ಇದು ೨೦೦೯ರಲ್ಲಿ 'ದಟ್ಸ್ ಕನ್ನಡ' ಸುದ್ದಿತಾಣಕ್ಕಾಗಿ ಬರೆದಿದ್ದ ಬರಹ . ಇದು ಇವತ್ತಿಗೂ ಪ್ರಸ್ತುತವಾಗಿರುವುದರಿಂದ ಇಲ್ಲಿ ಹಾಕುತ್ತಿದ್ದೇನೆ
***
***
"ಜಪ ಮಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಪವಿತ್ರವಾದವು" - ಇದು ಶ್ರೀ ಸತ್ಯ ಸಾಯಿಬಾಬಾ ತಮ್ಮ ಭಕ್ತಕೋಟಿಗೆ ಸದಾ ಹೇಳುವ ಮಾತುಗಳು. ಇದನ್ನು ಅಕ್ಷರಶ: ಪಾಲಿಸುತ್ತಿರುವವರು ಭದ್ರಾವತಿಯ ಸಾಯಿಭಕ್ತರು.
ಬೇಸಿಗೆಯ ಪ್ರಯಾಣ ಎಂಬುದೇ ಒಂದು ಹಿಂಸೆ. ಆಗಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಎಲ್ಲ ಕಡೆ ಕುಡಿಯುವ ಒಳ್ಳೆಯ ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಅದರಲ್ಲೂ ಮಕ್ಕಳು ಮರಿ ಕಟ್ಟಿಕೊಂಡು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವಾಗ ಕುಡಿಯುವ ನೀರಿನ ಅಗತ್ಯ ಬಹಳ. ಬೇಸಿಗೆಯಲ್ಲಿ ಬಸ್ ಪ್ರಯಾಣ ಮಾಡುವವರು ಭದ್ರಾವತಿ ಮೂಲಕ ಹಾದು ಹೋದರೆ ಬಸ್ ನಿಲ್ದಾಣದ ಒಳಗೆ ಬರುತ್ತಿದ್ದ ಹಾಗೆಯೇ "ನೀರು.. ನೀರು...ಫ್ರೀ ಕೋಲ್ಡ್ ವಾಟರ್" ಎಂದು ಕೇಳಿಕೊಂಡು ಬರುವವರನ್ನು ನೋಡಿರಬಹುದು. ಆ ತಂಪಾದ ನೀರನ್ನು ಕುಡಿದು ದಾಹ ತಣಿಸಿಕೊಂಡಿರಲೂಬಹುದು. ಇದು ಭದ್ರಾವತಿ ಸಾಯಿಭಕ್ತರ ಜನಸೇವೆಯ ಕೆಲಸಗಳಲ್ಲಿ ಒಂದು. ಬೇಸಿಗೆ ಶುರುವಾದ ಕೂಡಲೇ ಬಸ್ ನಿಲ್ದಾಣದಲ್ಲಿ ಇವರು ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಾರೆ. ಬೇಸಿಗೆಯ ಎಲ್ಲಾ ದಿನಗಳಲ್ಲಿಯೂ ಕೂಡ ಬೆಳಗ್ಗಿನಿಂದ ಸಂಜೆಯವರೆಗೂ ಆ ವ್ಯವಸ್ಥೆ ಇರುತ್ತದೆ. ಮಾಮೂಲು ನೀರನ್ನು ಹಾಗೆಯೇ ಕುಡಿದರೆ ದಾಹ ನೀಗುವುದಿಲ್ಲವೆಂದು ಇದಕ್ಕೆ ಶುದ್ಧವಾದ ನೀರಿನಲ್ಲೇ ಮಾಡಿದ ಐಸ್ ಕೂಡ ಸೇರಿಸಿ ಸ್ವಲ್ಪ ತಂಪು ಮಾಡಿರುತ್ತಾರೆ. ದೂರ ದೂರದಿಂದ ಬರುವ ಬಸ್ಸುಗಳು ಕೆಲವೇ ನಿಮಿಷಗಳ ಕಾಲ ಅಲ್ಲಿ ನಿಲ್ಲುತ್ತವೆ. ಅದರಲ್ಲಿನ ಪ್ರಯಾಣಿಕರಿಗೆ ಕೆಳಗೆ ಇಳಿದು ನೀರು ಕುಡಿಯುವಷ್ಟು ಸಮಯವಿರುವುದಿಲ್ಲ ಮತ್ತು ಶುದ್ಧ ನೀರು ಸಿಗುವ ಖಾತ್ರಿಯೂ ಇರುವುದಿಲ್ಲ. ಆದ್ದರಿಂದ ಅಂತಹ ದೂರ ಪ್ರಯಾಣದ ಬಸ್ಸುಗಳ ಬಳಿಗೆ ಸ್ವಯಂ ಸೇವಕರೇ ಖುದ್ದಾಗಿ ಹೋಗಿ "ನೀರು ಬೇಕೇ" ಎಂದು ಕೇಳಿ ಕೊಡುತ್ತಾರೆ. ಬಾಟಲಿಗೆ ನೀರು ತುಂಬಿಸಿಕೊಡುತ್ತಾರೆ. ಬಿರು ಬಿಸಿಲಿಗೆ, ಬೇಸಿಗೆಯ ಬಿಸಿಗೆ ಸಿಕ್ಕ ಪ್ರಯಾಣಿಕರು ದಾಹ ತೀರಿಸಿಕೊಂಡು ಮುಂದೆ ಪ್ರಯಾಣ ಬೆಳೆಸುತ್ತಾರೆ.
ಹೀಗೆ ನೀರು ಒದಗಿಸುತ್ತಿದ್ದ ಭಕ್ತರನ್ನು ಮಾತನಾಡಿಸಿ ಇದರಿಂದ ನಿಮಗೆ ಏನು ದೊರೆಯುತ್ತದೆ ಎಂದು ಕೇಳಿದಾಗ ಬಿಡುವಿನ ಸಮಯದಲ್ಲಿ ಇಂತಹ ಕೈಲಾದ ಸೇವೆ ಮಾಡಿದರೆ ಮನಸಿಗೆ ಏನೋ ಸಣ್ಣ ತೃಪ್ತಿಯ ದೊರೆಯುತ್ತದೆ ಮತ್ತು ಸತ್ಯ ಸಾಯಿಬಾಬಾರವರ ಮಾರ್ಗದರ್ಶನದಿಂದ, ಭಕ್ತಿಯಿಂದ ಈ ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾವ ಅಪೇಕ್ಷೆಯೂ ಇಲ್ಲ ಎಂದರು. ಮೊದಲು ಬಹಳ ಜನ ಈ ಸೇವೆ ಮಾಡಲು ಬರುತ್ತಿದ್ದರು, ಈಗ ಈ ಕೆಲಸಕ್ಕೆ ಜನರನ್ನು ಹುಡುಕಬೇಕಾಗಿದೆ, ಅದರಲ್ಲೂ ಕೂಡ ಈಗಿನ ಮಕ್ಕಳಿಗೆ, ಯುವಕರಿಗಂತೂ ಇಂತಹ ಕೆಲಸಗಳಲ್ಲಿ ಆಸಕ್ತಿಯೇ ಇಲ್ಲ ಎಂದು ವ್ಯಥೆ ಪಟ್ಟುಕೊಂಡರು.
ಇದರ ಹೊರತಾಗಿ ಭದ್ರಾವತಿಯ ಸಾಯಿಬಾಬಾ ಮಂದಿರದ ಶಾಲೆಯಲ್ಲಿ ಬಡವರಿಗಾಗಿ ಉಚಿತ ಮೆಡಿಕಲ್ ಕ್ಯಾಂಪ್ ಗಳು ಪ್ರತೀವಾರ ನಡೆಯುತ್ತವೆ. ಸೇವಾ ಮನೋಭಾವದ ಕೆಲವು ವೈದ್ಯರು ಇದನ್ನು ನಡೆಸಿಕೊಡುತ್ತಾರೆ. "ಜನಸೇವೆಯೇ ಜನಾರ್ದನ ಸೇವೆ" ಎಂಬುದು ಇವರ ಧ್ಯೇಯ. ಬೇರೆ ಕೆಲವು ಊರುಗಳಲ್ಲಿರುವ ಸಾಯಿ ಭಕ್ತರು ಕೂಡ ಈ ಸೇವೆಯನ್ನು ನಡೆಸುತ್ತಾರೆ. ಆದರೆ ಭದ್ರಾವತಿಯ ಸಾಯಿ ಭಕ್ತರ ಈ ಕುಡಿಯುವ ನೀರಿನ ಸೇವೆ ಹಲವಾರು ವರ್ಷಗಳಿಂದ ಅಬಾಧಿತವಾಗಿ ನೆಡೆದುಕೊಂಡು ಬರುತ್ತಿದೆ. ಜನಸೇವೆಯ ಮನಸ್ಸಿರುವ ಸಾಯಿಭಕ್ತರು ಸ್ವಯಂಪ್ರೇರಿತರಾಗಿ ಇದರಲ್ಲಿ ಭಾಗವಹಿಸುತ್ತಾರೆ. ಇಷ್ಟೇ ದಿನ ಇಷ್ಟೇ ಹೊತ್ತು ಮಾಡಬೇಕೆಂಬ ನಿಯಮವಿಲ್ಲದೇ ತಮಗೆ ಬಿಡುವಿರುವಷ್ಟು ಸಮಯವನ್ನು ತೊಡಗಿಸಿಕೊಂಡು ನಡೆಸಿಕೊಂಡು ಬರುತ್ತಿರುವ ಈ ಸೇವೆ ಮಾದರಿಯಾಗಿದೆ. ದೇವರು, ಧರ್ಮ, ಭಕ್ತಿ ಎಂಬುದು ಇಂತಹ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾದರೆ ಅದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ ಎಂಬುದಕ್ಕೇ ಇದೇ ಸಾಕ್ಷಿ.
2 ಕಾಮೆಂಟ್‌ಗಳು:
ಇಂತಹ ಸಮಾಜಸೇವಕರು ಇರುವುದು ಖುಶಿಯ ಸಂಗತಿ.
ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಮಾದರಿಯಾಗುವಂತಹುದು.
ಕಾಮೆಂಟ್ ಪೋಸ್ಟ್ ಮಾಡಿ