ಶನಿವಾರ, ಅಕ್ಟೋಬರ್ 24, 2020

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ - ರೆಸ್ಯುಮೆ ಬರೆಯುವುದು/ಕಳಿಸುವುದು ಕಲಿಯಿರಿ

19ಅಕ್ಟೋಬರ್2020 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ: ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ





ನಾನು ಆಗಾಗ ನಮ್ಮ ಕಂಪನಿಯಲ್ಲಿ ಅಥವಾ ಬೇರೆಡೆ ಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಇಂತಹ ಮಾಹಿತಿ ಹಂಚಿಕೊಂಡಾಗ ಅದಕ್ಕೆ ಬರುವ ಬಹಳಷ್ಟು ಇಮೇಲುಗಳು ನಿರಾಸೆಗೊಳಿಸಿಬಿಡುತ್ತದೆ. ಬಹುತೇಕ ಇಮೇಲುಗಳು ಯಾವುದೇ ವಿವರಗಳಿಲ್ಲದೇ, ಯಾವ ಹುದ್ದೆಗೆ ಅರ್ಜಿಹಾಕುತ್ತಿದ್ದೇವೆ ಎಂಬ ಮಾಹಿತಿ ಇಲ್ಲದೇ ಸುಮ್ಮನೇ ಫಾರ್ವರ್ಡ್ ಮಾಡಿದಂತವುಗಳಾಗಿರುತ್ತವೆ. ಅದರಲ್ಲಿ ಬಂದ ರೆಸ್ಯುಮೆಗಳು ಸಹ ಉದ್ಯೋಗಕ್ಕೆ ತಕ್ಕ ಅನುಭವವನ್ನು, ಸ್ಕಿಲ್ ಗಳನ್ನು ಹೊಂದಿರುವುದಿಲ್ಲ. ಒಂದು ವ್ಯವಸ್ಥಿತವಾಗಿ ಅಗತ್ಯಕ್ಕೆ ತಕ್ಕಂತೆ ಹಲವಾರು ರೆಸ್ಯುಮೆಗಳು ಬರೆಯಲ್ಪಟ್ಟಿರುವುದಿಲ್ಲ. ಕಾರ್ಪೋರೇಟ್ ವಲಯದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡವನಾಗಿ ಮತ್ತು ಉದ್ಯೋಗಾಕಾಂಕ್ಷಿಯಾಗಿಯೂ ಸಹ ಸುಮಾರು ಹದಿನೈದು ವರ್ಷಗಳ ಅನುಭವದ ಮಾತಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕದ ಅಭ್ಯರ್ಥಿಗಳು ಅದರಲ್ಲೂ ವಿಶೇಷವಾಗಿ ಹೊಸಬರು, ಜೂನಿಯರ್ ಗಳು, ಕಡಿಮೆ ಅನುಭವವಿರುವರು ತಮ್ಮ ಬಯೊಡೇಟಾ ಅಥವಾ ರೆಸ್ಯುಮೆಯನ್ನು ಬರೆಯುವ ಹಾಗೂ ಉದ್ಯೋಗ ಅರ್ಜಿ ಸಲ್ಲಿಸುವ ಒಂದು ಮೂಲಭೂತ ತಿಳುವಳಿಕೆಯನ್ನು ಹೊಂದುವ ಮತ್ತು ಆ ಒಂದು ಸೌಜನ್ಯವನ್ನು ಕಲಿಯುವ ಅವಶ್ಯಕತೆ ಇದೆ ಅನಿಸುತ್ತದೆ.

ಕೊರೊನಾನಂತರದ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ ಈಗ ನೇಮಕಾತಿ ಪ್ರಕ್ರಿಯೆಗಳೂ ಹಲವೆಡೆ ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯುಮೆಯನ್ನು ಉತ್ತಮವಾಗಿ ತಯಾರುಮಾಡಿಕೊಂಡು ಸೂಕ್ತವಾಗಿ ಸಲ್ಲಿಸುವುದು ಅತ್ಯಂತ ಮುಖ್ಯ. ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ರೆಸ್ಯೂಮಲ್ಲಿರುವ ಮಾಹಿತಿಗಳ ಆಧಾರದಲ್ಲಿ ನಿಮ್ಮನ್ನು ಸಂದರ್ಶನಕ್ಕೆ ಪರಿಗಣಿಸಬೇಡವೋ ಇಲ್ಲವೋ ಎಂಬ ತೀರ್ಮಾನವಾಗುತ್ತದೆ. ರೆಸ್ಯುಮೆಯನ್ನು ನೋಡುವವರಿಗೆ ನೀವೊಬ್ಬ ಅಪರಿಚಿತ ವ್ಯಕ್ತಿಯಾಗಿದ್ದು ನಿಮ್ಮ ಮೊದಲ ಇಂಪ್ರೆಶನ್ ತಲುಪುವುದು ಆ ರೆಸ್ಯುಮೆ ಮೂಲಕ ಮಾತ್ರ.


ಹೇಗಿರಬೇಕು ರೆಸ್ಯುಮೆ?

ರೆಸ್ಯುಮೆ ಅನ್ನುವುದು ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಮತ್ತು ನಮ್ಮ ಕಲಿಕೆಯನ್ನು, ಸಾಮರ್ಥ್ಯವನ್ನು, ಅನುಭವವನ್ನು ಕ್ಲುಪ್ತವಾಗಿ ವಿವರಿಸಿಕೊಳ್ಳುವ ಒಂದು ವಿಧಾನ. ವಿವಿಧ ಕ್ಷೇತ್ರಗಳಲ್ಲಿ, ಹಂತಗಳಲ್ಲಿ, ಅನುಭವದ ಮಟ್ಟದಲ್ಲಿ ರೆಸ್ಯುಮೆಗಳನ್ನು ವಿವಿಧ ರೀತಿ ತಯಾರು ಮಾಡಬೇಕಾಗುತ್ತದಾದರೂ ಅದರ ಮೂಲಭೂತ ರಚನೆ ಬಹುತೇಕ ಒಂದೇ ರೀತಿ ಇರುತ್ತದೆ. ರೆಸ್ಯುಮೆ ಒಂದು ಸುದೀರ್ಘ ಕಡತದಂತಿರದೇ ಚಿಕ್ಕಚೊಕ್ಕದಾಗಿ ಇರುವುದು ಅಗತ್ಯ. ಕೆಲವೇ ನಿಮಿಷಗಳಲ್ಲಿ ರೆಸ್ಯುಮೆಯನ್ನು ನೋಡಿ ಮುಗಿಸುವಂತಿರಬೇಕು ಮತ್ತು ಅಷ್ಟರಲ್ಲಿ ನಿಮ್ಮ ಸ್ಥೂಲ ಪರಿಚಯ ಆಗಬೇಕು. ನಿಮ್ಮ ರೆಸ್ಯುಮೆ ಈ ಅಂಶಗಳನ್ನು ಒಳಗೊಂಡಿರಲಿ. ವಿಧ್ಯಾಭ್ಯಾಸ ಮಾಹಿತಿ, ತೇರ್ಗಡೆ ವರ್ಷ, ಶೇಕಡಾ ಅಂಕಗಳು ಇತ್ಯಾದಿ. ನೀವು ಮಾಡಿರುವ ಇತರ ಸಂಬಂಧಿತ ಕೋರ್ಸುಗಳು, ನೀವು ಕಲಿತಿರುವ ಇತರ ಸ್ಕಿಲ್ ಗಳು, ನಿಮಗೆ ಬಳಸಲು ಗೊತ್ತಿರುವ, ಬಳಸುತ್ತಿರುವ ವಿವಿಧ ಕಂಪ್ಯೂಟರ್ ಅಥವಾ ಇತರ ಸಂಬಂಧಿತ ಅಪ್ಲಿಕೇಶನ್ ಗಳು, ತಂತ್ರಾಂಶಗಳ ಮಾಹಿತಿಗಳನ್ನು ಪಾಯಿಂಟುಗಳಾಗಿ ನಮೂದಿಸಿ. ಈವರೆಗೆ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಕಂಪನಿಗಳ ಬಗ್ಗೆ ಕಾಲಾನುಕ್ರಮವಾಗಿ ಮಾಹಿತಿ, ಅಲ್ಲಿ ಯಾವ ಇಸವಿಯಿಂದ ಯಾವ ಇಸವಿವರೆಗೆ ಕೆಲಸ ಮಾಡಿದ್ದೀರಿ, ಅದರಲ್ಲಿ ನಿಮ್ಮ ಹುದ್ದೆ, ಜವಾಬ್ದಾರಿಗಳು ಮತ್ತು ಅದರಲ್ಲಿ ನಿಮ್ಮ ಕೆಲಸಗಳ, ನಿಭಾಯಿಸುತ್ತಿರುವ ಪ್ರಾಜೆಕ್ಟುಗಳ ಸಂಕ್ಷಿಪ್ತ ವಿವರಣೆ. ಆನಂತರ ನಿಮ್ಮ ಹವ್ಯಾಸಗಳು, ವೈಯಕ್ತಿಕ ಮಾಹಿತಿಗಳು, ಇತರ ಆಸಕ್ತಿಕರ ವಿಷಯ ಇತ್ಯಾದಿಗಳನ್ನು ಸೂಕ್ತವಾಗಿ ಅಗತ್ಯಕ್ಕೆ ತಕ್ಕಂತೆ ಹಾಕಬೇಕಾಗುತ್ತದೆ. ಇದಿಷ್ಟು ಒಂದು ರೆಸ್ಯುಮೆ ಹೊಂದಿರಬೇಕಾದ ಮೂಲಭೂತ ಅಂಶಗಳು. ಇದರಲ್ಲಿ ಅನುಭವದ ಮಟ್ಟಕ್ಕೆ ತಕ್ಕಂತೆ ವಿಭಾಗಗಳು ಮೇಲೆ ಕೆಳಗೆ ಆಗಬಹುದು. ಉದಾಹರಣೆಗೆ ಹೊಸಬನೊಬ್ಬ ತನ್ನ ವಿಧ್ಯಾಭ್ಯಾಸ ಹಾಗೂ ಕಲಿತಿರುವ ಇತರ ಸ್ಕಿಲ್ ಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರೆ ಅನುಭವಿಗಳು ತಮ್ಮ ಇಷ್ಟು ವರ್ಷಗಳ ಅನುಭವದ ಸಾರಾಂಶವನ್ನು ಮೊದಲ ವಿಭಾಗದಲ್ಲಿ ಹಾಕಬಹುದು. ಈ ಎಲ್ಲಾ ಮಾಹಿತಿಗಳೂ ಸಹ ಪ್ಯಾರಾಗಳ ರೀತಿ ಬರೆಯದೇ ಸಾಧ್ಯವಾದಷ್ಟೂ ಪಾಯಿಂಟುಗಳ ರೀತಿಯಲ್ಲಿ ಪ್ರಸ್ತುತಿಪಡಿಸುವುದು ಉತ್ತಮ ರೆಸ್ಯುಮೆಯ ಲಕ್ಷಣ.

ರೆಸ್ಯುಮೆ ಕಳಿಸುವ ಹಂತ:

ಒಂದು ಉದ್ಯೋಗಾವಕಾಶದ ಜಾಹೀರಾತು ಅಥವಾ ಮಾಹಿತಿಯು ಕಂಡಾಗ ಮೊಟ್ಟಮೊದಲು ನೋಡಬೇಕಾದುದು ಯಾವ ಹುದ್ದೆಗಳು ಇವೆ ಎಂಬುದು. ಉದಾಹರಣೆಗೆ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಇದೆ ಎಂದಾಗ ಫೈನಾನ್ಸ್ ಕ್ಷೇತ್ರದ ಎಲ್ಲರೂ ಅರ್ಜಿ ಹಾಕಲಾಗುವುದಿಲ್ಲ. ಅದರಲ್ಲಿ ನಿರ್ದಿಷ್ಟ ರೀತಿಯ ಹುದ್ದೆಗಳನ್ನು ಕೇಳಿರುತ್ತಾರೆ. ಹಾಗಾಗಿ ಹುದ್ದೆ ಮತ್ತು ಅಗತ್ಯವಾದ ವಿವರಣೆಗಳನ್ನು ಮೊದಲು ನೋಡಿಕೊಳ್ಳಬೇಕು. ಅದು ನಿಮಗೆ ಸಂಪೂರ್ಣವಾಗಿ ಅಲ್ಲದಿದ್ದರೂ ಮುಖ್ಯವಾಗಿ ಬೇಕಾದಷ್ಟು ನಿಮ್ಮ ಅನುಭವಕ್ಕೆ, ಪರಿಣಿತಿಗೆ ಹೊಂದಿಕೆಯಾಗುತ್ತಿದ್ದರೆ ಮಾತ್ರ ಅರ್ಜಿಸಲ್ಲಿಸಬೇಕು. ಈಗ ರೆಸ್ಯುಮೆಗಳನ್ನು ಕಳಿಸುವುದು ಇಮೇಲುಗಳ ಮುಖಾಂತರವಾದ್ದರಿಂದ, ಆ ಇಮೇಲುಗಳನ್ನು ಹೇಗೆ ಕಳಿಸುತ್ತೀರಿ ಎಂಬುದೂ ಬಹಳ ಮುಖ್ಯ. ಇಮೇಲಿನ ಸಬ್ಜೆಕ್ಟ್ ಲೈನಿನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದನ್ನು ಬರೆಯಿರಿ. ಇಮೇಲಿನಲ್ಲಿ ನೀವು ಯಾರು, ಏನು ಓದಿದ್ದೀರಿ, ಎಷ್ಟು ವರ್ಷಗಳ ಅನುಭವ ಮತ್ತು ಪರಿಣಿತಿ ಇದೆ, ಏಕೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಮೂರ್ನಾಲ್ಕು ಸಾಲುಗಳಲ್ಲಿ ವಿವರಿಸಿ. ರೆಸ್ಯೂಮೆ ಫೈಲಿಗೆ ನಿಮ್ಮ ಹೆಸರನ್ನು ಕೊಟ್ಟು ಅದನ್ನು ಅಟ್ಯಾಚ್ ಮಾಡಿ ಕಳುಹಿಸಿ.

ನೀವು ಕಳಿಸುವ ಇಮೇಲ್ ಅರ್ಜಿಯು ನಿಮ್ಮ ಬಗ್ಗೆ ಮೊದಲ ನೋಟದಿಂದ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಒಟ್ಟಾರೆ ನಿಮ್ಮ ರೆಸ್ಯೂಮ್ ನಿಮಗೆ ಉದ್ಯೋಗ ಪಡೆಯಲು ಒಂದು ಕೀಲಿಕೈ ಇದ್ದಂತೆ. ಸಮರ್ಥವಾಗಿ ಬಳಸಿಕೊಳ್ಳುವುದು ಜಾಣತನ.

ಇದು ನೆನಪಿರಲಿ 

೧. ರೆಸ್ಯುಮನ್ನು ಬೇರೆಯವರಿಂದ ಕಾಪಿ ಮಾಡಬೇಡಿ. ಅಗತ್ಯವಿದ್ದಲ್ಲಿ ಬೇರೆಡೆ ಮಾಹಿತಿ ತೆಗೆದುಕೊಂಡು ಸ್ವಂತವಾಗಿ ಬರೆಯಿರಿ.
೨. ರೆಸ್ಯುಮಲ್ಲಿ ನೀವು ಹಾಕಿರುವ ಎಲ್ಲಾ ಮಾಹಿತಿಗಳೂ ಸಹ ಸತ್ಯವಾಗಿರಬೇಕು ಮತ್ತು ಆ ಬಗ್ಗೆ ನಿಮಗೆ ಗೊತ್ತಿರಬೇಕು. ಸಂದರ್ಶನದಲ್ಲಿ ತಮ್ಮ ರೆಸ್ಯುಮೆಯಲ್ಲಿ ತಾವೇ ಹಾಕಿರುವ ಮಾಹಿತಿ ಬಗ್ಗೆ ಉತ್ತರಿಸಲು ಹಲವರು ವಿಫಲರಾಗುತ್ತಾರೆ.
೩. ಇಮೇಲ್ ಕಳಿಸುವಾಗ ಸುಮ್ಮನೇ ಫಾರ್ವರ್ಡ್ ಮಾಡುವುದು, ರೆಸ್ಯುಮೆ ಫೈಲಿಗೆ ಸರಿಯಾಗಿ ಹೆಸರು ಕೊಡದಿರುವುದು, ರೆಸ್ಯುಮೆಯಲ್ಲಿ ನಿಮ್ಮ ಮಾಹಿತಿಯನ್ನು ಹುಡುಕಾಡುವಂತೆ ಮಾಡುವುದು ಸರಿಯಲ್ಲ.

ಮಾನವ ಸಂಪನ್ಮೂಲ ಕ್ಷೇತ್ರದ ಹೇಮಾ ಪವಾರ್ ಅವರಿಂದ ಮಾಹಿತಿ:

ನಿಮ್ಮ CV ಎರಡು ಅಥವಾ ಮೂರು ಪುಟಗಳಷ್ಟಿದ್ದರೆ ಬೇಗ ಗ್ರಹಿಸಲು ಸಾಧ್ಯ. ಹೆಚ್ಚು ಅನುಭವವಿದ್ದು ಹೆಚ್ಚು ವಿಷಯವಿದ್ದರೆ ಮೂರು ಪುಟಗಳಷ್ಟು ಬರೆಯಿರಿ. ಪಿ.ಡಿ.ಎಫ್ ಫಾರ್ಮಾಟಿನಲ್ಲಿದ್ದರೆ ಉತ್ತಮ. ಸಣ್ಣ ಪಾಸ್ ಪೋರ್ಟ್ ಸೈಜಿನ ಫೋಟೋ ಒಂದನ್ನು ಶುರುವಿನ ಒಂದು ಬದಿಯಲ್ಲಿ ಹಾಕಿ. ಇದರಿಂದ ಕಳಿಸುವವರ ವಿವರ ಇನ್ನಷ್ಟು ಆಪ್ತವಾಗುತ್ತದೆ. ಮೊದಲೆರೆಡು ಸಾಲುಗಳು, ಸಂಪೂರ್ಣ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಇವಿಷ್ಟೇ ಸಾಕು. ವಿಳಾಸ ಹಾಗು ಇತರ ವ್ಯಯಕ್ತಿಕ ವಿವರಗಳನ್ನು ಕೊನೆಯಲ್ಲಿ ಬರೆಯಬಹುದು.

ಅನುಭವ ಹಾಗೂ ವಿದ್ಯಾರ್ಹತೆಗೆ ಹೊಂದದ ಕೆಲಸಗಳಿಗೆ ಕಳಿಸುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಗೆಳೆಯರು ರೆಫರ್ ಮಾಡುತ್ತಿದ್ದರೂ, ಇಂತಹ ಕೆಲಸಕ್ಕೆ ನನಗೆ ಇಷ್ಟು ಅನುಭವ ಹಾಗು ವಿದ್ಯಾರ್ಹತೆ ಇದೆ ಎನ್ನುವ ಬಗ್ಗೆ ಸಣ್ಣ ಟಿಪ್ಪಣಿ ಒಂದನ್ನು ಬರೆಯಿರಿ. ಇದರಿಂದ ನಿಮ್ಮ ರೆಸ್ಯೂಮೆಯನ್ನು ಹೆಚ್.ಆರ್. ಗಳಿಗೂ, ಮ್ಯಾನೇಜರ್ ಗಳಿಗೂ ಕಳಿಸಲು ಅನುಕೂಲವಾಗುತ್ತದೆ.

ಕಾಮೆಂಟ್‌ಗಳಿಲ್ಲ: