ಶನಿವಾರ, ಏಪ್ರಿಲ್ 29, 2017

ಮರೀನಾ ಬೇ ಸ್ಯಾಂಡ್ಸ್ ಸ್ಕೈಪಾರ್ಕ್ - ಬಾನೆತ್ತರದಿಂದ ಸಿಂಗಾಪುರ ನೋಟ



ಅದು ಭ್ರಾಮಕತೆಯನ್ನು ಮೀರಿಸುವ ವಾಸ್ತವ ಜಗತ್ತು. ನಕಾಶೆಯ ಗೆರೆಗಳಂತೆ ಕಾಣುವ ರಸ್ತೆಗಳು, ಆಟಿಕೆಗಳಂತೆ ಕಾಣುವ ವಾಹನಗಳು, ಒಂದು ಬದಿಯಲ್ಲಿ ದಿಗಂತದವರೆಗೆ ವ್ಯಾಪಿಸಿದ ವಿಶಾಲ ಕಡಲು, ತೇಲುತ್ತಿರುವ ಹಾಯಿದೋಣಿಗಳು, ದೂರದಲ್ಲಿ ಲಂಗರು ಹಾಕಿರುವ ಹಡಗುಗಳು, ಮತ್ತೊಂದು ಕಡೆ ಒಂದಕ್ಕೊಂದು ಹೆಗಲು ಕೊಟ್ಟು ನಿಂತಿರುವ ರಟ್ಟಿಗೆ ಪೆಟ್ಟಿಗೆಗಳಂತೆ ತೋರುವ ಮುಗಿಲೆತ್ತರದ ಕಟ್ಟಡಗಳು, ಹಸಿರೇ ಮೈದಳೆದಂತ ಉದ್ಯಾನವನ, ಸರೋವರ, ಕಾರಂಜಿಗಳು, ಮುಗಿಯುವುದೇ ಇಲ್ಲವೇನೋ ಎಂಬಂತೆ ಕಾಣುವ ದೂರಕ್ಕೆ ಹಬ್ಬಿದ ವಿಸ್ಮಯ ನಗರಿಯ ಬಣ್ಣದ ಬೆಳಕುಗಳು ನಮ್ಮನ್ನು ಮೋಹಕಗೊಳಿಸಿ ಮನಸನ್ನು ಸೆಳೆದು ಹಿಡಿದಿಟ್ಟುಬಿಡುತ್ತವೆ.

ಸಿಂಗಾಪುರದಲ್ಲಿನ ವೈಭವೋಪೇತ ೫೫ ಮಹಡಿಗಳ ಈ ಕಟ್ಟಡವೇ ಮರೀನಾ ಬೇ ಸ್ಯಾಂಡ್ಸ್ ಎನ್ನುವ ಹೊಟೆಲ್. ದೂರದಿಂದ ನೋಡಿದರೆ ಕ್ರಿಕೆಟ್ಟಿನ ಮೂರು ವಿಕೆಟ್ ಗಳನ್ನು ಒಂದರ ಪಕ್ಕದಲ್ಲೊಂದು ಹುಗಿದಿಟ್ಟಂತೆ ಕಾಣುವ ಇದು ಹತ್ತಿರ ಹೋಗುತ್ತಿದ್ದಂತೆಯೇ ಜಗಮಗಿಸುವ ಗಾಜಿನ ಸುಂದರ ಕಟ್ಟಡವಾಗಿ ಗೋಚರಿಸುತ್ತದೆ. ಇದರ ಟೆರೇಸಿನಲ್ಲಿರುವುದು ಮರೀನಾ ಬೇ ಸ್ಯಾಂಡ್ಸ್ ಸ್ಕೈ ಪಾರ್ಕ್. ನೂರಾರು ಜನರು ನಿಂತು ವೀಕ್ಷಿಸಲು ಸಾಕಾಗುವಷ್ಟು ವಿಶಾಲವಾಗಿದೆ. ನೆಲಮಹಡಿಯಿಂದ ಕೆಲವೇ ಸೆಕೆಂಡುಗಳಲ್ಲಿ ಲಿಫ್ಟ್ ಮೂಲಕ ಈ ಸ್ಕೈಪಾರ್ಕ್ ತಲುಪಿದರೆ ತೇಲಿಸಿ ಕರೆದೊಯ್ಯುವಂತಹ ಗಾಳಿಯೊಂದಿಗೆ ಆಗಸದಲ್ಲಿ ಇದ್ದ ಅನುಭವ. ನಾವು ಅಲ್ಲಿ ತಲುಪಿದಾಗ ಸಂಜೆಯಾಗಿತ್ತು. ಇನ್ನೂ ಸೂರ್ಯ ಪೂರ್ತಿ ಮುಳುಗಿರಲಿಲ್ಲ. ಈ ತೆರೆದ ಟೆರೇಸ್ ಅಷ್ಟು ಎತ್ತರದಲ್ಲಿದ್ದರೂ ಭಯವಾಗದಂತೆ ಸುರಕ್ಷಿತವಾಗಿತ್ತು.

ಬಾನೆತ್ತರದ ಟೆರೇಸ್ ಪಾರ್ಕಿನಲ್ಲಿ ನಾವು ತಿರುಗಾಡುತ್ತಾ ಸ್ವಲ್ಪ ಸಮಯ ಕಳೆಯುತ್ತಿದ್ದಂತೇ ದೂರದಲ್ಲಿ ವಿಮಾನಗಳ ಸದ್ದು ಕೇಳಿಸಿತು. ಯುದ್ಧವಿಮಾನಗಳಂತಹ ವಿಮಾನಗಳು ಶರವೇಗದಲ್ಲಿ ನಾವಿದ್ದ ಟೇರೇಸಿನ ಮೇಲೆ ಹತ್ತಿರದಲ್ಲೇ ಹಾದುಹೋದವು. ಅದರ ಹಿಂದೆ ಮತ್ತೊಂದಿಷ್ಟು ವಿಮಾನಗಳು ಸಾಲಾಗಿ, ವಿವಿಧ ಆಕಾರಗಳಲ್ಲಿ ಒಂದು ಮಿನಿ ಏರ್ ಶೋ ನಡೆಸಿದವು. ಆನಂತರ ಹೆಲಿಕಾಪ್ಟರುಗಳು ಸಿಂಗಾಪುರದ ಬಾವುಟವನ್ನು ಪ್ರದರ್ಶಿಸುತ್ತಾ ನಿಧಾನಕ್ಕೆ ಹಾರಿದವು. ಪ್ರವಾಸೋದ್ಯಮವೇ ಮುಖ್ಯವಾಗಿರುವ ಸಿಂಗಾಪುರದಲ್ಲಿ ಪ್ರವಾಸಿಗರಿಗೋಸ್ಕರ ಇಂತಹ ಪ್ರದರ್ಶನಗಳಿರುತ್ತವೆಯಂತೆ. ನಿಧಾನಕ್ಕೆ ಕತ್ತಲಾಗುತ್ತಿದ್ದಂತೆ ಸುತ್ತಲಿನ ಕಟ್ಟಡಗಳ ದೀಪಗಳೆಲ್ಲಾ ಹತ್ತಿಕೊಳ್ಳುತ್ತಿದ್ದವು. ನೋಡನೋಡುತ್ತಲೇ ಅರ್ಧಗಂಟೆಯಲ್ಲಿ ಸುತ್ತಲಿನ ಜಗತ್ತು ಬಿಳಿ, ಕೆಂಪು, ನೀಲಿ, ಹಸಿರು ಬಣ್ಣದ ಕೋರೈಸುವ ದೀಪಗಳಿಂದ ತುಂಬಿತು. ದೂರದ ಯಾವುದೋ ಕಟ್ಟಡದಿಂದ ಸುತ್ತಲೂ ತಿರುಗುತ್ತಿರುವ ಲೇಸರ್ ಕಿರಣಗಳು, ಅಲ್ಲೇ ಅನತಿ ದೂರದಲ್ಲಿ ಸುತ್ತುತ್ತಿರುವ ದೈತ್ಯಾಕಾರದ ಜೈಂಟ್ ವ್ಹೀಲ್, ಸರೋವರಲ್ಲೆಲ್ಲಾ ಚಿಮ್ಮುತ್ತಿರುವ ಬಣ್ಣದ ಕಾರಂಜಿಗಳು, ಜಾಹೀರಾತು ಫಲಕಗಳು ಮುಂತಾದ ಬೆಳಕುಗಳಿಂದ ಇಡೀ ನಗರಿ ದೀಪಗಳ ಜಗತ್ತಾಗಿ ಪರಿವರ್ತನೆಗೊಂಡಿತ್ತು.

ಈ ಹೋಟೆಲ್ ಕಟ್ಟಡ ಇರುವ ಗಾರ್ಡನ್ಸ್ ಬೈ ದ ಬೇ ಎನ್ನುವ ಪ್ರದೇಶವೇ ಒಂದು ಸುಂದರ ಉದ್ಯಾನವನ. ನೂರಾರು ಎಕರೆ ಪ್ರದೇಶದ ಈ ಉದ್ಯಾನವನ ಸಮುದ್ರವನ್ನು ಹಿಂದಕ್ಕೆ ತಳ್ಳಿ ನಿರ್ಮಿಸಿದ್ದಂತೆ. ಸಮುದ್ರವನ್ನು ಸ್ವಲ್ಪ ಭಾಗ ಒಳತಂದಿರುವ ಕೊಲ್ಲಿಯ ಪಕ್ಕದಲ್ಲೇ ಹರಡಿಕೊಂಡಿದೆ. ಪೂರ್ತಿ ಕತ್ತಲಾವರಿಸುತ್ತಿದ್ದಂತೆ ಇತ್ತಕಡೆ ಉದ್ಯಾನವನವೂ ಕೂಡ ಹೊಳೆಯುತ್ತಿತ್ತು. ಅದು ಕಣ್ಣಿಗೆ ಹಬ್ಬ. ಈ ಮಾನವ ನಿರ್ಮಿತ ಸೌಂದರ್ಯ ಲೋಕ ಪ್ರಕೃತಿ ಮತ್ತು ಆಧುನಿಕ ತಂತ್ರಜ್ನಾನಗಳ ಸಮ್ಮಿಳನ. ಪ್ರಕೃತಿ ಸೌಂದರ್ಯ ಒಂದು ಬಗೆಯದ್ದಾದರೆ ಈ ಮಾನವ ನಿರ್ಮಿತ ಸೌಂದರ್ಯ ಮತ್ತೊಂದು ಬಗೆ. ಕ್ಲೌಡ್ ಫಾರೆಸ್ಟ್ ಮತ್ತು ಫ್ಲವರ್ ಡೂಮ್ ಎಂದು ಕರೆಯಲ್ಪಡುವ ಎರಡು ದೊಡ್ಡ ಗಾಜಿನ ಗುಮ್ಮಟದಂತಹ ರಚನೆಗಳಲ್ಲಿ ಜಗತ್ತಿನ ವಿವಿಧ ಪ್ರದೇಶಗಳ ಸಸ್ಯರಾಶಿಗಳನ್ನು ಬೆಳೆಸಿಡಲಾಗಿದೆ. ಕೃತಕ ಜಲಪಾತದ ಜೊತೆ ಮಳೆಕಾಡುಗಳ ವಾತಾವರಣ ಸೃಷ್ಟಿಸಿಡಲಾಗಿದೆ. ಉದ್ಯಾನವನದಲ್ಲಿ ಸೂಪರ್ ಟ್ರೀಗಳೆಂದು ಕರೆಯಲ್ಪಡುವ ದೈತ್ಯಾಕಾರದ ಮರಗಳಂತಹ ಎತ್ತರ ರಚನೆಗಳು ವಿವಿಧ ಬಣ್ಣಗಳಿಂದ ಹೊಳೆಯುವುದನ್ನು ಮೇಲಿನಿಂದ ಆಸ್ವಾದಿಸಿದೆವು. ವಾತಾವರಣವೂ ಹಿತಕರವಾಗಿತ್ತು. ರಾತ್ರಿಯಾಗುವವರೆಗೂ ಅಲ್ಲೇ ಇದ್ದು ಒಲ್ಲದಮನಸ್ಸಿಂದ ಕೆಳಗೆ ಇಳಿದುಬಂದೆವು. ನಂತರ ಮುಂಭಾಗದ ಸರೋವರದ ನೀರಿನ ಮೇಲೆ ನಡೆಯುವ ಸೌಂಡ್ ಎಂಡ್ ಲೈಟ್ ಶೋ ನೋಡಿ ಊಟ ಮುಗಿಸಿ ತಿರುಗಾಡಿ ಮನೆಗೆ ಹೊರಟಾಗ ತಡರಾತ್ರಿಯಾಗಿದ್ದರೂ ಸಹ ಸಿಂಗಾಪುರದ ರಸ್ತೆಗಳಲ್ಲಿ ಜನರೇನೂ ಕಡಿಮೆಯಾಗಿರಲಿಲ್ಲ.

ಇಡೀ ಸಿಂಗಾಪುರವೇ ಪ್ರವಾಸೋದ್ಯಮದ ದೇಶ. ಭೇಟಿನೀಡುವಂತಹ ಹಲವಾರು ಆಕರ್ಷಣೆಗಳು, ಸ್ಥಳಗಳು ಇವೆ. ಝೂ, ರಿವರ್ ಸಫಾರಿ, ನೈಟ್ ಸಫಾರಿ, ಬರ್ಡ್ ಪಾರ್ಕ್, ಮ್ಯೂಸಿಯಂಗಳು, ಚೀನೀ ಟೆಂಪಲ್ ಗಳು, ಸೆಂಟೋಸಾ ದ್ವೀಪದ ಯುನಿವರ್ಸಲ್ ಸ್ಟೂಡಿಯೋ, ಅಂಡರ್ ವಾಟರ್ ವರ್ಲ್ಡ್, ಕೆಸಿನೋ ಹೀಗೆ ನೂರಾರು ಜಾಗಗಳಿವೆ. ಸಿಂಗಾಪುರದ ವಾಣಿಜ್ಯ ಪ್ರದೇಶಗಳು ದಿನದ ೨೪ಗಂಟೆ ತೆರೆದಿರುತ್ತದೆ. ಶಾಪಿಂಗ್ ಸೆಂಟರುಗಳು, ಮಾಲ್ ಗಳು ಸುತ್ತಾಡಿದಷ್ಟೂ ಮುಗಿಯುವುದಿಲ್ಲ. ಓಡಾಟಕ್ಕೆ ಮೆಟ್ರೋ ರೈಲು, ಸಿಟಿ ಬಸ್ಸುಗಳು, ಟ್ಯಾಕ್ಸಿಗಳು ಇವೆ. ಲಿಟಲ್ ಇಂಡಿಯಾ ಎಂಬ ಪ್ರದೇಶದಲ್ಲಿ ಭಾರತೀಯ ಆಹಾರದ ಹೋಟೆಲುಗಳು, ಅಂಗಡಿಗಳು ತುಂಬಿವೆ. ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವ ಈ ದೇಶದಲ್ಲಿ ಪ್ರತಿಯೊಂದು ತಾಣಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿಟ್ಟಿರುವುದು ಸಂತೋಷವುಂಟುಮಾಡುತ್ತದೆ.

ಹೋಗುವುದು ಹೇಗೆ?
ಬೆಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನಗಳಿವೆ. ಮೂರ್ನಾಲ್ಕು ತಾಸಿನ ಪ್ರಯಾಣವಷ್ಟೆ.