ಗುರುವಾರ, ಜೂನ್ 6, 2013

ಗೂಗಲ್ ರೀಡರ್ ನಿವೃತ್ತಿ, ಮುಂದೇನು ಗತಿ !

ಮಾರ್ಚ್ ೧೩ ರಂದು ಎಂದಿನಂತೆ ಗೂಗಲ್ ರೀಡರ್ ತೆರೆದಾಗ ಸಂದೇಶವೊಂದು ಕಾಣುತ್ತಿತ್ತು.  ಅದರಲ್ಲಿ ಜುಲೈ ೧, ೨೦೧೩ಕ್ಕೆ ಗೂಗಲ್ ರೀಡರ್ ನಿವೃತ್ತಿ ಅಗುವುದಾಗಿ ಹೇಳಿತ್ತು. ರೀಡರ್ ಬಳಕೆದಾರರು ಮತ್ತು ಅಭಿಮಾನಿಗಳಿಗೆ ಇದು ಬ್ರೇಕಿಂಗ್ ಮತ್ತು ಶಾಕಿಂಗ್ ನ್ಯೂಸ್ ಆಗಿತ್ತು.

ಈ ಮೊದಲು ಗೂಗಲ್ ಬಜ್, ವೇವ್ ಮುಂತಾದ ಸೇವೆಗಳನ್ನು ನಿಲ್ಲಿಸಿದ್ದ ಗೂಗಲ್ ನವರು ಈಗ ತಮ್ಮ ಗೂಗಲ್ ರೀಡರ್ ಸೇವೆಯನ್ನು ಜುಲೈ ೧ ಕ್ಕೆ ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ಮುಳುಗಡೆ ಸಮಯವನ್ನು ಕೊಟ್ಟು ನಮ್ಮ ಎಲ್ಲಾ ಡೇಟಾ ತೆಗೆದಿಟ್ಟುಕೊಂಡು ಬೇರೆಡೆಗೆ ಸಾಗಿಸಿಕೊಳ್ಳುವ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಗೂಗಲ್ ರೀಡರ್ ನಿಲ್ಲಿಸಲು ಕೊಟ್ಟ ಎರಡು ಕಾರಣಗಳೆಂದರೆ, ಬಳಕೆದಾರರು ಕಡಿಮೆಯಾಗಿರುವುದು ಮತ್ತು ಗೂಗಲ್ಲಿನ ಹಲವಾರು ಉತ್ಪನ್ನಗಳನ್ನು ನಿಲ್ಲಿಸಿ ಕೆಲವೇ ಉತ್ಪನ್ನಗಳ ಅಭಿವೃದ್ಧಿ ಮಾಡುವುದು. ಇದರಲ್ಲಿ ಮೊದಲನೆಯ ಕಾರಣ ಅಂತಹ ನಿಜವೇನಲ್ಲ ಅನ್ನುವುದು ತಿಳಿದಿದೆ. ಏಕೆಂದರೆ ಜಗತ್ತಿನಾದ್ಯಂತ ಬಹುಸಂಖ್ಯೆಯಲ್ಲಿ ರೀಡರ್ ಬಳಕೆದಾರರಿದ್ದಾರೆ ಅಂತ ಮಾಹಿತಿಗಳು ಹೇಳುತ್ತಿವೆ. ಈ ಮೊದಲ ಒಂದೆರಡು ವರ್ಷಗಳಿಂದ ಹಂತಹಂತವಾಗಿ ಗೂಗರ್ ರೀಡರಿನಲ್ಲಿದ್ದ Like, share, share with note ಮುಂತಾದ ಸೌಲಭ್ಯಗಳನ್ನು ತೆಗೆದಿದ್ದರು. ಅವುಗಳ ಸ್ಥಾನದಲ್ಲಿ ಗೂಗಲ್ ಪ್ಲಸ್ ಇಡಲಾಗಿತ್ತು.

ನಾನು ಸುಮಾರು ಏಳು ವರ್ಷಗಳಿಂದ ಈ ಗೂಗಲ್ ರೀಡರ್ ಬಳಕೆ ಮಾಡುತ್ತಿದ್ದೆ. ಬಹಳ ಅನುಕೂಲಕರವಾಗಿಯೂ ಉಪಯುಕ್ತವಾಗಿಯೂ ಇದ್ದಂತಹ ಅಪ್ಲಿಕೇಶನ್ ಇದು. ಈಗ ಅನಿವಾರ್ಯವಾಗಿ ಬೇರೆ ದಾರಿಗಳನ್ನು ಹುಡುಕಬೇಕಾಗಿದೆ.  ಅಂತರಜಾಲದಲ್ಲಿ ಬೇರೆ ಬೇರೆ ಬ್ಲಾಗ್ ಗಳನ್ನು, ಮಿಂಬಲೆತಾಣಗಳನ್ನು, ಸುದ್ದಿತಾಣಗಳನ್ನು ಓದುವ ಅಭ್ಯಾಸ ಇಟ್ಟುಕೊಂಡ ಲಕ್ಷಾಂತರ ಜನರದ್ದೂ ಕೂಡ ಇದೇ ಪರಿಸ್ಥಿತಿಯಾಗಿದೆ. ಇದ್ದಕ್ಕಿದ್ದ ಹಾಗೇ ಬಂದೆರಗಿದ ಈ ಸುದ್ದಿಯಿಂದಾಗಿ ವೆಬ್ ಓದುಗರು  ಪರ್ಯಾಯಗಳನ್ನು ಹುಡುಕತೊಡಗಿದ್ದಾರೆ.

ಗೂಗಲ್ ರೀಡರ್ ಬಗ್ಗೆ ಗೊತ್ತಿಲ್ಲದವರಿದ್ದರೆ, ಅದನ್ನು ಹೀಗೆ ತಿಳಿದುಕೊಳ್ಳಬಹುದು. ಗೂಗಲ್ ರೀಡರ್ ಎಂಬುದು ಬೇರೆ ಬೇರೆ ಅಂತರಜಾಲ ತಾಣ(websites/blogs)ಗಳನ್ನು ಒಂದೇ ತಾಣದಲ್ಲಿ ಓದಲು ಸಾಧ್ಯವಾಗಿಸುವಂತಹ ಒಂದು ವ್ಯವಸ್ಥೆ. ಪ್ರತಿಯೊಂದು ತಾಣಗಳಿಗೂ ಒಂದೊಂದು ವೆಬ್ ವಿಳಾಸ (URL)ಇರುತ್ತದೆ. ಈ ಎಲ್ಲಾ ತಾಣಗಳ ವಿಳಾಸಗಳನ್ನು ನೆನಪಿಟ್ಟುಕೊಳ್ಳಲು ಆಗುವುದಿಲ್ಲ. ಹಾಗಂತ ಅವುಗಳನ್ನು ಬ್ರೌಸರ್ ಫೇವರಿಟ್ ನಲ್ಲಿ ಸೇರಿಸಿಟ್ಟುಕೊಳ್ಳಬಹುದಾದರೂ ಪ್ರತಿ ತಾಣದಲ್ಲಿ ಹೊಸ ಬರಹ ಹಾಕಿದ್ದು, ಸುದ್ದಿತಾಣಗಳಲ್ಲಿ ಸುದ್ದಿ update ಆಗಿದ್ದು ತಿಳಿಯಬೇಕೆಂದರೆ ಪ್ರತಿಯೊಂದು ತಾಣವನ್ನು ತೆರೆದು ನೋಡಬೇಕಾಗುತ್ತದೆ. ಕೆಲವೇ ಕೆಲವು ತಾಣಗಳು ನಮ್ಮ ಓದಿನ ಪಟ್ಟಿಯಲ್ಲಿದ್ದರೆ ಇದನ್ನು ಮಾಡಬಹುದು. ಆದರೆ ನೂರಾರು ಬ್ಲಾಗ್ ಗಳು, ವೆಬ್ ಸೈಟುಗಳನ್ನು ಈ ರೀತಿ ಮಾಡಲು ಸಾಧ್ಯವಿಲ್ಲ. ಅದೂ ಅಲ್ಲದೇ, ಹಾಗೆ ಮಾಡಿಕೊಂಡರೂ ಅದು ಆ ಕಂಪ್ಯೂಟರಲ್ಲಿ ಮಾತ್ರವೇ ಶೇಖರವಾಗಿರುತ್ತದೆ. ಬೇರೆ ಕಂಪ್ಯೂಟರ್ ಗಳಲ್ಲಿ ನೋಡಲು ಆಗುವುದಿಲ್ಲ. ಅದಕ್ಕಾಗಿ ಈ ಗೂಗಲ್ ರೀಡರ್ ಮೂಲಕ ನಮಗೆ ಬೇಕಾದ ಎಲ್ಲಾ ತಾಣಗಳ ಕೊಂಡಿಗಳನ್ನು ಹಾಕಿಟ್ಟುಕೊಂಡು ಚಂದಾದಾರಿಕೆ (subscribe) ಮಾಡಿಕೊಂಡುಬಿಟ್ಟರೆ ಎಲ್ಲಾ ತಾಣಗಳ ಎಲ್ಲಾ ಪೋಸ್ಟ್ ಗಳನ್ನು ಯಾವ  ಕಂಪ್ಯೂಟರ್ ನಲ್ಲಾದರೂ ಒಂದೆಡೆಗೇ ನೋಡಲು ಸಾಧ್ಯವಾಗುತ್ತದೆ ಮತ್ತು ಹೊಸ ಪೋಸ್ಟುಗಳು ಬಂದಾಗ ತಿಳಿಯುತ್ತದೆ. ಪ್ರತಿತಾಣವನ್ನು ತೆರೆದು ನೋಡುವುದು ಬೇಕಿರುವುದಿಲ್ಲ. ನಮ್ಮ ಜಿಮೇಲ್ ಐಡಿಯಿಂದಲೇ ಗೂಗಲ್ ರೀಡರ್ ಗೆ ಲಾಗಿನ್ ಆದರೆ ಸಾಕು. ಅದರಲ್ಲಿ ನಮ್ಮ ಇಮೇಲ್ ಅಂಚೆಪೆಟ್ಟಿಗೆಯಂತೆಯೇ ಎಲ್ಲಾ ಬರಹಗಳೂ ಕೂಡ ಕಾಣುತ್ತವೆ.  ನೇರವಾಗಿ ಅಲ್ಲಿಯೇ ಓದಬಹುದು.

ನಾನು ಸುಮಾರು ಏಳುನೂರು ಬ್ಲಾಗ್, ವೆಬ್ ತಾಣಗಳನ್ನು ಇದರ ಮೂಲಕ ಹಿಂಬಾಲಿಸುತ್ತಿದ್ದೆ. ಎಲ್ಲಾ ಬ್ಲಾಗು/ತಾಣಗಳಲ್ಲೂ ಕಣ್ಣು ಹಾಯಿಸಲು ನೆರವಾಗುತ್ತಿತ್ತು.. ವ್ಯವಸ್ಥಿತವಾಗಿ ಓದಲು ಮತ್ತು ಗುರುತಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಈಗ ಗೂಗಲ್ ರೀಡರ್ ಬದಲಿಗೆ ಬೇರೆ ಯಾವುದು ಇಷ್ಟೇ ಅನುಕೂಲಕರವಾದ ಯಾವ ಬೇರೆ ಅಪ್ಲಿಕೇಶನ್ ಇವೆ ಎಂಬುದರ ಹುಡುಕಾಟದಲ್ಲಿದ್ದೇನೆ. ಈ ಬಗ್ಗೆ ಗೆಳೆಯರನೇಕರು ಕೆಲವು ಸಲಹೆಗಳನ್ನೂ, ರೀಡರಿನಂತದ್ದೇ ಸೇವೆ ಒದಗಿಸುವ ಇತರ ಕೆಲವು ತಾಣಗಳನ್ನೂ ಸೂಚಿಸಿದ್ದಾರೆ.  ಅಂತರಜಾಲದಲ್ಲಿ ನೋಡಿದರೆ ಈ ಬಗ್ಗೆ ಜಗತ್ತಿನ ಎಲ್ಲೆಡೆಯ ಬಳಕೆದಾರರಿಂದ ಜೋರು ಚರ್ಚೆಯೂ ನಡೆಯುತ್ತಿದೆ.  Best alternatives ಎಂದು ಹಲವು ತಾಣಗಳನ್ನು ಆನ್ ಲೈನ್ ಮ್ಯಾಗಜೀನ್ ಗಳು ಪಟ್ಟಿ ಮಾಡಿಕೊಡುತ್ತಿವೆ. ವಲಸೆಪರ್ವ ಶುರುವಾಗಿದೆ. ನಾನು ಸ್ನೇಹಿತರು ಸೂಚಿಸಿದ ಕೆಲವು ತಾಣಗಳನ್ನು ಪ್ರಯತ್ನಿಸಿ ನೋಡಿದ್ದೇನೆ. ಎಲ್ಲವೂ ಒಂದು ಮಟ್ಟಿಗೆ ಅಡ್ಡಿಲ್ಲ ಅನ್ನಿಸಿದರೂ ಗೂಗರ್ ರೀಡರಿನಷ್ಟು ಅನುಕೂಲಕರವೆನಿಸುತ್ತಿಲ್ಲ. ಇನ್ನೂ ಒಂದಿಷ್ಟು ತಾಣಗಳನ್ನು ಪ್ರಯೋಗಿಸಿ ನೋಡಿ ಒಂದು ತೀರ್ಮಾನಕ್ಕೆ ಬರಬೇಕಿದೆ. ಇದ್ದಿದ್ದರಲ್ಲಿ ಒಂದು ಸಮಾಧಾನದ ಅಂಶ ಎಂದರೆ ಗೂಗಲ್ ರೀಡರಿನಲ್ಲಿ subscribe ಮಾಡಿಕೊಂಡಿದ್ದ ಎಲ್ಲಾ ಕೊಂಡಿಗಳನ್ನೂ ಹೊಸತಾಣಗಳಿಗೆ ರಫ್ತು ಮಾಡಲು (export) ಅವಕಾಶವಿರುವುದು.

ಈ ಕೆಳಗಿನವು ಗೂಗಲ್ ರೀಡರಿಗೆ ಕೆಲವು ಪರ್ಯಾಯ ತಾಣಗಳು:  ಪ್ರಯತ್ನಿಸಿ ನೋಡಬೇಕು !
Cloud based: Bloglines, Old reader, NetVibes, NewsBlur, Feedly, Bloglovin, PulseTaptuPulse News
Desktop based: Feeddemon

ನೀವೂ ಗೂಗಲ್ ರೀಡರ್ ಬಳಕೆದಾರರಾಗಿದ್ದರೆ ನಿಮ್ಮ ಅನುಭವ ಏನು? ಹೊಸ ವ್ಯವಸ್ಥೆ ಏನು ಮಾಡಿಕೊಂಡಿದ್ದೀರಿ ತಿಳಿಸಿ.

ಇಷ್ಟು ವರ್ಷ ಸೇವೆ ನೀಡಿ ನಿವೃತ್ತಿಯಾಗುತ್ತಿರುವ ಗೂಗಲ್ ರೀಡರಿಗೆ ಧನ್ಯವಾದಗಳು. Miss you reader !

image: www.design-milk.com