ಪುಟಗಳು

ಶನಿವಾರ, ಜುಲೈ 31, 2010

" ವ್ಯವಹಾರ "

ಧ್ಯಾಹ್ನ ಸೂರ್ಯನ ಉರಿಬಿಸಿಲು ಸುರಿದಿತ್ತು. ಕಣ್ಣಿನ ನಿಲುಕಿನವರೆಗೂ ಹೊಲಗದ್ದೆಗಳು ಹರಡಿದ್ದವು. ಮರಗಳ ಸಾಲಿನಿಂದ ಬೇರ್ಪಡಿಸಲ್ಪಟ್ಟ ಆ ಹೊಲಗಳಲ್ಲಿ ಹಳದಿ ಗೋಧಿ, ಮಾಸಲು ಹಸಿರು ಓಟ್, ದಟ್ಟ ಹಸಿರಿನ ಕ್ಲೋವರ್ ಮುಂತಾದ ಬೆಳೆಗಳು ನಳನಳಿಸುತ್ತಿದ್ದವು. ದೂರದಲ್ಲಿ, ಒಂದು ದೊಡ್ಡ ಇಳಿಜಾರಿನ ಮೇಲ್ತುದಿಯಲ್ಲಿ ಅಸಂಖ್ಯ ರಾಸುಗಳ ಹಿಂಡು ಮೇಯುತ್ತಿದ್ದವು. ಕೆಲವು ನಿಂತು, ಕೆಲವು ಕೂತು ಮೆಲುಕು ಹಾಕುತ್ತಿದ್ದವು. ಬಿಸಿಲಿನ ಝಳಕ್ಕೆ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳುಕಿಸುತ್ತಾ ಒಂದು ಸರೋವರದಂತೆ ಹರಡಿಕೊಂಡಿದ್ದವು.

ಇಬ್ಬರು ಹೆಂಗಸರು, ಅಮ್ಮ ಮಗಳು, ಒಬ್ಬರ ಹಿಂದೊಬ್ಬರು ಬಿರುಸಾಗಿ ದನಗಳ ಹಿಂಡಿನೆಡೆಗೆ ನೆಡೆಯುತ್ತಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ದೊಡ್ಡ ಹಿತ್ತಾಳೆಯ ಪಾತ್ರೆಗಳಿವೆ. ಅವರ ಒಂದೊಂದು ಹೆಜ್ಜೆಗೂ ಆ ಲೋಹದ ಪಾತ್ರೆಗಳು ಸೂರ್ಯನ ಬೆಳಕಿಗೆ ಫಳಕ್ಕನೆ ಮಿಂಚುತ್ತಿವೆ. ಆ ಇಬ್ಬರು ಮಾಲಿವೋಯಿರೆ* ಹೆಂಗಸರು ಏನೂ ಮಾತನಾಡದೇ ಹಾಲು ಕರೆಯಲು ಬರುತ್ತಿದ್ದಾರೆ. ಹಸುಗಳ ಹಿಂಡಿನೆಡೆಗೆ ಬಂದೊಡನೆ ತಮ್ಮ ಕೈಲಿದ್ದ ಪಾತ್ರೆಗಳನ್ನು ಕೆಳಗಿಟ್ಟರು. ಸಾಲಿನಲ್ಲಿ ಮುಂದೆ ಕೂತು ಮೆಲುಕು ಹಾಕುತ್ತಿದ್ದ ಎರಡು ಹಸುಗಳ ಪಕ್ಕೆಯ ಮೇಲೆ ಕೋಲಿನಿಂದ ಮೆಲ್ಲಗೆ ತಟ್ಟಿದರು. ಅವು ತಮ್ಮ ಮುಂಗಾಲುಗಳನ್ನು ಊರಿ ಅನಂತರ ತಮ್ಮ ಹಿಂಭಾರವನ್ನು ಎತ್ತುತ್ತಾ ನಿಧಾನಕ್ಕೆ ಎದ್ದವು. ಹಿಂದಿನ ಕಾಲುಗಳ ಮಧ್ಯೆ ಭಾರದಿಂದ ಜೋತುಬಿದ್ದಂತಹ ಸಮೃದ್ಧವಾದ ಕೆಚ್ಚಲು ತೂಗುತ್ತಿತ್ತು. ಹಸುಗಳ ಹೊಟ್ಟೆಯಡಿ ಮಂಡಿಯೂರಿ ಪಾತ್ರೆಗಳನ್ನಿಟ್ಟು ಹಾಲು ಕರೆಯಲು ಶುರುಮಾಡಿದರು. ಒಂದೊಂದು ಬಾರಿ ಹಿಂಡಿದಾಗಲೂ ಹಾಲು ಪಿಚಕಾರಿಯಂತೆ ಹಾರಿ ಪಾತ್ರೆ ತುಂಬಿಸುತ್ತಾ ಹೋದಂತೆ ಹಳದಿ ನೊರೆ ಮೇಲೇರುತ್ತಾ ಬಂತು. ಇದೇ ರೀತಿ ಸಾಲಿನಲ್ಲಿರುವ ಕೊನೆಯ ಹಸುವಿನ ತನಕ ಎಲ್ಲಾ ಹಸುಗಳ ಹಾಲನ್ನು ಹಿಂಡುತ್ತಾ ಹೋದರು ಅಮ್ಮ ಮತ್ತು ಮಗಳು. ಒಂದೊಂದು ಹಸುವಿನ ಹಾಲು ಕರೆದಾದ ಮೇಲೂ ಅವುಗಳನ್ನು ಹಸಿರು ಹುಲ್ಲಿನೆಡೆಗೆ ಕರೆದೊಯ್ದು ಮೇಯ್ದುಕೊಳ್ಳಲು ಬಿಡುತ್ತಿದ್ದರು.

ಎಲ್ಲಾ ಮುಗಿದಾದ ಮೇಲೆ ಹಾಲು ತುಂಬಿದ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ನಿಧಾನಕ್ಕೆ ನಡೆಯುತ್ತಾ ಮನೆಯ ಕಡೆ ಹೊರಟರು. ಅಮ್ಮ ಮುಂದೆ ನೆಡೆಯುತ್ತಿದ್ದಳು. ಮಗಳು ಹಿಂದೆ. ಸ್ವಲ್ಪ ದೂರ ನೆಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೇ ಹಿಂದೆ ನೆಡೆಯುತ್ತಿದ್ದ ಮಗಳು ತನ್ನ ಹೊರೆಯನ್ನೆಲ್ಲಾ ಥಟ್ಟನೆ ಕೆಳಕ್ಕಿಟ್ಟು ಕುಸಿದು ಕುಳಿತುಬಿಟ್ಟಳು. ಮುಂದೆ ನೆಡೆಯುತ್ತಿದ್ದ ಮಾಲಿವೋಯಿರೆ ಹೆಂಗಸು, ತನ್ನ ಮಗಳ ಹೆಜ್ಜೆ ಸಪ್ಪಳ ನಿಂತುದ್ದನ್ನು ಗಮನಿಸಿ, ಹಿಂದಿರುಗಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.

"ಏನಾಯ್ತು ನಿಂಗೆ?" ಕೇಳಿದಳು ಅಮ್ಮ.

ಕೆಂಚು ಕೂದಲಿನ, ಕೆಂಪುಕೆನ್ನೆಯ ಮಗಳು ಸೆಲೆಸ್ಟಿ ಒದೆ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಸಣ್ಣಗೆ ಅಳುತ್ತಾ ಕೂತಿದ್ದಳು. ಉರಿಬಿಸಿಲಿನಲ್ಲಿ ಬಸವಳಿದ ಅವಳ ಮುಖ ಬೆಂಕಿ ಕೆಂಡದಂತಾಗಿತ್ತು.

"ನನ್ನ ಕೈಯಲ್ಲಿ ಈ ಪಾತ್ರೆ ಹೊತ್ತುಕೊಂಡು ಬರಲಿಕ್ಕಾಗಲ್ಲ"

ಅಮ್ಮ ತನ್ನ ಮಗಳನ್ನು ಸಂಶಯದಿಂದ ನೋಡಿದಳು.

"ಏನು ತೊಂದರೆ ನಿಂಗೆ ಹೇಳು", ಕೇಳಿದಳು.

"ಇದು ಬಹಳಾ ಭಾರ, ನನ್ನ ಕೈಲಾಗೋಲ್ಲ, ಸುಸ್ತಾಗ್ತಿದೆ". ಭಾರದ ಎರಡು ಹಾಲಿನ ಪಾತ್ರೆಗಳನ್ನ ನೆಲದ ಮೇಲೆ ಇಟ್ಟು ಅದರ ಮಧ್ಯದಲ್ಲಿ ಕುಳಿತು ತನ್ನ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಸೆಲೆಸ್ಟಿ ಉತ್ತರಿಸಿದಳು. ದನಿ ಉಡುಗಿಹೋಗಿತ್ತು. ದುಃಖ ತುಂಬಿತ್ತು.

"ಯಾಕೆ ಏನಾಗಿದೆ ನಿಂಗೆ ಹೇಳು" ಮತ್ತೊಮ್ಮೆ ಕೇಳಿದಳು ಅಮ್ಮ.

ಮಗಳು ಸಣ್ಣಗೆ ಮುಲುಗಿದಳು. "ನಾನೀಗ ಬಸುರಿ, ನನ್ನ ಹೊಟ್ಟೆಯಲ್ಲಿ ಮಗು ಇದೆ". ಇಷ್ಟು ಹೇಳಿ ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದಳು.

ಇದ್ದಕ್ಕಿದ್ದ ಹಾಗೇ ಇದನ್ನು ಕೇಳಿದ ಅಮ್ಮ ಸ್ವಲ್ಪ ಹೊತ್ತು ಏನು ಹೇಳಬೇಕೆಂದು ತೋಚದೇ ದಂಗಾಗಿ ನಿಂತಳು. ಸುಧಾರಿಸಿಕೊಂಡು ತನ್ನ ಕೈಲಿದ್ದ ಭಾರವನ್ನು ಕೆಳಗಿಟ್ಟು "ನಿನ್ನ ಹೊಟ್ಟೆಯಲ್ಲಿ ಮಗು ಇದೆಯಾ? ಇದು ಹೇಗಾಯ್ತು? ಹಾಳಾದವಳೇ" ಎಂದು ಬೈಯತೊಡಗಿದಳು.

ಮಾಲಿವೋಯಿರೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ, ನಿಯತ್ತಿನ ವ್ಯಾಪಾರದ, ಸಾಕಷ್ಟು ಸಂಪತ್ತುಳ್ಳ ರೈತರಾಗಿದ್ದರು. ಅವರಿಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು.

ಬಿಳುಚಿದ ಮುಖದೊಡನೆ ತಾಯಿ ಅಳುತ್ತಿದ್ದ ಮಗಳನ್ನು ನೋಡಿದಳು. "ಇದು ಹೇಗಾಯ್ತು ಹೇಳು, ದರಿದ್ರ ರಂಡೆ" ಎಂದು ತಾನೂ ಅಳುತ್ತಾ ಕೂಗಲು ಶುರುಮಾಡಿದಳು.

ಅಮ್ಮನ ಈ ಅವತಾರ ನೋಡಿದ ಮಗಳು ಸೆಲೆಸ್ಟಿ ಹೆದರಿದಳು.

ಆ ತಾಯಿ ಯೋಚಿಸತೊಡಗಿದಳು. ತನ್ನ ಮಗಳನ್ನು ಈ ಸ್ಥಿತಿಗೆ ತಂದಿಟ್ಟವರು ಯಾರಿರಬಹುದು. ಮೊದಲೇ ಗೊತ್ತಾಗಿದ್ದರೆ ಅದನ್ನು ತೆಗೆಸಿ ಹಾಕಿಬಿಡಬಹುದಿತ್ತು. ಆದರೂ ಈಗಲೂ ಕಾಲ ಮಿಂಚಿಲ್ಲ. ಇಂತಹ ಕೆಲಸ ಮಾಡಿಕೊಂಡಿರುವುದು ತನ್ನ ಮಗಳು ಒಬ್ಬಳೇ ಏನಲ್ಲ. ಆದರೆ ಸಮಾಜದಲ್ಲಿ ಗೌರವ ಹೊಂದಿರುವ ತಮಗೆ ಈ ವಿಷಯದಲ್ಲಿ ಜನರನ್ನು ಎದುರಿಸುವುದು ಅಷ್ಟು ಸುಲಭವಲ್ಲ.

"ಯಾರದು ಹೇಳು, ಹಾದರಗಿತ್ತಿ" ಮತ್ತೆ ಕೂಗಿದಳು.

ಅಳುತ್ತಾ ಕೂತಿದ್ದ ಸೆಲೆಸ್ಟಿ ಏನಾದರಾಗಲಿ ಹೇಳಲೇಬೇಕೆಂದುಕೊಂಡು ಒಂದು ಕ್ಷಣಕ್ಕೆ ಧೈರ್ಯ ತಂದುಕೊಂಡು ನಡುಗುವ ದನಿಯಲ್ಲಿ ಹೇಳಿದಳು.

"ಇದು ಪೋಲೈಟ್ ನಿಂದ ಆಗಿದ್ದು"

ಮಗಳ ಮಾತು ಕೇಳಿ ತಾಯಿಗೆ ಸಿಟ್ಟು ತಾರಕಕ್ಕೇರಿತು. ಮಗಳ ಬಳಿ ನುಗ್ಗಿದವಳೇ ಅವಳನ್ನು ಹೊಡೆಯತೊಡಗಿದಳು. ಕಾಲುಗಳ ನಡುವೆ ಮುಖ ಮುಚ್ಚಿಕೊಂಡು ಕೂತ ಸೆಲೆಸ್ಟಿಗೆ ತಲೆ ಮೇಲೆ, ಬೆನ್ನಿನ ಮೇಲೆ ಎಲ್ಲಾ ಕಡೆ ತಾಯಿಯ ಮುಷ್ಟಿಯ ಗುದ್ದುಗಳು ಬಿದ್ದವು.

ಏನೋ ಗಲಾಟೆಯಾಗುತ್ತಿದ್ದುದನ್ನು ಕೇಳಿದ ಹಸುಗಳು ಮೇಯುವುದನ್ನು ನಿಲ್ಲಿಸಿ ಒಮ್ಮೆ ತಲೆ ಎತ್ತಿ ಈ ಕಡೆಗೆ ನೋಡಿದವು. ಇವರಿಗೆ ಹತ್ತಿರವಿದ್ದ ಹಸು ತನ್ನ ಕುತ್ತಿಗೆ ಉದ್ದ ಮಾಡಿ ಒಮ್ಮೆ ಹೂಂಕರಿಸಿತು.

ಸುಸ್ತಾಗುವವರೆಗೂ ಹೊಡೆದು ತಾಯಿ ಕುಸಿದು ಕೂತಳು. ಸ್ವಲ್ಪ ಹೊತ್ತಿಗೆ ಕೋಪವು ಇಳಿದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡತೊಡಗಿದಳು.

"ಇದು ಹೇಗೆ ಸಾಧ್ಯ? ನಿನಗೆ ಬುದ್ದಿ ಇಲ್ಲ. ಆ ಪೋಲೈಟ್ ನಿನಗೆ ಏನೋ ಮೋಸ ಮಾಡಿದ್ದಾನೆ, ದರಿದ್ರದವನು, ಅಯ್ಯೋ ದೇವರೇ" ಎಂದಳು.

ಹೊಡೆತ ತಿಂದು ನೆಲದ ಮೇಲೆ ಬಿದ್ದುಕೊಂಡಿದ್ದ ಸೆಲೆಸ್ಟಿ ಹಾಗೆಯೇ ಸಣ್ಣಗೆ ಹೇಳಿದಳು, "ನಾನು ಅವನಿಗೆ ದುಡ್ಡು ಕೊಡುತ್ತಿರಲಿಲ್ಲ" .

ಅಮ್ಮನಿಗೆ ಈಗ ಅರ್ಥವಾಯಿತು.

****

ಪ್ರತಿವಾರದಲ್ಲಿ ಎರಡು ದಿನ, ಅಂದರೆ, ಬುಧವಾರ ಮತ್ತು ಶನಿವಾರ, ಅವರು ಬೆಳೆದ ಕೆಲವು ಬೆಳೆಗಳನ್ನು, ಕೋಳಿಗಳನ್ನು, ಮೊಟ್ಟೆಗಳನ್ನು ತೆಗೆದುಕೊಂಡು ಮಾರಲು ಪಟ್ಟಣಕ್ಕೆ ಸೆಲೆಸ್ಟಿ ಹೋಗುತ್ತಿದ್ದಳು. ಅದಕ್ಕಾಗಿ ಅವಳು ಪೋಲೈಟ್ ನ ಕುದುರೆಗಾಡಿಯನ್ನೇ ಆಶ್ರಯಿಸಿದ್ದಳು. ಅದರಲ್ಲೇ ಅವಳು ಹೋಗಿಬರಬೇಕಾಗಿತ್ತು. ಬೆಳಗ್ಗೆ ಮುಂಜಾನೆಯೇ ಎರಡು ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೊರಡುತ್ತಿದ್ದಳು. ಒಂದರಲ್ಲಿ ಡೈರಿ ಉತ್ಪನ್ನಗಳು, ಮತ್ತೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ದೊಡ್ಡರಸ್ತೆವರೆಗೆ ನೆಡೆದುಕೊಂಡು ಹೋಗಿ ಅಲ್ಲಿ ಪಟ್ಟಣಕ್ಕೆ ಹೋಗಲು ಬಂಡಿಗಾಗಿ ಕಾಯುತ್ತಿದ್ದಳು. ರಸ್ತೆ ಪಕ್ಕದಲ್ಲೇ ತನ್ನ ಸಾಮಾನುಗಳನ್ನು ರಾಶಿಹಾಕಿಕೊಂಡು ಕುಲಿತಿರುತ್ತಿದ್ದಳು. ಹಳದಿ ಬಣ್ಣದ ಗಾಡಿ ಕುಂಟುತ್ತಾ ಬರುತ್ತಿತ್ತು. ಆ ಗಾಡಿಯನ್ನು ಓಡಿಸುವ ಮನುಷ್ಯ ಪೋಲೈಟ್ ಇನ್ನೂ ಯುವಕ. ಕೊಳಕು ಬಟ್ಟೆಗಳನ್ನು ಹಾಕಿಕೊಂಡು, ಬಿಸಿಲಿನಲ್ಲಿ ಸೀದುಹೋದಂತೆ ಕಾಣುತ್ತಿದ್ದ. ಇವಳನ್ನು ಕಾಣುತ್ತಲೇ ಅಷ್ಟು ದೂರದಿಂದಲೇ ತನ್ನ ಚಾಟಿ ಬೀಸುತ್ತಾ ಕೂಗುತ್ತಿದ್ದ, "ಗುಡ್ ಮಾರ್ನಿಂಗ್ ಮೇಡಂ ಸೆಲೆಸ್ಟಿ, ಚೆನ್ನಾಗಿದ್ದೀರಾ"...? ತಕ್ಷಣವೇ ಸೆಲೆಸ್ಟಿ ಎದ್ದು ತನ್ನ ಸಾಮಾನುಗಳನ್ನೆಲ್ಲಾ ಒಂದೊಂದಾಗಿ ಎತ್ತಿ ಕೊಡುತ್ತಿದ್ದಳು. ಪೋಲೈಟ್ ಅದನ್ನೆಲ್ಲಾ ಬಂಡಿಯಲ್ಲಿ ಹಾಕಿಕೊಂಡು ಅನಂತರ ಕೆಳಗಿಳಿದು ಅವಳನ್ನು ಬಂಡಿ ಹತ್ತಿಸುತ್ತಿದ್ದ. ಹತ್ತಿಸುವಾಗ ಅವಳ ನಯವಾದ ಕಾಲುಗಳು ದರ್ಶನವಾಗುತ್ತಿದ್ದಂತೇ ತಮಾಷೆ ಮಾಡುತ್ತಿದ್ದ, "ಕಾಲುಗಳು ಮೊದಲಿಗಿಂತ ಸಣ್ಣವೇನೂ ಆಗಿಲ್ಲ".

ಅದನ್ನು ಕೇಳಿ ಅವಳು ಅವಳು ನಗುತ್ತಿದ್ದಳು.

"ಗಟ್ಟಿಯಾಗಿ ಕುಳಿತುಕೋ ಹುಡುಗಿ" ಎಂದು ಹೇಳಿ ಕುದುರೆಗಳನ್ನು ಹೊರಡಿಸುತ್ತಿದ್ದ. ಸೆಲೆಸ್ಟಿ ತನ್ನ ಪರ್ಸಿನಿಂದ ಐದು ಪೆನ್ನಿ* ನಾಣ್ಯಗಳನ್ನು ತೆಗೆಯುತ್ತಿದ್ದಳು.. ಮೂರು ಪೆನ್ನಿ ಅವಳ ಪ್ರಯಾಣದ ದರ ಮತ್ತು ಎರಡು ಪೆನ್ನಿ ಸಾಮಾನುಗಳಿಗಾಗಿ. ಅದನ್ನು ಪೋಲೈಟ್ ಗೆ ಕೊಡುತ್ತಿದ್ದಳು. . ಅದನ್ನು ತೆಗೆದುಕೊಂಡು ಅವನು ತುಂಟತನದಿಂದ ಕಣ್ಣುಹೊಡೆದು ಕೇಳುತ್ತಿದ್ದ, "ಇವತ್ತು ಏನಾದ್ರೂ ಆಟ ಆಡೋಣವೇ?"

ಅಷ್ಟು ದುಡ್ಡುಕೊಟ್ಟು ಪ್ರಯಾಣ ಮಾಡುವುದು ಸೆಲೆಸ್ಟಿಗೆ ಜಾಸ್ತಿ ಎನಿಸುತ್ತಿತ್ತು. ಎರಡು ಮೈಲು ಪ್ರಯಾಣಕ್ಕೆ ಅರ್ಧ ಫ್ಯ್ರಾಂಕ್*ಗಳಷ್ಟು ಹಣವನ್ನು ಕೊಡಲು ದುಬಾರಿಯೆನಿಸುತ್ತಿತ್ತು .

"ನನ್ನಂತಾ ಒಳ್ಳೆಯ ಗಿರಾಕಿಯಿಂದ ನೀನು ಮೂರು ಪೆನ್ನಿಗಳಿಗಿಂತ ಜಾಸ್ತಿ ತೆಗೆದುಕೊಳ್ಳಬಾರದಪ್ಪಾ", ಒಂದು ದಿನ ದುಡ್ದು ಕೊಡುತ್ತಾ ಅವಳು ಕೇಳಿದಳು.

ಪೋಲೈಟ್ ನಗುತ್ತಾ ಹೇಳಿದ. "ಬರೀ ಮೂರು ಪೆನ್ನಿಗಳಾ? ನಿನ್ನ ಬೆಲೆ ಅದಕ್ಕಿಂತಾ ಜಾಸ್ತಿ ಸುಂದರಿ !"

ಅವಳು ಮತ್ತೆ ಹೇಳಿದಳು. "ನೀನು ನನ್ನಿಂದಲೇ ತಿಂಗಳಿಗೆ ಎರಡು ಫ್ಯ್ರಾಂಕ್ ಗಳಷ್ಟು ಸಂಪಾದಿಸುತ್ತೀಯ."

ಕುದುರೆಗಳ ಬೆನ್ನ ಮೇಲೆ ಚಾಟಿಯಾಡಿಸುತ್ತಾ ಆತ ಹೇಳಿದ, "ಒಂದು ಕೆಲಸ ಮಾಡೋಣ, ನಾನು ನಿನ್ನ ಸೇವೆ ಮಾಡುತ್ತೇನೆ, ನಾವು ನಿನ್ನ ದುಡ್ದಿನ ಬದಲಾಗಿ ಆಟ ಆಡೋಣ"

"ಆಟ? ಹಾಗಂದ್ರೆ ಏನು ?" ಅವಳು ಮುಗ್ಧವಾಗಿ ಕೇಳಿದಳು.

ಪೋಲೈಟ್ ಜೋರಾಗಿ ನಕ್ಕ.

ಆಟ ಅಂದ್ರೆ ಅದೊಂಥರಾ ಆಟ, ನಮ್ಮಿಬ್ಬರ ಆಟ, ಸಂಗೀತವಿಲ್ಲದೇ ಕುಣಿಯುವಂತದ್ದು, ಹುಡುಗ ಹುಡುಗಿ ಆಟ.

ಅವಳಿಗೆ ಅದು ಈಗ ಅರ್ಥವಾಗಿ ನಾಚಿಕೆಯಿಂದ ಮುಖ ಕೆಂಪಾಯಿತು. "ನಂಗೆ ಅಂತಹ ಆಟ ಎಲ್ಲಾ ಬೇಡ" ಅವಳು ಹೇಳಿದಳು.

ಪೋಲೈಟ್ ಮತ್ತದೇ ತುಂಟ ದನಿಯಲ್ಲಿ ಘೋಷಿಸಿದ, "ಒಂದಲ್ಲಾ ಒಂದು ದಿನ ಬಂದೇ ಬರ್ತೀಯ ಸುಂದರಿ, ಆಟ ಆಡೇ ಆಡ್ತೀವಿ" .

ಅದಾದ ಮೇಲೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಅವಳು ದುಡ್ಡು ಕೊಡಲು ಹೋದಾಗಲೆಲ್ಲಾ "ಇವತ್ತು ಆಟ ಆಡೋಣವೇ" ಎಂದು ಕೇಳುತ್ತಿದ್ದ. ಅವಳೂ ಕೂಡ ತಮಾಷೆಯಾಗಿ "ಇವತ್ತು ಬೇಡ ಪೋಲೈಟ್, ಇನ್ನೊಂದು ದಿನ ಆಡೋಣ" ಎನ್ನುತ್ತಿದ್ದಳು. ಸರಿ ಎಂದು ಅವನು ನಗುತ್ತಿದ್ದ.

ಸೆಲೆಸ್ಟಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಳು. ಈ ಎರಡು ವರ್ಷಗಳಲ್ಲಿ ಅವನು ಪೋಲೈಟನಿಗೆ ನಲ್ವತ್ತೆಂಟು ಫ್ಯ್ರಾಂಕ್ ಗಳನ್ನು ಕೊಟ್ಟಿದ್ದಳು. ಇನ್ನೂ ಎರಡು ವರ್ಷಗಳು ಹೀಗೇ ಹೋದರೆ ಸುಮಾರು ನೂರು ಫ್ಯ್ರಾಂಕ್ ಗಳನ್ನು ಅವನಿಗೆ ಕೊಟ್ಟಂತಾಗುತ್ತಿತ್ತು. ಅದು ದೊಡ್ಡ ಮೊತ್ತವಾಗಿತ್ತು.

ಒಂದು ದಿನ ಹೀಗೆ ಅವರಿಬ್ಬರೇ ಹೋಗುತ್ತಿದ್ದಾಗ ಆತ ಎಂದಿನಂತೆ ಮತ್ತೆ ಕೇಳಿದ , "ಇನ್ನೂ ನಾವು ಆಟ ಆಡೇ ಇಲ್ಲ"

"ಇವತ್ತು ಆಡೋಣ" ಅವಳು ಉತ್ತರಿಸಿದಳು. ಗಾಡಿಯ ಬಿಳಿ ಕುದುರೆ ಒಮ್ಮೆ ತನ್ನ ಎರಡೂ ಕಾಲುಗಳನ್ನು ಮೇಲೆತ್ತಿ ಕೆನೆಯಿತು. ಅವಳಿಗೆ ಒಮ್ಮೆ ತಾನಿದ್ದ ಸ್ಥಳವೇ ನಡುಗಿದಂತಾಯಿತು. "ಬಾ ಹುಡುಗೀ ಬಾ..." ಎಂದು ಪೋಲೈಟನ ದನಿ ಪ್ರತಿಧ್ವನಿಸಿತು. ಗಾಡಿಯ ಬೇರೆ ಯಾವ ಶಬ್ದವೂ ಕೇಳದಂತಾಯಿತು. ಸೆಲೆಸ್ಟಿಗೆ ಸ್ವಲ್ಪ ಕಾಲ ಮೈ ಭಾರವಾಗಿ ನಿಧಾನಕ್ಕೆ ಹಗುರಾಗುತ್ತಾ ಹೋಯಿತು.

ಅನಂತರ ಅವಳಿಗೆ ತಾನು ಬಸುರಿಯಾಗಿರುವುದು ಗೊತ್ತಾದಾಗ ಮೂರು ತಿಂಗಳಾಗಿತ್ತು.

****

ಇದೆಲ್ಲವನ್ನೂ ಅಳುತ್ತಾ ತನ್ನ ತಾಯಿಗೆ ಹೇಳಿದಳು.

ತಾಯಿ ಕೇಳಿದಳು, "ಎಷ್ಟು ಉಳಿತಾಯ ಮಾಡಿದೆ?"

"ನಾಲ್ಕು ತಿಂಗಳು, ಅಂದರೆ ಒಟ್ಟು ಎಂಟು ಫ್ಯ್ರಾಂಕ್" ಉತ್ತರಿಸಿದಳು ಸೆಲೆಸ್ಟಿ.

ಮತ್ತೆ ತಾಯಿಗೆ ಕೋಪ ನೆತ್ತಿಗೇರಿ ಮಗಳಿಗೆ ಸರಿಯಾಗಿ ಬಡಿದಳು.

"ಈ ವಿಷಯ ಅವನಿಗೆ ಹೇಳಿದ್ದೀಯಾ?"

"ಇಲ್ಲ ಹೇಳಿಲ್ಲ"

"ಯಾಕೆ ಹೇಳಿಲ್ಲ?"

"ಈ ವಿಷಯ ಗೊತ್ತಾದರೆ ಅವನು ಇನ್ಮುಂದೆ ಹಣ ಕೇಳಬಹುದು!"

ತಾಯಿ ಸ್ವಲ್ಪಹೊತ್ತು ಸುಮ್ಮನೇ ಯೋಚಿಸಿದಳು. ಒಂದು ನಿಟ್ಟುಸಿರಿಟ್ಟು ಹಾಲಿನ ಪಾತ್ರೆಗಳನ್ನು ಎತ್ತಿಕೊಂಡಳು.

"ಎದ್ದೇಳು, ಮನೆಗೆ ನೆಡಿ" ಎಂದು ಮಾತು ನಿಲ್ಲಿಸಿದವಳು ಮತ್ತೆ ಮುಂದುವರೆಸಿದಳು.

"ಅವನಿಗೆ ಈ ವಿಷಯ ಹೇಳಲು ಹೋಗಬೇಡ, ಆರೆಂಟು ತಿಂಗಳು ಅವನಿಗೇ ಈ ವಿಷಯ ಗೊತ್ತಾಗುವವರೆಗೂ ಹಣ ಕೊಡುವುದು ಬೇಡ"

ಸೆಲೆಸ್ಟಿ ನಿಧಾನಕ್ಕೆ ಎದ್ದು ನಿಂತಳು. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡಿದ್ದವು. ಭಾರವಾದ ಹೆಜ್ಜೆಯಿಡುತ್ತಾ ನೆಡೆಯತೊಡಗಿ ಗೊಣಗಿಕೊಂಡಳು.

"ಆಯ್ತು, ಖಂಡಿತ ನಾನು ಅವನಿಗೆ ಹೇಳೋಲ್ಲ".

=============================
(ಇಂಗ್ಲೀಷ್ ನಿಂದ ಅನುವಾದಿತ)

ಮೂಲ ಕತೆ: Confessing
ಲೇಖಕ: Guy de Maupassant


*ಫ್ರ್ಯಾಂಕ್ಸ್ (Francs)/ ಪೆನ್ನಿ (Penny) = ಹಳೆಯ ಫ್ರೆಂಚ್ ಕರೆನ್ಸಿಗಳು
*ಮಾಲಿವೋಯಿರೆ = ಫ್ರಾನ್ಸ್ ದೇಶದ ಒಂದು ಜನಜಾತಿ