ಭಾನುವಾರ, ಜುಲೈ 2, 2023

ಐಫೋನ್'ಗಾಗಿ ಕನ್ನಡ ಕೀಬೋರ್ಡ್ ಆಪ್‌ಗಳು

ಐಫೋನ್/ಐಪ್ಯಾಡಲ್ಲಿ ಕನ್ನಡದಲ್ಲಿ ಬರೆಯಲು ಇನ್ ಬಿಲ್ಟ್ ಕೀಬೋರ್‍ಡ್ ಇದೆ. ಆದರೆ ಅದು ಅಷ್ಟು ಅನುಕೂಲವಾಗಿಲ್ಲ ಅನ್ನಿಸುವವರಿಗೆ ಬೇರೆ ಹಲವಾರು ಆಯ್ಕೆ ಇವೆ. ಅವುಗಳಲ್ಲಿ ಕೆಲವು ಆ‌ಪ್ ಗಳು ಬಳಕೆಗೆ ಸುಲಭವಾಗಿವೆ ಅಂತ ಅವುಗಳನ್ನು ಬಳಸುತ್ತಿರುವ ಐಫೋನಿಗರು ಹೇಳುತ್ತಾರೆ. ಹಾಗೆ ಶಿಫಾರಸ್ಸು ಮಾಡಲ್ಪಟ್ಟ ಕೆಲ ಆಪ್ ಗಳು ಚಿತ್ರದಲ್ಲಿವೆ.



ಶನಿವಾರ, ಫೆಬ್ರವರಿ 4, 2023

ವಿಕಿ ಸಮ್ಮಿಲನ ೨೦೨೩, ಉಡುಪಿ

 

Wikimedia FoundationWikimedia logo family complete-2022
CC BY-SA 3.0
ಆನ್ ಲೈನ್ ಜಗತ್ತಿನಲ್ಲಿ ಬಹುತೇಕರಿಗೆ ಗೊತ್ತಿರುವ ವಿಕಿಪೀಡಿಯಾ ಎನ್ನುವುದು ಒಂದು ಮುಕ್ತಜ್ಞಾನದ ಮಾಹಿತಿ ತಾಣ. ಇದರ ವಿಶೇಷ ಎಂದರೆ ಇದು ಜನಸಮುದಾಯದಿಂದಲೇ ನಡೆಯಲ್ಪಡುವುದು. ಅಂದರೆ ಇದರಲ್ಲಿ ಮಾಹಿತಿ ತುಂಬಿಸಲು ಮತ್ತು ಮಾಹಿತಿ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಇದು ಜಗತ್ತಿನ ಹಲವಾರು ಭಾಷೆಗಳಲ್ಲಿದ್ದು ಕನ್ನಡದಲ್ಲೂ ಸಹ ಸಕ್ರಿಯವಾಗಿದೆ.  ವಿಕಿಪೀಡಿಯಾ ಅನ್ನುವುದು ಒಂದು ಯೋಜನೆಯಾಗಿದ್ದು ಇದೇ ರೀತಿ ವಿಕಿಸೋರ್‍ಸ್, ವಿಕಿಕೋಟ್ಸ್, ವಿಕ್ಷನರಿ, ವಿಕಿಡೇಟಾ, ವಿಕಿ ಕಾಮನ್ಸ್ .. ಹೀಗೆ ಹಲವಾರು ಯೋಜನೆಗಳು ವಿವಿಧ ಭಾಷೆಗಳಲ್ಲಿ ಮುಕ್ತಜ್ಞಾನ ಮತ್ತು ಮುಕ್ತಮಾಹಿತಿಯ ಉದ್ದೇಶದಿಂದ ನಡೆಯಲ್ಪಡುತ್ತಿವೆ. ಇವೆಲ್ಲವನ್ನು ಸೇರಿ 'ವಿಕಿಮೀಡಿಯ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾ ಕೊಡುಗೆ ನೀಡುತ್ತಿರುವವರನ್ನು ವಿಕಿಮೀಡಿಯನ್ಸ್ (ವಿಕಿಮೀಡಿಯನ್ನರು) ಎನ್ನಲಾಗುತ್ತದೆ.

ವಿಕಿಮೀಡಿಯನ್ ಸಮುದಾಯ ಆಗಾಗ ಭೇಟಿಯಾಗುವುದು ವಾಡಿಕೆ. ಸಾಮಾನ್ಯವಾಗಿ ಒಂದಿಷ್ಟು ಸಕ್ರಿಯ ವಿಕಿಮೀಡಿಯನ್ನರು ಒಂದೆಡೆ ಸೇರಿ ಆ ಯೋಜನೆಗಳ ಬಗ್ಗೆ ಚರ್‍ಚಿಸುವುದು, ಸಮುದಾಯವನ್ನು ಬೆಳೆಸುವ ಬಗ್ಗೆ ಕಾರ್‍ಯಯೋಜನೆ ರೂಪಿಸುವುದು, ಪರಸ್ಪರ ಮಾಹಿತಿ ವಿನಿಮಯ, ತರಬೇತಿ, ಕಾರ್‍ಯಾಗಾರಗಳು ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗುವ ಅಭ್ಯಾಸವಿದೆ. ಆಯಾ ಭಾಷಾ ಸಮುದಾಯಗಳು ಅಥವಾ ನಿರ್‍ದಿಷ್ಟ ಕಾರ್‍ಯಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಬಳಕೆದಾರರ ಗುಂಪುಗಳು ಕೂಡ ಉದ್ದೇಶಿತ ಕೆಲಸಗಳಿಗಾಗಿ ಭೇಟಿಯಾಗುತ್ತವೆ.  

ಈಗೊಂದು ಎರಡ್ಮೂರು ವರ್‍ಷಗಳಿಂದ ಕೋವಿಡ್ ಮುಂತಾದ ಕಾರಣಗಳಿಂದ  ಭೌತಿಕ ಭೇಟಿ ಸಾಧ್ಯವಾಗದೇ ಹೋಗಿತ್ತು. ಈ ಸಂದರ್‍ಭದಲ್ಲಿ ಮೂರ್‍ನಾಲ್ಕು ಬಾರಿ ಆನ್ ಲೈನ್ ಸಭೆಗಳನ್ನು ನಡೆಸಿದ್ದೆವು.  ಆ ಸಭೆಯಲ್ಲಿ ಚರ್‍ಚಿಸಿದಂತೆ ಈ ಬಾರಿ ಒಂದು ಭೌತಿಕ ಸಮ್ಮಿಲನವನ್ನು  ಉಡುಪಿಯಲ್ಲಿ ನಡೆಸುವುದು ಎಂದು ತೀರ್‍ಮಾನವಾಯಿತು.  

PavanajaKannada Wiki Sammilana 2023 Udupi 02CC BY-SA 4.0
ಜನವರಿ ೨೩ರಂದು ಉಡುಪಿಯ ಜಿ. ಶಂಕರ್ ಮಹಿಳಾ ಸರ್‍ಕಾರಿ ಕಾಲೇಜಿನ ಸಭಾಂಗಣದಲ್ಲಿ ಒಂದು
ದಿನದ ಸಮ್ಮಿಲನವನ್ನು ನಡೆಸಿದೆವು. ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನಡೆದ ಈ ಸಮ್ಮಿಲನ ಕಾರ್‍ಯಕ್ರಮವನ್ನು ಉದ್ಘಾಟಿಸಿದವರು ನಾಡೋಜ ಕೆ.ಪಿ.ರಾವ್ ಅವರು. 

ಅನಂತರ ಹಲವು ವಿಕಿಮೀಡಿಯನ್ನರಿಂದ ಹಲವು ವಿಷಯಗಳ ಬಗ್ಗೆ ಸೆಮಿನಾರ್, ಪ್ರೆಸೆಂಟೇಶನ್ ಗಳು ನಡೆದವು. ವಿಕಿಮೀಡಿಯ ಕ್ವಿಜ್ ನಡೆಸಲಾಯಿತು, ಮಾಹಿತಿ ವಿನಿಮಯ ಚರ್ಚೆಗಳು ನಡೆದವು. ಬೇರೆ ಬೇರೆ ಊರುಗಳಿಂದ , ಹೆಚ್ಚಾಗಿ ಕರಾವಳಿಯ ಊರುಗಳಿಂದ ಹಲವು ಹಳೆ ಹೊಸ ವಿಕಿಮೀಡಿಯನ್ನರು ಪಾಲ್ಗೊಂಡಿದ್ದ ಈ ಸಮ್ಮಿಲನವು ಬಹಳ ದಿನಗಳ ನಂತರ ಪರಸ್ಪರ ಭೇಟಿಯಾಗುವ ಅವಕಾಶ ಕಲ್ಪಿಸಿತು.  ಡಾ. ಯು.ಬಿ. ಪವನಜರ ಮಾರ್‍ಗದರ್ಶನದಲ್ಲಿ ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರು ಸಭಾಂಗಣದ ತಯಾರಿಯನ್ನು ಚೆನ್ನಾಗಿ ಮಾಡಿ ಚಟುವಟಿಕೆಯಿಂದ ಪಾಲ್ಗೊಂಡರು.

ಕಾರ್‍ಯಕ್ರಮದ ವಿವರಗಳು: ವಿಕಿಪೀಡಿಯ ಪುಟದಲ್ಲಿ - 

ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ

PavanajaKannada Wiki Sammilana 2023 Udupi 65CC BY-SA 4.0


ಸಂಜೆ ನಾವೊಂದಿಷ್ಟು ಗೆಳೆಯರು ಉಡುಪಿ ಸಮೀಪದ ಮಟ್ಟು, ಪಡುಕೆರೆ ಕಡಲತೀರಕ್ಕೆ ಭೇಟಿ ಕೊಟ್ಟು ಚೆಲುವಿನ ಸೂರ್‍ಯಾಸ್ತವನ್ನು ಅನುಭವಿಸಿದೆವು.
ಮಟ್ಟು - ಪಡುಕೆರೆ ಬೀಚ್ ರಸ್ತೆ , ಉಡುಪಿ

ಮಟ್ಟು - ಪಡುಕೆರೆ ಬೀಚ್ , ಉಡುಪಿ