ಭಾನುವಾರ, ಜುಲೈ 7, 2013

ಗೊಂದಲದ ಮೀನು

ಕೆರೆಯ ದಡದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಎದುರಿನ ದಿಗಂತದವರೆಗೂ ನೀರು. ಗಾಳಿಗೆ ಏಳುವ ಸಣ್ಣ ಸಣ್ಣ ಅಲೆಗಳು. ಎಷ್ಟು ಹೊತ್ತು ನೋಡಿದರೂ  ಖುಷಿ ಕೊಡುವಂತಹ, ಮತ್ತದೇ ಅಚ್ಚರಿ ಹುಟ್ಟಿಸುವಂತಹ ಪ್ರಕೃತಿ. ಅದನ್ನು ನೋಡುತ್ತಾ ಸುಮ್ಮನೇ ಕೂರುವ ಸುಖಕ್ಕೆ ಒಂದಿಷ್ಟು ಹಾರುವ ಹುಳಗಳು ಅಡ್ಡಿಯಾಗುತ್ತಿದ್ದವು. ಕೆಲವು ತಲೆಯ ಸುತ್ತ ಹಾರುತ್ತಿದ್ದರೆ ಕೆಲವು ಕಿವಿಯ ಹತ್ತಿರ ಬಂದು ಗುಯ್ಯ್ ಗುಡುತ್ತಿದ್ದವು. ತಲೆಕೊಡವಿ ಅವುಗಳನ್ನು ಓಡಿಸಿ ಮತ್ತೆ ದಿಗಂತಕ್ಕೆ ಕಣ್ಣು ಹಾಯಿಸಿದರೆ ಒಂದೇ ನಿಮಿಷದಲ್ಲಿ ಮತ್ತೆ ಪ್ರತ್ಯಕ್ಷ. ಅದೇ ಹಾರಾಟ. ಅದೇ ಗುಂಯ್ಯ್ ಸದ್ದು. ಬೇಸರವಾಗಿ ಅವುಗಳನ್ನು ಓಡಿಸದೇ ಹಾಗೇ ಬಿಟ್ಟೆ. ಬಂದು ಹಾರಾಡಲಿ, ಸದ್ದು ಮಾಡಲಿ, ಮುತ್ತಿಕೊಳ್ಳಲಿ, ಕೊರೆಯಲಿ. ಕೊನೆಗೆ ಇಲ್ಲಿದ್ದು ಪ್ರಯೋಜನವಿಲ್ಲ ಎಂದು ಗೊತ್ತಾದರೆ ಅವೇ ಹೋಗಿಬಿಡುತ್ತವೆ ಎಂದುಕೊಂಡು ಸುಮ್ಮನಾದೆ. 

ಇದ್ದಕ್ಕಿದ್ದಂತೇ ಹಕ್ಕಿಗಳ ಕೂಗು ಕೇಳಿಸಿತು. ಎರಡು ಹಕ್ಕಿಗಳು ಒಂದನ್ನೊಂದು ಅಟ್ಟಿಸಿಕೊಂಡು ಕೂಗಾಡುತ್ತಾ ನಾನು ಕುಳಿತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಇಳಿದವು. ಒಂದು ಹಕ್ಕಿಯ ಕೊಕ್ಕಲ್ಲಿ ಮೀನೊಂದು ಒದ್ದಾಡುತ್ತಿತ್ತು.  ಅದೇನಾಯಿತೋ ಏನೋ ಆ ಹಕ್ಕಿ ತನ್ನ ಕೊಕ್ಕಲ್ಲಿದ್ದ ಮೀನನ್ನು ನೆಲದ ಮೇಲೆ ಹಾಕಿತು.  ಒಂದು ಕ್ಷಣವೂ ನಿಲ್ಲದೇ ಎರಡೂ ಹಕ್ಕಿಗಳೂ ಎಲ್ಲೋ ಹಾರಿ ಹೋದವು. ನಾನು ನೋಡುತ್ತಿದ್ದೆ. ಆ ಮೀನಿಗೆ ಇನ್ನೂ ಜೀವ ಇತ್ತು. ಒದ್ದಾಡುತ್ತಿತ್ತುಎಂಟು ಹತ್ತು ಅಡಿಗಳ ದೂರದಲ್ಲಿ ನೀರಿತ್ತು. ಅದರ ಸಾವಿಗೂ ಬದುಕಿಗೂ ಅಷ್ಟೇ ಅಂತರ. ಆದರೂ ಅದು ತನ್ನನ್ನು ಕಾಪಾಡಿಕೊಳ್ಳಲಾರದು. ಅದನ್ನು ತೆಗೆದು ನೀರಿಗೆ ಹಾಕಿಬಿಡಲೇ ಯೋಚಿಸಿದೆ. ಆದರೆ ಅದು ನೈಸರ್ಗಿಕ ಕ್ರಿಯೆಯ ಭಾಗ. ಆ ಹಕ್ಕಿ ಅದನ್ನು ಬೇಟೆ ಆಡಿ ಹಿಡಿದಿದೆ. ಅದು ಅದರ ಆಹಾರ. ಅದನ್ನು ಮುಟ್ಟುವ ಹಕ್ಕಿಲ್ಲ ಅನ್ನಿಸಿತು. ಸುಮ್ಮನೇ ಕುಳಿತೆ. ಆ ಹಕ್ಕಿ ಮತ್ತೆ ಬರಬಹುದು. ತನ್ನ ಆಹಾರ ಎಲ್ಲಿ ಹೋಯಿತು ಎಂದು ಹುಡುಕಬಹುದು. ಯಾವ ಕಾರಣಕ್ಕೆ ಅದನ್ನು ಇಲ್ಲಿ ಹಾಕಿ ಹೋಗಿತ್ತೋ ಏನೋ! ಹಾಗಿದ್ದರೆ ಕಣ್ಣ ಮುಂದೆ ಜೀವಿಯೊಂದನ್ನು ಬದುಕಿಸುವ ಅವಕಾಶವಿದ್ದೂ ಸುಮ್ಮನಿರುವುದು ಯಾವ ಮನುಷ್ಯತ್ವ? ಅದು ಇನ್ನೂ ಒದ್ದಾಡುತ್ತಿತ್ತು. ನೋಡುತ್ತಾ ಸುಮ್ಮನೇ ಕೂರಲೂ ಮನಸು ಒಪ್ಪಲಿಲ್ಲ. ಇಡೀ ಕೆರೆದಂಡೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆಯನ್ನು ನೋಡಿದವನು ನಾನೊಬ್ಬನೆ, ಈಗ ಅದನ್ನು ಬದುಕಿಸಬಲ್ಲವನೂ ನಾನೊಬ್ಬನೆ ! ಹಾಗೇ ಆಕಾಶಕ್ಕೆ ನೋಡಿದೆ, ಆ ಹಕ್ಕಿಗಳು ಮತ್ತೆ ಬರಬಹುದೇ . ಎಲ್ಲೂ ಕಾಣಲಿಲ್ಲ. ಮೀನಿನ ಒದ್ದಾಟ ಕ್ಷೀಣವಾಗುತ್ತಿತ್ತು. ಏನಾದರಾಗಲಿ ಅದನ್ನು ನೀರಿಗೆ ಹಾಕೋಣ ಎಂದು ಅದರ ಹತ್ತಿರ ಹೋದೆ. ನೋಡಿದರೆ ಆ ಮೀನು ವಿಚಿತ್ರವಾಗಿತ್ತು. ಕರೀ ಬಣ್ಣದ್ದಿತ್ತು. ಅದರ ಮೈತುಂಬಾ ಸಣ್ಣ ಸಣ್ಣ ಕೂದಲುಗಳಿರುವಂತೆ ಕಾಣುತ್ತಿತ್ತು. ಇದುವರೆಗೂ ಅಂತಹ ಮೀನನ್ನು ನೋಡಿರಲಿಲ್ಲ. ಅದು ಯಾವ ರೀತಿಯ ಮೀನೋ ಏನೋ. ಅದನ್ನು ಮುಟ್ಟಿ ನನಗೇನಾದರೂ ತೊಂದರೆಯಾದರೆ? ಮತ್ತೆ ಹಿಂಜರಿದೆ. ಎದುರಿಗೇ ಒಂದು ಜೀವಿಯ ಸಾವನ್ನು ನೋಡುತ್ತಾ ಸುಮ್ಮನಿದ್ದಂತಾಗುತ್ತದಲ್ಲ. ಅದನ್ನು ಮುಟ್ಟದೇ ಹಾಗೇ ನೀರಿಗೆ ಹಾಕಲು ಸಾಧ್ಯವೇ ಯೋಚಿಸಿದೆ. ಅದು ಉಸಿರಿಗಾಗಿ ನಿಧಾನಕ್ಕೆ ದೇಕುತ್ತಿತ್ತು.

ಅಷ್ಟರಲ್ಲೇ ಹಿಂದೆ ಸ್ವಲ್ಪ ದೂರದಲ್ಲಿ ಮಕ್ಕಳ ಧ್ವನಿ ಕೇಳಿಸಿತು. ಇಬ್ಬರು ಹುಡುಗರು ಸ್ಕೇಟಿಂಗ್ ಆಡುತ್ತಾ ಕೆರೆದಂಡೆಯಲ್ಲಿ ಬರುತ್ತಿದ್ದರು. ನೋಡ ನೋಡುತ್ತಿದ್ದಂತೇ ಜುಯ್ಯನೇ ನನ್ನ ಬಳಿಯೇ ಬಂದರು. ಅದರಲ್ಲೊಬ್ಬನ ಕಣ್ಣಿಗೆ ಈ ಮೀನು ಕಾಣಿಸಿಯೇಬಿಡ್ತು. ಅವನು “ಹೇಯ್ ಇಲ್ನೋಡು ಮೀನು” ಅಂದ. ಮತ್ತೊಬ್ಬ “ಇನ್ನೂ ಜೀವ ಇದೆ ಅದಕ್ಕೆ, ನೀರಿಗೆ ಹಾಕೋಣ” ಅಂದ. ಅವನು ಮಾತು ಮುಗಿಸುವುದರೊಳಗಾಗಿಯೇ ಆ ಮೀನನ್ನು ಮೊದಲು ನೋಡಿದ್ದ ಹುಡುಗ ಅದನ್ನು ಹಿಡಿದು ಎತ್ತಿ ನೀರಿಗೆ ಎಸೆದ. ಮತ್ತೆ ಏನೋ ಕೂಗಾಡಿಕೊಳ್ಳುತ್ತಾ ಅವರಿಬ್ಬರೂ ಸ್ಕೇಟಿಂಗ್ ಮಾಡಿಕೊಂಡು ಹೋಗಿಯೇಬಿಟ್ಟರು. ಇಷ್ಟೊತ್ತು ಒದ್ದಾಡುತ್ತಾ ಬಿದ್ದಿದ್ದ ಮೀನು ಕೆಲವೇ ಸೆಕೆಂಡುಗಳಲ್ಲಿ ನೀರು ಸೇರಿತ್ತು.  

ಅರೇ! ಇಷ್ಟು ಸುಲಭದ ಕೆಲಸ ನಾನ್ಯಾಕೆ ಮಾಡಲಾಗಲಿಲ್ಲ? ಅದೇಕೆ ನಿಸರ್ಗ ನಿಯಮ ಅಂತೆಲ್ಲಾ ಯೋಚಿಸಿದೆ? ನನಗೇನಾದರೂ ಅಪಾಯ ಆಗಬಹುದು ಅಂತ ಹಿಂಜರಿದೆ? ಅಲ್ಲಿಂದ ಹೋಗಿ ಕಲ್ಲು ಬೆಂಚಿನ ಮೇಲೆ ಕುಳಿತೆ. ಎದುರಿಗೆ ಅದೇ ಸುಂದರ ಪ್ರಶಾಂತ ಜಲರಾಶಿ. ಇಷ್ಟು ಹೊತ್ತು ಎಲ್ಲಿದ್ದವೋ ಏನೋ ಮತ್ತೆ ಆ ಹುಳಗಳು ಬಂದು ತಲೆ ಸುತ್ತ ಹಾರುತ್ತಾ ಗುಂಯ್ಯ್ ಗುಡತೊಡಗಿದವು.

*********