ಗುರುವಾರ, ಡಿಸೆಂಬರ್ 24, 2009

ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ

ಕೆಲದಿನಗಳ ಹಿಂದೆ ವಿನಾಯಕ ಕೋಡ್ಸರ ಅವರು ತಮ್ಮ ಬ್ಲಾಗಿನಲ್ಲಿ ಈ ಲವ್ ಜಿಹಾದ್, ಮತಾಂತರ ಮುಂತಾದ ವಿಷಯಗಳು ಕೆಲ ಬ್ಲಾಗಿಗರಿಗೂ ಹೇಗೆ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ, ತಮ್ಮ ಸೋಗಲಾಡಿ ಜಾತ್ಯತೀತತೆ ತೋರಿಸಿಕೊಳ್ಳುವ ಅಂಶಗಳಾಗಿವೆ ಎಂದು ಬರೆಯುತ್ತಾ ಆಜಾದಿ ಬಚಾವೋ ಎಂಬ ಆಂದೋಲನದ ಬಗ್ಗೆ ಪ್ರಸ್ತಾಪಿಸಿ ಅದು ಈಗ ದೇಶದಲ್ಲಿ ಅಕ್ಷರಶಃ ಸತ್ತಿದೆ ಎಂದಿದ್ದರು.

ನಾನು ಪೀಯೂಸಿನಲ್ಲಿದ್ದ ದಿನಗಳು. ಆಜಾದೀ ಬಚಾವೋ ಎಂಬ ಆಂದೋಲನ ಜೋರಾಗಿ ನೆಡೆಯುತ್ತಿತ್ತು. ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದು ’ಹಾಯ್ ಬೆಂಗಳೂರು’ ಪತ್ರಿಕೆ. ಅದರಲ್ಲಿ ಒಂದು ಅಂಕಣ ಬರುತ್ತಿತ್ತು. ರಾಜೀವ ದೀಕ್ಷಿತ ಎಂಬ ಮನುಷ್ಯ ದೇಶದೆಲ್ಲೆಡೆ ತಿರುಗುತ್ತಿದ್ದರು. ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಈಗಿನ ಪ್ರಧಾನಿ ಆಗಿನ ವಿತ್ತಮಂತ್ರಿ ಮನಮೋಹನ ಸಿಂಗರನ್ನು ಉದಾರೀಕರಣದ ವಿಷಯವಾಗಿ ಕೆಡವಿಕೊಳ್ಳುತ್ತಿದ್ದರು. ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಹನ್ನೆರಡು ರೂಪಾಯಿ ಕೊಟ್ಟು ಆ ಕೆಟ್ಟ ಪೆಪ್ಸಿ ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಐದೇ ರೂಪಾಯಿ ಕೊಟ್ಟು ಎಳ್ನೀರು ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಅವರು ಭಾರತದ ಇತಿಹಾಸ, ವೈಭವಗಳ ಸತ್ಯಾಸತ್ಯತೆಗಳನ್ನು ಅಂಕಿಅಂಶಗಳ ಸಮೇತ ವಿವರಿಸುತ್ತಿದ್ದರೆ ಕೇಳಿದವರ ರಕ್ತ ಬಿಸಿಯಾಗುತ್ತಿತ್ತು.

ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ನಮ್ಮಲ್ಲಿ ಚಕ್ರವರ್ತಿ ಸೂಲಿಬೆಲೆ ಯವರ ಮಾತುಗಳನ್ನು ಕೇಳಿರಬಹುದು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹ ನರಸತ್ತವನಲ್ಲೂ ದೇಶಭಕ್ತಿ, ಧರ್ಮಜಾಗೃತಿ ಪುಟಿಯಲಾರಂಭಿಸುತ್ತದೆ. ಈ ರಾಜೀವ ದೀಕ್ಷಿತರೂ ಹಾಗೆಯೇ. ಅವರ ಮಾತು ಕೇಳಿದ ಯಾರಲ್ಲೇ ಆದರೂ ದೇಶಪ್ರೇಮ ಹೆಚ್ಚಾಗುತ್ತಿತ್ತು. ಪುಗ್ಸಟ್ಟೆ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಆತನ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಅಷ್ಟಕ್ಕೂ ಆ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಕಡಿ ಸುಡು ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಆ ಮೂಲಕ ಈ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮಂಗ ಮಾಡುತ್ತಿವೆ ಈ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಪ್ರಾಡಕ್ಟುಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು.

ಮನೆಯಲ್ಲಿ ಆ ಪಟ್ಟಿಯನ್ನು ನನ್ನ ಕೋಣೆಯ ಗೋಡೆಗೆ ಅಂಟಿಸಿಕೊಂಡಿದ್ದೆ. ಅಪ್ಪನಿಗೂ ಇವೇ ಕಂಪನಿಯ ಸಾಮಾನು ತೆಗೆದುಕೊಂಡು ಬಾ ಎಂದು ತಾಕೀತು ಮಾಡುತ್ತಿದ್ದೆ. ನಾನು ಹಾಸನದಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗ ಅವರ ಭಾಷಣ ಕೇಳಿ ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟುಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಿದೆ. ಹಾಸ್ಟೆಲ್ಲಿನಲ್ಲೂ ಈ ಬಗ್ಗೆ ಬಹಳ ಚರ್ಚೆಗಳಾಗಿ ಬಹಳಷ್ಟು ಹುಡುಗರು ಸ್ವದೇಶಿ ವಸ್ತುಗಳನ್ನೇ ಬಳಸಲು ತೀರ್ಮಾನ ತೆಗೆದುಕೊಂಡಿದ್ದೆವು. ಇದೆಲ್ಲುದರ ಪರಿಣಾಮವೇ ಏನೋ ಅಥವಾ ನನಗಿಷ್ಟವಿಲ್ಲದಿರುವುದರಿಂದವೇನೋ, ನನಗೆ ಇವತ್ತಿಗೂ ಪೆಪ್ಸಿ ಮುಂತಾದ ಸಾಫ್ಟ್ ಡ್ರಿಂಕ್ ಗಳನ್ನು ಕುಡಿಯಲು ಮನಸ್ಸು ಬರುವುದಿಲ್ಲ. ಇವತ್ತಿಗೂ ಸಾಮಾನುಗಳನ್ನು ಕೊಳ್ಳುವಾಗ ಗುಣಮಟ್ಟ, ಬೆಲೆ ಜೊತೆಗೆ ಅದನ್ನು ತಯಾರು ಮಾಡಿದ ಕಂಪನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅಪೇಕ್ಷೆಗೆ ತಕ್ಕನಾದ್ದು ಸಿಗದಿದ್ದರೆ ಬೇರೆ ಮಾತು.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಈ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿಬಿಡುತ್ತದೆ. ಆವತ್ತು ಹಾಸ್ಟೆಲ್ ಹತ್ತಿರದ ನಮ್ಮ ರೆಗ್ಯುಲರ್ ಅಂಗಡಿಯ ಉದಯಣ್ಣ "ಏನ್ರೀ, ನಿಮ್ ಹಾಸ್ಟೆಲ್ ಹುಡುಗ್ರು ಈಗ ಬರೀ ಬಬೂಲ್, ಮಿಸ್ವಾಕ್ ಟೂತ್ ಪೇಸ್ಟ್ ಕೇಳ್ತಾರೆ, ಕ್ಯಾಂಪ್ಕೋ ಚಾಕ್ಲೇಟೇ ಕೊಡಿ ಅಂತಾರೆ, ಸದ್ಯ ಐ.ಟಿ.ಸಿ. ಮಾತ್ರ ಬಚಾವಾಗಿದೆ :)" ಅಂದಿದ್ದನ್ನು ಕೇಳಿ ಸಂಭ್ರಮ ಪಟ್ಟಿದ್ದು, ಚಳವಳಿ ಯಶಸ್ವಿಯಾಯಿತೆಂದು ಬೀಗಿದ್ದು ನೆನಪಿಸಿಕೊಂಡರೆ ಈಗ ಪಿಚ್ಚೆನಿಸುತ್ತದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ( ಇಲ್ಲಿ software, I.T ಬಗ್ಗೆ ಹೇಳುತ್ತಿಲ್ಲ). ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. MNCಗಳನ್ನು ಓಡಿಸಿ ಎಂದರೆ ನಮ್ಮ ಅನ್ನಕ್ಕೇ ನಾವು ಕಲ್ಲು ಹಾಕಿಕೊಂಡಂತೆ. ಹಾಗಲ್ಲ ಹೀಗೆ ಅಂತ ಈಗ ಏನೋ ಹೇಳಲು ಹೋದರೆ "ನಿಮ್ಮ ಭಾವಮೈದ ಅಮೆರಿಕಾದಲ್ಲಿಲ್ವಾ, ನೀವು ಉಪಯೋಗಿಸುವ ಜೀಮೇಲ್ , ಯಾಹೂ ಮೇಲ್ ಎಲ್ಲಾ ಅಮೆರಿಕಾದ್ದಲ್ವಾ" ಅಂತ ಕೆಲವರು ಬಾಲಿಶವಾಗಿ ಕೇಳಿಬಿಡುತ್ತಾರೆ. ಸ್ವಾಮೀ, ಆಗಂತುಕನನ್ನು ಮನೆಯ ವರಾಂಡದೊಳಗೆ ಕೂರಿಸುವುದಕ್ಕೂ, ಬೆಡ್ ರೂಮಿಗೆ ಕರೆದೊಯ್ಯುವುದಕ್ಕೂ ವ್ಯತ್ಯಾಸ ಗೊತ್ತಾ ನಿಮಗೆ, ಕಂಪ್ಯೂಟರ್ ಕೊಟ್ಟಿದ್ದಾರೆ ಅಂತ ಉಪ್ಪನ್ನೂ ತೆಗೆದುಕೊಳ್ಳಬೇಕಾ? ಅಂತ ಕೇಳೋಣವೆನಿಸುತ್ತದೆ. ಜಾಗತೀಕರಣದ ಬಗ್ಗೆ ಕಥೆ-ವ್ಯಥೆ ಬರೆದು ಬಹುಮಾನ ಗಿಟ್ಟಿಸಿಕೊಂಡವರು ಅದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಚಪ್ಪಾಳೆ ಸದ್ದಿನ ಅನಂತರವಾದರೂ ವಿಮರ್ಶಿಸಿಕೊಂಡಿದ್ದಾರಾ ಗೊತ್ತಿಲ್ಲ.

ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವೇ ಇಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ಇವತ್ತು ರಾಜೀವ ದೀಕ್ಷಿತರು ಎಲ್ಲಿ ಹೋದರು ಎಂಬ ಸುಳಿವೂ ಬಹುತೇಕರಿಗೆ ಇಲ್ಲ. ಅವರು ಭ್ರಮನಿರಸನಗೊಂಡು ಚಳುವಳಿ ಕೈಬಿಟ್ಟರು ಅಂತ ಕೆಲವರೆನ್ನುತ್ತಾರೆ, ಸರ್ಕಾರವೇ ಆತನನ್ನು ಹತ್ತಿಕ್ಕಿತು ಅನ್ನುತ್ತಾರೆ, ಅಮೆರಿಕಾದ MNCಗಳಿಂದ ದೂರು ಹೋಗಿ FBI ನಿಂದ ಬೆದರಿಕೆಗೊಳಗಾದರು ಅನ್ನುತ್ತಾರೆ, ಜೊತೆಗೆ ಇನ್ನೂ ಕೆಲವು ನೆಗೆಟಿವ್ ಆರೋಪಗಳೂ ಇದೆ. ಅದೇನೇ ಇರಲಿ. ಸ್ವದೇಶಿ ಚಳುವಳಿಯ ಬಗ್ಗೆ, ಆ ವಿಚಾರಗಳ ಬಗ್ಗೆ ’ಆಜಾದಿ’ ಎಂಬ ಪುಸ್ತಕವೊಂದು ಭಾವನಾ ಪ್ರಕಾಶನದಿಂದ ಪ್ರಕಟಗೊಂಡಿದೆ. ಆ ಪುಸ್ತಕದ ಮುನ್ನುಡಿಯಲ್ಲಿ ರವಿ ಬೆಳಗೆರೆ ಹೇಳಿರುವಂತೆ ಹೇಳುವುದಾದರೆ, "ಎಲ್ಲಾ ಚಳುವಳಿಗಳೂ ಯಶಸ್ವಿಯಾಗಲಿಕ್ಕಿಲ್ಲ, ಎಲ್ಲಾ ನೇತಾರರೂ ಮಹಾತ್ಮಾ ಗಾಂಧಿಗಳಾಗಲಿಕ್ಕಿಲ್ಲ. ಆದರೆ ಪ್ರತೀ ಚಳುವಳಿಯೂ ಭಾರತವನ್ನು ಪ್ರಗತಿಯತ್ತ ಒಂದು ಹೆಜ್ಜೆಯಿಡುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗಿನ ಸಾರ್ಥಕತೆ ಈ ಚಳುವಳಿಗೆ ಸಿಕ್ಕಿದೆ". ಆದ್ದರಿಂದ ನಾನು ಹೇಳುವುದಿಷ್ಟೆ, ಆ ಚಳುವಳಿ ಸಂಘಟನಾತ್ಮಕ ನೆಲೆಯಲ್ಲಿ ಸತ್ತಿರಬಹುದು, ಅದರ ರೂವಾರಿ ಈಗಿಲ್ಲದಿರಬಹುದು. ಆದರೆ ಲಕ್ಷಾಂತರ ಜನರಲ್ಲಿ ವೈಯಕ್ತಿಕ ನೆಲೆಯಲ್ಲಿ ಸ್ವದೇಶೀ ಚಳುವಳಿ ಇನ್ನೂ ಬದುಕಿದೆ. ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ.

22 ಕಾಮೆಂಟ್‌ಗಳು:

Ravindra ಹೇಳಿದರು...

correct helidde vikas. Nanu avana ella articles odtiddi.
But wga elli ava anno prashne bahala dinadinda kadta iddu enge.
Gottadre nanagu helu swlapa

sunaath ಹೇಳಿದರು...

ವಿಕಾಸ,
ನಮ್ಮೂರಿನಲ್ಲೂ ರಾಜೀವ ದೀಕ್ಷಿತರ ಭಾಷಣವಾಗಿತ್ತು.ಅದನ್ನು ಕೇಳಿದ ನಾನು ಇವತ್ತಿಗೂ ಸಹ ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನೇ ಬಳಸುತ್ತಿದ್ದೇನೆ.
ರಾಜೀವ ದೀಕ್ಷಿತರ ಚಳುವಳಿಗೆ ಪ್ರೇರಕವಾದ ಭೋಪಾಲ ದುರಂತಕ್ಕೆ
ಕಾರಣವಾದ ಕಂಪನಿಯು ಅಲ್ಲಿಯ ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನಂತೂ ಕೊಡಲಿಲ್ಲ. ಈಗ ಅಲ್ಲಿ ಮತ್ತೆ ಕಂಪನಿ ಪ್ರಾರಂಭವಾಗುತ್ತದೆ ಎಂದು ಕೇಳಿದ್ದೇನೆ.
ನಮ್ಮ ರಾಜಕಾರಣಿಗಳಿಗೆ ಸ್ವಾಭಿಮಾನ ಇರಬೇಕಾದಲ್ಲಿ ಸ್ವಾರ್ಥವಿದೆ. ಅಂದ ಮೇಲೆ ಮತ್ತೇನಾಗಲು ಸಾಧ್ಯ?

VENU VINOD ಹೇಳಿದರು...

ನಾನೂ ನಿಮ್ಮ ಹಾಗೇ ದೀಕ್ಷಿತರ ಭಾಷಣಕ್ಕೆ ಮಾರು ಹೋದ ಅನೇಕರಲ್ಲೊಬ್ಬ.ನಾನೂ ಇಂದಿಗೂ ಆದಷ್ಟು ಸ್ವದೇಶಿ ವಸ್ತು ಬಳಸುತ್ತೇನೆ...ಆದರೂ ಯಾವೆಲ್ಲ ದೇಶಿ, ಇನ್ನೆಷ್ಟು ವಿದೇಶಿ ಎಂದು ಈಗ ಪ್ರತ್ಯೇಕಿಸಲಾಗದಷ್ಟರ ಮಟ್ಟಿಗೆ ಪೈಪೋಟಿ ಇದೆ ಮಾರುಕಟ್ಟೆಯಲ್ಲಿ...ಆದರೂ ಬಹುರಾಷ್ಟ್ರೀಯ ಕಂಪನಿಗಳ ವಸ್ತುಗಳಿಗೆ ಪರ್ಯಾಯ ಎಂದೆನಿಸುವ ವಸ್ತುಗಳನ್ನು(ದೇಶಿ) ಬಳಸಬಹುದೇನೋ. ಚಿಂತನಾರ್ಹ ಬರಹ

ಸುಧೇಶ್ ಶೆಟ್ಟಿ ಹೇಳಿದರು...

ನನಗೊಮ್ಮೆ ವಿದೇಶಿ ಕ೦ಪೆನಿಗಳು ಮಾಡುವ ಮೋಸಗಳ ಕುರಿತು ಒ೦ದು ಮೇಲ್ ಬ೦ದಿತ್ತು... ಅದರಲ್ಲಿ ಸ್ವದೇಶಿ ವಸ್ತುಗಳನ್ನು ಬಳಸುವದರ ಬಗ್ಗೆ ಇತ್ತು... ಅದರಿ೦ದ ಪ್ರಭಾವಿತನಾಗಿ ಸಾಧ್ಯವಾದಾಗಲೆಲ್ಲಾ ಸ್ವದೇಶಿ ವಸ್ತುಗಳನ್ನೇ ಬಳಸುತ್ತಿದ್ದೇನೆ...

Unknown ಹೇಳಿದರು...

ವಿಕಾಸ್,

ಜಾಗತಿಕ ಮಾರುಕಟ್ಟೆಯ ಬಗ್ಗೆ ಈಗಿರುವಷ್ಟೂ ಸ್ಪಷ್ಟ ಚಿತ್ರಣ ಕಳೆದ ದಶಕದಲ್ಲಿರಲಿಲ್ಲ. ಆಜಾದೀ ಬಚಾವೋ ಆಂದೋಲನದಲ್ಲಿ "ಅಮೆರಿಕ"ವನ್ನು ಜಾಗತಿಕ ಮಾರುಕಟ್ಟೆಗೆ ಸಮೀಕರಿಸಲಾಗಿತ್ತು. ಇದು ಆ ವಾದದ ಹಿಂದಿರುವ ತಪ್ಪು ಅಥವಾ ಸೀಮಿತ ದೃಷ್ಟಿ. ಜಾಗತಿಕ ಮಾರುಕಟ್ಟೆ ಸ್ವದೇಶಿ-ವಿದೇಶಿ ಎಂದು ವಿಭಾಗಿಸುವಷ್ಟು ಸರಳವಾಗಿಲ್ಲ. ಅಂತರಾಷ್ಟ್ರೀಯ ಬ್ಯಾಂಕೊಂದು ಮುಳುಗಿದರೆ ಬೆಂಗಳೂರಿನ ಆಟೋ ಡ್ರೈವರ್‍ಗಳ ಸಂಪಾದನೆ ಕಡಿಮೆಯಾಗುತ್ತದೆ. ಇಂತಹ ಸಂಕೀರ್ಣತೆಯ ಕಲ್ಪನೆಯು ಆಗ ಬಹುಃಶಃ ಇರಲಿಕ್ಕಿಲ್ಲ. ಈ ಸಂಕೀರ್ಣತೆಯ ಮುಂದೆ ಸ್ವದೇಶಿ-ವಿದೇಶಿ ವಿಭಜನೆ ಗೌಣವಾಗುತ್ತದೆ. ಈಗ ಭಾರತೀಯರಿಗಿಂತ ಅಮೆರಿಕನ್ನರಿಗೆ "ಸ್ವದೇಶಿ" ಮಂತ್ರದ ಅವಶ್ಯಕತೆ ಹೆಚ್ಚಾಗಿದೆ.

ನೀವು ರಾಜೀವ ದೀಕ್ಷಿತರನ್ನು ಸಮರ್ಥಿಸಲು ಅವರ ವಾದವನ್ನೆ ಸರಿ ಎಂದು ಸಮರ್ಥಿಸಬೇಕಾಗಿಲ್ಲ. ಅವರ ವಾದ ತಪ್ಪಾಗಿರಬಹುದು. ಆದರೆ ಅದರ ಹಿಂದಿನ ಅವರ ಕಳಕಳಿ, ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ನಿಷ್ಠೆ, ಎಲ್ಲರೂ ಮೆಚ್ಚುವಂತಹುದು. ಯಾರಿಗಾದರು ಅದು ಶೋಕಿಯಾಗಿ ಕಂಡರೆ, ಅದು ಅವರ ಸಣ್ಣತನ.
ಒಬ್ಬ ಗಾಂಧೀಜಿಯಂತಹ ಯುಗಪುರುಷರು ದೇಶಕ್ಕೆ ಸಿಕ್ಕಿ ಕ್ರಾಂತಿಯಾಗಬೇಕಾದರೆ ರಾಜೀವ ದೀಕ್ಷಿತರಂತಹ ನೂರಾರು ಪ್ರಾಮಾಣಿಕ ಪ್ರಯತ್ನಗಳು ಅಗತ್ಯ.

ಸಂದೀಪ್ ಕಾಮತ್ ಹೇಳಿದರು...

ಪ್ರೀತಿಯ ವಿಕಾಸ್,

ನಾನು ಒಂದು ಸಮಯದಲ್ಲಿ ರಾಜೀವ್ ದೀಕ್ಷೀತ್ ರವರ ವಿಚಾರಧಾರೆಯಿಂದ ವಿಪರೀತ ತಲೆಕೆಟ್ಟು ಕೂತಿದ್ದೆ.ಎಷ್ಟರ ಮಟ್ಟಿಗೆ ಅಂದ್ರೆ ಕೈಗೆ ಸಿಕ್ಕಿದ MNC ಕೆಲಸ ತಗೊಳ್ಳೋದೋ ಬಿಡೋದೋ ಅನ್ನೊ ಅಷ್ಟು ಗೊಂದಲ.ಕಡೆಗೂ MNC ಯ ಕುರುಡು ಕಾಂಚಾಣ ಗೆದ್ದಿತು ಅನ್ನೋದು ಬೇರೆ ವಿಷಯ.

ಆದರೆ ನಿಜವಾದ ಪ್ರಶ್ನೆ ಉದ್ಭವಿಸೋದು ನಮ್ಮ ಸ್ವದೇಶಿ ಚಿಂತನೆಯಿಂದ ನಿಜಕ್ಕೂ ’ದೇಶ’ಕ್ಕೆ ಲಾಭ ಇದೆಯಾ ಅಥವ ಇಲ್ಲ ಅನ್ನೋದು!

ಈ ಬಗ್ಗೆ ನಾವು ದಿನಗಟ್ಟಲೆ ಅಥ್ವ ವರ್ಷಗಟ್ಟಲೆ ವಾದ ನಡೆಸಬಹುದು .ಅದರ ಬಗ್ಗೆ ತಕರಾರಿಲ್ಲ.ಎಲ್ಲಾ ವಾದ ಮುಗಿದ ಮೇಲೆ ನಿನ್ನ ಅಭಿಪ್ರಾಯ ನಿನಗೆ ನನ್ನ ಅಭಿಪ್ರಾಯ ನನಗೆ ಅಂತ ಹೆಳಿ ಬೈ ಟೂ ಚಾ ಕುಡಿದು ಮನೆಗೆ ಹೋಗಿ ಬೆಚ್ಚನೆ ಮಲಗಬಹುದು.

ಅದರೆ ನಾವು ಅಮೆರಿಕಾದ ಒಂದು ಕಂಪೆನಿಯ ಫೋನ್ ಬಿಟ್ಟು ರಿಲಯನ್ಸ್ ಫೋನ್ ಖರೀದಿಸಿದ್ವಿ ಅನ್ನೋಣ.ಖಂಡಿತ ಲಾಭದ ಹಣ ನಮ್ಮ ದೇಶದಲ್ಲೇ ಉಳೀತು ಅನ್ನೋದನ್ನೂ ಒಪ್ಪೋಣ.ಆದರೆ ನಿಜವಾದ ಲಾಭ ಯಾರಿಗೆ? ಆ ಕಿತ್ತಾಡ್ತಿರೋ ಅಂಬಾನಿ ಸಹೋದರರಿಗೆ ತಾನೇ? ಅ ’-’ ಮಗ ಮುಂಬೈ ನಲ್ಲಿ ಐಶಾರಾಮಿ ಬಂಗಲೆ ಕಟ್ಟಿಸಿಕೊಳ್ತಾನೆ ವಿನಃ ನಮಗೆ ನಿಮಗೆ ನಯಾ ಪೈಸೆ ಲಾಭ ಇದೆಯಾ?

ನಾವು ಎಳನೀರು ಕುಡಿಯೋದ್ರಿಂದ ಖಂಡಿತ ಪೆಪ್ಸಿ ಗೆ ಲಾಭ ಕಮ್ಮಿ ಆಗಿ ಪುಟ್ಟೇಗೌಡ್ರಿಗೆ ಲಾಭ ಜಾಸ್ತಿ ಆಯ್ತು ಅನ್ನೋಣ .ಆದ್ರೆ ಬಡವರಗೆ ಅದರಿಂದ ಲಾಭ ಆಯ್ತು ಅನ್ನೋದು ಅಷ್ಟರಲ್ಲೇ ಇದೆ.

ಹಾಗೆ ನೋಡಿದ್ರೆ ಪೆಪ್ಸಿ ಕೋಕಾಕೋಲಾಗಳೂ ಅಪಾರ ಉದ್ಯೋಗ ಸೃಷ್ಟಿ ಮಾಡಿವೆ.ಈ ವಸ್ತುಗಳನ್ನು ಮಾರೋ ಅಂಗಡಿಯಿಂದ ಹಿಡಿದು ವಿತರಕರು,ಟೆಂಪೋ ಚಾಲಕರು,ಜಾಹೀರಾತು ಕಂಪನಿಗಳು ಹೀಗೆ ಎಲ್ಲರಿಗೂ ಲಾಭವೇ ಲಾಭ.ನಮಗೆ ಮಾತ್ರ ಬರೀ ಅಮೆರಿಕಾದ ದಣಿಗಳೇ ಕಾಣಿಸೋದು.ಕೊನೆಗೆ ನೋಡಿದ್ರೆ ಪೆಪ್ಸಿ ಕಂಪನಿಯ CEO ಕೂಡಾ ಭಾರತೀಯಳೇ!!!!!
ರಫ್ತು ಆಮದು ಇವೆಲ್ಲಾ ಎಲ್ಲಾ ದೇಶಗಳಿಗೂ ಬೇಕಾದದ್ದೇ .ಎಲ್ಲಾ ದೇಶಗಳೂ ಬರೀ ಸ್ವದೇಶಿ ಅಂದುಕೊಂಡರೆ ರಫ್ತಿನ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾದೀತು.

ಇದೊಂದು ತುಂಬಾನೆ ತಲೆ ತಿನ್ನೋ ವಿಚಾರ ಯೋಚಿಸಿದಷ್ಟೋ ತಲೆ ಜಾಸ್ತಿ ಕೆಡೋ ಸಂಭವ ಹೆಚ್ಚು.

ಸ್ವದೇಶಿ ಅನ್ನೋ ವಿಚಾರವನ್ನೇ ಸ್ವಲ್ಪ fine tune ಮಾಡಿದ್ರೆ ರಾಜ್ಯ ರಾಜ್ಯಗಳ ಸಾಮರಸ್ಯ ಕೆಡುತ್ತೆ.ಯಾವನೋ ಕೇರಳದ ಒಬ್ಬ ಇಲ್ಲಿ ಬಂದು ಬೇಕರಿ ಮಾಡಿ ಕನ್ನಡಿಗನ ಹೊಟ್ಟೆಗೆ ಹೊಡೆದಾಗ ಅದೂ ಒಂಥರಾ ಸ್ವದೆಶಿ(ಸ್ವರಾಜ್ಯ??) ಚಿಂತನೆಗೆ ಈಡು ಮಾಡುತ್ತೆ.ನಾವ್ಯಾಕೆ ಲಾಭವನ್ನು ಒಬ್ಬ ಮಲಯಾಳೆಗೆ ಬಿಟ್ಟು ಕೊಡಬೇಕು ಕನ್ನಡಿಹನಿಗೇ ಕೊಡಬಹುದಲ್ಲ ಅನ್ನೋದು ನಮಗೆ ಹೊಳೆಯುತ್ತೆ.

ಆಮೆಲೆ ಸ್ವಲ್ಪ ದಿನ ಕಳೆದ್ರೆ ಬೆಂಗಳೂರಿನವನೊಬ್ಬಗೆ ,’ಎಲ್ಲಿಂದಲೋ ಕುಂದಾಪುರದಿಂದ ಬಂದವನೊಬ್ಬ ಬೆಂಗಳೂರಿಗೆ ಬಂದು ಹೋಟೇಲ್ ನಡೆಸ್ತಾ ಇದ್ದಾನೆ ,ಬಿಟ್ರೆ ನಾವು ಬೆಂಗಳೂರಿಗರೇ ಈ ಕೆಲ್ಸ ಮಾಡಲ್ವಾ ? ’ ಅನ್ನೋ ಪ್ರಶ್ನೆ ಮೂಡುತ್ತೆ ಅಲ್ವಾ?

ಇಲ್ಲಿ ಇದು ಸರಿ ಇದು ತಪ್ಪು ಅನ್ನುತ್ತಾ ಇಲ್ಲ ನಾನು ..

Its just confusing!!!

Vidyadhar Salimath ಹೇಳಿದರು...

Vidyadhar Salimath.
Rajiv Dixit has not gone any where. I often find him in Asthaa T V Channel with Swamy Ramdev. He explains many things related to Swdeshi including our National Anthem. He also explains why Ravindra Nath Tagore was given Noble for Gitanjali. He talks about cows Consevarion & Cow conservation helps in saving Indian economy & helps to protect environment. He explains thousand of amazing things. All youths should read his Literature. I too use only Indian products. brands such as Miswak,Tata, Dabur, Himalaya, Onida,Maruti, Hero cycle, .

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸ್‌,
ಒಳ್ಳೆ ಬರಹ ಅನ್ನೋದರಲ್ಲಿ ಎರಡು ಮಾತಿಲ್ಲ. ವಿಷಯಗಳನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀಯ. ನನಗೆ ತುಂಬಾ ಇಷ್ಟವಾಯಿತು. ಇದರಲ್ಲಿ ಕೆಲ ಅಂಶಗಳಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ. ಕಾಮತ್‌ ಮಾತನ್ನು ನಾನು ಮುಂದುವರಿಸುತ್ತಾ ಇದ್ದೇನೆ.
ಪೆಪ್ಸಿ ಕಂಪನಿಗಿಂತ ರಿಲಯನ್ಸ್‌ ದೇಶಕ್ಕೆ ಮಾರಕ. ಟಾಟಾದಂತ ಕಂಪನಿಯನ್ನು ನಾವು ಪ್ರೋತ್ಸಾಹಿಸಬೇಕು. ಟಾಟಾ ಸಮೂಹ ದೇಶಕ್ಕೆ ಸಾಕಷ್ಟು ನೀಡಿದೆ. ದೇಶದ ಪರ ಕಳಕಳಿಯಿದೆ. ಜಿಂದಾಲ್‌ ಸಮೂಹ ಭಾರತದ್ದು ಅಂತಾ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ, ರಿಲಯನ್ಸ್‌, ಸತ್ಯಂ ವಿಚಾರಕ್ಕೆ ಬಂದಾಗ, ಇವುಗಳಿಗಿಂತ ಕೋಕೊ-ಕೋಲಾ ಸಂಸ್ಥೆಯೇ ಉತ್ತಮ. ರಿಲಯನ್ಸ್‌ ಕಂಪನಿ ಚರಿತ್ರೆ ಇತ್ತೀಚೆಗೆ ಹೊರಬರುತ್ತಿದೆ. ಅನಿಲ್‌ ಅಂಬಾನಿಗೆ ಸರಕಾರದ ಶನಿ ಬೆನ್ನತ್ತಿದೆ! ಸ್ವದೇಶಿ ಜಾಗರಣ ಮಂಚ್‌ನ ಗೂರುಮೂರ್ತಿಯವರ ಪತ್ರವನ್ನು ಅಧ್ಯನಿಸಿದ ಮಾರುಕಟ್ಟೆ ನಿಯಂತ್ರಕ ಸೆಬಿ. ಮೊನ್ನೆ ತಾನೇ ಅದರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಪತ್ರ ಬರೆದಿದೆ. ಇಲ್ಲಿ ರಿಲಯನ್ಸ್‌, ನಕಲಿ ಕಂಪನಿ ಸೃಷ್ಟಿಸಿ ದೇಶೀಯ ಹೂಡಿಕೆದಾರರಿಗೆ ಟೋಪಿ ಹಾಕಲು ಯತ್ನಿಸಿದೆ ಎಂಬುದು ಗಣನೀಯ. ಬಹುಶಃ ಅಣ್ಣ, ತಮ್ಮ ಕಿತ್ತಾಡಿಕೊಳ್ಳದೇ ಹೋಗಿದ್ದರೆ ಈ ವಿಷಯ ಬೆಳಕಿಗೆ ಬರುತ್ತಿರಲಿಲ್ಲ. ಎನ್‌ಟಿಪಿಸಿ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದ ಗೊತ್ತಿರಬಹುದು ಅಂದುಕೊಳ್ಳುತ್ತೇನೆ. ಕೆಜಿ-೬ ಘಟಕದ ತೈಲವನ್ನು ಅಮೆರಿಕಕ್ಕೆ ಪೂರೈಸಿದರೆ ರಿಲಯನ್ಸ್‌ಗೆ ಜಾಸ್ತಿ ಹಣ ಸಿಗತ್ತಂತೆ. ಅಷ್ಟು ಹಣ ದೇಶೀಯ ಕಂಪನಿಗಳು ನೀಡಿದರೆ ಮಾತ್ರ ನಾವು ಇಲ್ಲಿಗೆ ಅನಿಲ ಕೊಡುತ್ತೇವೆ ಎಂಬುದು ಕಂಪನಿ ವಾದ! ಅಂದಹಾಗೆ ಇದು ಪಕ್ಕಾ ಸ್ವದೇಶಿ ಕಂಪನಿ. ಮಾತಾಡಿದರೆ ಸಾಕಷ್ಟಿದೆ ಬಿಡು. ಸತ್ಯಮ್‌ ಕಥೆ ಮತ್ತೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಎಂದು ಭಾವಿಸಿರುವೆ. ದೇಶಕ್ಕಾಗಿ ಅನೇಕ ಕೊಡುಗೆ ನೀಡಿದ ಟಾಟಾಗೆ, ಸಿಂಗೂರಲ್ಲಿ ಉತ್ಪಾದನೆಗೆ ಸಜ್ಜಾದ ಘಟಕ ಆರಂಭಿಸಲು ನಾವು ಬಿಡಲಿಲ್ಲ. ಅದೇ ರಿಲಯನ್ಸ್‌ಗೆ ದಾದ್ರಿ ವಿದ್ಯುತ್‌ ಯೋಜನೆಗೆ?! ವಿದೇಶಿ ಕಂಪನಿಗೆ ಇರುವ ಸಾಮಾಜಿಕ ಕಾಳಜಿ ನಮ್ಮ ದೇಶೀಯ ಕಂಪನಿಗಳಿಗಿಲ್ಲ. ನಾನು ಇದನ್ನು ಆಧಾರ ಸಮೇತವಾಗಿಯೇ ವಾದಿಸಬಲ್ಲೆ....ಮಾತಾಡಲು ಸಾಕಷ್ಟಿದೆ. ಆದರೆ ಮಾತಾಡಿ ಏನೂ ಪ್ರಯೋಜನವಿಲ್ಲ ಎಂಬುದು ಅರಿವಾಗಿದೆ. ನೀವು ಚರ್ಚೆ ಮುಂದುವರಿಸಿಕೊಳ್ಳಿ ಜೈ ಹೋ....
ಪ್ರೀತಿಯಿಂದ
ವಿನಾಯಕ ಕೋಡ್ಸರ

Unknown ಹೇಳಿದರು...

uttama lekhana.rajeev dixit ramdev joteyalli andolana nadestiddare.aasta channelnalli daily 20minutes barutte.any how he is doing good job.

ವನಿತಾ / Vanitha ಹೇಳಿದರು...

ವಿಕಾಸ್,
ನಾವು ಕೂಡ highschoolನಲ್ಲಿದ್ದಾಗ ಈ ಸ್ವದೇಶೀ ವಸ್ತು ಗಳ ಬಳಕೆ ಯಲ್ಲಿದ್ದೆವು,ಈಗ ಇಲ್ಲಿದ್ದೇನೆ.so no more to say, well written :)

ಅನಾಮಧೇಯ ಹೇಳಿದರು...

"ಜಾಗತೀಕರಣದ ಬಗ್ಗೆ ಕಥೆ-ವ್ಯಥೆ ಬರೆದು ಬಹುಮಾನ ಗಿಟ್ಟಿಸಿಕೊಂಡವರು ಅದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಚಪ್ಪಾಳೆ ಸದ್ದಿನ ಅನಂತರವಾದರೂ ವಿಮರ್ಶಿಸಿಕೊಂಡಿದ್ದಾರಾ ಗೊತ್ತಿಲ್ಲ." - Is it a self reference?, or a complaint?. It may not be a great idea to throw stone at a feathery hut, while sitting inside a glass house!.

ವಿ.ರಾ.ಹೆ. ಹೇಳಿದರು...

ರವೀಂದ್ರ, ಅವರು ಚಳುವಳಿ ನಿಲ್ಲಿಸಿದ್ದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಅವರು ಆಸ್ಥಾ ಟೀವಿ ಚಾನಲ್ ನಲ್ಲಿ ಬರುತ್ತಾರೆ ಅಂತ ತಿಳಿದುಬಂತು.

ಸುನಾಥ, ಹೌದು ಕಾಕಾ, ಭೂಪಾಲದ ಅನಿಲದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿ ಮತ್ತೆ ಶುರುವಾಗಲು ಕೆಲವು ವರ್ಷಗಳ ನಂತರ ಸರ್ಕಾರ ಮತ್ತೆ ಅನುಮತಿ ಕೊಟ್ಟಿತು. ಆಗ ದೀಕ್ಷಿತರು ’ಎವರಿಡೇ ಬ್ಯಾಟರಿ ಸೆಲ್’ಗಳನ್ನು ಬಹಿಷ್ಕರಿಸುವಂತೆ ಜನರನ್ನು ಎಚ್ಚರಿಸುತ್ತಾ ಓಡಾಡಿದರು. ಆಗ ಆ ಕಂಪನಿ ವ್ಯಾಪಾರ ಪೂರ್ತಿ ಕುಸಿದುಬಿತ್ತಂತೆ. ಇದರಿಂದ ಪ್ರೇರಿತರಾಗಿ ಅವರು ಆಜಾದಿ ಬಚಾವೋ ಶುರುಮಾಡಿದ್ದು ಎಂದು ಅವರು ತಮ್ಮ ಭಾಷಣದಲ್ಲಿ ನೆನಪಿಸಿಕೊಳ್ಳುತ್ತಾರೆ.

ವೇಣು,
ಹೌದು ಇವತ್ತು ಬಹಳಷ್ಟು ಸ್ವದೇಶಿ-ವಿದೇಶಿ ಕಂಪನಿಗಳು ಕೂಡಿಹೋಗಿವೆ.ಕೆಲವು ಕಂಪನಿಗಳನ್ನು ಹೊರತುಪಡಿಸಿ ಉಳಿದವನ್ನು ಪ್ರತ್ಯೀಕಿಸುವುದೇ ಕಷ್ಟವಾಗಿದೆ. ಇದೂ ಕೂಡ ಜಾಗತೀಕರಣದ ಪರಿಣಾಮ. ಆದರೂ ನೀವು ಹೇಳಿದಂತೆ ಪರ್ಯಾಯವಾಗಿ ಸ್ವದೇಶಿ ಬಳಸುವುದರಲ್ಲಿ ತೊಂದರೆ ಏನಿಲ್ಲ.

ಸುಧೇಶ್ ಶೆಟ್ಟಿ, ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಈ ಬಗ್ಗೆ ಇನ್ನೂ ಮಾಹಿತಿ ತಿಳಿದುಕೊಂಡು ಮುಂದುವರೆಯಿರಿ.

ಕಲ್ಯಾಣ್, ಆ ಆಂದೋಲನದಲ್ಲಿ ಅಮೆರಿಕವನ್ನು ಜಾಗತಿಕ ಮಾರುಕಟ್ಟೆಗೆ ಸಮೀಕರಿಸಲಾಗಿರಲಿಲ್ಲ. ಬದಲಾಗಿ ಅಮೆರಿಕವನ್ನು ಜಾಗತಿಕ ಮಾರುಕಟ್ಟೆಯ ’ಹಿರಿಯ’ ಎಂಬಂತೆ ಸಮೀಕರಿಸಲಾಗಿತ್ತು. ಏಕೆಂದರೆ ಅತಿ ಹೆಚ್ಚು MNCಗಳು ಅಮೆರಿಕದ್ದೇ ಇರುವುದು. ಇವತ್ತು MNCಗಳ ಮೇಲೆ ನಮ್ಮ ಅವಲಂಬನೆ ಯಾವ ಮಟ್ಟಿಗೆ ಆಗಿಹೋಗಿದೆ ಎಂದರೆ ನೀವು ಹೇಳಿದಂತೆ ಬ್ಯಾಂಕು ಮುಳುಗಿದರೆ ಆಟೋದವರಿಗೂ ಹೊಡೆತವಾಗುತ್ತದೆ. ಅಮೆರಿಕಾದಲ್ಲಿ ರಿಸೆಷನ್ ಆದರೆ ಇಲ್ಲಿ ನಮ್ಮ ಕೆಲಸ ಹೋಗುತ್ತದೆ, ನಾವು ಕಂಗಾಲಾಗುತ್ತೇವೆ. ದೇಶದ ಸ್ವಾವಲಂಬನೆ, ಸ್ವಾಭಿಮಾನ ಹಾಸ್ಯಾಸ್ಪದವಾಗಿದೆ.
ರಾಜೀವ್ ದೀಕ್ಷಿತರ ವಿಚಾರಗಳಲ್ಲಿ ಕೆಲವು ತಪ್ಪಿರಬಹುದು, ಕೆಲವು outdated ಆಗಿರಬಹುದು. ಆದರೆ ಅವರ ಜನಜಾಗೃತಿಯ ವಿಚಾರಗಳು ಮತ್ತು ಅವರ ದೇಶದ ಬಗೆಗಿನ ಕಳಕಳಿ ಪ್ರಶ್ನಾತೀತ ಅಂತ ನನಗನಿಸುತ್ತದೆ.

ವಿ.ರಾ.ಹೆ. ಹೇಳಿದರು...

Murthy, Vidyadhar, Vanitha,
Thank you so much for the information. and plz continue using Indian products.


ಕಾಮತ್, ಕೋಡ್ಸರ,

ನಿಮ್ಮ ವಾದ ಮೇಲ್ನೋಟಕ್ಕೆ ಹೌದು ಅನ್ನಿಸಿದರೂ ಕೂಡ ಇದರ ಆಳ ಬಹಳ ಇದೆ. ರಿಲಾಯನ್ಸ್ ಉದಾಹರಣೆ ಇಟ್ಟುಕೊಂಡು ಸ್ವದೇಶಿ ಎಂಬ ವಿಚಾರವನ್ನೇ ಪಕ್ಕಕ್ಕೆ ತಳ್ಳಲೂ ಆಗುವುದಿಲ್ಲ. ನಾವು ಪೆಪ್ಸಿಗೆ ಕೋಕಾಕೋಲಾಗೆ ಕೊಟ್ಟ ಹಣದ ಒಂದು ಭಾಗ ಇಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡಲ್ಪಡುತ್ತದೆ. ಆದರೆ ಅದರ ೧೦ ಪಟ್ಟು ಹಣ ಬೇರೆ ದೇಶಕ್ಕೆ ಹೋಗುತ್ತದೆ. ಅಷ್ಟು ಲಾಭವಿಲ್ಲದೆ ಅವರು ಉದ್ಯೋಗ ಕೊಡಲೂ ಸಾಧ್ಯವಿಲ್ಲ ಅಲ್ಲವೇ? ಇಲ್ಲಿ ಬ್ರಿಟಾನಿಯಾ ಕಂಪನಿ ಉದ್ಯೋಗ ಕೊಡ್ತು ಅಂತ ಅದಕ್ಕೆ ಉಘ್ಹೇ ಉಘ್ಹೇ ಅನ್ನುವ ಬದಲು ನಮ್ಮ ಪಾರ್ಲೆ ಕಂಪನಿಗೂ ಅಷ್ಟೆ ಮಾರ್ಕೆಟ್ ನಾವು ಮಾಡಿಕೊಟ್ಟಿದ್ದರೆ ಅದೂ ಕೂಡ ತನ್ನ ಬಿಸಿನೆಸ್ ವಿಸ್ತಾರ ಮಾಡಿ ಅದೂ ಜನರಿಗೆ ಉದ್ಯೋಗ ಕೊಟ್ಟೇ ಕೊಡುತ್ತಿತ್ತು ಅಲ್ಲವೇ? ಎಳ್ನೀರು ಕುಡಿದರೆ ಬರೀ ಪುಟ್ಟೇಗೌಡನಿಗೆ ಲಾಭವಾಗುವ ವಿಷ್ಯ ಅಲ್ಲ. ಬರೀ ಒಂದು ಸೈಕಲ್ ನಲ್ಲಿರೋ ಎಳ್ನೀರ್ ಬಗ್ಗೆ ಯೋಚನೆ ಮಾಡಬೇಡಿ. ಉದ್ಯೋಗ ಕೊಡುವುದು ಅಂದರೆ ಬರೀ ಟೆಂಪೋ, ಬಾಟ್ಲಿ ಅಷ್ಟೇ ಅಲ್ಲ. ಮುಖ್ಯವಾಗಿ ಕೃಷಿ ಬೆಳೆಯಬೇಕು. ಎಳ್ನೀರು ಕೃಷಿ ಏನು ಕಡಿಮೆ ಜನರಿಗೆ ಉದ್ಯೋಗ ಕೊಡುತ್ತದೆಯೇ? ಹಣ್ಣಿನ ರಸ ಪ್ರೊಸೆಸೆಂಗ್ ಇಂಡಸ್ಟ್ರಿ ಕಡಿಮೆ ಜನರಿಗೆ ಉದ್ಯೋಗ ಕೊಡುತ್ತಾ? ಅದಕ್ಕೂ ಟೆಂಪೋ ಬೇಕೇ ಬೇಕು, ಬಾಟ್ಲಿಂಗ್ ಬೇಕು. ಆದರೆ ಪೆಪ್ಸಿ ನಮ್ಮದೇ ಅಂತರ್ಜಲವನ್ನು ಹೀರಿ ಅದಕ್ಕೆ ಗ್ಯಾಸ್ ತುಂಬಿಸಿ ೨ ರೂಪಾಯಿಗೆ ಆಗುವುದನ್ನು ೧೦ ರುಪಾಯಿಗೆ ಮಾರಿ ಉಳಿದ ೮ ರೂಪಾಯಿ ಲಾಭದಲ್ಲಿ ೩ ರೂ ಇಲ್ಲಿ ಸಂಬಳ ಕೊಟ್ಟು ೫ ರೂ ಅಮೆರಿಕಾಗೆ ಹೋಗುತ್ತದೆ . ಇದು ವರ್ಷಕ್ಕೆ ಸಾವಿರ ಸಾವಿರ ಕೋಟಿಗಳಷ್ಟು. ನೆನಪಿರಲಿ.

ನಿಜ , ಈ ವಿಷಯ ಬಹಳ ಗೊಂದಲ. ನಮ್ಮ ಟಾಟಾ ಕಾರು ಈಜಿಪ್ಟಿನಲ್ಲಿ ಓಡಾಡಿದರೆ ನಾವು ಖುಷಿಯಾಗುತ್ತೇವೆ. ಆದರೆ ಇಲ್ಲಿ ನಿಸ್ಸಾನ್ ಕಾರನ್ನು ವಿದೇಶಿ ಅನ್ನುತ್ತೇವೆ. ಯೂರೋಪ್ ನವರು ಟಾಟಾ ಕಾರನ್ನು ಅವರ standardಗೆ ತಕ್ಕುನಾಗಿಲ್ಲ ಅಂತ ಒಳಗೆ ಬಿಟ್ಟುಕೊಂಡಿಲ್ಲ ಗೊತ್ತಾ? ಇಲ್ಲಿ ಸ್ವದೇಶಿಯ ಅಸಲು ವಿಷಯ ಏನೆಂದರೆ ನಮ್ಮ ಕೈಯಲ್ಲಿ ತಯಾರಿಸಲು ಆಗದೇ ಇರುವುದನ್ನು ಬೇರೆಯವರು ತಯಾರು ಮಾಡಿ ಮಾರಾಟ ಮಾಡಿದರೆ ಓ.ಕೆ. ಆದರೆ ಜಾಗತೀಕರಣದ ನೆಪದಲ್ಲಿ ಉಪ್ಪು, ಚಿಪ್ಸು, ಬಿಸ್ಕೇಟ್ಟು, ಚಾಕ್ಲೇಟ್ಟು, ಪೇಸ್ಟನಂತಹ ವಸ್ತುಗಳನ್ನೂ ಕೂಡ ಬೇರೆಯವರು ಬಂದು ನಮಗೆ ಮಾರುವುದು ಬೇಡ, ಮತ್ತು ಆ ಮೂಲಕ ನಮ್ಮ ಆರ್ಥಿಕತೆಯನ್ನೇ ಹಿಡಿತದಲ್ಲಿ ಇಟ್ಟುಕೊಳ್ಳವುದು ಬೇಡ ಅಂತ ಅಷ್ಟೆ.

ಸ್ವದೇಶಿ ಅನ್ನುವುದನ್ನು finetune ಮಾಡಲಿಕ್ಕೆ ಆಗುವುದಿಲ್ಲ. ದೇಶದೇಶಗಳು , ಅವುಗಳ ಸಂಪತ್ತು ಅನ್ನುವುದು ಕುಂದಾಪುರ, ಬೆಂಗಳೂರಂತಹ ಉದಾಹರಣೆಗಳಿಗೆ ಅನ್ವಯಿಸುವುದಕ್ಕಾಗುವುದಿಲ್ಲ. ಇದು ಬಹಳ ಸಮಗ್ರವಾದುದು. ರಫ್ತು ಆಮದು ಅನ್ನುವಂತದ್ದು ಸ್ವದೇಶಿ ವಿಷಯದಲ್ಲಿ ಬರುವುದಿಲ್ಲ. ಏಕೆಂದರೆ ರಫ್ತು ಮಾಡುವುದು ಅವರವರ ದೇಶದಲ್ಲಿ ಅವರ ಸಂಪನ್ಮೂಲಗಳನ್ನು ಬಳಸಿ ತಯಾರು ಮಾಡಿದ್ದನ್ನ ಬೇರೆ ಅಗತ್ಯವಿರುವ ದೇಶಗಳಿಗೆ ಮಾರಾಟ ಮಾಡುವುದು. ಅದರಲ್ಲಿ ಏನೂ ತೊಂದರೆ ಇಲ್ಲ.

ಇರಲಿ ಇದು ಎಷ್ಟು ಹೇಳಿದರೂ ಮುಗಿಯದ ವಿಷಯ.ಏನೇ ಹೇಳಿದರೂ ಕೂಡ ಭಾರತದಂತಹ ವಿಪರೀತ ಜನಸಂಖ್ಯೆಯ ದೇಶದಲ್ಲಿ ಈ ದಿನಗಳಲ್ಲಿ ಉದ್ಯೋಗ ಮುಂತಾದ ದೃಷ್ಟಿಯಿಂದ ಯೋಚಿಸಿದರೆ ಬರೀ ಸ್ವದೇಶಿ ಎಂಬುದನ್ನು ನಂಬಿಕೊಂಡು ಕುಳಿತುಕೊಳ್ಳುವುದಕ್ಕಾಗುವುದಿಲ್ಲ ಎಂಬುದಂತೂ ಸತ್ಯ. ಆದರೂ ಕೂಡ ಇದು ನಮ್ಮ ಬುಡಕ್ಕೆ ಬರದಂತೆ ದೇಶದ ಬಗ್ಗೆ ಒಂದು ಚಿಕ್ಕ ಸ್ವಾಭಿಮಾನವಿಟ್ಟುಕೊಂಡು ಬದುಕುವುದರಲ್ಲಿ ತಪ್ಪೇನಿಲ್ಲ ಅಲ್ಲವಾ?


ಅನಾಮಧೇಯ,
It is a self reference as well as complaint too. I am not throwing stones , I am just pointing at the reality. thank you.

ಶ್ರೀನಿಧಿ.ಡಿ.ಎಸ್ ಹೇಳಿದರು...

ವಿಕಾಸ, ಬರಹ ಚೆನ್ನಾಗಿದೆ.

ಟಾಟಾ ಕಾರು ಮತ್ತು ಯುರೋಪಿನ ಬಗ್ಗೆ ಈ ಲಿಂಕ್ ಗಮನಿಸು:

http://www.google.com/search?q=tata+cars+europe+market&ie=utf-8&oe=utf-8&aq=t&rls=org.mozilla:en-US:official&client=firefox-a

ಚುಕ್ಕಿಚಿತ್ತಾರ ಹೇಳಿದರು...

ವಿಕಾಸ..
ಒಳ್ಳೆಯ ಚರ್ಚೆ...
ನಾವು ಕಾಲೇಜಿಗೆ ಹೋಗುತ್ತಿರುವಾಗ, ಸ೦ಜೆ ಬಸ್ ಕಾಯುವ ಪ್ರಸ೦ಗ ಬ೦ದಾಗ ಬಸ್ ಕಾಯುತ್ತಾ ಒ೦ದು ಅ೦ಗಡಿಯಲ್ಲಿ ಕೂರುತ್ತಿದ್ದೆವು. ಆ ಅ೦ಗಡಿಯಾತ ಸೊಕಾಲ್ಡ್ ದೇಶಭಕ್ತ.ಆತನ ಅ೦ಗಡಿಯಲ್ಲಿ ಅಕ್ಕಿ, ಬೇಳೆ ಬಿಟ್ಟು ಇನ್ನಿತರ ಎಲ್ಲಾ ಸಾಮಾನುಗಳೂ ದೊರೆಯುತ್ತಿತ್ತು.ಆತ ಕೊಲ್ಗೆಟ್ ಪೇಶ್ಟ್ ತರದ ವಿದೇಶೀ ವಸ್ತು ಕೇಳಿದವರಿಗೆ, ಅದೂ ಪರಿಚಯದವರಿಗೆ ಸ್ವದೇಶೀ ಉಪಯೋಗಿಸಿರಿ..ಎನ್ನುತ್ತಿದ್ದ.ಆದರೆ ವಿದೇಶೀ ವಸ್ತುಗಳನ್ನು ಆತ ಮಾರುತ್ತಿದ್ದ. ನಾನು ಅನೇಕ ಸಲ ಕೇಳಿದ್ದಿದೆ. ವಿದೇಶೀ ಬೇಡಾ ಅ೦ದರೆ ಕೊಳ್ಳುವುದಾಗಲೀ, ಮಾರುವುದಾಗಲೀ..ಯಾವುದೂ ಮಾಡಬಾರದಲ್ಲವೇ..
ವಿದೇಶೀ ವಸ್ತುವನ್ನು ಮಾರಿಬ೦ದ ಲಾಭ ಬೇಕು ಆತನಿಗೆ.ಈ ತರದ ಆಶಾಡಭೂತಿತನದವರನ್ನು ನೋಡಿದರೆ ವಾಕರಿಕೆ ಬರುತ್ತದೆ..ಅನೇಕ ಜನರಿದ್ದಾರೆ.ಹೇಳುವುದೊ೦ದು.. ಮಾಡುವುದೊ೦ದು...ಹೇಳಿದ್ದನ್ನು ಮಾಡಬೇಕು..
ಆಗದಿದ್ದರೆ ಸುಮ್ಮನಿರಬೇಕು ...ಅಲ್ಲವೇ..?

ವಿ.ರಾ.ಹೆ. ಹೇಳಿದರು...

Nidhi, thank you for ur info. I m sorry. ನಾನು ಟಾಟಾನ್ಯಾನೋ ಕಾರಿನ ಬಗ್ಗೆ ಹೇಳಲು ಹೋಗಿದ್ದೆ.

ಚುಕ್ಕಿ, thank u. ಆತನನ್ನು ಒಂದು ರೀತಿ ಮೆಚ್ಚಲೇ ಬೇಕು ಬಿಡಿ. ಅವನ ಮಿತಿಯಲ್ಲೇ ಸ್ವದೇಶಿ ಬಳಸಲು ಜನರನ್ನು ಪ್ರೇರೇಪಿಸುತ್ತಿದ್ದ ಆತ. ಕೊಳ್ಳುವುದು ನಿಂತರೆ ಸಹಜವಾಗಿ ಮಾರುವುದೂ ನಿಲ್ಲುತ್ತದೆ ಅಲ್ಲವಾ?.

ಅನಿಕೇತನ ಸುನಿಲ್ ಹೇಳಿದರು...

Excellent Vikas............ಬಾಲಿಶ ವಿತಂಡ ವಾದ ಮಾಡುವವರ ಬಳಿ ಮಾತಾದಿ ಸಾಕಾಗಿ ಹೋಗಿದೆ..ಅವ್ರಿಗೆ ಹೇಳೋದಕ್ಕಿಂತ ನಮ್ಮ ಮಟ್ಟಿನಲ್ಲಿ ನಾವು ನಮ್ಮ ತನ ಉಳಿಸ್‌ಕೊಳ್ಳೋದು ಒಳ್ಳೇದು.
ನಾವು ಮಾಡೋದೆಲ್ಲ ಸರಿ ಅನ್ನೋ ಅತಿ ಆತ್ಮ ವಿಶ್ವಾಸದಿಂದ ಬೀಗುತಿರೋ ಕೆಲವರಿಗೆ ಏನಾದ್ರೂ ಹೇಳಿದ್ರೆ..ಘೋರ್ಕಲ್ಳಮೇಲೆ ಮಳೆ ಸುರಿದಂತೆ ಸರ್ವಜ್ಞ. ಅಷ್ಟೇ.
ನಮ್ಮ ದೇಶ..ನಮ್ಮ ತಾಯಿ ಅನ್ನೋ ಭಾವನೇನೆ ಇಲ್ಲದವ್ರಿಗೆ ಎನ್ ಹೇಳೋಕಾಗುತ್ತೆ?

ಅನಾಮಧೇಯ ಹೇಳಿದರು...

i like it..

Chaithrika ಹೇಳಿದರು...

ಸಂದೀಪ ಕಾಮತ್ ಹೇಳಿದ್ದು ಒಂದು ರೀತಿಯಲ್ಲಿ ಸರಿ ಅನ್ನಿಸುತ್ತದೆ.
ನಾನು ಸ್ವದೇಶಿ-ವಿದೇಶಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವಳಲ್ಲ. ಚೆನ್ನಾಗಿರುವ/ಇಷ್ಟವಾಗುವ ವಸ್ತು ಕೊಳ್ಳುತ್ತೇನೆ ಅಷ್ಟೆ.
For example: Colgate strong teeth ಇಷ್ಟವಾಗುವ ಕಾರಣ ಅದನ್ನು ಬಳಸುತ್ತೇನೆ. ಅದು ವಿದೇಶಿ ಎಂದಲ್ಲ. ಅದೇ ನನಗೆ Colgate ನ ಬೇರೆ ಪೇಸ್ಟ್ ಗಳು ಹಿಡಿಸುವುದಿಲ್ಲ.
ಎಳನೀರು ಇಷ್ಟ. ಬೇಕೆನಿಸಿದಾಗ 12 ರೂಪಾಯಿ ಕೊಟ್ಟು ಕುಡಿಯುತ್ತೇನೆ. (5 ರೂ. ಗೆ ಎಳನೀರು ಎಲ್ಲೂ ಸಿಗುವುದಿಲ್ಲ.)
Pepsi ಬೇಕೆನಿಸಿದಾಗ ಕುಡಿಯುತ್ತೇನೆ. ಆದರೆ Pizza ಕಂಡರಾಗದು ನನಗೆ.

ಹೀಗೆ, ಇಷ್ಟವಾದದ್ದನ್ನು ಎಲ್ಲರೂ ಕೊಳ್ಳುತ್ತಾರೆ. ಸ್ವದೇಶಿ ಎಂದ ಮಾತ್ರಕ್ಕೆ ರುಚಿಯಿಲ್ಲದ ವಸ್ತುಗಳನ್ನು ಕೊಳ್ಳುವುದು ಬೇಕಿಲ್ಲ ಎಂದು ನನ್ನ ಭಾವನೆ.
Quality ಒಳ್ಳೆಯದಿದ್ದರೆ ಜನರು ಸ್ವದೇಶಿ-ವಿದೇಶಿ ಲೆಕ್ಕಿಸದೆ ಕೊಳ್ಳುತ್ತಾರೆಂದು ನನ್ನ ಅನಿಸಿಕೆ.

ಏನೇ ಇರಲಿ, ನಿಮ್ಮ ಬರಹ ಯಾವತ್ತೂ ನಮ್ಮನು ಯೋಚನೆಗೆ ಹಚ್ಚುತ್ತದೆ ಅನ್ನುವುದಂತೂ ನಿಜ.

ವಿ.ರಾ.ಹೆ. ಹೇಳಿದರು...

ಸುನಿಲ್, ಹೌದು ಎಲ್ಲಾ ವಿಷಯಗಳಿಗೂ ಒಂದು counterವಾದವೆನ್ನುವುದು ಇದ್ದೇ ಇರುತ್ತದೆ. ಇವೆಲ್ಲಾ ವಿಷಯಗಳು ನಾವು ನಾವೇ ತಿಳಿದುಕೊಳ್ಳದ ಹೊರತು ಬೇರೆ ಏನೂ ಮಾಡಲು ಸಾಧ್ಯವಿಲ್ಲವೆನಿಸಿಬಿಟ್ಟಿವೆ.

ಚೈತ್ರಿಕಾ, ಥ್ಯಾಂಕ್ಯೂ, ಸ್ವದೇಶಿ ಅನ್ನುವುದು ಬರೀ ಇಷ್ಟ ಕಷ್ಟದ ವಿಷಯಕ್ಕಿಂತ ಇನ್ನೂ ಸಮಗ್ರವಾದದ್ದು. ಸ್ವದೇಶಿ ಅಂದರೆ ರುಚಿಯಿಲ್ಲದ್ದ್ದು, ಸರಿಯಿಲ್ಲದ್ದು ಅಂತ ಯಾಕೆ ಅಂದುಕೊಳ್ಳಬೇಕು? ಅದಿರಲಿ.. ಎಳ್ನೀರಿನ ವಿಷಯಕ್ಕೆ ಬಂದರೆ ಅದು ನಾನು ಪಿ.ಯು.ಸಿ.ನಲ್ಲಿದ್ದಾಗಿನ ಬೆಲೆ ೫ ರೂ. ಈಗಲೂ ಕೂಡ ಬೆಂಗಳೂರು ಬಿಟ್ಟರೆ ಬೇರೆ ಊರುಗಳಲ್ಲಿ ೧೨ ರೂ. ತೆಗೆದುಕೊಳ್ಳುವುದಿಲ್ಲ ಎಳ್ನೀರಿಗೆ.

Chaithrika ಹೇಳಿದರು...

ಸ್ವದೇಶಿ ಎಂದರೆ ಸರಿಯಿಲ್ಲದ್ದು ಎನ್ನಲಿಲ್ಲ. ಚೆನ್ನಾಗಿದ್ದರೆ ಸ್ವದೇಶಿ-ವಿದೇಶಿ ಭೇದವೇಕೆ ಎಂದು. ಸ್ವದೇಶಿ-ವಿದೇಶಿ ವಾದ ಸಮಗ್ರವಾದದ್ದು ಎಂದಾದರೆ ನಾವೇಕೆ ಈ ಚಿಕ್ಕ ವಸ್ತುಗಳನ್ನೇ ಪ್ರತಿಬಾರಿಯೂ ಉದಾಹರಣೆಯಾಗಿ ತೆಗೆದುಕೊಳ್ಳಬೇಕು? ನಾನು ಇಲ್ಲಿ ನಿಮ್ಮೊಬ್ಬರನ್ನು target ಮಾಡುತ್ತಿದ್ದೇನೆ ಎಂದು ಭಾವಿಸಬೇಡಿ. ನಾನು ಇಂತಹ ವಾದವನ್ನು ಬಹಳ ವರ್ಷಗಳಿಂದ ಬಹಳ ಜನರಿಂದ ಕೇಳಿದ್ದೇನೆ. ಹಾಗಾಗಿ ಅನಿಸಿಕೆ ಹೇಳುತ್ತಿದ್ದೇನಷ್ಟೆ. ನಾನೂ ಸ್ವದೇಶಿ ಪ್ರಿಯಳೇ. ಆದರೆ ಹೇಗೆ ವಿದೇಶೀ ವಿಷಯಗಳ ಅಂಧಾನುಕರಣೆ ಸರಿಯಲ್ಲವೋ, ಸ್ವದೇಶಿಗೂ ಅಂಧಾನುಕರಣೆ ಸರಿಯಲ್ಲ ಎಂದು ನನ್ನ ಭಾವನೆ.

ವಿ.ರಾ.ಹೆ. ಹೇಳಿದರು...

ಚೈತ್ರಿಕಾ,

thanx for the comment. I agree with u. quality and liking matters. ಆದರೆ ನಮ್ಮ preference ನಮ್ಮ ದೇಶದ ಪ್ರಾಡಕ್ಟ್ ಗಳೇ ಆಗಿರಲಿ. ಸ್ವದೇಶಿ ವಿದೇಶಿ ಎರಡೂ ಬ್ರ್ಯಾಂಡುಗಳೂ ಕೂಡ ನಮ್ಮ ನಿರೀಕ್ಷೆಗೆ ತಕ್ಕುದಾಗೇ ಇದ್ದಾಗ ನಾವು ಸ್ವದೇಶಿಯನ್ನೇ ಆರಿಸಿಕೊಳ್ಳೋಣ, ಏನಂತೀರಿ?

ಯಾವುದೂ ಚಿಕ್ಕವಸ್ತುಗಳಲ್ಲ, ಎಲ್ಲವೂ ವರ್ಷಕ್ಕೆ ನೂರಾರು ಕೋಟಿ ವ್ಯವಹಾರ ಆಗುತ್ತವೆ. ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುವಂತವಾಗಿರುತ್ತವೆ. ಈ ವಿಷಯದಲ್ಲಿ ಬಹಳ factorಗಳು ಅಡಗಿವೆ. ಇದರ ಬಗ್ಗೆ ಇಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಾಗುತ್ತಿಲ್ಲ ನನಗೆ. ಒಮ್ಮೆ ’ಆಜಾದಿ’ ಪುಸ್ತಕ ಓದಿ ಎಂದು ನನ್ನ ಮನವಿ.