ಗುರುವಾರ, ಮಾರ್ಚ್ 31, 2016

ಕೌಲಾಲಂಪುರ ತಿರುಗಾಟದಲ್ಲಿ…..


ಮಲೇಶಿಯಾದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಆ ದೇಶದ ರಾಜಧಾನಿ ಕೌಲಾಲಂಪುರವೂ ಒಂದು. ಪಶ್ಚಿಮ ತೀರದಲ್ಲಿರುವ ಪಿನಾಂಗ್ ಎಂಬ ದ್ವೀಪದಲ್ಲಿ ಒಂದು ದಿನದ ಪ್ರವಾಸ ಮುಗಿಸಿ ಬಸ್ಸಿನಲ್ಲಿ ಹೊರಟ ನಾವು ಕೌಲಾಲಂಪುರಕ್ಕೆ ಬಂದಿಳಿದಾಗ ರಾತ್ರಿ ೧೧ ಗಂಟೆಯಾಗಿತ್ತು. ಮೊದಲೇ ಕಾದಿರಿಸಿದ್ದ ಹೋಟೆಲನ್ನು ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾವು ತಂಗಿದ್ದ ಹೊಟೆಲಿನ ಎದುರಿನ ರಸ್ತೆಯಲ್ಲೇ ಭಾರತೀಯ ಹೋಟೆಲ್ ಇರುವುದು ತಿಳಿಯಿತು. ಅಲ್ಲಿ ಹೋಗಿ ನೋಡಿದರೆ ಅದು ಅಪ್ಪಟ ದಕ್ಷಿಣ ಭಾರತೀಯ ಶೈಲಿಯದೇ ಆಗಿತ್ತು. ಜೊತೆಗೆ ಅದೇ ರಸ್ತೆಯಲ್ಲಿ ಇನ್ನೂ ಅನೇಕ ಭಾರತೀಯ ಹೊಟೆಲುಗಳೂ ಇದ್ದವು. ಕೌಲಾಲಂಪುರದಲ್ಲಿ ತಮಿಳು ಮೂಲದ ಜನರು ಬಹಳ ಇರುವುದರಿಂದ ನಮ್ಮ ತಿನಿಸುಗಳೆಲ್ಲವೂ ಲಭ್ಯ ಎಂದು ತಿಳಿಯಿತು.  ರುಚಿಯಾದ ಉಪಾಹಾರದೊಂದಿಗೆ ನಮ್ಮ ಅವತ್ತಿನ ಪ್ರವಾಸ ಶುರುವಾಯಿತು.
  

ಅಲ್ಲಿಂದ ಸಿಟಿಬಸ್ಸಿನಲ್ಲಿ ಹೊರಟು 13 ಕಿ.ಮಿ. ದೂರದ ಗೊಂಬಾಕ್ ಪ್ರದೇಶದಲ್ಲಿರುವ ಬತು ಕೇವ್ಸ್ ಎಂಬ ಸ್ಥಳಕ್ಕೆ ಹೋದೆವು.  ಅಲ್ಲಿ ಇಳಿದೊಡನೆಯೇ ಕಂಡದ್ದು ಎತ್ತರೆತ್ತರ ಶಿಲಾಪರ್ವತಗಳು, ಅವುಗಳೆದುರಲ್ಲಿ ಬೃಹತ್ ಗಾತ್ರದ ಪ್ರಸನ್ನವದನ ಮುರುಗನ್ ಮೂರ್ತಿ! ಬಂಗಾರವರ್ಣದ ಆ ಮೂರ್ತಿ ದೂರದಿಂದಲೇ ಬಿಸಿಲಿಗೆ ಫಳ ಫಳ ಹೊಳೆಯುತ್ತಿತ್ತು. ಈ ಬತು ಗುಹೆಗಳು ಕೌಲಾಲಂಪುರದ ಪ್ರಸಿದ್ಧ ಪ್ರವಾಸಿ ಹಾಗೂ ಹಿಂದೂ ಧಾರ್ಮಿಕ ತಾಣ. ಹಾಗಾಗಿ ಅಲ್ಲಿ ದೇಶ ವಿದೇಶಗಳ ಜನರ ದಂಡೇ ನೆರೆದಿತ್ತು. ಇಲ್ಲಿನ ಪರ್ವತಗಳು ೪೦ ಕೋಟಿ ವರ್ಷಗಳಷ್ಟು ಹಳೆಯವೆಂದು ಅಂದಾಜಿಸಲಾದ ಸುಣ್ಣದ ಕಲ್ಲಿನ ರಚನೆಗಳು. ಇಲ್ಲಿ ಅನೇಕ ಗುಹೆಗಳಿದ್ದು ಮುಖ್ಯವಾಗಿ ಮೂರು ಗುಹೆಗಳಿವೆ. ಟೆಂಪಲ್ ಕೇವ್ ಎಂದು ಕರೆಯಲ್ಪಡುವ ದೊಡ್ಡ ಗುಹೆಯಲ್ಲಿ ಮುರುಗನ್ ದೇವಾಲಯವಿದೆ. ೧೯೮೨ರಲ್ಲಿ ತಂಬುಸಾಮಿ ಪಿಳ್ಳೈ ಅವರಿಂದ ಇಲ್ಲಿ ದೇವಾಲಯ ಸ್ಥಾಪಿಸಲ್ಪಟ್ಟಿತಂತೆ. ೨೦೦೬ರಲ್ಲಿ ೧೪೦ ಅಡಿಯ ಮುರುಗನ್ ಮೂರ್ತಿ ಸ್ಥಾಪಿಸಲ್ಪಟ್ಟಿತು. ಈ ಗುಹೆಗಳನ್ನು ಪ್ರವೇಶಿಸಲು ಸುಮಾರು ೨೮೦ ಮೆಟ್ಟಿಲುಗಳನ್ನು ಹತ್ತಬೇಕು. ಅಲ್ಲಿನ ಪುಂಡ ಮಂಗಗಳ ಕಾಟದ ನಡುವೆಯೇ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದೆವು. ಆ ಗುಹೆಯ ಪ್ರವೇಶದ್ವಾರ ಒಳಗೆ ದೊಡ್ಡ ಪ್ರಾಂಗಣದೊಳಕ್ಕೆ ತೆರೆದುಕೊಳ್ಳುತ್ತದೆ. ಎತ್ತರೆತ್ತರ ಕಲ್ಲಿನ ನೈಸರ್ಗಿಕ ರಚನೆಯ ಆ ಪ್ರಾಂಗಣ ಮೇಲ್ಭಾಗದಿಂದಲೂ ಆವೃತವಾಗಿದೆ. ಕರಗಿ ಬೀಳುತ್ತಿರುವ ಜ್ವಾಲಾಮುಖಿಯ ಲಾವಾ ಹಾಗೇ ಗಟ್ಟಿಯಾದಂತೆ ತೋರುವ ರಚನೆಗಳು ಕಾಣುತ್ತಿದ್ದವು. ಬತು ಗುಹೆಗಳ ಒಳಭಾಗವೆಲ್ಲವೂ ಇದೇ ರೀತಿಯ ಅದ್ಭುತ ರಚನೆಯಿಂದ ಕೂಡಿದೆ. ಒಳಗೆಲ್ಲಾ ಹಿಂದೂ ದೇವತೆಗಳ ಹಾಗೂ ಪುರಾಣ ಪಾತ್ರಗಳ ಮೂರ್ತಿಗಳನ್ನು ಹಾಗೂ ಸಣ್ಣ ಸಣ್ಣ ಗುಡಿಗಳನ್ನು ಮಾಡಿಟ್ಟಿದ್ದಾರೆ. ಹಾಗೇ ಆ ಪ್ರಾಂಗಣವನ್ನು ದಾಟಿ ಮತ್ತೆ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ  ಮುರುಗನ್ ಮುಖ್ಯ ಗುಡಿಯಿದೆ. ನಿತ್ಯ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಕಳೆದು ಗುಹೆಗಳಿಂದ ಹೊರಬರುವುದರೊಳಗಾಗಿ ಮಧ್ಯಾಹ್ನದ ಸಮಯವಾಗುತ್ತಿತ್ತು. ಅಲ್ಲಿಂದ ಮೆಟ್ರೋ ಟ್ರೇನಿನಲ್ಲಿ ಹೊರಟು ಪುನಃ ನಗರಕ್ಕೆ ಬಂದು ಊಟ ಮಾಡಿ ವಿಶ್ರಮಿಸಿದೆವು.

ಅಂದು ಸಾಯಂಕಾಲ 'ಲೇಕ್ ಗಾರ್ಡನ್' ಗೆ ಭೇಟಿಕೊಟ್ಟೆವು. ೯೨ ಎಕರೆ ಪ್ರದೇಶದಲ್ಲಿರುವ ಈ ಗಾರ್ಡನ್ ಒಂದು ಸುಂದರ ಉದ್ಯಾನವನ. ಕಾರಂಜಿಗಳು, ಸಣ್ಣ ಕೃತಕ ಜಲಪಾತಗಳು, ಹುಲ್ಲುಹಾಸು, ನೀರಿನ ಕೊಳಗಳಿರುವ ಸುಂದರ ವಿಶಾಲ ತಾಣ. ಇಲ್ಲಿ ಬರ್ಡ್ ಪಾರ್ಕ್, ಚಿಟ್ಟೆ ಪಾರ್ಕ್ ಕೂಡ ಇದೆ.  ಮಲೇಶಿಯಾದ ‘ರಾಷ್ಟ್ರೀಯ ಸ್ಮಾರಕವು ಇಲ್ಲಿದೆ. ಎರಡನೇ ವಿಶ್ವಯುದ್ಧದಲ್ಲಿ ಹೋರಾಡಿ ಮಡಿದ ಮಲೇಶಿಯಾದ ವೀರರ ಕಂಚಿನ ಸ್ಮಾರಕ ಮೂರ್ತಿಗಳಿವೆ.  ಈ ಪರಿಸರದಲ್ಲಿ ಕೆಲ ಗಂಟೆಗಳ ಕಾಲ ಕಳೆದೆವು. ಅಲ್ಲಿಂದ ಹೊರಟು ಹೊರಬರುತ್ತಿದ್ದಂತೇ ಮಳೆ ಶುರುವಾಯಿತು. ಇದ್ಯಾಕೋ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಸ್ವಲ್ಪ ಹೊತ್ತು ಸುರಿದು ಪುನಃ ವಾತಾವರಣ ತಿಳಿಯಾಯಿತು.

ಮಲೇಶಿಯಾದ ಪ್ರಸಿದ್ಧ ಅವಳಿ ಗೋಪುರಗಳು ನಮ್ಮ ಮುಂದಿನ ಗುರಿಯಾಗಿತ್ತು. ರಾಷ್ಟ್ರೀಯ ಸ್ಮಾರಕದಿಂದ ಹೊರಟು ಕೌಲಾಲಂಪುರ ಸಿಟಿ ಸೆಂಟರ್ ಪ್ರದೇಶ ತಲುಪಿದಾಗ ಸಂಪೂರ್ಣ ಕತ್ತಲಾಗಿತ್ತು. ಈ ಪ್ರದೇಶ ಕೌಲಾಲಂಪುರದ ಪ್ರಮುಖ ವಾಣಿಜ್ಯ ಪ್ರದೇಶ. ೧೪೮೩ಅಡಿ ಎತ್ತರದ ೮೮ ಮಹಡಿಗಳುಳ್ಳ ಅವಳಿ ಗೋಪುರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪೆಟ್ರೋನಾಸ್ ಟವರ್ ಗಳೆಂದು ಕರೆಯಲ್ಪಡುವ ಈ ಎತ್ತರ ಗೋಪುರಗಳು ಕೌಲಾಲಂಪುರದ ಐಕಾನ್ ಗಳು. ಇವುಗಳನ್ನು ಕತ್ತಲಲ್ಲಿ ನೋಡಲು ಬಲು ಚಂದ. ಸಾವಿರಾರು ದೀಪಗಳಿಂದ ಕೂಡಿದ ಆಕಾಶದಿಂದ ಇಳಿಬಿಟ್ಟ ದೀಪದಕಂಬಗಳಂತೆ ಕಾಣುತ್ತವೆ. ವಿವಿಧ ಕೋನಗಳಲ್ಲಿ ಆ ಗೋಪುರಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಕೆಲಸದಲ್ಲಿ ಪ್ರವಾಸಿಗರು ನಿರತರಾಗಿದ್ದರು. ಶುಲ್ಕ ಪಾವತಿಸಿ ಆ ಗೋಪುರಗಳನ್ನು ಹತ್ತಿ ಎತ್ತರದಿಂದ ನಗರವೀಕ್ಷಣೆ ಮಾಡುವ ಅವಕಾಶವಿರುವುದೂ ತಿಳಿಯಿತು.  ಆ ಗೋಪುರಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಕೌಲಾಲಂಪುರ ಸಿಟಿಯಲ್ಲಿ ಒಂದಿಷ್ಟು ಓಡಾಡಿ ನಮ್ಮ ಹೊಟೆಲ್ ಗೆ ಹಿಂದಿರುಗಿದೆವು.  ಮರುದಿನ ಭೇಟಿ ಕೊಡಬೇಕಾದ ಹಲವು ತಾಣಗಳ  ಓಡಾಟದ ಯೋಜನೆ ಮಾಡಿ ಆ ದಿನ ಮುಗಿಸಿದೆವು.

***

ಕೌಲಾಲಂಪುರದಲ್ಲಿ ಪ್ರವಾಸಿಗರು ಭೇಟಿ ಕೊಡಲು ಆರ್ಟ್ ಗ್ಯಾಲರಿಗಳು, ಮ್ಯೂಸಿಯಂಗಳುಪಾರಂಪರಿ ಮಸೀದಿಗಳು, ಗುಡಿಗಳು, ಬರ್ಡ್ ಪಾರ್ಕ್, ಅಕ್ವೇರಿಯಂ, ಪಾರ್ಲಿಮೆಂಟ್ ಭವನ, ಅರಮನೆ ಮುಂತಾದ ಸ್ಥಳಗಳಿವೆ. ೧೯೨೮ರಲ್ಲಿ ಶುರುವಾದ ಕೌಲಾಲಂಪುರದ ಐತಿಹಾಸಿಕ ಸೆಂಟ್ರಲ್ ಮಾರ್ಕೆಟ್ ಅಲ್ಲಿನ ಪಾರಂಪರಿಕ ಸ್ಥಳಗಳಲ್ಲೊಂದಾಗಿದೆ. ಕುಶಲಕರ್ಮಿ ವಸ್ತುಗಳು, ಕಲಾತ್ಮಕ ಸಾಂಪ್ರದಾಯಿಕ ವಸ್ತುಗಳು ಮುಂತಾದವು ಅಲ್ಲಿ ದೊರೆಯುತ್ತವೆ. ಕೌಲಾಲಂಪುರದಿಂದ ಒಂದು ತಾಸು ಪ್ರಯಾಣದ ದೂರದಲ್ಲಿರುವ ಜೆಂಟಿಂಗ್ ಎಂಬ ಪ್ರದೇಶದಲ್ಲಿ ಪ್ರಸಿದ್ಧ ಅಮ್ಯೂಸ್ ಮೆಂಟ್ ಪಾರ್ಕ್ ಇದೆ. ಒಂದಿಡೀ ದಿನವನ್ನು ಅಲ್ಲಿ ಕಳೆಯಬಹುದು. ೨೫ ಕಿ.ಮೀ. ದೂರದಲ್ಲಿರುವ ಪುತ್ರಜಯ ಎನ್ನುವ  ಪ್ರದೇಶ  ಆ ದೇಶದ ಸುಂದರ ನಿರ್ಮಾಣ ಶೈಲಿಯ ಆಡಳಿತ ಕಟ್ಟಡಗಳಿರುವ ಉಪನಗರ.

ಕೌಲಾಲಂಪುರಕ್ಕೆ ಭಾರತದ ಅನೇಕ ನಗರಗಳಿಂದ  ಹಾಗೂ ಅಕ್ಕಪಕ್ಕದ ದೇಶಗಳಿಂದ ನೇರ ವಿಮಾನ ಸಂಪರ್ಕವಿದೆ. ನಗರದಲ್ಲಿ ಓಡಾಟಕ್ಕೆ ಮೆಟ್ರೋ ಟ್ರೇನ್, ಸಿಟಿ ಬಸ್, ಟ್ಯಾಕ್ಸಿ ಸೌಕರ್ಯಗಳಿವೆ. ಭಾರತೀಯ ಆಹಾರದ ಲಭ್ಯತೆಗೆ ತೊಂದರೆಯಿಲ್ಲ.


೨೦ಮಾರ್ಚ್ ೨೦೧೬ ವಿಜಯಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ: ಗುಹಾಲೋಕ ಬತು ಕೇವ್ಸ್ 




-ವಿಕಾಸ್ ಹೆಗಡೆ

ಶನಿವಾರ, ಮಾರ್ಚ್ 5, 2016

ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ

ವಿಕಿಪೀಡಿಯ - ಇಂದಿನ ಆನ್ ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ,
ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ ಮುಕ್ತವಾಗಿ ಸಿಗುವ ಲೋಕವೊಂದನ್ನು ಕಲ್ಪಿಸಿಕೊಳ್ಳಿ” ಎಂಬ ಘೋಷವಾಕ್ಯದ ವಿಕಿಪೀಡಿಯ ಇಂದು ಹೆಮ್ಮರವಾಗಿ ಬೆಳೆದಿದೆ. ನಾನ್-ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ವಿಕಿಪೀಡಿಯ ಕಾರ್ಯನಿರ್ವಹಿಸುತ್ತಿದೆ. ಇದರ ವಿಶೇಷವೆಂದರೆ ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಸಮುದಾಯ ಕಾರ್ಯ. ಜನರ ಮತ್ತು ಸಂಸ್ಥೆಗಳ ದೇಣಿಗೆಗಳೇ ಇದರ ಆರ್ಥಿಕ ಮೂಲ. ಇದರಲ್ಲಿ ಮಾಹಿತಿ ತುಂಬಿಸುವಿಕೆ ಮತ್ತು ಮಾಹಿತಿ ಪಡೆದುಕೊಳ್ಳುವಿಕೆ ಪ್ರತಿಯೊಬ್ಬನಿಗೂ ಮುಕ್ತ. ಯಾರುಬೇಕಾದರೂ ಸಂಪಾದಕನಾಗಿ ನೊಂದಾಯಿಸಿಕೊಂಡು ಜಗತ್ತಿನ ಯಾವುದೇ ವಿಷಯದ ಬಗ್ಗೆ ಮಾಹಿತಿಪೂರ್ಣ ವಿಷಯಗಳನ್ನು ಹಾಕಬಹುದು. ಹೊಸ ಲೇಖನದ ಪುಟ ರಚಿಸಬಹುದು. ಇರುವ ಲೇಖನ ತಿದ್ದಬಹುದು. ಹೆಚ್ಚಿನ ಮಾಹಿತಿ ಸೇರಿಸಬಹುದು. ಬೇರೆ ಬೇರೆ ದೇಶ ಪ್ರದೇಶಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ಹಾಗಾಗಿ ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ಇಂತಹ ಒಂದು ಸ್ವತಂತ್ರ ಮತ್ತು ಮುಕ್ತ ಆನ್ ಲೈನ್ ವಿಶ್ವಕೋಶ ಇಂದು ಸುಮಾರು ಮುನ್ನೂರು ಭಾಷೆಗಳಲ್ಲಿ ಇದೆ. ಇಂಗ್ಲೀಷ್ ವಿಕಿಪೀಡಿಯಾ ಒಂದರಲ್ಲೇ ಸುಮಾರು ಐವತ್ತು ಲಕ್ಷ ಲೇಖನಗಳಿವೆ ಅಂದರೆ ಅದರ ಮಾಹಿತಿ ಅಗಾಧತೆಯನ್ನು ಊಹಿಸಿಕೊಳ್ಳಬಹುದು! ವಿಕಿಪೀಡಿಯ ಆರಂಭವಾಗಿದ್ದು 2001ರ ಜನವರಿ 15ರಂದು . ಈ ವರ್ಷ ಜನವರಿಯಲ್ಲಿ ಅದು ೧೫ನೇ ಹುಟ್ಟುಹಬ್ಬ ಆಚರಿಸಿಕೊಂಡಿತು. 

ವಿಕಿಪೀಡಿಯದಲ್ಲಿ ಭಾರತೀಯ ಭಾಷೆಗಳ ವಿಕಿಪೀಡಿಯಗಳೂ ಇದ್ದು ನಮ್ಮ ಕನ್ನಡ ವಿಕಿಪೀಡಿಯವೂ ಇರುವುದು ತಿಳಿದಿರುವ ವಿಚಾರ. (https://kn.wikipedia.org). 2003ರ ಜೂನ್‌ನಲ್ಲಿ ಕನ್ನಡ ವಿಕಿಪೀಡಿಯ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೂ ಅನೇಕ ಸ್ವಯಂಸೇವಕ, ಉತ್ಸಾಹಿಗಳ ಶ್ರಮದಿಂದ ಸಾವಿರಾರು ಲೇಖನಗಳೊಂದಿಗೆ ಮುನ್ನಡೆಯುತ್ತಿರುವ ಅಂತರಜಾಲದ ಕನ್ನಡ ವಿಶ್ವಕೋ 'ಕನ್ನಡ ವಿಕಿಪೀಡಿಯ'ಕ್ಕೆ ಈಗ ಹದಿಮೂರರ ಹರೆಯ. ಇದೇ ಸಂಭ್ರಮದಲ್ಲಿ ಹದಿಮೂರನೆಯ ವರ್ಷಾಚರಣೆ ಸಮಾರಂಭವು ಫೆಬ್ರವರಿ ತಿಂಗಳ ಹದಿನಾಲ್ಕನೆಯ ತಾರೀಖು ಭಾನುವಾರ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಆಚರಣೆಯು ನಡೆಯಿತು. ಈ ಆಚರಣೆಯ ಪೂರ್ವಭಾವಿಯಾಗಿ ಅನೇಕ ವಿಷಯಾಧಾರಿತ ಸಂಪಾದನೋತ್ಸವಗಳು (edit-a-thon), ಕಾರ್ಯಾಗಾರಗಳು ಕರ್ನಾಟಕದ ವಿವಿಧೆಡೆಯಲ್ಲಿ ನಡೆದಿದ್ದವು. ಸಾಗರದಲ್ಲಿ ಮೆಕ್ಯಾನಿಕಲ್ ಎಂಜಿಯರಿಂಗ್ ಲೇಖನಗಳು, ಬೆಂಗಳೂರಿನ ಟೆಕ್ಸಾಸ್ ಇನ್‍ಸ್ಟ್ರುಮೆಂಟ್ ನಲ್ಲಿ ವಿಜ್ಞಾನ/ತಂತ್ರಜ್ಞಾನ ಲೇಖನಗಳು, ಮೈಸೂರಿನ ಗಂಗೋತ್ರಿಯಲ್ಲಿ ಕನ್ನಡ ಸಾಹಿತ್ಯ, ಮಂಗಳೂರಿನಲ್ಲಿ  ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಬಗ್ಗೆ, ಬೆಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶೈಕ್ಷಣಿಕ ವಿಜ್ಞಾ ಲೇಖನಗಳ ಸಂಪಾದನೋತ್ಸವಗಳು ಯಶಸ್ವಿಯಾಗಿ ನಡೆದಿದ್ದವು. ಹದಿಮೂರನೇ ವಾರ್ಷಿಕೋತ್ಸವ ಆಚರಣೆಯು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಕನ್ನಡ ವಿಭಾಗದ ನೇತೃತ್ವದಲ್ಲಿ, ವಿಕಿಮೀಡಿಯಾ ಫೌಂಡೇಷನ್ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿಯ ಸಹಯೋಗದೊಂದಿಗೆ ನಡೆದು ಆ ದಿನ ಸಭಾ ಕಾರ್ಯಕ್ರಮ, ಸಂಪಾದನೋತ್ಸವ, ಪೋಟೋನಡಿಗೆ, ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದವು. ಈ ಕಾರ್ಯಕ್ರಮದ ವಿವರಗಳನ್ನು ಇಲ್ಲಿ ನೋಡಬಹುದು: ಕನ್ನಡ ವಿಕಿಪೀಡಿಯ ಹದಿಮೂರನೇ ವಾರ್ಷಿಕೋತ್ಸವ

ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವ ಈ ಸಮುದಾಯ ಚಟುವಟಿಕೆಗೆ ಇನ್ನೂ ಹೆಚ್ಚು ಹೆಚ್ಚು ಜನರು ತೊಡಗಿಕೊಂಡರೆ ಅದು ನಮ್ಮ ಸಮಾಜದ, ಭಾಷೆಯ ಪ್ರಗತಿಯೆಡೆಗೆ ದೊಡ್ಡ ದಾಪುಗಾಲು.

***