ಭಾನುವಾರ, ಜೂನ್ 28, 2026

Movie ದಿ ವಾಂದ್ (Die Wand) / The Wall

ಇತ್ತೀಚೆಗೊಂದು ಸಿನೆಮಾ ನೋಡಿದ್ದೆ. ಅಂತರಜಾಲದಲ್ಲಿ ಏನೋ ಹುಡುಕುತ್ತಿದ್ದಾಗ ಇದರ ಮಾಹಿತಿ ದೊರೆತು ನೋಡಬೇಕೆಸಿ ನೋಡಿದ್ದೆ. ದಿ ವಾಂದ್ (Die Wand) ಹೆಸರಿನ ಈ ಸಿನೆಮಾ 2012ರಲ್ಲಿ ಬಿಡುಗಡೆಯಾದ ಮೂಲತಃ ಜರ್ಮನ್ ಭಾಷೆಯ ಆಸ್ಟ್ರಿಯಾ ದೇಶದ ಸಿನೆಮಾ. ಇಂಗ್ಲೀಷಿನಲ್ಲಿ ದ ವಾಲ್ ಎಂಬ ಹೆಸರಿನಲ್ಲಿ ಇದೆ.  

ಒಂದು ಹೆಸರಿಲ್ಲದ ಮಹಿಳೆಯ ಪಾತ್ರ. ಒಂದು ದಿನ ಅವಳು ತನ್ನ ಇಬ್ಬರು ಗೆಳೆಯರು ಮತ್ತು ಸಾಕುನಾಯಿಯೊಂದಿಗೆ ಕಾಡಿನೊಳಗಿನ 'ಹಂಟಿಂಗ್ ಲಾಡ್ಜ್'ಗೆ ಹೋಗುತ್ತಾಳೆ. ಅವಳ ಗೆಳೆಯರು ಸಂಜೆ ಅಲ್ಲೇ ಹತ್ತಿರದ ಹಳ್ಳಿಗೆ ಹೋಗಿ ಬರುತ್ತೇವೆಂದು  ಹೋಗುತ್ತಾರೆ, ಈಕೆ ಕಾಡಿನಲ್ಲಿಯೇ ಉಳಿದುಕೊಳ್ಳುತ್ತಾಳೆ. ಅವಳ ಸಾಕುನಾಯಿಯೂ ಅವಳೊಂದಿಗಿರುತ್ತದೆ. ರಾತ್ರಿ ಬರಬೇಕಿದ್ದ ಗೆಳೆಯರನ್ನು ಮಾರನೆಯ ದಿನ ಹುಡುಕಿಕೊಂಡು  ಹೊರಟಾಗ ಒಂದು ನಿಗೂಢ ಅದೃಶ್ಯ ಗೋಡೆಯೊಳಗೆ ತಾನು ಬಂಧಿಯಾಗಿರುವುದು ಆಕೆಯ ಅನುಭವಕ್ಕೆ ಬರುತ್ತದೆ. ಅದು ಗಾಜಿನಂತಹ ಗೋಡೆ, ಆಚೆಯ ಲೋಕವೆಲ್ಲಾ ಕಾಣುತ್ತಿದೆ, ಆದರೆ ಆ ಗೋಡೆಯನ್ನು ದಾಟಲಾಗುತ್ತಿಲ್ಲ. ಯಾವ ದಾರಿಯಲ್ಲಿ ಹೋದರೂ ಆ ಅಭೇದ್ಯ ಅದೃಶ್ಯ ಗೋಡೆ ಅಡ್ಡನಿಂತಿದೆ. ಆಕೆಯಿದ್ದ ಕಾಡಿನ ಮನೆಯ ಕಣಿವೆಯೊಳಗಿನ ಒಂದು ಸೀಮಿತ ಪ್ರದೇಶದಿಂದ ಆಚೆ ಹೋಗಲಾರದಂತಾಗಿದೆ. ಗೋಡೆಯ ಆಚೆಗಿನ ಲೋಕದಲ್ಲಿ ಯಾವುದೇ ಚಟುವಟಿಕೆಯಿಲ್ಲದಿರುವುದು  ಆಕೆಯ ಗಮನಕ್ಕೆ ಬರುತ್ತದೆ. ನಿಸರ್ಗವನ್ನು ಹೊರತುಪಡಿಸಿ ಅಲ್ಲಿ ಬೇರೆ ಎಲ್ಲವೂ ನಿಂತ ಹಾಗೇ ನಿಂತಿದೆ. ಪಕ್ಕದ ಫಾರಂಹೌಸಿನ ಮುಂದೆ ಮುದುಕನೊಬ್ಬ ಪ್ರತಿಮೆಯಂತೆ ಹಾಗೇ ನಿಂತಿದ್ದಾನೆ, ಬಾಗಿಲಲ್ಲಿ ಮುದುಕಿ ವಿಗ್ರಹವಾಗಿದ್ದಾಳೆ,  ನೀರು ಮಾತ್ರ ಬೀಳುತ್ತಲೇ ಇದೆ. ಒಟ್ಟಿನಲ್ಲಿ ಹೊರಗಿನ ಲೋಕದಲ್ಲಿ ಸಮಯವೇ ಸ್ಥಬ್ಧವಾಗಿರುವಂತಿದೆ. ಈ ವಿಚಿತ್ರವೇನೆಂದು ಗೊತ್ತಾಗದೇ ತೊಳಲಾಟದಲ್ಲಿ ಬೀಳುತ್ತಾಳೆ.

ಅಲ್ಲಿಂದ ಹೋರಹೋಗುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅನಿವಾರ್ಯವಾಗಿ ಅಲ್ಲಿಯೇ ಬದುಕತೊಡಗುತ್ತಾಳೆ. ಆಕೆಯ ಜೊತೆಗಾರನೆಂದರೆ ಆಕೆಯ ಸಾಕುನಾಯಿ ಮಾತ್ರ ಆಗಿರುತ್ತದೆ. ಈ ನಡುವೆ ಒಂದು ಹಸುವು ಆಕಸ್ಮಿಕವಾಗಿ ಆಕೆಗೆ ಸಿಗುತ್ತದೆ, ಅದನ್ನು ತಂದು ಸಾಕಿಕೊಳ್ಳುತ್ತಾಳೆ. ಒಂದು ಬೆಕ್ಕು ಸಿಗುತ್ತದೆ. ಬೆಕ್ಕು ಮರಿಹಾಕುತ್ತದೆ. ಹಸುವು ಕರುಹಾಕುತ್ತದೆ. ಅವುಗಳನ್ನೂ ನೋಡಿಕೊಳ್ಳುವ ಹೊಣೆಗಾರಿಕೆ ಹೊತ್ತುಕೊಂಡು ದಿನಗಳನ್ನು ಕಳೆಯುತ್ತಾಳೆ. ಹೊರಜಗತ್ತಿನ ಯಾವ ಸಂಪರ್ಕಗಳೂ ಇಲ್ಲದಂತೆ ಬದುಕುತ್ತಾಳೆ. ತನ್ನ ಆಹಾರವನ್ನು ಹುಡುಕಿಕೊಳ್ಳುವುದು, ಬೆಳೆದುಕೊಳ್ಳುವುದು, ಬೇಟೆಯಾಡುವುದು ಮಾಡುತ್ತಾ ಒಂಟಿತನದಲ್ಲಿ ದಿನಗಳನ್ನು ಕಳೆಯುತ್ತಾಳೆ. ಋತುಗಳು ಬದಲಾಗುತ್ತವೆ,  ಕೆಲವು ಘಟನೆಗಳು ನಡೆಯುತ್ತವೆ. ಹೀಗೆ ಮೂರು ವರುಶಗಳೇ ಕಳೆಯುತ್ತವೆ. ಅನಿರೀಕ್ಷಿತವಾಗಿ ಬಂದ ವ್ಯಕ್ತಿಯೊಬ್ಬ ಆ ಕರುವನ್ನು ಮತ್ತು ಆಕೆಯ ನಾಯಿಯನ್ನು ಕೊಂದುಹಾಕುತ್ತಾನೆ. ಇದರಿಂದ ತೀವ್ರ ಆಘಾತಕ್ಕೊಳಗಾಗಿ ಆಕೆ ನರಳುತ್ತಾಳೆ. ಆದರೂ ಆಕೆಯ ಅನಿವಾರ್ಯ ಒಂಟಿ ಬಂಧಿ ಬದುಕು ಹಾಗೇ ಮುಂದುವರೆಯುತ್ತದೆ.  

ಈ ಸಿನೆಮಾವನ್ನು ಹಾಗೆಯೇ ನೋಡಿದಾಗ ಒಂದು ಫ್ಯಾಂಟಸಿ ಕತೆಯಂತೆ ಕಂಡರೂ ಇದನ್ನು ಮನುಷ್ಯನ ಜೀವನಕ್ಕೆ ಒಂದು ರೂಪಕದಂತೆ ಮಾಡಿರಬಹುದಾ ಅನಿಸುತ್ತದೆ. ಮನುಷ್ಯನು ತನ್ನೊಳಗೆ ತಾನೇ ಒಂಟಿಯಾಗುವ ಪರಿಸ್ಥಿತಿಯನ್ನು  ಇದು ಬಿಂಬಿಸುತ್ತಿದೆಯಾ ಅಥವಾ ಎಲ್ಲವೂ ಇದ್ದೂ ಸಹ ಜೀವನದ ಒಂದು ಹಂತದಲ್ಲಿ ಅನಿವಾರ್ಯ ಮಾನಸಿಕ ಒಬ್ಬಂಟಿತನದಲ್ಲಿ ಸಿಲುಕಿಕೊಳ್ಳಬಹುದಾದ ಸನ್ನಿವೇಶವನ್ನು ಈ ಸಿನೆಮಾ ಸೂಚ್ಯವಾಗಿ ಹೇಳುತ್ತದೆ ಎಂದೂ ವಿಶ್ಲೇಷಿಸಬಹುದು.  ಇನ್ನೊಂದು ಕೋನದಲ್ಲಿ ನೋಡಿದಾಗ ಸಮಾಜದ ಬಗೆಬಗೆಯ ಚೌಕಟ್ಟುಗಳೊಳಗೆ, ಬಗೆಬಗೆಯ ಕಟ್ಟುಪಾಡುಗಳೊಳಗೆ, ಕೌಟುಂಬಿಕ ಪರಿಸ್ಥಿತಿಗಳಲ್ಲಿ ಈ ರೀತಿಯ ಮಾನಸಿಕ ಬಂಧನದ ಬದುಕನ್ನು ಬಾಳುತ್ತಿರುವವರ ಬದುಕಿಗೆ ಉಪಮೆಯಾಗಿದೆಯಾ ಎಂದೂ ಅನಿಸುತ್ತದೆ.  ಇನ್ನೂ ಕೊಂಚ ಆಳಕ್ಕಿಳಿದರೆ ಇದು ನಿರ್ದಿಷ್ಟವಾಗಿ ಕೆಲವರು ತಮ್ಮ ಜೀವನದಲ್ಲಿ ಸಿಲುಕುವ ಪರಿಸ್ಥಿತಿಯನ್ನೇ  ತೋರಿಸುತ್ತಿರಬಹುದಾ ಅನ್ನಿಸಲೂಬಹುದು. ಹೀಗೆ ಹಲವಾರು ದೃಷ್ಟಿಕೋನಗಳನ್ನು ನೋಡುಗರ ವಿಶ್ಲೇಷಣೆಗೆ ಬಿಡುತ್ತದೆ. 

ಇದು ೧೯೬೩ರಲ್ಲಿ ಪ್ರಕಟವಾದ ಅದೇ ಹೆಸರಿನ ಪುಸ್ತಕವೊಂದರೆ ಕತೆಯ ಆಧಾರಿತೆ ಸಿನೆಮಾ.  ನಿರೂಪಣೆಯ ವಿಷಯಕ್ಕೆ ಬಂದರೆ, ಆಕೆ ತನ್ನ ಕತೆಯನ್ನು ದಿನಚರಿ ಬರೆಯುವುದರ ಮೂಲಕ ಹೇಳುತ್ತಿರುವಂತೆ ನಿರೂಪಿಸಲಾಗಿದೆ.  ಇಡೀ ಸಿನೆಮಾವನ್ನೂ ಒಂದೇ ಪಾತ್ರವು ಆವರಿಸಿಕೊಂಡಿದೆ. ಸಂಭಾಷಣೆಗಳಿಲ್ಲ. ನಿಧಾನವಾಗಿ ಸಾಗುವ ಸಿನೆಮಾದಲ್ಲಿ ಕಾಡು ಪರಿಸರ ಬೆಟ್ಟ ಗುಡ್ಡಗಳ ಸುಂದರ ಪರಿಸರದ ನೋಟಗಳಿವೆ. ಆದರೆ ಆ ಸೌಂದರ್‍ಯದೊಳಗೂ ಒಂಥರಾ ವಿಷಾದದ ಛಾಯೆಯಿದೆ.  

- ವಿಕಾಸ್



 

ಶನಿವಾರ, ಮಾರ್ಚ್ 14, 2026

ಹೋಟೆಲ್, ರೆಸ್ಟುರಂಟ್ ಗಳಲ್ಲಿ 'ಸರ್ವೀಸ್ ಛಾರ್ಜ್' ಕೊಡಬೇಕೆ?

ಬಹಳಷ್ಟು ರೆಸ್ಟುರೆಂಟ್ ಗಳಲ್ಲಿ ನೇರವಾಗಿ ಬಿಲ್ಲಿನಲ್ಲಿ ಶೇ ೭.೫ ಅಥವಾ ೫.೫ ಸರ್ವೀಸ್ ಛಾರ್ಜ್ ಎಂದು ಸೇರಿಸಿರುತ್ತಾರೆ. ನಿಮ್ಮಲ್ಲಿ ಎಷ್ಟು ಜನ ಇದನ್ನು ಗಮನಿಸುತ್ತೀರೋ ಇಲ್ಲವೋ, ಕೆಲವರು ಗಮನಿಸಿದರೂ ಅದು ಬಿಲ್ಲಿನ ಮೊತ್ತದ ಸಹಜ ಭಾಗ ಎಂದುಕೊಂಡಿರಬಹುದು. ಇದ್ಯಾಕೆ ಹಾಕುತ್ತಾರೆ ಎಂದು ಗಮನಿಸಿದರೂ ಅಲ್ಲಿ ಕೇಳಲು ಮುಜುಗರ ಆಗಿ ಸುಮ್ಮನೇ ಪಾವತಿ ಮಾಡಿರಬಹುದು..

ಆದರೆ ವಿಷಯ ಇಷ್ಟೆ. ಸರ್ವೀಸ್ ಛಾರ್ಜ್ ಎಂಬುದು ಕಡ್ಡಾಯವಲ್ಲ. ಅನ್ವಯವಾಗುವಷ್ಟು ಜಿ.ಎಸ್.ಟಿ ಹೊರತುಪಡಿಸಿ ಬೇರೆ ಯಾವುದನ್ನೂ ಕಡ್ಡಾಯವಾಗಿ ತೆಗೆದುಕೊಳ್ಳುವಂತಿಲ್ಲ. ರೆಸ್ಟುರೆಂಟವರನ್ನು ಕೇಳಿದರೆ ಆ ಸರ್ವೀಸ್ ಛಾರ್ಜ್ ಹಣವನ್ನು ಸಿಬ್ಬಂದಿಗಳಿಗೆ ಕೊಡಲು ಬಳಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಅದು ನಿಜವೂ ಇರಬಹುದು. ಒಟ್ಟು ಬಿಲ್ ಮೊತ್ತ ಕಡಿಮೆ ಇದ್ದಾಗ ೭.೫% ಅಂದರೆ ಹೆಚ್ಚು ಎನಿಸುವುದಿಲ್ಲ. ಆದರೆ ಬಿಲ್ ಮೊತ್ತ ದೊಡ್ಡದಿದ್ದಾಗ ಇದು ಹೆಚ್ಚೇ ಅನಿಸುತ್ತದೆ. ಆಹಾರಕ್ಕೆ, ಪಾನೀಯಕ್ಕೆ, ಸೌಲಭ್ಯಕ್ಕೆ ಎಲ್ಲಾ ಸೇರಿಸಿಯೇ ಹಣ ಕೊಟ್ಟಿರುತ್ತೀವಿ. ಸರ್ವೀಸ್ ಮಾಡಿದ ಸಿಬ್ಬಂದಿಗೆ ಎಷ್ಟು ಟಿಪ್ಸ್ ಹಣ ಕೊಡುವುದು ಎಂಬುದು ನಮ್ಮಿಷ್ಟವಾಗಿರುತ್ತದೆ.

ಯಾವ ರೆಸ್ಟುರೆಂಟಲ್ಲಾದರೂ ಅಥವಾ ಎಲ್ಲಿಯಾದರೂ ಸರ್ವೀಸ್ ಛಾರ್ಜ್ ಎಂದು ಹಾಕಿದರೆ ಅದನ್ನು ತೆಗೆದು ಪುನಃ ಬಿಲ್ ಹಾಕಿಕೊಡಲು ಹೇಳಬಹುದು ಅಥವಾ ಬಿಲ್ಲಿಂಗ್ ಮಾಡುವ ಮೊದಲೇ ಸರ್ವೀಸ್ ಛಾರ್ಜ್ ಹಾಕಬೇಡಿ ಎಂದು ಹೇಳಬಹುದು. ನಿಮ್ಮಿಷ್ಟದಂತೆ ಸಿಬ್ಬಂದಿಗೆ ನೇರವಾಗಿ ಟಿಪ್ಸ್ ಕೊಡಬಹುದು. ವೆಜ್ಜು ನಾನ್ವೆಜ್ಜು ಬಾರು ಪಬ್ಬು ಎಲ್ಲ ಕಡೆಯೂ ಇದು ಅನ್ವಯ. ಇದು ಗ್ರಾಹಕರ ಹಕ್ಕು. ಮನಸ್ಸಿದ್ದರೆ ಯಾವ ಮುಲಾಜಿಲ್ಲದೇ ಈ ಹಕ್ಕು ಚಲಾಯಿಸಿ.

ಚಿತ್ರದಲ್ಲಿ ಇರುವುದು ನಿನ್ನೆಯ ಎರಡು ಬಿಲ್ ಗಳು. ಒಂದರಲ್ಲಿ ಸರ್ವೀಸ್ ಛಾರ್ಜ್ ಹಾಕಿರುವುದನ್ನು ಕಾಣಬಹುದು. ಮತ್ತೊಂದರಲ್ಲಿ ಸರ್ವೀಸ್ ಛಾರ್ಜ್ ತೆಗೆಸಿ ಬಿಲ್ಲನ್ನು ಮಾಡಿಸಿರುವುದು. ಕೆಲವು ಕಡೆ ಆರ್ಡರ್ ತೆಗೆದುಕೊಳ್ಳುವ ಮೊದಲೇ "ನಮ್ಮಲ್ಲಿ ಸರ್ವೀಸ್ ಛಾರ್ಜ್ ಕಡ್ಡಾಯವಾಗಿ ಕೊಡಬೇಕು" ಎಂದು ಹೇಳುತ್ತಾರೆಂದು ಕೇಳಿದ್ದೇನೆ. ಅಂತಹ ಕಡೆ ಹೋಗುವುದು ಬಿಡುವುದು ಅವರವರ ಆಯ್ಕೆ. ನನ್ನ ಅನುಭವಕ್ಕಂತೂ ಬಂದಿಲ್ಲ.

ಭಾನುವಾರ, ಜುಲೈ 6, 2025

ಶಾಲಾಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ : ಹಿಂದಿ ಹೇರಿಕೆ

'ಪ್ರಜಾವಾಣಿ'ಯ 'ವಾಚಕರ ವಾಣಿ'ಗೆ ಬರೆದಿದ್ದ ಪತ್ರಗಳು.

ಮಹಾರಾಷ್ಟ್ರವು ಶಿಕ್ಷಣದಲ್ಲಿ ದ್ವಿಭಾಷಾ ನೀತಿಗೆ ಮರಳಿದೆ ಎಂದು 24 ಏಪ್ರಿಲ್ 'ವಾಚಕರ ವಾಣಿ'ಯಲ್ಲಿ ಓದುಗರೊಬ್ಬರ ಓಲೆಯಲ್ಲಿ ಪ್ರಕಟವಾಗಿದೆ. ಆದರೆ ವಾಸ್ತವೇನೆಂದರೆ ಈವರೆಗೂ ಮಹಾರಾಷ್ಟ್ರದ ರಾಜ್ಯಪಠ್ಯಕ್ರಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ದ್ವಿಭಾಷಾ ನೀತಿಯೇ ಇತ್ತು. ಆದರೆ ಹೊಸ ಶಿಕ್ಷಣ ನೀತಿಯ ಪ್ರಕಾರ ಒಂದನೇ ತರಗತಿಯಿಂದಲೇ ಮೂರನೇ ಭಾಷೆಯಾಗಿ ಹಿಂದಿಯನ್ನೇ ಕಲಿಯಬೇಕೆಂದು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಬದಲಾಗಿ ಎನ್. ಇ.ಪಿ.ಯಲ್ಲಿರುವಂತೆ ಯಾವುದಾದರೂ ಭಾರತೀಯ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಬಹುದು ಎಂದಿದೆ. ಇದು ಕೂಡ ಪರೋಕ್ಷವಾಗಿ ಹಿಂದಿ ಹೇರಿಕೆಯ ಉದ್ದೇಶವೇ ಆಗಿದೆ. ಹೇಗೆಂದರೆ, ಮೂರನೇಭಾಷೆ ಕಡ್ಡಾಯಗೊಳಿಸಿದರೆ ಬಹುತೇಕ ಎಲ್ಲಾ ಶಾಲೆಗಳೂ ಕೂಡ ಹಿಂದಿಯನ್ನು ಮಾತ್ರವೇ ಮೂರನೇ ಭಾಷೆಯಾಗಿ ಆಯ್ಕೆ ಒದಗಿಸುತ್ತವೆ. ಇಂತಹ ಸಂದರ್‍ಭದಲ್ಲಿ ಮಕ್ಕಳು ಅನಿವಾರ್‍ಯವಾಗಿ ಹಿಂದಿಯನ್ನೇ ಕಲಿಯಬೇಕಾಗುತ್ತದೆ. ಕೆಲವು ಶಾಲೆಗಳಲ್ಲಿ ಸಂಸ್ಕೃತದ ಆಯ್ಕೆ ಇರಬಹುದಷ್ಟೆ. ಹಾಗಾಗಿ ಈ ಮೂರನೇ ಭಾಷೆ ಎಂಬುದೇ ಹಿಂದಿಯನ್ನು ತರುವ ಯೋಜನೆಯ ಭಾಗವಾಗಿದೆ. ಇದುವರೆಗೂ ಐದನೇ ತರಗತಿಯಿಂದ ಇದ್ದ ಈ ಮೂರನೇ ಭಾಷೆಯು ಈಗ ಒಂದನೇ ತರಗತಿಯಿಂದ ಕಲಿಯಬೇಕಾಗಿರುವುದು ಮಕ್ಕಳಿಗೆ ಹೊರೆಯಾಗುವುದು ಖಂಡಿತ. ಜೊತೆಗೆ ಇದು ಬಾಲ್ಯದಿಂದಲೇ ಎಲ್ಲರೂ ಹಿಂದಿಯನ್ನು ಒಪ್ಪಿಕೊಳ್ಳಬೇಕೆಂಬ ದೊಡ್ಡ ಯೋಜನೆಯಾಗಿರುವುದು ಸ್ಪಷ್ಟವಾಗಿದೆ.
 
ಕರ್‍ನಾಟಕದ ರಾಜ್ಯಪ್ರಠ್ಯಕ್ರಮದ ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ತ್ರಿಭಾಷಾ ಸೂತ್ರ ಇದ್ದು ಬಹುತೇಕ ಶಾಲೆಗಳಲ್ಲಿ ಇದೇ ತರಹ ಅನಿವಾರ್‍ಯ ಹಿಂದಿ ಆಯ್ಕೆ ಇರುವುದನ್ನು ಕಾಣಬಹುದು. ಇದನ್ನು ಅರಿತೇ ತಮಿಳುನಾಡು ಮೊದಲಿಂದಲೂ ದ್ವಿಭಾಷಾ ನೀತಿಯನ್ನು ಪಾಲಿಸುತ್ತಿದೆ ಮತ್ತು ಈಗಲೂ ತ್ರಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ತಯಾರಾಗಿಲ್ಲ. ಯಾವುದೇ ಹಿಂದಿರಾಜ್ಯ ಅಥವಾ ಉತ್ತರಭಾರತದ ಯಾವುದೇ ರಾಜ್ಯವೂ ಕೂಡ ತಾವು ದಕ್ಷಿಣದ ಭಾಷೆಗಳನ್ನು ತಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಪರಿಚಯಿಸುತ್ತೇವೆ ಎಂದು ಇದುವರೆಗೆ ಮುಂದಡಿ ಇಟ್ಟಿಲ್ಲ. ಆ ಬಗ್ಗೆ ಯೋಚನೆಯೂ ಸಹ ಇದ್ದಂತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್‍ಕಾರವು ಹೀಗೆ ಅತಿ ಉತ್ಸಾಹದಿಂದ ಹಿಂದಿ ಕಡ್ಡಾಯ ಮಾಡಹೊರಟು ಪ್ರತಿರೋಧ ಬಂದಾಗ ಕೊಂಚ ಹಿಂದೆ ಸರಿದಂತೆ ಮಾಡಿ ಪರೋಕ್ಷವಾಗಿ ಹಿಂದಿಯನ್ನು ಪ್ರಾಥಮಿಕ ಹಂತದಲ್ಲೇ ಹೇರುವ ಪ್ರಯತ್ನವನ್ನು ಪ್ರಾರಂಭಿಸಿರುವುದು ಎಚ್ಚರಿಕೆಯ ಗಂಟೆಯೆಂದೇ ಹೇಳಬಹುದು. ಇದು ಎನ್. ಇ. ಪಿ. ಯ ಉದ್ದೇಶವನ್ನು ಪ್ರಶ್ನೆ ಮಾಡುವಂತಾಗಿದೆ ಮತ್ತು ಅದನ್ನು ಹಿಂದಿ ಹೇರಿಕೆಯ ಹುನ್ನಾರವನ್ನಾಗಿ ಕಾಣುವಂತಾಗಿದೆ.


*******
ಸದ್ಯದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರ್‍ಕಾರವು ಮತ್ತೊಮ್ಮೆ ತ್ರಿಭಾಷಾ ಕಲಿಕೆಯ ಆದೇಶ ಹೊರಡಿಸಿತು. ಅದರಲ್ಲಿ ಹಿಂದಿ ಬಿಟ್ಟು ಬೇರೆ ಆಯ್ಕೆ ಬೇಕಾದರೆ ಕನಿಷ್ಟ ೨೦ ಮಕ್ಕಳು ಇರಬೇಕು. ಅದಕ್ಕೆ ಆನ್ ಲೈನ್ ಕಲಿಕೆ ವ್ಯವಸ್ಥೆ ಮಾಡಬೇಕು ಎಂದು ಸೇರಿಸಲಾಗಿತ್ತು. ಆದರೆ ಇದಕ್ಕೂ ಸಹ ಮಹಾರಾಷ್ಟ್ರದಲ್ಲಿ ಪ್ರಬಲ ವಿರೋಧ ವ್ಯಕ್ತವಾದ ಕಾರಣ ಈ ಆದೇಶವನ್ನು ರದ್ದುಪಡಿಸಿದೆ.

++++++++++++++++

ದ್ವಿಭಾಷಾ ನೀತಿಯು ಸೂಕ್ತ

03 ಜುಲೈ 2025ರ ಪ್ರಜಾವಾಣಿಯ 'ಅಭಿಮತ'ದಲ್ಲಿ ಪ್ರೊ.ಬಿಳಿಮಲೆಯವರ ಲೇಖನ ಕಣ್ತೆರುಸುವಂತಿದೆ. 1968ರಿಂದಲೇ ಶಿಕ್ಷಣದಲ್ಲಿ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಂಡ ಕರ್‍ನಾಟಕಕ್ಕೆ ಅದರಿಂದ ಯಾವ ಪ್ರಯೋಜನವೂ ಆಗದಿರುವುದು ಹಾಗೂ ಅದೊಂದು ಹಿಂದಿ ಹೇರಿಕೆಯ ಅಸ್ತ್ರವಾಗಿರುವುದು ಅರ್ಧಶತಕದ ನಂತರವೂ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ೧.೪೨ ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯ ಹಿಂದಿ ವಿಷಯದಲ್ಲಿ ಫೇಲಾಗಿದ್ದಾರೆ ಎಂಬ ಮಾಹಿತಿ. ಇಷ್ಟು ವರ್ಷಗಳಲ್ಲಿ ಅದೆಷ್ಟು ಲಕ್ಷ ವಿದ್ಯಾರ್ಥಿಗಳು ಫೇಲಾಗಿ ತೊಂದರೆ ಅನುಭವಿಸಿರಬಹುದು, ಶಿಕ್ಷಣವನ್ನೇ ಮೊಟಕುಗೊಳಿಸಿರಬಹುದು ಎಂದು ಊಹಿಸಬಹುದು. ಹೀಗೆ ಅನಗತ್ಯವಾದ ಭಾಷೆಯೊಂದನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವುದು ಶೋಚನೀಯ. ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡ ತಮಿಳುನಾಡಲ್ಲಿ ಅದರಿಂದ ಶೈಕ್ಷಣಿಕವಾಗಿ ಏನೂ ಸಮಸ್ಯೆಯಾಗಿಲ್ಲ, ಜೊತೆಗೆ ತಮಿಳರು ಕನ್ನಡಿಗರಿಗಿಂತ ಹೆಚ್ಚಾಗಿ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಉತ್ತರ ಭಾರತದ ಯಾವ ರಾಜ್ಯಗಳೂ ಇದುವರೆಗೆ ಶಾಲಾಶಿಕ್ಷಣದಲ್ಲಿ ದಕ್ಷಿಣ ಭಾಷೆಗಳನ್ನು ಪರಿಚಯಿಸುವ ಗೋಜಿಗೇ ಹೋಗಿಲ್ಲ. ಆದರೆ ಕರ್ನಾಟಕವು ಮಾತ್ರ ಕಡ್ಡಾಯ ಹಿಂದಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಎನ್ ಇ ಪಿ ನೀತಿಯನ್ನು ತಂದು ಒಂದನೇ ತರಗತಿಯಿಂದಲೇ ಮೂರು ಭಾಷೆಗಳನ್ನು ಕಲಿಸುವ ಹಾಗೂ ಮತ್ತದರಲ್ಲೂ ಹಿಂದಿಯನ್ನು ಹೇರುವ ಪ್ರಯತ್ನಗಳಾಗುತ್ತಿರುವುದನ್ನು ಗಮನಿಸಬಹುದು.

ಹಿಂದಿಕಲಿಕೆ ಅಳವಡಿಸಿಕೊಂಡು ಐವತ್ತು ವರ್ಷಗಳ ನಂತರವೂ ಕರ್ನಾಟಕದ ಜನರಿಗೆ ಉತ್ತರ ಭಾರತದ ಉದ್ಯೋಗಗಳಲ್ಲಿ ಅಥವಾ ಕೇಂದ್ರಸರ್ಕಾರಿ ನೌಕರಿಗಳಲ್ಲಿ ವಿಶೇಷವಾಗಿ ಏನೂ ಪ್ರಯೋಜನವಾಗಿಲ್ಲ. ಬದಲಾಗಿ ಉತ್ತರದ ಹಿಂದಿಭಾಷಿಕರೇ ದಕ್ಷಿಣರಾಜ್ಯಗಳೆಡೆಗೆ ದುಡಿಮೆಗಾಗಿ ಹೆಚ್ಚಾಗಿ ಬರುತ್ತಿದ್ದಾರೆ. ಮುಂದ್ಯಾವಾಗಲೋ ಉದ್ಯೋಗಕ್ಕೆ ಉತ್ತರ ರಾಜ್ಯಗಳಿಗೆ ಹೋದರೆ ಅನುಕೂಲವಾಗಬಹುದು ಎಂದು ಬಾಲ್ಯದಲ್ಲಿಯೇ ಲಕ್ಷಾಂತರ ಕನ್ನಡದ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಹೇರುವುದು ಸರ್ವಥಾ ಸಮರ್ಥನೀಯವಲ್ಲ. ಹಿಂದಿಯಾಗಲಿ, ಮತ್ತಿತರ ಭಾಷೆಗಳಾಗಲೀ ಅವರವರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯಾಗಿರಬೇಕೇ ಹೊರತು ಹೇರಿಕೆಯಾಗಬಾರದು ಮತ್ತು ಪರೀಕ್ಷೆಯ ತೇರ್ಗಡೆಗೆ, ಅಂಕಗಳ ಪರಿಗಣನೆಗೆ ಕಡ್ಡಾಯವಾಗಿರಬಾರದು. ಇದೆಲ್ಲಾ ದೃಷ್ಷಿಯಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕನ್ನಡ ಇಂಗ್ಲೀಷ್ ಒಳಗೊಂಡ ದ್ವಿಭಾಷಾ ನೀತಿಗೆ ಮರಳುವುದು ಅತ್ಯಂತ ಸೂಕ್ತ.

ಭಾನುವಾರ, ಫೆಬ್ರವರಿ 9, 2025

ಕನ್ನಡ ಅಕ್ಷರಗಳಿರುವ ಕಂಪ್ಯೂಟರ್ ಕೀಬೋರ್ಡ್?

"ಲ್ಯಾಪ್ ಟಾಪಲ್ಲಿ ಟೈಪ್ ಮಾಡಲು ಕನ್ನಡ ಕೀಬೋರ್ಡ್ ಸಿಗುತ್ತದಾ" ಅಂತ ಒಬ್ಬರು ಕೇಳಿದರು. ನಾನು, ಕನ್ನಡ ಕೀಬೋರ್ಡುಗಳೇನು, ಬೇಕಾದಷ್ಟಿವೆ, ಪದ, ನುಡಿ, ಬರಹ, ವಿಂಡೋಸ್ ಇನ್ ಬಿಲ್ಟ್, ಲೀನಕ್ಸ್ ಅದು ಇದು ಅಂತ ಒಂದ್ನಾಲ್ಕು ಹೇಳಿ, "ಬೇಕಾದರೆ  ಕನ್ನಡದಲ್ಲಿ ಬರೆಯುವ ಈ ಯಾವುದಾದರೂ ತಂತ್ರಾಂಶವನ್ನು ಹಾಕಿಕೊಂಡು ಒಂದು external keyboard ಲ್ಯಾಪ್ಟಾಪಿಗೆ ಜೋಡಿಸಿಕೊಂಡು ಕುಟ್ಟಬಹುದು" ಅಂದೆ. ಆದರೆ ಅವರು, ಅದಲ್ಲ ಕೇಳ್ತಿರೋದು, ಕನ್ನಡ ಅಕ್ಷರಗಳಿರುವ ಕೀಬೋರ್ಡೇ ಬೇಕು ಅಂತ ಕೇಳಿದರು.
 
ನನಗೆ ಗೊತ್ತಿರುವಂತೆ ಈಗಿರುವ ಇಂಗ್ಲೀಷ್ ಕೀಬೋರ್ಡ್ ವಿನ್ಯಾಸದಂತೆ ಕನ್ನಡ ಅಕ್ಷರಗಳಿರುವ ಕೀಬೋರ್ಡು ಯಾವುದೂ ಇಲ್ಲ. ಹಿಂದೊಮ್ಮೆ ಯಾವಾಗಲೋ ಪ್ರಾಯೋಗಿಕವಾಗಿ ಮಾಡಿದ್ದನ್ನೋ ಅಥವಾ ಎಲ್ಲೋ ಬಳಕೆಯಲ್ಲಿದ್ದುದ್ದನ್ನೋ ನೋಡಿದ ನೆನಪಿದೆ. (ಎಲ್ಲಾದರೂ ಸರ್ಕಾರಿ ಕಛೇರಿಗಳಲ್ಲಿ ಈಗಲೂ ಇದ್ದರೆ ಬಲ್ಲವರು ತಿಳಿಸಬೇಕು). ಆದರೆ ಇತ್ತೀಚೆಗಂತೂ ಅಂತಹುದು ಯಾವುದೂ ಕಾಣೆ. ವ್ಯಾಪಕವಾಗಿ ಬಳಕೆಯಲ್ಲಿರುವ ಇಂಗ್ಲೀಷ್ ಅಕ್ಷರಗಳಿರುವ QWERTY ಕೀಬೋರ್ಡನ್ನೇ ಕನ್ನಡ ಟೈಪಿಸುವ ಕೆಲಸಕ್ಕೂ ಬಳಸಬೇಕಾದ ಅನಿವಾರ್ಯತೆಯಿಂದ ಕನ್ನಡ ಟೈಪಿಂಗ್ ತಂತ್ರಾಂಶಗಳನ್ನೂ ಸಹ ಅದಕ್ಕೆ ತಕ್ಕುದಾಗಿ ಮಾಡಿದ್ದಾರೆ. 

ನಿಜ ಹೇಳಬೇಕೆಂದರೆ, ಕೀಬೋರ್ಡ್ ಅನ್ನುವುದು ಖಾಲಿ ಕೀಬೋರ್ಡ್ ಅಷ್ಟೆ, ಅದರ ಗುಂಡಿಗಳ ಮೇಲೆ ಇಂಗ್ಲೀಷ್ ಅಕ್ಷರಗಳು ಪ್ರಿಂಟಾಗಿರುತ್ತವೆ ಮತ್ತು ಯಾವ ಕೀ ಗೆ ಯಾವ ಅಕ್ಷರ ಮೂಡಬೇಕು ಅಂತ ತಂತ್ರಾಂಶ ನಿರ್ದೇಶನ ಇರುತ್ತದೆ. ಬದಲಾಗಿ ಅದರ ಮೇಲೆ ಬೇರೆ ಭಾಷೆಯ ಅಕ್ಷರಗಳನ್ನು ಪ್ರಿಂಟ್ ಹಾಕಿದರೆ ಮತ್ತು ತಕ್ಕುದಾದ ತಂತ್ರಾಂಶ ನಿರ್ದೇಶಕ ಕೊಟ್ಟರೆ ಅದು ಆಯಾ ಭಾಷೆಯ ಕೀಬೋರ್ಡು ಅನಿಸಿಕೊಳ್ಳಬಹುದು. ಕೆಲವು ಭಾಷೆಗಳಿಗೆ ಒಂದಿಷ್ಟು ಹೆಚ್ಚಿನ ಗುಂಡಿಗಳ ಅವಶ್ಯಕತೆ ಇರುತ್ತದೆ.
ಟೈಪಿಂಗ್ ಅನ್ನುವುದು ಮೆದುಳಿನ ಸಹಯೋಗದಿಂದ ಬೆರಳುಗಳ ಚಲನೆಗಳ ಮೂಲಕ ನಡೆಯುವುದರಿಂದ ಅದರದ್ದೊಂದು ವೈಜ್ಞಾನಿಕ ಕ್ರಮದಿಂದಲೇ ಕೀಬೋರ್ಡ್ ವಿನ್ಯಾಸಗಳು ಅಭಿವೃದ್ಧಿಯಾಗಿವೆ. (ಕೀಬೋರ್ಡುಗಳ ವಿನ್ಯಾಸದ ಬೆಳವಣಿಗೆ ಬಗ್ಗೆ ಓದಿದರೆ ಬಹಳ ಕುತೂಹಲಕಾರಿಯಾಗಿದೆ). 

ಚಿತ್ರ: https://ka-naada.com/
ಅದು ಇರಲಿ. ಕನ್ನಡದ್ದೇ ಅಕ್ಷರಗಳಿರುವ 'ಕ-ನಾದ' ಕೀಬೋರ್ಡು ಎರಡ್ಮೂರು ವರ್ಷಗಳ ಹಿಂದೆ ತಯಾರಿಸಲ್ಪಟ್ಟಿತ್ತು. ಈಗಲೂ ಅವರ ಜಾಲತಾಣದಲ್ಲಿ ಕೊಳ್ಳಲು ಲಭ್ಯ ಇದೆ. ಆದರೆ ಅದರ ವಿನ್ಯಾಸ ಬೇರೆ ರೀತಿಯೇ ಇದೆ. (ಚಿತ್ರ ನೋಡಿ). ಅದರಲ್ಲಿ ಟೈಪ್ ಮಾಡುವುದು ಸುಲಭ ಅಂತ ತಯಾರಕರು ಹೇಳುತ್ತಾರೆ. ಆದರೆ ಅದು ಹೇಗೆ ಸುಲಭ ಅಂತ ನನಗಂತೂ ಇದುವರೆಗೂ ಅರ್ಥಾಗಿಲ್ಲ. ನಮಗೆ qwerty ಕೀಬೋರ್ಡ್ ಬಳಸಿ ಅಭ್ಯಾಸವಾಗಿರುವುದರಿಂದ ಹಾಗನ್ನಿಸುತ್ತದೋ ಗೊತ್ತಿಲ್ಲ. 'ಕ-ನಾದ' ಕೀಬೋರ್ಡಿನ ವಿನ್ಯಾಸವು ಟೈಪಿಂಗಿಗೆ ಅನುಕೂಲ ಅನ್ನಿಸುತ್ತಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ನನ್ನ ಬುದ್ದಿಗೆ ನಿಲುಕುತ್ತಿಲ್ಲ! (ಅವರು ತುಳು, ದೇವನಾಗರಿ-ಇಂಗ್ಲೀಷ್ ಕೀಲಿಮಣೆಗಳನ್ನೂ ತಯಾರಿಸಿದ್ದಾರೆ). ಸದ್ಯಕ್ಕಂತೂ ಕನ್ನಡ ಅಕ್ಷರಗಳಿರುವ ಕೀಬೋರ್ಡೇ ಬೇಕು ಅಂದರೆ ಅದೊಂದೇ ಇರುವುದು. ಅದು ಬಿಟ್ಟರೆ ಈಗಿರುವ ಇಂಗ್ಲೀಷ್ ಕೀಬೋರ್ಡನ್ನೇ ಕನ್ನಡಕ್ಕೆ ಮಾಡಿಕೊಳ್ಳಬೇಕು ಅಂದರೆ ಕನ್ನಡ ಅಕ್ಷರಗಳ ಸ್ಟಿಕರ್ಸ್ ಮಾಡಿಸಿಕೊಂಡು ಕೀಗಳ ಮೇಲೆ ಅಂಟಿಸಿಕೊಳ್ಳಬೇಕಷ್ಟೆ. ಅದು ಹೊರತು ಬೇರೆ ಉಪಾಯ ಹೊಳೆಯುತ್ತಿಲ್ಲ!


ಶನಿವಾರ, ಜನವರಿ 25, 2025

ಕುದುರೆಮುಖ ಸಾಲಿನ ಕುರಿಂಜಲ್ ಬೆಟ್ಟದ ಚಾರಣ

ಹಿಂದಿನವಾರ ಕುದುರೆಮುಖ ಸಾಲಿನ ಬೆಟ್ಟಗಳಲ್ಲಿ ಪ್ರವಾಸ ಮತ್ತು ಚಾರಣ ಮಾಡಿಬಂದೆವು. ಅದರ ಕೆಲವು ವಿವರಗಳನ್ನು ದಾಖಲಿಸಲು ಈ ಬರೆಹ. 

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು ಕುದುರೆಮುಖ ಊರಿನಿಂದ ಕಾರ್‍ಕಳದವರೆಗೆ ರಸ್ತೆ ಇದರೊಳಗೆ ಹಾದುಹೋಗುತ್ತದೆ. ನಾವು ಇಲ್ಲಿಗೆ ಹೋಗಬೇಕೆಂದು ಯೋಜನೆ ಹಾಕಿದಾಗ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಚಾರಣಕ್ಕೆ ಸೂಕ್ತವಾದ ಸ್ಥಳಗಳನ್ನು ಹುಡುಕಲಾಗಿ ಅಲ್ಲಿರುವ ಭಗವತಿ ನೇಚರ್ ಕ್ಯಾಂಪ್ ಹಾಗೂ ಕುರಿಂಜಾಲ್ ಶಿಖರ ಚಾರಣವನ್ನು ಆಯ್ಕೆ ಮಾಡಿಕೊಂಡೆವು. 

ಭಗವತಿ ನೇಚರ್ ಕ್ಯಾಂಪ್

ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್'ನವರದ್ದಾಗಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೇ ಇದೆ. ನಾವು ಹತ್ತು ಜನರಿದ್ದುದರಿಂದ ಡಾರ್‍ಮಿಟ್ರಿಯನ್ನು ಬುಕ್ ಮಾಡಿದ್ದೆವು. ಈ ಕ್ಯಾಂಪಿನಲ್ಲಿ ಕಾಟೇಜುಗಳೂ ಸಹ ಇದೆ. ಬೆಂಗಳೂರಿನಿಂದ ಹೊರಟು ಮೂಡಿಗೆರೆ, ಕಳಸ, ಸಂಸೆ ಮಾರ್‍ಗವಾಗಿ ಸಾಗಿದರೆ ಬಸ್ರೀಕಲ್ ಎಂಬಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ವಾಹನಗಳ ನಂಬರ್ ಬರೆದುಕೊಂಡು ಪಾಸ್ ಕೊಡುತ್ತಾರೆ.  ಈ ರಸ್ತೆಯಲ್ಲಿ ಹಾಗೇ ಮುಂದೆ ಹೋದಾಗ ಕುದುರೆಮುಖ ಊರು ಸಿಗುತ್ತದೆ. ಕಾರ್‍ಕಳ ಅಥವಾ ಶೃಂಗೇರಿ ಕಡೆಯಿಂದ ಹೊರಹೋಗಲು ಅಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಈ ಪಾಸನ್ನು ಕೊಟ್ಟು ಹೊರಹೋಗಿದ್ದನ್ನು ದಾಖಲಿಸಬೇಕು. ಕುದುರೆಮುಖದ ಅರಣ್ಯ ಇಲಾಖೆಯ ಕಛೇರಿಯಿಂದ ಸುಮಾರು ಎಂಟು ಕಿಮಿ ದೂರದಲ್ಲಿ ಭಗವತಿ ನೇಚರ್ ಕ್ಯಾಂಪ್ ಸಿಗುತ್ತದೆ. ಮುಖ್ಯರಸ್ತೆಯಿಂದ ಮತ್ತೆ ಒಳಗೆ ಒಂದು ಕಿಮಿ ಹೋಗಬೇಕು. ಎಲ್ಲಾ ಕಾಲದಲ್ಲೂ ವಾಹನಗಳು ಹೋಗಬಹುದಾದಂತಹ ರಸ್ತೆ ಇದೆ.  ನೇಚರ್ ಕ್ಯಾಂಪಿನ ಪರಿಸರವು ಚೆನ್ನಾಗಿದ್ದು ಒಳ್ಳೆಯ ಅನುಭವ ಒದಗಿಸುತ್ತದೆ. 

ನೇಚರ್ ಕ್ಯಾಂಪಿನ ಪ್ಯಾಕೇಜ್ ಚಟುವಟಿಗಳಲ್ಲಿ ಮುಖ್ಯವಾಗಿ ಇರುವುದು ನೇಚರ್ ವಾಕ್, ಡಾಕ್ಯುಮೆಂಟರಿ ಶೋ ಮತ್ತು ಊಟ ತಿಂಡಿ ಚಾ ಕಾಪಿ. ನೇಚರ್ ವಾಕ್ ಎಂದರೆ ಅಲ್ಲೇ ಸುತ್ತಲಿನ ಪರಿಸರದಲ್ಲಿ ಆಸಕ್ತರು ಮರಗಿಡಗಳನ್ನು, ಪಕ್ಷಿಗಳನ್ನು ನೋಡುತ್ತಾ, ಬಗೆಬಗೆಯ ಹಕ್ಕಿಗಳ ಕೂಗನ್ನು ಕೇಳಿಸಿಕೊಳ್ಳುತ್ತಾ ಓಡಾಡಬಹುದು. ಹತ್ತಿರದಲ್ಲೇ ಒಂದು ವೀಕ್ಷಣಾಗೋಪುರವಿದ್ದು ಅದರ ಮೇಲಿಂದ ಬೆಟ್ಟಗಳ ಸಾಲಿನ, ಕಾಡಿನ ನೋಟ ಸಾಧ್ಯ. ಈ ಕ್ಯಾಂಪಿನ ಪಕ್ಕದಲ್ಲೇ ತಾಗಿಕೊಂಡಂತೆ ಭದ್ರಾನದಿಯು ಹಾದುಹೋಗಿದೆ. ನಿಯಮದ ಪ್ರಕಾರ ನದಿಯಲ್ಲಿ ಇಳಿಯುವುದು ನಿಷಿದ್ಧ. ನೀರು ತುಂಬಿ ಹರಿಯುವಾಗಲಂತೂ ಅಪಾಯಕಾರಿ. ಬೇರೆ ಕಾಲಗಳಲ್ಲಿ ನೀರು ಕಡಿಮೆ ಇದ್ದಾಗ ಹೋಗಬಹುದಾದರೂ ಇದು ನೇಚರ್ ಕ್ಯಾಂಪಿನವರ ಹೊಣೆಗಾರಿಕೆಯಲ್ಲಿಲ್ಲ. ರಾತ್ರಿ ಏಳೂವರೆ ಗಂಟೆಗೆ ಕುದುರೆಮುಖಶ್ರೇಣಿಗಳ ಬಗ್ಗೆ, ಅರಣ್ಯ ಸಿಬ್ಬಂದಿಯ ಕೆಲಸದ ಬಗ್ಗೆ ಕೆಲವು ಡಾಕ್ಯುಮೆಂಟರಿಗಳನ್ನು ಹಾಕಲಾಗುತ್ತದೆ. ಆಸಕ್ತರು ಕುಳಿತು ನೋಡಬಹುದು. ಊಟ ತಿಂಡಿಗಳ ಬಗ್ಗೆ ಯಾವುದೇ ದೂರೂ ಇಲ್ಲದಂತೆ ಬಗೆಬಗೆಯ ಮತ್ತು ರುಚಿಯಾದ ಪದಾರ್‍ಥಗಳನ್ನು ಒದಗಿಸಿದರು. ಅಲ್ಲಿರುವ ಊಟದ ಜಗುಲಿಯಲ್ಲಿ ನಾವು ಬಡಿಸಿಕೊಂಡು ಉಣ್ಣಬಹುದು. ಇನ್ನುಳಿದಂತೆ ಕಾಟೇಜುಗಳು ಮತ್ತು ಡಾರ್‍ಮೆಟ್ರಿಯನ್ನು ತಕ್ಕಮಟ್ಟಿಗೆ ನಿರ್‍ವಹಿಸಿ ಇಟ್ಟುಕೊಂಡಿದ್ದಾರಾದರೂ ಇನ್ನೂ ಒಂದಿಷ್ಟು ನಿರ್‍ವಹಣೆ ಮತ್ತು ಸೌಲಭ್ಯಗಳನ್ನು ಸುಧಾರಿಸಬಹುದು ಎನಿಸಿತು.   ಇಲ್ಲಿಂದ ಹೆಚ್ಚುವರಿ ಪಾವತಿ ಮಾಡಿ ಜೀಪ್ ಸಫಾರಿ ಹೋಗಲೂ ಅವಕಾಶವಿದೆ.

ಕುರಿಂಜಲ್ ಬೆಟ್ಟ ಚಾರಣ


ಕುರಿಂಜಾಲ ಬೆಟ್ಟದ ಚಾರಣದ ಪ್ರಾರಂಭದ ಜಾಗ ಭಗವತಿ ನೇಚರ್ ಕ್ಯಾಂಪ್. ಅಲ್ಲಿಂದಲೇ ಕುರಿಂಜಾಲ್ ಹಾಗೂ ಗಂಗಡಿಕಲ್ ಬೆಟ್ಟಗಳ ಚಾರಣ ಶುರುವಾಗುತ್ತದೆ. ಕುದುರೆಮುಖ ಶ್ರೇಣಿಯ ಎಲ್ಲಾ ಟ್ರೆಕ್ ಗಳಿಗೂ ಅರಣ್ಯ ಇಲಾಖೆಯ ಜಾಲತಾಣದ ಮೂಲಕ ಮೊದಲೇ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕೆಲವು ಚಾರಣಗಳಿಗೆ ಕುದುರೆಮುಖದ ಅರಣ್ಯ ಕಛೇರಿಯಲ್ಲಿ, ಕೆಲವು ಚಾರಣಗಳಿಗೆ ಬಸ್ರೀಕಲ್ ಅರಣ್ಯ ಕಛೇರಿಯಲ್ಲಿ ಚಾರಣದ ದಿನದ ಬೆಳಗ್ಗೆ ಹಾಜರಾತಿ ಹಾಕಿ ಗುರುತಿನ ಚೀಟಿ ತೋರಿಸಿ ಸಹಿಮಾಡಿ ಅವರೇ ಒದಗಿಸುವ ಗೈಡಿನ ಜೊತೆಗೆ ಹೊರಡಬೇಕಾಗುತ್ತದೆ. ಅಂತೆಯೇ ನಾವು ಕುದುರೆಮುಖದ ಕಛೇರಿಗೆ ಹೋಗಿ ನಮ್ಮ ನೊಂದಣಿ ತೋರಿಸಿದೆವು. ಕುರಿಂಜಾಲ್ ಪರ್‍ವತದ ತುದಿಗೆ ಅಲ್ಲಿಂದ ಏಳು ಕಿಮಿ ನಡಿಗೆ. ಮೊದಲು ಸುಮಾರು ಐದು ಕಿಮಿ ಕಾಡಿನಲ್ಲಿ ನಡೆಯಬೇಕು. ಕೊನೆಯ ಎರಡು ಕಿಮಿ ಬೆಟ್ಟದ ಏರುದಾರಿಯಲ್ಲಿ ನಡೆಯಬೇಕು. ಇದು ತೀರಾ ಕಷ್ಟದ ಹಾದಿ ಅಲ್ಲದಿರುವುದರಿಂದ ಒಂದು ತಕ್ಕ ಮಟ್ಟಿಗಿದ ದೈಹಿಕ ಸದೃಢತೆ ಇರುವ ಯಾರಾದರೂ ಹತ್ತಬಹುದಾಗಿದೆ. ದಟ್ಟಕಾಡಿನಲ್ಲಿ ಹಾದು, ನಡುವೆ ಸಿಗುವ ನದಿ ತೊರೆಗಳಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಶಿಖರದ ತುದಿ ತಲುಪಿ ಸ್ವಲ್ಪ ಸಮಯ ಕಳೆದು ಅಲ್ಲಿಂದ ಇಳಿದು ಬರುವುದಕ್ಕೆ ಒಟ್ಟಾರೆ ಸುಮಾರು ಐದು ಗಂಟೆಗಳನ್ನು ತೆಗೆದುಕೊಂಡೆವು. ಬೆಟ್ಟದ ತುದಿಯಿಂದ ಕಾಣುವ ವಿಹಂಗಮ ನೋಟವು ಬಹಳ ಸುಂದರವಾಗಿತ್ತು. ಅವತ್ತಿನ ದಿನ ಹೆಚ್ಚು ಬಿಸಿಲು ಅಥವಾ ಮಳೆಯ ವಾತಾವರಣವೂ ಇಲ್ಲದೆ ಚೆನ್ನಾಗಿದ್ದುದರಿಂದ  ಅನುಕೂಲವಾಯಿತು.


ಒಂದು ಕುತೂಹಲಕಾರಿ ಸಂಗತಿ
ಚಾರಣಕ್ಕೆಂದು ಹೋದಾಗ, ಕಾಡಿನಲ್ಲಿ ನಡೆಯುತ್ತಿದ್ದಾಗ ಒಳಗೆ ಒಂದಿಷ್ಟು ದೂರದಾನಂತರ ಚಿತ್ರದಲ್ಲಿರುವಂತಹ ಮರಗಳು ಕಾಣಿಸಿದವು. ನಾನು ಆ ತರಹದ ಮರಗಳನ್ನು ಅದೇ ಮೊದಲು ನೋಡಿದ್ದು. ಬುಡದಲ್ಲಿ ಮಣ್ಣಿನಿಂದ ಕೊಂಚ ಮೇಲ್ಭಾಗದವರೆಗೂ ಸುತ್ತಲೂ ಅಡ್ಡ ಪಟ್ಟಿಗಳ ತರಹ ರಚನೆ ಇದ್ದು ಕೆಲವು ಮರಗಳಲ್ಲಿ ಅದರಿಂದ ಬೇರುಗಳು ಹೊರಬಂದು ಗೊಂಚಲಾಗಿ ಹರಡಿಕೊಂಡಿರುತ್ತವೆ. ದೊಡ್ಡ ಮರಗಳಲ್ಲಿ ಬೇರುಗಳು ಹತ್ತು ಅಡಿಗೂ ದೂರ ಮಣ್ಣಿನ ಮೇಲೇ ಚಾಚಿ ಬೆಳೆದಿದ್ದವು. ಮೊದಮೊದಲು ಒಂದೆರಡು ಕಂಡ ಮರಗಳು ಆನಂತರ ಹೆಚ್ಚಾಗುತ್ತಾ ಹೋದವು. ಆವರೆಗೆ ಕಾಡಿನಲ್ಲಿ ಹಲವು ಜಾತಿಯ ಮರಗಳು ಇದ್ದವು. ಆದರೆ ಈ ಪ್ರದೇಶದಲ್ಲಿ ಶುರುವಾಗಿ ಅಲ್ಲಿಂದ ಮುಂದಿನ ಕಾಡಿನ ಪ್ರದೇಶವೆಲ್ಲಾ ಈ ಮರಗಳೇ ತುಂಬಿದ್ದವು. ಚಿಕ್ಕಪುಟ್ಟ ಮರಗಿಡ ಬಳ್ಳಿಗಳು ಬೇರೆ ಹಲವು ಜಾತಿಯವು ಇದ್ದವಾದರೂ ದೊಡ್ಡದಾಗಿ ಬೆಳೆದ ಮರಗಳಲ್ಲಿ ಇವುಗಳದ್ದೇ ಪ್ರಾಬಲ್ಯವಾಗಿ ಎಲ್ಲೆಡೆ ಹರಡಿಕೊಂಡಿದ್ದವು. ಇನ್ನೂ ಒಳಗಿನ ಕಾಡಿನಲ್ಲಿ ಬೇರೆ ಯಾವುದೇ ಮರಗಳು ಇಲ್ಲದಂತೆ ಬರೀ ಇವೇ ಮರಗಳು ತುಂಬಿದ್ದವು. ಒಂದು ಜಾಗದಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ಒಂದು ಫಲಕ ಹಾಕಿದ್ದು ಕಾಣಿಸಿತು. Poeciloneuron indicum ಎಂಬ ಹೆಸರಿನ ಈ ಮರಗಳಿರುವ ಪ್ರದೇಶ monodominent forest ಎಂದೇ ಗುರುತಿಸಲಾಗಿತ್ತು. (ಚಿತ್ರದಲ್ಲಿದೆ). ಈ ಮರಗಳಿಗೆ ಕನ್ನಡದಲ್ಲಿ 'ಬಲಿಗೆ' ಎಂದು ಕರೆಯುತ್ತಾರೆ ಎಂದು ನಮ್ಮ ಸ್ಥಳೀಯ ಮಾರ್ಗದರ್ಶಿಯಿಂದ ತಿಳಿಯಿತು. ನಾನು ಕಾಡಿನಲ್ಲಿ ಈ ರೀತಿಯ ಪರಿಸರವನ್ನು ಇದೇ ಮೊದಲು ನೋಡಿದ್ದು ಇದೊಂದು ಹೊಸ ಅನುಭವವಾಗಿತ್ತು. ಅವು ಆ ಪರಿಸರದಲ್ಲಿ ಏಕೆ, ಹೇಗೆ ಅಷ್ಟು ಹೆಚ್ಚಾಗಿ ಬೆಳೆದವು, ಅವುಗಳ ಬುಡದಲ್ಲಿ ಆ ರಚನೆಯ ಕಾರಣವೇನು ಎಂಬುದರ ಬಗ್ಗೆ ಓದಿ ತಿಳಿದುಕೊಳ್ಳಬೇಕಿದೆ. ವಿಕಿಪೀಡಿಯಾದಲ್ಲಿ ಇದರ ಬಗ್ಗೆ ಕಿರುಮಾಹಿತಿ ಇದೆ : ಬಳಗಿ

****

ಭಾನುವಾರ, ಏಪ್ರಿಲ್ 28, 2024

ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಏಕೆ?

ಮೇ 26, 2024ರಂದು ಲೋಕಸಭಾ ಚುನಾವಣೆಗೆ ಮತದಾನ ಆಯಿತು. ಕರ್‍ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಸುಮಾರು ಶೇ.55 ರಷ್ಟು ಮತದಾನದ ಪ್ರಮಾಣ ವರದಿಯಾಗಿದೆ.

ಬೇರೆ ಕ್ಷೇತ್ರಗಳಿಗಿಂತ ಬೆಂಗಳೂರಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಅಂತ ಪ್ರತಿಬಾರಿಯೂ ಹೇಳ್ತಾರೆ. ಅದಕ್ಕೆ ಕಾರಣಗಳು ಹೀಗಿರಬಹುದು ಅಂತ ನನ್ನ ಅನಿಸಿಕೆ.

೧. ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವುದಿಲ್ಲ. ನಗರ ಅಂದಮೇಲೆ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಸಸ್ಥಳ ಬದಲಾಯಿಸುತ್ತಿರುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರಿರುತ್ತಾರೆ, ಬೇರೆ ಊರುಗಳಿಗೆ ಹೋಗುವವರಿಗುತ್ತಾರೆ. ಬಹಳ ಜನ ತಾವು ಇರುವಲ್ಲಿ ಹೆಸರು ಸೇರಿಸಿದರೆ, ಹಿಂದಿನ ಪಟ್ಟಿಯಲ್ಲಿ ಹೆಸರು ತೆಗೆಸುವ ಗೋಜಿಗೆ ಹೋಗುವುದಿಲ್ಲ. ನಗರದ ಸುತ್ತಮುತ್ತಲಿನ ಊರಿನವರು ಅವರವರ ಊರಿಗೆ ಹೋಗಿ ಮತಚಲಾಯಿಸುತ್ತಾರೆ. ಬೆಂಗಳೂರಲ್ಲಿನ ಪಟ್ಟಿಯಲ್ಲೂ ಅವರ ಹೆಸರಿರುತ್ತದೆ. ನಿಧನರಾದವರ ಹೆಸರುಗಳೂ ಹಾಗೇ ಇರುತ್ತವೆ. ನಗರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬಹಳ ಶ್ರಮ, ಸಿಬ್ಬಂದಿ, ಸಮಯ ಬೇಕಿರುವುದರಿಂದ ಆ ಕೆಲಸ ಮಾಡುವುದಿಲ್ಲ. ಕೋಟಿಗಟ್ಟಲೇ ಮತದಾರರಿರುವ ಬೆಂಗಳೂರಿನಂತಹ ನಗರದಲ್ಲಿ ಅದು ಸುಲಭದ ಕೆಲಸ ಅಲ್ಲ. 

೨. ಬೆಂಗಳೂರಲ್ಲಿ ಪರರಾಜ್ಯಗಳ ವಲಸಿಗರು ಜಾಸ್ತಿ. ಅವರಲ್ಲೂ ಅನೇಕರು ಪಾಸ್ ಪೋರ್ಟ್, ಪಡಿತರ ಮುಂತಾದ ಬೇರೆ ಬೇರೆ ಕಾರಣಗಳಿಗಷ್ಟೆ ಮತದಾರದ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಅವರಿಗೆ ಇಲ್ಲಿನ ರಾಜಕೀಯ, ಅಭ್ಯರ್ಥಿಗಳ ಬಗ್ಗೆ ಏನೂ ಗೊತ್ತಿರದ ಕಾರಣ ಮತದಾನಕ್ಕೆ ಹೋಗದೇ ಇರುವವರು ಹೆಚ್ಚಿರಬಹುದು. ಹಲವರು ಇಲ್ಲೇ ನೆಲೆಯೂರಿ ಬಹಳ ವರ್ಷಗಳಾಗಿದ್ದರೂ ಹೊರಗಿನವರಂತೆಯೇ ಇದ್ದು ಮತದಾನಕ್ಕೆ ಆಸಕ್ತಿ ಹೊಂದಿರುವುದಿಲ್ಲ.  

೩. ಇಲ್ಲಿನ ಬಹುತೇಕ ಯುವಜನಾಂಗಕ್ಕೆ ರಾಜಕೀಯ ಪ್ರಜ್ಞೆ ಕಡಿಮೆ.  ಬಹಳ ಮಕ್ಕಳಿಗೆ ರಾಜಕೀಯ, ಆಡಳಿತ, ಚುನಾವಣೆ ಬಗ್ಗೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ.  ಇಂತಹವರಲ್ಲಿ ಬಹಳಷ್ಟು ಜನ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಮನೆಯಲ್ಲಿ ಯಾರೂ ಹೇಳದಿದ್ದರೆ ಮತದಾನಕ್ಕೆ ಹೋಗದಿರಬಹುದು.  

೪. ಓಡಾಟದ ಕೆಲಸದಲ್ಲಿರುವವರು, ರಾತ್ರಿಪಾಳಿಯವರು ಹಲವು ಜನ ಮತದಾನ ತಪ್ಪಿಸಿಕೊಳ್ಳಬಹುದು. ಹಲವರು ವಿದೇಶಗಳಿಗೆ ಹೋಗಿರುತ್ತಾರೆ. ಅಂತಹ ಉದ್ಯೋಗಿಗಳು ನಗರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುತ್ತಾರೆ. 

೫. ಹಿರಿಯನಾಗರಿಕರು ನಿರಾಸಕ್ತಿ ಹೊಂದಿರಬಹುದು. "ಯಾವ್ ಪಕ್ಷ ಬಂದ್ರೂ ಅಷ್ಟೇ ಬಿಡ್ರಿ. ಏನಾದ್ರೂ ಮಾಡ್ಕಳ್ಲಿ.." ಅನ್ನೋದು ಸಾಮಾನ್ಯ. ಆದರೆ ಬೇರೆ ಊರುಗಳಲ್ಲಿ ಮುದುಕರು ಹುಡುಗರು ಎಲ್ಲರೂ ಎದ್ದುಬಂದು ಓಟ್ ಮಾಡೋದಿದೆ. ಕಾರಣ ಹಲವಿರಬಹುದು.

೬. ಇದಿಷ್ಟೂ ಕಾರಣಗಳ ಹೊರತಾಗಿಯೂ ನಿಜವಾಗಿಯೂ ನಗರದಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಇರುವವರ, ಅದರ ಮಹತ್ವವನ್ನು ತಿಳಿಯದವರ, ನಿರ್ಲಕ್ಷ್ಯ ಮಾಡುವವರ, ಆ ಪ್ರಜ್ಞೆ ಇರದವರ ಸಂಖ್ಯೆ ಗಣನೀಯವಾಗಿದೆ.  ವಾರಾಂತ್ಯದಲ್ಲಿ ಮತದಾನದ ದಿನ ಬಂದಾಗ ಹಲವರು ಪ್ರವಾಸ ಹೋಗಿಬಿಡುತ್ತಾರೆ ಎಂಬ ಆರೋಪವು ಈ ಅಂಶದಲ್ಲಿ ಸೇರುತ್ತದೆ. ಈ ಬಾರಿಯ ಮತದಾನವು ಶುಕ್ರವಾರ ಬಂದಿತ್ತು. ಹಾಗಾಗಿ ಮೂರು ದಿನ ರಜೆ ಸಿಗುವಂತಾಗಿತ್ತು.  ಇದನ್ನು ತಪ್ಪಿಸಲು ಹೋಂಸ್ಟೇ , ರೆಸಾರ್ಟುಗಳಲ್ಲಿ ಬುಕಿಂಗ್ ತೆಗೆದುಕೊಳ್ಳದಂತೆ ಜಿಲ್ಲಾಡಳಿತಗಳು ನಿರ್‍ದೇಶನ ಕೊಟ್ಟಿದ್ದವು ಎಂದು ವರದಿಯಾಗಿತ್ತು. ಅದು ಪಾಲನೆ ಆಯಿತೊ ಇಲ್ಲವೊ ಗೊತ್ತಿಲ್ಲ.

ಆದರೆ ಮುಖ್ಯಕಾರಣ ಮೇಲೆ ಹೇಳಿರುವ ಅಂಶಗಳಲ್ಲಿ ಮೊದಲನೆಯದ್ದೇ ಆಗಿದೆ ಅಂತ ನನ್ನ ಅನಿಸಿಕೆ.

ಭಾನುವಾರ, ಜುಲೈ 2, 2023

ಐಫೋನ್'ಗಾಗಿ ಕನ್ನಡ ಕೀಬೋರ್ಡ್ ಆಪ್‌ಗಳು

ಐಫೋನ್/ಐಪ್ಯಾಡಲ್ಲಿ ಕನ್ನಡದಲ್ಲಿ ಬರೆಯಲು ಇನ್ ಬಿಲ್ಟ್ ಕೀಬೋರ್‍ಡ್ ಇದೆ. ಆದರೆ ಅದು ಅಷ್ಟು ಅನುಕೂಲವಾಗಿಲ್ಲ ಅನ್ನಿಸುವವರಿಗೆ ಬೇರೆ ಹಲವಾರು ಆಯ್ಕೆ ಇವೆ. ಅವುಗಳಲ್ಲಿ ಕೆಲವು ಆ‌ಪ್ ಗಳು ಬಳಕೆಗೆ ಸುಲಭವಾಗಿವೆ ಅಂತ ಅವುಗಳನ್ನು ಬಳಸುತ್ತಿರುವ ಐಫೋನಿಗರು ಹೇಳುತ್ತಾರೆ. ಹಾಗೆ ಶಿಫಾರಸ್ಸು ಮಾಡಲ್ಪಟ್ಟ ಕೆಲ ಆಪ್ ಗಳು ಚಿತ್ರದಲ್ಲಿವೆ.



ಶನಿವಾರ, ಫೆಬ್ರವರಿ 4, 2023

ವಿಕಿ ಸಮ್ಮಿಲನ ೨೦೨೩, ಉಡುಪಿ

 

Wikimedia Foundation, Wikimedia logo family complete-2022, 
CC BY-SA 3.0
ಆನ್ ಲೈನ್ ಜಗತ್ತಿನಲ್ಲಿ ಬಹುತೇಕರಿಗೆ ಗೊತ್ತಿರುವ ವಿಕಿಪೀಡಿಯಾ ಎನ್ನುವುದು ಒಂದು ಮುಕ್ತಜ್ಞಾನದ ಮಾಹಿತಿ ತಾಣ. ಇದರ ವಿಶೇಷ ಎಂದರೆ ಇದು ಜನಸಮುದಾಯದಿಂದಲೇ ನಡೆಯಲ್ಪಡುವುದು. ಅಂದರೆ ಇದರಲ್ಲಿ ಮಾಹಿತಿ ತುಂಬಿಸಲು ಮತ್ತು ಮಾಹಿತಿ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಇದು ಜಗತ್ತಿನ ಹಲವಾರು ಭಾಷೆಗಳಲ್ಲಿದ್ದು ಕನ್ನಡದಲ್ಲೂ ಸಹ ಸಕ್ರಿಯವಾಗಿದೆ.  ವಿಕಿಪೀಡಿಯಾ ಅನ್ನುವುದು ಒಂದು ಯೋಜನೆಯಾಗಿದ್ದು ಇದೇ ರೀತಿ ವಿಕಿಸೋರ್‍ಸ್, ವಿಕಿಕೋಟ್ಸ್, ವಿಕ್ಷನರಿ, ವಿಕಿಡೇಟಾ, ವಿಕಿ ಕಾಮನ್ಸ್ .. ಹೀಗೆ ಹಲವಾರು ಯೋಜನೆಗಳು ವಿವಿಧ ಭಾಷೆಗಳಲ್ಲಿ ಮುಕ್ತಜ್ಞಾನ ಮತ್ತು ಮುಕ್ತಮಾಹಿತಿಯ ಉದ್ದೇಶದಿಂದ ನಡೆಯಲ್ಪಡುತ್ತಿವೆ. ಇವೆಲ್ಲವನ್ನು ಸೇರಿ 'ವಿಕಿಮೀಡಿಯ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾ ಕೊಡುಗೆ ನೀಡುತ್ತಿರುವವರನ್ನು ವಿಕಿಮೀಡಿಯನ್ಸ್ (ವಿಕಿಮೀಡಿಯನ್ನರು) ಎನ್ನಲಾಗುತ್ತದೆ.

ವಿಕಿಮೀಡಿಯನ್ ಸಮುದಾಯ ಆಗಾಗ ಭೇಟಿಯಾಗುವುದು ವಾಡಿಕೆ. ಸಾಮಾನ್ಯವಾಗಿ ಒಂದಿಷ್ಟು ಸಕ್ರಿಯ ವಿಕಿಮೀಡಿಯನ್ನರು ಒಂದೆಡೆ ಸೇರಿ ಆ ಯೋಜನೆಗಳ ಬಗ್ಗೆ ಚರ್‍ಚಿಸುವುದು, ಸಮುದಾಯವನ್ನು ಬೆಳೆಸುವ ಬಗ್ಗೆ ಕಾರ್‍ಯಯೋಜನೆ ರೂಪಿಸುವುದು, ಪರಸ್ಪರ ಮಾಹಿತಿ ವಿನಿಮಯ, ತರಬೇತಿ, ಕಾರ್‍ಯಾಗಾರಗಳು ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗುವ ಅಭ್ಯಾಸವಿದೆ. ಆಯಾ ಭಾಷಾ ಸಮುದಾಯಗಳು ಅಥವಾ ನಿರ್‍ದಿಷ್ಟ ಕಾರ್‍ಯಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಬಳಕೆದಾರರ ಗುಂಪುಗಳು ಕೂಡ ಉದ್ದೇಶಿತ ಕೆಲಸಗಳಿಗಾಗಿ ಭೇಟಿಯಾಗುತ್ತವೆ.  

ಈಗೊಂದು ಎರಡ್ಮೂರು ವರ್‍ಷಗಳಿಂದ ಕೋವಿಡ್ ಮುಂತಾದ ಕಾರಣಗಳಿಂದ  ಭೌತಿಕ ಭೇಟಿ ಸಾಧ್ಯವಾಗದೇ ಹೋಗಿತ್ತು. ಈ ಸಂದರ್‍ಭದಲ್ಲಿ ಮೂರ್‍ನಾಲ್ಕು ಬಾರಿ ಆನ್ ಲೈನ್ ಸಭೆಗಳನ್ನು ನಡೆಸಿದ್ದೆವು.  ಆ ಸಭೆಯಲ್ಲಿ ಚರ್‍ಚಿಸಿದಂತೆ ಈ ಬಾರಿ ಒಂದು ಭೌತಿಕ ಸಮ್ಮಿಲನವನ್ನು  ಉಡುಪಿಯಲ್ಲಿ ನಡೆಸುವುದು ಎಂದು ತೀರ್‍ಮಾನವಾಯಿತು.  

Pavanaja, Kannada Wiki Sammilana 2023 Udupi 02, CC BY-SA 4.0
ಜನವರಿ ೨೩ರಂದು ಉಡುಪಿಯ ಜಿ. ಶಂಕರ್ ಮಹಿಳಾ ಸರ್‍ಕಾರಿ ಕಾಲೇಜಿನ ಸಭಾಂಗಣದಲ್ಲಿ ಒಂದು
ದಿನದ ಸಮ್ಮಿಲನವನ್ನು ನಡೆಸಿದೆವು. ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನಡೆದ ಈ ಸಮ್ಮಿಲನ ಕಾರ್‍ಯಕ್ರಮವನ್ನು ಉದ್ಘಾಟಿಸಿದವರು ನಾಡೋಜ ಕೆ.ಪಿ.ರಾವ್ ಅವರು. 

ಅನಂತರ ಹಲವು ವಿಕಿಮೀಡಿಯನ್ನರಿಂದ ಹಲವು ವಿಷಯಗಳ ಬಗ್ಗೆ ಸೆಮಿನಾರ್, ಪ್ರೆಸೆಂಟೇಶನ್ ಗಳು ನಡೆದವು. ವಿಕಿಮೀಡಿಯ ಕ್ವಿಜ್ ನಡೆಸಲಾಯಿತು, ಮಾಹಿತಿ ವಿನಿಮಯ ಚರ್ಚೆಗಳು ನಡೆದವು. ಬೇರೆ ಬೇರೆ ಊರುಗಳಿಂದ , ಹೆಚ್ಚಾಗಿ ಕರಾವಳಿಯ ಊರುಗಳಿಂದ ಹಲವು ಹಳೆ ಹೊಸ ವಿಕಿಮೀಡಿಯನ್ನರು ಪಾಲ್ಗೊಂಡಿದ್ದ ಈ ಸಮ್ಮಿಲನವು ಬಹಳ ದಿನಗಳ ನಂತರ ಪರಸ್ಪರ ಭೇಟಿಯಾಗುವ ಅವಕಾಶ ಕಲ್ಪಿಸಿತು.  ಡಾ. ಯು.ಬಿ. ಪವನಜರ ಮಾರ್‍ಗದರ್ಶನದಲ್ಲಿ ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರು ಸಭಾಂಗಣದ ತಯಾರಿಯನ್ನು ಚೆನ್ನಾಗಿ ಮಾಡಿ ಚಟುವಟಿಕೆಯಿಂದ ಪಾಲ್ಗೊಂಡರು.

ಕಾರ್‍ಯಕ್ರಮದ ವಿವರಗಳು: ವಿಕಿಪೀಡಿಯ ಪುಟದಲ್ಲಿ - 

ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ

Pavanaja, Kannada Wiki Sammilana 2023 Udupi 65, CC BY-SA 4.0


ಸಂಜೆ ನಾವೊಂದಿಷ್ಟು ಗೆಳೆಯರು ಉಡುಪಿ ಸಮೀಪದ ಮಟ್ಟು, ಪಡುಕೆರೆ ಕಡಲತೀರಕ್ಕೆ ಭೇಟಿ ಕೊಟ್ಟು ಚೆಲುವಿನ ಸೂರ್‍ಯಾಸ್ತವನ್ನು ಅನುಭವಿಸಿದೆವು.
ಮಟ್ಟು - ಪಡುಕೆರೆ ಬೀಚ್ ರಸ್ತೆ , ಉಡುಪಿ

ಮಟ್ಟು - ಪಡುಕೆರೆ ಬೀಚ್ , ಉಡುಪಿ




ಶನಿವಾರ, ಆಗಸ್ಟ್ 6, 2022

'ರಾಕೆಟ್ರಿ - ದ ನಂಬಿ ಎಫೆಕ್ಟ್'

ದೇಶ ಹೆಮ್ಮೆಪಡುವಂತಹ ವಿಜ್ಞಾನಿಯನ್ನೂ ಕ್ಷುಲ್ಲಕ ರಾಜಕೀಯಕ್ಕಾಗಿ, ಯಾವುದೋ ಕಾಣದ ಕೈಗಳ ಪಿತೂರಿಗಾಗಿ ಬಲಿಮಾಡಿ ಅವರ ಜೀವನವನ್ನೇ ಹಾಳುಮಾಡಿದ್ದಲ್ಲದೇ ದೇಶಕ್ಕೂ ದೊಡ್ಡ ನಷ್ಟವಾಗುವಂತೆ ಮಾಡುವ ದುಃಸ್ಥಿತಿಗಿಳಿದಿದ್ದು ನಮ್ಮ ಸಮಾಜದ‌, ಆಡಳಿತ ವ್ಯವಸ್ಥೆಯ ಅಧೋಗತಿ. ಬರೀ ನೆಗೆಟಿವ್ ಸುದ್ದಿಗಳನ್ನೇ ಮೆರೆದಾಡಿಸುವ ಮಾಧ್ಯಮಗಳ ಈ ಕಾಲದಲ್ಲಿ‌ ಈ ಸಿನೆಮಾ ಕಾರಣದಿಂದಾದರೂ ಅವರ ಸಾಧನೆ ಬಗ್ಗೆ ಒಂದಿಷ್ಟು ಜನ ತಿಳಿದುಕೊಂಡು ಹೆಮ್ಮೆಪಡುವಂತೆ ಆಯಿತಲ್ಲ‌, ಅದೇ ಈ ಸಿನೆಮಾದ ಸಾರ್ಥಕತೆ. "ನಂಬಿ ನಾರಾಯಣನ್" ಅಂತ ಗೂಗಲ್ಲಲ್ಲಿ ಹುಡುಕಿದರೆ ಬರುವ ಹೆಚ್ಚಿನ ಸುದ್ದಿಕೊಂಡಿಗಳು ಬರೀ ಅವರ ಸ್ಪೈ ಕೇಸಿಗೆ ಸಂಬಂಧಿಸಿದ್ದು. ಇಸ್ರೋದ ಉನ್ನತ ವಿಜ್ಞಾನಿಯಾಗಿ ರಾಕೆಟ್ ಎಂಜಿನ್ನುಗಳ ತಯಾರಿಕೆಯಲ್ಲಿ ಭಾರತವನ್ನು ಇನ್ನೂ ಸಶಕ್ತಗೊಳಿಸಿದ ವ್ಯಕ್ತಿಯನ್ನು ಸುಳ್ಳು‌ ದೇಶದ್ರೋಹದ ಕೇಸಿನಲ್ಲಿ ಸಿಲುಕಿಸಿ ಜೈಲು ಸೇರಿಸಿದ್ದಲ್ಲದೆ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದು ಅಕ್ಷಮ್ಯ. ನಾಸಾದ ಅವಕಾಶವನ್ನೇ ತಿರಸ್ಕರಿಸಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಕೆಲಸ ಮಾಡಿದ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ್ದಾರೆಂಬ ಆರೋಪ ಹೊರಿಸಿ ಕೆಳಗೆಳೆದುಹಾಕಿದ್ದು ದೊಡ್ಡ ದುರಂತ. 


 
'ರಾಕೆಟ್ರಿ - ದ ನಂಬಿ ಎಫೆಕ್ಟ್' : ಈ ಸಿನೆಮಾ ಇವೆಲ್ಲವನ್ನು ಅನಾವರಣಗೊಳಿಸಿಟ್ಟಿದೆ‌. ಸಿನೆಮಾ ಕೊನೆಯಲ್ಲಿ ಉಸಿರುಭಾರವಾಗುವ ಜೊತೆಗೆ ನಂಬಿನಾರಾಯಣರ ಕಣ್ಣಿನಲ್ಲಿ ಈಗಲೂ ಕಾಣುವ ಆ ನೋವು ನಮ್ಮದೂ ಆಗಿಬಿಡುತ್ತದೆ. ಅಗತ್ಯದ ಒಂದಿಷ್ಟು ಸನ್ನಿವೇಶಗಳಲ್ಲಿ ತಕ್ಕ ಹಿನ್ನೆಲೆ ಶಬ್ದ/ಸಂಗೀತ ವರ್ಕೌಟ್ ಮಾಡಿದ್ದರೆ ಸಿನೆಮಾ ಇನ್ನೂ ತಾಗಬಹುದಿತ್ತು ಅನಿಸಿತು. ಇರಲಿ, ಅದರಲ್ಲಿನ ವಿಷಯದ ಗಂಭೀರತೆಯ ಮುಂದೆ ಅದೇನು ದೊಡ್ಡದಲ್ಲ.  ಸಿನೆಮಾ ಅಮೇಜಾನ್ ಪ್ರೈಮ್ ನಲ್ಲಿ ಇದೆ, ಕನ್ನಡದ ಆಡಿಯೊ ಫೀಡ್ ಕೂಡ ಇದೆ.

ನಂಬಿನಾರಾಯಣರೆ, ಈ ದೇಶವನ್ನು ಕ್ಷಮಿಸಿಬಿಡಿ.

ಶನಿವಾರ, ಏಪ್ರಿಲ್ 23, 2022

'ಪದ' ತಂತ್ರಾಂಶ - ಹೊಸ ಆವೃತ್ತಿ ಪರಿಚಯ

ನಾನು ಮೊದಲಿಂದ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬಳಸುತ್ತಿದ್ದುದು 'ಬರಹ' ತಂತ್ರಾಂಶ. ಹಲವು ವರ್‍ಷಗಳ ಕಾಲ ಯಾವ ತೊಂದರೆಯಿಲ್ಲದೆ 'ಬರಹ' ಬಳಸಿದ್ದೆ. ಮೊದಲು ಉಚಿತವಾಗಿದ್ದ 'ಬರಹ'ವು ಆನಂತರ ಪಾವತಿ ಮಾಡಿ ಬಳಸಬೇಕಾಯ್ತು. ನಾನು ಅದರ ಲೈಸೆನ್ಸ್ ಕೊಂಡುಕೊಂಡು ಬಳಸುತ್ತಿದ್ದೆ. ಆ ಲೈಸೆನ್ಸ್ ಒಂದು ಬಾರಿಗೆ ಒಂದು ಕಂಪ್ಯೂಟರಲ್ಲಿ ಮಾತ್ರ ಬಳಸಲು ಅವಕಾಶವಿದ್ದುದರಿಂದ ನನ್ನ ವೈಯಕ್ತಿಕ ಗಣಕದಲ್ಲಿ  ಮಾತ್ರ ಅದನ್ನು ಬಳಸಲು ಸಾಧ್ಯವಾಗುತ್ತಿತ್ತು.  ಈ ನಡುವೆ 'ಪದ' ತಂತ್ರಾಂಶವು ಹಲವು ಒಳ್ಳೊಳ್ಳೆಯ ಸೌಲಭ್ಯಗಳನ್ನು ಹೊಂದಿ ಬಿಡುಗಡೆಯಾಗಿ ತ್ತು. ಮುಖ್ಯವಾಗಿ ಅದರಲ್ಲಿ ಪೋರ್‍ಟೆಬಲ್ ಆವೃತ್ತಿ ಇದ್ದುದರಿಂದ ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡು ಎಲ್ಲಿ ಬೇಕಾದರಲ್ಲಿ ಬಳಸುವ ಮತ್ತು ಡೌನ್ಲೋಡ್ ಮಾಡಿಟ್ಟುಕೊಂಡರೆ ಇನ್ ಸ್ಟಾಲೇಶನ್ ಮಾಡುವ ಅಗತ್ಯವಿಲ್ಲದೆ ಅಡ್ಮಿನ್ ರೈಟ್ಸ್ ಇಲ್ಲದೆಡೆಯೂ ಬಳಸಬಹುದಾಗಿದ್ದರಿಂದ ಅನುಕೂಲಕರವಾಗಿತ್ತು.  ಹಾಗಾಗಿ 'ಪದ' ತಂತ್ರಾಂಶವನ್ನು ಬಹುತೇಕ ಬಳಸುತ್ತಿದ್ದೇನೆ.  ಈ ನಡುವೆ ಪದ ತಂತ್ರಾಂಶದ ಹೊಸ ಆವೃತ್ತಿ ಜನವರಿ ೨೦೨೨ರಲ್ಲಿ ಬಿಡುಗಡೆಯಾಯಿತು.  ಆಗ ಬರೆದ ಒಂದು ಚಿಕ್ಕ ಪರಿಚಯ ಈ ಕೆಳಗಿನಂತಿದೆ:


ಹಲವಾರು ಹೊಸ ಸೌಲಭ್ಯಗಳೊಂದಿಗೆ 'ಪದ' ತಂತ್ರಾಂಶದ ಹೊಸ ಆವೃತ್ತಿ ಬಿಡುಗಡೆಯಾಗಿದೆ. ಕಂಪ್ಯೂಟರಲ್ಲಿ ನೇರ ಕನ್ನಡ ಟೈಪಿಂಗ್ ಮತ್ತು ವರ್ಡ್ ಪ್ರೊಸೆಸಿಂಗ್ ಮಾಡಲು ಬಳಸಲಾಗುವ ಈ ತಂತ್ರಾಂಶದ ಈ ಆವೃತ್ತಿಯಲ್ಲಿ ಅಳವಡಿಸಲಾಗಿರುವ ಕೆಲ ಹೊಸ ಸೌಲಭ್ಯಗಳೆಂದರೆ,

೧. ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇ ಔಟ್

೨. IMEಯಲ್ಲೇ ಯುನಿಕೋಡ್ ಮತ್ತು ANSI ಟೈಪಿಂಗ್ ಆಯ್ಕೆ (ಗ್ರಾಫಿಕ್ ಡಿಸೈನಿಂಗ್, ಡಿಟಿಪಿ ಮುಂತಾದೆಡೆ ಇನ್ನೂ ಹಳೆಯ ಫಾಂಟುಗಳೇ ಬೇಕೆಂಬಲ್ಲಿ)

೩. ನೇರವಾಗಿ IMEಯಲ್ಲೇ ಆನ್ಸಿ ಟು ಯುನಿಕೋಡ್ ಪಠ್ಯಪರಿವರ್ತನೆ.

೪. ಆನ್ಸಿ (ಉದಾ: ಹಳೆ ನುಡಿಯಲ್ಲಿ ಬರೆದ) ಫೈಲುಗಳನ್ನು ಒಟ್ಟಿಗೇ ಯುನಿಕೋಡ್ ಗೆ ಪರಿವರ್ತಿಸುವುದು.

೫. ಟೈಪಿಂಗ್ ಕಲಿಕೆಗೆ ಟ್ಯೂಟರ್ 

ಮತ್ತು ಇನ್ನೂ ಹಲವು ಸುಧಾರಣೆಗಳು ಮತ್ತು ಬಗ್ ಫಿಕ್ಸ್

ಪೋರ್ಟೆಬಲ್ ಆವೃತ್ತಿಯ ವಿಶೇಷವೆಂದರೆ ಇದನ್ನು ಕಂಪ್ಯೂಟರಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಡೌನ್ಲೋಡ್ ಮಾಡಿಟ್ಟುಕೊಂಡರೆ ಸಾಕು. ಅದರಲ್ಲೇ ತೆರೆದು ಬಳಸಬಹುದು. ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡರೆ ಯಾವ ಕಂಪ್ಯೂಟರಲ್ಲಾದರೂ  ನೇರವಾಗಿ ಬಳಸಿಕೊಳ್ಳಬಹುದು.  ಹಾಗಂತ ಇನ್ ಸ್ಟಾಲ್ ಮಾಡಿಕೊಳ್ಳುವ ಆವೃತ್ತಿ ಸಹ ಬೇಕಾದರೂ ಇದೆ. ವಿಂಡೋಸ್ & ಲೈನಕ್ಸ್ ಎರಡಕ್ಕೂ ಇದೆ.

ನುಡಿ (ಕೆಪಿ ರಾವ್), ಪೊನೆಟಿಕ್, ಟ್ರಾನ್ಸ್ಲಿಟೆರೇಶನ್ ಕೀಬೋರ್ಡ್ ಲೇ ಔಟುಗಳಿವೆ, ನೇರ ಪಿಡಿಎಫ್ ಕನ್ವರ್ಶನ್ ಮಾಡಬಹುದು, ವಿವಿಧ ಫಾಂಟುಗಳನ್ನು ಹಾಕಿಕೊಳ್ಳಬಹುದು, ಒಟ್ಟಾರೆ ಬಹುತೇಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ಸೌಲಭ್ಯಗಳು ಈ ತಂತ್ರಾಂಶದಲ್ಲಿ ಇವೆ. ಯಾವ ತೊಂದರೆಯಿಲ್ಲದೆ ಎಲ್ಲೆಡೆ ಬಳಸಬಹುದು  ಎಂದು ಹಲವು ವರ್ಷಗಳಿಂದ ಇದರ ಬಳಕೆದಾರನಾಗಿದ್ದು ಹೇಳುತ್ತೇನೆ. ಈ ತಂತ್ರಾಂಶದ ಅಭಿವೃದ್ಧಿಗಾರರಾದ Lohit DS ಅವರಿಗೆ ಧನ್ಯವಾದಗಳು. ಪದ ಡೌನ್ಲೋಡ್ ಲಿಂಕ್ ಇಲ್ಲಿದೆ:  https://www.pada.pro/

******

ಯೂನಿಕೋಡ್ ನಿಯಮದ ಪ್ರಕಾರ ವ್ಯಂಜನಕ್ಕೆ 'ರ'ಕಾರ ಸೇರಿದಾಗ ಅರ್ಕಾವೊತ್ತು (‌‌೯) ಅನಿವಾರ್ಯ. ಅರ್ಕಾವೊತ್ತು ಇಲ್ಲದಂತೆ ಬರೆಯಲು zero width joiner ಮೂಲಕ ಅವಕಾಶ ಇದೆ. ಆದರೆ ಅದಕ್ಕಾಗಿ ಒಂದೊಂದು ತಂತ್ರಾಂಶದಲ್ಲಿ ಒಂದೊಂದು ರೀತಿ ಕೀ ಇರುವುದರಿಂದ ಟೈಪ್ ಮಾಡುವಾಗ ಕೊಂಚ ತೊಡಕಾಗಬಹುದು.

'ಪದ' ತಂತ್ರಾಂಶದ ಹೊಸ ಆವೃತ್ತಿಯ (5‌.x.6) IMEದಲ್ಲಿ ಆ ತೊಡಕನ್ನೂ ನೀಗಿಸಿ ನೇರವಾಗಿ ಅರ್‍ಕಾವೊತ್ತು ಇಲ್ಲದೇ ಅಥವಾ ಇಟ್ಟುಕೊಂಡು ಬರೆಯುವ ಸೌಲಭ್ಯ ಕೊಟ್ಟಿದ್ದಾರೆ. ಈಗ 'ಸೂರ್‍ಯ', 'ತೀರ್‍ಮಾನ', 'ರ್‍ಯಾಂಕ್' , 'ರ್‍ಯಾಲಿ' ಮುಂತಾದವು ನೇರವಾಗಿ ಬರೆಯಲು ಸಾಧ್ಯ. ಅರ್ಕಾವೊತ್ತು ಅನಿವಾ'ರ್‍ಯ'ವಲ್ಲ.

******

೨೦೧೨ ರಲ್ಲಿ 'ಪದ' ತಂತ್ರಾಂಶ ೪.೦ ಬಿಡುಗಡೆಯಾದಾಗ ಬರೆದಿದ್ದ ಬರಹ ಇಲ್ಲಿದೆ: 
ಪದ ತಂತ್ರಾಂಶ - Pada Software (Indic word processor & IME)

'ಗೂಗಲ್ ಕ್ರೌಡ್ ಸೋರ್‍ಸ್ ಯೋಜನೆ - ನನ್ನ ಪಾಲ್ಗೊಳ್ಳುವಿಕೆ

ಗೂಗಲ್ ಕಂಪನಿಯು ತನ್ನ ಹಲವಾರು ಬಗೆಯ ಸೇವೆಗಳನ್ನು, ಉತ್ಪನ್ನಗಳನ್ನು ಸುಧಾರಣೆ ಮಾಡುವುದಕ್ಕೆ ಮತ್ತು ಕೃತಕ ಬುದ್ಧಿಮತ್ತೆ (AI) ಬೆಳೆಸುವ ಕೆಲಸಗಳಿಗಾಗಿ ಜನರನ್ನು ತೊಡಗಿಸಿಕೊಳ್ಳುವ ಒಂದು ಯೋಜನೆ ಮಾಡಿ ಕೆಲವು ವರ್‍ಷಗಳಿಂದ ನಡೆಸುತ್ತಿದೆ. ಗೂಗಲ್ ಕ್ರೌಡ್ ಸೋರ್ಸ್ ಎಂದು ಆ ಯೋಜನೆಯ ಹೆಸರು.   ಇದು ಯಾರು ಬೇಕಾದರೂ ಸಹ ತೊಡಗಿಕೊಳ್ಳಬಹುದಾದಂತಹ ಸರಳ ಕೆಲಸ. ಗೂಗಲ್ ಕ್ರೌಡ್ ಸೋರ್ಸ್ ಕೆಲಸದಲ್ಲಿ ಕನ್ನಡಕ್ಕೆ ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ.


ಇದರಲ್ಲಿ ಭಾಷೆ ಸಂಬಂಧಿತ ಸೇವೆಗಳಿಗೆ ಆಯಾ ಭಾಷಾ ಸಮುದಾಯದ ಬಳಕೆದಾರರ ಅನುಭವ, ಸಾಮರ್ಥ್ಯ ಮತ್ತು ತಿಳುವಳಿಕೆಗಳ ಮೂಲಕ ಕೊಡುಗೆಗಳನ್ನು ಪಡೆಯುವುದಾಗಿದೆ. ಅಂದರೆ, ಸರಳವಾಗಿ ಹೇಳುವುದಾದರೆ ಗೂಗಲ್ಲಲ್ಲಿ ಕನ್ನಡ ಸಂಬಂಧಿತ ಅನುವಾದಗಳು, ಅನುವಾದದ ಮೌಲ್ಯಮಾಪನ, ಕೈಬರಹ ಗುರುತಿಸುವಿಕೆ, ಕೀಬೋರ್ಡ್, ದನಿ ಗುರುತಿಸುವಿಕೆ ಮುಂತಾದ ಉತ್ಪನ್ನಗಳ ಸುಧಾರಣೆಗೆ ನಾವು ನೇರವಾಗಿ ಕೊಡುಗೆ ನೀಡಬಹುದು. ಇದರ ಜೊತೆ 'ಚಿತ್ರ ಗುರುತಿಸುವಿಕೆ' ಮುಂತಾದ ಜೆನೆರಲ್ ಕೆಲಸಗಳೂ ಇವೆ. ಇದೆಲ್ಲವನ್ನೂ ಚಿಕ್ಕ ಚಿಕ್ಕ ಫನ್ ಗೇಮ್ಸ್ ರೀತಿಯಲ್ಲಿ, ಕ್ವಿಜ್ ರೀತಿಯಲ್ಲಿ ಈ ಆ್ಯಪ್ ಮೂಲಕ ಮಾಡುವಂತೆ ರೂಪಿಸಿದ್ದಾರೆ‌. ಒಂಥರಾ ಟೈಂಪಾಸಿಗೂ ಚೆನ್ನಾಗಿದೆ, ಮೆದುಳಿಗೂ ಕೊಂಚ ಕೆಲಸ ಕೊಡಬಹುದಾಗಿದೆ. 
ಅಕ್ಟೋಬರ್ ೨೦೨೧ ರಲ್ಲಿ ಈ ಕ್ರೌಡ್ ಸೋರ್‍ಸ್ ಯೋಜನೆಯಲ್ಲಿ 'ಸ್ಮಾರ್‍ಟ್ ಅಸಿಸ್ಟೆಂಟ್' ಎನ್ನುವ ಅಭಿಯಾನವೊಂದು ನಡೆದಿತ್ತು. ಅದರಲ್ಲಿ ಪಾಲ್ಗೊಂಡು ಗಣನೀಯ ಕೊಡುಗೆ ಸಲ್ಲಿಸಿದವರಿಗೆ ಗೂಗಲ್ ವತಿಯಿಂದ ಉಡುಗೊರೆ ಕಳಿಸಿಕೊಟ್ಟರು. ನನಗೆ ಬಂದ ಉಡುಗೊರೆ ಇದು. 

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಬಯಸಿದಲ್ಲಿ ಪ್ಲೇಸ್ಟೋರ್ ಇಂದ  'Crowd Source' Google app  ಹಾಕಿಕೊಳ್ಳಬಹುದು.  ಸೆಟ್ಟಿಂಗ್ಸಲ್ಲಿ ಕನ್ನಡ, ಇಂಗ್ಲೀಷ್ ಮುಂತಾದ ನಿಮ್ಮಿಷ್ಟದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅನಂತರ ಅದರಲ್ಲಿನ ಹಲವು ಬಗೆಯ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದು ತಂತ್ರಜ್ಞಾನ ಬಹುವೇಗವಾಗಿ  ಬೆಳೆಯುತ್ತಿರುವ ಕಾಲ. ಕನ್ನಡವೂ  ಅದರ ಜೊತೆಗೆ ಹೆಜ್ಜೆಹಾಕುವುದು ಮುಖ್ಯ.  ಇದು ಕ್ರಮೇಣ ಹಲವಾರು ಅವಕಾಶಗಳನ್ನು, ಉದ್ಯೋಗಗಳನ್ನು, ತಂತ್ರಜ್ಞಾನಗಳನ್ನು, ಸಾಧ್ಯತೆಗಳನ್ನು ಕನ್ನಡಕ್ಕೂ ತೆರೆದಿಡುವುದಕ್ಕೆ ಖಂಡಿತ ಬಹಳ ಸಹಕಾರಿಯಾಗುತ್ತದೆ. 

'ಬಯೋಮಿಮಿಕ್ರಿ ' - ಪುಸ್ತಕದ ಓದು

 ಈ ಹಿಂದೆ ಡಾ. ಕಿರಣ್ ಸೂರ್ಯ ಅವರ 'ಸೆರೆಂಡಿಪಿಟಿ' ಎಂಬ ವಿಶಿಷ್ಟ ಪುಸ್ತಕ ಓದಿದ್ದೆ. ಅವರ 'ಬಯೋಮಿಮಿಕ್ರಿ' ಎಂಬ ಈ ಪುಸ್ತಕವನ್ನು ಕೊಂಡಾಗ ಅದೇ ಕುತೂಹಲವಿತ್ತು. ಒಂದು ನಿರೀಕ್ಷೆ ಇತ್ತು. ಅದು ಸುಳ್ಳಾಗಲಿಲ್ಲ.


ಪ್ರಕಾಶಕರು: Techfiz Inc

ಪುಟಗಳು: ೨೦೧

ಬೆಲೆ: ೪೯ ರೂ.






ಜಗತ್ತಲ್ಲಿ ಹಲವಾರು ಹೊಸಹೊಸ ಆವಿಷ್ಕಾರಗಳು ಹಿಂದಿನಕಾಲದಿಂದಲೂ ಆಗುತ್ತಿವೆ, ಆಗುತ್ತಿರುತ್ತವೆ. ಮಾನವನ ದೈನಂದಿನ ಜೀವನದಿಂದ ಹಿಡಿದು ವಿವಿಧೋದ್ದೇಶಗಳಿಗೆ ಸಹಾಯವಾಗಬಲ್ಲಂತಹ ಉಪಕರಣಗಳನ್ನು, ವಸ್ತುಗಳನ್ನು, ಯಂತ್ರಗಳನ್ನು ವಿಜ್ಷಾನಿಗಳು, ಸಂಶೋಧಕರೆನೆಸಿಕೊಂಡವರು ಬೇರೆಬೇರೆ ದೇಶಗಳಲ್ಲಿ ಕಂಡುಹಿಡಿದು ತಯಾರಿಸಿದ್ದಾರೆ. ಅದರಲ್ಲಿ ಕೆಲವೊಂದು ಆಕಸ್ಮಿಕಗಳಾದರೆ, ಹಲವು ಹತ್ತಾರು ವರ್ಷಗಳ ಹಲವಾರು ಜನರ ಶ್ರಮದ, ಅಧ್ಯಯನದ, ಸಂಶೋಧನೆಯ ಫಲಗಳು.  ಆದರೆ ಒಂದಿಷ್ಟು ಅಗತ್ಯಗಳಿಗೆ ಹೊಸದೇನನ್ನೋ ಕಂಡುಹಿಡಿಯುವಾಗ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಾಗ, ಇರುವುದನ್ನು ಇನ್ನೂಸುಧಾರಣೆ ಮಾಡುವಾಗ ಪ್ರಕೃತಿಯನ್ನೇ ಅದಕ್ಕೆ ಗುರುವಾಗಿಸಿಕೊಂಡು ಈ ಸೃಷ್ಟಿಯನ್ನೇ ಅನುಕರಿಸಿ ತಮ್ಮ ಗುರಿಯನ್ನು ಸಾಧಿಸಿರುವುದು, ತಕ್ಕ ಫಲಗಳನ್ನು ಪಡೆದುಕೊಂಡಿರುವುದಕ್ಕೆ ಅನೇಕ ನಿದರ್ಶನಗಳಿವೆ. ಇಂತಹ ಒಂದಿಷ್ಟು ಕುತೂಹಲಕಾರಿ ನಿದರ್ಶನಗಳ ಕಥಾನಕವೇ 'ಬಯೋಮಿಮಿಕ್ರಿ'.  ಹೇಗೆ ಸಂಶೋಧಕರು, ವಿಜ್ಞಾನಿಗಳು ಅಥವಾ ಒಟ್ಟಾರೆ ಮಾನವನು ಪ್ರಕೃತಿಯಲ್ಲಿ ಬೇರೆ ಬೇರೆ ಪರಿಸರದಲ್ಲಿ ವಿಕಾಸಗೊಂಡು ಅಲ್ಲಿನ ವಾತಾವರಣಕ್ಕೆ ತಕ್ಕುದಾದ ಬದಲಾವಣೆಗಳಿಗೊಳಲ್ಪಟ್ಟ ಜೀವಿಗಳನ್ನು, ಅವುಗಳ, ದೇಹರಚನೆಗಳನ್ನು, ಗುಣಲಕ್ಷಣಗಳನ್ನು ಮಿಮಿಕ್ರಿ ಮಾಡಿ ತನಗೆ ಬೇಕಾದ್ದನ್ನು ಕೃತಕವಾಗಿ ಪಡೆದುಕೊಂಡ ಮತ್ತು ತಯಾರಿಸಿಕೊಂಡ ಎಂಬುದನ್ನೇ ಬಯೊಮಿಮಿಕ್ರಿಗಳು ಎನ್ನಲಾಗಿದೆ.

ಹಕ್ಕಿಗಳಂತೆ ಹಾರಬೇಕೆಂದು ಹೊರಟ ಮನುಷ್ಯನ ಮಹದಾಸೆ ವಿಮಾನದಂತಹ ಯಂತ್ರಕ್ಕೆ ಕಾರಣವಾಗಿದ್ದು,  ಜಪಾನಲ್ಲಿ ಬುಲೆಟ್ ಟ್ರೇನಿನ ವಿಪರೀತ ಸದ್ದನ್ನು ಕಡಿಮೆಗೊಳಿಸಲು ಮಿಂಚುಳ್ಳಿ, ಗೂಬೆ, ಪೆಂಗ್ವಿನ ಹಕ್ಕಿಗಳ ದೇಹರಚನೆಗಳನ್ನು ಬಳಸಿಕೊಂಡದ್ದು, ಕಟ್ಟಡಗಳ ತಾಪಮಾನ ನಿರ್ವಹಣೆಗೆ ಗೆದ್ದಲಿನ ಹುತ್ತದ ರಚನೆಯನ್ನು ಮಾದರಿಯಾಗಿರಿಸಿಕೊಂಡು ಯಶಸ್ಸು ಸಾಧಿಸಿದ್ದು, ಕಮಲದ ಎಲೆಗಳು, ಶಾರ್ಕ್ ಮೀನಿನ ಮೇಲ್ಮೈ, ಸಮುದ್ರದ ಮೃದ್ವಂಗಿಗಳು, ಕೀಟಗಳನ್ನು ತಿನ್ನುವ ಗಿಡ, ತಿಮಿಂಗಿಲದ ರೆಕ್ಕೆಯ ರಚನೆ ಎಲ್ಲವೂ ಇಲ್ಲಿ ಹೊಸ ಆವಿಷ್ಕಾರಗಳಿಗೆ ಮಾರ್ಗದರ್ಶಿಯಾದವು. ಆರೋಗ್ಯ ಕ್ಷೇತ್ರದ ಶಸ್ತ್ರಚಿಕಿತ್ಸೆಗಳಂತಹ ಸೂಕ್ಷ್ಮತೆಗಳಿಂದ ಹಿಡಿದು ವೆಲ್ ಕ್ರೋದಂತಹ ದಿನನಿತ್ಯದ ಬಳಕೆಯ ವಸ್ತುಗಳ ಕಂಡುಹಿಡಿಯುವಿಕೆಯನ್ನು ಸಾಧ್ಯವಾಗಿಸಿದ್ದು ಈ ಪ್ರಕೃತಿಯ ಮಿಮಿಕ್ರಿಗಳ ಮೂಲಕವೇ! ಇಲ್ಲಿ ಸೊಳ್ಳೆ, ಬ್ಯಾಕ್ಟೀರಿಯಾಗಳಂತಹ ಜೀವಿಗಳೂ ಕೂಡ ನಮ್ಮ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಕಾರಣವಾದವು ಎಂಬುದನ್ನು ಓದಿದರೆ ಬಹಳ ಆಶ್ಚರ್ಯವಾಗುತ್ತದೆ.  ಕಡಿಮೆ ಸಂಖ್ಯೆಯಲ್ಲಿ ಅತಿಹೆಚ್ಚು ವಿಸ್ತೀರ್ಣದ ಭಾರವನ್ನು ಹೊರಬಲ್ಲಂತಹ ಲೋಹದ ಮರಗಳ ಆವಿಷ್ಕಾರವಂತೂ ಸಿವಿಲ್, ಸ್ಟಕ್ಚರಲ್ ಎಂಜಿನಿಯರಿಂಗಿನ ದೊಡ್ಡ ಸಾಧನೆ.  ಅದರಲ್ಲಿ ಅದೆಷ್ಟೇ ಗಣಿತ, ಭೌತಶಾಸ್ತ್ರಗಳನ್ನು ಬಳಸಿಕೊಂಡರೂ ಅದಕ್ಕೆಲ್ಲಾ ಮೂಲ ಪ್ರೇರಣೆ ಮತ್ತು ಮಾದರಿ ಪ್ರಕೃತಿಯೇ ಎಂಬುದು ನಿಜಕ್ಕೂ ಬೆರಗು ಮೂಡಿಸುತ್ತದೆ.

ಹಲವು ಅಧ್ಯಾಯಗಳಲ್ಲಿ ಅವಶ್ಯಕವಿರುವ ವಿಜ್ಞಾನ ವಿವರಣೆಗಳನ್ನು ಸರಳಗೊಳಿಸಿ ವಿವರಿಸಲು ಪ್ರಯತ್ನಿಸಿದ್ದಾರೆ. ಹಾಗಿದ್ದರೂ ವಿಜ್ಞಾನೇತರ ಓದುಗರಿಗೆ ಕೊಂಚ ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಿದರೆ ಆ ಭಾಗಗಳನ್ನು ಮೇಲ್ಮೇಲೆ ಓದಿಕೊಂಡರೂ ಒಟ್ಟಾರೆ ವಿಷಯ ಅರ್ಥಮಾಡಿಕೊಳ್ಳಲು ತೊಂದರೆಯೇನಿಲ್ಲ. ಈ ಇ-ಪುಸ್ತಕದ ವಿಶೇಷವೆಂದರೆ ವಿಷಯಗಳ ವಿವರಣೆಗಳ ನಡುವೆ ಮತ್ತು ಅಧ್ಯಾಯದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಯು-ಟ್ಯೂಬ್ ಲಿಂಕುಗಳನ್ನು ಕೊಡಲಾಗಿದ್ದು ಅದರ ಮೂಲಕ ನೇರವಾಗಿ ಆ ವಿಷಯಕ್ಕೆ ಸಂಬಂಧಿಸಿದ ವಿವರ ಮಾಹಿತಿಗಳ ವೀಡಿಯೋಗಳನ್ನು ನೋಡಬಹುದು. ಹೆಚ್ಚಿನ ಆಸಕ್ತಿಯಿದ್ದಲ್ಲಿ, ಕುತೂಹಲವಿದ್ದಲ್ಲಿ ವಿವರಗಳನ್ನು ವೀಡಿಯೋಗಳಲ್ಲಿ ವಿಸ್ತಾರವಾಗಿ ಪಡೆದುಕೊಳ್ಳಬಹುದು.

ಮನುಷ್ಯ ಪ್ರಕೃತಿಯಿಂದ ಎಷ್ಟೇ ದೂರವಾಗುತ್ತಿದ್ದಾನೆ ಅಂದುಕೊಂಡರೂ ಅವನ ಬಹಳಷ್ಟು ಆವಿಷ್ಕಾರಗಳಿಗೆ, ಹುಡುಕಾಟಗಳಿಗೆ, ಸಮಸ್ಯೆಗಳಿಗೆ ಪ್ರಕೃತಿಯೇ ಆಕರ, ಪ್ರಕೃತಿಯೇ ಪರಿಹಾರ. ಪ್ರಕೃತಿಗೆ ಹತ್ತಿರವಿದ್ದಷ್ಟೂ ಅವನ ಬದುಕು ಸುಂದರ ಎಂದು ಕೂಡ ಈ ಬಯೋಮಿಮಿಕ್ರಿ ಮೂಲಕ ವಿಶ್ಲೇಷಿಸಬಹುದು.  ಕನ್ನಡದಲ್ಲಿ ಬಂದಂತಹ ಅತ್ಯಂತ ವಿಶಿಷ್ಟ ಪುಸ್ತಕ ಇದು ಎಂದು ಹೇಳುತ್ತೇನೆ. ಈತರಹದ ಬೌದ್ಧಿಕ ಮಟ್ಟದ ಕೃತಿಗಳು ಕನ್ನಡದಲ್ಲಿ ಹೆಚ್ಚುತ್ತಲೇ ಹೋಗಬೇಕು.

'ಋತುಮಾನ' ಆಪ್, 'ಮೈಲ್ಯಾಂಗ್ಯ್', 'ಗೂಗಲ್ ಬುಕ್ಸ್' ತಾಣಗಳಲ್ಲಿ ಇ-ಪುಸ್ತಕದ ರೂಪದಲ್ಲಿ ದೊರಕುತ್ತದೆ. ಲೇಖಕರ ಹಿಂದಿನ ಪುಸ್ತಕ 'ಸೆರೆಂಡಿಪಿಟಿ' ಮತ್ತು ಈ 'ಬಯೋಮಿಮಿಕ್ರಿ'ಗಳನ್ನು ಓದಿದಮೇಲೆ  ಈಗ ಅವರ ಮೊದಲ ಪುಸ್ತಕವಾದ 'ನಿರಾಮಯ' ಓದಬೇಕೆಂಬ ಕುತೂಹಲ ಬಂದಿದೆ. ಓದಬೇಕು.


ಸೋಮವಾರ, ಮಾರ್ಚ್ 14, 2022

'ಅಗಣಿತ ಅಲೆಮಾರಿ' - ಪುಸ್ತಕದ ಓದು

'ಅಗಣಿತ ಅಲೆಮಾರಿ'
ಲೇಖಕರು: ರವಿ ಹಂಜ್ (Ravi Hanj)
ಪ್ರಕಾಶನ: ಸಂವಹನ ಮೈಸೂರು
ಇ ಪುಸ್ತಕ: ಋತುಮಾನ ಆಪ್


ಈ ಪುಸ್ತಕ ಓದಲು ಶುರುಮಾಡುತ್ತಿದ್ದಂತೆ ಇದೊಂದು ಐತಿಹಾಸಿಕ ವಿಷಯ ವಸ್ತುವುಳ್ಳ ಕಾದಂಬರಿ ಎನಿಸಿತು. ಅದರಲ್ಲೂ ಕನ್ನಡದಲ್ಲಿ ಅಷ್ಟಾಗಿ ಯಾರೂ ಬರೆಯಲು ಹೋಗದ ಚೈನಾದ ಬಗೆಗಿನ, ಚೈನಾದ ಇತಿಹಾಸದ, ಮಾವೋ ಕಾಲದ ಕ್ರಾಂತಿಯ ಇತಿಹಾಸ ಕಾಲದ ಕಥನ! ಅನುಭವ ಕಥನದಂತೆ ಶುರುವಾಗುವ ಇದು ಅನಂತರ ಒಂದು ಪ್ರವಾಸ ಕಥನವಾಗಿ ತೆರೆದುಕೊಳ್ಳುತ್ತದೆ. ಹಾಗೇ ಮುಂದುವರೆದಂತೆ ಈ ಪ್ರವಾಸ ಕಥನವು ವಿಶ್ಲೇಷಣಾತ್ಮಕ ಅಧ್ಯಾಯಗಳಾಗಿ, ವಿಡಂಬನೆಗಳಾಗಿ, ಮಾಹಿತಿಗಳಾಗಿ ಹರವಿಕೊಳ್ಳುತ್ತದೆ. ಹಾಗಾಗಿ ಇದೊಂದು ಕಾದಂಬರಿ ಎಂದುಕೊಂಡರೆ ಕಾದಂಬರಿ, ಪ್ರವಾಸ ಕಥನ ಎಂದುಕೊಂಡರೆ ಪ್ರವಾಸ ಕಥನ. ಆದರೆ ಅಷ್ಟು ಮಾತ್ರವಲ್ಲದ ಅಧ್ಯಯನ ಕಥನ.

ಚೈನಾದಲ್ಲಿ ಮಾವೋ ಕಾಲದಲ್ಲಿ ಹುಟ್ಟಿಬೆಳೆದ 'ಲೀ' ಈ ಕಾದಂಬರಿಯ ಒಂಥರದ ನಾಯಕ. ಬಾಲ್ಯದಿಂದ ಅವನು ಕಂಡಾ ಚೈನಾದ ಸ್ಥಿತಿಪಲ್ಲಟಗಳು ಚೈನಾದ ಇತಿಹಾಸದ ಒಂದು ಮಗ್ಗುಲನ್ನು ತೆರೆದಿಡುತ್ತವೆ. ಧಾರ್ಮಿಕ ಗುರುತುಗಳನ್ನೆಲ್ಲಾ ಅಳಿಸಿಹಾಕಿ ಕಾಯಕ ಆಧಾರಿತವಾದ ದೇಶವನ್ನು ಕಟ್ಟಬೇಕೆಂಬ ಮಾವೋಕ್ರಾಂತಿಯು ಜನರ ಬದುಕನ್ನು ಮತ್ತು ದೇಶವನ್ನು ಎಲ್ಲಿಗೆ ಕೊಂಡೊಯ್ದಿತು, ಧಾರ್ಮಿಕ ಮತ್ತು ವೈಯಕ್ತಿಕ ಹಕ್ಕುಗಳು ಕ್ರಾಂತಿಗೆ ಸಿಲುಕಿ ಹೇಗೆ ನಲುಗಿದವು ಎಂಬೆಲ್ಲಾ ವಿಷಯಗಳು 'ಲೀ'ಯ ಅನುಭವದೊಂದಿಗೆ ಬೆಸೆದುಕೊಂಡಿವೆ.

ಈ ಕಥನ ಭಾರತದೊಳಕ್ಕೆ ಪ್ರವೇಶವಾಗುವುದು 'ಹ್ಯೂಯೆನ್ ತ್ಸಾಂಗ್' ಎಂಬ ಯಾತ್ರಿಯ ಕತೆಯೊಂದಿಗೆ. ಏಳನೇ ಶತಮಾನದಲ್ಲಿ ಚೈನಾದಿಂದ ಭಾರತಕ್ಕೆ ಬಂದು ಸಂಚರಿಸಿ ಬೌದ್ಧ ಧಾರ್ಮಿಕ ಗ್ರಂಥಗಳನ್ನು, ತತ್ವಗಳನ್ನು ಚೀನೀಭಾಷೆಗೆ, ಚೀನಾಕ್ಕೆ ತೆಗೆದುಕೊಂಡು ಹೋದವನು ಮಹತ್ವಾಕಾಂಕ್ಷೆಯ ಹ್ಯೂಯೆನ್ ತ್ಸಾಂಗ್. ಆದರೆ ಆತನ ಕಾರ್ಯಗಳು ಮಾವೋಕ್ರಾಂತಿಗೆ ಅಪಥ್ಯ. ಆ ಕಾಲದಲ್ಲಿ ಪ್ರಜಾಪ್ರಭುತ್ವದೊಂದಿದೇ ನೇಪಥ್ಯಕ್ಕೆ ಸರಿದು ಮಸುಕಾಗಿದ್ದ ಆತನ ಬಗ್ಗೆ 'ಲೀ' ತಿಳಿದುಕೊಳ್ಳಲು ಹೊರಡುವುದು ಅಮೆರಿಕಾದಲ್ಲಿ ತನ್ನ ಸಹೋದ್ಯೋಗಿ ಭಾರತ ಮೂಲದ ರವಿಯ ಕಾರಣದಿಂದ.

ಇದೇ ನೆಪದಲ್ಲಿ ಲೀ, ರವಿ ಮತ್ತು ಅಮೆರಿಕನ್ ಗೆಳೆಯ ಫ್ರ್ಯಾಂಕ್ ಚೈನಾ ಪ್ರವಾಸಕ್ಕೆ ಹೊರಡುತ್ತಾರೆ. ಹ್ಯೂಯೆನ್ ತ್ಸಾಂಗನು ಓಡಾಡಿದ ಜಾಗಗಳಿಗೆ ಭೇಟಿಕೊಡುತ್ತಾರೆ. ಅನಂತರ ಅವರ ಭಾರತ ಪ್ರವಾಸ ಶುರುವಾಗಿ ಒಂದಿಷ್ಟು ಸ್ಥಳಗಳ ಭೇಟಿಯು, ಓಡಾಟವು, ಒಡನಾಟವು ಭಾರತೀಯ ಸಮಾಜದ, ರಾಜಕೀಯದ, ಜನಮಾನಸದ ವಿಚಾರಗಳನ್ನು ನಿದರ್ಶನಗಳ ಸಮೇತ ನಿರೂಪಿಸುತ್ತಾ ಹೋಗುತ್ತದೆ.
ಮೊದಲ ಭಾಗದ ಅಧ್ಯಾಯಗಳು ಚೈನಾದ ಪ್ರಯಾಣದಲ್ಲಿ ಚೈನಾದ ಇತಿಹಾಸ, ರಾಜಕೀಯ, ಜನ, ಸಂಸ್ಕೃತಿ, ಸಮಾಜ, ಆಹಾರ, ಅಭ್ಯಾಸ, ಭೌಗೋಳಿಕತೆ ಮುಂತಾದವುಗಳ ಒಂದಿಷ್ಟು ಪರಿಚಯ, ಸ್ಪಷ್ಟತೆ ಮೂಡಿಸಿದರೆ ಎರಡನೇ ಭಾಗದಲ್ಲಿ ಅಧ್ಯಾಯಗಳು ಭಾರತದ ಇದೇ ವಿಷಯಗಳ ವಿವಿಧ ಮಜಲುಗಳನ್ನು ಚಿತ್ರಣವನ್ನು ಕೊಡುತ್ತವೆ.

ಈ ಪುಸ್ತಕವು ಪ್ರವಾಸದೊಂದಿಗೇ ಎರಡು ದೇಶಗಳ ಹೋಲಿಕೆಯ non- academic ಅಧ್ಯಯನದ ಜೊತೆ ಪ್ರಾಮಾಣಿಕ ಅಭಿಪ್ರಾಯವನ್ನು ಮೂಡಿಸಿರುವ ಕಥನ ಶೈಲಿ ಹೊಂದಿ ಒಂದು ವಿಶಿಷ್ಟ ಓದಿನ ಅನುಭವವನ್ನು ಕೊಡುತ್ತದೆ.

ಬುಧವಾರ, ಡಿಸೆಂಬರ್ 15, 2021

ಕನ್ನಡ ಆನ್‍ಲೈನ್ ನಿಘಂಟುಗಳು / Kannada Online Dictionaries

ಭಾನುವಾರ, ಅಕ್ಟೋಬರ್ 17, 2021

ಕಾಡುಗಳನ್ನು ಗೌರವಿಸೋಣ

ಹಿಂದಿನವಾರ ಬಿಳಿಗಿರಿರಂಗನ ಬೆಟ್ಟದ ಹುಲಿಸಂರಕ್ಷಿತ ಕಾಡಿನಲ್ಲಿ ನಮ್ಮ‌ ಸ್ವಯಂಸೇವಕ ತಂಡ (Eco Volunteers India Trust) ಅರಣ್ಯ‌ ಇಲಾಖೆಯೆ ಜೊತೆ ಸೇರಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಿದೆವು.‌ ಅದರಲ್ಲಿ ಮುಖ್ಯವಾಗಿ ಸ್ವಚ್ಛತಾ ಕಾರ್ಯಗಳು, ಜನಜಾಗೃತಿ ,‌ ಪ್ರವಾಸಿಗರಿಗೆ ತಿಳುವಳಿಕೆ, ಜನಸಂದಣಿ ನಿರ್ವಹಣೆ, ಅರಣ್ಯ ರಸ್ತೆಯ ಗಸ್ತು ಮುಂತಾದವು ಇರುತ್ತವೆ.‌ ಇಂತಹ ಚಟುವಟಿಕೆಗಳನ್ನ ಆಗಾಗ ಬೇರೆಬೇರೆ ಕಡೆ ಮಾಡುತ್ತಿರುತ್ತೇವೆ.🍀🌿

🚗🚗 ಕೋವಿಡ್ ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರ ದಂಡು ನಾಡಿನ ಎಲ್ಲೆಡೆ ಕಂಡುಬರುತ್ತಿದೆ. ವಿಶೇಷವಾಗಿ ಮಲೆನಾಡು, ಕಾಡಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿದ್ದು ಪ್ರವಾಸಿಗರ ವರ್ತನೆಗಳು ಹಲವೆಡೆ ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಗಿವೆ. ಪರಿಸರಕ್ಕೂ ಸಹ ವಿವಿಧ ರೀತಿಯಲ್ಲಿ ತೊಂದರೆ ಉಂಟುಮಾಡುತ್ತಿದೆ. ನಮ್ಮಲ್ಲಿ ಬಹಳ ಜನ ಪ್ರವಾಸವನ್ನು ಒಂದು ಹೊಣೆಗಾರಿಕೆಯಿಂದ ಮಾಡದೇ ಬರೀ ಮೋಜಿಗಾಗಿ ಮತ್ತು ಬಳಸಿಬಿಸಾಡುವ ತರಹ ಮಾಡುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದಟ್ಟಾರಣ್ಯಗಳಲ್ಲೂ ಸಿಗುವ ಪ್ಲಾಸ್ಟಿಕ್ ತ್ಯಾಜ್ಯ ದಂಗುಬಡಿಸುವಷ್ಟಿರುತ್ತದೆ ಅಂದರೆ ಇದರ ಆಳ ತಿಳಿಯಬಹುದು.

🌴🌴ರಕ್ಷಿತಾರಣ್ಯಗಳು ಬಹಳ ಸೂಕ್ಷ್ಮ ಪ್ರದೇಶಗಳಾಗಿದ್ದು ಪ್ರಾಣಿಪಕ್ಷಿಗಳ ನೆಲೆಗಳಾಗಿರುತ್ತವೆ.‌ ಹಲವೆಡೆ ರಕ್ಷಿತಾರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳು ಇದ್ದು ಅರಣ್ಯ ಇಲಾಖೆಯ ಉಸ್ತುವಾರಿ ಮತ್ತು ಕಾವಲು ಇರುತ್ತದೆ. ಬಿಳಿಗಿರಿರಂಗನ ಬೆಟ್ಟ, ಬಂಡಿಪುರ, ನಾಗರಹೊಳೆ, ಭದ್ರಾ, ಶರಾವತಿಯಂತಹ ಅಭಯಾರಣ್ಯಗಳಲ್ಲಿ ರಸ್ತೆಯ ಬದಿಯಲ್ಲೇ ಪ್ರಾಣಿಗಳು ಕಾಣಸಿಗುವುದು ಸಾಮಾನ್ಯ. 🐘 🐒🐃 🐗 ಅಲ್ಲಿ ಹಾದುಹೋಗುವ ರಸ್ತೆಗಳ‌ಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂತ‌ಹ ರಕ್ಷಿತ ಅರಣ್ಯಗಳಲ್ಲಿ, ಇನ್ನಿತರ ಕಾಡಿನ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಒಂದಿಷ್ಟು ಹೊಣೆಗಾರಿಕೆ ಅರಿತಿರುವುದು ಮತ್ತು ಅದರಂತೆ ನಡೆದುಕೊಳ್ಳುವುದು ಮುಖ್ಯ. ಮೀರಿದಲ್ಲಿ ದಂಡ/ಶಿಕ್ಷೆ‌ಯೂ ಆಗಬಹುದು.

❌ ವಾಹನಗಳನ್ನು ನಿಲ್ಲಿಸಬಾರದು. (ರಸ್ತೆಗೆ ಅಡ್ಡಲಾಗಿ ಪ್ರಾಣಿಗಳಿದ್ದಲ್ಲಿ ದೂರದಲ್ಲಿ ವಾಹನ ನಿಲ್ಲಿಸಿ ಅವಾಗಿಯೇ ಹೋಗುವವರೆಗೆ ಸುಮ್ಮನೇ ಕಾಯಬೇಕು).
❌ ವೇಗವಾಗಿ ವಾಹನ ಚಾಲನೆ ಮಾಡಬಾರದು.
❌ ಹಾರ್ನ್ ಮಾಡಬಾರದು. 
❌ ಜೋರಾದ ಸಂಗೀತ, ಕೂಗಾಟ ಕೇಕೆ ಇರಬಾರದು.
❌ ವಾಹನದಿಂದ ಕೆಳಗಿಳಿಯುವುದು, ಕಾಡಿನೊಳಗೆ ಹೋಗುವುದು ನಿಷಿದ್ಧ.
❌ ಫೋಟೊಗ್ರಫಿ, ವೀಡಿಯೊಗ್ರಫಿ ಮಾಡುವಂತಿಲ್ಲ. 
❌ ಪ್ರಾಣಿಗಳಿಗೆ ಆಹಾರ ಹಾಕುವಂತಿಲ್ಲ. 
❌ ಧೂಮಪಾನ, ಮದ್ಯಪಾನ ಮಾಡುವಂತಿಲ್ಲ.
❌ ಪ್ಲಾಸ್ಟಿಕ್ ಮುಂತಾದ ಕಸಗಳನ್ನು ಕಾಡಿನಲ್ಲಿ ಹಾಕಲೇಬಾರದು. 

ಸಾಮಾನ್ಯ ತಿಳುವಳಿಕೆ ಇರುವ ಯಾವ ವ್ಯಕ್ತಿಗಾದರೂ ಇದೆಲ್ಲಾ ಗೊತ್ತಿರುತ್ತದೆ ಅಂತ ನೀವನ್ನಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಪ್ರವಾಸಿಗರು, ಭಕ್ತರು ಎಂದು ಬರುವ ಅನೇಕರಿಗೆ ಈ ಪ್ರಜ್ಞೆ ಅವರ ರಕ್ತದಲ್ಲೇ ಬಂದಿರುವುದಿಲ್ಲ. ಕೆಲವರಂತೂ ಕಾಡುಗಳು ಪಿಕ್ ನಿಕ್ ಜಾಗ ಎಂದುಕೊಂಡು ನೀರಿರುವ ಕಡೆ ಊಟಕ್ಕೆ ಕೂತುಬಿಡುವುದುಂಟು. ಹುಲಿ ಚಿರತೆ ಆನೆ ಕಾಟಿಗಳಿರುವ ಕಡೆ ಇದು ಬಹಳ ಅಪಾಯ. ಪ್ರಾಣಿ ಕಂಡಾಕ್ಷಣ ಫ್ಲ್ಯಾಷ್ ಬಳಸಿ ಫೋಟೋ ತೆಗೆಯುವುದರಿಂದ‌ ಹಿಡಿದು ಕಾಡಿನೊಳಗೆ ಕೂಗಾಡುವುದು, ಚಿಪ್ಸ್ ಪ್ಯಾಕ್,‌ ಪ್ಲಾಸ್ಟಿಕ್ ಬಾಟಲ್ ಬಿಸಾಡುವಷ್ಟು ಹೊಣೆಗೇಡಿತನವಿರುತ್ತದೆ.😡 ಇದರಿಂದ ಕಾಡು ಮತ್ತು ಪ್ರಾಣಿಗಳು ತೊಂದರೆಗೊಳಗಾಗುತ್ತವೆ. ಅದರ ಮುಂದಿನ ಹಂತದ ಪರಿಣಾಮಗಳನ್ನು ಅನುಭವಿಸುವವರು ಮನುಷ್ಯರೇ ಆಗಿರುತ್ತಾರೆ. ಹಾಗಾಗಿ ಒಂದು ಜವಾಬ್ದಾರಿಯುತ ಪ್ರವಾಸವನ್ನು ರೂಢಿಸಿಕೊಳ್ಳೋಣ. ಕಾಡುಗಳನ್ನು ಗೌರವಿಸೋಣ.👍

ಭಾನುವಾರ, ಅಕ್ಟೋಬರ್ 10, 2021

ಬೆಂಗಳೂರು ಸುತ್ತಮುತ್ತ ಪ್ರಾಂತ್ಯದ ಕೋಟೆ-ಬೆಟ್ಟಗಳು

ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಕೋಟೆಗಳು ಇದ್ದವು.  ಈಕಡೆ ಬೆಂಗಳೂರು ಗ್ರಾಮಾಂತರ, ಕನಕಪುರ, ರಾಮನಗರ,  ಮಾಗಡಿ, ಕುಣಿಗಲ್, ತುಮಕೂರು .. ಹಾಗೇ ಆ ಕಡೆ ಮಧುಗಿರಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಪ್ರದೇಶಗಳಲ್ಲಿ ಗುಡ್ಡಗಳ ಮೇಲೆ ಹಳೇ ಕೋಟೆಗಳು, ಪಳಿಯುಳಿಕೆಗಳು ಬಹಳಷ್ಟಿವೆ. ಬಹುತೇಕ ಎಲ್ಲವೂ ಆಯಾ ಪ್ರದೇಶದ ಪಾಳೇಗಾರರ ಕೋಟೆಗಳಾಗಿದ್ದು ಕೆಲವು ರಾಜಸಾಮ್ರಾಜ್ಯಗಳಿಗೂ ಸೇರಿದ್ದಿವೆ. ಬಹುತೇಕ ಇವೆಲ್ಲಾ ಹೈದರಾಲಿ , ಟಿಪ್ಪು ಕಾಲದಲ್ಲಿ  ಮೈಸೂರು ಸಂಸ್ಥಾನಕ್ಕೆ, ಆಮೇಲೆ ಬ್ರಿಟಿಷರಿಗೆ ಸೇರಿಹೋಗುತ್ತವೆ ಎಂಬುದು ಇತಿಹಾಸ.  ಎಲ್ಲವೂ ಈಗ ಶಿಥಿಲಾವಸ್ಥೆಯಲ್ಲೇ ಇವೆ.  ಬೆಟ್ಟದ ತುದಿಯಲ್ಲಿ ಸಣ್ಣದೊಂದು ದೇವಸ್ಥಾನವಿರುತ್ತದೆ. ತಪ್ಪಲ್ಲಿನ ಹಳ್ಳಿಯ ಜನ ಕೆಲವು ಸಂದರ್ಭಗಳಲ್ಲಿ ಅಲ್ಲಿ ಪೂಜೆ ಮಾಡುತ್ತಾರೆ ಹೊರತು ಪಡಿಸಿದರೆ ಹೆಚ್ಚೇನೂ ಚಟುವಟಿಕೆಗಳಿರುವುದಿಲ್ಲ. ಹೆಚ್ಚಾಗಿ ಬಂಡೆಕಲ್ಲುಗಳು, ಕುರುಚಲು ಕಾಡುಗಳು ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು. ಕೆಲವು ಬರೀ ಬಂಡೆಗಳಿವ ಗುಡ್ಡಗಳು. ಇನ್ನು ಒಂದಿಷ್ಟು ಬೆಟ್ಟಗಳಲ್ಲಿ ಕೋಟೆಯಿಲ್ಲದೇ ಬೆಟ್ಟದ ಮೇಲೆ  ದೇವಸ್ಥಾನ ಮಾತ್ರ ಇದ್ದು ನಿತ್ಯಪೂಜೆ ನಡೆಯುತ್ತಿರುವ ಸ್ಥಳಗಳು ಅಥವಾ ವಿಶೇಷ ದಿನಗಳಂದು ಮಾತ್ರ ಪೂಜೆ/ಜಾತ್ರೆ ನಡೆಯುವ ಸ್ಥಳಗಳೂ ಇವೆ. 

ಇವೆಲ್ಲವೂ ಬೆಂಗಳೂರು ನಗರದಿಂದ ಸುಮಾರು ೧೦೦ ಕಿಮಿ ಮತ್ತು ಅದಕ್ಕಿಂತ ಕಡಿಮೆ  ದೂರದಲ್ಲಿದ್ದು ನಗರದಿಂದ ಒಂದು ದಿನದಲ್ಲಿ ಹೋಗಿಬರುವಂತದ್ದಿವೆ.  ಇತಿಹಾಸ ಆಸಕ್ತರಿಗೆ, ಚಾರಣಿಗರಿಗೆ ಇವು ಒಳ್ಳೆಯ ತಾಣಗಳ ಜೊತೆಗೆ ಸುಮ್ಮನೇ ಒಂದು ಸಣ್ಣ ಪ್ರವಾಸಕ್ಕೂ ಕೂಡ ಇವು ಚೆನ್ನಾಗಿರುತ್ತವೆ. ಹಲವು ವರ್ಷಗಳಿಂದ ಇಂತಹ ಹಲವು ಗುಡ್ಡಗಳ ಮೇಲಿನ ದುರ್ಗಗಳಿಗೆ ಭೇಟಿಕೊಟ್ಟಿದ್ದೇನೆ/ ಮುಂದೆಯೂ ಭೇಟಿಕೊಡುತ್ತಿರುತ್ತೇನೆ. ನಾನು ಹೋಗಿಬಂದ ಇಂತಹ ದುರ್ಗ ಮತ್ತು ಬೆಟ್ಟಗಳ ಪಟ್ಟಿಯನ್ನು ನೆನಪಿದ್ದಷ್ಟು ದಾಖಲಿಸುತ್ತಿದ್ದೇನೆ.  ಈ ಪಟ್ಟಿ ನವೀಕರಣಗೊಳ್ಳುತ್ತಾ ಹೋಗುತ್ತದೆ.

ಕೋಟೆ/ದುರ್ಗಗಳು

ಮಾಕಳಿದುರ್ಗ

ಹುತ್ರಿದುರ್ಗ

ಭಸ್ಮಾಂಗಿದುರ್ಗ

ರತ್ನಗಿರಿಕೋಟೆ

ಚನ್ನರಾಯನದುರ್ಗ

ದೇವರಾಯನದುರ್ಗ

ಸಾವನದುರ್ಗ

ಮಧುಗಿರಿ ಕೋಟೆ

ಅಂಬಾಜಿ ದುರ್ಗ


ಬೆಟ್ಟಗಳು

ಬಿಳಿಕಲ್ ರಂಗನಾಥಸ್ವಾಮಿ ಬೆಟ್ಟ

ನಂದಿಬೆಟ್ಟ

ರಾಮದೇವರ ಬೆಟ್ಟ

ಸಿದ್ಧರಬೆಟ್ಟ

ಶಿವಗಂಗೆಬೆಟ್ಟ

ಮಂದಾರಗಿರಿ

ರೇವಣಸಿದ್ಧೇಶ್ವರ ಬೆಟ್ಟ

ಯತಿರಾಜಸ್ವಾಮಿ/ಎತ್ತರಾಯಸ್ವಾಮಿ ಬೆಟ್ಟ

ದಿಬ್ಬಗಿರಿ (ಆನೆಗುಡ್ಡ)

ಕೈವಾರ ಬೆಟ್ಟ






ಶನಿವಾರ, ಆಗಸ್ಟ್ 7, 2021

ಹೆಬ್ಬಾಳ ಕಿತ್ತಯ್ಯ ಶಿಲಾಬರಹ ಮತ್ತು ಬೆಂಗಳೂರಿನ ಇತಿಹಾಸ

ಪ್ರಸ್ತಾವನೆ

ಬಹಳ ಜನ ಬೆಂಗಳೂರಿಗರು ನಗರದ ಇತಿಹಾಸದ ಬಗ್ಗೆ ಕೆಂಪೇಗೌಡರ ಕಾಲದಿಂದ ಮಾತ್ರ ಬಲ್ಲರು. ಆದರೆ ಬೆಂಗಳೂರು ಸುಮಾರು ೨೫೦೦ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಬೆಳ್ಳಂದೂರು, ಜಾಲಹಳ್ಳಿ, ರೇಸ್ ಕೋರ್ಸ್ ಗಳಲ್ಲಿ ಕಂಡುಹಿಡಿಯಲ್ಪಟ್ಟ ಶಿಲಾಯುಗದ ಸಮಾಧಿಗಳು ಮತ್ತು ಮಾನವ ನಿರ್ಮಿತ ವಸ್ತುಗಳು ಇದಕ್ಕೆ ಪುರಾವೆಗಳಾಗಿವೆ!

ಲಿಖಿತ ದಾಖಲೆಗಳ ವಿಷಯಕ್ಕೆ ಬಂದರೆ, ಬೆಂಗಳೂರಿನಲ್ಲಿ 1900ನೇ ಇಸವಿಯವರೆಗೆ ಸುಮಾರು ನೂರೈವತ್ತಕ್ಕೂ ಹೆಚ್ಚು ಶಿಲಾಶಾಸನಗಳು ಕಂಡುಬಂದಿವೆ. ಈ ಶಿಲಾಶಾಸನಗಳ ಕಾಲ ಕ್ರಿ.ಶ. ಎಂಟನೇ ಶತಮಾನದ ನಂತರದ್ದಾಗಿದ್ದು ಇವು ನಗರದ ಎಲ್ಲಾ ಭಾಗಗಳಲ್ಲೂ ಇವೆ. ಶಿಲಾಶಾಸನಗಳು ಅವು ರಚನೆಯಾದ ಕಾಲದ ಜನ, ಸಂಸ್ಕೃತಿ, ಧರ್ಮ, ಭಾಷೆ ಮುಂತಾದವುಗಳ ಮೂಲ ದಾಖಲೆಗಳಾಗಿವೆ. ಈ ಶಿಲಾಶಾಸನಗಳನ್ನು 1894 ರಿಂದ 1905 ರ ನಡುವೆ ಬಿ. ಎಲ್. ರೈಸ್ ಅವರು ತಮ್ಮ 'ಎಪಿಗ್ರಾಫಿಯ ಕರ್ನಾಟಿಕ' ಎನ್ನುವ 12 ಸಂಪುಟಗಳ ಗ್ರಂಥಗಳಲ್ಲಿ ದಾಖಲಿಸಿಟ್ಟಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಮಿತಿಮೀರಿದ ನಗರೀಕರಣದ ಹೊಡೆತಕ್ಕೆ ಸಿಕ್ಕು ಈ ಶಿಲಾಶಾಸನಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ನಾಶವಾಗಿವೆ. ಉಳಿದಿರುವ ಕೆಲವು ಶಾಸನಗಳೂ ಸಹ ಸರಿಯಾದ ಮನ್ನಣೆ ಇಲ್ಲದಂತಿವೆ ಮತ್ತು ಅವುಗಳಿರುವ ಜಾಗಗಳು ಸಹ ಶೋಚನೀಯವಾಗಿವೆ.

ಬೆಂಗಳೂರಿಗರು ಇಂತಹ ಶಿಲಾಶಾಸನಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ತುರ್ತು ಅಗತ್ಯವಾಗಿದ್ದು ಅವುಗಳು ಇನ್ನೂ ನಾಶವಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ.

'ಇನ್ ಸ್ಕ್ರಿಪ್ಶನ್ ಸ್ಟೋನ್ಸ್ ಆಫ್ ಬೆಂಗಳೂರು' ಎನ್ನುವುದು ಈ ಶಾಸನಗಳ ಬಗ್ಗೆ ಅರಿವು ಮೂಡಿಸುವ ಮತ್ತು ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ಶಿಲಾಶಾಸನಗಳನ್ನು ಸಂರಕ್ಷಿಸುವ ಒಂದು ನಾಗರೀಕ ಯೋಜನೆಯಾಗಿದೆ. ಬಿ. ಎಲ್. ರೈಸ್ ಅವರ ದಾಖಲೆಗಳ ಪ್ರಕಾರ ಶಾಸನಗಳ ಜಾಡನ್ನು ಹಿಡಿದು ಪತ್ತೆ ಹಚ್ಚಿ ಅವುಗಳನ್ನು ಸಂರಕ್ಷಿಸಲು ಆಧುನಿಕ ತಂತ್ರಜ್ಞಾನಗಳನ್ನು ಮತ್ತು ವಿಧಾನಗಳನ್ನು ಇದರಲ್ಲಿ ಬಳಸಲಾಗುತ್ತಿದೆ.

ಕ್ರಿ.ಶ. ೭೫೦ರ ಕಿತ್ತಯ್ಯ-ಹೆಬ್ಬಾಳ ಶಿಲಾಬರಹ

ಪತ್ತೆ

ರಿವೈವಲ್ ಹೆರಿಟೇಜ್ ಹಬ್ (ಆರ್ ಎಚ್ ಎಚ್) ಎನ್ನುವುದು ಬೆಂಗಳೂರಿನಲ್ಲಿನ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸಗಳಲ್ಲಿ ನಿರತವಾಗಿರುವ ನಾಗರೀಕರ ಒಂದು ತಂಡ. ಹೆಬ್ಬಾಳದ ನಿವಾಸಿ ದಿಲೀಪ ಕ್ಷತ್ರಿಯ ಎಂಬುವವರು 2018ರ ಜೂನ್ ತಿಂಗಳ ಆದಿಯಲ್ಲಿ ಇದನ್ನು ಸಂಪರ್ಕಿಸಿ ಹೆಬ್ಬಾಳದಲ್ಲಿ ಯಾವುದೋ ಒಂದು ರಸ್ತೆ ಬದಿಯಲ್ಲಿ ಇರುವ ನಾಲ್ಕು ದೇವರ ಕಲ್ಲುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಕೋರಿಕೊಂಡರು. ಅಲ್ಲಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದು, ಆ ಕಲ್ಲುಗಳು ನಾಶವಾಗಬಹುದೆಂಬ ಆತಂಕ ಅವರದ್ದಾಗಿತ್ತು. ಅದರಂತೆ ರಿವೈವಲ್ ತಂಡದ ಸದಸ್ಯರು 20 ಜೂನ್ 2018ರಂದು ಅಲ್ಲಿಗೆ ಹೋಗಿ ಮಣ್ಣಿನಲ್ಲಿ ಹೂತುಹೋಗಿದ್ದ ಆ ಕಲ್ಲುಗಳನ್ನು ಅಗೆದು ತೆಗೆದಾಗ ಒಂದು ಅಚ್ಚರಿ ಕಾದಿತ್ತು. ಅದರಲ್ಲಿ ಒಂದು ವೀರಗಲ್ಲಿನ ಹೂತು ಹೋಗಿದ್ದ ಭಾಗದಲ್ಲಿ ಐದು ಸಾಲುಗಳ ಪುರಾತನ ಬರೆಹ ಕಂಡುಬಂದಿತ್ತು.

ಕಲ್ಬರಹದ ವ್ಯಾಖ್ಯಾನ

ಆ ಶಾಸನವು ಕಂಡುಹಿಡಿಯಲ್ಪಟ್ಟ ಕೆಲವೇ ಗಂಟೆಗಳಲ್ಲಿ ಶಿಲಾಶಾಸನ ತಜ್ಞ ಪಿ. ವಿ. ಕೃಷ್ಣಮೂರ್ತಿಯವರು ಆ ಶಾಸನವು ಎಂಟನೇ ಶತಮಾನದ ಗಂಗರ ದೊರೆ ಶ್ರೀಪುರುಷನ ಕಾಲದ್ದೆಂದು ಗುರುತಿಸಿದರು. ಅಷ್ಟೇ ಅಲ್ಲದೇ ಅದು ಬೆಂಗಳೂರಿನಲ್ಲಿ ಇದುವರೆಗೂ ದೊರಕಿರುವ ಶಾಸನಗಳಲ್ಲಿ ಅತ್ಯಂತ ಹಳೆಯದ್ದು ಎಂದು ಕೂಡ ಅಭಿಪ್ರಾಯಪಟ್ಟರು. ಆ ಶಾಸನದಲ್ಲಿನ ಬರಹದ ಕೆಲವು ಭಾಗಗಳು ಮಾಸಿಹೋಗಿದ್ದರಿಂದ ಅದನ್ನು ಓದಿ ವ್ಯಾಖ್ಯಾನಿಸುವುದು ಒಂದು ಸವಾಲಾಗಿತ್ತು. ಆ ಬರಹವನ್ನು ಮೂರು ಆಯಾಮದಲ್ಲಿ ೫೦ ಮೈಕ್ರಾನ್ ನಿಖರತೆಯಲ್ಲಿ ಸ್ಕ್ಯಾನ್ ಮಾಡಿ ಹೈ ರೆಸೊಲ್ಯೂಶನ್ ಚಿತ್ರಗಳನ್ನು ಮಾಡಲಾಯಿತು. ಆ ಚಿತ್ರಗಳು ಅದರಲ್ಲಿನ ಬರಹವನ್ನು ಚೆನ್ನಾಗಿ ಓದಲು ಅವರಿಗೆ ಸಹಾಯವಾದವು. ಅವರು ಆ ಶಿಲಾಶಾಸನದ ಸಂಪೂರ್ಣ ಪಠ್ಯವನ್ನು ದಾಖಲಿಸಿ ಏಪ್ರಿಲ್-ಸೆಪ್ಟೆಂಬರ್ 2018ರ 37-38ನೇ ಸಂಪುಟದ 'ಇತಿಹಾಸ ದರ್ಪಣ' ಪತ್ರಿಕೆಯಲ್ಲಿ ಲೇಖನವನ್ನು ಪ್ರಕಟಿಸಿದ್ದಾರೆ.

ಅದರಂತೆ ಆ ಪಠ್ಯ ಮತ್ತು ಅದರ ಅರ್ಥ ಹೀಗಿದೆ:

ಸ್ವಸ್ತಿ ಶ್ರೀ ಸಿರಿಪುರುಷ ಮಹಾರಾಜಾ ಪೃಥುವೀ ರಾಜ್ಯಂಗೆಯ್ಯೆ
ಪೆರ್ಬ್ಬೊಳಲ್ನಾಡು ಮೂವತ್ತುಮಾನ್ಪೆೞ್ನಾಗತ್ತರಸರಾಳೆ ಆರ
ಕಮ್ಮೊಱರ ಮೈಂದುನಂ ಕೊಡನ್ದಲೆಯರ ಕಿತ್ತಯನಾ ರಟ್ಟವಾ
ಡಿ ಕೂಚಿ ತನ್ದೊಡೆ ಊರೞಿವಿನೊಳೆಱಿದಿನ್ದ್ರಕ ಪುಕಾನ್
ಪೆರ್ಗುನ್ದಿಯು ಕಿಱುಗುನ್ದಿ ತಮ್ಮ ಕುರ್ಳ್ನಿಱಿದೊದು ಇ ಕಲ್ಲುಂ


"ಶ್ರೀಪುರುಷ ಮಹಾರಾಜನು ಭೂಮಂಡಲವನ್ನು ಆಳುತ್ತಿದ್ದಾಗ, ಪೆಳ್ನಾಗತ್ತರನು ಪೆರ್ಬೊಳನಾಡನ್ನು ಆಡಳಿತ ಮಾಡುತ್ತಿದ್ದಾಗ, ಕೊದಂಡಲೆ ಕುಲದ ಅರಕಮ್ಮೊರನ ಮೈದುನ ಕಿಟ್ಟಯ್ಯನು ರಟ್ಟವಾಡಿ ದಾಳಿಯ ಸಂದರ್ಭದಲ್ಲಿ ನಡೆದ ಊರಳಿವು ಕಾಳಗದಲ್ಲಿ ಇಂದ್ರಲೋಕ ಸೇರಿದನು. ಈ ಕಲ್ಲು ಪೆರ್ಗುಂಡಿ ಮತ್ತು ಆತನ ಸಹೋದರ ಕಿರ್ಗುಂಡಿಯಿಂದ ಸ್ಥಾಪಿಸಲ್ಪಟ್ಟಿತು."

  • ಶ್ರೀಪುರುಷ - ಕ್ರಿ.ಶ. 726ರಿಂದ 788ವರೆಗೆ ಆಳಿದ ಗಂಗ ಸಾಮ್ರಾಜ್ಯದ ರಾಜ
  • ಪೆಲ್ನಾಗತ್ತಾರಸ - ಹಿರಿಯ ನಾಗತರ ಅರಸ
  • ಕಿಟ್ಟಯ್ಯ - ಈತನ ನೆನಪಿನಲ್ಲಿ ಸ್ಥಾಪಿಸಲಾದ ವೀರಗಲ್ಲಿನ ವೀರ
  • ಪೆರ್ಬೊಳಲ - ದೊಡ್ಡ (ಪೆರಿ) ನಗರ (ವೊಳಲು)
  • ಹೆಬ್ಬಾಳ ಹೆಸರಿನ ಶಬ್ದೋತ್ಪತ್ತಿ -> (ಪೆರಿಯ+ವೊಳಲ್) ಪೆರ್ಬೊಳಲ್ -> ಪೆಬ್ಬೊಳಲ್ -> ಪೆಬ್ಬೊಳ್ -> ಪೆಬ್ಬಾಳ -> ಹೆಬ್ಬಾಳ
  • ರಟ್ಟವಾದಿ - ರಾಷ್ಟ್ರಕೂಟ

ಮಹತ್ವ ಮತ್ತು ಸಂರಕ್ಷಣೆಯ ಯೋಜನೆ

ಈ ಕಿಟ್ಟಯ್ಯ-ಹೆಬ್ಬಾಳ ಶಾಸನವು ಬೆಂಗಳೂರಿಗೆ ಈ ಕೆಳಗಿನ ಕಾರಣಗಳಿಂದ ಪ್ರಮುಖವಾದುದ್ದಾಗಿದೆ:
೧. ಇದು ಬೆಂಗಳೂರಿನಲ್ಲಿ ದೊರೆತಿರುವ ಅತಿ ಹಳೆಯ, ಅಂದರೆ ಸುಮಾರು 1250 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಬರೆಹವಾಗಿದೆ. ಇದು ಕನ್ನಡದ ಮೊದಲ ಗ್ರಂಥವಾದ 'ಕವಿರಾಜಮಾರ್ಗ'ಕ್ಕಿಂತಲೂ ನೂರು ವರ್ಷಗಳಷ್ಟು ಹಳೆಯದು.
೨. ಈ ಶಾಸನದಿಂದ ತಿಳಿದುಬಂದಂತೆ 'ಕಿಟ್ಟಯ್ಯ' ಎಂಬುದು ಬೆಂಗಳೂರಿನ ಅತಿಹಳೆಯ ನಿವಾಸಿಯೊಬ್ಬನ ಹೆಸರಾಗಿದ್ದು, ಆತ ನಿಜವಾಗಿ ಗೊತ್ತಿರುವಂತೆ ಬೆಂಗಳೂರಿನ ಮೊದಲ ಪ್ರಜೆ ಎಂದು ಹೇಳಬಹುದು!
೩. ಶಾಸನದಲ್ಲಿ 'ಹೆಬ್ಬಾಳ' ದ ಹೆಸರು ಉಲ್ಲೇಖವಾಗಿರುವುದರಿಂದ ಬೆಂಗಳೂರಿನ ಅತಿ ಹಳೆಯ ಪ್ರದೇಶವಿದು ಎಂದು ಗೊತ್ತಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಕ್ರಿ.ಶ. 750ರ ಕಾಲದ ಈ ಕಿಟ್ಟಯ್ಯನ ವೀರಗಲ್ಲನ್ನು ಅದರ ಮಹತ್ವಕ್ಕೆ ತಕ್ಕುದಾದ ರೀತಿಯಲ್ಲಿ ಇಟ್ಟು ಕಾಪಾಡಿ ಗೌರವಿಸುವಂತೆ, ಸಂಭ್ರಮಿಸುವಂತೆ ಮತ್ತು ಇನ್ನೂ ಶತಮಾನಗಳ ಕಾಲ ಇದು ಉಳಿಯುವಂತೆ ಯೋಜನೆ ರೂಪಿಸಲಾಗಿದೆ. ಎಸ್ತೆಟಿಕ್ ಆರ್ಕಿಟೆಕ್ಟ್ಸ್ ನ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಅವರು ಈ ವೀರಗಲ್ಲನ್ನು ಇಡಲು ಗಂಗ ಶೈಲಿಯ ಮಂಟಪವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರಿನ ಹೆಮ್ಮೆ ಮತ್ತು ಆಸ್ತಿಯಾಗಿರುವ ಇದಕ್ಕಾಗಿ ಮಂಟಪ ನಿರ್ಮಾಣದ ಉದ್ದೇಶಕ್ಕೆ ನಾಗರೀಕರಿಂದ ಹಣಸಂಗ್ರಹಕ್ಕಾಗಿ ಕೋರಿಕೊಳ್ಳಲಾಗಿದೆ. ದೇಣಿಗೆ ನೀಡಿದವರಿಗೆ ಧನ್ಯವಾದಪೂರ್ವಕವಾಗಿ ಈ ವೀರಗಲ್ಲಿನ ೧/೮ ಕುಗ್ಗಿಸಿದ ಗಾತ್ರದ ಹಿತ್ತಾಳೆಯ ಪ್ರತಿಕೃತಿಯನ್ನು ಕೊಡಲಾಗುತ್ತದೆ.

ನಮ್ಮ ನಗರದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಮ್ಮೊಡನೆ ಕೈಜೋಡಿಸಿ.

***************

ಮೇಲಿನ ಪಠ್ಯ ನಾನು ಕನ್ನಡದಲ್ಲಿ ಅನುವಾದಿಸಿ ಕೊಟ್ಟಂತದ್ದು. ಮಂಟಪಕ್ಕೆ ದೇಣಿಗೆ ಕೊಟ್ಟವರಿಗೆ ಸ್ಮರಣಿಕೆಯಾಗಿ ಕೊಡುವ ಹಿತ್ತಾಳೆ ಪ್ರತಿಕೃತಿಯ ಜೊತೆ ಇರುವ ಬ್ರೋಶರ್ ನಲ್ಲಿ ಬಳಸಿಕೊಳ್ಳಲಾಗಿದೆ.

2020ರಲ್ಲಿ ಮಂಟಪದ ನಿರ್ಮಾಣ ಪೂರ್ಣಗೊಂಡು ವೀರಗಲ್ಲು ಶಾಸನಗಳನ್ನು ಅದರಲ್ಲಿಟ್ಟು ಸಂರಕ್ಷಿಸಲಾಗಿದೆ.

ಕಿತ್ತಯ್ಯ ವೀರಗಲ್ಲು -ಶಿಲಾಬರಹದ ಮಂಟಪವಿರುವ ಸ್ಥಳದ ನಕಾಶೆ ಲಿಂಕ್

ಶುಕ್ರವಾರ, ಜುಲೈ 2, 2021

ಆನ್ಸಿ & ಯುನಿಕೋಡ್ ಫಾಂಟ್ಸ್ - ಒಂದಿಷ್ಟು ತಿಳುವಳಿಕೆಗೆ

ಫಾಂಟ್ಸ್ ಎಂಬೆಡ್ ಮಾಡುವುದು

ಹಿಂದೆಲ್ಲಾ ಹಳೆಯ 'ನುಡಿ', 'ಬರಹ' ಗಳನ್ನು ಬಳಸಿ ANSI ಫಾಂಟುಗಳ ಮೂಲಕ ಕಂಪ್ಯೂಟರಲ್ಲಿ ಕನ್ನಡ ಟೈಪ್ ಮಾಡುತ್ತಿದ್ದೆವು. ಇಂತಹ ಫಾಂಟುಗಳನ್ನು ಬಳಸಿ ಬರೆದ ಫೈಲನ್ನು ಬೇರೆಯವರಿಗೆ ಕಳಿಸಿದರೆ ಅವರ ಕಂಪ್ಯೂಟರಲ್ಲೂ ಸಹ ಆ ತಂತ್ರಾಂಶ ಅಥವಾ ಫಾಂಟುಗಳು ಇದ್ದರೆ ಮಾತ್ರ ಅವರು ಓದಲು ಸಾಧ್ಯವಾಗ್ತಿತ್ತು. ಇಲ್ಲದಿದ್ದಲ್ಲಿ ಜಂಕ್ ಅಕ್ಷರಗಳಾಗಿ ಕಾಣುತ್ತಿದ್ದವು. ಈಗಲೂ ಕೆಲವರು ಅದೇ ಆನ್ಸಿ ಫಾಂಟುಗಳನ್ನು ಬಳಸುತ್ತಿದ್ದಾರಾದರೂ ಬಳಕೆ ಸೀಮಿತವಾಗಿದೆ.

ಇಲ್ಲಿ ಏನು ವಿಷಯ ಹೇಳಲು ಬಂದೆ ಎಂದರೆ, ನೀವು ಹಳೆಯ ANSI ಫಾಂಟ್ ಬಳಸಿ ಬರೆದ ವರ್ಡ್ ಫೈಲನ್ನು ಬೇರೊಬ್ಬರಿಗೆ ಕಳಿಸುವಾಗ ಒಂದು ಚಿಕ್ಕ ಬದಲಾವಣೆ ಮಾಡಿಕೊಂಡರೆ ನೀವು ಯಾರಿಗೆ ಕಳಿಸಿರುತ್ತೀರೋ ಅವರಲ್ಲಿ ಆ ANSI ಫಾಂಟುಗಳು ಇಲ್ಲದಿದ್ದರೂ ಅವರಿಗೆ ಸರಿಯಾಗಿ ಕಾಣುವಂತೆ ಮಾಡಬಹುದು. ಅದು ಹೇಗೆಂದರೆ, ವರ್ಡ್ ಫೈಲನ್ನು 'ಸೇವ್' ಮಾಡುವಾಗ ಬರುವ ಸೇವ್ ವಿಂಡೋದಲ್ಲಿ ಕೆಳಗೆ 'ಟೂಲ್ಸ್' - 'ಸೇವ್ ಆಪ್ಶನ್ಸ್' ತೆರೆದರೆ ಈ ಚಿತ್ರದಲ್ಲಿರುವಂತೆ ಒಂದು ಆಯ್ಕೆ ಇರುತ್ತದೆ. ಅದರಲ್ಲಿ 'ಎಂಬೆಡ್ ಫಾಂಟ್ಸ್ ಇನ್ ದ ಫೈಲ್' ಟಿಕ್ ಮಾಡಿ, ಅದರ ಕೆಳಗಿನ ಎರಡು ಚೌಕಗಳನ್ನೂ ಬೇಕಿದ್ದಲ್ಲಿ ಟಿಕ್ ಮಾಡಿ. ಅನಂತರ ಸೇವ್ ಮಾಡಿ. ಆಗ ನಿಮ್ಮ ANSI ಫಾಂಟುಗಳು ಕಡತದೊಳಗೆ ಎಂಬೆಡ್ ಆಗಿ ಸೇವ್ ಆಗುತ್ತದೆ. ಇನ್ನು ಯಾರಿಗೆ ಕಳಿಸಿದರೂ ಅವರು ಓದಿಕೊಳ್ಳಬಹುದು.

  
ಈಗ ನಾವೆಲ್ಲಾ ಬರೆಯುತ್ತಿರುವ ಈಗಿನ ಸ್ಟ್ಯಾಂಡರ್ಡ್ ಆದ ಯುನಿಕೋಡ್ ಫಾಂಟುಗಳನ್ನು ಬಳಸಿದರೆ ಇದೆಲ್ಲಾ ಏನು ಸಮಸ್ಯೆ ಇಲ್ಲ. ಆದರೆ ಯುನಿಕೋಡ್ ಬಳಸಿದಾಗಲೂ ಮತ್ತು ಪಿಡಿಎಫ್‌'ನಂತೆ ಸೇವ್ ಮಾಡುವಾಗಲೂ ಇದೇ ತಂತ್ರ ಬಳಸಿದರೆ ಆಗ ನೀವು ಬರೆದ ಫಾಂಟುಗಳು ಆ ಕಡತದೊಳಗೆ ಹಾಗೇ ಅಡಕವಾಗಿ ಉಳಿಯುತ್ತವೆ. ನೀವು ಯಾವುದೊಂದು ನಿರ್ದಿಷ್ಟ ಶೈಲಿಯ ಫಾಂಟಿನಲ್ಲಿ ಬರೆದಿದ್ದರೆ ಆ ಫಾಂಟುಗಳು ಬೇರೆಯವರಲ್ಲಿ ಇಲ್ಲದಿದ್ದರೂ ಅವರು ನೀವು ಬರೆದ ಅದೇ ಫಾಂಟುಗಳ ರೂಪದಲ್ಲೇ ಓದಬಹುದು.

*****************
ಜಂಕ್ ಅಕ್ಷರಗಳ ಸಮಸ್ಯೆಗೆ ಏನು ಪರಿಹಾರ?

ಮೊನ್ನೆ ಒಬ್ಬರು ಕೇಳಿದರು. "ನಮ್ಮ ಇಲಾಖೆಯಿಂದ ಬರುವ ಇಮೇಲುಗಳು ಜಂಕ್ ಅಕ್ಷರಗಳಾಗಿ ಕಾಣುತ್ತವೆ. ಕಂಪ್ಯೂಟರಲ್ಲೂ ಕಾಣಲ್ಲ, ಮೊಬೈಲಲ್ಲೂ ಓದಕ್ಕಾಗಲ್ಲ. ಏನು ಮಾಡೋದು? ಅವರು 'ನುಡಿ' ಬಳಸಿ ಬರೆಯುತ್ತಾರಂತೆ. ನಾವೂ ಎಲ್ಲದಕ್ಕೂ ನುಡಿಯನ್ನೇ ಬಳಸಬೇಕಾ?" ಅಂತ.‌  ಇದರ ಬಗ್ಗೆ ಈ ಕೆಳಗಿನ ಮಾಹಿತಿ:

ಈ 'ನುಡಿ' , 'ಬರಹ' ಇತ್ಯಾದಿಗಳು ಏನಿವೆ, ಅವು ಅಕ್ಷರ ಟೈಪಿಸುವ ಟೂಲ್ ಗಳಷ್ಟೆ. ಹಳೆಯ ಆವೃತ್ತಿಯ ನುಡಿ, ಬರಹಗಳಲ್ಲಿ ಅವುಗಳದ್ದೇ ಆದ ಫಾಂಟ್ ಗಳಿದ್ವು. ಆಯಾ ತಂತ್ರಾಂಶದಲ್ಲಿ ಟೈಪ್ ಮಾಡಿದ್ದು ಆಯಾ ತಂತ್ರಾಂಶದಲ್ಲಿ ತೆರೆದರಷ್ಟೆ ಅಕ್ಷರಗಳು‌ ಸರಿಯಾಗಿ ಕಾಣುತ್ತಿತ್ತು. ಅಥವಾ ಕೊನೇಪಕ್ಷ ನಿಮ್ಮ ಕಂಪ್ಯೂಟರಲ್ಲಿ/ಫೋನಲ್ಲಿ ಆ‌‌ ತಂತ್ರಾಂಶದ ಫಾಂಟ್ಸ್ ಇರಬೇಕಿತ್ತು. ಆದರೆ‌ ಈಗ ಅದೆಲ್ಲಾ‌ ಹಳೆಯದಾಗಿದೆ. 'ಯುನಿಕೋಡ್' ಫಾಂಟುಗಳು ಬಂದು ಸುಮಾರು ಹತ್ತು ವರ್ಷಗಳಾಗಿದೆ. ಯುನಿಕೋಡ್ ಅನ್ನುವುದೊಂದು ಸ್ಟ್ಯಾಂಡರ್ಡ್. ಈಗ ನೀವು ಓದ್ತಾ‌‌ ಇರೋದು ಯುನಿಕೋಡಿನಲ್ಲಿರುವ ಅಕ್ಷರಗಳು. ಇವು ಎಲ್ಲೆಡೆಯೂ ಸರಿಯಾಗಿ ಕಾಣ್ತವೆ. ನಾನು ಕಂಪ್ಯೂಟರಲ್ಲಿ ಬರೆದು‌ಹಾಕಿದರೆ ನೀವು ಯಾವ ಹೊರತಂತ್ರಾಂಶದ ನೆರವಿಲ್ಲದೇ ನಿಮ್ಮ ಗಣಕದಲ್ಲೂ ಫೋನಲ್ಲೂ ಟ್ಯಾಬಲ್ಲೂ ಓದಬಹುದು. ಫೋನಲ್ಲಿ ನೀವು ಯಾವುದೊ ಆಪ್ ಹಾಕಿಕೊಂಡು ಬರೆದದ್ದು ಬೇರೆ ಫೋನಲ್ಲೂ ಕಂಪ್ಯೂಟರಲ್ಲೂ ಎಲ್ಲೆಲ್ಲೂ ಓದಬಹುದು. ಯುನಿಕೋಡ್ ವಿಶೇಷ ಏನು ಅಂದ್ರೆ‌ ನೀವು ಇದನ್ನು‌ ಬರೆಯಲು ಯಾವ ತಂತ್ರಾಂಶವನ್ನಾದರೂ ಬಳಸಬಹುದು. ಎಲ್ಲಾ‌ ಒಂದೇ. ಹಾಗಾಗಿ ನುಡಿ, ಬರಹ, ಪದ , ಗೂಗಲ್ ಇಂಡಿಕ್, ವಿಂಡೋಸ್/ ಲೈನಕ್ಸ್ ಇನ್ ಬಿಲ್ಟ್ , ಹತ್ತಾರು ಆನ್ ಲೈನ್ ಟೂಲ್ ಗಳು, ಆಪ್ ಗಳು ಯಾವುದರಲ್ಲಾದರೂ ಬರೆಯಬಹುದು. 
 
ಇನ್ನು‌ 'ನುಡಿ' ವಿಷಯಕ್ಕೆ ಬಂದರೆ, ಕಂಪ್ಯೂಟರಲ್ಲಿ ಟೈಪಿಸಲು ಬಳಕೆಯಾಗುವ ನುಡಿ ತಂತ್ರಾಂಶವು ಐದನೇ ಆವೃತ್ತಿಯವರೆಗೆ 'ಯುನಿಕೋಡ್' ಮತ್ತು 'ಆನ್ಸಿ'(ANSI) ಎರಡರ ಆಯ್ಕೆ ಕೊಡ್ತಿತ್ತು. ಆನ್ಸಿ ಅಂದರೆ‌ ಹಳೇ‌ಫಾಂಟುಗಳು. ಈಗ ಅವು ಸಾಮಾನ್ಯ ಬಳಕೆಗೆ ಬೇಡ.‌ ನುಡಿ ಆರನೇ ಆವೃತ್ತಿಯಿಂದ ಬರೀ ಯುನಿಕೋಡ್ ಮಾತ್ರ‌ ಇದೆ. ಹಾಗಾಗಿ‌ ನುಡಿಯೇ ಬೇಕು ಅಂದ್ರೆ www.kagapa.in ತಾಣಕ್ಕೆ‌ಹೋಗಿ‌ ಹೊಸ ಆವೃತ್ತಿ‌ ಇಳಿಸಿಕೊಂಡು ಬಳಸಿ. ಇಲ್ಲಾಂದ್ರೆ www.pada.pro ತಾಣಕ್ಕೆ‌ ಹೋಗಿ 'ಪದ' ಇಳಿಸಿಕೊಂಡು ಬಳಸಿ ಅಥವಾ ನಿಮಗಿಷ್ಟದ ಯಾವುದಾದ್ರೂ ಬಳಸಿ. ಸರ್ಕಾರಿ‌ ಇಲಾಖೆಗಳಿಗೂ ಯುನಿಕೋಡನ್ನು ಸ್ಟ್ಯಾಂಡರ್ಡ್ ಮಾಡಿ ಎರಡ್ಮೂರು ವರ್ಷಗಳಾಗಿವೆ. ಇನ್ನೂ ಯಾವುದಾದರೂ ಇಲಾಖೆಗಳು ಹಳೇ ನುಡಿ ಬಳಸ್ತಿದ್ದರೆ ಅದನ್ನು ಬದಲಾಯಿಸಿಕೊಳ್ಳಲು ಹೇಳಿ.

ಇಷ್ಟಾದ ಮೇಲೆ ಮತ್ತೊಂದು ಪ್ರಶ್ನೆ ಬರುತ್ತದೆ. ಕೆಲವೊಂದು ಹಳೇ ಫೈಲುಗಳು ನುಡಿಯಲ್ಲಿ ಟೈಪಿಸಿದ್ದಿವೆ ಅಥವಾ ಮತ್ಯಾವುದಾದರೂ ಅಕ್ಷರಗಳು ಜಂಕ್ ಬಂದಾಗ ಆ ಅಕ್ಷರ ಕಾಣಲು ಏನು ಮಾಡಬೇಕು ಅಂತ.
https://aravindavk.in/sanka/ ಈ ತಾಣಕ್ಕೆ ಹೋಗಿ ASCII to Unicode ಎಂದು ಕೊಟ್ಟು ನಿಮ್ಮ‌ ಜಂಕ್ ಅಕ್ಷರಗಳನ್ನು ಯುನಿಕೋಡಿಗೆ ಪರಿವರ್ತಿಸಿ‌ ಓದಿಕೊಳ್ಳಿ.

ಇದನ್ನು ಹೊರತುಪಡಿಸಿ ಈ ಫಾಂಟು, ತಂತ್ರಾಂಶಗಳು, ಪರಿವರ್ತನೆ, ಕಂಪ್ಯಾಟಿಬಿಲಿಟಿ, ಸಪೋರ್ಟ್ ಇತ್ಯಾದಿ ಬೇರೆ ಬೇರೆ ವಿಷಯಗಳು ಬಹಳ ಇವೆ. ಸಾಮಾನ್ಯ ಬಳಕೆದಾರರಿಗೆ ಅದೆಲ್ಲಾ ಬೇಡ.  ಇದೆಲ್ಲಾ ಅಗತ್ಯವಿಲ್ಲ, ನನಗೇನೂ ಸಮಸ್ಯೆ ಆಗಿಲ್ಲ ಅನ್ನೋರು,‌ ಬರೀ ಮೊಬೈಲಲ್ಲಿ ಟೈಪ್ ಮಾಡೋರು ಯಾವ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. 

ಭಾನುವಾರ, ಜೂನ್ 27, 2021

ಕ್ಲಬ್ ಹೌಸ್ - ಆಧುನಿಕ‌ ಅರಳಿಕಟ್ಟೆ

ನಿಮ್ಮ ಗೆಳೆಯನೊಬ್ಬ ನಿಮಗೊಂದು ಆಮಂತ್ರಣ‌ ಕೊಟ್ಟಿದ್ದಾನೆ. “ಇಲ್ಲೊಂದು ಜಾಗ ಇದೆ, ಬಹಳ‌ ಸ್ವಾರಸ್ಯವಾಗಿದೆ, ನಾನಾಗಲೇ ಇಲ್ಲಿದ್ದೇನೆ, ನೀನೂ ಬಾ” ಅಂತ. ಅದೇನೆಂದು ನೋಡಿಬಿಡೋಣ ಅಂತ ನೀವು ಹೋಗುತ್ತೀರಿ.  ಅದು ದೊಡ್ಡದೊಂದು ಕಟ್ಟಡ ಸಂಕೀರ್ಣ‌. ಪ್ರವೇಶ ಮಾಡುವಾಗ ನಿಮ್ಮ ಫೋನ್ ನಂಬರು ಹೆಸರು ಇತ್ಯಾದಿ ಕೊಟ್ಟು ನೋಂದಾಯಿಸಬೇಕಾಗುತ್ತದೆ.  ನೋಂದಾವಣೆ ಮುಗಿಸಿ ಒಳನಡೆಯುತ್ತೀರಿ.  ಒಳಗೆ ಹೋಗುತ್ತಿದ್ದಾಗ ಹಲವು ಪರಿಚಿತ ಮುಖಗಳು, ಎಷ್ಟೋ ಅಪರಿಚಿತ ಮುಖಗಳು ನಿಮ್ಮಂತೆಯೇ ಓಡಾಡುವುದನ್ನು ಕಾಣುತ್ತೀರಿ.  ಆ ಕಟ್ಟಡದ ಒಳಗೆ ಬಹಳ ಕೋಣೆಗಳಿವೆ.  ನೀವು ನಡೆಯುತ್ತಾ ಹೋದಂತೆ ಪ್ರತಿಕೋಣೆಯ ಒಳಗೂ ಏನೋ ಮಾತುಕತೆಗಳು ನಡೆಯುವುತ್ತಿರುವುದನ್ನು ಕಾಣುತ್ತೀರಿ. ಎಲ್ಲಾ ಕೋಣೆಗಳ ಬಾಗಿಲಿಗೂ ಇಲ್ಲಿ ಇಂತಹ ವಿಷಯದ ಬಗ್ಗೆ ಮಾತುಕತೆ ನಡೆಯುತ್ತಿದೆ ಅಂತ ಬೋರ್ಡ್ ಹಾಕಿದ್ದಾರೆ. ಮುಕ್ತಪ್ರವೇಶದ ಕೋಣೆಗಳ ಒಳಗೆ ಹೋದರೆ ಚರ್ಚೆ ನಡೆಯುತ್ತಿದೆ. ಒಂದಿಷ್ಟು ಜನ ಕುಳಿತು ಕೇಳುತ್ತಿದ್ದರೆ ಕೆಲವರು ವೇದಿಕೆಯಲ್ಲಿ ಮಾತಾಡುತ್ತಿದ್ದಾರೆ. ಒಂದು ಕೋಣೆಯಲ್ಲಿ ಕೆಲವೇ ಜನರಿದ್ದರೆ ಮತ್ತೊಂದರಲ್ಲಿ ನೂರಾರು ಜನರಿದ್ದಾರೆ. ಒಂದು ಕೋಣೆ ಹೊಕ್ಕು ಸ್ವಲ್ಪ ಹೊತ್ತು ಕೇಳಿ ಸಾಕೆನಿಸಿ ಹೊರಬರುತ್ತೀರಿ. ಮತ್ತೊಂದು ಕೋಣೆಯಲ್ಲಿ ನಿಮ್ಮಾಸಕ್ತಿಯ ವಿಷಯವೊಂದರೆ ಬೋರ್ಡ್ ಕಂಡು ಒಳಹೊಕ್ಕುತ್ತೀರಿ. ಅಲ್ಲಿ ಕೂತು ಕೇಳಿಸಿಕೊಳ್ಳುತ್ತೀರಿ. ನಿಮ್ಮ ಸ್ನೇಹಿತರನೇಕರು ಅಲ್ಲೇ ಇದ್ದಾರೆ.  ನಿಮಗೂ ಏನೋ ಹೇಳಬೇಕೆನಿಸುತ್ತದೆ. ಕೈ ಎತ್ತುತ್ತೀರಿ. ಆಯೋಜಕರು ವೇದಿಕೆಗೆ ಕರೆದು ಮಾತಾಡಲು ಅವಕಾಶ ಕೊಡುತ್ತಾರೆ. ಮಾತಾಡುತ್ತೀರಿ, ಪ್ರಶ್ನೆಗಳಿಗೆ ಉತ್ತರಿಸುತ್ತೀರಿ, ಚರ್ಚೆ ನಡೆಸುತ್ತೀರಿ, ಅಲ್ಲೇ ಸಮಯಕಳೆಯುತ್ತೀರಿ. ಇಡೀ ಕಟ್ಟಡವು ಇಂತದ್ದೇ ಹಲವು ಕೋಣೆಗಳಿಂದ ತುಂಬಿದೆ.  ಒಂದೇ ಆಸಕ್ತಿಯ ಜನರು ತಂಡಗಳನ್ನು ರಚಿಸಿಕೊಂಡಿದ್ದಾರೆ, ಹಲವು ವಿಷಯದ ಬಗ್ಗೆ ಕ್ಲಬ್ ಗಳನ್ನು ಮಾಡಿಕೊಂಡಿದ್ದಾರೆ. ಅವರು ಇವರ ಜಾಡು ಹಿಡಿದು ಇವರು ಅವರ ಜಾಡು ಹಿಡಿದು ಹೊರಟಿದ್ದಾರೆ‌. ಒಬ್ಬರನ್ನೊಬ್ಬರು ಹಿಂಬಾಲಿಸುತ್ತಾ ಇದ್ದಾರೆ‌. ಒಟ್ಟಾರೆ ಒಂದು ಮಾತಿನ ಕೋಣೆಗಳ ಪ್ರಪಂಚವೇ ಅಲ್ಲಿದೆ. ಇದ್ಯಾವ ಹಾಲಿವುಡ್ ಸಿನೆಮಾ ಕತೆ ಎಂದು ಯೋಚಿಸುತ್ತಿದ್ದೀರಾ? ಅಥವಾ‌ ಈ ಜಾಗ ಜಗತ್ತಿನಲ್ಲಿ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಅಂತಹ ಕಟ್ಟವಾಗಲೀ ಜಾಗವಾಗಲೀ ಎಲ್ಲೂ ಇಲ್ಲ. ಆದರೆ ಇಂತಹದೊಂದು ಪರಿಕಲ್ಪನೆ ಈಗಾಗಲೇ ಸಾಕಾರಗೊಂಡಿದೆ. ಇದು ವಾಸ್ತವ ಜಗತ್ತಿನದ್ದೇ ಆದರೂ  ರೂಪುಗೊಂಡಿರುವುದು ಡಿಜಿಟಲ್ ರೂಪದಲ್ಲಿ! ನಿಮ್ಮ ಸ್ಮಾರ್ಟ್ ಫೋನಿನಲ್ಲೇ ಇಂತಹ ಮಾತಿನ ಕ್ಲಬ್ ಗಳ ಜಗತ್ತನ್ನು ನಿಮ್ಮ ಅಂಗೈಗೆ ತಂದಿಟ್ಟಿರುವುದು ‘ಕ್ಲಬ್ ಹೌಸ್’ ಎಂಬ‌ ಒಂದು ಚಿಕ್ಕ ಆ‌ಪ್!

ಕ್ಲಬ್ ಹೌಸೆಂಬ ‘ಕ್ಲಬ್ಬಿಗರ’ ತಾಣ:

ಸಾಮಾಜಿಕ ಜಾಲತಾಣಗಳ ಹೊಸ ಹೊಸ‌ ಮಾದರಿಗಳ ಪ್ರಯತ್ನದಲ್ಲಿ ಮೂಡಿಬಂದಿರುವ ಈ ಕ್ಲಬ್ ಹೌಸ್ ಕೂಡ ಸಾಮಾಜಿಕ ಜಾಲತಾಣದ ಒಂದು ರೂಪ. ಆದರೆ ಇಲ್ಲಿ ಬರಹಗಳ ಅಗತ್ಯವಿಲ್ಲ, ವೀಡಿಯೋಗಳ ಬಳಕೆಯಿಲ್ಲ. ಇದು ಆಡಿಯೊ ಡ್ರಾಪ್ ಇನ್ ತಾಣ‌. ಇಲ್ಲಿ ದನಿಗಳಿಗಷ್ಟೇ ಅವಕಾಶ. ಲೈವ್ ಮಾತುಕತೆಗಳು, ಗೋಷ್ಠಿಗಳು, ಚರ್ಚೆಗಳು, ತರಬೇತಿಗಳು, ಭಾಷಣಗಳು, ಹರಟೆಗಳು ಮುಂತಾದ ಎಲ್ಲದಕ್ಕೂ ಇದು ವೇದಿಕೆ. ಮೂಲದಲ್ಲಿ ಪಾಡ್ ಕಾಸ್ಟ್ ಗಳಿಗೆಂದು ರೂಪಿತವಾಗಿದ್ದ ಈ ಆಪ್ ಮರುವಿನ್ಯಾಸಗೊಂಡು ಮಾರ್ಚ್ 2020ರಲ್ಲಿ ಆಪಲ್ ಬಳಕೆದಾರರಿಗೆ ಬಿಡುಗಡೆಯಾಗಿತ್ತು. ಈ ಮೇ ತಿಂಗಳ ಕೊನೆಯಲ್ಲಿ ಆಂಡ್ರಾಯ್ಡ್ ಫೋನುಗಳಿಗೂ ಬಿಡುಗಡೆಯಾಗಿದ್ದೇ ತಡ, ಅಲ್ಪ ಸಮಯದಲ್ಲಿ ಜನಪ್ರಿಯವಾಗಿ ವಿಶ್ವದಾದ್ಯಂತ ಜನರನ್ನು ಸೆಳೆದು ಸಾಮಾಜಿಕ ಜಾಲತಾಣಗಳ ಪಟ್ಟಿಗೆ ಒಂದು ವಿಶಿಷ್ಟ ಸೇರ್ಪಡೆಯಾಗಿದೆ‌. ಆಡಿಯೋ-ವೀಡಿಯೋ ಕರೆಗಳಿಗೆ, ಸಭೆಗಳಿಗೆ ಈಗಾಗಲೇ ಇರುವ ಹಲವು ಆಪ್ ಗಳಿಗಿಂತಲೂ ಇದು ಅತಿವೇಗದಲ್ಲಿ ಗಳಿಸಿಕೊಳ್ಳುತ್ತಿರುವ ಜನಪ್ರಿಯತೆಯನ್ನು ಕಂಡ ಇತರ ಸಾಮಾಜಿಕ ಜಾಲತಾಣಗಳ ಕಂಪನಿಗಳು ತಾವೂ ಇಂತದ್ದೇ ಸೇವೆ ಒದಗಿಸಲು ಬೇಕಾದ ಸಿದ್ಧತೆ ಆರಂಭಿಸಿವೆ. 



ಅಂತರಜಾಲದ
ನಿರಂತರ ಸಾಧ್ಯತೆಗಳ ಫಲವಾದ ಈ ಕ್ಲಬ್ ಹೌಸ್  ಈಗಾಗಲೇ ವೈವಿಧ್ಯಮಯ ಚಾಟ್ ರೂಮ್ ಗಳ ದೊಡ್ಡತಾಣವಾಗುತ್ತಲಿದೆ. ಸಮಯಮಿತಿಯಿಲ್ಲದೇ, ವಿಷಯಮಿತಿಯೂ ಇಲ್ಲದೇ ನೇರ ಮಾತುಕತೆಗಳನ್ನು ನಡೆಸಬಹುದು. ನಿಮ್ಮ ಅಂಗಳವು ಮುಕ್ತವಾಗಿದ್ದಲ್ಲಿ ಯಾರುಬೇಕಾದರೂ ಬಂದು ಕೂತು ನಿಮ್ಮ ಮಾತು ಕೇಳಿಸಿಕೊಳ್ಳಬಹುದು, ಪರಸ್ಪರ ಮಾತಾಡಬಹುದು. ಗಂಟೆಗಟ್ಟಲೇ ಕಳೆಯಬಹುದು. ಮಾತುಕತೆ ಚರ್ಚೆಗಳನ್ನು ನಿರ್ವಾಹಕರು ಚಂದವಾಗಿ ನಡೆಸಬಹುದು. ಕೇಳುಗರಿದ್ದಲ್ಲಿ ಮಾತಿನ ಮಲ್ಲರಿಗಂತೂ ಹಬ್ಬ. ರಾಜಕೀಯ ಚರ್ಚೆಯಿಂದ ಹಿಡಿದು ಧಾರ್ಮಿಕ ಪ್ರವಚನಗಳವರೆಗೆ ಎಲ್ಲದಕ್ಕೂ ವೇದಿಕೆಯಾಗಿಸಬಹುದಾದ ಈ ತಾಣದಲ್ಲಿ ಈಗಾಗಲೇ ನೂರಾರು‌ ಸಾವಿರಾರು ಕ್ಲಬ್ ಗಳು, ತಂಡಗಳು ಇವೆ. ಇಲ್ಲಿ ‘ಅರಳಿಕಟ್ಟೆ’ಯೂ ಇದೆ, ‘ಅಡ್ಡಕಸುಬಿಗಳ ಅಡ್ಡ’ವೂ ಇದೆ. ಒಂದು ಕ್ಲಬ್ಬಲ್ಲಿ ಹಂಸಲೇಖ ಸಂಗೀತಸಾಹಿತ್ಯದ ಅದ್ಭುತ ಮಾತುಕತೆಯೂ ನಡೆಯುತ್ತಿದ್ದರೆ ಮತ್ಯಾವುದೋ ಕ್ಲಬ್ಬಲ್ಲಿ ಮಂಗಳನ ಅಂಗಳದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ! ನೀವೇ ಒಂದು ಹೊಸ ಚಾಟ್ ರೂಮನ್ನೋ ಹೊಸ ಕ್ಲಬ್ಬನ್ನೋ ರಚಿಸಿ ಮಾತುಕತೆ ಶುರುಮಾಡಿಬಿಡಬಹುದು. ನಿಮ್ಮ ಪರಿಚಿತರದ್ದೇ ಒಂದು ಗುಂಪನ್ನು ಸೇರಿಸಿಕೊಂಡು ಖಾಸಗಿ ಮಾತುಕತೆಯನ್ನೂ ನಡೆಸಬಹುದು. ತೆರೆದ ಮತ್ತು ಮುಚ್ಚಿದ ಚಾಟ್ ರೂಂಗಳನ್ನು ಬಳಸಿಕೊಂಡು ನಿಗದಿತ ದಿನದಲ್ಲಿ ನಿಗದಿತ ಸಮಯಕ್ಕೆ ಇವೆಂಟುಗಳನ್ನೂ ಸಹ ಯೋಜಿಸಿಡಬಹುದು. ಒಂದು ವಿಷಯಕ್ಕೆ ಸಂಬಂಧಿಸಿದ ಕ್ಲಬ್ ಒಂದನ್ನು ರಚಿಸಿಕೊಂಡು ಅದರಲ್ಲಿ ಜನರನ್ನು ಸೇರಿಸಿಕೊಂಡು ಸಮಾನಾಸಕ್ತಿಯ ವಿಷಯಗಳ ಚರ್ಚೆ ನಡೆಸಬಹುದು. ಒದಗಿಬಂದ ಈ ಹೊಸವೇದಿಕೆಯ ಅವಕಾಶಗಳನ್ನು ಜನರು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆಂದರೆ ಈಗಾಗಲೇ ಕ್ಲಬ್ ಹೌಸಲ್ಲಿ ತರಗತಿಗಳು, ಪಾಠಗಳು, ಸಂಗೀತ ಗೋಷ್ಟಿಗಳು,  ದನಿಸಾಧ್ಯತೆಗಳ ವಿಶಿಷ್ಟ ಕಾರ್ಯಕ್ರಮಗಳು ಹುರುಪಿನಿಂದ ನಡೆಯುತ್ತಿವೆ. ನಿಮ್ಮಲ್ಲಿ ಮಾತಾಡುವ ಕಲೆಯಿದೆ, ವಿಷಯ ಪರಿಣಿತಿ ಇದೆ, ಅದನ್ನು ಜನರ ಮುಂದಿಡಲು ಗೊತ್ತಿದೆ ಅಂತಾದಲ್ಲಿ ನಿಮ್ಮ ಕೇಳುಗವರ್ಗಕ್ಕೆ ಕೊರತೆ ಇಲ್ಲ. ಬರಹರೂಪದಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಿಸಲಾಗದ ವಿಷಯಗಳನ್ನು ನೇರಮಾತುಗಳ ಮೂಲಕ ತೆರೆದಿಡುವ ಅವಕಾಶ ಇಲ್ಲಿದೆ.

ಇಷ್ಟು ಮುಕ್ತ ಸೌಲಭ್ಯಗಳಿರುವಾಗ ಇದರಿಂದ ಕೆಡುಕು ಇಲ್ಲದಿದೆಯೆ? ಖಂಡಿತ ಇದೆ. ಮಾತುಕತೆ ಅಂದಮೇಲೆ ಅಲ್ಲಿ ವಾದವಿವಾದಗಳಾಗುವುದು, ಕೆಸರೆರೆಚಾಟಗಳು ಸಾಮಾನ್ಯ. ಅದು ವಿಪರೀತಕ್ಕೆ ಹೋಗುವುದೂ ಇದೆ. ಇದು ಲೈವ್ ಮಾತುಕತೆಯಾದ್ದರಿಂದ ಇದರ ಆಡಿಯೊಗಳು ದಾಖಲಾಗಿ ಉಳಿಯುವುದಿಲ್ಲ. ಮಾತುಗಳಿಗೆ, ಪದಬಳಕೆಗಳಿಗೆ ಯಾವ ಫಿಲ್ಟರ್ ಇಲ್ಲ. ಇದಕ್ಕೆ ಬೇಕಾಗಬಹುದಾದ ಕಾನೂನುಗಳು ವಿಸ್ತೃತವಾಗಿ ರೂಪುಗೊಂಡಿಲ್ಲ. ಹಾಗಾಗಿಯೇ ಕೆಲ ದೇಶಗಳು ನಿಷೇಧ ಹೇರಲು ಹೊರಟಿವೆ. ಬೇರೆಲ್ಲಾ ಸಾಮಾಜಿಕ ಜಾಲತಾಣಗಳಂತೆ ಇದನ್ನು ಎಷ್ಟು ಸೃಜನಾತ್ಮಕವಾಗಿ, ಮಾಹಿತಿಪೂರ್ಣ, ಒಳ್ಳೆಯ ಕೆಲಸಗಳಿಗೆ ಬಳಸಬಹುದೋ, ಹಾಗೆಯೇ ಸಮಾಜದ್ರೋಹಿ, ದೇಶದ್ರೋಹಿ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ತಜ್ಞರ ಅನಿಸಿಕೆ.

ಕಷ್ಟಗಳು ನೂರಾಹನ್ನೊಂದು, ಬೇಕಾ ಮತ್ತೊಂದು?

ಇದೆಲ್ಲಾ ಕಾನೂನಾತ್ಮಕ ವಿಷಯಗಳಾದರೆ ಇಲ್ಲಿ ಮುಖ್ಯ ಸವಾಲು ನಮ್ಮ ವೈಯಕ್ತಿಕ ಸಮಯ ಮತ್ತು ತೊಡಗುವಿಕೆಯದ್ದು.. ಈಗಾಗಲೇ ಸೋಶಿಯಲ್ ನೆಟ್ವರ್ಕುಗಳ ವಿಪರೀತ ಬಳಕೆಯಿಂದ ಜನರ ಅಭಿರುಚಿ ಆಸಕ್ತಿಗಳು ಬದಲಾಗುತ್ತಿವೆ, ಹಲವರು ಹೆಚ್ಚಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದಾರೆ, ಎಷ್ಟೋ ಜನ ವ್ಯಸನಕ್ಕೆ ಒಳಗಾಗಿದ್ದಾರೆ.  ಜೀವನಕ್ಕೆ ಮತ್ತು ಜೀವಕ್ಕೆ ಅಪಾಯ ತಂದು ಕೊಂಡಿದ್ದಾರೆ. ಇಷ್ಟೆಲ್ಲಾ ಆದಮೇಲೂ ಮತ್ತೆ ಇಂಥದ್ದೊಂದರಲ್ಲಿ ತೊಡಗಬೇಕಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಾಗಿದೆ. ಫೇಸ್ಬುಕ್, ಟ್ವಿಟ್ಟರ್ ಮುಂತಾದ ತಾಣಗಳಿಗಿಂತ ಇದು ನಮ್ಮ ಹೆಚ್ಚಿನ ಸಮಯವನ್ನು ಕೊಲ್ಲಬಲ್ಲುದು ಎಂಬ ಅಭಿಪ್ರಾಯ ಈಗಾಗಲೇ ಬರುತ್ತದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ನಮಗೆ ಬೇಕಾದಷ್ಟೆ ಸಮಯವನ್ನು ಬಳಸಿಕೊಂಡು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಬರಹ ಮುಂತಾದ ರೂಪಗಳಲ್ಲಿ ತಿಳಿದುಕೊಳ್ಳಲು ಮತ್ತು ಸಂವಹನಗಳನ್ನು ಮಾಡಲು ಸೌಲಭ್ಯಗಳಿರುವಾಗ ಹೀಗೆ ಮಾತುಗಳನ್ನು ಕೇಳುತ್ತಾ ಕೂರಲು, ಹರಟೆ ಹೊಡೆಯಲು ಸಮಯ ವ್ಯರ್ಥ ಮಾಡುವುದು ಸಮಂಜಸವೇ ಎಂದು ಹಲವರು ಕೇಳುತ್ತಿದ್ದಾರೆ. ಎಚ್ಚೆತ್ತುಕೊಂಡ ಹಲವರು ಕ್ಲಬ್ ಹೌಸ್ ತೊರೆದುಬಂದಿದ್ದಾರೆ.  ಕ್ಲಬ್ಬು ಪಬ್ಬಲ್ಲಿ ಕಾಲ ಕಳೆಯುವುದಕ್ಕಿಂತ ಈ ಕ್ಲಬ್ ಹೌಸಲ್ಲಿ ಕಾಲಕಳೆಯುವುದು ಎಷ್ಟೋ ಚೆನ್ನ ಎಂಬುದೂ ಹಲವರ ಸಮರ್ಥನೆ. ಜಗತ್ತು ಈಗ ಆಯ್ಕೆಗಳ ಆಗರ. ವೇದಿಕೆಗಳ ಸಾಗರ. ಇದರಲ್ಲಿ ನಮಗೆ ಯಾವುದು ಎಷ್ಟು ಯಾಕೆ ಬೇಕು ಎಂಬ ನಿರ್ಧಾರ ನಮಗಿರಬೇಕಷ್ಟೆ. 

ನಮ್ಮ ಡಿಜಿಟಲ್ ಜಾಡು ಹಲವರ ಕೈಯಲ್ಲಿ:

ಈಗಾಗಲೇ ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಹಲವೆಡೆ ಹಲವು ರೀತಿಯಲ್ಲಿ ಅನಿವಾರ್ಯವಾಗಿ ನಾವು ಬಿಟ್ಟುಕೊಡುವ ಸಂದರ್ಭವಿರುವಾಗ ಈ ಆಡಿಯೋ ತಾಣವು ನಮ್ಮ ದನಿಯ ಮಾದರಿಯನ್ನೂ ಸಂಗ್ರಹಿಸಿ ಬಳಸಿಕೊಳ್ಳುವ ಆತಂಕ‌ ಇಲ್ಲದಿಲ್ಲ. ಕೋಟ್ಯಂತರ ಜನರ ಈ ಆಡಿಯೋ ಮಾದರಿಗಳು ಒಂದು ದೊಡ್ಡ ಡೇಟಾ ಸಂಶ್ಲೇಷಣೆಗೆ ಭಂಡಾರವಾಗಲಿದೆಯಾ ಎಂಬ ಪ್ರಶ್ನೆಯನ್ನೂ ತಜ್ಞರು ಅಲ್ಲಗಳೆಯುತ್ತಿಲ್ಲ. ಕ್ಲಬ್ ಹೌಸಿನ ಮಾತುಕತೆಗಳನ್ನು ರೆಕಾರ್ಡ್ ಮಾಡುವಂತಿಲ್ಲ, ಪಠ್ಯರೂಪದಲ್ಲಿ ತರುವಂತಿಲ್ಲ, ಮರುಪ್ರಸಾರ ಅಥವಾ ಹಂಚುವಿಕೆಗೆ ಅವಕಾಶವಿಲ್ಲ ಎಂಬ ಶರತ್ತುಗಳಿವೆ. ಆದರೆ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಅದನ್ನು ಮಾರ್ಕೆಟ್ ಮಾಡಿಕೊಳ್ಳುವ ಅವಕಾಶಗಳಂತೂ ಇದೆ. ಇಷ್ಟರಲ್ಲೇ ಪಾವತಿಸಿ ಬಳಸುವಂತಹ ಹೆಚ್ಚು ಸೌಲಭ್ಯಗಳ ಚಾಟ್ ರೂಂಗಳನ್ನೂ ಒದಗಿಸುವ ಯೋಜನೆಯನ್ನೂ ಕ್ಲಬ್ ಹೌಸ್ ಮಾಡಿರುವುದಾಗಿ ಮಾಹಿತಿಗಳಿವೆ.  ಒಟ್ಟಾರೆ ಕ್ಲಬ್ ಹೌಸಿನ ಪಾರ್ಟಿಗಳು ಜೋರಾಗಿ ಶುರುವಾಗಿರುವುದಂತೂ ಹೌದಾದರೂ ಈ ಕ್ಲಬ್ ಹೌಸ್ ಮುಂದಿನ ದಿನಗಳಲ್ಲೂ ಇದೇ ಆಕರ್ಷಣೆ ಉಳಿಸಕೊಂಡು ಬೆಳೆಯಲಿದೆಯಾ ಎಂದು ಕಾದುನೋಡಬೇಕಿದೆ.  

-ವಿಕಾಸ್ ಹೆಗಡೆ

೨೭ಜೂನ್ ೨೦೨೧ ರ 'ವಿಜಯ ಕರ್ನಾಟಕ ' ಪತ್ರಿಕೆಯ ಸಾಪ್ತಾಹಿಕ‌ಕ್ಕೆ ಬರೆದಿದ್ದು.