ಭಾನುವಾರ, ಜೂನ್ 27, 2021

ಕ್ಲಬ್ ಹೌಸ್ - ಆಧುನಿಕ‌ ಅರಳಿಕಟ್ಟೆ

ನಿಮ್ಮ ಗೆಳೆಯನೊಬ್ಬ ನಿಮಗೊಂದು ಆಮಂತ್ರಣ‌ ಕೊಟ್ಟಿದ್ದಾನೆ. “ಇಲ್ಲೊಂದು ಜಾಗ ಇದೆ, ಬಹಳ‌ ಸ್ವಾರಸ್ಯವಾಗಿದೆ, ನಾನಾಗಲೇ ಇಲ್ಲಿದ್ದೇನೆ, ನೀನೂ ಬಾ” ಅಂತ. ಅದೇನೆಂದು ನೋಡಿಬಿಡೋಣ ಅಂತ ನೀವು ಹೋಗುತ್ತೀರಿ.  ಅದು ದೊಡ್ಡದೊಂದು ಕಟ್ಟಡ ಸಂಕೀರ್ಣ‌. ಪ್ರವೇಶ ಮಾಡುವಾಗ ನಿಮ್ಮ ಫೋನ್ ನಂಬರು ಹೆಸರು ಇತ್ಯಾದಿ ಕೊಟ್ಟು ನೋಂದಾಯಿಸಬೇಕಾಗುತ್ತದೆ.  ನೋಂದಾವಣೆ ಮುಗಿಸಿ ಒಳನಡೆಯುತ್ತೀರಿ.  ಒಳಗೆ ಹೋಗುತ್ತಿದ್ದಾಗ ಹಲವು ಪರಿಚಿತ ಮುಖಗಳು, ಎಷ್ಟೋ ಅಪರಿಚಿತ ಮುಖಗಳು ನಿಮ್ಮಂತೆಯೇ ಓಡಾಡುವುದನ್ನು ಕಾಣುತ್ತೀರಿ.  ಆ ಕಟ್ಟಡದ ಒಳಗೆ ಬಹಳ ಕೋಣೆಗಳಿವೆ.  ನೀವು ನಡೆಯುತ್ತಾ ಹೋದಂತೆ ಪ್ರತಿಕೋಣೆಯ ಒಳಗೂ ಏನೋ ಮಾತುಕತೆಗಳು ನಡೆಯುವುತ್ತಿರುವುದನ್ನು ಕಾಣುತ್ತೀರಿ. ಎಲ್ಲಾ ಕೋಣೆಗಳ ಬಾಗಿಲಿಗೂ ಇಲ್ಲಿ ಇಂತಹ ವಿಷಯದ ಬಗ್ಗೆ ಮಾತುಕತೆ ನಡೆಯುತ್ತಿದೆ ಅಂತ ಬೋರ್ಡ್ ಹಾಕಿದ್ದಾರೆ. ಮುಕ್ತಪ್ರವೇಶದ ಕೋಣೆಗಳ ಒಳಗೆ ಹೋದರೆ ಚರ್ಚೆ ನಡೆಯುತ್ತಿದೆ. ಒಂದಿಷ್ಟು ಜನ ಕುಳಿತು ಕೇಳುತ್ತಿದ್ದರೆ ಕೆಲವರು ವೇದಿಕೆಯಲ್ಲಿ ಮಾತಾಡುತ್ತಿದ್ದಾರೆ. ಒಂದು ಕೋಣೆಯಲ್ಲಿ ಕೆಲವೇ ಜನರಿದ್ದರೆ ಮತ್ತೊಂದರಲ್ಲಿ ನೂರಾರು ಜನರಿದ್ದಾರೆ. ಒಂದು ಕೋಣೆ ಹೊಕ್ಕು ಸ್ವಲ್ಪ ಹೊತ್ತು ಕೇಳಿ ಸಾಕೆನಿಸಿ ಹೊರಬರುತ್ತೀರಿ. ಮತ್ತೊಂದು ಕೋಣೆಯಲ್ಲಿ ನಿಮ್ಮಾಸಕ್ತಿಯ ವಿಷಯವೊಂದರೆ ಬೋರ್ಡ್ ಕಂಡು ಒಳಹೊಕ್ಕುತ್ತೀರಿ. ಅಲ್ಲಿ ಕೂತು ಕೇಳಿಸಿಕೊಳ್ಳುತ್ತೀರಿ. ನಿಮ್ಮ ಸ್ನೇಹಿತರನೇಕರು ಅಲ್ಲೇ ಇದ್ದಾರೆ.  ನಿಮಗೂ ಏನೋ ಹೇಳಬೇಕೆನಿಸುತ್ತದೆ. ಕೈ ಎತ್ತುತ್ತೀರಿ. ಆಯೋಜಕರು ವೇದಿಕೆಗೆ ಕರೆದು ಮಾತಾಡಲು ಅವಕಾಶ ಕೊಡುತ್ತಾರೆ. ಮಾತಾಡುತ್ತೀರಿ, ಪ್ರಶ್ನೆಗಳಿಗೆ ಉತ್ತರಿಸುತ್ತೀರಿ, ಚರ್ಚೆ ನಡೆಸುತ್ತೀರಿ, ಅಲ್ಲೇ ಸಮಯಕಳೆಯುತ್ತೀರಿ. ಇಡೀ ಕಟ್ಟಡವು ಇಂತದ್ದೇ ಹಲವು ಕೋಣೆಗಳಿಂದ ತುಂಬಿದೆ.  ಒಂದೇ ಆಸಕ್ತಿಯ ಜನರು ತಂಡಗಳನ್ನು ರಚಿಸಿಕೊಂಡಿದ್ದಾರೆ, ಹಲವು ವಿಷಯದ ಬಗ್ಗೆ ಕ್ಲಬ್ ಗಳನ್ನು ಮಾಡಿಕೊಂಡಿದ್ದಾರೆ. ಅವರು ಇವರ ಜಾಡು ಹಿಡಿದು ಇವರು ಅವರ ಜಾಡು ಹಿಡಿದು ಹೊರಟಿದ್ದಾರೆ‌. ಒಬ್ಬರನ್ನೊಬ್ಬರು ಹಿಂಬಾಲಿಸುತ್ತಾ ಇದ್ದಾರೆ‌. ಒಟ್ಟಾರೆ ಒಂದು ಮಾತಿನ ಕೋಣೆಗಳ ಪ್ರಪಂಚವೇ ಅಲ್ಲಿದೆ. ಇದ್ಯಾವ ಹಾಲಿವುಡ್ ಸಿನೆಮಾ ಕತೆ ಎಂದು ಯೋಚಿಸುತ್ತಿದ್ದೀರಾ? ಅಥವಾ‌ ಈ ಜಾಗ ಜಗತ್ತಿನಲ್ಲಿ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಅಂತಹ ಕಟ್ಟವಾಗಲೀ ಜಾಗವಾಗಲೀ ಎಲ್ಲೂ ಇಲ್ಲ. ಆದರೆ ಇಂತಹದೊಂದು ಪರಿಕಲ್ಪನೆ ಈಗಾಗಲೇ ಸಾಕಾರಗೊಂಡಿದೆ. ಇದು ವಾಸ್ತವ ಜಗತ್ತಿನದ್ದೇ ಆದರೂ  ರೂಪುಗೊಂಡಿರುವುದು ಡಿಜಿಟಲ್ ರೂಪದಲ್ಲಿ! ನಿಮ್ಮ ಸ್ಮಾರ್ಟ್ ಫೋನಿನಲ್ಲೇ ಇಂತಹ ಮಾತಿನ ಕ್ಲಬ್ ಗಳ ಜಗತ್ತನ್ನು ನಿಮ್ಮ ಅಂಗೈಗೆ ತಂದಿಟ್ಟಿರುವುದು ‘ಕ್ಲಬ್ ಹೌಸ್’ ಎಂಬ‌ ಒಂದು ಚಿಕ್ಕ ಆ‌ಪ್!

ಕ್ಲಬ್ ಹೌಸೆಂಬ ‘ಕ್ಲಬ್ಬಿಗರ’ ತಾಣ:

ಸಾಮಾಜಿಕ ಜಾಲತಾಣಗಳ ಹೊಸ ಹೊಸ‌ ಮಾದರಿಗಳ ಪ್ರಯತ್ನದಲ್ಲಿ ಮೂಡಿಬಂದಿರುವ ಈ ಕ್ಲಬ್ ಹೌಸ್ ಕೂಡ ಸಾಮಾಜಿಕ ಜಾಲತಾಣದ ಒಂದು ರೂಪ. ಆದರೆ ಇಲ್ಲಿ ಬರಹಗಳ ಅಗತ್ಯವಿಲ್ಲ, ವೀಡಿಯೋಗಳ ಬಳಕೆಯಿಲ್ಲ. ಇದು ಆಡಿಯೊ ಡ್ರಾಪ್ ಇನ್ ತಾಣ‌. ಇಲ್ಲಿ ದನಿಗಳಿಗಷ್ಟೇ ಅವಕಾಶ. ಲೈವ್ ಮಾತುಕತೆಗಳು, ಗೋಷ್ಠಿಗಳು, ಚರ್ಚೆಗಳು, ತರಬೇತಿಗಳು, ಭಾಷಣಗಳು, ಹರಟೆಗಳು ಮುಂತಾದ ಎಲ್ಲದಕ್ಕೂ ಇದು ವೇದಿಕೆ. ಮೂಲದಲ್ಲಿ ಪಾಡ್ ಕಾಸ್ಟ್ ಗಳಿಗೆಂದು ರೂಪಿತವಾಗಿದ್ದ ಈ ಆಪ್ ಮರುವಿನ್ಯಾಸಗೊಂಡು ಮಾರ್ಚ್ 2020ರಲ್ಲಿ ಆಪಲ್ ಬಳಕೆದಾರರಿಗೆ ಬಿಡುಗಡೆಯಾಗಿತ್ತು. ಈ ಮೇ ತಿಂಗಳ ಕೊನೆಯಲ್ಲಿ ಆಂಡ್ರಾಯ್ಡ್ ಫೋನುಗಳಿಗೂ ಬಿಡುಗಡೆಯಾಗಿದ್ದೇ ತಡ, ಅಲ್ಪ ಸಮಯದಲ್ಲಿ ಜನಪ್ರಿಯವಾಗಿ ವಿಶ್ವದಾದ್ಯಂತ ಜನರನ್ನು ಸೆಳೆದು ಸಾಮಾಜಿಕ ಜಾಲತಾಣಗಳ ಪಟ್ಟಿಗೆ ಒಂದು ವಿಶಿಷ್ಟ ಸೇರ್ಪಡೆಯಾಗಿದೆ‌. ಆಡಿಯೋ-ವೀಡಿಯೋ ಕರೆಗಳಿಗೆ, ಸಭೆಗಳಿಗೆ ಈಗಾಗಲೇ ಇರುವ ಹಲವು ಆಪ್ ಗಳಿಗಿಂತಲೂ ಇದು ಅತಿವೇಗದಲ್ಲಿ ಗಳಿಸಿಕೊಳ್ಳುತ್ತಿರುವ ಜನಪ್ರಿಯತೆಯನ್ನು ಕಂಡ ಇತರ ಸಾಮಾಜಿಕ ಜಾಲತಾಣಗಳ ಕಂಪನಿಗಳು ತಾವೂ ಇಂತದ್ದೇ ಸೇವೆ ಒದಗಿಸಲು ಬೇಕಾದ ಸಿದ್ಧತೆ ಆರಂಭಿಸಿವೆ. 



ಅಂತರಜಾಲದ
ನಿರಂತರ ಸಾಧ್ಯತೆಗಳ ಫಲವಾದ ಈ ಕ್ಲಬ್ ಹೌಸ್  ಈಗಾಗಲೇ ವೈವಿಧ್ಯಮಯ ಚಾಟ್ ರೂಮ್ ಗಳ ದೊಡ್ಡತಾಣವಾಗುತ್ತಲಿದೆ. ಸಮಯಮಿತಿಯಿಲ್ಲದೇ, ವಿಷಯಮಿತಿಯೂ ಇಲ್ಲದೇ ನೇರ ಮಾತುಕತೆಗಳನ್ನು ನಡೆಸಬಹುದು. ನಿಮ್ಮ ಅಂಗಳವು ಮುಕ್ತವಾಗಿದ್ದಲ್ಲಿ ಯಾರುಬೇಕಾದರೂ ಬಂದು ಕೂತು ನಿಮ್ಮ ಮಾತು ಕೇಳಿಸಿಕೊಳ್ಳಬಹುದು, ಪರಸ್ಪರ ಮಾತಾಡಬಹುದು. ಗಂಟೆಗಟ್ಟಲೇ ಕಳೆಯಬಹುದು. ಮಾತುಕತೆ ಚರ್ಚೆಗಳನ್ನು ನಿರ್ವಾಹಕರು ಚಂದವಾಗಿ ನಡೆಸಬಹುದು. ಕೇಳುಗರಿದ್ದಲ್ಲಿ ಮಾತಿನ ಮಲ್ಲರಿಗಂತೂ ಹಬ್ಬ. ರಾಜಕೀಯ ಚರ್ಚೆಯಿಂದ ಹಿಡಿದು ಧಾರ್ಮಿಕ ಪ್ರವಚನಗಳವರೆಗೆ ಎಲ್ಲದಕ್ಕೂ ವೇದಿಕೆಯಾಗಿಸಬಹುದಾದ ಈ ತಾಣದಲ್ಲಿ ಈಗಾಗಲೇ ನೂರಾರು‌ ಸಾವಿರಾರು ಕ್ಲಬ್ ಗಳು, ತಂಡಗಳು ಇವೆ. ಇಲ್ಲಿ ‘ಅರಳಿಕಟ್ಟೆ’ಯೂ ಇದೆ, ‘ಅಡ್ಡಕಸುಬಿಗಳ ಅಡ್ಡ’ವೂ ಇದೆ. ಒಂದು ಕ್ಲಬ್ಬಲ್ಲಿ ಹಂಸಲೇಖ ಸಂಗೀತಸಾಹಿತ್ಯದ ಅದ್ಭುತ ಮಾತುಕತೆಯೂ ನಡೆಯುತ್ತಿದ್ದರೆ ಮತ್ಯಾವುದೋ ಕ್ಲಬ್ಬಲ್ಲಿ ಮಂಗಳನ ಅಂಗಳದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ! ನೀವೇ ಒಂದು ಹೊಸ ಚಾಟ್ ರೂಮನ್ನೋ ಹೊಸ ಕ್ಲಬ್ಬನ್ನೋ ರಚಿಸಿ ಮಾತುಕತೆ ಶುರುಮಾಡಿಬಿಡಬಹುದು. ನಿಮ್ಮ ಪರಿಚಿತರದ್ದೇ ಒಂದು ಗುಂಪನ್ನು ಸೇರಿಸಿಕೊಂಡು ಖಾಸಗಿ ಮಾತುಕತೆಯನ್ನೂ ನಡೆಸಬಹುದು. ತೆರೆದ ಮತ್ತು ಮುಚ್ಚಿದ ಚಾಟ್ ರೂಂಗಳನ್ನು ಬಳಸಿಕೊಂಡು ನಿಗದಿತ ದಿನದಲ್ಲಿ ನಿಗದಿತ ಸಮಯಕ್ಕೆ ಇವೆಂಟುಗಳನ್ನೂ ಸಹ ಯೋಜಿಸಿಡಬಹುದು. ಒಂದು ವಿಷಯಕ್ಕೆ ಸಂಬಂಧಿಸಿದ ಕ್ಲಬ್ ಒಂದನ್ನು ರಚಿಸಿಕೊಂಡು ಅದರಲ್ಲಿ ಜನರನ್ನು ಸೇರಿಸಿಕೊಂಡು ಸಮಾನಾಸಕ್ತಿಯ ವಿಷಯಗಳ ಚರ್ಚೆ ನಡೆಸಬಹುದು. ಒದಗಿಬಂದ ಈ ಹೊಸವೇದಿಕೆಯ ಅವಕಾಶಗಳನ್ನು ಜನರು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆಂದರೆ ಈಗಾಗಲೇ ಕ್ಲಬ್ ಹೌಸಲ್ಲಿ ತರಗತಿಗಳು, ಪಾಠಗಳು, ಸಂಗೀತ ಗೋಷ್ಟಿಗಳು,  ದನಿಸಾಧ್ಯತೆಗಳ ವಿಶಿಷ್ಟ ಕಾರ್ಯಕ್ರಮಗಳು ಹುರುಪಿನಿಂದ ನಡೆಯುತ್ತಿವೆ. ನಿಮ್ಮಲ್ಲಿ ಮಾತಾಡುವ ಕಲೆಯಿದೆ, ವಿಷಯ ಪರಿಣಿತಿ ಇದೆ, ಅದನ್ನು ಜನರ ಮುಂದಿಡಲು ಗೊತ್ತಿದೆ ಅಂತಾದಲ್ಲಿ ನಿಮ್ಮ ಕೇಳುಗವರ್ಗಕ್ಕೆ ಕೊರತೆ ಇಲ್ಲ. ಬರಹರೂಪದಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಿಸಲಾಗದ ವಿಷಯಗಳನ್ನು ನೇರಮಾತುಗಳ ಮೂಲಕ ತೆರೆದಿಡುವ ಅವಕಾಶ ಇಲ್ಲಿದೆ.

ಇಷ್ಟು ಮುಕ್ತ ಸೌಲಭ್ಯಗಳಿರುವಾಗ ಇದರಿಂದ ಕೆಡುಕು ಇಲ್ಲದಿದೆಯೆ? ಖಂಡಿತ ಇದೆ. ಮಾತುಕತೆ ಅಂದಮೇಲೆ ಅಲ್ಲಿ ವಾದವಿವಾದಗಳಾಗುವುದು, ಕೆಸರೆರೆಚಾಟಗಳು ಸಾಮಾನ್ಯ. ಅದು ವಿಪರೀತಕ್ಕೆ ಹೋಗುವುದೂ ಇದೆ. ಇದು ಲೈವ್ ಮಾತುಕತೆಯಾದ್ದರಿಂದ ಇದರ ಆಡಿಯೊಗಳು ದಾಖಲಾಗಿ ಉಳಿಯುವುದಿಲ್ಲ. ಮಾತುಗಳಿಗೆ, ಪದಬಳಕೆಗಳಿಗೆ ಯಾವ ಫಿಲ್ಟರ್ ಇಲ್ಲ. ಇದಕ್ಕೆ ಬೇಕಾಗಬಹುದಾದ ಕಾನೂನುಗಳು ವಿಸ್ತೃತವಾಗಿ ರೂಪುಗೊಂಡಿಲ್ಲ. ಹಾಗಾಗಿಯೇ ಕೆಲ ದೇಶಗಳು ನಿಷೇಧ ಹೇರಲು ಹೊರಟಿವೆ. ಬೇರೆಲ್ಲಾ ಸಾಮಾಜಿಕ ಜಾಲತಾಣಗಳಂತೆ ಇದನ್ನು ಎಷ್ಟು ಸೃಜನಾತ್ಮಕವಾಗಿ, ಮಾಹಿತಿಪೂರ್ಣ, ಒಳ್ಳೆಯ ಕೆಲಸಗಳಿಗೆ ಬಳಸಬಹುದೋ, ಹಾಗೆಯೇ ಸಮಾಜದ್ರೋಹಿ, ದೇಶದ್ರೋಹಿ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ತಜ್ಞರ ಅನಿಸಿಕೆ.

ಕಷ್ಟಗಳು ನೂರಾಹನ್ನೊಂದು, ಬೇಕಾ ಮತ್ತೊಂದು?

ಇದೆಲ್ಲಾ ಕಾನೂನಾತ್ಮಕ ವಿಷಯಗಳಾದರೆ ಇಲ್ಲಿ ಮುಖ್ಯ ಸವಾಲು ನಮ್ಮ ವೈಯಕ್ತಿಕ ಸಮಯ ಮತ್ತು ತೊಡಗುವಿಕೆಯದ್ದು.. ಈಗಾಗಲೇ ಸೋಶಿಯಲ್ ನೆಟ್ವರ್ಕುಗಳ ವಿಪರೀತ ಬಳಕೆಯಿಂದ ಜನರ ಅಭಿರುಚಿ ಆಸಕ್ತಿಗಳು ಬದಲಾಗುತ್ತಿವೆ, ಹಲವರು ಹೆಚ್ಚಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದಾರೆ, ಎಷ್ಟೋ ಜನ ವ್ಯಸನಕ್ಕೆ ಒಳಗಾಗಿದ್ದಾರೆ.  ಜೀವನಕ್ಕೆ ಮತ್ತು ಜೀವಕ್ಕೆ ಅಪಾಯ ತಂದು ಕೊಂಡಿದ್ದಾರೆ. ಇಷ್ಟೆಲ್ಲಾ ಆದಮೇಲೂ ಮತ್ತೆ ಇಂಥದ್ದೊಂದರಲ್ಲಿ ತೊಡಗಬೇಕಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಾಗಿದೆ. ಫೇಸ್ಬುಕ್, ಟ್ವಿಟ್ಟರ್ ಮುಂತಾದ ತಾಣಗಳಿಗಿಂತ ಇದು ನಮ್ಮ ಹೆಚ್ಚಿನ ಸಮಯವನ್ನು ಕೊಲ್ಲಬಲ್ಲುದು ಎಂಬ ಅಭಿಪ್ರಾಯ ಈಗಾಗಲೇ ಬರುತ್ತದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ನಮಗೆ ಬೇಕಾದಷ್ಟೆ ಸಮಯವನ್ನು ಬಳಸಿಕೊಂಡು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಬರಹ ಮುಂತಾದ ರೂಪಗಳಲ್ಲಿ ತಿಳಿದುಕೊಳ್ಳಲು ಮತ್ತು ಸಂವಹನಗಳನ್ನು ಮಾಡಲು ಸೌಲಭ್ಯಗಳಿರುವಾಗ ಹೀಗೆ ಮಾತುಗಳನ್ನು ಕೇಳುತ್ತಾ ಕೂರಲು, ಹರಟೆ ಹೊಡೆಯಲು ಸಮಯ ವ್ಯರ್ಥ ಮಾಡುವುದು ಸಮಂಜಸವೇ ಎಂದು ಹಲವರು ಕೇಳುತ್ತಿದ್ದಾರೆ. ಎಚ್ಚೆತ್ತುಕೊಂಡ ಹಲವರು ಕ್ಲಬ್ ಹೌಸ್ ತೊರೆದುಬಂದಿದ್ದಾರೆ.  ಕ್ಲಬ್ಬು ಪಬ್ಬಲ್ಲಿ ಕಾಲ ಕಳೆಯುವುದಕ್ಕಿಂತ ಈ ಕ್ಲಬ್ ಹೌಸಲ್ಲಿ ಕಾಲಕಳೆಯುವುದು ಎಷ್ಟೋ ಚೆನ್ನ ಎಂಬುದೂ ಹಲವರ ಸಮರ್ಥನೆ. ಜಗತ್ತು ಈಗ ಆಯ್ಕೆಗಳ ಆಗರ. ವೇದಿಕೆಗಳ ಸಾಗರ. ಇದರಲ್ಲಿ ನಮಗೆ ಯಾವುದು ಎಷ್ಟು ಯಾಕೆ ಬೇಕು ಎಂಬ ನಿರ್ಧಾರ ನಮಗಿರಬೇಕಷ್ಟೆ. 

ನಮ್ಮ ಡಿಜಿಟಲ್ ಜಾಡು ಹಲವರ ಕೈಯಲ್ಲಿ:

ಈಗಾಗಲೇ ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಹಲವೆಡೆ ಹಲವು ರೀತಿಯಲ್ಲಿ ಅನಿವಾರ್ಯವಾಗಿ ನಾವು ಬಿಟ್ಟುಕೊಡುವ ಸಂದರ್ಭವಿರುವಾಗ ಈ ಆಡಿಯೋ ತಾಣವು ನಮ್ಮ ದನಿಯ ಮಾದರಿಯನ್ನೂ ಸಂಗ್ರಹಿಸಿ ಬಳಸಿಕೊಳ್ಳುವ ಆತಂಕ‌ ಇಲ್ಲದಿಲ್ಲ. ಕೋಟ್ಯಂತರ ಜನರ ಈ ಆಡಿಯೋ ಮಾದರಿಗಳು ಒಂದು ದೊಡ್ಡ ಡೇಟಾ ಸಂಶ್ಲೇಷಣೆಗೆ ಭಂಡಾರವಾಗಲಿದೆಯಾ ಎಂಬ ಪ್ರಶ್ನೆಯನ್ನೂ ತಜ್ಞರು ಅಲ್ಲಗಳೆಯುತ್ತಿಲ್ಲ. ಕ್ಲಬ್ ಹೌಸಿನ ಮಾತುಕತೆಗಳನ್ನು ರೆಕಾರ್ಡ್ ಮಾಡುವಂತಿಲ್ಲ, ಪಠ್ಯರೂಪದಲ್ಲಿ ತರುವಂತಿಲ್ಲ, ಮರುಪ್ರಸಾರ ಅಥವಾ ಹಂಚುವಿಕೆಗೆ ಅವಕಾಶವಿಲ್ಲ ಎಂಬ ಶರತ್ತುಗಳಿವೆ. ಆದರೆ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಅದನ್ನು ಮಾರ್ಕೆಟ್ ಮಾಡಿಕೊಳ್ಳುವ ಅವಕಾಶಗಳಂತೂ ಇದೆ. ಇಷ್ಟರಲ್ಲೇ ಪಾವತಿಸಿ ಬಳಸುವಂತಹ ಹೆಚ್ಚು ಸೌಲಭ್ಯಗಳ ಚಾಟ್ ರೂಂಗಳನ್ನೂ ಒದಗಿಸುವ ಯೋಜನೆಯನ್ನೂ ಕ್ಲಬ್ ಹೌಸ್ ಮಾಡಿರುವುದಾಗಿ ಮಾಹಿತಿಗಳಿವೆ.  ಒಟ್ಟಾರೆ ಕ್ಲಬ್ ಹೌಸಿನ ಪಾರ್ಟಿಗಳು ಜೋರಾಗಿ ಶುರುವಾಗಿರುವುದಂತೂ ಹೌದಾದರೂ ಈ ಕ್ಲಬ್ ಹೌಸ್ ಮುಂದಿನ ದಿನಗಳಲ್ಲೂ ಇದೇ ಆಕರ್ಷಣೆ ಉಳಿಸಕೊಂಡು ಬೆಳೆಯಲಿದೆಯಾ ಎಂದು ಕಾದುನೋಡಬೇಕಿದೆ.  

-ವಿಕಾಸ್ ಹೆಗಡೆ

೨೭ಜೂನ್ ೨೦೨೧ ರ 'ವಿಜಯ ಕರ್ನಾಟಕ ' ಪತ್ರಿಕೆಯ ಸಾಪ್ತಾಹಿಕ‌ಕ್ಕೆ ಬರೆದಿದ್ದು.



ಶನಿವಾರ, ಏಪ್ರಿಲ್ 17, 2021

ಅಂಕೇಗೌಡರ ಪುಸ್ತಕಮನೆಗೆ ಒಂದು ಭೇಟಿ

ಅಂಕೇಗೌಡರ ಪುಸ್ತಕಮನೆಯು ಒಂದು ದೊಡ್ಡ  ಪುಸ್ತಕಸಂಗ್ರಹ ಇರುವ  ಜಾಗ. ಶ್ರೀರಂಗಪಟ್ಟಣ -ಪಾಂಡವಪುರ ಬಳಿ ಇದೆ. ಸುಮಾರು ೧೦ ಲಕ್ಷ ಪುಸ್ತಕಗಳು ಅಲ್ಲಿ ಇವೆ ಎಂದು ಹೇಳುತ್ತಾರೆ. ಮುಖ್ಯವಾಗಿ ಕನ್ನಡ ಪುಸ್ತಕಗಳಿಂದ ಹಿಡಿದು ಹಲವು ಭಾಷೆಗಳ, ಹಲವು ಪ್ರಕಾರಗಳ ಪತ್ರಿಕೆ, ಪುಸ್ತಕ ಇತ್ಯಾದಿಗಳ ಸಂಗ್ರಹ ಇಲ್ಲಿದೆ. ಅಂಕೇಗೌಡರು ಸ್ವಯಂಆಸಕ್ತಿಯಿಂದ ಹಲವು ದಶಕಗಳಿಂದ  ಇದನ್ನು ಸಂಗ್ರಹಿಸಿಟ್ಟಿದ್ದಾರಂತೆ. ದೇಶ-ವಿದೇಶಗಳ ಹಳೆ ಹೊಸ ಪುಸ್ತಕಗಳು ಇಲ್ಲಿವೆ.

ಬಹಳ ವರ್ಷಗಳಿಂದ ಈ ಪುಸ್ತಕಮನೆಗೆ ಭೇಟಿ ಕೊಡಬೇಕೆಂಬ ಆಸೆ ನನಗೆ ಇತ್ತು. ಇತ್ತೀಚೆಗೆ ಒಂದೆರಡು ಯೂಟ್ಯೂಬ್ ವೀಡಿಯೋಗಳನ್ನು ನೋಡಿದಾಗಿಂದ ಈ ಪುಸ್ತಕಮನೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆ. ಪುಸ್ತಕಪ್ರೇಮಿ ಗೆಳೆಯರಾದ ರಾಜುಹಗ್ಗದ, ಶಶಿಕಿರಣ್ ಸಹ ಆಸಕ್ತಿ ವಹಿಸಿ ಜೊತೆಯಾದ್ದರಿಂದ  ನಾವು ಮೂವರು ಏಪ್ರಿಲ್ ೧೨ರಂದು ಶನಿವಾರ ಅಲ್ಲಿಗೆ ಭೇಟಿಕೊಟ್ಟೆವು.  ಮಂಡ್ಯದಿಂದ ಮುಂದೆ ಇನ್ನೂ ಮೈಸೂರು ಕಡೆ ಸಾಗಿ ಅನಂತರ ಪಾಂಡವಪುರ ಕಡೆ ಹೋಗುವ ಮುಖ್ಯರಸ್ತೆಯಲ್ಲಿ ರಸ್ತೆಬದಿಯಲ್ಲೇ ಈ ಪುಸ್ತಕಮನೆ ಇದೆ. ಒಂದು ಸಾಧಾರಣ ಕಟ್ಟಡದ ಎದುರಿನಲ್ಲೇ ನಮ್ಮನ್ನು ಸ್ವಾಗತಿಸಿದ್ದು  ಮೂಟೆಗಳಲ್ಲಿ ತುಂಬಿಟ್ಟಿದ್ದ ಪುಸ್ತಕರಾಶಿಗಳು. ಅದನ್ನು ಕೆಲಸಗಾರರು ಒಳಗೆ ಸಾಗಿಸುತ್ತಿದ್ದರು. ನಾವು ಪುಸ್ತಕಮನೆಯ ಒಳಗೆ ಕಾಲಿಟ್ಟಾಗ ಒಂದು ಗೋಡೌನಿನಂತಹ ದೊಡ್ಡ ಕಟ್ಟಡದ ತುಂಬೆಲ್ಲಾ ಪುಸ್ತಕಗಳು ರಾಶಿರಾಶಿಯಾಗಿ ಇಡಲ್ಪಟ್ಟಿದ್ದ  ನೋಟ ಕಂಡಿತು. ಅಷ್ಟು ದೊಡ್ಡ ಪುಸ್ತಕ ಸಂಗ್ರಹವನ್ನು ನೋಡಿ ನಾವು ದಂಗಾದೆವು.  ಒಳಗೆ ನಾವು ಮೂರು ಜನರನ್ನು ಹೊರತುಪಡಿಸಿ ಬೇರ್ಯಾರೂ ಇರಲಿಲ್ಲ.  

ಓಡಾಡಲು ಸಣ್ಣ ಕಾಲುದಾರಿಯಷ್ಟು ಜಾಗಗಳನ್ನು ಹೊರತುಪಡಿಸಿ ಇಡೀ ಕಟ್ಟಡದ ತುಂಬಾ ಪುಸ್ತಕಗಳೋ ಪುಸ್ತಕಗಳು!  ಅಲ್ಲೆಲ್ಲಾ ಓಡಾಡುತ್ತಾ ಕಾಣಿಸಿದ, ಕೈಗೆ ಸಿಕ್ಕ ಪುಸ್ತಕಗಳನ್ನು ನೋಡುತ್ತಾ ತಿರುಗಾಡಿದೆವು. ಒಂದಿಷ್ಟು ಕಬ್ಬಿಣದ ಬೀರುಗಳು ಮತ್ತು ರ‍್ಯಾಕುಗಳಲ್ಲಿ ಪುಸ್ತಕಗಳನ್ನು ಇಡಲಾಗಿತ್ತು. ಉಳಿದ ಪುಸ್ತಕಗಳನ್ನು ಎಲ್ಲೆಡೆ 3-4 ಅಡಿ ಎತ್ತರದವರೆಗೆ ನೆಲದ ಮೇಲೇ ಪೇರಿಸಿಡಲಾಗಿತ್ತು. ಅವು ಹಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಹಾಗೆ ಅಲ್ಲಿ ಇಟ್ಟಿರುವುದು ಗೊತ್ತಾಗುತ್ತಿತ್ತು. ನೆಲದ ಮೇಲೆ ಮತ್ತು ಪುಸ್ತಕಗಳ ಮೇಲೆ ಸಾಕಷ್ತು ಧೂಳು ತುಂಬಿಕೊಂಡಿತ್ತು. ಒಂದಿಷ್ಟು ಸಮಯಕಾಲ ಅಲ್ಲೇ ಓಡಾಡುತ್ತಾ ಕಂಡ ನಮ್ಮಾಸಕ್ತಿಯ ಪುಸ್ತಕಗಳನ್ನು ತಿರುವಿಹಾಕುತ್ತಾ ಕಾಲಕಳೆದೆವು. 



ಅನಂತರ ಮುಖ್ಯಕಟ್ಟಡದ ಪಕ್ಕದಲ್ಲೇ ವಿಸ್ತರಣೆಯಾಗಿರುವ ಇನ್ನೊಂದು ಚಿಕ್ಕ ಕಟ್ಟಡದೊಳಗೆ ಹೋದಾಗ ಅಲ್ಲಿ ಕೂಡ ಪುಸ್ತಕಗಳನ್ನು ನೆಲದಮೇಲೆ ಮತ್ತು ಬೀರುಗಳಲ್ಲಿ ತುಂಬಿಡಲಾಗಿತ್ತು. ಕೊನೆಯ ಕಟ್ಟಡದಲ್ಲಿ ಅಂಕೇಗೌಡರು ಸಿಕ್ಕರು. ನಮ್ಮ ಹಾಗೇ ಬಂದಿದ್ದ ಬೇರೆ ಜನರೊಡನೆ ಮಾತಾಡುತ್ತಿದ್ದರು. ನಮ್ಮನ್ನು ಕಂಡು ವಿಶ್ವಾಸದಿಂದ ಮಾತಾಡಿಸಿದರು. ಅವರಿಂದ ಪುಸ್ತಕಮನೆಯ ಬಗ್ಗೆ ಮತ್ತು ಈಗಿನ ಸ್ಥಿತಿಯ ಬಗ್ಗೆ ತಿಳಿದುಕೊಂಡೆವು. ಮತ್ತೆ ಸುಮಾರು ಇನ್ನೊಂದು ತಾಸು ಅಲ್ಲೇ ಪುಸ್ತಕಗಳನ್ನು ಹುಡುಕಾಡುತ್ತಾ, ವಿವಿಧ ಹಳೆ ಹೊಸ ಪುಸ್ತಕಗಳನ್ನು ಜೋಪಾನವಾಗಿ ತೆರೆದುನೋಡುತ್ತಾ, ಕೆಲವು ಅಪೂರ್ವವಾದ ಪುಸ್ತಕಗಳನ್ನು ಕಂಡು ಅಚ್ಚರಿಗೊಳ್ಳುತ್ತಾ ಕಾಲಕಳೆದೆವು. ಇಲ್ಲಿ ಪುಸ್ತಕಗಳನ್ನು ಕೊಳ್ಳಬಹುದಾ ಅಂತ ಅಂಕೇಗೌಡರನ್ನು ಕೇಳಿದಾಗ ಹಳೆಯ ಮತ್ತು ವಿಶೇಷವಾದ, ಅಪರೂಪದ ಪುಸ್ತಕಗಳನ್ನು ಕೊಡುವುದಿಲ್ಲ,, ಆದರೆ ಬೇರೆಯವು ಒಂದಕ್ಕಿಂತ ಹೆಚ್ಚು  ಪ್ರತಿಗಳಿದ್ದಲ್ಲಿ ಕೊಡುತ್ತೇನೆ ಎಂದರು.  ನಮಗೆ ಬೇಕಾದ ಹಲವು ಪುಸ್ತಕಗಳನ್ನು ಹುಡುಕಿ ಸಿಗದಾದಾಗ ಅಂಕೇಗೌಡ್ರನ್ನು ಕೇಳಲಾಗಿ ಅವರು ಹುಡುಕಿ ತೆಗೆದುಕೊಟ್ಟರು. ಪುಸ್ತಕಮನೆಗೆ ವಿದಾಯ ಹೇಳಿ  ಅಲ್ಲಿಂದ ಹೊರಟು ಮಂಡ್ಯಕ್ಕೆ ಬಂದು ಅಪೂರ್ವ ಹೋಟೆಲಿನಲ್ಲಿ ತಿಂಡಿ ತಿಂದು ವಾಪಸ್ಸು ಬೆಂಗಳೂರಿಗೆ ಬಂದೆವು.. 

*****

ಪುಸ್ತಕಪ್ರೇಮಿಗಳಿಗೆ, ಓದುಗರಿಗೆ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಈ ಪುಸ್ತಕಮನೆಯು ಒಂದು ಖಂಡಿತ ಭೇಟಿಕೊಡಬಹುದಾದ ಸ್ಥಳ. ಆದರೆ ನಾಡಿನ ಒಂದು ಆಸ್ತಿಯಂತಾಗಬೇಕಾಗಿದ್ದ ಈ ಪುಸ್ತಕ ಸಂಗ್ರಹ ನಿರ್ವಹಣೆಯಿಲ್ಲದೇ, ಸರಿಯಾದ ವ್ಯವಸ್ಥೆಗಳಿಲ್ಲದ ಸ್ಥಿತಿಯಲ್ಲಿದೆ ಅನಿಸಿತು. ದಾನಿಗಳು ಆ ಕಟ್ಟಡ ಕಟ್ಟಿಸಿಕೊಟ್ಟಿದ್ದು ಅದರಲ್ಲಿ ಪುಸ್ತಕಗಳನ್ನು ತುಂಬಿಡಲಾಗಿದೆ. ಜೋಡಿಸಿಡುವ ವ್ಯವಸ್ಥೆ ಏನೇನೂ ಸಾಲದಾಗಿದೆ. ಕೊನೇಪಕ್ಷ ಅಲ್ಲಿ ತುಂಬಿಕೊಂಡಿರುವ ಕಸ, ಧೂಳು ಸಹ ತೆಗೆಯಲಾಗದೇ ಪುಸ್ತಕಗಳು ಹಾಳಾಗುತ್ತಿವೆ. ಕೂತು ಓದುವ ವ್ಯವಸ್ಥೆ ಕೂಡ ಇಲ್ಲ. ನಾವು ಹೋದಾಗ ಏನೋ ಮರಕೆಲಸಗಳು ನಡೆಯುತ್ತಿದ್ದು ಕೂತು ಓದಲು ಲೈಬ್ರರಿಯಂತೆ ಒಂದು ದೊಡ್ಡ ಟೇಬಲ್ ಇತ್ಯಾದಿಗಳ ವ್ಯವಸ್ಥೆ ಆಗುತ್ತಿರುವಂತೆ ಕಂಡಿತು. 

ಒಟ್ಟಾರೆ, ಪುಸ್ತಕಮನೆಯ ಭೇಟಿಯು ಒಂದು ರೀತಿ ಮಿಶ್ರಭಾವ ಹುಟ್ಟುಹಾಕಿತು. ಪುಸ್ತಕಮನೆಗೆ ಸಂಬಂಧಿಸಿದಂತೆ ಅಂಕೇಗೌಡ ಜ್ಞಾನಪ್ರತಿಷ್ಠಾನ ಎಂಬ ನೋಂದಾಯಿತ ಸಂಸ್ಥೆ ಇದೆ. ಪುಸ್ತಕ ಮನೆ ಬಗ್ಗೆ ಯೂಟ್ಯೂಬಲ್ಲಿ ಹಲವು ವೀಡಿಯೋಗಳಿವೆ. ಆಸಕ್ತರು ನೋಡಬಹುದು. 

ಶನಿವಾರ, ಅಕ್ಟೋಬರ್ 24, 2020

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ - ರೆಸ್ಯುಮೆ ಬರೆಯುವುದು/ಕಳಿಸುವುದು ಕಲಿಯಿರಿ

19ಅಕ್ಟೋಬರ್2020 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ: ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ





ನಾನು ಆಗಾಗ ನಮ್ಮ ಕಂಪನಿಯಲ್ಲಿ ಅಥವಾ ಬೇರೆಡೆ ಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಇಂತಹ ಮಾಹಿತಿ ಹಂಚಿಕೊಂಡಾಗ ಅದಕ್ಕೆ ಬರುವ ಬಹಳಷ್ಟು ಇಮೇಲುಗಳು ನಿರಾಸೆಗೊಳಿಸಿಬಿಡುತ್ತದೆ. ಬಹುತೇಕ ಇಮೇಲುಗಳು ಯಾವುದೇ ವಿವರಗಳಿಲ್ಲದೇ, ಯಾವ ಹುದ್ದೆಗೆ ಅರ್ಜಿಹಾಕುತ್ತಿದ್ದೇವೆ ಎಂಬ ಮಾಹಿತಿ ಇಲ್ಲದೇ ಸುಮ್ಮನೇ ಫಾರ್ವರ್ಡ್ ಮಾಡಿದಂತವುಗಳಾಗಿರುತ್ತವೆ. ಅದರಲ್ಲಿ ಬಂದ ರೆಸ್ಯುಮೆಗಳು ಸಹ ಉದ್ಯೋಗಕ್ಕೆ ತಕ್ಕ ಅನುಭವವನ್ನು, ಸ್ಕಿಲ್ ಗಳನ್ನು ಹೊಂದಿರುವುದಿಲ್ಲ. ಒಂದು ವ್ಯವಸ್ಥಿತವಾಗಿ ಅಗತ್ಯಕ್ಕೆ ತಕ್ಕಂತೆ ಹಲವಾರು ರೆಸ್ಯುಮೆಗಳು ಬರೆಯಲ್ಪಟ್ಟಿರುವುದಿಲ್ಲ. ಕಾರ್ಪೋರೇಟ್ ವಲಯದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡವನಾಗಿ ಮತ್ತು ಉದ್ಯೋಗಾಕಾಂಕ್ಷಿಯಾಗಿಯೂ ಸಹ ಸುಮಾರು ಹದಿನೈದು ವರ್ಷಗಳ ಅನುಭವದ ಮಾತಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕದ ಅಭ್ಯರ್ಥಿಗಳು ಅದರಲ್ಲೂ ವಿಶೇಷವಾಗಿ ಹೊಸಬರು, ಜೂನಿಯರ್ ಗಳು, ಕಡಿಮೆ ಅನುಭವವಿರುವರು ತಮ್ಮ ಬಯೊಡೇಟಾ ಅಥವಾ ರೆಸ್ಯುಮೆಯನ್ನು ಬರೆಯುವ ಹಾಗೂ ಉದ್ಯೋಗ ಅರ್ಜಿ ಸಲ್ಲಿಸುವ ಒಂದು ಮೂಲಭೂತ ತಿಳುವಳಿಕೆಯನ್ನು ಹೊಂದುವ ಮತ್ತು ಆ ಒಂದು ಸೌಜನ್ಯವನ್ನು ಕಲಿಯುವ ಅವಶ್ಯಕತೆ ಇದೆ ಅನಿಸುತ್ತದೆ.

ಕೊರೊನಾನಂತರದ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ ಈಗ ನೇಮಕಾತಿ ಪ್ರಕ್ರಿಯೆಗಳೂ ಹಲವೆಡೆ ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯುಮೆಯನ್ನು ಉತ್ತಮವಾಗಿ ತಯಾರುಮಾಡಿಕೊಂಡು ಸೂಕ್ತವಾಗಿ ಸಲ್ಲಿಸುವುದು ಅತ್ಯಂತ ಮುಖ್ಯ. ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ರೆಸ್ಯೂಮಲ್ಲಿರುವ ಮಾಹಿತಿಗಳ ಆಧಾರದಲ್ಲಿ ನಿಮ್ಮನ್ನು ಸಂದರ್ಶನಕ್ಕೆ ಪರಿಗಣಿಸಬೇಡವೋ ಇಲ್ಲವೋ ಎಂಬ ತೀರ್ಮಾನವಾಗುತ್ತದೆ. ರೆಸ್ಯುಮೆಯನ್ನು ನೋಡುವವರಿಗೆ ನೀವೊಬ್ಬ ಅಪರಿಚಿತ ವ್ಯಕ್ತಿಯಾಗಿದ್ದು ನಿಮ್ಮ ಮೊದಲ ಇಂಪ್ರೆಶನ್ ತಲುಪುವುದು ಆ ರೆಸ್ಯುಮೆ ಮೂಲಕ ಮಾತ್ರ.


ಹೇಗಿರಬೇಕು ರೆಸ್ಯುಮೆ?

ರೆಸ್ಯುಮೆ ಅನ್ನುವುದು ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಮತ್ತು ನಮ್ಮ ಕಲಿಕೆಯನ್ನು, ಸಾಮರ್ಥ್ಯವನ್ನು, ಅನುಭವವನ್ನು ಕ್ಲುಪ್ತವಾಗಿ ವಿವರಿಸಿಕೊಳ್ಳುವ ಒಂದು ವಿಧಾನ. ವಿವಿಧ ಕ್ಷೇತ್ರಗಳಲ್ಲಿ, ಹಂತಗಳಲ್ಲಿ, ಅನುಭವದ ಮಟ್ಟದಲ್ಲಿ ರೆಸ್ಯುಮೆಗಳನ್ನು ವಿವಿಧ ರೀತಿ ತಯಾರು ಮಾಡಬೇಕಾಗುತ್ತದಾದರೂ ಅದರ ಮೂಲಭೂತ ರಚನೆ ಬಹುತೇಕ ಒಂದೇ ರೀತಿ ಇರುತ್ತದೆ. ರೆಸ್ಯುಮೆ ಒಂದು ಸುದೀರ್ಘ ಕಡತದಂತಿರದೇ ಚಿಕ್ಕಚೊಕ್ಕದಾಗಿ ಇರುವುದು ಅಗತ್ಯ. ಕೆಲವೇ ನಿಮಿಷಗಳಲ್ಲಿ ರೆಸ್ಯುಮೆಯನ್ನು ನೋಡಿ ಮುಗಿಸುವಂತಿರಬೇಕು ಮತ್ತು ಅಷ್ಟರಲ್ಲಿ ನಿಮ್ಮ ಸ್ಥೂಲ ಪರಿಚಯ ಆಗಬೇಕು. ನಿಮ್ಮ ರೆಸ್ಯುಮೆ ಈ ಅಂಶಗಳನ್ನು ಒಳಗೊಂಡಿರಲಿ. ವಿಧ್ಯಾಭ್ಯಾಸ ಮಾಹಿತಿ, ತೇರ್ಗಡೆ ವರ್ಷ, ಶೇಕಡಾ ಅಂಕಗಳು ಇತ್ಯಾದಿ. ನೀವು ಮಾಡಿರುವ ಇತರ ಸಂಬಂಧಿತ ಕೋರ್ಸುಗಳು, ನೀವು ಕಲಿತಿರುವ ಇತರ ಸ್ಕಿಲ್ ಗಳು, ನಿಮಗೆ ಬಳಸಲು ಗೊತ್ತಿರುವ, ಬಳಸುತ್ತಿರುವ ವಿವಿಧ ಕಂಪ್ಯೂಟರ್ ಅಥವಾ ಇತರ ಸಂಬಂಧಿತ ಅಪ್ಲಿಕೇಶನ್ ಗಳು, ತಂತ್ರಾಂಶಗಳ ಮಾಹಿತಿಗಳನ್ನು ಪಾಯಿಂಟುಗಳಾಗಿ ನಮೂದಿಸಿ. ಈವರೆಗೆ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಕಂಪನಿಗಳ ಬಗ್ಗೆ ಕಾಲಾನುಕ್ರಮವಾಗಿ ಮಾಹಿತಿ, ಅಲ್ಲಿ ಯಾವ ಇಸವಿಯಿಂದ ಯಾವ ಇಸವಿವರೆಗೆ ಕೆಲಸ ಮಾಡಿದ್ದೀರಿ, ಅದರಲ್ಲಿ ನಿಮ್ಮ ಹುದ್ದೆ, ಜವಾಬ್ದಾರಿಗಳು ಮತ್ತು ಅದರಲ್ಲಿ ನಿಮ್ಮ ಕೆಲಸಗಳ, ನಿಭಾಯಿಸುತ್ತಿರುವ ಪ್ರಾಜೆಕ್ಟುಗಳ ಸಂಕ್ಷಿಪ್ತ ವಿವರಣೆ. ಆನಂತರ ನಿಮ್ಮ ಹವ್ಯಾಸಗಳು, ವೈಯಕ್ತಿಕ ಮಾಹಿತಿಗಳು, ಇತರ ಆಸಕ್ತಿಕರ ವಿಷಯ ಇತ್ಯಾದಿಗಳನ್ನು ಸೂಕ್ತವಾಗಿ ಅಗತ್ಯಕ್ಕೆ ತಕ್ಕಂತೆ ಹಾಕಬೇಕಾಗುತ್ತದೆ. ಇದಿಷ್ಟು ಒಂದು ರೆಸ್ಯುಮೆ ಹೊಂದಿರಬೇಕಾದ ಮೂಲಭೂತ ಅಂಶಗಳು. ಇದರಲ್ಲಿ ಅನುಭವದ ಮಟ್ಟಕ್ಕೆ ತಕ್ಕಂತೆ ವಿಭಾಗಗಳು ಮೇಲೆ ಕೆಳಗೆ ಆಗಬಹುದು. ಉದಾಹರಣೆಗೆ ಹೊಸಬನೊಬ್ಬ ತನ್ನ ವಿಧ್ಯಾಭ್ಯಾಸ ಹಾಗೂ ಕಲಿತಿರುವ ಇತರ ಸ್ಕಿಲ್ ಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರೆ ಅನುಭವಿಗಳು ತಮ್ಮ ಇಷ್ಟು ವರ್ಷಗಳ ಅನುಭವದ ಸಾರಾಂಶವನ್ನು ಮೊದಲ ವಿಭಾಗದಲ್ಲಿ ಹಾಕಬಹುದು. ಈ ಎಲ್ಲಾ ಮಾಹಿತಿಗಳೂ ಸಹ ಪ್ಯಾರಾಗಳ ರೀತಿ ಬರೆಯದೇ ಸಾಧ್ಯವಾದಷ್ಟೂ ಪಾಯಿಂಟುಗಳ ರೀತಿಯಲ್ಲಿ ಪ್ರಸ್ತುತಿಪಡಿಸುವುದು ಉತ್ತಮ ರೆಸ್ಯುಮೆಯ ಲಕ್ಷಣ.

ರೆಸ್ಯುಮೆ ಕಳಿಸುವ ಹಂತ:

ಒಂದು ಉದ್ಯೋಗಾವಕಾಶದ ಜಾಹೀರಾತು ಅಥವಾ ಮಾಹಿತಿಯು ಕಂಡಾಗ ಮೊಟ್ಟಮೊದಲು ನೋಡಬೇಕಾದುದು ಯಾವ ಹುದ್ದೆಗಳು ಇವೆ ಎಂಬುದು. ಉದಾಹರಣೆಗೆ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಇದೆ ಎಂದಾಗ ಫೈನಾನ್ಸ್ ಕ್ಷೇತ್ರದ ಎಲ್ಲರೂ ಅರ್ಜಿ ಹಾಕಲಾಗುವುದಿಲ್ಲ. ಅದರಲ್ಲಿ ನಿರ್ದಿಷ್ಟ ರೀತಿಯ ಹುದ್ದೆಗಳನ್ನು ಕೇಳಿರುತ್ತಾರೆ. ಹಾಗಾಗಿ ಹುದ್ದೆ ಮತ್ತು ಅಗತ್ಯವಾದ ವಿವರಣೆಗಳನ್ನು ಮೊದಲು ನೋಡಿಕೊಳ್ಳಬೇಕು. ಅದು ನಿಮಗೆ ಸಂಪೂರ್ಣವಾಗಿ ಅಲ್ಲದಿದ್ದರೂ ಮುಖ್ಯವಾಗಿ ಬೇಕಾದಷ್ಟು ನಿಮ್ಮ ಅನುಭವಕ್ಕೆ, ಪರಿಣಿತಿಗೆ ಹೊಂದಿಕೆಯಾಗುತ್ತಿದ್ದರೆ ಮಾತ್ರ ಅರ್ಜಿಸಲ್ಲಿಸಬೇಕು. ಈಗ ರೆಸ್ಯುಮೆಗಳನ್ನು ಕಳಿಸುವುದು ಇಮೇಲುಗಳ ಮುಖಾಂತರವಾದ್ದರಿಂದ, ಆ ಇಮೇಲುಗಳನ್ನು ಹೇಗೆ ಕಳಿಸುತ್ತೀರಿ ಎಂಬುದೂ ಬಹಳ ಮುಖ್ಯ. ಇಮೇಲಿನ ಸಬ್ಜೆಕ್ಟ್ ಲೈನಿನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದನ್ನು ಬರೆಯಿರಿ. ಇಮೇಲಿನಲ್ಲಿ ನೀವು ಯಾರು, ಏನು ಓದಿದ್ದೀರಿ, ಎಷ್ಟು ವರ್ಷಗಳ ಅನುಭವ ಮತ್ತು ಪರಿಣಿತಿ ಇದೆ, ಏಕೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಮೂರ್ನಾಲ್ಕು ಸಾಲುಗಳಲ್ಲಿ ವಿವರಿಸಿ. ರೆಸ್ಯೂಮೆ ಫೈಲಿಗೆ ನಿಮ್ಮ ಹೆಸರನ್ನು ಕೊಟ್ಟು ಅದನ್ನು ಅಟ್ಯಾಚ್ ಮಾಡಿ ಕಳುಹಿಸಿ.

ನೀವು ಕಳಿಸುವ ಇಮೇಲ್ ಅರ್ಜಿಯು ನಿಮ್ಮ ಬಗ್ಗೆ ಮೊದಲ ನೋಟದಿಂದ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಒಟ್ಟಾರೆ ನಿಮ್ಮ ರೆಸ್ಯೂಮ್ ನಿಮಗೆ ಉದ್ಯೋಗ ಪಡೆಯಲು ಒಂದು ಕೀಲಿಕೈ ಇದ್ದಂತೆ. ಸಮರ್ಥವಾಗಿ ಬಳಸಿಕೊಳ್ಳುವುದು ಜಾಣತನ.

ಇದು ನೆನಪಿರಲಿ 

೧. ರೆಸ್ಯುಮನ್ನು ಬೇರೆಯವರಿಂದ ಕಾಪಿ ಮಾಡಬೇಡಿ. ಅಗತ್ಯವಿದ್ದಲ್ಲಿ ಬೇರೆಡೆ ಮಾಹಿತಿ ತೆಗೆದುಕೊಂಡು ಸ್ವಂತವಾಗಿ ಬರೆಯಿರಿ.
೨. ರೆಸ್ಯುಮಲ್ಲಿ ನೀವು ಹಾಕಿರುವ ಎಲ್ಲಾ ಮಾಹಿತಿಗಳೂ ಸಹ ಸತ್ಯವಾಗಿರಬೇಕು ಮತ್ತು ಆ ಬಗ್ಗೆ ನಿಮಗೆ ಗೊತ್ತಿರಬೇಕು. ಸಂದರ್ಶನದಲ್ಲಿ ತಮ್ಮ ರೆಸ್ಯುಮೆಯಲ್ಲಿ ತಾವೇ ಹಾಕಿರುವ ಮಾಹಿತಿ ಬಗ್ಗೆ ಉತ್ತರಿಸಲು ಹಲವರು ವಿಫಲರಾಗುತ್ತಾರೆ.
೩. ಇಮೇಲ್ ಕಳಿಸುವಾಗ ಸುಮ್ಮನೇ ಫಾರ್ವರ್ಡ್ ಮಾಡುವುದು, ರೆಸ್ಯುಮೆ ಫೈಲಿಗೆ ಸರಿಯಾಗಿ ಹೆಸರು ಕೊಡದಿರುವುದು, ರೆಸ್ಯುಮೆಯಲ್ಲಿ ನಿಮ್ಮ ಮಾಹಿತಿಯನ್ನು ಹುಡುಕಾಡುವಂತೆ ಮಾಡುವುದು ಸರಿಯಲ್ಲ.

ಮಾನವ ಸಂಪನ್ಮೂಲ ಕ್ಷೇತ್ರದ ಹೇಮಾ ಪವಾರ್ ಅವರಿಂದ ಮಾಹಿತಿ:

ನಿಮ್ಮ CV ಎರಡು ಅಥವಾ ಮೂರು ಪುಟಗಳಷ್ಟಿದ್ದರೆ ಬೇಗ ಗ್ರಹಿಸಲು ಸಾಧ್ಯ. ಹೆಚ್ಚು ಅನುಭವವಿದ್ದು ಹೆಚ್ಚು ವಿಷಯವಿದ್ದರೆ ಮೂರು ಪುಟಗಳಷ್ಟು ಬರೆಯಿರಿ. ಪಿ.ಡಿ.ಎಫ್ ಫಾರ್ಮಾಟಿನಲ್ಲಿದ್ದರೆ ಉತ್ತಮ. ಸಣ್ಣ ಪಾಸ್ ಪೋರ್ಟ್ ಸೈಜಿನ ಫೋಟೋ ಒಂದನ್ನು ಶುರುವಿನ ಒಂದು ಬದಿಯಲ್ಲಿ ಹಾಕಿ. ಇದರಿಂದ ಕಳಿಸುವವರ ವಿವರ ಇನ್ನಷ್ಟು ಆಪ್ತವಾಗುತ್ತದೆ. ಮೊದಲೆರೆಡು ಸಾಲುಗಳು, ಸಂಪೂರ್ಣ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಇವಿಷ್ಟೇ ಸಾಕು. ವಿಳಾಸ ಹಾಗು ಇತರ ವ್ಯಯಕ್ತಿಕ ವಿವರಗಳನ್ನು ಕೊನೆಯಲ್ಲಿ ಬರೆಯಬಹುದು.

ಅನುಭವ ಹಾಗೂ ವಿದ್ಯಾರ್ಹತೆಗೆ ಹೊಂದದ ಕೆಲಸಗಳಿಗೆ ಕಳಿಸುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಗೆಳೆಯರು ರೆಫರ್ ಮಾಡುತ್ತಿದ್ದರೂ, ಇಂತಹ ಕೆಲಸಕ್ಕೆ ನನಗೆ ಇಷ್ಟು ಅನುಭವ ಹಾಗು ವಿದ್ಯಾರ್ಹತೆ ಇದೆ ಎನ್ನುವ ಬಗ್ಗೆ ಸಣ್ಣ ಟಿಪ್ಪಣಿ ಒಂದನ್ನು ಬರೆಯಿರಿ. ಇದರಿಂದ ನಿಮ್ಮ ರೆಸ್ಯೂಮೆಯನ್ನು ಹೆಚ್.ಆರ್. ಗಳಿಗೂ, ಮ್ಯಾನೇಜರ್ ಗಳಿಗೂ ಕಳಿಸಲು ಅನುಕೂಲವಾಗುತ್ತದೆ.

ರೆಸ್ಯೂಮೆ ಕಳಿಸುವಲ್ಲಿನ ಉಡಾಫೆತನ

14 ಅಕ್ಟೋಬರ್: ಫೇಸ್ಬುಕ್ ಪೋಸ್ಟ್ 

ನಾನು ಆಗಾಗ ನಮ್ಮ ಕಂಪನಿಯಲ್ಲಿ ಅಥವಾ ಬೇರೆ ಕಂಪನಿಗಳಲ್ಲಿ ನನಗೆ ನೇರವಾಗಿ ಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಆದರೆ ಹಲವರು ಎಷ್ಟು ಉಡಾಫೆಯಿಂದ ರೆಸ್ಯೂಮೆ ಕಳಿಸುತ್ತಾರೆ ಅಂದರೆ ಅದು ಬೇಸರ ತರಿಸುತ್ತದೆ. ಯಾವ ಹುದ್ದೆಗಳಿವೆ, ಅದರ ಅಗತ್ಯಗಳೇನು ಎಂಬುದನ್ನು ಗಮನಿಸದೇ, ತಾವು ಯಾವ ಹುದ್ದೆಗೆ ಅರ್ಜಿ ಹಾಕಲು ಬಯಸುತ್ತೇವೆ ಎಂಬುದನ್ನೂ ಬರೆಯದೇ ಒಟ್ನಲ್ಲಿ ತಗೊಂಡ್ರೆ ತಗೊಳ್ಲಿ ಎನ್ನುವಂತೆ ಕಳಿಸುತ್ತಾರೆ. ಅಂತಹ ರೆಸ್ಯೂಮೆ ತೆಗೆದು ನೋಡಲೂ ಮನಸ್ಸಾಗುವುದಿಲ್ಲ. ಬರುವ ಹತ್ತಾರು ಇಮೇಲುಗಳನ್ನು ತೆಗೆದು ಅದರಲ್ಲಿ ರೆಸ್ಯೂಮೆ ಪರಿಶೀಲಿಸಿ ಅವರು ಯಾರು, ಏನು ಓದಿದ್ದಾರೆ, ಯಾವ ಉದ್ಯೋಗಕ್ಕೆ ಅವರ ಅನುಭವ, ಸ್ಕಿಲ್ ಸೆಟ್ ಹೊಂದಿಕೆಯಾಗುತ್ತದೆ ಅಂತೆಲ್ಲಾ ನೋಡಿಕೊಂಡು ಕೂರಲು ಖಂಡಿತ ಆಗುವುದಿಲ್ಲ. ನನ್ನ ಕ್ಷೇತ್ರದ್ದಲ್ಲದ ಉದ್ಯೋಗಗಳಿದ್ದಲ್ಲಿ ಅದೆಲ್ಲಾ ನನಗೆ ತಿಳಿಯುವುದೂ ಇಲ್ಲ. ಉದಾಹರಣೆಗೆ ಇದರೊಂದಿಗಿರುವ ಚಿತ್ರದಲ್ಲಿ ಎರಡು ಇಮೇಲುಗಳನ್ನು ನೋಡಬಹುದು, ಒಂದರಲ್ಲಿ ಏನು ಎತ್ತ ಯಾವುದಕ್ಕೆ ಅರ್ಜಿ ಎಂಬ ಯಾವ ಮಾಹಿತಿ ಇಲ್ಲ, ಇನ್ನೊಂದರಲ್ಲಿ ಒಬ್ಬ ಒಂದು ಫೇಕ್ ರೆಸ್ಯೂಮೆ ರೆಡಿಮಾಡಿ ಅದನ್ನು 'ಫೇಕ್' ಅಂತಲೇ ಹೆಸರಿಟ್ಟು ಕಳಿಸಿದ್ದಾನೆ. ಇವತ್ತೊಂದು ಇಮೇಲ್ ಬಂದಿದೆ. ಅದರಲ್ಲಿ ಒಬ್ಬ ರೆಸ್ಯೂಮ್ ಕಳಿಸಿ "ನಿಮಗೆ ಇದು relevant ಇದೆಯಾ ನೋಡಿಕೊಳ್ಳಿ" ಎಂಬಂತೆ ಬರೆದು ಕಳಿಸಿದ್ದಾನೆ. ಮೆಕ್ಯಾನಿಕಲ್ ಫೀಲ್ಡಿನವನಾದ ನಾನು ಕಾಮರ್ಸ್ ಫೀಲ್ಡಿನ ರಿಲೆವೆನ್ಸ್ ಚೆಕ್ ಮಾಡಿ ಅವನನ್ನು ಕರೆಯಲು ನನಗ್ಯಾವ ಕರ್ಮ!




ಇನ್ನೊಂದಿಷ್ಟು ಜನ ಯಾರೋ ಹೇಳಿದರು ಅಂತ ರೆಸ್ಯೂಮೆಯನ್ನು ಸುಮ್ಮನೇ ಫಾರ್ವರ್ಡ್ ಮಾಡುತ್ತಾರೆ. ಅದಕ್ಕೆ ಹಿಂದಿರುವುದಿಲ್ಲ, ಮುಂದಿರುವುದಿಲ್ಲ, ಸಬ್ಜೆಕ್ಟ್ ಲೈನಿನಲ್ಲಿ FWD: ಎಂದೇ ಇರುತ್ತದೆ. ರೆಸ್ಯೂಮೆ ಫೈಲಿನ ಹೆಸರು resume ಅಂತಲೊ, resume_updated ಅಂತಲೊ ಇರುತ್ತದೆ. ಇಂತಹ ಹಲವು ಬಗೆಬಗೆಯ ಉಡಾಫೆಯ ಇಮೇಲುಗಳು, ರೆಸ್ಯೂಮೆಗಳು ಬರುತ್ತವೆ. ಇಷ್ಟೂ ಸೀರಿಯಸ್ನೆಸ್ ಇಲ್ಲದ ಒಬ್ಬ unknown personನನ್ನು ಉದ್ಯೋಗ ಸಂದರ್ಶನಕ್ಕೆ ಪರಿಗಣಿಸುವುದಾದರೂ ಹೇಗೆ?! ಆದ್ದರಿಂದ ಅವರಿಗೆ ಅರ್ಹತೆ ಇದ್ದರೂ ಸಹ ಕಳಿಸಿದ್ದು ವ್ಯರ್ಥವಾಗುತ್ತದೆ. ಪರಿಣಾಮವೆಂದರೆ, ಎಲ್ಲಾ ಹುದ್ದೆಗಳಿಗೂ ಬೇರೆರಾಜ್ಯದ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗುತ್ತಾರೆ. ಎಲ್ಲೂ ಕನ್ನಡವರನ್ನ ತಗೊಳ್ಳಲ್ಲ ಅಂತ ನಾವು ಹೊಯ್ಕೊತಿರಬೇಕಷ್ಟೆ.

ನಮ್ಮ ಕರ್ನಾಟಕದ ಹಲವಾರು ಅಭ್ಯರ್ಥಿಗಳು, ಅದರಲ್ಲೂ ಜೂನಿಯರ್ ಗಳು, ಕಡಿಮೆ ಅನುಭವವಿರುವವರು, ಹೊಸಬರು ಉದ್ಯೋಗಾವಕಾಶಗಳಿಗೆ ರೆಸ್ಯುಮೆ ಕಳಿಸುವುದು ಹೇಗೆ ಎನ್ನುವ ಬೇಸಿಕ್ ತಿಳುವಳಿಕೆ ಹೊಂದುವ, ಈ ಒಂದು ಸೌಜನ್ಯವನ್ನು ಕಲಿಯುವ ಅವಶ್ಯಕತೆ ಬಹಳ ಇದೆ.

*****
ಇದೆಲ್ಲಾ ಸೇರಿಸಿ, ಒಂದಿಷ್ಟು HRಗಳನ್ನೂ ಮಾತಾಡಿಸಿ, 'ಉದ್ಯೋಗಗಳಿಗೆ ರೆಸ್ಯೂಮೆ ಕಳಿಸುವುದು ಹೇಗೆ' ಎಂಬ ಲೇಖನ ಬರೆಯಬೇಕೆನಿಸುತ್ತಿದೆ.. ನೋಡೋಣ.