ಶುಕ್ರವಾರ, ಡಿಸೆಂಬರ್ 12, 2008

ಇಂಡಿಯಾ, ಇಟಲಿ, ಇತ್ಯಾದಿ....

ಮುಂಬೈ ಘಟನೆ ಅನಂತರ ಬ್ಲಾಗ್ ಲೋಕವೂ ಯಾಕೋ ಥಂಡಾ ಹೊಡೆದಂತಿದೆ. ಬಹುಶ: ಯಾರಿಗೂ ತಮಾಷೆ ಮಾಡಲು ಮನಸ್ಸಿಲ್ಲ, ಸೀರಿಯಸ್ಸ್ ಬರೆದರೆ ಪ್ರಯೋಜನವಿಲ್ಲ ಎಂಬಂತಾಗಿರಬಹುದು. ಅಥವಾ ನನಗೆ ಹಾಗನಿಸುತ್ತಿದೆಯೆನೋ! ಇರಲಿ.

************
ಬೇಡವೆಂದರೂ ಮತ್ತದೇ ಭಯೋತ್ಪಾದನೆ ವಿಷಯಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ೩ ದಿನಗಳ ಹಿಂದೆ ಇಟಲಿಯ ಆಫೀಸಿಗೆ ಬಂದಾಗ ನಾನು ನಿರೀಕ್ಷಿಸಿದಂತೆಯೇ ಆಯಿತು. ನಮ್ಮ ಭಾರತದ ಮಾಧ್ಯಮಗಳು ಅಂತಾರಾಷ್ಟ್ರೀಯ ಸುದ್ದಿ ಎಂಬ ಹೆಸರಿನಲ್ಲಿ "ಅಮೆರಿಕಾದ ನಟಿ ಜಾರಿ ಬಿದ್ದಳು","ಫ್ರೆಂಚ್ ನಟಿಗೆ ಹಲ್ಲು ನೋವು", "ಇಂಗ್ಲೀಷ್ ನಟಿ ಅವನ ಜೊತೆ ಮಲಗಿದ್ದಳು" ಎಂಬ ಚಿಲ್ಲರೆ ಸುದ್ದಿಗಳನ್ನು ಕಾಲು, ಅರ್ಧ ಪುಟ ಪ್ರಕಟಿಸಿ ಕೃತಾರ್ಥರಾಗುತ್ತವೆ. ಇಲ್ಲಿನ ಮಾಧ್ಯಮಗಳು ಹಾಗಲ್ಲ. ಸಾಮಾನ್ಯವಾಗಿ ಏಷಿಯಾದ ಸುದ್ದಿಯನ್ನು, ಭಾರತದ ಸುದ್ದಿಯನ್ನು ಸುಮ್ಮಸುಮ್ಮನೇ ಪ್ರಕಟಿಸುವುದಿಲ್ಲ. ಏನಾದರೂ ಅತಿಮುಖ್ಯ ಘಟನೆಗಳನ್ನು ಮಾತ್ರ ವರದಿ ಮಾಡುತ್ತವೆ. ನಮ್ಮ ಮಾಧ್ಯಮಗಳಂತೆ ವಿದೇಶ ಎಂದರೆ ಅದ್ಭುತ, ಶ್ರೇಷ್ಠ ಎಂದು ಮೊದಲಿನಿಂದಲೂ ಸೂರ್ಯಚಂದ್ರನಕ್ಷತ್ರ ತೋರಿಸಿ ನಮ್ಮ ಜನರನ್ನ, ಮುಂದಿನ ಪೀಳಿಗೆಗಳನ್ನು ಎಲ್ಲದಕ್ಕೂ ವಿದೇಶಗಳೆಡೆಗೆ ಮುಖ ಮಾಡುವಂತೆ ಮಾಡುವುದಿಲ್ಲ. ಆದರೆ ಬಹುಶಃ ಈ ಬಾರಿ ಮುಂಬೈ ಘಟನೆ ಮಾತ್ರ ವಿಶ್ವದ ಎಲ್ಲಾ ದೇಶಗಳ ಮಾಧ್ಯಮಗಳಲ್ಲೂ ಕೊನೇಪಕ್ಷ ಒಂದುದಿನ ಹೆಡ್ ಲೈನ್ಸ್ ಆಗಿದೆ. ಇಟಲಿಯ ಸಮುದ್ರ ತುದಿಯಲ್ಲಿರುವ ಇಲ್ಲಿನ ಜನರಿಗೆ ಭಾರತದ ಬಗ್ಗೆ ಅಷ್ಟೇನೂ ಪರಿಚಯ ಇಲ್ಲ. ದೊಡ್ಡ ದೇಶವಾದ್ದರಿಂದ ಅಂತದ್ದೊಂದು ದೇಶವಿದೆಯೆಂದು ಗೊತ್ತು ಹಾಗೂ ಇತ್ತೀಚೆಗೆ ಭಾರತಕ್ಕೆ ಔಟ್ ಸೋರ್ಸಿಂಗ್ ಒಡನಾಟದಿಂದ ಸ್ವಲ್ಪ ಆಸಕ್ತಿಯೂ ಇದೆ.

ನನಗೆ ಇಲ್ಲಿನವರು ಮೊದಲು ಕೇಳಿದ್ದೇ ಮುಂಬೈ ವಿಷಯ. ಇದೇ ಕಾರಣಕ್ಕಾಗಿ ಕೂಡ ನನ್ನ ವೀಸಾ ತಡವಾಗಿದ್ದರಿಂದ ಎಲ್ಲರಿಗೂ ಮುಂಬೈ ಘಟನೆಯ ಅರಿವಿತ್ತು. ನಿಮ್ಮಲ್ಲಿ ಹೊರಗಿನವರು ಬಂದು ಧಾಳಿ ಮಾಡುವಷ್ಟು ನಿಮ್ಮ ಭದ್ರತೆ ವೀಕಾಗಿದೆಯಾ? ಪಕ್ಕದ ಪಾಕಿಸ್ತಾನದಲ್ಲೇ ಇದಕ್ಕೆ ತರಬೇತಿ ನಡೆಯುತ್ತಿದೆ ಎಂದು ನಿಮಗೆ ಖಾತ್ರಿಯಾಗಿ ಗೊತ್ತಿದ್ದರೂ ಅಷ್ಟು ದೊಡ್ಡ ದೇಶವಾಗಿ ಆ ಸಣ್ಣ ದೇಶವನ್ನು ಗದರಿ ಸುಮ್ಮನಿರಿಸಲು ಯಾಕೆ ಸಾಧ್ಯವಾಗಿಲ್ಲ? ನಿಮ್ಮಲ್ಲಿ ಪದೇ ಪದೇ ಇಂತದ್ದು ನೆಡೆಯುತ್ತಿದ್ದರೂ ನಿಮ್ಮ ಸರ್ಕಾರಗಳೇಕೆ ಹೀಗೆ ಸುಮ್ಮನಿವೆ ? ಎಂಬ ಮುಂತಾದ ಪ್ರಶ್ನೆಗಳಿಗೆ ನಾನು ಉತ್ತರಿಸಲು ತಡಬಡಾಯಿಸಿ ಹೋದೆ. ನಮ್ಮಲ್ಲಿ ಸರ್ಕಾರಗಳಿಗೆ ದೇಶದ ಭದ್ರತೆಗಿಂತ ಅಧಿಕಾರ ಮುಖ್ಯವಾದದ್ದು, ಓಟ್ ಬ್ಯಾಂಕ್ ರಾಜಕಾರಣವಿದೆ, ಅತಿರೇಕದ ಪ್ರಜಾಪ್ರಭುತ್ವವಿದೆ, ಜಾತಿ/ಅಲ್ಪಸಂಖ್ಯಾತ/ಮೀಸಲಾತಿ/ಉದ್ಧಾರದ ಹೆಸರಿನಲ್ಲಿ ಸಮಾಜ ಒಡೆಯುವ ನಮ್ಮ ರಾಜಕಾರಣಿಗಳು ಹೀಗೆ, ನಮ್ಮ ಜನರು ಹೀಗೆ, ನಮ್ಮ ಮಾಧ್ಯಮಗಳು/ಪತ್ರಿಕೆಗಳು ಹೀಗೆ, ನಮಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಎಂದು ಇವರಿಗೆ ಹೇಗೆ ಹೇಳಲಿ, ಹೇಳಿ ನಮ್ಮ ಮರ್ಯಾದೆ ನಾನೇ ಹೇಗೆ ಕಳೆದುಕೊಳ್ಳಲಿ! ಗೊತ್ತಾಗುತ್ತಿಲ್ಲ. :(

*****************************************************




ಈ ಮೇಲಿನ ಚಿತ್ರ ರೋಮಾ ನಗರದ ’ಫಾಂಟನಾ ಡಿ ಟ್ರೇವಿ’(Trevi Fountain) ಎಂಬ ಜಾಗದಲ್ಲಿರುವ ಚರ್ಚೊಂದರ ಗೇಟಿನದ್ದು. ಇಲ್ಲಿ ಹಾಕಿರುವ ಬೀಗಗಳು ಮಾರಾಟದ್ದಲ್ಲ. ಬದಲಾಗಿ ’ನಂಬಿಕೆ’ಯದ್ದು. ಪ್ರೇಮಿಗಳು ಅದರ ಮೇಲೆ ತಮ್ಮ ಹೆಸರು ಬರೆದು ಆ ಚರ್ಚಿನ ಗೇಟಿಗೆ ಹಾಕಿಹೋದರೆ ತಮ್ಮ ಬಂಧ ಶಾಶ್ವತವಾಗಿರುತ್ತದೆ ಎಂದು ನಂಬಿಕೆಯಂತೆ ಇಲ್ಲಿ. ಈ ಪ್ರೇಮಿಗಳ ಸಹವಾಸ ಅಲ್ಲ ಬಿಡಿ :). ನಮ್ಮಕಡೆ ಕೆಲವು ಊರುಗಳ ದೇವಸ್ಥಾನಗಳಲ್ಲಿ ಹೀಗೆ ನಿಂಬೆಹಣ್ಣಿನಿಂದ ಹಿಡಿದು ಚಪ್ಪಲಿಯವರೆಗೆ ಏನೇನನ್ನೋ ಕಟ್ಟುವ ರೂಢಿ/ನಂಬಿಕೆಯಂತೆಯೇ ಇದು ಕೂಡ. ಹಾಗೆಯೇ ಇಲ್ಲಿರುವ ಕಾರಂಜಿಗೆ ಬೆನ್ನು ಮಾಡಿ ನಿಂತು ಬಲಗೈಯಲ್ಲಿ ಎಡಭುಜದ ಮೇಲಿಂದ ನಾಣ್ಯವೊಂದನ್ನು ನೀರಿಗೆ ಎಸೆದರೆ ಮತ್ತೆ ಹೆಂಡ್ತಿ ಮಕ್ಕಳ ಜೊತೆ ರೋಮ್ ನಗರಕ್ಕೆ ಬರುವ ಅವಕಾಶ ಸಿಗುತ್ತದಂತೆ! ಮೂಢನಂಬಿಕೆಯೆಂಬುದು ಬರೀ ಭಾರತಕ್ಕೆ ಸೀಮಿತವಾಗಿಲ್ಲ ಅಲ್ವಾ? :)

****************************************************


ಹಾಗೇ ಈ ನಾಪೋಲಿ ಊರಿನ ನಾನು ಬರೆದ ಹಿಂದಿನ ಬರಹವನ್ನು ಓದಿದ ನನ್ನ ಗೆಳೆಯನೊಬ್ಬ ನನ್ನ ಮೇಲೆ ಮುರಕೊಂಡು ಬಿದ್ದ. ಎಲ್ಲಿಗಾದರೂ ಹೋದಾಗ ಏನೇನು ಒಳ್ಳೆಯದಿದೆಯೋ ಅದರ ಬಗ್ಗೆ ಜಾಸ್ತಿ ತಿಳಿಸಿಕೊಡಬೇಕು. ಬೇರೆ ದೇಶಕ್ಕೆ ಹೋಗಿದ್ದನ್ನು ಬೇರೆ ಗ್ರಹಕ್ಕೆ ಹೋದಂತೆ ಬರೆದದ್ದು ಮಾತ್ರವಲ್ಲದೇ ಹೆಚ್ಚು ನೆಗೆಟಿವ್ ವಿಷಯಗಳನ್ನೇ ಬರೆದು ನೀನೂ ಒಂದು ರೀತಿ ಮರಿ ’ವೈಟ್ ಟೈಗರ್’ ಆಗಿದ್ದೀಯ ನೋಡು ಎಂದು ಬೈದಿದ್ದ. ಎಲ್ಲಾ ಕಡೆಯಲ್ಲೂ ಕಲಾಸಿಪಾಳ್ಯವೂ ಇರುತ್ತದೆ ರಾಜ್ ಮಹಲ್ ವಿಲಾಸ್ ಕೂಡ ಇರುತ್ತದೆ. ಮೆಜೆಸ್ಟಿಕ್ ತೋರಿಸಿ ಇದೇ ಬೆಂಗಳೂರು ಅನ್ನುವುದು ತಪ್ಪು ಎಂದಿದ್ದ. ಅದಕ್ಕೋಸ್ಕರವಾಗಿಯೇ ತಪ್ಪುಕಾಣಿಕೆಯಾಗಿ ಸದ್ಯದ ನಮ್ಮೂರು ’ನಾಪೋಲಿ’ಯ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ನೆಟ್ಟಗೆ ಫೋಟೋ ತೆಗೆಯೋಕೂ ಬರಲ್ಲ ಇವನಿಗೆ ಅಂತ ಛಾಯಾಕನ್ನಡಿ ಶಿವು ಅವರು ನಗಬಹುದು. ಇರಲಿ.

*********

ಇತ್ತೀಚೆಗ್ಯಾಕೋ ಬ್ಲಾಗಿನಲ್ಲಿ ಅಕ್ಷರಗಳಿಗಿಂತ ಬರೀ ಚಿತ್ರಗಳೇ ಜಾಸ್ತಿಯಾಗುತ್ತಿವೆ ಅಂತ ಶ್ರೀನಿಧಿ ಗದರೋಕೆ ಮುಂಚೆ ಈ ಅಭ್ಯಾಸ ಕಡಿಮೆ ಮಾಡಿಕೊಳ್ಳಬೇಕು ! :) ಮತ್ತೆ ಸಿಗೋಣ. bye

13 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ರಾಜಕಾರಣಿಗಳಿಗೇ ನಾಚಿಕೆ ಇಲ್ಲೆ ಅಂದ್ಮೇಲೆ ಅದನ್ನ ಹೇಳಕ್ಕೆ ನಾವ್ಯಾಕೆ ನಾಚಿಕೆ ಪಟ್ಗಳದು?

ಬಾಲು ಹೇಳಿದರು...

ಅಯ್ಯೋ ಏನು ಮಾಡೋದು.. ನಂ ಕ್ಯೂಬಿಕಲ್ ನಲ್ಲಿ ಕೂರೋದು ಒಬ್ಬ ಇಂಗ್ಲೀಶ್ ಪ್ರಾಣಿ. ಇಂಡಿಯಾ - ಪಾಕಿಸ್ತಾನ್ ನ ಕ್ರಿಕೆಟ್ ನಲ್ಲಿ ಮಾತ್ರ ಸೋಲಿಸುತ್ತೆ... ಆ ದೇಶನ ಸೂಮ್ನಿರು ಅಂತ ಗದರಿ ಹೇಳೋಕೆ ಬರೋಲ್ವ ಅಂತ ಕೇಳ್ತಾನೇ? ಎಂಥ ಅಂತ ಹೇಳೋದು?

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,


ಜನಸಂಖ್ಯೆಯಲ್ಲಿ ಹೇಗಿದ್ದರೂ ಮುಂದಿದ್ದೇವೆ.. ಸ್ವಲ್ಪ ಜನರು ಅಲ್ಲಿ ಇಲ್ಲಿ ಸತ್ತರೂ ನಮಗೇನು? ಎಂದು ಎಣಿಸಿಯೇ ನಮ್ಮ ರಾಜಕಾರಣಿಗಳು ಸುಮ್ಮನಿದ್ದಾರೆ ಬಹುಶಃ! ಈ ಭಯೋತ್ಪಾದಕರೂ ಚಾಲೂಕಿದ್ದಾರೆ ಅನಿಸುತ್ತಿದೆ. ಹೆಚ್ಚಾಗಿ ಸಾಮಾನ್ಯರನ್ನು, ಅಲ್ಲೋ ಇಲ್ಲೋ ಕೆಲವು ಭಾರೀ ಕುಳಗಳನ್ನು ಉರುಳಿಸಿದರೂ ದೊಡ್ಡ ರಾಜಕಾರಣಿಗಳ ಸುದ್ದಿಗೇ ಹೋಗಿಲ್ಲ. ಕಾರಣ ಅವರ ಬುಡಕ್ಕೆ ಹೋದರೆ ನಮಗೆಲ್ಲಿ ನಿಜವಾಗಿಯೂ ಕುತ್ತು ಬರುವುದೋ ಎಂದೆಣಿಸಿಯಾಗಿರಬೇಕು!!!!

ಒಮ್ಮೆಯಾದರೂ ಕೆಲವು ರಾಜಕಾರಣಿಗಳನ್ನು ಈ ಭಯೋತ್ಪಾದಕರು ಬಲಿಕೊಡಬೇಕಿತ್ತು. ಆಗಲಾದರೂ ಸರಕಾರ ನಿದ್ದೆಯಿಂದೆದ್ದು ಒಮ್ಮೆ ಅಪಾಕಿಸ್ತಾನವನ್ನು ಝಾಡಿಸುತ್ತಿತ್ತೇನೋ ಎಂದೆನಿಸುತ್ತದೆ.

ಒಂದು ಸಲಹೆ : ಪಾಕ್ = ಪವಿತ್ರ, ಪಾಕಿಸ್ತಾನ ಅಂದರೆ ಪಾವಿತ್ರ್ಯದ ನಾಡೆಂದು ಅರ್ಥ(??!!) ಎಂದು ಕೇಳಿರುವೆ. ಆದರೆ ಮೊದಲಿನಿಂದಲೂ.. ಅಲ್ಲಾ ಹುಟ್ಟುವಾಗ, ಹುಟ್ಟಿದಾಗಿನಿಂದಲೂ ಆ ದೇಶ ಅಪಾಕ್(ಹಿಂದಿಯಲ್ಲಿ "नापाक") ಕೃತ್ಯಗಳನ್ನೇ ನಡೆಸುತ್ತಾ ಬಂದಿದೆ. ಹಾಗಾಗಿ ನಾವೆಲ್ಲಾ ಅದನ್ನು ಇನ್ನು ಮುಂದೆ "ಅಪಾಕಿಸ್ತಾನ" ಎಂದು ಕರೆದೆರೆ ಹೇಗೇ???!(ಇದು ತಮಾಷೆಯಂತೂ ಖಂಡಿತ ಅಲ್ಲ)


ಕೊನೆಯ ಚಿತ್ರ ತುಂಬಾ ರಮಣೀಯವಾಗಿದೆ :) ಅಂದಹಾಗೆ ನೀನೂ ಬೀಗವನ್ನು ಗೇಟಿಗೆ ಹಾಕಿ ಬಂದಿರುವೆಯಾ ಮತ್ತೆ? ನೀರಿಗಾಗಿ :)

sunaath ಹೇಳಿದರು...

ಭಾರತೀಯರು ನಿಜವಾಗಿಯೂ ನಾಚಿಕೊಳ್ಳುವಂತಹ ವಿಷಯ.

ಅನಾಮಧೇಯ ಹೇಳಿದರು...

ನಿನ್ನ ಬ್ಲಾಗ್ ಅಪ್ಡೇಟ್ ಗಾಗಿ ಕಯ್ತಿದ್ದೆ, ನಿನ್ನ ತುಂಬ ಮಿಸ್ ಮಾಡ್ಕೊಳ್ತಿದಿನಿ ಅಂದ್ರೆ ನಂಬ್ತಿಯಾ? ನಿನು ಹೊರಡೋ ಮುಂಚೆ ಸರಿಯಾಗಿ ಮಾತಾಡಲೂ ಆಗಲಿಲ್ಲ. ಬರಹ ಚನ್ನಾಗಿದೆ.

Seema S. Hegde ಹೇಳಿದರು...

ವಿಕಾಸ,
ನೀನು ಹೇಳಿದ್ದು ನಿಜ.
ಮುಂಬೈ ಸುದ್ದಿ ಕೇಳಿದ ನನ್ನ students, colleagues ಗಳು ಎಷ್ಟೊಂದು ಜನ ನಂಗೆ ಕೇಳಿದ್ದು, "Is your family safe back in India?" ಛೇ, ಎಂತಾ ನಾಚಿಕೆಗೇಡು ಎನಿಸಿತ್ತು.

Unknown ಹೇಳಿದರು...

ನಮ್ಮದು ಆಧ್ಯಾತ್ಮ ಜೀವನ, ನಾವು ಶಾಂತಿ ಪ್ರಿಯರು. ನಾವು ವಸುದೈವ ಕುಟುಂಬಕಂ ತತ್ವದವರು. ನಾವು ಪ್ರತಿಯೊಂದು ವ್ಯಕ್ತಿಯಲ್ಲಿ ಭಗವಂತನನ್ನು ಕಾಣುತ್ತೇವೆ. ಹಾಗಾಗಿ ನಾವು ಭದ್ರತೆ ಮುಂತಾದ ವ್ಯರ್ಥ ವಿಷಯಗಳನ್ನು ನಗಣ್ಯ ಮಾಡುತ್ತೇವೆ. ನಮಗೆ ನಮ್ಮ ದೇಹದ ಬಗ್ಗೆ ಚಿಂತೆ ಇಲ್ಲ. ಪುನರ್ಜನ್ಮದಲ್ಲಿ ನಮಗೆ ನಂಬಿಕೆ ಇದೆ. ಆತ್ಮನ ಮೂಲಕ ಪರಮಾತ್ಮನನ್ನು ನಾವು ತಲುಪುತ್ತೇವೆ. ಭಯೋತ್ಪಾದನೆ ಯನ್ನು ನಗಣ್ಯ ಮಾಡುತ್ತೇವೆ. ಹೀಗೆ ಓಳು ಬಿಟ್ಟು ದೇಶದ ಮರ್ಯಾದೆ ಉಳಿಸಿ ನಿಮ್ಮ ಘನತೆ ಹೆಚ್ಚಿಸಿಕೊಳ್ಳಿ. ನಮಗೆ ಉಳಿದಿರುವುದು ಅದೊಂದೇ ಉತ್ತಮ ದಾರಿ. ಏನಂತೀರಿ

shivu.k ಹೇಳಿದರು...

ವಿಕಾಶ್ ಹೆಗಡೆಯವರೆ,
ನಿಮ್ಮ ಇಟಲಿ ಪ್ರವಾಸ, ಮತ್ತು ಅಲ್ಲಿನ ಮಾತುಕತೆ ಬಗ್ಗೆ ನನ್ನ ಇತರ ಬ್ಲಾಗಿಗರ ಅಭಿಪ್ರಾಯವೇ ನನ್ನದು ಕೂಡ. ಅದುಬಿಟ್ಟರೆ ಫೋಟೋವಿಷಯದಲ್ಲಿ ನೀವು ನನ್ನ ಬ್ಲಾಗ್ ಮತ್ತು ನನ್ನ ಹೆಸರನ್ನು ಸೇರಿಸಿ ನನ್ನನ್ನು ಹೊಗಳಿದ್ದೀರೊ, ಅಥವ ಮರ ಹತ್ತಿಸುತ್ತಿದ್ದಿರೋ ತಿಳಿಯದು[ತಮಾಷೆಗೆ ಹೇಳೀದೆ] ಮತ್ತೆ ಬರವಣಿಗೆಗಿಂತ ಫೋಟೋ ಜಾಸ್ತಿಯಾಯ್ತು ಅಂದಿದ್ದು ನಿಮಗಾದರೂ ನನಗೂ ಅದು ಅನ್ವಯವಾಗುತ್ತದೆ. ಅದರೆ ಛಾಯಾಕನ್ನಡಿ ಬ್ಲಾಗನ್ನು ಚಿತ್ರ ಲೇಖನಕ್ಕೆ ಸೀಮಿತ ಮಾಡಿದ್ದೆನಾದ್ದರಿಂದ ನನಗೆ ನಾನೆ ಸಮಾಧಾನ ಪಟ್ಟುಕೊಳ್ಳಬಹುದು. ನನ್ನ ನಿಯತ್ತಿನ ಬರವಣಿಗೆಗೆ "ಕ್ಯಾಮೆರಾ ಹಿಂದೆ" ಬ್ಲಾಗ್ ಇದ್ದೆ ಇದೆ ಬಿಡುವಿನಲ್ಲಿ ಬೇಟಿಕೊಡಿ. ಮತ್ತು ನಾನು ನಿಮಗಲ್ಲಿ ಒಂದು ವಿಚಾರ ಹೇಳಬಯಸುತ್ತೇನೆ. ಎಲ್ಲರಂತೆ ಪ್ರವಾಸ ಲೇಖನ ಬರೆಯುವುದಕ್ಕಿಂತ ನೀವಿರುವಷ್ಟು ದಿನ ಅಲ್ಲಿನ ಜನರ ಅಸಂಭದ್ದ ನಿಲುವುಗಳು, ತರಲೆ ತಾಪತ್ರಯಗಳು, ಹುಚ್ಚಾಟಗಳು, ಇತ್ಯಾದಿಗಳನ್ನು ಗಮನಿಸಿ. ಸಾದ್ಯವಾದರೆ ಅವರನ್ನು ಮಾತಾಡಿಸಿ, ವಿಷಯ ಕಲೆಹಾಕಿ , ಅಮೇಲೆ ಅದರ ಬಗ್ಗೆ ಬರೆಯಿರಿ. ಬಲು ಮಜವಿರುತ್ತದೆ. ಏಕೆಂದರೆ ಪ್ರಪಂಚದ ಯಾವ ಮೂಲೆಗೆ ಹೋದರೂ ಮನುಷ್ಯನ ಹುಟ್ಟುಗುಣಗಳಾದ ಇವೆಲ್ಲಾ ಇದ್ದೆ ಇರುತ್ತದೆ. ಅವರಿಗೆ ಭಾಷೆ ಬೇರೆ. ಚೌಕಟ್ಟು ಬೇರೆಹಾಗಿರುತ್ತದೆ. ನೋಡಿ ಪ್ರಯತ್ನಿಸಿ.. ಹೆಚ್ಚು ಸಲಹೆಕೊಟ್ಟೆನೆಂದುಕೊಳ್ಳಬೇಡಿ. ಮತ್ತೆ ಸಿಗುವ....

ವಿ.ರಾ.ಹೆ. ಹೇಳಿದರು...

ಹರೀಶ್, ಅವ್ರಿಗಿಲ್ಲ ಅಂತ ನಮಗೂ ಇರ್ಬಾರ್ದು ಅಂದ್ರೆ ಹೆಂಗೆ!

ಬಾಲು, ಸರ್ಯಾಗೇ ಹೇಳಿದಾನೆ ಬಿಡು ಅವ್ನು.

ತೇಜಕ್ಕ, ಅಪಾಕಿಸ್ತಾನ! ಒಳ್ಳೇ ಹೆಸ್ರು. :)

ಸುನಾಥ ಕಾಕಾ, ಹ್ಮ್.. ನಿಜ. :(

ಅನಾಮಧೇಯ, ಹುಂ, ನಂಬ್ತೀನಿ.. same with me ಅಂದ್ರೆ ನೀನೂ ನಂಬ್ತೀಯಾ ಅನ್ಕೋತಿನಿ.! thanx

ಸೀಮಕ್ಕ, I faced the same question here !

ಶ್ರೀ.ಶಂ, ಹುಂ.. ಹಂಗೇ ಏನೋ ಮಾಡಿದೆ ಸದ್ಯಕ್ಕೆ. ಆದ್ರೂ..... :(

ಶಿವು, ಏಕೆಂದರೆ ಪ್ರಪಂಚದ ಯಾವ ಮೂಲೆಗೆ ಹೋದರೂ ಮನುಷ್ಯನ ಹುಟ್ಟುಗುಣಗಳಾದ ಇವೆಲ್ಲಾ ಇದ್ದೆ ಇರುತ್ತದೆ.

ಸರಿಯಾಗಿ ಹೇಳಿದ್ದೀರಿ ನೋಡಿ. ನಮಗಿಂತಾ ತಿಕ್ಕಲುಗಳು ಇದಾರೆ ಇಲ್ಲಿ . ಆದ್ರೆ ನಂಗೆ ಮನುಷ್ಯ ಸ್ವಭಾವ, ಮನುಷ್ಯ ಸಂಬಂಧಗಳ ಬಗ್ಗೆ ಬರೆಯೋಕೆ ಇಷ್ಟ, ತಾಳ್ಮೆ ಸ್ವಲ್ಪ ಕಡಿಮೆ ಇದೆ. ಆದ್ರೂ ಪ್ರಯತ್ನ ಮಾಡುವೆ. thanx. ಅಂದ ಹಾಗೆ ಮರಹತ್ತಿಸಿದ್ದಲರೀ ಅದು. ನಿಮ್ ಫೋಟೋಗ್ರಾಫೀ ಇಷ್ಟ ಆಗಿದ್ದಕ್ಕೆ ಹೇಳಿದ್ದು.

ಚಿತ್ರಾ ಸಂತೋಷ್ ಹೇಳಿದರು...

@vikassssss..(:)

ಅನಾಮಧೇಯ ಹೇಳಿದರು...

nannannu iteechige sukhaa summane blog postugaLalli eLedu taralaaguttide:)
- nidhi

Keshav.Kulkarni ಹೇಳಿದರು...

ನಿಮ್ಮ ಬರಹ ಇಷ್ಟ ಆಯ್ತು. ಇಟಲಿಯಲ್ಲಿ ಹಂಪಿ ಅಂತ ಒಂದು ಊರಿದೆಯಂತೆ, ಹೌದಾ?

-ಕೇಶವ (www.kannada-nudi.blogspot.com)

ವಿ.ರಾ.ಹೆ. ಹೇಳಿದರು...

@ಚಿತ್ರಾ , :)

@ನಿಧಿ, ಸುಖಾಸುಮ್ಮನೇ ಏನಲ್ಲ ಅಂತ ನಿಂಗೂ ಗೊತ್ತು :)

@ಕೇಶವ ಕುಲಕರ್ಣೀ
thanx sir :)
ಇಟಲಿಯಲ್ಲಿ ಹಂಪಿ ಅಂತ ಊರಿದೆಯೋ ಏನೋ ಗೊತ್ತಿಲ್ಲ, ಆದರೆ ಪಂಪಿ(ಪಾಂಪಿ) ಅಂತ ಒಂದು ಊರಿದೆ. ಅದು ಬಹಳ ಪ್ರಸಿದ್ಧ ಪ್ರವಾಸಿ ತಾಣ ಇಲ್ಲಿ. ನಾನು ಇರುವ ದಕ್ಷಿಣ ಇಟಲಿಯ ನೇಪಲ್ಸ್ ಎಂಬ ಊರಿನಿಂದ ಸುಮಾರು ೪೦ ಕಿ.ಮಿ. ದೂರದಲ್ಲಿದೆ. ಒಂದು ಕಾಲದಲ್ಲಿ ನಮ್ಮ ಹಂಪಿಯಂತೆಯೇ ಬಹಳ ಮೆರೆಯುತ್ತಿದ್ದ ಆ ನಗರ ಪಕ್ಕದ ವೆಸುವಿಯಾ ಪರ್ವತದ ಜ್ವಾಲಾಮುಖಿಯ ಸ್ಪೋಟಕ್ಕೆ, ಲಾವಾಗೆ ಸಿಕ್ಕು ಹಾಳಾಗಿ ಹೋಯಿತಂತೆ. ಈಗಲೂ ಕೂಡ ಆ ಊರು ನಮ್ಮ ಹಾಳು ಹಂಪಿಯಂತೆಯೇ ಭಗ್ನವಾದ ಕಟ್ಟಡಗಳಿಂದ, ಅವಶೇಷಗಳಿಂದ ಕೂಡಿದೆಯಂತೆ. ನನಗೆ ಹೋಗಬೇಕೆಂಬ ಆಸೆಯಿದ್ದರೂ ಇಲ್ಲಿನ ಹವಾಮಾನದಿಂದಾಗಿ ಹೋಗಲಾಗಿಲ್ಲ ಇನ್ನೂ.