ಮಂಗಳವಾರ, ಜನವರಿ 1, 2019

'ಪುಸ್ತಕಪ್ರೇಮಿ' ಎಂಬ ಅಕ್ಷರಪ್ರೀತಿಯ ಬ್ಲಾಗ್

https://pustakapremi.wordpress.com: ಇದು ಪುಸ್ತಕಪ್ರೇಮಿ ಬ್ಲಾಗ್ . ಒಂದೂವರೆ ವರ್ಷದ ಹಿಂದೆ ಶುರುಮಾಡಿದ ಬ್ಲಾಗ್ ಇದುಇದರಲ್ಲಿ ಇವತ್ತಿನವರೆಗೆ ಸುಮಾರು 900 ಪೋಸ್ಟುಗಳಿವೆ. ವಿಶೇಷವೆಂದರೆ ಎಲ್ಲವೂ ಪುಸ್ತಕಗಳಿಗೆ ಸಂಬಂಧಿಸಿದ್ದು.
'ನಾನೊಬ್ಬ ಪುಸ್ತಕ ಪ್ರೇಮಿಅನ್ನುವ ಫೇಸ್ಬುಕ್ ಗುಂಪನ್ನು ಸುಮಾರು ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಅದರಲ್ಲಿ ನೂರಾರು ಸದಸ್ಯರು ತಾವು ಓದಿದ ಪುಸ್ತಕಗಳ ಬಗ್ಗೆ ಪರಿಚಯ/ವಿಮರ್ಶೆ ಹಾಕುತ್ತಿರುತ್ತಾರೆ ಮತ್ತು ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ. ಪ್ರಕಾಂಡ ಓದುಗರೂ, ಅನೇಕ ಲೇಖಕರೂ ಅದರಲ್ಲಿದ್ದಾರೆ. ತುಂಬ ಒಳ್ಳೆಯ ಮಾಹಿತಿಗಳು ಅದರಲ್ಲಿ ಅನೇಕ ಜನರಿಂದ ಹಾಕಲ್ಪಡುತ್ತಿದ್ದವು. ಆದರೆ ಫೇಸ್ಬುಕ್ಕಿನ ಅನಾನುಕೂಲ ಅಥವಾ ಮಿತಿ ಏನಂದರೆ ಪೋಸ್ಟ್ ಗಳು ಕಾಲಕ್ರಮೇಣ ಹಾಗೇ ಕಳೆದುಹೋಗಿಬಿಡುತ್ತಿದ್ದವು. ಹಾಗಾಗಿ ಅಲ್ಲಿ ಪ್ರಕಟವಾಗುವ ಉಪಯುಕ್ತವಾದ ಬರಹಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ಅಂತರಜಾಲದಲ್ಲಿ ಸಂಗ್ರಹಿಸಿಟ್ಟು ಅದು ಮುಕ್ತವಾಗಿ ಓದಲು ಸಿಗುವಂತೆ, ಗೂಗಲ್‍ನಂತಹ ಶೋಧಕ ಯಂತ್ರಗಳಿಗೆ ಸಿಗುವಂತೆ ಮಾಡಲು ಬ್ಲಾಗ್ ತಾಣ ಒಳ್ಳೆಯದೆಂಬ ಯೋಚನೆ ನನಗೆ ಬಂದಿದ್ದು ೨೦೧೭ರಲ್ಲಿ. ಅದರಂತೆ ‘ಪುಸ್ತಕ ಪ್ರೇಮಿ’ ಬ್ಲಾಗನ್ನು ರಚಿಸಿದೆ. ಮೊದಮೊದಲು ನಾನು ನಿಯಮಿತವಾಗಿ ಬರಹಗಳನ್ನು ಸಂಗ್ರಹಿಸಿಡುತ್ತಿದ್ದೆ. ಆಮೇಲೆ ಕಾರಣಾಂತರಗಳಿಂದ ಸಮಯದ ಕೊರತೆಯಾಗಿ ಬ್ಲಾಗ್ ಕೆಲಸ ಸಾಧ್ಯವಾಗಲಿಲ್ಲ. ಹಲವು ದಿನಗಳು ಮಿತ್ರ ಮೋಹನ್ ಕುಮಾರ್ ಸಹಾಯ ಮಾಡಿದರು. ಅನೇಕ ಮಿತ್ರರು ಕೈಜೋಡಿಸಿದರು. ಈಗ ಒಂದು ಆರುತಿಂಗಳುಗಳ ಹಿಂದೆ ಶಶಿಕಿರಣ್ ಎಂಬ ಸಹೃದಯಿ ಗೆಳೆಯರೊಬ್ಬರ ಪ್ರವೇಶವಾದಮೇಲೆ ನಿಯಮಿತವಾಗಿ ಬರಹಗಳು ಸಂಗ್ರಹಿಸಲ್ಪಡುತ್ತಿವೆ. ಅವರೇ ಬ್ಲಾಗನ್ನು ನಡೆಸುತ್ತಿದ್ದಾರೆ. ಫೇಸ್ಬುಕ್ ಸಮುದಾಯದಲ್ಲಿ ಪ್ರಕಟವಾಗುವ ಪೋಸ್ಟುಗಳನ್ನು ಆ ಬ್ಲಾಗಿನಲ್ಲಿ ಹಾಕಿಡಲಾಗುತ್ತಿದೆ. ಪುಸ್ತಕಗಳ ಬಗ್ಗೆ ಭರಪೂರ ಮಾಹಿತಿಯ ತಾಣವೊಂದನ್ನು ಮಾಡಿ ನಡೆಸುತ್ತಿರುವ ಖುಶಿ ನಮಗಿದೆ. ಕನ್ನಡದಲ್ಲಿ ಇಷ್ಟು ಪುಸ್ತಕಗಳ ಬಗ್ಗೆ ಮಾಹಿತಿಯುಳ್ಳ ತಾಣ ಬೇರೆ ಇಲ್ಲ ಅಂತಲೇ ಹೇಳಬಹುದು.

****

ಇಂದು ೨೦೧೮ನೇ ಇಸವಿಯ ಕೊನೇ ದಿನ. ನನ್ನ ಓದಿನ ಬಗ್ಗೆ ಹೇಳುವುದಾದರೆ ಈಗಿನ ಒಂದು ದಶಕದಲ್ಲಿ ಅತಿ ಕಡಿಮೆ ಪುಸ್ತಕಗಳನ್ನು ಓದಿದ್ದು ಈ ವರ್ಷ.  ಪುಸ್ತಕ ಖರೀದಿಯನ್ನು ಜೋರಾಗಿ ಮಾಡಿದ್ದರೂ ಸಹ ಓದಲು ಸಾಧ್ಯವಾಗಿದ್ದು ಕೇವಲ ೯-೧೦ ಪುಸ್ತಕಗಳು ಮಾತ್ರ!  ಕಾರಣಗಳು ಹಲವಾರು. ಬಹುತೇಕ ವೈಯಕ್ತಿಕ. ಮುಂದಿನ ದಿನಗಳಲ್ಲಿ ಓದು ಹೆಚ್ಚುತ್ತದೆ ಎಂಬ ಆಶಾಭಾವನೆಯೊಂದಿಗೆ ೨೦೧೯ನ್ನು ಸ್ವಾಗತಿಸುತ್ತಿದ್ದೇನೆ.


ಕಾಮೆಂಟ್‌ಗಳಿಲ್ಲ: