ಬುಧವಾರ, ಜೂನ್ 15, 2016

ಮರುಭೂಮಿಯ ಬಂಗಾರ ಜೈಸಲ್ಮೇರ್

ಬೋಳುಭೂಮಿಯ ಬಿರುಬಿಸಿಲಿನಲ್ಲಿ ದೂರದಿಂದ ಒಂದು ದೊಡ್ಡ ಮರಳಿನ ದಿಬ್ಬದಂತೆ ಕಾಣುತ್ತಿದ್ದ ಅದು ಹತ್ತಿರವಾಗುತ್ತಿದ್ದಂತೇ ಒಂದು ಕೋಟೆಯ ಆಕೃತಿ ಕಾಣತೊಡಗಿತು. ಮರುಭೂಮಿಯ ಒಡಲಿನಿಂದ ಹೊರಬಂದು ಎತ್ತರದ ಜಾಗದಲ್ಲಿ ಸೆಟೆದು ನಿಂತಂತೆ ಕಾಣುತ್ತಿದ್ದ ಆ ಬಂಗಾರಬಣ್ಣದ ಭವ್ಯವಾದ ಕೋಟೆಯನ್ನು ಕಂಡು ಬೆರಗಾಗಿಹೋದೆವು. ಅದು ಗೋಲ್ಡನ್ ಫೋರ್ಟ್ ಎಂದೇ ಪ್ರಸಿದ್ಧವಾದ ಜೈಸಲ್ಮೇರ್ ಕೋಟೆ. ಜೈಪುರದಿಂದ ಹೊರಟ ನಾವು ಒಂದು ದೀರ್ಘ ಪಯಣದ ನಂತರ ಜೈಸಲ್ಮೇರ್ ಸೇರಿದಾಗ ಥಾರ್ ಮರುಭೂಮಿಗೆ ನಮ್ಮನ್ನು ಸ್ವಾಗತಿಸಿದ್ದು ಈ ಕೋಟೆ.


ರಾಜಸ್ಥಾನದ ಪ್ರಮುಖ ನಗರಗಳಲ್ಲೊಂದಾಗಿರುವ ಜೈಸಲ್ಮೇರ್ ಪಾಕಿಸ್ತಾನದ ಗಡಿಯಿಂದ ಕೇವಲ ೪೦ ಕಿ.ಮಿ. ದೂರದಲ್ಲಿದೆ. ಇದು ’ಬಂಗಾರ ನಗರಿ’ ಎಂದೇ ಪ್ರಸಿದ್ಧ. ಅದಕ್ಕೆ ಕಾರಣ ಎಂದರೆ ಮರುಭೂಮಿಯ ಮರಳ ಜೊತೆಗೆ ಇಲ್ಲಿ ಎಲ್ಲಾ ಕಟ್ಟಡಗಳೂ ನಸುಬಂಗಾರ ಬಣ್ಣ! ಹೊಟೆಲ್ ಸೇರಿ ಒಂದೆರಡು ಗಂಟೆ ದಣಿವಾರಿಸಿಕೊಂಡು ಫ್ರೆಶ್ ಆದೆವು. ಮೊದಲು ಆ ಕೋಟೆಗೇ ಲಗ್ಗೆಯಿಡಬೇಕು ಎನ್ನುವ ಉತ್ಸಾಹದಿಂದ ಹೊರಟೆವು. ದಾರಿಯುದ್ದಕ್ಕೂ ಇದ್ದ ಅನೇಕ ಪ್ರವಾಸಿ ಏಜೆನ್ಸಿಗಳ ಬೋರ್ಡುಗಳು ಇಲ್ಲಿ ಪ್ರವಾಸೋದ್ಯಮ ಒಂದು ಮುಖ್ಯ ಕಸುಬು ಎಂದು ತೋರಿಸಿದವು. ಜೈಸಲ್ಮೇರಿನ ಹೃದಯದಂತಿರುವ ಕೋಟೆ ತಲುಪಿ ಒಳನಡೆದೆವು. ಹನ್ನೆರಡನೇ ಶತಮಾನದ ಈ ಕೋಟೆ ಇವತ್ತಿಗೂ ಜೀವಂತವಾಗಿದೆ. ಕೋಟೆಯೊಳಗೇ ಒಂದು ಊರಿದೆ. ಅಲ್ಲಿ ಮನೆಗಳು, ಅಂಗಡಿಗಳು, ಗುಡಿಗಳು, ಹವೇಲಿಗಳು ಎಲ್ಲವೂ ಇವೆ. ಇಂತಹ ಒಂದು ಜೀವಂತ ಕೋಟೆ ಇಡೀ ವಿಶ್ವದಲ್ಲಿ ಇದೊಂದೇ ಇರುವುದು ಎಂದು ಹೇಳಿದರು. ಕೋಟೆಯ ಗಲ್ಲಿಗಲ್ಲಿಗಳಲ್ಲಿ ನಸುಬಂಗಾರಬಣ್ಣದ ಕಲ್ಲುಕಟ್ಟಡಗಳು, ಸಾಲುಸಾಲು ಕುಶಲಕರ್ಮಿ ವಸ್ತುಗಳ ಅಂಗಡಿಗಳು, ಬಣ್ಣಬಣ್ಣದ ಪೇಟ ತೊಟ್ಟ ಜನ, ಸಂಗೀತವಾದ್ಯಗಳನ್ನು ನುಡಿಸುವವರು, ತೊಗಲುಗೊಂಬೆಯಾಟ, ಸುಂದರ ವಾಸ್ತುಶಿಲ್ಪದ ಹವೇಲಿಗಳು, ಪ್ರವಾಸಿಗರ ಹಿಂಡು ಇವುಗಳನ್ನು ನೋಡುತ್ತಾ ಹೊತ್ತುಕಳೆದದ್ದೇ ತಿಳಿಯದೇ ಕೋಟೆಯಲ್ಲಿ ಮೈಮನ ದಾರಿತಪ್ಪಿ ಅಲೆಯುತ್ತಿತ್ತು. ಅಷ್ಟರಲ್ಲಿ ಸಂಜೆಯಾಗತೊಡಗಿದ್ದರಿಂದ ವಾಪಸಾದೆವು.

ಬೆಳಗ್ಗೆ ಎದ್ದು ತಯಾರಾಗಿ ಮತ್ತೆ ಕೋಟೆಗೆ ಹೋದೆವು. ಒಳಗೆ ಏಳು ಜೈನಮಂದಿರಗಳಿವೆಯಂತೆ. ಅಲ್ಲಿನ ಒಂದು ಜೈನ ಮಂದಿರ ಹೊಕ್ಕು ನೋಡಿದಾಗ ಅದ್ಭುತ ವಾಸ್ತುಶಿಲ್ಪದ ಕಲ್ಲಿನ ಕೆತ್ತನೆಗಳ ಸೊಬಗು ಬೆರಗುಮೂಡಿಸಿತು. ಅನಂತರ ಲಕ್ಷ್ಮಿನಾಥ ಗುಡಿಗೆ ಭೇಟಿಕೊಟ್ಟು ಅಲ್ಲಿನ ಅರಮನೆಯ ಒಳಗೆ ಹೋದರೆ ಅದೇ ಒಂದು ಲೋಕ. ಸೂಚನಾಗುರುತುಗಳಿಲ್ಲದಿದ್ದರೆ ದಾರಿತಪ್ಪಿ ಕಳೆದುಹೋಗುವಂತಿರುವ ಆ ಅರಮನೆಯಲ್ಲಿ ಹೊರಗೆ ಬಿರುಬಿಸಿಲಿದ್ದರೂ ಒಳಗೆ ತಂಪಾಗಿ ಗಾಳಿಯಾಡುವಂತೆ ರಚಿಸಿದ ಕೊಠಡಿಗಳು, ಅರಮನೆಯ ಸ್ತ್ರೀಯರು ನಿಂತು ನೋಡಲು ಕಟ್ಟಿಸಿದ ಸುಂದರ ಬಾಲ್ಕನಿಗಳು ವಿಶೇಷವೆನಿಸಿದವು.  ಅರಮನೆಯ ಮೇಲ್ಛಾವಣಿಗೆ ಬಂದರೆ ಮರುಭೂಮಿಯಲ್ಲಿ ಮೈಚಾಚಿ ಬಿದ್ದುಕೊಂಡಂತಿರುವ ಜೈಸಲ್ಮೇರ್ ಊರಿನ ಚದುರಿಬಿದ್ದಂತಹ ಕಟ್ಟಡಗಳ ವಿಹಂಗಮ ನೋಟ ಸಾಧ್ಯ. ಹೀಗೆಯೇ ಕೋಟೆಯ ಸೊಬಗನ್ನು ನೋಡಿ ಹೊರಬಂದು ಅಲ್ಲೇ ಸನಿಹದಲ್ಲಿರುವ ಒಂದು ದೊಡ್ಡ ಸುಂದರ ಹವೇಲಿಗೆ ಭೇಟಿಕೊಟ್ಟು ಹೊರಡುವಷ್ಟರಲ್ಲಿ ಮಧ್ಯಾಹ್ನ ಮೀರಿಹೋಗಿತ್ತು. 


ಅವತ್ತಿನ ಸಂಜೆ ೪೦ ಕಿ.ಮಿ ದೂರದ ’ಸಮ್’ ಎನ್ನುವ ಸ್ಥಳಕ್ಕೆ ನಮ್ಮ ಭೇಟಿ . ಮರಳುಗಾಡು ಎಂಬುದರ ನಿಜಚಿತ್ರಣವನ್ನು ಕಾಣಲು ಇಲ್ಲಿ ಸಾಧ್ಯ. ನುಣುಪಾದ ಮರಳ ದಿಣ್ಣೆಗಳು ಇಲ್ಲಿ ಸಮುದ್ರದಂತೆ ಅಲೆಅಲೆಗಳಾಗಿ ಹರಡಿಕೊಂಡಿವೆ. ಬೀಸುಗಾಳಿಯು ಇಲ್ಲಿ ಮರಳಮೇಲೆಯೇ ವಕ್ರರೇಖೆಗಳ ಚಿತ್ತಾರ ಬಿಡಿಸುತ್ತದೆ. ಇಲ್ಲಿನ ಸೂರ್ಯಾಸ್ತದ ಸೊಬಗನ್ನು ನೋಡಲು ನೂರಾರು ಜನ ಸೇರಿದ್ದರು. ಈ ಪ್ರದೇಶದಲ್ಲಿ ಅನೇಕ ಮರುಭೂಮಿಯ ರೆಸಾರ್ಟುಗಳು, ಕ್ಯಾಂಪುಗಳು ಇವೆ. ಒಂಟೆ ಸವಾರಿ, ಸಾಂಪ್ರದಾಯಿಕ ನೃತ್ಯಸಂಗೀತಗಳು ಪ್ರವಾಸಿಗರನ್ನು ರಂಜಿಸುತ್ತವೆ. ಅಂದು ರಾತ್ರಿ ನಮ್ಮ ಕ್ಯಾಂಪಿನಲ್ಲಿ ಅಲ್ಲಿನ ವಿಶೇಷ ಬಾಜ್ರಾ(ಸಜ್ಜೆ) ರೊಟ್ಟಿ ಮತ್ತು ಕೇರ್ ಸಾಂಗ್ರಿ ಎಂಬ ಹುಲ್ಲಿನಂತ ಗಿಡದಿಂದ ಮಾಡಿದ ಪಲ್ಯವನ್ನು ಸವಿದೆವು. ಆಯೋಜಿತವಾಗಿದ್ದ ಸಂಗೀತಕಾರ್ಯಕ್ರಮವನ್ನು ತಣ್ಣನೆಯ ರಾತ್ರಿಯಲ್ಲಿ ಎಂಜಾಯ್ ಮಾಡಿದೆವು.

ಮರುದಿನ ಜೈಸಲ್ಮೇರ್ ಪಟ್ಟಣದ ಸುತ್ತಮುತ್ತ  ಇರುವ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟೆವು. ೧೬ ಕಿ.ಮಿ ದೂರದಲ್ಲಿ ’ಕುಲ್ದಾರಾ’ ಎನ್ನುವ ಒಂದು ವಿಚಿತ್ರ ಹಳ್ಳಿಯಿದೆ. ಅಲ್ಲಿನ ಕತೆಯ ಪ್ರಕಾರ ನೂರಾರು ವರ್ಷಗಳ ಹಿಂದೆ ಜೈಸಲ್ಮೇರಿನ ರಾಜ ಇಲ್ಲಿನ ಹುಡುಗಿಯೊಬ್ಬಳನ್ನು ಮದುವೆಯಾಗಲು ಒತ್ತಾಯಿಸಿದ್ದರಿಂದ ಅಲ್ಲಿದ್ದ ನಾನೂರು ಕುಟುಂಬಗಳು ಒಂದೇ ರಾತ್ರಿಯಲ್ಲಿ ಹಳ್ಳಿಯನ್ನು ತೊರೆದುಹೋದವಂತೆ.! ಈಗ ಅಲ್ಲಿ ಬರೀ ಪಾಳುಬಿದ್ದ ಮನೆಗಳಿವೆ. ಜೈಸಲ್ಮೇರದ ಹಲವು ಮ್ಯೂಸಿಯಂಗಳು, ಹವೇಲಿಗಳು, ಬಡಾಬಾಗ್, ಗಡಿಸರ್ ಸರೋವರ, ಅಮರ್ ಸಾಗರ್ ಸರೋವರ, ಲೋದರ್ವದ ಸುಂದರ ಜೈನಮಂದಿರ ಮುಂತಾದವು ಅಲ್ಲಿನ ಇನ್ನಿತರ ಪ್ರೇಕ್ಷಣೀಯ ಸ್ಥಳಗಳು.

ಹೋಗುವುದು ಹೇಗೆ?

ಬೆಂಗಳೂರಿನಿಂದ ಜೈಪುರ ಅಥವಾ ದೆಹಲಿಗೆ ವಿಮಾನ ಅಥವಾ ಟ್ರೇನಿನಲ್ಲಿ ಪ್ರಯಾಣಿಸಿ ಅಲ್ಲಿಂದ ನೇರ ಟ್ರೇನ್ ಮೂಲಕ ಜೈಸಲ್ಮೇರ್ ತಲುಪಬಹುದು. ಅತಿಹತ್ತಿರದ ವಿಮಾನ ನಿಲ್ದಾಣ ಜೋಧಪುರ. ಜೋಧಪುರ, ಉದಯಪುರ, ಬಿಕಾನೇರ್, ಅಜ್ಮೇರ್, ಅಹಮದಾಬಾದ್ ಮುಂತಾದ ನಗರಗಳಿಂದಲೂ ರಸ್ತೆ ಹಾಗೂ ರೈಲುಮಾರ್ಗಗಳಿಂದ ಸಂಪರ್ಕಿತವಾಗಿದೆ.  

ಜೂನ್ ೫, 2016ರ ವಿಜಯಕರ್ನಾಟಕ 'ಸಾಪ್ತಾಹಿಕ ಲವಲವಿಕೆ'ಯಲ್ಲಿ ಪ್ರಕಟಿತ