ಬುಧವಾರ, ಡಿಸೆಂಬರ್ 15, 2021

ಕನ್ನಡ ಆನ್‍ಲೈನ್ ನಿಘಂಟುಗಳು / Kannada Online Dictionaries

ಭಾನುವಾರ, ಅಕ್ಟೋಬರ್ 17, 2021

ಕಾಡುಗಳನ್ನು ಗೌರವಿಸೋಣ

ಹಿಂದಿನವಾರ ಬಿಳಿಗಿರಿರಂಗನ ಬೆಟ್ಟದ ಹುಲಿಸಂರಕ್ಷಿತ ಕಾಡಿನಲ್ಲಿ ನಮ್ಮ‌ ಸ್ವಯಂಸೇವಕ ತಂಡ (Eco Volunteers India Trust) ಅರಣ್ಯ‌ ಇಲಾಖೆಯೆ ಜೊತೆ ಸೇರಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಿದೆವು.‌ ಅದರಲ್ಲಿ ಮುಖ್ಯವಾಗಿ ಸ್ವಚ್ಛತಾ ಕಾರ್ಯಗಳು, ಜನಜಾಗೃತಿ ,‌ ಪ್ರವಾಸಿಗರಿಗೆ ತಿಳುವಳಿಕೆ, ಜನಸಂದಣಿ ನಿರ್ವಹಣೆ, ಅರಣ್ಯ ರಸ್ತೆಯ ಗಸ್ತು ಮುಂತಾದವು ಇರುತ್ತವೆ.‌ ಇಂತಹ ಚಟುವಟಿಕೆಗಳನ್ನ ಆಗಾಗ ಬೇರೆಬೇರೆ ಕಡೆ ಮಾಡುತ್ತಿರುತ್ತೇವೆ.🍀🌿

🚗🚗 ಕೋವಿಡ್ ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರ ದಂಡು ನಾಡಿನ ಎಲ್ಲೆಡೆ ಕಂಡುಬರುತ್ತಿದೆ. ವಿಶೇಷವಾಗಿ ಮಲೆನಾಡು, ಕಾಡಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿದ್ದು ಪ್ರವಾಸಿಗರ ವರ್ತನೆಗಳು ಹಲವೆಡೆ ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಗಿವೆ. ಪರಿಸರಕ್ಕೂ ಸಹ ವಿವಿಧ ರೀತಿಯಲ್ಲಿ ತೊಂದರೆ ಉಂಟುಮಾಡುತ್ತಿದೆ. ನಮ್ಮಲ್ಲಿ ಬಹಳ ಜನ ಪ್ರವಾಸವನ್ನು ಒಂದು ಹೊಣೆಗಾರಿಕೆಯಿಂದ ಮಾಡದೇ ಬರೀ ಮೋಜಿಗಾಗಿ ಮತ್ತು ಬಳಸಿಬಿಸಾಡುವ ತರಹ ಮಾಡುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದಟ್ಟಾರಣ್ಯಗಳಲ್ಲೂ ಸಿಗುವ ಪ್ಲಾಸ್ಟಿಕ್ ತ್ಯಾಜ್ಯ ದಂಗುಬಡಿಸುವಷ್ಟಿರುತ್ತದೆ ಅಂದರೆ ಇದರ ಆಳ ತಿಳಿಯಬಹುದು.

🌴🌴ರಕ್ಷಿತಾರಣ್ಯಗಳು ಬಹಳ ಸೂಕ್ಷ್ಮ ಪ್ರದೇಶಗಳಾಗಿದ್ದು ಪ್ರಾಣಿಪಕ್ಷಿಗಳ ನೆಲೆಗಳಾಗಿರುತ್ತವೆ.‌ ಹಲವೆಡೆ ರಕ್ಷಿತಾರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳು ಇದ್ದು ಅರಣ್ಯ ಇಲಾಖೆಯ ಉಸ್ತುವಾರಿ ಮತ್ತು ಕಾವಲು ಇರುತ್ತದೆ. ಬಿಳಿಗಿರಿರಂಗನ ಬೆಟ್ಟ, ಬಂಡಿಪುರ, ನಾಗರಹೊಳೆ, ಭದ್ರಾ, ಶರಾವತಿಯಂತಹ ಅಭಯಾರಣ್ಯಗಳಲ್ಲಿ ರಸ್ತೆಯ ಬದಿಯಲ್ಲೇ ಪ್ರಾಣಿಗಳು ಕಾಣಸಿಗುವುದು ಸಾಮಾನ್ಯ. 🐘 🐒🐃 🐗 ಅಲ್ಲಿ ಹಾದುಹೋಗುವ ರಸ್ತೆಗಳ‌ಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂತ‌ಹ ರಕ್ಷಿತ ಅರಣ್ಯಗಳಲ್ಲಿ, ಇನ್ನಿತರ ಕಾಡಿನ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಒಂದಿಷ್ಟು ಹೊಣೆಗಾರಿಕೆ ಅರಿತಿರುವುದು ಮತ್ತು ಅದರಂತೆ ನಡೆದುಕೊಳ್ಳುವುದು ಮುಖ್ಯ. ಮೀರಿದಲ್ಲಿ ದಂಡ/ಶಿಕ್ಷೆ‌ಯೂ ಆಗಬಹುದು.

❌ ವಾಹನಗಳನ್ನು ನಿಲ್ಲಿಸಬಾರದು. (ರಸ್ತೆಗೆ ಅಡ್ಡಲಾಗಿ ಪ್ರಾಣಿಗಳಿದ್ದಲ್ಲಿ ದೂರದಲ್ಲಿ ವಾಹನ ನಿಲ್ಲಿಸಿ ಅವಾಗಿಯೇ ಹೋಗುವವರೆಗೆ ಸುಮ್ಮನೇ ಕಾಯಬೇಕು).
❌ ವೇಗವಾಗಿ ವಾಹನ ಚಾಲನೆ ಮಾಡಬಾರದು.
❌ ಹಾರ್ನ್ ಮಾಡಬಾರದು. 
❌ ಜೋರಾದ ಸಂಗೀತ, ಕೂಗಾಟ ಕೇಕೆ ಇರಬಾರದು.
❌ ವಾಹನದಿಂದ ಕೆಳಗಿಳಿಯುವುದು, ಕಾಡಿನೊಳಗೆ ಹೋಗುವುದು ನಿಷಿದ್ಧ.
❌ ಫೋಟೊಗ್ರಫಿ, ವೀಡಿಯೊಗ್ರಫಿ ಮಾಡುವಂತಿಲ್ಲ. 
❌ ಪ್ರಾಣಿಗಳಿಗೆ ಆಹಾರ ಹಾಕುವಂತಿಲ್ಲ. 
❌ ಧೂಮಪಾನ, ಮದ್ಯಪಾನ ಮಾಡುವಂತಿಲ್ಲ.
❌ ಪ್ಲಾಸ್ಟಿಕ್ ಮುಂತಾದ ಕಸಗಳನ್ನು ಕಾಡಿನಲ್ಲಿ ಹಾಕಲೇಬಾರದು. 

ಸಾಮಾನ್ಯ ತಿಳುವಳಿಕೆ ಇರುವ ಯಾವ ವ್ಯಕ್ತಿಗಾದರೂ ಇದೆಲ್ಲಾ ಗೊತ್ತಿರುತ್ತದೆ ಅಂತ ನೀವನ್ನಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಪ್ರವಾಸಿಗರು, ಭಕ್ತರು ಎಂದು ಬರುವ ಅನೇಕರಿಗೆ ಈ ಪ್ರಜ್ಞೆ ಅವರ ರಕ್ತದಲ್ಲೇ ಬಂದಿರುವುದಿಲ್ಲ. ಕೆಲವರಂತೂ ಕಾಡುಗಳು ಪಿಕ್ ನಿಕ್ ಜಾಗ ಎಂದುಕೊಂಡು ನೀರಿರುವ ಕಡೆ ಊಟಕ್ಕೆ ಕೂತುಬಿಡುವುದುಂಟು. ಹುಲಿ ಚಿರತೆ ಆನೆ ಕಾಟಿಗಳಿರುವ ಕಡೆ ಇದು ಬಹಳ ಅಪಾಯ. ಪ್ರಾಣಿ ಕಂಡಾಕ್ಷಣ ಫ್ಲ್ಯಾಷ್ ಬಳಸಿ ಫೋಟೋ ತೆಗೆಯುವುದರಿಂದ‌ ಹಿಡಿದು ಕಾಡಿನೊಳಗೆ ಕೂಗಾಡುವುದು, ಚಿಪ್ಸ್ ಪ್ಯಾಕ್,‌ ಪ್ಲಾಸ್ಟಿಕ್ ಬಾಟಲ್ ಬಿಸಾಡುವಷ್ಟು ಹೊಣೆಗೇಡಿತನವಿರುತ್ತದೆ.😡 ಇದರಿಂದ ಕಾಡು ಮತ್ತು ಪ್ರಾಣಿಗಳು ತೊಂದರೆಗೊಳಗಾಗುತ್ತವೆ. ಅದರ ಮುಂದಿನ ಹಂತದ ಪರಿಣಾಮಗಳನ್ನು ಅನುಭವಿಸುವವರು ಮನುಷ್ಯರೇ ಆಗಿರುತ್ತಾರೆ. ಹಾಗಾಗಿ ಒಂದು ಜವಾಬ್ದಾರಿಯುತ ಪ್ರವಾಸವನ್ನು ರೂಢಿಸಿಕೊಳ್ಳೋಣ. ಕಾಡುಗಳನ್ನು ಗೌರವಿಸೋಣ.👍

ಭಾನುವಾರ, ಅಕ್ಟೋಬರ್ 10, 2021

ಬೆಂಗಳೂರು ಸುತ್ತಮುತ್ತ ಪ್ರಾಂತ್ಯದ ಕೋಟೆ-ಬೆಟ್ಟಗಳು

ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಕೋಟೆಗಳು ಇದ್ದವು.  ಈಕಡೆ ಬೆಂಗಳೂರು ಗ್ರಾಮಾಂತರ, ಕನಕಪುರ, ರಾಮನಗರ,  ಮಾಗಡಿ, ಕುಣಿಗಲ್, ತುಮಕೂರು .. ಹಾಗೇ ಆ ಕಡೆ ಮಧುಗಿರಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಪ್ರದೇಶಗಳಲ್ಲಿ ಗುಡ್ಡಗಳ ಮೇಲೆ ಹಳೇ ಕೋಟೆಗಳು, ಪಳಿಯುಳಿಕೆಗಳು ಬಹಳಷ್ಟಿವೆ. ಬಹುತೇಕ ಎಲ್ಲವೂ ಆಯಾ ಪ್ರದೇಶದ ಪಾಳೇಗಾರರ ಕೋಟೆಗಳಾಗಿದ್ದು ಕೆಲವು ರಾಜಸಾಮ್ರಾಜ್ಯಗಳಿಗೂ ಸೇರಿದ್ದಿವೆ. ಬಹುತೇಕ ಇವೆಲ್ಲಾ ಹೈದರಾಲಿ , ಟಿಪ್ಪು ಕಾಲದಲ್ಲಿ  ಮೈಸೂರು ಸಂಸ್ಥಾನಕ್ಕೆ, ಆಮೇಲೆ ಬ್ರಿಟಿಷರಿಗೆ ಸೇರಿಹೋಗುತ್ತವೆ ಎಂಬುದು ಇತಿಹಾಸ.  ಎಲ್ಲವೂ ಈಗ ಶಿಥಿಲಾವಸ್ಥೆಯಲ್ಲೇ ಇವೆ.  ಬೆಟ್ಟದ ತುದಿಯಲ್ಲಿ ಸಣ್ಣದೊಂದು ದೇವಸ್ಥಾನವಿರುತ್ತದೆ. ತಪ್ಪಲ್ಲಿನ ಹಳ್ಳಿಯ ಜನ ಕೆಲವು ಸಂದರ್ಭಗಳಲ್ಲಿ ಅಲ್ಲಿ ಪೂಜೆ ಮಾಡುತ್ತಾರೆ ಹೊರತು ಪಡಿಸಿದರೆ ಹೆಚ್ಚೇನೂ ಚಟುವಟಿಕೆಗಳಿರುವುದಿಲ್ಲ. ಹೆಚ್ಚಾಗಿ ಬಂಡೆಕಲ್ಲುಗಳು, ಕುರುಚಲು ಕಾಡುಗಳು ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು. ಕೆಲವು ಬರೀ ಬಂಡೆಗಳಿವ ಗುಡ್ಡಗಳು. ಇನ್ನು ಒಂದಿಷ್ಟು ಬೆಟ್ಟಗಳಲ್ಲಿ ಕೋಟೆಯಿಲ್ಲದೇ ಬೆಟ್ಟದ ಮೇಲೆ  ದೇವಸ್ಥಾನ ಮಾತ್ರ ಇದ್ದು ನಿತ್ಯಪೂಜೆ ನಡೆಯುತ್ತಿರುವ ಸ್ಥಳಗಳು ಅಥವಾ ವಿಶೇಷ ದಿನಗಳಂದು ಮಾತ್ರ ಪೂಜೆ/ಜಾತ್ರೆ ನಡೆಯುವ ಸ್ಥಳಗಳೂ ಇವೆ. 

ಇವೆಲ್ಲವೂ ಬೆಂಗಳೂರು ನಗರದಿಂದ ಸುಮಾರು ೧೦೦ ಕಿಮಿ ಮತ್ತು ಅದಕ್ಕಿಂತ ಕಡಿಮೆ  ದೂರದಲ್ಲಿದ್ದು ನಗರದಿಂದ ಒಂದು ದಿನದಲ್ಲಿ ಹೋಗಿಬರುವಂತದ್ದಿವೆ.  ಇತಿಹಾಸ ಆಸಕ್ತರಿಗೆ, ಚಾರಣಿಗರಿಗೆ ಇವು ಒಳ್ಳೆಯ ತಾಣಗಳ ಜೊತೆಗೆ ಸುಮ್ಮನೇ ಒಂದು ಸಣ್ಣ ಪ್ರವಾಸಕ್ಕೂ ಕೂಡ ಇವು ಚೆನ್ನಾಗಿರುತ್ತವೆ. ಹಲವು ವರ್ಷಗಳಿಂದ ಇಂತಹ ಹಲವು ಗುಡ್ಡಗಳ ಮೇಲಿನ ದುರ್ಗಗಳಿಗೆ ಭೇಟಿಕೊಟ್ಟಿದ್ದೇನೆ/ ಮುಂದೆಯೂ ಭೇಟಿಕೊಡುತ್ತಿರುತ್ತೇನೆ. ನಾನು ಹೋಗಿಬಂದ ಇಂತಹ ದುರ್ಗ ಮತ್ತು ಬೆಟ್ಟಗಳ ಪಟ್ಟಿಯನ್ನು ನೆನಪಿದ್ದಷ್ಟು ದಾಖಲಿಸುತ್ತಿದ್ದೇನೆ.  ಈ ಪಟ್ಟಿ ನವೀಕರಣಗೊಳ್ಳುತ್ತಾ ಹೋಗುತ್ತದೆ.

ಕೋಟೆ/ದುರ್ಗಗಳು

ಮಾಕಳಿದುರ್ಗ

ಹುತ್ರಿದುರ್ಗ

ಭಸ್ಮಾಂಗಿದುರ್ಗ

ರತ್ನಗಿರಿಕೋಟೆ

ಚನ್ನರಾಯನದುರ್ಗ

ದೇವರಾಯನದುರ್ಗ

ಸಾವನದುರ್ಗ

ಮಧುಗಿರಿ ಕೋಟೆ


ಬೆಟ್ಟಗಳು

ಬಿಳಿಕಲ್ ರಂಗನಾಥಸ್ವಾಮಿ ಬೆಟ್ಟ

ನಂದಿಬೆಟ್ಟ

ರಾಮದೇವರ ಬೆಟ್ಟ

ಸಿದ್ಧರಬೆಟ್ಟ

ಶಿವಗಂಗೆಬೆಟ್ಟ

ಮಂದಾರಗಿರಿ

ರೇವಣಸಿದ್ಧೇಶ್ವರ ಬೆಟ್ಟ

ಯತಿರಾಜಸ್ವಾಮಿ/ಎತ್ತರಾಯಸ್ವಾಮಿ ಬೆಟ್ಟ




ಶನಿವಾರ, ಆಗಸ್ಟ್ 7, 2021

ಹೆಬ್ಬಾಳ ಕಿತ್ತಯ್ಯ ಶಿಲಾಬರಹ ಮತ್ತು ಬೆಂಗಳೂರಿನ ಇತಿಹಾಸ

ಪ್ರಸ್ತಾವನೆ

ಬಹಳ ಜನ ಬೆಂಗಳೂರಿಗರು ನಗರದ ಇತಿಹಾಸದ ಬಗ್ಗೆ ಕೆಂಪೇಗೌಡರ ಕಾಲದಿಂದ ಮಾತ್ರ ಬಲ್ಲರು. ಆದರೆ ಬೆಂಗಳೂರು ಸುಮಾರು ೨೫೦೦ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಬೆಳ್ಳಂದೂರು, ಜಾಲಹಳ್ಳಿ, ರೇಸ್ ಕೋರ್ಸ್ ಗಳಲ್ಲಿ ಕಂಡುಹಿಡಿಯಲ್ಪಟ್ಟ ಶಿಲಾಯುಗದ ಸಮಾಧಿಗಳು ಮತ್ತು ಮಾನವ ನಿರ್ಮಿತ ವಸ್ತುಗಳು ಇದಕ್ಕೆ ಪುರಾವೆಗಳಾಗಿವೆ!

ಲಿಖಿತ ದಾಖಲೆಗಳ ವಿಷಯಕ್ಕೆ ಬಂದರೆ, ಬೆಂಗಳೂರಿನಲ್ಲಿ 1900ನೇ ಇಸವಿಯವರೆಗೆ ಸುಮಾರು ನೂರೈವತ್ತಕ್ಕೂ ಹೆಚ್ಚು ಶಿಲಾಶಾಸನಗಳು ಕಂಡುಬಂದಿವೆ. ಈ ಶಿಲಾಶಾಸನಗಳ ಕಾಲ ಕ್ರಿ.ಶ. ಎಂಟನೇ ಶತಮಾನದ ನಂತರದ್ದಾಗಿದ್ದು ಇವು ನಗರದ ಎಲ್ಲಾ ಭಾಗಗಳಲ್ಲೂ ಇವೆ. ಶಿಲಾಶಾಸನಗಳು ಅವು ರಚನೆಯಾದ ಕಾಲದ ಜನ, ಸಂಸ್ಕೃತಿ, ಧರ್ಮ, ಭಾಷೆ ಮುಂತಾದವುಗಳ ಮೂಲ ದಾಖಲೆಗಳಾಗಿವೆ. ಈ ಶಿಲಾಶಾಸನಗಳನ್ನು 1894 ರಿಂದ 1905 ರ ನಡುವೆ ಬಿ. ಎಲ್. ರೈಸ್ ಅವರು ತಮ್ಮ 'ಎಪಿಗ್ರಾಫಿಯ ಕರ್ನಾಟಿಕ' ಎನ್ನುವ 12 ಸಂಪುಟಗಳ ಗ್ರಂಥಗಳಲ್ಲಿ ದಾಖಲಿಸಿಟ್ಟಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಮಿತಿಮೀರಿದ ನಗರೀಕರಣದ ಹೊಡೆತಕ್ಕೆ ಸಿಕ್ಕು ಈ ಶಿಲಾಶಾಸನಗಳಲ್ಲಿ ಸುಮಾರು ಶೇಕಡಾ ಎಪ್ಪತ್ತರಷ್ಟು ನಾಶವಾಗಿವೆ. ಉಳಿದಿರುವ ಕೆಲವು ಶಾಸನಗಳೂ ಸಹ ಸರಿಯಾದ ಮನ್ನಣೆ ಇಲ್ಲದಂತಿವೆ ಮತ್ತು ಅವುಗಳಿರುವ ಜಾಗಗಳು ಸಹ ಶೋಚನೀಯವಾಗಿವೆ.

ಬೆಂಗಳೂರಿಗರು ಇಂತಹ ಶಿಲಾಶಾಸನಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ತುರ್ತು ಅಗತ್ಯವಾಗಿದ್ದು ಅವುಗಳು ಇನ್ನೂ ನಾಶವಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ.

'ಇನ್ ಸ್ಕ್ರಿಪ್ಶನ್ ಸ್ಟೋನ್ಸ್ ಆಫ್ ಬೆಂಗಳೂರು' ಎನ್ನುವುದು ಈ ಶಾಸನಗಳ ಬಗ್ಗೆ ಅರಿವು ಮೂಡಿಸುವ ಮತ್ತು ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ಶಿಲಾಶಾಸನಗಳನ್ನು ಸಂರಕ್ಷಿಸುವ ಒಂದು ನಾಗರೀಕ ಯೋಜನೆಯಾಗಿದೆ. ಬಿ. ಎಲ್. ರೈಸ್ ಅವರ ದಾಖಲೆಗಳ ಪ್ರಕಾರ ಶಾಸನಗಳ ಜಾಡನ್ನು ಹಿಡಿದು ಪತ್ತೆ ಹಚ್ಚಿ ಅವುಗಳನ್ನು ಸಂರಕ್ಷಿಸಲು ಆಧುನಿಕ ತಂತ್ರಜ್ಞಾನಗಳನ್ನು ಮತ್ತು ವಿಧಾನಗಳನ್ನು ಇದರಲ್ಲಿ ಬಳಸಲಾಗುತ್ತಿದೆ.

ಕ್ರಿ.ಶ. ೭೫೦ರ ಕಿತ್ತಯ್ಯ-ಹೆಬ್ಬಾಳ ಶಿಲಾಬರಹ

ಪತ್ತೆ

ರಿವೈವಲ್ ಹೆರಿಟೇಜ್ ಹಬ್ (ಆರ್ ಎಚ್ ಎಚ್) ಎನ್ನುವುದು ಬೆಂಗಳೂರಿನಲ್ಲಿನ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸಗಳಲ್ಲಿ ನಿರತವಾಗಿರುವ ನಾಗರೀಕರ ಒಂದು ತಂಡ. ಹೆಬ್ಬಾಳದ ನಿವಾಸಿ ದಿಲೀಪ ಕ್ಷತ್ರಿಯ ಎಂಬುವವರು 2018ರ ಜೂನ್ ತಿಂಗಳ ಆದಿಯಲ್ಲಿ ಇದನ್ನು ಸಂಪರ್ಕಿಸಿ ಹೆಬ್ಬಾಳದಲ್ಲಿ ಯಾವುದೋ ಒಂದು ರಸ್ತೆ ಬದಿಯಲ್ಲಿ ಇರುವ ನಾಲ್ಕು ದೇವರ ಕಲ್ಲುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಕೋರಿಕೊಂಡರು. ಅಲ್ಲಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದು, ಆ ಕಲ್ಲುಗಳು ನಾಶವಾಗಬಹುದೆಂಬ ಆತಂಕ ಅವರದ್ದಾಗಿತ್ತು. ಅದರಂತೆ ರಿವೈವಲ್ ತಂಡದ ಸದಸ್ಯರು 20 ಜೂನ್ 2018ರಂದು ಅಲ್ಲಿಗೆ ಹೋಗಿ ಮಣ್ಣಿನಲ್ಲಿ ಹೂತುಹೋಗಿದ್ದ ಆ ಕಲ್ಲುಗಳನ್ನು ಅಗೆದು ತೆಗೆದಾಗ ಒಂದು ಅಚ್ಚರಿ ಕಾದಿತ್ತು. ಅದರಲ್ಲಿ ಒಂದು ವೀರಗಲ್ಲಿನ ಹೂತು ಹೋಗಿದ್ದ ಭಾಗದಲ್ಲಿ ಐದು ಸಾಲುಗಳ ಪುರಾತನ ಬರೆಹ ಕಂಡುಬಂದಿತ್ತು.

ಕಲ್ಬರಹದ ವ್ಯಾಖ್ಯಾನ

ಆ ಶಾಸನವು ಕಂಡುಹಿಡಿಯಲ್ಪಟ್ಟ ಕೆಲವೇ ಗಂಟೆಗಳಲ್ಲಿ ಶಿಲಾಶಾಸನ ತಜ್ಞ ಪಿ. ವಿ. ಕೃಷ್ಣಮೂರ್ತಿಯವರು ಆ ಶಾಸನವು ಎಂಟನೇ ಶತಮಾನದ ಗಂಗರ ದೊರೆ ಶ್ರೀಪುರುಷನ ಕಾಲದ್ದೆಂದು ಗುರುತಿಸಿದರು. ಅಷ್ಟೇ ಅಲ್ಲದೇ ಅದು ಬೆಂಗಳೂರಿನಲ್ಲಿ ಇದುವರೆಗೂ ದೊರಕಿರುವ ಶಾಸನಗಳಲ್ಲಿ ಅತ್ಯಂತ ಹಳೆಯದ್ದು ಎಂದು ಕೂಡ ಅಭಿಪ್ರಾಯಪಟ್ಟರು. ಆ ಶಾಸನದಲ್ಲಿನ ಬರಹದ ಕೆಲವು ಭಾಗಗಳು ಮಾಸಿಹೋಗಿದ್ದರಿಂದ ಅದನ್ನು ಓದಿ ವ್ಯಾಖ್ಯಾನಿಸುವುದು ಒಂದು ಸವಾಲಾಗಿತ್ತು. ಆ ಬರಹವನ್ನು ಮೂರು ಆಯಾಮದಲ್ಲಿ ೫೦ ಮೈಕ್ರಾನ್ ನಿಖರತೆಯಲ್ಲಿ ಸ್ಕ್ಯಾನ್ ಮಾಡಿ ಹೈ ರೆಸೊಲ್ಯೂಶನ್ ಚಿತ್ರಗಳನ್ನು ಮಾಡಲಾಯಿತು. ಆ ಚಿತ್ರಗಳು ಅದರಲ್ಲಿನ ಬರಹವನ್ನು ಚೆನ್ನಾಗಿ ಓದಲು ಅವರಿಗೆ ಸಹಾಯವಾದವು. ಅವರು ಆ ಶಿಲಾಶಾಸನದ ಸಂಪೂರ್ಣ ಪಠ್ಯವನ್ನು ದಾಖಲಿಸಿ ಏಪ್ರಿಲ್-ಸೆಪ್ಟೆಂಬರ್ 2018ರ 37-38ನೇ ಸಂಪುಟದ 'ಇತಿಹಾಸ ದರ್ಪಣ' ಪತ್ರಿಕೆಯಲ್ಲಿ ಲೇಖನವನ್ನು ಪ್ರಕಟಿಸಿದ್ದಾರೆ.

ಅದರಂತೆ ಆ ಪಠ್ಯ ಮತ್ತು ಅದರ ಅರ್ಥ ಹೀಗಿದೆ:

ಸ್ವಸ್ತಿ ಶ್ರೀ ಸಿರಿಪುರುಷ ಮಹಾರಾಜಾ ಪೃಥುವೀ ರಾಜ್ಯಂಗೆಯ್ಯೆ
ಪೆರ್ಬ್ಬೊಳಲ್ನಾಡು ಮೂವತ್ತುಮಾನ್ಪೆೞ್ನಾಗತ್ತರಸರಾಳೆ ಆರ
ಕಮ್ಮೊಱರ ಮೈಂದುನಂ ಕೊಡನ್ದಲೆಯರ ಕಿತ್ತಯನಾ ರಟ್ಟವಾ
ಡಿ ಕೂಚಿ ತನ್ದೊಡೆ ಊರೞಿವಿನೊಳೆಱಿದಿನ್ದ್ರಕ ಪುಕಾನ್
ಪೆರ್ಗುನ್ದಿಯು ಕಿಱುಗುನ್ದಿ ತಮ್ಮ ಕುರ್ಳ್ನಿಱಿದೊದು ಇ ಕಲ್ಲುಂ


"ಶ್ರೀಪುರುಷ ಮಹಾರಾಜನು ಭೂಮಂಡಲವನ್ನು ಆಳುತ್ತಿದ್ದಾಗ, ಪೆಳ್ನಾಗತ್ತರನು ಪೆರ್ಬೊಳನಾಡನ್ನು ಆಡಳಿತ ಮಾಡುತ್ತಿದ್ದಾಗ, ಕೊದಂಡಲೆ ಕುಲದ ಅರಕಮ್ಮೊರನ ಮೈದುನ ಕಿಟ್ಟಯ್ಯನು ರಟ್ಟವಾಡಿ ದಾಳಿಯ ಸಂದರ್ಭದಲ್ಲಿ ನಡೆದ ಊರಳಿವು ಕಾಳಗದಲ್ಲಿ ಇಂದ್ರಲೋಕ ಸೇರಿದನು. ಈ ಕಲ್ಲು ಪೆರ್ಗುಂಡಿ ಮತ್ತು ಆತನ ಸಹೋದರ ಕಿರ್ಗುಂಡಿಯಿಂದ ಸ್ಥಾಪಿಸಲ್ಪಟ್ಟಿತು."

  • ಶ್ರೀಪುರುಷ - ಕ್ರಿ.ಶ. 726ರಿಂದ 788ವರೆಗೆ ಆಳಿದ ಗಂಗ ಸಾಮ್ರಾಜ್ಯದ ರಾಜ
  • ಪೆಲ್ನಾಗತ್ತಾರಸ - ಹಿರಿಯ ನಾಗತರ ಅರಸ
  • ಕಿಟ್ಟಯ್ಯ - ಈತನ ನೆನಪಿನಲ್ಲಿ ಸ್ಥಾಪಿಸಲಾದ ವೀರಗಲ್ಲಿನ ವೀರ
  • ಪೆರ್ಬೊಳಲ - ದೊಡ್ಡ (ಪೆರಿ) ನಗರ (ವೊಳಲು)
  • ಹೆಬ್ಬಾಳ ಹೆಸರಿನ ಶಬ್ದೋತ್ಪತ್ತಿ -> (ಪೆರಿಯ+ವೊಳಲ್) ಪೆರ್ಬೊಳಲ್ -> ಪೆಬ್ಬೊಳಲ್ -> ಪೆಬ್ಬೊಳ್ -> ಪೆಬ್ಬಾಳ -> ಹೆಬ್ಬಾಳ
  • ರಟ್ಟವಾದಿ - ರಾಷ್ಟ್ರಕೂಟ

ಮಹತ್ವ ಮತ್ತು ಸಂರಕ್ಷಣೆಯ ಯೋಜನೆ

ಈ ಕಿಟ್ಟಯ್ಯ-ಹೆಬ್ಬಾಳ ಶಾಸನವು ಬೆಂಗಳೂರಿಗೆ ಈ ಕೆಳಗಿನ ಕಾರಣಗಳಿಂದ ಪ್ರಮುಖವಾದುದ್ದಾಗಿದೆ:
೧. ಇದು ಬೆಂಗಳೂರಿನಲ್ಲಿ ದೊರೆತಿರುವ ಅತಿ ಹಳೆಯ, ಅಂದರೆ ಸುಮಾರು 1250 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಬರೆಹವಾಗಿದೆ. ಇದು ಕನ್ನಡದ ಮೊದಲ ಗ್ರಂಥವಾದ 'ಕವಿರಾಜಮಾರ್ಗ'ಕ್ಕಿಂತಲೂ ನೂರು ವರ್ಷಗಳಷ್ಟು ಹಳೆಯದು.
೨. ಈ ಶಾಸನದಿಂದ ತಿಳಿದುಬಂದಂತೆ 'ಕಿಟ್ಟಯ್ಯ' ಎಂಬುದು ಬೆಂಗಳೂರಿನ ಅತಿಹಳೆಯ ನಿವಾಸಿಯೊಬ್ಬನ ಹೆಸರಾಗಿದ್ದು, ಆತ ನಿಜವಾಗಿ ಗೊತ್ತಿರುವಂತೆ ಬೆಂಗಳೂರಿನ ಮೊದಲ ಪ್ರಜೆ ಎಂದು ಹೇಳಬಹುದು!
೩. ಶಾಸನದಲ್ಲಿ 'ಹೆಬ್ಬಾಳ' ದ ಹೆಸರು ಉಲ್ಲೇಖವಾಗಿರುವುದರಿಂದ ಬೆಂಗಳೂರಿನ ಅತಿ ಹಳೆಯ ಪ್ರದೇಶವಿದು ಎಂದು ಗೊತ್ತಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಕ್ರಿ.ಶ. 750ರ ಕಾಲದ ಈ ಕಿಟ್ಟಯ್ಯನ ವೀರಗಲ್ಲನ್ನು ಅದರ ಮಹತ್ವಕ್ಕೆ ತಕ್ಕುದಾದ ರೀತಿಯಲ್ಲಿ ಇಟ್ಟು ಕಾಪಾಡಿ ಗೌರವಿಸುವಂತೆ, ಸಂಭ್ರಮಿಸುವಂತೆ ಮತ್ತು ಇನ್ನೂ ಶತಮಾನಗಳ ಕಾಲ ಇದು ಉಳಿಯುವಂತೆ ಯೋಜನೆ ರೂಪಿಸಲಾಗಿದೆ. ಎಸ್ತೆಟಿಕ್ ಆರ್ಕಿಟೆಕ್ಟ್ಸ್ ನ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಅವರು ಈ ವೀರಗಲ್ಲನ್ನು ಇಡಲು ಗಂಗ ಶೈಲಿಯ ಮಂಟಪವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರಿನ ಹೆಮ್ಮೆ ಮತ್ತು ಆಸ್ತಿಯಾಗಿರುವ ಇದಕ್ಕಾಗಿ ಮಂಟಪ ನಿರ್ಮಾಣದ ಉದ್ದೇಶಕ್ಕೆ ನಾಗರೀಕರಿಂದ ಹಣಸಂಗ್ರಹಕ್ಕಾಗಿ ಕೋರಿಕೊಳ್ಳಲಾಗಿದೆ. ದೇಣಿಗೆ ನೀಡಿದವರಿಗೆ ಧನ್ಯವಾದಪೂರ್ವಕವಾಗಿ ಈ ವೀರಗಲ್ಲಿನ ೧/೮ ಕುಗ್ಗಿಸಿದ ಗಾತ್ರದ ಹಿತ್ತಾಳೆಯ ಪ್ರತಿಕೃತಿಯನ್ನು ಕೊಡಲಾಗುತ್ತದೆ.

ನಮ್ಮ ನಗರದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಮ್ಮೊಡನೆ ಕೈಜೋಡಿಸಿ.

***************

ಮೇಲಿನ ಪಠ್ಯ ನಾನು ಕನ್ನಡದಲ್ಲಿ ಅನುವಾದಿಸಿ ಕೊಟ್ಟಂತದ್ದು. ಮಂಟಪಕ್ಕೆ ದೇಣಿಗೆ ಕೊಟ್ಟವರಿಗೆ ಸ್ಮರಣಿಕೆಯಾಗಿ ಕೊಡುವ ಹಿತ್ತಾಳೆ ಪ್ರತಿಕೃತಿಯ ಜೊತೆ ಇರುವ ಬ್ರೋಶರ್ ನಲ್ಲಿ ಬಳಸಿಕೊಳ್ಳಲಾಗಿದೆ.

2020ರಲ್ಲಿ ಮಂಟಪದ ನಿರ್ಮಾಣ ಪೂರ್ಣಗೊಂಡು ವೀರಗಲ್ಲು ಶಾಸನಗಳನ್ನು ಅದರಲ್ಲಿಟ್ಟು ಸಂರಕ್ಷಿಸಲಾಗಿದೆ.

ಕಿತ್ತಯ್ಯ ವೀರಗಲ್ಲು -ಶಿಲಾಬರಹದ ಮಂಟಪವಿರುವ ಸ್ಥಳದ ನಕಾಶೆ ಲಿಂಕ್

ಶುಕ್ರವಾರ, ಜುಲೈ 2, 2021

ಆನ್ಸಿ & ಯುನಿಕೋಡ್ ಫಾಂಟ್ಸ್ - ಒಂದಿಷ್ಟು ತಿಳುವಳಿಕೆಗೆ

ಫಾಂಟ್ಸ್ ಎಂಬೆಡ್ ಮಾಡುವುದು

ಹಿಂದೆಲ್ಲಾ ಹಳೆಯ 'ನುಡಿ', 'ಬರಹ' ಗಳನ್ನು ಬಳಸಿ ANSI ಫಾಂಟುಗಳ ಮೂಲಕ ಕಂಪ್ಯೂಟರಲ್ಲಿ ಕನ್ನಡ ಟೈಪ್ ಮಾಡುತ್ತಿದ್ದೆವು. ಇಂತಹ ಫಾಂಟುಗಳನ್ನು ಬಳಸಿ ಬರೆದ ಫೈಲನ್ನು ಬೇರೆಯವರಿಗೆ ಕಳಿಸಿದರೆ ಅವರ ಕಂಪ್ಯೂಟರಲ್ಲೂ ಸಹ ಆ ತಂತ್ರಾಂಶ ಅಥವಾ ಫಾಂಟುಗಳು ಇದ್ದರೆ ಮಾತ್ರ ಅವರು ಓದಲು ಸಾಧ್ಯವಾಗ್ತಿತ್ತು. ಇಲ್ಲದಿದ್ದಲ್ಲಿ ಜಂಕ್ ಅಕ್ಷರಗಳಾಗಿ ಕಾಣುತ್ತಿದ್ದವು. ಈಗಲೂ ಕೆಲವರು ಅದೇ ಆನ್ಸಿ ಫಾಂಟುಗಳನ್ನು ಬಳಸುತ್ತಿದ್ದಾರಾದರೂ ಬಳಕೆ ಸೀಮಿತವಾಗಿದೆ.

ಇಲ್ಲಿ ಏನು ವಿಷಯ ಹೇಳಲು ಬಂದೆ ಎಂದರೆ, ನೀವು ಹಳೆಯ ANSI ಫಾಂಟ್ ಬಳಸಿ ಬರೆದ ವರ್ಡ್ ಫೈಲನ್ನು ಬೇರೊಬ್ಬರಿಗೆ ಕಳಿಸುವಾಗ ಒಂದು ಚಿಕ್ಕ ಬದಲಾವಣೆ ಮಾಡಿಕೊಂಡರೆ ನೀವು ಯಾರಿಗೆ ಕಳಿಸಿರುತ್ತೀರೋ ಅವರಲ್ಲಿ ಆ ANSI ಫಾಂಟುಗಳು ಇಲ್ಲದಿದ್ದರೂ ಅವರಿಗೆ ಸರಿಯಾಗಿ ಕಾಣುವಂತೆ ಮಾಡಬಹುದು. ಅದು ಹೇಗೆಂದರೆ, ವರ್ಡ್ ಫೈಲನ್ನು 'ಸೇವ್' ಮಾಡುವಾಗ ಬರುವ ಸೇವ್ ವಿಂಡೋದಲ್ಲಿ ಕೆಳಗೆ 'ಟೂಲ್ಸ್' - 'ಸೇವ್ ಆಪ್ಶನ್ಸ್' ತೆರೆದರೆ ಈ ಚಿತ್ರದಲ್ಲಿರುವಂತೆ ಒಂದು ಆಯ್ಕೆ ಇರುತ್ತದೆ. ಅದರಲ್ಲಿ 'ಎಂಬೆಡ್ ಫಾಂಟ್ಸ್ ಇನ್ ದ ಫೈಲ್' ಟಿಕ್ ಮಾಡಿ, ಅದರ ಕೆಳಗಿನ ಎರಡು ಚೌಕಗಳನ್ನೂ ಬೇಕಿದ್ದಲ್ಲಿ ಟಿಕ್ ಮಾಡಿ. ಅನಂತರ ಸೇವ್ ಮಾಡಿ. ಆಗ ನಿಮ್ಮ ANSI ಫಾಂಟುಗಳು ಕಡತದೊಳಗೆ ಎಂಬೆಡ್ ಆಗಿ ಸೇವ್ ಆಗುತ್ತದೆ. ಇನ್ನು ಯಾರಿಗೆ ಕಳಿಸಿದರೂ ಅವರು ಓದಿಕೊಳ್ಳಬಹುದು.

  
ಈಗ ನಾವೆಲ್ಲಾ ಬರೆಯುತ್ತಿರುವ ಈಗಿನ ಸ್ಟ್ಯಾಂಡರ್ಡ್ ಆದ ಯುನಿಕೋಡ್ ಫಾಂಟುಗಳನ್ನು ಬಳಸಿದರೆ ಇದೆಲ್ಲಾ ಏನು ಸಮಸ್ಯೆ ಇಲ್ಲ. ಆದರೆ ಯುನಿಕೋಡ್ ಬಳಸಿದಾಗಲೂ ಮತ್ತು ಪಿಡಿಎಫ್‌'ನಂತೆ ಸೇವ್ ಮಾಡುವಾಗಲೂ ಇದೇ ತಂತ್ರ ಬಳಸಿದರೆ ಆಗ ನೀವು ಬರೆದ ಫಾಂಟುಗಳು ಆ ಕಡತದೊಳಗೆ ಹಾಗೇ ಅಡಕವಾಗಿ ಉಳಿಯುತ್ತವೆ. ನೀವು ಯಾವುದೊಂದು ನಿರ್ದಿಷ್ಟ ಶೈಲಿಯ ಫಾಂಟಿನಲ್ಲಿ ಬರೆದಿದ್ದರೆ ಆ ಫಾಂಟುಗಳು ಬೇರೆಯವರಲ್ಲಿ ಇಲ್ಲದಿದ್ದರೂ ಅವರು ನೀವು ಬರೆದ ಅದೇ ಫಾಂಟುಗಳ ರೂಪದಲ್ಲೇ ಓದಬಹುದು.

*****************
ಜಂಕ್ ಅಕ್ಷರಗಳ ಸಮಸ್ಯೆಗೆ ಏನು ಪರಿಹಾರ?

ಮೊನ್ನೆ ಒಬ್ಬರು ಕೇಳಿದರು. "ನಮ್ಮ ಇಲಾಖೆಯಿಂದ ಬರುವ ಇಮೇಲುಗಳು ಜಂಕ್ ಅಕ್ಷರಗಳಾಗಿ ಕಾಣುತ್ತವೆ. ಕಂಪ್ಯೂಟರಲ್ಲೂ ಕಾಣಲ್ಲ, ಮೊಬೈಲಲ್ಲೂ ಓದಕ್ಕಾಗಲ್ಲ. ಏನು ಮಾಡೋದು? ಅವರು 'ನುಡಿ' ಬಳಸಿ ಬರೆಯುತ್ತಾರಂತೆ. ನಾವೂ ಎಲ್ಲದಕ್ಕೂ ನುಡಿಯನ್ನೇ ಬಳಸಬೇಕಾ?" ಅಂತ.‌  ಇದರ ಬಗ್ಗೆ ಈ ಕೆಳಗಿನ ಮಾಹಿತಿ:

ಈ 'ನುಡಿ' , 'ಬರಹ' ಇತ್ಯಾದಿಗಳು ಏನಿವೆ, ಅವು ಅಕ್ಷರ ಟೈಪಿಸುವ ಟೂಲ್ ಗಳಷ್ಟೆ. ಹಳೆಯ ಆವೃತ್ತಿಯ ನುಡಿ, ಬರಹಗಳಲ್ಲಿ ಅವುಗಳದ್ದೇ ಆದ ಫಾಂಟ್ ಗಳಿದ್ವು. ಆಯಾ ತಂತ್ರಾಂಶದಲ್ಲಿ ಟೈಪ್ ಮಾಡಿದ್ದು ಆಯಾ ತಂತ್ರಾಂಶದಲ್ಲಿ ತೆರೆದರಷ್ಟೆ ಅಕ್ಷರಗಳು‌ ಸರಿಯಾಗಿ ಕಾಣುತ್ತಿತ್ತು. ಅಥವಾ ಕೊನೇಪಕ್ಷ ನಿಮ್ಮ ಕಂಪ್ಯೂಟರಲ್ಲಿ/ಫೋನಲ್ಲಿ ಆ‌‌ ತಂತ್ರಾಂಶದ ಫಾಂಟ್ಸ್ ಇರಬೇಕಿತ್ತು. ಆದರೆ‌ ಈಗ ಅದೆಲ್ಲಾ‌ ಹಳೆಯದಾಗಿದೆ. 'ಯುನಿಕೋಡ್' ಫಾಂಟುಗಳು ಬಂದು ಸುಮಾರು ಹತ್ತು ವರ್ಷಗಳಾಗಿದೆ. ಯುನಿಕೋಡ್ ಅನ್ನುವುದೊಂದು ಸ್ಟ್ಯಾಂಡರ್ಡ್. ಈಗ ನೀವು ಓದ್ತಾ‌‌ ಇರೋದು ಯುನಿಕೋಡಿನಲ್ಲಿರುವ ಅಕ್ಷರಗಳು. ಇವು ಎಲ್ಲೆಡೆಯೂ ಸರಿಯಾಗಿ ಕಾಣ್ತವೆ. ನಾನು ಕಂಪ್ಯೂಟರಲ್ಲಿ ಬರೆದು‌ಹಾಕಿದರೆ ನೀವು ಯಾವ ಹೊರತಂತ್ರಾಂಶದ ನೆರವಿಲ್ಲದೇ ನಿಮ್ಮ ಗಣಕದಲ್ಲೂ ಫೋನಲ್ಲೂ ಟ್ಯಾಬಲ್ಲೂ ಓದಬಹುದು. ಫೋನಲ್ಲಿ ನೀವು ಯಾವುದೊ ಆಪ್ ಹಾಕಿಕೊಂಡು ಬರೆದದ್ದು ಬೇರೆ ಫೋನಲ್ಲೂ ಕಂಪ್ಯೂಟರಲ್ಲೂ ಎಲ್ಲೆಲ್ಲೂ ಓದಬಹುದು. ಯುನಿಕೋಡ್ ವಿಶೇಷ ಏನು ಅಂದ್ರೆ‌ ನೀವು ಇದನ್ನು‌ ಬರೆಯಲು ಯಾವ ತಂತ್ರಾಂಶವನ್ನಾದರೂ ಬಳಸಬಹುದು. ಎಲ್ಲಾ‌ ಒಂದೇ. ಹಾಗಾಗಿ ನುಡಿ, ಬರಹ, ಪದ , ಗೂಗಲ್ ಇಂಡಿಕ್, ವಿಂಡೋಸ್/ ಲೈನಕ್ಸ್ ಇನ್ ಬಿಲ್ಟ್ , ಹತ್ತಾರು ಆನ್ ಲೈನ್ ಟೂಲ್ ಗಳು, ಆಪ್ ಗಳು ಯಾವುದರಲ್ಲಾದರೂ ಬರೆಯಬಹುದು. 
 
ಇನ್ನು‌ 'ನುಡಿ' ವಿಷಯಕ್ಕೆ ಬಂದರೆ, ಕಂಪ್ಯೂಟರಲ್ಲಿ ಟೈಪಿಸಲು ಬಳಕೆಯಾಗುವ ನುಡಿ ತಂತ್ರಾಂಶವು ಐದನೇ ಆವೃತ್ತಿಯವರೆಗೆ 'ಯುನಿಕೋಡ್' ಮತ್ತು 'ಆನ್ಸಿ'(ANSI) ಎರಡರ ಆಯ್ಕೆ ಕೊಡ್ತಿತ್ತು. ಆನ್ಸಿ ಅಂದರೆ‌ ಹಳೇ‌ಫಾಂಟುಗಳು. ಈಗ ಅವು ಸಾಮಾನ್ಯ ಬಳಕೆಗೆ ಬೇಡ.‌ ನುಡಿ ಆರನೇ ಆವೃತ್ತಿಯಿಂದ ಬರೀ ಯುನಿಕೋಡ್ ಮಾತ್ರ‌ ಇದೆ. ಹಾಗಾಗಿ‌ ನುಡಿಯೇ ಬೇಕು ಅಂದ್ರೆ www.kagapa.in ತಾಣಕ್ಕೆ‌ಹೋಗಿ‌ ಹೊಸ ಆವೃತ್ತಿ‌ ಇಳಿಸಿಕೊಂಡು ಬಳಸಿ. ಇಲ್ಲಾಂದ್ರೆ www.pada.pro ತಾಣಕ್ಕೆ‌ ಹೋಗಿ 'ಪದ' ಇಳಿಸಿಕೊಂಡು ಬಳಸಿ ಅಥವಾ ನಿಮಗಿಷ್ಟದ ಯಾವುದಾದ್ರೂ ಬಳಸಿ. ಸರ್ಕಾರಿ‌ ಇಲಾಖೆಗಳಿಗೂ ಯುನಿಕೋಡನ್ನು ಸ್ಟ್ಯಾಂಡರ್ಡ್ ಮಾಡಿ ಎರಡ್ಮೂರು ವರ್ಷಗಳಾಗಿವೆ. ಇನ್ನೂ ಯಾವುದಾದರೂ ಇಲಾಖೆಗಳು ಹಳೇ ನುಡಿ ಬಳಸ್ತಿದ್ದರೆ ಅದನ್ನು ಬದಲಾಯಿಸಿಕೊಳ್ಳಲು ಹೇಳಿ.

ಇಷ್ಟಾದ ಮೇಲೆ ಮತ್ತೊಂದು ಪ್ರಶ್ನೆ ಬರುತ್ತದೆ. ಕೆಲವೊಂದು ಹಳೇ ಫೈಲುಗಳು ನುಡಿಯಲ್ಲಿ ಟೈಪಿಸಿದ್ದಿವೆ ಅಥವಾ ಮತ್ಯಾವುದಾದರೂ ಅಕ್ಷರಗಳು ಜಂಕ್ ಬಂದಾಗ ಆ ಅಕ್ಷರ ಕಾಣಲು ಏನು ಮಾಡಬೇಕು ಅಂತ.
https://aravindavk.in/sanka/ ಈ ತಾಣಕ್ಕೆ ಹೋಗಿ ASCII to Unicode ಎಂದು ಕೊಟ್ಟು ನಿಮ್ಮ‌ ಜಂಕ್ ಅಕ್ಷರಗಳನ್ನು ಯುನಿಕೋಡಿಗೆ ಪರಿವರ್ತಿಸಿ‌ ಓದಿಕೊಳ್ಳಿ.

ಇದನ್ನು ಹೊರತುಪಡಿಸಿ ಈ ಫಾಂಟು, ತಂತ್ರಾಂಶಗಳು, ಪರಿವರ್ತನೆ, ಕಂಪ್ಯಾಟಿಬಿಲಿಟಿ, ಸಪೋರ್ಟ್ ಇತ್ಯಾದಿ ಬೇರೆ ಬೇರೆ ವಿಷಯಗಳು ಬಹಳ ಇವೆ. ಸಾಮಾನ್ಯ ಬಳಕೆದಾರರಿಗೆ ಅದೆಲ್ಲಾ ಬೇಡ.  ಇದೆಲ್ಲಾ ಅಗತ್ಯವಿಲ್ಲ, ನನಗೇನೂ ಸಮಸ್ಯೆ ಆಗಿಲ್ಲ ಅನ್ನೋರು,‌ ಬರೀ ಮೊಬೈಲಲ್ಲಿ ಟೈಪ್ ಮಾಡೋರು ಯಾವ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. 

ಭಾನುವಾರ, ಜೂನ್ 27, 2021

ಕ್ಲಬ್ ಹೌಸ್ - ಆಧುನಿಕ‌ ಅರಳಿಕಟ್ಟೆ

ನಿಮ್ಮ ಗೆಳೆಯನೊಬ್ಬ ನಿಮಗೊಂದು ಆಮಂತ್ರಣಕೊಟ್ಟಿದ್ದಾನೆ. “ಇಲ್ಲೊಂದು ಜಾಗ ಇದೆ, ಬಹಳಸ್ವಾರಸ್ಯವಾಗಿದೆ, ನಾನಾಗಲೇ ಇಲ್ಲಿದ್ದೇನೆ, ನೀನೂ ಬಾ” ಅಂತ. ಅದೇನೆಂದು ನೋಡಿಬಿಡೋಣ ಅಂತ ನೀವು ಹೋಗುತ್ತೀರಿಅದು ದೊಡ್ಡದೊಂದು ಕಟ್ಟಡ ಸಂಕೀರ್ಣ‌. ಪ್ರವೇಶ ಮಾಡುವಾಗ ನಿಮ್ಮ ಫೋನ್ ನಂಬರು ಹೆಸರು ಇತ್ಯಾದಿ ಕೊಟ್ಟು ನೋಂದಾಯಿಸಬೇಕಾಗುತ್ತದೆ.  ನೋಂದಾವಣೆ ಮುಗಿಸಿ ಒಳನಡೆಯುತ್ತೀರಿಒಳಗೆ ಹೋಗುತ್ತಿದ್ದಾಗ ಹಲವು ಪರಿಚಿತ ಮುಖಗಳು, ಎಷ್ಟೋ ಅಪರಿಚಿತ ಮುಖಗಳು ನಿಮ್ಮಂತೆಯೇ ಓಡಾಡುವುದನ್ನು ಕಾಣುತ್ತೀರಿ ಕಟ್ಟಡದ ಒಳಗೆ ಬಹಳ ಕೋಣೆಗಳಿವೆನೀವು ನಡೆಯುತ್ತಾ ಹೋದಂತೆ ಪ್ರತಿಕೋಣೆಯ ಒಳಗೂ ಏನೋ ಮಾತುಕತೆಗಳು ನಡೆಯುವುತ್ತಿರುವುದನ್ನು ಕಾಣುತ್ತೀರಿ. ಎಲ್ಲಾ ಕೋಣೆಗಳ ಬಾಗಿಲಿಗೂ ಇಲ್ಲಿ ಇಂತಹ ವಿಷಯದ ಬಗ್ಗೆ ಮಾತುಕತೆ ನಡೆಯುತ್ತಿದೆ ಅಂತ ಬೋರ್ಡ್ ಹಾಕಿದ್ದಾರೆ. ಮುಕ್ತಪ್ರವೇಶದ ಕೋಣೆಗಳ ಒಳಗೆ ಹೋದರೆ ಚರ್ಚೆ ನಡೆಯುತ್ತಿದೆ. ಒಂದಿಷ್ಟು ಜನ ಕುಳಿತು ಕೇಳುತ್ತಿದ್ದರೆ ಕೆಲವರು ವೇದಿಕೆಯಲ್ಲಿ ಮಾತಾಡುತ್ತಿದ್ದಾರೆ. ಒಂದು ಕೋಣೆಯಲ್ಲಿ ಕೆಲವೇ ಜನರಿದ್ದರೆ ಮತ್ತೊಂದರಲ್ಲಿ ನೂರಾರು ಜನರಿದ್ದಾರೆ. ಒಂದು ಕೋಣೆ ಹೊಕ್ಕು ಸ್ವಲ್ಪ ಹೊತ್ತು ಕೇಳಿ ಸಾಕೆನಿಸಿ ಹೊರಬರುತ್ತೀರಿ. ಮತ್ತೊಂದು ಕೋಣೆಯಲ್ಲಿ ನಿಮ್ಮಾಸಕ್ತಿಯ ವಿಷಯವೊಂದರೆ ಬೋರ್ಡ್ ಕಂಡು ಒಳಹೊಕ್ಕುತ್ತೀರಿ. ಅಲ್ಲಿ ಕೂತು ಕೇಳಿಸಿಕೊಳ್ಳುತ್ತೀರಿ. ನಿಮ್ಮ ಸ್ನೇಹಿತರನೇಕರು ಅಲ್ಲೇ ಇದ್ದಾರೆ.  ನಿಮಗೂ ಏನೋ ಹೇಳಬೇಕೆನಿಸುತ್ತದೆ. ಕೈ ಎತ್ತುತ್ತೀರಿ. ಆಯೋಜಕರು ವೇದಿಕೆಗೆ ಕರೆದು ಮಾತಾಡಲು ಅವಕಾಶ ಕೊಡುತ್ತಾರೆ. ಮಾತಾಡುತ್ತೀರಿ, ಪ್ರಶ್ನೆಗಳಿಗೆ ಉತ್ತರಿಸುತ್ತೀರಿ, ಚರ್ಚೆ ನಡೆಸುತ್ತೀರಿ, ಅಲ್ಲೇ ಸಮಯಕಳೆಯುತ್ತೀರಿ. ಇಡೀ ಕಟ್ಟಡವು ಇಂತದ್ದೇ ಹಲವು ಕೋಣೆಗಳಿಂದ ತುಂಬಿದೆಒಂದೇ ಆಸಕ್ತಿಯ ಜನರು ತಂಡಗಳನ್ನು ರಚಿಸಿಕೊಂಡಿದ್ದಾರೆಹಲವು ವಿಷಯದ ಬಗ್ಗೆ ಕ್ಲಬ್ ಗಳನ್ನು ಮಾಡಿಕೊಂಡಿದ್ದಾರೆ. ಅವರು ಇವರ ಜಾಡು ಹಿಡಿದು ಇವರು ಅವರ ಜಾಡು ಹಿಡಿದು ಹೊರಟಿದ್ದಾರೆ‌. ಒಬ್ಬರನ್ನೊಬ್ಬರು ಹಿಂಬಾಲಿಸುತ್ತಾ ಇದ್ದಾರೆ‌. ಒಟ್ಟಾರೆ ಒಂದು ಮಾತಿನ ಕೋಣೆಗಳ ಪ್ರಪಂಚವೇ ಅಲ್ಲಿದೆ. ಇದ್ಯಾವ ಹಾಲಿವುಡ್ ಸಿನೆಮಾ ಕತೆ ಎಂದು ಯೋಚಿಸುತ್ತಿದ್ದೀರಾ? ಅಥವಾ ಜಾಗ ಜಗತ್ತಿನಲ್ಲಿ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಅಂತಹ ಕಟ್ಟವಾಗಲೀ ಜಾಗವಾಗಲೀ ಎಲ್ಲೂ ಇಲ್ಲ. ಆದರೆ ಇಂತಹದೊಂದು ಪರಿಕಲ್ಪನೆ ಈಗಾಗಲೇ ಸಾಕಾರಗೊಂಡಿದೆ. ಇದು ವಾಸ್ತವ ಜಗತ್ತಿನದ್ದೇ ಆದರೂ  ರೂಪುಗೊಂಡಿರುವುದು ಡಿಜಿಟಲ್ ರೂಪದಲ್ಲಿ! ನಿಮ್ಮ ಸ್ಮಾರ್ಟ್ ಫೋನಿನಲ್ಲೇ ಇಂತಹ ಮಾತಿನ ಕ್ಲಬ್ ಗಳ ಜಗತ್ತನ್ನು ನಿಮ್ಮ ಅಂಗೈಗೆ ತಂದಿಟ್ಟಿರುವುದುಕ್ಲಬ್ ಹೌಸ್’ ಎಂಬಒಂದು ಚಿಕ್ಕ ‌ಪ್!

ಕ್ಲಬ್ ಹೌಸೆಂಬ ‘ಕ್ಲಬ್ಬಿಗರ’ ತಾಣ:

ಸಾಮಾಜಿಕ ಜಾಲತಾಣಗಳ ಹೊಸ ಹೊಸ‌ ಮಾದರಿಗಳ ಪ್ರಯತ್ನದಲ್ಲಿ ಮೂಡಿಬಂದಿರುವ ಕ್ಲಬ್ ಹೌಸ್ ಕೂಡ ಸಾಮಾಜಿಕ ಜಾಲತಾಣದ ಒಂದು ರೂಪ. ಆದರೆ ಇಲ್ಲಿ ಬರಹಗಳ ಅಗತ್ಯವಿಲ್ಲ, ವೀಡಿಯೋಗಳ ಬಳಕೆಯಿಲ್ಲ. ಇದು ಆಡಿಯೊ ಡ್ರಾಪ್ ಇನ್ ತಾಣ‌. ಇಲ್ಲಿ ದನಿಗಳಿಗಷ್ಟೇ ಅವಕಾಶ. ಲೈವ್ ಮಾತುಕತೆಗಳು, ಗೋಷ್ಠಿಗಳು, ಚರ್ಚೆಗಳು, ತರಬೇತಿಗಳು, ಭಾಷಣಗಳು, ಹರಟೆಗಳು ಮುಂತಾದ ಎಲ್ಲದಕ್ಕೂ ಇದು ವೇದಿಕೆ. ಮೂಲದಲ್ಲಿ ಪಾಡ್ ಕಾಸ್ಟ್ ಗಳಿಗೆಂದು ರೂಪಿತವಾಗಿದ್ದ ಈ ಆಪ್ ಮರುವಿನ್ಯಾಸಗೊಂಡು ಮಾರ್ಚ್ 2020ರಲ್ಲಿ ಆಪಲ್ ಬಳಕೆದಾರರಿಗೆ ಬಿಡುಗಡೆಯಾಗಿತ್ತು. ಮೇ ತಿಂಗಳ ಕೊನೆಯಲ್ಲಿ ಆಂಡ್ರಾಯ್ಡ್ ಫೋನುಗಳಿಗೂ ಬಿಡುಗಡೆಯಾಗಿದ್ದೇ ತಡ, ಅಲ್ಪ ಸಮಯದಲ್ಲಿ ಜನಪ್ರಿಯವಾಗಿ ವಿಶ್ವದಾದ್ಯಂತ ಜನರನ್ನು ಸೆಳೆದು ಸಾಮಾಜಿಕ ಜಾಲತಾಣಗಳ ಪಟ್ಟಿಗೆ ಒಂದು ವಿಶಿಷ್ಟ ಸೇರ್ಪಡೆಯಾಗಿದೆ‌. ಆಡಿಯೋ-ವೀಡಿಯೋ ಕರೆಗಳಿಗೆ, ಸಭೆಗಳಿಗೆ ಈಗಾಗಲೇ ಇರುವ ಹಲವು ಆಪ್ ಗಳಿಗಿಂತಲೂ ಇದು ಅತಿವೇಗದಲ್ಲಿ ಗಳಿಸಿಕೊಳ್ಳುತ್ತಿರುವ ಜನಪ್ರಿಯತೆಯನ್ನು ಕಂಡ ಇತರ ಸಾಮಾಜಿಕ ಜಾಲತಾಣಗಳ ಕಂಪನಿಗಳು ತಾವೂ ಇಂತದ್ದೇ ಸೇವೆ ಒದಗಿಸಲು ಬೇಕಾದ ಸಿದ್ಧತೆ ಆರಂಭಿಸಿವೆ. 



ಅಂತರಜಾಲದ
ನಿರಂತರ ಸಾಧ್ಯತೆಗಳ ಫಲವಾದ ಕ್ಲಬ್ ಹೌಸ್  ಈಗಾಗಲೇ ವೈವಿಧ್ಯಮಯ ಚಾಟ್ ರೂಮ್ ಗಳ ದೊಡ್ಡತಾಣವಾಗುತ್ತಲಿದೆ. ಸಮಯಮಿತಿಯಿಲ್ಲದೇ, ವಿಷಯಮಿತಿಯೂ ಇಲ್ಲದೇ ನೇರ ಮಾತುಕತೆಗಳನ್ನು ನಡೆಸಬಹುದು. ನಿಮ್ಮ ಅಂಗಳವು ಮುಕ್ತವಾಗಿದ್ದಲ್ಲಿ ಯಾರುಬೇಕಾದರೂ ಬಂದು ಕೂತು ನಿಮ್ಮ ಮಾತು ಕೇಳಿಸಿಕೊಳ್ಳಬಹುದು, ಪರಸ್ಪರ ಮಾತಾಡಬಹುದು. ಗಂಟೆಗಟ್ಟಲೇ ಕಳೆಯಬಹುದುಮಾತುಕತೆ ಚರ್ಚೆಗಳನ್ನು ನಿರ್ವಾಹಕರು ಚಂದವಾಗಿ ನಡೆಸಬಹುದು. ಕೇಳುಗರಿದ್ದಲ್ಲಿ ಮಾತಿನ ಮಲ್ಲರಿಗಂತೂ ಹಬ್ಬ. ರಾಜಕೀಯ ಚರ್ಚೆಯಿಂದ ಹಿಡಿದು ಧಾರ್ಮಿಕ ಪ್ರವಚನಗಳವರೆಗೆ ಎಲ್ಲದಕ್ಕೂ ವೇದಿಕೆಯಾಗಿಸಬಹುದಾದ ತಾಣದಲ್ಲಿ ಈಗಾಗಲೇ ನೂರಾರು‌ ಸಾವಿರಾರು ಕ್ಲಬ್ ಗಳು, ತಂಡಗಳು ಇವೆ. ಇಲ್ಲಿಅರಳಿಕಟ್ಟೆ’ಯೂ ಇದೆ, ‘ಅಡ್ಡಕಸುಬಿಗಳ ಅಡ್ಡ’ವೂ ಇದೆ. ಒಂದು ಕ್ಲಬ್ಬಲ್ಲಿ ಹಂಸಲೇಖ ಸಂಗೀತಸಾಹಿತ್ಯದ ಅದ್ಭುತ ಮಾತುಕತೆಯೂ ನಡೆಯುತ್ತಿದ್ದರೆ ಮತ್ಯಾವುದೋ ಕ್ಲಬ್ಬಲ್ಲಿ ಮಂಗಳನ ಅಂಗಳದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ! ನೀವೇ ಒಂದು ಹೊಸ ಚಾಟ್ ರೂಮನ್ನೋ ಹೊಸ ಕ್ಲಬ್ಬನ್ನೋ ರಚಿಸಿ ಮಾತುಕತೆ ಶುರುಮಾಡಿಬಿಡಬಹುದು. ನಿಮ್ಮ ಪರಿಚಿತರದ್ದೇ ಒಂದು ಗುಂಪನ್ನು ಸೇರಿಸಿಕೊಂಡು ಖಾಸಗಿ ಮಾತುಕತೆಯನ್ನೂ ನಡೆಸಬಹುದು. ತೆರೆದ ಮತ್ತು ಮುಚ್ಚಿದ ಚಾಟ್ ರೂಂಗಳನ್ನು ಬಳಸಿಕೊಂಡು ನಿಗದಿತ ದಿನದಲ್ಲಿ ನಿಗದಿತ ಸಮಯಕ್ಕೆ ಇವೆಂಟುಗಳನ್ನೂ ಸಹ ಯೋಜಿಸಿಡಬಹುದು. ಒಂದು ವಿಷಯಕ್ಕೆ ಸಂಬಂಧಿಸಿದ ಕ್ಲಬ್ ಒಂದನ್ನು ರಚಿಸಿಕೊಂಡು ಅದರಲ್ಲಿ ಜನರನ್ನು ಸೇರಿಸಿಕೊಂಡು ಸಮಾನಾಸಕ್ತಿಯ ವಿಷಯಗಳ ಚರ್ಚೆ ನಡೆಸಬಹುದು. ಒದಗಿಬಂದ ಈ ಹೊಸವೇದಿಕೆಯ ಅವಕಾಶಗಳನ್ನು ಜನರು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆಂದರೆ ಈಗಾಗಲೇ ಕ್ಲಬ್ ಹೌಸಲ್ಲಿ ತರಗತಿಗಳು, ಪಾಠಗಳು, ಸಂಗೀತ ಗೋಷ್ಟಿಗಳು,  ದನಿಸಾಧ್ಯತೆಗಳ ವಿಶಿಷ್ಟ ಕಾರ್ಯಕ್ರಮಗಳು ಹುರುಪಿನಿಂದ ನಡೆಯುತ್ತಿವೆ. ನಿಮ್ಮಲ್ಲಿ ಮಾತಾಡುವ ಕಲೆಯಿದೆ, ವಿಷಯ ಪರಿಣಿತಿ ಇದೆ, ಅದನ್ನು ಜನರ ಮುಂದಿಡಲು ಗೊತ್ತಿದೆ ಅಂತಾದಲ್ಲಿ ನಿಮ್ಮ ಕೇಳುಗವರ್ಗಕ್ಕೆ ಕೊರತೆ ಇಲ್ಲ. ಬರಹರೂಪದಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಿಸಲಾಗದ ವಿಷಯಗಳನ್ನು ನೇರಮಾತುಗಳ ಮೂಲಕ ತೆರೆದಿಡುವ ಅವಕಾಶ ಇಲ್ಲಿದೆ.

ಇಷ್ಟು ಮುಕ್ತ ಸೌಲಭ್ಯಗಳಿರುವಾಗ ಇದರಿಂದ ಕೆಡುಕು ಇಲ್ಲದಿದೆಯೆ? ಖಂಡಿತ ಇದೆ. ಮಾತುಕತೆ ಅಂದಮೇಲೆ ಅಲ್ಲಿ ವಾದವಿವಾದಗಳಾಗುವುದು, ಕೆಸರೆರೆಚಾಟಗಳು ಸಾಮಾನ್ಯ. ಅದು ವಿಪರೀತಕ್ಕೆ ಹೋಗುವುದೂ ಇದೆ. ಇದು ಲೈವ್ ಮಾತುಕತೆಯಾದ್ದರಿಂದ ಇದರ ಆಡಿಯೊಗಳು ದಾಖಲಾಗಿ ಉಳಿಯುವುದಿಲ್ಲ. ಮಾತುಗಳಿಗೆ, ಪದಬಳಕೆಗಳಿಗೆ ಯಾವ ಫಿಲ್ಟರ್ ಇಲ್ಲ. ಇದಕ್ಕೆ ಬೇಕಾಗಬಹುದಾದ ಕಾನೂನುಗಳು ವಿಸ್ತೃತವಾಗಿ ರೂಪುಗೊಂಡಿಲ್ಲ. ಹಾಗಾಗಿಯೇ ಕೆಲ ದೇಶಗಳು ನಿಷೇಧ ಹೇರಲು ಹೊರಟಿವೆ. ಬೇರೆಲ್ಲಾ ಸಾಮಾಜಿಕ ಜಾಲತಾಣಗಳಂತೆ ಇದನ್ನು ಎಷ್ಟು ಸೃಜನಾತ್ಮಕವಾಗಿ, ಮಾಹಿತಿಪೂರ್ಣ, ಒಳ್ಳೆಯ ಕೆಲಸಗಳಿಗೆ ಬಳಸಬಹುದೋ, ಹಾಗೆಯೇ ಸಮಾಜದ್ರೋಹಿ, ದೇಶದ್ರೋಹಿ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ತಜ್ಞರ ಅನಿಸಿಕೆ.

ಕಷ್ಟಗಳು ನೂರಾಹನ್ನೊಂದು, ಬೇಕಾ ಮತ್ತೊಂದು?

ಇದೆಲ್ಲಾ ಕಾನೂನಾತ್ಮಕ ವಿಷಯಗಳಾದರೆ ಇಲ್ಲಿ ಮುಖ್ಯ ಸವಾಲು ನಮ್ಮ ವೈಯಕ್ತಿಕ ಸಮಯ ಮತ್ತು ತೊಡಗುವಿಕೆಯದ್ದು.. ಈಗಾಗಲೇ ಸೋಶಿಯಲ್ ನೆಟ್ವರ್ಕುಗಳ ವಿಪರೀತ ಬಳಕೆಯಿಂದ ಜನರ ಅಭಿರುಚಿ ಆಸಕ್ತಿಗಳು ಬದಲಾಗುತ್ತಿವೆ, ಹಲವರು ಹೆಚ್ಚಿನ ಸಮಯವನ್ನು ಅಲ್ಲೇ ಕಳೆಯುತ್ತಿದ್ದಾರೆ, ಎಷ್ಟೋ ಜನ ವ್ಯಸನಕ್ಕೆ ಒಳಗಾಗಿದ್ದಾರೆಜೀವನಕ್ಕೆ ಮತ್ತು ಜೀವಕ್ಕೆ ಅಪಾಯ ತಂದು ಕೊಂಡಿದ್ದಾರೆ. ಇಷ್ಟೆಲ್ಲಾ ಆದಮೇಲೂ ಮತ್ತೆ ಇಂಥದ್ದೊಂದರಲ್ಲಿ ತೊಡಗಬೇಕಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಾಗಿದೆ. ಫೇಸ್ಬುಕ್, ಟ್ವಿಟ್ಟರ್ ಮುಂತಾದ ತಾಣಗಳಿಗಿಂತ ಇದು ನಮ್ಮ ಹೆಚ್ಚಿನ ಸಮಯವನ್ನು ಕೊಲ್ಲಬಲ್ಲುದು ಎಂಬ ಅಭಿಪ್ರಾಯ ಈಗಾಗಲೇ ಬರುತ್ತದೆ. ನಮಗೆ ಬೇಕಾದ ವಿಷಯಗಳ ಬಗ್ಗೆ ನಮಗೆ ಬೇಕಾದಷ್ಟೆ ಸಮಯವನ್ನು ಬಳಸಿಕೊಂಡು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಬರಹ ಮುಂತಾದ ರೂಪಗಳಲ್ಲಿ ತಿಳಿದುಕೊಳ್ಳಲು ಮತ್ತು ಸಂವಹನಗಳನ್ನು ಮಾಡಲು ಸೌಲಭ್ಯಗಳಿರುವಾಗ ಹೀಗೆ ಮಾತುಗಳನ್ನು ಕೇಳುತ್ತಾ ಕೂರಲು, ಹರಟೆ ಹೊಡೆಯಲು ಸಮಯ ವ್ಯರ್ಥ ಮಾಡುವುದು ಸಮಂಜಸವೇ ಎಂದು ಹಲವರು ಕೇಳುತ್ತಿದ್ದಾರೆ. ಎಚ್ಚೆತ್ತುಕೊಂಡ ಹಲವರು ಕ್ಲಬ್ ಹೌಸ್ ತೊರೆದುಬಂದಿದ್ದಾರೆ.  ಕ್ಲಬ್ಬು ಪಬ್ಬಲ್ಲಿ ಕಾಲ ಕಳೆಯುವುದಕ್ಕಿಂತ ಈ ಕ್ಲಬ್ ಹೌಸಲ್ಲಿ ಕಾಲಕಳೆಯುವುದು ಎಷ್ಟೋ ಚೆನ್ನ ಎಂಬುದೂ ಹಲವರ ಸಮರ್ಥನೆ. ಜಗತ್ತು ಈಗ ಆಯ್ಕೆಗಳ ಆಗರ. ವೇದಿಕೆಗಳ ಸಾಗರ. ಇದರಲ್ಲಿ ನಮಗೆ ಯಾವುದು ಎಷ್ಟು ಯಾಕೆ ಬೇಕು ಎಂಬ ನಿರ್ಧಾರ ನಮಗಿರಬೇಕಷ್ಟೆ

ನಮ್ಮ ಡಿಜಿಟಲ್ ಜಾಡು ಹಲವರ ಕೈಯಲ್ಲಿ:

ಈಗಾಗಲೇ ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಹಲವೆಡೆ ಹಲವು ರೀತಿಯಲ್ಲಿ ಅನಿವಾರ್ಯವಾಗಿ ನಾವು ಬಿಟ್ಟುಕೊಡುವ ಸಂದರ್ಭವಿರುವಾಗ ಆಡಿಯೋ ತಾಣವು ನಮ್ಮ ದನಿಯ ಮಾದರಿಯನ್ನೂ ಸಂಗ್ರಹಿಸಿ ಬಳಸಿಕೊಳ್ಳುವ ಆತಂಕ‌ ಇಲ್ಲದಿಲ್ಲ. ಕೋಟ್ಯಂತರ ಜನರ ಆಡಿಯೋ ಮಾದರಿಗಳು ಒಂದು ದೊಡ್ಡ ಡೇಟಾ ಸಂಶ್ಲೇಷಣೆಗೆ ಭಂಡಾರವಾಗಲಿದೆಯಾ ಎಂಬ ಪ್ರಶ್ನೆಯನ್ನೂ ತಜ್ಞರು ಅಲ್ಲಗಳೆಯುತ್ತಿಲ್ಲ. ಕ್ಲಬ್ ಹೌಸಿನ ಮಾತುಕತೆಗಳನ್ನು ರೆಕಾರ್ಡ್ ಮಾಡುವಂತಿಲ್ಲ, ಪಠ್ಯರೂಪದಲ್ಲಿ ತರುವಂತಿಲ್ಲ, ಮರುಪ್ರಸಾರ ಅಥವಾ ಹಂಚುವಿಕೆಗೆ ಅವಕಾಶವಿಲ್ಲ ಎಂಬ ಶರತ್ತುಗಳಿವೆ. ಆದರೆ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಅದನ್ನು ಮಾರ್ಕೆಟ್ ಮಾಡಿಕೊಳ್ಳುವ ಅವಕಾಶಗಳಂತೂ ಇದೆ. ಇಷ್ಟರಲ್ಲೇ ಪಾವತಿಸಿ ಬಳಸುವಂತಹ ಹೆಚ್ಚು ಸೌಲಭ್ಯಗಳ ಚಾಟ್ ರೂಂಗಳನ್ನೂ ಒದಗಿಸುವ ಯೋಜನೆಯನ್ನೂ ಕ್ಲಬ್ ಹೌಸ್ ಮಾಡಿರುವುದಾಗಿ ಮಾಹಿತಿಗಳಿವೆ.  ಒಟ್ಟಾರೆ ಕ್ಲಬ್ ಹೌಸಿನ ಪಾರ್ಟಿಗಳು ಜೋರಾಗಿ ಶುರುವಾಗಿರುವುದಂತೂ ಹೌದಾದರೂ ಕ್ಲಬ್ ಹೌಸ್ ಮುಂದಿನ ದಿನಗಳಲ್ಲೂ ಇದೇ ಆಕರ್ಷಣೆ ಉಳಿಸಕೊಂಡು ಬೆಳೆಯಲಿದೆಯಾ ಎಂದು ಕಾದುನೋಡಬೇಕಿದೆ 

-ವಿಕಾಸ್ ಹೆಗಡೆ

೨೭ಜೂನ್ ೨೦೨೧ ರ 'ವಿಜಯ ಕರ್ನಾಟಕ ' ಪತ್ರಿಕೆಯ ಸಾಪ್ತಾಹಿಕ‌ಕ್ಕೆ ಬರೆದಿದ್ದು.