್ರಮ, ಸಂಪಾದನೋತ್ಸವ, ಪೋಟೋನಡಿಗೆ, ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದವು. ಈ ಕಾರ್ಯಕ್ರಮದ ವಿವರಗಳನ್ನು ಇಲ್ಲಿ ನೋಡಬಹುದು: ಕನ್ನಡ ವಿಕಿಪೀಡಿಯ ಹದಿಮೂರನೇ ವಾರ್ಷಿಕೋತ್ಸವ

ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವ ಈ ಸಮುದಾಯ ಚಟುವಟಿಕೆಗೆ ಇನ್ನೂ ಹೆಚ್ಚು ಹೆಚ್ಚು ಜನರು ತೊಡಗಿಕೊಂಡರೆ ಅದು ನಮ್ಮ ಸಮಾಜದ, ಭಾಷೆಯ ಪ್ರಗತಿಯೆಡೆಗೆ ದೊಡ್ಡ ದಾಪುಗಾಲು.

***

ಮಂಗಳವಾರ, ಫೆಬ್ರವರಿ 23, 2016

ಕಂಪ್ಯೂಟರ್ ಏಡೆಡ್ ಡಿಸೈನ್ - Computer Aided Design

ಯಾವುದೇ ವಸ್ತುವಿನ ಉತ್ಪಾದನೆಯ ಮೊದಲ ಹಂತವೆಂದರೆ ಅದರ ವಿನ್ಯಾಸ ಅಂದರೆ ಡಿಸೈನಿಂಗ್. ಅದು ಅಡುಗೆಮನೆಯ ಪರಿಕರಗಳಿಂದ ಹಿಡಿದು ವಿಮಾನದವರೆಗೆ ಯಾವುದೇ ಉತ್ಪನ್ನವಾಗಿದ್ದರೂ ಸಹ ವಿನ್ಯಾಸಹಂತದಲ್ಲಿ ಸರಿಯೆನಿಸಿಕೊಂಡನಂತರವೇ ಮುಂದುವರೆಯುವುದು. ಅದರಲ್ಲೂ ಹೊಸಬಗೆಯ ವಸ್ತುಗಳನ್ನು ತಯಾರಿಸಲು, ಈಗಿರುವ ವಸ್ತುಗಳನ್ನೂ ಇನ್ನೂ ಚೆನ್ನಾಗಿ ಮಾಡಲು ಈ ವಿನ್ಯಾಸ ಹಂತದಲ್ಲೇ ಸತತ ಪ್ರಯತ್ನಗಳು ನಡೆಯುತ್ತಿರುತ್ತವೆ. ಈಗೆರಡು ದಶಕಗಳ ಹಿಂದಿನ ಮತ್ತು ಈಗಿನ ಪರಿಸ್ಥಿತಿಯನ್ನೇ ನೋಡಿದರೆ ಆಗಿನ ಮಾರುಕಟ್ಟೆಯ ಮತ್ತು ಈಗಿನ ಮಾರುಕಟ್ಟೆಯಲ್ಲಿ ಬದಲಾದ ವಿನ್ಯಾಸಗಳು ಮತ್ತು ಭರಪೂರ ಆಯ್ಕೆಗಳು ಕಾಣಸಿಗುತ್ತವೆ. ಹಾಗಾದರೆ ಈ ವಿನ್ಯಾಸ ಹಂತದ ಈ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣ ಏನಿರಬಹುದು ಎಂದು ತಿಳಿಯಲು ಹೋದರೆ ಅಲ್ಲಿಯೂ ಕೂಡ ಗಣಕಗಳು ಅಂದರೆ ಕಂಪ್ಯೂಟರ್ ಗಳ ಕೈವಾಡ ಕಾಣುತ್ತದೆ.  ಹಿಂದಿನ ಕಾಲದಲ್ಲಿ ವಿನ್ಯಾಸದ ಪ್ರಕ್ರಿಯೆಗಳು ಬಹುತೇಕ ಪೇಪರ್ ಮತ್ತು ಪೆನ್ಸಿಲ್ಲಿನ ಸಹಾಯದಿಂದ ನಡೆಯುತ್ತಿದ್ದವು. ಒಮ್ಮೆ ಈ ಕ್ಷೇತ್ರಕ್ಕೆ  ಕಂಪ್ಯೂಟರ್ ಅನ್ನುವುದು ಬಂದಮೇಲೆ ವಿನ್ಯಾಸದ ಕೆಲಸಗಳಲ್ಲಿ ಕ್ರಾಂತಿ ನಡೆದುಹೋಯಿತು. ಅದಕ್ಕೆ ಕಾರಣವಾದದ್ದು ಕಂಪ್ಯೂಟರ್ ಏಡೆಡ್ ಡಿಸೈನ್ ಅಂದರೆ 'ಗಣಕ ನೆರವಿನ ವಿನ್ಯಾಸ' ಎನ್ನುವ ತಂತ್ರಜ್ಞಾನ. ಇದನ್ನು ಸಂಕ್ಷಿಪ್ತವಾಗಿ CAD (ಕ್ಯಾಡ್) ಎನ್ನಲಾಗುತ್ತದೆ.

ಹೆಸರೇ ಸೂಚಿಸುವಂತೆ ಇದು ಗಣಕದ ಸಹಾಯದಿಂದ ಅಥವಾ ಗಣಕದಲ್ಲಿಯೇ ಮಾಡುವಂತಹ ವಿನ್ಯಾಸ. ಯಾವುದೇ ಉತ್ಪನ್ನವನ್ನು ತಯಾರಿಕೆಗೂ ಮುನ್ನ ಕಂಪ್ಯೂಟರ್ ನಲ್ಲಿ ಅದರ ಮಾದರಿಗಳನ್ನು ಮಾಡಿಕೊಳ್ಳುವುದು, ಪರೀಕ್ಷಿಸುವುದು, ತಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡುವುದು ಈ CADನಿಂದ ಸಾಧ್ಯವಾಗಿದೆ. ಇದಕ್ಕಾಗಿಯೇ ಹಲವಾರು ತಂತ್ರಾಂಶಗಳು ಇದ್ದು ಅವುಗಳಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಉತ್ಪಾದನಾ ಕ್ಷೇತ್ರಕ್ಕೆ ತಕ್ಕುದಾದವುಗಳನ್ನು ಆಯ್ಕೆ ಮಾಡಿಕೊಂಡು ಬಳಸಲಾಗುತ್ತದೆ. ವಿನ್ಯಾಸಕಾರರ ಸೃಜನಶೀಲತೆಗೆ ಸಹಾಯಕಾರಿಯಾಗಿ ಈ ತಂತ್ರಜ್ಞಾನವು ಇತ್ತೀಚಿನ ದಶಕಗಳಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಮೂರು ಆಯಾಮ ಮತ್ತು ಎರಡು ಆಯಾಮಗಳಲ್ಲಿ ಮಾದರಿಗಳನ್ನು ಮಾಡಬಹುದು. ಅದು ಕಟ್ಟಡದ ನಕ್ಷೆ ಇರಬಹುದು, ವಿಮಾನದ ಒಳಾಂಗಣ ವಿನ್ಯಾಸ ಇರಬಹುದು, ವೈದ್ಯಕೀಯ ಉಪಕರಣಗಳ ಮಾದರಿ ಇರಬಹುದು, ವಾಹನಗಳ ಬಿಡಿಭಾಗಳಿರಬಹುದು, ಆಭರಣ ಪೀಠೋಪಕರಣಗಳೇ ಇರಬಹುದುಎಲ್ಲವನ್ನೂ ಕೂಡ ನಿರ್ದಿಷ್ಟ ತಂತ್ರಾಂಶಗಳ ಸಹಾಯದಿಂದ ಮಾದರಿಗಳನ್ನು ಮಾಡಿಕೊಳ್ಳಬಹುದಾಗಿದೆ.  ವಸ್ತುಗಳ ವಿನ್ಯಾಸದಿಂದ ಹಿಡಿದು ಅವುಗಳ ಜೋಡಣೆ, ಕಾರ್ಯನಿರ್ವಹಣೆವರೆಗಿನ ಹಂತಗಳನ್ನು ಗಣಕದಲ್ಲಿಯೇ ಪ್ರಯೋಗಿಸಿ ನೋಡಿ ತಿಳಿದುಕೊಳ್ಳಬಹುದು, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬಹುದು.

CAD ತಂತ್ರಜ್ಞಾನದಲ್ಲಿ ಮಾಡಿದ ಒಂದು ಸರಳ ಮಾಡೆಲ್
ಈ ಕಂಪ್ಯೂಟರ್ ಏಡೆಡ್ ಡಿಸೈನ್  ೧೯೫೦ರ ದಶಕದಲ್ಲಿ ಯು.ಎಸ್.ಎ. ದೇಶದ ವಾಯುಸೇನೆಯ ವಿಭಾಗದಲ್ಲಿ ಮೂಲಭೂತವಾಗಿ ಆವಿಷ್ಕಾರಗೊಂಡು ಅನಂತರ ಎಂ.ಐ.ಟಿ.ಯ ಲಿಂಕನ್ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿಗೊಂಡಿತು. ೧೯೬೧ರಲ್ಲಿ ಇವಾನ್ ಸುದರ್ಲ್ಯಾಂಡ್ ಎನ್ನುವವರೊಬ್ಬರು ಮೊದಲಬಾರಿಗೆ ಗಣಕ ಆಧಾರಿತ ಸ್ಕೇಚ್ ಪ್ಯಾಡ್ ಒಂದನ್ನು ನಿರ್ಮಾಣ ಮಾಡಿದರು. ಇದು ಸಾಂಪ್ರದಾಯಿಕ ಪೇಪರ್ ಪೆನ್ಸಿಲ್ ಮೆತಡ್ ಬದಲಾಗಿ ಬಳಸುವಂತಹ ತಂತ್ರಜ್ಞಾನವಾಗಿದ್ದು ಮೊತ್ತಮೊದಲ CAD ತಂತ್ರಜ್ಞಾನದ ಸಿಸ್ಟಮ್ ಗೆ ನಾಂದಿಯಾಯಿತು. ಇದರ ನಂತರ ಈ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳು ಪ್ರಾರಂಭವಾದವು.  ಮೊದಲು ಎರಡು ಆಯಾಮದ ಸಾಧ್ಯತೆಗಳು ಮಾತ್ರ ಇದ್ದ ಇದರಲ್ಲಿ ಅನಂತರ ಮೂರು ಆಯಾಮದ ಮಾದರಿಗಳ ರಚನೆ ಅಭಿವೃದ್ಧಿಗೊಂಡಿತು. ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಗಣಕ ಕ್ಷೇತ್ರದಲ್ಲಾದ ಕ್ರಾಂತಿಯಿಂದ ಉತ್ತಮ ಸಾಮರ್ಥ್ಯದ ಗಣಕಗಳು ಬರತೊಡಗಿ CAD ತಂತ್ರಜ್ಞಾನವೂ ಕೂಡ ಕ್ರಾಂತಿಕಾರಕ ಬದಲಾವಣೆಗಳನ್ನು ಕಂಡಿತು. ಮೊದಮೊದಲು ಕೇವಲ ಮೂಲಭೂತ ವಿನ್ಯಾಸಗಳನ್ನಷ್ಟೇ ಮಾಡಲು ಸಾಧ್ಯವಾಗಿದ್ದ ಇದರಲ್ಲಿ ಒಂದು ಉತ್ಪನ್ನವು ತಯಾರಾದ ನಂತರ ಹೇಗಿರಬೇಕು ಹೇಗಿರುತ್ತದೆ, ಯಾವ ವಸ್ತುವಿನಿಂದ ಮಾಡಬಹುದು, ಇದರ ಹೊರಮೈ ವಿನ್ಯಾಸ, ಬಣ್ಣ, ನೋಟ ಎಲ್ಲವನ್ನೂ ಸಹ ಅನೇಕಾನೇಕ ಸಾಧ್ಯತೆಗಳಲ್ಲಿ ತೋರಿಸುವ ಅತ್ಯಾಧುನಿಕ ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಾ ಹೋಯಿತು. ಇಂಜಿನಿಯರಿಂಗ್ ಕ್ಷೇತ್ರಕ್ಕೆ ಹೆಚ್ಚು ಸೀಮಿತವಾಗಿದ್ದ ಇದು ಎಲ್ಲಾ ಕ್ಷೇತ್ರಗಳಿಗೂ ತಲುಪಿತು.


ಕಾರ್ಯಕ್ಷಮತೆ, ಸಯಯದ ಉಳಿತಾಯ, ಮನಸ್ಸಿನ ಕಲ್ಪನೆಗಳನ್ನು ಸಮರ್ಥವಾಗಿ ಸಾಕಾರಗೊಳಿಸಬಲ್ಲ ಸಾಧ್ಯತೆಗಳಿಂದಾಗಿ ಇದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯತೆಯ ಸಾಧನವಾಗಿದೆ. CAD ತಂತ್ರಜ್ಞಾನವಿಲ್ಲದ ಇಂಡಸ್ಟ್ರಿಗಳೇ ಇಲ್ಲ ಎನ್ನುವ ಮಟ್ಟಿಗೆ ಬಳಕೆಯಾಗುತ್ತಿದೆ.

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹ ಕಾರ್ಯಾಗಾರ''ಕ್ಕಾಗಿ ಬರೆದ ಪರಿಚಯಾತ್ಮಕ ಲೇಖನ

ಸೋಮವಾರ, ಜನವರಿ 18, 2016

ಲಂಕಾವಿ ಲಾಲಿತ್ಯ - ಮಲೇಶಿಯಾದ ಪುಟ್ಟ ದ್ವೀಪಕ್ಕೊಂದು ಭೇಟಿ



ಕಿಟಕಿಯಿಂದ ಕಾಣುತ್ತಿದ್ದ ನೀಲಿಸಮುದ್ರ, ಮರಳ ತೀರಗಳು, ದಟ್ಟಕಾಡು, ಗುಡ್ಡಬೆಟ್ಟಗಳು ಹತ್ತಿರಹತ್ತಿರವಾಗುತ್ತಾ ನಮ್ಮ ವಿಮಾನ ಪುಟ್ಟ ನಿಲ್ದಾಣವೊಂದರಲ್ಲಿ ಇಳಿಯಿತು. ಸಿಂಗಾಪುರದಿಂದ ಹೊರಟ ನಾವು ಒಂದೂವರೆ ತಾಸಿನ ಪ್ರಯಾಣದ ನಂತರ ಬಂದಿಳಿದದ್ದು ಲಂಕಾವಿ ಎಂಬ ದ್ವೀಪಕ್ಕೆ. ಅಲ್ಲಿಂದ ಟ್ಯಾಕ್ಸಿಯಲ್ಲಿ ಹೊರಟೆವು. ದಾರಿಯಲ್ಲಿ ಬರುವಾಗ ಪಕ್ಕಾ ನಮ್ಮ ಮಲೆನಾಡಿನ ವಾತಾವರಣವೇ ಅಲ್ಲಿತ್ತು. ಎಲ್ಲೆಲ್ಲೂ ದಟ್ಟ ಹಸಿರು, ಅಲ್ಲಲ್ಲಿ ತೆಂಗಿನಮರಗಳು, ಪುಟ್ಟಹಳ್ಳಿಗಳು, ದೂರದೂರದಲ್ಲಿ ಕಾಣುವ ಹೆಂಚಿನ ಮನೆಗಳು, ಭತ್ತದಗದ್ದೆಗಳು, ಹಸಿರು ಬಯಲು, ಸಮುದ್ರದ ಕಡೆಯಿಂದ ಬೀಸುತ್ತಿದ್ದ ಗಾಳಿ ಆಹ್ಲಾದಕರ ವಾತಾವರಣ ನಿರ್ಮಿಸಿದ್ದವು. ಇಂತಹ ಪರಿಸರವನ್ನು ಸವಿಯುತ್ತಾ ಚಂದದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಂತೆ ಆ ಸುಂದರ ಪ್ರಕೃತಿಯಲ್ಲಿ ಮನಸ್ಸು ಕಳೆದುಹೋಗಿತ್ತು.

ಮಲೇಶಿಯಾದ ಮುಖ್ಯಭೂಮಿಯ ಪಶ್ಚಿಮತೀರದಲ್ಲಿರುವ ಲಂಕಾವಿ ಸುಮಾರು ೪೮೦ ಚದರ ಕಿಮೀ ವಿಸ್ತೀರ್ಣದ ಒಂದು ದ್ವೀಪ. ಹಲವು ಆಕರ್ಷಣೆಗಳ ಪ್ರವಾಸಿ ತಾಣ. ಜನಸಂಖ್ಯೆ ಒಂದುಲಕ್ಷ. ಲಂಕಾವಿ ಎಂದರೆ ಮಲಯ ಭಾಷೆಯಲ್ಲಿ ಕೆಂಪುಕಂದು ಹದ್ದು ಎಂದು ಅರ್ಥವಂತೆ. ಈ ದ್ವೀಪದ ಆಸುಪಾಸಿನಲ್ಲಿ ಇನ್ನೂ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಲಂಕಾವಿ ದ್ವೀಪದ ಬಹುತೇಕ ಭಾಗ ಕಾಡಿನಿಂದ ಆವೃತವಾಗಿದೆ. ಚೆನಾಂಗ್ ಮತ್ತು ಕುಹಾ ಪಟ್ಟಣ ಇವೆರಡು ಜನವಸತಿ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರದೇಶಗಳು. ಚೆನಾಂಗ್ ಪ್ರದೇಶದಲ್ಲಿದ್ದ ನಮ್ಮ ಹೊಟೆಲನ್ನು ತಲುಪಿ ದಣಿವಾರಿಸಿಕೊಂಡೆವು. ಇದು ಸಮುದ್ರ ತೀರದ ಪಕ್ಕದಲ್ಲೇ ಇರುವ ಒಂದು ಸುಂದರ ಪ್ರದೇಶ. ರಸ್ತೆಯುದ್ದಕ್ಕೂ ಸೀಫುಡ್ ಹೋಟೆಲ್ಲುಗಳು, ಬಟ್ಟೆ ಅಂಗಡಿಗಳು, ಪ್ರವಾಸಿ ಏಜೆನ್ಸಿಗಳು, ಕರೆನ್ಸಿ ವಿನಿಮಯ ಕೇಂದ್ರಗಳಿವೆ. ಚೆನಾಂಗ್ ಬೀಚ್ ಎಂಬ ಬಿಳಿಮರಳಿನ ತೀರ ಇಲ್ಲಿನ ಮುಖ್ಯ ಆಕರ್ಷಣೆ. ಅನೇಕ ರೀತಿಯ ಜಲಕ್ರೀಡೆಗಳು, ಪ್ಯಾರಾಸೇಲಿಂಗ್ ಮುಂತಾದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾಯಂಕಾಲ ಈ ಬೀಚಿನಲ್ಲಿ ಕಳೆದೆವು. ಸೀಫುಡ್ ಪ್ರಿಯರಿಗೇನೋ ಈ ದ್ವೀಪ ಸ್ವರ್ಗ. ಆದರೆ ನಾವು ಸಸ್ಯಾಹಾರ ಹುಡುಕಬೇಕಿತ್ತು. ಅಲ್ಲಿ ವಿಚಾರಿಸಿದಾಗ ಅಲ್ಲಿ ಮೂರ್ನಾಲ್ಕು ಇಂಡಿಯನ್ ಹೊಟೆಲ್ ಗಳಿರುವುದು ತಿಳಿಯಿತು. ಒಂದು ಇಂಡಿಯನ್ ಹೊಟೆಲ್ ಹೊಕ್ಕು ರಾತ್ರಿ ಊಟ ಮುಗಿಸಿದೆವು.

Sky-Bridge
ಲಂಕಾವಿ ಒಂದು ಡ್ಯೂಟಿ ಫ್ರೀ ದ್ವೀಪ. ಅಂದರೆ ಇಲ್ಲಿ ಕೊಳ್ಳುವ ವಸ್ತುಗಳಿಗೆ ತೆರಿಗೆ ಇಲ್ಲ. ಶಾಪಿಂಗ್ ಪ್ರಿಯರಿಗೆ ಇಲ್ಲಿ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ಮಾಲ್ ಗಳು ಇವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ಹಿಡಿದು ಎಲ್ಲಾ ವಸ್ತುಗಳೂ ಸ್ವಲ್ಪ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಲಂಕಾವಿ ದ್ವೀಪದಲ್ಲಿ ಸಾರ್ವಜನಿಕ ಸಾರಿಗೆ ಇಲ್ಲ. ಆದರೆ ದುಬಾರಿಯಲ್ಲದ ದರದಲ್ಲಿ ದಿನದ ಬಾಡಿಗೆ ಲೆಕ್ಕದಲ್ಲಿ ಮೋಟಾರ್ ಸೈಕಲ್ಲುಗಳು, ಕಾರುಗಳು ದೊರೆಯುತ್ತವೆ. ನಿಗದಿತ ದರದ ಟ್ಯಾಕ್ಸಿಗಳೂ ಲಭ್ಯ. ಮರುದಿನ ಓರಿಯಂಟಲ್ ವಿಲೇಜ್ ಎಂಬ ಪ್ರದೇಶಕ್ಕೆ ಹೋದೆವು. ಅದು ಪ್ರಸಿದ್ಧ ಕೇಬಲ್ ಕಾರ್ ಮತ್ತು ಸ್ಕೈ ಬ್ರಿಡ್ಜ್ ಇರುವ ಜಾಗ. ಸಾವಿರಾರು ಅಡಿಗಳ ಎತ್ತರದಲ್ಲಿ ಚಲಿಸುವ ಕೇಬಲ್ ಕಾರ್ ಗಳು ಬೆಟ್ಟದಿಂದ ಬೆಟ್ಟಕ್ಕೆ ನಮ್ಮನ್ನು ಎತ್ತರೆತ್ತರಕ್ಕೆ ಕರೆದೊಯ್ಯುತ್ತವೆ. ಈ ಸ್ಕೈಕ್ಯಾಬ್ ಗಳಿಂದ ಸಮುದ್ರ ತೀರಗಳ, ಎತ್ತರ ಬೆಟ್ಟಗಳ, ದಟ್ಟ ಕಾಡಿನ ವಿಹಂಗಮ ದೃಶ್ಯಗಳು ಕಾಣುತ್ತವೆ. ಇಲ್ಲಿ ೭೦೦ ಮೀಟರ್ ಎತ್ತರದಲ್ಲಿ ಸ್ಕೈ ಬ್ರಿಡ್ಜ್ ಎಂಬ ತೂಗುಸೇತುವೆ ಇದೆ. ಇದನ್ನೆಲ್ಲಾ ನೋಡಿ ಮುಗಿಸಿ ಪುನಃ ಚೆನಾಂಗ್ ಪ್ರದೇಶಕ್ಕೆ ಬಂದು ಅಂಡರ್ ವಾಟರ್ ವರ್ಲ್ಡ್ ಗೆ ಹೋದೆವು. ಇಲ್ಲಿ ನೂರಾರು ರೀತಿಯ ಮೀನುಗಳನ್ನು, ಸಮುದ್ರ ಜೀವಿಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ಲಂಕಾವಿಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಹಲವು ಸುಂದರ ಬೀಚುಗಳು, ಕ್ರೊಕೊಡೈಲ್ ಪಾರ್ಕ್, ವೈಲ್ಡ್ ಲೈಫ್ ಪಾರ್ಕ್, ಬರ್ಡ್ ಪಾರ್ಕ್, ಮ್ಯೂಸಿಯಂ, ಗುನುಂಗ್ ರಾಯ ಎನ್ನುವ ರಮಣೀಯ ಬೆಟ್ಟದ ತುದಿ, ಮೆರೈನ್ ಪಾರ್ಕ್ ಮುಂತಾದ ತಾಣಗಳಿವೆ. ಪ್ರವಾಸಿ ಏಜೆನ್ಸಿಗಳ ಮೂಲಕ ಐಲ್ಯಾಂಡ್ ಹಾಪಿಂಗ್, ಟ್ರೆಕ್ಕಿಂಗ್, ಸ್ಕೂಬಾ ಡೈಬಿಂಗ್ ಮುಂತಾದ ಹಲವು ತರಹದ ಚಟುವಟಿಕೆಗಳಿವೆ. ಪ್ರವಾಸಿಗರು ತಮ್ಮ ಸಮಯ ಮತ್ತು ಖರ್ಚಿನ ಆಧಾರದಲ್ಲಿ ಯೋಜನೆ ಹಾಕಿಕೊಳ್ಳಬಹುದು.

Icon of Langkawi

ಕೊನೆಯ ದಿನ ಅಲ್ಲಿಂದ ನಾವು ಕುಹಾ ಪಟ್ಟಣಕ್ಕೆ ಹೋದೆವು. ಪಟ್ಟಣದಲ್ಲಿ ಸುತ್ತಾಡಿ ಲಂಕಾವಿಯ ನೆನಪಿಗೆ ಸಣ್ಣದೊಂದು ಶಾಪಿಂಗನ್ನೂ ನಡೆಸಿ ಒಂದು ದಕ್ಷಿಣ ಭಾರತೀಯ ಶೈಲಿಯ ಹೊಟೆಲ್ ನಲ್ಲಿ ಬಾಳೆ ಎಲೆಯ ಊಟ ಮಾಡಿ ಲಂಕಾವಿ ಫೆರ್ರಿ ನಿಲ್ದಾಣದ ಸಮೀಪದಲ್ಲಿರುವ ಪ್ರಸಿದ್ಧ ಹದ್ದಿನ ಪ್ರತಿಮೆಗೆ ಹೋದೆವು. ಅದನ್ನು ನೋಡಿಕೊಂಡು ಲಂಕಾವಿಗೆ ವಿದಾಯ ಹೇಳಿ ಫಾಸ್ಟ್ ಫೆರ್ರಿಯ ಮೂಲಕ ’ಪಿನಾಂಗ್’ ದ್ವೀಪಕ್ಕೆ ಹೊರಟೆವು.

ಲಂಕಾವಿಗೆ ಹೋಗುವುದು ಹೇಗೆ?
ಲಂಕಾವಿಗೆ ತಲುಪಲು ವಾಯು ಮತ್ತು ಜಲಮಾರ್ಗಗಳಿವೆ. ಕೌಲಾಲಂಪುರದಿಂದ, ಸಿಂಗಾಪುರದಿಂದ ನೇರ ವಿಮಾನಗಳಿವೆ. ಮಲೇಶಿಯಾದ ಮುಖ್ಯಭೂಮಿಯ ಕೌಲಾ ಪೆರ್ಲಿಸ್, ಕೌಲಾ ಕೇದಾಹ್ ಎಂಬಲ್ಲಿಂದ ಫೆರ್ರಿಗಳ ಮೂಲಕ ಜಲಮಾರ್ಗದಲ್ಲಿ ಪ್ರಯಾಣಿಸಿ ತಲುಪಬಹುದು. ಪಿನಾಂಗ್ ದ್ವೀಪದಿಂದಲೂ ಮತ್ತು ಥೈಲಾಂಡಿನಿಂದಲೂ ಫೆರ್ರಿ ಸಾರಿಗೆ ಇದೆ.  

10ಜನವರಿ2016ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಬರಹ.


ಮಂಗಳವಾರ, ನವೆಂಬರ್ 24, 2015

ಅಮೇಜಾನ್ ಕಿಂಡಲ್ ಎಂಬ ಓದಿನ ಸಂಗಾತಿ

ಅಮೇಜಾನ್ ಕಿಂಡಲ್ ಇ ಬುಕ್ ರೀಡರ್
೨೦೧೧-೧೨ ರ ಮಾತು. ಒಂದು ಇ-ಬುಕ್ ರೀಡರ್ ಕೊಂಡುಕೊಳ್ಳಬೇಕೆಂಬ ಇಚ್ಛೆಯಾಗಿತ್ತು. ಆದರೆ ಆ ದಿನಗಳಲ್ಲಿ ನನಗೆ ಗೊತ್ತಿದ್ದಂತೆ ಭಾರತದಲ್ಲಿ ಸಿಗುತ್ತಿದ್ದದ್ದು ಇನ್ಪಿಭೀಮ್ ಪೈ ಎಂಬ ಮಾಡೆಲ್ ಮಾತ್ರ. ಅದಕ್ಕೆ ಸುಮಾರು ೧೦ ಸಾವಿರ ರೂಪಾಯಿಗಳಷ್ಟು ದುಬಾರಿ ಎನಿಸುತ್ತಿದ್ದ ಬೆಲೆಯಿತ್ತು. ಹಾಗಾಗಿ ಕೊಳ್ಳುವುದನ್ನು ಮುಂದೆ ಹಾಕುತ್ತಿದ್ದೆ. ಅನಂತರದ ದಿನಗಳಲ್ಲಿ ಅಮೇಜಾನ್ ಅವರ ಪ್ರಸಿದ್ಧ ಕಿಂಡಲ್ ಇಬುಕ್ ರೀಡರ್ ಭಾರತದಲ್ಲೂ ಸಿಗಲಾರಂಭಿಸಿತು. ಅದು ಬೇಸಿಕ್ ಬಟನ್ ಮಾಡೆಲ್ ಆಗಿತ್ತು. ಯು.ಎಸ್.ನಲ್ಲಿ ಸುಮಾರು ೬೦ ಡಾಲರ್ (ಸುಮಾರು ಮೂರೂವರೆ ಸಾವಿರ ರೂಪಾಯಿ)ಗಳಿಗೆ ದೊರೆಯುತ್ತಿದ್ದ ಅದಕ್ಕೆ ಭಾರತದಲ್ಲಿ ಬೆಲೆ ಆರು ಸಾವಿರ ಇತ್ತು. ಅದನ್ನು ಕೊಳ್ಳಬೇಕೆಂದು ಒಮ್ಮೆ ಮನಸಾದರೂ ಸಹ ಅದರ ಬೆಲೆ ನೋಡಿ ಸುಮ್ಮನಾಗಿದ್ದೆ. ಏಕೆಂದರೆ ಆರುಸಾವಿರ ಕೊಟ್ಟು ಬೇಸಿಕ್ ಇಬುಕ್ ರೀಡರ್ ಕೊಳ್ಳುವುದರ ಬದಲು ಅದೇ ದುಡ್ಡಿಗೆ ಎಷ್ಟೊಂದು ಪುಸ್ತಕಗಳನ್ನೇ ಕೊಳ್ಳಬಹುದು ಎಂಬ ಲೆಕ್ಕಾಚಾರ ಅಡ್ಡಬರುತ್ತಿತ್ತು.

ಚಿತ್ರ: ಅಮೇಜಾನ್.ಇನ್

೨೦೧೨ರ ಅಕ್ಟೋಬರ್ ೧ ಕ್ಕೆ ಅಮೇಜಾನ್ ಕಿಂಡಲ್ ನವರು ಪೇಪರ್ ವೈಟ್ (Kindle Paperwhite) ಎಂಬ ಹೊಸ ಮಾಡೆಲ್ ಒಂದನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡಿದರು. ಅದರಲ್ಲಿದ್ದ ವಿಶೇಷ ಎಂದರೆ ಅದು ಟಚ್ ಸ್ಕ್ರೀನ್ ಆಗಿತ್ತು ಮತ್ತು ಹಿನ್ನೆಲೆ ಲೈಟ್ ಒಳಗೊಂಡಿತ್ತು. ಅಂದರೆ ಕತ್ತಲಲ್ಲೂ ಓದಬಹುದು. ಇದನ್ನು ಕೊಳ್ಳಬೇಕೆಂದು ಅಂದುಕೊಂಡೆ. ಅದಕ್ಕೆ ಯಾವ ಪರಿ ಬೇಡಿಕೆ ಸೃಷ್ಟಿಯಾಯಿತೆಂದರೆ ನೋಡನೋಡುತ್ತಿದ್ದಂತೆಯೇ ಒಂದೇ ತಿಂಗಳೊಳಗಾಗಿ ಅದು ಔಟ್ ಆಫ್ ಸ್ಟಾಕ್ ಆಗಿಹೋಯ್ತು. ಮತ್ತೆ ಯಾವಾಗ ಬರುತ್ತದೋ ಗೊತ್ತಿಲ್ಲ ಎಂದು ಹಾಕಿದರು. ಆದರೂ ಪ್ರಯತ್ನಿಸೋಣ ಎಂದು ಯು.ಎಸ್. ನಲ್ಲಿದ್ದ ಅಣ್ಣನಿಗೆ ಹೇಳಿದೆ. ಆತ ಅಲ್ಲಿ ಹುಡುಕಿ ಸಿಗದೇ ಕೊನೆಗೆ ಅಮೇಜಾನ್ ನಲ್ಲೇ ಕೆಲಸ ಮಾಡುತ್ತಿದ್ದ ಅವನ ಗೆಳೆಯನೊಬ್ಬನಿಗೆ ಕೇಳಿದ. ಆದರೆ ಖುದ್ದು ಅಮೇಜಾನ್ ಉದ್ಯೋಗಿಗಳಿಗೇ ಸಿಗದ ರೀತಿಯಲ್ಲಿ ಅದು ಖರ್ಚಾಗಿಹೋಗಿದೆಯಂದು ತಿಳಿದು ಕೈಚೆಲ್ಲಿದ. ಸಿಯಾಟಲ್ ನಗರದಲ್ಲಿ ಇರುವ ಗೆಳೆಯನೊಬ್ಬನಿಗೆ ಹೇಳಿದೆ. ಅವನು ಕೂಡ ಸುಮಾರು ಕಡೆ ಹುಡುಕಿ ಕೊನೆಗೆ ಒಂದು ಕಡೆ ಶೋರೂಮಿನಲ್ಲಿ ಒಂದು ಕೊನೇ ಪೀಸ್ ಉಳಿದಿದ್ದನ್ನು ಕೊಳ್ಳಲು ಯಶಸ್ವಿಯಾದ. ಬೆಲೆ ೧೨೦ ಡಾಲರ್ ಆಗಿತ್ತು. ಅಂದರೆ ಸುಮಾರು ಏಳು ಸಾವಿರ ರೂಪಾಯಿಗಳು. ಜನವರಿ ೨೦೧೩ರಲ್ಲಿ ಅಲ್ಲಿಂದ ಹಾರಿ ಅದು ಭಾರತಕ್ಕೆ ಬಂದು ನನ್ನ ಕೈ ಸೇರಿತು.

ಕಿಂಡಲ್ ನಲ್ಲಿ ಕನ್ನಡ ಪುಸ್ತಕದ PDF
ಈಗ ಸುಮಾರು ಮೂರು ವರ್ಷ ಆಗುತ್ತಾ ಬಂದಿದೆ. ನೂರಾರು ಪುಸ್ತಕಗಳನ್ನು ಅದರಲ್ಲಿ ಓದಿದ್ದೇನೆ. ಈ ಬೆಂಗಳೂರಲ್ಲಿ ಜಾಗವಿಲ್ಲದ ಮನೆಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಡುವುದು, ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ಕಷ್ಟದ ಕೆಲಸ. ಹಾಗಾಗಿ ಎಷ್ಟೋ ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವ ಆಸೆಯಿದ್ದರೂ ಖರೀದಿಸಿರಲಿಲ್ಲ. ಈ ಕಿಂಡಲ್ ಬಂದಮೇಲೆ ಅಂತಹ ಹಲವಾರು ಪುಸ್ತಕಗಳನ್ನು ಇ-ಆವೃತ್ತಿಗಳಲ್ಲಿ ಓದಿಮುಗಿಸಿದೆ. ಆದರೆ ಹೆಚ್ಚು ಎಲ್ಲವೂ ಇಂಗ್ಲೀಷ್ ಪುಸ್ತಕಗಳಷ್ಟೆ. ಏಕೆಂದರೆ ಕನ್ನಡದಲ್ಲಿ ಕಿಂಡಲ್ ಮಾದರಿಯ (AZW3/AZW, MOBI) ಪುಸ್ತಕಗಳು ಇನ್ನೂ ಬಂದಿಲ್ಲ. ಪಿಡಿಎಫ್ ಮಾದರಿಯಲ್ಲಿ ಅನೇಕ ಕನ್ನಡ ಪುಸ್ತಕಗಳು ಸಿಗುತ್ತವೆ. ಅವುಗಳನ್ನು ಸಂಗ್ರಹಿಸುವ ಕೆಲಸ ಶುರುಮಾಡಿದ ಮೇಲೆ ನೂರಾರು ಕನ್ನಡ ಪುಸ್ತಕಗಳ ಪಿಡಿಎಫ್ ಸಂಗ್ರಹವಾದವು/ಆಗುತ್ತಿವೆ. ಹೆಚ್ಚಾಗಿ ಅವೆಲ್ಲಾ ಹಲವಾರು ದಶಕಗಳ ಹಿಂದೆ ಪ್ರಕಟನೆಯಾದ ಪುಸ್ತಕಗಳು. ಕೆಲವು ಹೊಸಪುಸ್ತಕಗಳೂ ಸಿಕ್ಕವು. ಅವನ್ನು ಕಿಂಡಲ್ ನಲ್ಲಿ ಓದುತ್ತಿದ್ದೇನೆ. ಈಗ ಈ ಮಾಡೆಲ್ ನ ರೀಡರ್ ಗಳು ಭಾರತದಲ್ಲಿಯೂ ಸಿಗುತ್ತಿವೆ. ಇದರ ಸಂಪೂರ್ಣ ವಿವರಗಳನ್ನು ಅಮೇಜಾನ್.ಇನ್ ತಾಣದಲ್ಲಿ ನೋಡಬಹುದು. 

ನನ್ನಲ್ಲಿ ಇದನ್ನು ನೋಡಿದವರು ಅನೇಕರು ಏನಿದು ಇಬುಕ್ ರೀಡರ್? ಇದಕ್ಕೂ ಟ್ಯಾಬ್ಲೆಟ್ ಅಥವಾ ಐಪ್ಯಾಡ್ ಗೂ ವ್ಯತ್ಯಾಸವೇನು? ಅಂತ ಕೇಳುತ್ತಿರುತ್ತಾರೆ.  ಹಾಗಾಗಿ ಇದೊಂದು ವಿವರಣೆ:

ಹೆಸರೇ ಹೇಳುವ ಹಾಗೆ ಇದು ಇ-ಪುಸ್ತಕಗಳನ್ನು ಓದುವ ಸಾಧನ.  ಪುಸ್ತಕಗಳು ಪ್ರಿಂಟ್ ರೂಪದಲ್ಲಿ ಪ್ರಕಟವಾದಂತೆ ಎಲೆಕ್ಟ್ರಾನಿಕ್ ರೂಪದಲ್ಲಿ ಅಂದರೆ ಕಂಪ್ಯೂಟರ್ ಫೈಲ್ ಗಳ ರೂಪದಲ್ಲಿ ಕೂಡ ತಯಾರುಮಾಡಬಹುದು. ವಿವಿಧ ಫೈಲ್ ಮಾದರಿಗಳಲ್ಲಿ ಸಿಗುವ ಅವುಗಳನ್ನು ಓದಲು ಸಾಧನ ಬೇಕಾಗುತ್ತದೆ. ಅದೇ ಇಬುಕ್ ರೀಡರ್. ಮುಖ್ಯವಾಗಿ ಟ್ಯಾಬ್ಲೆಟ್ /ಐಪ್ಯಾಡ್ ಗಳು ಎಲ್.ಇ.ಡಿ. ಪರದೆ ಹೊಂದಿರುತ್ತವೆ. ಎಲ್ ಇ ಡಿ ಪರದೆಗಳು ಬೆಳಕನ್ನು ಹೊರಸೂಸುವುದರಿಂದ ಅವು ಹೆಚ್ಚು ಹೊತ್ತು ನೋಡಲು, ಓದಲು ಸೂಕ್ತವಲ್ಲ. ಕಣ್ಣಿಗೆ ತೊಂದರೆ ಉಂಟುಮಾಡಬಲ್ಲುದು. ಇಬುಕ್ ರೀಡರ್ ಗಳು ಪುಸ್ತಕ ಓದುವುದಕ್ಕಾಗಿ ಮಾಡಿರುವ ಇ-ಇಂಕ್ ತಂತ್ರಜ್ಞಾನ ಬಳಸುತ್ತವೆ. ಇ ಇಂಕ್ ಪರದೆಗಳಿಂದ ಕಣ್ಣಿಗೆ ತೊಂದರೆಯಿಲ್ಲ. ಇ-ಇಂಕ್ ಪರದೆಯಲ್ಲಿ ಇ-ಪುಸ್ತಕವು ಮುದ್ರಿತ ಪುಸ್ತಕಗಳಂತೆಯೇ ಕಾಣುತ್ತದೆ.  ಟ್ಯಾಬ್ಲೆಟ್ ಗಳು ಬಣ್ಣದ ಡಿಸ್ ಪ್ಲೇ ಹೊಂದಿರುತ್ತವೆ. ವಿಡಿಯೋ, ಆಡಿಯೋ, ಗೇಮ್ಸ್, ಇಂಟರ್ನೆಟ್ ಎಲ್ಲವೂ ಸಾಧ್ಯ. ಆದರೆ ಇಬುಕ್ ರೀಡರ್ ಎನ್ನುವುದು ಓದಲು ಮಾತ್ರ ಹಾಗೂ ವೈಫೈ ಮೂಲಕ ಬೇಸಿಕ್ ಬ್ರೌಸಿಂಗ್ ಮಾಡಬಹುದಷ್ಟೆ.  ಹಾಗಾಗಿ ಬೇರೆ ಆಕರ್ಷಣೆಗೊಳಗಾಗದೇ ಓದುತ್ತಿರಬಹುದು. ದೀರ್ಘಾವಧಿ ಬ್ಯಾಟರಿ ಛಾರ್ಜ್ ಕೂಡ ಉಳಿಯುತ್ತದೆ. :) (ಕೆಲವು ಮಾಡೆಲ್ ಗಳಲ್ಲಿ ಆಡಿಯೋ ಹಾಗೂ ತ್ರಿಜಿ ಸಂಪರ್ಕ ಸೌಲಭ್ಯ ಇದೆ)

***
ಕನ್ನಡದಲ್ಲಿ ಕಿಂಡಲ್ ಫೈಲ್ ಮಾದರಿಯ ಪುಸ್ತಕಗಳು ಇನ್ನೂ ಬಂದಿಲ್ಲ. ಹಾಗಾಗಿ ಪಿಡಿಎಫ್ ಪುಸ್ತಕಗಳನ್ನೇ ಓದಬೇಕು. ಪಿಡಿಎಫ್ ಪುಸ್ತಕಗಳು ಎಲ್ಲವೂ portrait modeನಲ್ಲಿ ಓದಲಾಗುವುದಿಲ್ಲ. ಅಕ್ಷರಗಳು ಬಹಳ ಸಣ್ಣದಾಗುವುದರಿಂದ ಓದಲು ಕಾಣುವುದಿಲ್ಲ. Landscape modeನಲ್ಲಿ ಓದಬೇಕಾಗುತ್ತದೆ. ಕನ್ನಡದ ಇ-ಬುಕ್/ಪಿಡಿಎಫ್ ಪುಸ್ತಕಗಳ ಲಭ್ಯತೆ ಬಗ್ಗೆ ಈ ಪೋಸ್ಟ್ ನೋಡಿ: Kannada Ebooks

ಕಿಂಡಲ್ ಬಗ್ಗೆ 'ದಿನಮಣಿ ಬಪ್ಪನಾಡು' ಅವರು ಕೊಟ್ಟ ಪೂರಕ ಮಾಹಿತಿ ಹೀಗಿದೆ: ಈ ಮಾಹಿತಿ ಇಂಗ್ಲೀಷ್ ಪುಸ್ತಕಗಳಿಗೆ ಮಾತ್ರ.
೧. ಅಂದಾಜು ೧೯೩೦ರ ಹಿಂದಿನ ಪುಸ್ತಕಗಳು patent/copywrite ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಎಲ್ಲಾ ಪುಸ್ತಕಗಳನ್ನು download ಮಾಡಿ ಓದಬಹುದು.
೨. ಪ್ರತಿ ಪುಟವೂ ಪುಸ್ತಕದ feeling ಕೊಡುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಆನಂದ ಲಭ್ಯ. Paperwhite ಹಿಂದಿನ modelಗಳು ಸ್ವಯಂಪ್ರಕಾಶಿತವಲ್ಲವಾದ್ದರಿಂದ ಹೊರಬೆಳಕು ಬೇಕು. ಎಲ್ಲಾ ಬರಹ/ಚಿತ್ರಗಳು ಕಪ್ಪುಬಿಳುಪು. ಪುಸ್ತಕ ಓದುವ ಹುಚ್ಚಿನವರಿಗೆ ವರದಾನ.
೩. Battery ಖರ್ಚಾಗುವುದು ಪುಟದಿಂದ ಪುಟಕ್ಕೆ ಬದಲಾವಣೆಯಾಗುವಾಗ ಮಾತ್ರ. ಓದುವಾಗ ಇಲ್ಲ. ಆದ್ದರಿಂದ ಒಂದು charge ತಿಂಗಳಾನುಗಟ್ಟಲೆ ಬರುತ್ತದೆ.
೪. 
AZW, Mobi format ಅಕ್ಷರಗಳನ್ನು ಬೇಕಾದಷ್ಟು ಹಿಗ್ಗಿಸಬಹುದು. ಪುಟ ಅದರ ಪ್ರಕಾರ wrap ಆಗುತ್ತವೆ.
೫. ಇತರ format text (word, pdf ಇತ್ಯಾದಿ)ಗಳನ್ನು mobi formatಗೆ convert ಮಾಡಲು ಒಂದು ಉತ್ತಮ software - Calibre.