ಬುಧವಾರ, ಸೆಪ್ಟೆಂಬರ್ 5, 2007

ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ?

ಯಾವುದೋ ಒಂದು ಗಳಿಗೆಯಲ್ಲಿ ಅವನು ಹೇಳುತ್ತಾನೆ... "ನಾನು ನಿನ್ನನ್ನ ಜೀವನ ಪೂರ್ತಿ ಪ್ರೀತಿ ಮಾಡ್ತೀನಿ".

ತಕ್ಷಣವೇ ಅವಳಿಂದ ಉತ್ತರ ಬರುತ್ತದೆ.. "ಈ ಜೀವನ ಪೂರ್ತಿ ಪ್ರೀತಿ ಅನ್ನೋದೆಲ್ಲಾ crap".

ಅವನಿಗೆ ಗಾಬರಿ..

ಅವಳೇ ಮುಂದುವರೆಸುತ್ತಾಳೆ.. "ಹೌದು ಕಣೋ, ಈ ಜೀವನ ಪೂರ್ತಿ ಪ್ರೀತಿ ಅನ್ನೋದು ನಾವು ಯಾವುದೋ ಒಂದು ಒಳ್ಳೆ ಮೂಡಲ್ಲಿದ್ದಾಗ ಮಾಡಿಕೊಳ್ಳೋ ಒಂದು assumption ಅಷ್ಟೆ. ಅದು reality ಅಲ್ಲ".
ಕಡ್ಡಿ ಮುರಿದಂತೆ ಅವಳ ಮಾತುಗಳು. ಅವಳು ಹಾಗೇ, ಎಲ್ಲರ ಹಾಗೆ ಭ್ರಮಾಲೋಕದಲ್ಲಿ ತೇಲುತ್ತಾ, ಕನಸು ಕಂಡು, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಕೊನೆಗೆ ಕೊರಗುವಳಲ್ಲ. ಅವಳದ್ದೇನಿದ್ದರೂ ವಾಸ್ತವತೆಗೆ ಹೆಚ್ಚು ಮಹತ್ವ. ಅದರಲ್ಲೇ ಹೆಚ್ಚು ನಂಬಿಕೆ.

ಅವಳು ಹೇಳುತ್ತಾಳೆ ..."ಮೊದಲನೆಯದಾಗಿ ಈ ಪ್ರೀತಿ ಅನ್ನೋದೆ ಅಗತ್ಯ, ಅನಿವಾರ್ಯತೆ, ಕಮಿಟ್ ಮೆಂಟ್ ಗಳ ಮೇಲೆ ನಿಂತಿರುವಂತದ್ದು".

"ನೀನು ಸುಮ್ನೆ ಎಲ್ಲಾದಕ್ಕೂ ನೆಗೆಟಿವ್ ಯೋಚನೆ ಮಾಡ್ತೀಯಾ ಕಣೆ. ಎಷ್ಟೋ ವರುಷಗಳಿಂದ ಪ್ರೀತಿ ಇಟ್ಕೊಂಡು ಬದುಕ್ತಾ ಇರೋರನ್ನ ನೋಡಿಲ್ವಾ. ಗೆಳೆಯ ಗೆಳತಿಯರ ಸ್ನೇಹದಲ್ಲೇ ಎಂಥಾ ಪ್ರೀತಿ ಇರತ್ತೆ ಗೊತ್ತಾ.?"

"ಹೌದು, ಈ ಪ್ರೀತಿ ಅನ್ನೋದು ಹಾಗೆ. ಒಂದು ಹಂತದವರೆಗೆ ಇರತ್ತೆ. ನಾವು ಅವರು ಚೆನ್ನಾಗಿರೋವಷ್ಟು ದಿನ, ಸಂಪರ್ಕದಲ್ಲಿರೋವಷ್ಟು ದಿನ. ಕ್ರಮೇಣ ಅದು ಅವರವರ ಕೆಲಸ, ಜೀವನದ ಗಿಜಿಗಿಜಿಯಲ್ಲಿ ಮಾಯವಾಗತ್ತೆ. ನಂತರ ಅದು ಬರೀ ನೆನಪಿನಂಗಳದಲ್ಲಿ ಮಾತ್ರ ಉಳಿಯತ್ತೆ. ಸ್ನೇಹ ಅನ್ನೋದು ಹಾಗೇ ಇರಬಹುದೆ ಹೊರತು ಅದು ಜೀವನ ಪೂರ್ತಿ ಪ್ರೀತಿ ಅಂತ ಕರೆಸ್ಕಳೊಕ್ಕಾಗಲ್ಲ."

"ಹಾಗಿದ್ರೆ ಈ ಅಮ್ಮ, ಮಗ, ಮಗಳು, ಅಣ್ಣ, ತಂಗಿ, ಅಪ್ಪ ಇತ್ಯಾದಿ ರಕ್ತ ಸಂಬಂಧಗಳ ಕಥೆ?"

"ಅದೂ ಹಾಗೆ, ಎಲ್ಲಾ ಚೆನ್ನಾಗಿರೋ ತನಕ ಅಷ್ಟೆ. ಒಮ್ಮೆ ಏನಾದರೂ ಅಸಮಾಧಾನ, ವಿರಸ, ಜಗಳ ಏನೋ ಆಯ್ತು ಅಂದ್ರೆ ಆ ಪ್ರೀತಿ ಒಳಗೊಳಗೇ ಕರಗುತ್ತಾ ಹೋಗತ್ತೆ. ಮೇಲಿಂದ ಅವರು ನಮ್ಮ ಅಕ್ಕ ತಂಗಿ ಅಮ್ಮ ಅಪ್ಪ ಅಂತ ಒಂದು ವಾತ್ಸಲ್ಯ, ಜವಾಬ್ದಾರಿ ಇದ್ರೂ ಕೂಡ ಅದನ್ನೂ ಕೂಡ ಜೀವನ ಪೂರ್ತಿ ಪ್ರೀತಿ ಅನ್ನೋಕಾಗಲ್ಲ."

"೩೦-೪೦ ವರ್ಷಗಳಿಂದ ಪ್ರೀತಿ,ಅಭಿಮಾನದಿಂದ ಚೆನ್ನಾಗಿ ಸಂಸಾರ ಮಾಡ್ಕೊಂಡು ಇರೋ ಗಂಡ ಹೆಂಡತಿಯರು ಎಷ್ಟು ಜನ ಇಲ್ಲ , ಅವ್ರೇನು ಸುಮ್ ಸುಮ್ನೆ ಜೊತೆಗಿದಾರೆ ಅನ್ಕೊಂಡಿದಿಯಾ?"

"ಅದು ಪ್ರೀತಿ, ಅಭಿಮಾನ ಅಲ್ವೋ, ಅದು ಅಗತ್ಯ, ಅನಿವಾರ್ಯತೆ, ಅವಲಂಬನೆ, ರೂಢಿ ಅಷ್ಟೆ. ಉದಾಹರಣೆಗೆ ಮಕ್ಕಳು, ಸಮಾಜ ಇತ್ಯಾದಿ. ಅವರಿಬ್ಬರಲ್ಲಿ ಎಂದೂ ಬತ್ತದ ಪ್ರೀತಿ ಇರತ್ತೆ ಅದರಿಂದಲೇ ಅವರು ಜೀವನ ಪೂರ್ತಿ ಒಟ್ಟಿಗೇ ಇರ್ತಾರೆ ಅಂತ ಹೇಳಕ್ಕಾಗಲ್ಲ."

"ಏನೋ ಹೇಳ್ತೀಯಮ್ಮಾ ನೀನು. ಒಟ್ನಲ್ಲಿ ಜೀವನ ಪೂರ್ತಿ ಪ್ರೀತಿ ಮಾಡೋಕ್ಕಾಗಲ್ಲ, ಅದು ಸುಳ್ಳು ಅಂತನಾ ನಿನ್ನಭಿಪ್ರಾಯ?"

"ಸುಳ್ಳು ಅಂತ ಹೇಳ್ತಾ ಇಲ್ಲ, ಆದ್ರೆ ಈ ಜೀವನ ಪೂರ್ತಿ ಪ್ರೀತಿ ಅನ್ನೋದು ಒಂದು ರೀತಿ ಕಮಿಟ್ ಮೆಂಟ್ ಆಗತ್ತೇ ಹೊರತು ನಿಜವಾದ ಪ್ರೀತಿ ಅಲ್ಲ ಅಂತಿದಿನಿ. ಪ್ರೀತಿ ಸತ್ತೋದಮೇಲೆ ಆ ಕಮಿಟ್ ಮೆಂಟ್ ಗೆ ಅಥವಾ ಜೊತೆಗಿರೋದ್ರಲ್ಲಿ ಅರ್ಥ ಏನಿದೆ ಹೇಳು?"

"ಹೌದು ಕಣೇ, ಪ್ರೀತಿ ಸತ್ತೋದ್ಮೇಲೆ ಅದಕ್ಕೆ ಅರ್ಥ ಇಲ್ಲ, ಅದು ಕಮಿಟ್ ಮೆಂಟ್ ಆಗತ್ತೇ ಅಂತ ಒಪ್ಕೋತೀನಿ, ಅದು ವ್ಯರ್ಥ, ಆದ್ರೇ ಆ ಪ್ರೀತಿ ಸಾಯದೇ ಇರೋ ತರ ಸಂಬಂಧ ಇಟ್ಕೋಬೇಕು ಅಂತ ನಾನು ಹೇಳ್ತಿರೋದು."

"ಹಾಗೆ ನಾವು ಅನ್ಕೋತೀವಿ, ಆದ್ರೆ ನಮಗೆ ಗೊತ್ತಿಲ್ಲದ ಹಾಗೆ ಅದಕ್ಕೆ ವಿರುದ್ಧವಾಗಿ ಆಗ್ಬಿಡತ್ತೆ. ಈಗ ಒಂದು ಕೆಳಮಟ್ಟದ ಉದಾಹರಣೆ ತಗಳೋಣ. ನಿನ್ನ ಹೆಂಡತಿಗೋ, ಪ್ರೇಮಿಗೋ ಅಥವಾ ಇನ್ಯಾರಿಗೋ ಏನೋ ಆಗತ್ತೆ, ಅವರ ಕಣ್ಣು ಕುರುಡಾಗ್ಬೋದು, ಅವರ ಕಾಲು ಮುರ್ದೋಗ್ಬೋದು, ಬುದ್ಧಿ ಭ್ರಮಣೆ ಆಗ್ಬೋದು. ಆವಾಗ್ಲೂ ಅವರಲ್ಲಿ ಅದೇ ಪ್ರೀತಿ ಇರತ್ತಾ? ಅನುಕಂಪ ಹುಟ್ಬೋದು, ಅದು ಬೇರೆ ವಿಷ್ಯ. ಅದು ಪ್ರೀತಿ ಆಗಲ್ಲ."


"ಅಲ್ಲೇ ನೀನು ತಪ್ಪು ತಿಳ್ಕೊಂಡಿರೋದು, ಪ್ರೀತಿ ಅನ್ನೋದು ಈ ಮೋಹ, ಅನುಕಂಪ, ವಾತ್ಸಲ್ಯ, ಕಾಮ, ರೂಢಿ, ಬದ್ಧತೆ, ಸೇವೆ, ಸ್ನೇಹ, ರಕ್ತ ಸಂಬಂಧ, ಸೆಳೆತ, ಅಗತ್ಯ, ಕೆಲವೊಮ್ಮೆ ಆಕಸ್ಮಿಕ ಹೀಗೆ ಇನ್ನೂ ಹಲವಾರು ರೂಪಗಳಲ್ಲಿ ಅಥವಾ ಅವುಗಳಲ್ಲಿ ಕೆಲವುದರ ಮಿಶ್ರಣದ ರೂಪದಲ್ಲಿ ಇರತ್ಯೇ ಹೊರತು ಪ್ರೀತಿ ಅನ್ನೋದಕ್ಕೆ ಬೇರೆಯಾದ ರೂಪ ಇಲ್ಲ ಕಣೇ."


"ಏನೇ ಇರ್ಲಿ, ಜೀವನ ಪೂರ್ತಿ ಪ್ರೀತಿ ಅನ್ನೋದು ತಾನಾಗೇ ಇರುವಂತದ್ದು, ಬರುವಂತದ್ದೇ ಹೊರತು ನಾವು ಮಾಡ್ತೀವಿ, ಕಾಪಾಡ್ಕೋತೀವಿ ಅನ್ಕೊಳೋವಂತದ್ದಲ್ಲ. ಅದು ಸಾಧ್ಯನೂ ಇಲ್ಲ."

"ಒಟ್ನಲ್ಲಿ ನಾನು ಹೇಳೋದು ನಿಂಗರ್ಥ ಆಗ್ತಾ ಇಲ್ಲ, ನೀ ಹೇಳೋದು ನಂಗರ್ಥ ಆಗಲ್ಲ."

"ಹಾಗಿದ್ರೆ ಏನಂತ ತೀರ್ಮಾನ ಮಾಡೋಣ?"

"ಅಯ್ಯೋ, ನಾವು ತೀರ್ಮಾನ ಮಾಡೋವಷ್ಟು ದೊಡ್ಡೋರೂ ಅಲ್ಲ, ನಮಗಿನ್ನೂ ಆ ಮಟ್ಟಿಗೆ ಮನಸ್ಸು ಪಕ್ವವಾಗೂ ಇಲ್ಲ. ಏನೋ ನಮಗನ್ನಿಸಿದ್ದು, ನಮ್ಮ ವಯಸ್ಸಿಗೆ ಅನುಭವಕ್ಕೆ ಬಂದಷ್ಟು, ನಮ್ಮ ಜಗತ್ತಿನಲ್ಲಿ ಕಂಡದ್ದನ್ನ ಹೇಳ್ಕೋತೀವಷ್ಟೆ. ಈ ತೀರ್ಮಾನ ಎಲ್ಲಾ ಅವರವರಿಗೇ ಬಿಟ್ಟಿದ್ದು."

"ಹ್ಮ್.. ಹೌದು. ಅದೂ ಸರಿನೇ ಬಿಡು. "

ನಂತರ ನೆಲೆಸಿದ್ದು ಅಲ್ಲೊಂದು ದೀರ್ಘ ಮೌನ.

17 ಕಾಮೆಂಟ್‌ಗಳು:

Shankar Prasad ಹೇಳಿದರು...

ವಿಕಾಸ, ನಿಜಕ್ಕೂ ಈ ನಿನ್ನ ಲೇಖನ ಇದುವರೆಗೆ ನೀನಿ ಬರೆದಿರೋದ್ರಲ್ಲಿ ಬೆಸ್ಟ್ ಕಣೋ..
ನಿಜಕ್ಕೂ ತುಂಬಾ ಚೆನ್ನಾಗಿದೆ.
ಒಂದು ಸಾಲು ಓದಿ, 2 ನಿಮಿಷ ಯೋಚನೆ ಮಾಡುವ ಹಾಗೆ ಮಾಡಿದ್ದೀಯ.
ಕೀಪ್ ಇಟ್ ಅಪ್...

ಕಟ್ಟೆ ಶಂಕ್ರ

ರಂಜನಾ ಹೆಗ್ಡೆ ಹೇಳಿದರು...

ವಿಕಾಸ್,
ನಿಜ ಯಾರನ್ನೂ ಸಾಯೋ ತರ ಪ್ರೀತಿ ಮಾಡಕೆ ಆಗಲ್ಲ. ಯಾರನ್ನೂ ಜೀವನ ಪೂರ್ತಿ ಪ್ರೀತಿಸಕೆ ಆಗಲ್ಲ.

ಪ್ರೀತಿ ಒಂದು ಹರಿವ ನದಿಯ ಹಾಗೆ.ತುಂಬಾ sensetive, ಎಲ್ಲವನ್ನು ಭಾವನಾತ್ಮಕವಾಗಿ ನೋಡುವ ನನಗೆ ಇದು ಜೀವನ ಕಲಿಸಿದ ಪಾಠ. ನಮ್ಮನ್ನ ನಾವು ಮಾತ್ರ ಜೀವನ ಪೂರ್ತಿ ಪ್ರೀತಿಸಕೆ ಸಾದ್ಯ ಅಷ್ಟೆ.

ನಿನ್ನನ್ನ ಜೀವನ ಪೂರ್ತಿ ಪ್ರೀತಿಸುತ್ತೀನಿ ಅಂದವನ priority ಕಾಲ ಕ್ರಮೇಣ ಬದಲಾಗುತ್ತವೆ. ಯಾವತ್ತು ಅಮ್ಮನ ಪ್ರೀತಿ ಮಾತ್ರ ಈ ಎಲ್ಲಾ ವಾದಗಳಿಗೆ ಸರಿಯಾದುದ್ದಲ್ಲ, ವಿರುದ್ಧವಾದುದ್ದು ಅನ್ನುವುದು ನನ್ನ ಅಭಿಪ್ರಾಯ.

ರಂಜನಾ ಹೆಗ್ಡೆ ಹೇಳಿದರು...

ಆದರೆ ಈ ಎಲ್ಲಾ ವಾಸ್ತವತೆ, ವಾದ ಇವನ್ನೆಲ್ಲಾ ಬಿಟ್ಟು "ನಾನು ನಿನಗೆ ನೀನು ನನಗೆ" ಅನ್ನೋ ಒಂದು ಕಮಿಟ್ ಮೆಂಟ್ ಮಾಡಿಕೊಂಡಾಗ ಜೀವನ ನಿಜಕ್ಕು ಸುಂದರ ಅನ್ನಿಸುತ್ತದೆ. ತೀರ ವಾಸ್ತವತೆಯಲ್ಲಿ ಬದುಕುವ ಅಗತ್ಯತೆ ಎನಿದೆ? ಹಾಗದರೆ ಎಂದೋ ಮಾಸಿಹೋಗುವ ಇಂದಿನ ಈ ಸ್ನೇಹದ ಅಗತ್ಯತೆ ಎನಿದೆ? ಈ ಪ್ರೀತಿ ಈ ಮದುವೆ ಮನೆ ಅದಕ್ಕೆಲ್ಲ ಅರ್ಥನೇ ಇರಲ್ಲಾ ಅನಿಸುತ್ತೆ.

ಇವತ್ತು ಅವಳಿಗೆ ಅವನ ಸ್ನೇಹದ ಅಗತ್ಯತೆ ಇದೆ ಅದಕ್ಕೆ ಅವಳು ಅವನ ಒಟ್ಟಿಗೆ ಇದ್ದಾಳೆ, ನಾಳೆ ಇ ಸ್ನೇಹದ ಅಗತ್ಯತೆ ಇಲ್ಲದೆ ಇರುವಾಗ ಹರಿದು ಹೋಗುತ್ತಾ ಈ ಸಂಭಂದ ಇಷ್ಟೆನಾ?! ಜೀವನ. ಅಬ್ಬಾ!

ಅನಾಮಧೇಯ ಹೇಳಿದರು...

ನಿಜ್ವಾಗ್ಲೂ ಚೆನ್ನಾಗಿದೆ. ನನ್ನ ಅನುಭವ/ಅನಿಸಿಕೆ ಪ್ರಕಾರ:

ಈ ಲೇಖನದಲ್ಲಿ ಇರೋ ಹುಡ್ಗಿ ಇನ್ನೂ ಚಿಕ್ಕವ್ಳು, ಬಹುಶ: ಇನ್ನೂ ಪಿ.ಯು.ಸಿ ಅಥವಾ ಡಿಗ್ರಿ ಓದ್ತಿರೋ ಹುಡುಗಿ.
ಅವಳ ಅನಿಸಿಕೆಗಳು, ಹೇಳಿಕೆಗಳು ಹೇಗಿವೆ ಅಂದ್ರೆ, ಅವಳು ಪ್ರೀತಿ ಮಾಡಿ ಅದರ ದುಷ್ಪರಿಣಾಮಗಳನ್ನ ಅನುಭವಿಸಿರೋ/ ಪ್ರೀತಿ ಮಾಡಿ ಕೈ ಕೊಡಿಸಿಕೊಂಡಿರೋ ಹಾಗಿದೆ ಇಲ್ಲವೇ ಪ್ರೀತಿ ಮಾಡಿ ಕೈ ಕೊಡಿಸಿಕೊಂಡಿರೋ ಬೇರೆಯವರ ಅನುಭವಗಳನ್ನು ತನ್ನದೇ ಅಂದುಕೊಂಡಿರೋ ಹಾಗಿದೆ. ಅವಳಿಗೆ ಜೀವನದಲ್ಲಿ ಅನುಭವಿಸಬೆಕಿರೋ ಪ್ರೀತಿ ಇನ್ನೂ ಇದೆ. ಅವಳಿಗೆ ನಿಜವಾದ ಪ್ರೀತಿಯ ಅನುಭವ ಇನ್ನೂ ಆಗಿಲ್ಲ. ಹೀಗೆ ಇದ್ದರೆ ಅವಳು ಸಾಡಿಸ್ಟ್ ರೀತಿ ಆಗಿಬಿಡ್ತಾಳೆ, ಆಮೇಲೆ ಅವಳ ಗಂಡನಿಗೆ ತುಂಬಾ ವರುಷಗಳಾದ ಮೇಲೆ ಖುಷಿ(ತಾಳ್ಮೆಯಿದ್ದವನಾದರೆ), ಇಲ್ಲವೇ ಗೋಳೋ ಗೋಳು(ತಾಳ್ಮೆ ಇಲ್ಲದಿದ್ದರೆ)ಮುಕ್ಕಾಲು ಭಾಗ ಹುಡುಗೀರು practical ಆಗಿರ್ತಾರೆ. ಆದ್ರೆ ಇವಳು over-practical. ಈ ಥರ over practical ಆಗಿದ್ರೆ ಜೀವನ ಸುಗಮವಾಗಿ ನೆಡೆಯೋದಿಲ್ಲ.

thanks

Unknown ಹೇಳಿದರು...

Dear Vikas,

Where do get these type of friends who also put wrong thing in your mind?

Or have you made up your mind to work on these type and create and very stupid impression on you. I feel you better think in a practical way other wise you will have a very sour life.

ವಿ.ರಾ.ಹೆ. ಹೇಳಿದರು...

ಶಂಕ್ರಣ್ಣ ಥ್ಯಾಂಕ್ಸ್, ಹೀಗೆ ಪ್ರೋತ್ಸಾಹವಿರಲಿ.
ರಂಜನಾ, ಅಮರೇಶ್ ಧನ್ಯವಾದಗಳು, ನಿಮ್ಮ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಅದಕ್ಕೇ ಆ ವಿಷಯದ ತೀರ್ಮಾನವನ್ನು ಅವರವರಿಗೇ ಬಿಟ್ಟಿದ್ದು.

ನಿರ್ಮಾಲಾ ಅವರೇ ಸ್ವಲ್ಪ ಸಮಾಧಾನ. ಒಂದು ಕಥೆಯಲ್ಲೋ ಅಥವಾ ಲೇಖನದಲ್ಲೋ ಒಂದು ಕೊಲೆಯ ವಿಷಯ ಬಂದಾಕ್ಷಣ ಲೇಖಕನೇ ಕೊಲೆಗಾರನಾಗಿರಬೇಕು ಅಂತ ಏನಿಲ್ಲ ಅಲ್ವಾ?
ಆದ್ದರಿಂದ ಲೇಖನವನ್ನು ಲೇಖನವೆಂದೇ ಪರಿಗಣಿಸಿದರೆ ಒಳ್ಳೇದು. ಆದ್ದರಿಂದ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬೇಡ. thank you.

Sandeepa ಹೇಳಿದರು...

good one..

hmm..
ಲೈಫೇ ಜೀವನ...

Suresh S Murthy ಹೇಳಿದರು...

ನಿಜವಾಗಿಯೂ ವಿಕಾಸ್, ನೀವು ಬರೆದಿರುವ ಲೇಖನ ಸೂಪರ್! ಇದನ್ನು ಓದಿದ ಬಳಿಕ ನನಗೂ ಸಹ ಆಕೆ ಹೇಳಿದ್ದು ಎಷ್ಟೋಂದು ನಿಜ ಅಲ್ವಾ ಅನ್ನಿಸುತ್ತಾಯಿದೆ!!

Seema S. Hegde ಹೇಳಿದರು...

ಬರಹ ತುಂಬಾ ಚೆನ್ನಾಗಿದೆ. ಯೋಚಿಸುವಂತೆ ಮಾಡಿದೆ.
ಪ್ರೀತಿ ವರ್ಷದಿಂದ ವರ್ಷಕ್ಕೆ ರೂಪಾಂತರ ಹೊಂದುತ್ತಾ ಹೋಗುತ್ತದೆಯೇ ವಿನಹ ಕಡಿಮೆಯಾಗುವುದಿಲ್ಲ ಅಥವಾ ಒಮ್ಮೆಲೇ ಮಾಯವಾಗುವುದೂ ಇಲ್ಲ ಎಂಬುದು ನನ್ನ ಅಭಿಪ್ರಾಯ.
ಸಕ್ಕರೆಯನ್ನು ಬರೀ ಸಕ್ಕರೆಯಾಗಿಟ್ಟಿರುವುದಕ್ಕಿಂತ ಅದನ್ನು ರೂಪಾಂತರಿಸಿ ಬೇರೆ ಬೇರೆ ಸಿಹಿ ತಿನಿಸುಗಳನ್ನು ತಯಾರಿಸಿದಂತೆ. ಆದರೂ ಸಿಹಿಯೆಂಬ ಮೂಲ ಅಂಶ ಇದ್ದೇ ಇದೆ ಅಲ್ಲವೇ?

ವಿ.ರಾ.ಹೆ. ಹೇಳಿದರು...

@ಸಂದೀಪ
ಹ್ಮ್ಮ್.ಲೈಫೇ ಜೀವನ. ಥ್ಯಾಂಕ್ಯೂ

ಸುರೇಶ್, ಧನ್ಯವಾದಗಳು.. ಅವಳದ್ದೇ ಸರಿ ಅಂತಿರಾ !
ಹ್ಮ್.. ತೀರ್ಮಾನ ಮಾಡಕ್ಕಾಗ್ತಿಲ್ಲ ನಂಗೆ ಬಿಡಿ. :-)

ಸೀಮಾ, ಧನ್ಯವಾದಗಳು, ನಿಮ್ಮ definition ಬಹಳ ಇಷ್ಟವಾಯಿತು.

ಸಂತೋಷಕುಮಾರ ಹೇಳಿದರು...

"Out of sight is out of mind" ಅನ್ನೋದು ನಿಜ ಅನಿಸುತ್ತೆ." ಹೊಂದಾಣಿಕೆ"ಯೇ ಪ್ರೀತಿ ಅನ್ನೊದು ದಡ್ಡತನ.ಮತ್ತು ಹೇಗೂ ಒಪ್ಪಿಕೋಂಡಾಗಿದೆ ಅಂತ ಬೇಸರವಾದರೂ ಸಂಬಂಧದಲ್ಲಿ ಮುಂದುವರೆಯುವದು " ಅನಿವಾರ್ಯತೆ"ಯೇ ಅದೂ ಪ್ರೀತಿಯಲ್ಲ್ಲ.ಪ್ರತಿ ಸಂಬಂಧವನ್ನೂ ವಿಮರ್ಶೆಯ ತಕ್ಕಡಿಗೆ ಹಾಕಿ ತೂಗುವದರಿಂದ ಗಳಿಸುವದಕ್ಕಿಂತ ಕಳೆದುಕೊಳ್ಳುವದೆ ಹೆಚ್ಚು.ಇದುದನ್ನು ಇದ್ದ ಹಾಗೆ ಒಪ್ಪಿಕೊಳ್ಳುವದೇ ಬದುಕು. ಚಿಂತನಯೋಗ್ಯ ಬರಹ ವಿಕಾಸ್..

Karthik CS ಹೇಳಿದರು...

ವಾಹ್, ಸೂಪರ್ conversation. ಇಂಡಿಯಾ ಪಾಕಿಸ್ತಾನದ ಮಾಚ್ ಇದ್ದಂಗಿತ್ತು ಮಾರಾಯ. ನಿಜವಾಗಲೂ ನನ್ನ ಅಭಿಪ್ರಾಯ ಏನೂ ಹೇಳೋಕೆ ಆಗದೆ ಇರೋ ಅಂಥ ಪೋಸ್ಟ್ ಇದು.. ಯೋಚನೆ ಮಾಡ್ಬೇಕು..

ವಿ.ರಾ.ಹೆ. ಹೇಳಿದರು...

ಪ್ರತಿ ಸಂಬಂಧವನ್ನೂ ವಿಮರ್ಶೆಯ ತಕ್ಕಡಿಗೆ ಹಾಕಿ ತೂಗುವದರಿಂದ ಗಳಿಸುವದಕ್ಕಿಂತ ಕಳೆದುಕೊಳ್ಳುವದೆ ಹೆಚ್ಚು. ಇದು ಸತ್ಯ ಚಿರವಿರಹಿಗಳೆ. ಬಹಳ ಧನ್ಯವಾದ.

ಕಾರ್ತಿಕ್, ಥ್ಯಾಂಕ್ಸ್. ಇನ್ನೂ ಇಂಥ ಸಖತ್ ಮ್ಯಾಚ್ ಗಳಿದವೆ. ಯಾವಾಗ ಪ್ರಸಾರ ಮಾಡಕ್ಕಾಗತ್ತೋ ನೋಡ್ಬೇಕು ! :) :)

Seema S. Hegde ಹೇಳಿದರು...

ದಿನಾಲೂ ನೋಡ್ತಾನೇ ಇದ್ದಿ.
ಎಂತಕ್ಕೆ ಬರೀತಾನೆ ಇಲ್ಲೆ?

Sheela Nayak ಹೇಳಿದರು...

ವಿಕಾಸ್, ನನ್ನ ಮಟ್ಟಿಗೆ ಮನುಷ್ಯನಿಗೆ ಪ್ರೀತಿಸದೆ ಇರಲಿಕ್ಕೆ ಆಗುವುದಿಲ್ಲ. ಆದರೂ ಅವನು ಒಂದೇ ಪ್ರೀತಿಗೆ ಅಂಟಿರುವುದಿಲ್ಲ. ಸಮಯ ಕಳೆದ ಹಾಗೆ ಪ್ರೀತಿಯನ್ನು ಒಬ್ಬರಿಂದೊಬ್ಬರಿಗೆ ವರ್ಗಾಯಿಸುತ್ತಾ ಇರುತ್ತಾನೆ...ಪ್ರತೀಸಲ ತಾನು ಯಾರನ್ನು ಮೆಚ್ಚುತ್ತಾನೋ ಅವರನ್ನು ಗಾಢವಾಗಿ ಪ್ರೀತಿಸುತ್ತೇನೆ ಎಂದೇ ನಂಬುತ್ತಾನೆ... ಜೀವನವೆಂಬ ದೋಣಿಯಲ್ಲಿ ಒಬ್ಬ ಪಯಣಿಗ ಹೋದ ಮೇಲೆ ಮತ್ತೊಬ್ಬರು ಬಂದ ಹಾಗೆ ಅವನ ಪ್ರೀತಿಯ ಗುರಿ ಬೇರೆಯಾಗುತ್ತಲೇ ಇರುತ್ತದೆ.... ಆದರೆ ಯಾವುದಕ್ಕೂ exception ಅಂಥ ಇರುತ್ತದೆಯಷ್ಟೇ! ಹಾಗೆ ಕೆಲವರು ತಮ್ಮ ಪ್ರೀತಿಯನ್ನು ಮರೆಯುವುದಿಲ್ಲ.... ಜೀವನ ಪೂರ್ತಿ ಅವರ ನೆನಪಿನಲ್ಲೇ ಕಳೆಯುತ್ತಾರೆ. ಇಂತವರ ಸಂಖ್ಯೆ ತುಂಬಾ ಕಡಿಮೆಯಿರುತ್ತದೆಯಷ್ಹ್ಟೇ...

ಅನಾಮಧೇಯ ಹೇಳಿದರು...

Hay Vices,

Really very nice conversation. As my opinion is life time love is no need to bind for to one person. If we take an example when we are in kids then we start loving out parents (we love more mother than father initially but slowly we are starting loving more father in youth time) then we start loving our teachers, then we start loving out friends. In college days we started loving (I think this is called attraction) girls, then slowly love start moving towards wife after marriage then kids then grandchild's like this life goes on. What I'm trying to say is still we are doing life time love but only characters getting changing time to time.

- Prasanna

Anand ಹೇಳಿದರು...

practicle ಆಗಿ ಇದರೊದಕ್ಕು practicle ಆಗಿ ಮಾತಾಡೊದಕ್ಕು ತು೦ಬಾ ವ್ಯತ್ಯಾಸ ಇದೆ

ಅವಳಿಗಿದು ಮು೦ದೆ ಗೊತ್ತಾಗುತ್ತೆ

ಬ್ರದರ್