ಗುರುವಾರ, ಫೆಬ್ರವರಿ 21, 2008

ಮುಖಕ್ಕೆ ಮಂಗಳಾರತಿಯೇ ಯಾಕೆ?!

ಎಲ್ಲರಿಗೂ ಗೊತ್ತಿರುವಂತೆ ನಮ್ಮಲ್ಲಿ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಬಹಳ. ದೇವರ ವಿಷಯದಲ್ಲೇ ತೆಗೆದುಕೊಂಡರೆ ಹಣ್ಣು ಕಾಯಿ ಇಂದ ಹಿಡಿದು ನರಬಲಿ ಕೊಡುವ ಮಟ್ಟದವರೆಗೂ ದೇವರನ್ನು ಸಂಪ್ರೀತಿಗೊಳಿಸುವ ಹಲವಾರು ನಂಬಿಕೆಗಳಿವೆ. ಸಾಮಾನ್ಯ ಸತ್ಯನಾರಾಯಣ ಪೂಜೆಯಂತ ಆಚರಣೆಗಳು ಒಂದೆಡೆಯಾದರೆ ದೇವರಿಗೆ ಮುಡಿಪಿಟ್ಟ ಬಲಿಯೊಂದು ಸತ್ತು ಬದುಕಿ ಬರುವ 'ಹೀಗೂ ಉಂಟೆ' ಎನಿಸುವ ವಿಚಿತ್ರಗಳು ಇನ್ನೊಂದೆಡೆ. ಆದರೆ ಇಂತಹ ಈ ಆಚರಣೆಗಳು, ಸಂಪ್ರದಾಯಗಳು ಎಲ್ಲ ಹೇಗೆ ರೂಢಿಯಾಯಿತು ಎಂದು ಹುಡುಕಲು ಹೊರಟರೆ ಕೆಲವೊಂದಕ್ಕೆ ಯಾವುದೇ ಕಾರಣವಾಗಲಿ, ಹಿನ್ನೆಲೆಯಾಗಲಿ ತಿಳಿಯುವುದೇ ಕಷ್ಟ. ಕೆಲವಕ್ಕೆ ಕಾರಣ, ಹಿನ್ನೆಲೆ ಗೊತ್ತಾದರೂ ಸಹ ಅದರ ಅರ್ಥ, ಅವಶ್ಯಕತೆ, ಪ್ರಸ್ತುತತೆ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣ ತಲೆಮಾರುಗಳ ನಡುವಿನ ಕಮ್ಯುನಿಕೇಶನ್ ಗ್ಯಾಪ್ ಇರಬಹುದು ಎನಿಸುತ್ತದೆ. ಎಷ್ಟೋ ಜನಕ್ಕೆ ತಾವು ಯಾಕೆ ಮಾಡುತ್ತಿದ್ದೇವೆ ಎಂದೇ ತಿಳಿದಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ ಹೇಳುವುದಿಲ್ಲ. ಇನ್ನೂ ಹಲವಾರು ಆಚರಣೆ, ವಿಧಿವಿಧಾನಗಳು ಕೇವಲ ರೂಢಿಯಿಂದಲೂ ಬಂದದ್ದುಂಟು. ಅಜ್ಜ ಮಾಡುತ್ತಿದ್ದ, ಅಪ್ಪ ಮಾಡುತ್ತಿದ್ದ ಅದಕ್ಕೆ ತಾನೂ ಮಾಡಬೇಕು ಎನ್ನುವವರೇ ಹೆಚ್ಚು.

ನಾನು ಶಾಲೆಯಲ್ಲಿದ್ದಾಗ ಶಿಕ್ಷಕರೊಬ್ಬರು ನಮ್ಮ ಸುಮಾರಷ್ಟು ಆಚರಣೆಗಳು ಹೇಗೆ ರೂಢಿಗೆ ಬಂದವು ಎನ್ನುವುದಕ್ಕೆ ಉದಾಹರಣೆಯಾಗಿ ಒಂದು ಕಥೆಯನ್ನು ಹೇಳುತ್ತಿದ್ದರು.

ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ, ಅವನಿಗೆ ದಿನವೂ ದೇವರ ಪೂಜೆ ಮಾಡುವ ಅಭ್ಯಾಸ. ಅವರ ಮನೆಯಲ್ಲಿ ಬೆಕ್ಕೊಂದಿತ್ತು. ಅದು ಮನೆಯೊಳಗೆಲ್ಲ ತಿರುಗಾಡಿಕೊಂಡು ಹಾಯಾಗಿತ್ತು. ಆದರೆ ಪೂಜೆಯ ಸಮಯದಲ್ಲಿ ದೇವರ ಮನೆಗೂ ಬಂದು ಮೈ ತಾಗಿಸುವುದು, ಪೂಜಾ ಸಾಮಗ್ರಿಗಳನ್ನು ಮೂಸುವುದು, ನೆಕ್ಕುವುದು ಮಾಡುತಿತ್ತು. ದಿನವೂ ಎಷ್ಟು ಪ್ರಯತ್ನ ಪಟ್ಟರೂ ಅದರ ಕಾಟ ತಪ್ಪಿಸಲಾಗದೆ ಕೊನೆಗೆ ಆ ಮನುಷ್ಯ ದಿನವೂ ಪೂಜೆಯ ಸಮಯ ಬಂದಾಗ ಆ ಬೆಕ್ಕನ್ನು ಹಿಡಿದು ಒಂದು ಬುಟ್ಟಿಯಲ್ಲಿ ಮುಚ್ಚಿ ಅದರ ಮೇಲೆ ದಪ್ಪದೊಂದು ಕಲ್ಲನ್ನು ಹೇರಿ ಬೆಕ್ಕು ಹೊರಬರದಂತೆ ಮಾಡಿ ಪೂಜೆಗೆ ಕೂರುತ್ತಿದ್ದ. ಇದರಿಂದ ಪೂಜೆ ಮುಗಿಯುವ ವರೆಗೂ ಬೆಕ್ಕಿನ ಕಾಟ ತಪ್ಪುತ್ತಿತ್ತು. ಪೂಜೆ ಮುಗಿದ ನಂತರ ಬೆಕ್ಕನ್ನು ಹೊರಬಿಡುತ್ತಿದ್ದ.

ಆ ಮನುಷ್ಯನ ಮಗನೊಬ್ಬನಿದ್ದ. ಅಪ್ಪನ ಮರಣದಿಂದ ಪೂಜೆಯ ಹೊಣೆ ಅವನ ಮೇಲೆ ಬಿತ್ತು. ತನ್ನ ಅಪ್ಪ ಪೂಜೆಯ ಸಮಯದಲ್ಲಿ ಬೆಕ್ಕನ್ನು ಬುಟ್ಟಿಯಲ್ಲಿ ಮುಚ್ಚಿಡುವುದನ್ನು ಸಣ್ಣವನಿದ್ದಾಗಲಿಂದ ನೋಡಿದ್ದ ಅವನು ಅದೂ ಕೂಡ ಪೂಜೆಯ ಜೊತೆಗೆ ಮಾಡುವ ವಿಧಾನವೆಂದೇ ತಿಳಿದಿದ್ದ. ಅವನು ಅಪ್ಪನನ್ನು ಅದಕ್ಕೆ ಕಾರಣವನ್ನು ಕೇಳಿರಲಿಲ್ಲ, ಅಪ್ಪ ಹೇಳಿರಲೂ ಇಲ್ಲ. ಅದರಂತೆ ಅವನೂ ಕೂಡ ಅದೇ ರೀತಿ ಬೆಕ್ಕನ್ನು ಹಿಡಿದು ಬುಟ್ಟಿಯಲ್ಲಿ ಮುಚ್ಚಿಟ್ಟು ಪೂಜೆ ಕೆಲಸ ಮಾಡುತ್ತಿದ್ದ. ಸ್ವಲ್ಪ ದಿನಗಳ ನಂತರ ಆ ಬೆಕ್ಕೂ ಸತ್ತು ಹೋಗಿದ್ದರಿಂದ ಇವನು ಆ ಪದ್ಧತಿಯನ್ನು ಬಿಡಬಾರದೆಂಬ ಉದ್ದೇಶದಿಂದ ಬೇರೆ ಬೆಕ್ಕೊಂದನ್ನು ತಂದು ಸಾಕಿ ಪೂಜೆ ಮಾಡುವ ಸಮಯಕ್ಕೆ ಬುಟ್ಟಿಯಲ್ಲಿ ಮುಚ್ಚಿಟ್ಟು ಅಪ್ಪನ ಸಂಪ್ರದಾಯವನ್ನು ಪಾಲಿಸುತ್ತಿದ್ದ. ಇದು ಹೀಗೆ ಮುಂದುವರೆಯಿತು.

ನಂತರ ಮೊಮ್ಮಗನ ಸರದಿ ಬಂದಾಗ ಅವನಿಗೂ ಕೂಡ ಪೂಜೆ ಸಮಯದಲ್ಲಿ ಬೆಕ್ಕನ್ನು ಮುಚ್ಚಿಡುವ ಅವನ ಅಪ್ಪನ ಸಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆಯಿದ್ದರೂ ಸಹ ಆ ಸಮಯದಲ್ಲಿ ಅವನಿಗೆ ಬೆಕ್ಕುಗಳ್ಯಾವೂ ಸಿಗಲಿಲ್ಲ. ಕೊನೆಗೆ ಯಾರ ಹತ್ತಿರವೋ ಹೀಗೀಗೆ ತನ್ನ ಮನೆಯ ಸಂಪ್ರದಾಯವಿತ್ತು ಎಂದಾಗ, ಯಾವುದೇ ಕಾರಣಕ್ಕೂ ಆ ಸಂಪ್ರದಾಯ ನಿಲ್ಲಬಾರದು, ಜೀವಂತ ಬೆಕ್ಕು ಇಲ್ಲದಿದ್ದರೂ ಪರವಾಗಿಲ್ಲ ಒಂದು ಬೆಕ್ಕಿನ ಬೊಂಬೆಯನ್ನಾದರೂ ಮಾಡಿ ಬುಟ್ಟಿಯಲ್ಲಿ ಮುಚ್ಚಿಡುವ ವಿಧಾನ ಸರಿಯೆಂಬ ಉಚಿತ ಸಲಹೆ ದೊರೆಯಿತು. ಅದರಂತೆ ಅವನು ಬೆಕ್ಕಿನ ಬೊಂಬೆ ತಂದು ಪೂಜೆ ವಿಧಾನ ಮುಂದುವರೆಸಿದ......

ಈ ಕಥೆಯೂ ನಿಜವಾಗಿರಬೇಕೆನಿಲ್ಲ, ಆದರೆ ಅದರ ಒಟ್ಟು ಸಾರಾಂಶ ಮತ್ತು ಅದರ ಹಿಂದೆ ಅರ್ಥವಿರುವುದೂ ಸ್ಪಷ್ಟವಾಗಿದೆ.

ಹಾಗಂತ ನಮ್ಮ ಎಲ್ಲ ಆಚರಣೆಗಳೂ ಮೂಢವಾದದ್ದು ಅಂತೇನು ಇಲ್ಲ. ನಮ್ಮ ಸುಮಾರು ಆಚರಣೆಗಳು ಕಾಲಕ್ಕನುಗುಣವಾಗಿ ವೈಜ್ಞಾನಿಕ, ನೈತಿಕ, ಸಾಮಾಜಿಕ ಪ್ರಜ್ಞೆಯ ಆಧಾರವನ್ನು ಹೊಂದಿವೆ. ಆದರಲ್ಲಿ ಕೆಲವು ಆನಂತರ ಅತಿರಂಜಿತವಾಗಿರುವುದೂ, ಉತ್ಪ್ರೇಕ್ಷೆಗೊಳಗಾಗಿರುವುದೂ ಹೌದು. ಇವುಗಳ ಮಧ್ಯದಲ್ಲೇ ಅನೇಕ ಮೂಢನಂಬಿಕೆಗಳೂ ಬೇರೂರಿ ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಪೀಡೆಗಳಾಗಿ ಉಳಿದಿರುವುದನ್ನು ಕಾಣಬಹುದು. ಇದೆಲ್ಲ ಏನೇ ಇದ್ದರೂ, ಇಂದು ಎಲ್ಲ ಸಂಪ್ರದಾಯಗಳನ್ನು, ಆಚರಣೆಗಳನ್ನು, ವಿಧಿವಿಧಾನಗಳನ್ನು, ನಿಯಮಗಳನ್ನು ಕೇವಲವಾಗಿ ನೋಡುವ, ಸಾರಾಸಗಟಾಗಿ ತಳ್ಳಿಹಾಕಿ, ಹೀಗಳೆದು, ತನಗೆ ನಂಬಿಕೆ ಇಲ್ಲ ಎಂದು negative ವಿಚಾರವಾದಿಯಂತೆ ವರ್ತಿಸುವ ಬದಲು ಸ್ವಲ್ಪ ಗೌರವ ದೃಷ್ಟಿಯಿಂದ, ಕಾಲಕ್ಕನುಗುಣವಾಗಿ, ಬೇರೆಯವರ ಭಾವನೆಗಳಿಗೆ ಧಕ್ಕೆ ಬರದಂತೆ ವೈಜ್ಞಾನಿಕತೆಯನ್ನಿಟ್ಟುಕೊಂಡೇ ವಿಮರ್ಶೆ ಮಾಡುವ ಬುದ್ಧಿ ಬೆಳೆಸಿಕೊಂಡರೆ ಒಳ್ಳೆಯದು. ಅಷ್ಟಕ್ಕೂ ಜಗತ್ತಿನಲ್ಲಿ ಎಲ್ಲವೂ ವಿಜ್ಞಾನವೇ ಯಾಕಾಗಿರಬೇಕು?!! ಕಲೆಗೆ, ಭಾವನೆಗಳಿಗೆ, ನಂಬಿಕೆಗೆ, ರೂಢಿಗಳಿಗೆ, ಬೆಲೆಯೇ ಇರಬಾರದೇಕೆ?

ಕಣ್ಣಿಗೇ ಕಾಣದ ಎಲೆಕ್ಟ್ರಾನ್, ಪ್ರೋಟಾನ್ ಗಳ ಬಗ್ಗೆ ಗ್ರಂಥಗಳನ್ನೇ ಓದಿ ತಿಳಿದುಕೊಳ್ಳುವ, ಎಷ್ಟೋ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರವಿರುವ ನಕ್ಷತ್ರವೊಂದರ ಬಗ್ಗೆ ಕುತೂಹಲ ತಳೆಯುವ, ಸಂಬಂಧವಿಲ್ಲದ ದೂರ ದೇಶದ ರಾಜಕೀಯದ ಬಗ್ಗೆ ವಿಶ್ಲೇಷಿಸುವ, ಅದ್ಯಾವುದೋ ಐಟಂ ಗರ್ಲ್ ಒಬ್ಬಳಿಗೆ ಯಾವನೋ ಮುತ್ತು ಕೊಟ್ಟರೆ ಅದರ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವ ನಾವು ದಿನಾ ನೋಡುವ ದೇವರಿಗೆ ಮಂಗಳಾರತಿ ಮಾಡುವ ಅಭ್ಯಾಸ ಯಾಕೆ, ಹೇಗೆ ಬಂತು, ಮನೆಯ ಬಾಗಿಲಿನ ತೋರಣಕ್ಕೆ ಮಾವಿನ ಎಲೆಯನ್ನೇ ಯಾಕೆ ಕಟ್ಟುತ್ತಾರೆ ಎಂಬಂತಹ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಒಂದು ಚಿಕ್ಕ ಪ್ರಯತ್ನವನ್ನು ಕೂಡ ಮಾಡುವುದಿಲ್ಲವೆನ್ನುವುದೇ ಆಶ್ಚರ್ಯ ಹಾಗೂ ವಿಪರ್ಯಾಸ. ಅಷ್ಟಕ್ಕೂ ಇವೆಲ್ಲಾ 'ತಿಳಿದುಕೊಂಡು ಏನಾಗಬೇಕಿದೆ?' ಅನ್ನಿಸುತ್ತದೇನೋ ಅಥವಾ ತಿಳಿಯಲು ಸಮಯ, ವ್ಯವಧಾನವಿಲ್ಲವೇನೋ!

*************************

Feb 25th Thatskannadaದಲ್ಲಿ : ಆಚರಣೆಗಳಿಗೆ ಕಿಂಚಿತ್ತೂ ಬರವಿಲ್ಲ. ಆದರೆ ಅರ್ಥ ಗೊತ್ತೇ?

7 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸ್ ಅವರೆ...
ಚೆನ್ನಾಗಿ ಬರೆದಿದ್ದೀರ, ಒಳ್ಳೆಯ ಲೇಖನ. ಮಧ್ಯೆ ವಿವರಿಸಿದ ಕಥೆ ಇಷ್ಟವಾಯ್ತು, ಜೊತೆಗೆ ನಗು ಕೂಡ ಬಂತು.

Pradeep ಹೇಳಿದರು...

ವಿಕಾಸ್,
ಮತ್ತೊಂದು ಒಳ್ಳೆಯ ಬ್ಲಾಗ್, ಧನ್ಯವಾದಗಳು.ಆದರೆ ಇಲ್ಲೊಂದು ತರ್ಕ
"ಅಷ್ಟಕ್ಕೂ ಜಗತ್ತಿನಲ್ಲಿ ಎಲ್ಲವೂ ವಿಜ್ಞಾನವೇ ಯಾಕಾಗಿರಬೇಕು?!! " ಎಂದಿದ್ದೀರಿ, ವಿಜ್ಞಾನ ವಾಸ್ತವತೆಗೆ ಹತ್ತಿರ, ಕೆಲವೊಮ್ಮೆ ವಾಸ್ತವ/ವಿಜ್ಞಾನಕ್ಕೆ ದೂರವಾದ ನಂಬಿಕೆಗಳು, ರೂಢಿಗಳು,ಕಲೆ ಮನಸ್ಸಿಗೆ ಮುದವಾದರೂ ವಾಸ್ತವ ಅನಿವಾರ್ಯ ಮತ್ತು ನಿಜ!!

_ಪ್ರದೀಪ್

ಅನಾಮಧೇಯ ಹೇಳಿದರು...

ಮಂಗಳಾರತಿ - ಮಂಗಗಳು ಆಳವಾಗಿ ಮಾಡುವ ಆರತಿ

ಮುಖಕ್ಕೆ ಮಂಗಳಾರತಿ ಆದ್ರೆ ಬೇರೆ ಬೇರೆ ಅನ್ಗಕ್ಕೆ ಬೇರೆ ಬೇರೆ ಆರತಿ ಇದೆಯೋ ಹೇಗೆ ಎಮ್ಬ ಯೋಚನೆ ಬಂದು ಮೈ ಜುಮ್ಮೆಂದಿತು.

ಅನಾಮಧೇಯ ಹೇಳಿದರು...

chennagi baardiddyaaa

super le

Seema S. Hegde ಹೇಳಿದರು...

ವಿಕಾಸ,
ಒಳ್ಳೆ ಬರಹ. Thought provoking. ನಾನೂ ನನ್ನ ಅಜ್ಜ ಇದ್ದಾಗ ಸುಮ್ನೆ ಅವನ ಜೊತೆ argue ಮಾಡ್ತಿದ್ದಿ 'ದೇವರು ಇಲ್ಲೇ ಹೇಳಿ' ಅವನನ್ನು ಕಾಡಿಸಲ್ಲೆ. ಆದ್ರೆ ನಾನು ದೇವರನ್ನು ನಂಬ್ತಿ :-) ನೀನು ಹೇಳಿದಂಗೆ ಇದನ್ನೆಲ್ಲಾ ಒಮ್ಮೆ ವಿಚಾರ ಮಾಡದು ಒಳ್ಳೇದು ಇಲ್ಲೇ ಅಂದ್ರೆ ಬೆಕ್ಕಿನ ಕಥೆನೆ ಆಗ್ತು ಮುಂದೆ ಹೋದ ಹಂಗೆ.

Sushrutha Dodderi ಹೇಳಿದರು...

ಪ್ರಿಯ ವಿಕಾಸ್,

ನಮಸ್ಕಾರ. ಹೇಗಿದ್ದೀ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ವಿ.ರಾ.ಹೆ. ಹೇಳಿದರು...

ಶಾಂತಲಾ, ಪ್ರದೀಪ್, ಪ್ರವೀಣ್, ಹೆಗ್ಡೆ, ಸೀಮಾ ಎಲ್ಲರಿಗೂ thanx thanx thanx