ಬುಧವಾರ, ಡಿಸೆಂಬರ್ 9, 2009

ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ

ಕೆಲದಿನಗಳ ಹಿಂದೆ ಒಂದು ಕಾರ್ಟೂನ್ ನೋಡಿದ್ದೆ. "Maya, the bee". ಅದೊಂದು ಜೇನ್ನೊಣಗಳ ಪುಟ್ಟ ಸಾಮ್ರಾಜ್ಯ. ಅಲ್ಲೊಂದು ’ಮಾಯಾ’ ಎನ್ನುವ ಹೆಣ್ಣುಮಗು (ಜೇನ್ನೊಣದಮರಿ ಅನ್ನಬಹುದಾ? ) . ಅಸಾಧ್ಯ ತರಲೆ. ಎಲ್ಲದರಲ್ಲೂ ಕುತೂಹಲ. ಪ್ರಶ್ನೆಗಳನ್ನು ಕೇಳಿ ಕೇಳೀ ಎಲ್ಲರ ತಲೆಕೆಡಿಸುವ ಚತುರೆ. ನಾನು ಹೇಗೆ ಹುಟ್ಟಿದೆ, ನಾವೇಕೆ ಹೀಗೆ ಎನ್ನುವುದರಿಂದ ಹಿಡಿದು ಹೊರಗಿನ ಜಗತ್ತಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ, ತಾನೂ ಹೊರಗೆ ಹೋಗಿ ಸುತ್ತಬೇಕೆಂಬ ಹಂಬಲಿ. ತಮ್ಮ ಗೂಡಿನ ಎಲ್ಲಾ ಚಟುವಟಿಕೆಗಳನ್ನು, ಗೂಡಿನಲ್ಲಿ ಹುಟ್ಟುವ ತಂಗಿ ತಮ್ಮಂದಿರನ್ನು ಬೆರಗುಗಣ್ಣಿನಿಂದ ನೋಡುವುದು, ದಿನಾ ಟೀಚರು ಪಾಠ ಮಾಡುವಾಗ ಕಿಟಕಿಯಿಂದ ಹೊರಗೆ ನೋಡುತ್ತಾ ಕನಸು ಕಾಣುತ್ತಾ ಕೂರುವುದು ಅದರ ಅಭ್ಯಾಸ. ಗೂಡಿನಿಂದ ಹೊರಗೆ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದು ಪದೇ ಪದೇ ದೊಡ್ಡ ಜೇನುಗಳೂ ಎಚ್ಚರ ಕೊಡುತ್ತಿದರೂ ಸಹ ಒಂದು ದಿನ ಬಿರುಗಾಳಿಯಿಂದ ಮಾಯಾ ಗೂಡಿನ ಹೊರಗೆ ಬಿದ್ದುಬಿಡುತ್ತದೆ. ಅಲ್ಲಿ ಅದು ನಿಜವಾದ ಜಗತ್ತನ್ನು ಕಾಣುತ್ತಾ ಹೋಗುತ್ತದೆ. ತನ್ನ ಗೆಳೆಯರೊಂದಿಗೆ ಏನೇನೋ ಸಾಹಸಗಳನ್ನು ಮಾಡುತ್ತದೆ. ಜೇನ್ನೊಣಗಳ ಶತ್ರುಗಳಾದ ಕಣಜಗಳ ಕೈಗೆ ಸಿಕ್ಕುಬೀಳುತ್ತದೆ. ಕೊನೆಯಲ್ಲಿ ಅದು ಗೂಡಿಗೆ ಹಿಂದಿರುಗಿ ಒಂದು ಜವಾಬ್ದಾರಿಯುತ ಪ್ರಜೆಯಾಗುತ್ತದೆ. ಆ ಪುಟ್ಟ ಮಾಯಾ, ಅದರ ಬುದ್ಧಿವಂತಿಕೆ, ಅದರ ಮುದ್ದು ಮಾತುಗಳು, ಅದರ ಗೆಳೆಯರಾದ ವಿಲ್ಲಿ ಬೀ ಮತ್ತು ಫ್ಲಿಪ್ ಮಿಡತೆ ಎಲ್ಲವೂ ಚಂದ ಚಂದ. ಇದು Die Biene Maja ಎಂಬ ಜರ್ಮನ್ ಕಾಮಿಕ್ ಪುಸ್ತಕ ಸರಣಿಯ ಬಹಳ ಹಳೆಯ ಟೀವಿ ಅವತರಣಿಕೆಯಂತೆ. ***

ಹಾಗೆ ಎರಡ್ಮೂರು ವಾರಗಳ ಕೆಳಗೆ HBO ನಲ್ಲಿ ಒಂದು ಇದೇ ರೀತಿಯ ಅನಿಮೇಷನ್ ಮೂವಿ ಒಂದು ಬಂದಿತ್ತು. Bee Movie ಅಂತ ಅದರ ಹೆಸರು. ಸಾಮಾನ್ಯವಾಗಿ ನಾನು ಅನಿಮೇಷನ್ ಮೂವಿಗಳು ತೀರ ಗೊಂಬೆ ಗೊಂಬೆ ಆಟದ ತರ ಇದ್ದರೆ ನೋಡಲು ಹೋಗುವುದಿಲ್ಲ. ಆದರೆ ಅವತ್ತು ಈ ಬೀ ಮೂವಿ ನನ್ನನ್ನು ಹಿಡಿದಿಟ್ಟಿತ್ತು. ಅದರಲ್ಲಿ Barry ಎನ್ನುವ ಪುಟ್ಟದೊಂದು ಜೇನು. ಬೀ ಕಾಲೇಜಿನಲ್ಲಿ ಓದಿದ ನಂತರ ಅದನ್ನು ಜೇನು ತಯಾರಿಸುವ ಕೆಲಸಕ್ಕೆ ಹಚ್ಚಲಾಗುತ್ತದೆ. ಅಲ್ಲಿ ಒಂದೊಂದು ಕೆಲಸಗಳೂ ಇಂತಿಂತವರೇ ಮಾಡಬೇಕು ಎಂದು ಹಂಚಲ್ಪಟ್ಟಿರುತ್ತದೆ. ಹೊರಗೆ ಹೋಗಿ ಹೂವಿನಿಂದ ಮಕರಂದ ಸಂಗ್ರಹಿಸಿಕೊಂಡು ಬರುವ ಕೆಲಸ ಕೆಲಸಗಾರ ಜೇನುಗಳದ್ದಾಗಿರುತ್ತದೆ. ಅಲ್ಲಿ ಅದರ ತಲೆಯಲ್ಲಿ ಒಂದೇ ಕೊರೆತ. ನಾನು ಜೀವನವಿಡೀ ಹೀಗೇ ಇರಬೇಕಾ? ಇದೇ ಕೆಲಸ ಮಾಡಬೇಕಾ? ತಾನೂ ಹೊರಗೆ ಹೋಗಬೇಕು, ಎಲ್ಲಾ ನೋಡಬೇಕು ಎಂದು. ಇದೇ ಆಸೆಯೊಂದಿಗೆ ಅವಕಾಶ ಮಾಡಿಕೊಂಡು ಹೊರಗೆ ಬರುತ್ತದೆ. ನಗರದಲ್ಲಿ ಕಷ್ಟಕ್ಕೆ ಸಿಕ್ಕಿ ಪರದಾಡುತ್ತದೆ. ಮನುಷ್ಯರೆಲ್ಲರೂ ಕೂಡ ತನ್ನನ್ನು ಹೊಡೆಯಲು ಬರುವುದನ್ನು ನೋಡಿ ಗಾಬರಿಯಾಗುತ್ತದೆ. ಒಂದೇ ಹೊಡೆತಕ್ಕೆ ಪಡ್ಚ ಆಗಿಹೋಗಬೇಕಾಗಿದ್ದ ಬ್ಯಾರಿಯನ್ನು ಒಂದು ಹುಡುಗಿ ಕಾಪಾಡುತ್ತಾಳೆ. ಇದು ಅವಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತದೆ. ಮುಂದೆ ಅದಕ್ಕೆ ಮನುಷ್ಯ ತಮ್ಮನ್ನು ಓಡಿಸಿ ತಾವು ತಯಾರು ಮಾಡುವ ಜೇನನ್ನೆಲ್ಲಾ ದೋಚಿಕೊಳ್ಳುತ್ತಾನೆ ಎಂದು ತಿಳಿಯುತ್ತದೆ.. ಮನುಷ್ಯರಿಗೆ ಪಾಠ ಕಲಿಸಲು ತೀರ್ಮಾನಿಸುತ್ತದೆ. ಹೀಗೇ ಮುಂದುವರೆಯುತ್ತಾ ಕತೆಯು ಮನುಷ್ಯ ಮತ್ತು ಜೇನ್ನೊಣಗಳಲ್ಲಿ ಇರುವ ಸಂಬಂಧ ತಿಳಿಸಿಕೊಡುತ್ತದೆ. ಇದು ೨೦೦೭ ರಲ್ಲಿ ತಯಾರಾದ ಸಿನೆಮಾ. ***

ಈ ಕಾರ್ಟೂನ್ ಮತ್ತು ಅನಿಮೇಷನ್ ಮೂವಿಗಳು ಸುಮ್ಮನೇ ಒಂದು time pass fun ಎನ್ನುವಂತಿದ್ದರೂ ಸಹ ಎಷ್ಟು ಚೆನ್ನಾಗಿ ನಿರೂಪಿಸಲ್ಪಟ್ಟಿದೆಯೆಂದರೆ ಮನರಂಜನೆಯ ಜೊತೆಗೆ ಜೇನ್ನೊಣಗಳ ಗೂಡು, ಅವುಗಳ ಜೀವನ ವ್ಯವಸ್ಥೆ, ಅವುಗಳ ಕೆಲಸ, ಇನ್ನಿತರ ಚಟುವಟಿಕೆಗಳ ಬಗ್ಗೆ ಪೂರ್ತಿ ಮಾಹಿತಿಯೂ ನಮಗೇ ಗೊತ್ತಿಲ್ಲದಂತೆ ಮನಸ್ಸಿನಲ್ಲಿ ದಾಖಲಾಗಿಬಿಡುತ್ತದೆ. ಅದನ್ನು ನೋಡುವ ಮಕ್ಕಳು(ದೊಡ್ಡವರೂ ಕೂಡ) ಪ್ರಕೃತಿಯ ಬಗ್ಗೆ, ಜೇನುಗಳ ಬಗ್ಗೆ ಒಂದು ಪ್ರೀತಿ ಬೆಳೆಸಿಕೊಳ್ಳುವಂತಿದೆ. ಪ್ರಕೃತಿ, ಪ್ರಾಣಿಗಳ ಬಗ್ಗೆ ಆಸಕ್ತಿ ಬೆಳೆಸುವಂತಹ, ಪ್ರೀತಿ ಕರುಣೆ ಬೆಳೆಸುವಂತಹ, ವಿಷಯಗಳನ್ನು ತಿಳಿಸಿಕೊಡುವಂತಹ ಇಂತಹ ಕಾರ್ಯಕ್ರಮಗಳು ನನಗೆ ಖುಷಿ ಕೊಡುತ್ತವೆ. ಸಾಧ್ಯವಾದರೆ ನೀವೂ ನೋಡಿ. ಮುಂದಿನ ಬಾರಿ ಜೇನೊಂದು ಹಾರಿಬಂದಾಗ ಕೈಗೆ ಸಿಕ್ಕ ವಸ್ತುವಿನಿಂದ ಅದನ್ನು ಹೊಡೆಯಲು ನೋಡದೇ ನಿಮಗೆ ಅದರಲ್ಲೊಂದು ಪುಟ್ಟ ಮಾಯಾ ಕಾಣುವಂತಾದರೆ ಅಥವಾ ನಿಮ್ಮ ಮಕ್ಕಳಿಗೆ ಅದು ತನ್ನ ಗೆಳೆಯ ಬ್ಯಾರಿ ಎನ್ನಿಸುವಂತಾದರೆ ಸಾರ್ಥಕ.

8 ಕಾಮೆಂಟ್‌ಗಳು:

sunaath ಹೇಳಿದರು...

ಈ ತರಹಾ ಇರುವ ಪಾಶ್ಚಾತ್ಯ animation cartoonಗಳು ತುಂಬಾ ಚೆನ್ನಾಗಿರುತ್ತವೆ, ಅಲ್ಲವೆ?

ಬಾಲು ಹೇಳಿದರು...

nanu ice age nodidde, adu kooda super ittu. :)

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ತಪ್ಪದೇ ನಾನೂ ಅದಿತಿಯೂ ನೋಡುತ್ತೇವೆ ಈ ಚಿತ್ರವನ್ನು. ತಿಳಿಸಿದ್ದಕ್ಕಾಗಿ ಧನ್ಯವಾದಗಳು. :) ನನ್ನ ಬಳಿ Ice Age part-2 ಇದೆ. ಈ ಚಿತ್ರವೂ ತುಂಬಾ ತುಂಬಾ ಚೆನ್ನಾಗಿದೆ. ಸಾಧ್ಯವಾದರೊಮ್ಮೆ ನೋಡು.

ಚುಕ್ಕಿಚಿತ್ತಾರ ಹೇಳಿದರು...

ನಾನು ನೊಡಿದ ಅನಿಮೆಶನ್ ಸಿನಿಮಾಗಳಲ್ಲಿ” ನಿಮೊ” ತು೦ಬಾ ಇಷ್ಟವಾದದ್ದು. ನನ್ನ ಮಗಳಿಗೆ ಈ ತರದ ಸಿನಿಮಾ ತು೦ಬಾ ಇಷ್ಟ.

Savitha SR ಹೇಳಿದರು...

ವಿಕಾಸ್,
ಮಾಯಾಪುಟ್ಟಿ ಕುತೂಹಲ ಹುಟ್ಟಿಸಿದೆ. "Ratatouille" ಚಿತ್ರ ಕೂಡ ಚೆಂದಿದೆ ನೋಡಿ, ಇಲಿಗಳ ಬಗ್ಗೆ ಸಾಫ್ಟ್ ಕಾರ್ನರ್ ಬರತ್ತೆ :) ಹೌದು ಈ ಕಾರ್ಟೂನ್ಗಳು ನಮಗೆ ಖುಷಿ, ಮನೋರಂಜನೆ ಜೊತೆಗೆ T&J ರೀತಿ ನೂರಾರು ಪ್ರಯತ್ನಗಳನ್ನ ಪಟ್ಟರೂ ಸೋಲೊಪ್ಪದ..ಗೆಲುವಿನ ಹಾದಿ ಬಿಡದ ಪಾಠವನ್ನ ಸಹ ಗೊತ್ತಿಲ್ಲದೆ ಕಲಿಸಿ ಕೊಡತ್ವೆ.
-ಸವಿತ

ಅನಾಮಧೇಯ ಹೇಳಿದರು...

ನಿಜ. ಈ ಚಿತ್ರವನ್ನ ನಾನೂ ನೋಡಿದ್ದೀನಿ. good one :)

- Vaishali

ವಿ.ರಾ.ಹೆ. ಹೇಳಿದರು...

ಹೌದು ಕಾಕಾ. ಇಂತವು ಸುಮಾರಿವೆ. ನಮ್ಮ ದೇಶದಲ್ಲಿ ಇಂತಾದ್ದು ತಯಾರು ಮಾಡೋಕೆ ಯಾರ ತಲೆಗೂ ಹೊಳೆಯೋದೇ ಇಲ್ವಾ ಅಂತ!

ಬಾಲು, ತೇಜಸ್ವಿನಿ... ಐಸ್ ಏಜ್ ನೋಡಿಲ್ಲ ನಾನು ನೋಡ್ಬೇಕಾಯ್ತು. thanx

ಚುಕ್ಕಿ, ನಿಮೂ ಕೂಡ ನನ್ ಪಟ್ಟಿಗೆ ಸೇರ್ಪಡೆಯಾಗಿದೆ. thanx

ಸವಿತ, Ratatouille also added my list. :) thanks

ಕಾಫಿ, ಬರೀ ನೋಡಿ ಸುಮ್ನಿದ್ರೆ ಆಗ್ಲಿಲ್ಲ. ನಮ್ಮಂತ ಚಿಕ್ಕ ಮಕ್ಕಳಿಗೆ ಅದರ ಬಗ್ಗೆ ಹೇಳಬೇಕು :)

ಆಲಾಪಿನಿ ಹೇಳಿದರು...

naanoo nodbeku... chakattaagi barediddiya...