ಗುರುವಾರ, ಮಾರ್ಚ್ 11, 2010

ತಪ್ಪಲ್ಲದ ತಪ್ಪುಗಳು

ಕೆಲದಿನಗಳಿಂದ ಸ್ವಾಮಿ ನಿತ್ಯಾನಂದರ ಬಗ್ಗೆ ಏನೇನೋ ಜೋಕ್ ಸಂದೇಶಗಳು ನನ್ನ ಫೋನ್ ಗೆ ಬಂದಿದ್ದವು. ಇವತ್ತು ಬೆಳಗ್ಗೆ ಅದನ್ನೇ ನಾನು ನನ್ನ friendsಗೆಲ್ಲಾ ಫಾರ್ವರ್ಡ್ ಮಾಡುತ್ತಿದ್ದೆ. ಅದನ್ನು ಕಳಿಸುವಾಗ ಅವರ ಬಗ್ಗೆ , ಆ ಘಟನೆಯ ಬಗ್ಗೆ ಯಾವ ಯೋಚನೆಯೂ ಇಲ್ಲದೇ ಸುಮ್ಮನೇ ತಮಾಷೆಗಾಗಿ ಕಳಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗೆಳತಿ ಫೋನ್ ಮಾಡಿದಳು. ಇದ್ಯಾಕೆ ಹೀಗೆಲ್ಲಾ ಕಳಿಸ್ತಿದ್ದೀಯ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾರೆ, ಹೀಗೆ ಸುಮ್ಮನೇ ಇನ್ನೊಬ್ಬರನ್ನು ತಮಾಷೆ ಮಾಡಿಕೊಳ್ಳುವುದು ತಪ್ಪಲ್ವಾ ಅಂದಳು. ನನಗೂ ಹೌದು ಅನ್ನಿಸಿತು. ಇದು ಚಿಕ್ಕ ತಪ್ಪು ಎನ್ನಬಹುದು. ನನಗೂ, ಯಾರಿಗೂ ತೊಂದರೆ ಮಾಡದ ಚಿಕ್ಕ ತಪ್ಪು. ತಲೆಕೆಡಿಸಿಕೊಳ್ಳಬೇಕಾದ್ದೇನೂ ಇರದ, ಅಲ್ಲೇ ಬಿಟ್ಟು ಬಿಡುವ ತಪ್ಪು. ಅದಿರಲಿ.

****

ಆದರೆ ಜೀವನದಲ್ಲಿ ಒಮ್ಮೊಮ್ಮೆ ಎಂತಹ ತಪ್ಪುಗಳಾಗಿ ಬಿಡುತ್ತವೆಂದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆ ತಪ್ಪು ಮಾಡುವಾಗ ಅದು ನಮಗೆ ನಿಜವಾಗಲೂ ತಪ್ಪು ಅಂತ ಅನ್ನಿಸಿರುವುದಿಲ್ಲ. ನಿಜವಾಗಲೂ ಅದು ಆಗ ’ತಪ್ಪು’ ಅನ್ನುವಂತದ್ದು ಆಗಿರುವುದೇ ಇಲ್ಲ. ಇಲ್ಲಿ ತಪ್ಪು ಅಂದರೆ ಯಾರಿಗೋ ತೊಂದರೆಯಾಗುವ, ಯಾರಿಗೋ ಮೋಸ ಮಾಡಿದ ತಪ್ಪು ಅಂತಲ್ಲ. ನಮ್ಮದೇ ಜೀವನಕ್ಕೆ, ನಮ್ಮದೇ ಬೆಳವಣಿಗೆಗೆ ತೊಡಕಾಗುವಂತಹ, ನಮ್ಮದೇ ನೆಮ್ಮದಿ ಕೆಡಿಸಿಕೊಳ್ಳುವಂತಹ ತಪ್ಪುಗಳು (mistakes). ಅವತ್ತಿನ ಸನ್ನಿವೇಶಕ್ಕೆ ತಕ್ಕನಾಗಿ ಮಾಡಿದ ಕೆಲಸ, ಅವತ್ತು ತೆಗೆದುಕೊಂಡ ತೀರ್ಮಾನ, ಅವತ್ತು ಇಟ್ಟ ಹೆಜ್ಜೆ ತಪ್ಪಾಗಿತ್ತು ಅಂತ ಎಷ್ಟೋ ಕಾಲವಾದ ಮೇಲೆ ಅರಿವಾಗಲು ಶುರುವಾಗುತ್ತದೆ. ಆದರೆ ಕಾಲ ಮೀರಿರುತ್ತದೆ. ಅದು ಎಲ್ಲೋ ತೊಡಗಿಸಿದ ಬಂಡವಾಳ ಇರಬಹುದು, ಆರಿಸಿಕೊಂಡ ಕ್ಷೇತ್ರ, ಉದ್ಯೋಗ ಆಗಿರಬಹುದು, ಬೆಳೆಸಿಕೊಂಡ ಸ್ನೇಹ/ಸಂಬಂಧ/ಸಹವಾಸವಿರಬಹುದು, discontinue ಮಾಡಿದ ಹವ್ಯಾಸ, ಕಲೆ, ಕಳೆದ ಸಮಯ ಮತ್ತಿನ್ನೇನೋ ಆಗಿರಬಹುದು. ಅವು ನಮ್ಮ ನಿರೀಕ್ಷೆಯ ಹೊರತಾಗಿ ನೆಡೆದಾಗ, ನಾವು ಊಹಿಸಿದ ದಾರಿಯಲ್ಲಿ ಸಾಗದಿದ್ದಾಗ, ತೊಂದರೆ ಕೊಡಲಾರಂಭಿಸಿದಾಗ, ಕಳೆದುಕೊಂಡದ್ದು ಮತ್ತೆ ಸಿಗುವುದಿಲ್ಲ ಎಂಬಂತಾದಾಗ ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜು ಆಗಿಹೋಗಿ ಅದನ್ನು ಸರಿಪಡಿಸಿಕೊಳ್ಳುವ ದಾರಿ ತೀರಾ ಕ್ಷೀಣವಾಗಿರುತ್ತದೆ ಅಥವಾ ಇಲ್ಲವಾಗಿರುತ್ತದೆ. ಹಾಗಂತ ಜೀವನವೇನೂ ಬರಬಾದೆದ್ದಿರುವುದಿಲ್ಲ. ಒಂದು ಸೀದಾ ಸಾದಾ ಹಾದಿಯಲ್ಲಿ ಸಾಗಿಬಂದ ಸಾಧಾರಣ ಬದುಕು, ಭವಿಷ್ಯ ಇನ್ನೂ ಒಳ್ಳೆಯದಾಗಿರುತ್ತಿತ್ತು ಎಂಬಂತಿರುತ್ತದೆ. ಸಾಮರ್ಥ್ಯ ಇದ್ದರೂ ಬಳಸಿಕೊಳ್ಳದೇ, ಮಾಡುವುದನ್ನು ಸರಿಯಾಗಿ ಮಾಡದೇ, ಗೊತ್ತಿದ್ದೂ ಗೊತ್ತಿದ್ದೂ ಹೀಗ್ಯಾಕೆ ಆಗಲು ಬಿಟ್ಟೆವು ಅನ್ನಿಸುತ್ತದೆ.

ಅವತ್ತು ತಪ್ಪೆನಿಸದೇ ಹೋದದ್ದು ಇವತ್ತು ಅಷ್ಟೆಲ್ಲಾ ತಪ್ಪು ಅನ್ನಿಸಬೇಕಾದರೆ ಆವತ್ತು ಆ ಹೆಜ್ಜೆ ಏಕೆ ಇಟ್ಟೆವು ಎಂಬುದನ್ನು ಯೋಚಿಸಿದರೆ ಅದಕ್ಕೆ ಕಾರಣಗಳು ಹಲವು. ಅದು ಅಜ್ಞಾನ ಇರಬಹುದು, ಅನಿವಾರ್ಯತೆ ಇರಬಹುದು, ಅನುಭವದ, ದೂರದೃಷ್ಟಿಯ, ಪ್ರೌಢಿಮೆ ಕೊರತೆ ಇರಬಹುದು, ಬದಲಾದ ಸನ್ನಿವೇಶ ಇರಬಹುದು, ಪರಿಸ್ಥಿತಿಯ ಗತಿ ಇರಬಹುದು, ಆತುರಕ್ಕೆ ಬಿದ್ದದ್ದಿರಬಹುದು, ಇದ್ಯಾವುದೂ ಇಲ್ಲದೇ ಸುಮ್ಮನೇ ಆಗಿಹೋಗಿರಬಹುದು. ಈ ರೀತಿಯ ವೈಯಕ್ತಿಕ ತಪ್ಪುಗಳ ಪ್ರಭಾವ ಅನಂತರದ ಹಂತಗಳಲ್ಲಿ ನಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಜೀವನದ ಮೇಲೂ ಕಾಣಿಸುತ್ತದೆ. ಇಂತಹ ತಪ್ಪುಗಳು ಯಾವ ಪಶ್ಚಾತಾಪಕ್ಕೂ, ಯಾವ ಆತ್ಮವಿಮರ್ಶೆಗೂ ನಿಲುಕದೇ, ಮನಸಿದ್ದರೆ ಮಾರ್ಗ.. ತಪ್ಪುಗಳಿಂದ ಕಲಿಯಿರಿ.. ಎಂಬ ಸೂತ್ರಗಳಿಗೂ ಸಿಲುಕದೇ ಒಂದು ಕೊರಗನ್ನು ಹಾಗೇ ಉಳಿಸಿಬಿಡುತ್ತವೆ. ಇವು ತಪ್ಪಲ್ಲದ ತಪ್ಪುಗಳು.

*****

ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ ಅಂತೀರ! :)

17 ಕಾಮೆಂಟ್‌ಗಳು:

ಬಾಲು ಹೇಳಿದರು...

Vikaasananda Swaaamiji ge Jayavagali. :) :) :) :)

Unknown ಹೇಳಿದರು...

ವಿಕಾಸ್,
ಇಂದು ಮಾಡಿದ್ದು ಮುಂದೆ ತಪ್ಪಾದರೆ ಅದು ನಮ್ಮ ತಪ್ಪಲ್ಲ. ಆದರೆ ತಪ್ಪಾಗಿದೆ ಎಂದು ಗೊತ್ತಾದ ಮೇಲೂ ಅದರ ಜೊತೆಯೇ ಗುರುತಿಸಿಕೊಳ್ಳುವುದು, ಕೊರಗುವುದು ತಪ್ಪಲ್ಲವೇ?

Subrahmanya ಹೇಳಿದರು...

ಸಂದರ್ಭಕ್ಕೆ ಸಿಲುಕಿ ಕೆಲವೊಮ್ಮೆ ಅರಿವಿಲ್ಲದೇ ಆಗುವ ತಪ್ಪುಗಳು ಅಥವಾ incidents ಗಳು ಆಚೆ ನಿಂತು ನೋಡುವವರಿಗೆ ತಪ್ಪೆನಿಸಿದರೂ ಪ್ರಮಾಣೀಕರಿಸಿದಾಗ ತಪ್ಪಲ್ಲವೆಂದು ತಿಳಿಯಬಹುದು. ..ಲೇಖನ ಚೆನ್ನಾಗಿದೆ.

sunaath ಹೇಳಿದರು...

ಆಯ್ಯೋ ಹೆಗಡೆಯವರೆ,
ಜೋಕ್ಸ್ ಮಾಡೋದನ್ನ ತಪ್ಪು ಅಂತ ಯಾಕ್ರೀ ತಿಳ್ಕೋತೀರಾ? ಅವಹೇಳನ ಇರದೇ ಇದ್ದರೆ ಸಾಕು.ನಿತ್ಯಾನಂದರ ಬಗೆಗೆ, ನೀವು ವೈಯಕ್ತಿಕ ಅವಹೇಳನ ಮಾಡಿರಲಿಕ್ಕಿಲ್ಲ ಅಂತ ನನ್ನ ಅನಿಸಿಕೆ. Be a sportive ಜೋಕು-ಮಾರ್!

Unknown ಹೇಳಿದರು...

ವಿಕಾಸ್ ಅವರೆ ,
ಬರಹ ಯಾವಗಿನ ಹಾಗೆ ಒಳ್ಳೆಯದಿದೆ.ನಾನು ವಿಕಾಸಾನ೦ದ ಅ೦ತ ಕಿಚಾಯಿಸುವುದಿಲ್ಲ. ಆದರೆ ಬೀಚಿ ಬರಹಗಳನ್ನು ಓದಿ ಸಣ್ಣ ವಿಷಯಗಳ ಬಗ್ಗೆ ಸಹ ಗಾಡವಾಗಿ ಯೋಚಿಸಲು ಪ್ರಾರ೦ಭ ಮಾಡಿದ್ದಿರಿ . ಆ ಪುಸ್ತಕದ ಗಾಡ ಪ್ರಭಾವ ಬೀರಿದೆ ಎ೦ದು ಕಾಣುತ್ತದೆ :-):-).

Girish ಹೇಳಿದರು...

ಇನ್ನೊಬ್ಬರನ್ನು ತಮಾಷೆ ಮಾದುವುದು ತಪ್ಪು ನಿಜ. ಆದರೆ ಇದೊಂದೇ ವಿಷಯವನ್ನು ಜೀವಂತವಾಗಿಡುವುದು. ಜನರಿಗೆ ಎಚ್ಚರಿಕೆಯ ಘಂಟೆಯಾಗಿರುವುದು. ನಿತ್ಯಾನಂದ ಸ್ವಾಮಿಯ ಪ್ರಕರಣ ಸದ್ದಿಲ್ಲದೇ ಮುಗಿದಿದ್ದರೆ....
ಹಳೇ ಗಾದೆ: "ಎಡಬದಿಯ ಎತ್ತಿಗೆ ಹೊಡೆದರೆ, ಬಲಗಡೆಯ ಎತ್ತು ಚುರುಕಾಗಬೇಕು"
ಎಡಗಡೆಯ ಎತ್ತಿಗೆ ಹೊಡೆದದ್ದು ಬಲಗಡೆಯ ಎತ್ತಿಗೆ ಗೊತ್ತಾಗಬೇಕು ಮತ್ತು ನೆನಪಿರಬೇಕು.

PARAANJAPE K.N. ಹೇಳಿದರು...

ಮಾಡಿದ್ದು ತಪ್ಪು ಅ೦ತ ಅರಿವಿಗೆ ಬರುವುದೇ ನಿಜವಾದ ಜ್ಞಾನೋದಯ. ನಿಮಗೆ ಅ೦ತಹ ಜ್ಞಾನೋದಯ ಆಗಿದೆ ಅ೦ತಾದ್ರೆ ಖ೦ಡಿತವಾಗಿ ವಿಕಾಸಾನ೦ದ ಪರಮಹ೦ಸ ಆಗಬಹುದು. ಕೊನೆಗೆ ನೀವೇ ಹಿ೦ಟ್ ಕೊಟ್ಟಿದ್ರಿ೦ದ ಇದು ಹೊಳೆಯಿತು. ಇಲ್ಲವೆ೦ದಾದರೆ ಕಾಮೆ೦ಟು ಬೇರೇನೇ ಆಗಿರ್ತಿತ್ತೇನೋ? ಚೆನ್ನಾಗಿದೆ.

ಸಂದೀಪ್ ಕಾಮತ್ ಹೇಳಿದರು...

ವಿಕಾಸ್ ,

ನೀವು ನಿತ್ಯಾನಂದರ ಬಗ್ಗೆ sms ಗಳನ್ನು forward ಮಾಡಿದ್ರೆ ಖಂಡಿತ ತಪ್ಪು ಅದು.

(ವಿಡೀಯೋ ಏನಾರ ಸಿಕ್ರೆ ನನಗ ಕಳಿಸದೇ ಇರ್ಬೇಡ ಮಾರಾಯ!!)

ಚಿತ್ರಾ ಹೇಳಿದರು...

ಹ್ಮ್ಮ್..
ಚೆನಾಗಿದೆ . ತಪ್ಪು ಎಂದುಕೊಂಡರೆ ತಪ್ಪು , ಇಲ್ಲ ಎಂದುಕೊಂಡರೆ ಇಲ್ಲ !
ನಿತ್ಯಾನಂದರ ಪ್ರಕರಣವನ್ನೇ ತೊಗೊಳೋಣ , ಮಸಾಜ್ ಬಗ್ಗೆ ಟಿವಿಲಿ ತೋರಿಸಿದರು .. ತಪ್ಪು ಅನಿಸಿತು ಎಲ್ಲರಿಗೂ . ಅದನ್ನೇ ಸ್ವಾಮೀಜಿಗಳಿಗೆ ಭಕ್ತರಿಂದ ' ಏಕಾಂತ ಸೇವೆ ' ಭಕ್ತಿಗೆ ಸಂಬಂಧಿಸಿದ ವಿಷಯ , ಹಾಗಾಗಿ ತಪ್ಪಲ್ಲ ಅಂತ ನಿತ್ಯಾನಂದರು ಹೇಳಬಹುದೇನೋ!!! ಹಿ ಹಿ ಹಿ ..
ಅಂದ ಹಾಗೆ , ನಿನ್ನೆಯಿನ್ನೂ ಉತ್ತರ ಭಾರತದ ಒಬ್ಬ " ವಿಕಾಸಾನಂದ ಸ್ವಾಮೀ" ಯ ಲೀಲೆಗಳನ್ನು ಟಿವಿ ಲಿ ನೋಡಿದೆ . ಹೀಗಾಗಿ ನಿನಗೆ ಆ ಹೆಸರು ಖಂಡಿತಾ ಬೇಡ !

ರಾಜೀವ ಹೇಳಿದರು...

ತಪ್ಪಿಲ್ಲದ ತಪ್ಪುಗಳ ಸರಿ-ತಪ್ಪುಗಳನ್ನು ತಪ್ಪಿಲದೇ ಸರಿಯಾಗಿ ಹೇಳಿದ್ದೀರ ;-)

<< ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ ಅಂತೀರ! :) >>
ಅಂದರೆ, ವಿಕಾಸಾನಂದರ ಬಗ್ಗೆ ಅದೂ ಇದೂ ಮಾತಾದೋಹಾಗೆ ಸನ್ನಿವೇಶಗಳು ಎನಾದ್ರು ಆಗಿದೆಯೇ?

ಅನಿಕೇತನ ಸುನಿಲ್ ಹೇಳಿದರು...

ಗೆಳೆಯ ವಿಕಾಸ್,
ತಪ್ಪುಗಳ ಬಗ್ಗೆ ಸರಿಯಾದ ಲೇಖನ ಬರೆದಿದ್ದೀಯ ;-)
ಒಂದೊಂದು ತಪ್ಪುಗಳನ್ನ ತಪ್ಪು ಅಂತ ಗೊತ್ತಿದ್ದೂ ಮಾಡುವ ಅನಿವಾರ್ಯತೆಗೆ ಸಿಕ್ಕಿಕೊಂಡಿರ್ತೀವಿ..ಅದಕ್ಕಿಂತ ಹಿಂಸೆ ಬೇರಿಲ್ಲ...
ಸುನಿಲ್

ಮನಸಿನ ಮಾತುಗಳು ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

ನಿತ್ಯಾನಂದರ ಬಗ್ಎಗಿನ ಜೋಕ್ ನನಗೆ ಕಳಿಸಲೇ ಇಲ್ವಲ್ಲ" ಅಂತ ಯಾರಾದರೂ ಆಪಾದನೆ ಮಾಡಿದರೂ ಅಯ್ಯೋ ಹೌದಲ್ವ ತಪ್ಪು ಕಳುಹಿಸದೇ ತಪ್ಪು ಮಾಡಿಬಿಟ್ಟೆ ಅಂತ ಅನ್ನಿಸಬಹುದು.
ಹಾಗಾಗಿ "ನಾನು ಮಾಡಿದ್ದೆಲ್ಲ ಮಾಡುವುದೆಲ್ಲ ಸರಿ" ಎಂಬ ತೀರ್ಮಾನವೇ ಸರಿ. ಅದೇ ವಿಕಾಸವಾದವಾಗಲಿ.

ವಿ.ರಾ.ಹೆ. ಹೇಳಿದರು...

actually ಇಲ್ಲಿ ನಿತ್ಯಾನಂದ ನೆಪ ಮಾತ್ರ. ವಿಷಯವಿದ್ದದ್ದು ನಮ್ಮ ಜೀವನದಲ್ಲಿ ಗೊತ್ತಿಲ್ಲದೇ ನಾವೇ ಮಾಡಿಕೊಳ್ಳುವ ತಪ್ಪುಗಳ ಬಗ್ಗೆ.

ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.

Sushrutha Dodderi ಹೇಳಿದರು...

How dare you to delete my comment? :x :x

ನಾನು ನಾನೇ.. ಹೇಳಿದರು...

tappu maadadavru yaaravre.. tappe maadadavru yellavre
"Appi" tappi.. tappagutte :-)

ರಂಜನಾ ಹೆಗ್ಡೆ ಹೇಳಿದರು...

vikas,
aa tappugalinda naavu olle paata kalitirtivalla adu thumaba important. jeevana ne ashtu modalu exam battu aamele aa exam henge bariyadu antha kalistu. channagi ide baraha