ಬುಧವಾರ, ಅಕ್ಟೋಬರ್ 18, 2017

ಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶಗಳು

ಮಾಹಿತಿ ತಂತ್ರಜ್ಞಾನ ದಿನದಿನಕ್ಕೂ ಹೊಸಹೊಸದನ್ನು ಹೊತ್ತು ತರುತ್ತಿರುವ ಕಾಲ ಇದು. ಕಂಪ್ಯೂಟರ್, ಅಂತರ್ಜಾಲ, ಸ್ಮಾರ್ಟ್ ಫೋನುಗಳು, Appಗಳು ಹೀಗೆ ಕಾಲಕಾಲಕ್ಕೆ ಗ್ಯಾಜೆಟ್ ಹಾಗೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಲೇ ಹೋಗುತ್ತಿದೆ. ಭಾಷೆಯ ಬಳಕೆ, ಬೆಳವಣಿಗೆಗೆ ಅದನ್ನು ಮಾಹಿತಿತಂತ್ರಜ್ಞಾನದಲ್ಲಿ ಅಳವಡಿಸುವುದೂ ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಇದರಲ್ಲಿ ಕನ್ನಡ ಭಾಷೆ ಅಳವಡಿಕೆಯಲ್ಲಾದ ಇತ್ತೀಚಿನ ಎರಡು ಬಹುಮುಖ್ಯ ಮೈಲಿಗಲ್ಲು ಎನ್ನಬಹುದಾದಂತಹ ಪ್ರಗತಿಯ ವಿಷಯಗಳನ್ನು ದಾಖಲಿಸಬೇಕಿದೆ.

೧. ಲಿಪಿಕಾರ್: ಇದೊಂದು ಧ್ವನಿಯಿಂದ ಪಠ್ಯ ಪರಿವರ್ತನಾ (speech to text) ತಂತ್ರಾಂಶ. ಅಂದರೆ ನಾವು ಮಾತಾಡಿದ್ದನ್ನು ಗ್ರಹಿಸಿ ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಿ ಕೊಡುವುದು ಇದರ ಕೆಲಸ. ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗಾಗಿ 2017ಜುಲೈಯಲ್ಲಿ ಬಿಡುಗಡೆಯಾಯ್ತು. ಆಂಡ್ರಾಯ್ಡ್ ಫೋನುಗಳಲ್ಲಿ ಈ ಕೀಬೋರ್ಡನ್ನು ಸಕ್ರಿಯಗೊಳಿಸಿಕೊಂಡು ಇದರಲ್ಲಿರುವ ಮೈಕ್ ಬಟನ್ ಆನ್ ಮಾಡಿಕೊಂಡು ನಮಗೆ ಏನು ಬರೆಯಬೇಕಿರುತ್ತದೋ ಅದನ್ನು ಮಾತಾಡಿದರೆ ಅಕ್ಷರ ರೂಪದಲ್ಲಿ ಟೈಪ್ ಮಾಡಿ ತೆರೆಯಮೇಲೆ ತೋರಿಸುತ್ತದೆ. ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಈ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ಮೊದಲೇ ತಯಾರಾಗಿವೆ. ಆದರೆ ಕನ್ನಡಕ್ಕೆ ಇಷ್ಟು ನಿಖರತೆಯಿಂದ ಕೆಲಸ ಮಾಡುವ ತಂತ್ರಾಂಶ ಇದೇ ಮೊದಲು ಅಂತ ಹೇಳಬಹುದು. ಸ್ಪಷ್ಟವಾಗಿ ಮಾತಾಡಿದರೆ ಮತ್ತು ಪುಸ್ತಕರೂಪದ ಭಾಷೆಯಲ್ಲಿ ಮಾತಾಡಿದರಂತೂ ಇದರ ನಿಖರತೆ ಶೇ. ೯೫ ಕ್ಕೂ ಹೆಚ್ಚಿರುವುದು ಇದರ ವಿಶೇಷ. ಆ ಆಪ್ ಇಲ್ಲಿದೆLipikaar Kannada Keyboard.

೨. ವೇಜ್: ಜಿಪಿಎಸ್ ಆಧರಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕಾಶೆಯಲ್ಲಿ ದಾರಿ ತೋರುವ ತಂತ್ರಾಂಶ ಇದು. ಇದು ಕೂಡ ಆಂಡ್ರಾಯ್ಡ್ ಫೋನುಗಳಿಗಾಗಿ ಇರುವ ಕಿರುತಂತ್ರಾಂಶವಾಗಿದ್ದು ನ್ಯಾವಿಗೇಶನ್ App ಎನ್ನುತ್ತಾರೆ. ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಈ ವೇಜ್ ಕೂಡ ಅದರಂತೆಯೇ ಕಾರ್ಯನಿರ್ವಹಿಸುವ ತಂತ್ರಾಂಶ.  2017ಜುಲೈಯಲ್ಲಿ ಇದರ ಕನ್ನಡ ಆವೃತ್ತಿ ಬಿಡುಗಡೆಯಾಯಿತು. ಇದರೊಂದಿಗೆ ಕನ್ನಡವು ನ್ಯಾವಿಗೇಶನ್ ತಂತ್ರಜ್ಞಾನಕ್ಕೂ ಕೂಡ ಯಶಸ್ವಿಯಾಗಿ ಅಳವಡಿಕೆಯಾಗಬಹುದೆಂಬುದು ಕೂಡ ಸಿದ್ಧಪಡಿಸಲ್ಪಟ್ಟಿತು. ದಾರಿ ಮತ್ತು ದೂರ ಮಾಹಿತಿ, ರಸ್ತೆಯಲ್ಲಿ ಚಲಿಸುವಾಗ ಎಲ್ಲಿ ತಿರುಗಬೇಕು, ಎಷ್ಟು ದೂರ ಹೋಗಬೇಕು ಮುಂತಾದ ಸೂಚನೆಗಳನ್ನು ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ. ಈ ತಂತ್ರಾಂಶವು ಜಗತ್ತಿನ ಹಲವಾರು ಭಾಷೆಗಳಲ್ಲಿದೆ. ಹೀಗೆ ವಿವಿಧ ಭಾಷೆಗಳಲ್ಲಿ ತಯಾರಾಗಲು ಅವರು Translifex ವೇದಿಕೆ ಮೂಲಕ ಕ್ರೌಡ್ ಸೋರ್ಸಿಂಗ್ ಮಾಡಿದ್ದಾರೆ. ಅಂದರೆ ಆಯಾ ಭಾಷೆಯ ಬಳಕೆದಾರರು ತಮ್ಮ ಭಾಷೆಯ ಆವೃತ್ತಿಗಳನ್ನು ತರಲು ಅನುವಾದಗಳ ಕೊಡುಗೆ ಮಾಡಬಹುದು, ಉತ್ತಮಗೊಳಿಸಬಹುದು. ಕನ್ನಡದ ಉತ್ಸಾಹಿ ಗೆಳೆಯರ ಸತತ ಪರಿಶ್ರಮದಿಂದ ಇದರ ಕನ್ನಡ ಆವೃತ್ತಿ ತಯಾರಾಗಿದೆ. ಅದು ಇಲ್ಲಿದೆ: Waze - Maps & Navigation


ಇದಾದ ಒಂದು ತಿಂಗಳ ನಂತರ, ಸೆಪ್ಟೆಂಬರಲ್ಲಿ ಗೂಗಲ್ ಮ್ಯಾಪ್ ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಸಾಧ್ಯವಾಗಿದೆ. ತಮ್ಮ ಫೋನ್ ಭಾಷೆಯನ್ನು ಕನ್ನಡವನ್ನಾಗಿ ಮಾಡಿಕೊಂಡವರಿಗೆ ನ್ಯಾವಿಗೇಶನ್ ಕೂಡ ಕನ್ನಡದಲ್ಲಿಯೇ ದೊರೆಯುತ್ತಿದೆ. ಗೂಗಲ್ ಕೂಡ ತನ್ನ ಅನೇಕ ಸೇವೆಗಳನ್ನು ಕ್ರೌಡ್ ಸೋರ್ಸ್ ಮಾಡಿರುವುದು ಮತ್ತು ಅದರಿಂದಲೇ ವಿವಿಧ ಭಾಷೆಗಳ ಆವೃತ್ತಿಗಳು ತಯಾರಾಗಿಬರುತ್ತಿರುವುದು ಇಲ್ಲಿ ಗಮನಾರ್ಹ.

ಮತ್ತೊಂದೆರಡು ಬೆಳವಣಿಗೆಗಳೆಂದರೆ,
  • ೨೦೧೭ಆಗಸ್ಟ್ ತಿಂಗಳಲ್ಲಿ ಗೂಗಲ್ 'ದನಿ ಹುಡುಕಾಟ'ವು (Google Voice Search) ಕನ್ನಡದಲ್ಲೂ ಸಾಧ್ಯವಾಗಿದೆ
  • ೨೦೧೭ಸೆಪ್ಟೆಂಬರಲ್ಲಿ ಬಿಡುಗಡೆಯಾದ ಐ ಓಸ್ ೧೧ ಆವೃತ್ತಿಯಲ್ಲಿ ಇನ್ ಬಿಲ್ಟ್ ಕನ್ನಡ ಕೀಬೋರ್ಡ್ ಒದಗಿಸಲಾಗಿದೆ. ಇದರಿಂದ ಐ ಫೋನ್ ಮತ್ತು ಐಪ್ಯಾಡ್ ಗಳಲ್ಲಿ ಯಾವ ಹೊರತಂತ್ರಾಂಶದ ಅಗತ್ಯವಿಲ್ಲದೇ ಕನ್ನಡ ಟೈಪಿಂಗ್ ಸಾಧ್ಯ.

ಇದರಿಂದ  ತಿಳಿಯುವುದೇನೆಂದರೆ, ಭಾಷೆಯ ಬಳಕೆ ಹೆಚ್ಚಿದಷ್ಟೂ ಬೆಳವಣಿಗೆಯೂ ಸಾಧ್ಯ. ಹಾಗಾಗಿ ಆಸಕ್ತಿಯಿರುವವರು  ಕನ್ನಡಕ್ಕಾಗಿ ಈ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. (ಇಲ್ಲಿ ನೋಡಿ: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್)ಆಗದಿದ್ದವರು ಕೊನೇಪಕ್ಷ ತಾವು ಬಳಸುವ ಜಾಲತಾಣ, ಆಪ್ ಮುಂತಾದ ತಂತ್ರಜ್ಞಾನಗಳಲ್ಲಿ ಭಾಷೆಯನ್ನು ಕನ್ನಡಕ್ಕೆ ಮಾಡಿಕೊಂಡು ಬಳಸುವುದರ ಮೂಲಕ ಬಳಕೆದಾರರ ಸಂಖ್ಯೆ ಹೆಚ್ಚಿಸಿ ಬೆಳವಣಿಗೆಗೆ ಕಾರಣರಾಗಬಹುದು. 

2 ಕಾಮೆಂಟ್‌ಗಳು:

sunaath ಹೇಳಿದರು...

ಧನ್ಯವಾದಗಳು, ವಿರಾಹೆ!
ಶ್ರೀ ಕುವೆಂಪು ಈಗಿದ್ದರೆ, ಖಂಡಿತವಾಗಿಯೂ ಸಂತೋಷಪಡುತ್ತಿದ್ದರು:
‘ಕನ್ನಡವೆನೆ ಕುಣಿದಾಡುವುದೆನ್ನೆದೆ
ಕನ್ನಡವೆನೆ ಕಿವಿ ನಿಮಿರುವುದು’
-ಕುವೆಂಪು

ಸೋಮಶೇಖರ್ ಹೇಳಿದರು...

ಹಾಯ್ ಸಾರ್ ನಿಮ್ಮ ಬ್ಲಾಗ್ ನೋಡಿ ತುಂಬ ಕುಶಿ ಆಯ್ತು.
ನಿಮ್ಮ ಬ್ಲಾಗ್ ಅನ್ನು ಪಂಚತಂತ್ರ ಎಂಬ ಕನ್ನಡ ತಂತ್ರಾಂಶ ದಲ್ಲಿ ಸೆರಿಸಿದ್ಡಿನಿ ಸಾರ್
ಸಮಸ್ತ ಕರ್ನಾಟಕದ ಸರ್ಕಾರಿ ಸೇವೆಗಳಾದ
*ಗ್ರಾಮ ಪಂಚಾಯಿತಿ
*ಭೂಮಿ ಸರ್ವೆ
*ಉದ್ಯೋಗ ಸೌದ
*ಆನ್ಲೈನ್ ರೇಡಿಯೋ
*ಜಿಲ್ಲಾ ವೆಬ್ ಸೈಟ್ಗಗಳು
*ಜಿಲ್ಲಾ ಪಂಚಾಯತ್
*ಆನ್ಲೈ ನ್ ಶಾಪಿಂಗ್ ಕ್ಯಾಶ್ ಬ್ಯಾಕ್
* ಕನ್ನಡ ನ್ಯೂಸ್
https://play.google.com/store/apps/details?id=ap290684.xrj