ಭಾನುವಾರ, ಡಿಸೆಂಬರ್ 21, 2008

ನಮ್ಮ ತಪ್ಪಿಗೆ ನಾವೇ ನಗುವುದು

ಈ "ನಮ್ಮ ತಪ್ಪಿಗೆ ನಾವೇ ನಗುವುದು" ಮೂರು ರೀತಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಇದು ನಮ್ಮನ್ನು ನಾವೇ ಕ್ಷಮಿಸಿಕೊಳ್ಳಲು ಸಹಾಯಮಾಡುತ್ತದೆ. ಬಹಳಷ್ಟು ಸಲ ನಮ್ಮದೇ ತಪ್ಪಿನಿಂದ ನಮ್ಮ ಮೇಲೆ ನಮಗೇ ಬಹಳ ಬೇಸರವಾಗಿರುತ್ತದೆ. ಆದ್ದರಿಂದ ನಮ್ಮ ತಪ್ಪಿಗೆ ನಾವೇ ನಕ್ಕರೆ ಇಂತಹ ಬೇಸರವನ್ನೂ ತಮಾಷೆಯಾಗಿ ಪರಿವರ್ತಿಸಿ ಇದರಿಂದ ಮುಂದೆ ಆ ತಪ್ಪನ್ನು ಮಾಡದಂತೆ ಕಲಿತಂತಾಗುತ್ತದೆ.

ಎರಡನೆಯದಾಗಿ, ಬೇರೆಯವರ ಮುಂದೆ ನಮ್ಮ ತಪ್ಪನ್ನು ಒಪ್ಪಿಕೊಂಡು ನಾವೇ ನಗುವುದು. ಇದರಿಂದ ಇವನೂ ಕೂಡ ಥೇಟು ನಮ್ಮಂತೆಯೇ ಎಂದು ಎಲ್ಲರಿಗೂ ಅನ್ನಿಸುತ್ತದೆ. ಕೆಲವು ಒಳ್ಳೆಯ ನಾಯಕರು ತಮ್ಮ ತಂಡದೊಂದಿಗೆ ಹೀಗೆ ಮಾಡುತ್ತಾರೆ. ಇದು ತಮ್ಮೊಂದಿಗೆ ಇರುವವರ ಜೊತೆ, ತಮ್ಮೊಂದಿಗೆ ಕೆಲಸ ಮಾಡುವವರ ಜೊತೆಯಲ್ಲಿ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಎಷ್ಟೋ ಜನ ತಮ್ಮ ಬಾಸ್ ಗಳು, ನಾಯಕರು ತಮ್ಮ ಕೆಳಗಿನವರಿಗಿಂತ ತಾವೇ ಶ್ರೇಷ್ಠ ಎಂದುಕೊಂಡಿದ್ದಾರೆ ಅಥವಾ ಅವನು ಸಾಮಾನ್ಯ ಜನರಂತೆ ಇರುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಅವರ ಮುಂದೆ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಅವರಿಗೂ ಕೂಡ ತಮ್ಮ ನಾಯಕನೂ ತಮ್ಮಂತೆಯೇ ಅನಿಸುವುದಲ್ಲದೇ ಒಂದು ರೀತಿಯ ಗೌರವ ಭಾವನೆ ಬೆಳೆಯಲೂ ಸಹಾಯವಾಗುತ್ತದೆ. ಇದು ಕೇವಲ ನಾಯಕರಿಷ್ಟೇ ಅಲ್ಲದೇ, ಎಲ್ಲರಿಗೂ ಅನ್ವಯವಾಗುತ್ತದೆ.


ಮೂರನೆಯದಾಗಿ,ಈ ನಮ್ಮ ತಪ್ಪಿಗೆ ನಾವೇ ನಗುವುದರಿಂದ ಇನ್ನೊಂದು ಮುಖ್ಯ ಉಪಯೋಗವಿದೆ. ಅದೇನೆಂದರೆ ಇದು ಬೇರೆಯವರು ನಮ್ಮ ತಪ್ಪನ್ನು ಎತ್ತಿ ತೋರಿಸದಂತೆ ಮಾಡುತ್ತದೆ. ನಮ್ಮ ತಪ್ಪಿಗೆ ನಾವೇ ಮೊದಲು ನಕ್ಕುಬಿಟ್ಟರೆ ಇನ್ನೊಬ್ಬರಿಗೆ ನಮ್ಮ ತಪ್ಪನ್ನು ಆಡಿಕೊಂಡು ನಗಲು ಅವಕಾಶ ಸಿಗುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರು ನಮ್ಮ ತಪ್ಪನ್ನು ತೋರಿಸಿದಾಗ ಆಗುವ ನೋವಿಗಿಂತ ನಮ್ಮ ತಪ್ಪನ್ನು ನಾವೇ ಕಂಡುಕೊಳ್ಳುವುದು ಸುಲಭ ಹಾಗೂ ಒಳ್ಳೆಯದು. ನಾವು ಒಂದು ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅಥವಾ ಯಾವುದಾದರೂ ಕೆಲಸದ ಮುಂದಾಳ್ತನ ವಹಿಸಿದ್ದಾಗ ನಮ್ಮಲ್ಲಿ ಪ್ರತಿಯೊಂದರಲ್ಲೂ ತಪ್ಪನ್ನು ಕಂಡು ಹಿಡಿಯುವ, ಅಥವಾ ಅದಕ್ಕಾಗೇ ಸದಾ ಪ್ರಯತ್ನಿಸುವ ಜನ ಇದ್ದೇ ಇರುತ್ತಾರೆ. ಅಂತಹ ಸಂದರ್ಭಗಳಲ್ಲಿ ನಾವು ನಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಅಥವಾ ಮುಚ್ಚಿಹಾಕಲು ನೋಡಿದರೆ ಇದು ಇನ್ನೂ ಟೀಕೆಗೆ ಗುರಿಯಾಗಬಹುದು ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗಬಹುದು. ಆದ್ದರಿಂದ ನಮ್ಮಿಂದ ತಪ್ಪಾದಾಗ ಒಪ್ಪಿಕೊಂಡು ನಕ್ಕುಬಿಡುವುದೊಳ್ಳೆಯದು.

ಅಂದಹಾಗೇ ಈ ರೀತಿ ನಮ್ಮನ್ನು ನಾವೇ ಹಾಸ್ಯ ಮಾಡಿಕೊಳ್ಳುವುದರಿಂದ ನಮಗೆ ತೊಂದರೆ ಏನೂ ಇಲ್ಲ. ಆದರೆ ಇದನ್ನು ಅತಿಯಾದ ರೀತಿಯಲ್ಲಿ ಮಾಡಿ ಜೋಕರ್ ಆಗದಂತೆ ಎಚ್ಚರ ವಹಿಸಬೇಕು. ನಮ್ಮದು ನಿಜವಾಗಿಯೂ ತಪ್ಪಿದೆ ಅಥವಾ ಕೇವಲ ನಮ್ಮಿಂದಲೇ ತಪ್ಪಾಗಿದೆ ಎಂಬ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಬೇಕು. ಬೇರೆಯವನ್ನು ಮೆಚ್ಚಿಸಲು ಹೋಗಬಾರದು. ಈ ನಮ್ಮ ತಪ್ಪಿಗೆ ನಾವೇ ನಗುವುದೆನ್ನುವುದು ನಮ್ಮನ್ನು ನಾವೇ ಕೆಳಮಟ್ಟಕ್ಕಿಳಿಸಿಕೊಳ್ಳುವಂತಹುದಾಗಿರಬಾರದು. ಪದೇಪದೇ ತಪ್ಪು ಮಾಡುವುದು ಹೇಗೆ ಸರಿಯಲ್ಲವೋ ಅದೇ ರೀತಿ ನಮ್ಮ ತಪ್ಪನ್ನು ನಾವೇ ಅತೀ ವೈಭವೀಕರಿಸಿ ಪದೇ ಪದೇ ನಕ್ಕು ನಗೆಪಾಟಲಿಗೀಡಾಗುವುದೂ ಸರಿಯಲ್ಲ.


ಕೊನೆಯದಾಗಿ, ಬೇರೆಯವರ ತಪ್ಪನ್ನು ತೋರಿಸಿ ನಗುವಂತದ್ದು. ಇದನ್ನು ಯಾವತ್ತೂ ಮಾಡಬಾರದು. ಬೇರೆಯವರ ತಪ್ಪಿನಿಂದ ನಾವು ಕಲಿಯಲು ಹಾಗು ಎಚ್ಚರ ವಹಿಸಲು ಪ್ರಯತ್ನಿಸಬೇಕು. ಬರೀ ನಮ್ಮ ತಪ್ಪಿನಿಂದ ನಾವು ಕಲಿಯುತ್ತೇವೆ ಎಂದು ಹೊರಟರೆ ಅದು ಖಂಡಿತ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ನಮ್ಮ ಜೀವನವಿಡೀ ಸಾಕಾಗುವುದಿಲ್ಲ. ನಮ್ಮ ತಪ್ಪಿಗೆ ನಾವೇ ನಕ್ಕು ಬೇರೆಯವರೂ ಕೂಡ ತಮ್ಮ ತಪ್ಪಿಗೆ ತಾವೇ ನಗುವಂತೆ ಪ್ರೋತ್ಸಾಹಿಸಬೇಕು. ನಾವು ತಪ್ಪು ಮಾಡಿದಾಗ ಆಡಿಕೊಂಡ ಮನುಷ್ಯನ ತಪ್ಪನ್ನು ನಾವು ಆಡಿಕೊಂಡು ನಗದೇ ಸುಮ್ಮನಿದ್ದರೆ ಅದು ಯಾವ ರೀತಿ ಮನಃಸ್ಥಾಪಗಳಿಗೂ ಕಾರಣವಾಗದೇ ಇರುವುದಲ್ಲದೇ ಮುಂದಿನ ಬಾರಿ ಅದೇ ಮನುಷ್ಯ ನಮ್ಮ ತಪ್ಪನ್ನು ನೋಡುವ ದೃಷ್ಟಿಯೇ ಬೇರೆ ರೀತಿಯದ್ದಾಗಿರುತ್ತದೆ. ಹಾಗೂ ಇದು ಒಬ್ಬರ ತಪ್ಪಿನಿಂದ ಇನ್ನೊಬ್ಬರು ಕಲಿತು, ತಿದ್ದಿಕೊಳ್ಳಲು, ಎಚ್ಚರ ವಹಿಸಲು ಸಹಾಯವಾಗುತ್ತದೆ. ಇದರಿಂದ ಎಲ್ಲರಿಗೂ ಲಾಭ.

ಇಂಗ್ಲೀಷ್ ಮೂಲ: laughing-at-mistakes

****

ತಪ್ಪು ಮಾಡದೇ ಇದ್ದುಬಿಟ್ಟರೆ ಇದ್ಯಾವ ರಗಳೆಯೂ ಇರುವುದಿಲ್ಲ. ಆದರೆ ಅದು ಸಾಧ್ಯವಿಲ್ಲ ಅಂತೀರಾ?. ನಿಜ ನಿಜ.

ಸರ್ವೇ ಜನಾಃ ಸುಖಿನೋ ಭವಂತು
ಸರ್ವೇ ಸಂತು ನಿರಾಮಯ: ........ :) :)

15 ಕಾಮೆಂಟ್‌ಗಳು:

sunaath ಹೇಳಿದರು...

ನಮ್ಮ ತಪ್ಪಿಗೆ ನಾವೇ ನಕ್ಕುಬಿಡಬೇಕು, ಆದರೆ ನಮ್ಮ ಗೌರವ
ಕಳೆದುಕೊಳ್ಳಬಾರದು ಎನ್ನುವ ನೀತಿ ಅತ್ಯಂತ ಒಳ್ಳೆಯ ನೀತಿಯಾಗಿದೆ. ಆದರೆ, ಆಚರಣೆಯಲ್ಲಿ ಕಠಿಣ.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ತಪ್ಪು ಮಾಡುವುದು ಸಹಜ. ಆದರೇ ಅದೇ ತಪ್ಪನ್ನು ಒಪ್ಪಿಕೊಳ್ಳುವುದು ಬಲು ಕಷ್ಟ. ಅದರಲ್ಲೂ ಒಪ್ಪಿಕೊಂಡು ತಾನೇ ನಕ್ಕು ನಲಿಯುವುದು ಬಲು ಕಠಿಣ. ಆದರೆ ಒಂದೊಳ್ಳೆ ಉತ್ತಮ ಕಾರ್ಯದ ರೀತಿ-ನೀತಿ ಹಾಗೂ ಅದರ ಉಪಯೋಗ-ಅನುಪಯೋಗಗಳನ್ನು ತುಂಬ ಸರಳವಾಗಿ ವಿವರಿಸಿದ್ದೀಯಾ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ. ಮನಸ್ಸಿದ್ದರೆ ತಾನೇ ಮಾರ್ಗ? :)

Lakshmi Shashidhar Chaitanya ಹೇಳಿದರು...

hmmm....yochne maado antha baraha.

shivu.k ಹೇಳಿದರು...

ವಿಕಾಶ್,
ನಮ್ಮ ತಪ್ಪಿಗೆ ನಾವೇ ನಕ್ಕು ಬಿಡಬೇಕು. ಈ ವಿಚಾರದಲ್ಲಿ ಎಲ್ಲವನ್ನೂ ತೂಕವಾಗಿ, ತರ್ಕಬದ್ಧವಾಗಿ ಬರೆದಿದ್ದೀರಿ. ಒಂದು ಒಳ್ಳೆಯ ಲೇಖನ ಇಷ್ಟವಾಯಿತು.

Supreeth.K.S ಹೇಳಿದರು...

ಇದೇನಿದು, ವಿಜಯ ಕರ್ನಾಟಕದಲ್ಲೇನಾದರೂ ವ್ಯಕ್ತಿತ್ವ ವಿಕಸನ ಅಂಕಣ ಬರೆಯುವ ಚಾನ್ಸು ಸಿಕ್ಕಿದೆಯೇ?

ವಿ.ರಾ.ಹೆ. ಹೇಳಿದರು...

ಸುನಾಥ ಕಾಕಾ, thanx

ತೇಜಕ್ಸ್, ನಿಜ. ನಕ್ಕು ನಲಿಯದು ಬ್ಯಾಡ, ಸುಮ್ಮನೇ ನಕ್ಕರೆ ಸಾಕು. :)

ಲಕ್ಕಿ, thanx
ಶಿವು, thanx

ಸುಪ್ರೀತ್, ನೀವು ಹೇಳಿದ ಮೇಲೆ ಅದೇ ಯೋಚ್ನೆ ಬಂತು! ಆದ್ರೆ ಪಾಪ ಅಣಿಮುತ್ತು ಷಡಕ್ಷರಿಯವರಿಗೆ ತೊಂದ್ರೆ ಆಗ್ಬಾರ್ದು ಅಂತ ಸುಮ್ನಾಗಿದ್ದಿನಿ :)

ಚಿತ್ರಾ ಸಂತೋಷ್ ಹೇಳಿದರು...

ಪಾಪ ವಿಕಾಸ್..ಇಟಲಿಯಲ್ಲಿ ಕುಳಿತು 'ವ್ಯಕ್ತಿತ್ವ ವಿಕಸನ 'ಲೇಖನ ಬರೆಯುತ್ತಿದ್ದಾರೆ..ಎಲ್ಲವೂ ನಮಗಾಗಿ..ಲೋಕಕ್ಕಾಗಿ. ಚೆನ್ನಾಗಿದೆ..
ಅದ್ಸರಿ..ನಮ್ ತಪ್ಪಿಗೆ ನಾವು ನಗಬೇಕು..ನಮ್ಮ ತಪ್ಪಿಲ್ಲದೆ ಯಾರಾದ್ರೂ ಬೈದ್ರೆ ಏನ್ ಮಾಡ್ಬೇಕು..ಹೇಳ್ತೀರಾ ಪ್ಲೀಸ್..(:)
-ತುಂಬುಪ್ರೀತಿ,
ಚಿತ್ರಾ

ವಿ.ರಾ.ಹೆ. ಹೇಳಿದರು...

ಚಿತ್ರಾ, ಅದು ’ಯಾರು’ ಬೈದ್ರು, ಯಾಕ್ ಬೈದು, ಯಾವಾಗ್ ಬೈದ್ರು ಅನ್ನೋದರ ಮೇಲೆ ಡಿಪೆಂಡ್ ಆಗತ್ತೆ. ಸೋ.. ಜೆನೆರಲ್ ಉತ್ತರ ನಾ ಕೊಡಕ್ಕೆ ಹೋಗಲ್ಲ :)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿ...
ನಿಜ, ಒಪ್ಪಿಕೊಳ್ಳಲೇಬೇಕಾದ ಮಾತುಗಳು.
ಚಂದ ಬರದ್ಯಲೋ ಗುಂಡಣ್ಣ...
ಬರೀತಿರು.

ಯಜ್ಞೇಶ್ (yajnesh) ಹೇಳಿದರು...

ವಿ.ಮನೋಹರ್ ಬರೆದ "ತಪ್ಪು ಮಾಡದವ್ರ್ಯಾರವ್ರೇ...." ಹಾಡು ನೆನಪಾಯಿತು.

ನಿಜ, ನಮ್ಮ ತಪ್ಪಿಗೆ ಚಿಂತಿಸುವ ಬದಲು ಒಮ್ಮೆ ನಕ್ಕು, ತಪ್ಪಿನ ಬಗ್ಗೆ ಚಿಂತನೆ ನಡೆಸಿದರೆ ಮನಸ್ಸು ಹಗುರಾಗುತ್ತದೆ.
ಉತ್ತಮ ಮಾಹಿತಿಯುಳ್ಳ ಉತ್ತಮ ಬರಹ

hEmAsHrEe ಹೇಳಿದರು...

hey thanks Vikas, for the link given to my post.

ಸುಧೇಶ್ ಶೆಟ್ಟಿ ಹೇಳಿದರು...

ಬರಹ ಚೆನ್ನಾಗಿತ್ತು.
ಇತ್ತೀಚೆಗೆ ಬರೆದಿದ್ದು ಅಲ್ಲ ಇರಬೇಕು?
- ಸುಧೇಶ್

ಚಿತ್ರಾ ಸಂತೋಷ್ ಹೇಳಿದರು...

ಆಯ್ತು ಗುರುವರ್ಯರೇ...ಧನ್ಯಳಾದೆ.....ನೀವು ಭಾರತಕ್ಕೆ ಬಂದ ಮೇಲೆ ಕಲಾಕ್ಷೇತ್ರದಲ್ಲಿ ವಿಕಾಸನ 'ವ್ಯಕ್ತಿತ್ವ ವಿಕಸನ' ಪ್ರೋಗ್ರಾಂ ಗೆ ಅರೇಂಜ್ ಮಾಡ್ತೀನಿ..ಆಯಿತಾ.
-ಚಿತ್ರಾ

ವಿ.ರಾ.ಹೆ. ಹೇಳಿದರು...

@ಯಜ್ಞೇಶ್, ಶಾಂತಲಕ್ಕ, ಚಿತ್ರಾ, ಹೇಮಶ್ರೀ
:-) thanx

@ಸುಧೇಶ್,
thanx. ಇತ್ತೀಚೆಗೆ ಬರೆದದ್ದೇ ಅದು . ಆದ್ರೆ ರಾತ್ರಿ ೩ ಗಂಟೆಯಲ್ಲಿ ಬರೆದಿದ್ದರಿಂದ ಸ್ವಲ್ಪ ತಣ್ಣಗಿದೆ ! :P

Sushma Sindhu ಹೇಳಿದರು...

ಹಾಯ್,
ಒಳ್ಳೆಯ ಬರಹ...
ಆದಾಗ್ ನನ್ನ 'ಕನಸು'ಗಳ ಬ್ಲಾಗಿನತ್ತ ಒಮ್ಮೆ ಬ೦ದು ಹೋಗಿ:)
~ಸುಷ್ಮ