ಗುರುವಾರ, ಏಪ್ರಿಲ್ 22, 2010

ಮತ್ತೆ ಹುಲಿಕಣಿವೆಯಲ್ಲಿ....

ನೀರವ ಪ್ರಕೃತಿಯಲ್ಲಿ ನಿಗೂಢತೆಯ ಅನುಭವವಾಗುತ್ತದೆಂದು ಹೇಳಿದ್ದೆನಷ್ಟೆ. ಅದು ಅಂತಹ ಪ್ರಕೃತಿಯು ತನ್ನಿಂದ ದೂರವಿದ್ದವರಿಗೆ ಒದಗಿಸಿಕೊಡುವ ನಿಗೂಢತೆ. ನಿಶ್ಯಬ್ದತೆ ಇದ್ದಾಗ ನಿಗೂಢತೆ ಸಹಜ. ಅಲ್ಲಿಯೇ ಹುಟ್ಟಿಬೆಳೆದವರನ್ನು ಕೇಳಿದರೆ ಅವರಿಗೆ ಅಲ್ಲಿ ಯಾವ ನಿಗೂಢತೆಯೂ ಕಾಣದೇ ಹೋದೀತು. ಅಂತಹುದೇ ಪರಿಸರದಿಂದ ಬಂದು ನಗರ ಸೇರಿಕೊಂಡ ಕೆಲವರಿಗೆ ಇಲ್ಲಿನ ರೈಲ್ವೇ ಸ್ಟೇಶನ್ನು, ಶಾಪಿಂಗ್ ಮಾಲುಗಳೇ ಎಲ್ಲಿಲ್ಲದ ಅನುಭೂತಿ ಕೊಡುವ ಹಾಗೆ ಪಟ್ಟಣ ನಗರಗಳಲ್ಲಿ ಬೆಳೆದವರಿಗೆ ಆ ವಾತಾವರಣ ಅದ್ಭುತ ಅನುಭೂತಿಗಳನ್ನು ಒದಗಿಸಿಕೊಡಬಹುದು. ಸೌಂದರ್ಯದಲ್ಲಿ ಸೌಮ್ಯತೆಯೂ ಮುಖ್ಯ ಪಾತ್ರ ವಹಿಸುವ ಹಾಗೆ ಪ್ರಕೃತಿಯ ಸ್ನಿಗ್ದತೆಗೆ ನೀರವತೆಯ ಪಾತ್ರ ಹಿರಿದು. ನಿಗೂಢತೆಯ ಅನುಭವಕ್ಕೂ ದೇವರಿಗೋ ದೆವ್ವಕ್ಕೋ ಮತ್ಯಾವುದೋ ಕತೆಗಳಿಗೋ ಸಂಬಂಧವಿರಬೇಕಂತಿಲ್ಲ. ಅಂತಹ ನೀರವತೆಯಲ್ಲಿ ನಿಗೂಢತೆಯ ಅನುಭವವಾಗಲು ಯಾವ ಕಾರಣಗಳೂ ಬೇಕಿಲ್ಲ.

ಅಜ್ಜನ ಮನೆ ಇರುವ ಕಡೆ ಸುತ್ತಲೂ ಬೆಟ್ಟಗಳಿವೆ. ಪ್ರತೀ ಬಾರಿ ನಾನು ಹೋದಾಗಲೂ ಆ ಬೆಟ್ಟಗಳಿಗೊಂದು ಭೇಟಿ ಕೊಡದಿದ್ದರೆ ಸಮಾಧಾನವಿರುವುದಿಲ್ಲ. ಅದನ್ನು ಹತ್ತಲು ತೋಟ ದಾಟಿ ಸ್ವಲ್ಪ ದೂರ ಹೋಗಬೇಕು. ತೋಟದಲ್ಲಿ ಹಬ್ಬಿದ ಸೌತೆಬಳ್ಳಿಯಲ್ಲಿ ನಾಲ್ಕು ಸೌತೆಮಿಡಿ ಕಿತ್ತುಕೊಂಡು ತಿನ್ನುತ್ತಾ, ಕಟ್ಟಿರುವೆಗಳ ಸಾಲಿನಲ್ಲಿ ಕಾಣದೇ ಕಾಲಿಟ್ಟು ಹಾರಿ, ಅಡಕೆ ಮರಕ್ಕೆ ಕಟ್ಟಿದ ಜೇಡರ ಬಲೆ ಮುಖಕ್ಕೆ ರಾಚಿಸಿಕೊಂಡು ತೋಟದ ಕೊನೆ ತಲುಪಿದರೆ ಚಿಕ್ಕ ನೀರಿನ ತೊರೆ ಸುಮ್ಮನೇ ಹರಿಯುತ್ತಲೇ ಇದೆ. ಅದರ ಮಡುವಿನಲ್ಲಿ ಪುಟ್ಟ ಪುಟ್ಟ ನೂರಾರು ಮೀನುಗಳು. ಜೀಬ್ರಾ ಮೀನು, ಹುಲಿ ಮೀನು, ಬೆಂಕಿ ಮೀನು! ಯಾರು ತಂದು ಬಿಟ್ಟರು ಅದನ್ನು? ಅವಕ್ಕೆ ಅದೇ ಪ್ರಪಂಚ. ಗೊತ್ತಿಲ್ಲದೇ ಅಲ್ಲೇ ಹುಟ್ಟಿವೆ, ಅಲ್ಲೇ ಸಾಯುತ್ತವೆ. ಸಂಕ ದಾಟಿ ಬ್ಯಾಣಕ್ಕೆ ಕಾಲಿಟ್ಟ ಕೂಡಲೇ ಒಂದಿಷ್ಟು ಹಕ್ಕಿಗಳು ಪುರ್ರನೇ ಹಾರಿ ಹೋದ ಸದ್ದು. ಹಾಗೇ ನೆಡೆಯುತ್ತಾ ಹೋಗುತ್ತಿದ್ದರೆ ಇವನ್ಯಾರೋ ಆಗಂತುಕ ಬಂದಿದ್ದಾನೆ ಎಂದು ಒಂದು ಹಕ್ಕಿ ಕೂಗಿ ಎಚ್ಚರಿಸುತ್ತಲೇ ಇದೆ. ಬೇಕೆಂದರೂ ಕಣ್ಣಿಗೆ ಬೀಳದ ನವಿಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲೋ ನಿಂತು ಕೇಗುಡುತ್ತದೆ. ಹಿಂದಿನ ಬಾರಿ ತನ್ನ ದೊಡ್ಡ ಕೊಕ್ಕಿನಲ್ಲಿ ಹಣ್ಣೊಂದನ್ನು ಕಚ್ಚಿಕೊಂಡ ಮಂಗಟ್ಟೆ (ಹಾರ್ನ್ ಬಿಲ್)ಯೊಂದು ಕಾಣಿಸಿ ವಿಪರೀತ ಖುಷಿಯಾಗಿತ್ತು. ಅಲ್ಲಿರುವ ಸುಮಾರು ಬೆಟ್ಟಗಳಲ್ಲಿ ಎಲ್ಲಕ್ಕೂ ದಾರಿಗಳಿಲ್ಲ. ಸುಮಾರು ದೂರ ಮರಗಳನ್ನೂ, ಬಿದಿರ ಮೆಳೆಗಳನ್ನೂ ದಾಟಿ, ಹುಲ್ಲಿನ ಮಧ್ಯೆ ಕಾಲುದಾರಿ ಇರುವ ತನಕ ಹೋಗಿ ಗುಡ್ಡದ ಬುಡ ತಲುಪಿದರೆ ಅಲ್ಲಿಂದ ಮುಂದಿನ ಆಯ್ಕೆ ನಮ್ಮದು.

ನನ್ನ ಹಳೇ ಆಫೀಸಿನಲ್ಲಿ ಒಬ್ಬ ಫ್ರೆಂಡ್ ಇದ್ದ. ಅವನಿಗೆ ವಿಪರೀತ ಟ್ರೆಕ್ಕಿಂಗ್ ಚಟ. ಕರ್ನಾಟಕದಲ್ಲಿರುವ ಸಿಕ್ಕ ಸಿಕ್ಕ ಗುಡ್ಡಬೆಟ್ಟಗಳನ್ನೆಲ್ಲಾ ಹತ್ತಿಳಿದಿದ್ದಾನೆ. ವೀಕೆಂಡು ಬಂದರೆ ಸಾಕು ಚಂದಾದಾರ ವ್ಯಾಪ್ತಿ ಪ್ರದೇಶದ ಹೊರಗೆ ! ಇಲ್ಲಿದ್ದು ಏನ್ರೋ ಮಾಡ್ತೀರಾ ಬನ್ರೋ ಟ್ರೆಕ್ಕಿಂಗ್ ಮಾಡಣ ಅಂತ ನಮಗೂ ಕರೆಯುತ್ತಿದ್ದ. ಅವನಿಗೂ ಮದುವೆಯಾಯಿತು. ಅದ್ಯಾಕೋ ಟ್ರೆಕ್ಕಿಂಗ್ ನಿಲ್ಲಿಸಿಬಿಟ್ಟ. ಆಮೇಲೆ ನಾವು ಅವನಿಗೆ ಈಗ ಮನೆಲ್ಲೇ ಟ್ರೆಕ್ಕಿಂಗ್ ಜೋರಾ? ಪಾಪ ಗುಡ್ಡ ಹತ್ತಿ ಸುಸ್ತಾಗಿದಿಯ ಅಂತ ತಮಾಷೆ ಮಾಡ್ತಿದ್ವಿ. :)

ಅದು ಇರಲಿ. ಹುಲಿಕಣಿವೆಯಲ್ಲಿ ಒಮ್ಮೆ ಹೀಗೆ ಬೆಟ್ಟ ಹತ್ತಲು ಹೋಗುತ್ತಿರುವಾಗ ಸೌದೆಹೊರೆ ಹೊತ್ತುಕೊಂಡು ಬರುತ್ತಿದ್ದ ರಾಮ ಸಿಕ್ಕಿಬಿಟ್ಟ. ಹೆಗಡ್ರು ಎಲ್ ಹೊಂಟಿದೀರಿ ಅಂದ. ಹೀಂಗೆ ಗುಡ್ಡ ಹತ್ತಿ ಬರೋಣ ಅಂತ ಹೋಗ್ತಿದ್ದೇನೆ ಅಂದೆ. ಅಲ್ಲೆಂತ ಇದೆ ಅಂತ ಹತ್ತಕ್ ಹೋಗ್ತೀರಾ ಮಾರಾರ್ರೇ ನೀವು ಬೆಂಗ್ಳೂರವ್ರು ಅಂದ. ಸುಮ್ಮನೇ ನಕ್ಕೆ. ಅಲ್ಲಿ ಏನೂ ಇಲ್ಲ ಅಂತಲೇ ಹೋಗ್ತಾ ಇರೋದು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ದಳದಳನೆ ಬೆವರು ಹರಿಸುತ್ತಾ ಏದುಸಿರು ಬಿಡುತ್ತಾ ಬೆಟ್ಟದ ತುದಿ ತಲುಪಿದರೆ ಅಲ್ಲೊಂದು ಒಂಟಿ ಬೆಟ್ಟದನೆಲ್ಲಿ ಮರ. ನೆಟ್ಟವರ್ಯಾರೂ ಅಲ್ಲ. ಕೊಯ್ಯುವರಿಲ್ಲ. ಯಾರಾದರೂ ಬೆಟ್ಟ ಹತ್ತಿ ಬಂದರೆ ಅವರಿಗೆ ಸ್ವಾಗತ ಕೋರಿ ದಣಿವಾರಿಸಲು ನಿಂತಂತಿದೆ. ಅದಕ್ಕೆ ಬೇಸರವಿಲ್ಲ. ಬೆಟ್ಟದ ತುದಿಯಂತೂ ನೀರವತೆಯ ಉತ್ತುಂಗ! ಅಲ್ಲಿ ಗಾಳಿ ಬೀಸುತ್ತಲೇ ಇದೆ. ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ.

ಹಾಗಂತ ಈ ಎಲ್ಲಾ ಪ್ರದೇಶಗಳೇನು ಅಲ್ಲಿನ ವಾಸಿಗಳಿಗೆ ಖಂಡಿತಾ ಸ್ವರ್ಗ ಲೋಕದ ತುಂಡಲ್ಲ. ಅಲ್ಲಿನ ತೊಂದರೆ ಅಲ್ಲಿನವರಿಗೇ ಗೊತ್ತು. ಬೇಸಿಗೆಯಲ್ಲಿ ಒಂದು ತೊಂದರೆಯಾದರೆ ಮಳೆಗಾಲದಲ್ಲಿ ಇನ್ನೂ ಇನ್ನೇನೋ ಜಾಸ್ತಿ ತೊಂದರೆ. ಎಲ್ಲಾ ಸಹಿಸಿಕೊಳ್ಳೋಣವೆಂದರೆ ಮತ್ತೇನೋ ನಾಗರಿಕತೆಯ ಸೌಲಭ್ಯದ ತೊಂದರೆ. ಸಮಸ್ಯೆಗಳು ಎಲ್ಲಿಲ್ಲ ಹೇಳಿ? ಅದೆಲ್ಲಾ ಬದಿಗಿಟ್ಟು ಮತ್ತೆ ಈಗ ನಿಗೂಢತೆಯ ವಿಷಯಕ್ಕೆ ಬಂದರೆ, ರಾತ್ರಿಯಿಡೀ ಹೈಮಾಸ್ ದೀಪಗಳ ಬೆಳಕಲ್ಲಿರುವವರಿಗೆ ಕಗ್ಗತ್ತಲ ಕಲ್ಪನೆಯಾಗಲೀ, ಸಿಟಿ ಮಧ್ಯದಲ್ಲಿ ಸ್ಮಶಾನ ನೋಡಿದವರಿಗೆ ’ಸ್ಮಶಾನ ಮೌನ’ ಎಂಬ ಪದದ ಅರ್ಥವಾಗಲೀ ತಿಳಿಯುವುದಕ್ಕೆ ಹೇಗೆ ತಾನೆ ಸಾಧ್ಯ! ನಾವು ನಗರಗಳಲ್ಲಿ ಕೂತು ನೂರು ಭಾಷಣ ಕುಟ್ಟಬಹುದು. ಮಾನವಾತೀತ ಶಕ್ತಿಗಳಾಗಲೀ, ಮತ್ಯಾವುದೋ ಶಕ್ತಿಯಾಗಲೀ, ವಿಚಿತ್ರಗಳಾಗಲೀ ಇಲ್ಲವೇ ಇಲ್ಲ ಎಂದು ತಳ್ಳಿಹಾಕಿಬಿಡಬಹುದು. ಎಲ್ಲದಕ್ಕೂ ವಿಜ್ಞಾನವನ್ನು ತಗುಲಿಸಿ ಅದರಲ್ಲಿನ ರೋಚಕತೆಯನ್ನು ಇಷ್ಟೇನಾ ಅನ್ನಿಸಿಬಿಡಬಹುದು. ಆದರೆ ಯಾರ ಹಂಗಿಲ್ಲದೇ ನೆಡೆದು ಹೋಗುತ್ತಿರುವ ಮಲೆನಾಡಿನ ಇಂತಹ ಪ್ರಕೃತಿಯ, ಮಳೆಗಾಲದ ರಾತ್ರಿಗಳ, ಅಸಂಖ್ಯ ಜೀವಿಗಳ ಚಕ್ರವನ್ನು ನೋಡಿದರೆ ಮನುಷ್ಯ ಪ್ರಕೃತಿಯನ್ನು ಪೂಜಿಸುವುದಕ್ಕೆ, ಅದರ ಬಗ್ಗೆ ನೂರು ಭಾವನೆಗಳನ್ನು, ನಂಬಿಕೆಗಳನ್ನು, ಹೆದರಿಕೆಗಳನ್ನು ಇಟ್ಟುಕೊಂಡದ್ದಕ್ಕೆ, ಕಣ್ಣಿಗೆ ಕಾಣದ ಶಕ್ತಿಗಳಿಗಾಗಿ ತವಕಿಸುವುದಕ್ಕೆ ಕಾರಣಗಳಂತೂ ಸ್ಪಷ್ಟವಾಗುತ್ತದೆ. ಒಟ್ಟಾರೆ ಇವೆಲ್ಲವೂ ಎಷ್ಟೇ ವಿವರಣೆಯ ಜೊತೆ ಬಂದರೂ ಅನುಭವಿಸುವ ಮನಸ್ಸಿನ ಮೇಲೆ ಅವಲಂಬಿತವಷ್ಟೆ. ಹಾಗಾಗಿ ಈ ಹುಲೀಕಣಿವೆ ಎಲ್ಲೆಡೆಯೂ ಇರಬಹುದು, ಇಲ್ಲದಿರಬಹುದು. ಆಸಕ್ತಿ ಅಚ್ಚರಿಗಳಿಂದ ಅದನ್ನು ಹುಡುಕಿಕೊಳ್ಳುವುದು ಅವರಿಗವರಿಗೆ ಬಿಟ್ಟಿದೆ.

ಶುಕ್ರವಾರ, ಏಪ್ರಿಲ್ 16, 2010

ಹುಲಿಕಣಿವೆ

ನನ್ನ ಅಜ್ಜನ ಮನೆಯಿರುವುದು ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿ ಎಂದರೆ ಮಲೆನಾಡಿನ ಹಳ್ಳಿಗಳನ್ನು ನೋಡದವರಿಗೆ ಅದು ಕಲ್ಪನೆಗೂ ಬರುವುದಿಲ್ಲ. ಏಕೆಂದರೆ ಅಲ್ಲಿರುವುದು ಕೇವಲ ಮೂರು ಮನೆಗಳು. ಹೌದು , ಮೂರೇ ಮನೆಗಳು.! ಶಿರಸಿಯಿಂದ ೧೬ ಕಿ.ಮಿ.ದೂರ ಬಂದು, ಮತ್ತೆ ಒಳಗೆ ೪ ಕಿ.ಮಿ. ಹಾಯ್ದರೆ ಅಲ್ಲಿ ಒಂದು ಕತ್ತರಿ(ಕ್ರಾಸ್)ಯಲ್ಲಿ ಬಸ್ಸಿಳಿದುಕೊಳ್ಳಬೇಕು. ಆನಂತರ ಸುಮಾರು ೨ ಕಿ.ಮಿ ನೆಡೆದು ಹೋಗಿ ಒಂದು ಇಳಿಜಾರಿನಲ್ಲಿ ಉರುಳಿದರೆ ಸಿಗುವುದು ಮನೆ. ಭೌಗೋಳಿಕವಾಗಿ ಕಣಿವೆ ಎನ್ನುವಂತಹ ಜಾಗದಲ್ಲಿದೆ. ಅಲ್ಲಿ ಹಿಂದೆ ಹುಲಿಗಳು(!) ಓಡಾಡುತ್ತಿದ್ದವಂತೆ. ಅದಕ್ಕೇ ಮನೆಯಿರುವ ಜಾಗಕ್ಕೆ ಹುಲೀಕಣಿವೆ ಎಂಬ ಹೆಸರಿದೆ. ಅಲ್ಲೇ ಸ್ವಲ್ಪ ದೂರದ ಇನ್ನೊಂದು ಹಳ್ಳಿಯಲ್ಲಿ ಕೂಡು ಕುಟುಂಬವಿತ್ತಂತೆ. ೪೦ ವರ್ಷಗಳ ಹಿಂದೆ ಕೂಡುಕುಟುಂಬ ಹಿಸ್ಸೆಯಾದ ಮೇಲೆ ಅಜ್ಜನ ಪಾಲಿಗೆ ಇಲ್ಲಿ ತೋಟ ಮಾಡಿ ನೆಲೆಕಂಡುಕೊಳ್ಳಬೇಕಾಗಿ ಬಂತು. ಸಾಮಾನ್ಯವಾಗಿ ಕಣಿವೆಗಳಲ್ಲಿ ಸದಾ ನೀರು ಹರಿಯುತ್ತಿರುತ್ತದೆ. ಅಡಿಕೆ ತೋಟಕ್ಕೆ ಸ್ವಲ್ಪ ಥಂಡಿ ಬೇಕಿರುವುದರಿಂದ ಅಡಿಕೆ ತೋಟಗಳನ್ನು ಇಂತಹ ಪ್ರದೇಶದಲ್ಲೇ ಮಾಡುತ್ತಾರಂತೆ. ಪಟ್ಟಣಗಳಲ್ಲಿ ಬೆಳೆದ ನಮಗೆ ಮೊದಲೆಲ್ಲಾ ಇಂತಹ ಜಾಗಗಳಲ್ಲಿ ಯಾಕಪ್ಪಾ ಮನೆ ಕಟ್ಟಿಕೊಂಡಿದ್ದಾರೆ ಅನ್ನಿಸುತ್ತಿತ್ತು. ಮಲೆನಾಡಿನ ಬಹುತೇಕ ಹಳ್ಳಿಗಳು ಇದೇ ರೀತಿ. ಶತಮಾನಗಳ ಹಿಂದೆ ಇಂತಹ ದುರ್ಗಮ ಸ್ಥಳಗಳಲ್ಲಿ, ಅಷ್ಟು ಒಳಗೆ ಹೋಗಿ ಅಲ್ಲಿನ ಪ್ರಶಸ್ತ ಜಾಗಗಳನ್ನು ಹುಡುಕಿ ತೋಟ ಮಾಡಿದ್ದಾರೆ. ಈಗ ರಸ್ತೆಯಿದೆ, ವಿದ್ಯುತ್ ಇದೆ, ಎಲ್ಲಾ ರೀತಿ ಸಂಪರ್ಕಗಳಿವೆ. ಆಗ ಇಲ್ಲಿ ಬಂದು ನೆಲೆಸಿದಾಗ ಏನಿತ್ತು? ದಟ್ಟ ಕಾಡು, ಬೆಟ್ಟ ಗುಡ್ಡಗಳು, ಅವುಗಳಲ್ಲೇ ಕಾಲುದಾರಿ. ಮಳೆಗಾಲಕ್ಕಂತೂ ದೇವರೇ ಗತಿ. ಅಂತದ್ದರಲ್ಲಿ ಇಂತಹ ಜಾಗಗಳಲ್ಲಿ ಹೋಗಿ ಕೃಷಿ ಮಾಡಿ ಬದುಕು ಕಂಡುಕೊಂಡದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಮನೆಯ ಕೆಲವೇ ಅಡಿಗಳ ದೂರದಲ್ಲಿ ಮಾರಿಕಲ್ಲುಗಳಿವೆ. ಸಾಮಾನ್ಯವಾಗಿ ’ಮಾರಿ’ ಎಂಬುದು ನಾವು ಪೂಜಿಸುವ ದೇವರಲ್ಲ. ಆದರೂ ಅಲ್ಲಿ ಹೇಗೆ ಮಾರಿ ಕಲ್ಲು ಬಂತು ಎಂಬುದಕ್ಕೆ ಅಜ್ಜಿ ಹೇಳಿದ ಪ್ರಕಾರ, ಹಿಂದೆ ಆಗ ಅಲ್ಲಿ ನಾಯಕರ ಪೈಕಿಯ ಕೆಲವು ಜನ ಇದ್ದರಂತೆ. (’ನಾಯಕರು ’ ಎಂಬುದೊಂದು ಮಲೆನಾಡಿನ ಕಡೆಯ ಜನಾಂಗ). ಆ ನಾಯಕರು ಮಾರಿ ಕಲ್ಲುಗಳನ್ನು ಪೂಜಿಸುತ್ತಿದ್ದರಂತೆ. ಅವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟು ಇವರು ಮನೆಕಟ್ಟಿಸಿದರಂತೆ. ಅವರು ಹೋದ ಮೇಲೆ ಅವರು ಪೂಜಿಸುತ್ತಿದ್ದ ಮಾರಿಗೆ ಧಕ್ಕೆಯಾಗಬಾರದೆಂದು ಅಜ್ಜ ಕಟ್ಟೆ ಕಟ್ಟಿಸಿ ಅವುಗಳಿಗೆ ಒಂದು ಸ್ಥಾನ ಮಾಡಿಕೊಟ್ಟ. ಹೇಳಿ ಕೇಳಿ ಮಾರಿ ಎಂದರೆ ರಕ್ತ ಬಲಿಯ ದೇವರು. ಅದರಂತೆಯೇ ಮೊದಲೆರಡು ವರ್ಷ ಕೋಳಿಯನ್ನು ಕುಯ್ಯಿಸಿದ್ದರಂತೆ! ಆಮೇಲೆ ಕಾಶಿಯಿಂದ ಬಂದ ಜೋಯ್ಸರೊಬ್ಬರು ಈಗ ಈ ಮಾರಿ ನಮ್ಮ ದೇವರಾಗಿರುವುದರಿಂದ ರಕ್ತಬಲಿ ನಿಲ್ಲಿಸಬಹುದೆಂದೂ, ನಮ್ಮ ನೈವೇದ್ಯವನ್ನೇ ಅರ್ಪಿಸಬಹುದೆಂದೂ ಸಲಹೆ ಕೊಟ್ಟದ್ದರಿಂದ ಆಗಿನಿಂದ ವರ್ಷಕ್ಕೊಮ್ಮೆ ಕೋಳಿಬಲಿ ಇಲ್ಲದೇ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

ಅರ್ಧ ಫರ್ಲಾಂಗು ದೂರ ಇರುವ ಚಿಕ್ಕಪ್ಪನ ಮನೆ, ಆ ಕಡೆ ಒಂದಿಪ್ಪತ್ತು ಹೆಜ್ಜೆ ದೂರ ಇರುವ ಮತ್ತೊಬ್ಬ ಚಿಕ್ಕಪ್ಪನ ಮನೆಗಳೇ ಅಲ್ಲಿನ ಮಿಕ್ಕೆರಡು ಮನೆಗಳು. ಬೇರೆ ಮನೆಗಳು ಕಾಣಬೇಕೆಂದರೆ ಸುಮಾರು ಮುಕ್ಕಾಲು ಕಿ.ಮಿ. ದೂರ ಹೋಗಬೇಕು. ಅಜ್ಜನ ಮನೆಯಿರುವ ವಾತಾವರಣದಲ್ಲಿ ನಿಶ್ಯಬ್ದತೆಯದೇ ಕಾರುಬಾರು. ಯಾರಾದರೂ ಜೋರಾಗಿ ಮಾತಾಡಿದರೆ, ಅಪರೂಪಕ್ಕೊಮ್ಮೆ ಏನಾದರೂ ಗಾಡಿಗಳು ಬಂದರೆ, ಮತ್ತೇನೋ ಜೋರು ಶಬ್ದವಾದರಷ್ಟೆ ಅಲ್ಲಿ ಶಬ್ದ. ಅದಿಲ್ಲದಿದ್ದರೆ ಬರೀ ಗಾಳಿಯ ಸುಯ್ಯ್ ಶಬ್ದ, ಬೀಸಿದ ಗಾಳಿಗೆ ಒಮ್ಮೆ ಮರಗಿಡಗಳೆಲ್ಲಾ ತೂಗಿ ತಾರಾಡುವ ಶಬ್ದ, ಕೊಟ್ಟಿಗೆಯಲ್ಲಿ ಕಟ್ಟಿದ ಆಕಳಿನ ಅಂಬಾ.., ಹಾಕಿದ ಹುಲ್ಲನ್ನು ಎಳೆದೆಳೆದು ತಲೆ ಕೊಡವಿಕೊಂಡಾಗಿನ ಕೊರಳಿನ ಗಂಟೆ ಶಬ್ದವಷ್ಟೆ. ಮನೆಯ ಮುಂದೆ ಅಂಗಳವಿದೆ. ಅಡಕೆ ಒಣಗಿಸಲು ಬಿಟ್ಟಿರುವ ಅಂಗಳ. ಮಳೆಗಾಲದಲ್ಲಿ ಧೋ ಧೋ ಮಳೆಗೆ ಅಂಗಳದ ತುಂಬೆಲ್ಲಾ ನೀರು. ರಾತ್ರಿ ಹೊರಗೆ ಬಂದರೆ ಮಿಣುಕು ಹುಳುಗಳು ಫಳ ಫಳನೆ ದೊಂದಿ ಹೊತ್ತಿಸುತ್ತಾ ಹಾರುತ್ತಿರುತ್ತವೆ. ರಾತ್ರಿಯೆಲ್ಲಾ ಮರಗಳ ಹಿಂದಿನಿಂದ ಹಾರುತ್ತಾ ಹಾರುತ್ತಾ ಬಂದು ಅಂಗಳದಲ್ಲಿ ಮಿಂಚಿ ಮತ್ತೆಲ್ಲೋ ಹಾರುತ್ತಾ ಮರೆಯಾಗಿ ಎಲ್ಲಿಗೆ ಹೋಗುತ್ತವೋ ಗೊತ್ತಿಲ್ಲ. ಅಂತಹ ಪ್ರಕೃತಿಯಲ್ಲಿ, ಆ ನೀರವ ವಾತಾವರಣದ ರಾತ್ರಿಯಲ್ಲಿ ಮಿಣುಕು ಹುಳುಗಳು ಕಟ್ಟಿಕೊಡುವ ಪ್ರಪಂಚವಿದೆಯಲ್ಲಾ, ಅದು ಮಾತ್ರ ಅದ್ಬುತ. ಚಳಿಗಾಲದಲ್ಲಿ ಬೆಳಗಾಗೆದ್ದರೆ ಎತ್ತರೆತ್ತರ ಹುಲ್ಲಿನ ಮೇಲೆಲ್ಲಾ ಇಬ್ಬನಿ. ಅಲ್ಲಿದ್ದಾಗ ಹೊರಗೆ ಒಂದು ಪ್ರಪಂಚವಿದೆ ಎನ್ನುವುದು ಮರೆತು ಹೋಗಿರುತ್ತದೆ. ರಾತ್ರಿಯ ಕಗ್ಗತ್ತಲಲ್ಲಿ ಕೂಗುವ ಸಾವಿರ ಜೀರುಂಡೆಗಳ ದನಿ ಒಮ್ಮೊಮ್ಮೆ ಇದ್ದಕ್ಕಿದ್ದಂತೇ ಸ್ತಬ್ಧವಾದಾಗ ಜಗತ್ತೇ ನಿಂತು ಹೋದಂತೆ! ಅಲ್ಲಿನ ಪ್ರಕೃತಿಯಲ್ಲೇನೋ ನಿಗೂಢತೆ ಅನುಭವವಾಗುತ್ತದೆ.