ಬುಧವಾರ, ಜೂನ್ 13, 2012

ತಿರುಗಿ ಕೆಟ್ಟರೂ ಪರವಾಗಿಲ್ಲ....

ಹಿಂದಿನ ವರ್ಷ ಕೆನಡಾದಲ್ಲಿ ತಣ್ಣಗೆ ಕುಳಿತು ನೆಟ್ ಚಾಟ್ ಮಾಡುತ್ತಿದ್ದಾಗ ಗೆಳತಿಯೊಬ್ಬಳು "ಅಲಾಸ್ಕಾಗೆ ಹೋಗಿ ಬಂದ್ಯಾ?" ಅಂತ ಕೇಳಿದ್ದಳು. ಭೂಮಿ ಮೇಲಿನ ಸುಂದರ ಪ್ರದೇಶಗಳಲ್ಲಿ 'ಅಲಾಸ್ಕಾ' ಕೂಡ ಒಂದು ಅಂತ ಹೇಳುತ್ತಾರೆ.  ಕೆನಡಾ ದೇಶದ ಗಡಿಗೆ ತಾಗಿಕೊಂಡಿದ್ದರೂ ಕೂಡ ನಾನಿದ್ದ ಊರಿನಿಂದ ಅದು ಬಹಳ ದೂರ ಇತ್ತು.  ಜೊತೆಗೆ ಅದು ಯು.ಎಸ್.ಎ. ದೇಶಕ್ಕೆ ಸೇರುವ ಪ್ರದೇಶ.  ನನಗೆ ಯು.ಎಸ್. ವೀಸಾ ಕೂಡ ಇರಲಿಲ್ಲ. ಇದ್ದರೂ ಬಹಳ ಸಮಯ ಮತ್ತು ಹಣ ಖರ್ಚಾಗುತ್ತಿದ್ದುದರಿಂದ ಅಲಾಸ್ಕಾಗೆ ಹೋಗಿಬರಲು ಆಗುತ್ತಿರಲೂ ಇಲ್ಲ. ಅದನ್ನೇ ಆವಳಿಗೆ ಹೇಳಿದರೆ ಅವಳು ಅಷ್ಟು ದೂರ ಹೋಗಿ ಅಲಾಸ್ಕಾಗೆ ಹೋಗಲಿಲ್ಲ ಅಂದಮೇಲೆ ನೀನು ಅಲ್ಲಿಗೆ ಹೋಗಿದ್ದೇ ವೇಸ್ಟ್ ಅಂದಳು.  ನಾನೂ ಸುಮ್ಮನಿರದೇ, "ನೀನು ಕಾಶ್ಮೀರಕ್ಕೆ ಹೋಗಿದ್ದೀಯಾ?" ಅಂತ ಕೇಳಿದೆ. ಅವಳು ಇಲ್ಲ ಅಂದಳು. ಹಾಗಿದ್ದಮೇಲೆ ನೀನು ಇಪ್ಪತ್ತೈದು ವರ್ಷದಿಂದ ಭಾರತದಲ್ಲಿ ಇರುವುದೇ ವೇಸ್ಟ್ ಅಂದು ಅವಳನ್ನು ಸುಮ್ಮನಾಗಿಸಿದೆ. :)  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಮ್ಮೆ ಬೇರೆ ದೇಶದ ಕ್ಲೈಂಟ್ ಒಬ್ಬಳು ಬಂದಿದ್ದಳು. ಭಾರತಕ್ಕೆ ಅದು ಅವಳ ಮೊದಲ ಭೇಟಿ ಆಗಿತ್ತು .  ಅವಳು  ಬರುವಾಗಲೇ ಯಾವ ರೀತಿ ಪ್ಲಾನ್ ಮಾಡಿಕೊಂಡು ಬಂದಿದ್ದಳು ಅಂದರೆ ಇಲ್ಲಿ ಇದ್ದಿದ್ದು ಒಂದು  ವಾರವೇ ಆದರೂ ಒಂದೇ ದಿನದಲ್ಲಿ ವಿಮಾನದಲ್ಲಿ ಹೋಗಿ ತಾಜ್ ಮಹಲ್ ನೋಡಿಕೊಂಡು ಬಂದಿದ್ದಳು! "ನಾವೆಲ್ಲಾ ಇದೇ ದೇಶದಲ್ಲೇ ಹುಟ್ಟಿ ಇಲ್ಲೇ ಇದ್ದರೂ ಆ ಕಡೆ ತಲೆಯೂ ಹಾಕಲಾಗಿಲ್ಲ, ನೀನು ಒಂದೇ ದಿನದಲ್ಲಿ ಒಬ್ಬಳೇ ಹೋಗಿ ನೋಡಿಕೊಂಡು ಬಂದೆ" ಅಂತ ಅವಳಿಗೆ ಶಭಾಶ್ ಹೇಳಿದ್ದೆವು.

ವಿಷಯ ಇದೇ. ನಾನು ಹಿಂದಿನ ವರ್ಷ ಇದೇ ಸಮಯದಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಕರ್ನಾಟಕದಲ್ಲಿ ನನ್ನ ಆಸಕ್ತಿಯ ಕೆಲವು ಮುಖ್ಯವಾದ ಸ್ಥಳಗಳಿಗೆಲ್ಲಾ ಹೋಗಬೇಕು ಅಂದುಕೊಂಡಿದ್ದೆ.  ಆದರೆ ಅದು ಆಗಲಿಲ್ಲ. ಅದರ ಬಗ್ಗೆ ಹೀಗೆಯೇ ಪ್ಲಾನ್ ಮಾಡುತ್ತಾ ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆ ಅಂತ ಯೋಚಿಸುತ್ತಿದ್ದೆ.  ನಾನು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಿಗಷ್ಟೇ ಹೋಗಿದ್ದೇನೆ. ಅದೂ ಅಲ್ಲಿ ಕೆಲವು ಊರುಗಳಷ್ಟೇ!. ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿನ ಮೂವತ್ತು ಜಿಲ್ಲೆಗಳಲ್ಲಿ ಬೀದರ್, ಕಲ್ಬುರ್ಗಿ, ವಿಜಾಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಯಾದಗಿರಿ ಜಿಲ್ಲೆಗಳನ್ನೇ ಹೊಕ್ಕಿಲ್ಲ!!  ಬೆಂಗಳೂರಿನ ಹತ್ತಿರ ಇರುವ ಎಷ್ಟೋ ಸ್ಥಳಗಳಿಗೆ ಹೋಗಬೇಕು ಅಂದುಕೊಳುತ್ತಲೇ ವರ್ಷಗಳು ಕಳೆದುಹೋಗಿವೆ! ನನ್ನ ತವರು ಜಿಲ್ಲೆ ಶಿವಮೊಗ್ಗ, ಉತ್ತರಕನ್ನಡಗಳಲ್ಲೇ ಎಷ್ಟೊಂದೆಲ್ಲಾ ಸ್ಥಳಗಳು ಬಾಕಿ ಇವೆ. ಇಲ್ಲಿ ಸ್ಥಳಗಳು ಅಂದರೆ ನಮ್ಮ ಆಸಕ್ತಿಗೆ ಸಂಬಂಧಿಸಿದ ಯಾವುದಾದರೂ ಆಯಿತು. ಕೆಲವರಿಗೆ ಐತಿಹಾಸಿಕ ಸ್ಥಳಗಳು ಆಸಕ್ತಿಯದ್ದಾದರೆ, ಮತ್ತೆ ಕೆಲವರಿಗೆ ನಿಸರ್ಗವೇ ಪುಣ್ಯಕ್ಷೇತ್ರ! ಆದರೆ ಆಸಕ್ತಿಗಳೇ ಇರದಿದ್ದರೆ ಮಾತ್ರ ಇದೆಲ್ಲಾ ಅರ್ಥಾಗುವುದಿಲ್ಲ.  ಪ್ರತಿಯೊಂದು ಪ್ರದೇಶಗಳಲ್ಲೂ ಆ ಜನ, ಜೀವನ, ಭಾಷೆ, ಹವಾಮಾನ, ಪ್ರಕೃತಿ, ಸಂಸ್ಕೃತಿ ಎಲ್ಲವೂ ಅನುಭವಗಳೇ ಹೌದು. ಹಾಗೆ ಎಲ್ಲಾ ಕಡೆ ಹೋಗಲು ಎಲ್ಲರಿಗೂ ಸಾಧ್ಯವೂ ಇಲ್ಲ ಅಂದುಕೊಂಡರೂ ಒಂದಂತೂ ನಿಜ. ತಿರುಗಿ ಕೆಟ್ಟರೂ ಪರವಾಗಿಲ್ಲ, ಕೂತು ಕೆಡಬಾರದು !

10 ಕಾಮೆಂಟ್‌ಗಳು:

sunaath ಹೇಳಿದರು...

Well said, Vikas!

Parisarapremi ಹೇಳಿದರು...

ಇನ್ನೇಕೆ ತಡ? ಶುಭಸ್ಯ ಶೀಘ್ರಮ್!

ಪ್ರಭುಪ್ರಸಾದ್ ನಡುತೋಟ ಹೇಳಿದರು...

ನಿಮ್ಮ ಬ್ಲಾಗ್ ಬಗ್ಗೆ ಇಂದಿನ ಪ್ರಜಾವಾಣಿಯಲ್ಲಿ ಮೂಡಿಬಂದ ಪರಿಚಯ ಚೆನ್ನಾಗಿದೆ.. ಅಭಿನಂದನೆಗಳು..

Subrahmanya ಹೇಳಿದರು...

ನನಗೆ ಶಿವರಾಮ ಕಾರಂತರು ತಮ್ಮ "ಹುಚ್ಚು ಮನಸ್ಸಿನ.."
ಇದರಲ್ಲಿ ಹೇಳಿದ್ದ ವಾಕ್ಯವೊಂದು ನೆನೆಪಾಯಿತು. " ನಾವು ಬದುಕಿರುವಷ್ಟು ದಿನ ನಮ್ಮ ಸುತ್ತಲಿನ ಪರಿಸರವನ್ನು ಇನ್ನಷ್ಟು ಚೆಂದಗಾಣಿಸಿ ಮುಂದಿನವರಿಗೆ ಬಿಟ್ಟು ಹೋಗಬೇಕು " ಎಂಬ ಮಾತು. ಪ್ರಪಂಚ ಸುತ್ತದೆ ಇಂತಹ ಮಾತೂ ಬರವುದಿಲ್ಲ, ಅನುಭವವಂತೂ ಸಾಧ್ಯವೇ ಇಲ್ಲ. ನಿಮ್ಮ ತಿರುಗಾಟಕ್ಕೆ ನನ್ನ ಶುಭಾಶಯಗಳು.

Kanthi ಹೇಳಿದರು...

no comments....;-)

ಸಂದೀಪ್ ಕಾಮತ್ ಹೇಳಿದರು...

ನಾನು ಲಾಲ್ ಬಾಗ್ ನೋಡಿದ್ದು ಬೆಂಗಳೂರಿಗೆ ಬಂದು ಎಂಟು ವರ್ಷ ಆದ ಮೇಲೆ!!!

AntharangadaMaathugalu ಹೇಳಿದರು...

ನಿಮ್ಮ ಮೊದಲ ಆದ್ಯತೆ ಶಿವಮೊಗ್ಗ ಜಿಲ್ಲೆಯಾ ವಿಕಾಸ್.. :-)
ಸುತ್ತಿ ಬಂದು ಅನುಭವ ಬರೆಯಿರಿ....


ಶ್ಯಾಮಲ

ವಿ.ರಾ.ಹೆ. ಹೇಳಿದರು...

ಅರುಣ್, ಸುನಾಥಕಾಕಾ, ಸುಬ್ರಹ್ಮಣ್ಯ ಧನ್ಯವಾದಗಳು.

ಪ್ರಭು, ಥ್ಯಾಂಕ್ಯು,ನೀನು ಹೇಳಿದ ಮೇಲೆ ಅದನ್ನು ನೋಡಿದೆ. ಇಲ್ದಿದ್ರೆ ಗೊತ್ತಾಗ್ತನೇ ಇರ್ಲಿಲ್ಲ :(

ಕಾಂತಿ, :)
ಸಂದೀಪ, ನೀನೇ ಎಷ್ಟೋ ಬೆಟರು, ಇನ್ನೂ ಎಂತೆಂತಾ ಪ್ರಭೃತಿಗಳಿದ್ದಾರೆ !

ಶ್ಯಾಮಲಕ್ಕ, ಹೌದು, ತವರು ಜಿಲ್ಲೆ ಮೊದಲು :)

Shrinidhi Hande ಹೇಳಿದರು...

desha suttabeku, kosha odabeku...

ಅನಾಮಧೇಯ ಹೇಳಿದರು...

ಆಲಾಸ್ಕ ನೋಡಿಲ್ಲದಿದ್ದರೂ ಪರ್ವಾಗಿಲ್ಲ. ಇ೦ಟು ದಿ ವೈಲ್ಡ್ ನೋಡಿದ್ದೀರಲ್ಲ ಸೊ ಒಕೆ :)