ಗುರುವಾರ, ಸೆಪ್ಟೆಂಬರ್ 18, 2008

ಕುಂಕುಮವಿಟ್ಟರೆ ಗೆಟ್ ಔಟ್!

ಕಣ್ಣಿಲ್ಲದವರಿಗೆ ಕಣ್ಣು ಬರತ್ತಂತೆ, ಕಾಲಿಲ್ಲದವರಿಗೆ ಕಾಲು, ದುಡ್ಡಿಲ್ಲದವರಿಗೆ ದುಡ್ಡು, ಅವರು ನೇರ ದೇವರೊಡನೆ ಮಾತಾಡ್ತಾರಂತೆ ಎಂದು ೬ನೇ ತರಗತಿ ಕೋಣೆಯ ತುಂಬಾ ಗುಸುಗುಸು. ’ಅಲ್ಲಿ’ ೪ ದಿನಗಳಿಂದ ನೆಡೆಯುತ್ತಿದೆ. ನಾನು ನಿನ್ನೆ ನೋಡಿಬಂದೆ. ಆಶ್ಚರ್ಯ ಆಯ್ತು ಎಂದರು ಒಂದಿಬ್ಬರು.ನನಗೂ ಹೋಗಿ ನೋಡಬೇಕೆಂಬ ಆಸೆ. ಆದರೆ ಇನ್ನೂ ಸಣ್ಣವನು, ಹೇಗೆ ಹೋಗಲಿ, ಯಾರ ಜೊತೆ ಹೋಗಲಿ ಎಂದು ಪೇಚಿಗಿಟ್ಟಾಗ ಅದೇ ಸ್ಥಿತಿಯಲ್ಲಿದ್ದ ಇನ್ನೆರಡು ಗೆಳೆಯರೂ ಕೂಡಿ ಹೇಗಾದರೂ ಮಾಡಿ ಇವತ್ತು ಹೋಗೋಣ ಎಂದು ತೀರ್ಮಾನಿಸಿಕೊಂಡೆವು. ಸಂಜೆಯ ಹಿಂದಿಕ್ಲಾಸು ಅವತ್ತಿನ ಆ ’ಅದ್ಭುತ’ವನ್ನು ನೋಡಲು ಬಲಿಯಾಗಿತ್ತು.

ದೊಡ್ಡದೊಂದು ಸಭಾಂಗಣ. ಬಹಳ ಜನ ಸೇರಿದ್ದಾರೆ. ಹೇಗೋ ಒಳಗೆ ತೂರಿಕೊಂಡೆವು. ಕಾರ್ಯಕ್ರಮ ಶುರುವಾಯಿತು. ವೇದಿಕೆಯ ಮೇಲೆ ನಾಲ್ಕು ಜನ ವಿದೇಶೀಯರು ಬಂದರು. ಅವರೊಡನೆ ಒಬ್ಬ ಭಾರತೀಯ. ಮಾತು ಶುರುವಾಯಿತು. ಭಾರತೀಯ ಕನ್ನಡದಲ್ಲಿ ವಿದೇಶೀಯರ ಪರಿಚಯ ಮಾಡಿಕೊಡುತ್ತಾ ಇವರು ಅದ್ಯಾವುದೋ ದೇಶದಿಂದ ಬಂದಿದ್ದಾರೆ, ಅವರನ್ನು ದೇವರೇ ಕಳಿಸಿದ್ದಾನೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಎಂದು ಅವರ ಗುಣಗಾನ ಮಾಡಿದ. ಸೇರಿದ್ದ ಜನರೆಲ್ಲರೂ ಅದೇನೋ ಕೂಗಿದರು. ನಮಗೇನೂ ಅರ್ಥವಾಗಲಿಲ್ಲ. ಅನಂತರ ವಿದೇಶೀಯರ ಕೈಗೆ ಮೈಕು ಕೊಡಲಾಯಿತು. ಅವ ಇಂಗ್ಲೀಷಿನಲ್ಲಿ ಏನೋ ಹೇಳಲು ಶುರು ಮಾಡಿದ. ಅದರ ಅನುವಾದವನ್ನು ಕನ್ನಡದಲ್ಲಿ ಮೊದಲು ಮಾತಾಡಿದ ವ್ಯಕ್ತಿ ಮಾಡುತ್ತಿದ್ದ. ಪೂರ್ತಿ ಸಭೆಯಲ್ಲಿ ದಿವ್ಯ ಮೌನ. ನಾವೂ ಉಸಿರು ಬಿಗಿ ಹಿಡಿದು ಕುಳಿತಿದ್ದೆವು.

ಈಗ ಇವರು ದೇವರ ಜೊತೆ ಸಂಪರ್ಕ ಹೊಂದುತ್ತಾರೆ. ನೀವು ಎಲ್ಲರೂ ದೇವರನ್ನು ಪ್ರಾರ್ಥಿಸಿಕೊಳ್ಳಿ. ನಂತರ ಯಾರಿಗೆ ಏನು ತೊಂದರೆ ಇದ್ದರೂ ವೇದಿಕೆಗೆ ಬಂದು ಹೇಳಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಬೆಳಕು ಮಂಕಾಯಿತು. ಆ ನಾಲ್ವರೂ ವಿದೇಶೀಯರಿಂದ ಅದೇನೇನೋ ಹಾವಭಾವ, ಏನೇನೋ ಮಾತುಗಳು.. ಕ್ಷಣ ಕ್ಷಣಕ್ಕೂ ಜನ ಭಾವ ಪರವಶರಾಗುತ್ತಾ ಹೋದರು. ನಮಗೇನೂ ಅರ್ಥವಾಗದಿದ್ದರೂ ಆತಂಕವಾಗುತ್ತಿತ್ತು.

ಅದಾದ ನಂತರ ಜನರ ಕಷ್ಟ ಪರಿಹರಿಸುವ ಕೆಲಸ. ವೇದಿಕೆ ಹಿಂದಿನಿಂದ ಒಬ್ಬನನ್ನು ಕರೆತರಲಾಯಿತು. ಅವನಿಗೆ ಕಣ್ಣು ಕಾಣುತ್ತಿರಲಿಲ್ಲವಂತೆ. ನಿನ್ನೆ ಇದೇ ಕಾರ್ಯಕ್ರಮದಲ್ಲಿ ಅವನಿಗೆ ದೇವರ ಕೃಪೆ ಕೊಡಿಸಿದ್ದರಂತೆ. ಅವನನ್ನು ವಿದೇಶೀಯರು ಏನೋ ಮಾತಾಡಿಸಿದರು. ಮತ್ತೊಬ್ಬ ಕನ್ನಡದಲ್ಲಿ ಅದನ್ನೇ ಕೇಳಿದ. ಈಗ ಕಣ್ಣು ಕಾಣ್ತಾ ಇದೆಯಾ ನಿನಗೆ? ಅವನು ಮಸುಕು ಮಸುಕಾಗಿ ಕಾಣ್ತಾ ಇದೆ ಸ್ವಾಮಿ ಅಂದ.ಆ ವಿದೇಶೀಯರು ಮತ್ತೆ ದೇವರಿನ ಸಂಪರ್ಕಕ್ಕೆ ಹೋದರು. ೨ ನಿಮಿಷಕ್ಕೆ ಮರಳಿ ಬಂದರು. ನಿನಗೆ ಇನ್ನು ಸ್ವಲ್ಪ ದಿನದಲ್ಲಿ ಪೂರ್ತಿ ಕಣ್ಣು ಕಾಣುತ್ತೆ, ದೇವರು ಕೃಪೆ ತೋರಿಸಿದ್ದಾರೆ. ಅವನಿಗೆ ಶರಣು ಹೋಗು ಅಂತ ತಿಳಿಹೇಳಲಾಯಿತು. ವೇದಿಕೆಯಲ್ಲಿದ್ದವರು ಅದೇನೋ ಕೂಗಿದರು. ಜನರೆಲ್ಲರೂ ಜೋರಾಗೀ ಅದನ್ನೇ ಕೂಗಿದರು. ನಂತರ ಕಾಲಿಲ್ಲದವಳು ಬಂದಳು, ಅವಳಿಗೆ ಸ್ವಾಮಿ ಕೃಪೆಯಿಂದ ಕಾಲು ಬಂದಿತ್ತು, ಸೊಂಟ ಬಿದ್ದೋದ ಮುದುಕಪ್ಪನೊಬ್ಬನಿಗೆ ಸೊಂಟ ಬಂದಿತ್ತು, ಬಡವನೊಬ್ಬನಿಗೆ ಹಣ ಸಿಕ್ಕಿತ್ತು, ಇನ್ನೂ ಏನೇನೋ ಪರಮಾಶ್ಚರ್ಯದ ಘಟನೆಗಳು ನಡೆದವು. ಸುಮಾರು ಜನರಿಗೆ ಕುತ್ತಿಗೆಗೆ ಅದೇನೋ ಇದ್ದ ಸರ ತೊಡಿಸಲಾಯಿತು. ದೇವರೊಡನೆ ಸಂಪರ್ಕದಲ್ಲಿದ್ದ ಬಿಳಿಯರು ಅದೆನೇನೋ ಮಾತಾಡುತ್ತಲೇ ಇದ್ದರು, ಇನ್ನೊಬ್ಬ ಕನ್ನಡದಲ್ಲಿ ಹೇಳುತ್ತಲೇ ಇದ್ದ, ಜನ ಭಕ್ತಿಯಿಂದ ಥರಗುಡುತ್ತಲೆ ಇದ್ದರು. ನೀವೆಲ್ಲರೂ ಕೂಡ ದೇವರ ಶರಣು ಬನ್ನಿ, ಸ್ವಾಮಿ ಎಲ್ಲರನ್ನೂ ಕಾಪಾಡುತ್ತಾನೆ, ನಿಮ್ಮ ಸುತ್ತ ಮುತ್ತಲಿನ ಎಲ್ಲಾ ಸೋದರ ಸೋದರಿಯರನ್ನೂ ಸ್ವಾಮಿಯ ಕೃಪೆಗೆ ಪಾತ್ರರನ್ನಾಗಿ ಮಾಡಿ ಎಂದು ಹೇಳಿದರು. ಎಲ್ಲಾ ಆದ ಮೇಲೆ ಏನೋ ಒಂದು ಹಾಡು ಹಾಡಿದರು.. ನಾವು ನಿಧಾನಕ್ಕೆ ಕಳಚಿಕೊಂಡೆವು.

ಮನೆಗೆ ಬಂದು ಯೋಚಿಸುತ್ತಲೇ ಇದ್ದೆ, ಅದು ಹೇಗೆ ಅವರು ದೇವರೊಡನೆ ಸಂಪರ್ಕ ಸಾಧಿಸುತ್ತಾರೆ, ಅದು ಹೇಗೆ ಕೈ, ಕಾಲು ಸರಿಯಾಗಿಬಿಡುತ್ತದೆ, ಕುರುಡು ಕಣ್ಣಿಗೆ ಬೆಳಕು ಬರುತ್ತದೆ, ಅದ್ಯಾಕೆ ವೇದಿಕೆ ಮೇಲೆ ಕೆಲ ಜನರಿಗೆ ಅದೇನೇನೋ ವಿದೇಶಿ ಹೆಸರುಗಳನ್ನಿಡಲಾಯಿತು. ಅಲ್ಲಿರುವ ಜನರ್ಯಾಕೆ ಅದ್ಯಾವುದೋ ಅರ್ಥವಾಗದ ಭಾಷೆಯಲ್ಲಿ ಅದೆನೋ ಜೋರಾಗಿ ಕೂಗುತ್ತಿದ್ದರು? ಏನೊಂದೂ ತಿಳಿಯಲಿಲ್ಲ. ಕದ್ದು ಹೋಗಿದ್ದರಿಂದ ಮನೆಯಲ್ಲಿ ಕೇಳಲೂ ಧೈರ್ಯವಾಗಲಿಲ್ಲ.

*******************

ಮತ್ಯಾವಾಗಲೋ ಕ್ಲಾಸಿನಲ್ಲಿ ಹುಡುಗನೊಬ್ಬ ’ಅವರ’ ದೇವರನ್ನು ಎದ್ವಾ ತದ್ವಾ ಹೊಗಳಿ ಬೈಬಲ್ ಪುಸ್ತಕವೊಂದನ್ನು ಓದಲು ಕೊಟ್ಟಾಗ ಕತೆ ಪುಸ್ತಕದಂತೆ ಅರ್ಥವಾದಷ್ಟು ಓದಿ ವಾಪಸ್ಸು ಕೊಟ್ಟಿದ್ದೆ. ಡ್ರಾಯಿಂಗಿಗೋ, ಕ್ರಾಫ್ಟಿಗೋ ಯಾವುದಕ್ಕೋ ಬರುತ್ತಿದ್ದ ಟೀಚರೊಬ್ಬರು ಕ್ಲಾಸಿನಲ್ಲಿ ಯಾವಾಗಲೂ ಆ ಸ್ವಾಮಿ ನಿಮ್ಮನ್ನು ಕಾಪಾಡ್ತಾನೆ, ನೀವೆಲ್ಲಾ ಅವನನ್ನು ಪ್ರಾರ್ಥಿಸಬೇಕು ಎಂದು "ಶುಭಸಂದೇಶ" ಎಂಬ ಪುಸ್ತಕ ಹಂಚಿದಾಗ ಅದರಲ್ಲಿರುವುದೇನೂ ಗೊತ್ತಾಗದೇ ಬ್ಯಾಗೊಳಗಿಟ್ಟುಕೊಂಡಿದ್ದೆವು.

**********************

ಕೆಲ ವರ್ಷಗಳ ನಂತರ ತಿಳಿಯಿತು. ನಾನು ಆವಾಗ ಹೋಗಿದ್ದ ಆ ಸಭೆಯಲ್ಲಿ ಆ ವಿದೇಶೀಯರು ಸಂಪರ್ಕಿಸಿದ್ದು ಏಸುವನ್ನ, ವೇದಿಕೆ ಮೇಲೆ ಕರೆತರುತ್ತಿದ್ದುದು ಬಡ ಹಿಂದೂಗಳನ್ನ, ಅವರಿಗೆ ತೊಡಿಸುತ್ತಿದ್ದುದು ’ಕ್ರಾಸ್’ ಮತ್ತು ಅಲ್ಲಿ ನೆಡೆಯುತ್ತಿದ್ದ ಕೆಲಸ ಮತಾಂತರ. ಎಲ್ಲರೂ ಎದ್ದು ನಿಂತು ಕೂಗುತ್ತಿದ್ದುದು ’ಅಲ್ಲೆಲೂಯ’....... ’ಆಮೀನ್’ ಎಂದು!


************

ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ, ಇನ್ನಿತರ ಕಡೆಗಳಲ್ಲಿ ನೆಡೆಯುತ್ತಿರುವ ಘಟನೆಗಳನ್ನೆಲ್ಲಾ ಕೇಳಿ ಇವೆಲ್ಲವನ್ನೂ ಹೇಳಿಕೊಳ್ಳಬೇಕೆನಿಸಿತು. ನಮ್ಮೂರಿನಲ್ಲೂ ಮೊದಮೊದಲು ಒಳಾಂಗಣದಲ್ಲಿ ನೆಡೆಯುತ್ತಿದ್ದ ಇಂತಹ ಮತಾಂತರಗಳು ನಂತರ ಮೈದಾನದಲ್ಲಿ ರಾಜಾರೋಷವಾಗಿ ನೆಡೆಯಲಾರಂಭಿಸಿ ವಿರೋಧವನ್ನೆದುರಿಸಿ ಮತ್ತೆ ಒಳಗೆ ಹೋಯಿತು. ಈಗ ಊರಿನ ಹೊರವಲಯದಲ್ಲೆಲ್ಲಾ ಭವ್ಯವಾದ ಚರ್ಚುಗಳು!. ಊರಲ್ಲೆಲ್ಲಾ ಏಸುದಾಸ, ಆರೋಗ್ಯಸ್ವಾಮಿ, ಸ್ಯಾಮುಯೆಲ್, ಥಾಮಸ್, ವಿಕ್ಟರ್, ಮೇರಿಗಳು. ಮೊದಲಿಂದಲೂ ಅವರ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ದಂಡ, ಕುಂಕುಮ ಇಟ್ಟಿದ್ದರೆ, ಹೂವು ಮುಡಿದಿದ್ದರೆ ಗೆಟ್ಟೌಟು!.


31 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

ವಿಕಾಸ್..
ನಿರೂಪಣೆ ತುಂಬಾ ಚೆನ್ನಾಗಿದೆ. ಯಾಕೋ ಈ ಬರಹ ಓದುತ್ತಿದ್ದಂತೆ ಬೆನ್ನಿಹಿನ್ ನೆನಪಾಯಿತು. ಜನರಲ್ಲಿ ವಿಶ್ವಾಸ, ಬಾಂಧವ್ಯ, ಪ್ರೀತಿ ಎಲ್ಲವನ್ನೂ ಸುಟ್ಟು ಬೂದಿಯಾಗಿಸುವ 'ಮತಾಂತರ'ಅನ್ನೋದೇ ಬೇಡ. ಯಾವ ಜಾತಿಯಲ್ಲಿ, ಯಾವ ಧರ್ಮದಲ್ಲಿದ್ದರೇನು..ಪಂಪ ಹೇಳಿದಂಗೆ 'ಮಾನವ ಜಾತಿ ತಾನೊಂದೇ ವಲಂ'! ಮನುಷ್ಯ ಒಳ್ಳೆಯವನಾಗಲಿ ಬಾಳಲಿ..ಅದೇ ಜೀವನಧರ್ಮ. ಇದಕ್ಕಿಂತ ದೊಡ್ಡ ಧರ್ಮ ಯಾವುದಿಲ್ಲ..
ಒಲವಿನಿಂದ,
-ಚಿತ್ರಾಕರ್ಕೇರಾ

ಆಲಾಪಿನಿ ಹೇಳಿದರು...

ವಿಕ್ಸ್‌,
ನಿಜ ಓದ್ತಿದ್ದ ಹಾಗೆ ನನಗೂ ಬೆನ್ನಿಹಿನ್ ನೆನಪಾದ.

ಬಾಲು ಹೇಳಿದರು...

ಹೌದು ನಂಗೂ ಬೆನ್ನಿ ಹಿನ್ ಅನ್ನೋ ಪ್ರಾಣಿಯ ನೆನಪು ಆಯಿತು. ನಮ್ಮೂರಲ್ಲಿ ಮತಾಂತರ ತುಂಬನೆ ನಡೀತಾ ಇದೆ. ಈಗ ಅಲ್ಲೆಲ್ಲ ಗಲಾಟೆ ನಡೀತಾ ಇದೆ. ಅಲ್ಲಿ ಮತಾಂತರ ಆದೋವರಿಗೆ, ಸಾವಿರಾರು ರೂಪಾಯಿ ದುಡ್ಡು, ತಿಂದ್‌ಗಳಿಗೆ ಸಾಕಾಗುವಷ್ಟು ಅಕ್ಕಿ ಎಲ್ಲ ಕೊಡ್ತಾರೆ. ಆದರೆ ಅವರು ಬೇರೆಯವರೊಂದಿಗೆ ಕೂತು ಪ್ರಾರ್ಥನೆ ಮಾಡೋ ಹಾಗೆ ಇಲ್ಲ. ಒಂಥರ ಪರಿಶಿಷ್ಟ ಕ್ರಿಶ್ಚಿಯನ್ಸ್.

ಎರಡು ವರ್ಷಗಳ ಹಿಂದೆ ಲ್ಯಾಂಗ್ ಫೋರ್ಡ್ ಗಾರ್ಡನ್ ಪಾರ್ಕ್ ನಲ್ಲಿ ನಂಗೊಬ್ಬ ತತ್ವ ಜ್ಞಾನ ಕೊಡೋಕೆ ಬಂದಿದ್ದ ನಂಗೂ ಕೆಲ್ಸಾ ಇಲ್ಲ ಅಂತ ನಾನು ಕೇಳ್ತಾ ಇದ್ದೇ.. ನಿಧಾನಕ್ಕೆ ಅವನು ಹಿಂದೂ ದೆವ್ರನ್‌ನ ಬೈಯೋಕೆ ಶುರು ಮಾಡಿದ. ನಾನು ಯಾವತ್ತೂ ದೇವಸ್ಥನ್ನಾಕ್ಕೆ ಆಗಲಿ ಪ್ರವಚನ ಮಂದಿರಕ್ಕೆ ಹೋದವನೆ ಅಲ್ಲ... ಯಾಕೋ ಅವನ ಮಾತು ವಿಪರೀತ ಅನ್ನಿಸ್ತು. ಭಗವದ್ಗೀತೆ ಬಗ್ಗೆ ಅವನಿಗೆ ಹೇಳಿ, ನೀನು ಬೈಬಲ್ ಬೇರೆಯವರಿಗೆ ಕೊಡೋಕೆ ಮುಂಚೆ ಮಹಾಭಾರತ ರಾಮಾಯಣ ಓದು ಅಂತ ಗದರಿದ್ದೆ. ಪಾರ್ಕ್ ನಲ್ಲಿ ಇದ್ದ ೩-೪ ಜನರನ್ನ ಕರೆದು ಅವನಿಗೆ ಉಗಿದು ಓಡಿಸಿದ್ದೆ..... ಯಾಕೋ ನಿಮ್ಮ ಲೇಖನ ಓದಿದ ಮೇಲೆ ಅದು ಮತ್ತೊಮ್ಮೆ ನೆನಪು ಆಯಿತು.

Shankar Prasad ಶಂಕರ ಪ್ರಸಾದ ಹೇಳಿದರು...

ಹಲ್ಲೇಲೂಯಾ....
ಇದೇ ರೀತಿ 1998 ಓ ಅಥವಾ 1999 ಇರಬೋದು.
ಮೈಸೂರಿನಲ್ಲಿ ಕೂಡಾ ಮತಾಂತರ ಮಾಡ್ತಾರೆ ಅಂತಾ ಹುಣಸೂರು ರಸ್ತೆಯಲ್ಲಿರುವ ಒಂದು ಚರ್ಚಿನ ಮೇಲೆ ಹಾಳಿ ನಡೆದಿತ್ತು.
ನನ್ನ ಪ್ರಕಾರ, ಮತಾಂತರ ಅನ್ನುವುದು ಸ್ವಂತ ಇಚ್ಚೆಯಿಂದ ಆಗಬೇಕೇ ಹೊರತು, ಭ್ರಮೆ, ಲೋಭ, ಬಲವಂತದಿಂದ ಅಲ್ಲಾ. ಇವರು ಮುಖವಾಗಿ ಟಾರ್ಗೆಟ್ ಮಾಡೋದು ಬಡತನದ ರೇಖೆಗಿಂತಾ ಕೆಳಗೆ ಇರೋ ಜನ, ಹಿಂದುಳಿದವರು ಇತ್ಯಾದಿ.
ಈ ಅನಧಿಕೃತವಾಗಿ ನಡೆಯುವ ಮತಾಂತರವನ್ನು ಹತ್ತಿಕ್ಕುವ ಕೆಲ್ಸವನ್ನು ಸರ್ಕಾರ ಮಾಡಬೇಕು. ಈ ರೀತಿಯಾಗಿ ಮತಾಂತರ ಹೊಂದಿದರೆ, ಹಿಂದುಳಿದ ವರ್ಗದ ಜನರಿಗೆ ಸರ್ಕಾರದಿಂದ ದೊರೆಯುವ ಯಾವುದೇ ರೀತಿಯ ಸೌಲಭ್ಯ, ಮೀಸಲಾತಿ ಇರುವುದಿಲ್ಲ ಎಂದು.
ಇದೇ ರೀತಿಯಾಗಿ, ಪ್ರತೀ ರಾಜ್ಯದ ಸರ್ಕಾರಗಳು ಈ ಮಿಷನರಿಗಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳುವಂತೆ ಮಾಡಬೇಕು.
ಎನಂತೀರಿ ?

ಕಟ್ಟೆ ಶಂಕ್ರ

kalash_siya ಹೇಳಿದರು...

Benni Hinn!!...ವಿಕಾಸ ಲೇಖನ ಚೆನ್ನಾಗಿ ಬಂದಿದೆ..... ಈ ಕಾಟಗಳು ಭಾರತಕ್ಕೆ ಆದಿಕಾಲದಿಂದಲು ಉಡುಗೊರೆಯಾಗಿ ಬಂದಿವೆ... ನಂಗೆ ಬೆಂಗಳೊರಿನಲ್ಲಿ ಸೋ called ಕನ್ವೆರಟರ ಸಿಕ್ಕಿ ಪುಸ್ತಕ್ ಕಯ್ಯಲ್ಲಿ ಕೊಟ್ಟಿ ಯೆಸು ಶರಣು ಬಾ ಅಂದ..ನಾನು ಯೇನು ಸಿಗುತ್ತೆ ಅಂತ ಕೇಳಿದೆ..ಅದಕ್ಕೆ ಅವನು ಯೆಸು ಸಿಗುತ್ತಾನೆ..ನಾನು ಅಂದೆ ನೀನು ನಮ್ಮ ಗಣಪತಿ ಶರಣು ಬಾ... ನಿಂಗೆ ಹೀಗೆ ಹಾದಿ ಮೇಲೆ ಕಂಡಕಂಡವರ ಹಿಂದೆ ಹೋಗೊದು ತಪ್ಪುತ್ತೆ ಅಂದೆ...ಅವನು ಸಿಟ್ಟಿಗೆದ್ದು ಮುಂದೆ ಹೋದ... :)

ಗುಹೆ ಹೇಳಿದರು...

ಯಾವಾಗ ನಮ್ಮ ಬುಧ್ಧಿಜೀವಿಗಳ (ಸ್ವಯಂ ಘೋಷಿತ) ಅಲ್ಪಸಂಖ್ಯಾತರ ಓಲೈಕೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ಮತಾಂತರ ತಡೆ ತುಂಬಾ ಕಷ್ಟ ವಿಕಾಸ್.

ಕಳೆದ ಎರಡು ಮೂರು ದಿನಗಳಿಂದ ಟಿವಿಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಹಿಂದೂ ಬುಧ್ಧಿಜೀವಿ(?)ಗಳೇ ಮಾಡುತ್ತಿರುವ ಮತಾಂತರದ ಸಮರ್ಥನೆ ನೋಡಿದರೆ ಮೈಯೆಲ್ಲಾ ಉರಿಯುತ್ತೆ.

ಜಿ.ಕೆ ಗೋವಿಂದರಾಯರ ಪ್ರಕಾರ, ಅಲ್ಪಸಂಖ್ಯಾತರ ದಾಳಿ / ಪ್ರತಿಭಟನೆಗಳು ತಪ್ಪಲ್ವಂತೆ, ಅದು ಅವರು ಭಯಗೊಂಡು ಐಡೆಂಟಿಟಿಗೋಸ್ಕರ ಮಾಡುವುದಂತೆ.(ಸುವರ್ಣ ನ್ಯೂಸ್ & ವ್ಯೂಸ್). ಅದಕ್ಕೆ ಗೋವಿಂದರಾಯರು ಮತ್ತವರ ಸ್ನೇಹಿತರು ಅದನ್ನ ಸಮರ್ಥಿಸುತ್ತಾರಂತೆ.

ಮಾತನಾಡುತ್ತಾ ಅವರು ಹಿಂದೂ ಧರ್ಮವೇ ಇಲ್ಲದಿದ್ದರೆ ಚೆನ್ನಾಗಿತ್ತು ಅಂತ ಬೇರೆ ಹೇಳುತ್ತಾರೆ. ಅವರು ಒಬ್ಬ ಹಿಂದೂ ಆಗಿದ್ದಕ್ಕಾಗಿ ಮಾತ್ರ ಈ ರೀತಿ ಹೇಳಿಕೆ ಕೊಡಲು ಸಾಧ್ಯ.

ಅದೇನಾದರೂ ಬೇರೆ ಧರ್ಮದವರು ಇಂಥ ಹೇಳಿಕೆ ಕೊಟ್ಟಿದ್ದರೆ ಪರಿಣಾಮವೇ ಬೇರೆ ಇರುತ್ತಿತ್ತು.

ಧರ್ಮೋ ರಕ್ಷತಿ ರಕ್ಷಿತಃ

ಅನಾಮಧೇಯ ಹೇಳಿದರು...

ವಿಕಾಸ್,
ಒಳ್ಳೆಯ ಬರಹ. ನಾನು ಕೂಡ ಮತಾಂತರ ವಿರೋಧಿಸುವೆ. ಆದರೆ ವಿರೋಧಕ್ಕಿಂತ ಮೊದಲು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾನು ಬುದ್ದಿಜೀವಿಗಳ ತರ ಮಾತನಾಡುತ್ತಿಲ್ಲ ಖಂಡಿತ. ಆದರೆ ಎಲ್ಲೋ ಒಂದು ಕಡೆ ನಮ್ಮಲ್ಲಿರುವ ಹುಳುಕಗಳನ್ನು ಅವರು ಉಪಯೋಗಿಸಿಕೊಳ್ಳುತ್ತಿದ್ದಾರೆ ಅನ್ನೋದು ಸುಳ್ಳಲ್ಲ. ಇವತ್ತಿಗೂ ಮೇಲ್ವರ್ಗದ ಜನ (ನನ್ನನ್ನು ಸೇರಿದಂತೆ) ನಮ್ಮ ದಲಿತ ಬಂಧುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯಿದೆಯಲ್ಲ ಅದು ನಿಜಕ್ಕೂ ಕಳವಳಕಾರಿ. ಅವರಿಗೆನ್ದಿಗು ನೀವು ನಮ್ಮವರು ಅಂತ ನಾವು ಹೇಳಲೇ ಇಲ್ವಲ್ಲ, ಮತ್ತು ಅವರಿಗೂ ಅವರು ನಮ್ಮವರಂತೆ ಅನ್ನಿಸುವ ಹಾಗೆ ನಾವು ನಡೆದುಕೊಳ್ಳಲೇ ಇಲ್ವಲ್ಲ. ತೀರ ಇತ್ತೀಚಿಗೆ ಮೈಸೂರ್ ನ ಹಳ್ಳಿಯೊಂದರಲ್ಲಿ ದಲಿತ ಯುವಕನೊಬ್ಬ ದೇವಸ್ತಾನ ದ ಮೆಟ್ಟಿಲು ಹತ್ತಿದ ಕಾರಣಕ್ಕೆ ಅವನ ಕಾಲು ಕಡಿದರು ಮೇಲ್ವರ್ಗದ ಜನ. (ಅವರು ಬ್ರಾಹ್ಮಣರಾಗಿದ್ದರು ಅಂತ ಹೇಳಿ ಕೊಳ್ಳೋಕೆ ನಂಗೆ ನಾಚಿಕೆಯಾಗುತ್ತೆ). ಹೀಗಿರುವಾಗ ನಾವು ಯಾವ ನೈತಿಕತೆ ಇಟ್ಟುಕೊಂಡು ಮತಾಂತರದ ಬಗ್ಗೆ ಮಾತನಾಡಬೇಕು? . ಅದರರ್ಥ ಮತಾಂತರ ಆಗಲೀ ಅಂತಲ್ಲ, ಆದರೆ ಈ ಮೇಲು ಕೀಳಿನ ವಿಕೃತಿ ಯನ್ನು ದೂರಾಗಿಸದೆ ನಾವು ಎಷ್ಟು ಇದರ ಬಗ್ಗೆ ಚರ್ಚಿಸಿದರು ವ್ಯರ್ಥವೇನೋ ಅನ್ಸುತ್ತೆ. ನಾವು ವೈಟ್ ಕಾಲರ್ ಜನ, ನಮಗೆ ಸ್ಲಮ್ ಗಳೆಂದರೆ ಅಸಹ್ಯ . ಅಲ್ಲಿಯ ಜನರೆಂದರೆ ನಮಗೆ ವಾಕರಿಕೆ. ಆದರೆ ಕಿರಿಸ್ಥಾನರಿಗೆ ಹಾಗಲ್ಲ. ನಮ್ಮ ಧರ್ಮದ ಗುರುಗಳಿಗೆ ಹಿಂದೆ ಮುಂದೆ ಜನ ಬೇಕು. ಅವರಿಗೆ ಪೀಠ ಕೊಟ್ರಷ್ಟೇ ಅವರು ಊರಿಗೆ ಬರ್ತಾರೆ. ಆದರೆ ಒಬ್ಬ ಫಾದರ್ ಅದ್ಯವುದರ ಗೊಡವೆ ಇಲ್ಲದೆಯೇ ಕೊಲೆಗೆರಿಗೆ ನಡೆದು ಬರಬಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಅಂತ ಅವರ ಮೈದಡವಿ ಹೇಳಬಲ್ಲ. ನಮ್ಮ ಎಷ್ಟು ಜನ , ಎಷ್ಟು ಸಂಘಟನೆಗಳು ಈ ಕೆಲಸ ಮಾಡಿವೆ ಹೇಳಿ. ಅದಿರಲಿ ದಲಿತರ ಬಗ್ಗೆ, ಬಡವರ ಬಗ್ಗೆ ಕಣ್ಣೀರು ಬರುವಂತೆ ತಮ್ಮ ಕತೆ ಕಾದಂಬರಿಗಳಲ್ಲಿ ಬರೆದ ಜನ ,ಸಾಹಿತಿ' ಮಹೋದಯರು ಈ ಕೆಲಸ ಮಾಡಿದ್ದಾರೆ?. ನನಗೆ ತಿಳಿದಂತೆ 'ಹಿಂದೂ ಸೇವಾ ಪ್ರತಿಷ್ಠಾನ' ವೊಂದು ಪ್ರಾಮಾಣಿಕವಾಗಿ ಈ ಕೆಲಸ ಮಾಡುವ ಪ್ರಯತ್ನ ಮಾಡಿದೆ. ಬಹುತೇಕ ರದು ಈ ವಿಷಯದಲ್ಲಿ ಮೊಸಳೆ ಕಣ್ಣೀರು ಅಷ್ಟೆ. ನಮ್ಮವರೇ ಆದ ತಿಮ್ಮ, ಮುನಿಯ, ಕೆಂಪ, ಬಸ್ಯ, ಕೆಂಚಮ್ಮ ರ ಬಗ್ಗೆ ನಮಗೆ ಕಾಳಜಿ ಇಲ್ಲವಾದಾಗ ಅದಕ್ಕಾಗಿಯೇ ಕಾಯುತ್ತಿರುವ ಅವರು ಸಹಜವಾಗಿ ಅದನ್ನು ಉಪಯೋಗಿಸಿಕೊಂಡು ಅವರ ಕೊರಳಿಗೆ ಶಿಲುಬೆ ಹಾಕಿ ಸಿಮೋನ್, ಅಲೆಕ್ಸಾಂಡರ್, ಜಾರ್ಜ್, ಮೇರಿಯಮ್ಮ ಅಂತೆಲ್ಲ ಹೆಸರಿತ್ತು ಮತ್ತಂತರ ಮಾಡಿಬಿಡುತ್ತಾರೆ. ಮೊದಲ ತಪ್ಪು ನಮ್ಮೆಲ್ಲರದು ಇದೆ. ಆತ್ಮ ವಿಮರ್ಶೆಗೆ ಇದು ಖಂಡಿತ ಸಕಾಲ. ---ರಾಮ ಮೋಹನ ಹೆಗಡೆ, ಬೆಂಗಳೂರು.

ಬಾಲು ಹೇಳಿದರು...

ಇಲ್ಲ ರಾಮ್ ಮೋಹನ್ ಅವರೇ, ಕೆಲವರ್ಗದ ಜನರು ಹಿಂದೂ ಧರ್ಮ ವನ್ನ ತೊರೆದರು ಅಂದ ಮಾತ್ರಕ್ಕೆ ಅವರನ್ನು ಕ್ರಿಶ್ಚಿಯನ್ ದರ್ಮಕ್ಕೆ ಸೇರಿಕೊಂಡ ಹಾಗೆ ಆಗೋಲ್ಲ. ಎನ್.ಆರ್. ಪುರ ಹಾಗೂ ಬಾಲೆ ಹೊನ್ನುರಿನ ( ಅಲ್ಲಿ ಚರ್ಚು ಗಳ ಮೇಲೆ ಧಾಳಿ ಆಗಿದೆ ) ಸ್ತಿತಿ ಸ್ವಲ್ಪ ತಿಳಿದಿದೆ. ದಲಿತರು ಮತಾಂತರ ಆದ ನಂತರವೂ ಅವರು ದಲಿತರೆ ಆಗಿರುತ್ತಾರೆ. ಅವರು ಅದೇ ಧರ್ಮದ ದವರ ಜೊತೆ ಮದುವೆ ಸಂಬಂದ ಬೆಳೆಸೋಕೆ ಸಾಧ್ಯನ? ಅವರ ಮನೆಗೆ ಹೋಗೋಕೆ ಆಗುತ್ತಾ? ಚರ್ಚ್ ನಲ್ಲಿ ಅವರೊಂದಿಗೆ ಬೆರೆಯುವುದಕ್ಕೆ ಆಗೋದೇ ಇಲ್ಲ.

ಸಾಮಾಜಿಕ ಬದಲಾವಣೆ ಆಗಬೇಕೆ ಹೊರತು ಮತಾಂತರ ಅಲ್ಲ. ಜ್ಞಾನ ಪೀಠಿ ಗಳು, ಗೋವಿಂದ ರಾಯರು ಗಳಿಗೆ ತಳ ಮಟ್ಟದ ಸಮಸ್ಯೆ ಗಳು ಕಾಣೋಲ್ಲ.

ಬಾನಾಡಿ ಹೇಳಿದರು...

ಬಲತ್ಕಾರದ, ಆಮಿಷ ಒಡ್ದಿ ಮಾಡುವ ಕನ್ವರ್ಶನ್ ಗಳು ಆತಂಕಕಾರಿ. ಈ ಕುರಿತು ಇಂತಹ ಕನ್ವರ್ಶನ್ ನ ಬಲಿಪಶುಗಳಾದವರು ಪ್ರತಿಭಟಿಸಬೇಕು. ಮತ್ತು ತಮ್ಮಂತೆ ಇತರರು ಬಲಿಪಶುಗಳಾಗಬಾರದು ಎಂಬ ಎಚ್ಚರಿಕೆಯನ್ನು ಉಳಿದವರಿಗೆ ನೀಡಬೇಕು. ಕನ್ವರ್ಶನ್ ಆದುದರಿಂದ ಅವರಿಗೆ ಏನಾದರೂ ಲಾಭವಾದರೆ ಅದನ್ನೂ ವಿವರಿಸಿ ಮುಕ್ತವಾಗಿ ಎಲ್ಲರಿಗೂ ತಿಳಿಸಬೇಕು. ಅಂತಹ ಲಾಭ ಬೇಕಿದ್ದರೆ ಉಳಿದವರೂ ಕನ್ವರ್ಶನ್ ಆಗಬಹುದು.
ಜಗತ್ತಿನ ಅತ್ಯಂತ ದೊಡ್ಡ ಮತವಾದ ಕ್ರಿಶ್ಚನ್ ಎರಡನೆ ಅತಿದೊಡ್ಡ ಮತವಾದ ಇಸ್ಲಾಂ ಪ್ರಬಲವಾಗುವುದನ್ನು ಗಮನಿಸಿ ಉಳಿದ ಮತಗಳಾದ ಹಿಂದೂ, ಜೈನ, ಬೌದ್ಧ ಇತ್ಯಾದಿಯ ಜನರನ್ನು ಕನ್ವರ್ಶನ್ ಮಾಡುವುದು ಸಹಜ. (ಅಪರೇಶನ್ ಕಮಲ ನೆನಪಾಗುತ್ತದೆ!). ಮೊದಲು ಯಾರು ಕನ್ವರ್ಶನ್ ಆಗುತ್ತಾರೆ ಎಂದು ಅಧ್ಯಯನ ಮಾಡಿ. ನಂತರ ಅವರು ಯಾಕೆ ಆಗುತ್ತಾರೆ ಎಂದು ನೋಡಿ. ಕಾರಣಗಳು ಸಿಕ್ಕಿದಾಗ ಅದರಲ್ಲಿ ಯಾರ ಲೋಪವಿದೆ ಎಂದು ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕನ್ವರ್ಶನ್ ಮಾಡುವವರಷ್ಟೇ, ಆಗುವವರೂ ಮುಖ್ಯರಾಗುತ್ತಾರೆ. (ಲಂಚ ತೆಗೆದುಕೊಳ್ಳುವವರಷ್ಟೇ ಕೊಡುವವರು ಭ್ರಷ್ಟಾಚಾರಿಗಳು!).
ನಾವು ನಂಬಿರುವ ನಂಬಿಕೆಗಳನ್ನು ಬಿಟ್ಟು ಉಳಿದ ನಂಬಿಕೆಗಳನ್ನು ನಂಬಲು ನಮಗೆ ಕಷ್ಟವಾಗುತ್ತದೆ. ಇದಕ್ಕೆ ಭಾವೋದ್ವೇಗಗೊಳ್ಳುವುದು ಸರಿಯಲ್ಲ.
ದೈನಂದಿನ ಬದುಕಿಗೆ ಜೀವ ತೇಯುವವರು ಬದುಕು ಹಸನಾಗಲು ಅವರು ನಂಬಲಾಗದ ನಂಬಿಕೆಗಳನ್ನು ನಂಬಲು ಪ್ರಯತ್ನಿಸುತ್ತಾರೆ. ಅವರಿಗೆ ಅವರು ನಂಬುವ ನಂಬಿಕೆಗಳಲ್ಲಿ ವಿಶ್ವಾಸ, ನಂಬಿಕೆ ಬರಬೇಕಾದರೆ ಅದು ಅವರ ಬದುಕಿಗೂ ಏನಾದರೂ ಕೊಡಬೇಕು. ಅದನ್ನು ಕೊಡಲಾಗದಿದ್ದರೆ ಅವರನ್ನು ಪ್ರಶ್ನಿಸುವ ಹಕ್ಕು ನಮಗೆಲ್ಲಿದೆ.
ಇದೆಲ್ಲ ಭಾವನೆ, ಬದುಕು, ನಂಬಿಕೆಗಳ ಜಾಲದಲ್ಲಿ ನೇಯ್ದ ವಿಚಾರಗಳು. ಸರಿ ತಪ್ಪುಗಳನ್ನು ಗೆರೆಹಾಕಿ ವಿಂಗಡಿಸಲು ಪ್ರಯತ್ನಿಸುವವರು ಸಮಸ್ಯೆಯನ್ನು ಸೀಮಿತಗೊಳಿಸಿ ಯೋಚಿಸುತ್ತಾರಷ್ಟೇ.
ಕುಂಕುಮದ ಮಹತ್ವವನ್ನು ನಾವು ಇತರರಿಗೆ ತೋರಿಸಿದಾಗ ಅವರೂ ಕುಂಕುಮವಿಟ್ಟೆ ಬರುತ್ತಾರೆ ಬದಲಿಗೆ ಕುಂಕುಮ ಒಂದು ನಂಬಿಕೆಯ ವಿಷಯವಾದಾಗ ಅದನ್ನು ಎಲ್ಲರೂ ನಂಬಬೇಕಿಲ್ಲ. ನಾವು ಗೆಟ್ ಔಟ್ ಆಗಲು ಕಾರಣ ಕುಂಕುಮವನ್ನು ನಮ್ಮಲ್ಲೇ ನಾವು ಎಲ್ಲರಿಗೂ ಇಡಲು ಬಯಸುವುದಿಲ್ಲ. ಆದರೆ ಕುಂಕುಮ ರಕ್ತವಾಗಿ ಹರಿಯದಿರಲಿ.
ಒಲವಿನಿಂದ
ಬಾನಾಡಿ.

Harisha - ಹರೀಶ ಹೇಳಿದರು...

ವಿಕಾಸ್, ಅಭಿಪ್ರಾಯ ಸರಿಯಾಗಿದೆ. ನಿನ್ನೆ ಸಂಪದದಲ್ಲಿ "ಬುದ್ಧಿಜೀವಿ" ಅನಂತಮೂರ್ತಿಯವರಿಗೆ ಒಂದು comment ಹಾಕಿದ್ದೆ. ಅವರಿಗೆ ಏನೆನ್ನಿಸಿದೆಯೋ ಏನೋ, publish ಮಾಡೇ ಇಲ್ಲ!

Harisha - ಹರೀಶ ಹೇಳಿದರು...

ನಾನು ಹೇಳಿದ ಬುದ್ಧಿಜೀವಿಗಳ ಬರಹ ಇಲ್ಲಿದೆ

ಮನಸ್ವಿ ಹೇಳಿದರು...

ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ, ಬೆನ್ನಿಹಿನ್ ಜನರನ್ನು ನೂಕುವ ಪರಿ ಕಣ್ಣ ಮುಂದೆ ಬಂದಂತಾಯಿತು, ಪವಾಡ ಮಾಡುತ್ತಾನೆ ಎಂದು ಬಾವ ಪರವಶವಾಗಿ! ಜನ ಜಾತ್ರೆ ನೆರೆದಿದ್ದ ನೆನಪಾಯಿತು..
ಅಂತು ಕ್ರೈಸ್ತ ಶಾಲೆಗಳು ಕಾಲೇಜುಗಳು ಮತಾಂತರ ಮಾಡುವ ಪ್ರಯತ್ನಗಳನ್ನ ಬಿಡುವತನಕ ಸಮಸ್ಯೆಗಳು ಬಗೆ ಹರಿಯವ ರೀತಿ ಕಾಣುವುದಿಲ್ಲ, ಶಿಸ್ತಿನ ನೆಪದಲ್ಲಿ ಹೂವು ಮುಡಿಯಬಾರದು, ಹಣೆಗೆ ಕುಂಕುಮ ಇಡಬಾರದು, ಕನ್ನಡದಲ್ಲಿ ಮಾತನಾಡಬಾರದು ಎಂಬ ಅನೇಕ ಕಾನೂನುಗಳನ್ನು ಮಾಡಿ ಕ್ರೈಸ್ತ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವುದು ಆತಂಕದ ವಿಷಯ.

Parisarapremi ಹೇಳಿದರು...

ಗುಂಡಿಗ್ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ... ಮುಂದೆ ಹೋಗಿ ಸೇರೋದಲ್ಲಿಕ್ ಒಂದೇ ಮತ.... :-)

ನಂಗೂ ಆ ದರಿದ್ರ ಬೆನ್ನಿ ಹಿನ್ ನೆನಪಾದ, ಕರ್ಮಕಾಂಡ!!!

ಅನಾಮಧೇಯ ಹೇಳಿದರು...

ನಾನು ಓದಿದ್ದೂ ಕಾನ್ವೆಂಟಲ್ಲೇ. ಹೂವು ಮುಡೀಬಾರ್ದು, ಕುಂಕುಮ ಇಟ್ರೆ ಫೈನು... ಒಮ್ಮೆ ವರಮಹಾ ಲಕ್ಷ್ಮಿ ಹಬ್ಬದ ದಿನ ಕೈತುಂಬ ಹಸಿರು ಬಳೆ ಹಾಕ್ಕೊಂಡ್ ಹೋಗಿದ್ದೆ. ಎಮಿಲಿ ಟೀಚರ್ರು ಕೈಮೇಲೆ ಬಳೆಗೇ ತಾಕುವ ಹಾಗೆ ಬೆತ್ತದಲ್ಲಿ ಹೊಡೆದಿದ್ರು. ಗಾಯ ಆಗಿತ್ತು. ಕೈಗೂ, ಮನಸಿಗೂ.
- ಚೇತನಾ

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಕೆಲ ವರ್ಷಗಳ ಹಿಂದೆ ನಾನೂ ಈ ಬೆನ್ನಿಹಿನ್ ಎನ್ನೊ ಜೋಕರ್ ಶೋ ನಾ ನೋಡಿ(in T.V.) ತುಂಬಾ ಎಂಜೋಯ್ ಮಾಡಿದ್ದೆ.

ಆ ತರ ಸ್ಟೇಜ್ ಮೇಲಿರೋರಿಗೆಲ್ಲಾ "ಮತಾಂತರ ನಿಮಿತ್ತಂ ಬಹುಕೃತವೇಷಂ" ಅನ್ನಬಹುದು. ಈ ರೀತಿ ಮತಾಂತರಕ್ಕೊಳಗಾಗುವ ದೀನ, ದಲಿತರಿಗೆ "ಉದರನಿಮಿತ್ತಂ ಬಹುಕೃತ ವೇಷಂ" ಎನ್ನಬಹುದೇನೊ..!!

ವಿನಾಯಕ ಕೆ.ಎಸ್ ಹೇಳಿದರು...

ವಿಕಾಸ್
ನಿಮ್ಮ ಮಾತು ಅಕ್ಷರಶಃ ನಿಜ. ಎಷ್ಟೋ ಕಾನ್ವೆಂಟ್‌ಗಳಲ್ಲಿ ಹಿಂಧು ಶಿಷ್ಟಾಚಾರಗಳನ್ನು ವಿರೋಸುತ್ತಾರೆ. ನಮ್ಮ ದೇವರನ್ನು ಬಯ್ಯುತ್ತಾರೆ. ನಮ್ಮ ದುರಾದೃಷ್ಟ ಜಾತಿ ಪದ್ಧತಿ ಹೆಸರಿನಲ್ಲಿ ಅವರು ಮಾಡಿದ್ದನ್ನು ಸಮರ್ಥಿಸುವ ಬಹಳಷ್ಟು ಮಂದಿ ಈ ನಾಡಿನಲ್ಲಿ ಹುಟ್ಟಿಬಿಟ್ಟಿದ್ದಾರೆ! ಯಾವುದಕ್ಕೂ ನಾನು ಶೀಘ್ರದಲ್ಲೇ ಈ ವಿಚಾರವಾಗಿ ತುಂಬಾ ವೈಚಾರಿಕವಾಗಿ ತಾಗಬೇಕು ಅಂತಾ ಸ್ಕೇಚ್ ಹಾಕಿಟ್ಟಿದ್ದೇನೆ!

hamsanandi ಹೇಳಿದರು...

ವಿಕಾಸ್ ಅವರೆ,

ಬರಹ ಆಸಕ್ತಿ ಹುಟ್ಟಿಸುವಂತಿತ್ತು.

ನನ್ನದೊಂದು ಸ್ವಲ್ಪ ಬೇರೆ ಅನುಭವ. ನಾನು ಓದಿದ್ದೂ ಒಂದು ಕ್ರಿಶ್ಚಿಯನ್ ಸಂಸ್ಥೆ ನಡೆಸಿದ ಶಾಲೆಯೇ. ಬರೀ ಹುಡುಗರು ಇದ್ದ ಶಾಲೆಯಾದ್ದರಿಂದ ಕುಂಕುಮ ಬಳೆಗಳಿಗೆ ಏನು ಮಾಡುತ್ತಿದ್ದಿರಬಹುದು ಅನ್ನುವುದು ಗೊತ್ತಿಲ್ಲ. ಆದರೆ ನನಗೆ ಸನಾತನ ಧರ್ಮದ ದೇವ ದೇವಿಯರನ್ನು ತೆಗಳುವ ಕೆಲಸವನ್ನು ಅಲ್ಲಿದ್ದ ಪಾದ್ರಿಗಳು ಮಾಡಿದ್ದ ನೆನಪಿಲ್ಲ. ಹಾಗೇ ಸುವಾರ್ತೆಗಳನ್ನು ಪ್ರಚಾರ ಮಾಡಿದ್ದೂ ಕಾಣಲಿಲ್ಲ. ಶಾಲೆಯಲ್ಲಿ ನಾವೆಲ್ಲರೂ ಮಾತಾಡುತ್ತಿದ್ದುದ್ದೂ ಕನ್ನಡದಲ್ಲೇ. (ಪಾದ್ರಿಗಳ ಹೆಚ್ಚು ಮನೆಮಾತು ಕೊಂಕಣಿ ಇದ್ದಿರಬೇಕೆಂದು ನನ್ನ ನೆನಪು)

ಹಾಗಾಗಿ, ಆ ರೀತಿಯ ಕೆಲವರೂ ಇರುತ್ತಾರೆ ಅಂತ ಹೇಳೋಣವೆನ್ನಿಸಿತು.

ಅನಾಮಧೇಯ ಹೇಳಿದರು...

vikas, i have studied in a convent. but never there was such an experience as you have written. maybe, some of the convents were strict in the religious aspect, but as far as i know, not in south canara schools and colleges. In such a case, convent schools would not have been popular. for the deed of certain groups it is not fair to point out an entire community .

ಕುಕೂಊ.. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಕುಕೂಊ.. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಕುಕೂಊ.. ಹೇಳಿದರು...

ಇಲ್ಲಿ ವಿಕಾಸ್ ಹೇಳಿರುವುದರಲ್ಲಿ ಯಾವುದೂ ಸುಳ್ಳಿಲ್ಲ. ನಮ್ಮೂರಿನಲ್ಲಿನ ಗೋಳು ಇದೆತರನೇ ಇದೆ. ಶಾಲೆಯಲ್ಲಿನ ಗೋಳು ಒಂದುರೀತಿಯಾದರೆ ಕೇರಿ ಕೇರಿಯಲ್ಲಿ ನುಗ್ಗಿ ಮತ ಬದಲಾಯಿಸುವ ಹುನ್ನಾರ ಹೆಗ್ಗಿಲ್ಲದೆ ನಡೆದಿದೆ. ಬಡವರು, ಕೆಳಬಣದವರೇ ಇದಕ್ಕೆ ಬಲಿಯಾಗುತ್ತಿರುವುದು. ಬೇರು ಬಗೆದು ನೋಡಿದಾಗ ತಪ್ಪು ಅವರದೊಂದೇ ಅಲ್ಲವೆಂದು ತಿಳಿಯುತ್ತದೆ. ಯಾವ ಬ್ರಾಮಣ, ಲಿಂಗಾಯಿತ, ಗವುಡ ಮುಂತಾದ ಮೇಲ್ ಬಣದವರು ವಲಿಯ, ಚಲವಾದಿ, ಮಾದಿಗ ಮುಂತಾದ ಕೆಳಬಣದವರನ್ನು ನಮ್ಮವರೆಂದು ಒಪ್ಪಿಕೊಳ್ಳುತ್ತಾರೆ? ಅವರ ಜೊತೆ ಹತ್ತಿರದ ಒಡನಾಟವಿಟ್ಟುಕೊಂಡಿದ್ದಾರೆ? ಬೆಂಗಳೂರಿನಂತ ದೊಡ್ಡ ಊರಿನವರಿಗೆ ಈ ಮಾತು ಗೊಂದಲ ಉಂಟು ಮಾಡಬಹುದು. ಆದರೆ ಇವತ್ತಿಗೂ ಹಳ್ಳಿಯಲ್ಲಿ ಹೀಗೇ ಇರುವುದು. ಕೆಳಬಣದವರನ್ನು ಗುಡಿಯೊಳಗೆ ಬಿಟ್ಟು ಕೊಳ್ಳುವುದಿಲ್ಲ. ಜೊತೆ ಸೇರಿಸಿಕೊಂಡು ಊಟ ಮಾಡುವುದಿಲ್ಲ. ಎಲ್ಲ ಸಾಮಾಜಿಕ ಕೆಲಸಗಳಲ್ಲಿ ಕೇವಲ ಹೊರಗಿನ ಕೆಲಸಗಳನ್ನು ಮಾಡಲು ಬಳಸಿಕೊಳ್ಳುತ್ತಾರೆ. ಮಿಕ್ಕಿದ ಹೊತ್ತಲ್ಲಿ ಅವರನ್ನು ಮಡಿಯ ನೆವದಲ್ಲಿ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಾರೆ. ನಮ್ಮಲ್ಲೇ ಇರುವ ಈ ಕೀಳು ನಡವಳಿಕೆಯನ್ನೇ ಬೇರೆ(ಇಸಾಯಿ) ಯವರು ಮತಬದಲಾವಣೆಯ ಬಾಣವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಹೊತ್ತಲ್ಲಿ ಹೆಗ್ಗಿಲ್ಲದೆ ನುಗ್ಗಿ ಮತಬದಲಾಯಿಸುವ ಕೆಲಸ ಸರಾಗವಾಗಿ ನಡೆಯುತ್ತದೆ. ಆಸ್ಪತ್ರೆ, ಸೇವೆ, ಶಾಲೆಯ ಗೊಮುಕ ತೊಟ್ಟು ಬಂದಿದ್ದಾರೆ. ಹೆಣ್ಣು, ಹೆಂಡ, ಮಾಂಸದ ಚಪಲ ಹತ್ತಿಸಿ ಬದಲಾಯಿಸುತ್ತಾರೆ. ಈ ಮತ ಬದಲಾವಣೆಯ ಸುಳಿಯಲ್ಲಿ ಸಿಕ್ಕಿರುವುದು ಯಾವ ಮೇಲು ಬಣದವರಲ್ಲ ಅನ್ನುವುದು ಅರಿಯಲೇ ಬೇಕು. ನಮ್ಮ ಮನೆಯ ಕಂಬಕ್ಕೆ ಉಳ ಹತ್ತಿವೆ. ಅದಕ್ಕೆ ಬೇರೆಯವರು ಸರಾಗವಾಗಿ ನಮ್ಮನ್ನು ಮುರಿದು ತುಂಡರಿಸುತ್ತಿದ್ದಾರೆ. ನಮ್ಮ ಮನೆಯನ್ನು ನೆಲಸಮಮಾಡಲು ಮುಂದಾಗಿದ್ದಾರೆ.
ಈಗ ನಾವು ಸುಟಿ(ತ್ವರಿತ)ಯಾಗಿ ಬದಲಾಗಬೇಕು. ಹೊಡೆತ ಬಡಿತ ಬೆದರಿಕೆಯ ಜೊತೆಗೆ ನಮ್ಮಲ್ಲೇ ಇರುವ ಈ ಉಳುಕನ್ನು ಕಿತ್ತೊಗೆಯ ಬೇಕು. ಆ ನಿಟ್ಟಿನಲ್ಲಿ ನಾವೀಗ ಮುಂದುವರಿಯ ಬೇಕೆಂದು ನನ್ನರಿವಿನ ತೋರಿಸುತ್ತಿದೆ.
---ರಾಮ ಮೋಹನ ಹೆಗಡೆ ಯವರ ಮಾತು ದಿಟ.
ವಿಕಾಸ್ ನಿಮ್ಮ ಬರವಣಿಗೆಯ ವರಸೆ ಹರಿತವಾಗಿದೆ.

ಮತಬದಲಾವಣೆಯನ್ನು ಅಲ್ಲಗಳೆಯದ "ಜಾಣಜೀವಿಗಳ" ಬಾನಲ್ಲೊಂದು ಬೆಳ್ಳಿ ಚಿಕ್ಕಿ "ಚಿದಾನಂದ ಮೂರ್ತಿ"
"ನಾನು ಸಾಹಿತ್ಯಲೋಕದ ಹೆಮ್ಮೆಯ ಅಲ್ಪಸಂಖ್ಯಾತ ಅಸ್ಪೃಶ್ಯ"
ಮತಬದಲಾವಣೆಯ ಬಗ್ಗೆ ಅವರ ದಿಟ ನಿಲುವು ಅರಿಯಲು ಕಿಳಗಿನ ಕೊಂಡಿ ತೆರೆಯಿರಿ.
http://thatskannada.oneindia.in/news/2007/09/07/caste-conversion-chidananda-murthy-objection.html

ನನ್ನಿ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

ಚಿತ್ರಾ ಹೇಳಿದರು...

ವಿಕಾಸ್ ,

ಆಲೋಚನೆಗೆ ತಳ್ಳುತ್ತದೆ ಬರೆಹ. ನನಗೆ, ಬಿ ಜಿ ಎಲ್ ಸ್ವಾಮಿಯವರ " ಅಮೇರಿಕಾದಲ್ಲಿ ನಾನು " ಪುಸ್ತಕ ನೆನಪಾಯಿತು.ಅವರೂ ಸಹ ಇಂಥದೊಂದು ಅನುಭವವನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ .

ಇತ್ತೀಚೆ, ಕೇವಲ ಕ್ರಿಶ್ಚಿಯನ್ ಶಾಲೆಗಳಷ್ಟೇ ಅಲ್ಲ , ಬೇರೆ ಶಾಲೆಗಳಲ್ಲಿಯೂ , ಕುಂಕುಮ, ಹೂವು, ಬಳೆ, ಕಿವಿಯೋಲೆಗಳ ಬಗ್ಗೆ ಇಂಥದೇ ನಿಯಮಗಳು ಬಂದಿರುವುದು ವಿಷಾದನೀಯ !

ಸಂತೋಷಕುಮಾರ ಹೇಳಿದರು...

ವಿಕಾಸ್,ರಾಮ ಮೋಹನ ಹೆಗಡೆಯವರ ಮಾತು ನಾನೂ ಒಪ್ತೀನಿ. ನಮ್ಮಲ್ಲಿ ಧರ್ಮದ ಹೊರತಾಗಿ ಯೋಚಿಸಬಹುದಾದ ಅನೇಕ ವಿಚಾರಗಳಿವೆ ಅನ್ನಿಸೊಲ್ವಾ?. ಹಸಿದವನಿಗೆ ಅನ್ನ ಮುಖ್ಯವೇ ಹೊರತು ಬ್ರಹ್ಮಜ್ಞಾನವಲ್ಲ.ನಮ್ಮಲ್ಲಿ ದೊರಕಿರದೆ ಇರುವುದನ್ನು ಅವರು ಇನ್ನೋಂದರಲ್ಲಿ ಕಂಡುಕೊಳ್ಳುವ ಯತ್ನ ಮಾಡಿರಬಹುದಲ್ಲವೇ? ಅದು ಸಿದ್ದಾಂತಗಳೆ ಆಗಿರಬಹುದು ಅಥವಾ ಮೂಲಭೂತ ಅವಶ್ಯಕತೆಗಳೇ ಆಗಿರಬುಹುದು.ಅದು ಅವರವರ ಅವಶ್ಯಕತೆ. ಬಲವಂತ ಮತಾಂತರ ತಪ್ಪಿರಬಹುದು, ಮೊದಲು ನಮ್ಮಲ್ಲಿನ ಹುಳುಕುಗಳನ್ನು, ಕಾಲೆಳೆಯುವಿಕೆಗಳನ್ನು ತಿದ್ದಿಕೊಳ್ಳುವುದು ಮುಖ್ಯ ಅನಿಸುತ್ತಪ್ಪಾ..

ಇನ್ನು ನಿನ್ನ ಉಳಿದ ಕುಂಕುಮ, ಲಿಪಸ್ಟಿಕ್ಕು ರಗಳೆಗಳೆಲ್ಲಾ ನನಗೆ ಗೊತ್ತಿಲ್ಲಾ.. ಆದರೆ ನಾನೂ ಓದಿದ್ದು ಸಹ ಮಠದ ಶಾಲೆಯಲ್ಲಿಯೇ. ಅಲ್ಲೂ ಸಹ ಎಲ್ಲರೂ "ಕಡ್ದಾಯವಾಗಿ" ಸಹನಾವವತು ಹೇಳಲೇಬೇಕಿತ್ತು ಮತ್ತು ವಚನ ಪಾಠ ಕೇಳಲೇಬೇಕಿತ್ತು.ಇನ್ನೂ ಹೇಳಬೇಕೆಂದರೆ ಎಲ್ಲಾ ಲಿಂಗಾಯಿತ ಮಠಗಳಲ್ಲಿನ( ಉಳಿದವರ ಬಗ್ಗೆ ಗೊತ್ತಿಲ್ಲ) ಬೋರ್ಡಿಂಗು, ಹಾಸ್ಟೆಲುಗಳಲ್ಲಿ ಕೆಲ ಅತಿ ಅನಿಸುವಷ್ಟು ಆಚಾರಗಳಿವೆ. ಅವರು ಮಾಡಿದ್ದು ತಪ್ಪಾದರೆ, ಇವರು ಮಾಡಿದ್ದು ಸಹ ತಪ್ಪಾಗುತ್ತಲ್ಲವ್ವಾ?

ಅದು ಬಿಡು,ನಮ್ಮಲ್ಲಿ ಎಷ್ಟು ಜನ ಬೂದಿ ಸ್ವಾಮಿಗಳಿದ್ದಾರೆಂದು ಗೊತ್ತಿಲ್ವಾ?

ಸಂದೀಪ್ ಕಾಮತ್ ಹೇಳಿದರು...

ಸರ್ವಶಕ್ತನಾದ ಪ್ರಭುವೇ ಇಲ್ಲಿ ಬರೆದಿರೋ ಮೂಢರು(ನನ್ನನ್ನು ಬಿಟ್ಟು) ಏನು ತಪ್ಪೆಸಗುತ್ತಿದ್ದಾರೆಂದು ಅವರಿಗೇ ತಿಳಿಯದು .ಅವರ ತಪ್ಪುಗಳನ್ನೆಲ್ಲ ಕ್ಷಮಿಸು -ಆಮೆನ್

ಅನಾಮಧೇಯ ಹೇಳಿದರು...

ಲೇಖನ ಚೆನ್ನಾಗಿದೆ.
ಮತಾಂತರ ಪರ, ವಿರೋಧ ಎಲ್ಲ ಓದುತ್ತಿದ್ದೇನೆ, ಕ್ರಿಶ್ಚಿಯನ್ನರಿಂದ, ಮುಸ್ಲೀಂರಿಂದ, ಎಲ್ಲ ಧರ್ಮದವರಿಂದ ಮತಾಂತರ ನಡೀತಿದೆ. ಆದರೆ ಹಿಂದೂಗಳಿಂದ ಮತಾಂತರ ಅನ್ನೋದನ್ನ ಮಾತ್ರ ಇನ್ನೂವರೆಗೂ ನಾನಂತೂ ಕೇಳಿಲ್ಲ.

ನನ್ನದೊಂದು ಚಿಕ್ಕ ಸಮಸ್ಯೆ. ಹೆಚ್ಚಿನ ಮತಾಂತರಗಳು ನಡಿಯೋದು ಸ್ಲಂ ಗಳಲ್ಲಿ, ಕೆಳವರ್ಗದ ಜನರಿದ್ದಲ್ಲಿ.
ಏಸು, ಅಲ್ಲಾ ದೇವರುಗಳು ಜನರನ್ನ ಮೇಲೆತ್ತೋ ದೇವರುಗಳು ಅಂತಾಯ್ತು. ಅಂದಮೇಲೆ ಕ್ರಿಶ್ಚಿಯನ್ನರಲ್ಲಿ, ಮುಸ್ಲೀಮರಲ್ಲಿ ಬಡವರು ಯಾಕೆ ಉಳಿದುಕೊಂಡರು? ನಿಮ್ಮ ದೇವರು ಕೈಲಾಗದವರು, ನಮ್ಮ ಗಣಪತಿ, ಈಶ್ವರನ ಮೊರೆ ಹೋಗಿ. ಎಲ್ಲ ಸರಿಯಾಗುತ್ತೆ ಅಂತ ನಾವು ಅವರಿಗೆ ಹೇಳಿದ್ರೆ ಅವ್ರು ಹಿಂದೂಗಳಾಗಲು ಒಪ್ಪುತ್ತಾರಾ ಅಂತಾ? ಒಮ್ಮೆ ಟ್ರೈ ಮಾಡಿ ನೋಡೋದು ಒಳ್ಳೇದು ಅನ್ಸುತ್ತೆ. :)
ಏನಂತೀರಿ???

ವಿ.ರಾ.ಹೆ. ಹೇಳಿದರು...

ಎಲ್ಲರಿಗೂ ಧನ್ಯವಾದಗಳು.

ಹೇಮಶ್ರೀ, ನಾನು ಕಣ್ಣಾರೆ ಕಂಡಂತಹ ವಿಷಯವನ್ನು ಬರೆದದ್ದೇನೆಯೇ ಹೊರತು ಯಾವುದೇ ಸಮುದಾಯವನ್ನು ದೂಷಿಸಿ ಬರೆದಿಲ್ಲ.

ಈ ಮತಾಂತರ ವಿಷಯದಲ್ಲಿ ’ತಪ್ಪು’ ಎರಡೂ ಕಡೆಗಳಿಂದಲೂ ಆಗುತ್ತಿದೆ ನಿಜ. ರಾಮಮೋಹನ ಹೆಗಡೆ, ಸಂತೋಷಕುಮಾರ ಹೇಳಿದಂತೆ ಹುಳುಕುಗಳು, ಅತಿರೇಕಗಳು ನಮ್ಮಲ್ಲೂ ಜಾಸ್ತಿ ಇವೆ ಎಂಬುದು ನಿಜ. ಮೊದಲು ನಾವು ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಆಗ ಈ ಮತಾಂತರವನ್ನು ತಾನಾಗಿಯೇ ಕಡಿಮೆ ಮಾಡಬಹುದು, ಆದರೆ ನಿಲ್ಲಿಸಲಾಗದು ಎಂಬುದು ನನ್ನಭಿಪ್ರಾಯ. ಕಾರಣ ಈ ಮತಾಂತರ ಕೆಲಸಕ್ಕಾಗಿಯೇ ಹಣ, ಸಂಪನ್ಮೂಲ ಹರಿದು ಬರುತ್ತಿರುವುದು, ನೆಟ್ ವರ್ಕಗಳು ಕೆಲಸ ಮಾಡುತ್ತಿರುವುದು ಅನಧಿಕೃತ ಸತ್ಯವಾಗಿದೆ. ನಮ್ಮಲ್ಲಿ ತಪ್ಪಿದೆ ಎಂದು ಅವರ ತಪ್ಪುಗಳನ್ನು ಸರಿ ಎನ್ನುವುದಕ್ಕಾಗುವುದಿಲ್ಲ.

ಈ ದೇಶದ ಶಿಕ್ಷಣ, ಆರೋಗ್ಯ ಇನ್ನಿತರ ಕಡೆಗಳಲ್ಲಿ ’ಅವರ’ ಕೊಡುಗೆ ಬಗ್ಗೆ ಗೌರವವು ಯಾವಾಗ ಉಳಿಯುತ್ತದೆಂದರೆ ಅವರು ಬರೀ ಅದೇ ಉದ್ದೇಶಕ್ಕಾಗಿಯೇ ಅದನ್ನು ಮಾಡುತ್ತಿದ್ದರೆ ಮಾತ್ರ. ನಿಜವಾಗಿಯೂ ’ಸೇವೆ’ ಮಾಡುವ ಉದ್ದೇಶವಿದ್ದವರು ಹಿಂದೂಗಳನ್ನು ಹಿಂದೂಗಳನ್ನಾಗಿಯೇ ಬಿಟ್ಟು ಸೇವೆ ಮಾಡಲಿ. ಆಗ ಗೌರವಿಸೋಣ. ಅದು ಬಿಟ್ಟು ಇಲ್ಲಿನ ಭಾಷೆ, ಸಂಸ್ಕೃತಿ ಹಾಳುಗೆಡವುವ ಕೆಲಸವನ್ನು ಮಾಡಬಾರದು. ಜೊತೆಗೆ ಮತಾಂತರ ಕೂಡ.

ಅವರು ಧರ್ಮ ಪ್ರಚಾರ ಮಾಡಲಿ, ಅದನ್ನು ಮೆಚ್ಚಿ ಜನ ಸ್ವ ಇಚ್ಛೆಯಿಂದ ಕ್ರೈಸ್ತನಾದರೆ ಒ.ಕೆ. ಆದರೆ ಹಣ, ಮೌಢ್ಯತೆ, ಜಾತಿ ಇತ್ಯಾದಿಗಳನ್ನು ಬಳಸಿ ಆಮಿಷದ, ಬಲವಂತದ ಮತಾಂತರವನ್ನು ವಿರೋಧಿಸಬೇಕು. ಇಲ್ಲದಿದ್ದರೆ ಇಂತಹುದಕ್ಕಾಗಿಯೇ ಕಾಯುತ್ತಿರುವ ಸೋಗಲಾಡಿ ಕಾಳಜಿಯ ’ಜನರಿಂದ’, ’ರಾಜಕೀಯ ಪಕ್ಷ’ಗಳಿಂದ ಸುಮ್ಮನೇ ಕೋಮು ಕೋಮುಗಳ ಮಧ್ಯೆ ದ್ವೇಷ, ಈ ದೇಶದ ನೆಮ್ಮದಿ ಹಾಳು.

ದೇವರಲ್ಲಿ ನಂಬಿಕೆಯಿಲ್ಲದಿರಬಹುದು, ಧರ್ಮ ಎಂಬುದರಲ್ಲಿ ನಂಬಿಕೆಯಿಲ್ಲದಿರಬಹುದು, ಆದರೆ ಯಾರು ಬಂದು ಇಲ್ಲಿ ಏನಾದರೂ ಮಾಡಿಕೊಳ್ಳಲಿ ಎಂಬ ಧೋರಣೆ ಸರಿಯಲ್ಲ. ಏಕೆಂದರೆ ಕೊನೆಗೆ ಅದು ಬರುವುದು ನಮ್ಮ ಬುಡಕ್ಕೇ!
ಆತ್ಮ ವಿಮರ್ಶೆಗೆ ಇದು ಖಂಡಿತ ಸಕಾಲ.

ಪೂರಕ ಮಾಹಿತಿಗೆ ಸಂದೀಪ ಕಾಮತ್ ರ ಈ ಬ್ಲಾಗನ್ನು ಕಮೆಂಟ್ ಗಳ ಸಮೇತ ಓದಬೇಕಾಗಿ ವಿನಂತಿ.

ನವಿಲುಗರಿ ಹುಡುಗ ಹೇಳಿದರು...

ಓಹ್ ಜಗದ್ದೋದ್ಧರನಾದ ಈಶ್ವರ ಪ್ರಭುವೇ..ಈ ಡೊಂಗಿ ಜನಗಳನ್ನ ಮನ್ನಿಸು ತಂದೆ..ಹಿಂದೂ ಧರ್ಮವನ್ನ ದಯಮಾಡಿ ಕಾಪಾಡು....ಸರ್ವಶಕ್ತನಾದ ನಿನ್ನಲ್ಲಿ ನಾನು ಇಷ್ಟೇ ಬೇಡಿಕೊಳ್ಳುವುದು...

ಸೋಮ"ನ್

mruganayanee ಹೇಳಿದರು...

ಭೈರಪ್ಪನವರ ಧರ್ಮಶ್ರೀ ನೆನಪಯಿತು... nice write up....

ಪ್ರಶಾಂತ ಯಾಳವಾರಮಠ ಹೇಳಿದರು...

Hi Vikas,
chennagi bharedhidhdhira.. hage e christian missionaries yenu madthave antha thiliyalu... kelagina blog ge betti kodi...

http://stopchristianmissionaries.blogspot.com/


Prashanth Yalavaramath

Chandra Kengatte ಹೇಳಿದರು...

Vikas, Lekana tumba Channagide.. matantara yennuvudu namma hulukugalannu upyogisukondu maaaduttiruva ondu ketta krama. aadare idu nammalliruva tappe..naave maadikondiruva aneka jaatigalu, melvarga kelavarga davaa bhavanegaku.. Idakke koneye illavembante upayogisikolluttiruva jaati raajakiya... Ottinalli Bharata danta deshadalli lekhanagalige maatra seemitavaagutteno ashte.. Idakke nammalli naave aatmavimarshe maadikollabeku ashte ... Idakke koneye illada paristiti nammalli naave roopisikondidivi ashte ..

ಅನಾಮಧೇಯ ಹೇಳಿದರು...

Hello Vikas
Good writeup. It is pure bullshit hat conversion is taking place due to inequalities in the cociety. remember, there were no christians 2000 years ago. Now there are 2 billion christians in every country in the world. Did inequalities exist in every country? Currently south america has largest number of catholics. Where did they come from? Majority of them are the descendents of red indian population who used to live in Amazon jungles and Andes mountains. What kind of inequality existed in those glorious Native american kingdoms that prompted the people to change their religion and totally forget their culture? Greek had their own religion and culture very similar to Hinduism. Today 96% of the population in Greece are christians. What kind of inequality existed in Greece? It is total crap to say inequality is the reason. The reason for conversion is delusion. Delusion that their life would be better (financially, socially, security wise) if they are converted and conversion is often a result of greed towards short term gain.

-Naveen Hegde
Canada