ಗುರುವಾರ, ಡಿಸೆಂಬರ್ 24, 2009

ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ

ಕೆಲದಿನಗಳ ಹಿಂದೆ ವಿನಾಯಕ ಕೋಡ್ಸರ ಅವರು ತಮ್ಮ ಬ್ಲಾಗಿನಲ್ಲಿ ಈ ಲವ್ ಜಿಹಾದ್, ಮತಾಂತರ ಮುಂತಾದ ವಿಷಯಗಳು ಕೆಲ ಬ್ಲಾಗಿಗರಿಗೂ ಹೇಗೆ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ, ತಮ್ಮ ಸೋಗಲಾಡಿ ಜಾತ್ಯತೀತತೆ ತೋರಿಸಿಕೊಳ್ಳುವ ಅಂಶಗಳಾಗಿವೆ ಎಂದು ಬರೆಯುತ್ತಾ ಆಜಾದಿ ಬಚಾವೋ ಎಂಬ ಆಂದೋಲನದ ಬಗ್ಗೆ ಪ್ರಸ್ತಾಪಿಸಿ ಅದು ಈಗ ದೇಶದಲ್ಲಿ ಅಕ್ಷರಶಃ ಸತ್ತಿದೆ ಎಂದಿದ್ದರು.

ನಾನು ಪೀಯೂಸಿನಲ್ಲಿದ್ದ ದಿನಗಳು. ಆಜಾದೀ ಬಚಾವೋ ಎಂಬ ಆಂದೋಲನ ಜೋರಾಗಿ ನೆಡೆಯುತ್ತಿತ್ತು. ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದು ’ಹಾಯ್ ಬೆಂಗಳೂರು’ ಪತ್ರಿಕೆ. ಅದರಲ್ಲಿ ಒಂದು ಅಂಕಣ ಬರುತ್ತಿತ್ತು. ರಾಜೀವ ದೀಕ್ಷಿತ ಎಂಬ ಮನುಷ್ಯ ದೇಶದೆಲ್ಲೆಡೆ ತಿರುಗುತ್ತಿದ್ದರು. ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಈಗಿನ ಪ್ರಧಾನಿ ಆಗಿನ ವಿತ್ತಮಂತ್ರಿ ಮನಮೋಹನ ಸಿಂಗರನ್ನು ಉದಾರೀಕರಣದ ವಿಷಯವಾಗಿ ಕೆಡವಿಕೊಳ್ಳುತ್ತಿದ್ದರು. ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಹನ್ನೆರಡು ರೂಪಾಯಿ ಕೊಟ್ಟು ಆ ಕೆಟ್ಟ ಪೆಪ್ಸಿ ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಐದೇ ರೂಪಾಯಿ ಕೊಟ್ಟು ಎಳ್ನೀರು ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಅವರು ಭಾರತದ ಇತಿಹಾಸ, ವೈಭವಗಳ ಸತ್ಯಾಸತ್ಯತೆಗಳನ್ನು ಅಂಕಿಅಂಶಗಳ ಸಮೇತ ವಿವರಿಸುತ್ತಿದ್ದರೆ ಕೇಳಿದವರ ರಕ್ತ ಬಿಸಿಯಾಗುತ್ತಿತ್ತು.

ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ನಮ್ಮಲ್ಲಿ ಚಕ್ರವರ್ತಿ ಸೂಲಿಬೆಲೆ ಯವರ ಮಾತುಗಳನ್ನು ಕೇಳಿರಬಹುದು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹ ನರಸತ್ತವನಲ್ಲೂ ದೇಶಭಕ್ತಿ, ಧರ್ಮಜಾಗೃತಿ ಪುಟಿಯಲಾರಂಭಿಸುತ್ತದೆ. ಈ ರಾಜೀವ ದೀಕ್ಷಿತರೂ ಹಾಗೆಯೇ. ಅವರ ಮಾತು ಕೇಳಿದ ಯಾರಲ್ಲೇ ಆದರೂ ದೇಶಪ್ರೇಮ ಹೆಚ್ಚಾಗುತ್ತಿತ್ತು. ಪುಗ್ಸಟ್ಟೆ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಆತನ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಅಷ್ಟಕ್ಕೂ ಆ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಕಡಿ ಸುಡು ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಆ ಮೂಲಕ ಈ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮಂಗ ಮಾಡುತ್ತಿವೆ ಈ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಪ್ರಾಡಕ್ಟುಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು.

ಮನೆಯಲ್ಲಿ ಆ ಪಟ್ಟಿಯನ್ನು ನನ್ನ ಕೋಣೆಯ ಗೋಡೆಗೆ ಅಂಟಿಸಿಕೊಂಡಿದ್ದೆ. ಅಪ್ಪನಿಗೂ ಇವೇ ಕಂಪನಿಯ ಸಾಮಾನು ತೆಗೆದುಕೊಂಡು ಬಾ ಎಂದು ತಾಕೀತು ಮಾಡುತ್ತಿದ್ದೆ. ನಾನು ಹಾಸನದಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗ ಅವರ ಭಾಷಣ ಕೇಳಿ ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟುಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಿದೆ. ಹಾಸ್ಟೆಲ್ಲಿನಲ್ಲೂ ಈ ಬಗ್ಗೆ ಬಹಳ ಚರ್ಚೆಗಳಾಗಿ ಬಹಳಷ್ಟು ಹುಡುಗರು ಸ್ವದೇಶಿ ವಸ್ತುಗಳನ್ನೇ ಬಳಸಲು ತೀರ್ಮಾನ ತೆಗೆದುಕೊಂಡಿದ್ದೆವು. ಇದೆಲ್ಲುದರ ಪರಿಣಾಮವೇ ಏನೋ ಅಥವಾ ನನಗಿಷ್ಟವಿಲ್ಲದಿರುವುದರಿಂದವೇನೋ, ನನಗೆ ಇವತ್ತಿಗೂ ಪೆಪ್ಸಿ ಮುಂತಾದ ಸಾಫ್ಟ್ ಡ್ರಿಂಕ್ ಗಳನ್ನು ಕುಡಿಯಲು ಮನಸ್ಸು ಬರುವುದಿಲ್ಲ. ಇವತ್ತಿಗೂ ಸಾಮಾನುಗಳನ್ನು ಕೊಳ್ಳುವಾಗ ಗುಣಮಟ್ಟ, ಬೆಲೆ ಜೊತೆಗೆ ಅದನ್ನು ತಯಾರು ಮಾಡಿದ ಕಂಪನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅಪೇಕ್ಷೆಗೆ ತಕ್ಕನಾದ್ದು ಸಿಗದಿದ್ದರೆ ಬೇರೆ ಮಾತು.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಈ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿಬಿಡುತ್ತದೆ. ಆವತ್ತು ಹಾಸ್ಟೆಲ್ ಹತ್ತಿರದ ನಮ್ಮ ರೆಗ್ಯುಲರ್ ಅಂಗಡಿಯ ಉದಯಣ್ಣ "ಏನ್ರೀ, ನಿಮ್ ಹಾಸ್ಟೆಲ್ ಹುಡುಗ್ರು ಈಗ ಬರೀ ಬಬೂಲ್, ಮಿಸ್ವಾಕ್ ಟೂತ್ ಪೇಸ್ಟ್ ಕೇಳ್ತಾರೆ, ಕ್ಯಾಂಪ್ಕೋ ಚಾಕ್ಲೇಟೇ ಕೊಡಿ ಅಂತಾರೆ, ಸದ್ಯ ಐ.ಟಿ.ಸಿ. ಮಾತ್ರ ಬಚಾವಾಗಿದೆ :)" ಅಂದಿದ್ದನ್ನು ಕೇಳಿ ಸಂಭ್ರಮ ಪಟ್ಟಿದ್ದು, ಚಳವಳಿ ಯಶಸ್ವಿಯಾಯಿತೆಂದು ಬೀಗಿದ್ದು ನೆನಪಿಸಿಕೊಂಡರೆ ಈಗ ಪಿಚ್ಚೆನಿಸುತ್ತದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ( ಇಲ್ಲಿ software, I.T ಬಗ್ಗೆ ಹೇಳುತ್ತಿಲ್ಲ). ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. MNCಗಳನ್ನು ಓಡಿಸಿ ಎಂದರೆ ನಮ್ಮ ಅನ್ನಕ್ಕೇ ನಾವು ಕಲ್ಲು ಹಾಕಿಕೊಂಡಂತೆ. ಹಾಗಲ್ಲ ಹೀಗೆ ಅಂತ ಈಗ ಏನೋ ಹೇಳಲು ಹೋದರೆ "ನಿಮ್ಮ ಭಾವಮೈದ ಅಮೆರಿಕಾದಲ್ಲಿಲ್ವಾ, ನೀವು ಉಪಯೋಗಿಸುವ ಜೀಮೇಲ್ , ಯಾಹೂ ಮೇಲ್ ಎಲ್ಲಾ ಅಮೆರಿಕಾದ್ದಲ್ವಾ" ಅಂತ ಕೆಲವರು ಬಾಲಿಶವಾಗಿ ಕೇಳಿಬಿಡುತ್ತಾರೆ. ಸ್ವಾಮೀ, ಆಗಂತುಕನನ್ನು ಮನೆಯ ವರಾಂಡದೊಳಗೆ ಕೂರಿಸುವುದಕ್ಕೂ, ಬೆಡ್ ರೂಮಿಗೆ ಕರೆದೊಯ್ಯುವುದಕ್ಕೂ ವ್ಯತ್ಯಾಸ ಗೊತ್ತಾ ನಿಮಗೆ, ಕಂಪ್ಯೂಟರ್ ಕೊಟ್ಟಿದ್ದಾರೆ ಅಂತ ಉಪ್ಪನ್ನೂ ತೆಗೆದುಕೊಳ್ಳಬೇಕಾ? ಅಂತ ಕೇಳೋಣವೆನಿಸುತ್ತದೆ. ಜಾಗತೀಕರಣದ ಬಗ್ಗೆ ಕಥೆ-ವ್ಯಥೆ ಬರೆದು ಬಹುಮಾನ ಗಿಟ್ಟಿಸಿಕೊಂಡವರು ಅದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಚಪ್ಪಾಳೆ ಸದ್ದಿನ ಅನಂತರವಾದರೂ ವಿಮರ್ಶಿಸಿಕೊಂಡಿದ್ದಾರಾ ಗೊತ್ತಿಲ್ಲ.

ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವೇ ಇಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ಇವತ್ತು ರಾಜೀವ ದೀಕ್ಷಿತರು ಎಲ್ಲಿ ಹೋದರು ಎಂಬ ಸುಳಿವೂ ಬಹುತೇಕರಿಗೆ ಇಲ್ಲ. ಅವರು ಭ್ರಮನಿರಸನಗೊಂಡು ಚಳುವಳಿ ಕೈಬಿಟ್ಟರು ಅಂತ ಕೆಲವರೆನ್ನುತ್ತಾರೆ, ಸರ್ಕಾರವೇ ಆತನನ್ನು ಹತ್ತಿಕ್ಕಿತು ಅನ್ನುತ್ತಾರೆ, ಅಮೆರಿಕಾದ MNCಗಳಿಂದ ದೂರು ಹೋಗಿ FBI ನಿಂದ ಬೆದರಿಕೆಗೊಳಗಾದರು ಅನ್ನುತ್ತಾರೆ, ಜೊತೆಗೆ ಇನ್ನೂ ಕೆಲವು ನೆಗೆಟಿವ್ ಆರೋಪಗಳೂ ಇದೆ. ಅದೇನೇ ಇರಲಿ. ಸ್ವದೇಶಿ ಚಳುವಳಿಯ ಬಗ್ಗೆ, ಆ ವಿಚಾರಗಳ ಬಗ್ಗೆ ’ಆಜಾದಿ’ ಎಂಬ ಪುಸ್ತಕವೊಂದು ಭಾವನಾ ಪ್ರಕಾಶನದಿಂದ ಪ್ರಕಟಗೊಂಡಿದೆ. ಆ ಪುಸ್ತಕದ ಮುನ್ನುಡಿಯಲ್ಲಿ ರವಿ ಬೆಳಗೆರೆ ಹೇಳಿರುವಂತೆ ಹೇಳುವುದಾದರೆ, "ಎಲ್ಲಾ ಚಳುವಳಿಗಳೂ ಯಶಸ್ವಿಯಾಗಲಿಕ್ಕಿಲ್ಲ, ಎಲ್ಲಾ ನೇತಾರರೂ ಮಹಾತ್ಮಾ ಗಾಂಧಿಗಳಾಗಲಿಕ್ಕಿಲ್ಲ. ಆದರೆ ಪ್ರತೀ ಚಳುವಳಿಯೂ ಭಾರತವನ್ನು ಪ್ರಗತಿಯತ್ತ ಒಂದು ಹೆಜ್ಜೆಯಿಡುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗಿನ ಸಾರ್ಥಕತೆ ಈ ಚಳುವಳಿಗೆ ಸಿಕ್ಕಿದೆ". ಆದ್ದರಿಂದ ನಾನು ಹೇಳುವುದಿಷ್ಟೆ, ಆ ಚಳುವಳಿ ಸಂಘಟನಾತ್ಮಕ ನೆಲೆಯಲ್ಲಿ ಸತ್ತಿರಬಹುದು, ಅದರ ರೂವಾರಿ ಈಗಿಲ್ಲದಿರಬಹುದು. ಆದರೆ ಲಕ್ಷಾಂತರ ಜನರಲ್ಲಿ ವೈಯಕ್ತಿಕ ನೆಲೆಯಲ್ಲಿ ಸ್ವದೇಶೀ ಚಳುವಳಿ ಇನ್ನೂ ಬದುಕಿದೆ. ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ.

ಬುಧವಾರ, ಡಿಸೆಂಬರ್ 9, 2009

ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ

ಕೆಲದಿನಗಳ ಹಿಂದೆ ಒಂದು ಕಾರ್ಟೂನ್ ನೋಡಿದ್ದೆ. "Maya, the bee". ಅದೊಂದು ಜೇನ್ನೊಣಗಳ ಪುಟ್ಟ ಸಾಮ್ರಾಜ್ಯ. ಅಲ್ಲೊಂದು ’ಮಾಯಾ’ ಎನ್ನುವ ಹೆಣ್ಣುಮಗು (ಜೇನ್ನೊಣದಮರಿ ಅನ್ನಬಹುದಾ? ) . ಅಸಾಧ್ಯ ತರಲೆ. ಎಲ್ಲದರಲ್ಲೂ ಕುತೂಹಲ. ಪ್ರಶ್ನೆಗಳನ್ನು ಕೇಳಿ ಕೇಳೀ ಎಲ್ಲರ ತಲೆಕೆಡಿಸುವ ಚತುರೆ. ನಾನು ಹೇಗೆ ಹುಟ್ಟಿದೆ, ನಾವೇಕೆ ಹೀಗೆ ಎನ್ನುವುದರಿಂದ ಹಿಡಿದು ಹೊರಗಿನ ಜಗತ್ತಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ, ತಾನೂ ಹೊರಗೆ ಹೋಗಿ ಸುತ್ತಬೇಕೆಂಬ ಹಂಬಲಿ. ತಮ್ಮ ಗೂಡಿನ ಎಲ್ಲಾ ಚಟುವಟಿಕೆಗಳನ್ನು, ಗೂಡಿನಲ್ಲಿ ಹುಟ್ಟುವ ತಂಗಿ ತಮ್ಮಂದಿರನ್ನು ಬೆರಗುಗಣ್ಣಿನಿಂದ ನೋಡುವುದು, ದಿನಾ ಟೀಚರು ಪಾಠ ಮಾಡುವಾಗ ಕಿಟಕಿಯಿಂದ ಹೊರಗೆ ನೋಡುತ್ತಾ ಕನಸು ಕಾಣುತ್ತಾ ಕೂರುವುದು ಅದರ ಅಭ್ಯಾಸ. ಗೂಡಿನಿಂದ ಹೊರಗೆ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದು ಪದೇ ಪದೇ ದೊಡ್ಡ ಜೇನುಗಳೂ ಎಚ್ಚರ ಕೊಡುತ್ತಿದರೂ ಸಹ ಒಂದು ದಿನ ಬಿರುಗಾಳಿಯಿಂದ ಮಾಯಾ ಗೂಡಿನ ಹೊರಗೆ ಬಿದ್ದುಬಿಡುತ್ತದೆ. ಅಲ್ಲಿ ಅದು ನಿಜವಾದ ಜಗತ್ತನ್ನು ಕಾಣುತ್ತಾ ಹೋಗುತ್ತದೆ. ತನ್ನ ಗೆಳೆಯರೊಂದಿಗೆ ಏನೇನೋ ಸಾಹಸಗಳನ್ನು ಮಾಡುತ್ತದೆ. ಜೇನ್ನೊಣಗಳ ಶತ್ರುಗಳಾದ ಕಣಜಗಳ ಕೈಗೆ ಸಿಕ್ಕುಬೀಳುತ್ತದೆ. ಕೊನೆಯಲ್ಲಿ ಅದು ಗೂಡಿಗೆ ಹಿಂದಿರುಗಿ ಒಂದು ಜವಾಬ್ದಾರಿಯುತ ಪ್ರಜೆಯಾಗುತ್ತದೆ. ಆ ಪುಟ್ಟ ಮಾಯಾ, ಅದರ ಬುದ್ಧಿವಂತಿಕೆ, ಅದರ ಮುದ್ದು ಮಾತುಗಳು, ಅದರ ಗೆಳೆಯರಾದ ವಿಲ್ಲಿ ಬೀ ಮತ್ತು ಫ್ಲಿಪ್ ಮಿಡತೆ ಎಲ್ಲವೂ ಚಂದ ಚಂದ. ಇದು Die Biene Maja ಎಂಬ ಜರ್ಮನ್ ಕಾಮಿಕ್ ಪುಸ್ತಕ ಸರಣಿಯ ಬಹಳ ಹಳೆಯ ಟೀವಿ ಅವತರಣಿಕೆಯಂತೆ. ***

ಹಾಗೆ ಎರಡ್ಮೂರು ವಾರಗಳ ಕೆಳಗೆ HBO ನಲ್ಲಿ ಒಂದು ಇದೇ ರೀತಿಯ ಅನಿಮೇಷನ್ ಮೂವಿ ಒಂದು ಬಂದಿತ್ತು. Bee Movie ಅಂತ ಅದರ ಹೆಸರು. ಸಾಮಾನ್ಯವಾಗಿ ನಾನು ಅನಿಮೇಷನ್ ಮೂವಿಗಳು ತೀರ ಗೊಂಬೆ ಗೊಂಬೆ ಆಟದ ತರ ಇದ್ದರೆ ನೋಡಲು ಹೋಗುವುದಿಲ್ಲ. ಆದರೆ ಅವತ್ತು ಈ ಬೀ ಮೂವಿ ನನ್ನನ್ನು ಹಿಡಿದಿಟ್ಟಿತ್ತು. ಅದರಲ್ಲಿ Barry ಎನ್ನುವ ಪುಟ್ಟದೊಂದು ಜೇನು. ಬೀ ಕಾಲೇಜಿನಲ್ಲಿ ಓದಿದ ನಂತರ ಅದನ್ನು ಜೇನು ತಯಾರಿಸುವ ಕೆಲಸಕ್ಕೆ ಹಚ್ಚಲಾಗುತ್ತದೆ. ಅಲ್ಲಿ ಒಂದೊಂದು ಕೆಲಸಗಳೂ ಇಂತಿಂತವರೇ ಮಾಡಬೇಕು ಎಂದು ಹಂಚಲ್ಪಟ್ಟಿರುತ್ತದೆ. ಹೊರಗೆ ಹೋಗಿ ಹೂವಿನಿಂದ ಮಕರಂದ ಸಂಗ್ರಹಿಸಿಕೊಂಡು ಬರುವ ಕೆಲಸ ಕೆಲಸಗಾರ ಜೇನುಗಳದ್ದಾಗಿರುತ್ತದೆ. ಅಲ್ಲಿ ಅದರ ತಲೆಯಲ್ಲಿ ಒಂದೇ ಕೊರೆತ. ನಾನು ಜೀವನವಿಡೀ ಹೀಗೇ ಇರಬೇಕಾ? ಇದೇ ಕೆಲಸ ಮಾಡಬೇಕಾ? ತಾನೂ ಹೊರಗೆ ಹೋಗಬೇಕು, ಎಲ್ಲಾ ನೋಡಬೇಕು ಎಂದು. ಇದೇ ಆಸೆಯೊಂದಿಗೆ ಅವಕಾಶ ಮಾಡಿಕೊಂಡು ಹೊರಗೆ ಬರುತ್ತದೆ. ನಗರದಲ್ಲಿ ಕಷ್ಟಕ್ಕೆ ಸಿಕ್ಕಿ ಪರದಾಡುತ್ತದೆ. ಮನುಷ್ಯರೆಲ್ಲರೂ ಕೂಡ ತನ್ನನ್ನು ಹೊಡೆಯಲು ಬರುವುದನ್ನು ನೋಡಿ ಗಾಬರಿಯಾಗುತ್ತದೆ. ಒಂದೇ ಹೊಡೆತಕ್ಕೆ ಪಡ್ಚ ಆಗಿಹೋಗಬೇಕಾಗಿದ್ದ ಬ್ಯಾರಿಯನ್ನು ಒಂದು ಹುಡುಗಿ ಕಾಪಾಡುತ್ತಾಳೆ. ಇದು ಅವಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತದೆ. ಮುಂದೆ ಅದಕ್ಕೆ ಮನುಷ್ಯ ತಮ್ಮನ್ನು ಓಡಿಸಿ ತಾವು ತಯಾರು ಮಾಡುವ ಜೇನನ್ನೆಲ್ಲಾ ದೋಚಿಕೊಳ್ಳುತ್ತಾನೆ ಎಂದು ತಿಳಿಯುತ್ತದೆ.. ಮನುಷ್ಯರಿಗೆ ಪಾಠ ಕಲಿಸಲು ತೀರ್ಮಾನಿಸುತ್ತದೆ. ಹೀಗೇ ಮುಂದುವರೆಯುತ್ತಾ ಕತೆಯು ಮನುಷ್ಯ ಮತ್ತು ಜೇನ್ನೊಣಗಳಲ್ಲಿ ಇರುವ ಸಂಬಂಧ ತಿಳಿಸಿಕೊಡುತ್ತದೆ. ಇದು ೨೦೦೭ ರಲ್ಲಿ ತಯಾರಾದ ಸಿನೆಮಾ. ***

ಈ ಕಾರ್ಟೂನ್ ಮತ್ತು ಅನಿಮೇಷನ್ ಮೂವಿಗಳು ಸುಮ್ಮನೇ ಒಂದು time pass fun ಎನ್ನುವಂತಿದ್ದರೂ ಸಹ ಎಷ್ಟು ಚೆನ್ನಾಗಿ ನಿರೂಪಿಸಲ್ಪಟ್ಟಿದೆಯೆಂದರೆ ಮನರಂಜನೆಯ ಜೊತೆಗೆ ಜೇನ್ನೊಣಗಳ ಗೂಡು, ಅವುಗಳ ಜೀವನ ವ್ಯವಸ್ಥೆ, ಅವುಗಳ ಕೆಲಸ, ಇನ್ನಿತರ ಚಟುವಟಿಕೆಗಳ ಬಗ್ಗೆ ಪೂರ್ತಿ ಮಾಹಿತಿಯೂ ನಮಗೇ ಗೊತ್ತಿಲ್ಲದಂತೆ ಮನಸ್ಸಿನಲ್ಲಿ ದಾಖಲಾಗಿಬಿಡುತ್ತದೆ. ಅದನ್ನು ನೋಡುವ ಮಕ್ಕಳು(ದೊಡ್ಡವರೂ ಕೂಡ) ಪ್ರಕೃತಿಯ ಬಗ್ಗೆ, ಜೇನುಗಳ ಬಗ್ಗೆ ಒಂದು ಪ್ರೀತಿ ಬೆಳೆಸಿಕೊಳ್ಳುವಂತಿದೆ. ಪ್ರಕೃತಿ, ಪ್ರಾಣಿಗಳ ಬಗ್ಗೆ ಆಸಕ್ತಿ ಬೆಳೆಸುವಂತಹ, ಪ್ರೀತಿ ಕರುಣೆ ಬೆಳೆಸುವಂತಹ, ವಿಷಯಗಳನ್ನು ತಿಳಿಸಿಕೊಡುವಂತಹ ಇಂತಹ ಕಾರ್ಯಕ್ರಮಗಳು ನನಗೆ ಖುಷಿ ಕೊಡುತ್ತವೆ. ಸಾಧ್ಯವಾದರೆ ನೀವೂ ನೋಡಿ. ಮುಂದಿನ ಬಾರಿ ಜೇನೊಂದು ಹಾರಿಬಂದಾಗ ಕೈಗೆ ಸಿಕ್ಕ ವಸ್ತುವಿನಿಂದ ಅದನ್ನು ಹೊಡೆಯಲು ನೋಡದೇ ನಿಮಗೆ ಅದರಲ್ಲೊಂದು ಪುಟ್ಟ ಮಾಯಾ ಕಾಣುವಂತಾದರೆ ಅಥವಾ ನಿಮ್ಮ ಮಕ್ಕಳಿಗೆ ಅದು ತನ್ನ ಗೆಳೆಯ ಬ್ಯಾರಿ ಎನ್ನಿಸುವಂತಾದರೆ ಸಾರ್ಥಕ.

ಶುಕ್ರವಾರ, ಡಿಸೆಂಬರ್ 4, 2009

ಪ್ರೆಸ್ ಕ್ಲಬ್ ಬಾರ್ & ರೆಸ್ಟೋರಂಟ್ ?

ಕನ್ನಡ ಓದುಗರು ಒಂದಲ್ಲಾ ಒಂದು ಕಡೆ ಈ ’ಪ್ರೆಸ್ ಕ್ಲಬ್’ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ನಾನು ಸಣ್ಣವನಿದ್ದಾಗಿಂದ ಗಮನಿಸಿದ್ದೇನಂದರೆ ಪತ್ರಕರ್ತರ, ಬರಹಗಾರರ ಲೇಖನಗಳಲ್ಲಿ, ವರದಿಗಳಲ್ಲಿ ಈ ಪ್ರೆಸ್ ಕ್ಲಬ್ ಸುಮಾರು ಬಾರಿ ಕಾಣಿಸಿಕೊಳ್ಳುತ್ತಿತ್ತು. ಅದೂ ಅಲ್ಲದೇ ಕೆಲವರು ಮಾತನಾಡುವಾಗಲೂ ಪ್ರೆಸ್ ಕ್ಲಬ್ ನಲ್ಲಿ ಅದಾಯಿತು ಇದಾಯಿತು, ಅಲ್ಲಿ ಅವರೆಲ್ಲಾ ಸೇರುತ್ತಿದ್ದರು, ಮಾತಾಡುತ್ತಿದ್ದರು ಎಂದೆಲ್ಲಾ ಹೇಳುತ್ತಿರುವುದನ್ನೂ ಕೇಳಿದ್ದೆ. ವಿಷಯ ಏನು ಅಂದರೆ, ದೇವರಾಣೆ ನನಗೆ ಈ ಪ್ರೆಸ್ ಕ್ಲಬ್ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. ನಾನು ಅದನ್ನ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇರಬೇಕು ಅಂದುಕೊಂಡಿದ್ದೆ. ಈ ಸಿನೆಮಾ ಮಂದಿಗೆ ಕಾನಿಷ್ಕ ಹೋಟೆಲ್ ಇದ್ದಂತೆ, ಬರವಣಿಗೆ ಲೋಕದವರಿಗೆ ಪ್ರೆಸ್ ಕ್ಲಬ್ ಅನ್ನಿಸಿತ್ತು. ಇದಕ್ಕೆ ಕಾರಣವೂ ಇದೆ. ಯಾರೇ ಆದರೂ ಪ್ರೆಸ್ ಕ್ಲಬ್ ಬಗ್ಗೆ ಉಲ್ಲೇಖಿಸುವಾಗಲೂ ಕೂಡ ತಾವು ಪ್ರೆಸ್ ಕ್ಲಬ್ ನಲ್ಲಿ ಕೂತು ಕುಡಿಯುತ್ತಾ ಇದ್ವಿ, ಅಪರಾತ್ರಿವರೆಗೆ ಕುಡಿಯುತ್ತಿದ್ವಿ, ಆ ಲೇಖಕ ಅಲ್ಲಿ ಕುಡೀತಿದ್ರು, ಈ ಲೇಖಕ ಅಲ್ಲಿ ಕುಡಿಯುತ್ತಾ ಮೀಟಿಂಗು ಮಾಡ್ತಿದ್ರು ಅಂತ ಮಾತ್ರ ಬರೆಯುತ್ತಿದ್ದರು. ಪ್ರೆಸ್ ಕ್ಲಬ್ ವಿಷಯ ಬಂತು ಅಂದರೆ ಅದು ’ಕುಡಿತ’ಕ್ಕೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು! ಆದಕ್ಕೇ ಸಹಜವಾಗಿ ಅದು ಬಾರ್ ಅಂಡ್ ರೆಸ್ಟೋರೆಂಟೇ ಇರಬೇಕು ಅನಿಸಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿ ಅಲ್ಲೇ ವಿಧಾನಸೌಧದ ಹತ್ತಿರವಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಆದಾಯ ತೆರಿಗೆ ಇಲಾಖೆ ಕ್ಯಾಂಟೀನಿಗೆ ಹೋಗುತ್ತಿದ್ದೆವು. ಅಲ್ಲಿನ ಕಿಟಕಿಯಿಂದ ಪ್ರೆಸ್ ಕ್ಲಬ್ ಅಂಗಳ ನೇರವಾಗಿ ಕಾಣುತ್ತದೆ. ಅಲ್ಲಿಯೂ ಕಾಣುತ್ತಿದ್ದುದು ಅದೇ ದೃಶ್ಯ, ಒಂದಿಷ್ಟು ಜನ ಹೊರಗೆ ಮೇಜುಗಳ ಮೇಲೆ ಜೇನು ಬಣ್ಣದ ದ್ರವವನ್ನು ಇಟ್ಟುಕೊಂಡು ಮಾತಾಡುತ್ತಾ ಕುಳಿತಿರುತ್ತಿದ್ದರು. ಅಲ್ಲಿಗೆ ನಿಜವಾಗಿಯೂ ಇದು ಬಾರ್ ಅಂಡ್ ರೆಸ್ಟೋರೆಂಟೇ ಅಂತ ನಂಬಿಕೊಂಡಿದ್ದೆ. ಆಮೇಲೆ ಒಮ್ಮೆ ಅಲ್ಲಿ ಸಿನೆಮಾ ಮಹೂರ್ತ ಒಂದಕ್ಕೆ ಹೋಗುವ ಪ್ರಮೇಯ ಬಂದಿತ್ತು. ಅವತ್ತು ಪ್ರೆಸ್ ಕ್ಲಬ್ಬನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತ್ತು... ಆದರೆ ಅವತ್ತು ವಿಪರೀತ ಜನರಿದ್ದುದರಿಂದ ಮತ್ತು ನನಗೆ ಸಿಗಬೇಕಾದವರು ಸಿಕ್ಕಿದುದರಿಂದ ಹಾಗೇಯೇ ಮೇಲ್ಮೇಲೆ ನೋಡಿ ಹೊರಟುಬಿಟ್ಟಿದ್ದೆ. ’ಪ್ರೆಸ್ ಕ್ಲಬ್’ ಬಗ್ಗೆ ಸಂಶಯ ಪೂರ್ತಿ ಹೋಗಿರಲಿಲ್ಲ.

ಈಗೊಂದು ಒಂದೂವರೆ ವರ್ಷದ ಕೆಳಗೆ ಪತ್ರಕರ್ತೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿರುವಾಗ ಅವಳು ಪ್ರೆಸ್ ಕ್ಲಬ್ ನಲ್ಲಿ ಊಟಕ್ಕೆ ಹೋಗಿದ್ದೆ ಅಂದಾಗ ಆಶ್ಚರ್ಯವಾಗಿ ಅದರ ಬಗ್ಗೆ ಕೇಳಲಾಗಿ ಪ್ರೆಸ್ ಕ್ಲಬ್ ಅಂದ್ರೆ ಏನೂಂತ ನಿಜ ವಿಷಯ ಗೊತ್ತಾಯ್ತು.
ಅದಕ್ಕೇ ಹೇಳೋದು.. ಈ ಪತ್ರಕರ್ತರ ಸಾವಾಸ ಅಲ್ಲ .. ಏನು ಬರೆದರೂ ಜನ ತಪ್ಪು ತಿಳ್ಕೊಳ್ಳೋ ಹಾಗೇ ಬರೀತಾರೆ.

ಇದೇನು ’ಸೂರ್ಯಂಗೇ ಟಾರ್ಚಾ’ ಅನ್ನುವ ತರಹ ’ಪ್ರೆಸ್ ಕ್ಲಬ್ಬಿಗೇ ರಿಪೋರ್ಟಾ’ ಅಂತೀರಾ? ಏನಿಲ್ಲ, ಅಜ್ಞಾನ ನನ್ನದು ಅಷ್ಟೆ!