ಮಂಗಳವಾರ, ಏಪ್ರಿಲ್ 26, 2011

ಇದು ಬರ್ಲಿಂಗ್ಟನ್

ಬದುಕು ಅಟ್ಲಾಂಟಿಕ್ ಸಾಗರವನ್ನು ದಾಟಿಸಿ ಕರೆತಂದಿದೆ. ಕೆನಡಾ ದೇಶದ ಬರ್ಲಿಂಗ್ಟನ್ ಎಂಬ ಊರಿನ ಕಟ್ಟಡವೊಂದರ ಹದಿನೆಂಟನೇ ಮಹಡಿಯಲ್ಲಿ ನಾವು ಇಳಿದುಕೊಂಡಿರುವ ಮನೆಯ ಬಾಲ್ಕನಿಯಿಂದ ನಿಂತು ನೋಡುತ್ತಿದ್ದರೆ ಗೆರೆ ಎಳೆದಂತಹ ರಸ್ತೆಗಳು, ಬಣ್ಣ ಬಣ್ಣದ ರಟ್ಟಿನಂತೆ ಕಾಣುವ ಮನೆಗಳು, ಚಳಿಗಾಲಕ್ಕೆ ಎಲೆ ಕಳೆದುಕೊಂಡು ನಿಂತ ಖಾಲಿ ಖಾಲಿ ಮರಗಳು, ಮೈ ಕೊರೆಯುವ ಚಳಿ...


ನಮ್ಮ ಕಂಪನಿಯ ಒಂದು ಘಟಕ ಇಲ್ಲಿ ಇರುವುದರಿಂದ ಮತ್ತು ಅದರೊಂದಿಗೆ ನಮ್ಮ ವ್ಯವಹಾರವಿದ್ದುದರಿಂದ ಈ ಊರಿನ ಹೆಸರು ತಿಳಿದಿತ್ತೇ ಹೊರತು ಮತ್ಯಾವುದೇ ಮಾಹಿತಿ ಗೊತ್ತಿರಲಿಲ್ಲ, ಆ ಬಗ್ಗೆ ಯೋಚಿಸಲೂ ಹೋಗಿರಲಿಲ್ಲ. ಈಗ ನೋಡಿದರೆ ಇಲ್ಲೇ ಬಂದಿದ್ದೇನೆ. ಆಶ್ಚರ್ಯವಾಗುತ್ತದೆ. ಸಣ್ಣವನಿದ್ದಾಗ ನಾನು, ಅಪ್ಪ ಒಂದು ಆಟ ಆಡುತ್ತಿದ್ದೆವು. ನಮ್ಮ ಮನೆಯಲ್ಲಿ ಒಂದು ದೊಡ್ಡ ವಿಶ್ವನಕಾಶೆ ಇತ್ತು. ಅಪ್ಪ ಅದನ್ನು ನೆಲದ ಮೇಲೆ ಹರಡಿ ಯಾವುದಾದರೂ ಒಂದು ಸ್ಥಳದ ಹೆಸರು ನೋಡಿ ಹೇಳುತ್ತಿದ್ದರು. ನಾನು ಅದು ಎಲ್ಲಿದೆ ಎಂದು ಹುಡುಕಿ ಹೇಳಬೇಕಿತ್ತು. ಕೆಲವೊಮ್ಮ ಸ್ವಲ್ಪ ದೊಡ್ಡದಾಗಿ ಅಚ್ಚುಹಾಕಿರುವ ಹೆಸರನ್ನು ಹೇಳುತ್ತಿದ್ದರು, ನಾನು ಬೇಗ ಹುಡುಕಿ ಮತ್ತೊಂದು ಸ್ಥಳದ ಹೆಸರು ಹೇಳಲು ಕೇಳುತ್ತಿದ್ದೆ. ಅವರಿಗೆ ಬೇರೆ ಕೆಲಸವಿದ್ದಾಗ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಯಾವುದೋ ಪುಟ್ಟ ಊರೊಂದನ್ನು ಅಥವಾ ಎಲ್ಲೋ ಸಣ್ಣದಾಗಿರುವ ದ್ವೀಪವೊಂದನ್ನೋ ಹೇಳಿಬಿಡುತ್ತಿದ್ದರು. ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಹುಡುಕಲೇಬೇಕೆಂಬ ಛಲಕ್ಕೆ ಬೀಳುತ್ತಿದ್ದೆ. ಭೂಪಟವನ್ನು ಪೂರ್ತಿ ತಡಕಾಡುತ್ತಿದ್ದೆ. ಹೀಗೆ ಆಡಿ ಆಡಿ ನನಗೆ ವಿಶ್ವದ ದೇಶ, ಸ್ಥಳಗಳ ಹೆಸರುಗಳು ಮತ್ತು ಇರುವೆಡೆಗಳು ಸುಮಾರಾಗಿ ಪರಿಚಯವಾದದ್ದು. ಇಲ್ಲಿಗೆ ಬರುವ ಮುಂಚೆ ಕಂಪ್ಯೂಟರ್ನಲ್ಲಿ ವಿಕಿಮ್ಯಾಪಿಯಾ ತೆಗೆದು ಈ ಊರಿನ ಹೆಸರನ್ನು ಹುಡುಕುತ್ತಿದ್ದಾಗ ಅಪ್ಪನೊಂದಿಗೆ ಆಡುತ್ತಿದ್ದ ನಕಾಶೆ ಹುಡುಕಾಟ ನೆನಪಾಗಿತ್ತು. ಬರ್ಲಿಂಗ್ಟನ್ ಎಂದು ಸರ್ಚ್ ಕೊಟ್ಟರೆ ಹಲವು ಬರ್ಲಿಂಗ್ಟನ್ ಗಳು ಪಟ್ಟಿಯಾಗುತ್ತವೆ. ಇದೊಂತರಾ ನಮ್ಮ ಕಡೆಯ ’ಸಿದ್ದಾಪುರ’ ಎಂಬ ಹೆಸರಿನಂತೆ. ಕರ್ನಾಟಕದಲ್ಲಿ ಹಲವು ಸಿದ್ದಾಪುರಗಳಿದ್ದಂತೆ ಬ್ರಿಟಿಷರು ಇದ್ದ ಕಡೆಯೆಲ್ಲಾ ಒಂದೊಂದು Burlington ನಾಮಕರಣ ಮಾಡಿಬಿಟ್ಟಿದ್ದಾರೆ. :)

ಇದು ನನಗೆ ಹೊಸದೊಂದು ಜಗತ್ತು. ಎಷ್ಟೆಷ್ಟೋ ಲೇನ್ ಗಳಿರುವ ಅಗಲ ಹೈವೇಗಳು, ಮುಗಿಯುವುದೇ ಇಲ್ಲ ಎಂಬಂತೆ ಹಾಯ್ದು ಹೋಗುತ್ತಲೇ ಇರುವ ಕಾರುಗಳು, ಕಾಲ್ನಡಿಗೆಯ ಜನರೇ ಇಲ್ಲದ ರಸ್ತೆಗಳು, ಅಪರೂಪಕ್ಕೆ ಮನೆಗಳಿಂದ ಹೊರಗೆ ಕಾಣಿಸಿ ಮರೆಯಾಗಿಬಿಡುವ ಮನುಷ್ಯರು, ರಾತ್ರಿ ಎಂಟೂವರೆ ತನಕವೂ ಇರುವ ಸೂರ್ಯನ ಬೆಳಕು! ಟೊರಾಂಟೋದಿಂದ ೫೦ ಕಿ.ಮಿ. ದೂರದ ಈ ನಗರ 'ಒಂಟಾರಿಯೋ ಲೇಕ್' ಎನ್ನುವ ಸಮುದ್ರದಂತಿರುವ ಒಂದು ದೊಡ್ಡ ಸರೋವರವೊಂದರ ದಡದ ಮೇಲಿದೆ. ಸರೋವರದ ಆಚೆ ದಡದಿಂದ ಯು.ಎಸ್.ಎ! ಸದ್ಯಕ್ಕೆ ಇಲ್ಲಿನ ಪಾರ್ಲಿಮೆಂಟಿಗೆ ಮಧ್ಯಂತರ ಚುನಾವಣೆ. ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಹೆಣ್ಣುಮಗಳೊಬ್ಬರು ಓಟು ಕೇಳಲು ನಮ್ಮಮನೆಗೂ ಬಂದಿದ್ದರು :). -೨ ಇಂದ ೭ ಡಿಗ್ರಿ ಸೆಲ್ಶಿಯಸ್ ಒಳಗೇ ಓಲಾಡುತ್ತಿರುವ ತಾಪಮಾನ, ಗಾಳಿ, ಮಳೆಗಳು ಹೊರಗೆ ಹೆಚ್ಚು ಓಡಾಡಲಾಗದಂತೆ ಮಾಡಿವೆ. ಇನ್ನೇನು ಬೇಸಿಗೆ ಶುರುವಾದ ಮೇಲೆ ನೋಡಬೇಕು.

********

ಸತ್ಯಸಾಯಿಬಾಬಾ ತೀರಿಕೊಂಡಿದ್ದಾರೆ.  ಅವರು ದೇವಮಾನವ ಎನ್ನುವುದಕ್ಕಾಗದಿದ್ದರೆ ವಿಶೇಷಮಾನವ ಎನ್ನುವುದಕ್ಕೇನೂ ಅಡ್ದಿಯಿರಲಿಲ್ಲ. ಕೆಲವು ವ್ಯಕ್ತಿತ್ವಗಳು ಹಾಗೆಯೇ. ನಾನು ಅವರ ಭಕ್ತ ಅಥವಾ ಹಿಂಬಾಲಕನಲ್ಲದಿದ್ದರೂ ವೈಯಕ್ತಿಕವಾಗಿ ಬಾಬಾ ಬಗ್ಗೆ ನನಗೆ ಒಂದು ಪ್ರೀತಿಯೂ, ಗೌರವವೂ ಇದೆ. ಅದಕ್ಕೆ ಕಾರಣಗಳೂ ಇವೆ... ಇರಲಿ. ಆ ಬಗ್ಗೆ ಮತ್ತೆ ಬರೆದೇನು.

.........

ಸಿಗೋಣ..

ಶುಕ್ರವಾರ, ಏಪ್ರಿಲ್ 1, 2011

ಶೃಂಗೇರಿಯ ಮೂಗುತಿ ಮೀನು

ಅದು ಹರಿಹರಪುರ. ತುಂಗೆ ತೆಳುವಾಗಿ ಹರಿಯುತ್ತಿದ್ದಾಳೆ. ನಾನು ಮಲಗಿದ್ದೆ ಮಡಿಲಲ್ಲಿ. ಸಣ್ಣ ಸಣ್ಣ ಗುಂಡು ಗುಂಡು ಕಲ್ಲುಗಳ ನಯವಾದ ಹಾಸಿಗೆ.. ಹತ್ತಾರು ಮೃದಂಗಗಳು ಒಂದೇ ಲಯದಲ್ಲಿ ನುಡಿದಂತೆ... ನಾದಮಂಟಪದ ಕಲ್ಲಿನ ಕಂಬಗಳಲ್ಲಿ ಸ್ವರಗಳು ಹೊಮ್ಮಿದಂತೆ ಕಿವಿಗೆ ಹೊಸದೊಂದು ನಾದಮಯ ಲೋಕ... ಹೊರಗಿನಿಂದ ನೀರಿನ ಜುಳು ಜುಳು ಸಂಗೀತ, ಭೋರ್ಗರೆಯುವಾಗ ನೀರಿನ ಅಬ್ಬರದ ಕೂಗನ್ನು ಕೇಳಿದ್ದೆ, ಆದರೆ ನೀರಿನೊಳಗಿನ ಈ ಸಂಗೀತ ಲೋಕದ ಅರಿವಿರಲಿಲ್ಲ. ಇಲ್ಲಿ ಸಮತಟ್ಟಾದ ಹರಿವಿತ್ತು. ಆ ನೀರು ಹರಿಯುವಾಗ ದೊಡ್ಡ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ಕಲ್ಲುಗಳ ಮೇಲೆ ತೆವಳಿ, ಹೊರಳಾಡಿ, ಪುಟಿದು ಮುಂದೆ ಹೋಗುತ್ತಾ ಸಂಗೀತದ ಹೊನಲನ್ನೂ ಹರಿಸುತ್ತದೆ. ಹೊರಗಿನಿಂದ ಅದು ಕೇಳದು, ಆದರೆ ಮುಳುಗಿದ ನೀರಿನಲ್ಲಿ ಅದು ಗಂಧರ್ವಲೋಕಗಾನ! ಅದೆಷ್ಟು ಹೊತ್ತೋ ಗೊತ್ತಿಲ್ಲ. ಕೇಳುತ್ತಾ ಮಲಗಿದ್ದೆ....

***

ಅವತ್ತಿಗಾಗಲೇ ಶೃಂಗೇರಿಗೆ ಹೋಗದೆ  ಹತ್ತು ವರ್ಷಗಳ ಮೇಲಾಗಿಬಿಟ್ಟಿತ್ತು. ಇದ್ದಕ್ಕಿಂದ್ದತೇ ದೈವಪ್ರೇರಣೆಯಾಗಿ ಶೃಂಗೇರಿಗೆ ಹೋಗಬೇಕೆನಿಸಿತ್ತು. :P ಇಬ್ಬರು ಗೆಳೆಯರಿಗೆ ದೈವಾನುಗ್ರಹದ ಭರವಸೆ ಮೂಡಿಸಿ ಕರೆದುಕೊಂಡು ಅವತ್ತು ಶೃಂಗೇರಿಗೆ ಹೋಗಿ ಇಳಿದಾಗ ಸಂಜೆಯಾಗಿತ್ತು. ಜನವೋ ಜನ. ಉಳಿದುಕೊಳ್ಳಲು ವಸತಿ ಕೇಳಿದರೆ ಎಲ್ಲೂ ಸಿಗಲಿಲ್ಲ. ದೇವಸ್ಥಾನದ ವಸತಿಗಳೆಲ್ಲಾ ತುಂಬಿಹೋಗಿವೆ. ಖಾಸಗಿಯವರದ್ದೂ ತುಂಬಿಹೋಗಿ ಉಳಿದ ಕೆಲವಕ್ಕೆ ಮೂರುಪಟ್ಟು ಬೆಲೆ ಕೊಡಲು ಪೈಪೋಟಿಯಿತ್ತು. ಹೆಂಗಸರು, ಮಕ್ಕಳು-ಮರಿ ಇದ್ದವರಿಗೆ ಆದ್ಯತೆ. ನಮಗ್ಯಾವನು ಕೊಡುತ್ತಾನೆ ರೂಮು? ಇತ್ತೀಚೆಗೆ ಯಾವ ಪುಣ್ಯ ಕ್ಷೇತ್ರಗಳಿಗೆ ಹೋದರೂ ಅಷ್ಟೆ. ರಶ್ಶ್.. ಮೊದಲೆಲ್ಲಾ ಹೀಗಿರಲಿಲ್ಲ , ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಪ್ರತಿ ಶನಿವಾರ ಭಾನುವಾರಗಳೂ ಜಾತ್ರೆ! ಜನರಲ್ಲಿ ದೈವಭಕ್ತಿ ಜಾಸ್ತಿಯಾಗಿ ಹೋಗಿದೆಯಾ? ಗೊತ್ತಿಲ್ಲ. ಹೆಚ್ಚಾಗಿ ಈಗಿನ ಕನೆಕ್ಟಿವಿಟಿ ಇದಕ್ಕೆ ಕಾರಣವಿರಬಹುದು. ಮೊದಲೆಲ್ಲಾ ಪ್ರಯಾಣ ಅಷ್ಟು ಸುಲಭವಿರಲಿಲ್ಲ. ನಾನು ಸಣ್ಣವನಿದ್ದಾಗ ಶಿರಸಿಗೆ ಹೋಗಲು ಮೈಸೂರು-ಯಲ್ಲಾಪುರ ಬಸ್ಸು, ಬೆಂಗಳೂರು-ಕಾರವಾರ ಬಸ್ಸು ಅಂತೆಲ್ಲಾ ಸಮಯ ನೋಡಿಕೊಂಡು ಹೊರಡುತ್ತಿದ್ದುದು ನೆನಪಿದೆ. ಈಗ ಹಾಗಿಲ್ಲ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಕಷ್ಟು ಬಸ್ಸುಗಳಿವೆ. ಅದಿಲ್ಲದಿದ್ದರೆ ಜನರ ಬಳಿ ಸ್ವಂತ/ಬಾಡಿಗೆ ಗಾಡಿಗಳಿವೆ. ಅದಕ್ಕೇ ಇರಬೇಕು, ಓಡಾಟವೂ ಜಾಸ್ತಿಯಾಗಿದೆ. ಅಂದ ಮೇಲೆ ಕೇಳಬೇಕೇ.. ದೇವರೂ ಫುಲ್ ಬಿಜಿ! ಸರಿ.. ಅವತ್ತು ರಾತ್ರಿಯವರೆಗೂ ಎಲ್ಲಿಯೂ ವಸತಿ ವ್ಯವಸ್ಥೆ ಸಿಗದಿದ್ದಾಗ ಇಲ್ಲೇ ಹತ್ತಿರದ ಹಳ್ಳಿಯೊಂದರಲ್ಲಿ ತಮ್ಮ ನೆಂಟರ ಮನೆ ಇದೆ ಅಲ್ಲಿಗೆ ಹೋಗೋಣ ಅಂತ ಒಬ್ಬ ಗೆಳೆಯನೆಂದ. ಮತ್ತೊಬ್ಬ ಬೇಡ ಅಂದ... ಕೊಪ್ಪಕ್ಕೆ ಹೋಗಿಬಿಡೋಣ ಅಂತ ಮತ್ತೊಬ್ಬನೆಂದ, ನಾನು ಬೇಡ ಎಂದೆ. ಅಲ್ಲಿಗೆ ಅಲ್ಲೇ ದೇವಸ್ಥಾನದ ಸುತ್ತಲ ಆವರಣದೊಳಗೆ ಮಲಗುವುದೆಂದು ನಿರ್ಧರಿಸಿದೆವು. ಎಲ್ಲಾದರೆ ನಮಗೇನು,  ಊಟ ಮಾಡಿ ಬಂದು ... ಮಲ್ಗೋಕೆ ಭೂಮ್ ತಾಯಿ ಮಂಚಾ... ಅಂತ ಚಾಪೆ ಹಾಸುವಷ್ಟರಲ್ಲಿ ಗೆಳೆಯನಿಗೆ ಯಾರೋ ಪರಿಚಯದ ಪೋಲೀಸ್ ಒಬ್ಬರು ನೆನಪಾಗಿಬಿಟ್ಟರು. ಅವರನ್ನೊಮ್ಮೆ ಕೇಳಿನೋಡೋಣ ಅಂತ ಫೋನ್ ಮಾಡಲಾಗಿ ಅವರೂ ಸಿಕ್ಕು ಅರ್ಧ ಗಂಟೆಯೊಳಗೆ ನೈಟ್ ಡ್ಯೂಟಿಗೆ ಹೋಗಿದ್ದ ಪೋಲೀಸರ ಕೋಣೆಯ ಕೀಗಳು ನಮ್ಮ ಕೈಲಿದ್ದವು.

ಮಾರನೇ ದಿನ ಸುಖವಾಗಿ ನಿಧಾನಕ್ಕೆ ಎದ್ದು ತಯಾರಾಗಿ ಬಿಗ್ ಬಾಸ್ ಚಂದ್ರಮೌಳೇಶ್ವರನಿಗೂ, ಶಾರದಾಂಬೆಗೂ ಕೈಮುಗಿದು ಸೀದಾ ನೆಡೆದದ್ದು ತುಂಗಾನದಿಯ ಕಡೆಗೆ. ಶೃಂಗೇರಿಯ ಆಕರ್ಷಣೆ ತುಂಗಾನದಿಯ ರಾಶಿ ರಾಶಿ ಮೀನುಗಳು. ಅವುಗಳನ್ನು ನೋಡುತ್ತಾ ಕೂರುವುದು, ಅವುಗಳಿಗೆ ತಿಂಡಿ ತಿನ್ನಿಸುವುದು, ಆಟವಾಡುವುದು, ನೀರಲ್ಲಿ ಕಾಲುಬಿಟ್ಟುಕೊಂಡು ಅವುಗಳಿಂದ ಕಚಗುಳಿ ಕೊಡಿಸಿಕೊಳುವುದು ನನಗಂತೂ ಭಾರೀ ಇಷ್ಟ. ಅಲ್ಲಿ ಎಷ್ಟೋ ಜನ ಮೀನುಗಳೊಂದಿಗೆ ಖುಷಿ ಪಡುತ್ತಿದ್ದರು. ಮಕ್ಕಳು ಮೀನುಗಳನ್ನು ನೋಡಿ ಕುಣಿಯುತ್ತಿದ್ದವು. ಮಂಡಕ್ಕಿ ಎಸೆಯುತ್ತಿದ್ದವು. ಹಿಂಡು ಹಿಂಡು ಮೀನುಗಳು..... ಎಷ್ಟು ಚಂದ... ಇಂತಹುಗಳಿಂದಲೇ ಅಲ್ಲವೇ ಈ ಭೂಮಿ ಇಷ್ಟು ಸುಂದರ...  ನಾನು ಮೂಗುತಿ ಮೀನನ್ನು ಹುಡುಕುತ್ತಿದ್ದೆ.... . ಸಣ್ಣವನಿದ್ದಾಗ ಪ್ರತಿಬಾರಿ ಹೋದಾಗಲೂ ಮೀನಿನ ಗುಂಪಿನಲ್ಲಿ ಕಾಣಿಸುತ್ತಿತ್ತು. ಯಾರೋ ಒಂದು ಮೀನಿಗೆ ಮೂಗುತಿ ರಿಂಗ್ ಹಾಕಿ ಬಿಟ್ಟಿದ್ದರು. ಈ ಸಲ ಅದು ಕಾಣಿಸಲಿಲ್ಲ. ನಾ ಬರ್ತೀನಿ ಅಂತ ಕಾದು ಕೂತಿರತ್ತಾ ಅದು? ಎಷ್ಟು ವರ್ಷ ಆಯಸ್ಸೋ ಏನೋ ಆ ಮೀನಿಗೆ! ಈಗ ಬದುಕಿದೆಯೋ ಇಲ್ವೋ ಗೊತ್ತಿಲ್ಲ. ನಾವಂತೂ ಕೂತಿದ್ದೆವು ಒಂದು ತಾಸು ಅಲ್ಲೇ.  ನದಿಯ ಆಕಡೆ ನರಸಿಂಹ ವನ.  ಅಲ್ಲಿಗೆ ಹೋಗಲು ಸೇತುವೆ ಇಲ್ಲದ ಕಾಲದಲ್ಲಿ ಅಪ್ಪನ ಹೆಗಲ ಮೇಲೆ ಕೂತು ನದಿದಾಟುತ್ತಿದ್ದುದು ನೆನಪಾಯಿತು.. ನರಸಿಂಹ ವನ ತಂಪಾಗಿತ್ತು. ನರಸಿಂಹವನದಲ್ಲೊಂದು ಮಂದಿರ ಮಾಡಿದ್ದಾರೆ. ಅಲ್ಲಿ ಶ್ಶ್... ಸೈಲೆನ್ಸ್.. ಯಾಕೋ ಗೊತ್ತಿಲ್ಲ ಅಂಗಿ ಬಿಚ್ಚಿಕೊಂಡೇ ಒಳಗೆ ಹೋಗಬೇಕು.... ಆ ವನದಲ್ಲಿ ಜಗದ್ಗುರುಗಳ ವಾಸ್ತವ್ಯವಿದೆ.

ಮಧ್ಯಾಹ್ನ ದೇವಸ್ಥಾನದ ಫುಲ್ ಮೀಲ್ಸ್ ಉಂಡು ಶಿವಮೊಗ್ಗದ ದಾರಿ ಕಡೆ ಯೋಚಿಸಿದಾಗ ಗೆಳೆಯನೊಬ್ಬನಿಗೆ ನೆನಪಾದದ್ದು ಹರಿಹರಪುರ! ಶೃಂಗೇರಿ-ಶಿವಮೊಗ್ಗ ದಾರಿಯಲ್ಲೇ ನಡುವೆ ಇದೆ. ಅವನ ಪೂರ್ವಜರ ಊರು ಅದು. ನಮಗೇನು .. ಜೈ ಅಂದೆವು.  ಬಸ್ ಹತ್ತಿದೆವು. ಅಲ್ಲೊಂದು ಮಠವೂ ಇದೆ. ಅಲ್ಲಿಗೆ ಹೋಗೋಣ ಅಂತ ಅವನೆಂದ. ಕೆಳಗೆ ತುಂಗಾನದಿ ಹರಿಯುತ್ತದೆ. ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ ಅಂದ. ಸರಿ ಅಂದೆವು... ಸ್ವಲ್ಪ ದೂರ ನಡೆದು ಗಿಡಮರಗಳ ಸಂದಿ ಹಾಯ್ದು ಹೆಚ್ಚು ಆಳವಿಲ್ಲದ ಜಾಗ ಹುಡುಕಿ ಸೆಟ್ಲಾದೆವು.. ಆ ಇಡೀ ಜಗತ್ತಿನಲ್ಲಿ ನಾವು ನಾಲ್ವರು ಮಾತ್ರ! ನಾವು ಮೂವರು ಮತ್ತು ತುಂಗೆ. ತಾಸುಗಟ್ಟಲೇ ನೀರಿನಲ್ಲಿ ಮಲಗಿ, ಆಡಿ, ಈಜಿ ರಿಲ್ಯಾಕ್ಸ್ ಆದೆವು. ಸಂಜೆಯಾಗುತ್ತಿತ್ತು. ಐದೈದು ನಿಮಿಷಕ್ಕೆ ಬಸ್ಸು ಬರಲು ಅದು ಬೆಂಗಳೂರಲ್ಲ. ಮತ್ತೆ ಶಿವಮೊಗ್ಗ ಬಸ್ಸು ಸಿಗದಿದ್ದರೆ ಕಷ್ಟ ಎಂದುಕೊಂಡು ಅಲ್ಲಿಂದ ಎದ್ದೆವು.. ಹೊರಡುವಾಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸುಮ್ಮನೇ ಒಮ್ಮೆ ಹಿಂದಿರುಗಿ ನೋಡಿದೆ. ಹೊಳೆನೀರಿನಲ್ಲಿ ಆ ಮೂಗುತಿ ಮೀನು ಫಳಕ್ಕನೆ ಮಿಂಚಿದಂತಾಯಿತು. ಶೃಂಗೇರಿ ಟ್ರಿಪ್ಪು ಸಂಪೂರ್ಣವಾಗಿತ್ತು.