ಬುಧವಾರ, ಜೂನ್ 30, 2010

ಮಳೆಗಾಲಕ್ಕೆ....

ಬ್ಲಾಗ್ ಒಣಗಿ ನಿಂತಿದೆ. ಮಳೆಗಾಲ ಶುರುವಾಗುತ್ತದೆ, ನೀರು ಹರಿಯುತ್ತದೆ ಎಂದು ಕಾಯುತ್ತಿದ್ದರೆ ಒಂದ್ನಾಲ್ಕು ದಿನ ಹನಿ ಉದುರಿಸಿ ಮಳೆ ನಾಪತ್ತೆಯಾಗಿದೆ. Only few people can feel the rain, others just get wet ಅಂತ ಉಪನಿಷತ್ತಿನಲ್ಲಿ ಒಂದು ಮಾತಿದೆ :) . ಅದು ಆಗಾಗ ಎಸ್ಸೆಮ್ಮೆಸ್ಸಿನಲ್ಲೂ ಹರಿದಾಡುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ feeling the rain ಯಾಕೋ ಕಷ್ಟ. ಇಲ್ಲೇನಿದ್ದರೂ feel ಅಲ್ಲ fear ಮಾತ್ರ. ಆಫೀಸಿನಲ್ಲಿ ಕೂತಾಗ ಹೊರಗೆ ಮಳೆ ಶುರುವಾದರೆ ಒಂದು ಬಿಸಿಬಿಸೀ ಕಾಫಿ ಹಿಡಿದುಕೊಂಡು ಕಿಟಕಿಯಿಂದ ಹೊರಗೆ ನೋಡುತ್ತಾ ಹಿತವಾಗುವ ಹೊತ್ತಿಗೆ ಆತಂಕವೂ ಶುರುವಾಗುತ್ತದೆ. ಯಾವ ರಸ್ತೆಯಲ್ಲಿ ನೀರು ತುಂಬಿಕೊಂಡಿದೆಯೋ, ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಿದೆಯೋ, ಮನೆಗೆ ಹೊರಡಬಹುದಾ, ಹೊರಟರೆ ಇವತ್ತಿಗೇ ತಲುಪಬಹುದಾ ಹೀಗೇ ಹಲವಾರು. ಮಳೆ ನಿಂತಮೇಲೆ ಮಿಜಿಮಿಜಿಗುಡುವ ರಸ್ತೆಗಳು, ಸಿಟಿಬಸ್ಸುಗಳು, ವಾಹನ ಸವಾರಿಯೆಂಬ ಸರ್ಕಸ್ಸು ನೆನೆಸಿಕೊಂಡರೆ ಮಳೆಯ feelಗಿಂತ fear ಜಾಸ್ತಿ. ಇರಲಿ.

ಈ ಮಳೆಯ ಬಗ್ಗೆ ಸಾಕಷ್ಟು ಬ್ಲಾಗುಗಳಲ್ಲಿ ಬರಹಗಳಲ್ಲಿ ನೀರು ಹರಿದಿದೆ. ಮತ್ತೆ ನಾನು ಹರಿಸುವುದಕ್ಕೆ ಹೋಗುವುದಿಲ್ಲ. ಮನೆಗೆ ಹೋಗದೇ ರಾಶಿ ದಿನಗಳಾಗಿವೆ. ಪ್ರತೀಸಲವೂ ಈ ಬಾರಿ ನಾಲ್ಕು ದಿನ ಪೂರ್ತಿ ವಿಶ್ರಾಂತಿ ತೆಗೆದುಕೊಂಡುಬಿಡೋಣ ಸುಖವಾಗಿ ಎಂದು ಹೋಗುವುದೇನೋ ಹೌದು. ಆದರೆ ಒಂದೆರಡು ದಿನ ಮಲಗಿ, ಎದ್ದು, ಟೀವಿ ರಿಮೋಟ್ ಹಿಡಿದು ಚಾನಲ್ಲುಗಳನ್ನು ಇಪ್ಪತ್ನಾಲ್ಕು ಸಲ ಬದಲಾಯಿಸಿ, ಅಕ್ಕ ಪಕ್ಕದವರನ್ನೆಲ್ಲಾ ಮಾತನಾಡಿಸಿ, ಊರು ತಿರುಗಿ ಆಗುತ್ತಿದ್ದಂತೆಯೇ ಮತ್ತೆ ಕಾಲು ಕೆರೆಯುತ್ತದೆ. ಎಲ್ಲಾದ್ರೂ ಹೋಗೋಣ ಅನ್ನುತ್ತೇನೆ. ಅಪ್ಪ ತಿರುಗಾಡಲು ಸದಾ ತಯಾರು. ಸ್ಥಳಗಳ ಪಟ್ಟಿ ಕೊಟ್ಟುಬಿಡುತ್ತಾರೆ. ಅಮ್ಮ ಮಾತ್ರ 'ಈ ಮಳೆಲ್ಲಿ ಎಲ್ಲೂ ತಿರ್ಗಲ್ ಹೋಗದ್ ಬೇಡ, ಸುಮ್ನೆ ಮನೆಲ್ ಇರಿ" ಅನ್ನುತ್ತಾಳೆ. ಕೇಳೋರ್ಯಾರು ?

ವಾಪಸ್ಸು ಬೆಂಗ್ಳೂರಿಗೆ ಬಂದ ಮೇಲೆ ಒಂದು ಮಾನ್ಸೂನ್ ಟ್ರೆಕ್ಕು, ಒಂದಿಷ್ಟು ತಿರುಗಾಟ. ಜೊತೆಗೆ ಎರಡು ದಿನ ಶೀತ, ಒಂದು ಸಣ್ಣ ಜ್ವರ optional. ಈ ಬಾರಿ ಮಳೆಗಾಲದಲ್ಲಿ ಗದ್ದೆ ನೆಟ್ಟಿ ಮಾಡುವ ವಾರದಲ್ಲಿ ಅಜ್ಜನ ಮನೆಗೂ ಹೋಗಬೇಕು. ಪ್ರಕೃತಿಯ ಮೇಲೆ ಪ್ರೀತಿ ಜಾಸ್ತಿಯಾಗುತ್ತಲೇ ಇದೆ. ಗಮ್ಯವೆಲ್ಲಿದೆಯೋ ಗೊತ್ತಿಲ್ಲ !

ಯಾವುದಕ್ಕೂ, ಬಾ ಮಳೆಯೇ ಬಾ....

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಬರುತ್ತೆ ಬಿಡಿ.. ಮಳೆ..
ನೀವು ಮನೆಗ್ ಹೋಗೋ ಪ್ಲಾನ್ ತಯಾರಿ ಮಾಡಿ.. ಅಷ್ಟೊತ್ತಿಗೆ ಮಳೆನ ಅಲ್ಲಿಗ್ ಕಳ್ಸಿ ಕೊಡು ಜವಾಬ್ದಾರಿ ನಂದು ಹೆ ಹೆ ಹೆ

ಶಿವಪ್ರಕಾಶ್ ಹೇಳಿದರು...

ha ha ha.. channagide :)

ಸಂದೀಪ್ ಕಾಮತ್ ಹೇಳಿದರು...

ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ಟ್ರಾಫಿಕ್ ಜಾಮ್ ಆಗುವಂತೆ !

ಸೀತಾರಾಮ. ಕೆ. / SITARAM.K ಹೇಳಿದರು...

ಮಳೆಗಾಲದ ರಜೆಯ ಮೇಲೆ ಹೋಗಿ ಮಜಾ ಅನುಭವಿಸಿ. ಬೆಂಗಳುರಲ್ಲಿ ಅದು ಸಜಾ! ಅಲ್ಲವೇ!
ಲೇಖನ ಚೆನ್ನಾಗಿದೆ.

Subrahmanya ಹೇಳಿದರು...

ಭೂಮಿಯ ಮೇಲೆ ಮೊದಲ ಮಳೆ ಬಿದ್ದಾಗ ಹೊಮ್ಮುವ ಮಣ್ಣಿನ ಸುಗಂಧದಮ್ತಿದೆ ನಿಮ್ಮ ಮಳೆಗಾಲದ ಬರಹ.

ಬರೀ ಬರೆದುಕೊಂಡೇ ಮುಗಿಸಬೇಡಿ...ಹೋಗಿ ಮಜಾ ಮಾಡ್ಕೊಂಡು ಬನ್ನಿ ...All the best.

sunaath ಹೇಳಿದರು...

Good luck for the monsoons!

ಸುಧೇಶ್ ಶೆಟ್ಟಿ ಹೇಳಿದರು...

arre... vikas kooda maLe bagge bardidaare antha bandu nodidre neeve bereyade lahariyalli ideera...
anyway oorinalli enjoy maadi :)

ಮೃತ್ಯುಂಜಯ ಹೊಸಮನೆ ಹೇಳಿದರು...

"only few people can feel the rain"....should it be "only a few people can feel the rain"?

ಅನಾಮಧೇಯ ಹೇಳಿದರು...

ಈ ಪ್ರಕೃತಿ ಅಂದ್ರೆ ಯಾರು? ಏನಾದ್ರೂ ಕೋಡ್ ವರ್ಡ್ ಇರಬಹುದಾ?:)

ಗಿರೀಶ ರಾಜನಾಳ ಹೇಳಿದರು...

ಚೆನ್ನಾಗಿದೆ. ಇತ್ತೀಚಿಗೆ ನೀವು ಬ್ಲೊಗ್ ಅಪ್ಡೇಟ್ ಕಳಿಸೋದನ್ನ ಮರೀತಿದ್ದಿರ..... ನಮ್ಮನ್ನೂ ಕೂಡ ಮರೆತನ್ಗಿದೆ.

ಗಿರೀಶ ರಾಜನಾಳ ಹೇಳಿದರು...

ಚೆನ್ನಾಗಿದೆ. ಇತ್ತೀಚಿಗೆ ನೀವು ಬ್ಲೊಗ್ ಅಪ್ಡೇಟ್ ಕಳಿಸೋದನ್ನ ಮರೀತಿದ್ದಿರ..... ನಮ್ಮನ್ನೂ ಕೂಡ ಮರೆತನ್ಗಿದೆ.

ವಿ.ರಾ.ಹೆ. ಹೇಳಿದರು...

ಕುಂದ್ರಾಪ್ರ, ಶಿವಪ್ರಕಾಶ್, ಸಂದೀಪ್, ಸುಬ್ರಮಣ್ಯ, ಸುನಾಥ ಕಾಕಾ, ಸುಧೇಶ , ಸೀತಾರಾಮರಿಗೆ ಧನ್ಯವಾದಗಳು.

@ನೀಲಿಹೂವು, :-) ನೋ ಕೋಡ್ ವರ್ಡ್, ನಮ್ದೇನಿದ್ರೂ ನೇರಾನೇರ .

@ಹೊಸಮನೆ, ಇರಬಹುದು, ನಾವು ಇಂಗ್ಲೀಷ್ನಲ್ಲಿ ಸ್ವಲ್ಪ ವೀಕು. ಥ್ಯಾಂಕ್ಸ್.

@ಗಿರೀಶ, ಇಲ್ಲಪ್ಪಾ , ನಿಮ್ಮನ್ನು ಮರೆತಿಲ್ಲ. ನಾ ಬರೆಯೋದೆ ಅಪರೂಪ ಆಗೋಗಿದೆ. ಬರುತ್ತಿರಿ. :(

ಮನಸ್ವಿ ಹೇಳಿದರು...

ನಿಮ್ಮ ಬ್ಲಾಗ್ ನಲ್ಲಿ ಮಳೆಯ ಬಗ್ಗೆ ಬರೆದಿರುವುದನ್ನು ಓದುತ್ತಿರುವಾಗ ಇಲ್ಲಿ ಮಳೆ ದೋ ಎಂದು ಒಂದೇ ಸಮ ಸುರಿಯುತ್ತಲೇ ಇದೆ, ಈಗ ಒಣಗಿದೆ ಅನ್ನಿಸುತ್ತಿದ್ದ ಅನೇಕ ಬ್ಲಾಗ್ ಗಳು ಮತ್ತೆ ಬಿಸಿ!(busy!) ಆಗಿ ಹೋಗಿವೆ ಅನಿಸುತ್ತಿದೆ, ಎಲ್ಲರೂ ಬರಿಯೋದೇ ಬರಿಯೋದು, ಎಷ್ಟೊಂದು ಅಪ್ಡೇಟ್ ಗಳು... ಮಳೆಯ ಬಗ್ಗೆ ಚನ್ನಾಗಿ ಬರೆದಿದ್ದೀರಿ...

ಮನಮುಕ್ತಾ ಹೇಳಿದರು...

ಮಳೆಯ ಬಗ್ಗೆ ಬರಹ ಚೆನ್ನಾಗಿದೆ.ಖರೆನೇ..ಅಮ್ಮ ಮಳೆಯಲ್ಲಿ ನೆನೆಯಲು, ಹೊರಗೆ ಹೋಗಲು ಬಿಡುತ್ತಿರಲಿಲ್ಲ..ಅಸಮಾಧಾನವಾಗುತ್ತಿತ್ತು..ನಾನು ಅಮ್ಮನಾದ ಮೇಲೆ ಅಮ್ಮ ಚೆನ್ನಾಗಿ ಅರ್ಥವಾದಳು.