ಶುಕ್ರವಾರ, ಸೆಪ್ಟೆಂಬರ್ 5, 2008

ಮುದ್ರಿಸುವ ಮುನ್ನ ಯೋಚಿಸಿ

ಈ ಪ್ರಕೃತಿಯನ್ನು, ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಮರಗಿಡಗಳನ್ನು ಉಳಿಸಿಕೊಳ್ಳಬೇಕು, ನಾಶವಾಗುತ್ತಿರುವ ಕಾಡುಗಳನ್ನು ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಪ್ರಾಣವಾಯುವಿನಿಂದ ಹಿಡಿದು ಮಳೆಯವರೆಗೆ ಮನುಷ್ಯನನ್ನೂ ಸೇರಿಸಿ ಇಡೀ ಪ್ರಾಣಿಕುಲ ಬದುಕಿರುವುದು ಅದೇ ಮರಗಿಡಗಳ ಸಹಾಯದಿಂದ. ಮರಗಿಡಗಳನ್ನು ಕಡಿಯುವುದು ಎಂದರೆ ನಮಗೆ ಬರಿಯ ಕಳ್ಳಸಾಗಣೆ, ರಸ್ತೆ ಅಗಲೀಕರಣ, ಜಲಾಶಯ, ವಿದ್ಯುತ್ ಸ್ಥಾವರ, ಗಣಿಗಾರಿಕೆ ಇತ್ಯಾದಿಗಳ ಕಡೆಗೇ ಗಮನ ಹರಿಯುತ್ತದೆ. ಆದರೆ ಅವುಗಳ end users ನಾವೇ ಆಗಿದ್ದು ನಮ್ಮ ಪೂರೈಕೆಗಾಗಿಯೇ ಮೇಲೆ ಹೇಳಿರುವ ಎಲ್ಲವೂ ನೆಡೆಯುತ್ತಿವೆ, ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳು, ಸೇವೆಗಳು ಕೂಡ ಈ ಮರಗಿಡಗಳಿಂದ ದೊರೆತದ್ದು ಎಂಬುದನ್ನು ಮರೆತುಬಿಡುತ್ತೇವೆ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಕಛೇರಿಯ ಮೇಜು, ಕಾಗದ ಕೂಡ ಮರದ ಉತ್ಪನ್ನಗಳೇ ಆಗಿವೆ.

ಇದಿಷ್ಟು ಪೀಠಿಕೆಯಾಯಿತು. ಈಗ ವಿಷಯಕ್ಕೆ ಬಂದರೆ, ನಮ್ಮ ಆಫೀಸಿನಲ್ಲಿ ಉದ್ಯೋಗಿಗಳ ಬಳಕೆಗೆಂದು ಮೊದಲ ಮಹಡಿಗೆಲ್ಲಾ ಸೇರಿ ಒಂದು ಪ್ರಿಂಟರ್ ಇದೆ. ಆಫೀಸಿನ ಕೆಲಸಗಳಿಗೆ ಪ್ರಿಂಟಿಂಗ್ ಅವಶ್ಯಕತೆ ಇರುವುದರಿಂದ ಎಲ್ಲಾ ಕಂಪನಿಗಳಲ್ಲೂ ಇರುತ್ತದೆ. ನಾನು ಪ್ರತಿ ದಿನದ ಕೊನೆಯಲ್ಲಿ ಗಮನಿಸುತ್ತೇನೆ. ಏನಿಲ್ಲವೆಂದರೂ ದಿನವೂ ೫೦-೬೦ ಹಾಳೆಗಳು ಪ್ರಿಂಟರ್ ನಲ್ಲಿ ವ್ಯರ್ಥವಾಗಿ ಬಿದ್ದಿರುತ್ತವೆ. ಕೆಲವೊಮ್ಮೆ ಇನ್ನೂ ಜಾಸ್ತಿ! ಇದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವೊಂದು ಪ್ರಿಂಟ್ ಸರಿಯಾಗಿ ಬಂದಿರುವುದಿಲ್ಲ, ಇನ್ನೂ ಕೆಲವನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲ. ಇನ್ನೂ ಕೆಲವರು ಅನವಶ್ಯಕವಾಗಿ ಪ್ರಿಂಟ್ ಗಳನ್ನು ಕೊಟ್ಟೂ ಕೊಟ್ಟೂ ವ್ಯರ್ಥ ಮಾಡುತ್ತಿರುತ್ತಾರೆ. ಸಿಕ್ಕಿದ್ದನ್ನೆಲ್ಲಾ ಮುದ್ರಿಸಿಕೊಂಡು ಇಟ್ಟುಕೊಳ್ಳುತ್ತಿರುತ್ತಾರೆ. ಇದು ಕೇವಲ ನನ್ನ ಕಛೇರಿಯ ಕತೆಯೊಂದೇ ಅಲ್ಲ. ಬಹುತೇಕ ಎಲ್ಲಾ ಕಛೇರಿಗಳಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಹೇಳಲು ಹೋದರೆ ಇದು ಆಫೀಸಿನ ಪ್ರಿಂಟರ್, ಆಫೀಸಿನ ದುಡ್ಡು, ನಮ್ಮದೇನು ಹೋಗುವುದಿದೆ ಎಂದೋ ಅಥವಾ ನೀನೂ ಬೇಕಾದಷ್ಟು ಪ್ರಿಂಟ್ ತೆಗೆದುಕೋ ಎಂಬಂತೆ ಕೇವಲ ದುಡ್ಡಿನ ದೃಷ್ಟಿಯಿಂದ ಪರಿಗಣಿಸುತ್ತಾರೆಯೇ ವಿನಃ ಈ ರೀತಿ ಮಾಡುವುದರಿಂದ ನಮ್ಮ ಪ್ರಕೃತಿಯ ವಿನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಕೇವಲ ನನ್ನ ಆಫೀಸಿನ ಒಂದು ಪ್ರಿಂಟರಿನಲ್ಲಿಯೇ ದಿನಕ್ಕೆ ಇಷ್ಟು ಕಾಗದ ವ್ಯರ್ಥವಾಗುತ್ತಿದ್ದರೆ ಇನ್ನು ಎಲ್ಲಾ ಆಫೀಸುಗಳಲ್ಲಿ ಸೇರಿ ವ್ಯರ್ಥವಾಗುವ ಪ್ರಮಾಣ ಎಷ್ಟಿರಬಹುದು!

ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ. ಆದ್ದರಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಸ್ವಲ್ಪ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆಂದು ಎಲ್ಲಾ ಆಫೀಸು ಜೀವಗಳಲ್ಲಿ ವಿನಂತಿ.

*ಕಛೇರಿಯ ಕೆಲಸಗಳಿಗೆ ಅಥವಾ ವೈಯಕ್ತಿಕ ಕೆಲಸಗಳಿಗೆ ನಿಜವಾದ ಅಗತ್ಯವಿದ್ದಾಗ, ಅಗತ್ಯವಿರುವಷ್ಟೆ ಪ್ರಿಂಟ್ ಮಾಡಿ.
ಹೇಗೆ ಕಾಣುತ್ತದೆ ಎಂದು ನೋಡಲು ಒಂದು ಪ್ರಿಂಟ್, ತಪ್ಪು ತಿದ್ದಿದ ಮೇಲೆ ಒಂದು ಪ್ರಿಂಟ್, ಫೈನಲ್ ಕಾಪಿ ಎಂದು ಮತ್ತೊಂದು ಪ್ರಿಂಟ್ ಕೊಡುವ ಬದಲು ಸಾಫ್ಟ್ ಕಾಪಿಯಲ್ಲಿಯೇ ಎಲ್ಲವನ್ನೂ ಫೈನಲೈಸ್ ಮಾಡಿಕೊಂಡು ನಂತರ ಮುದ್ರಿಸಿ.

*ಯಾವ ಯಾವ ಪುಟಗಳು ಬೇಕಾಗಿವೆ ಎಂದು ಮೊದಲೇ ನೋಡಿಕೊಂಡು ಅಷ್ಟನ್ನು ಮಾತ್ರ ಮುದ್ರಿಸಿಕೊಳ್ಳಿ. ಇಡೀ ಡಾಕ್ಯುಮೆಂಟನ್ನು ಮುದ್ರಿಸಿ ನಂತರ ಬೇಕಾದ ಪುಟಗಳನ್ನು ಮಾತ್ರ ಆರಿಸಿ ಇಟ್ಟುಕೊಳ್ಳುವ ಅಭ್ಯಾಸ ಬೇಡ.

*ಪ್ರಿಂಟ್ ಆಪ್ಷನ್ ಗಳನ್ನ ಸರಿಯಾಗಿ ತಿಳಿದುಕೊಳ್ಳಿ. ಮುದ್ರಿಸುವ ಮೊದಲು ಪ್ರಿಂಟರ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕೊಟ್ಟು, ಪ್ರಿಂಟ್ ಮುನ್ನೋಟವನ್ನು ನೋಡಿ ಖಾತ್ರಿಯಾದ ನಂತರವೇ ಪ್ರಿಂಟ್ ಕೊಡಿ. ಇದರಿಂದ ತಪ್ಪು ಪ್ರಿಂಟ್ ಗಳು ಬಂದು ವ್ಯರ್ಥವಾಗುವುದಿಲ್ಲ.

*ಸುಮ್ಮನೇ ರೆಫರೆನ್ಸ್ ಡಾಕ್ಯುಮೆಂಟ್ ಗಳನ್ನು ಹಾಗೂ ಡ್ರಾಫ್ಟ್ ಕಾಪಿಗಳನ್ನು ಪ್ರಿಂಟ್ ತೆಗೆದುಕೊಳ್ಳುವಾಗ ಹಾಳೆಯ ಎರಡೂ ಬದಿಯಲ್ಲಿ ಮುದ್ರಿಸಿ. ಒಂದೇ ಬದಿಯಲ್ಲಿದ್ದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ, ಓದುವುದು ಅನುಕೂಲ ಇತ್ಯಾದಿ ಶೋಕಿಗಳು ಬೇಡ. ಒಂದು ಬದಿ ಬಳಸಿದ ಹಾಳೆಯಲ್ಲಿ ಪ್ರಿಂಟ್ ತೆಗೆದುಕೊಂಡರೆ ಇನ್ನೂ ಒಳ್ಳೆಯದು.

*ಎಷ್ಟು ಕಾಪಿಗಳು ಬೇಕೋ ಅಷ್ಟನ್ನು ಮಾತ್ರ ಮುದ್ರಿಸಿ. ಸುಮ್ಮನೇ ಯಾವುದಕ್ಕೂ ಇನ್ನೊಂದೆರಡು ಜಾಸ್ತಿ ಕಾಪಿಗಳು ಇರಲಿ ಎಂಬ ಧೋರಣೆ ಬೇಡ.

*ಹೇಗೂ ಉಚಿತ ಎಂದು ಸಿಕ್ಕಿದ್ದೆಲ್ಲಾ ಜೋಕುಗಳು, ಚಿತ್ರಗಳು, ಮೇಲ್ ಗಳು, ಡಾಕ್ಯುಮೆಂಟ್ ಗಳು, ಇ-ಬುಕ್ಸ್ ಎಲ್ಲವನ್ನೂ ಪ್ರಿಂಟ್ ತೆಗೆದಿಟ್ಟುಕೊಳ್ಳುವ ಮನಸ್ಥಿತಿ ಬಿಡಿ.

*ಕೇವಲ ಕಛೇರಿ ಒಳಗಿನ ಬಳಕೆಗೆ ಬೇಕಿದ್ದಾಗ, ನೆಡೆಯುತ್ತದೆ ಎಂದಿದ್ದಾಗ ಒಂದು ಬದಿ ಪ್ರಿಂಟ್ ಆಗಿರುವ ಹಾಳೆಗಳನ್ನು ಬಳಸಿ ಇನ್ನೊಂದು ಖಾಲಿ ಬದಿಯಲ್ಲಿ ಮುದ್ರಿಸಿಕೊಳ್ಳಿ. ಉದಾಹರಣೆಗೆ, ಡ್ರಾಯಿಂಗ್ ಗಳ ಕ್ವಾಲಿಟ್ ಚೆಕಿಂಗ್, ಡಾಕ್ಯುಮೆಂಟ್ ಗಳ/ಪತ್ರಗಳ ತಿದ್ದುವಿಕೆ ಮುಂತಾದವುಗಳಿಗೆ.

*ಅಗತ್ಯಕ್ಕಿಂತ ದೊಡ್ಡ ಫಾಂಟ್ ಗಳಿದ್ದಾಗ ಅದರ ಗಾತ್ರವನ್ನು ಕಡಿಮೆ ಮಾಡಿ ಮುದ್ರಿಸಿದರೆ ಕಡಿಮೆ ಹಾಳೆಗಳು ಸಾಕಾಗುತ್ತವೆ.

*ಪ್ರಿಂಟ್ ಡಾಕ್ಯುಮೆಂಟೇಶನ್ ಬದಲು ಎಲೆಕ್ಟ್ರಾನಿಕ್ ಡಾಕ್ಯುಮೆಂಟೇಷನ್ ಮಾಡಿ. ಅಂದರೆ ಆಫೀಸಿನ ಕೆಲಸದ ಕಮ್ಯುನಿಕೇಶನ್ ಮೇಲ್ ಗಳು, ಡಾಕ್ಯುಮೆಂಟ್ಸ್ ಮುಂತಾದವುಗಳ ಸಾಫ್ಟ್ ಕಾಪಿಯನ್ನು ಉಳಿಸಿಟ್ಟುಕೊಂಡು ಬಳಸಿಕೊಳ್ಳಿ.

*ಫೋಟೋಕಾಪಿ ಮತ್ತು ಸ್ಕಾನರ್ ಗಳನ್ನು ಬಳಸುವಾಗಲೂ ಅದರ ಆಪ್ಷನ್ ಮತ್ತು ಸೆಟ್ಟಿಂಗ್ ಗಳನ್ನು ಸರಿಯಾಗಿ ತಿಳಿದುಕೊಂಡು, ಅಗತ್ಯವಿರುವಷ್ಟೇ ಕಾಪಿಗಳನ್ನು ತೆಗೆದುಕೊಳ್ಳಿ.

ಇದಿಷ್ಟೂ ಕೇವಲ ಆಫೀಸುಗಳ ಪ್ರಿಂಟ್ ಕಾಗದದ ಬಗ್ಗೆ ಮಾತ್ರ. ಇದರ ಜೊತೆಗೆ ಆಫೀಸಿನಲ್ಲೇ ಬೇರೆ ಬೇರೆ ರೀತಿಯಲ್ಲಾಗುವ ಮತ್ತು ಶಾಲೆ ಇನ್ನಿತರ ಕಡೆಗಳಲ್ಲಾಗುವ ಕಾಗದದ ದುಂದುಬಳಕೆ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕತೆಯಾಗುತ್ತದೆ.

ನೆನಪಿರಲಿ, ಕಾಗದವನ್ನು ತಯಾರಿಸಲು ಬೇಕಾಗುವ ಮೂಲವಸ್ತು ಮರ. ಕಾಗದ ತಯಾರಿಕೆಗಾಗಿಯೇ ಎಷ್ಟೆಲ್ಲಾ ಮರಗಳು ಕಡಿಯಲ್ಪಡುತ್ತವೆ ಮತ್ತು ಎಷ್ಟು ಶಕ್ತಿ, ಸಂಪನ್ಮೂಲಗಳು ವಿನಿಯೋಗಿಸಲ್ಪಡುತ್ತದೆ. ಒಳ್ಳೆ ಗುಣಮಟ್ಟದ ಒಂದು ಟನ್ ಪ್ರಿಂಟ್ ಕಾಗದ ಉತ್ಪಾದನೆಗೆ ಸುಮಾರು ೧೭ ರಿಂದ ೨೪ ಮರಗಳು ಬೇಕು. ಇಂತಿದ್ದ ಮೇಲೆ ಕಾಗದದ ಬಳಕೆಯನ್ನು ಸರಿಯಾಗಿ ಮಾಡಿ ವ್ಯರ್ಥವಾಗುವುದನ್ನು ತಪ್ಪಿಸಿ ಮರಗಿಡಗಳನ್ನು, ಪರಿಸರವನ್ನು ಉಳಿಸುವುದು ನೇರವಾಗಿ ನಮ್ಮ ಮೇಲೆ ಇದೆ.

*********

ನಾನು ಹೇಳಿದಾಕ್ಷಣ ಎಲ್ಲಾ ಬದಲಾಗುತ್ತದೆ ಎಂಬ ನಂಬಿಕೆಯಂತೂ ಇಲ್ಲದಿದ್ದರೂ ಇದನ್ನು ಓದಿ ಒಂದಿಷ್ಟು ಜನರಾದರೂ ಎಚ್ಚೆತ್ತುಕೊಂಡರೆ ಸಾರ್ಥಕವಾಗುತ್ತದೆ ಎಂಬ ಹಳೇ ಡೈಲಾಗಂತೂ ಮನಸ್ಸಿನಲ್ಲಿದೆ. :)



8th Sep thatskannada.comನಲ್ಲಿ: ಕಛೇರಿಗಳಲ್ಲಿ ಮರಕಡಿಯುವುದನ್ನು ನಿಲ್ಲಿಸಿ

26 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ಸಮಯೋಚಿತ ಬರಹ ವಿಕಾಸ.
ಅರಿವೇ ಗುರು ಅಂತಾರಲ್ಲ, ಹಾಗೆ. ಅರಿವನ್ನು ಅರಿಯೋ ಮನಸ್ಥಿತಿ ಬಹಳ ಮುಖ್ಯ.
ಹಾಗೆಯೇ ತಮಗೆ ಅರಿವಿಲ್ಲದಿದ್ದಾಗ ಬೇರೆಯವರಿಂದ ಬರೋ ಸರಿಯಾದ ಸಲಹೆಗಳನ್ನು ಅಳವಡಿಸಿಕೊಳ್ಳುವ ತಲೆ ಇರಬೇಕು.
ಬಿಡು, ನಾವುಗಳಾದರೂ ನಮ್ಮ ಕೆಲಸ ನೆಟ್ಟಗೆ ಮಾಡೋಣ.

ಕಟ್ಟೆ ಶಂಕ್ರ

ಆಲಾಪಿನಿ ಹೇಳಿದರು...

ಹೂಂ... ವಿಕ್ಸ್‌ ಕೊನೆಗೆ ಹೇಳಿದ್ದು ಮಾತ್ರ ಸತ್ಯ. ತುಂಬಾ ಇಷ್ಟವಾಯ್ತು

ಚಿತ್ರಾ ಸಂತೋಷ್ ಹೇಳಿದರು...

ಹಲೋ ಆಫೀಸು ಜೀವವೇ..
ನಾನೂ ಒಂದು ಆಫೀಸು ಜೀವವಾಗಿದ್ದರಿಂದ ಬರಹ ನೋಡಿ ತುಂಬಾ ಖುಷಿಯಾಯ್ತು..ಒಳ್ಳೆ ಬರಹ. ಹೌದು! ಮಾರಾಯ್ರೆ..ನಮ್ಮ ಆಫೀಸಿನ ಪ್ರಿಂಟರ್ ಗತಿಯೂ ಅದೇ.
ವಿಕಾಸ್..ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ಬರಹಗಳಲ್ಲಿ ಹಿಡಿದಿಟ್ಟ ಪರಿ ಸೂಪರ್ರು..keep it up!
-ಚಿತ್ರಾ

ಶ್ಯಾಮಾ ಹೇಳಿದರು...

:( ನಾನು ಇವತ್ತು ಬೆಳಗ್ಗೆ ಇಂದ ಯಾವ್ದೋ ಕೋಡ್ ಬರಿತ ಇದ್ದಿ, ಅದು ವರ್ಕ್ ಆಗ್ತ ಇದ್ದ ನೋಡಕ್ಕೆ ಪ್ರಿಂಟ್ ಕೊಡಲೇ ಬೇಕಾಗ್ತಿತ್ತು. 3-4 ಸಲ ಪ್ರಿಂಟ್ ಕೊಟ್ರು ನಂಗೆ ಬೇಕಾದ ರೀತಿಯಲ್ಲಿ ಆಗ್ತ ಇಲ್ಲೆ. ನಾನೂ ಸುಮ್ ಸುಮ್ನೆ ಕಾಗದ ವೇಸ್ಟ್ ಮಾಡದರ ವಿರೋಧಿ, ಬೇಜಾರಾಗಿ ಕೋಡಿಂಗ್ ಅರ್ಧಕ್ಕೇ ಕೈಬಿಟ್ಟು ಟೈಮ್ ವೇಸ್ಟ್ ಮಾಡ್ತಾ ಇದ್ದಿ ಈಗ

ಶ್ಯಾಮಾ ಹೇಳಿದರು...

ಹೇಳಕ್ಕೆ ಮರ್ತ್ಹೊಗಿತ್ತು , ಒಳ್ಳೆಯ ಬರಹ

Sushrutha Dodderi ಹೇಳಿದರು...

>>"ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ"
-ಹೌದೇನ ಮಾರಾಯಾ.. ನನಗೂ ಹಾಗೇ ಅನ್ಸುತ್ತೆ.. :(

ಟಿಪ್ಸ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

ಸಂದೀಪ್ ಕಾಮತ್ ಹೇಳಿದರು...

ವಿಕಾಸ್ ತುಂಬಾ ಒಳ್ಳೆಯ ಲೇಖನ ಇದರ 100 copy ಪ್ರಿಂಟ್ ಮಾಡಿ ಎಲ್ಲರಿಗೂ ಹಂಚುತ್ತೇನೆ !!
.

.
ಸುಮ್ನೆ ತಮಾಷೆಗಂದೆ ಬಯ್ ಬೇಡ :)

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ನಿಜಕ್ಕೂ ಇದನ್ನು ವಿಕಾಸವಾದ ಎಂದು ಹೇಳಬಹುದು..(ತಮಾಷೆಯಲ್ಲ)ಈ ವರೆಗೂ ನಾನು ಈ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಯೋಚಿಸಿರಲೇ ಇಲ್ಲ. ಹಾಗೆಂದು ಕಾಗದವನ್ನು ಹಾಳಮಾಡುವುದು ನನಗೂ ಇಷ್ಟವಿಲ್ಲದ ವಿಷಯವೇ.

ಆದರೆ ಜನಪ್ರಿಯ ದಿನ ಪತ್ರಿಕೆಗಳು, ಮಾಸ ಪತ್ರಿಕೆಗಳು ತಮ್ಮಲ್ಲಿ ಕವನ/ಕಥೆ/ಲೇಖನ ಗಳನ್ನು ಕಳುಹಿಸುವವರು ಬರಹವನ್ನು ಪುಟದ ಒಂದೇ ಬದಿಯಲ್ಲಿ ಮುದ್ರಿಸಿರಬೇಕು, ಅಂದವಾಗಿರಬೇಕು. ಟೈಪ್ ಆಗಿ ಮುದ್ರಿಸಿದ್ದರೆ ಒಳ್ಳೆಯದು ಇತ್ಯಾದಿ.. ಕಂಡಿಷನ್ ಹಾಕುವುದನ್ನು ಬಿಡುತ್ತಿಲ್ಲ!. ಕಾಗದದ ದುರ್ಬಳಕೆ ನಿಲ್ಲದ ವಿನಹ ಮರಗಳ ವಿನಾಶಕ್ಕೆ ಮುಕ್ತಿಸಿಗದು.

ಸಮಸ್ಯೆಯ ಜೊತೆ ಉತ್ತಮ ಹಾಗೂ ಅಳವಡಿಸಿಕೊಳ್ಳುವಂತಹ ಪರಿಹಾರ ಮಾರ್ಗಗಳನ್ನೂ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಇಂತಹ ವಿಕಾಸ ವಾದಗಳು ಮತ್ತಷ್ಟು ಬರಲಿ :)

ಪಲ್ಲವಿ ಎಸ್‌. ಹೇಳಿದರು...

ನಿಜ ವಿಕಾಸ್‌.

ಮೊನ್ನೆ ಪತ್ರಕರ್ತೆ ಗೆಳತಿಯೊಬ್ಬಳ ಆಫೀಸ್‌ಗೆ ಹೋಗಿದ್ದೆ. ನೀವು ಹೇಳಿದಂತೆ ಅಲ್ಲಿದ್ದ ಪ್ರಿಂಟರ್‌ ಹತ್ತಿರ ರಾಶಿ ಕಾಗದಗಳು ಬಿದ್ದಿದ್ದವು. ’ಏನೇ ನಿಮ್ಮಾಫೀಸಲ್ಲಿ ಕಾಗದ ಕಾಲ್ಕಸವಾಗಿದೆ?’ ಎಂದು ಕೇಳಿದ್ದಕ್ಕೆ, ಎಲ್ರೂ ಬೇಕಾಬಿಟ್ಟಿ ಪ್ರಿಂಟ್‌ ತೆಗೆದ್ರೆ ಹೀಗೇ ಆಗೋದು ಎಂದು ಬೇಸರದಿಂದ ಉತ್ತರಿಸಿದಳು.

ಸದ್ಯ, ನನ್ನ ಹತ್ತಿರ ಪ್ರಿಂಟರ್‌ ಇಲ್ಲಪ್ಪ. ಬರೆಯೋದೇನಿದ್ರೂ ಆನ್‌ಲೈನ್‌. ಆದರೆ, ಒಂದು ಅನುಮಾನ. ಕಂಪ್ಯೂಟರ್‌ ಬಳಸೋದ್ರಿಂದಾನೂ ಕರೆಂಟ್‌ ಖರ್ಚಾಗುತ್ತೆ. ಅದರ ಲೆಕ್ಕ ಹಾಕಲಿಕ್ಕೆ ಸಾಧ್ಯವಾ? ಅದರಲ್ಲಿ ಮಿತಬಳಕೆ ಮಾಡೋದು ಹೇಗೆ?

ಸಾಧ್ಯವಾದರೆ ಈ ಬಗ್ಗೆಯೂ ಬರೀರಿ.

- ಪಲ್ಲವಿ ಎಸ್‌.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸ...
ಅತ್ಯುತ್ತಮ ಲೇಖನ. ತುಂಬ ಇಷ್ಟವಾಯ್ತು.
ಕಿಚನ್ ಟವೆಲ್, ಟಿಶ್ಯೂ ಬಳಕೆ, ಹೊಟೆಲ್ ಗಳಲ್ಲಿ ಕೆಲವೊಮ್ಮೆ ಅನವಶ್ಯಕ ಬಳಸುವ ಪೇಪರ್ ಟವೆಲ್ , ಅವಷ್ಯಕತೆಗಿಂತ ಹೆಚ್ಚು ಮುದ್ರಿಸಲಾಗುವ ಹ್ಯಾಂಡ್ ಬಿಲ್ ಗಳು, ಆಮಂತ್ರಣ ಪತ್ರಿಕೆಗಳು........ ಹೇಳುತ್ತ ಹೋದರೆ ಮುಗಿಯುವುದಿಲ್ಲ ಬಿಡು.
ಶಾಲಾಕಾಲೇಜುಗಳಲ್ಲಿ ಪೆನ್ನಿಗೆ ಬದಲಾಗಿ (ಪೆನ್ನಿನಲ್ಲಿ ಬರೆದು ತಪ್ಪಾದ ಅಕ್ಷರಗಳನ್ನ ಗೀಚಿ ಆಮೇಲೆ ಇಡಿಯ ಹಾಳೆಯನ್ನೇ ಹರಿದು ಮುದ್ದೆಮಾಡಿ ಬಿಸಾಕುವ ಬದಲು)ಪೆನ್ಸಿಲ್ ಬಳಕೆಯಿಂದ ಅನವಶ್ಯಕ ಪೇಪರ್ ಬಳಕೆಯನ್ನು ತಪ್ಪಿಸಬಹುದಲ್ಲದೇ, ಬೇಡವಾದ ಬರಹಗಳನ್ನ ಇರೇಸ್ ಮಾಡುವ ಅನುಕೂಲವಿರುವುದರಿಂದ (ಎಗ್ಸಾಮ್ ಗಳಲ್ಲಿ ಅಲ್ಲ ಮತ್ತೆ) ಕಾಗದವನ್ನು ಮರುಬಳಕೆ ಮಾಡಿಕೊಳ್ಳಬಹುದು.

ನಿನ್ನ ಬರಹಗಳು ತುಂಬ ಖುಷಿಕೊಡುತ್ತವೆ ವಿಕಾಸ್.
ಇಂತಹ ನಿರುಪದ್ರವಿಯೂ, ಮಾಹಿತಿದಾಯಕವೂ,ಆರೋಗ್ಯಕರ ಚರ್ಚೆಗಳನ್ನೂ ಹುಟ್ಟುಹಾಕುವಂತಹ ಉತ್ತಮ ಲೇಖನಗಳು ನಂಗಂತೂ ತುಂಬ ಇಷ್ಟ ಕಣೋ.

Unknown ಹೇಳಿದರು...

ವಿಕಾಸ್
ಖುಷ್ ಆಯಿತು.
ಆದರೆ ಅನಿವಾರ್ಯ ವಾದ ಪ್ರಿಂಟ್ ಕೂಡ ಬಹಳಷ್ಟು ಮರಗಳನ್ನು ಬಲಿತೆಗೆದುಕೊಳ್ಳುತ್ತದೆ.ವೃಥಾ ಬಳಕೆ ಕಡಿಮೆ ಮಾಡುವುದು ಉತ್ತಮ ಸಲಹೆ. ಹಾಗೆಯೇ ಅವಶ್ಯಕತೆಯ ಬಳಕೆಗೆ ಮರಗಿಡ ನೆಡಲೆ ಬೇಕು. ನಾವು ಸ್ವಲ್ಪ ಕಾರ್ಯಗತಕ್ಕೆ ಪ್ರಯತ್ನ ಮಾಡುತ್ತಿದ್ದೇವೆ.ನಾವು ಈ ವರ್ಷ ಸರ್ಕಾರಿ ಜಾಗದಲ್ಲಿ ನಮ್ಮ ಗ್ರಾಪಂ ಹಾಗೂ ಸರ್ಕಾರದ ಸಹಾಯದಿಂದ ೫೦೦೦ ಗಿಡ ನೆಟ್ಟಿದ್ದೇವೆ.ಅದರಲ್ಲಿ ಮೂರುಸಾವಿರ ಬದುಕಬಹುದು. ಇರಲಿ ಎಷ್ಟೊ ಅಷ್ಟು. ನಮ್ಮದೇ ಭೂಮಿಯಲ್ಲಿ ನಮ್ಮದೇ ಸೃಷ್ಟಿ ಸ್ಥಿತಿ ಹಾಗೂ ನಮ್ಮದೇ ಲಯ. ಹನಿ ಹನಿ ಸೇರಿ ಹಳ್ಳ. ಗಿಡ ನೆಡುವ ಒಂದು ಬರಹ ಬರಲಿ.

ವಿಜಯ್ ಜೋಶಿ ಹೇಳಿದರು...

ವಿಕಾಸ್,

ನಿಮ್ಮ ಬ್ಲಾಗ್ ಇಷ್ಟವಾಗಲು ನಿಮ್ಮ ಇಂತಹ ಸರಳ, ಚಿಂತನಾರ್ಹ ಲೇಖನಗಳೇ ಕಾರಣ.

ನೀವು ಹೇಳಿದ್ದನ್ನು ಕಾರ್ಯರೂಪಕ್ಕೆ ತರಲು ಖಂಡಿತಾ ಪ್ರಯತ್ನಿಸುತ್ತೇನೆ.

Anveshi ಹೇಳಿದರು...

ವಿಕಾಸದ ವಾದಿಗಳೇ,

ನಿಮ್ಮ ಕಾಗದೋಳಿತಾಯದ ಸಲಹೆಯನ್ನು ಖಂಡಿಸಲಾಗುತ್ತದೆ. ಇದಕ್ಕೆ ಕಾರಣವಿದೆ. ನಮ್ಮ ಬೊಗಳೆ ಪತ್ರಿಕೆಗೆ ಸಾಕಷ್ಟು ಬೆದರಿಕೆ ಪತ್ರಗಳು, ಉಲ್-ಲೇಖನಗಳು, ನಮ್ಮನ್ನು ಚಿಂತೆಗೀಡು ಮಾಡುವ ಮತ್ತು ಚಿಂತನೆಗೀಡು ಮಾಡುವ, ಮೆದುಳಿಲ್ಲದಿದ್ದರೂ ಯೋಚನೆಗೀಡು ಮಾಡಬಲ್ಲ ಪತ್ರಗಳೆಲ್ಲಾ ಬರುತ್ತಿರುತ್ತವೆ. ಇವನ್ನೆಲ್ಲಾ ಏನು ಮಾಡುವುದು? ಮರುಬಳಕೆಯಂತೂ ಸಾಧ್ಯವೇ ಇಲ್ಲ. ನಮ್ಮ ಕ.ಬು. ಅವನ್ನೆಲ್ಲಾ ನುಂಗಿ ಹಾಕುತ್ತವೆ. ಈ ಬಗ್ಗೆ ಸಲಹೆ ಕೊಡಿ ಅಂತ ವಿನಯಪೂರ್ವಕವಾಗಿ ಧಮಕಿ ಹಾಕುತ್ತಿದ್ದೇವೆ.

ಅನಾಮಧೇಯ ಹೇಳಿದರು...

"ಕಂಪ್ಯೂಟರ್‌ ಬಳಸೋದ್ರಿಂದಾನೂ ಕರೆಂಟ್‌ ಖರ್ಚಾಗುತ್ತೆ. ಅದರ ಲೆಕ್ಕ ಹಾಕಲಿಕ್ಕೆ ಸಾಧ್ಯವಾ? ಅದರಲ್ಲಿ ಮಿತಬಳಕೆ ಮಾಡೋದು ಹೇಗೆ?"

http://michaelbluejay.com/electricity/computers.html

ನೀವು ಗೂಗಲಿಸಿದ್ರೆ ಇನ್ನೂ ಒಂದಿಷ್ಟು ಮಾಹಿತಿ ಸಿಗತ್ತೆ

ಶ್ರೀ ಹೇಳಿದರು...

ವಿಕಾಸ್,

ನಿಜಕ್ಕೂ ಒಳ್ಳೆಯ ವಿಶಯದ ಮೇಲೆ ಬೆರೆದಿದ್ದೀರಿ. ನಿಜ, ಪ್ರತಿಯೊಂದು officeನಲ್ಲೂ ಹೇಗೇ ಮಾಡೋ ಜನ ತುಂಬಾ ಇದ್ದಾರೆ. Duplex ನಲ್ಲಿ ಮುದ್ರಿಸಬಲ್ಲ ಬಹುತೇಕ printers ಇದ್ರೂ, ಎಷ್ಟೋ ಮಂದಿಗೆ ಅದು ಗೊತ್ತೇ ಇಲ್ಲ ಹಾಗೂ ಅದರ ಉಪಯೋಗ ಮಾಡೋಲ್ಲ. ನೇವು ಕೊಟ್ಟಿರೋ ಎಲ್ಲಾ guidelinesನ ಜನ ನೆನಪಿಗೆ ಬಂದಾಗಲಾದ್ರೂ ಉಪಯೋಗಿಸಿಕೊಂಡ್ರೆ ನಿಮ್ಮ ಬರಹಕ್ಕೆ ಉತ್ತಮ ಪ್ರತಿಫಲ ಬಂದಂಗೆ!

-- ಶ್ರೀ

ಶ್ರೀ ಹೇಳಿದರು...

ಹಾಂ! ಯಾರೋ computerಬಳಸುವ ವಿದ್ಯುತ್ ನ ಹೇಗೆ ಕಡಿಮೆ ಮಾಡೊದು ಅಂದ್ರಿದ್ರು, ನಿಮಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ, ಕಪ್ಪು ಬಣ್ಣವನ್ನು backgroundಆಗಿ ಬಳಸಿ.

ಸಾಧ್ಯವಾದರೆ CRT ಬದಲಿಗೆ LCD ಮಾನಿಟರ್ ಬಳಸಿ!
ನೀವು laptop/notebook ಬಳಸುತ್ತಿದ್ದರೆ, ಬೇಕಿಲ್ಲದಿದ್ದಾಗ standbyನಲ್ಲಿಡಿ. ಸುಮ್ಮನೆ ಮುಚ್ಚಿಡಬೇಡಿ!

[my 2 cents!]

ಅನಾಮಧೇಯ ಹೇಳಿದರು...

"ನಿಮಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ, ಕಪ್ಪು ಬಣ್ಣವನ್ನು backgroundಆಗಿ ಬಳಸಿ"

Please check this ‘official googleblog’ link - http://googleblog.blogspot.com/2007/08/is-black-new-green.html

“our own analysis as well as that of others shows that making the Google homepage black will not reduce energy consumption. To the contrary, on flat-panel monitors (already estimated to be 75% of the market), displaying black may actually increase energy usage.”

Also this one - http://blogs.wsj.com/numbersguy/does-a-darkened-google-really-save-electricity-104/
and
http://techlogg.com/index.php?option=com_content&task=view&id=360&Itemid=9

VENU VINOD ಹೇಳಿದರು...

ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ.

yes....nijakku howdu. chintanarha baraha

Seema S. Hegde ಹೇಳಿದರು...

ವಿಕಾಸ,
ನೀನು ಹೇಳಿದ್ದು 100% ನಿಜ. ಒಳ್ಳೆಯ ಬರಹ. ಬರಿಯ ಕಾಗದ ಒಂದೇ ಅಲ್ಲ, ಎಲ್ಲ ವಸ್ತುಗಳ ವಿಷಯದಲ್ಲೂ ಇದೇ ಕಥೆ. ಅನವಶ್ಯಕವಾದರೂ ಕೊಂಡುಕೊಳ್ಳುವ 'ಕೊಳ್ಳುಬಾಕ' ಪ್ರವೃತ್ತಿ :(

ಈ ಲಿಂಕ್ ತುಂಬ ಜನರು ನೋಡಿಕ್ಕು. ಆದರೂ ಇಲ್ಲಿ ಹಾಕ್ತಾ ಇದ್ದಿ.
http://storyofstuff.com/

Pretty ಹೇಳಿದರು...

Nanna bayalliddudannu barahadalli ilisiddiri. Nimma lekhanavannu ella officegaligoo, schoolgaligoo kaluhisiri

ಅನಾಮಧೇಯ ಹೇಳಿದರು...

ಇದೊಂದು ರೀತಿ ಮುದ್ರಾ ರಾಕ್ಷಸನ ಆಟ. ಬಕಾಸುರನಿಗೆ ಹೇಗೆ ಹಸಿವು ಹೆಚ್ಚೋ ಅದೇ ರೀತಿ ನಮ್ಮಲ್ಲಿ ಕೆಲವರಿಗೆ ಮುದ್ರಿಸುವ ಹಸಿವು ಮತ್ತು ಹುಚ್ಚು. ಭಾಳ ಕಡೆ ರಿಸೈಕಲ್ ಮಾಡಿದ ಪೇಪರ್ ಬಳಸುತ್ತಿದ್ದಾರೆ. ಅದು ಒಳ್ಳೆಯದು. ಮತ್ತೆ ಮುದ್ರಿಸಿದಾ ಹಾಳೆಯನ್ನೂ ಕೂಡ ಎಲ್ಲೆಂದರಲ್ಲಿ ಎಸೆಯದೆ ರಿಸೈಕಲ್ ಮಾಡಿದರೆ ಎಷ್ಟೋ
ಉತ್ತಮ. ಕೇವಲ ಕಾಗದಾ ಒಂದೇ ಅಲ್ಲ ಮುದ್ರಿಸುವ ಮಶಿ ಎಲೆಕ್ಟ್ರಿಸಿಟಿ ಎಲ್ಲ ವೇಸ್ಟ್.

ಅಷ್ಟೆಲ್ಲಾ ಮುದ್ರಿಸುವ ಹುಚಿದ್ದರೆ ದೇಹದ ಮೇಲೆ ಮುದ್ರಿಸಿಕೊಂಡು ಓದಬಹುದು. ಹೇಗಿದ್ದರೂ ದೇಹದ ಗಾತ್ರ ಹೆಚ್ಚುತ್ತಿದೆ. ಸುಮ್ಮನೆ ವೇಸ್ಟ್ ಬಾಡಿ ಮಾಡೋದ್ರಕಿಂತ ಬಾಡಿ ರಿಯಲ್ ಎಸ್ಟೇಟ್ ಒಳ್ಳೆ ರೀತಿ use ಮಾಡಿದ ಹಾಗೆ ಆಗೊತ್ತೆ. ಮೈಮೇಲೆ ಮುದ್ರೆ ಹೊಡೆಯುವದರ ಹಿಂದೆ ಇದೇ ಲಾಜಿಕ್ ಇತ್ತೆನೋಪ್ಪ. ಗೊತ್ತಿಲ್ಲ.

ವಿನಾಯಕ ಕೆ.ಎಸ್ ಹೇಳಿದರು...

ನಮಸ್ಕಾರ
ನಮ್ಮದ್ದೆಲ್ಲಾ ಮುದ್ರಣ ಮಾಧ್ಯಮ! ನೀವು ಎಲೆಕ್ಟ್ರಾನಿಕ್‌ ಮಾಧ್ಯಮದವರಿಗೆ ನಿಮ್ಮ ಪ್ರವಚನವನ್ನು ವರ್ಗಾಯಿಸಿ! ನಿಮ್ಮ ಬರಹ ನೋಡಿ ಹೀಗೆ ಬೈಯಬೇಕು ಅಂದುಕೊಂಡೆ. ಆದ್ರೂ ಮನಸ್ಸಾಗಲಿಲ್ಲ! ಕೆಲವದು ಅನಿವಾರ್ಯ. ಅನಿವಾರ್ಯ ಅನ್ನೋದಕ್ಕಿಂತ ಕೆಲ ಸಂಗತಿಗಳನ್ನು ಅನಿವಾರ್ಯವಾಗುವಂತೆ ಮಾಡಿಕೊಂಡುಬಿಟ್ಟಿದ್ದೇವೆ. ಹಾಗಾಗಿ ಯಾರು ಎಷ್ಟು ಬಡಿದುಕೊಂಡರೂ ಅಷ್ಟೇ! ಆದ್ರೂ ಒಳ್ಳೆಯ ಕಾಳಜಿಯುತ ಬರಹ. ಸೂಕ್ಷ್ಮ ಸಂ"ವೇದನೆ"!

ವಿ.ರಾ.ಹೆ. ಹೇಳಿದರು...

@ಕಟ್ಟೆ ಶಂಕ್ರ
ಹೌದು ಸಾರ್, ನಾವು ಅರಿತುಕೊಳ್ಳಬೇಕು.
ಅಂದಹಾಗೆ ನಿಮ್ಮ mail ತುದಿಯಲ್ಲಿದ್ದ think before u print ಎಂಬ ಸಂದೇಶವೇ ಈ ಬರಹ ಬರೆಯಲು ಸ್ಪೂರ್ತಿ. thanx

@shreedevi
ಕೊನೆಗೆ ಹೇಳಿದ್ದು ಮಾತ್ರ ಸತ್ಯವಾ? ಬೇರೆ ಎಲ್ಲಾ?! :)

ಚಿತ್ರಾ, ಶ್ಯಾಮಾ, ಸುಶ್
thanQ :)

ಸಂದೀಪ
ಕೊಲೆಗಳು ಸುಮ್ ಸುಮ್ನೇ ಆಗೋಲ್ಲ . :-)

ತೇಜಕ್ಸ್,
ಅಗತ್ಯವಿದ್ದ ಕಡೆ ಹೇಗೆ ಅಗತ್ಯವಿದೆಯೋ ಹಾಗೇ ಬಳಸೋಣ.
ಆದರೆ ಅನವಶ್ಯಕ ಬಳಕೆ ಅಥವಾ ವ್ಯರ್ಥ ಮಾಡುವುದು ಬೇಡ. ಅಲ್ಲವೆ? thanQ.

ಪಲ್ಲವಿ,
thanQ, ಬಳಕೆ o.k ಆದ್ರೆ waste ಮಾಡೋದು ಬೇಡ ಅಷ್ಟೆ. ಅದು ಕಾಗದವಾಗಲೀ, ಕರೆಂಟಾಗಲಿ, ನೀರಾಗಲಿ.

ಶಾಂತಲಕ್ಕ,
thanQ. ಆ ಟಿಶ್ಯೂ ಪೇಪರ್ ಗಳು ಎಲ್ಲಾ ಮರು ಬಳಕೆ (recycled) ಕಾಗದದಿಂದ ಮಾಡಿರ್ತಾರೆ. ಸ್ವಲ್ಪ ಪರವಾಗಿಲ್ಲ. ಆದ್ರೆ ಪ್ರಿಂಟ್ ಕಾಗದ ಮಾತ್ರ ಒಳ್ಳೇ ಗುಣಮಟ್ಟದ್ದು. first hand production. ಅದ್ಕೇ ಜವಾಬ್ದಾರಿ ಜಾಸ್ತಿ ಇರಬೆಕು ನಮ್ಮದು ಬಳಕೆಯಲ್ಲಿ.

ಶ್ರೀಶಂ,
ನೀವು ಮರಗಿಡ ಬೆಳೆಸುತ್ತಿರುವುದು ಸಂತೋಷ. ಎಲ್ಲರಿಗೂ ಅದೇ ಬುದ್ಧಿ ಬರಲಿ ಎಂದು ಆಶಿಸೋಣ.


ಜೋಶಿ,ಶ್ರೀ, ವೇಣು, ಬಾಗ್ವತ್ರು, ಸುನಾತ್, ಪ್ರೀತಿ...
thanQ.

ಅಸತ್ಯ ಅನ್ವೇಷಿಗಳೆ,
ಹೇಗಾದ್ರೂ ಮಾಡಿ ಇದೊಂದಲ್ಲಾದ್ರೂ ಸಹಕರಿಸಿ ಸ್ವಾಮಿ. ಬೇರೆ ಡೀಲಿಂಗ್ ಎಲ್ಲಾ ಆಮೇಲೆ ಇಟ್ಕೋಳೋಣ :-)

ಸೀಮಕ್ಕ,
ಅದಕ್ಕೇ ಕೊನೆಲ್ಲಿ ಹೇಳಿದ್ದು ಇದು ಬರೇ ಪ್ರಿಂಟ್ ಕಾಗದದ ಕತೆ ಮಾತ್ರ ಅಂತ. ಬೇರೆ ಇನ್ನೂ ಬೇಕಾದಷ್ಟು ಇದ್ದು ಇಂತದ್ದು.:(

ಮುದ್ರಾಸುರ
:-)

ವಿನಾಯಕ,
ನಿಮ್ದು ಪ್ರಿಂಟ್ ಮಾಧ್ಯಮ ಒ.ಕೆ. ಪ್ರಿಂಟ್ ಹಾಕ್ಕೋಳಿ ನೀವು :).
ಆದ್ರೆ ನಮ್ದು ಆಫೀಸ್ ಕಂಪ್ಯೂಟರ್ ಪ್ರಿಂಟ್ ಬಗ್ಗೆ. ;)
ಅನಿವಾರ್ಯವಲ್ಲದ್ದರ ಬಳಕೆ ಕಡಿಮೆ ಮಾಡಿ ಅನ್ನೋದರ ಬಗ್ಗೆ.
thanQ

ಮನಸ್ವಿ ಹೇಳಿದರು...

ನನ್ನ ಮನೆಯಲ್ಲಿರುವ ಪ್ರಿಂಟರ್ ಕಲರ್ ಕಾರ್ಟಿರಿಡ್ಜ್ ನೀಲಿ ಬಣ್ಣದಲ್ಲಿ ಮಾತ್ರ ಮುದ್ರಿಸುತ್ತಿದ್ದು ಕ್ಲೀನ್ ಮಾಡಲು(cartiridge cleaning wizard prints on a paper after completing cleaning cartiridge on hp printer) ಸುಮಾರು ಪುಟಗಳನ್ನು ಹಾಳು ಮಾಡಿದೆ ಎಂದು ಬೇಜಾರಾಗುತ್ತಿದೆ,
ಇಂಕ್ ಜೆಟ್ ಪ್ರಿಂಟರ್ ಆಗಿದ್ದರೆ ಹೈ ಕ್ವಾಲಿಟಿಯಲ್ಲಿ ಅಕ್ಷರಗಳ ಪ್ರಿಂಟ್ ತೆಗೆಯುವುದರ ಬದಲು ಪ್ರಿಂಟ್ ಕ್ವಾಲಿಟಿಯನ್ನು ಮೀಡಿಯಂ ಅಥವಾ ನಾರ್ಮಲ್ ಗೆ ಇಟ್ಟು ಪ್ರಿಂಟ್ ತೆಗೆದರೆ ಇಂಕ್ ಉಳಿತಾಯವಾಗುತ್ತದೆ.
ಇಂಕ್ ಜೆಟ್ ಪ್ರಿಂಟರ್ ಗಳ ರಗಳೆಯೇನೆಂದರೆ ಹೆಚ್ಚುದಿನ ಪ್ರಿಂಟ್ ತೆಗೆಯದೆ ಪೇಪರ್ ಉಳಿಸಲು ಹೋದರೆ ಕಾರ್ಟಿರಿಡ್ಜ್ ನಲ್ಲಿ ಬಣ್ಣ ಒಣಗಿ ಹೋಗುತ್ತದೆ!
ಅತ್ಯಂತ ಒಳ್ಳೆಯ ಸಾಮಾಜಿಕ ಕಾಳಜಿ ವ್ಯಕ್ತ ಪಡಿಸುವ ಲೇಖನ ಬರೆದಿದ್ದಕ್ಕೆ ದನ್ಯವಾದಗಳು..

kalash_siya ಹೇಳಿದರು...

Every 3000 sheets of Paper Cost us a Tree. Let's Conserve

ಅನಾಮಧೇಯ ಹೇಳಿದರು...

yee article gulfkannadiga.com li odidde, adarre alli nimma hesare hakilla.