ಗುರುವಾರ, ಜೂನ್ 9, 2011

'ನಯಾಗರ'ದಲ್ಲಿ ಒಂದು ದಿನ

ನಾನಿರುವ ಬರ್ಲಿಂಗ್ಟನ್ ಊರಿನಿಂದ ಪ್ರಸಿದ್ಧ ನಯಾಗರ ಫಾಲ್ಸ್ ೮೦ ಕಿ.ಮಿ. ದೂರವಿದೆ. ನಯಾಗರ ಬಗ್ಗೆ ಬಹಳ ಕೇಳಿದ್ದರಿಂದ ಅದರ ಬಗ್ಗೆ ಕುತೂಹಲವಿತ್ತು. ಬಹಳ ದಿನಗಳಿಂದ ಹೋಗಬೇಕು ಅಂದುಕೊಂಡಿದ್ದರೂ ಸಹ ವಾರದ ಕೊನೆಯ ದಿನಗಳಲ್ಲಿ ಹವಾಮಾನ ಅನುಕೂಲಕರವಾಗಿ ಇಲ್ಲದಿರುತ್ತಿದ್ದುದರಿಂದ ಹೋಗಲು ಆಗಿರಲಿಲ್ಲ. ಅಂತೂ ಕೊನೆಗೆ ಮೊನ್ನೆ ಭಾನುವಾರ ಕಾಲ ಕೂಡಿ ಬಂತು. ಹವಾಮಾನ ಮುನ್ಸೂಚನೆ ನೋಡಿಕೊಂಡು ಅವತ್ತು ’ಸನ್ನಿ ಡೇ’ ಎಂದು ಖಾತ್ರಿ ಮಾಡಿಕೊಂಡು ಬೆಳಗ್ಗೆ ಇಲ್ಲಿಂದ GO ಬಸ್ಸಿನಲ್ಲಿ ಹೊರಟು ಅಲ್ಲಿಗೆ ತಲುಪಿದೆವು. (ನಮ್ಮ ಕ.ರಾ.ರ.ಸಾ.ನಿ. ತರಹ ಇಲ್ಲಿ GO ಬಸ್ಸುಗಳು/ಟ್ರೈನುಗಳು). ಬಸ್ಸಿಳಿದು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋಗಬೇಕು. ಅವತ್ತು ಒಳ್ಳೆಯ ಬಿಸಿಲಿತ್ತು. ಆದ್ದರಿಂದ ಜನರೂ ಬಹಳ ಇದ್ದರು. ಕ್ಲಿಫ್ಟನ್ ಹಿಲ್ ಎನ್ನುವ ರಸ್ತೆಯಲ್ಲಿ ಚಿತ್ರವಿಚಿತ್ರ ಅಂಗಡಿಗಳು, ಮ್ಯೂಸಿಯಂಗಳು, ಅಬ್ಬರದ ಕರ್ಕಶ ಸಂಗೀತ, ಪಾರ್ಕ್, ಮತ್ತೇನೇನೋ ಆಕರ್ಷಣೆಗಳನ್ನು ದಾಟಿ ಸ್ವಲ್ಪ ಕೆಳಗೆ ಇಳಿಯುತ್ತಿದ್ದಂತೇ ದೂರದಲ್ಲಿ ಎದುರಾದದ್ದು ನಯಾಗರ! ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ ಜೋಗದೊಡನೆ ಹೋಲಿಕೆ ಶುರುವಾಗಿತ್ತು.


ನಯಾಗರ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶಗಳ ಗಡಿಯಲ್ಲಿದೆ. ಗಡಿರೇಖೆ ಆ ಜಲಪಾತ ಮತ್ತು ನದಿಯ ಮೇಲೇ ಹಾದುಹೋಗುತ್ತದೆ. ಈರಿ ಮತ್ತು ಒಂಟಾರಿಯೋ ಸರೋವರಗಳ ನಡುವೆ ಹರಿಯುವ ನದಿಯಲ್ಲಿ ಈ ಜಲಪಾತವಿದೆ. ಇಲ್ಲಿ ಎರಡು ಜಲಪಾತಗಳಿವೆ. ಒಂದನ್ನು ಅಮೇರಿಕನ್ ಫಾಲ್ಸ್ ಎನ್ನುತ್ತಾರೆ. ಮತ್ತೊಂದು, ಕುದುರೆಲಾಳದಾಕಾರದಲ್ಲಿ ಇರುವುದು ಕೆನಡಾ ಕಡೆಯ ಜಲಪಾತ (ಹಾರ್ಸ್ ಶೂ ಫಾಲ್ಸ್). ನಯಾಗರ ಜಲಪಾತ ಬಹಳ ಎತ್ತರವಿಲ್ಲ. ಆದರೆ ಅಗಲ ಮತ್ತು ಬೀಳುವ ನೀರಿನ ಪ್ರಮಾಣ ಅಗಾಧ. ಕುದುರೆಲಾಳಾಕಾರದಲ್ಲಿ ಎಲ್ಲಾ ಕಡೆಯಿಂದ ಒಂದೇ ಪ್ರಮಾಣದಲ್ಲಿ ನೀರು ನೊರೆ ನೊರೆಯಾಗಿ ಬೀಳುತ್ತದೆ. ಅಲ್ಲೆಲ್ಲಾ ಇಬ್ಬನಿ ತುಂಬಿಕೊಂಡಿತ್ತು. ಆ ಜಾಗದಲ್ಲಿ ನೀರಿನ ಹನಿಗಳು ಹೊಗೆಹೊಗೆಯಂತೆ ಮೇಲೇಳುವುದು ತುಂಬಾ ಚಂದ. (ದೇವಲೋಕದಿಂದ ಗಂಗೆ ಭೂಮಿಗೆ ಧುಮುಕಿದಂತೆ ಕಾಣುತ್ತಿತ್ತು ಅಂತೆಲ್ಲಾ ಸುಮ್ ಸುಮ್ನೇ ಹೈಪ್ ಮಾಡಲ್ಲ :)). ನಯಾಗರದಲ್ಲಿ ಕೆನಡಾ ಮತ್ತು ಯು.ಎಸ್. ಸಂಪರ್ಕಿಸಲು ಒಂದು ಸೇತುವೆ ಇದೆ. ನೀರ್ಬೀಳು ಕೆನಡಾ ಕಡೆಗೆ ಮುಖ ಮಾಡಿರುವುದರಿಂದ ಅಮೆರಿಕಾದ ಕಡೆಗಿಂತ ಕೆನಡಾದ ಕಡೆಯಿಂದ ಪೂರ್ಣ ಮತ್ತು ಸುಂದರವಾಗಿ ಕಾಣುತ್ತದಂತೆ. ಅದಕ್ಕೇ ಅಲ್ಲಿಂದಲೂ ಜನ ಈ ಕಡೆ ಬಂದು ನೋಡುತ್ತಾರಂತೆ.

ಕೆನಡಾ ಮತ್ತು ಯು.ಎಸ್.ಎ ಸಂಪರ್ಕಿಸುವ ರೇನ್ ಬೋ ಸೇತುವೆ

ನಯಾಗರ ಅಮೆರಿಕನ್ ಫಾಲ್ಸ್

ಮೇಯ್ಡ್ ಆಫ್ ದಿ ಮಿಸ್ಟ್ ದೋಣಿಯಲ್ಲಿ ಜಲಪಾತದ ಬುಡದವರೆಗೆ ಕರೆದುಕೊಂಡು ಹೋಗುತ್ತಾರೆ, ಹತ್ತಿರದಿಂದ ನೋಡಬಹುದು. ಆ ದೋಣಿಯಲ್ಲಿ ಕುದುರೆಲಾಳದ ಒಳಗೆ ಹೋದಾಗ ಸುತ್ತಲೂ ಎಲ್ಲಾ ಬಿಳಿಬಿಳಿ ನೀರಿನ ಜಗತ್ತು ! ಮಳೆಯಂತೆ ಹನಿಗಳ ಸಿಂಚನ. ಒಂದು ದೊಡ್ಡ ನೀರಿನ ಕೋಟೆಯೊಳಗೆ ನಿಂತಂತೆ ಅನ್ನಿಸುತ್ತಿತ್ತು. ಒಂಥರಾ fantasy ಲೋಕದಂತಿತ್ತು. ಇದು ಖುಷಿಕೊಟ್ಟ ಅನುಭವ. ಅದಾದ ಮೇಲೆ 'ಜರ್ನಿ ಬಿಹೈಂಡ್ ದಿ ಫಾಲ್ಸ್' (ಸುರಂಗದೊಳಗಿಂದ ಜಲಪಾತ ಹಿಂದಕ್ಕೆ ಹೋಗಿನೋಡುವುದು) ಮುಂತಾದ ಚಟುವಟಿಕಗಳನ್ನು ಮುಗಿಸಿದೆವು. ಅನಂತರ ಪಕ್ಕದಲ್ಲಿರುವ ಉದ್ಯಾನದಲ್ಲಿ ಕೂತು ಊಟ ಮಾಡಿ ವಿಶ್ರಾಂತಿ ತೆಗೆದೆವು. ನಯಾಗಾರವನ್ನು ಒಂದು ಮುಖ್ಯ ಪ್ರವಾಸಿ/ಮನರಂಜನಾ ತಾಣವಾಗಿ ನಿರ್ವಹಿಸಿಟ್ಟಿದ್ದಾರೆ. ಹೆಲಿಕಾಪ್ಟರ್ ರೈಡ್, ವೈಟ್ ವಾಟರ್ ವಾಕ್, ವರ್ಲ್ ಪೂಲ್, ವಿವಿಧ ಪಾರ್ಕುಗಳು ಮುಂತಾದ ಬಹಳ ಚಟುವಟಿಕೆಗಳು, ಆಕರ್ಷಣೆಗಳಿವೆ. ಸುಮಾರು ಕೆಸಿನೋಗಳಿವೆ. ಅಲ್ಲಿನ ರಸ್ತೆಗಳಲ್ಲಿ ಒಂದಿಷ್ಟು ಸುತ್ತಾಡಿದೆವು. ಸಂಜೆಯಾಗುತ್ತಿತ್ತು. ಕತ್ತಲಾದ ಮೇಲೆ ಬಣ್ಣ ಬಣ್ಣದ ದೀಪಗಳನ್ನು ಹಾಕುತ್ತಾರಂತೆ. ಆಗಿನ ನೋಟ ಇನ್ನೂ ಅದ್ಭುತವಂತೆ. ನೋಡಬೇಕೆಂಬ ಆಸೆಯೇನೋ ಇತ್ತು. ಆದರೆ ಬೆಳಗ್ಗಿಂದ ತಿರುಗಿ ಸುಸ್ತಾಗಿದ್ದರಿಂದ ಮತ್ತು ನಮ್ಮ ಬಸ್ ತಪ್ಪಿಹೋದರೆ ತೊಂದರೆಯಾಗುತ್ತಿದ್ದುದರಿಂದ ವಾಪಸ್ ಹೊರಟೆವು.

ನಯಾಗರ ಕುದುರೆಲಾಳ ಜಲಪಾತ

ಆವತ್ತು ಜಾಸ್ತಿ ಜನ ಇದ್ದುದರಿಂದ ಹೊರಡುವ ಸ್ಥಳದಿಂದಲೇ ಎಲ್ಲಾ ಸೀಟನ್ನೂ ತುಂಬಿಕೊಂಡು ಬಂತು ಬಸ್ಸು. ನಮ್ಮ ಸ್ಟಾಪಿಗೆ ಬಂದಾಗ ನಾವು ಸುಮಾರು ಜನ ಬಸ್ಸು ಕಾಯುತ್ತಿದ್ದುದನ್ನು ನೋಡಿ ಡ್ರೈವರ್ ವಿಷಾದಿಸಿದ. ನಮಗ್ಯಾರಿಗೂ ಸೀಟಿರಲಿಲ್ಲ. ಮುಂದಿನ ಬಸ್ಸಿಗೆ ಇನ್ನೂ ಒಂದುವರೆ ತಾಸು ಕಾಯಬೇಕಿತ್ತು. ನಿಂತುಕೊಂಡು ಪ್ರಯಾಣ ಮಾಡುವುದಿದ್ದರೆ ಬನ್ನಿ, ಈಗಲೇ ಹೇಳಿದ್ದೇನೆ, ಸೀಟಿಲ್ಲ, ಸ್ಸಾರಿ ಸ್ಸಾರಿ ಎಂದು ಮೂರ್ನಾಲ್ಕು ಬಾರಿ ಹೇಳಿದ. ಬಿಳಿಯರು ಯಾರೂ ಬಸ್ ಹತ್ತಲಿಲ್ಲ. ನಾವು ಒಂದಿಷ್ಟು ಜನ ಭಾರತದವರು, ನೀನ್ಯಾಕ್ ಅಷ್ಟೆಲ್ಲಾ ಬೇಜಾರ್ ಮಾಡ್ಕೋತೀಯಾ, ಇದೆಲ್ಲಾ ನಮಗೆ ಮಾಮೂಲು ಅಂತ ಅಂದುಕೊಂಡು ಬಸ್ ಹತ್ತಿದೆವು. ಆ ಬಸ್ಸು ಅಲ್ಲಿನ ಹಳ್ಳಿಗಳಲ್ಲೆಲ್ಲಾ ಹಾದು ನಮ್ಮನ್ನು ತಂದುಬಿಡುವಷ್ಟರಲ್ಲಿ ರಾತ್ರಿಯಾಗಿತ್ತು.

***

ಅಮೇರಿಕ ಕಡೆಯಿಂದ ಹಂಸಾನಂದಿಯವರ ಪ್ರವಾಸ ಬರಹ : ನಯಾಗರ ಫಾಲ್ಸ್ ನಲ್ಲಿ ಮಸಾಲೆ ದೋಸೆ ಗಾಡಿ!

***

Useful external links

೧. Attractions in the Niagara falls area

8 ಕಾಮೆಂಟ್‌ಗಳು:

Kanthi ಹೇಳಿದರು...

Good writeup.. Antoo sumaar suttata :-) Enjoy...

ಗಿರೀಶ್.ಎಸ್ ಹೇಳಿದರು...

Vikas,good explanation on falls..nanagu allige hogabeku annistide !!!

sunaath ಹೇಳಿದರು...

`ಭಾರತೀಯರಿಗೆ ಇದೆಲ್ಲಾ ಮಾಮೂಲು!’--ವಿನೋದ ಚೆನ್ನಾಗಿದೆ! ನಯಾಗರದ ಬಗೆಗೆ ಕೆಲವು ಉತ್ತಮ ಮಾಹಿತಿಗಳನ್ನು ಕೊಟ್ಟಿದ್ದೀರಿ.

ಅನಾಮಧೇಯ ಹೇಳಿದರು...

ನಾವು ಒಂದಿಷ್ಟು ಜನ ಭಾರತದವರು ನೀನ್ಯಾಕ್ ಅಷ್ಟೆಲ್ಲಾ ಬೇಜಾರ್ ಮಾಡ್ಕೋತೀಯಾ, ಇದೆಲ್ಲಾ ನಮಗೆ ಮಾಮೂಲು ಅಂತ ಅಂದುಕೊಂಡು ಬಸ್ ಹತ್ತಿದೆವು...ಈ ಸಾಲು ಓದಿ ನಗು ಬಂತು. ಒಳ್ಳೆ ಬರಹ.
-ಕೋಡ್ಸರ

Subrahmanya ಹೇಳಿದರು...

ಕೆನಡಾ ಸಹವಾಸ ಜೋರಾಗಿದೆ ಅಂದಂಗಾತು !. ಕೆಲವೊಂದು ನಿತ್ಯ ಸತ್ಯಗಳನ್ನು ಚೆನ್ನಾಗಿ ಹೇಳಿದ್ದೀರಿ :)

Shankar Prasad ಶಂಕರ ಪ್ರಸಾದ ಹೇಳಿದರು...

ಪ್ರಾಯಶಃ ಇದು ನಿನ್ನ ಮೊದಲ ಪ್ರವಾಸ ಕಥನ ಇರಬೇಕು ಅನ್ಸುತ್ತೆ. ಚೆನ್ನಾಗಿ ಮೂಡಿ ಬಂದಿದೆ ವಿಕಾಸ. ಹೀಗೆ ಇನ್ನೂ ಕೆಲವು ಕಡೆ ಹೋಗಿ ಅವುಗಳ ಬಗ್ಗೆ ಬರೆ.

ಕಟ್ಟೆ ಶಂಕ್ರ

Radhika ಹೇಳಿದರು...

Liked it. Rememberd my trip to Niagara while I was in Toronto. As we reached there in the evening, we couldn't go in Maid of the Mist.

Shrinidhi Hande ಹೇಳಿದರು...

nice pics.. ಚೆನ್ನಾಗಿದೆ ... ಮತ್ತೆ ಅದು ಕ.ರಾ.ರ.ಸಾ.ಸ೦.ನಿ , not ಚೆನ್ನಾಗಿದೆ ... ಮತ್ತೆ ಅದು ಕ.ರಾ.ರ.ಸಾ.ನಿ