ಶುಕ್ರವಾರ, ಅಕ್ಟೋಬರ್ 10, 2008

ಹೀಗೊಂದು ಕಾರ್ಯಕ್ರಮವೂ ಮತ್ತು ಜನರ ಪ್ರೀತಿಯೂ..

ಬರೆದದ್ದು ತಡವಾಯಿತೆನೋ, ಆದರೂ ಇರಲಿ.

ಅಕ್ಟೋಬರ್ ೫, ಅಂದರೆ ಹಿಂದಿನ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿದ್ದು ಭರ್ತಿ ಕೆಲಸಾವಿರ ಜನ! ಅದು ತುಂಬಿ ನಂತರ ಹಿಂದಿನ ಸಂಸ ಬಯಲು ರಂಗಮಂದಿರವೂ ತುಳುಕುವ ಹೊತ್ತಿಗೆ ಇನ್ನು ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ಈ ಬೆಂಗಳೂರಲ್ಲಿ ಸಾವಿರ ಜನ ಸೇರುವುದು ದೊಡ್ಡ ವಿಷಯವಾ, ಅದರಲ್ಲೇನು ವಿಶೇಷ ಎನ್ನುತ್ತೀರಾ? ನಿಜ,ಇಲ್ಲಿ ಬಿಗ್ ಬಜಾರಲ್ಲಿ ಡಿಸ್ಕೌಂಟ್ ಹಾಕಿದರೂ ಸಾವಿರ ಜನ ಸೇರುತ್ತಾರೆ, ಅಣ್ಣಮ್ಮನ ಜಾತ್ರೆಗೂ ಕನಿಷ್ಠ ಸಾವಿರ ಜನ ಸೇರುತ್ತಾರೆ, ದೇವೇಗೌಡರ ಭಾಷಣಕ್ಕೂ ಸೇರುತ್ತಾರೆ, ಕೊನೆಗೆ ಒದೆ ತಿಂದ ನಾಯಿಮರಿಯಂತೆ ಅರಚುವ ವಿದೇಶಿ ಹಾಡುಗಾರನೊಬ್ಬ ಬಂದರೂ ತೋರು ಬೆರಳು, ಕಿರುಬೆರಳು ಮೇಲೆತ್ತಿಕೊಂಡು ಎಷ್ಟೋ ಸಾವಿರ ಜನ ಸೇರಿಬಿಡುತ್ತಾರೆ. ಆದರೆ ಅವತ್ತು ಕಲಾಕ್ಷೇತ್ರಕ್ಕೆ ಬಂದವರ್ಯಾರನ್ನೂ ಯಾರೂ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಕರೆದಿರಲಿಲ್ಲ, ಕರೆತಂದಿರಲಿಲ್ಲ, ಬಂದವರ್ಯಾರೂ ಟಿಕೇಟು ಖರೀದಿಸಿ ಬಂದಿರಲಿಲ್ಲ. ಹೇಗೂ ಮಳೆ ಬಂದಿದೆ, ಜನ ಕಡಿಮೆಯಿರುತ್ತಾರೆ ಎಂದುಕೊಂಡು ಹೋದವರಿಗೆ ಬಾಗಿಲ ಹತ್ತಿರವೂ ಹೋಗಲಿಕ್ಕಾಗಲಿಲ್ಲ!

ಲಾಲ್ ಬಹದ್ದೂರ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ಅವತ್ತಿನ ಮುಖ್ಯ ಅತಿಥಿಗಳಾಗಿದ್ದರು. ರಾಹುಲ್ ಗಾಂಧಿ ಬಂದರೆ ಅವನು ಕೆಮ್ಮಿದ್ದನ್ನೂ, ಸೀನಿದ್ದನ್ನೂ ನೇರಪ್ರಸಾರ ಮಾಡಿ ಬ್ರೇಕಿಂಗ್ ನ್ಯೂಸ್ ಮಾಡುವ ಮಾಧ್ಯಮಗಳ ಕ್ಯಾಮೆರಾಗಳೂವುವೂ ಶಾಸ್ತ್ರಿಯವರ ಬೆನ್ನಿಗೆ ಕಾಣಲಿಲ್ಲ! ಲಾಲ್ ಬಹದ್ದೂರ್ ಶಾಸ್ತ್ರಿಗಳಿಗೆ ಜೈ ಎಂದು ಭಾವೋದ್ರೇಕದಿಂದ ಜನ ಜೈಕಾರ ಹಾಕಿದಾಗ ಸುನಿಲ್ ಶಾಸ್ತ್ರಿಗಳು ಭಾವಪರವಶರಾಗಿ ಕೈ ಮುಗಿದರು.

ವಿಷಯ ಅದಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇವತ್ತಿನ ದಿನಗಳಲ್ಲಿ ರಾಜಕೀಯ, ಸಿನೆಮಾ, ಕ್ರಿಕೆಟ್ ಮತ್ತು ಧರ್ಮದ ಹಿಂದೆ ಮಾತ್ರ ಜನರಿದ್ದಾರೆ ಎಂಬ ಕಲ್ಪನೆಯನ್ನು ಆ ಕಾರ್ಯಕ್ರಮ ಸುಳ್ಳು ಮಾಡಿತು. ಒಂದು ಪತ್ರಿಕೆಗೂ, ಪತ್ರಿಕೆಯ ಸಂಪಾದಕನಿಗೂ ಆ ಪರಿ ಓದುಗವರ್ಗ, ಅಭಿಮಾನಿ ವರ್ಗವಿರಲು ಸಾಧ್ಯ ಎಂಬುದನ್ನು ಅದು ಸಾಬೀತುಪಡಿಸುವುದರ ಜೊತೆಗೆ ಕನ್ನಡ ಬರವಣಿಗೆಯ ಲೋಕಕ್ಕೆ ಇಷ್ಟು ಅಭಿಮಾನಿಗಳಿದ್ದಾರೆ ಎಂಬುದಕ್ಕೆ ನಿದರ್ಶನವೆಂಬತ್ತಿತ್ತು. ಬಹುಶ: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅಷ್ಟೆ ಏಕೆ ಇಡೀ ಭಾರತದಲ್ಲೂ ಕೂಡ ಯಾವ ಬರಹಗಾರನ ಕಾರ್ಯಕ್ರಮವೊಂದಕ್ಕೆ ಹೀಗೆ ಜನ (ಹೆಣ್ಣುಮಕ್ಕಳು ಸೇರಿ) ತಾವಾಗಿಯೇ ಬಂದದ್ದು ಇಲ್ಲವೇನೋ!

ಆತನ ಆತ್ಮಸ್ತುತಿ, ಕ್ರೈಂ ವೈಭವೀಕರಣ, ಇಂಗ್ಲೀಷ್ ವ್ಯಾಮೋಹ , ಪೀತ ಪತ್ರಿಕೋದ್ಯಮದ ವಿವಿಧ ಆರೋಪಗಳು, ಇನ್ನಿತರ ಅಸಡ್ಡಾಳತನಗಳ ನಡುವೆಯೂ ಕನ್ನಡ ಒಂದು ಪೀಳಿಗೆಯನ್ನೇ ಓದಿಗೆ ಹಚ್ಚಿದ, ಓದದೇ ಇದ್ದ ವರ್ಗವನ್ನೂ ಓದಲು ತೊಡಗಿಸಿದ, ಕನ್ನಡಕ್ಕೆ ಕೆಲ ಉತ್ತಮ ಪುಸ್ತಕಗಳನ್ನು ತಂದುಕೊಟ್ಟ, ಸಮತೋಲನ ಕಾಯ್ದುಕೊಂಡ, ಕನ್ನಡ ಓದನ್ನು ಒಂದು fashion ಹಾಗೂ passion ಆಗಿಸಿದ ಆ ’ದೈತ್ಯ’ ಬರಹಗಾರನಿಗೆ, ಆತನ ಬರವಣಿಗೆಗೆ ಪ್ರೀತಿಯಿಂದ ಒಂದು ಧನ್ಯವಾದ ಹೇಳೋಣವೆನಿಸಿತು.

ಅಂದಹಾಗೆ ಇಷ್ಟು ಹೊತ್ತಿಗಾಗಲೇ ಗೊತ್ತಾಗಿರಬಹುದು..

ಆತನ ಹೆಸರು "ರವಿ ಬೆಳಗೆರೆ"

ಅವತ್ತಿದ್ದ ಕಾರ್ಯಕ್ರಮ ’ಹಾಯ್ ಬೆಂಗಳೂರ್’ ಪತ್ರಿಕೆಯ ೧೩ನೇ ಹುಟ್ಟುಹಬ್ಬ!

****

ವೇದಿಕೆಯ ಮೇಲೆ ಸುನಿಲ್ ಶಾಸ್ತ್ರಿ, ಮೀರಾ ಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ವಿಶ್ವೇಶ್ವರ ಭಟ್ಟರು, ಬಳ್ಳಾರಿ ಧಣಿಗಳ ಜೊತೆಗೆ ಮುತ್ತಪ್ಪ ರೈ ಕೂಡ ಇದ್ದಿದ್ದರೆ ಕಾರ್ಯಕ್ರಮದ ಖದರ್ರೇ ಬೇರೆ ಇರುತ್ತಿತ್ತು ಎಂದು ಕಲ್ಬುರ್ಗಿ ಕಡೆಯಿಂದ ಬಂದವರೊಬ್ಬರು ಸುಮ್ಮನೇ ತಮಾಷೆ ಮಾಡುತ್ತಿದ್ದರು :)

18 ಕಾಮೆಂಟ್‌ಗಳು:

Supreeth.K.S ಹೇಳಿದರು...

ಹೌದು ಆ ಮಟ್ಟಿಗೆ ಜನರ ಪ್ರೀತಿಯನ್ನು, ನಂಬಿಕೆ, ವಿಶ್ವಾಸವನ್ನು ಸಂಪಾದಿಸಿಕೊಂಡಿರುವ ರವಿ ಬೆಳಗೆರೆಯವರನ್ನು ಅಭಿನಂದಿಸಲೇಬೇಕು. ಈಸಿ ಚೇರ್ ಬುದ್ಧಿಜೀವಿಗಳಿಗಿಂತ ಜನರೊಂದಿಗೆ ಬೆರೆತು ಅವರ ಜೀವನವನ್ನು ಪ್ರಭಾವಿಸುವ ಲೇಖಕರು ನಮಗೆ ಮುಖ್ಯ ಅನ್ನಿಸುತ್ತದೆ.
ಅಂದು ನಾನು ಬರದೆ ಕಾರ್ಯಕ್ರಮದ ಸಂಭ್ರಮವನ್ನು ಮಿಸ್ ಮಾಡಿಕೊಂಡೆ ಅನ್ನಿಸುತ್ತದೆ:)

ಸುಪ್ರೀತ್

Unknown ಹೇಳಿದರು...

ರವಿ ಬೆಳೆಗೆರೆ ಒಬ್ಬ ಒಳ್ಳೆಯ ಬರಹಗಾರ. ಆತನ ಬರವಣಿಗೆಯಲ್ಲಿ ಏನೋ ಓಂದು ಸಮ್ಮೋಹನವಿದೆ. ಆದರೆ ಆತನ ಶಕ್ತಿ ವ್ಯರ್ಥವಾಗಿ ಪೋಲಾಗುತ್ತಿದೆಯಲ್ಲ ಅನ್ನಿಸುತ್ತದೆ. ಯಾವುದೇ ಒಂದು ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ಆತ ತಾಳುವ ಏಕಮುಖೇನ ಬರಹಗಳು ಆತ ಉಪಯೋಗಿಸುವ ಶಬ್ದಗಳು ಹೇಸಿಗೆ ತರುವಂತಹವು. ಭರತ ಭೂಮಿಯಲ್ಲಿ ಒಂದು ಹೆಣ್ಣಿಗೆ ಮತ್ತು ಸಾದು ಸಂತರಿಗೆ ಬಹಳ ಗೌರವದ ಸ್ಥಾನ ಇದೆ. ಆದರೆ ತನ್ನ ಪತ್ರಿಕೆ ಮಾರಾಟವಾಗಬೇಕು ಎನ್ನುವ ಏಕೈಕ ಉದ್ದೇಶದಿಂದ ಆತ ಪತ್ರಿಕೆಯಲ್ಲಿ ಬಳಸುವ ಶಬ್ದಗಳು ಮನಸ್ಸಿಗೆ ನೋವುಂಟುಮಾಡುತ್ತದೆ.

ಬೇರೆಯವರ ಬಗ್ಗೆ ಬರೆಯುವಾಗ ತಾನು ಎಷ್ಟು ಸಂಭಾವಿತ ಅನ್ನೋದನ್ನ ಗಮನಿಸಬೇಕು. ಬೇರೆ ಹೆಣ್ಣಿನ ಬಗ್ಗೆ ಬರೆಯುವಾಗ ತನ್ನ ಹೆಂಡತಿ/ಅಮ್ಮ/ಮಗಳು ಒಂದು ಹೆಣ್ಣು ಅಂತ ಮನಸ್ಸಲ್ಲಿ ಇರಬೇಕು ಅದರಲ್ಲೂ ಹೆಣ್ಣಿನ ಶೀಲದ ಬಗ್ಗೆ ಬರೆಯುವಾಗ ಬಹಳ ಯೋಚಿಸಬೇಕು. ಹೆಣ್ಣನ್ನು ಬರಿ ಕಾಮದ ದೃಷ್ಟಿಯಲ್ಲಿ ನೋಡುತ್ತಿರುವ ಇಂದಿನ ಸಮಾಜದಲ್ಲಿ ಅವಳ ಶೀಲದ ಬಗ್ಗೆ ಬರೆದರೆ ಬದುಕಲಿಕ್ಕೆ ಎಷ್ಟು ಕಷ್ಟ ಅಲ್ಲವೆ ? ಅದೇ ಬೇರೆ ಹೆಣ್ಣು ಮಕ್ಕಳ ಬಗ್ಗೆ ಬರಿಯೋ ರವಿ ಬೆಳೆಗೆರೆ ತನ್ನ ಮಗಳು ಬಾಯ್ ಫ್ರೆಂಡಿನ ಜೊತೆ ಎರಡು ವರ್ಷ ಮದುವೆಯಾಗದೇ ಮುಂಬೈನಲ್ಲಿ ಇದ್ದಿದ್ದನ್ನು ಬೇರೆ ಪತ್ರಿಕೆಯವರು ಬರೆದರೆ ಸುಮ್ಮನೆ ಇರ್ತಾನೆಯೇ? ಪತ್ರಿಕೆಯಲ್ಲಿ ಬರಿತೀನಿ ಅಂತ ಹಣ ವಸೂಲು ಮಾಡೋದು ಇವನ ಕಾಯಕ.

ಬಳ್ಳಾರಿ ದಣಿಗಳನ್ನು ವಾಮಾಚಾರವಾಗಿ ಬೈಯುತ್ತಿದ್ದ ಈತ ಚುನಾವಣೆ ಸಮಯದಲ್ಲಿ ಅವರ ಪರ ಪ್ರಚಾರ ಮಾಡಿದ್ದೇಕೆ? ನಿಸ್ಸಂಶಯವಾಗಿ ಅಲ್ಲಿ ಹಣದ ವ್ಯವಹಾರ ನಡೆದಿದೆ. ಹೇಳೋದು ಒಂದು, ಮಾಡೋದು ಇನ್ನೊಂದು.

ಅದೇ ಆತನಲ್ಲಿ ಇರೋ ಬರವಣಿಗೆಯನ್ನು ಒಳ್ಳೆಯ ವಿಚಾರಗಳಿಗೆ ಉಪಯೋಗಿಸಲಿ. ಇದು ನನ್ನ ವಯಕ್ತಿಕ ಅಭಿಪ್ರಾಯ.

ವಿಕಾಸ್, ನಿಮ್ಮ ಬರವಣಿಗೆ ಶೈಲಿ ಹಿಡಿಸಿತು. ತುಂಬಾ ಚೆನ್ನಾಗಿ ಬರಿತೀರಾ.

ಅನಾಮಧೇಯ ಹೇಳಿದರು...

ಹೌದು. ಈ ಕಾರ್ಯಕ್ರಮದ ಬಗ್ಗೆ ನಾನೂ ಓದಿದೆ. ನೀವೆಂದಿದ್ದು ನಿಜ. ಉಳಿದ ಆರೋಪ, ಸತ್ಯಗಳು ಏನೇ ಇದ್ದರೂ ಒಂದು ಪೀಳಿಗೆಯನ್ನು ಓದಲು ಹಚ್ಚಿದ್ದು, ಅದರಲ್ಲೂ ಯುವ ಜನಾಂಗಕ್ಕೆ ಕನ್ನಡ ಬರಹಗಳ ಬಗ್ಗೆ ಪ್ರೀತಿ ಹುಟ್ಟಿಸಿದ್ದು ಆತನ ಸಾಧನೆಯೇ. ಆ ಬಗ್ಗೆ ಎರಡು ಮಾತಿಲ್ಲ.

Parisarapremi ಹೇಳಿದರು...

ಬೆಳಗೆರೆ ವಿಷ್ಯನ ಒಳ್ಳೇ ಬೆಳಗೆರೆ ಸ್ಟೈಲ್‍ನಲ್ಲೇ ಬರೆದಿದ್ದೀರ. :-)

ನನಗೂ ಹಾಯ್ ಬೆಂಗಳೂರಿನ ಅನ್ನದ ಋಣವಿದೆ...

ಚಿತ್ರಾ ಸಂತೋಷ್ ಹೇಳಿದರು...

"ಲಾಲ್ ಬಹದ್ದೂರ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ಅವತ್ತಿನ ಮುಖ್ಯ ಅತಿಥಿಗಳಾಗಿದ್ದರು. ರಾಹುಲ್ ಗಾಂಧಿ ಬಂದರೆ ಅವನು ಕೆಮ್ಮಿದ್ದನ್ನೂ, ಸೀನಿದ್ದನ್ನೂ ಬ್ರೇಕಿಂಗ್ ನ್ಯೂಸ್ ಮಾಡುವ ಮಾಧ್ಯಮಗಳ ಕ್ಯಾಮೆರಾಗಳೂವುವೂ ಶಾಸ್ತ್ರಿಯವರ ಬೆನ್ನಿಗೆ ಕಾಣಲಿಲ್ಲ!"-ಒಳ್ಳೆಯ ವಿಚಾರವನ್ನೇ ಹೇಳಿದ್ದೀರಿ.
-ಚಿತ್ರಾ

ಸಂದೀಪ್ ಕಾಮತ್ ಹೇಳಿದರು...

ನಂಗೂ ರವಿಯ ಬಗ್ಗೆ ಹಲವಾರು ಅಸಮಾಧಾನ ಇದೆ .ಆದ್ರೆ ಅದೆಲ್ಲವನ್ನೂ ಮೀರಿ ಸಮಾರಂಭ ನನಗೆ ಮೆಚ್ಚುಗೆ ಆಯ್ತು:)
ಮುತ್ತಪ್ಪ ರೈ ಬಂದಿದ್ರೆ ಚೆನ್ನಾಗಿರ್ತಾ ಇತ್ತು ,ನನ್ ಫೇವರೇಟ್ ಡಾನ್ ಅವ್ರು!
ಶೀಲಾರವರ ನಿರೂಪಣೆ ಚೆನ್ನಾಗಿತ್ತು ಆದ್ರೆ ಜೋಗುಳ ಹಾಡಿದ ಹಾಗಿತ್ತು :)
ಪ್ರಾರ್ಥನಾ ಹುಡುಗಿಯರ ಡೊಳ್ಳು ಕುಣಿತ ಮಾತ್ರ ಸೂಪರ್ಬ್.

ಬಾಲು ಹೇಳಿದರು...

ರವಿ ಬೆಳಗೆರೆಯ ಪೀತ ಪತ್ರಿಕೋದ್ಯಮದ ಬಗ್ಗೆ ಏನೇ ಆರೋಪಗಳು ಇರಲಿ, ಆತನ ಸಮ್ಮೊಹನ ಬರವಣಿಗೆಯನ್ನು ಮಾತ್ರ ಕದೆಗಾಣಿಸು ವಂತೆ ಇಲ್ಲ.
ಒಂದು ಪೀಳಿಗೆಗೆ ಓದಿನ ರುಚಿ ಹತ್ತಿಸಿದ್ದು ಕಡಿಮೆ ಸಾದನೆ ಏನಲ್ಲ.
ಒಳ್ಳೆಯ ಲೇಖನ ವಿಕಾಸ್.

ಅನಾಮಧೇಯ ಹೇಳಿದರು...

ಆತನ ಆತ್ಮಸ್ತುತಿ, ಕ್ರೈಂ ವೈಭವೀಕರಣ, ಇಂಗ್ಲೀಷ್ ವ್ಯಾಮೋಹ , ಪೀತ ಪತ್ರಿಕೋದ್ಯಮದ ವಿವಿಧ ಆರೋಪಗಳು, ಇನ್ನಿತರ ಅಸಡ್ಡಾಳತನಗಳ ನಡುವೆಯೂ ಕನ್ನಡ ಒಂದು ಪೀಳಿಗೆಯನ್ನೇ ಓದಿಗೆ ಹಚ್ಚಿದ, ಓದದೇ ಇದ್ದ ವರ್ಗವನ್ನೂ ಓದಲು ತೊಡಗಿಸಿದ, ಕನ್ನಡಕ್ಕೆ ಕೆಲ ಉತ್ತಮ ಪುಸ್ತಕಗಳನ್ನು ತಂದುಕೊಟ್ಟ, ಸಮತೋಲನ ಕಾಯ್ದುಕೊಂಡ, ಕನ್ನಡ ಓದನ್ನು ಒಂದು fashion ಹಾಗೂ passion ಆಗಿಸಿದ ಆ ’ದೈತ್ಯ’ ಬರಹಗಾರನಿಗೆ, ಆತನ ಬರವಣಿಗೆಗೆ ಪ್ರೀತಿಯಿಂದ ಒಂದು ಧನ್ಯವಾದ ಹೇಳೋಣವೆನಿಸಿತು.
- I nimma matugaLE nannavU...

- Chetana Teerthahalli

Unknown ಹೇಳಿದರು...

ನಾನು ಬರೆದದ್ದು ಮುಂಚೆ ಆಯಿತೇನೋ.

ಅಂದು ವೇದಿಕೆಯಲ್ಲಿ ... ... ... ಮುಂತಾದವರಿದ್ದರು. ಸಣ್ಣ ಪುಟ್ಟ ಘಟನೆಯನ್ನು ವರದಿ ಮಾಡುವ ಮಾಧ್ಯಮಕ್ಕೆ ಇದೊಂದು ಸುದ್ದಿಯಾಗಲೇ ಇಲ್ಲ. ಒಂದೊಂದು ಬರಹಕ್ಕೂ ಕಾಮೆಂಟ್ ಗಳ ರಾಶಿ ಅಬ್ಬಬ್ಬಾ, ನೆಟ್ ಓದುಗರನ್ನು ಇಷ್ಟೊಂದು ಹಿಡಿದಿಟ್ಟ ವ್ಯಕ್ತಿ ಮತ್ತೊಬ್ಬನಿರಲಾರ. ಬ್ಲಾಗ್ ಪಬ್ಲಿಷ್ ಆಗಿ ಕ್ಷಣ ಮಾತ್ರದಲ್ಲಿ ಇಷ್ಟು ಕಾಮೆಂಟ್ ಇರಬೇಕಾದರೆ ಇನ್ನು ಓದುಗರು ಎಷ್ಟಿರಬಹುದು..?
ಬರಹಗಾರನ ತಾಕತ್ತು ಮೆಚ್ಚಲೇ ಬೇಕು.
ಹೌದು ನೀವೆಂದುಕೊಂಡಂತೆ ವಿಕಾಸವಾದ.ಬ್ಲಾಗ್ ಸ್ಪಾಟ್ .ಕಾಮ್ ನ ೧೦ ನೇ ಹುಟ್ಟು ಹಬ್ಬ ಬ್ಲಾಗಿ ಯಾರೆಂದು ತಿಳಿಯಿತು ತಾನೆ..?
ದಿನಾಂಕ ೧-೧೦-೨೦೧೪

Unknown ಹೇಳಿದರು...

ವಿಕಾಸ ನಿಜಕೂ ನೀವೇ ಹೇಳಿದ್ದು ಸರಿ ಅವರೊಬ್ಬ ದೈತ್ಯ ಬರಹಗಾರರೇ. ಇಲ್ಲ ಅಂದಿದ್ರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಯ್ ಬೆಂಗಳೂರು ಪತ್ರಿಕೆ ಈ ಮಟ್ಟಿಕೆ ಬೆಳೆಯುತ್ತಿತ್ತೆ? ಆ ಕಾರ್ಯಕ್ರಮಕ್ಕೆ ಬರಲಾಗದಿದ್ದಕ್ಕೆ ಈಗಲೂ ಬೇಜಾರವಾಗುತ್ತಿದೆ.
ಸುನಿಲ್ ಮಲ್ಲೇನಹಳ್ಳಿ

shivu.k ಹೇಳಿದರು...

ರವಿ ಬೆಳೆಗೆರೆ ನನ್ನ ಫೇವರೇಟ್ ಬರಹಗಾರ. ನಾನು ಅವರ ಕಾರ್ಯಕ್ರಮ ತಪ್ಪಿಸಿಕೊಂಡಿದ್ದಕ್ಕೆ ನನ್ನ ಮೇಲೆ ನನಗೆ ಬೇಸರವಿದೆ. ಅದರ ಸಂಪೂರ್ಣ ಚಿತ್ರವನ್ನು ಬ್ಲಾಗಿನಲ್ಲಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಶಿವು.ಕೆ

sunaath ಹೇಳಿದರು...

ರವಿ ಬೆಳಗೆರೆಯವರ ಬಗೆಗೆ ನೀವು ಉತ್ತಮ ವಿವರಣೆ ಕೊಟ್ಟಿರುವಿರಿ. ಅಷ್ಟೇ ಉತ್ತಮವಾದ ಅಭಿಪ್ರಾಯಗಳನ್ನು ಮತ್ತೆ ಕೆಲವರು (ಉದಾ: ರೂಪಾ) ನೀಡಿದ್ದಾರೆ.
ಬೆಳಗೆರೆಯವರ stunt ಏನೇ ಇರಲಿ, ಅವರೊಬ್ಬ ಚುರುಕು ಬುದ್ಧಿಯ ಲೇಖಕ.

ಸುಧೇಶ್ ಶೆಟ್ಟಿ ಹೇಳಿದರು...

ಆತನ ಬಗ್ಗೆ ಇಷ್ಟವೂ ಇದೆ, ಸಿಟ್ಟೂ ಇದೆ.
ನಿಮ್ಮ ಅಭಿಪ್ರಾಯಕ್ಕೆ ಸಹಮತವಿದೆ.

ವಿ.ರಾ.ಹೆ. ಹೇಳಿದರು...

supri, roopa, vaishali, baalu, chitra, arun, sandeep, chetanakka
shreeshum, sunil, shivu, sunath, sudhesh

thanx for the comments.

ಶ್ರೀಶಂಶರ್ಮಣ್ಣ, ಹಿಂಗೆಲ್ಲಾ ತಮಾಷೆ ಮಾಡಿದ್ರೆ ಹೆಂಗೆ?! :)
ಪರಿಸರಪ್ರೇಮಿಗಳೇ, ಬೈತೀದೀರಾ ಅಲ್ವಾ? :)

ಸಂಭವಾಮಿ ಯುಗೇ ಯುಗೇ ಹೇಳಿದರು...

enoppa ravi ashtondu hogalikege layakka?

ಸಂಭವಾಮಿ ಯುಗೇ ಯುಗೇ ಹೇಳಿದರು...

ಲೇಖನ ಚೆನ್ನಾಗಿದೆ.ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Anveshi ಹೇಳಿದರು...

ಗಾಂಧಿ ಜಯಂತಿಯಂದು ಇಂದಿರಾ, ರಾಜೀವ್, ಸೋನಿಯಾರನ್ನು ಮಾತ್ರವೇ ನೆನಪಿಸಿಕೊಳ್ಳುವ ನಮಗೆ ಶಾಸ್ತ್ರಿಯವರೆಂದರೆ ಯಾರು ಅನ್ನೋದೇ ಮರೆತು ಹೋಗುವಂತೆ ಮಾಡಿದ್ದಾರೆ ಹಿಂದಿನ ಆಡಳಿತಗಾರರು.

ಹೀಗಾಗಬಾರದಿತ್ತು ಅಂತ ಹಲುಬುವುದಷ್ಟೇ ನಮ್ಮ ಕರ್ಮ.

ಅನು ಹೇಳಿದರು...

:-(:-(