ಶನಿವಾರ, ಆಗಸ್ಟ್ 6, 2022

'ರಾಕೆಟ್ರಿ - ದ ನಂಬಿ ಎಫೆಕ್ಟ್'

ದೇಶ ಹೆಮ್ಮೆಪಡುವಂತಹ ವಿಜ್ಞಾನಿಯನ್ನೂ ಕ್ಷುಲ್ಲಕ ರಾಜಕೀಯಕ್ಕಾಗಿ, ಯಾವುದೋ ಕಾಣದ ಕೈಗಳ ಪಿತೂರಿಗಾಗಿ ಬಲಿಮಾಡಿ ಅವರ ಜೀವನವನ್ನೇ ಹಾಳುಮಾಡಿದ್ದಲ್ಲದೇ ದೇಶಕ್ಕೂ ದೊಡ್ಡ ನಷ್ಟವಾಗುವಂತೆ ಮಾಡುವ ದುಃಸ್ಥಿತಿಗಿಳಿದಿದ್ದು ನಮ್ಮ ಸಮಾಜದ‌, ಆಡಳಿತ ವ್ಯವಸ್ಥೆಯ ಅಧೋಗತಿ. ಬರೀ ನೆಗೆಟಿವ್ ಸುದ್ದಿಗಳನ್ನೇ ಮೆರೆದಾಡಿಸುವ ಮಾಧ್ಯಮಗಳ ಈ ಕಾಲದಲ್ಲಿ‌ ಈ ಸಿನೆಮಾ ಕಾರಣದಿಂದಾದರೂ ಅವರ ಸಾಧನೆ ಬಗ್ಗೆ ಒಂದಿಷ್ಟು ಜನ ತಿಳಿದುಕೊಂಡು ಹೆಮ್ಮೆಪಡುವಂತೆ ಆಯಿತಲ್ಲ‌, ಅದೇ ಈ ಸಿನೆಮಾದ ಸಾರ್ಥಕತೆ. "ನಂಬಿ ನಾರಾಯಣನ್" ಅಂತ ಗೂಗಲ್ಲಲ್ಲಿ ಹುಡುಕಿದರೆ ಬರುವ ಹೆಚ್ಚಿನ ಸುದ್ದಿಕೊಂಡಿಗಳು ಬರೀ ಅವರ ಸ್ಪೈ ಕೇಸಿಗೆ ಸಂಬಂಧಿಸಿದ್ದು. ಇಸ್ರೋದ ಉನ್ನತ ವಿಜ್ಞಾನಿಯಾಗಿ ರಾಕೆಟ್ ಎಂಜಿನ್ನುಗಳ ತಯಾರಿಕೆಯಲ್ಲಿ ಭಾರತವನ್ನು ಇನ್ನೂ ಸಶಕ್ತಗೊಳಿಸಿದ ವ್ಯಕ್ತಿಯನ್ನು ಸುಳ್ಳು‌ ದೇಶದ್ರೋಹದ ಕೇಸಿನಲ್ಲಿ ಸಿಲುಕಿಸಿ ಜೈಲು ಸೇರಿಸಿದ್ದಲ್ಲದೆ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದು ಅಕ್ಷಮ್ಯ. ನಾಸಾದ ಅವಕಾಶವನ್ನೇ ತಿರಸ್ಕರಿಸಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಕೆಲಸ ಮಾಡಿದ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ್ದಾರೆಂಬ ಆರೋಪ ಹೊರಿಸಿ ಕೆಳಗೆಳೆದುಹಾಕಿದ್ದು ದೊಡ್ಡ ದುರಂತ. 


 
'ರಾಕೆಟ್ರಿ - ದ ನಂಬಿ ಎಫೆಕ್ಟ್' : ಈ ಸಿನೆಮಾ ಇವೆಲ್ಲವನ್ನು ಅನಾವರಣಗೊಳಿಸಿಟ್ಟಿದೆ‌. ಸಿನೆಮಾ ಕೊನೆಯಲ್ಲಿ ಉಸಿರುಭಾರವಾಗುವ ಜೊತೆಗೆ ನಂಬಿನಾರಾಯಣರ ಕಣ್ಣಿನಲ್ಲಿ ಈಗಲೂ ಕಾಣುವ ಆ ನೋವು ನಮ್ಮದೂ ಆಗಿಬಿಡುತ್ತದೆ. ಅಗತ್ಯದ ಒಂದಿಷ್ಟು ಸನ್ನಿವೇಶಗಳಲ್ಲಿ ತಕ್ಕ ಹಿನ್ನೆಲೆ ಶಬ್ದ/ಸಂಗೀತ ವರ್ಕೌಟ್ ಮಾಡಿದ್ದರೆ ಸಿನೆಮಾ ಇನ್ನೂ ತಾಗಬಹುದಿತ್ತು ಅನಿಸಿತು. ಇರಲಿ, ಅದರಲ್ಲಿನ ವಿಷಯದ ಗಂಭೀರತೆಯ ಮುಂದೆ ಅದೇನು ದೊಡ್ಡದಲ್ಲ.  ಸಿನೆಮಾ ಅಮೇಜಾನ್ ಪ್ರೈಮ್ ನಲ್ಲಿ ಇದೆ, ಕನ್ನಡದ ಆಡಿಯೊ ಫೀಡ್ ಕೂಡ ಇದೆ.

ನಂಬಿನಾರಾಯಣರೆ, ಈ ದೇಶವನ್ನು ಕ್ಷಮಿಸಿಬಿಡಿ.

ಶನಿವಾರ, ಏಪ್ರಿಲ್ 23, 2022

'ಪದ' ತಂತ್ರಾಂಶ - ಹೊಸ ಆವೃತ್ತಿ ಪರಿಚಯ

ನಾನು ಮೊದಲಿಂದ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬಳಸುತ್ತಿದ್ದುದು 'ಬರಹ' ತಂತ್ರಾಂಶ. ಹಲವು ವರ್‍ಷಗಳ ಕಾಲ ಯಾವ ತೊಂದರೆಯಿಲ್ಲದೆ 'ಬರಹ' ಬಳಸಿದ್ದೆ. ಮೊದಲು ಉಚಿತವಾಗಿದ್ದ 'ಬರಹ'ವು ಆನಂತರ ಪಾವತಿ ಮಾಡಿ ಬಳಸಬೇಕಾಯ್ತು. ನಾನು ಅದರ ಲೈಸೆನ್ಸ್ ಕೊಂಡುಕೊಂಡು ಬಳಸುತ್ತಿದ್ದೆ. ಆ ಲೈಸೆನ್ಸ್ ಒಂದು ಬಾರಿಗೆ ಒಂದು ಕಂಪ್ಯೂಟರಲ್ಲಿ ಮಾತ್ರ ಬಳಸಲು ಅವಕಾಶವಿದ್ದುದರಿಂದ ನನ್ನ ವೈಯಕ್ತಿಕ ಗಣಕದಲ್ಲಿ  ಮಾತ್ರ ಅದನ್ನು ಬಳಸಲು ಸಾಧ್ಯವಾಗುತ್ತಿತ್ತು.  ಈ ನಡುವೆ 'ಪದ' ತಂತ್ರಾಂಶವು ಹಲವು ಒಳ್ಳೊಳ್ಳೆಯ ಸೌಲಭ್ಯಗಳನ್ನು ಹೊಂದಿ ಬಿಡುಗಡೆಯಾಗಿ ತ್ತು. ಮುಖ್ಯವಾಗಿ ಅದರಲ್ಲಿ ಪೋರ್‍ಟೆಬಲ್ ಆವೃತ್ತಿ ಇದ್ದುದರಿಂದ ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡು ಎಲ್ಲಿ ಬೇಕಾದರಲ್ಲಿ ಬಳಸುವ ಮತ್ತು ಡೌನ್ಲೋಡ್ ಮಾಡಿಟ್ಟುಕೊಂಡರೆ ಇನ್ ಸ್ಟಾಲೇಶನ್ ಮಾಡುವ ಅಗತ್ಯವಿಲ್ಲದೆ ಅಡ್ಮಿನ್ ರೈಟ್ಸ್ ಇಲ್ಲದೆಡೆಯೂ ಬಳಸಬಹುದಾಗಿದ್ದರಿಂದ ಅನುಕೂಲಕರವಾಗಿತ್ತು.  ಹಾಗಾಗಿ 'ಪದ' ತಂತ್ರಾಂಶವನ್ನು ಬಹುತೇಕ ಬಳಸುತ್ತಿದ್ದೇನೆ.  ಈ ನಡುವೆ ಪದ ತಂತ್ರಾಂಶದ ಹೊಸ ಆವೃತ್ತಿ ಜನವರಿ ೨೦೨೨ರಲ್ಲಿ ಬಿಡುಗಡೆಯಾಯಿತು.  ಆಗ ಬರೆದ ಒಂದು ಚಿಕ್ಕ ಪರಿಚಯ ಈ ಕೆಳಗಿನಂತಿದೆ:


ಹಲವಾರು ಹೊಸ ಸೌಲಭ್ಯಗಳೊಂದಿಗೆ 'ಪದ' ತಂತ್ರಾಂಶದ ಹೊಸ ಆವೃತ್ತಿ ಬಿಡುಗಡೆಯಾಗಿದೆ. ಕಂಪ್ಯೂಟರಲ್ಲಿ ನೇರ ಕನ್ನಡ ಟೈಪಿಂಗ್ ಮತ್ತು ವರ್ಡ್ ಪ್ರೊಸೆಸಿಂಗ್ ಮಾಡಲು ಬಳಸಲಾಗುವ ಈ ತಂತ್ರಾಂಶದ ಈ ಆವೃತ್ತಿಯಲ್ಲಿ ಅಳವಡಿಸಲಾಗಿರುವ ಕೆಲ ಹೊಸ ಸೌಲಭ್ಯಗಳೆಂದರೆ,

೧. ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇ ಔಟ್

೨. IMEಯಲ್ಲೇ ಯುನಿಕೋಡ್ ಮತ್ತು ANSI ಟೈಪಿಂಗ್ ಆಯ್ಕೆ (ಗ್ರಾಫಿಕ್ ಡಿಸೈನಿಂಗ್, ಡಿಟಿಪಿ ಮುಂತಾದೆಡೆ ಇನ್ನೂ ಹಳೆಯ ಫಾಂಟುಗಳೇ ಬೇಕೆಂಬಲ್ಲಿ)

೩. ನೇರವಾಗಿ IMEಯಲ್ಲೇ ಆನ್ಸಿ ಟು ಯುನಿಕೋಡ್ ಪಠ್ಯಪರಿವರ್ತನೆ.

೪. ಆನ್ಸಿ (ಉದಾ: ಹಳೆ ನುಡಿಯಲ್ಲಿ ಬರೆದ) ಫೈಲುಗಳನ್ನು ಒಟ್ಟಿಗೇ ಯುನಿಕೋಡ್ ಗೆ ಪರಿವರ್ತಿಸುವುದು.

೫. ಟೈಪಿಂಗ್ ಕಲಿಕೆಗೆ ಟ್ಯೂಟರ್ 

ಮತ್ತು ಇನ್ನೂ ಹಲವು ಸುಧಾರಣೆಗಳು ಮತ್ತು ಬಗ್ ಫಿಕ್ಸ್

ಪೋರ್ಟೆಬಲ್ ಆವೃತ್ತಿಯ ವಿಶೇಷವೆಂದರೆ ಇದನ್ನು ಕಂಪ್ಯೂಟರಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಡೌನ್ಲೋಡ್ ಮಾಡಿಟ್ಟುಕೊಂಡರೆ ಸಾಕು. ಅದರಲ್ಲೇ ತೆರೆದು ಬಳಸಬಹುದು. ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡರೆ ಯಾವ ಕಂಪ್ಯೂಟರಲ್ಲಾದರೂ  ನೇರವಾಗಿ ಬಳಸಿಕೊಳ್ಳಬಹುದು.  ಹಾಗಂತ ಇನ್ ಸ್ಟಾಲ್ ಮಾಡಿಕೊಳ್ಳುವ ಆವೃತ್ತಿ ಸಹ ಬೇಕಾದರೂ ಇದೆ. ವಿಂಡೋಸ್ & ಲೈನಕ್ಸ್ ಎರಡಕ್ಕೂ ಇದೆ.

ನುಡಿ (ಕೆಪಿ ರಾವ್), ಪೊನೆಟಿಕ್, ಟ್ರಾನ್ಸ್ಲಿಟೆರೇಶನ್ ಕೀಬೋರ್ಡ್ ಲೇ ಔಟುಗಳಿವೆ, ನೇರ ಪಿಡಿಎಫ್ ಕನ್ವರ್ಶನ್ ಮಾಡಬಹುದು, ವಿವಿಧ ಫಾಂಟುಗಳನ್ನು ಹಾಕಿಕೊಳ್ಳಬಹುದು, ಒಟ್ಟಾರೆ ಬಹುತೇಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ಸೌಲಭ್ಯಗಳು ಈ ತಂತ್ರಾಂಶದಲ್ಲಿ ಇವೆ. ಯಾವ ತೊಂದರೆಯಿಲ್ಲದೆ ಎಲ್ಲೆಡೆ ಬಳಸಬಹುದು  ಎಂದು ಹಲವು ವರ್ಷಗಳಿಂದ ಇದರ ಬಳಕೆದಾರನಾಗಿದ್ದು ಹೇಳುತ್ತೇನೆ. ಈ ತಂತ್ರಾಂಶದ ಅಭಿವೃದ್ಧಿಗಾರರಾದ Lohit DS ಅವರಿಗೆ ಧನ್ಯವಾದಗಳು. ಪದ ಡೌನ್ಲೋಡ್ ಲಿಂಕ್ ಇಲ್ಲಿದೆ:  https://www.pada.pro/

******

ಯೂನಿಕೋಡ್ ನಿಯಮದ ಪ್ರಕಾರ ವ್ಯಂಜನಕ್ಕೆ 'ರ'ಕಾರ ಸೇರಿದಾಗ ಅರ್ಕಾವೊತ್ತು (‌‌೯) ಅನಿವಾರ್ಯ. ಅರ್ಕಾವೊತ್ತು ಇಲ್ಲದಂತೆ ಬರೆಯಲು zero width joiner ಮೂಲಕ ಅವಕಾಶ ಇದೆ. ಆದರೆ ಅದಕ್ಕಾಗಿ ಒಂದೊಂದು ತಂತ್ರಾಂಶದಲ್ಲಿ ಒಂದೊಂದು ರೀತಿ ಕೀ ಇರುವುದರಿಂದ ಟೈಪ್ ಮಾಡುವಾಗ ಕೊಂಚ ತೊಡಕಾಗಬಹುದು.

'ಪದ' ತಂತ್ರಾಂಶದ ಹೊಸ ಆವೃತ್ತಿಯ (5‌.x.6) IMEದಲ್ಲಿ ಆ ತೊಡಕನ್ನೂ ನೀಗಿಸಿ ನೇರವಾಗಿ ಅರ್‍ಕಾವೊತ್ತು ಇಲ್ಲದೇ ಅಥವಾ ಇಟ್ಟುಕೊಂಡು ಬರೆಯುವ ಸೌಲಭ್ಯ ಕೊಟ್ಟಿದ್ದಾರೆ. ಈಗ 'ಸೂರ್‍ಯ', 'ತೀರ್‍ಮಾನ', 'ರ್‍ಯಾಂಕ್' , 'ರ್‍ಯಾಲಿ' ಮುಂತಾದವು ನೇರವಾಗಿ ಬರೆಯಲು ಸಾಧ್ಯ. ಅರ್ಕಾವೊತ್ತು ಅನಿವಾ'ರ್‍ಯ'ವಲ್ಲ.

******

೨೦೧೨ ರಲ್ಲಿ 'ಪದ' ತಂತ್ರಾಂಶ ೪.೦ ಬಿಡುಗಡೆಯಾದಾಗ ಬರೆದಿದ್ದ ಬರಹ ಇಲ್ಲಿದೆ: 
ಪದ ತಂತ್ರಾಂಶ - Pada Software (Indic word processor & IME)

'ಗೂಗಲ್ ಕ್ರೌಡ್ ಸೋರ್‍ಸ್ ಯೋಜನೆ - ನನ್ನ ಪಾಲ್ಗೊಳ್ಳುವಿಕೆ

ಗೂಗಲ್ ಕಂಪನಿಯು ತನ್ನ ಹಲವಾರು ಬಗೆಯ ಸೇವೆಗಳನ್ನು, ಉತ್ಪನ್ನಗಳನ್ನು ಸುಧಾರಣೆ ಮಾಡುವುದಕ್ಕೆ ಮತ್ತು ಕೃತಕ ಬುದ್ಧಿಮತ್ತೆ (AI) ಬೆಳೆಸುವ ಕೆಲಸಗಳಿಗಾಗಿ ಜನರನ್ನು ತೊಡಗಿಸಿಕೊಳ್ಳುವ ಒಂದು ಯೋಜನೆ ಮಾಡಿ ಕೆಲವು ವರ್‍ಷಗಳಿಂದ ನಡೆಸುತ್ತಿದೆ. ಗೂಗಲ್ ಕ್ರೌಡ್ ಸೋರ್ಸ್ ಎಂದು ಆ ಯೋಜನೆಯ ಹೆಸರು.   ಇದು ಯಾರು ಬೇಕಾದರೂ ಸಹ ತೊಡಗಿಕೊಳ್ಳಬಹುದಾದಂತಹ ಸರಳ ಕೆಲಸ. ಗೂಗಲ್ ಕ್ರೌಡ್ ಸೋರ್ಸ್ ಕೆಲಸದಲ್ಲಿ ಕನ್ನಡಕ್ಕೆ ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ.


ಇದರಲ್ಲಿ ಭಾಷೆ ಸಂಬಂಧಿತ ಸೇವೆಗಳಿಗೆ ಆಯಾ ಭಾಷಾ ಸಮುದಾಯದ ಬಳಕೆದಾರರ ಅನುಭವ, ಸಾಮರ್ಥ್ಯ ಮತ್ತು ತಿಳುವಳಿಕೆಗಳ ಮೂಲಕ ಕೊಡುಗೆಗಳನ್ನು ಪಡೆಯುವುದಾಗಿದೆ. ಅಂದರೆ, ಸರಳವಾಗಿ ಹೇಳುವುದಾದರೆ ಗೂಗಲ್ಲಲ್ಲಿ ಕನ್ನಡ ಸಂಬಂಧಿತ ಅನುವಾದಗಳು, ಅನುವಾದದ ಮೌಲ್ಯಮಾಪನ, ಕೈಬರಹ ಗುರುತಿಸುವಿಕೆ, ಕೀಬೋರ್ಡ್, ದನಿ ಗುರುತಿಸುವಿಕೆ ಮುಂತಾದ ಉತ್ಪನ್ನಗಳ ಸುಧಾರಣೆಗೆ ನಾವು ನೇರವಾಗಿ ಕೊಡುಗೆ ನೀಡಬಹುದು. ಇದರ ಜೊತೆ 'ಚಿತ್ರ ಗುರುತಿಸುವಿಕೆ' ಮುಂತಾದ ಜೆನೆರಲ್ ಕೆಲಸಗಳೂ ಇವೆ. ಇದೆಲ್ಲವನ್ನೂ ಚಿಕ್ಕ ಚಿಕ್ಕ ಫನ್ ಗೇಮ್ಸ್ ರೀತಿಯಲ್ಲಿ, ಕ್ವಿಜ್ ರೀತಿಯಲ್ಲಿ ಈ ಆ್ಯಪ್ ಮೂಲಕ ಮಾಡುವಂತೆ ರೂಪಿಸಿದ್ದಾರೆ‌. ಒಂಥರಾ ಟೈಂಪಾಸಿಗೂ ಚೆನ್ನಾಗಿದೆ, ಮೆದುಳಿಗೂ ಕೊಂಚ ಕೆಲಸ ಕೊಡಬಹುದಾಗಿದೆ. 
ಅಕ್ಟೋಬರ್ ೨೦೨೧ ರಲ್ಲಿ ಈ ಕ್ರೌಡ್ ಸೋರ್‍ಸ್ ಯೋಜನೆಯಲ್ಲಿ 'ಸ್ಮಾರ್‍ಟ್ ಅಸಿಸ್ಟೆಂಟ್' ಎನ್ನುವ ಅಭಿಯಾನವೊಂದು ನಡೆದಿತ್ತು. ಅದರಲ್ಲಿ ಪಾಲ್ಗೊಂಡು ಗಣನೀಯ ಕೊಡುಗೆ ಸಲ್ಲಿಸಿದವರಿಗೆ ಗೂಗಲ್ ವತಿಯಿಂದ ಉಡುಗೊರೆ ಕಳಿಸಿಕೊಟ್ಟರು. ನನಗೆ ಬಂದ ಉಡುಗೊರೆ ಇದು. 

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಬಯಸಿದಲ್ಲಿ ಪ್ಲೇಸ್ಟೋರ್ ಇಂದ  'Crowd Source' Google app  ಹಾಕಿಕೊಳ್ಳಬಹುದು.  ಸೆಟ್ಟಿಂಗ್ಸಲ್ಲಿ ಕನ್ನಡ, ಇಂಗ್ಲೀಷ್ ಮುಂತಾದ ನಿಮ್ಮಿಷ್ಟದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅನಂತರ ಅದರಲ್ಲಿನ ಹಲವು ಬಗೆಯ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದು ತಂತ್ರಜ್ಞಾನ ಬಹುವೇಗವಾಗಿ  ಬೆಳೆಯುತ್ತಿರುವ ಕಾಲ. ಕನ್ನಡವೂ  ಅದರ ಜೊತೆಗೆ ಹೆಜ್ಜೆಹಾಕುವುದು ಮುಖ್ಯ.  ಇದು ಕ್ರಮೇಣ ಹಲವಾರು ಅವಕಾಶಗಳನ್ನು, ಉದ್ಯೋಗಗಳನ್ನು, ತಂತ್ರಜ್ಞಾನಗಳನ್ನು, ಸಾಧ್ಯತೆಗಳನ್ನು ಕನ್ನಡಕ್ಕೂ ತೆರೆದಿಡುವುದಕ್ಕೆ ಖಂಡಿತ ಬಹಳ ಸಹಕಾರಿಯಾಗುತ್ತದೆ. 

'ಬಯೋಮಿಮಿಕ್ರಿ ' - ಪುಸ್ತಕದ ಓದು

 ಈ ಹಿಂದೆ ಡಾ. ಕಿರಣ್ ಸೂರ್ಯ ಅವರ 'ಸೆರೆಂಡಿಪಿಟಿ' ಎಂಬ ವಿಶಿಷ್ಟ ಪುಸ್ತಕ ಓದಿದ್ದೆ. ಅವರ 'ಬಯೋಮಿಮಿಕ್ರಿ' ಎಂಬ ಈ ಪುಸ್ತಕವನ್ನು ಕೊಂಡಾಗ ಅದೇ ಕುತೂಹಲವಿತ್ತು. ಒಂದು ನಿರೀಕ್ಷೆ ಇತ್ತು. ಅದು ಸುಳ್ಳಾಗಲಿಲ್ಲ.


ಪ್ರಕಾಶಕರು: Techfiz Inc

ಪುಟಗಳು: ೨೦೧

ಬೆಲೆ: ೪೯ ರೂ.






ಜಗತ್ತಲ್ಲಿ ಹಲವಾರು ಹೊಸಹೊಸ ಆವಿಷ್ಕಾರಗಳು ಹಿಂದಿನಕಾಲದಿಂದಲೂ ಆಗುತ್ತಿವೆ, ಆಗುತ್ತಿರುತ್ತವೆ. ಮಾನವನ ದೈನಂದಿನ ಜೀವನದಿಂದ ಹಿಡಿದು ವಿವಿಧೋದ್ದೇಶಗಳಿಗೆ ಸಹಾಯವಾಗಬಲ್ಲಂತಹ ಉಪಕರಣಗಳನ್ನು, ವಸ್ತುಗಳನ್ನು, ಯಂತ್ರಗಳನ್ನು ವಿಜ್ಷಾನಿಗಳು, ಸಂಶೋಧಕರೆನೆಸಿಕೊಂಡವರು ಬೇರೆಬೇರೆ ದೇಶಗಳಲ್ಲಿ ಕಂಡುಹಿಡಿದು ತಯಾರಿಸಿದ್ದಾರೆ. ಅದರಲ್ಲಿ ಕೆಲವೊಂದು ಆಕಸ್ಮಿಕಗಳಾದರೆ, ಹಲವು ಹತ್ತಾರು ವರ್ಷಗಳ ಹಲವಾರು ಜನರ ಶ್ರಮದ, ಅಧ್ಯಯನದ, ಸಂಶೋಧನೆಯ ಫಲಗಳು.  ಆದರೆ ಒಂದಿಷ್ಟು ಅಗತ್ಯಗಳಿಗೆ ಹೊಸದೇನನ್ನೋ ಕಂಡುಹಿಡಿಯುವಾಗ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಾಗ, ಇರುವುದನ್ನು ಇನ್ನೂಸುಧಾರಣೆ ಮಾಡುವಾಗ ಪ್ರಕೃತಿಯನ್ನೇ ಅದಕ್ಕೆ ಗುರುವಾಗಿಸಿಕೊಂಡು ಈ ಸೃಷ್ಟಿಯನ್ನೇ ಅನುಕರಿಸಿ ತಮ್ಮ ಗುರಿಯನ್ನು ಸಾಧಿಸಿರುವುದು, ತಕ್ಕ ಫಲಗಳನ್ನು ಪಡೆದುಕೊಂಡಿರುವುದಕ್ಕೆ ಅನೇಕ ನಿದರ್ಶನಗಳಿವೆ. ಇಂತಹ ಒಂದಿಷ್ಟು ಕುತೂಹಲಕಾರಿ ನಿದರ್ಶನಗಳ ಕಥಾನಕವೇ 'ಬಯೋಮಿಮಿಕ್ರಿ'.  ಹೇಗೆ ಸಂಶೋಧಕರು, ವಿಜ್ಞಾನಿಗಳು ಅಥವಾ ಒಟ್ಟಾರೆ ಮಾನವನು ಪ್ರಕೃತಿಯಲ್ಲಿ ಬೇರೆ ಬೇರೆ ಪರಿಸರದಲ್ಲಿ ವಿಕಾಸಗೊಂಡು ಅಲ್ಲಿನ ವಾತಾವರಣಕ್ಕೆ ತಕ್ಕುದಾದ ಬದಲಾವಣೆಗಳಿಗೊಳಲ್ಪಟ್ಟ ಜೀವಿಗಳನ್ನು, ಅವುಗಳ, ದೇಹರಚನೆಗಳನ್ನು, ಗುಣಲಕ್ಷಣಗಳನ್ನು ಮಿಮಿಕ್ರಿ ಮಾಡಿ ತನಗೆ ಬೇಕಾದ್ದನ್ನು ಕೃತಕವಾಗಿ ಪಡೆದುಕೊಂಡ ಮತ್ತು ತಯಾರಿಸಿಕೊಂಡ ಎಂಬುದನ್ನೇ ಬಯೊಮಿಮಿಕ್ರಿಗಳು ಎನ್ನಲಾಗಿದೆ.

ಹಕ್ಕಿಗಳಂತೆ ಹಾರಬೇಕೆಂದು ಹೊರಟ ಮನುಷ್ಯನ ಮಹದಾಸೆ ವಿಮಾನದಂತಹ ಯಂತ್ರಕ್ಕೆ ಕಾರಣವಾಗಿದ್ದು,  ಜಪಾನಲ್ಲಿ ಬುಲೆಟ್ ಟ್ರೇನಿನ ವಿಪರೀತ ಸದ್ದನ್ನು ಕಡಿಮೆಗೊಳಿಸಲು ಮಿಂಚುಳ್ಳಿ, ಗೂಬೆ, ಪೆಂಗ್ವಿನ ಹಕ್ಕಿಗಳ ದೇಹರಚನೆಗಳನ್ನು ಬಳಸಿಕೊಂಡದ್ದು, ಕಟ್ಟಡಗಳ ತಾಪಮಾನ ನಿರ್ವಹಣೆಗೆ ಗೆದ್ದಲಿನ ಹುತ್ತದ ರಚನೆಯನ್ನು ಮಾದರಿಯಾಗಿರಿಸಿಕೊಂಡು ಯಶಸ್ಸು ಸಾಧಿಸಿದ್ದು, ಕಮಲದ ಎಲೆಗಳು, ಶಾರ್ಕ್ ಮೀನಿನ ಮೇಲ್ಮೈ, ಸಮುದ್ರದ ಮೃದ್ವಂಗಿಗಳು, ಕೀಟಗಳನ್ನು ತಿನ್ನುವ ಗಿಡ, ತಿಮಿಂಗಿಲದ ರೆಕ್ಕೆಯ ರಚನೆ ಎಲ್ಲವೂ ಇಲ್ಲಿ ಹೊಸ ಆವಿಷ್ಕಾರಗಳಿಗೆ ಮಾರ್ಗದರ್ಶಿಯಾದವು. ಆರೋಗ್ಯ ಕ್ಷೇತ್ರದ ಶಸ್ತ್ರಚಿಕಿತ್ಸೆಗಳಂತಹ ಸೂಕ್ಷ್ಮತೆಗಳಿಂದ ಹಿಡಿದು ವೆಲ್ ಕ್ರೋದಂತಹ ದಿನನಿತ್ಯದ ಬಳಕೆಯ ವಸ್ತುಗಳ ಕಂಡುಹಿಡಿಯುವಿಕೆಯನ್ನು ಸಾಧ್ಯವಾಗಿಸಿದ್ದು ಈ ಪ್ರಕೃತಿಯ ಮಿಮಿಕ್ರಿಗಳ ಮೂಲಕವೇ! ಇಲ್ಲಿ ಸೊಳ್ಳೆ, ಬ್ಯಾಕ್ಟೀರಿಯಾಗಳಂತಹ ಜೀವಿಗಳೂ ಕೂಡ ನಮ್ಮ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಕಾರಣವಾದವು ಎಂಬುದನ್ನು ಓದಿದರೆ ಬಹಳ ಆಶ್ಚರ್ಯವಾಗುತ್ತದೆ.  ಕಡಿಮೆ ಸಂಖ್ಯೆಯಲ್ಲಿ ಅತಿಹೆಚ್ಚು ವಿಸ್ತೀರ್ಣದ ಭಾರವನ್ನು ಹೊರಬಲ್ಲಂತಹ ಲೋಹದ ಮರಗಳ ಆವಿಷ್ಕಾರವಂತೂ ಸಿವಿಲ್, ಸ್ಟಕ್ಚರಲ್ ಎಂಜಿನಿಯರಿಂಗಿನ ದೊಡ್ಡ ಸಾಧನೆ.  ಅದರಲ್ಲಿ ಅದೆಷ್ಟೇ ಗಣಿತ, ಭೌತಶಾಸ್ತ್ರಗಳನ್ನು ಬಳಸಿಕೊಂಡರೂ ಅದಕ್ಕೆಲ್ಲಾ ಮೂಲ ಪ್ರೇರಣೆ ಮತ್ತು ಮಾದರಿ ಪ್ರಕೃತಿಯೇ ಎಂಬುದು ನಿಜಕ್ಕೂ ಬೆರಗು ಮೂಡಿಸುತ್ತದೆ.

ಹಲವು ಅಧ್ಯಾಯಗಳಲ್ಲಿ ಅವಶ್ಯಕವಿರುವ ವಿಜ್ಞಾನ ವಿವರಣೆಗಳನ್ನು ಸರಳಗೊಳಿಸಿ ವಿವರಿಸಲು ಪ್ರಯತ್ನಿಸಿದ್ದಾರೆ. ಹಾಗಿದ್ದರೂ ವಿಜ್ಞಾನೇತರ ಓದುಗರಿಗೆ ಕೊಂಚ ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಿದರೆ ಆ ಭಾಗಗಳನ್ನು ಮೇಲ್ಮೇಲೆ ಓದಿಕೊಂಡರೂ ಒಟ್ಟಾರೆ ವಿಷಯ ಅರ್ಥಮಾಡಿಕೊಳ್ಳಲು ತೊಂದರೆಯೇನಿಲ್ಲ. ಈ ಇ-ಪುಸ್ತಕದ ವಿಶೇಷವೆಂದರೆ ವಿಷಯಗಳ ವಿವರಣೆಗಳ ನಡುವೆ ಮತ್ತು ಅಧ್ಯಾಯದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಯು-ಟ್ಯೂಬ್ ಲಿಂಕುಗಳನ್ನು ಕೊಡಲಾಗಿದ್ದು ಅದರ ಮೂಲಕ ನೇರವಾಗಿ ಆ ವಿಷಯಕ್ಕೆ ಸಂಬಂಧಿಸಿದ ವಿವರ ಮಾಹಿತಿಗಳ ವೀಡಿಯೋಗಳನ್ನು ನೋಡಬಹುದು. ಹೆಚ್ಚಿನ ಆಸಕ್ತಿಯಿದ್ದಲ್ಲಿ, ಕುತೂಹಲವಿದ್ದಲ್ಲಿ ವಿವರಗಳನ್ನು ವೀಡಿಯೋಗಳಲ್ಲಿ ವಿಸ್ತಾರವಾಗಿ ಪಡೆದುಕೊಳ್ಳಬಹುದು.

ಮನುಷ್ಯ ಪ್ರಕೃತಿಯಿಂದ ಎಷ್ಟೇ ದೂರವಾಗುತ್ತಿದ್ದಾನೆ ಅಂದುಕೊಂಡರೂ ಅವನ ಬಹಳಷ್ಟು ಆವಿಷ್ಕಾರಗಳಿಗೆ, ಹುಡುಕಾಟಗಳಿಗೆ, ಸಮಸ್ಯೆಗಳಿಗೆ ಪ್ರಕೃತಿಯೇ ಆಕರ, ಪ್ರಕೃತಿಯೇ ಪರಿಹಾರ. ಪ್ರಕೃತಿಗೆ ಹತ್ತಿರವಿದ್ದಷ್ಟೂ ಅವನ ಬದುಕು ಸುಂದರ ಎಂದು ಕೂಡ ಈ ಬಯೋಮಿಮಿಕ್ರಿ ಮೂಲಕ ವಿಶ್ಲೇಷಿಸಬಹುದು.  ಕನ್ನಡದಲ್ಲಿ ಬಂದಂತಹ ಅತ್ಯಂತ ವಿಶಿಷ್ಟ ಪುಸ್ತಕ ಇದು ಎಂದು ಹೇಳುತ್ತೇನೆ. ಈತರಹದ ಬೌದ್ಧಿಕ ಮಟ್ಟದ ಕೃತಿಗಳು ಕನ್ನಡದಲ್ಲಿ ಹೆಚ್ಚುತ್ತಲೇ ಹೋಗಬೇಕು.

'ಋತುಮಾನ' ಆಪ್, 'ಮೈಲ್ಯಾಂಗ್ಯ್', 'ಗೂಗಲ್ ಬುಕ್ಸ್' ತಾಣಗಳಲ್ಲಿ ಇ-ಪುಸ್ತಕದ ರೂಪದಲ್ಲಿ ದೊರಕುತ್ತದೆ. ಲೇಖಕರ ಹಿಂದಿನ ಪುಸ್ತಕ 'ಸೆರೆಂಡಿಪಿಟಿ' ಮತ್ತು ಈ 'ಬಯೋಮಿಮಿಕ್ರಿ'ಗಳನ್ನು ಓದಿದಮೇಲೆ  ಈಗ ಅವರ ಮೊದಲ ಪುಸ್ತಕವಾದ 'ನಿರಾಮಯ' ಓದಬೇಕೆಂಬ ಕುತೂಹಲ ಬಂದಿದೆ. ಓದಬೇಕು.


ಸೋಮವಾರ, ಮಾರ್ಚ್ 14, 2022

'ಅಗಣಿತ ಅಲೆಮಾರಿ' - ಪುಸ್ತಕದ ಓದು

'ಅಗಣಿತ ಅಲೆಮಾರಿ'
ಲೇಖಕರು: ರವಿ ಹಂಜ್ (Ravi Hanj)
ಪ್ರಕಾಶನ: ಸಂವಹನ ಮೈಸೂರು
ಇ ಪುಸ್ತಕ: ಋತುಮಾನ ಆಪ್


ಈ ಪುಸ್ತಕ ಓದಲು ಶುರುಮಾಡುತ್ತಿದ್ದಂತೆ ಇದೊಂದು ಐತಿಹಾಸಿಕ ವಿಷಯ ವಸ್ತುವುಳ್ಳ ಕಾದಂಬರಿ ಎನಿಸಿತು. ಅದರಲ್ಲೂ ಕನ್ನಡದಲ್ಲಿ ಅಷ್ಟಾಗಿ ಯಾರೂ ಬರೆಯಲು ಹೋಗದ ಚೈನಾದ ಬಗೆಗಿನ, ಚೈನಾದ ಇತಿಹಾಸದ, ಮಾವೋ ಕಾಲದ ಕ್ರಾಂತಿಯ ಇತಿಹಾಸ ಕಾಲದ ಕಥನ! ಅನುಭವ ಕಥನದಂತೆ ಶುರುವಾಗುವ ಇದು ಅನಂತರ ಒಂದು ಪ್ರವಾಸ ಕಥನವಾಗಿ ತೆರೆದುಕೊಳ್ಳುತ್ತದೆ. ಹಾಗೇ ಮುಂದುವರೆದಂತೆ ಈ ಪ್ರವಾಸ ಕಥನವು ವಿಶ್ಲೇಷಣಾತ್ಮಕ ಅಧ್ಯಾಯಗಳಾಗಿ, ವಿಡಂಬನೆಗಳಾಗಿ, ಮಾಹಿತಿಗಳಾಗಿ ಹರವಿಕೊಳ್ಳುತ್ತದೆ. ಹಾಗಾಗಿ ಇದೊಂದು ಕಾದಂಬರಿ ಎಂದುಕೊಂಡರೆ ಕಾದಂಬರಿ, ಪ್ರವಾಸ ಕಥನ ಎಂದುಕೊಂಡರೆ ಪ್ರವಾಸ ಕಥನ. ಆದರೆ ಅಷ್ಟು ಮಾತ್ರವಲ್ಲದ ಅಧ್ಯಯನ ಕಥನ.

ಚೈನಾದಲ್ಲಿ ಮಾವೋ ಕಾಲದಲ್ಲಿ ಹುಟ್ಟಿಬೆಳೆದ 'ಲೀ' ಈ ಕಾದಂಬರಿಯ ಒಂಥರದ ನಾಯಕ. ಬಾಲ್ಯದಿಂದ ಅವನು ಕಂಡಾ ಚೈನಾದ ಸ್ಥಿತಿಪಲ್ಲಟಗಳು ಚೈನಾದ ಇತಿಹಾಸದ ಒಂದು ಮಗ್ಗುಲನ್ನು ತೆರೆದಿಡುತ್ತವೆ. ಧಾರ್ಮಿಕ ಗುರುತುಗಳನ್ನೆಲ್ಲಾ ಅಳಿಸಿಹಾಕಿ ಕಾಯಕ ಆಧಾರಿತವಾದ ದೇಶವನ್ನು ಕಟ್ಟಬೇಕೆಂಬ ಮಾವೋಕ್ರಾಂತಿಯು ಜನರ ಬದುಕನ್ನು ಮತ್ತು ದೇಶವನ್ನು ಎಲ್ಲಿಗೆ ಕೊಂಡೊಯ್ದಿತು, ಧಾರ್ಮಿಕ ಮತ್ತು ವೈಯಕ್ತಿಕ ಹಕ್ಕುಗಳು ಕ್ರಾಂತಿಗೆ ಸಿಲುಕಿ ಹೇಗೆ ನಲುಗಿದವು ಎಂಬೆಲ್ಲಾ ವಿಷಯಗಳು 'ಲೀ'ಯ ಅನುಭವದೊಂದಿಗೆ ಬೆಸೆದುಕೊಂಡಿವೆ.

ಈ ಕಥನ ಭಾರತದೊಳಕ್ಕೆ ಪ್ರವೇಶವಾಗುವುದು 'ಹ್ಯೂಯೆನ್ ತ್ಸಾಂಗ್' ಎಂಬ ಯಾತ್ರಿಯ ಕತೆಯೊಂದಿಗೆ. ಏಳನೇ ಶತಮಾನದಲ್ಲಿ ಚೈನಾದಿಂದ ಭಾರತಕ್ಕೆ ಬಂದು ಸಂಚರಿಸಿ ಬೌದ್ಧ ಧಾರ್ಮಿಕ ಗ್ರಂಥಗಳನ್ನು, ತತ್ವಗಳನ್ನು ಚೀನೀಭಾಷೆಗೆ, ಚೀನಾಕ್ಕೆ ತೆಗೆದುಕೊಂಡು ಹೋದವನು ಮಹತ್ವಾಕಾಂಕ್ಷೆಯ ಹ್ಯೂಯೆನ್ ತ್ಸಾಂಗ್. ಆದರೆ ಆತನ ಕಾರ್ಯಗಳು ಮಾವೋಕ್ರಾಂತಿಗೆ ಅಪಥ್ಯ. ಆ ಕಾಲದಲ್ಲಿ ಪ್ರಜಾಪ್ರಭುತ್ವದೊಂದಿದೇ ನೇಪಥ್ಯಕ್ಕೆ ಸರಿದು ಮಸುಕಾಗಿದ್ದ ಆತನ ಬಗ್ಗೆ 'ಲೀ' ತಿಳಿದುಕೊಳ್ಳಲು ಹೊರಡುವುದು ಅಮೆರಿಕಾದಲ್ಲಿ ತನ್ನ ಸಹೋದ್ಯೋಗಿ ಭಾರತ ಮೂಲದ ರವಿಯ ಕಾರಣದಿಂದ.

ಇದೇ ನೆಪದಲ್ಲಿ ಲೀ, ರವಿ ಮತ್ತು ಅಮೆರಿಕನ್ ಗೆಳೆಯ ಫ್ರ್ಯಾಂಕ್ ಚೈನಾ ಪ್ರವಾಸಕ್ಕೆ ಹೊರಡುತ್ತಾರೆ. ಹ್ಯೂಯೆನ್ ತ್ಸಾಂಗನು ಓಡಾಡಿದ ಜಾಗಗಳಿಗೆ ಭೇಟಿಕೊಡುತ್ತಾರೆ. ಅನಂತರ ಅವರ ಭಾರತ ಪ್ರವಾಸ ಶುರುವಾಗಿ ಒಂದಿಷ್ಟು ಸ್ಥಳಗಳ ಭೇಟಿಯು, ಓಡಾಟವು, ಒಡನಾಟವು ಭಾರತೀಯ ಸಮಾಜದ, ರಾಜಕೀಯದ, ಜನಮಾನಸದ ವಿಚಾರಗಳನ್ನು ನಿದರ್ಶನಗಳ ಸಮೇತ ನಿರೂಪಿಸುತ್ತಾ ಹೋಗುತ್ತದೆ.
ಮೊದಲ ಭಾಗದ ಅಧ್ಯಾಯಗಳು ಚೈನಾದ ಪ್ರಯಾಣದಲ್ಲಿ ಚೈನಾದ ಇತಿಹಾಸ, ರಾಜಕೀಯ, ಜನ, ಸಂಸ್ಕೃತಿ, ಸಮಾಜ, ಆಹಾರ, ಅಭ್ಯಾಸ, ಭೌಗೋಳಿಕತೆ ಮುಂತಾದವುಗಳ ಒಂದಿಷ್ಟು ಪರಿಚಯ, ಸ್ಪಷ್ಟತೆ ಮೂಡಿಸಿದರೆ ಎರಡನೇ ಭಾಗದಲ್ಲಿ ಅಧ್ಯಾಯಗಳು ಭಾರತದ ಇದೇ ವಿಷಯಗಳ ವಿವಿಧ ಮಜಲುಗಳನ್ನು ಚಿತ್ರಣವನ್ನು ಕೊಡುತ್ತವೆ.

ಈ ಪುಸ್ತಕವು ಪ್ರವಾಸದೊಂದಿಗೇ ಎರಡು ದೇಶಗಳ ಹೋಲಿಕೆಯ non- academic ಅಧ್ಯಯನದ ಜೊತೆ ಪ್ರಾಮಾಣಿಕ ಅಭಿಪ್ರಾಯವನ್ನು ಮೂಡಿಸಿರುವ ಕಥನ ಶೈಲಿ ಹೊಂದಿ ಒಂದು ವಿಶಿಷ್ಟ ಓದಿನ ಅನುಭವವನ್ನು ಕೊಡುತ್ತದೆ.