ಅವತ್ತು ಈದ್ ಮಿಲಾದ್ ಹಬ್ಬ. ಶುಕ್ರವಾರವಾ? ಗೊತ್ತಿಲ್ಲ. ಮುಸ್ಲಿಮರ ಎಲ್ಲಾ ಹಬ್ಬಗಳು ಶುಕ್ರವಾರವೇ ಇರುತ್ತವಾ? ಗೊತ್ತಿಲ್ಲ. ನಮಗಂತೂ ಶಾಲೆಗೆ ರಜ. ಆದರೂ ಅವತ್ತು ಶಾಲೆಗೆ ಹೋಗಬೇಕಿತ್ತು. ಖೊ ಖೋ ಪ್ರಾಕ್ಟೀಸಿಗೆ ಬರಲು ಹೇಳಿದ್ದರು. ದಿನಾ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದುದರಿಂದ ಇವತ್ತು ಸೈಕಲ್ ಬೇಡ ಬಸ್ಸಿನಲ್ಲೇ ಹೋಗೋಣ ಎನಿಸಿ ೧೧ ಗಂಟೆಯ ಹೊತ್ತಿಗೆ ಮನೆಯಿಂದ ಹೊರಟೆ. ಬಸ್ಟಾಪು ತಲುಪಿಕೊಂಡೆ. ಸಾಮಾನ್ಯವಾಗಿ ೧೫ ನಿಮಿಷಕ್ಕೆ ಬರುವ ವೆಂಕಟೇಶ್ವರ ಬಸ್ಸು ಅವತ್ತು ಅರ್ಧ ಗಂಟೆಯಾದರೂ ಬರಲಿಲ್ಲ. ಮುಕ್ಕಾಲು ಗಂಟೆಯಾಯಿತು. ಅಷ್ಟರಲ್ಲಿ ತಣ್ಣಗೆ ಹರಿಯುತ್ತಿದ್ದ ರಸ್ತೆಗಳಲ್ಲಿ ಯಾಕೋ ಸ್ವಲ್ಪ ಚಟುವಟಿಕೆ ಜಾಸ್ತಿಯಾದಂತೆ ಕಂಡುಬಂತು. ನನ್ನಂತೆಯೇ ಬಸ್ಸಿಗೆ ಕಾಯುತ್ತಿದ್ದ ನಾಲ್ಕು ಜನ ಪೇಟೆ ಏರಿಯಾದಲ್ಲಿ ಏನೋ ಆಗಿದೆಯಂತೆ, ಬಸ್ಸುಗಳನ್ನೆಲ್ಲಾ ಅಲ್ಲೇ ತಡೆಹಿಡಿದಿದ್ದಾರಂತೆ ಎಂದು ಮಾತಾಡಿಕೊಳ್ಳುವುದು ಕೇಳಿಸಿತು. ನಡೆದುಕೊಂಡೇ ಶಾಲೆಗೆ ಹೋಗಿಬಿಡಲೇ ಎಂದು ಯೋಚಿಸಿದೆ. ಅಷ್ಟರಲ್ಲಿ ಒಂದಿಷ್ಟು ಜನ ಕೂಗುತ್ತಾ ಓಡಿ ಹೋದರು. ಎಂಟತ್ತು ಬೈಕುಗಳಲ್ಲಿ ಜನ ವೇಗವಾಗಿ ಪೇಟೆಯ ಕಡೆಗೆ ಹೋದರು. ಅಲ್ಲಿದ್ದ ನಮಗೆ ಏನೆಂದರೇನೂ ಅರ್ಥಾಗಲಿಲ್ಲ. ಅಷ್ಟರಲ್ಲೇ ನಾವು ನಿಂತಿದ್ದ ಸ್ಥಳಕ್ಕೆ ವೇಗವಾಗಿ ಬಂದ ಆಟೋದವನೊಬ್ಬ ಗಕ್ಕನೇ ಬ್ರೇಕು ಹಾಕಿ ನಿಲ್ಲಿಸಿ ಪೇಟೆ ಏರಿಯಾದಲ್ಲಿ ಸಿಕ್ಕಾ ಪಟ್ಟೆ ಗಲಾಟೆ ಆಗ್ತಿದೆ, ಹಿಂದೂ-ಮುಸ್ಲಿಂ ಗಲಾಟೆಯಂತೆ, ಈ ಕಡೆಗೂ ಬರುತ್ತಾ ಇದ್ದಾರೆ, ಆದಷ್ಟು ಬೇಗ ಮನೆ ಸೇರ್ಕೊಳ್ಳಿ" ಎಂದು ಹೇಳಿ ಅಷ್ಟೇ ವೇಗವಾಗಿ ಹೊರಟು ಹೋದ. ಅಷ್ಟಾಗಿದ್ದೇ ತಡ ಒಬ್ಬೊಬ್ಬರೇ ಅಲ್ಲಿಂದ ಖಾಲಿಯಾದರು. ನಾನೂ ಮನೆ ಕಡೆ ಹೊರಟೆ. ಒಂದು ಹದಿನೈದು ನಿಮಿಷ ದೂರವಿತ್ತು ನಮ್ಮ ಮನೆ. ಹೆಜ್ಜೆ ಹಾಕಿದೆ. ಹೋಗುವಾಗ ಪೋಲೀಸ್ ಪೇದೆಯೊಬ್ಬ ಎಲ್ಲಿ ಮನೆ ಅಂದ, ಇಲ್ಲೇ ಹತ್ತಿರದಲ್ಲಿ ಅಂದೆ. "ಬೇಗ ಮನೆಗೆ ಹೋಗು, ತಿರುಗಾಡ್ಬೇಡ " ಅಂದ. ಸರಿ ಅಂದು ಮನೆಗೆ ಹೋದೆ.
ಮನೆಗೆ ಹೋದಾಗ ಅಕ್ಕ ಪಕ್ಕದ ಮನೆಗಳ ಜನರೆಲ್ಲಾ ಹೊರಗೆ ನಿಂತು ಮಾತಾಡುತ್ತಿದ್ದರು. ಗಲಾಟೆಯ ಸುದ್ದಿ ಹಬ್ಬುತ್ತಿತ್ತು. ಪ್ರತಿವರ್ಷ ಈದ್ ಮಿಲಾದ್ ದಿನ ಮುಸ್ಲಿಮರು ಊರಿನ ಮುಖ್ಯ ಬೀದಿಗಳಲ್ಲಿ ದೊಡ್ಡ ಮೆರವಣಿಗೆ ಮಾಡುತ್ತಾರೆ. ಅಂತೆಯೇ ಈ ಸಲವೂ ಹೊರಟಿದ್ದರು. ಪೇಟೆ ಏರಿಯಾಕ್ಕೆ ಬಂದಾಗ ಯಾವುದೋ ಅಂಗಡಿಯವರಿಗೂ ಮೆರವಣಿಗೆಯಲ್ಲಿದ್ದವರಿಗೂ ಏನೋ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳವಾಯಿತಂತೆ. ಅವರು ಅಂಗಡಿಗಳ ಬಾಗಿಲು ಹಾಕುವಂತೆ ಒತ್ತಾಯಿಸಿದರಂತೆ. ಇವರು ಮುಸ್ಲಿಮರಿಗೆ ಬೈದರಂತೆ. ಸಿಟ್ಟಿಗೆದ್ದ ಅವರು ಅಂಗಡಿಗಳ ಮೇಲೆ ಕಲ್ಲು ತೂರಿದರಂತೆ. ಇದಕ್ಕೆ ಪ್ರತಿಯಾಗಿ ಅಂಗಡಿಯವರೊಂದಿಷ್ಟು ಜನ ಮೆರವಣಿಗೆ ಮೇಲೆ ಕಲ್ಲು ಹೊಡೆದರಂತೆ. ಅಂತೆ ಕಂತೆಗಳಿಗಿಂತ ಬೇರೆ ಕಾರಣ ಬೇಕೆ? ಕೈ ಮಿಲಾಯಿಸಿದರು. ಮುಸ್ಲಿಮರು ಸಿಕ್ಕಾಪಟ್ಟೆ ಸಂಖ್ಯೆಯಲ್ಲಿದ್ದುದ್ದರು, ಅದೂ ಅಲ್ಲದೇ ಎಲ್ಲರೂ ಈದ್ ಮಿಲಾದಿನ ಜೋಶ್ ನಲ್ಲಿದ್ದರಿಂದ ಸಮಾಧಾನ ಮಾಡುವವರೂ ಯಾರೂ ಇರಲಿಲ್ಲ. ಪೇಟೆ ಏರಿಯಾದ ಹಿಂದೂ ವರ್ತಕರು, ಜನರೆಲ್ಲ ಮೆರವಣಿಗೆಯಲ್ಲಿದ್ದ ಜನರ ಮೇಲೆ ಮುಗಿಬಿದ್ದರು. ಮುಸ್ಲಿಮರು ತಾವೇನು ಕಡಿಮೆ ಎಂಬಂತೆ ತಲವಾರು ತರಿಸಿಕೊಂಡು ಹೊಡೆದಾಟಕ್ಕೆ ನಿಂತುಬಿಟ್ಟರು. ಗಲಾಟೆ ಶುರುವಾಗಿಯೇ ಹೋಯಿತು. ಪೇಟೆ ಪ್ರದೇಶವಿಡೀ ರಣರಂಗವಾಯಿತು.
ಅನ್ವರ್ ಕಾಲೋನಿ ಎಂಬುದು ಮುಸ್ಲಿಮರೇ ಪೂರ್ತಿ ಇರುವ ಪ್ರದೇಶ. ಪೇಟೆಗೆ ಹತ್ತಿರವಿದೆ. ಈದ್ ಮೆರವಣಿಗೆ ಮೇಲೆ ಕಲ್ಲು ಬಿತ್ತಂತೆ ಎಂಬ ಸುದ್ದಿ ತಿಳಿದದ್ದೇ ತಡ ಅನ್ವರ್ ಕಾಲೋನಿಗೆ ಕಾಲೋನಿಯೇ ಬೀದಿಗಿಳಿದುಬಿಟ್ಟಿತು. ರಸ್ತೆಯಲ್ಲಿದ್ದ ಒಂದೆರಡು ಹಿಂದೂಗಳ ಅಂಗಡಿಗಳನ್ನ ಉಡಾಯಿಸಿದರು. ಎದುರುಗಡೆಯೇ ಇದ್ದ ಹಿಂದೂಗಳ ಟಾಕೀಸ್ ಒಂದಕ್ಕೆ ಧಾಳಿಯಿಟ್ಟರು. ಪರದೆಗೆ ಬೆಂಕಿ ಹಚ್ಚಿದರು. ಜನರೆಲ್ಲಾ ಹೊರಗೆ ಓಡಲಾರಂಭಿಸಿದಾಗ ಎಲ್ಲಾ ಬಾಗಿಲುಗಳಲ್ಲೂ ನಿಂತು ಹಿಂದೂಗಳನ್ನು ಹುಡುಕಿ ಹುಡುಕಿ ಬಡಿದರು. ಹುಡುಗಿಯರ ಮೈಮುಟ್ಟದಿದ್ದರೂ ಆಭರಣಗಳನ್ನು ದೋಚಿದರು. ಹುಡುಗರ ಕೈಯನ್ನು ನೆಲದ ಮೇಲಿರಿಸಿ ಕಬ್ಬಿಣದ ಸರಳಿನಿಂತ ಮೂಳೆ ಪುಡಿಯಾಗುವಂತೆ ಜಪ್ಪಿದರು. ಪಾರ್ಕಿಂಗ್ ಲಾಟಿನಲ್ಲಿದ್ದ ಗಾಡಿಗಳಿಗೆಲ್ಲಾ ಬೆಂಕಿ ಹಚ್ಚಲಾಯಿತು. ಒಟ್ಟಿನಲ್ಲಿ ಯಾರಿಗೆ ಏನಾಯಿತು ಎಂದು ಗೊತ್ತಾಗುವುದಕ್ಕೆ ಮೊದಲೇ ಎಲ್ಲಾ ಆಗಿ ಹೋಗಿತ್ತು. ಸಿನೆಮಾ ನೋಡಲು ನಮ್ಮ ಮನೆ ಲೈನಿನ ಹುಡುಗನೊಬ್ಬ ಹೋಗಿದ್ದ. ಇದ್ದಕ್ಕಿಂದ್ದಂತೇ ಗಲಾಟೆ ಶುರುವಾದಾಗ ಹೇಗೋ ತಪ್ಪಿಸಿಕೊಂಡು ಹಿಂದಿನ ೮ ಅಡಿ ಎತ್ತರದ ಗೋಡೆಯನ್ನು ಹಾರಿಕೊಂಡು ಕಾಲು ಉಳುಕಿಸಿಕೊಂಡು ಬಂದು ನಡೆದುದ್ದನ್ನು ಹೇಳುತ್ತಾ ಇದ್ದರೆ ನಮ್ಮ ಇಡೀ ಬೀದಿಯ ಜನರೆಲ್ಲಾ ಹಲ್ಲು ಕಡಿಯುತ್ತಾ ಅವನ ಮನೆ ಮುಂದೆ ಗುಂಪುಗೂಡಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ವಿಪರ್ಯಾಸವೆಂದರೆ ಅವತ್ತು ಪ್ರದರ್ಶನವಾಗುತ್ತಿದ್ದುದು 'ಕ್ರಾಂತಿವೀರ್' ಎಂಬ ಹಿಂದಿ ಸಿನೆಮಾ. ಅದರಲ್ಲಿಯೂ ಹಿಂದೂ ಮುಸ್ಲಿಂ ಗಲಾಟೆಯ ಜೊತೆಗೆ ಕೊನೆಗೆ ಎಲ್ಲರನ್ನೂ ಒಂದುಗೂಡಿಸುವ ಕತೆ ಇದೆ.
ಆಕಡೆ ಪೇಟೆಯಲ್ಲಿ ಅವ್ಯಾಹತವಾಗಿ ಗಲಾಟೆ ಮುಂದುವರೆದಿತ್ತು. ಪೇಟೆಯಲ್ಲಿರುವ ಮುಸ್ಲಿಮರ ಎಲ್ಲಾ ಅಂಗಡಿಗಳೂ ಧಾಳಿಗೆ ತುತ್ತಾದವು. ಬೆಂಕಿಯಲ್ಲಿ ಕರಟಿ ಹೋದವು. ಸೈಕಿಲ್ ಶಾಪು, ಗ್ಯಾರೇಜು, ಬಾಳೆಕಾಯಿ ಮಂಡಿ, ಹಾರ್ಡ್ ವೇರ್ ಅಂಗಡಿ, ಮಾಂಸದಂಗಡಿ ಇನ್ನಿತರ ಮುಸ್ಲಿಮರ ದೂಖಾನುಗಳು ಸಂಜೆಯವರೆಗೂ ಲೂಟಿಗೊಳಗಾದವು. ಹಿಂದೂಗಳ ಅನೇಕ ಅಂಗಡಿಗಳೂ ದೋಚಲ್ಪಟ್ಟವು. ಈದ್ ಮಿಲಾದ್ ದಿನ ಹಾಗೆ ಮುಗಿದಿತ್ತು.
ಎರಡನೆ ದಿನ.
ನಮ್ಮೂರಿನಲ್ಲಿ ಒಂದು ನದಿ ಹರಿಯುತ್ತದೆ. ನದಿಯ ಈಚೆಗಿನ ಪ್ರದೇಶವಲ್ಲಾ ಹಳೇ ಊರಿನ ಪ್ರದೇಶ, ಅದಕ್ಕೆ ಹಳೇನಗರವೆನ್ನುತ್ತಾರೆ. ಆಚೆಗಿನ ಪ್ರದೇಶವೆಲ್ಲಾ ಕಾರ್ಖಾನೆ, ಅದರ ಕ್ವಾಟ್ರಸ್ ಇತ್ಯಾದಿಗಳು ಇರುವ ಪ್ರದೇಶ. ಅದಕ್ಕೆ ಹೊಸನಗರವೆನ್ನುತ್ತಾರೆ. ಹಿಂದಿನ ದಿನ ಬರೇ ಪೇಟೆ ಏರಿಯಾದಲ್ಲಿ ನೆಡೆದಿದ್ದ ಗಲಾಟೆ ಹಳೇನಗರದ ಎಲ್ಲ ಏರಿಯಾಗಳಿಗೂ ಹಬ್ಬಿತು. ಹಿಂದಿನ ದಿನ ಹಿಂದೂಗಳೂ ಕೂಡ ಚೆನ್ನಾಗಿಯೇ ಬಡಿಸಿಕೊಂಡಿದ್ದರಿಂದ ಇವತ್ತು ಮುಸ್ಲಿಮರನ್ನು ಮುಗಿಸಿಯೇ ತೀರಬೇಕು ಎಂಬಂತೆ ಹಳದಮ್ಮನ ಕೇರಿ, ಖಂಡೇರಾಯನ ತೋಟ, ಭೂತನ ಗುಡಿ, ಹೊಸಮನೆ, ಸಂತೇಮೈದಾನ, ಚಾಮೇಗೌಡ ಲೈನ್, ಗಾಂಧೀನಗರ, ಹೊಸಮನೆ, ಸುಭಾಷ್ ನಗರ ಮುಂತಾದ ಏರಿಯಾಗಳಲ್ಲಿ ಹಿಂದೂಗಳು ಮುಸ್ಲಿಮರ ಮನೆ, ಅಂಗಡಿಗಳನ್ನು ಗುರಿಯಾಗಿರಿಸಿಕೊಂಡು ಬೀದಿಗಿಳಿದರು. ಕಡಿಮೆ ಸಂಖ್ಯೆಯಲ್ಲಿದ್ದ ಪೋಲೀಸರಿಗೆ ಗಲಭೆ ನಿಯಂತ್ರಣಕ್ಕೆ ತರುವ ದಾರಿಯೂ ಇರಲಿಲ್ಲ. ಎಲ್ಲ ಸಣ್ಣ ಸಣ್ಣ ರಸ್ತೆಗಳ, ಒತ್ತೊತ್ತಾಗಿನ ಮನೆಗಳ ಪ್ರದೇಶಗಳಾದ್ದರಿಂದ ಎಲ್ಲಿ ಗಲಭೆ ನೆಡೆಯುತ್ತಿದೆ ಎಂದೇ ಪೋಲೀಸರಿಗೆ ತಿಳಿಯುತ್ತಿರಲಿಲ್ಲ. ಒಂದು ಕಡೆ ಜನರನ್ನು ಚದುರಿಸುತ್ತಿದ್ದಂತೇ ಇನ್ನೂ ನಾಲ್ಕು ಕಡೆಗಳಲ್ಲಿ ಶುರುವಾಗುತ್ತಿತ್ತು. ಲಾಟೀಚಾರ್ಜಿಗೂ ಬಗ್ಗದೇ ಮುಂದುವರೆಯಿತು. ಮುಸ್ಲಿಮರು ತಮ್ಮ ತಮ್ಮ ಏರಿಯಾಗಳಲ್ಲಿ ಕಾವಲು ನಿಂತರು. ಅನ್ವರ್ ಕಾಲೋನಿಯನ್ನು ಮುಟ್ಟಲು ಹಿಂದೂಗಳಿಗೆ ಸಾಧ್ಯವಿಲ್ಲವೆಂದು ಅವರಿಗೆ ಗೊತ್ತಿತ್ತು. ಖಾಜಿ ಮೊಹಲ್ಲಾ, ಟಿ.ಕೆ. ರೋಡು, ಮಾರ್ಕೆಟ್ಟು ಇತ್ಯಾದಿ ಕಡೆಗಳಲ್ಲಿದ್ದ ತಮ್ಮ ಮನೆ , ಜನರನ್ನು ರಕ್ಷಿಸಿಕೊಳ್ಳಲು ನಿಂತರು. ಅವರಿಗೆ ಧಾಳಿಗಿಂತ ತಮ್ಮ ರಕ್ಷಣೆಯೇ ಮುಖ್ಯವಾದ ಸ್ಥಿತಿ ಇತ್ತು. ಹಿಂದೂಗಳು ಹಳೇನಗರ ಪ್ರದೇಶದ ತುಂಬಾ ದಾಂಗುಡಿ ನೆಡೆಸಿದರು. ರಸ್ತೆ ಮಧ್ಯದಲ್ಲಿ ಟಯರುಗಳನ್ನಿಟ್ಟು ಬೆಂಕಿಹಚ್ಚಿದರು. ಸೌದೆ ಡೀಪೋ ಒಂದಕ್ಕೆ ಬೆಂಕಿ ಹಚ್ಚಲಾಯಿತು. ಮುಸ್ಲಿಮರ ಏರಿಯಾಕ್ಕೆ ಹೋಗುತ್ತದೆ ಎಂಬ ಒಂದೇ ಒಂದು ಕಾರಣದಿಂದ ತೀರ್ಥರಾಮೇಶ್ವರ ಬಸ್ಸನ್ನು ಸುಟ್ಟು ಕರಕಲಾಗಿಸಿದರು.
ನಮ್ಮ ಮನೆ ಟೆರೇಸಿನ ಮೇಲೆ ನಿಂತುಕೊಂಡು ನೋಡಿದರೆ ಊರಿಗೆ ಊರೇ ಯುದ್ಧಭೂಮಿಯಂತೆ ಜನ ಅಲ್ಲಿಂದಿಲ್ಲಿಗೆ ಕೋಲು, ಸರಳು, ಕತ್ತಿ ಗಳನ್ನು ಹಿಡಿದುಕೊಂಡು ಓಡುವುದು ಕಾಣುತ್ತಿತ್ತು. ಅಲ್ಲಲ್ಲಿ ಹಚ್ಚಿದ ಬೆಂಕಿ, ದೂರದಲ್ಲಿ ಏಳುತ್ತಿರುವ ಕಪ್ಪು ದಟ್ಟ ಹೊಗೆ, ಪೋಲೀಸ್ ಜೀಪಿನ ಸೈರನ್ ಶಬ್ದ..... . ಎದುರು ಮನೆಯ ಅಂಕಲ್ ಒಬ್ಬರು ಬೇಡ ಬೇಡವೆಂದರೂ ಗಲಾಟೆ ನೋಡಿಕೊಂಡು ಬರುತ್ತೇನೆಂದು ಹೋದವರು ಮಧ್ಯಾಹ್ನದ ಹೊತ್ತಿಗೆ ಹಣೆಯಲ್ಲಿ ರಕ್ತ ಸುರಿಸಿಕೊಳ್ಳುತ್ತಾ ಬಂದು ವರದಿ ಮಾಡಿದರು.
ಮನೆ ಹತ್ತಿರದಲ್ಲಿ ಹಳೆಯ, ಕಲ್ಲಿನಿಂದ ಕಟ್ಟಿದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವೊಂದಿದೆ. ಅದರಲ್ಲಿ ಅರ್ಧ ಕೆತ್ತಿದ, ಒಡೆದು ಹೋದ ಶಿಲ್ಪಗಳೇ ಹೆಚ್ಚು. ೧೨ ನೇ ಶತಮಾನದಲ್ಲಿ ಆ ದೇವಾಲಯ ಕಟ್ಟುತ್ತಿದ್ದಾಗ ಊರಿನ ಮೇಲೆ ಮುಸ್ಲಿಂ ರಾಜನ ಧಾಳಿ ನೆಡೆಯಿತಂತೆ. ಹೊಯ್ಸಳ ಶೈಲಿಯ ಆ ದೇವಸ್ಥಾನದ ಕೆಲಸ ಅಲ್ಲಿಗೇ ನಿಂತುಹೋಯಿತಂತೆ. ಮುಸ್ಲಿಂ ಸೈನಿಕರು ದೇವಾಲಯದ ಶಿಲ್ಪಗಳನ್ನು ಒಡೆದು ಹಾಕಿದರಂತೆ. ಆನಂತರ ದೇವಸ್ಥಾನದ ಪಕ್ಕದಲ್ಲೇ ಮಸೀದಿ ಕಟ್ಟಿದರಂತೆ. ದೇವಸ್ಥಾನದ ಅರ್ಚಕರ ಮನೆ ಮಸೀದಿ ಗೋಡೆಗೆ ತಾಗಿಕೊಂಡೇ ಇದೆ. ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಮರ ಓಣಿಗಳಿವೆ. ಅದೇನಾಯಿತೋ ಏನೋ ಒಟ್ಟಿನಲ್ಲಿ ಮುಸ್ಲಿಮರು ಹಿಂದೂಗಳೂ ಕೂಡಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ಗಲಾಟೆ ಶುರುವಾದಾಗ ಅಲ್ಲಿನ ಹಿಂದೂ ಮುಸ್ಲಿಮರು ಇಬ್ಬರೂ ಸೇರಿ ಗಲಭೆಕೋರರು ತಮ್ಮ ಏರಿಯಾ ಒಳಬರದಂತೆ ಕಾವಲು ನಿಂತರು. ಎಷ್ಟಂದರೂ ಶತಮಾನಗಳಿಂದ ಒಟ್ಟಿಗೆ ಬದುಕಿದ ರೂಢಿಯಾದ ಜನ. ಅವರಿಗೆ ಇದ್ಯಾವ ಹೊಡೆದಾಟವೂ ಬೇಕಾಗಿರಲಿಲ್ಲ. ಹಾಗಾಗಿ ಅಲ್ಲಿ ಹೆಚ್ಚಿನ ಯಾವ ಹಾನಿಯೂ ಆಗಲಿಲ್ಲ.
ಮೂರನೇ ದಿನ.
ಗಲಭೆ ನಿಲ್ಲುವ ಇಲ್ಲವೇ ಕಡಿಮೆಯಾಗುವ ಯಾವುದೇ ಸೂಚನೆ ಕಂಡುಬರಲಿಲ್ಲ. ಲಾಟೀಚಾರ್ಜು, ಅಶ್ರುವಾಯು, ಗಾಳಿಯಲ್ಲಿ ಗುಂಡು ಎಲ್ಲವೂ ಆಯಿತು. ಜಿಲ್ಲಾ ಕೇಂದ್ರದಿಂದ ಹೆಚ್ಚಿನ ಪೋಲೀಸರು ಜಾಲರಿ ವ್ಯಾನಿನಲ್ಲಿ ಬಂದಿಳಿದರು. ಹೆಲ್ಮೆಟ್ ಹಾಕಿಕೊಂಡು, ಕೋಲು ಹಿಡಿದುಕೊಂಡು ತಿರುಗಿದರು. ಆದರೆ ಅಷ್ಟರಲ್ಲಿ ನದಿಯಾಚೆಗಿನ ಹೊಸನಗರಕ್ಕೂ ಗಲಾಟೆ ಹಬ್ಬಿತ್ತು. ಜನ್ನಾಪುರ, ಸಿದ್ದಾಪುರ, ಜಿಂಕ್ ಲೈನು, ಮಿಲ್ಟ್ರಿಕ್ಯಾಂಪ್, ಮಾರಮ್ಮನ ಗುಡಿ, ಹುತ್ತಾಕಾಲೋನಿ, ನ್ಯೂಕಾಲೋನಿ ಎಲ್ಲಾ ಕಡೆಗಳಲ್ಲಿ ಲೂಟಿ ಶುರುವಾಗಿತ್ತು. ಇಷ್ಟಾದರೂ ಹಿಂದೂಗಳಾಗಲೀ ಮುಸ್ಲೀಮರಾಗಲೀ ಹೆಂಗಸರ ಮೈ ಮುಟ್ಟಿರಲಿಲ್ಲವಂತೆ. ನಿಜವೋ ಸುಳ್ಳೋ ಆದರೆ ಅವತ್ತು ಮಾತ್ರ ಮುಸ್ಲಿಮರು ಎರಡು ಹಿಂದೂ ಯುವತಿಯರನ್ನು ರೇಪ್ ಮಾಡಿದರಂತೆ ಎಂಬ ಸುದ್ದಿ ಊರೆಲ್ಲೆಲ್ಲಾ ಹರಡಿತು. ಬೆಂಕಿಗೆ ಪೆಟ್ರೋಲ್ ಸುರಿದಂತಾಯಿತು. ಇಲ್ಲಿವರೆಗೆ ಅಂಬೇಡ್ಕರ್ ಕಾಲೋನಿಯ ಹುಡುಗರು ಗಲಾಟೆಗೆ ಬಂದಿರಲಿಲ್ಲವಂತೆ. ಕೊನೆಗೆ ಯಾವನೋ ಒಬ್ಬ ತನ್ನ ಪ್ಯಾಂಟು ಬಿಚ್ಚಿ ನಿಂತು "ಅಲ್ಲಿ ಅವರು ನಮ್ಮ ಹೆಣ್ಣುಮಕ್ಕಳನ್ನ ಮುಟ್ಟುತ್ತಾ ಇದ್ದಾರೆ, ನಿಮಗೆಲ್ಲಾ ಇದು ಇಲ್ಲವೇನ್ರೋ, ಬನ್ರೋ"ಎಂದು ಹೀಯಾಳಿಸಿದನಂತೆ. ಕೆರಳಿದ ಅವರು ಪ್ರಚಂಡ ಪಡೆಯೊಡನೆ ಫೀಲ್ಡಿಗಿಳಿದು ಬಿಟ್ಟರು. ಗೋಲಿಬಾರಿನ ಆದೇಶ ಹೊರಬಿತ್ತು. ಎಂದಿನಂತೆ ಇಬ್ಬರು ಅಮಾಯಕರು ಬಲಿಯಾದರು. ರೈಲ್ವೆ ಹಳಿ ಹತ್ತಿರದ ಮಸೀದಿಯೊಂದಕ್ಕೆ ನುಗ್ಗಿದ ಜನರು ಅದರ ಮೇಲಿದ್ದ ಹಸಿರು ಧ್ವಜಗಳನ್ನು ಕಿತ್ತೊಗೆದು ತ್ರಿವರ್ಣ ಧ್ವಜ ಹಾರಿಸಿದರು!
ಇತ್ತ ಮನೆಗಳಲ್ಲಿ ಹಾಲು ಕೂಡ ಇಲ್ಲದ ಪರಿಸ್ಥಿತಿ ಉಂಟಾಗಿ ಮಕ್ಕಳು ಅಳಲು ಶುರುವಾಗುತ್ತಿದ್ದಂತೇ ನಿಷೇದಾಜ್ಞೆಯೂ ಜಾರಿಯಾಗಿತ್ತು. ನೀಲಿ ಮಿಲಿಟರಿ ಯೂನಿಫಾರ್ಮಿನ ರಾಪಿಡ್ ಆಕ್ಷನ್ ಫೋರ್ಸಿನವರು ಬಂದರು. ನೀಟಾಗಿ ಒಂದು ಪಥಸಂಚಲನ ನೆಡೆಸಿದರು. ಪೋಲೀಸರು ಜೀಪಿನಲ್ಲಿ ನಿಷೇದಾಜ್ಞೆ ಬಗ್ಗೆ ಎಚ್ಚರಿಸುತ್ತಾ ತಿರುಗಿದರು. ನಂತರ ಅಲ್ಲಿ ರಾರಾಜಿಸಿದ್ದು ಹಿಂದೂಗಳೂ ಅಲ್ಲ ಮುಸ್ಲಿಮರೂ ಅಲ್ಲ. ಪೋಲೀಸರು ಮತ್ತು ಆರ್. ಎ. ಎಫ್ ನವರು. ಊರಿನ ತುಂಬಾ ಚದುರಿ ಗಲಭೆಕೋರರ ಮೈ ನೀಲಿಗಟ್ಟಿಸಿದರು. ಕೆಲವೊಂದು ಏರಿಯಾಗಳ ತಲೆಬಾಗಿಲಲ್ಲಿ ನಿಂತು ಗುಂಪು ಒಳಗೆ ಅಥವಾ ಹೊರಗೆ ಹೋಗದಂತೆ ದಿಗ್ಭಂಧನ ಹಾಕಿದರು. ಸೂಕ್ಷಪ್ರದೇಶಗಳನ್ನೆಲ್ಲಾ ವಶಕ್ಕೆ ತೆಗೆದುಕೊಂಡರು. ನಿಧಾನಕ್ಕೆ ಸಂಜೆಯ ಹೊತ್ತಿಗೆ ಬಹುಮಟ್ಟಿಗೆ ನಿಯಂತ್ರಣಕ್ಕೆ ಬಂತು ಗಲಭೆ. ನಿಷೇದಾಜ್ಞೆಯಂತೂ ಹೇಗೂ ಇತ್ತು. ರಾತ್ರಿಯ ಹೊತ್ತಿಗೆ ರಸ್ತೆಗಳು ನಿರ್ಜನವಾಗುವಂತೆ ಮಾಡಿಬಿಟ್ಟರು. ನಿಜ ಹೇಳಬೇಕೆಂದರೆ ಇನ್ನು ಇಡೀ ಊರಿನಲ್ಲಿ ಸುಡಲು, ಒಡೆಯಲು ಮುಸ್ಲಿಮರ ಯಾವುದೇ ಅಂಗಡಿಯಾಗಲೀ ಇರಲಿಲ್ಲ! ಅವತ್ತು ರಾತ್ರಿಯ ದಿಲ್ಲಿ ದೂರದರ್ಶನದ ಇಂಗ್ಲೀಷ್ ನ್ಯೂಸಿನಲ್ಲಿ ನಮ್ಮ ಊರನ್ನು ಗಲಭೆ ಪೀಡಿತ ಪ್ರದೇಶವೆಂದು ಕೆಂಪು ಗುರುತುಹಾಕಿ ತೋರಿಸಿದರು.
ನಾಲ್ಕನೆಯ ದಿನ.
ಎರಡ್ಮೂರು ದಿನಗಳಿಂದ ಅಗತ್ಯ ವಸ್ತುಗಳ ಪೂರೈಕೆ ನಿಂತುಹೋಗಿತ್ತು. ಲಾರಿ ಬಸ್ಸುಗಳನ್ನು ಹೊರಗಿನ ಬೈಪಾಸು ರಸ್ತೆಯಿಂದಲೇ ಕಳಿಸಲಾಗುತ್ತಿತ್ತು. ಈ ದಿನ ಬೆಳಗ್ಗೆ ಹಾಲು ಇನ್ನಿತರ ಅಗತ್ಯ ವಸ್ತುಗಳನ್ನು ಕೊಳ್ಳಲು ಒಂದೆರಡು ಗಂಟೆ ಕಾಲಾವಕಾಶ ಕೊಟ್ಟರು. ಅದಾದ ನಂತರ ಮತ್ತೆ ನಿಷೇದಾಜ್ಞೆ. ಯಾರೂ ಮನೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಇದೇ ವಿಷಯವಾಗಿ ಕೋರ್ಟಿಗೆ ಹೊರಟಿದ್ದ ಸರ್ಕಾರಿ ವಕೀಲರನ್ನು ಕಾಗದ ಪತ್ರಗಳನ್ನು ತೋರಿಸಿದರೂ ಕೂಡ ಆರ್. ಎ. ಎಫ್ ನವರು ಕೆಡವಿ ಬಡಿದರಂತೆ ! ಮಕ್ಕಳು ಮನೆಯೊಳಗೆ ಕೂರಲಾಗದೇ ಆಡಲು ಹೊರಬಂದು ಪೋಲೀಸ್ ಜೀಪಿನ ಸದ್ದು ಕೇಳಿದ ಕೂಡಲೇ ಒಳಗೆ ಓಡುತ್ತಿದ್ದರು. ಅವತ್ತು ಅಲ್ಲಲ್ಲಿ ಸಣ್ಣ ಸಣ್ಣ ಘಟನೆಗಳನ್ನು ಬಿಟ್ಟರೆ ಬಹುತೇಕ ಶಾಂತವಾಗಿತ್ತು ಊರು.
ಐದನೇ ದಿನ ಶುರುವಾಗಿತ್ತು. ಪೂರ್ತಿ ತಣ್ಣಗಾಗಿತ್ತು ಊರು. ನಿಷೇದಾಜ್ಞೆ ತೆರವಾಗಿ ಸೆಕ್ಷನ್ ೧೪೪ ಹಾಕಲಾಯಿತು. ಅಂಗಡಿ ಬಾಗಿಲುಗಳನ್ನು ತೆಗೆಯಲಾಯಿತು. ನಂತರ ಸೆಕ್ಷನ್ ೧೪೪ ಕೂಡ ತೆಗೆದುಹಾಕಲಾಗಿ ಎಲ್ಲಾ ಶಾಲೆ, ಕಾಲೇಜು, ಕಛೇರಿ, ಬ್ಯಾಂಕುಗಳು ಶುರುವಾದವು. ಸುಟ್ಟು ಕರಕಲಾದ ಅಂಗಡಿಗಳನ್ನು, ಒಡೆದುಹಾಕಿದ ಮನೆಗಳನ್ನು ಎಲ್ಲರೂ ಸೇರಿಯೇ ಸ್ವಚ್ಛ ಮಾಡುತ್ತಿದ್ದ ನೋಟ ಊರಿನಲ್ಲೆಲ್ಲಾ ಕಂಡುಬಂತು. ನಮ್ಮ ತರಗತಿಯಲ್ಲಿ ರೆಹಮಾನ್ ಎಂಬ ಹುಡುಗನೊಬ್ಬನಿದ್ದ. ಅವನ ಮನೆಯನ್ನೂ, ಅಂಗಡಿಯನ್ನೂ ಸುಟ್ಟುಹಾಕಿದ್ದರಂತೆ. ಅವರು ಊರು ಬಿಟ್ಟು ಯಾವುದೋ ಹಳ್ಳಿಗೆ ಹೋಗಿದ್ದರಂತೆ. ಒಂದು ವಾರದ ನಂತರ ಶಾಲೆಗೆ ಬಂದ. ಸಂಜೆ ವಾಕಿಂಗಿಗೆ ಹೊರಟಿದ್ದ ಹಿಂದಿನ ಮನೆಯ ತಾತ ದೊಡ್ಡ ಸಾಧನೆಯೆಂಬಂತೆ ಹೇಳುತ್ತಿದ್ದರು. "೮ ವರ್ಷದ ಹಿಂದೆ ಇದೇ ರೀತಿ ಗಲಾಟೆಯಾಗಿತ್ತು, ಆವಾಗ ಹಿಂದೂಗಳು ಹೊಡೆಸಿಕೊಂಡಿದ್ದರು, ಈ ಬಾರಿ ಸೇಡು ತೀರಿಸಿಕೊಂಡರು ಬಿಡಿ"!!.
ನಂತರದ ದಿನಗಳಲ್ಲಿ ಮತ್ತೆ ಮಸೀದಿಗಳಲ್ಲಿ 'ಅಲ್ಲಾ ಹೋ ಅಕ್ಬರ್' ಕೇಳಿಸಿತು. ಮೊದಲೇ ಹತ್ತಿರವಾಗದ ಮನಸುಗಳನ್ನು ಇನ್ನೂ ದೂರ ಮಾಡಿದ ಹೀಗೊಂದು ಕೋಮುಗಲಭೆ ನಮ್ಮೂರಿನ ಇತಿಹಾಸದಲ್ಲಿ ದಾಖಲಾಯಿತು.
**********
ನಾಳೆ ಈದ್ ಮಿಲಾದ್ ಹಬ್ಬವಂತೆ. ಹೋಳಿ, ಗುಡ್ ಫ್ರೈಡೆಯೂ ಕೂಡ.
ಶುಭಾಶಯಗಳು ಎಲ್ಲರಿಗೂ ;)
12 ಕಾಮೆಂಟ್ಗಳು:
ವಿ...
ಭಾಂಧವ್ಯಗಳು ಇರುವ ತನಕ ವೈಮನಸ್ಯ ಮುಂದುವರೆಯುತ್ತಲೇ ಇರುತ್ತದೆ ಅನಿಸಿಬಿಡುತ್ತದೆ. ಇವೆರಡೂ ಇಟ್ಟುಕೊಳ್ಳಲೂ ಆಗದ ಬಿಡಲೂ ಆಗದ ನಂಟುಗಳು.
ಲೇಖನ ಓದಿ ಕಣ್ಣಂಚು ಒದ್ದೆ. ರೆಪ್ಪೆ ಬಡಿದ ತಕ್ಷಣ ಆರಿತಾದರೂ ಮನ ಭಾರವಾಗಿದ್ದು ಹಾಗೆಯೇ ಇದೆ ಏನೂ ಮಾಡಲಾಗದೆ, ಇನ್ನೇನನ್ನೋ ಯೋಚಿಸುತ್ತ.
ಘಟನೆಯೊಂದನ್ನು ಸಂಪೂರ್ಣ ಹೆಣೆದು, ಚಂದದ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು.
ಈದ್- ಮಿಲಾದ್, ಹೋಳಿ, ಗುಡ್ ಫ್ರೈಡೆಗಳಿಗೆ ನಿನಗೂ ಶುಭಾಶಯ.
vikki, svalpa prachOdanakaari annustaa ide ee lekhana. idu nanna anisike.
chennaagi bardidEya, aadre kelavu kaDe chooru sensaar maaDabahudittu ansutte.
shankra
ವಿಕಾಸ,
ಗಂಭೀರ ಲೇಖನ. ನಂಗೆ ಕೋಮುಗಲಭೆಗಳೆಂದರೆ ವಿಪರೀತ ಹಿಂಸೆ, ಭಯ ಅನ್ನಿಸತ್ತೆ. ಅಸಲಾಗಿ ಅವುಗಳ ಹಿಂದೆ ಅಂಥ ದೊಡ್ಡ ವಿಷಯವೇ ಇರೋದಿಲ್ಲ. ಯಾವುದೊ ಸಿಲ್ಲಿ ಕಾರಣಕ್ಕೆ ಶುರುವಾಗಿ ಯಾರೊ ಪಾಪದವರ ಮನೆಗಳನ್ನ ಮಸಣ ಮಾಡಿ ತಾಂಡವ ಮಾಡುತ್ವೆ ಈ ಗಲಭೆ, ಹಿಂಸಾಚಾರಗಳು. ಎಲ್ಲ ನಮ್ಮ ರಾಜಕೀಯದ ಪ್ರಾಡಕ್ಟು. ಜತೆಗೆ ಆಡಿ ಬೆಳೆದವರನ್ನೆ ಗುಮಾನಿಯಿಂದ ನೋಡುವ ಪರಿಸ್ಥಿತಿ ತಂದಿಟ್ಟಿದೆ ಈ ವೈಮನಸ್ಯ. ಎತ್ತಕಡೆ ಹೋಗ್ತಾ ಇದೀವೊ ತಿಳೀದು. ತುಂಬ ಪ್ರಸ್ತುತವಾದ ಬ್ಯಾಲೆನ್ಸ್ಡ್ ಬರಹ.
-ಟೀನಾ.
ವಿಕಾಸ್ ಅವರೆ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳು…ಜೊತೆಗೆ
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !
ಶಾಂತಲಕ್ಕ, thanQ
ಶಂಕ್ರಣ್ಣ, ಈಗ್ಲೆ ಪತ್ರಿಕೆ ವರದಿ ಇದ್ದ ಹಾಗೆ ಇದೆ. ಇನ್ನೂ ಸೆನ್ಸಾರ್ ಮಾಡಿಬಿಟ್ರೆ ಸಪ್ಪೆ ಸಪ್ಪೆ ಆಗೋಗತ್ತೆನೋ ಅಂತ ಹಾಗೆ ಬಿಟ್ಟೆ. anyhow thanQ for the opinion.
ಟೀನಾ ಮೇಡಂ, ಹೌದು, ಸರಿಯಾದ ಕಾರಣವೇ ಇಲ್ಲದೆ/ಗೊತ್ತಿಲ್ಲದೇ ಆದ ಅಧ್ವಾನಕ್ಕೊಂದು ಉದಾಹರಣೆ ಇದು. thanX
ಒ.ಕೆ. ರವಿ ಭಾಯ್. thanQ
ವಿಕಾಸ,
ಚೊಲೋ ಬರದ್ದೆ. ನಮ್ ಮಂಗ್ಳೂರಲ್ಲಿ ಎಂತಾರೊ ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಮಿನಿಮಮ್ ಎರಡು ಹೆಣ ಬಿತ್ತು ಅಂತ್ಲೇ ಅರ್ಥ..
ಅಲ್ದೇ ಈ ಡಿಸೆಂಬರ್ ರಾಜಕೀಯ ಅನ್ನೋದು, ಇಂತಹಾ ಗಲಾಟೆಗಳನ್ನು ಮತ್ತೆ ಮತ್ತೆ ಜೀವಂತವಾಗಿಸುತ್ತವೆ!
Vikas,
Chennagi Bardiddiya..
aaga nadeda gatane Company Area dalli idda namage Mooru dina raja kotta aage aagittu.. Goli, Kallu Kuta kuta aadta kaleda aa dinagalu nenapige bantu. Otnalli Bhadravati itihaasadalli aada ondu Karaala gatane. Manushya Manushyarannu Hege bali kodabahudu annodakke ondu Udaarane aagittu. Yendendu Mareyalaarada kshanagalu chennagi pratibimbisiddiya..
@ನಿಧಿ..
ಹ್ಮ್.. ಆದ್ರೆ ನಮ್ಮೂರಲ್ಲಿ ಆಗ ಗಲಾಟೆ ಮಾಡ್ಸೋರಾಗ್ಲೀ, ಅವರ ರಕ್ಷಕರಂತೆ ಪೋಸು ಕೊಡೋರಾಗ್ಲೀ ಯಾರೂ ಇರಲಿಲ್ಲ. ಆದರೂ ಆಯಿತು ಹೀಗೆ.
@ಚಂದ್ರು..
ಹೌದು. ಹೇಗಿತ್ತಲ್ವಾ ಆ ಅನುಭವ!!
thanX
ವಿಕಾಸರೇ,
ನಿಮ್ಮ ಈ ಲೇಖನ ಓದಿರಲಿಲ್ಲ. ಹೌದು ರೀ, ಈ ಗಲಭೆಗೆ ನಾನೂ ಸಾಕ್ಷ್ಯವಾಗಿದ್ದೇನೆ. ಈ ಏರಿಯಾದಲ್ಲೆಲ್ಲಾ ಓಡಾಡಿದ್ದೇನೆ. ಅದರಲ್ಲೂ ಇಡೀ ಘಟನೆಯೇ ಕಣ್ಣಿನ ಮುಂದೆ ಬಂದಂತಾಯಿತು. ಅನ್ವರ್ ಕಾಲೋನಿ ವಾಗೀಶ್ ಟಾಕೀಸ್ ನಲ್ಲಿ ರವಿಚಂದ್ರನ್ ಫಿಲ್ಮ್ ನಡೆಯುತ್ತಿದ್ದುದರ ನೆನಪು. ಸಂಜೆ ಶೋ ಇದ್ದಕಿದ್ದಂತೆ ನಿಲ್ಲಿಸಿ ಗಲಾಟೆ ಶುರುವಾಯಿತು. ಹೊಳೆಹೊನ್ನೂರು ರಸ್ತೆಯಲ್ಲಿ ಹೋಗುತ್ತಿದ್ದ ನನಗೆ ಆ ಸುದ್ದಿ ಕೇಳಿ ಬೆಚ್ಚಿ ಹೋಗಿ ಮನೆ ಸೇರಿಕೊಂಡಿದ್ದೆ. ಪೊಲೀಸರು ಇಡೀ ಊರಿನಲ್ಲಿ ಪಥ ಸಂಚಲನ ಮಾಡಿದ್ದರು. ಆದರೂ ಪುಕಾರುಗಳಿಗೆ ಬರವೇ ಇರಲಿಲ್ಲ. ನಮ್ಮ ಸಂಬಂಧಿಗಳ ಮದುವೆಯೊಂದಕ್ಕೆ ಹೆಬ್ರಿಗೆ ಹೋಗಲು ಹೋದ ನಮ್ಮನ್ನು ಗುಂಪೊಂದು ತಡೆದು ಕಾರಿಗೆ ಬೆಂಕಿ ಹಾಕಲು ಬಂದಿದ್ದರು. ಆಮೇಲೆ ಕಾರಣ ಹೇಳಿ ಮನವರಿಕೆ ಮಾಡುವಷ್ಟರಲ್ಲಿ ಸುಸ್ತಾಗಿದ್ದೆವು. ನಂತರ ಪೊಲೀಸರ ಸಹಾಯವನ್ನೂ ಪಡೆದು, ಗುಂಪಿನ ಮಾನವೀಯತೆಯ ಕಡವನ್ನೂ ಪಡೆದು ಬಚಾವಾದೆವು. ಕೋಮು ಗಲಭೆ ಎಂದರೆ ಟೀನಾ ಹೇಳಿದಂತೆ ನಿಜವಾಗಲೂ ದೊಡ್ಡ ಹಿಂಸೆಯೇ, ಹೇಸಿಗೆ ಹುಟ್ಟಿಸುವಷ್ಟು.
ನಾವಡ
ವಿಕಾಸ್ರವರೇ,
ನಿಮ್ಮ ಲೇಖನ ಹಿಂದೂ ಮುಸ್ಲಿಂ ಗಲಭೆಗಳನ್ನ, ಅದರ ಒಳ ಹೊರಗುಗಳನ್ನ ತಕ್ಕಮಟ್ಟಿಗೆ ಹೊರಹಾಕಿದೆ. ಧರ್ಮೋನ್ಮಾದ ಅನ್ನೋದು ಯಾವ ಸ್ಥಿತಿಗೆ ಕೊಂಡೊಯ್ಯುತ್ತದೆ ಅನ್ನೋದನ್ನ ಈ ಲೇಖನ ಪ್ರತಿಬಿಂಬಿಸುತ್ತದೆ. ಕೋಮು ಗಲಭೆ ಅಂದರೆ, ನನಗೆ ನಮ್ಮ ದಾವಣಗೆರೆಯಲ್ಲಿ ನೆಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬೃಹತ್ ಗಲಭೆ. ಅದೆಷ್ಟು ಕೊಲೆಗಳು ನೆಡೆದವೋ? ಅದೆಷ್ಟು ಲೂಟಿಗಳು ನೆಡೆದವೋ, ಲೂಟಿ ಅಂತಾ ಹೇಳಿ ತಾವೇ ಎಲ್ಲಾ ಖಾಲಿ ಮಾಡಿ ಪರಿಹಾರ ತೆಗೆದುಕೊಂಡವರೆಷ್ಟೋ ಒಟ್ಟಿನಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾದ ದಾವಣಗೆರೆ ಅನಾಮತ್ತು 40 ದಿನ ನಿಷೇಧಾಜ್ಞೆ, ಲಾಠಿ ಚಾರ್ಜು, ಗೋಲಿಬಾರು ಎಲ್ಲವುಗಳಿಂದ ತೀವ್ರವಾಗಿ ಬಳಲಿತು. ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದ್ವರೆಲ್ಲ ಹಸಿವಿನಿಂದ ತತ್ತರಿಸಿ ಹೋದರು. ಬರೀ ಒಂದು ದಿನ ಬಂದ್ ನೆಡೆದರೇ ಬಡವರು ತತ್ತರಿಸುತ್ತಾರೆ. ಇನ್ನು ತಿಂಗಳುಗಟ್ಟಲೇ ವ್ಯಾಪಾರ ವಹಿವಾಟು ಬಂದ್ ಆದರೆ, ಜನ ಜೀವನ ಅನ್ನೋದು ಹೇಗಿರಬಹುದು..? ಈ ಎಲ್ಲಾ ಕೋಮು ಗಲಭೆಗೆ ಕಾರಣರಾದವರು, ಕುಮ್ಮಕ್ಕು ನೀಡಿದವರು ಎಲ್ಲ ತೆರೆಮರೆಯಲ್ಲಿ ನಿಂತು ಕೆಲಸ ಸಾಧಿಸಿದರು. ತಮ್ಮ ಬೇಳೆ ಬೇಯಿಸಿಕೊಂಡರು. ಅಮಾಯಕ ಜನ ಬಲಿಯಾದರು. ಪ್ರಜ್ಞಾವಂತರು ಸಮಾಜವನ್ನ ವಿವೇಚನಾಯುಕ್ತವಾಗಿಸುವುದರ ಬಗ್ಗೆ ಜಾಗೃತಿ ಮೂಡಿಸಲಿಕ್ಕೆ ಪ್ರಯತ್ನ ಮಾಡಬೇಕಿರುವುದು ಇಂದಿನ ಕರ್ತವ್ಯ.
ಗಣೇಶ್.ಕೆ
http://www.punchline.wordpress.com/
ಅವತ್ತೆಲ್ಲೋ ಅರ್ಧಂಬರ್ಧ ಓದಿ ಬಿಟ್ಟಿದ್ದೆ. ಈಗ ಪೂರ್ತಿ ಓದಿದೆ. ಚನಾಗ್ ಬರ್ದಿದೀಯ..
ನಾವಡ, ಗಣೇಶ್, ಸುಶ್ರುತ.. ನಿಮ್ಮ ಪ್ರತಿಕ್ರಿಯೆ, ಅಭಿಪ್ರಾಯಗಳಿಗೆ thanx , thanx , thanx
ಕಾಮೆಂಟ್ ಪೋಸ್ಟ್ ಮಾಡಿ