ಶುಕ್ರವಾರ, ಜನವರಿ 21, 2011

ಆತ್ಮಕತೆಗಳೊಂದಿಗೆ Simply Fly

ನಿನ್ನೆಗೆ ಕ್ಯಾಪ್ಟನ್ ಗೋಪೀನಾಥರ Simply Fly ಪುಸ್ತಕವನ್ನು ಓದಿ ಮುಗಿಸಿದೆ.  ರೆಟ್ಟೆಗಾತ್ರದ ಪುಸ್ತಕವನ್ನು ಒಂದೂವರೆ ತಿಂಗಳಿನ ಹಿಂದೆಯೇ ಓದಲು ಶುರುಮಾಡಿದ್ದರೂ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅದನ್ನು ಮುಗಿಸಲಾಗದೇ ಇಷ್ಟು ತಡವಾಯಿತು. ಆ ಪುಸ್ತಕ ಕನ್ನಡದಲ್ಲಿ ’ಬಾನಯಾನ’ವಾಗಿ ಹೊರಬಂದಿದ್ದರೂ ಕೂಡ ಇಂಗ್ಲೀಷಲ್ಲಿ ಮೂಲ ಪುಸ್ತಕವನ್ನೇ ಓದೋಣ ಎಂದು ಹೊರಟಿದ್ದೂ ತಡವಾಗಿ ಮುಗಿದುದ್ದಕ್ಕೆ ಒಂದು ಕಾರಣ ಎನ್ನಬಹುದು. ಇರಲಿ. ಸಾಮಾನ್ಯವಾಗಿ ನನಗೆ ಮೊದಲು ಆತ್ಮಕತೆಗಳನ್ನು ಓದಲು ಇಷ್ಟವಾಗುತ್ತಿರಲಿಲ್ಲ. ಅದ್ಯಾವ ಗಳಿಗೆಯಲ್ಲೋ ಲಂಕೇಶರ ಆತ್ಮಕತೆ ’ಹುಳಿಮಾವಿನಮರ’ವನ್ನು ಓದಿದ ಮೇಲೆ ಆತ್ಮಕತೆಗಳ ಬಗ್ಗೆ ಆಸಕ್ತಿ ಹೊರಟುಹೋಗಿತ್ತು. ಆಗಿನ್ನೂ ಸಣ್ಣವಯಸ್ಸಿದ್ದುದರಿಂದ ಹಾಗೆನ್ನಿಸಿತ್ತೋ ಅಥವಾ ಆ ಪುಸ್ತಕವೇ ಹಾಗಿತ್ತೋ ನೆನಪಿಲ್ಲ. ಆತ್ಮಕತೆಗಳು ಎಂದರೆ ಕೇವಲ ನಿರುಪಯೋಗಿ ವೈಯಕ್ತಿಕ ವಿವರಗಳು, ಅದು ಯಾರದ್ದಾದರೂ ಸರಿ, ಓದಿ ಮಾಡುವುದಾದರೂ ಏನು ಎನ್ನಿಸಿಬಿಟ್ಟಿತ್ತು. ಆದರೆ ನನ್ನ ಈ ಭಾವನೆಯನ್ನು ಬದಲಿಸಿದ್ದು ಶಿವರಾಮಕಾರಂತರ ’ಹುಚ್ಚುಮನಸ್ಸಿನಹತ್ತುಮುಖಗಳು’. ಒಮ್ಮೆ ಗೆಳೆಯನೊಬ್ಬನ ಮನೆಗೆ ಹೋದಾಗ ಕಂಡಪುಸ್ತಕವನ್ನು ಸುಮ್ಮನೇ ಕೈಗೆತ್ತಿಕೊಂಡು ಓದಿದ್ದು ಆತ್ಮಕತೆಗಳ ಬಗ್ಗೆ ನನ್ನ ಭಾವನೆಯನ್ನು ಬದಲಿಸಿತು. ಎಲ್ಲಾ ಆತ್ಮಕತೆಗಳು ಆಸಕ್ತಿದಾಯಕವಾಗಿರಬೇಕಂತಿಲ್ಲ, ಆದರೆ ಅದರಿಂದ ತಿಳಿದುಕೊಳ್ಳುವುದು ಬಹಳಾ ಇರುತ್ತದೆ ಎಂಬುದು ಅರ್ಥವಾಗಿತ್ತು. ಹಿರಿಯರ ಅನುಭವವು ತಿಳಿಸಿಕೊಡುವಷ್ಟು ಮತ್ತೆಲ್ಲೂ ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು. ಒಬ್ಬರ ಬಗ್ಗೆ ಮತ್ತೊಬ್ಬರು ಬರೆದ ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಸರಿಯಾದ ಚಿತ್ರಣವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿದುಕೊಂಡಷ್ಟು ಮತ್ಯಾರಿಗೂ ತಿಳಿಯಲು ಸಾಧ್ಯವಿಲ್ಲವಲ್ಲ ಅಂತೆಯೇ ಶಿವರಾಮ ಕಾರಂತರ ಆತ್ಮಕತೆ ಓದಿ ಅವರ ಬಗ್ಗೆ ಅಚ್ಚರಿಪಟ್ಟೆ. ಎಲ್ಲಾ ಕ್ಷೇತ್ರಗಳಲ್ಲೂ ಅವರ ಒಂದೊಂದು ಕೆಲಸದ ಬಗ್ಗೆಯೂ ಅವರಿಟ್ಟುಕೊಂಡ ನೋಟಗಳು, ಅದನ್ನು ಕಾರ್ಯಗತಗೊಳಿಸಿದ, ಅನುಭವಗಳ ವಿವರಗಳು ಮನಸ್ಸಿನಲ್ಲಿ ಕೂತವು. ಅದರಿಂದ ನನ್ನಲ್ಲಿ ಏನೋ ಅದ್ಭುತ ಬದಲಾವಣೆಯಾಗಿ ಹೋಯಿತು ಅಂತೇನೂ ಇಲ್ಲ , ಆದರೆ ಅದರಿಂದಾಗಿ ಜೀವನದ ಕೆಲ ವಿಷಯಗಳ ಬಗ್ಗೆ ನನ್ನ ಧೋರಣೆ ಬದಲಾಯಿಸಿಕೊಂಡೆ. ಹೊಸನೋಟ ಬೆಳೆಸಿಕೊಂಡೆ. ಅದು ಬಹಳ ಸಹಾಯಕಾರಿಯೂ ಆಯಿತು.

ನನಗೆ ಮೊದಲಿನಿಂದಲೂ ಓದುವ ಚಪಲ ಸ್ವಲ್ಪ ಜಾಸ್ತಿಯೇ ಇರುವುದರಿಂದ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿಬಿಡುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಮತ್ತು ಆಮೇಲೆ ಕೆಲಸಕ್ಕೆ ಸೇರಿದ ಅನಂತರ ಜವಾಬ್ದಾರಿ ಕಡಿಮೆ ಇರುವಾಗ ಬೇಕಾದಷ್ಟು ಸಮಯವೂ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವ ಶುರುವಾಯಿತು ಅನ್ನುವುದಕ್ಕಿಂತ ಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯತೆ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ಆಸಕ್ತಿಗಳೂ ಬದಲಾಗುತ್ತಾ ಹೋದವು. ಇದು ಸ್ಪಷ್ಟವಾಗಿ ಅನ್ನಿಸಿದ್ದು ಮತ್ತೊಂದು ಆತ್ಮಕತೆಯನ್ನು ಓದಿದ ಮೇಲೆ. ಅದು ರವಿಬೆಳಗೆರೆ ಅನುವಾದಿತ ‘ಟೈಂಪಾಸ್ ‘ ಪುಸ್ತಕ. ಪ್ರೊತಿಮಾ ಬೇಡಿ ಎನ್ನುವ ನೃತ್ಯಗಾತಿಯೊಬ್ಬಳ ಬದುಕಿನ ಕತೆ ಅದು. ಅದು ಓದಿಯಾದ ಮೇಲೆ ಇಂತದ್ದನ್ನು ಓದಲು ’ಟೈಂ ವೇಸ್ಟ್ ’ ಮಾಡಿಕೊಂಡೆನಲ್ಲಾ ಎನ್ನಿಸಿಬಿಟ್ಟಿತ್ತು. ಸಣ್ಣವಯಸ್ಸಿನಿಂದ ಹಿಡಿದು ಮುದುಕಿಯಾಗುವವರೆಗೆ ತನಗೆ ಯಾರನ್ನು, ಎಂತವರನ್ನು ಕಂಡಾಗ ಪುಳಕವಾಗುತ್ತಿತ್ತು , ಯಾರ್ಯಾರ ಜೊತೆ ತನ್ನ ಸಂಬಂಧವಿತ್ತು , ಅವನ ಜೊತೆ ಏನು ಮಾಡಿದೆ ಇವನ ಜೊತೆ ಏನು ಮಾಡಿದೆ ಎಂಬಂತಹ ವಿವರಗಳೇ ಜಾಸ್ತಿ ಇದ್ದ ಅವಳ ಖಾಸಗಿ ವಿಷಯಗಳನ್ನು ಓದಿ ತಿಳಿದುಕೊಂಡು ನಾನು ಮಾಡುವುದೇನೂ ಇರಲಿಲ್ಲ. ಅದೊಂದು ಯಾವುದೇ ಹೆಚ್ಚಿನ ಒಳನೋಟಗಳಿಲ್ಲದ ಮನರಂಜನೆಯಷ್ಟೆ. ಆತ್ಮಕತೆಗಳ ಓದಿನಲ್ಲಿ ರೋಚಕತೆ ಮುಖ್ಯವಾಗಬಾರದು. ಚಮಚಾಗಿರಿ, 'ದಾದಾಗಿರಿ' ಮಾಡಿದ್ದನ್ನೂ ಆತ್ಮಕತೆಯಾಗಿ ಬರೆದುಕೊಂಡವರಿದ್ದಾರೆ.  ಇದಾದ ಮೇಲೆ ಪುಸ್ತಕಗಳ ಆಯ್ಕೆ ವಿಷಯದಲ್ಲೂ ಸ್ವಲ್ಪ ಎಚ್ಚರವಹಿಸುತ್ತಾ ಹೋದೆ. ಹಿಂದಿನ ವರುಷದ ಮಧ್ಯದಲ್ಲಿ ಓದಿದ ಮತ್ತೊಂದು ಅದೇ ಬೆಳಗೆರೆ ಅನುವಾದಿತ ಆತ್ಮಕತೆ ‘ಚಲಂ‘. ಒಬ್ಬ ಸಾರ್ವಜನಿಕ ವ್ಯಕ್ತಿಯದು ಅದೆಷ್ಟೇ ವಿಲಕ್ಷಣ ವ್ಯಕ್ತಿತ್ವವಾಗಿದ್ದರೂ ಅವರ ಆ ಬದುಕಿನ ವಿವರ ತಿಳಿದುಕೊಳ್ಳುವಂತದ್ದೇನೂ ಆಗಿರಬೇಕಂತಿಲ್ಲ. ಆ ಆತ್ಮಕತೆ ಕೆಟ್ಟದಾಗಿತ್ತು ಅನ್ನುವುದಕ್ಕಿಂತ ಅದರ ಅನುವಾದ ಇನ್ನೂ ಕೆಟ್ಟದಾಗಿತ್ತು ಎನ್ನುವುದು ಸೂಕ್ತ.  ಅದ್ದರಿಂದಲೇ ಅದು ನಾನು ಓದಿದ ಒಂದು ಅತ್ಯಂತ ಕೆಟ್ಟ ಕನ್ನಡ ಪುಸ್ತಕವಾಗಿ ದಾಖಲಾಗಿಹೋಯಿತು.


ಬಾನಯಾನ
ಹೀಗಿರುವಾಗ ಹಿಂದಿನ ವರ್ಷದ ಕೊನೆಯಲ್ಲಿ ತೆಗೆದುಕೊಂಡದ್ದು ’ಸಿಂಪ್ಲಿಫ್ಲೈ’.  ಇದು ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ ಕ್ಯಾಪ್ಟನ್ ಗೋಪಿನಾಥರ ಆತ್ಮಕತೆ. ಅವರು 'ಏರ್ ಡೆಕ್ಕನ್'  ಶುರುಮಾಡಿದ ವ್ಯಕ್ತಿಯಾಗಿ ಹೆಚ್ಚು ಪ್ರಸಿದ್ಧ. ವಿಧಾನಸಭೆ, ಲೋಕಸಭೆ ಚುನಾವಣೆಗೆ ನಿಂತಿದ್ದ ರಾಜಕೀಯ ವ್ಯಕ್ತಿಯಾಗಿಯೂ ಸುಮಾರು ಜನರಿಗೆ ಪರಿಚಯವಿರುವಂತವರು. ಆದರೆ ಆತ ಬರೀ ಅಷ್ಟೇ ಅಲ್ಲ. ಅವರೊಬ್ಬ ಸಣ್ಣ ವ್ಯಾಪಾರಿ,  ಉದ್ಯಮಿ, ಒಂದೇ ಕಾಲಕ್ಕೆ ಹೊಟೆಲ್, ಆಟೊಮೊಬೈಲ್ ವ್ಯಾಪಾರಗಳನ್ನು ನಿರ್ವಹಿಸಿದವ, ಬರಹಗಾರ, ಬಾಂಗ್ಲಾ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಮಿಲಿಟರಿ ಅಧಿಕಾರಿ, ಮೇಲಾಗಿ ಅವರೊಬ್ಬ ಪಕ್ಕಾ ರೈತ! ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ನನಗೆ ಇಷ್ಟವಾಗಿದ್ದು ಮಾದರಿರೈತನಾಗಿ. ಅವರ ಕುಟುಂಬದ ಜಮೀನು ಗೊರೂರು ಅಣೆಕಟ್ಟು ಯೋಜನೆಯಲ್ಲಿ ಕೈಬಿಟ್ಟು ಹೋದಾಗ ದೂರದ ಜಾಗದಲ್ಲಿ ಸರ್ಕಾರದಿಂದ ಪರಿಹಾರವಾಗಿ ಬಂದ ಜಮೀನಿನಲ್ಲಿ ಹೊಸದಾಗಿ ಕೃಷಿ ಶುರುಮಾಡಿ, ಅದನ್ನು ಮಾದರಿಯೆಂಬಂತೆ ಮಾಡಿದ್ದೇ ಸಾಕು, ಒಬ್ಬ ಮನುಷ್ಯನ ಜೀವನದ ಸಾಧನೆ ಎನ್ನಬಹುದು. ಕೃಷಿಯ ಬಗ್ಗೆ, ಪ್ರಕೃತಿ ಬಗ್ಗೆ , ಪ್ರಾಣಿ ಪಕ್ಷಿ ಕೀಟಗಳ ಬಗ್ಗೆ ಅವರ ತಿಳುವಳಿಕೆ, ರಾಸಾಯನಿಕಗಳಿಲ್ಲದ ನೈಸರ್ಗಿಕ ಕೃಷಿಯ ಅಳವಡಿಕೆ ಅದ್ಬುತ. ನಾಲ್ಕು ವರ್ಷ ನನ್ನ ಕರ್ಮಭೂಮಿಯಾಗಿದ್ದ ಹಾಸನದಲ್ಲಿಯೇ ಅವರೂ ಇದ್ದಿದ್ದು, ಅಲ್ಲಿಯ ಚಿರಪರಿಚಿತ ವಾತಾವರಣದ ಬಗ್ಗೆ, ಅವರು ಒಡೆನಾಡಿದ ಗುರುತಿರುವ ಹಿರಿಯರ ಬಗ್ಗೆ ಅವರು ಬರೆದಿರುವುದು ಎಲ್ಲವೂ ಪುಸ್ತಕದ ಓದುವಾಗಿನ ಆಸಕ್ತಿಯನ್ನು ಹೆಚ್ಚಿಸಿದಂತವು. ವರ್ಷಗಟ್ಟಲೆ ಅತ್ಯಂತ ಶ್ರಮಪಟ್ಟು ಹೆಲಿಕಾಪ್ಟರ್ ಕಂಪನಿ, ವಿಮಾನದ ಕಂಪನಿಗಳನ್ನು ಶುರುಮಾಡಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರೂ ಅವರಲ್ಲಿ ಕಾಣುವುದು ಹಣ ಮಾಡಬೇಕೆಂದು ಹೊರಟಿರುವ ಒಬ್ಬ ಬಿಸಿನೆಸ್ ಮನ್ ಅಲ್ಲ. ಅವರಲ್ಲಿ ಕಾಣುವುದು ವ್ಯಾಪಾರದೆಡೆಗಿನ ಒಂದು ವಿಶಿಷ್ಟ ನೋಟವಿರುವ ಮತ್ತು ಒಂದು ನೈತಿಕತೆ ಇರುವ ಮನುಷ್ಯ. ದೇಶದ ಬಡಮಧ್ಯಮವರ್ಗದವರೆಗೂ ಯೋಚಿಸುವಂತಹ ಮನೋವೃತ್ತಿ. ಏನಾದರೂ ಮಾಡಬೇಕು ಎನ್ನಿಸಿದರೆ ಅದನ್ನು ಮಾಡೇ ತೀರುವ, ಎಲ್ಲಿ ಏನು ಹೊಸದನ್ನು ಮಾಡಲಾಗುತ್ತದೆ ಎಂದು ಹುಡುಕುತ್ತಲೇ ಇರುವ, ಮಾಡುವ ಎಲ್ಲಾ ಕೆಲಸಗಳಲ್ಲೂ ಸಾಧ್ಯವಾದಷ್ಟೂ ಆಳಕ್ಕಿಳಿಯುವ ಅವರ ಗುಣ ಸಿಕ್ಕಾಪಟ್ಟೆ ಇಷ್ಟವಾಗಿದ್ದು. ಬ್ಬ ಮನುಷ್ಯ ಇಷ್ಟೆಲ್ಲಾ ಆಗುವುದು ಸಾಧ್ಯವಾ ಎಂದು ಅಚ್ಚರಿ ಪಡುವಷ್ಟರಲ್ಲೇ ಅವರು ಈಗ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ, ಅದು ಕಾರ್ಗೋ ವಿಮಾನಗಳ ಸೇವೆಯ ಆರಂಭ. ಒಟ್ಟಿನಲ್ಲಿ ಅವರ ಬದುಕೊಂದು ಅದ್ಭುತ ಹಾರಾಟ. ಅವರಿಗೊಂದು ಆಲ್ ದಿ ಬೆಸ್ಟ್ ಮತ್ತು ಸಿಕ್ಕಾಪಟ್ಟೆ ಥ್ಯಾಂಕ್ಸ್.. ಒಂದು ಒಳ್ಳೆಯ ಆತ್ಮಕಥನವನ್ನು ಓದಿದ ತೃಪ್ತಿ ಸಿಕ್ಕಿದೆ.

ಆತ್ಮಕತೆಗಳ ಸಾಲಿನಲ್ಲಿ ಬಹುಶಃ ನನ್ನ ಮುಂದಿನ ಗುರಿ ’ಭಿತ್ತಿ’.

*******

ಜೊತೆಗೆ ಬ್ಲಾಗ್ ಒಣಗದಂತೆ ಹೀಗೆ ಆಗಾಗ ಸ್ವಲ್ಪ ನೀರು ಹರಿಸುವ ಪ್ರಯತ್ನ ಜಾರಿಯಲ್ಲಿರುತ್ತದೆ.

ಅಲ್ಲಿಯವರೆಗೆ Line on hold ( Is this phrase patented? ;-) )