ಬುಧವಾರ, ಡಿಸೆಂಬರ್ 31, 2008

ಅಂತೂ ಸಾಧಿಸಿದೆ ’ಮೌನವ್ರತ’ !

ಮೊನ್ನೆ ಡಿಸೆಂಬರ್ ೨೫ ಕ್ಕೆ ಬಹುದಿನಗಳ ಒಂದು ಕನಸು ಈಡೇರಿತು. ಇದಕ್ಕಾಗಿ ಸುಮಾರು ವರ್ಷಗಳಿಂದ ಪ್ರಯತ್ನ ಪಟ್ಟಿದ್ದೆ. ಅಷ್ಟಕ್ಕೂ ಇದು ಚಂದ್ರಯಾನದಂತಹ ದೊಡ್ಡ ಕನಸಲ್ಲ. ಒಂದೇ ಒಂದು ಚಿಕ್ಕ ಪ್ರಯೋಗವಷ್ಟೆ. ಅದೇನೆಂದರೆ ಒಂದಿಡೀ ದಿನ ಒಂದು ಶಬ್ದವನ್ನೂ ಮಾತಾಡದೇ ಉಳಿದುಬಿಡುವುದು. ಅದರರ್ಥ ಒಂದು ದಿನದ ಮೌನವ್ರತ!

ಹೌದು. ಈ ಒಂದು ದಿನದ ಮೌನವ್ರತ ಮಾಡಬೇಕೆಂದು ಯಾವಾಗಲೋ ಅಂದುಕೊಂಡಿದ್ದೆ. ಇಷ್ಟು ದಿನಗಳಾದರೂ ಸಾಧ್ಯವಾಗಿರಲಿಲ್ಲ. ಈ ಮೌನವ್ರತವೆಂದರೆ ಯಾರಜೊತೆಯೂ ಮಾತಾಡದೇ ಇದ್ದು ಬಿಡುವುದು ಮಾತ್ರವಲ್ಲ, ಬದಲಾಗಿ ನಮ್ಮೊಳಗಿನ ’ಅವನ’ ಜೊತೆ ಮಾತಾಡಿಕೊಳ್ಳುವುದಂತೆ! ಇದ್ಯಾಕೋ ಅರ್ಥವಾದಂತೆ ಕಂಡರೂ ಅದು ಅರ್ಥವಾಯಿತೆನಿಸಿರಲಿಲ್ಲ. ಸ್ವಾಮೀಜಿಗಳು, ಆಧ್ಯಾತ್ಮ ಜೀವಿಗಳು ಮತ್ತು ಕೆಲವು ಲೌಕಿಕರೂ ಕೂಡ ಈ ಮೌನವ್ರತ ಮಾಡುತ್ತಾರೆ. ಕೆಲವರದ್ದು ಕೆಲವು ಗಂಟೆಗಳಾಗಿದ್ದರೆ ಇನ್ನು ಕೆಲವರದ್ದು ಕೆಲವು ದಿನಗಳವರೆಗೆ. ಮತ್ತೂ ಕೆಲವರದ್ದು ವಾರದಲ್ಲಿ ಅಥವಾ ತಿಂಗಳಲ್ಲಿ ಇಂತಹ ನಿರ್ದಿಷ್ಟ ದಿನ ಎನ್ನುವಂತದ್ದು. ರಾಮಕೃಷ್ಣ ಹೆಗಡೆಯವರು ಜನತಾದಳದಿಂದ ಉಚ್ಛಾಟಿತರಾದಾಗ ತೀವ್ರ ಬೇಸರಗೊಂಡು ೪೦ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ವಾರಕ್ಕೊಂದು ದಿನದ ಮೌನವ್ರತವನ್ನು ಮುರಿದು ತಮ್ಮ ನೋವನ್ನು , ಅದಕ್ಕೆ ಕಾರಣಾದವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರಂತೆ !

ನನ್ನ ಮೌನವ್ರತಕ್ಕೆ ಯಾವುದೇ ಆಧ್ಯಾತ್ಮಿಕ ಉದ್ದೇಶವಂತೂ ಇರಲಿಲ್ಲ. ಅದೇನಿದ್ದರೂ ಒಂದು ವೈಯಕ್ತಿಕ ಅಪ್ಪಟ ಕುತೂಹಲದ ಪ್ರಯೋಗ ಮಾತ್ರವಾಗಿತ್ತು. ಮನೆಯಲ್ಲಿದ್ದಾಗ ಅಪ್ಪ ಅಮ್ಮ ಮಕ್ಕಳು ಮರಿ ಅವರು ಇವರು ಎಂದು ಸುತ್ತಮುತ್ತ ಎಲ್ಲರೂ ಇರುತ್ತಿದ್ದುದರಿಂದ ಇಡೀ ದಿನ ಮೌನವಾಗಿರಲು ಸಾಧ್ಯವಿಲ್ಲವೆಂದು ಗೊತ್ತಿದ್ದರಿಂದ ಪ್ರಯತ್ನಿಸಲು ಹೋಗಿರಲಿಲ್ಲ. ಹಾಸ್ಟೆಲಿನಲ್ಲಿದ್ದಾಗಂತೂ ಅದು ಕನಸೇ ಹೌದು. ಬೆಂಗಳೂರು ಸೇರಿಕೊಂಡ ಮೇಲೆ ಒಂದು ದಿನ ಸಾಧಿಸಿಬಿಟ್ಟೆ ಎನ್ನುವಷ್ಟರಲ್ಲಿ ಮುರಿದಿದ್ದೆ. ಮೊಬೈಲ್ ಫೋನು ಆಫ್ ಮಾಡಿಟ್ಟು ಸಂಜೆಯವರೆಗೆ ತೆಪ್ಪಗಿದ್ದವನು ಒಂದು ರೌಂಡು ಲೈಬ್ರರಿಗೆ ಹೋಗಿ ಬರೋಣವೆಂದು ಹೊರಟು ರಸ್ತೆಯಲ್ಲಿ ಬೈಕಿಗೆ ಯಾವನೋ ಅಡ್ಡಬಂದು ಆಯಾಚಿತವಾಗಿ ಮಾತು ಹೊರಬಂದು ಮೌನವ್ರತವು ಮರೆತು ಹೋಗಿ ಬೇರೇನೋ ಆಗಿಹೋಗಿತ್ತು. ಈಗ್ಯಾಕೆ ಸುಮ್ನೆ ಇದೆಲ್ಲಾ, ಮುಂದೆ ಮದುವೆಯಾದಮೇಲೆ ಮಾಡಿದರಾಯಿತು ಅನ್ನಿಸಿದ್ದೂ ಇದೆ. ಆದರೂ ತೀರ ಒಂದಿಡೀ ದಿನ ಮೂಕನಂತೆ ಇರುತ್ತೇನೆಂದರೆ ಹೆಂಡತಿಯಾದವಳು ತಲೆ ಮೇಲೆ ಮೊಟಕಿದರೆ ಕಷ್ಟ ಎನಿಸಿತ್ತು. ದಿನವೂ ಪ್ರೀತಿ ಮಾಡಲು ಅಥವಾ ಜಗಳಾಡಲಾದರೂ ಸ್ವಲ್ಪವಾದರೂ ಮಾತಾಡಲೇ ಬೇಕಾಗುತ್ತದೆ ಎಂದು ಸುಮ್ಸುಮ್ನೇ ಗೊತ್ತಿಲ್ಲದ ಕಲ್ಪನೆ!  ಅದು ಬಿಡಿ. ಈ ಮೌನವ್ರತಕ್ಕೆ ಒಂದು ಏಕಾಂತ ಬೇಕು. ಇನ್ನೊಬ್ಬರ ಜೊತೆ ಇರುವಾಗ ಅಥವಾ ಎಲ್ಲರೂ ಇರುವಾಗ ಮೌನವ್ರತ ಮಾಡಿದರೆ ಅದು ಅವರಿಗೆ ಒಂದು ರೀತಿ ಕಿರಿಕಿರಿಯೆನಿಸುವುದು ಸಹಜ. ಆದ್ದರಿಂದ ಸಂದರ್ಭಕ್ಕಾಗಿ ಕಾಯುತ್ತಿದ್ದೆ. ಮೊದಲೂ ಕೆಲವೊಮ್ಮೆ ಸರಿಯಾದ ಸಂದರ್ಭ ಸಿಕ್ಕಿತ್ತೇನೋ, ಆದರೆ ಆವಾಗ ನನಗೆ ಮೌನವ್ರತದ ನೆನಪೇ ಬಂದಿರಲಿಲ್ಲ.

ಈ ಸಾರ್ತಿ ದೂರದೇಶವೊಂದರಲ್ಲಿ ಅಪರಿಚಿತ ಜನಗಳ ಮಧ್ಯೆ ಅವರ ಭಾಷೆ ತಿಳಿಯದ ನಾನು ಇದ್ದೆ. ಆಫೀಸಿನಲ್ಲಿ ಬೇಕಾದಷ್ಟೆ ಮಾತು, ಹೋಟೇಲಿನಲ್ಲಿ ನಾಲ್ಕು ಮಾತು, ಹೊರಗೆಲ್ಲಾದರೂ ಹೋದರೆ ಅಗತ್ಯವಿದ್ದರಷ್ಟೇ ಬಂದಷ್ಟು ಮಾತು. ಮೌನವ್ರತಕ್ಕೆ ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟಿತ್ತು. ಆದ್ದರಿಂದ ಡಿಸೆಂಬರ್ ೨೫ನ್ನು ಇದಕ್ಕೆ ಆರಿಸಿಕೊಂಡೆ. ಆಫೀಸು ರಜ. ಬೇರೆಲ್ಲಾ ರಜ. ಹೋಟೇಲಿನ ರೂಮು ನನ್ನ ಕಾರಸ್ಥಾನವಾಗಿತ್ತು. ಸರಿ, ಫೋನು ಆಫ್ ಮಾಡಿಟ್ಟೆ. ಬೆಳಗ್ಗೆ ಎದ್ದವನು ಹೋಟೆಲ್ ರಿಸೆಪ್ಷನ್ ನಲ್ಲಿ ಕೇವಲ ಒಂದು ಸ್ಮೈಲು ಖರ್ಚು ಮಾಡಿ ಸೈಲೆಂಟಾಗಿ ಒಂದು ರೌಂಡ್ ವಾಕಿಂಗ್ ಹೋಗಿ ಬಂದು ತಿಂಡಿತಿಂದು ರೂಮಿನಲ್ಲಿ ಸೆಟ್ಲಾದೆ. ನಂತರ ಪುಸ್ತಕದಲ್ಲಿ ಮುಳುಗಿಹೋದೆ. ಅರ್ರೇ ಇವತ್ತು ಕ್ರಿಸ್ಮಸ್ ಎಂದು ನೆನಪಾಗಿ ನೋಡಿಕೊಂದು ಬರೋಣ ಆಚರಣೆ ಹೇಗಿರುತ್ತದೆ ಎಂದು ಹೊರಟೆ. ಎಲ್ಲಾ ರಸ್ತೆಗಳೂ ನಿರ್ಜನವಾಗಿದ್ದವು. ಅಂಗಡಿಗಳೆಲ್ಲವೂ ಬಾಗಿಲು ಹಾಕಿತ್ತು. ಎಲ್ಲರೂ ಚರ್ಚಿನಲ್ಲಿ ಸೆಟ್ಲಾಗಿದ್ದರೋ ಅಥವಾ ಮನೆಯಲ್ಲಿದ್ದರೋ ಗೊತ್ತಿಲ್ಲ. ಇಡೀ ನಗರ ಬಂದ್ ಆದಂತಿತ್ತು. ತಿರುಗಿ ಬಂದಾಗ ಹಸಿವಾಗುತ್ತಿತ್ತು. ಊಟದ ಸಮಯವಾಗಿತ್ತು. ಘಮ ಘಮ ಎಂದು ಎಂ.ಟಿ.ಆರ್ ಅನ್ನ ತಯಾರಾಯಿತು. ಉಂಡು ಮಲಗಿದೆ. ಕುಡಿದು ಮಲಗಿದಂತಹ ನಿದ್ದೆ! ಸಂಜೆ ಎದ್ದೆ. ಚಾಟಿಂಗ್ ಮಾಡುವುದರಿಂದ ಮೌನವ್ರತಕ್ಕೇನು ತೊಂದರೆಯಾಗುವುದಿಲ್ಲ ಎಂದುಕೊಂಡು ಅಳುಕಿನಿಂದಲೇ ಆನ್ ಲೈನ್ ಬಂದು ಹರಟಿದೆ. ರಾತ್ರಿ ಊಟ, ಮತ್ತೆ ಪುಸ್ತಕದೊಂದಿಗೆ ಕೊನೆಗೊಂಡಿತ್ತು ಆ ದಿನ! ಎಷ್ಟು ಸರಳವಾಗಿ ಕಳೆದುಹೋಗಿತ್ತೆಂದರೆ ಈ ದಿನಕ್ಕೆ ನಿಜವಾಗಲೂ ೨೪ ಗಂಟೆಯಿತ್ತಾ ಎಂದು ಆಶ್ಚರ್ಯವಾಗಿತ್ತು.! ಪುಣ್ಯಕ್ಕೆ ಯಾರೂ ನನ್ನನ್ನು ಮಾತಾಡಿಸಿರಲಿಲ್ಲ ಕೂಡ. ಮೌನವ್ರತ ಯಶಸ್ಸು ಕಂಡಿತ್ತು.

ಆದರೂ ಕೂಡ ನನಗೆ ಸ್ಥೂಲಶರೀರದ ಬಾಯಿಮಾತನ್ನಷ್ಟೇ ನಿಲ್ಲಿಸಲು ಸಾಧ್ಯವಾಗಿದ್ದು. ಮನಸು ಮಾತ್ರ ಮಾತಾಡುತ್ತಲೇ ಇತ್ತು. ನೂರಾರು ಯೋಚನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ಇದ್ದವು. ಈ ಮನಸಿನ ಮಾತುಗಳನ್ನು ನಿಲ್ಲಿಸಲು ಸಾಧ್ಯವಾದಾಗ ಸೂಕ್ಷ್ಮಶರೀರದ ಜಾಗೃತಿ ಸಾಧ್ಯವಂತೆ. ಇದರ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಿದೆ. ಈ ವಿಷಯವಾಗಿ ಮತ್ತು ಮೌನವ್ರತದ ವಿಧಿವಿಧಾನಗಳ ಬಗ್ಗೆ, ನಿಯಮಗಳ ಬಗ್ಗೆ, ಪ್ರಯೋಜನಗಳ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಬಲ್ಲವರಿಂದ ಮಾಹಿತಿ, ಮಾರ್ಗದರ್ಶನ ಅಪೇಕ್ಷಿಸುತ್ತಿದ್ದೇನೆ. ಈ ಬ್ಲಾಗ್ ಓದಿದವರಲ್ಲಿ ಯಾರಿಗಾದರೂ ಮೌನವ್ರತದ ಅಭ್ಯಾಸ, ಆಸಕ್ತಿ, ಮಾಹಿತಿ ಇದ್ದರೆ ದಯವಿಟ್ಟು ಇಲ್ಲಿ ಕಮೆಂಟಿನಲ್ಲಾದರೂ ಅಥವಾ ವೈಯಕ್ತಿಕವಾಗಿ ಇ ಮೇಲ್ ಮಾಡಿ ತಿಳಿಸಿ ಎಂದು ಕೋರುತ್ತಿದ್ದೇನೆ.

****************************************************************

ಎಲ್ಲರಿಗೂ ೨೦೦೯ ಹೊಸ ವರುಷದ ಶುಭ ಹಾರೈಕೆಗಳೊಂದಿಗೆ ೨೦೦೮ ರ ಬ್ಲಾಗ್ ಕ್ಯಾಲೆಂಡರ್ ಮಗುಚಿ ಹಾಕುತ್ತಿದ್ದೇನೆ.

****************************************************************

ಗುರುವಾರ, ಡಿಸೆಂಬರ್ 25, 2008

ರುಚಿ ರುಚಿ ಅಡುಗೆಗೆ..



ಏನ್ ಬೇಕೋ ಆರಿಸಿಕೊಳ್ಳಿ..



ಇದ್ನ ತಿಂದ್ರೆ ಏನೂ ತೊಂದ್ರೆ ಇಲ್ಲ ಅನ್ಸಿದ್ರೆ ತಗೊಳ್ಳಿ...



ಇವು ನೋಡಕ್ಕೇ ಇಷ್ಟು ಚೆನ್ನಾಗಿರ್ಬೇಕಾದ್ರೆ ಇನ್ನು ರುಚಿ ಹೆಂಗಿರ್ಬೋದು.. ಮ್ಮ್ಮ್.....
(’ಪರಿಸರಪ್ರೇಮಿ’ಗಳು ಕ್ಷಮಿಸ್ಬೇಕು) :)




ಜೀವಂತ ಸಮುದ್ರ ಹಾವುಗಳು... ಬೇಕಾದ್ರೆ ಹೇಳಿ, ಅಲ್ಲೇ ಕಚ್ ಕಚ್......




ಬಲಗಡೆ ಇರೋದು , ಎಡಗಡೆ ಇರೋದು ಒಳ್ಳೇ ಕಾಂಬಿನೇಶನ್!




ತರತರತರ ಒಂಥರ ಅಲ್ಲ, ನಾನಾತರ ......... ಕಪ್ಪೆಚಿಪ್ಪುಗಳು




ಆಯ್ಕೆಗೆ ಇನ್ನೊಂದಿಷ್ಟು...

********

ನಮ್ ಮಂಗ್ಳೂರು, ಭಟ್ಕಳ, ಕಾರ್ವಾರ್ ಕಡೆಗೂ ಸಿಗುತ್ತಾ ಹಿಂಗೇ ಥರಥರಗಳು? ಹೇಳ್ಬೇಕು ಆ ಕಡೆಯವ್ರು. ನನ್ನಂತಾ ಅರೆಮಲೆನಾಡಿಗರಿಗಂತೂ ಇದು ಅಪರೂಪವೇ. ಅದ್ಕೇ ಖುಷಿಯಾಗಿ ಫೋಟೋ ತೆಗ್ದು ಬ್ಲಾಗ್ನಲ್ಲಿ ಜಮಾಯಿಸಿಬಿಟ್ಟೆ !

ಭಾನುವಾರ, ಡಿಸೆಂಬರ್ 21, 2008

ನಮ್ಮ ತಪ್ಪಿಗೆ ನಾವೇ ನಗುವುದು

ಈ "ನಮ್ಮ ತಪ್ಪಿಗೆ ನಾವೇ ನಗುವುದು" ಮೂರು ರೀತಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಇದು ನಮ್ಮನ್ನು ನಾವೇ ಕ್ಷಮಿಸಿಕೊಳ್ಳಲು ಸಹಾಯಮಾಡುತ್ತದೆ. ಬಹಳಷ್ಟು ಸಲ ನಮ್ಮದೇ ತಪ್ಪಿನಿಂದ ನಮ್ಮ ಮೇಲೆ ನಮಗೇ ಬಹಳ ಬೇಸರವಾಗಿರುತ್ತದೆ. ಆದ್ದರಿಂದ ನಮ್ಮ ತಪ್ಪಿಗೆ ನಾವೇ ನಕ್ಕರೆ ಇಂತಹ ಬೇಸರವನ್ನೂ ತಮಾಷೆಯಾಗಿ ಪರಿವರ್ತಿಸಿ ಇದರಿಂದ ಮುಂದೆ ಆ ತಪ್ಪನ್ನು ಮಾಡದಂತೆ ಕಲಿತಂತಾಗುತ್ತದೆ.

ಎರಡನೆಯದಾಗಿ, ಬೇರೆಯವರ ಮುಂದೆ ನಮ್ಮ ತಪ್ಪನ್ನು ಒಪ್ಪಿಕೊಂಡು ನಾವೇ ನಗುವುದು. ಇದರಿಂದ ಇವನೂ ಕೂಡ ಥೇಟು ನಮ್ಮಂತೆಯೇ ಎಂದು ಎಲ್ಲರಿಗೂ ಅನ್ನಿಸುತ್ತದೆ. ಕೆಲವು ಒಳ್ಳೆಯ ನಾಯಕರು ತಮ್ಮ ತಂಡದೊಂದಿಗೆ ಹೀಗೆ ಮಾಡುತ್ತಾರೆ. ಇದು ತಮ್ಮೊಂದಿಗೆ ಇರುವವರ ಜೊತೆ, ತಮ್ಮೊಂದಿಗೆ ಕೆಲಸ ಮಾಡುವವರ ಜೊತೆಯಲ್ಲಿ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಎಷ್ಟೋ ಜನ ತಮ್ಮ ಬಾಸ್ ಗಳು, ನಾಯಕರು ತಮ್ಮ ಕೆಳಗಿನವರಿಗಿಂತ ತಾವೇ ಶ್ರೇಷ್ಠ ಎಂದುಕೊಂಡಿದ್ದಾರೆ ಅಥವಾ ಅವನು ಸಾಮಾನ್ಯ ಜನರಂತೆ ಇರುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಅವರ ಮುಂದೆ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಅವರಿಗೂ ಕೂಡ ತಮ್ಮ ನಾಯಕನೂ ತಮ್ಮಂತೆಯೇ ಅನಿಸುವುದಲ್ಲದೇ ಒಂದು ರೀತಿಯ ಗೌರವ ಭಾವನೆ ಬೆಳೆಯಲೂ ಸಹಾಯವಾಗುತ್ತದೆ. ಇದು ಕೇವಲ ನಾಯಕರಿಷ್ಟೇ ಅಲ್ಲದೇ, ಎಲ್ಲರಿಗೂ ಅನ್ವಯವಾಗುತ್ತದೆ.


ಮೂರನೆಯದಾಗಿ,ಈ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಇನ್ನೊಂದು ಮುಖ್ಯ ಉಪಯೋಗವಿದೆ. ಅದೇನೆಂದರೆ ಇದು ಬೇರೆಯವರು ನಮ್ಮ ತಪ್ಪನ್ನು ಎತ್ತಿ ತೋರಿಸದಂತೆ ಮಾಡುತ್ತದೆ. ನಮ್ಮ ತಪ್ಪಿಗೆ ನಾವೇ ಮೊದಲು ನಕ್ಕುಬಿಟ್ಟರೆ ಇನ್ನೊಬ್ಬರಿಗೆ ನಮ್ಮ ತಪ್ಪನ್ನು ಆಡಿಕೊಂಡು ನಗಲು ಅವಕಾಶ ಸಿಗುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರು ನಮ್ಮ ತಪ್ಪನ್ನು ತೋರಿಸಿದಾಗ ಆಗುವ ನೋವಿಗಿಂತ ನಮ್ಮ ತಪ್ಪನ್ನು ನಾವೇ ಕಂಡುಕೊಳ್ಳುವುದು ಸುಲಭ ಹಾಗೂ ಒಳ್ಳೆಯದು. ನಾವು ಒಂದು ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅಥವಾ ಯಾವುದಾದರೂ ಕೆಲಸದ ಮುಂದಾಳ್ತನ ವಹಿಸಿದ್ದಾಗ ನಮ್ಮಲ್ಲಿ ಪ್ರತಿಯೊಂದರಲ್ಲೂ ತಪ್ಪನ್ನು ಕಂಡು ಹಿಡಿಯುವ, ಅಥವಾ ಅದಕ್ಕಾಗೇ ಸದಾ ಪ್ರಯತ್ನಿಸುವ ಜನ ಇದ್ದೇ ಇರುತ್ತಾರೆ. ಅಂತಹ ಸಂದರ್ಭಗಳಲ್ಲಿ ನಾವು ನಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಅಥವಾ ಮುಚ್ಚಿಹಾಕಲು ನೋಡಿದರೆ ಇದು ಇನ್ನೂ ಟೀಕೆಗೆ ಗುರಿಯಾಗಬಹುದು ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗಬಹುದು. ಆದ್ದರಿಂದ ನಮ್ಮಿಂದ ತಪ್ಪಾದಾಗ ಒಪ್ಪಿಕೊಂಡು ನಕ್ಕುಬಿಡುವುದೊಳ್ಳೆಯದು.

ಅಂದಹಾಗೇ ಈ ರೀತಿ ನಮ್ಮನ್ನು ನಾವೇ ಹಾಸ್ಯ ಮಾಡಿಕೊಳ್ಳುವುದರಿಂದ ನಮಗೆ ತೊಂದರೆ ಏನೂ ಇಲ್ಲ. ಆದರೆ ಇದನ್ನು ಅತಿಯಾದ ರೀತಿಯಲ್ಲಿ ಮಾಡಿ ಜೋಕರ್ ಆಗದಂತೆ ಎಚ್ಚರ ವಹಿಸಬೇಕು. ನಮ್ಮದು ನಿಜವಾಗಿಯೂ ತಪ್ಪಿದೆ ಅಥವಾ ಕೇವಲ ನಮ್ಮಿಂದಲೇ ತಪ್ಪಾಗಿದೆ ಎಂಬ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಬೇಕು. ಬೇರೆಯವನ್ನು ಮೆಚ್ಚಿಸಲು ಹೋಗಬಾರದು. ಈ ನಮ್ಮ ತಪ್ಪಿಗೆ ನಾವೇ ನಗುವುದೆನ್ನುವುದು ನಮ್ಮನ್ನು ನಾವೇ ಕೆಳಮಟ್ಟಕ್ಕಿಳಿಸಿಕೊಳ್ಳುವಂತಹುದಾಗಿರಬಾರದು. ಪದೇಪದೇ ತಪ್ಪು ಮಾಡುವುದು ಹೇಗೆ ಸರಿಯಲ್ಲವೋ ಅದೇ ರೀತಿ ನಮ್ಮ ತಪ್ಪನ್ನು ನಾವೇ ಅತೀ ವೈಭವೀಕರಿಸಿ ಪದೇ ಪದೇ ನಕ್ಕು ನಗೆಪಾಟಲಿಗೀಡಾಗುವುದೂ ಸರಿಯಲ್ಲ.


ಕೊನೆಯದಾಗಿ, ಬೇರೆಯವರ ತಪ್ಪನ್ನು ತೋರಿಸಿ ನಗುವಂತದ್ದು. ಇದನ್ನು ಯಾವತ್ತೂ ಮಾಡಬಾರದು. ಬೇರೆಯವರ ತಪ್ಪಿನಿಂದ ನಾವು ಕಲಿಯಲು ಹಾಗು ಎಚ್ಚರ ವಹಿಸಲು ಪ್ರಯತ್ನಿಸಬೇಕು. ಬರೀ ನಮ್ಮ ತಪ್ಪಿನಿಂದ ನಾವು ಕಲಿಯುತ್ತೇವೆ ಎಂದು ಹೊರಟರೆ ಅದು ಖಂಡಿತ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ನಮ್ಮ ಜೀವನವಿಡೀ ಸಾಕಾಗುವುದಿಲ್ಲ. ನಮ್ಮ ತಪ್ಪಿಗೆ ನಾವೇ ನಕ್ಕು ಬೇರೆಯವರೂ ಕೂಡ ತಮ್ಮ ತಪ್ಪಿಗೆ ತಾವೇ ನಗುವಂತೆ ಪ್ರೋತ್ಸಾಹಿಸಬೇಕು. ನಾವು ತಪ್ಪು ಮಾಡಿದಾಗ ಆಡಿಕೊಂಡ ಮನುಷ್ಯನ ತಪ್ಪನ್ನು ನಾವು ಆಡಿಕೊಂಡು ನಗದೇ ಸುಮ್ಮನಿದ್ದರೆ ಅದು ಯಾವ ರೀತಿ ಮನಃಸ್ಥಾಪಗಳಿಗೂ ಕಾರಣವಾಗದೇ ಇರುವುದಲ್ಲದೇ ಮುಂದಿನ ಬಾರಿ ಅದೇ ಮನುಷ್ಯ ನಮ್ಮ ತಪ್ಪನ್ನು ನೋಡುವ ದೃಷ್ಟಿಯೇ ಬೇರೆ ರೀತಿಯದ್ದಾಗಿರುತ್ತದೆ. ಹಾಗೂ ಇದು ಒಬ್ಬರ ತಪ್ಪಿನಿಂದ ಇನ್ನೊಬ್ಬರು ಕಲಿತು, ತಿದ್ದಿಕೊಳ್ಳಲು, ಎಚ್ಚರ ವಹಿಸಲು ಸಹಾಯವಾಗುತ್ತದೆ. ಇದರಿಂದ ಎಲ್ಲರಿಗೂ ಲಾಭ.

ಇಂಗ್ಲೀಷ್ ಮೂಲ: laughing-at-mistakes

****

ತಪ್ಪು ಮಾಡದೇ ಇದ್ದುಬಿಟ್ಟರೆ ಇದ್ಯಾವ ರಗಳೆಯೂ ಇರುವುದಿಲ್ಲ. ಆದರೆ ಅದು ಸಾಧ್ಯವಿಲ್ಲ ಅಂತೀರಾ?. ನಿಜ ನಿಜ.

ಸರ್ವೇ ಜನಾಃ ಸುಖಿನೋ ಭವಂತು
ಸರ್ವೇ ಸಂತು ನಿರಾಮಯ: ........ :) :)

ಶುಕ್ರವಾರ, ಡಿಸೆಂಬರ್ 19, 2008

ಕವಿತೆಗಳು ಮತ್ತು ನಾನು

"Most people ignore most poetry because most poetry ignores most people." - Adrian Mitchell

ಅಪರಾತ್ರಿಯಲ್ಲಿ ಏನೋ ಓದುತ್ತಾ ಕುಳಿತಿರುವಾಗ ಈ ಸಾಲಿಗೆ ಎಡವಿದೆ. ತಮಾಷೆ ಎನಿಸಿತು. ನಿಜವೂ ಅನ್ನಿಸಿತು!

ಈ ಸಾಲು ನನಗೆ ವೈಯಕ್ತಿಕವಾಗಿ ಕವನಗಳ ಮೇಲೆ ಆಸಕ್ತಿ ಕಡಿಮೆ ಇರುವುದಕ್ಕೆ ವಿವರಣೆ ಒದಗಿಸಿತಾ? ಗೊತ್ತಿಲ್ಲ. ಮೊದಲಿಂದಲೂ ನನ್ನನ್ನು ಯಾವುದೇ ರೀತಿಯ ಕವನಗಳೂ ಕೂಡ ಅಷ್ಟಾಗಿ ಸೆಳೆದದ್ದೇ ಇಲ್ಲ. ನನ್ನಂತೆಯೇ ಬಹಳ ಜನಕ್ಕೂ ಕೂಡ ಹಾಗೆಯೇ. ಅದು ಏಕೆ ಹಾಗಿರಬಹುದು ಅಂತ ಮತ್ತೊಮ್ಮೆ ಯೋಚಿಸುವಂತೆ ಮಾಡಿತು ಈ ಸಾಲು.

ಮೂಲತಃ ಈ ಕವನಗಳು ಯಾವುದಾದರೊಂದು ವಿಷಯದ ಬಗ್ಗೆ ಸಂಕೀರ್ಣವಾದ ರೀತಿಯಲ್ಲಿ ಹೇಳಲು ಅತಿಯಾದ ಪ್ರಯತ್ನವನ್ನು ಮಾಡುತ್ತವೆ. ನಿಜವಾಗಿಯೂ ಅದನ್ನು ರಚಿಸಿದವರು ಏನು ಹೇಳಲು ಹೊರಟಿದ್ದಾರೆ ಅಥವಾ ಏನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಒಂದು ಬೇರೆಯದೇ ತರನಾದ ಮನಃಸ್ಥಿತಿ, ಭಾವ ಬೇಕಾಗುತ್ತದೆ ಅನಿಸುತ್ತದೆ. ಅದು ಗದ್ಯದಂತೆ ಸರಳ, ನೇರ ಹಾಗೂ ಸುಮ್ಮನೇ ಓದಿಬಿಡುವಂತದ್ದಲ್ಲ.

ನನ್ನನ್ನು ಹಿಡಿದಿಟ್ಟ ತೀರ ಕೆಲವು ಕವನಗಳೆಂದರೆ ಹಾಸ್ಯ, ಪ್ರಾಸದಿಂದ ಕೂಡಿದಂತವು. ಜೊತೆಗೆ ಕೆಲವೇ ಕೆಲವು ನೇರ ಅರ್ಥ ಕೊಡುವಂತಹ ಕವನಗಳು.

ಇದರರ್ಥ ಬೇರೆ ರೀತಿಯ ಕವನಗಳು ಅಥವಾ ಒಟ್ಟಾರೆ ಕಾವ್ಯ ಎನ್ನುವುದನ್ನು ಹೀನೈಸುವುದಲ್ಲ ಅಥವಾ ಕವಿತೆಗಳೆಂದರೆ ಅರ್ಥವಿಲ್ಲದವು ಎಂದಲ್ಲ. ಎಷ್ಟೋ ಪುಟಗಳಲ್ಲಿ ಬರೆಯಬೇಕಾದ ಅಥವಾ ಎಷ್ಟೇ ಪುಟಗಳಲ್ಲೂ ಸಹ ಬರೆಯಲಾಗದ ಭಾವನೆಗಳನ್ನು, ವಿಷಯಗಳನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಪುಟ್ಟ ಪುಟ್ಟ ಕೆಲವು ಸಾಲುಗಳಲ್ಲೇ ಮೂಡಿಸಿಬಿಡುವಂತಹದೇ ಈ ಕವನಗಳು. ಇಂತಹ ಕಲೆಯುಳ್ಳ, ಪ್ರತಿಭೆಯುಳ್ಳ ಹಲವಾರು ಜನರು ನಮ್ಮ ನಡುವೆ ಇದ್ದರು, ಇದ್ದಾರೆ ಎಂಬುದು ನಿಜ. ಆದರೆ in general ಆಗಿ ಇದೆಲ್ಲುದರ ಸಾರಾಂಶವನ್ನು ಮೊದಲು ಹೇಳಿದ ವಾಕ್ಯವು ಬಿಂಬಿಸುವಂತೆ ನನಗೆ ಅನಿಸಿದ್ದು ಮತ್ತದೇ ಆಸಕ್ತಿಯ ಕೊರತೆಯ ನೆಪವಿರಬಹುದು. :)

Cheers!

ಅಣ್ಣನ ಅನಿಸಿಕೆ ನನ್ನ ಅನಿಸಿಕೆ ಕೂಡ: Subject  from Mahesh Hegade's Blog - 'Poetry'

ಶುಕ್ರವಾರ, ಡಿಸೆಂಬರ್ 12, 2008

ಇಂಡಿಯಾ, ಇಟಲಿ, ಇತ್ಯಾದಿ....

ಮುಂಬೈ ಘಟನೆ ಅನಂತರ ಬ್ಲಾಗ್ ಲೋಕವೂ ಯಾಕೋ ಥಂಡಾ ಹೊಡೆದಂತಿದೆ. ಬಹುಶ: ಯಾರಿಗೂ ತಮಾಷೆ ಮಾಡಲು ಮನಸ್ಸಿಲ್ಲ, ಸೀರಿಯಸ್ಸ್ ಬರೆದರೆ ಪ್ರಯೋಜನವಿಲ್ಲ ಎಂಬಂತಾಗಿರಬಹುದು. ಅಥವಾ ನನಗೆ ಹಾಗನಿಸುತ್ತಿದೆಯೆನೋ! ಇರಲಿ.

************
ಬೇಡವೆಂದರೂ ಮತ್ತದೇ ಭಯೋತ್ಪಾದನೆ ವಿಷಯಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ೩ ದಿನಗಳ ಹಿಂದೆ ಇಟಲಿಯ ಆಫೀಸಿಗೆ ಬಂದಾಗ ನಾನು ನಿರೀಕ್ಷಿಸಿದಂತೆಯೇ ಆಯಿತು. ನಮ್ಮ ಭಾರತದ ಮಾಧ್ಯಮಗಳು ಅಂತಾರಾಷ್ಟ್ರೀಯ ಸುದ್ದಿ ಎಂಬ ಹೆಸರಿನಲ್ಲಿ "ಅಮೆರಿಕಾದ ನಟಿ ಜಾರಿ ಬಿದ್ದಳು","ಫ್ರೆಂಚ್ ನಟಿಗೆ ಹಲ್ಲು ನೋವು", "ಇಂಗ್ಲೀಷ್ ನಟಿ ಅವನ ಜೊತೆ ಮಲಗಿದ್ದಳು" ಎಂಬ ಚಿಲ್ಲರೆ ಸುದ್ದಿಗಳನ್ನು ಕಾಲು, ಅರ್ಧ ಪುಟ ಪ್ರಕಟಿಸಿ ಕೃತಾರ್ಥರಾಗುತ್ತವೆ. ಇಲ್ಲಿನ ಮಾಧ್ಯಮಗಳು ಹಾಗಲ್ಲ. ಸಾಮಾನ್ಯವಾಗಿ ಏಷಿಯಾದ ಸುದ್ದಿಯನ್ನು, ಭಾರತದ ಸುದ್ದಿಯನ್ನು ಸುಮ್ಮಸುಮ್ಮನೇ ಪ್ರಕಟಿಸುವುದಿಲ್ಲ. ಏನಾದರೂ ಅತಿಮುಖ್ಯ ಘಟನೆಗಳನ್ನು ಮಾತ್ರ ವರದಿ ಮಾಡುತ್ತವೆ. ನಮ್ಮ ಮಾಧ್ಯಮಗಳಂತೆ ವಿದೇಶ ಎಂದರೆ ಅದ್ಭುತ, ಶ್ರೇಷ್ಠ ಎಂದು ಮೊದಲಿನಿಂದಲೂ ಸೂರ್ಯಚಂದ್ರನಕ್ಷತ್ರ ತೋರಿಸಿ ನಮ್ಮ ಜನರನ್ನ, ಮುಂದಿನ ಪೀಳಿಗೆಗಳನ್ನು ಎಲ್ಲದಕ್ಕೂ ವಿದೇಶಗಳೆಡೆಗೆ ಮುಖ ಮಾಡುವಂತೆ ಮಾಡುವುದಿಲ್ಲ. ಆದರೆ ಬಹುಶಃ ಈ ಬಾರಿ ಮುಂಬೈ ಘಟನೆ ಮಾತ್ರ ವಿಶ್ವದ ಎಲ್ಲಾ ದೇಶಗಳ ಮಾಧ್ಯಮಗಳಲ್ಲೂ ಕೊನೇಪಕ್ಷ ಒಂದುದಿನ ಹೆಡ್ ಲೈನ್ಸ್ ಆಗಿದೆ. ಇಟಲಿಯ ಸಮುದ್ರ ತುದಿಯಲ್ಲಿರುವ ಇಲ್ಲಿನ ಜನರಿಗೆ ಭಾರತದ ಬಗ್ಗೆ ಅಷ್ಟೇನೂ ಪರಿಚಯ ಇಲ್ಲ. ದೊಡ್ಡ ದೇಶವಾದ್ದರಿಂದ ಅಂತದ್ದೊಂದು ದೇಶವಿದೆಯೆಂದು ಗೊತ್ತು ಹಾಗೂ ಇತ್ತೀಚೆಗೆ ಭಾರತಕ್ಕೆ ಔಟ್ ಸೋರ್ಸಿಂಗ್ ಒಡನಾಟದಿಂದ ಸ್ವಲ್ಪ ಆಸಕ್ತಿಯೂ ಇದೆ.

ನನಗೆ ಇಲ್ಲಿನವರು ಮೊದಲು ಕೇಳಿದ್ದೇ ಮುಂಬೈ ವಿಷಯ. ಇದೇ ಕಾರಣಕ್ಕಾಗಿ ಕೂಡ ನನ್ನ ವೀಸಾ ತಡವಾಗಿದ್ದರಿಂದ ಎಲ್ಲರಿಗೂ ಮುಂಬೈ ಘಟನೆಯ ಅರಿವಿತ್ತು. ನಿಮ್ಮಲ್ಲಿ ಹೊರಗಿನವರು ಬಂದು ಧಾಳಿ ಮಾಡುವಷ್ಟು ನಿಮ್ಮ ಭದ್ರತೆ ವೀಕಾಗಿದೆಯಾ? ಪಕ್ಕದ ಪಾಕಿಸ್ತಾನದಲ್ಲೇ ಇದಕ್ಕೆ ತರಬೇತಿ ನಡೆಯುತ್ತಿದೆ ಎಂದು ನಿಮಗೆ ಖಾತ್ರಿಯಾಗಿ ಗೊತ್ತಿದ್ದರೂ ಅಷ್ಟು ದೊಡ್ಡ ದೇಶವಾಗಿ ಆ ಸಣ್ಣ ದೇಶವನ್ನು ಗದರಿ ಸುಮ್ಮನಿರಿಸಲು ಯಾಕೆ ಸಾಧ್ಯವಾಗಿಲ್ಲ? ನಿಮ್ಮಲ್ಲಿ ಪದೇ ಪದೇ ಇಂತದ್ದು ನೆಡೆಯುತ್ತಿದ್ದರೂ ನಿಮ್ಮ ಸರ್ಕಾರಗಳೇಕೆ ಹೀಗೆ ಸುಮ್ಮನಿವೆ ? ಎಂಬ ಮುಂತಾದ ಪ್ರಶ್ನೆಗಳಿಗೆ ನಾನು ಉತ್ತರಿಸಲು ತಡಬಡಾಯಿಸಿ ಹೋದೆ. ನಮ್ಮಲ್ಲಿ ಸರ್ಕಾರಗಳಿಗೆ ದೇಶದ ಭದ್ರತೆಗಿಂತ ಅಧಿಕಾರ ಮುಖ್ಯವಾದದ್ದು, ಓಟ್ ಬ್ಯಾಂಕ್ ರಾಜಕಾರಣವಿದೆ, ಅತಿರೇಕದ ಪ್ರಜಾಪ್ರಭುತ್ವವಿದೆ, ಜಾತಿ/ಅಲ್ಪಸಂಖ್ಯಾತ/ಮೀಸಲಾತಿ/ಉದ್ಧಾರದ ಹೆಸರಿನಲ್ಲಿ ಸಮಾಜ ಒಡೆಯುವ ನಮ್ಮ ರಾಜಕಾರಣಿಗಳು ಹೀಗೆ, ನಮ್ಮ ಜನರು ಹೀಗೆ, ನಮ್ಮ ಮಾಧ್ಯಮಗಳು/ಪತ್ರಿಕೆಗಳು ಹೀಗೆ, ನಮಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಎಂದು ಇವರಿಗೆ ಹೇಗೆ ಹೇಳಲಿ, ಹೇಳಿ ನಮ್ಮ ಮರ್ಯಾದೆ ನಾನೇ ಹೇಗೆ ಕಳೆದುಕೊಳ್ಳಲಿ! ಗೊತ್ತಾಗುತ್ತಿಲ್ಲ. :(

*****************************************************




ಈ ಮೇಲಿನ ಚಿತ್ರ ರೋಮಾ ನಗರದ ’ಫಾಂಟನಾ ಡಿ ಟ್ರೇವಿ’(Trevi Fountain) ಎಂಬ ಜಾಗದಲ್ಲಿರುವ ಚರ್ಚೊಂದರ ಗೇಟಿನದ್ದು. ಇಲ್ಲಿ ಹಾಕಿರುವ ಬೀಗಗಳು ಮಾರಾಟದ್ದಲ್ಲ. ಬದಲಾಗಿ ’ನಂಬಿಕೆ’ಯದ್ದು. ಪ್ರೇಮಿಗಳು ಅದರ ಮೇಲೆ ತಮ್ಮ ಹೆಸರು ಬರೆದು ಆ ಚರ್ಚಿನ ಗೇಟಿಗೆ ಹಾಕಿಹೋದರೆ ತಮ್ಮ ಬಂಧ ಶಾಶ್ವತವಾಗಿರುತ್ತದೆ ಎಂದು ನಂಬಿಕೆಯಂತೆ ಇಲ್ಲಿ. ಈ ಪ್ರೇಮಿಗಳ ಸಹವಾಸ ಅಲ್ಲ ಬಿಡಿ :). ನಮ್ಮಕಡೆ ಕೆಲವು ಊರುಗಳ ದೇವಸ್ಥಾನಗಳಲ್ಲಿ ಹೀಗೆ ನಿಂಬೆಹಣ್ಣಿನಿಂದ ಹಿಡಿದು ಚಪ್ಪಲಿಯವರೆಗೆ ಏನೇನನ್ನೋ ಕಟ್ಟುವ ರೂಢಿ/ನಂಬಿಕೆಯಂತೆಯೇ ಇದು ಕೂಡ. ಹಾಗೆಯೇ ಇಲ್ಲಿರುವ ಕಾರಂಜಿಗೆ ಬೆನ್ನು ಮಾಡಿ ನಿಂತು ಬಲಗೈಯಲ್ಲಿ ಎಡಭುಜದ ಮೇಲಿಂದ ನಾಣ್ಯವೊಂದನ್ನು ನೀರಿಗೆ ಎಸೆದರೆ ಮತ್ತೆ ಹೆಂಡ್ತಿ ಮಕ್ಕಳ ಜೊತೆ ರೋಮ್ ನಗರಕ್ಕೆ ಬರುವ ಅವಕಾಶ ಸಿಗುತ್ತದಂತೆ! ಮೂಢನಂಬಿಕೆಯೆಂಬುದು ಬರೀ ಭಾರತಕ್ಕೆ ಸೀಮಿತವಾಗಿಲ್ಲ ಅಲ್ವಾ? :)

****************************************************


ಹಾಗೇ ಈ ನಾಪೋಲಿ ಊರಿನ ನಾನು ಬರೆದ ಹಿಂದಿನ ಬರಹವನ್ನು ಓದಿದ ನನ್ನ ಗೆಳೆಯನೊಬ್ಬ ನನ್ನ ಮೇಲೆ ಮುರಕೊಂಡು ಬಿದ್ದ. ಎಲ್ಲಿಗಾದರೂ ಹೋದಾಗ ಏನೇನು ಒಳ್ಳೆಯದಿದೆಯೋ ಅದರ ಬಗ್ಗೆ ಜಾಸ್ತಿ ತಿಳಿಸಿಕೊಡಬೇಕು. ಬೇರೆ ದೇಶಕ್ಕೆ ಹೋಗಿದ್ದನ್ನು ಬೇರೆ ಗ್ರಹಕ್ಕೆ ಹೋದಂತೆ ಬರೆದದ್ದು ಮಾತ್ರವಲ್ಲದೇ ಹೆಚ್ಚು ನೆಗೆಟಿವ್ ವಿಷಯಗಳನ್ನೇ ಬರೆದು ನೀನೂ ಒಂದು ರೀತಿ ಮರಿ ’ವೈಟ್ ಟೈಗರ್’ ಆಗಿದ್ದೀಯ ನೋಡು ಎಂದು ಬೈದಿದ್ದ. ಎಲ್ಲಾ ಕಡೆಯಲ್ಲೂ ಕಲಾಸಿಪಾಳ್ಯವೂ ಇರುತ್ತದೆ ರಾಜ್ ಮಹಲ್ ವಿಲಾಸ್ ಕೂಡ ಇರುತ್ತದೆ. ಮೆಜೆಸ್ಟಿಕ್ ತೋರಿಸಿ ಇದೇ ಬೆಂಗಳೂರು ಅನ್ನುವುದು ತಪ್ಪು ಎಂದಿದ್ದ. ಅದಕ್ಕೋಸ್ಕರವಾಗಿಯೇ ತಪ್ಪುಕಾಣಿಕೆಯಾಗಿ ಸದ್ಯದ ನಮ್ಮೂರು ’ನಾಪೋಲಿ’ಯ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ನೆಟ್ಟಗೆ ಫೋಟೋ ತೆಗೆಯೋಕೂ ಬರಲ್ಲ ಇವನಿಗೆ ಅಂತ ಛಾಯಾಕನ್ನಡಿ ಶಿವು ಅವರು ನಗಬಹುದು. ಇರಲಿ.

*********

ಇತ್ತೀಚೆಗ್ಯಾಕೋ ಬ್ಲಾಗಿನಲ್ಲಿ ಅಕ್ಷರಗಳಿಗಿಂತ ಬರೀ ಚಿತ್ರಗಳೇ ಜಾಸ್ತಿಯಾಗುತ್ತಿವೆ ಅಂತ ಶ್ರೀನಿಧಿ ಗದರೋಕೆ ಮುಂಚೆ ಈ ಅಭ್ಯಾಸ ಕಡಿಮೆ ಮಾಡಿಕೊಳ್ಳಬೇಕು ! :) ಮತ್ತೆ ಸಿಗೋಣ. bye

ಗುರುವಾರ, ಡಿಸೆಂಬರ್ 4, 2008

ರಹಸ್ಯ ಲಿಪಿ !

ಅದು ನಮ್ಮ ತರಗತಿಯಲ್ಲಿ ಸಿಂಧೂ ಬಯಲಿನ ನಾಗರಿಕತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಎಂದೇ ಹೇಳಬಹುದು. ಭೂಗೋಳವನ್ನೂ, ಇತಿಹಾಸವನ್ನೂ ಪಾಠ ಮಾಡುತ್ತಿದ್ದ ನಾರಾಯಣ ಗೌಡ ಮೇಷ್ಟ್ರು ನಮ್ಮನ್ನೂ ಅದೇ ಕಾಲಕ್ಕೆ ಕೊಂಡೊಯ್ದುಬಿಡುತ್ತಿದ್ದರು. ಅದರ ರೋಚಕತೆ ನನ್ನಲ್ಲಿ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ಹುಟ್ಟುಹಾಕಿತ್ತು. ಹರಪ್ಪಾ, ಮೊಹೆಂಜಾದಾರೋ ಕಾಲದ ಲಿಪಿಗಳನ್ನು ಪುಸ್ತಕದಲ್ಲಿ ಕೊಟ್ಟಿದ್ದರು. ಆ ಲಿಪಿಗಳನ್ನು ಇನ್ನೂ ಯಾರಿಗೂ ಓದಲು ಆಗಿಲ್ಲ ಎಂದು ತಿಳಿದು ಆಶ್ಚರ್ಯವಾಗಿತ್ತು. ಒಮ್ಮೆ ’ಸುಧಾ’ ವಾರಪತ್ರಿಕೆಯಲ್ಲಿ ಇದರ ವಿಷಯವಾಗಿ ಬಂದ ಬರಹವೊಂದನ್ನು ನಾನು ಕತ್ತರಿಸಿ ಇಟ್ಟುಕೊಂಡುದುದನ್ನು ನೋಡಿದ ಅಪ್ಪ ಸಿಂಧೂ ಬಯಲಿನ ನಾಗರಿಕತೆ ವಿಷಯವಾಗಿ ಪುಸ್ತಕವೊಂದನ್ನು ಕೂಡ ತಂದುಕೊಟ್ಟಿದ್ದರು. ಆವಾಗಿನಿಂದ ಹಳೆಯ ಕಾಲದ ನಾಗರಿಕತೆಗಳ ಬಗ್ಗೆ, ಹಳೆಯ ಭಾಷೆ, ಲಿಪಿಗಳ ಬಗ್ಗೆ ವಿಶೇಷ ಕುತೂಹಲ ಬೆಳೆದು ಬಂತು. ಬೇಲೂರು, ಹಳೇಬೀಡು, ಬೆಳಗೊಳ ಮುಂತಾದ ಕಡೆಗಳಲ್ಲಿ ಕಾಣಿಸುವ ಹಳೆಗನ್ನಡ ಶಾಸನ ಬರಹಗಳನ್ನು ಓದುವಂತಾಗಬೇಕು ಎಂಬ ಆಸೆ ಬೆಳೆದಿತ್ತು. ನಮ್ಮ ಊರಿನಲ್ಲಿ ಇರುವ ೧೨ ನೇ ಶತಮಾನದ ಹಳೆಯ ದೇವಸ್ಥಾನಕ್ಕೆ ಹೋದಾಗಲೆಲ್ಲಾ ಅಲ್ಲಿನ ಶಾಸನದಲ್ಲಿರುವ ಹಳೆಗನ್ನಡ ಲಿಪಿಯನ್ನು ನೋಡುತ್ತಾ ನಿಲ್ಲುವುದು, ಅದನ್ನು ಓದುವುದಕ್ಕೆ ಪ್ರಯತ್ನಿಸುವುದು ನೆಡೆದಿತ್ತು. ಅದೇ ಸಮಯಕ್ಕೆ ಸರಿಯಾಗಿ ಮನೆಯ ಹತ್ತಿರ ಏನೋ ಅಗೆಯುವಾಗ ನಾಣ್ಯವೊಂದು ಸಿಕ್ಕಿತ್ತು. ಮಣ್ಣು ಮೆತ್ತಿಕೊಂಡು, ತುಕ್ಕು ಹಿಡಿದ ಕಬ್ಬಿಣದ ಬಿಲ್ಲೆಯಂತಿದ್ದ ಆ ನಾಣ್ಯವು ಪೂರ್ತಿ ಅಸ್ಪಷ್ಟವಾಗಿದ್ದು ಎಷ್ಟೇ ತಿಕ್ಕಿ ತೊಳೆದರೂ ಕೂಡ ಸರಿಯಾಗಿ ಕಾಣಿಸದಂತಿತ್ತು. ಅಪ್ಪನಿಗೆ ಅದನ್ನು ತೋರಿಸಿದಾಗ ಅವರು ನನ್ನ ಉತ್ಸಾಹವನ್ನು ಕಂಡು ಅವರಿಗೆ ಪರಿಚಯವಿದ್ದ ಇತಿಹಾಸದ ಪ್ರಾಧ್ಯಾಪಕರ ಮನೆಗೆ ಒಂದು ದಿನ ಕರೆದುಕೊಂಡು ಹೋಗಿದ್ದರು. ಅವರು ಅದನ್ನು ಪರೀಕ್ಷಿಸಿ ಅವರಲ್ಲಿದ್ದ ದ್ರಾವಣವೊಂದರಿಂದ ಅದನ್ನು ಸ್ವಚ್ಛಮಾಡಿ ನೋಡಿ ಆಶ್ಚರ್ಯದಿಂದ ಇದು ಟಿಪ್ಪೂಸುಲ್ತಾನನ ಕಾಲದ ತಾಮ್ರದ ನಾಣ್ಯ ವೆಂದು ಊಹಿಸಿ, ಅದಕ್ಕೆ ಪೂರಕವಾಗಿ ಅದರಲ್ಲಿ ಪರ್ಷಿಯನ್ ಭಾಷೆಯ ಲಿಪಿಯಿದ್ದದ್ದನ್ನೂ, ಇನ್ನೊಂದು ಬದಿಯಲ್ಲಿ ಆನೆಯ ಚಿತ್ರ ಇದ್ದದ್ದನ್ನೂ ತೋರಿಸಿ ಹುಷಾರಾಗಿ ಇಟ್ಟುಕೊಳ್ಳುವಂತೆ ಹೇಳಿದ್ದರು. ಅಪ್ಪನಿಗೆ ನಾನು ಪದೇ ಪದೇ ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಹಾಕಿ ಕುತೂಹಲ ತೋರಿಸುತ್ತಿದ್ದುದರಿಂದ ನೀನು ದೊಡ್ಡವನಾದಮೇಲೆ ಪ್ರಾಗಿತಿಹಾಸಜ್ಞ ಆಗುವಿಯಂತೆ ಎಂದು ಹುರಿದುಂಬಿಸಿದ್ದರು. ಕರ್ನಾಟಕದ ಕೆಲವೇ ಇತಿಹಾಸಜ್ಞರಲ್ಲಿ ಒಬ್ಬರಾದ ನನ್ನ ಸೋದರಜ್ಜನ ಬಳಿ ಹಳೆಗನ್ನಡ ಓದುವುದನ್ನು ಕಲಿಸಿಕೊಡುವಂತೆ ಕೇಳುವುದಾಗಿ ಕೂಡ ಭರವಸೆ ಕೊಟ್ಟಿದ್ದರು.

ಇದೇ ಸಂದರ್ಭದಲ್ಲಿ ಚಾಲ್ತಿಗೆ ಬಂದಿದ್ದು ’ರಹಸ್ಯ ಲಿಪಿ’! ಕೆಲವೇ ಜನರಿಗೆ ಓದಲು, ಬರೆಯಲು ಬರುವಂತಹ ರಹಸ್ಯ ಲಿಪಿಯೊಂದು ಇವತ್ತಿಗೂ ಕೂಡ ಇದೆಯೆಂದೂ, ಸ್ವಲ್ಪ ಪ್ರಯತ್ನಪಟ್ಟರೆ ದೊರಕಿಸಿಕೊಳ್ಳಬಹುದೆಂದೂ ನಮ್ಮ ಕ್ಲಾಸಿನಲ್ಲಿ ಸುದ್ದಿ ಹಬ್ಬಿತ್ತು. ನನ್ನಂತೆಯೇ ಸ್ವಲ್ಪ ಆಸಕ್ತಿಯುಳ್ಳ ಹುಡುಗರು ಅದರ ಹುಡುಕಾಟದಲ್ಲಿ ತೊಡಗಿ ದಿನಕ್ಕೊಂದು ಸುದ್ದಿ ತೇಲಿಬಿಡುತ್ತಿದ್ದರು. ಸಂದೀಪ ತನಗೆ ತನ್ನ ಅಜ್ಜನ ಮೂಲಕ ಆ ಲಿಪಿ ಗೊತ್ತಿದೆ ಎಂದು ಹೇಳಿಕೊಂಡಿದ್ದ. ವಿಚಿತ್ರವಾದುದನ್ನೇನೋ ಬರೆಯುತ್ತಿದ್ದ. ಆದರೆ ಅದನ್ನು ಯಾರಿಗೂ ಹೇಳಿಕೊಡುವುದು ಸಾಧ್ಯವಿಲ್ಲವೆಂದು ಅವನು ಖಂಡತುಂಡವಾಗಿ ಹೇಳಿದ ಮೇಲೆ ಅವನ ಮನ ಒಲಿಸುವ ಕೆಲಸ ಕೈಬಿಟ್ಟೆವು. ಅದ್ಯಾವುದೋ ಹಳೇ ಅಂಗಡಿಯಲ್ಲಿ ರಹಸ್ಯ ಲಿಪಿಯ ಪುಸ್ತಕವೊಂದು ಸಿಗುವುದೆಂಬ ಖಚಿತ(!) ಮಾಹಿತಿಯ ಬೆನ್ನು ಹಿಡಿದು ಒಂದು ದಿನ ಹೋಗಿಬರುವುದೆಂದೂ ತೀರ್ಮಾನಿಸಿಕೊಂಡು ಆ ಅಂಗಡಿ ಹುಡುಕಿಕೊಂಡು ಅಲೆದು ಸುಸ್ತಾಗಿ ವಾಪಾಸ್ ಬಂದಿದ್ದೆವು. ಬರುಬರುತ್ತಾ ಈ ರಹಸ್ಯ ಲಿಪಿಯ ಸುದ್ದಿ ತಣ್ಣಗಾಗಿ ಎಲ್ಲರೂ ಮರೆತರಾದರೂ ನಾನು ಮತ್ತು ನನ್ನ ಗೆಳೆಯರಾದ ರವಿ, ಶಶಿ ಮೂವರೂ ಸೇರಿ ರಹಸ್ಯ ಲಿಪಿ ಸಿಗದಿದ್ದರೇನಂತೆ, ನಾವೇ ಒಂದು ರಹಸ್ಯ ಲಿಪಿ ರೂಪಿಸಿಕೊಳ್ಳೋಣವೆಂದೂ ಅದರಲ್ಲೇ ಬರೆದು ಎಲ್ಲರಿಗೂ ಆಶ್ಚರ್ಯಗೊಳಿಸೋಣವೆಂದೂ ಯೋಜನೆಹಾಕಿದೆವು. ಅದರಂತೆಯೇ ಕೆಲವು ಪ್ರಯೋಗಗಳನ್ನು ಮಾಡಿ ಸುಮಾರು ದಿನಗಳ ವರೆಗೆ ಯಾವುದೂ ಸರಿಯಾಗದೇ ಅವರಿಬ್ಬರೂ ಮರೆತರು, ನಾನೂ ಹೆಚ್ಚು ಕಡಿಮೆ ಕೈಬಿಟ್ಟಿದ್ದೆ. ಆದರೂ ನನ್ನ ಮನಸ್ಸಿನಿಂದ ಪೂರ್ತಿ ದೂರವಾಗಿರಲಿಲ್ಲ.


ಹೀಗಿದ್ದಾಗ ಒಂದು ದಿನ ಈ ಲಿಪಿಯ ಬಗ್ಗೆ ಯೋಚಿಸುತ್ತಲೇ ಕನ್ನಡ ವರ್ಣಮಾಲೆಯ ಆಧಾರದ ಮೇಲೆ ಚಿನ್ಹೆಗಳ ಮೂಲಕ ಈ ಲಿಪಿಯನ್ನು ರೂಪಿಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು. ಚಿನ್ಹೆಗಳು ಅಂದರೆ ಏನು ಬಳಸಿಕೊಳ್ಳುವುದು? ಒಂದೊಂದು ಅಕ್ಷರಕ್ಕೂ ಬೇರೆ ಬೇರೆಯ ಚಿನ್ಹೆಗಳನ್ನು ಬಳಸಿದರೆ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟ. ಚಿನ್ಹೆಗಳನ್ನು ಬರೆಯುವುದೂ, ಓದುವುದೂ ಸುಲಭವಲ್ಲ. ಹಾಗಾಗಿ ಅತಿಸುಲಭವಾಗಿ ಬರೆಯುವಂತಹ ಕಡ್ಡಿ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳುವುದೆಂದು ತೀರ್ಮಾನಿಸಿದೆ. ಅದೇ ರೀತಿ ಒಂದೊಂದು ಅಕ್ಷರಕ್ಕೂ ಕಡ್ಡಿ ಮನುಷ್ಯನ ಚಿತ್ರದ ಚಿನ್ಹೆ ಬಳಸಿ ನೆನಪಿಟ್ಟುಕೊಳ್ಳಬಹುದಾದಂತಹ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ರೂಪಿಸಬಹುದು ಎಂಬ ಯೋಚನೆಯ ಮೇರೆಗೆ ರಹಸ್ಯ ಲಿಪಿಯನ್ನು ರಚಿಸಲು ಕುಳಿತೆ. ಮೊದಲು ಅ, ಆ , ಇ, ಈ ಇಂದ ಅಂ, ಅಃ ವರೆಗೂ ಒಂದೊಂದಕ್ಕೂ ಒಂದೊಂದು ಚಿನ್ಹೆಗಳನ್ನು ರೂಪಿಸಿದೆ. ನಂತರ ಕ, ಖ, ಗ, ಘ.. ದಿಂದ ಪ, ಪ, ಬ, ಭ, ಮ ವರೆಗೆ ಇನ್ನೊಂದಿಷ್ಟು, ಯ, ರ,ಲ, ವ ದಿಂದ ಕ್ಷ, ಜ್ಞ ವರೆಗೆ ಮತ್ತೊಂದಿಷ್ಟು ಚಿನ್ಹೆ ರೂಪಿಸಿದೆ. ಎಲ್ಲವೂ ಕೂಡ ಕಡ್ಡಿ ಮನುಷ್ಯನ ಚಿತ್ರದಲ್ಲಿಯೇ ಇತ್ತು. ನಂತರ ಕ,ಕಾ,ಕಿ,ಕೀ ಯಿಂದ ಕಂ, ಕಃ ವರೆಗೆ ಎಲ್ಲಾ ವ್ಯಂಜನಗಳಿಗೆ ಅನ್ವಯವಾಗುವಂತೆ ಪೂರ್ತಿ ವರ್ಣಮಾಲೆಯನ್ನು ನನ್ನ ಕಡ್ಡಿ ಲಿಪಿಗೆ ತರುವುದರಲ್ಲಿ ಯಶಸ್ವಿಯಾದೆ. ಅನಂತರ ಇದನ್ನೇ ಸ್ವಲ್ಪ ಸ್ವಲ್ಪ ಸುಧಾರಿಸುತ್ತ ಹೋಗಿ ಮೂರ್ನಾಲ್ಕು ಪ್ರಯತ್ನಗಳ ನಂತರ ಆರಾಮಾಗಿ ನೆನಪಿಟ್ಟುಕೊಳ್ಳುವಂತಹ, ಸುಲಭವಾಗಿ ಬರೆಯಬಹುದಾದಂತಹ ಲಿಪಿಯೊಂದನ್ನು ನಾನೇ ಹುಟ್ಟು ಹಾಕಿದ್ದು ನೋಡಿ ನನಗೇ ಆಶ್ಚರ್ಯವಾಗಿತ್ತು ! ಅದನ್ನು ನನ್ನ ಪುಟ್ಟ ಡೈರಿಯೊಂದರಲ್ಲಿ ಬರೆದಿಟ್ಟುಕೊಂಡು ಗೌಪ್ಯವಾಗಿರಿಸಿಕೊಂಡಿದ್ದೆ. ಎಷ್ಟೊ ದಿನಗಳವರೆಗೆ ಸುಮ್ಮನೇ ಅದರಲ್ಲಿಯೇ ಏನೇನನ್ನೋ ಬರೆಯುವುದನ್ನು, ಓದುವುದನ್ನೂ ಮಾಡುತ್ತಾ ಖುಷಿಪಡುತ್ತಿದ್ದೆ. ಕ್ರಮೇಣ ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಅದರ ಬಳಕೆಯೂ ನಿಂತು ಹೋಯಿತು. ಇಂಗ್ಲೀಷ್ ಎ,ಬಿ,ಸಿ,ಡಿ..ಆಧಾರದ ಮೇಲೆ ರಹಸ್ಯ ಲಿಪಿ ರೂಪಿಸಲು ಸ್ಕೆಚ್ ಹಾಕಿದ್ದು ಅರ್ಧಕ್ಕೇ ನಿಂತುಹೋಗಿತ್ತು.


ಮೊನ್ನೆ ಮನೆಯಲ್ಲಿ ನನ್ನ ಹಳೇ ಸಂಗ್ರಹವನ್ನೆಲ್ಲಾ ತೆಗೆದು ಗುಡ್ಡೆ ಹಾಕಿಕೊಂಡು ಕುಳಿತಿದ್ದಾಗ ಆ ಡೈರಿಯೂ ಕೂಡ ಸಿಕ್ಕಿತು. ಇದನ್ನು ಬ್ಲಾಗ್ ಗೆ ಹಾಕೋಣವೆನಿಸಿತು.

ಈ ಕೆಳಗಿನವು ನಾನೇ ರೂಪಿಸಿದ್ದ ’ರಹಸ್ಯ ಲಿಪಿ’. ಹಾಗೇ ಫೋಟೋ ತೆಗೆದು ಹಾಕಿದ್ದೇನೆ. ದಕ್ಕಿಸಿಕೊಳ್ಳಿ :)



**

**

**

ಮಂಗಳವಾರ, ಡಿಸೆಂಬರ್ 2, 2008

ಶೋಕ-ನಗುಮುಖ

ಎಲ್ಲೆಲ್ಲೂ ಭಯೋತ್ಪಾದನೆಯ ಕರಿ ಮೋಡ ಮುಸುಕಿಕೊಂಡಿರೋ ಈ ಸಂದರ್ಭದಲ್ಲಿ ನಿನ್ನೆ ಆಕಾಶದಲ್ಲಿ ನಗುಮುಖವೊಂದು ಕಂಡಿತ್ತು. ಅದ್ಯಾಕೋ ಅದನ್ನ ಹುಡುಗಿಯ ಹೊಳೆಯುವ ಕಣ್ಣುಗಳಿಗೆ, ಸುಂದರ ನಗುವಿಗೆ ಸುಮ್ಸುಮ್ನೇ ಹೋಲಿಸುವ ಮನಸ್ಸಾಗುತ್ತಿಲ್ಲ. ಶೋಕಸೂಚಕದಂತಿದ್ದ ಕಪ್ಪು ಆಕಾಶದಲ್ಲಿ ಚಂದ್ರ,ಶುಕ್ರ, ಗುರುಗಳ ನೋಟ ನಮ್ಮ ದೇಶಕ್ಕೂ, ಮನಸ್ಸಿಗೂ ಆವರಿಸಿರುವ ಕಪ್ಪುಛಾಯೆಯ ಮಧ್ಯದಲ್ಲೂ ಆಶಾಭಾವನೆಯ ಭಾರತೀಯನ ನಗುಮುಖವನ್ನು ಪ್ರತಿನಿಧಿಸುವಂತೆ ಕಂಡಿತು. ಆದರೆ ಸಂತೃಪ್ತಿಯಿಂದ ಸ್ವಲ್ಪ ಹೊತ್ತು ನೋಡಲು ಮತ್ತದೇ ಕರಿಮೋಡಗಳು ಅಡ್ಡಿಯಾದವು.



ಫೋಟೋಕೃಪೆ: ನನ್ ತಂಗಿ