ಪುಟಗಳು

ಬುಧವಾರ, ಮೇ 28, 2014

Kannada typing in Smart phones - ಟೈಪಿಸು ಕನ್ನಡ ಡಿಂಡಿಮವ

ಸ್ಮಾರ್ಟ್ ಫೋನುಗಳಲ್ಲಿ ಕನ್ನಡದಲ್ಲಿ ಬರೆಯೋದು ಹೇಗೆ, ಅದಕ್ಕಾಗಿ ಇರುವ ಸೌಲಭ್ಯಗಳೇನು ಎನ್ನುವುದರ ಬಗ್ಗೆ ೨೮ ಮೇ ೨೦೧೪ರ  'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು ಬರಹ: ಪುಟ ೧ಪುಟ ೩ 
ಇದು ಸ್ಮಾರ್ಟ್ ಫೋನುಗಳ ಕಾಲ. ಆಂಡ್ರಾಯ್ಡ್, ವಿಂಡೋಸ್, ಐಫೋನುಗಳು ಜನರ ಕೈಯಲ್ಲಿ ನಲಿದಾಡುತ್ತಿವೆ. ವಿವಿಧ ಸುದ್ದಿತಾಣಗಳ ವೀಕ್ಷಣೆ, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕಜಾಲತಾಣಗಳ ಬಳಕೆ ಫೋನುಗಳಲ್ಲಿ ಹೆಚ್ಚಿದೆ. ಭಾರತದಲ್ಲಿ ಜನರು ತಮ್ಮ ತಮ್ಮ ತಾಯ್ನುಡಿಯಲ್ಲೇ ಫೋನುಗಳನ್ನು, ಅಂತರಜಾಲವನ್ನು ಬಳಸಲು ಬಯಸುತ್ತಿದ್ದಾರೆ. ಅದರಂತೆಯೇ ಕನ್ನಡಕ್ಕೂ ಕೂಡ ಬಹಳ ಬೇಡಿಕೆಯಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಅನುಕೂಲ ಮಾಡಿಕೊಡುವಂತಹ ಫೋನುಗಳಿವೆ.

ಕನ್ನಡಕ್ಕೆ ಬೆಂಬಲ:  ಈಗ ಜನಪ್ರಿಯವಾಗಿರುವ ಆಂಡ್ರಾಯ್ಡ್ ಫೋನುಗಳಲ್ಲಿ ಮೊದಲು ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಅಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಅಕ್ಷರಗಳು ಖಾಲಿ ಚೌಕಗಳಂತೆ ಕಾಣುತ್ತಿದ್ದವು. ಹಳೆಯ ಆಂಡ್ರಾಯ್ಡ್ ಆವೃತ್ತಿಗಳನ್ನು ಹೊಂದಿರುವ ಕೆಲವು ಬ್ರ್ಯಾಂಡ್ ಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡಕ್ಕೆ ಬೆಂಬಲವಿತ್ತು. ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ಆವೃತ್ತಿಯ ನಂತರ ಕನ್ನಡಕ್ಕೆ ಬೆಂಬಲ ನೀಡಲಾಗಿರುವುದರಿಂದ ಆ ಆವೃತ್ತಿ ಮತ್ತು ಅದರ ನಂತರದ ಆವೃತ್ತಿಗಳನ್ನು ಹೊಂದಿರುವ ಎಲ್ಲಾ ಫೋನುಗಳಲ್ಲೂ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಆದಾಗ್ಯೂ ಕೆಲವು ಬ್ರ್ಯಾಂಡ್ ಫೋನುಗಳಲ್ಲಿ ಕನ್ನಡ ಸರಿಯಾಗಿ ಮೂಡದಿರುವ ಬಗ್ಗೆ ತಿಳಿದುಬಂದಿದೆ. ಕೊಳ್ಳುವಾಗ ಈ ಬಗ್ಗೆ ಖಾತ್ರಿಪಡಿಸಿಕೊಂಡು ಕನ್ನಡ ಅಕ್ಷರಗಳು ಸರಿಯಾಗಿ ಕಾಣದಿರುವ ಫೋನುಗಳನ್ನು ತಿರಸ್ಕರಿಸುವುದು ಒಳ್ಳೆಯದು.

ಸಂದೇಶ ಕಳುಹಿಸಲು, ಚಾಟಿಂಗ್ ಮಾಡಲು, ಸಾಮಾಜಿಕ ತಾಣಗಳಲ್ಲಿ ಬರೆಯಲು ಕನ್ನಡವನ್ನು ಇಂಗ್ಲೀಶ್ ಲಿಪಿಯಲ್ಲಿ ಬರೆಯುವ ಅಭ್ಯಾಸವಿದೆ. ಆದರೆ ಇದು ಓದಲು ಬಹಳ ಕಷ್ಟವಾಗುವುದರ ಜೊತೆಗೆ ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೂ ತೊಡಕಾಗಿದೆ. ಹಾಗಾಗಿ ಕನ್ನಡವನ್ನು ಕನ್ನಡ ಲಿಪಿಯಲ್ಲೇ ಬರೆಯುವುದು ಒಳ್ಳೆಯದು. ಆಂಡ್ರಾಯ್ಡ್ ದೂರವಾಣಿಗಳಲ್ಲಿ ಮತ್ತು ಟ್ಯಾಬ್ಲೆಟ್ ಗಳಲ್ಲಿ ಕನ್ನಡವನ್ನು ಬೆರಳಚ್ಚು ಮಾಡಲು ಇರುವ ಸೌಲಭ್ಯಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ಮೊದಲನೆಯದಾಗಿ, ಸ್ಯಾಮ್ಸಂಗ್ ಕಂಪನಿಯ ಕೆಲವು ಮಾಡೆಲ್ ಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ’ಸ್ಯಾಮ್ಸಂಗ್ ಇಂಡಿಯನ್ ಕೀಬೋರ್ಡ್’ ಎನ್ನುವ ಸೌಲಭ್ಯ ಒದಗಿಸಲಾಗಿದೆ. ಅದರಲ್ಲಿ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಟೈಪಿಸಬಹುದು.  ಕೀಬೋರ್ಡ್ ಇನ್ಪುಟ್ ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡರೆ ಆಯಿತು.

ಎರಡನೆಯದಾಗಿ, ಕನ್ನಡ ಟೈಪ್ ಮಾಡಲು ಸಾಧ್ಯಮಾಡಿಕೊಡುವಂತಹ  ಹಲವಾರು ಕಿರುತಂತ್ರಾಂಶಗಳು ಅಂದರೆ appಗಳು ಇವೆ.  ಅವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಬಹುತೇಕ ತಂತ್ರಾಂಶಗಳು ಉಚಿತವಾಗಿ ದೊರೆಯುತ್ತವೆ. ಹಲವಾರು ಹವ್ಯಾಸಿ ತಂತ್ರಜ್ಞರು ಮತ್ತು ವೃತ್ತಿಪರ ಸಂಸ್ಥೆಗಳು ಇವುಗಳನ್ನು ತಯಾರಿಸಿದ್ದಾರೆ. ಇವುಗಳನ್ನು ಯಾವುದೇ ಇತರ ಸಾಮಾನ್ಯ ಆಪ್ ಗಳಂತೆ ಡೌನ್ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು.  ಕೆಲವು ತಂತ್ರಾಂಶಗಳು ಇಂಗ್ಲೀಷಿನ QUERTY ಕೀಬೋರ್ಡಿಗೆ ಅನುಗುಣವಾಗಿರುವ ’ನುಡಿ’ (ಕೆ.ಪಿ.ರಾವ್/ಕ.ಗ.ಪ) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ ಮತ್ತು ಕೆಲವು ತಂತ್ರಾಂಶಗಳು ಇನ್ ಸ್ಕ್ರಿಪ್ಟ್(inscript) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ.  ಇನ್ನುಳಿದ ಕೆಲವು ತಂತ್ರಾಂಶಗಳು ಅದರದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿರುತ್ತವೆ. ಬಳಸುವವರು ತಮಗೆ ಯಾವುದು ಸುಲಭವೆನಿಸುತ್ತದೋ ಅದನ್ನು ಅಳವಡಿಸಿಕೊಂಡು ಬಳಸಬಹುದು. ಕೆಲವು ತಂತ್ರಾಂಶಗಳು ಪದಸಲಹೆಗಳನ್ನೂ ಕೊಡುತ್ತವೆ. ಅಂದರೆ ನಾವು ಟೈಪ್ ಮಾಡಲು ಶುರುಮಾಡಿ ಒಂದೆರಡು ಅಕ್ಷರಗಳಾಗುತ್ತಿದ್ದಂತೆಯೇ ಮುಂದಿನ ಅಕ್ಷರಗಳು ಏನಿರಬಹುದು ಎಂಬುದನ್ನು ಊಹಿಸಿ ಅದು ಪೂರ್ತಿ ಪದಗಳನ್ನು ಸಲಹೆ ಮಾಡಿ ತೋರಿಸುತ್ತದೆ.

ಇವು ಕನ್ನಡ ಟೈಪ್ ಮಾಡಲು ಬಳಕೆಯಲ್ಲಿರುವ Appಗಳು.

೧. ಪದ ಕನ್ನಡ (Pada Kannada) : ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿದೆ. ನೇರವಾಗಿ ಕನ್ನಡ ಟೈಪಿಸಲು ಬೇಕಾಗುವ ಕೀಬೋರ್ಡ್ ಉಚಿತವಾಗಿ ಲಭ್ಯವಿದೆ.
೨. ಜಸ್ಟ್ ಕನ್ನಡ (Just Kannada Keyboard): ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿರುವ ಇದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಬೋರ್ಡ್ ಗಳಲ್ಲಿ ಒಂದು.
೩. ಎನಿ ಸಾಫ್ಟ್ (AnySoft Keyboard): ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಊಡಿಸಲು ವಿನ್ಯಾಸಗೊಂಡ ಮೊದಲ ಕೀಬೋರ್ಡ್ ಇದು. ಇದನ್ನು ಹಾಕಿಕೊಳ್ಳಲು, ಮೊದಲು ಈ ಎನಿಸಾಫ್ಟ್ ತಂತ್ರಾಂಶ ಅಳವಡಿಸಿಕೊಂಡು ಅನಂತರ Kannada for AnySoft ಎನ್ನುವ ಆಪ್ ಹಾಕಿಕೊಳ್ಳಬೇಕು. ಇದರಲ್ಲಿ ಕ.ಗ.ಪ.(ನುಡಿ) ಹಾಗೂ ಇನ್ ಸ್ಕ್ರಿಪ್ಟ್ ವಿನ್ಯಾಸಗಳ ಆಯ್ಕೆ ಇದೆ.
೪. ಪಾಣಿನಿ (Kannada Panini Keypad): ಆಂಡ್ರಾಯ್ಡ್ ಫೋನುಗಳು ಬರುವುದಕ್ಕಿಂತಲೂ ಮೊದಲು ಭಾರತೀಯ ಭಾಷೆಗಳಲ್ಲಿ ಬರೆಯಲು ಸಹಾಯವಾಗುತ್ತಿದ್ದ ಈ ತಂತ್ರಾಂಶದ ಆಂಡ್ರಾಯ್ಡ್ ಆವೃತ್ತಿಯೂ ಲಭ್ಯವಿದೆ. ಇದು ತನ್ನದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿದೆ. ವ್ಯಂಜನದ ಕೀಯನ್ನು ಒತ್ತುತ್ತಿದ್ದಂತೆಯೇ ಸ್ವರಗಳ ಕೀಗಳು ಬರುತ್ತವೆ. ದೊಡ್ಡ ದೊಡ್ಡ ಗಾತ್ರದ ಕೀಗಳಿವೆ.
೫. ಲಿಪಿಕಾರ್ (Lipikar Kannada): ಇದರಲ್ಲಿ ಇಂಗ್ಲೀಷಿನ ಕೀಗಳೇ ಇದ್ದು ಒಂದೊಂದು ಕೀಯನ್ನು ಒತ್ತುತ್ತಿದ್ದಂತೆಯೇ ಅದಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳ ಆಯ್ಕೆ ಬರುತ್ತದೆ.
೬. ಸ್ವರಚಕ್ರ (Swarachakra Kannada Keyboard): ಇದರ ಕೀಬೋರ್ಡ್ ವಿನ್ಯಾಸ ಕೊಂಚ ವಿಭಿನ್ನವಾಗಿದೆ. ವ್ಯಂಜನಗಳನ್ನು ಕೊಡಲಾಗಿದ್ದು ಒಂದು ವ್ಯಂಜನಾಕ್ಷರವನ್ನು ಮುಟ್ಟಿದಾಗ ಅದರ ಸುತ್ತಲೂ ಚಕ್ರಾಕಾರವಾಗಿ ಸಂಬಂಧಿಸಿದ ಗುಣಿತಾಕ್ಷರಗಳು ಕಾಣುತ್ತವೆ. ಅದರಲ್ಲಿ ಬೇಕಾದ್ದನ್ನು ಮುಟ್ಟಿದರೆ ಆ ಅಕ್ಷರ ಮೂಡುತ್ತದೆ. ವೇಗವಾಗಿ ಬರೆಯಲು ಇದು ಅಷ್ಟು ಅನುಕೂಲಕಾರಿಯಾಗಿಲ್ಲ.
೭. ಕನ್ನಡ-ಹಿಂದಿ ಕೀಬೋರ್ಡ್ (Kannada-Hindi Keyboard): ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು, ಸ್ವರ ಚಿನ್ಹೆಗಳಿಗೆ ಪ್ರತ್ಯೇಕ ಕೀಗಳಿವೆ. 
೮. ಬ್ರಾಹ್ಮಿ (Brahmi Kannada Keyboard): ವರ್ಣಮಾಲೆಯ ಅನುಕ್ರಮದಲ್ಲೇ ಅಕ್ಷರಗಳನ್ನು ಕೊಡಲಾಗಿದೆ. ವ್ಯಂಜನ ಮತ್ತು ಸ್ವರಗಳನ್ನು ಒಂದಾದ ಮೇಲೊಂದು ಒತ್ತಿ ಸೇರಿಸಿ ಅಕ್ಷರಗಳನ್ನು ಮೂಡಿಸಬೇಕು.
೯. ಸ್ಪರ್ಶ್ (Sparsh Kannada Keyboard): ಇದರಲ್ಲಿ ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು ಒಂದು ಅಕ್ಷರದ ಗುಂಡಿಯನ್ನು ಒತ್ತಿದ್ದಾಗ ಅದರ ಗುಣಿತಾಕ್ಷರಗಳ ಆಯ್ಕೆಯನ್ನು ತೋರಿಸುತ್ತದೆ. ಅಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ವ್ಯಂಜನ ಮತ್ತು ಸ್ವರಗಳನ್ನು ಬೇರೆ ಬೇರೆ ಗುಂಡಿ ಒತ್ತಿ ಸೇರಿಸುವುದು ಇಷ್ಟವಾಗದವರಿಗೆ ಇದು ಅನುಕೂಲವಾಗಬಹುದು.

ಈ ಕೆಳಗಿನವುಗಳಲ್ಲಿ ಹಲವಾರು ಭಾಷೆಗಳ ಆಯ್ಕೆ ಇದ್ದು ಇನ್ ಸ್ಟಾಲ್ ಮಾಡಿಕೊಂಡಾದ ಮೇಲೆ ಅದನ್ನು ತೆರೆದು ’ಕನ್ನಡ’ವನ್ನು ಸಕ್ರಿಯಗೊಳಿಕೊಳ್ಳಬೇಕಾಗುತ್ತದೆ.

೧೦. ಮಲ್ಟಿಲಿಂಗ್ (Multiling Keyboard): ಇನ್ ಸ್ಕ್ರಿಪ್ಟ್ ಮಾದರಿಯ ವಿನ್ಯಾಸ ಹೊಂದಿದೆ.
೧೧. ಅಡಾಪ್ಟೆಕ್ಸ್ಟ್ (Adaptxt keyboard): ಇದರಲ್ಲಿ ಕನ್ನಡ ಮತ್ತು ಕಂಗ್ಲೀಷ್ ಎನ್ನುವ ಎರಡು ಬಗೆಯ ಕೀಬೋರ್ಡುಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಕನ್ನಡವನ್ನು ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯುವವರಿಗೂ ಕಂಗ್ಲೀಷ್ ಕೀಲಿಮಣೆಯು ಪದಸಲಹೆಗಳನ್ನು ಕೊಡುತ್ತದೆ.
೧೨. ಇಂಡಿಕ್ ಕೀಬೋರ್ಡ್ (Indic Keyboard): ಇದು ಭಾರತೀಯ ಭಾಷೆಗಳಿಗಾಗಿ ಇರುವ ಕೀಬೋರ್ಡ್ ಆಗಿದ್ದು ಕನ್ನಡದಲ್ಲಿ ಜನಪ್ರಿಯವಿರುವ ಮೂರು ಕೀಬೋರ್ಡ್ ವಿನ್ಯಾಸಗಳಾದ ನುಡಿ, ಇನ್ ಸ್ಕ್ರಿಪ್ಟ್, ಟ್ರಾನ್ಸಿಲಿಟೆರೇಶನ್ ಮಾದರಿಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು.
೧೩. ಯುಕೀಬೋರ್ಡ್ (Ukeyboard): ಇದು ಗೂಗಲ್ ಟ್ರಾನ್ಸಿಟರೇಶನ್ ನಂತಹ ಕೀಬೋರ್ಡ್. ಇಂಗ್ಲೀಷಿನ ಕೀಗಳೇ ಇದ್ದು ಅವುಗಳನ್ನು ಒತ್ತುತ್ತಿದ್ದಂತೆ ಅದಕ್ಕೆ ತಕ್ಕುದಾಗಿ ಕನ್ನಡ ಪದಗಳು ಮೂಡುತ್ತಾ ಹೋಗುತ್ತವೆ. ಕೆಲವು ಕೀಗಳನ್ನು ಒತ್ತುತ್ತಿದ್ದಂತೆ ಮುಂದಿನ ಸಾಧ್ಯತೆಗಳ ಬಗ್ಗೆ ಪದಸಲಹೆಗಳನ್ನು ಕೊಡುತ್ತವೆ. ಆದರೆ ಇದನ್ನು ಬಳಸಲು ಅಂತರಜಾಲ ಸಂಪರ್ಕದ ಅಗತ್ಯ.
೧೪. MILE Indic Keyboards: ಇನ್ ಸ್ಕ್ರಿಪ್ಟ್ ಹಾಗೂ ಕ.ಗ.ಪ (ನುಡಿ) ವಿನ್ಯಾಸದ ಕೀಬೋರ್ಡ್ ಇದೆ.

'ಯುಕೀಬೋರ್ಡ್' ಹೊರತುಪಡಿಸಿ ಈ ಮೇಲಿನ ಎಲ್ಲಾ ಆಪ್ ಗಳನ್ನು ಒಮ್ಮೆ ಅಳವಡಿಕೊಂಡಮೇಲೆ ಅಂತರಜಾಲ(ಡೇಟಾ) ಸಂಪರ್ಕ ಇಲ್ಲದೆಯೂ ಬಳಸಬಹುದು. ಬೇಕಾದ ಕೀಬೋರ್ಡ್ ಅಳವಡಿಸಿಕೊಂಡಮೇಲೆ ಫೋನ್ ’ಸೆಟ್ಟಿಂಗ್ಸ್’ ತೆರೆಯಬೇಕು. ಅದರಲ್ಲಿ ’ಲ್ಯಾಂಗ್ವೇಜ್ ಮತ್ತು ಇನ್ಪುಟ್’ ಎನ್ನುವ ಆಯ್ಕೆ ಇರುತ್ತದೆ. ಅದನ್ನು ತೆರೆದಾಗ ಅಲ್ಲಿ ನೀವು ಇನ್ ಸ್ಟಾಲ್ ಮಾಡಿಕೊಂಡ ಕೀಬೋರ್ಡ್ ಹೆಸರುಗಳು ಕಾಣುತ್ತದೆ. ಅದರ ಪಕ್ಕದಲ್ಲಿರುವ ಚೆಕ್ ಬಾಕ್ಸ್ ನ್ನು ಒತ್ತಿ ಅದನ್ನು ಆಯ್ಕೆ ಮಾಡಿಕೊಂಡರೆ ಅದು ನಿಮ್ಮ ಕೀಬೋರ್ಡ್ ಆಯ್ಕೆ ಪಟ್ಟಿಗೆ ಸೇರುತ್ತದೆ. ಅನಂತರ ನಿಮಗೆ ಎಲ್ಲಿ ಕನ್ನಡ ಬರೆಯಲು ಬೇಕಾಗುತ್ತದೆಯೋ ಅಂದರೆ ಮೆಸೇಜ್, ವ್ಯಾಟ್ಸಪ್, ಫೇಸ್ ಬುಕ್ ಅಥವಾ ಮುಂತಾದ ಯಾವುದೇ ಕಡೆ ಟೈಪ್ ಮಾಡುವ ಜಾಗದಲ್ಲಿ ಕೀಬೋರ್ಡ್ ಇನ್ಪುಟ್ ಆಯ್ಕೆಗೆ ಹೋಗಿ ಈ ಕನ್ನಡ ಕೀಬೋರ್ಡ್ ಆಯ್ಕೆ ಮಾಡಿಕೊಂಡು ಕನ್ನಡವನ್ನು ನೇರವಾಗಿ ಟೈಪಿಸಬಹುದು.  ಕನ್ನಡ ಬೇಡದಿದ್ದಾಗ ಇಂಗ್ಲೀಷ್ ಕೀಬೋರ್ಡ್ ಆಯ್ಕೆಗೆ ಮರಳಬಹುದು.

ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಬರೆಯಲು ಇರುವ ಇಷ್ಟೆಲ್ಲಾ ಸೌಲಭ್ಯಗಳ ಬಗ್ಗೆ ಹೇಳಿದಮೇಲೆ ವಿಂಡೋಸ್ ಫೋನ್ ಮತ್ತು ಐಫೋನ್ ಹೊಂದಿರುವವರು ಕನ್ನಡ ಬರೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೂ ಉತ್ತರವಿದೆ.

ವಿಂಡೋಸ್ ೮ ಆವೃತ್ತಿಯ ಫೋನುಗಳಲ್ಲಿ ಕನ್ನಡಕ್ಕೆ ಬೆಂಬಲವಿದೆ. ಕನ್ನಡ ಟೈಪ್ ಮಾಡಲು 'ಟೈಪ್ ಕನ್ನಡ'(Type Kannada) ಎನ್ನುವ ಒಂದು ತಂತ್ರಾಂಶವಿದೆ. ವಿಂಡೋಸ್ ಸ್ಟೋರ್ ನಲ್ಲಿ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.  ಅನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಆದರೆ ಇದನ್ನು ಬಳಸಲು ಅಂತರಜಾಲ(ಡೇಟಾ) ಸಂಪರ್ಕವಿರಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು. ಆಂಡ್ರಾಯ್ಡ್ ನಂತೆ ಡೇಟಾ ಸಂಪರ್ಕವಿಲ್ಲದಿದ್ದರೂ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ತಂತ್ರಾಂಶಗಳು ವಿಂಡೋಸ್ ಫೋನಿಗೆ ಇನ್ನೂ ಲಭ್ಯವಿಲ್ಲ.

ಐಫೋನಿನಲ್ಲಿ iOS-4 ರ ನಂತರದ ಆವೃತ್ತಿಗಳಲ್ಲಿ ಕನ್ನಡಕ್ಕೆ ಬೆಂಬಲ ನೀಡಲಾಗಿದೆ. ಆದರೆ ಇದರಲ್ಲೂ ಕೂಡ ಆಂಡ್ರಾಯ್ಡ್ ನಂತೆ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ಸೌಲಭ್ಯ ಇನ್ನೂ ಲಭ್ಯವಿಲ್ಲ. ಆಪಲ್ ಸ್ಟೋರ್ ನಲ್ಲಿ Kannada for iPhone ಎಂಬ app ಡೌನ್ಲೋಡ್ ಮಾಡಿ ಅಳವಡಿಸಿಕೊಂಡು ಕನ್ನಡವನ್ನು ಬರೆಯಬಹುದು. ಇದನ್ನು ಆಫ್ ಲೈನ್ ಮತ್ತು ಆನ್ ಲೈನ್ ಬಳಕೆ ಮಾಡಬಹುದು.  iTransliterate ಎನ್ನುವ ಮತ್ತೊಂದು ತಂತ್ರಾಂಶದ ಮೂಲಕವೂ ಕನ್ನಡ ಬರೆಯಬಹುದು. ಅಳವಡಿಸಿಕೊಂಡ ನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು.

ಅಭ್ಯಾಸವಿಲ್ಲದವರಿಗೆ ಕನ್ನಡ ಟೈಪ್ ಮಾಡಲು ಮೊದಮೊದಲು ಸ್ವಲ್ಪ ತೊಡಕೆನಿಸಿದರೂ ಆಮೇಲೆ ಸುಲಭವಾಗುತ್ತದೆ. ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಸೌಲಭ್ಯಗಳಿರುವಾಗ ನಾವು ಹಿಂದೆ ಬೀಳುವುದು ಬೇಡ. ಎಲ್ಲೆಡೆಯೂ ಕನ್ನಡವನ್ನೇ ಬಳಸೋಣ. ಕನ್ನಡವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ಎಲ್ಲೆಡೆಯಲ್ಲೂ ಬಳಕೆಯಲ್ಲಿ ಉಳಿಯಲು ಮತ್ತು ಬೆಳೆಯಲು ಇದು ಅತ್ಯಗತ್ಯ.

****
'ನುಡಿ' ವಿನ್ಯಾಸದ 'ಪದ' ಕೀಬೋರ್ಡ್ 
ಬ್ರಾಹ್ಮಿ ಕೀಬೋರ್ಡ್ 
Inscript ವಿನ್ಯಾಸದ ಕೀಬೋರ್ಡ್ 

ಶುಕ್ರವಾರ, ಮೇ 23, 2014

ಭದ್ರಾವತಿಯಲ್ಲಿ ಸಾಯಿಭಕ್ತರ ನಿಸ್ವಾರ್ಥ ನೀರು ಸೇವೆ

ಇದು ೨೦೦೯ರಲ್ಲಿ  'ದಟ್ಸ್ ಕನ್ನಡ' ಸುದ್ದಿತಾಣಕ್ಕಾಗಿ  ಬರೆದಿದ್ದ  ಬರಹ . ಇದು ಇವತ್ತಿಗೂ ಪ್ರಸ್ತುತವಾಗಿರುವುದರಿಂದ  ಇಲ್ಲಿ ಹಾಕುತ್ತಿದ್ದೇನೆ 

***


"ಜಪ ಮಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಪವಿತ್ರವಾದವು" - ಇದು ಶ್ರೀ ಸತ್ಯ ಸಾಯಿಬಾಬಾ ತಮ್ಮ ಭಕ್ತಕೋಟಿಗೆ ಸದಾ ಹೇಳುವ ಮಾತುಗಳು. ಇದನ್ನು ಅಕ್ಷರಶ: ಪಾಲಿಸುತ್ತಿರುವವರು ಭದ್ರಾವತಿಯ ಸಾಯಿಭಕ್ತರು. 

ಬೇಸಿಗೆಯ ಪ್ರಯಾಣ ಎಂಬುದೇ ಒಂದು ಹಿಂಸೆ. ಆಗಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಎಲ್ಲ ಕಡೆ ಕುಡಿಯುವ ಒಳ್ಳೆಯ ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಅದರಲ್ಲೂ ಮಕ್ಕಳು ಮರಿ ಕಟ್ಟಿಕೊಂಡು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವಾಗ ಕುಡಿಯುವ ನೀರಿನ ಅಗತ್ಯ ಬಹಳ. ಬೇಸಿಗೆಯಲ್ಲಿ ಬಸ್ ಪ್ರಯಾಣ ಮಾಡುವವರು ಭದ್ರಾವತಿ ಮೂಲಕ ಹಾದು ಹೋದರೆ ಬಸ್ ನಿಲ್ದಾಣದ ಒಳಗೆ ಬರುತ್ತಿದ್ದ ಹಾಗೆಯೇ "ನೀರು.. ನೀರು...ಫ್ರೀ ಕೋಲ್ಡ್ ವಾಟರ್" ಎಂದು ಕೇಳಿಕೊಂಡು ಬರುವವರನ್ನು ನೋಡಿರಬಹುದು. ಆ ತಂಪಾದ ನೀರನ್ನು ಕುಡಿದು ದಾಹ ತಣಿಸಿಕೊಂಡಿರಲೂಬಹುದು. ಇದು ಭದ್ರಾವತಿ ಸಾಯಿಭಕ್ತರ ಜನಸೇವೆಯ ಕೆಲಸಗಳಲ್ಲಿ ಒಂದು. ಬೇಸಿಗೆ ಶುರುವಾದ ಕೂಡಲೇ ಬಸ್ ನಿಲ್ದಾಣದಲ್ಲಿ ಇವರು ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಾರೆ. ಬೇಸಿಗೆಯ ಎಲ್ಲಾ ದಿನಗಳಲ್ಲಿಯೂ ಕೂಡ ಬೆಳಗ್ಗಿನಿಂದ ಸಂಜೆಯವರೆಗೂ ಆ ವ್ಯವಸ್ಥೆ ಇರುತ್ತದೆ. ಮಾಮೂಲು ನೀರನ್ನು ಹಾಗೆಯೇ ಕುಡಿದರೆ ದಾಹ ನೀಗುವುದಿಲ್ಲವೆಂದು ಇದಕ್ಕೆ ಶುದ್ಧವಾದ ನೀರಿನಲ್ಲೇ ಮಾಡಿದ ಐಸ್ ಕೂಡ ಸೇರಿಸಿ ಸ್ವಲ್ಪ ತಂಪು ಮಾಡಿರುತ್ತಾರೆ. ದೂರ ದೂರದಿಂದ ಬರುವ ಬಸ್ಸುಗಳು ಕೆಲವೇ ನಿಮಿಷಗಳ ಕಾಲ ಅಲ್ಲಿ ನಿಲ್ಲುತ್ತವೆ. ಅದರಲ್ಲಿನ ಪ್ರಯಾಣಿಕರಿಗೆ ಕೆಳಗೆ ಇಳಿದು ನೀರು ಕುಡಿಯುವಷ್ಟು ಸಮಯವಿರುವುದಿಲ್ಲ ಮತ್ತು ಶುದ್ಧ ನೀರು ಸಿಗುವ ಖಾತ್ರಿಯೂ ಇರುವುದಿಲ್ಲ. ಆದ್ದರಿಂದ ಅಂತಹ ದೂರ ಪ್ರಯಾಣದ ಬಸ್ಸುಗಳ ಬಳಿಗೆ ಸ್ವಯಂ ಸೇವಕರೇ ಖುದ್ದಾಗಿ ಹೋಗಿ "ನೀರು ಬೇಕೇ" ಎಂದು ಕೇಳಿ ಕೊಡುತ್ತಾರೆ. ಬಾಟಲಿಗೆ ನೀರು ತುಂಬಿಸಿಕೊಡುತ್ತಾರೆ. ಬಿರು ಬಿಸಿಲಿಗೆ, ಬೇಸಿಗೆಯ ಬಿಸಿಗೆ ಸಿಕ್ಕ ಪ್ರಯಾಣಿಕರು ದಾಹ ತೀರಿಸಿಕೊಂಡು ಮುಂದೆ ಪ್ರಯಾಣ ಬೆಳೆಸುತ್ತಾರೆ. 

ಹೀಗೆ ನೀರು ಒದಗಿಸುತ್ತಿದ್ದ ಭಕ್ತರನ್ನು ಮಾತನಾಡಿಸಿ ಇದರಿಂದ ನಿಮಗೆ ಏನು ದೊರೆಯುತ್ತದೆ ಎಂದು ಕೇಳಿದಾಗ ಬಿಡುವಿನ ಸಮಯದಲ್ಲಿ ಇಂತಹ ಕೈಲಾದ ಸೇವೆ ಮಾಡಿದರೆ ಮನಸಿಗೆ ಏನೋ ಸಣ್ಣ ತೃಪ್ತಿಯ ದೊರೆಯುತ್ತದೆ ಮತ್ತು ಸತ್ಯ ಸಾಯಿಬಾಬಾರವರ ಮಾರ್ಗದರ್ಶನದಿಂದ, ಭಕ್ತಿಯಿಂದ ಈ ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾವ ಅಪೇಕ್ಷೆಯೂ ಇಲ್ಲ ಎಂದರು. ಮೊದಲು ಬಹಳ ಜನ ಈ ಸೇವೆ ಮಾಡಲು ಬರುತ್ತಿದ್ದರು, ಈಗ ಈ ಕೆಲಸಕ್ಕೆ ಜನರನ್ನು ಹುಡುಕಬೇಕಾಗಿದೆ, ಅದರಲ್ಲೂ ಕೂಡ ಈಗಿನ ಮಕ್ಕಳಿಗೆ, ಯುವಕರಿಗಂತೂ ಇಂತಹ ಕೆಲಸಗಳಲ್ಲಿ ಆಸಕ್ತಿಯೇ ಇಲ್ಲ ಎಂದು ವ್ಯಥೆ ಪಟ್ಟುಕೊಂಡರು. 

ಇದರ ಹೊರತಾಗಿ ಭದ್ರಾವತಿಯ ಸಾಯಿಬಾಬಾ ಮಂದಿರದ ಶಾಲೆಯಲ್ಲಿ ಬಡವರಿಗಾಗಿ ಉಚಿತ ಮೆಡಿಕಲ್ ಕ್ಯಾಂಪ್ ಗಳು ಪ್ರತೀವಾರ ನಡೆಯುತ್ತವೆ. ಸೇವಾ ಮನೋಭಾವದ ಕೆಲವು ವೈದ್ಯರು ಇದನ್ನು ನಡೆಸಿಕೊಡುತ್ತಾರೆ. "ಜನಸೇವೆಯೇ ಜನಾರ್ದನ ಸೇವೆ" ಎಂಬುದು ಇವರ ಧ್ಯೇಯ. ಬೇರೆ ಕೆಲವು ಊರುಗಳಲ್ಲಿರುವ ಸಾಯಿ ಭಕ್ತರು ಕೂಡ ಈ ಸೇವೆಯನ್ನು ನಡೆಸುತ್ತಾರೆ. ಆದರೆ ಭದ್ರಾವತಿಯ ಸಾಯಿ ಭಕ್ತರ ಈ ಕುಡಿಯುವ ನೀರಿನ ಸೇವೆ ಹಲವಾರು ವರ್ಷಗಳಿಂದ ಅಬಾಧಿತವಾಗಿ ನೆಡೆದುಕೊಂಡು ಬರುತ್ತಿದೆ. ಜನಸೇವೆಯ ಮನಸ್ಸಿರುವ ಸಾಯಿಭಕ್ತರು ಸ್ವಯಂಪ್ರೇರಿತರಾಗಿ ಇದರಲ್ಲಿ ಭಾಗವಹಿಸುತ್ತಾರೆ. ಇಷ್ಟೇ ದಿನ ಇಷ್ಟೇ ಹೊತ್ತು ಮಾಡಬೇಕೆಂಬ ನಿಯಮವಿಲ್ಲದೇ ತಮಗೆ ಬಿಡುವಿರುವಷ್ಟು ಸಮಯವನ್ನು ತೊಡಗಿಸಿಕೊಂಡು ನಡೆಸಿಕೊಂಡು ಬರುತ್ತಿರುವ ಈ ಸೇವೆ ಮಾದರಿಯಾಗಿದೆ. ದೇವರು, ಧರ್ಮ, ಭಕ್ತಿ ಎಂಬುದು ಇಂತಹ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾದರೆ ಅದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ ಎಂಬುದಕ್ಕೇ ಇದೇ ಸಾಕ್ಷಿ.

ಬುಧವಾರ, ಮೇ 14, 2014

ನಮ್ಮ ಮನೆಗಳಿಗೆ ವಿದ್ಯುತ್ ಹೇಗೆ ತಲುಪುತ್ತದೆ?

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(BESCOM)  M.D. ಆಗಿದ್ದ ಮಣಿವಣ್ಣನ್  ಅವರು ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಉತ್ಪಾದನೆಯಾದ ವಿದ್ಯುತ್ ಬೆಂಗಳೂರಿನಲ್ಲಿರುವ ಮನೆಗಳಿಗೆ ಬಂದು ತಲುಪುವುದು ಹೇಗೆ ಎಂಬುದರ ಬಗ್ಗೆ ಹಿಂದೊಮ್ಮೆ ಇಂಗ್ಲೀಷಿನಲ್ಲಿ ಬರೆದಿದ್ದರು. ಜನರಿಗೆ ಅರಿವು ಮೂಡಿಸುವುದಕ್ಕಾಗಿ ಬರೆದಿದ್ದ ಆ ಮಾಹಿತಿ ಬರಹವು ಇನ್ನೂ ಹೆಚ್ಚಿನ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ನಾನು ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದೆ. ಅದನ್ನು ಇಲ್ಲಿ ಹಾಕುತ್ತಿದ್ದೇನೆ. ಸಾಮಾನ್ಯ ಓದುಗರಿಗೂ ಅರ್ಥವಾಗುವುದಕ್ಕಾಗಿ ಅಗತ್ಯವಿದ್ದಷ್ಟೇ ಮಾತ್ರ ತಾಂತ್ರಿಕ ವಿಷಯಗಳನ್ನು ಇದರಲ್ಲಿ ಹೇಳಲಾಗಿದೆ. 
ನಮ್ಮ ಮನೆಗೆ ವಿದ್ಯುತ್ತು ಹೇಗೆ ಬರುತ್ತದೆ ಎನ್ನುವುದು ಬಹಳ ಆಸಕ್ತಿಯ ವಿಷಯ. ಇದನ್ನು ತಿಳಿದುಕೊಳ್ಳುವುದೂ ಮುಖ್ಯ. ಇದನ್ನು ತಿಳಿದುಕೊಳ್ಳುವುದರಿಂದ ಮನೆಗೆ ವಿದ್ಯುತ್ ಪೂರೈಕೆಯಲ್ಲಾಗುವ ಏರುಪೇರಿನ ಬಗ್ಗೆಯೂ ಗೊತ್ತಾಗುತ್ತದೆ.  ಕೆಲವೊಮ್ಮೆ ವಿದ್ಯುತ್ ಸರಬರಾಜು ಏಕೆ ಕೈಕೊಡುತ್ತದೆ ಎಂಬ ವಿಷಯ ಇದರಿಂದ ಮನದಟ್ಟಾಗುತ್ತದೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರ(RTPS)ಲ್ಲಿ (ಅಥವಾ ಬೇರೆ ಯಾವುದೇ ಕಡೆ) ಉತ್ಪಾದನೆಯಾದ ವಿದ್ಯುತ್ ಐದು ಹಂತಗಳಲ್ಲಿ ನಮ್ಮ ಮನೆಗಳಿಗೆ ತಲುಪುತ್ತದೆ.
೧. ಮೊದಲ ಹಂತವೆಂದರೆ RTPSನಿಂದ ಬೆಂಗಳೂರಿಗೆ ಸಾಗಣೆ. ಈ ವಿದ್ಯುತ್ ಸಾಗಣೆ ೪೦೦KV (ಕಿಲೋ ವೋಲ್ಟ್ಸ್) ಯಷ್ಟು ಹೈವೋಲ್ಟೇಜಿನಲ್ಲಾಗುತ್ತದೆ. ನೆಲಮಂಗಲ/ಪೀಣ್ಯ ರಸ್ತೆಯಲ್ಲಿ ಬರುವಾಗ ಕಾಣಿಸುವ ದೊಡ್ಡ ವಿದ್ಯುತ್ ಗೋಪುರಗಳೇ ಈ ೪೦೦KV ವಿದ್ಯುತ್ತನ್ನು ಸಾಗಿಸುವಂತವು. ಈ ವಿದ್ಯುತ್ ಲೈನುಗಳು ಮಾಸ್ಟರ್ ರೀಸಿವಿಂಗ್ ಸ್ಟೇಷನ್ನುಗಳೆಂದು ಕರೆಯಲ್ಪಡುವ ದೊಡ್ಡ ವಿದ್ಯುತ್ ಸ್ಟೇಶನ್ನುಗಳನ್ನು ತಲುಪುತ್ತವೆ. ಇಲ್ಲಿ ದೊಡ್ಡ ದೊಡ್ಡ ಟ್ರಾನ್ಸ್ ಫಾರ್ಮರುಗಳು ೪೦೦KV ವಿದ್ಯುತ್ತನ್ನು ೨೨೦KVಗೆ ಇಳಿಸುತ್ತವೆ. ಈ ಟ್ರಾನ್ಸ್ ಫಾರ್ಮರುಗಳನ್ನು ಪವರ್ ಟ್ರಾನ್ಸ್ ಫಾರ್ಮರುಗಳೆನ್ನುತ್ತಾರೆ. ಇವುಗಳ ಸಾಮರ್ಥ್ಯ ೫೦೦ ಮೆಗಾವ್ಯಾಟ್. ಅಂದರೆ ಕಾಲುಭಾಗ ಬೆಂಗಳೂರಿಗೆ ಸಾಕಾಗುವಷ್ಟಿರುತ್ತದೆ. ಇವು ಮನೆಯ ಜಗಲಿಯಷ್ಟು ದೊಡ್ಡದಾಗಿರುತ್ತವೆ. ಬೆಂಗಳೂರಿಗಾಗಿ ಇಂತಹ ಮೂರು ೪೦೦KV. ಮಾಸ್ಟರ್ ರಿಸೀವಿಂಗ್ ಸ್ಟೇಶನ್ನುಗಳಿವೆ. ಉತ್ತರಭಾಗದಲ್ಲಿ ನೆಲಮಂಗಲ, ಪೂರ್ವದಲ್ಲಿ ಹೂಡಿ, ದಕ್ಷಿಣದಲ್ಲಿ ಸೋಮನಹಳ್ಳಿ. ಈ ಸ್ಟೇಶನ್ನುಗಳಲ್ಲಿ ತೊಂದರೆಯಾದರೆ (ಟ್ರಿಪ್) ನಗರದ ವಿದ್ಯುತ್ ಪೂರೈಕೆಯಲ್ಲಿ ಭಾರೀ ಏರುಪೇರಾಗುತ್ತದೆ.  


೨. ಎರಡನೇ ಹಂತದಲ್ಲಿ, ಈ ಮಾಸ್ಟರ್ ರಿಸೀವಿಂಗ್ ಸ್ಟೇಷನ್ನುಗಳಿಂದ ಹೊರಬರುವ ೨೨೦KV ವಿದ್ಯುತ್ತನ್ನು ನಗರದ ಬೇರೆ ಬೇರೆ ಭಾಗಗಳಲ್ಲಿರುವ ರಿಸೀವಿಂಗ್ ಸ್ಟೇಶನ್ನುಗಳಿಗೆ ಕಳಿಸಲಾಗುತ್ತದೆ. ಈ ರಿಸೀವಿಂಗ್ ಸ್ಟೇಶನ್ನುಗಳಲ್ಲಿ ಈ ವಿದ್ಯುತ್ತನ್ನು ೬೬KVಗೆ ಇಳಿಸಲಾಗುತ್ತದೆ. ಇಲ್ಲಿಯೂ ಕೂಡ ಪವರ್ ಟ್ರಾನ್ಸ್ ಫಾರ್ಮರುಗಳು ಈ ಕೆಲಸವನ್ನು ಮಾಡುತ್ತವೆ. ಬೆಂಗಳೂರಿನಲ್ಲಿ ಇಂತಹ ಹದಿನೈದು ರಿಸೀವಿಂಗ್ ಸ್ಟೇಶನ್ನುಗಳಿವೆ.

೩. ಮೂರನೇ ಹಂತದಲ್ಲಿ, ೬೬KVಗೆ ಇಳಿಸಲ್ಪಟ್ಟ ಈ ವಿದ್ಯುತ್ ರಿಸೀವಿಂಗ್ ಸ್ಟೇಶನ್ನುಗಳಿಂದ ಸಬ್ ಸ್ಟೇಶನ್ನುಗಳಿಗೆ ಹೋಗುತ್ತದೆ. ಈ ಸಾಗಣೆಯನ್ನು ಸಣ್ಣ ಟವರ್ ಗಳ ಮೂಲಕ ಅಥವಾ ನೆಲದೊಳಗೆ ಸಾಗುವ ಕೇಬಲ್ ಗಳ ಮೂಲಕ ಮಾಡಬಹುದು. ಈ ಸಬ್ ಸ್ಟೇಶನ್ನುಗಳಲ್ಲಿ ಟ್ರಾನ್ಸ್ ಫಾರ್ಮರುಗಳ ಮೂಲಕ ಈ ೬೬KV. ವಿದ್ಯುತ್ ೧೧KVಗೆ ಇಳಿಸಲ್ಪಡುತ್ತದೆ. ಬೆಂಗಳೂರಲ್ಲಿ ಇಂತಹ ತೊಂಭತ್ತು ಸಬ್ ಸ್ಟೇಶನ್ನುಗಳಿವೆ.


೪. ನಾಲ್ಕನೇ ಹಂತದಲ್ಲಿ, ಈ ವಿದ್ಯುತ್ ಫೀಡರ್ಸ್ಎಂದು ಕರೆಯಲ್ಪಡುವ ಲೈನುಗಳ ಮೂಲಕ ಸಬ್ ಸ್ಟೇಶನ್ನುಗಳಿಂದ ಹೊರಹೋಗುತ್ತದೆ. ಪ್ರತಿಯೊಂದು ಸಬ್ ಸ್ಟೇಶನ್ನುಗಳಿಂದ ಇಂತಹ ೧೦-೧೫ ಫೀಡರ್ ಲೈನುಗಳು ಹೊರಬಂದು ಬೇರೆ ಬೇರೆ ಕಡೆಯಲ್ಲಿರುವ ಟ್ರಾನ್ಸ್ ಫಾರ್ಮರುಗಳಿಗೆ ಸಂಪರ್ಕಗೊಳ್ಳುತ್ತವೆ. ಇವೇ ನಾವು ರಸ್ತೆ ಬದಿಯಲ್ಲಿ ಕಾಣುವಂತಹ ಟ್ರಾನ್ಸ್ ಫಾರ್ಮರುಗಳು. ಇದನ್ನು ಡಿಸ್ಟ್ರಿಬ್ಯೂಶನ್ ಟ್ರಾನ್ಸ್ ಫಾರ್ಮರ್ ಸೆಂಟರ್ಸ್’ (DTC) ಎಂದು ಕರೆಯುತ್ತಾರೆ. ಈ ಟ್ರಾನ್ಸ್ ಫಾರ್ಮರುಗಳಲ್ಲಿ ವಿದ್ಯುತ್ತು ೪೪೦ ವೋಲ್ಟ್ ಗಳಿಗೆ ಇಳಿಕೆಯಾಗುತ್ತದೆ. 
೫. ಐದನೇ ಹಂತದಲ್ಲಿ, ಈ ೪೪೦ ವೋಲ್ಟ್ ಲೈನುಗಳು ಟ್ರಾನ್ಸ್ ಫಾರ್ಮರುಗಳಿಂದ ಹೊರಟು ಕೊನೆಯದಾಗಿ ನಿಮ್ಮ ಮನೆಯ ಮೀಟರಿಗೆ/ಮೇನ್ ಸ್ವಿಚ್ ಬೋರ್ಡಿಗೆ ಬಂದು ಸೇರುತ್ತವೆ. ಟ್ರಾನ್ಸ್ ಫಾರ್ಮರ್ ಗಳಿಂದ ಮೂರು ತಂತಿಗಳ ಮೂಲಕ ವಿದ್ಯುತ್ ಪಡೆಯಬಹುದು (ಮೂರೂ ಬೇರೆ ಬೇರೆ ಫೇಸ್ ಗಳಲ್ಲಿರುತ್ತವೆ). ಮನೆಯ ಬಳಕೆಗೆ ೨೨೦ ವೋಲ್ಟ್ಸ್ ವಿದ್ಯುತ್ ಸಾಕು. ಹಾಗಾಗಿ ಒಂದು ತಂತಿಯನ್ನು ಮಾತ್ರ ಸಂಪರ್ಕಿಸಲಾಗುತ್ತದೆ. 
(From the transformer, we get electricity in 3 lines, each carrying current in 3 different phases. The voltage between any two phase will be 440 volts. But, the voltage between any phase to the earth will be 220 volts! Thus, for your home, they will send only one wire carrying 220 volts! If you require 2 phase supply, then all 3 wires will come)
ಈ ಐದೂ ಹಂತಗಳಲ್ಲಿ ವಿದ್ಯುತ್ ಸುಮಾರು ಸಾವಿರ ಕಿಲೋಮೀಟರ್ ಲೈನುಗಳ ಮೂಲಕ, ನೂರಾರು ಉಪಕರಣಗಳು ಹಾಗೂ ನಟ್ ಬೋಲ್ಟುಗಳ ಮೂಲಕ ಹಾದು ಬರುತ್ತದೆ. ಇದಿಷ್ಟೂ ದೂರದ ಸಾಗಾಣಿಕೆಯಲ್ಲಿ ಯಾವುದೋ ಒಂದು ಸಣ್ಣ ತೊಂದರೆಯೂ ಕೂಡ ವಿದ್ಯುತ್ ಸರಬರಾಜಿಗೆ ತಡೆಯಾಗಬಲ್ಲುದು.

ಈ ಪ್ರಯಾಣದಲ್ಲಿ ಮೊದಲ ಮೂರು ಹಂತಗಳು ಕರ್ನಾಟಕ ವಿದ್ಯುತ್‌  ಪ್ರಸರಣಾ ನಿಗಮದ (KPTCL) ಆಡಳಿತ ವ್ಯಾಪ್ತಿಗೆ ಬರುತ್ತದೆ. ೬೬KVವರೆಗಿನ ಸರಬರಾಜಲ್ಲಿ ಆಗುವ ತೊಂದರೆಗಳನ್ನು KPTCLನವರು ನೋಡಿಕೊಳ್ಳುತ್ತಾರೆ. ಕೊನೆಯ ಎರಡು ಹಂತಗಳು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಅಡಿಯಲ್ಲಿ ಬರುತ್ತವೆ. ಅಂದರೆ ಸಬ್ ಸ್ಟೇಶನ್ನುಗಳಿಂದ ನಮ್ಮ ಮನೆಯವರೆಗಿನ ಸರಬರಾಜು ಬೆಸ್ಕಾಂಗೆ ಸೇರಿದ್ದು. ಮೊದಲ ಎರಡು ಹಂತಗಳು ಬಹಳ ಹೈ  ವೋಲ್ಟೇಜಿನಲ್ಲಿ ಆಗುವುದರಿಂದ ಅದನ್ನು ನೆಲದಡಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ಕೊನೆಯ ಎರಡು ಹಂತಗಳ ಪ್ರಸರಣವನ್ನು ನೆಲದಡಿಯ ಕೇಬಲ್ಲುಗಳ ಮೂಲಕ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಹೇಳಿರುವ ಎಲ್ಲಾ ೪೦೦KV ಪವರ್ ಲೈನ್ ಗಳು ಮತ್ತು ೪೦೦KV ಮಾಸ್ಟರ್ ರಿಸೀವಿಂಗ್ ಸ್ಟೇಶನ್ ಗಳು ಸಾಮಾನ್ಯವಾಗಿ ನ್ಯಾಶನಲ್ ಪವರ್ ಗ್ರಿಡ್ ಜಾಲದಲ್ಲಿರುತ್ತವೆ. ಈ ರೀತಿಯಾಗಿ, ನಮಗೆ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಕೆಯಾಗಲು RTPS (ಅಥವಾ ಇನ್ಯಾವುದೇ ಉತ್ಪಾದನಾ ಘಟಕ), KPTCL ಹಾಗೂ BESCOMಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಈ ಎಲ್ಲಾ ಇಲಾಖೆಗಳಲ್ಲಿಯೂ ಹಗಲುರಾತ್ರಿ ಕೆಲಸ ನಡೆಯುತ್ತಿರುತ್ತದೆ.
******
ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನ ಹಿಂದಿರುವ ಸಂಪನ್ಮೂಲ ಮತ್ತು ಶ್ರಮವನ್ನು ಗಮನದಲ್ಲಿರಿಸಿಕೊಂಡು ವಿದ್ಯುತ್ತನ್ನು ಸದ್ಬಳಕೆ ಮಾಡೋಣ ಮತ್ತು ಪೋಲು ಮಾಡದಿರೋಣ. :)
ಮೂಲ ಇಂಗ್ಲೀಶ್ ಬರಹ ಇಲ್ಲಿದೆ: How electricity reaches our homes.
ಮಣಿವಣ್ಣನ್ ಅವರ ಬ್ಲಾಗ್ ಇದು: I and the Government..?