ಬುಧವಾರ, ಜನವರಿ 28, 2009

ಜನವರಿ ಕಂತು

ಅವಧಿ ಬ್ಲಾಗ್ ನಿಂದ ಪರಿಚಿತವಾದ ಮೇ ಫ್ಲವರ್ ಮೀಡಿಯಾ ಹೌಸ್ ಗೆ ಹೋಗುವುದೆಂದರೆ ಒಂಥರಾ ಖುಷಿ. ಪಕ್ಕಾ ಪ್ರೊಫೆಷನಲ್ ವಾತಾವರಣದ ಜೊತೆ ಒಂದು ಆಪ್ತ ಸೊಗಡಿನ ವಾತಾವರಣ ಅಲ್ಲಿರುವುದೇ ಕಾರಣವಿರಬಹುದು. ಅದು ಒಂದು ಕಛೇರಿ ಎಂದು ತಿಳಿದಿದ್ದರೂ ಕೂಡ ಅಲ್ಲಿ ಹೋದೊಡನೆ ದೊಡ್ಡಮ್ಮನ ಮನೆಗೋ, ಚಿಕ್ಕಪ್ಪನ ಮನೆಗೋ ಹೋದ ಅನುಭವವಾಗಿಬಿಡುತ್ತದೆ. ಹೇಗೆಂದರೆ ದೊಡ್ಡಮ್ಮನ ಮನೆಗೆ ಹೋದಾಗ ಸೀದಾ ಅಡುಗೇ ಮನೆಗೇ ಹೋಗಿ ಹರಟುತ್ತೇವಲ್ಲ ಹಾಗೆ ಅಲ್ಲಿ ಸಿ.ಇ.ಒ.ಮೋಹನ್ ಸಾರ್ ಜೊತೆ ಹರಟಬಹುದು, ಅಡಿಗೆ ಮನೆಯಲ್ಲಿ ಫ್ರಿಡ್ಜು ತೆಗೆದು, ಡಬ್ಬಿ ಹುಡುಕಿ ತಿಂಡಿ ಕುರುಕಿಸುವಂತೆ ಅಲ್ಲಿ ವಿಧ ವಿಧದ ಕನ್ನಡ-ಇಂಗ್ಲೀಷ್ ಪುಸ್ತಕಗಳನ್ನು, ಪತ್ರಿಕೆಗಳನ್ನು ಹಿಡಿದು ಓದಬಹುದು, ಗೆಳೆಯರ ಜೊತೆ ಸೇರಿ "ಎಲ್ಲಿ ಮಗಾ, ಆ ಹುಡುಗಿ ಕಾಣ್ತನೇ ಇಲ್ವಲ್ಲಾ" ಎಂದು ಮಾತನಾಡುತ್ತಲೇ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಫೊಟೋಗೆ ಫೋಸು ಕೊಡಬಹುದು ! ಪ್ರಸ್ತುತ ಮಾರುಕಟ್ಟೆಯ, ಪ್ರಸ್ತುತ ಅಭಿರುಚಿಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಮೇ ಫ್ಲವರ್ ಕೂಡ ಒಂದು.

****

ಮೊನ್ನೆ ಶನಿವಾರ ಸಂಜೆ ಸ್ಲಂ ಡಾಗ್ ಫಿಲಂ ಬಗ್ಗೆ Mayflowerನಲ್ಲಿ ಸಂವಾದವಿತ್ತು. ಈ ಕೆಲದಿನಗಳಿಂದ ಈ ಸ್ಲಂಡಾಗ್ ಬಗ್ಗೆ ಕೇಳಿ ಓದೀ ಬೇಜಾರು ಬಂದು ಹೋಗಿದೆ ನಿಜ. ಆದರೆ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವವರು ’ಪರಮೇಶ್ವರ್’ಎಂದು ತಿಳಿದಾಕ್ಷಣ ಆಸಕ್ತಿ ತಾನಾಗಿಯೇ ಮೂಡಿತ್ತು! ಈ ತಿಂಗಳ ಮೊದಲವಾರದಲ್ಲಿ ಕುಪ್ಪಳಿಯಲ್ಲಿ ’ಸಾಂಗತ್ಯ’ ತಂಡದವರು ನಡೆಸಿದ ಚಿತ್ರೋತ್ಸವದಲ್ಲಿ ಪರಮೇಶ್ವರರ ಮಾತುಗಳನ್ನು ಕೇಳಿದ್ದೆ. ಅವರ ಸಿನೆಮಾ ಜ್ಞಾನ, ಸಿನೆಮಾಗಳನ್ನು ಅವರು ಸಮತೋಲನವಾಗಿ , ಬರೀ ತೆರೆ ಮೇಲಿನದ್ದನ್ನಲ್ಲದೇ ಅದರ ಹಿನ್ನೆಲೆ ಸಮೇತ ವಿಶ್ಲೇಷಿಸುವ ರೀತಿ, ಪ್ರಶಸ್ತಿ, ಸನ್ಮಾನಗಳ ಹಿಂದಿನ ಉದ್ದೇಶ, ತಂತ್ರ, ಕುತಂತ್ರಗಳ ಬಗ್ಗೆ ಅವರ ಧೋರಣೆ ಬಹಳ ಇಷ್ಟವಾಗಿತ್ತು. ಅವರು ಈ ಸ್ಲಂ ಡಾಗ್ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು.

ಮೂರು ವಾರಗಳ ಹಿಂದೆ ಇದೇ ಸ್ಲಂಡಾಗ್ ಅನ್ನು ನೋಡಿದ್ದೆ. ಬಹಳಷ್ಟು ಅಸ್ವಾಭಾವಿಕ, ಅವಾಸ್ತವಿಕ , ಕಾಕತಾಳೀಯ ಸನ್ನಿವೇಶಗಳನ್ನು ಹೆಣೆದು ಮಾಡಿದ ಈ ಸಿನೆಮಾ ಒಂದು ವಿಭಿನ್ನ ಕಥೆಯುಳ್ಳ ಸಿನೆಮಾ ಆಗಿತ್ತು. ಅದು ಸುಮ್ಮನೆ ಒಂದು ಒಳ್ಳೆಯ ಸಿನೆಮಾದಂತೆ ಅನ್ನಿಸಿತ್ತು. ಅದ್ಭುತವೆನಿಸುವಂತಹ ವಿಶೇಷಗಳೇನೂ ಕಾಣಿಸಿರಲಿಲ್ಲ. ಆದರೆ ಅದಕ್ಕೆ ಗೋಲ್ಡನ್ ಗ್ಲೋಬ್ ಘೋಷಣೆ, ಆಸ್ಕರ್ ಗೆ ನಾಮನಿರ್ದೇಶನ ಆಯಿತು . ಅದಾದ ಮೇಲೆ ಮಾಧ್ಯಮಗಳು ಅದನ್ನು ಹೊತ್ತುಕೊಂಡು ಕುಣಿದ ರೀತಿ, ಕೆಲವರು ಅದನ್ನು ಹೊಗಳಿದ/ಹೊಗಳುತ್ತಿರುವ ರೀತಿ, ವಿಪರೀತ ಚರ್ಚೆ, ಅಲ್ಲಿ ತೋರಿಸಿದ ಸ್ಲಂ ಮುಂತಾದ ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದ್ದನ್ನು ನೋಡಿ ನಾನು ಪೂರ್ತಿ ಸಿನೆಮಾ ಸರಿಯಾಗಿ ನೋಡಿದ್ದೆನಾ ಇಲ್ಲವಾ ಅಂತ ಅನುಮಾನವಾಗಿಬಿಟ್ಟಿತ್ತು.

ಯಾವುದೇ ಸಿನೆಮಾವನ್ನು ಎರಡನೇ ಬಾರಿ ನೋಡಲೇಬೇಕೆಂದು ನೋಡದ ನಾನು ಯಾವುದಕ್ಕೂ ಇರಲಿ ಎಂದು ಅವತ್ತು ಸ್ಲಂಡಾಗನ್ನು ಕೂಲಂಕುಷವಾಗಿ ಮತ್ತೊಂದು ಬಾರಿ ನೋಡಿಕೊಂಡು ಮೇಫ್ಲವರ್ ಗೆ ಹೋದೆ. ಪರಮೇಶ್ವರ್ ಅವರು ಎಂದಿನಂತೆ ತಮ್ಮ ಸಮತೋಲನ ಶೈಲಿಯಲ್ಲಿ ಸಿನೆಮಾವನ್ನು ಸಿನೆಮಾದ ರೀತಿಯಲ್ಲೇ ವಿಶ್ಲೇಷಿಸಿದರು, ಅವರ ವಿಶ್ಲೇಷಣೆಯಲ್ಲಿ ಪ್ರಶಸ್ತಿಯ ತೂಕವಾಗಲೀ, ಭಾರತದ ಕತ್ತಲ ಲೋಕದ ದರ್ಶನದ ವಿರೋಧವಾಗಲೀ ಕಾಣಲಿಲ್ಲ.

ನನಗನಿಸುವುದೇನೆಂದರೆ, ಮೊದಲಿಂದಲೂ ಕೂಡ ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ನಮಗೆ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅದ್ಭುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ, ಸನ್ನಿವೇಶಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ, ಜೊತೆಗೆ ಆ ಪ್ರಶಸ್ತಿಗಳು ಸರ್ವಶ್ರೇಷ್ಠ ಎಂಬ ತಪ್ಪು ತಿಳುವಳಿಕೆಯೂ ಕಾರಣವಾಗಿರುತ್ತದೆ. ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ ನಿರ್ದೇಶಕ ಕೂಡ ಹಾಗೆಲ್ಲ ಅಂದುಕೊಂಡು ಸಿನೆಮಾ ಮಾಡಿರುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ನಾವು ಮಾತ್ರ ಒಂದೊಂದಕ್ಕೂ ಒಂದೊಂದು ಅರ್ಥ ಕೊಡುತ್ತಾ ಹೋಗುತ್ತಿದ್ದೇವೆ. ಒಬ್ಬರು ಇದರಲ್ಲಿ ಹಳದಿ ಬಣ್ಣದ ಪರಿಣಾಮಕಾರಿ ಅದ್ಭುತ ಬಳಕೆಯಿದೆ, ಇದು ಹಳದಿ ಚಿತ್ರ ಎಂದು ವಿಶ್ಲೇಷಿಸಿದ್ದನ್ನು ನೋಡಿ ನಾನೂ, ಪುಟ್ಟಿ ಇಬ್ಬರೂ ಹಳದಿ ಬಣ್ಣದಷ್ಟೆ ನೀಲಿ ಬಣ್ಣವೂ ಇದೆಯಲ್ಲಾ, ಇದು ’ನೀಲಿ ಚಿತ್ರ’ವೂ ಹೌದು ಎಂದು ನಗಾಡಿಕೊಂಡಿದ್ದೆವು.(just kiddingu, ಅವರು ಮನ್ನಿಸಬೇಕು). ಆಸ್ಕರ್ ಬಂದರೆ ಹೆಮ್ಮೆ , ಬರದಿದ್ದರೆ ಟೊಮ್ಮೆ ಎಂದೆಲ್ಲಾ ಕೂಗಾಡುವ ಮೊದಲು ಅದೊಂದು Warner Bros. ನಿರ್ಮಾಣದ, ನಿರ್ದೇಶನದ ಚಿತ್ರ ಎಂದು ಅರಿತುಕೊಂಡರೆ ಒಳ್ಳೆಯದು. ಪ್ರಶಸ್ತಿ ಬಂದರೂ ಅದರಲ್ಲಿ ಭಾರತ ಹೆಮ್ಮ ಪಡುವುದಕ್ಕೆ ಅರ್ಥವೇ ಇಲ್ಲ! ವಿಧಾನ ಸೌಧ ಕಟ್ಟಿದ್ದು ನಾವೇ ಎಂದು ಕೇಂದ್ರ ಕಾರಾಗೃಹದ ಖೈದಿಗಳ ಸಂಭ್ರಮ ಪಟ್ಟಂತೆ ಅಷ್ಟೆ!


***************


ಇದರ ಜೊತೆಗೆ ಇನ್ನೊಂದು ವಿಷಯ ಬರೆಯಲೇ ಬೇಕು. ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ಪುಸ್ತಕ ಬರೆದು ಬೂಕರ್ ಎಂಬ ಪ್ರಶಸ್ತಿ ಪಡೆದು ಮಾಧ್ಯಮಗಳಿಂದ ಅರುಧಂತಿ ರಾಯ್ ಒಂದು ನ್ಯಾಷನಲ್ ಫಿಗರ್ ಆಗಿಹೋದಂತೆ ಮೊನ್ನೆ ಮೊನ್ನೆ ವೈಟ್ ಟೈಗರ್ ಎಂಬ ಪುಸ್ತಕಕ್ಕೆ ಬೂಕರ್ ಬಂದು ಮತ್ತೆ ಮಾಧ್ಯಮಗಳು, ಕೆಲವು ಜನರು ಅದನ್ನು ಹೊತ್ತು ಕುಣಿದರು. ಅದರಲ್ಲೂ ಭಾರತದ ನೆಗೆಟಿವ್ ಬದಿಯ ಅನಾವರಣವಿದೆ ಎಂಬ ಕಾರಣದಿಂದ ವಿರೋಧವೂ ವ್ಯಕ್ತವಾಯಿತು. ೧೮ ವರ್ಷದ ಮಕ್ಕಳಿಂದ ಹಿಡಿದು ೮೦ ವರ್ಷದ ಮುದುಕರವರೆಗಿನವರೂ ಅದನ್ನು ವಿಮರ್ಶೆ ಮಾಡಿದ ಪರಿ ನೋಡಿ ಏನೋ ಅದ್ಭುತವೇ ಇರಬೇಕು ಎಂದು ಭಯ ಭಕ್ತಿಯಿಂದ ಆ ಪುಸ್ತಕವನ್ನೂ ಓದಿ ನೋಡಿದೆ.

ಕಥೆ ಹೂರಣ ಹೀಗಿದೆ. ಉತ್ತರಪ್ರದೇಶದ್ದೋ, ಬಿಹಾರದ್ದೋ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಭೂಮಾಲಿಕರ ದೌರ್ಜನ್ಯ ನೋಡುತ್ತಾ ಬೆಳೆದು ಆ ಹಳ್ಳಿಯಲ್ಲೇ ಅವನ ಜಾತಿಯಲ್ಲಿ ಇದ್ದುದರಲ್ಲಿ ಸ್ವಲ್ಪ ಓದು ಬರಹ ಕಲಿತವನೊಬ್ಬ ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಅವರ ಜೊತೆ ದೆಹಲಿ ನಗರಕ್ಕೆ ಹೋಗಿ ನಗರದ ಬದುಕನ್ನೆಲ್ಲಾ ಪರಿಚಯ ಮಾಡಿಕೊಳ್ಳುತ್ತಾ ಹೋಗಿ ಕೊನೆಗೊಂದು ದಿನ ತನ್ನ ಮಾಲೀಕನನ್ನೇ ಕೊಂದು ಹಣ ಲಪಟಾಯಿಸಿ ಊರು ಬಿಟ್ಟು ಬೇರೆ ಎಲ್ಲೋ ಹೋಗಿ ವ್ಯವಹಾರ ಶುರು ಮಾಡಿ ತಾನೂ ಶ್ರೀಮಂತನಾಗಿಬಿಡುತ್ತಾನೆ. ಇದರ ಮಧ್ಯದಲ್ಲಿ ಸಣ್ಣದಾಗಿ ಹಳ್ಳಿಯ, ಬಡವರ ಕಷ್ಟದ ಬದುಕು, ಜಾತಿವ್ಯವಸ್ಥೆ, ಒಂದಿಷ್ಟು ರಾಜಕೀಯ, ಶ್ರೀಮಂತರ ಶೋಕಿ ಜೀವನಶೈಲಿ, ಮಾನವ ಸಂಬಂಧಗಳ ಬೆಸೆಯುವಿಕೆ ಬೇರ್ಪಡುವಿಕೆ ಮಸಾಲೆಗಳನ್ನು ಅರೆಯಲಾಗಿದೆ. ಈ ಪುಸ್ತಕದಲ್ಲಿ ಪ್ರತಿಯೊಂದು ಪಾತ್ರವೂ, ಸನ್ನಿವೇಶವೂ, ಘಟನೆಗಳೂ ಭಾರತೀಯರಾದ ನಮಗೆ ’ಹೊಸದು’ ಅಥವಾ ’ಬೇರೆ’ ತರದ್ದು ಅನ್ನಿಸುವುದೇ ಇಲ್ಲ. ಹುಟ್ಟಿದಾಗಿನಿಂದ ಇದನ್ನು ಹತ್ತಿರದಿಂದಲೇ, ಸುತ್ತಮುತ್ತಲೂ ಬೆಳೆಯುವ ನಮಗೆ ಇಂತಹ ಸಾಹಿತ್ಯಗಳನ್ನು ಓದಿ ಹಳಸಲು ಎನ್ನಿಸಿರುತ್ತದೆ. ಈ ಪುಸ್ತಕದ ಕತೆಯಂತೂ ಪಕ್ಕಾ ಅಮಿತಾಭನದ್ದೋ, ಮಿಥುನ್ ಚಕ್ರವರ್ತಿಯದ್ದೋ ಹಳೇ ಹಿಂದಿ ಸಿನೆಮಾವನ್ನೇ ನೋಡಿ ವಿವರವಾಗಿ ಬರೆದಂತಿದೆ.

ಇದೂ ಕೂಡ ತೀರಾ ಚೆನ್ನಾಗಿಲ್ಲ ಎಂದು ಪಕ್ಕಕ್ಕೆ ತಳ್ಳಬಿಡಬಹುದಾಂದಂತಹ ಪುಸ್ತಕ ಅಲ್ಲದಿದ್ದರೂ ಅದ್ಭುತವಾಗಿದೆ ಅನ್ನುವಂತದ್ದಂತೂ ಅಲ್ಲವೇ ಅಲ್ಲ ಎಂದು ಖಂಡಿತವಾಗಿ ಹೇಳಿಬಿಡಬಹುದು. ಅದರಲ್ಲಿರುವ ಕಥಾ ನಾಯಕ ಚೈನಾದ ಪ್ರಧಾನಿಯನ್ನುದ್ದೇಶಿಸಿ ಭಾರತದ ಕತ್ತಲೆ ಜಗತ್ತಿನ ಬಗ್ಗೆ ನೆಗೆಟಿವ್ ಧಾಟಿಯಲ್ಲಿ ಹೇಳುತ್ತಾ ಹೋಗುವಂತೆ ಇದನ್ನು ಬರೆದಿರುವುದನ್ನು ಬಿಟ್ಟರೆ ವೈಟ್ ಟೈಗರ್ = ಹಳೇ ಹಿಂದಿ ಸಿನೆಮಾದ ಕಥೆ + ತಮಿಳು ಸಿನೆಮಾದ ಕ್ಲೈಮಾಕ್ಸ್ ! ಕನ್ನಡದಲ್ಲಿ ಇಂಥದ್ದು ನೂರಾರು ಬಂದು ಹೋಗಿವೆ. ಆದರೂ ಕೂಡ ನಮ್ಮವರಿಗೆ ಇದು ಅದ್ಭುತ ಕಥೆಯುಳ್ಳ, ಅದ್ಭುತ ಪಾತ್ರಗಳುಳ್ಳ ಕಾದಂಬರಿ. ಕಾರಣ ’ಬೂಕರ್ ’. ಕೆಲದಿನಗಳ ಹಿಂದೆ ಉತ್ತರ ಭಾರತದ ಸಾಹಿತಿಯೊಬ್ಬರಿಗೆ ಜ್ಞಾನಪೀಠ ಬಂದಿತ್ತು. ಸ್ವಲ್ಪ ಅವರ ವಿಷಯ ತಿಳಿದುಕೊಳ್ಳೋಣ, ಅವರ ಕೃತಿಗಳ ಪರಿಚಯ ಮಾಡಿಕೊಳ್ಳೋಣ ಅಂತ ಹುಡುಕಿದರೆ.. ಉಹುಂ.. ಒಬ್ಬರದ್ದೂ ಅದರ ಬಗ್ಗೆ ಮಾತೇ ಇಲ್ಲ. ಅದೇ ಅರವಿಂದ ಅಡಿಗನ ಬಗ್ಗೆ ಹುಡುಕಿದರೆ ಅವ ಯಾವ ಪರ್ಫ್ಯೂಮ್ ಹಾಕುತ್ತಾನೆ ಎಂಬ ವಿಷಯ ಕೂಡ ಸಿಗಬಹುದೇನೋ! ಹೀಗೆಯೇ ಅರುಂಧತಿ ರಾಯ್ ಪುಸ್ತಕ ಕೂಡ ಒಂದು ಸಾಧಾರಣ ಮಟ್ಟಿಗೆ ಇದ್ದರೂ ಕೂಡ ಪ್ರಶಸ್ತಿ ಕಾರಣದಿಂದಲೇ ಅವರನ್ನು ’ಬುದ್ಧಿಜೀವಿ’ ವರ್ಗಕ್ಕೆ ಸೇರಿಸುವುದರಲ್ಲಿ ನಮ್ಮ ದೇಶದ ಮಾಧ್ಯಮಗಳ ಪಾತ್ರ ಹಿರಿದು. ಬೂಕರ್ ಎಂದರೆ ಜಗತ್ತಿನ ಸಾಹಿತ್ಯ ಲೋಕದ ಪರಮೋಚ್ಛ ಪ್ರಶಸ್ತಿ ಎಂಬಂತೆ ಮಾಧ್ಯಮಗಳು ಪ್ರಚಾರ ಕೊಡುತ್ತವೆ. ಆದರೆ ವಾಸ್ತವ ಅದಲ್ಲ.

************

ಅದ್ಯಾಕೋ ಗೊತ್ತಿಲ್ಲ, ಭಾರತೀಯರಿಗೆ ಮೊದಲಿಂದಲೂ ’ಫಾರಿನ್ ’ಗೆ ಹೋಗುವುದು ಅಂದರೆ ಅದು ಸಾಧನೆ, ಫಾರಿನ್ ಎಂದರೆ ದೇವಲೋಕ, ಅಲ್ಲಿಂದ ಗುರುತಿಸಲ್ಪಡುವುದು ಮೋಕ್ಷ ಪಡೆದಂತೆ ಎಂಬ ಭಾವನೆ. ಅದರಂತೆಯೇ ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ, ಬೂಕರ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಳ್ಳದ ನಾವು ಅದನ್ನು ಜೀವಮಾನದ ಸಾಧನೆ ಎಂಬಂತೆ ಬಿಂಬಿಸಿ, ಆ ಕೃತಿಗಳನ್ನು ಅನಗತ್ಯವಾಗಿ ಮೆರೆಸಿ, ಅದನ್ನು ಪಡೆದವರನ್ನು ಭಾರತದಲ್ಲಿ ವಿಜೃಂಭಿಸಿ ಮಹತ್ವ ಕೊಟ್ಟುಬಿಡುತ್ತೇವೆ. ಒಟ್ಟಿನಲ್ಲಿ ಎಲ್ಲರೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವೆಂದು ಕುಡಿದು ಕೈ ತಲೆಗೊರಸಿಕೊಂಡು ಧನ್ಯರಾಗಿಬಿಡುತ್ತೇವೆ.!

***************

ಸುಮ್ನೆ ಕ್ರಿಟಿಸಿಸಂ ಬರಿಯಕ್ಕೆ ಹೋಗ್ಬೇಡ ಅಂತ ಹತ್ತಿರದವರು ಹೇಳಿದ್ರು, ಆದರೂ ಬರೆದುಬಿಟ್ಟೆ.. ಇದು ಜನವರಿ ಕೋಟಾ!

20 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ನಿನ್ನ ಬರಹ ಓದದೆ ಬಹಳ ದಿನ ಆಗಿದ್ವು ಮಾರಾಯ.
ಲೇಖನ ಚೆನ್ನಾಗಿ ಮೂಡಿ ಬಂದಿದೆ.
ನಾನು ಕೂಡ ಒಂದೂವರೆ ತಿಂಗಳ ಹಿಂದೆಯೇ ಈ ಚಿತ್ರವನ್ನು ನೋಡಿದ್ದೆ. ಅಂಥದ್ದು ವಿಶೇಷ ಏನೂ ಅನ್ನಿಸಲಿಲ್ಲ. ಸಲಾಂ ಬಾಂಬೇ ಬಂದಿದೆ, ಅದೇ ಥರ ಇದೊಂದು.
ಅದರೂ ಸ್ಲಮ್ಮಿನ ವೈಭವೀಕರಿಸಿದ್ದರೆ ಹಾಗು ಸೆಕ್ಯುಲರ್ ಅಂತ ತೋರಿಸುವ ಪ್ರಯತ್ನ ಪಟ್ಟಿದಾರೆ.
ವೈಟ್ ಟೈಗರ್ ಕೂಡ ಹಾಗೆಯೇ. ಅತಿಶವಾದದ್ದೆನಲ್ಲ.
ನೀನು ಹೇಳಿರುವ "ಅದ್ಯಾಕೋ ಗೊತ್ತಿಲ್ಲ, ಭಾರತೀಯರಿಗೆ ಮೊದಲಿಂದಲೂ ’ಫಾರಿನ್ ’ಗೆ ಹೋಗುವುದು ಅಂದರೆ ಅದು ಸಾಧನೆ, ಫಾರಿನ್ ಎಂದರೆ ದೇವಲೋಕ, ಅಲ್ಲಿಂದ ಗುರುತಿಸಲ್ಪಡುವುದು ಮೋಕ್ಷ ಪಡೆದಂತೆ ಎಂಬ ಭಾವನೆ." ನನಗೆ ಸರಿ ಅನ್ನಿಸಲಿಲ್ಲ.

ನೀನು ಯಾಕೋ ತುಂಬಾ STEREOTYPE ಆಗ್ತಾ ಇದ್ದೀಯ ಅಂತ ಅನ್ನುಸ್ತಾ ಇದೆ ನಂಗೆ.

ನಿಜವಾಗಿ ಹೇಳಬೇಕೆಂದರೆ ಇದೊಂದು ಹಾಲಿವುಡ್ ಚಿತ್ರ. ಭಾರತದಲ್ಲಿ ನಡೆಯುವ ಕಥೆಯಾದ್ದರಿಂದ ಅದರಲ್ಲಿ ನಮ್ಮವರೇ ಇರೋದು. ಮೂಲತಃ ಇದು ಇಂಗ್ಲಿಶ್ ಚಿತ್ರ.

ಆದ್ದರಿಂದ ಇದು ಅಲ್ಲಿಯ ಪ್ರಶಸ್ತಿಗಳನ್ನ ಪಡೀತಾ ಇದೆ. ಅದೇ, ಹಿಂದಿಯಲ್ಲಿ ಈ ರೀತಿಯ ಚಿತ್ರ ಬಂದಿದ್ದಾರೆ, ಈ ಪರಿ ಆಗ್ತಾ ಇತ್ತಾ? ಸಿಂಪಲ್ ಲಾಜಿಕ್ಕು ಅಷ್ಟೆ. ಇದೊಂದು ಇಂಗ್ಲಿಶ್ ಚಿತ್ರ, ಇಂಗ್ಲಿಶ್ ಪ್ರಶಸ್ತಿ ಬಾಚಿಕೊಳ್ತಾ ಇದೆ ಅಷ್ಟೆ. ಜಾಸ್ತಿ ತಲೆ ಕೆಡುಸ್ಕೊಬೇಡ.

ಕಟ್ಟೆ ಶಂಕ್ರ

NiTiN Muttige ಹೇಳಿದರು...

ಮೇಫ್ಲವರ್ ಗೆ ಬರಬೇಕೆನ್ನಿಸುತ್ತಿದೆ...!!!! :)

shivu.k ಹೇಳಿದರು...

ವಿಕಾಶ್,

ಸ್ಲಂ ಡಾಗ್ ಬಗ್ಗೆ ಎಲ್ಲರೂ ಹೊಗಳಿ ಬರೆದರೆ, ನೀವು ಅದನ್ನು ಬೇರೆ ರೀತಿ ಬರೆದಿದ್ದೀರಿ.....ನಾನಿನ್ನು ಸಿನಿಮಾ ನೋಡಿಲ್ಲ....ಯಾವುದೇ ಪೂರ್ವಗ್ರಹ ಪೀಡಿತ ನಾಗದೇ ಸಿನಿಮಾ ನೋಡಿದರೆ ಅದರ ಬಂಡವಾಳ ಗೊತ್ತಾಗುತ್ತದೆ....ಅದರೆ ಕುತೂಹಲವಂತೂ ಇದ್ದೇ ಇದೆ....

Shayari ಹೇಳಿದರು...

"ಇದು ಹಳದಿ ಚಿತ್ರ ಎಂದು ವಿಶ್ಲೇಷಿಸಿದ್ದನ್ನು ನೋಡಿ ನಾನೂ...."
Well, ಇಷ್ಟೆಲ್ಲಾ detail ಆಗಿ ನೋಡ್ತಾರ movies ಅನ್ನಾ??;)

ವೈಟ್ ಟೈಗರ್ ಓದಿಲ್ಲ, ಬಟ್ ಕಿರಣ್ ದೇಸಾಯಿಯಾ "The Inheritance of loss" ಒಳ್ಳೆದಿತ್ತು.

Sushrutha Dodderi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Sushrutha Dodderi ಹೇಳಿದರು...

ಬರೀ ಇದೇ ಆಯ್ತು! ಪಾಪ, ಮೋಹನ್ ಸಾರ್‍ನ್ನ ದೊಡ್ಡಮ್ಮ ಅಂತೆಲ್ಲಾ ಕರಿಯೋದು.. ಇರು, ನಿನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ಲಿಕ್ಕೆ ಹೇಳ್ತೀನಿ ಅವ್ರಿಗೆ. :x

ಅನಾಮಧೇಯ ಹೇಳಿದರು...

ಸ್ಮಂ ಡಾಗ್ ಚಿತ್ರದಲ್ಲಿ ಅಸ್ವಾಭಾವಿಕವಾದುದೇನು? ಸಿನಿಮ ಚೌಕಟ್ಟಿನಲ್ಲಿ ಎಷ್ಟು ನೈಜವಾಗಿ ವಸ್ತು ಸ್ಥಿತಿ ತೋರಿಸಿಬಹುದೋ ಅದನ್ನು ಒಂದು ಒಳ್ಳೆಯ ಕತೆಯ ಹಂದರದಲ್ಲಿ ಹೆಣೆದು ತೋರಿಸಿದ್ದಾರೆ. ಅದು ವಿಶೇಷ ಸಿನಿಮ. ಅದಕ್ಕೆ ತಕ್ಕ ಪುರಸ್ಕಾರ ಸಿಗುತ್ತಿದೆ.

ನಿನಗೆ(ನಿನ್ನಂತವರಿಗೆ) ಜ್ಞಾನಪೀಠ, ಆಸ್ಕರ್‍, ಬುಕ್ಕರ್‍ ಯಾವುದೂ ಸರಿಯಿಲ್ಲ. ಅಲಲ..

ಜ್ನಾನಪೀಠ ನಮ್ ದೇಶದೋರೇ ಕೋಡೋದು.. ಅದನ್ನು ಪಡೆದವರನ್ನೂ ಬಯ್ತೀರಿ.

ಆಸ್ಕರ್‍ ಪ್ರಶಸ್ತಿ ಗೆದ್ದ ಸಿನಿಮಗಳನ್ನು ಒಮ್ಮೆ ನೋಡು. ಅರ್ಥ ಮಾಡಿಕೊಳ್ಳಕ್ಕೆ ಲಾಯಕ್ಕಿಲ್ಲ ಅಂದರೆ ನಿನ್ brain washed out. ರಿಪೇರಿಯಾಗಲ್ಲ.!

ಅದ್ಸರಿ.. ಕೇರ್‍ ಆಫ್ ಪುಟ್ಬಾತ್ ಸಿನಿಮದಲ್ಲಿ ಆ ಹುಡುಗನೂ ಸ್ಮಂ ಜನರನ್ನೇ ತೋರಿಸಿ, ನಮ್ಮ ದೇಶದ ರಾಷ್ಟ್ರೀಯ ಪ್ರಶಸ್ತಿ ಪಡೆದುದು.

ಶಂಕರ ಹೇಳದಂತೆ stereotype ಆಗ್ತಿರೋದೇನು, ಆಗಿದ್ದಿ..

ಚಿತ್ರಾ ಸಂತೋಷ್ ಹೇಳಿದರು...

ಕೊನೆಗೂ ಮೌನವ್ರತ ಮುರಿದಿದ್ದು ಯಾರು ಮಾರಾಯ..?!
ಜನವರಿ ಕೊನೆಯಾಗುತ್ತಾ ಬಂದರೂ, ಒಳ್ಳೆ ಬರಹಾನ ಬರೆದಿದ್ದೀರಿ. ನನಗೂ ಮೇ ಫ್ಲವರ್ ಗೆ ಬಂದು ಟೀ ಹೀರೋ ಆಸೆ.
ನೀವು ಹೇಳಿದ ವಿಚಾರವನ್ನೇ ರಾಜೀವ್ ದೀಕ್ಷಿತ್ ಕೂಡ ಭಾರತೀಯರಿಗೆ'ಶಂಖದಿಂದ ಬಂದಿದ್ದೆಲ್ಲಾ ತೀರ್ಥ'ಅನ್ನೋ ಶೀರ್ಷಿಕೆಯಲ್ಲಿ ತುಂಬಾ ಚೆನ್ನಾಗಿ ಬರೆದ ಲೇಖನ 'ಆಜಾದಿ' ಪುಸ್ತಕದಲ್ಲಿದೆ. ವಂದನೆಗಳು.
-ಪ್ರೀತಿಯಿಂದ,
ಚಿತ್ರಾ

ಶ್ರೀನಿಧಿ.ಡಿ.ಎಸ್ ಹೇಳಿದರು...

ಸ್ಲಂಡಾಗ್ ಬಗ್ಗೆ ಓದಿ ಓದಿ ಬೇಜಾರಾಗೋಯ್ತು!:)

ನಿನ್ನ ಕೆಲ ಅಭಿಪ್ರಾಯಗಳ ಬಗ್ಗೆ ನಂಗೆ ಸಹಮತ ಇಲ್ಲ.ಇರ್ಲಿ, ವಾದ ಮಾಡಿ ಪ್ರಯೋಜ್ನ ಇಲ್ಲೆ:)

ವಿ.ರಾ.ಹೆ. ಹೇಳಿದರು...

ಶಂಕರ್ ,ಹ್ಮ್ಮ್.. ಅದೆ ನಾನೂ ಹೇಳಿದ್ದು. ಅದೊಂದು ಇಂಗ್ಲೀಷ್ ಚಿತ್ರ, ಇಂಗ್ಲಿಷ್ ಪ್ರಶಸ್ತಿ ಅಷ್ಟೆ ಅಲ್ವಾ, ಅದಕ್ಕೆ ನಮ್ಮ ದೇಶದಲ್ಲಿ ಇಷ್ಟೋಂದು ಮೆರವಣಿಗೆ ಯಾಕೆ ಮಾಡ್ತಾ ಇದ್ದಾರೆ ಅಂತ ಗೊತ್ತಾಗುತ್ತಿಲ್ಲ! stereotype ಯಾಕನ್ನಿಸ್ತು? ಈ ಧಾಟಿಯಲ್ಲಿ ಇದೇ ಮೊದಲು ಬರೆದಿರೋದು.! thanQ

ನಿತಿನ್, ವೆಲ್ಕಮ್ಮು, ನನ್ ಬ್ಲಾಗ್ ಮತ್ತು ಮೇ ಫ್ಲವರ್ ಎರಡಕ್ಕೂ :)

@ಶಿವು,
ಹ್ಮ್.. thanx. ನೋಡಿ .

@shayari
ನನಗೂ ಆಶ್ಚರ್ಯ ಆಗಿತ್ತು, ಅದಕ್ಕೇ ನಾನು ಎರಡನೇ ಬಾರಿ ನೋಡುವಾಗ ಬಣ್ಣಗಳನ್ನೂ ಗಮನಿಸಿ ನೀಲಿ ಬಣ್ಣದ ಬಳಕೆಯೂ ಜಾಸ್ತಿ ಇರುವುದನ್ನು ಗುರುತಿಸಿದ್ದು! :) The Inheritance of loss ಓದ್ಬೆಕಾಯ್ತು ಹಾಗಿದ್ರೆ. thanx

ಮಾಯ್ಸ, ಆ ಪ್ರಶಸ್ತಿ ಬಂದಾಕ್ಷಣ ಗ್ರೇಟು ಎಂದು ಕುಣಿಯುವ
ನಿಮ್ಮಂಥವರ ಬಗ್ಗೆಯೇ ನಾನು ಬರೆದಿರೋದು. ನಾನು ಬರೆಯದೆ ಇರುವ ಯಾವುದ್ಯಾವುದೋ ವಿಷಯ ತಂದು ಇಲ್ಲಿ ಉಲ್ಲೇಖಿಸುವ ತೊಂದರೆ ತಗೋಬೇಡಿ ಇನ್ಮುಂದೆ.

ಚಿತ್ರಾ, thanQ, ನಾನೂ ಆಜಾದಿ ಪುಸ್ತಕ ಓದಿರುವೆ, ಮರೆತು ಹೋಗಿತ್ತು, ಮತ್ತೆ ಓದುವೆ.

ಶ್ರೀನಿಧಿ, ಹೌದು ಬೇಜಾರು ಬಂದೋಗಿದೆ :)
ಯಾವ ಅಭಿಪ್ರಾಯಗಳ ಬಗ್ಗೆ ಸಹಮತ ಇಲ್ಲ ಅಂತ ಹೇಳಿದ್ರಾರೂ ಚೆನ್ನಾಗಿರ್ತಿತ್ತು. ವಾದ ಬೇಡ ಬಿಡು.

ಸುಶ್, ನಿರೀಕ್ಷಣಾ ಜಾಮೀನು ತಯಾರಿಟ್ಟುಕೊಂಡಿದ್ದೀನಿ :)
ಬರೀ ಇದೇ ಆಯ್ತು ಅಂದ್ರೆ ಏನು, ಏನ್ ಆಯ್ತು ಬರೀ?!

ಅನಾಮಧೇಯ ಹೇಳಿದರು...

ಬರಹದಲ್ಲಿ ಭಿನ್ನತೆಯಿದೆ. ಖುಷಿಯಾಯಿತು ಬರಹ. ಇನ್ನು ಸ್ಲಂ ಡಾಗ್ ಕುರಿತು ಬ್ಲಾಗ್‌ ಲೋಕ ಅಗತ್ಯಕ್ಕಿಂತ ಅಧಿಕ ಚರ್ಚೆ ಮಾಡಿದೆ ಅನ್ನಿಸ್ತು ನನಗೆ.ಇದರಿಂದ ನಾನೇನು ಹೊರತಲ್ಲ!ಕೋಡ್ಸರ.

ಅನಾಮಧೇಯ ಹೇಳಿದರು...

Vikas good one from you... i totally agree with you...even we in India produce very good films which get never so much of attention, even i saw Slum dog it is one of the normal films... but world wide it got so much fame just because director was not from India....
and you are true we indians think getting appreciation from world community or going to Foreign trip...or onsite job we think its an huge achivement... alli hogi bandu...india, indian people i dont eat road side food...india is so dirty anta nataka madtare....

Some one might have called your writing as steriotype... i definately can say...he is also one of the person who thinks going to foreign is big achivement... :) i really pity on him ...i am sure he must be very proud going abroad and may be friends and relatives munde jamba kocchkotirbeku .....

INDIAN

Shankar Prasad ಶಂಕರ ಪ್ರಸಾದ ಹೇಳಿದರು...

ಕೊನೆಯಲ್ಲಿ ಬರೆದಿರುವ ಇಂಡಿಯನ್ ಅನಾಮಧೇಯ.

ನಾನು ವಿಕಾಸನನ್ನು stereotype ಅಂತ ಹೇಳಿದ್ದನ್ನು ಖಂಡಿಸಿ ನನ್ನನ್ನು "Some one might have called your writing as steriotype... i definately can say...he is also one of the person who thinks going to foreign is big achivement... :) i really pity on him ...i am sure he must be very proud going abroad and may be friends and relatives munde jamba kocchkotirbeku" ಅಂತಾ... ಇದನ್ನು ನೀವು ನನ್ನ ಮೇಲಿನ ದ್ವೇಷಕ್ಕೆ ಹೇಳ್ತಾ ಇದ್ದೀರಾ ಅನ್ಕೋತೀನಿ.
ಫಾರಿನ್ ಗೆ ಹೋಗೋದು ದೊಡ್ಡ achievement ಅಂತ ಯಾವ ಮುಟ್ಠಾಲ ಹೇಳಿದ್ದು ನಿಮಗೆ.
ನಾನು ಫಾರಿನ್ ನಲ್ಲೆ ಇರೋದು. ಜರ್ಮನಿಯಲ್ಲಿ.
i dont understand as to why should you feel pity on me? its is your hypocrite mentality which makes you say this and i dont have any regrets to call you as a HYPOCRITE. i think you are just having a sort of jealous feeling seeing all those who have got a chance to go abroad. i personally feel that going abroad is a nice chance for some international exposure, to see a new place and finally to make some good money.

ನಿಮಗೆ ನಿಜವಾಗಿಯೂ ಚರ್ಚೆ ಮಾಡಬೇಕೆಂಬ ಹಂಬಲ ಇದ್ದಿದ್ದರೆ "ಅನಾಮಧೇಯ"ನಾಗಿ ಕಮೆಂಟು ಮಾಡ್ತಾ ಇರ್ಲಿಲ್ಲ. ರೀ ಸ್ವಾಮಿ, ನಾನು ಕೂಡ ರಸ್ತೆ ಬದಿಯ ೨ರೂ ಚಿತ್ರಾನ್ನ ತಿನ್ನುತ್ತಾ ಇದ್ದೋನು. ಈಗ್ಲೂ ತಿಂತೀನಿ. ಸುಮ್ನೆ ಬಾಯಿ ಚಪಲಕ್ಕೆ ಏನೇನೋ ಹೇಳ್ಬೇಡಿ.
ನಿಮಗೆ ಮುಖೇಡಿತನ ಬಹಳ ಇದೆ. ಸುಮ್ಮನೆ ಕಾಮೆಂಟ್ ಮಾಡುವ ತೀಟೆಯಿಂದ ಬರೆದಿದ್ದೆರ ಅಷ್ಟೆ. ನಿಜವಾಗಲೂ ನಿಮಗೆ ವಾದ ಮಾಡುವ ಆಸೆ ಇದ್ರೆ, ನನಗೆ ಈ-ಮೇಲ್ ಕಳಿಸಿ : mandagere.shankar@gmail.com

All i have to say is that "I hate Hypocracy and hate Hypocrites"

ಕಟ್ಟೆ ಶಂಕ್ರ

ಚಿತ್ರಾ ಹೇಳಿದರು...

ಹ್ಮ್ , ವಿಕಾಸ್,
ಬಹಳ ದಿನಗಳ ಮೇಲೆ ಬಂತು ಲೇಖನ.ಚೆನ್ನಾಗಿ ಬರ್ದಿದೀರಾ.

ಯಾವುದಾದ್ರೂ ಒಂದು ವಿಷಯ ಸಿಕ್ರೆ ಅದನ್ನ ಚ್ಯೂಯಿಂಗ್ ಗಮ್ ತರಾ ಎಳೆಯೋದು ನಮ್ಮವರ ಅಭ್ಯಾಸ ಅಲ್ವಾ? ಸದ್ಯದ ಚ್ಯೂಯಿಂಗ್ ಗಮ್ ’ ಸ್ಲಮ್ ಡಾಗ್ ’ ಅಷ್ಟೆ. ನಾನಿನ್ನೂ ಈ ಸಿನೆಮ ನೋಡಿಲ್ಲದ ಕಾರಣ ಏನೂ ಹೇಳಲಾರೆ.
ಆದರೆ , ಅಡಿಗರ " ವೈಟ್ ಟೈಗರ್’ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ.ಅದು ಅದ್ಭುತ ಬರವಣಿಗೆಯ ಸಾಲಿಗೆ ಬರುವುದೇ ಇಲ್ಲ !
ಭಾರತವನ್ನು ಇನ್ನೂ ’ ಬಡವರ ದೇಶ, ಅನಕ್ಷರಸ್ಥರು, ಮೂಢನಂಬಿಕೆಗಳು ತುಂಬಿರುವ ದೇಶ ’ ಎಂದೆಲ್ಲ ಪ್ರತಿಬಿಂಬಿಸಿದರೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಖಚಿತ ಎಂಬಂತಾಗಿದೆ !!

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಈಗಾದ್ರೂ ನಿನಗೆ ಗೊತ್ತಾಯ್ತಾ? ತೀರಾ ಕ್ರಿಟಿಸಿಸಂ ವಿಷಯಗಳನ್ನು ಬರೆಯಲು ಹೋಗಬೇಡಾ ಎಂದು ಯಾಕೆ ನಿನ್ನ ಹತ್ತಿರದವರು ಹೆಳಿದ್ದು ಅಂತಾ?..:)
Anyway ನಾನೂ ಈ ಚಿತ್ರ ಇನ್ನೂ ನೊಡಿಲ್ಲ. Compನಲ್ಲಿ ಬೆಚ್ಚಗೆ ಕೂತಿದೆ ಚಿತ್ರ. ಯಾಕೋ ಇನ್ನೂ ಮನಸ್ಸೇ ಆಗುತ್ತಿಲ್ಲ ನೋಡಲು. ಯಾವುದಕ್ಕೂ ಒಮ್ಮೆ ನೋಡಿ ನಿನ್ನ ಅಭಿಪ್ರಾಯಕ್ಕೆ ನನ್ನ ಸಹಮತ/ವಿರೋಧವನ್ನು ತಿಳಿಸುವೆ ಆಗದೆ? :) ಲೇಖನದ ಶೈಲಿ ಇಷ್ಟ ಆತು. ಮುಂದಿನ ಕಂತು ಯಾವಾಗ?

ಅನಾಮಧೇಯ ಹೇಳಿದರು...

:))

Hhahah i cant control laughing shankra, i thing i have pinched right paining nerve.

iam not jealous about you or anyone going to foreign trip,Just tell me why did you call writer a sterotype...just because you live in Swindler world,
By the way i left India 10 years back i have been in US and Europe, And iam repenting why did i leave india :)...Yaaru western culture style...money mattu fame saluvagi india bidtaro avarige dhikkara...including me.

INDIAN

Shankar Prasad ಶಂಕರ ಪ್ರಸಾದ ಹೇಳಿದರು...

ರೀ ಸ್ವಾಮಿ, ಪುನಃ ಅದೇ ರೀತಿ ಅನಾಮಧೇಯ ಕಮೆಂಟು ಹಾಕ್ತಾ ಇರೋದನ್ನ ನೋಡಿದರೆ ನಿಮ್ಮ ಮುಖೇಡಿತನ ತಿಳಿಯುತ್ತದೆ. ನಾನು ಇಲ್ಲೇ ಸೆಟಲ್ ಆಗಲು ಬಂದಿಲ್ಲ. ಕೆಲಸ ಇರೋ ಅಷ್ಟು ದಿನ ಇದ್ದು, ವಾಪಾಸ್ ಹೋಗೇ ಹೋಗ್ತೀನಿ.
i told vikas is on the way to become a stereotype and didnt tell him that he is a stereotype.
ಪಾಶ್ಚಾತ್ಯ ದೇಶದಲ್ಲಿ ಹೋದ ಭಾರತೀಯರೆಲ್ಲಾ ಈ ಅಲ್ಲಿನ ಕಲ್ಚರ್ ಗೆ ತಮ್ಮತನವನ್ನು ಬಲಿ ಕೊಡ್ತಾರೆ ಅಂತ ನಿಮ್ಮ ಅಂಬೋಣವಾದರೆ, ಇದು ನಿಮ್ಮ ತಪ್ಪು ಅಭಿಪ್ರಾಯ ಅಷ್ಟೆ.
ನಿಮ್ಮದು ನಿಜವಾಗಲೂ ಬಿಸಿ ಹಾಲು ಕುಡಿದು ಬಾಯಿ ಸುಟ್ಟಿಕೊಂಡು ಹಾಲನ್ನೇ ಕುಡಿಯೋದನ್ನು ಬಿಟ್ಟ ಬೆಕ್ಕಿನ ಹಾಗಿದೆ ನಿಮ್ಮ ಕಥೆ.
It is me who should feel pity on you.

ಕಟ್ಟೆ ಶಂಕ್ರ

Prabhuraj Moogi ಹೇಳಿದರು...

ಕೆಲವೊಂದು ಸಮಯದ ಹಿಂದೆ ಒಬ್ಬರ ಹಿಂದೊಬ್ಬರು ಒಬ್ಬರು ವಿಶ್ವ ಸುಂದರಿಯಾದ್ರು, ಅವರಿಂದ ವಿದೇಶೀ ಬ್ರಾಂಡುಗಳು ಭಾರತಕ್ಕೆ ಬಂದು ನೆಲೆಯೂರಿದವು. ಈಗ ಮತ್ತೆ ಆಸ್ಕರ ಪ್ರಶಸ್ತಿ ಸುತ್ತು ಶುರುವಾಗಿದೆ, ಇದು ಭಾರತದ ದೊಡ್ಡ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಹಾಲಿವುಡ್ಡು ಫಿಲ್ಮುಗಳಿಂದಾಗಿಯೇನೊ ಯಾರು ಬಲ್ಲರು...

ವಿನುತ ಹೇಳಿದರು...

ನಮ್ಮ ತಾಯಿಗೆ ನಾವೇ ಹರಕಲು ಸೀರೆ ಉಡಿಸಿ ಪ್ರದರ್ಶನಕ್ಕಿಡಲು ಅನುಮತಿ ನೀಡಿ, ನಾವೂ ಆನಂದಿಸಿ, ಪ್ರದರ್ಶಕರನ್ನು ತಲೆಮೇಲೆ ಹೊತ್ತು ನಡೆಯುವ ನಮ್ಮ ಈ ಕೀಳರಿಮೆಯ ದೇಶಾಭಿಮಾನ, ಅದೇ ಸತ್ಯ ಎನ್ನುವ ಬುದ್ಧಿವಂತರ ಕೂಟ, ಇವುಗಳೊಡನೆ ಚರ್ಚಾಕೂಟ ಏರ್ಪಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮಾಧ್ಯಮಗಳು, ಎಲ್ಲವನ್ನು ಪ್ರಶ್ನಿಸಿ ಪ್ರಶ್ನಿಸಿ ಉತ್ತರಗಳೊಡನೆ ಮತ್ತದೇ ಪ್ರಶ್ನೆಗಳ ಸುಳಿಯೊಳಗೆ ಸಿಲುಕುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಸಾಮಾನ್ಯ ಭಾರತೀಯನ ಪಾಡು.
ಹೇಳಿದ್ದೆಲ್ಲಾ ಗೋಜಲಾಗಿದೆಯಾ? ಈ ಚಿತ್ರ ನೋಡಿ, ಅದರ ಮೂಲ ಕಥೆ, ಮತ್ತದರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಓದಿದ ಮೇಲೆ ಇನ್ಯಾವ ಪರಿಸ್ಥಿತಿ ತಲುಪಲು ಸಾಧ್ಯ?? !! :))

ವಿ.ರಾ.ಹೆ. ಹೇಳಿದರು...

ಪ್ರಭುರಾಜ ಮೂಗಿ, thats what exactly happening. ಇವತ್ತು ಇಂಡಿಯನ್ ಮಾರ್ಕೆಟ್ ಎಂಬುದು ಜಗತ್ತಿನ ಎಲ್ಲಾ ಕಂಪನಿಗಳಿಗೂ, ದೇಶಗಳಿಗೂ considerable factor. ಆದರೆ ಇದೆಲ್ಲಾ ನಮಗೆ ತಿಳಿಯೋದೇ ಇಲ್ಲ, ಸುಮ್ಮನೇ ಬಲಿಯಾಗ್ತಾ ಹೋಗ್ತೀವಿ. ಅದಕ್ಕೆ ನಮ್ಮನ್ನು 3rd world ದೇಶಗಳು ಅಂತ ಕರೆಯೋದು!

@Vನುತಾ,
ನಿಜ. ಅಷ್ಟೇ ಗೋಜಲುಗಳಲ್ಲಿ ಭಾರತೀಯ ಒದ್ದಾಡುತ್ತಿರುವುದು, ಅದನ್ನು ’ಬುದ್ಧಿವಂತರು’ ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವುದು. !