ಶುಕ್ರವಾರ, ಏಪ್ರಿಲ್ 16, 2010

ಹುಲಿಕಣಿವೆ

ನನ್ನ ಅಜ್ಜನ ಮನೆಯಿರುವುದು ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿ ಎಂದರೆ ಮಲೆನಾಡಿನ ಹಳ್ಳಿಗಳನ್ನು ನೋಡದವರಿಗೆ ಅದು ಕಲ್ಪನೆಗೂ ಬರುವುದಿಲ್ಲ. ಏಕೆಂದರೆ ಅಲ್ಲಿರುವುದು ಕೇವಲ ಮೂರು ಮನೆಗಳು. ಹೌದು , ಮೂರೇ ಮನೆಗಳು.! ಶಿರಸಿಯಿಂದ ೧೬ ಕಿ.ಮಿ.ದೂರ ಬಂದು, ಮತ್ತೆ ಒಳಗೆ ೪ ಕಿ.ಮಿ. ಹಾಯ್ದರೆ ಅಲ್ಲಿ ಒಂದು ಕತ್ತರಿ(ಕ್ರಾಸ್)ಯಲ್ಲಿ ಬಸ್ಸಿಳಿದುಕೊಳ್ಳಬೇಕು. ಆನಂತರ ಸುಮಾರು ೨ ಕಿ.ಮಿ ನೆಡೆದು ಹೋಗಿ ಒಂದು ಇಳಿಜಾರಿನಲ್ಲಿ ಉರುಳಿದರೆ ಸಿಗುವುದು ಮನೆ. ಭೌಗೋಳಿಕವಾಗಿ ಕಣಿವೆ ಎನ್ನುವಂತಹ ಜಾಗದಲ್ಲಿದೆ. ಅಲ್ಲಿ ಹಿಂದೆ ಹುಲಿಗಳು(!) ಓಡಾಡುತ್ತಿದ್ದವಂತೆ. ಅದಕ್ಕೇ ಮನೆಯಿರುವ ಜಾಗಕ್ಕೆ ಹುಲೀಕಣಿವೆ ಎಂಬ ಹೆಸರಿದೆ. ಅಲ್ಲೇ ಸ್ವಲ್ಪ ದೂರದ ಇನ್ನೊಂದು ಹಳ್ಳಿಯಲ್ಲಿ ಕೂಡು ಕುಟುಂಬವಿತ್ತಂತೆ. ೪೦ ವರ್ಷಗಳ ಹಿಂದೆ ಕೂಡುಕುಟುಂಬ ಹಿಸ್ಸೆಯಾದ ಮೇಲೆ ಅಜ್ಜನ ಪಾಲಿಗೆ ಇಲ್ಲಿ ತೋಟ ಮಾಡಿ ನೆಲೆಕಂಡುಕೊಳ್ಳಬೇಕಾಗಿ ಬಂತು. ಸಾಮಾನ್ಯವಾಗಿ ಕಣಿವೆಗಳಲ್ಲಿ ಸದಾ ನೀರು ಹರಿಯುತ್ತಿರುತ್ತದೆ. ಅಡಿಕೆ ತೋಟಕ್ಕೆ ಸ್ವಲ್ಪ ಥಂಡಿ ಬೇಕಿರುವುದರಿಂದ ಅಡಿಕೆ ತೋಟಗಳನ್ನು ಇಂತಹ ಪ್ರದೇಶದಲ್ಲೇ ಮಾಡುತ್ತಾರಂತೆ. ಪಟ್ಟಣಗಳಲ್ಲಿ ಬೆಳೆದ ನಮಗೆ ಮೊದಲೆಲ್ಲಾ ಇಂತಹ ಜಾಗಗಳಲ್ಲಿ ಯಾಕಪ್ಪಾ ಮನೆ ಕಟ್ಟಿಕೊಂಡಿದ್ದಾರೆ ಅನ್ನಿಸುತ್ತಿತ್ತು. ಮಲೆನಾಡಿನ ಬಹುತೇಕ ಹಳ್ಳಿಗಳು ಇದೇ ರೀತಿ. ಶತಮಾನಗಳ ಹಿಂದೆ ಇಂತಹ ದುರ್ಗಮ ಸ್ಥಳಗಳಲ್ಲಿ, ಅಷ್ಟು ಒಳಗೆ ಹೋಗಿ ಅಲ್ಲಿನ ಪ್ರಶಸ್ತ ಜಾಗಗಳನ್ನು ಹುಡುಕಿ ತೋಟ ಮಾಡಿದ್ದಾರೆ. ಈಗ ರಸ್ತೆಯಿದೆ, ವಿದ್ಯುತ್ ಇದೆ, ಎಲ್ಲಾ ರೀತಿ ಸಂಪರ್ಕಗಳಿವೆ. ಆಗ ಇಲ್ಲಿ ಬಂದು ನೆಲೆಸಿದಾಗ ಏನಿತ್ತು? ದಟ್ಟ ಕಾಡು, ಬೆಟ್ಟ ಗುಡ್ಡಗಳು, ಅವುಗಳಲ್ಲೇ ಕಾಲುದಾರಿ. ಮಳೆಗಾಲಕ್ಕಂತೂ ದೇವರೇ ಗತಿ. ಅಂತದ್ದರಲ್ಲಿ ಇಂತಹ ಜಾಗಗಳಲ್ಲಿ ಹೋಗಿ ಕೃಷಿ ಮಾಡಿ ಬದುಕು ಕಂಡುಕೊಂಡದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಮನೆಯ ಕೆಲವೇ ಅಡಿಗಳ ದೂರದಲ್ಲಿ ಮಾರಿಕಲ್ಲುಗಳಿವೆ. ಸಾಮಾನ್ಯವಾಗಿ ’ಮಾರಿ’ ಎಂಬುದು ನಾವು ಪೂಜಿಸುವ ದೇವರಲ್ಲ. ಆದರೂ ಅಲ್ಲಿ ಹೇಗೆ ಮಾರಿ ಕಲ್ಲು ಬಂತು ಎಂಬುದಕ್ಕೆ ಅಜ್ಜಿ ಹೇಳಿದ ಪ್ರಕಾರ, ಹಿಂದೆ ಆಗ ಅಲ್ಲಿ ನಾಯಕರ ಪೈಕಿಯ ಕೆಲವು ಜನ ಇದ್ದರಂತೆ. (’ನಾಯಕರು ’ ಎಂಬುದೊಂದು ಮಲೆನಾಡಿನ ಕಡೆಯ ಜನಾಂಗ). ಆ ನಾಯಕರು ಮಾರಿ ಕಲ್ಲುಗಳನ್ನು ಪೂಜಿಸುತ್ತಿದ್ದರಂತೆ. ಅವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟು ಇವರು ಮನೆಕಟ್ಟಿಸಿದರಂತೆ. ಅವರು ಹೋದ ಮೇಲೆ ಅವರು ಪೂಜಿಸುತ್ತಿದ್ದ ಮಾರಿಗೆ ಧಕ್ಕೆಯಾಗಬಾರದೆಂದು ಅಜ್ಜ ಕಟ್ಟೆ ಕಟ್ಟಿಸಿ ಅವುಗಳಿಗೆ ಒಂದು ಸ್ಥಾನ ಮಾಡಿಕೊಟ್ಟ. ಹೇಳಿ ಕೇಳಿ ಮಾರಿ ಎಂದರೆ ರಕ್ತ ಬಲಿಯ ದೇವರು. ಅದರಂತೆಯೇ ಮೊದಲೆರಡು ವರ್ಷ ಕೋಳಿಯನ್ನು ಕುಯ್ಯಿಸಿದ್ದರಂತೆ! ಆಮೇಲೆ ಕಾಶಿಯಿಂದ ಬಂದ ಜೋಯ್ಸರೊಬ್ಬರು ಈಗ ಈ ಮಾರಿ ನಮ್ಮ ದೇವರಾಗಿರುವುದರಿಂದ ರಕ್ತಬಲಿ ನಿಲ್ಲಿಸಬಹುದೆಂದೂ, ನಮ್ಮ ನೈವೇದ್ಯವನ್ನೇ ಅರ್ಪಿಸಬಹುದೆಂದೂ ಸಲಹೆ ಕೊಟ್ಟದ್ದರಿಂದ ಆಗಿನಿಂದ ವರ್ಷಕ್ಕೊಮ್ಮೆ ಕೋಳಿಬಲಿ ಇಲ್ಲದೇ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

ಅರ್ಧ ಫರ್ಲಾಂಗು ದೂರ ಇರುವ ಚಿಕ್ಕಪ್ಪನ ಮನೆ, ಆ ಕಡೆ ಒಂದಿಪ್ಪತ್ತು ಹೆಜ್ಜೆ ದೂರ ಇರುವ ಮತ್ತೊಬ್ಬ ಚಿಕ್ಕಪ್ಪನ ಮನೆಗಳೇ ಅಲ್ಲಿನ ಮಿಕ್ಕೆರಡು ಮನೆಗಳು. ಬೇರೆ ಮನೆಗಳು ಕಾಣಬೇಕೆಂದರೆ ಸುಮಾರು ಮುಕ್ಕಾಲು ಕಿ.ಮಿ. ದೂರ ಹೋಗಬೇಕು. ಅಜ್ಜನ ಮನೆಯಿರುವ ವಾತಾವರಣದಲ್ಲಿ ನಿಶ್ಯಬ್ದತೆಯದೇ ಕಾರುಬಾರು. ಯಾರಾದರೂ ಜೋರಾಗಿ ಮಾತಾಡಿದರೆ, ಅಪರೂಪಕ್ಕೊಮ್ಮೆ ಏನಾದರೂ ಗಾಡಿಗಳು ಬಂದರೆ, ಮತ್ತೇನೋ ಜೋರು ಶಬ್ದವಾದರಷ್ಟೆ ಅಲ್ಲಿ ಶಬ್ದ. ಅದಿಲ್ಲದಿದ್ದರೆ ಬರೀ ಗಾಳಿಯ ಸುಯ್ಯ್ ಶಬ್ದ, ಬೀಸಿದ ಗಾಳಿಗೆ ಒಮ್ಮೆ ಮರಗಿಡಗಳೆಲ್ಲಾ ತೂಗಿ ತಾರಾಡುವ ಶಬ್ದ, ಕೊಟ್ಟಿಗೆಯಲ್ಲಿ ಕಟ್ಟಿದ ಆಕಳಿನ ಅಂಬಾ.., ಹಾಕಿದ ಹುಲ್ಲನ್ನು ಎಳೆದೆಳೆದು ತಲೆ ಕೊಡವಿಕೊಂಡಾಗಿನ ಕೊರಳಿನ ಗಂಟೆ ಶಬ್ದವಷ್ಟೆ. ಮನೆಯ ಮುಂದೆ ಅಂಗಳವಿದೆ. ಅಡಕೆ ಒಣಗಿಸಲು ಬಿಟ್ಟಿರುವ ಅಂಗಳ. ಮಳೆಗಾಲದಲ್ಲಿ ಧೋ ಧೋ ಮಳೆಗೆ ಅಂಗಳದ ತುಂಬೆಲ್ಲಾ ನೀರು. ರಾತ್ರಿ ಹೊರಗೆ ಬಂದರೆ ಮಿಣುಕು ಹುಳುಗಳು ಫಳ ಫಳನೆ ದೊಂದಿ ಹೊತ್ತಿಸುತ್ತಾ ಹಾರುತ್ತಿರುತ್ತವೆ. ರಾತ್ರಿಯೆಲ್ಲಾ ಮರಗಳ ಹಿಂದಿನಿಂದ ಹಾರುತ್ತಾ ಹಾರುತ್ತಾ ಬಂದು ಅಂಗಳದಲ್ಲಿ ಮಿಂಚಿ ಮತ್ತೆಲ್ಲೋ ಹಾರುತ್ತಾ ಮರೆಯಾಗಿ ಎಲ್ಲಿಗೆ ಹೋಗುತ್ತವೋ ಗೊತ್ತಿಲ್ಲ. ಅಂತಹ ಪ್ರಕೃತಿಯಲ್ಲಿ, ಆ ನೀರವ ವಾತಾವರಣದ ರಾತ್ರಿಯಲ್ಲಿ ಮಿಣುಕು ಹುಳುಗಳು ಕಟ್ಟಿಕೊಡುವ ಪ್ರಪಂಚವಿದೆಯಲ್ಲಾ, ಅದು ಮಾತ್ರ ಅದ್ಬುತ. ಚಳಿಗಾಲದಲ್ಲಿ ಬೆಳಗಾಗೆದ್ದರೆ ಎತ್ತರೆತ್ತರ ಹುಲ್ಲಿನ ಮೇಲೆಲ್ಲಾ ಇಬ್ಬನಿ. ಅಲ್ಲಿದ್ದಾಗ ಹೊರಗೆ ಒಂದು ಪ್ರಪಂಚವಿದೆ ಎನ್ನುವುದು ಮರೆತು ಹೋಗಿರುತ್ತದೆ. ರಾತ್ರಿಯ ಕಗ್ಗತ್ತಲಲ್ಲಿ ಕೂಗುವ ಸಾವಿರ ಜೀರುಂಡೆಗಳ ದನಿ ಒಮ್ಮೊಮ್ಮೆ ಇದ್ದಕ್ಕಿದ್ದಂತೇ ಸ್ತಬ್ಧವಾದಾಗ ಜಗತ್ತೇ ನಿಂತು ಹೋದಂತೆ! ಅಲ್ಲಿನ ಪ್ರಕೃತಿಯಲ್ಲೇನೋ ನಿಗೂಢತೆ ಅನುಭವವಾಗುತ್ತದೆ.

25 ಕಾಮೆಂಟ್‌ಗಳು:

ಸಂದೀಪ್ ಕಾಮತ್ ಹೇಳಿದರು...

To be continued...???

Sushrutha Dodderi ಹೇಳಿದರು...

ಅದೇನದು ನಿಗೂಢತೆ? ಯಾಕೆ ಅಲ್ಲಿ ಇಂತಹ ನಿಶ್ಯಬ್ಧ? ನೋಡಿ, ಮುಂದಿನ ಸಂಚಿಕೆಯಲ್ಲಿ. :-) :-)

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ನನಗೂ ನನ್ನ ಅಜ್ಜನ ಮನೆಯಾದ ಹರಿಗಾರು (ಶಿರಸಿಯ ಹೇರೂರ್ ಹತ್ತಿರ)ಕಡೆ ಹೋದಾಗಲೆಲ್ಲಾ ಇದೇ ಅನುಭವವಾಗುವುದು. ಕ್ಷಣ ಹೊತ್ತು ಗಾಳಿಯ ಸದ್ದು, ಮರುಕ್ಷಣ ಅನಿರೀಕ್ಷಿತ ನಿಶ್ಯಬ್ದ, ರಾತ್ರಿಯ ಹೊತ್ತಿನಲ್ಲೆ ಕಿರುಗುಟ್ಟುವ ಒಂದು ಜಾತಿಯ ಹುಳುವಿನ ಸದ್ದು, ಕತ್ತಲಿಗೂ ಹಗಲಿಗೂ ಅಷ್ಟೊಂದು ವ್ಯತ್ಯಾಸಕಾಣದ ಮನಃಸ್ಥಿತಿ, ಒಂದು ತರಹದ ಜಡತ್ವ ಆವರಿಸುವುದು ಅಲ್ಲಿ. ಬುದ್ಧಿ, ಯೋಚನೆ, ಚಿಂತೆ ಎಲ್ಲವೂ ಅರೆಹೊತ್ತಾದರೂ ನಿಷ್ಕ್ರಿಯವಾಗುವವು. ನಗರದ ಜೀವನದ fastness ನ ಗಂಧವೂ ಸೋಕಿಲ್ಲ ಕೆಲವು ಊರುಗಳಲ್ಲಿ! ದ್ವೀಪದಲ್ಲಿದ್ದಂತಹ ಅನುಭವವಾಗುವುದು ಸುಳ್ಳಲ್ಲ. ಈ ತರಹ ನಿಗೂಢತೆಯನ್ನು ಅನುಭವಿಸಿ ಬಲ್ಲೆ. ಹಾಗಾಗಿ ಅರ್ಥವಾಗುವುದು.

ನಗರದಲ್ಲೇ ಹುಟ್ಟಿ, ಇಲ್ಲೇ ಬೆಳೆದವರಿಗೆ ಅಂಥ ಹಳ್ಳಿಯ ಆ ಅಪೂರ್ವ ಅನುಭೂತಿ ಕನಸೇ ಸರಿ :) ಅಂಥವರು ಹೀಗೂ ಉಂಟೆ?! ಅಂದುಕೊಂಡರೆ ಅದು ಅವರ ತಪ್ಪೂ ಅಲ್ಲ :)

ರಾಜೇಶ್ ನಾಯ್ಕ ಹೇಳಿದರು...

ಹಳ್ಳಿಗಳ ನಿಶ್ಯಬ್ದತೆಯನ್ನು ಆನಂದಿಸುತ್ತಿರುವಾಗಲೇ ಸಡನ್ನಾಗಿ ನಿಂತುಹೋತಲ್ರೀ!

Harisha - ಹರೀಶ ಹೇಳಿದರು...

ಯಾವ್ದಾರೂ ಕಾರ್ಯದ ಮನೆ ಇಲ್ದೆ ನೀ ಊರಿಗೆ ಬತ್ತೇ ಇಲ್ಲೆ ಹೇಳ್ತಿದ್ದ ನಿನ್ನಣ್ಣ... ನಿಂಗ್ಯಾವಾಗಾತು ಇಂಥ ಅನುಭೂತಿ!?

Subrahmanya ಹೇಳಿದರು...

ಮಲೆನಾಡಿನ ಪರಿಸರದ ಅನುಭವವನ್ನು ಹೇಳಿದ್ದು, ಅಲ್ಲೇ ಓಡಾಡಿದಂತಹ ಅನುಭವವಾಯ್ತು...ಮತ್ತೆ, ಯಾಕೋ ಎಲ್ಲಾ ನಿಗೂಡತೆಯ ಬಗ್ಗೆಯೇ ಕಾಲೆಳೀತಿದ್ದಾರೆ....ಸರಿ ಏನದು ನಿಗೂಡತೆ ?? :)

sunaath ಹೇಳಿದರು...

ಇಂತಹ ಪ್ರಪಂಚ ಇನ್ನೂ ಬದುಕಿರುವದೇ ಜಗತ್ತಿನ ಕೊನೆಯ ವಿಸ್ಮಯ! ಇದಕ್ಕಾಗಿ ಹಂಬಲಿಸಿದ ಕವಿಗಳಿಗೇನು ಕೊರತೆಯೆ?
"When I stand on the roadway
or on the pavements gray,
I hear it in the deep heart's core."
-W.B.Yeats

ಅನಾಮಧೇಯ ಹೇಳಿದರು...

ಚೆನ್ನಾಗಿದೆ. ಎರಡನೆಯ ಪ್ಯಾರಾ ಓದಿ ಮನಸು ಪ್ಯಾರಾಚೂಟ್ ಏರಿತು..:)
ಪಟ್ಟಣದ ರೇಸ್ ಬದುಕಲ್ಲಿ ಬಿದ್ದು ಒದ್ದಾಡುವವರು ಕನಸಿನಲ್ಲಿ ಇಂಥ ಸ್ಥಳದಲ್ಲಿ ಕೊಂಚ ದಿನ ಇದ್ದು ಬರಬೇಕು ಅಂತ ಅನ್ನಿಸುವಂತೆ ಮಾಡುವ ಬರಹ.

Unknown ಹೇಳಿದರು...

ವಿಕಾಸ್ ಅವರೆ,
ಬಾಲ್ಯದ ಸು೦ದರ ನೆನಪನ್ನು ನಿಮ್ಮ ಈ ಬರಹ ಮಾಡಿಸಿತು . ನನಗೆ ಆ ರೀತಿಯ ಮನೆಯನ್ನು ನೋಡಿ ಅಚ್ಚರಿ ಅನ್ನಿಸಲಿಲ್ಲ . ನಾನು ನನ್ನ ಬಾಲ್ಯದ ರಜೆಯನ್ನು ಆ ರೀತಿಯ ಮನೆಯಲ್ಲಿ ಕಳೆದದ್ದು. ತು೦ಬಾ ಖುಷಿ ನೀಡುವ ನೆನಪುಗಳು . ಈಗ ಆ ರೀತಿ ಇರಲು ಆಗುವುದಿಲ್ಲ ಎ೦ಬ ಬೇಸರ!!!!!

ಚುಕ್ಕಿಚಿತ್ತಾರ ಹೇಳಿದರು...

ನಮ್ಮನೆ ಕಡೆನೂ ಹಿ೦ಗೆ ಇದ್ದು...ಊರೀಗ್ ಹೋದಾಗ ನಮ್ದೇ ಗಲಾಟೆ ಸ್ಪೆಶಲ್...

Ravi Hegde ಹೇಳಿದರು...

Vikas,
ಈ ಬೆಂಗಳೂರು ಜೀವನ ಸಾಕಗೊಜು ನೋಡು... ಊರು ಬದಿಗೆ ಹೋಪನ ಅಂದ್ರೆ ಅಲ್ಲಿ ಅವರದ್ದೇ ಆದ ಸಮಸ್ಯೆಗಳು ಹವವಾರು...
ಇತ್ಲಾಗೆ ಇಲ್ಲಿ ಬಿಟ್ಟಿಕ್ಕೆ ಹೊಪಲ್ಲೇ ಅಗತಿಲ್ಲೇ ನೋಡು...
ಊರ ಬದಿಗೆ ಹೋದರೆ ಬಿಟ್ಟಿಕ್ಕೆ ಬಪ್ಪಲ್ಲೇ ಮನಸಾಕ್ತಿಲ್ಲೇ.... ಅಲ್ಲಿ ವಾತಾವರಣನೇ ಅಂಥದ್ದು..
ಚೊಲೋ ಬರ್ದೇ ...

ಅಂದ ಹಾಗೆ ನಾನು ಯಾರು ಹೇಳಿ ಗೊತ್ತಾತ?.

ರವಿ

ಅಲೆಮಾರಿ ಹೇಳಿದರು...

i am very happy ...:):):):):):):):):):):);););):)

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. ಹೇಳಿದರು...

nanagu aaatarada uurugalannu kantumba noduva aase ....! chenaagittu vikaasa

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. ಹೇಳಿದರು...

nanagu noduvase intaha urugalannu .....!chennagittu vikasa

ಮನಸಿನಮನೆಯವನು ಹೇಳಿದರು...

ರೀ ವಿ.ರಾ.ಹೇ..,
ನಿಶ್ಯಬ್ಧ ಲೇಖನ.. ಚೆನ್ನಾಗಿದೆ.

ಜಿತ ಹೇಳಿದರು...

ನಾನು ಸಹ ಮಲೆನಾಡಿನವನೆ. ರಜೆಯಲ್ಲಿ ಮನೆಗೆ ಹೋದಾಗ ತೆಗೆದ ಕೆಲವು ಫೋಟೋಗಳನ್ನು ನನ್ನ ದೆಹಲಿ ಸಹೋದ್ಯೋಗಿಗಳಿಗೆ ತೋರಿಸಿದೆ. ಅವರೆಲ್ಲ ಮೊದಲು switzerlandನಲ್ಲಿ ತೆಗೆದ ಭಾವಚಿತ್ರಗಳೆಂದು ಹೇಳಿದರು. ನಿಜ ಸಂಗತಿ ತಿಳಿದಮೆಲೆ ತುಂಬಾ ಆಶ್ಚರ್ಯ ಪಟ್ಟು ಊರಿಗೆ ಬರುವುದಾಗಿ ಹೇಳುತ್ತಿದ್ದಾರೆ....

ಚಿತ್ರಾ ಹೇಳಿದರು...

ವಿಕಾಸ್,
ನಿನ್ನ ಲೇಖನ , ಮತ್ತೊಮ್ಮೆ ಬಾಲ್ಯಕ್ಕೆ ಕರೆದೊಯ್ದಿತು . ಶಿರಸಿ ಪೇಟೆಯಿಂದ ಸುಮಾರು ೧೫ ಕಿ.ಮೀ ದೂರದಲ್ಲಿರುವ ಅಜ್ಜನ ಮನೆಯಲ್ಲಿ ಕಳೆದ ಬೇಸಿಗೆ ರಜೆಯ ರಾತ್ರಿಗಳು , ಅಲ್ಲಿಂದ ಇನ್ನೂ ಮುಂದೆ ಕಾಡಿನೊಳಗೆ ಇರುವ ದೊಡ್ಡ ಮಾವನ ಮನೆಯಲ್ಲಿನ ನೀರವರಾತ್ರಿಗಳು ನೆನಪಾದವು. ಅಪ್ಪಟ ಮಲೆನಾಡ ಹಳ್ಳಿಯ ಸುಂದರ ಚಿತ್ರಣ .
ಈಗ ನಗರದ ಗಜಿಬಿಜಿ ಜೀವನದಲ್ಲಿ ಇಂಥಾ ನೆನಪುಗಳೂ ಸಹ ಒಮ್ಮೆ ಮುದ ಕೊಡುತ್ತವೆ

shivu.k ಹೇಳಿದರು...

ವಿಕಾಸ್,

ನೀವು ಹೇಳುತ್ತಿರುವಂತದ್ದೇ ಮನೆಗಳಿಗೆ ಒಮ್ಮೆ [ನನ್ನ ಗೆಳೆಯನ ಮನೆ]ಹೋಗಿದ್ದೆ. ಈಗ ನೀವು ವಿವರಿಸುತ್ತಿರುವುದನ್ನೆಲ್ಲಾ ಕ್ಯಾಮೆರಾ ಕಣ್ಣಿನಿಂದ ನೋಡುತ್ತಾ ಆನಂದಿಸುವಷ್ಟರಲ್ಲೇ ನಿಲ್ಲಿಸಿಬಿಟ್ಟಿರಲ್ರೀ....ನನ್ನ ಕ್ಯಾಮೆರಾದ ಬ್ಯಾಟರಿ ಮೆಮೋರಿ ಕಾರ್ಡು ಮುಗಿದಂತ ಭಾವನೆ...
ಬೇಗ ಬ್ಯಾಟರಿ ಚಾರ್ಚು ಮಾಡಿಕೊಂಡು ಹೊಸ ಮೆಮೊರಿ ಕಾರ್ಡು ಹಾಕಿಕೊಂಡು ಬರುತ್ತೇನೆ...
ಮುಂದುವರಿಸುತ್ತಿರಲ್ಲಾ...

Anand ಹೇಳಿದರು...

HALLO VIKAS MUNDE BARIIRI
EE KATHE KALI NADI DANDELI YALLI HARIYODU NILLISIDE ANNISTA IDE
PLEASE COMPLETE IT

Anand ಹೇಳಿದರು...

hallo vikas
ee kathe kali nadi dandeli yalli nintange ide munde arabi samudra
sersi please

ಅನಾಮಧೇಯ ಹೇಳಿದರು...

mundina bhaaga break na nantara va?

ಅನಾಮಧೇಯ ಹೇಳಿದರು...

Whas next????

ದಿವ್ಯಾ ಮಲ್ಯ ಕಾಮತ್ ಹೇಳಿದರು...

ಓದುವಾಗ ವಿಭಿನ್ನ ಅನುಭವ ನೀಡುವ ಬರಹ :)

ಅನಿಕೇತನ ಸುನಿಲ್ ಹೇಳಿದರು...

ಹೇಯ್ ವಿಕಾಸ್,
ಎಷ್ಟು ಚೆಂದ ಬರ್ದೀಯಲ್ಲ...? ;-) ನಿಜಕ್ಕೂ ಖುಷಿಯಾಯ್ತು.....
ಬೆಟ್ಟದ ಜೀವ ನೆನಪಿಸಿದ ಬರಹ ನಿಂದು ;)
ಹಾಗೇನೆ ನಿನ್ನ ಆ ವರ್ಣನೆಯೆಲ್ಲ ಕೇಳಿದ್ಮೇಲೆ ನಿಜಕ್ಕೂ ತುಂಬಾ ಹೊಟ್ಟೆ ಕಿಚ್ಚು ನಿನ್ಮೇಲೆ...ನಂಗೆ ಅಂತ ಕಡೆ ಹೋಗಿ ಇರೋಕೆ ಯಾರೂ ಇಲ್ಲ ಅಂತ..;-(
ಅನಿಕೇತನ ಸುನಿಲ್.

ವಿ.ರಾ.ಹೆ. ಹೇಳಿದರು...

@all,

ಪ್ರತಿಕ್ರಿಯೆಗಾಗಿ ಸಿಕ್ಕಾಪಟ್ಟೆ ಥ್ಯಾಂಕ್ಸ್..

ಮುಂದಿನ ಪೋಸ್ಟ್ ನೋಡಿ ಪ್ಲೀಜ್... ;)