ಶುಕ್ರವಾರ, ಅಕ್ಟೋಬರ್ 10, 2008

ಹೀಗೊಂದು ಕಾರ್ಯಕ್ರಮವೂ ಮತ್ತು ಜನರ ಪ್ರೀತಿಯೂ..

ಬರೆದದ್ದು ತಡವಾಯಿತೆನೋ, ಆದರೂ ಇರಲಿ.

ಅಕ್ಟೋಬರ್ ೫, ಅಂದರೆ ಹಿಂದಿನ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿದ್ದು ಭರ್ತಿ ಕೆಲಸಾವಿರ ಜನ! ಅದು ತುಂಬಿ ನಂತರ ಹಿಂದಿನ ಸಂಸ ಬಯಲು ರಂಗಮಂದಿರವೂ ತುಳುಕುವ ಹೊತ್ತಿಗೆ ಇನ್ನು ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ಈ ಬೆಂಗಳೂರಲ್ಲಿ ಸಾವಿರ ಜನ ಸೇರುವುದು ದೊಡ್ಡ ವಿಷಯವಾ, ಅದರಲ್ಲೇನು ವಿಶೇಷ ಎನ್ನುತ್ತೀರಾ? ನಿಜ,ಇಲ್ಲಿ ಬಿಗ್ ಬಜಾರಲ್ಲಿ ಡಿಸ್ಕೌಂಟ್ ಹಾಕಿದರೂ ಸಾವಿರ ಜನ ಸೇರುತ್ತಾರೆ, ಅಣ್ಣಮ್ಮನ ಜಾತ್ರೆಗೂ ಕನಿಷ್ಠ ಸಾವಿರ ಜನ ಸೇರುತ್ತಾರೆ, ದೇವೇಗೌಡರ ಭಾಷಣಕ್ಕೂ ಸೇರುತ್ತಾರೆ, ಕೊನೆಗೆ ಒದೆ ತಿಂದ ನಾಯಿಮರಿಯಂತೆ ಅರಚುವ ವಿದೇಶಿ ಹಾಡುಗಾರನೊಬ್ಬ ಬಂದರೂ ತೋರು ಬೆರಳು, ಕಿರುಬೆರಳು ಮೇಲೆತ್ತಿಕೊಂಡು ಎಷ್ಟೋ ಸಾವಿರ ಜನ ಸೇರಿಬಿಡುತ್ತಾರೆ. ಆದರೆ ಅವತ್ತು ಕಲಾಕ್ಷೇತ್ರಕ್ಕೆ ಬಂದವರ್ಯಾರನ್ನೂ ಯಾರೂ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಕರೆದಿರಲಿಲ್ಲ, ಕರೆತಂದಿರಲಿಲ್ಲ, ಬಂದವರ್ಯಾರೂ ಟಿಕೇಟು ಖರೀದಿಸಿ ಬಂದಿರಲಿಲ್ಲ. ಹೇಗೂ ಮಳೆ ಬಂದಿದೆ, ಜನ ಕಡಿಮೆಯಿರುತ್ತಾರೆ ಎಂದುಕೊಂಡು ಹೋದವರಿಗೆ ಬಾಗಿಲ ಹತ್ತಿರವೂ ಹೋಗಲಿಕ್ಕಾಗಲಿಲ್ಲ!

ಲಾಲ್ ಬಹದ್ದೂರ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ಅವತ್ತಿನ ಮುಖ್ಯ ಅತಿಥಿಗಳಾಗಿದ್ದರು. ರಾಹುಲ್ ಗಾಂಧಿ ಬಂದರೆ ಅವನು ಕೆಮ್ಮಿದ್ದನ್ನೂ, ಸೀನಿದ್ದನ್ನೂ ನೇರಪ್ರಸಾರ ಮಾಡಿ ಬ್ರೇಕಿಂಗ್ ನ್ಯೂಸ್ ಮಾಡುವ ಮಾಧ್ಯಮಗಳ ಕ್ಯಾಮೆರಾಗಳೂವುವೂ ಶಾಸ್ತ್ರಿಯವರ ಬೆನ್ನಿಗೆ ಕಾಣಲಿಲ್ಲ! ಲಾಲ್ ಬಹದ್ದೂರ್ ಶಾಸ್ತ್ರಿಗಳಿಗೆ ಜೈ ಎಂದು ಭಾವೋದ್ರೇಕದಿಂದ ಜನ ಜೈಕಾರ ಹಾಕಿದಾಗ ಸುನಿಲ್ ಶಾಸ್ತ್ರಿಗಳು ಭಾವಪರವಶರಾಗಿ ಕೈ ಮುಗಿದರು.

ವಿಷಯ ಅದಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇವತ್ತಿನ ದಿನಗಳಲ್ಲಿ ರಾಜಕೀಯ, ಸಿನೆಮಾ, ಕ್ರಿಕೆಟ್ ಮತ್ತು ಧರ್ಮದ ಹಿಂದೆ ಮಾತ್ರ ಜನರಿದ್ದಾರೆ ಎಂಬ ಕಲ್ಪನೆಯನ್ನು ಆ ಕಾರ್ಯಕ್ರಮ ಸುಳ್ಳು ಮಾಡಿತು. ಒಂದು ಪತ್ರಿಕೆಗೂ, ಪತ್ರಿಕೆಯ ಸಂಪಾದಕನಿಗೂ ಆ ಪರಿ ಓದುಗವರ್ಗ, ಅಭಿಮಾನಿ ವರ್ಗವಿರಲು ಸಾಧ್ಯ ಎಂಬುದನ್ನು ಅದು ಸಾಬೀತುಪಡಿಸುವುದರ ಜೊತೆಗೆ ಕನ್ನಡ ಬರವಣಿಗೆಯ ಲೋಕಕ್ಕೆ ಇಷ್ಟು ಅಭಿಮಾನಿಗಳಿದ್ದಾರೆ ಎಂಬುದಕ್ಕೆ ನಿದರ್ಶನವೆಂಬತ್ತಿತ್ತು. ಬಹುಶ: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅಷ್ಟೆ ಏಕೆ ಇಡೀ ಭಾರತದಲ್ಲೂ ಕೂಡ ಯಾವ ಬರಹಗಾರನ ಕಾರ್ಯಕ್ರಮವೊಂದಕ್ಕೆ ಹೀಗೆ ಜನ (ಹೆಣ್ಣುಮಕ್ಕಳು ಸೇರಿ) ತಾವಾಗಿಯೇ ಬಂದದ್ದು ಇಲ್ಲವೇನೋ!

ಆತನ ಆತ್ಮಸ್ತುತಿ, ಕ್ರೈಂ ವೈಭವೀಕರಣ, ಇಂಗ್ಲೀಷ್ ವ್ಯಾಮೋಹ , ಪೀತ ಪತ್ರಿಕೋದ್ಯಮದ ವಿವಿಧ ಆರೋಪಗಳು, ಇನ್ನಿತರ ಅಸಡ್ಡಾಳತನಗಳ ನಡುವೆಯೂ ಕನ್ನಡ ಒಂದು ಪೀಳಿಗೆಯನ್ನೇ ಓದಿಗೆ ಹಚ್ಚಿದ, ಓದದೇ ಇದ್ದ ವರ್ಗವನ್ನೂ ಓದಲು ತೊಡಗಿಸಿದ, ಕನ್ನಡಕ್ಕೆ ಕೆಲ ಉತ್ತಮ ಪುಸ್ತಕಗಳನ್ನು ತಂದುಕೊಟ್ಟ, ಸಮತೋಲನ ಕಾಯ್ದುಕೊಂಡ, ಕನ್ನಡ ಓದನ್ನು ಒಂದು fashion ಹಾಗೂ passion ಆಗಿಸಿದ ಆ ’ದೈತ್ಯ’ ಬರಹಗಾರನಿಗೆ, ಆತನ ಬರವಣಿಗೆಗೆ ಪ್ರೀತಿಯಿಂದ ಒಂದು ಧನ್ಯವಾದ ಹೇಳೋಣವೆನಿಸಿತು.

ಅಂದಹಾಗೆ ಇಷ್ಟು ಹೊತ್ತಿಗಾಗಲೇ ಗೊತ್ತಾಗಿರಬಹುದು..

ಆತನ ಹೆಸರು "ರವಿ ಬೆಳಗೆರೆ"

ಅವತ್ತಿದ್ದ ಕಾರ್ಯಕ್ರಮ ’ಹಾಯ್ ಬೆಂಗಳೂರ್’ ಪತ್ರಿಕೆಯ ೧೩ನೇ ಹುಟ್ಟುಹಬ್ಬ!

****

ವೇದಿಕೆಯ ಮೇಲೆ ಸುನಿಲ್ ಶಾಸ್ತ್ರಿ, ಮೀರಾ ಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ವಿಶ್ವೇಶ್ವರ ಭಟ್ಟರು, ಬಳ್ಳಾರಿ ಧಣಿಗಳ ಜೊತೆಗೆ ಮುತ್ತಪ್ಪ ರೈ ಕೂಡ ಇದ್ದಿದ್ದರೆ ಕಾರ್ಯಕ್ರಮದ ಖದರ್ರೇ ಬೇರೆ ಇರುತ್ತಿತ್ತು ಎಂದು ಕಲ್ಬುರ್ಗಿ ಕಡೆಯಿಂದ ಬಂದವರೊಬ್ಬರು ಸುಮ್ಮನೇ ತಮಾಷೆ ಮಾಡುತ್ತಿದ್ದರು :)

ಬುಧವಾರ, ಅಕ್ಟೋಬರ್ 1, 2008

ಜೈ ಗಣೇಶ



ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್.. ಡಂಕನಕ್ಕ ಡಕ್ಕ ನಕ್ಕ ಡಕ್ಕ ಡಂಗ್..

ಶಬ್ದ ದೂರದಲ್ಲೆಲ್ಲೋ ಕೇಳಿಬರುತ್ತದೆ. ಕಿವಿ ಅರಳುತ್ತದೆ. ಶಬ್ದ ಹತ್ತಿರವಾಗುತ್ತಿದೆ. ಹೊರಗೆ ಬಂದು ನೋಡುತ್ತೇನೆ , ಅರ್ರೆ! ನಮ್ಮನೆ ಹತ್ತಿರಕ್ಕೇ ಬರುತ್ತಿದೆ ಆ ಶಬ್ದ. ಮನಸ್ಸು ಆಯಾಚಿತವಾಗಿ ಕುಣಿಲಾರಂಭಿಸುತ್ತದೆ. ಅದೇನು ತಾಳ, ಅದೇನು ಮೇಳ! ಶಬ್ದ ಹಾಗೇ ತಾರಕಕ್ಕೇರುತ್ತದೆ, ಮತ್ತೆ ಲಯದಲ್ಲಿ ಕೆಳಗಿಳಿಯುತ್ತಾ ಬರುತ್ತದೆ. ಟ್ರಾಕ್ಟರಿನ ಮೇಲೊಂದು ದೊಡ್ಡ ಗಣೇಶ. ಭಾರೀ ಅಲಂಕಾರ, ಜಗಮಗಿಸುವ ದೀಪಗಳು ಹರಿದಾಡುತ್ತಿವೆ. ಅದರ ಮುಂದೆ ಒಂದಿಷ್ಟು ಜನ ತಮಟೆ ಬಾರಿಸುತ್ತಿದ್ದಾರೆ. ಯಾವ ಸಂಗೀತ ಶಾಲೆಯಲ್ಲಿ ಕಲಿತವರಲ್ಲ, ಯಾವ ತರಬೇತಿ ಪಡೆದವರಲ್ಲ. ಮುಂದೆ ಒಂದಿಪ್ಪತ್ತು ಜನ ಕುಣಿಯುತ್ತಿದ್ದಾರೆ, ಮೈ ಮರೆತು.. ಪ್ರಪಂಚ ಮರೆತು. ಆಹ್, ಹೋಗಿ ಜೊತೆಗೊಂದು ಸ್ಟೆಪ್ ಹಾಕಲೇ? ಒಟ್ಟಾರೆ ಹಬ್ಬದ ವಾತಾವರಣವೆಂದರೆ ಇದು.

ಈ ಬೆಂಗಳೂರಲ್ಲಿ ವಿಚಿತ್ರ. ನವಂಬರ್ ನಲ್ಲಿ ಟೆಂಟು ಕಟ್ಟುತ್ತಾ ಇರುತ್ತಾರೆ. "ಅಣ್ಣಾ, ರಾಜ್ಯೋತ್ಸವನಾ?" ಅಂತ ಕೇಳಿದ್ರೆ , "ರಾಜ್ಯೋಸ್ತವ ಅಲ್ಲ ಸಾರ್, ಗಣೇಶ" ಅಂತಾರೆ. ಆ ಟೆಂಟು, ಆ ವಿಚಿತ್ರ ಗಣೇಶ ಮೂರ್ತಿಗಳು, ಆ ಪೂಜೆ, ಆ ಪ್ರಸಾದ, ಆ ಮೈಕು, ಆ ಲೌಡ್ ಸ್ಪೀಕರು, ಆ ಹಾಡು, ಆ ಆರ್ಕೆಸ್ಟ್ರಾ ಯಾವುದೂ ನನ್ನ ಆಸಕ್ತಿ ಕೆರಳಿಸುವುದಿಲ್ಲ. ಸುಮ್ಮನೇ ಕಿರಿಕಿರಿ ಅಂದುಕೊಂಡು ಮುಂದೆ ಹೋಗುತ್ತೇನೆ. ಆದರೆ ಈ ತಮಟೆ ವಿಷಯಕ್ಕೆ ಬಂದಾಗ ಮಾತ್ರ ಎಲ್ಲಾ ಕಿರಿಕಿರಿಗಳೂ ಮರೆತುಹೋಗುತ್ತವೆ. ಪ್ರತಿವರ್ಷ ತಮಟೆ ಶಬ್ದ ಕೇಳಲಾದರೂ ಇವೆಲ್ಲಾ ಕಿರಿಕಿರಿಗಳನ್ನು ಸಹಿಸಿಕೊಳ್ಳಬಹುದು ಎನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲೂ ಕೂರಿಸಿದ್ದ ಗಣೇಶನನ್ನು ನೋಡುವುದಕ್ಕಿಂದ ಗಣೇಶನನ್ನು ಬಿಡುವುದನ್ನು ನೋಡುವುದು, ಆ ತಮಟೆ ಶಬ್ದ , ಆ ಹೆಜ್ಜೆ ತಪ್ಪಿದ ಕುಣಿತಗಳನ್ನು ಆನಂದಿಸುವುದೇ ಮಜಾ. ಗೆಳೆಯರು ನೀನು ಹರಿಶ್ಚಂದ್ರ ಘಾಟಿನ ಹತ್ತಿರವೆ ಮನೆ ಮಾಡು ಎನ್ನುತ್ತಾರೆ. ರಸ್ತೆಯಲ್ಲಿ ಗಣೇಶ ಹೊರಟನೆಂದರೆ ನೆಡೆಯುತ್ತಿದ್ದ ಕಾಲುಗಳು ಅಲ್ಲೇ ನಿಲ್ಲುತ್ತವೆ, ಓಡುತ್ತಿದ್ದ ಬೈಕಿಗೆ ಸೈಡ್ ಸ್ಟ್ಯಾಂಡು ಬೀಳುತ್ತದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೆ ನಾನು ತಬಲಾ ನುಡಿಸುವುದನ್ನು ಕಲಿಯುವ ಬದಲು ತಮಟೆ ಹೊಡೆಯುವುದನ್ನೇ ಕಲಿತುಬಿಡುತ್ತಿದ್ದನಾ! ಗೊತ್ತಿಲ್ಲ.


ದೇವರಿಂದ ಮನುಷ್ಯನೋ, ಮನುಷ್ಯನಿಂದ ದೇವರೋ ಎಂಬ ಮಾತು ಪಕ್ಕಕ್ಕಿರಲಿ.
ಇದೊಂದು ಕಾರಣಕ್ಕಾಗಿಯೇ ಯಾವ ಕಾರಣವೂ ಇಲ್ಲದೇ ಗಣೇಶನನ್ನು ಪ್ರೀತಿಸದೇ ಇರಲು ನನ್ನಿಂದ ಸಾಧ್ಯವಿಲ್ಲ. ನಾನೇನಿದ್ದರೂ ’ಫುಲ್ ಲೋಕಲ್ಲು’.

ಜೈ ಗಣೇಶ.



ಮೇಲಿನ ಚಿತ್ರದಲ್ಲಿರೋದು ಈ ಸಾರ್ತಿಯ ನಮ್ಮ ಗಲ್ಲಿಯ ಗಣಪ.