ಗುರುವಾರ, ಜನವರಿ 31, 2008

ಕೇರಳ, ಡಾಲ್ಫಿನ್, ಆನೆ ಮತ್ತು ’ನಾವು’


ಸುತ್ತಲೂ ನೀರು, ಬರೀ ನೀರು , ಎಲ್ಲಿಂದ ಎಲ್ಲಿಗೆ ನೋಡಿದರೂ ಬರೀ ನೀರು. ತಲೆ ಎತ್ತಿ ನೋಡಿದರೆ ನೀಲಿ ಆಕಾಶ ತಲೆ ತಗ್ಗಿಸಿದರೆ ಮತ್ತದೇ ನೀಲಿ ನೀರು. ಕೂಗಾಟ, ಕೇಕೆ ಗಳೆಲ್ಲಾ ನಿಧಾನವಾಗಿ ಮಾಯವಾಗುತ್ತಾ ಬಂದು ಮಾತು ಹೊರಡದೇ ಕುಳಿತ ಮುಖಗಳಲ್ಲಿ ದಿಗಿಲು ಎದ್ದು ಕಾಣುತ್ತಿತ್ತು. ಅಲೆಗಳು ದೋಣಿಯನ್ನು ಕುಲುಕಿ ಕುಲುಕಿ ಹಾಕುತ್ತಿದ್ದರೆ ಮತ್ತೆ ದಡ ಸೇರುತ್ತೇವೆಯೋ ಇಲ್ಲವೋ ಎಂಬ ಆತಂಕ ಕಾಡುತ್ತಿತ್ತು. ಇಲ್ಲಿ ಶಾರ್ಕ್ ಮೀನುಗಳೂ ಇವೆ ಎಂದು ಯಾರೋ ದಡದಲ್ಲೇ ಹೇಳಿದ್ದು ನೆನಪಿಗೆ ಬೇರೆ ಬಂದು ಯಾಕಾದರೂ ಬಂದೆವೋ ಎಂಬ ಸ್ಥಿತಿ. ಇದ್ದಕ್ಕಿಂದ್ದಂತೇ ದೋಣಿಯ ಎಂಜಿನ್ ಆಫ್ ಮಾಡಿ ಒಂದು ಕಡೆ ಕೈತೋರಿಸುತ್ತಾ ಅಲ್ಲಿ ನೋಡಲು ಹೇಳಿದ ದೋಣಿಯವ. ಕುತೂಹಲದಿಂದ ನೋಡಿದರೆ ನಮ್ಮ ದೋಣಿಯ ೧೫-೨೦ ಮೀಟರ್ ದೂರದಲ್ಲಿ ಡಾಲ್ಫಿನ್ನುಗಳು ಆಡುತ್ತಿದ್ದವು. ಡಾಲ್ಫಿನ್ನುಗಳು ಮನುಷ್ಯರಿಗೆ ಸ್ನೇಹ ಜೀವಿಗಳಂತೆ, ಏನೂ ಮಾಡುವುದಿಲ್ಲವಂತೆ, ನಗುತ್ತವಂತೆ, ಮನುಷ್ಯನನ್ನು ಬಿಟ್ಟರೆ ಸುಮ್ಮನೇ ಖುಷಿಗಾಗಿ ಸೆಕ್ಸ್ ಮಾಡುವ ಭೂಮಿಯ ಮೇಲಿನ ಏಕೈಕ ಜೀವಿಯಂತೆ.. ಇದೇ ಮಾತುಗಳೊಂದಿಗೆ ಮೊದಲ ಬಾರಿಗೆ ಡಾಲ್ಫಿನ್ ಗಳನ್ನು ನೋಡಿದೆವು. ಅಂತೂ ಸಮುದ್ರದಲ್ಲಿ ಒಂದು ದೊಡ್ಡ ಸುತ್ತು ಹಾಕಿಕೊಂಡು ದೋಣಿ ತಿರುಗಿ ದಡ ಮುಟ್ಟಿದ ಮೇಲೆ ಉಸಿರು ನಿರಾಳವಾಗಿದ್ದು !

ಈ ಅನುಭವವಾಗಿದ್ದು ಕಳೆದವಾರದ ಕೇರಳ ಭೇಟಿಯಲ್ಲಿ. ಸಣ್ಣವರಿದ್ದಾಗ ಜೊತೆಯಲ್ಲೇ ಗೋಲಿಯಾಡುತ್ತಾ ಬೆಳೆದ ಗೆಳೆಯನೊಬ್ಬನ ಅಣ್ಣನ ಮದುವೆ ಕೇರಳದ ಕಲ್ಲಿಕೋಟೆ(Calicut or kozhikode)ಯಲ್ಲಿತ್ತು. ಎಷ್ಟೋ ದಿನದಿಂದ ಕೇರಳಕ್ಕೆ ಹೋಗಬೇಕೆಂದು ಅಂದುಕೊಂಡಿದ್ದರೂ ಯಾಕೋ ಸಾಧ್ಯವಾಗಿರಲಿಲ್ಲ. ಈಗ ಹೋಗಲು ಕಾರಣವೊಂದು ಸಿಕ್ಕಿದ್ದೇ ತಡ ಚಕಚಕನೇ ಇ ಮೇಲುಗಳು ಹರಿದಾಡಿ ಮದುವೆಗೆ ಇನ್ನೊಂದು ದಿನವಿರುವಾಗ ತೀರ್ಮಾನ ಮಾಡಿ ಟ್ಯಾಕ್ಸಿ ಬುಕ್ ಮಾಡಿದ್ದೂ ಆಯಿತು. ಚಡ್ಡಿದೋಸ್ತಿಗಳಾದ ನಾನು, ಚಂದ್ರು, ರಘು, ಪ್ರವೀಣ, ಪಚ್ಚಿ, ನವೀನ ಹೊರಡುವುದೆಂದು ಪಕ್ಕಾ ಆಯಿತು. ಕಲ್ಲಿಕೋಟೆಯ ಬಗ್ಗೆ, ಅಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ಹುಡುಕಿ ಮತ್ತು ಕೆಲವರಲ್ಲಿ ಕೇಳಿಕೊಂಡು ಮಾಹಿತಿ ಸಂಗ್ರಹಿಸಿದ್ದೂ ಆಯಿತು. ನೀ ನನ್ ಹೊಟ್ಟೆಲ್ಲಿ ೨ ತಿಂಗಳ ಶಿಶು ಆಗಿದ್ದಾಗ ಆನೂ ನಿಮ್ಮಪ್ಪ ಕೇರಳ ಪ್ರವಾಸ ಹೋಗಿದಿದ್ಯ ಎಂದು ಅಪ್ಪನ ಮುಖ ನೋಡಿಕೊಂಡು ಅಮ್ಮ ಹೇಳುತ್ತಿದ್ದುದ್ದು ಬಿಟ್ಟರೆ ನಾನಂತೂ ಹುಟ್ಟಿದ ಮೇಲೆ ಕೇರಳ ರಾಜ್ಯಕ್ಕೆ ಕಾಲಿಟ್ಟಿರಲಿಲ್ಲ. ಈಗ ಸಿಕ್ಕಿದ ಅವಕಾಶ ಬಿಡುವ ಮಾತಿರಲಿಲ್ಲ. ಪಚ್ಚಿ ಒಬ್ಬನನ್ನು ಬಿಟ್ಟರೆ ನಾವೆಲ್ಲರೂ ಕೇರಳಕ್ಕೆ ಹೋಗುತ್ತಿದ್ದುದು ಇದೇ ಮೊದಲಾಗಿದ್ದರಿಂದ ಎಲ್ಲರೂ ಉತ್ಸಾಹದಿಂದಲೇ ತಯಾರಾಗಿದ್ದೆವು !


ಸರಿ , ಇಲ್ಲಿಂದ ರಾತ್ರಿ ಹೊರಟು ಮೈಸೂರು, ನಂಜನಗೂಡು, ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರ ಅರಣ್ಯವನ್ನು ಹಾಯ್ದು ಸುಲ್ತಾನ್ ಬತೇರಿ ಊರಿನ ಮೇಲೆ ವಯನಾಡಿನ ಘಾಟ್ ರಸ್ತೆಯ ಮೂಲಕ ಬೆಳಗಿನ ಜಾವ ಕೇರಳಕ್ಕೆ ಪ್ರವೇಶ ಮಾಡಿದೆವು. ಅಲ್ಲಿಂದ ಶುರುವಾಗಿದ್ದು ನಮ್ಮ ಸಣ್ಣ ಪರದಾಟ. ನಮ್ಮಲ್ಲಿ ಯಾವನಿಗೂ ಒಂದು ಪದವೂ ಮಲಯಾಳಂ ಬರುತ್ತಿರಲಿಲ್ಲ. ನಾವು ಹೋಗಬೇಕಿದ್ದು ಕಲ್ಲಿಕೋಟೆಯ ಫರೋಕೆ ಎಂಬ ಸ್ಥಳಕ್ಕೆ. ಅಂತೂ ಇಂತೂ ನಮ್ಮ ಡ್ರೈವರನಿಗೆ ಬರುತ್ತಿದ್ದ ೮-೧೦ ಮಲಯಾಳಂ ಪದಗಳ ಮೂಲಕ , ನಮ್ಮ ಹಿಂದಿ ಇಂಗ್ಲೀಷು ಇತ್ಯಾದಿ ಪ್ರಯೋಗಗಳಿಂದ ದಾರಿ ಕೇಳಿಕೊಂಡು ಸರಿಯಾದ ಜಾಗ ತಲುಪಿ ಮೊದಲೇ ಬುಕ್ಕಾಗಿದ್ದ ಲಾಡ್ಜ್ ಸೇರಿದೆವು.

ಬೆಂಗಳೂರು - ಕಲ್ಲಿಕೋಟೆ: ಸುಮಾರು ೩೬೦ ಕಿ.ಮಿ
ಪ್ರಯಾಣ ಸಮಯ: ಸುಮಾರು ೯ ತಾಸು (ಟ್ಯಾಕ್ಸಿಯಲ್ಲಿ)


ಬೀಚು, ಬಂದರು, ದೇವಸ್ಥಾನ, ಮ್ಯೂಸಿಯಂ ಇತ್ಯಾದಿ ಅವತ್ತಿನ ದಿನ ನೋಡಬೇಕಾಗಿದ್ದ ಸುಮಾರು ಸ್ಥಳಗಳನ್ನೆಲ್ಲಾ ನೋಡಿದೆವು. ವಾಸ್ಕೋ-ಡ-ಗಾಮ ಇಲ್ಲಿಗೆ ಬಂದದ್ದು ಸರಿಯೋ ತಪ್ಪೋ ಎಂದು ವಾದ ಮಾಡಿ ತೀರ್ಮಾನವಾಗದೆ ಅವನನ್ನು ಅಲ್ಲಿಯೇ ಬಿಟ್ಟೆವು ! ಕಲ್ಲಿಕೋಟೆಯ ಸಮುದ್ರದ ಗಬ್ಬು ಕರಿ ನೀರಿನಲ್ಲೇ ಮೈ ಮನದಣಿಯೆ ಆಟವಾಡಿದೆವು. ಸಸ್ಯಾಹಾರಿ ಹೋಟೆಲ್ಲುಗಳಿಲ್ಲದೇ ಸರಿಯಾದ ತಿಂಡಿ ಸಿಗದೇ ಪರದಾಡಿದೆವು. ಇದ್ದಿದುರಲ್ಲೆ ಒಂದು ಹೋಟೆಲ್ಲಿನಲ್ಲಿ ಸರ್ವರ್ ತಿಂಡಿಗಳ ಪಟ್ಟಿ ಹೇಳಿದಾಗ ಚಪಾತಿ, ಪರೋಟ ಬಿಟ್ಟು ಬೇರ್ಯಾವುದೂ ಗೊತ್ತಾಗದೇ ಅದೇ ತಿಂದು ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಸಂಜೆ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಲಾಡ್ಜಿಗೆ ಬಂದೆವು. ಬಾಟಲಿಗಳು ಖಾಲಿಯಾದರೂ ಯಾಕೋ ತೃಪ್ತಿಯಾಗದೇ ೨ ಗಂಟೆ ರಾತ್ರಿಯವರೆಗೆ ನಿದ್ರೆ ಮಾಡಲಾಗಲಿಲ್ಲ (ಖಾಲಿಯಾಗಿದ್ದು ನೀರಿನ ಬಾಟಲಿಗಳು. ಸಿಕ್ಕಾಪಟ್ಟೆ ಸೆಕೆ, ಬಾಯಾರಿಕೆ ಇತ್ತು ;-) )

ಮಾರನೆ ದಿನ ನಮ್ಮ ಮಲಯಾಳಿ ಗೆಳೆಯ 'ರತೀಶ' ನಮ್ಮನ್ನು ಕೂಡಿಕೊಂಡ. ಪ್ರಕೃತಿ ಮಡಿಲಿನ ಅವನ ಮನೆಯಲ್ಲಿ ’ಅಪ್ಪಂ’ ನೀರುದೋಸೆ, ಕೊಟ್ಟೆ ಇಡ್ಲಿಗಳ ಜೊತೆ ಉಪ್ಪಿಟ್ಟೂ ಕೂಡ ನಮ್ಮ ಆಯ್ಕೆಗೆ ಸಿಕ್ಕಿತಾದರೂ ಕೇರಳದ ದೊಡ್ಡ ಬಾಳೆಹಣ್ಣು ಹೊಟ್ಟೆತುಂಬಿಸಿ ಕೈಕೊಟ್ಟಿತು. ನಂತರ ಅವನು ಊರು ಕೇರಿಗಳನ್ನು ಸುತ್ತಿಸುತ್ತಾ ಕೇರಳದ ಬಗ್ಗೆ ವಿವರಿಸುತ್ತಾ ಗುಡ್ಡದ ಮೇಲಿನ ದೇವಸ್ಥಾನ ತೋರಿಸಿದ, ದೇವಸ್ಥಾನದ ಆನೆ ತೋರಿಸಿದ. ಗುಡ್ಡದ ತುದಿಯೊಂದರ ಮೇಲೆ ನಿಂತು ದೊಡ್ಡ ತೆಂಗಿನ ತೋಟದಂತೆ ಕಾಣುವ ಕಲ್ಲಿಕೋಟೆಯನ್ನು ನೋಡಿದೆವು. ಸಮುದ್ರದ ಹಿನ್ನೀರು, ಅದರ ಆಚೆ ಈಚೆ ದಂಡೆಯಲ್ಲಿರುವ ಮನೆಗಳು , ಅವರ ಸಾರಿಗೆಯ ಸಣ್ಣ ಸಣ್ಣ ದೋಣಿಗಳು ಎಲ್ಲವನ್ನೂ ಆಶ್ಚರ್ಯದಿಂದ ನೋಡಿದೆವು. ಕ್ಯಾಮೆರಾ ಬ್ಯಾಟರಿ ಖಾಲಿಯಾಗುವ ತನಕ ಫೋಟೋಗಳನ್ನು ತೆಗೆದೆವು.


ನಂತರ ಅಲ್ಲಿಂದ ಸ್ವಲ್ಪ ದೂರದ ಸಮುದ್ರ ತೀರವೊಂದಕ್ಕೆ ಕರೆದೊಯ್ದು ಮಲಯಾಳಂ ನಲ್ಲಿ ಮಾತಾಡಿ ಮೀನುಗಾರನೊಬ್ಬನ ಸಣ್ಣ ಮೋಟಾರ್ ದೋಣಿಯನ್ನು ಡೀಲ್ ಮಾಡಿಸಿ ಅದರಲ್ಲಿ ನಾವು ಭೂಮಿ ಕಾಣದಷ್ಟು ದೂರ ಹೋಗಿ ಕೆಕರು ಮಕರಾಗಿ ಆಕಾಶ - ಸಮುದ್ರ ನೋಡುತ್ತಾ ಕುಳಿತಾಗಲೇ ನಮ್ಮ ಕೇರಳ ಭೇಟಿಯು ಸಾರ್ಥಕವಾದದ್ದು. !! ಸಣ್ಣವನಿದ್ದಾಗ ಓತಿಕ್ಯಾತ ಹಿಡಿಯುವ ಎಕ್ಸ್ ಪರ್ಟ್ ಅನಿಸಿಕೊಂಡಿದ್ದ ಪ್ರಶಾಂತ ನಮ್ಮೆದುರಿಗೇ ಒಂದು ಸಣ್ಣ ಕೋಲು ಮತ್ತು ದಾರದ ಸಹಾಯದಿಂದ ಕಲ್ಲುಗಳ ಸಂದಿಯಲ್ಲಿದ್ದ ಏಡಿಯೊಂದನ್ನು ಹಿಡಿದು ತನ್ನ ತಾರೆ ಜಮೀನ್ ಪರ್ ಟ್ಯಾಲೆಂಟ್ ತೋರಿಸಿದ್ದೂ ಆಯಿತು , ದಾರ ಬಿಚ್ಚಲಾಗದೇ ಆ ಏಡಿಗೆ ಹಿಂಸೆ ಕೊಟ್ಟು ಹಾಗೇ ಎಸೆದು ಉಗಿಸಿಕೊಂಡದ್ದೂ ಆಯಿತು. ;)


ನಮ್ಮ ನಂತರದ ಗುರಿಯಿದ್ದದ್ದು ವೈನಾಡು. ರತೀಶನಿಗೂ , ಕಲ್ಲಿಕೋಟೆಗೂ ಟಾಟಾ ಮಾಡಿ ವೈನಾಡಿನ ದಾರಿ ಹಿಡಿದೆವು. ಸುಂದರ ಪ್ರಕೃತಿಯಿಂದ ಕೂಡಿರುವ ವೈನಾಡು ಘಾಟನ್ನು ಸಂಪೂರ್ಣ ಅನುಭವಿಸಿದೆವು. ಮುಗಿಲೆತ್ತರದ ಹಸಿರು ತುಂಬಿದ ಬೆಟ್ಟಗಳನ್ನು, ಆಳದ ಕಣಿವೆಗಳನ್ನು ಹಾಯುತ್ತಾ ಘಾಟನ್ನು ದಾಟಿ ವೈನಾಡಿನ ಸರೋವರ, ಚಹಾದ ತೋಟ, ಜಲಪಾತಗಳನ್ನು ನೋಡಿ ಅಲ್ಲೇ ಸ್ನಾನ ಮಾಡಿ ಮೈಸೂರಿನ ಹಾದಿ ಹಿಡಿದಾಗ ರಾತ್ರಿ ಬಂಡೀಪುರ ಕಾಡಿನಲ್ಲಿ ರಸ್ತೆ ಪಕ್ಕದಲ್ಲೇ ನಿಂತು ಬೀಳ್ಕೊಟ್ಟಿದ್ದು ಆನೆಗಳ ಹಿಂಡು ಮತ್ತು ಸಾರಂಗದ ಜೋಡಿ !


ಎರಡು ದಿನದಿಂದ ಕರ್ನಾಟಕದ ಊಟ ಸಿಗದೇ ಬರಗೆಟ್ಟಿದ್ದ ನಾವು ಗುಂಡ್ಲುಪೇಟೆ ತಲುಪಿದೊಡನೇ ಉಡುಪಿ ಹೋಟೆಲೊಂದರಲ್ಲಿ ಸರಿಯಾಗಿ ತಿಂದೆವು. ಕೇರಳದಲ್ಲಿ ’ಎಲ್ಲದಕ್ಕೂ’ ದನದ ಮಾಂಸ ಹಾಕುತ್ತಾರೆ ಎಂಬ ಭಯದಿಂದ ೨ ದಿನದಿಂದ ಬರೀ ಫಲಾಹಾರ, ಜ್ಯೂಸ್ ಗಳಿಂದಲೇ ಬದುಕಿ ನಮಗಿಂತಲೂ ದೊಡ್ಡಬ್ರಾಹ್ಮಣನಂತಿದ್ದ ನಮ್ಮ ಡ್ರೈವರ್ ನೆಮ್ಮದಿಯಾಗಿ ತಿಂದದ್ದು ನೋಡಿ ನಮಗೂ ನೆಮ್ಮದಿಯಾಯಿತು ;).

ಗಮನಿಸಿದ ಕೆಲವು..... (ಕಲ್ಲಿಕೋಟೆಯ ಪ್ರದೇಶದಲ್ಲಿ)

೧. ಕೇರಳದ ಊರುಗಳು ನಮ್ಮಲ್ಲಿದ್ದಂತೆ ಒಂದೇ ಕಡೆ ಕೇಂದ್ರೀಕೃತಗೊಂಡಿಲ್ಲ. ಉದಾಹರಣೆಗೆ ನಮ್ಮಲ್ಲಿ ಬೆಂಗಳೂರು ಮುಗಿದ ಮೇಲೆ ನಂತರ ತುಮಕೂರು ಸಿಗುವವರೆಗೆ ಖಾಲಿ ಜಾಗವಿರುತ್ತದೆ. ಆದರೆ ಕೇರಳದಲ್ಲಿ ಆ ರೀತಿ ಧೀರ್ಘವಾದ ಖಾಲಿ ಜಾಗಗಳಿಲ್ಲ. ಮನೆಗಳು, ಅಂಗಡಿಗಳು, ಊರು ಎಲ್ಲವೂ ಎಲ್ಲ ಕಡೆಯೂ ಹರಡಿದಂತಿವೆ. ಇಡೀ ಕೇರಳವೇ ಒಂದು ವಿಸ್ತಾರವಾದ ಊರಿನಂತಿದೆ.
೨. ಭಾಷೆಯೊಂದು ಬೇರೆ ಎಂಬುದನ್ನು ಬಿಟ್ಟರೆ ಕೇರಳವೆಂಬುದು ನಮ್ಮ ಕರಾವಳಿ ಜಿಲ್ಲೆಯಲ್ಲಿನ ಹೊನ್ನಾವರ, ಕುಮಟಾ, ಉಡುಪಿ ಮುಂತಾದ ಊರುಗಳಂತೇ ಇದೆ. ಅಲ್ಲಿನ ಮಣ್ಣು, ಮರಗಿಡ, ವಾತಾವರಣ, ಮನೆಗಳು, ಕಟ್ಟಡ ಕಟ್ಟಲು ಬಳಸುವ ವಸ್ತುಗಳು ಎಲ್ಲವೂ ಹಾಗೆಯೆ. ಜನರೂ ಸಹ ನಮ್ಮ ಮಲೆನಾಡಿನ ಜನರಂತೆಯೆ ಸಹೃದಯರು. ಒಬ್ಬರಿಗೆ ಸಹಾಯ ಕೇಳಿದರೆ ೫ ಜನ ತಯಾರಾಗಿರುತ್ತಾರೆ !
೩. ಅಲ್ಲಿನ ಆಹಾರಗಳು, ಆಹಾರ ಪದ್ಧತಿಗೂ ನಮ್ಮ ಕರ್ನಾಟಕದ ಆಹಾರ ಪದ್ಧತಿಗೂ ಗಮನಾರ್ಹ ವ್ಯತ್ಯಾಸವಿದೆ. ಮಾಂಸದ ಬಳಕೆ ಹೆಚ್ಚು.

******************


ಊಹೂಂ .. ಆದರೂ ಯಾಕೋ ಸಮಾಧಾನವಾಗಿಲ್ಲ. ಸರಿಯಾಗಿ ನೋಡಲಾಗಲಿಲ್ಲ. ಈ ಸಲ ಅಲ್ಲಿನ ಜನರ ಜೊತೆ ಸರಿಯಾಗಿ ಬೆರೆಯಲಾಗಲಿಲ್ಲ. ಅಲ್ಲಿನ ಬಿಸಿಲು, ಸೆಕೆ ಆಸಕ್ತಿ ಕುಂದಿಸಿತು. ಸಮಯವೂ ಕಡಿಮೆಯಿತ್ತು. ಮತ್ತೆ ಹೋಗಬೇಕು. ಕೇರಳವನ್ನು ವಿವರವಾಗಿ ನೋಡಬೇಕು ಎನ್ನುವ ಆಸೆಯೊಂದಿಗೆ ಬೆಂಗಳೂರಿಗೆ ಮರಳಿದೆವು. ಕೇರಳದ ಹುಡುಗೀರು ಬಹಳ ’ಚೆನ್ನಾಗಿರುತ್ತಾರೆ’ ಎಂದು ಆಸೆ ಇಟ್ಟುಕೊಂಡು ಕಾಯುತ್ತಿದ್ದ ನಮ್ಮ ಹುಡುಗರ ದುರಾದೃಷ್ಟವೋ ಎಂಬಂತೆ ಒಂದೂ ಒಳ್ಳೆಯ ಮಲ್ಲು ಹುಡುಗಿ ಕಣ್ಣಿಗೆ ಬೀಳದೇ ಇದ್ದದ್ದೂ ಒಂದು ಕಾರಣವಿರಬಹುದು !!! ;-) ;-)

11 ಕಾಮೆಂಟ್‌ಗಳು:

Chandra Kengatte ಹೇಳಿದರು...

Hey Vikas,

Sakattaagi Bardiddiya... Good Explanation...

Mattomme Kerala nodida anubhava.. Keep it up My Boy...
Enjoy..

Mattomme Hogona.. Dont worry..Namma Hudugaru annodaralli arta illa.. Neene jaasti nodta iddiddu Mallu Hudugiyaranna ha ha ha...

Shankar Prasad ಹೇಳಿದರು...

ತುಂಬಾ ಚೆನ್ನಾಗಿದೆ ಗುರೂ.
ವರ್ಣನೆ ಚೆನ್ನಾಗಿ ಬಂದಿದೆ. ಕಣ್ಣಿಗೆ ಹಾಗೆ ಕಾಣುಸ್ತು..
ನಾನ್ ಕೂಡಾ ಕೆರಳಾಗೆ ಹೋಗಬೇಕು ಅಂತ ಸಖತ್ ಪ್ಲಾನ್ ಮಾಡಿದ್ರೂ ಹೋಗಕ್ಕೆ ಆಗ್ಲಿಲ್ಲ.
ನೋಡುವಾ.. ಇನ್ನು ಕೆಲವು ದಿನದಲ್ಲಿ ಹೋಗೋಣಾ ಅಂತಾ ಇದೀನಿ..

ಭಲೇ ವಿಕಾಸ... ಚೆನ್ನಾಗಿ ಬರೆದಿರುವೆ.. ಕೀಪ್ ಇಟ್ ಅಪ್
-----------------------------------
ಕಟ್ಟೆ ಶಂಕ್ರ

Sushrutha Dodderi ಹೇಳಿದರು...

cool. ನಾವ್ ಕೇರಳಾ ಹೋಗಿದ್ದನ್ನೂ ಬರಿಯಕ್ಕಾಗಿತ್ತು.. ಪುರ್ಶೊತ್ತಿಲ್ಲೆ.. :(

ಅನಾಮಧೇಯ ಹೇಳಿದರು...

Super mams....

namma kerala trip na explanation nodtha iddareee haage nin ellkondu bandu katte sangha dindaa shwall haak beku annustta ide.... :) he he heeee...


super agi bardiddiyaaa...
namma next trip aati shigradalle.....

Unknown ಹೇಳಿದರು...

Hi Vikas,

Photos super maga..

Seema S. Hegde ಹೇಳಿದರು...

ವಿಕಾಸ,
ಕೇರಳಕ್ಕೆ ಹೋಗಿಯೇ ಬಂದ ಹಾಗೆ ಆತು.
ಒಳ್ಳೆಯ ಪ್ರವಾಸ ಕಥನ, informative ಕೂಡ.

Supreeth.K.S ಹೇಳಿದರು...

ನಮಸ್ತೇ ವಿಕಾಸ್,
ಕೇರಳಕ್ಕೆ ನಾನೂ ಕೂಡ ತುಂಬಾ ಚಿಕ್ಕವನಿದ್ದಾಗ, ಬುದ್ಧಿ ತಿಳಿಯದ ವಯಸ್ಸಿನಲ್ಲಿ ಅಪ್ಪ ಅಮ್ಮನೊಟ್ಟಿಗೆ ಹೋಗಿದ್ದೆನಂತೆ!
ಕೇರಳದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದೀರಿ. ಟಿವಿ ಸಿನೆಮಾಗಳಲ್ಲಿ ನೋಡುವ ಕೇರಳದ ಆ ಪ್ರಾಕೃತಿಕ ಚೆಲುವು, ಮಲೆಯಾಳಿಗಳ ಚೆಲುವು(!), ಅವರ ಸಾಕ್ಷರತೆಯ ಪ್ರಮಾಣ, ಪಕ್ಕದಲ್ಲೇ ಮಂತ್ರ ಮಾಟದ ಆರ್ಭಟ, ನೀಲಿ ಚಿತ್ರಗಳ ಕಲರವ, ಕಮ್ಯುನಿಸ್ಟರ ಕಲಕಲ.. ಒಟ್ಟಿನಲ್ಲಿ ಕೇರಳ ಒಮ್ಮೆಯಾದರೂ ನೋಡಬೇಕಾದಂತಹ ಸ್ಥಳವೇ ಸರಿ.

http://uniquesupri.wordpress.com/

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿಕಾಸ್ ಅವರೆ...
ಡಾಲ್ಫಿನ್, ಆನೆ, ಅಪ್ಪಂ, ನೀರುದೋಸೆ, ಇವೆಲ್ಲವುಗಳ ಮಧ್ಯೆ ಕಾಣದಲೇ ಅವಿತುಕೊಂಡ ಮಲ್ಲು ಹುಡುಗಿಯರು...

ಒಳ್ಳೆಯ ಮಾಹಿತಿಯೊಂದಿಗಿನ ಚಂದನೆಯ ಬರಹ.

ಅನಾಮಧೇಯ ಹೇಳಿದರು...

chandru, shankar, sush, praveen, rateesh, thank you friends ;)

seemaka, nangE hogbandagajille ;)
thanx

supreeth, yes it is must visit region.

Shanthala, welcome to my blog. thank you. keep coming ;)

ಅನಿಕೇತನ ಹೇಳಿದರು...

ವಿಕಾಸ,
ಇದನ್ನು ಗಮನಿಸಿರವಲೋ:
1. ಬಿಳಿ ಲುಂಗಿ, ಬಿಳಿ ಶರ್ಟ ಹಾಕಿಕೊಂಡ ಗಂಡಸರು ಬಿಸಿಲಿನಲ್ಲೂ ಸಿಗರೇಟಿನ ದಮ್ಮು ಎಳೆಯುತ್ತಾ ನಿಂತಿರುವುದು.
2. ತಲೆಗೆ ಪೂರ್ತಿ ಎಣ್ಣೆ ಬಳಿದುಕೊಂಡ ಹೆಣ್ಣು ಜೀವಗಳು !

ಊರಿನಿಂದ ಊರಿಗೆ ಮಧ್ಯದಲ್ಲಿ ಖಾಲಿ ಜಾಗವೇ ಇಲ್ಲದ ಕಾರಣ ಇಡೀ ಕೇರಳವೇ ಒಂದು ವಿಸ್ತಾರವಾದ ಊರಿನಂತೆ ಕಾಣುವುದು ಸಹಜ.ಕೊಯಿಕೋಡ (ಸ್ಥಳೀಯರು ಹೇಳುವ ಶೈಲಿ) ಊರು ನಿಜಕ್ಕೂ ಚೆನ್ನಾಗಿದೆ. ಇನ್ನೊಮ್ಮೆ ಹೋದರೆ ಅಲ್ಲಿ ಬಸ್ಸ ಸ್ಟಾಂಡಿನ ಹತ್ತಿರವೆ "ದಕ್ಷಿಣ್" ಹೇಳೋ ಸಸ್ಯಹಾರಿ ರೆಸ್ಟೋರೆಂಟ ಒಳ್ಳೆ ಇದೆ. If you are going again to Kozikode, drop a mail to me :)

ವಿ.ರಾ.ಹೆ. ಹೇಳಿದರು...

ಅನಿಕೇತನರಿಗೆ ನಮಸ್ಕಾರ,

ಹ್ಹ ಹ್ಹ. ಎಣ್ಣೆ ಬಳಿದುಕೊಂಡ ಹೆಣ್ಣುಗಳು ಸಾಮಾನ್ಯ ದೃಶ್ಯ ಹೌದು ಬಿಡಿ. ಆದ್ರೆ ಆಶ್ಚರ್ಯ ಅಂದ್ರೆ ಮೊದಲಿಗೆ ಹೋದಾಗ ಒಂದರ್ಧ ದಿನ ದಮ್ಮು ಹೊಡೆಯೋರು ನಮಗೆ ಯಾರೂ ಕಾಣದೇ ನಾವು ಇಲ್ಲಿ ಯಾರೂ ದಮ್ಮು ಹೊಡೆಯೋದೆ ಇಲ್ವೇನೋ ಅಂತ ಕಂಗಾಲಾಗಿದ್ದುಂಟು.;)

ನಾವು ಕಲ್ಲಿಕೋಟೆ ಊರಿನಿಂದ ಆರು ಕಿ.ಮಿ ದೂರದಲ್ಲಿ (Faroke) ಉಳಿದುಕೊಂಡಿದ್ವಿ. ಅದಕ್ಕೆ ಸಸ್ಯಾಹಾರಕ್ಕೆ ಭಾರೀ ತೊಂದರೆಯಾದದ್ದು. ನಿಮ್ಮ ಮಾಹಿತಿಗೆ ಥ್ಯಾಂಕ್ಸ್, ಮುಂದಿನ್ಸಲ ಹೋಗೋವಾಗ ಹೇಳ್ತೀನಿ ಖಂಡಿತ. ಮೊದಲಿಗೆ ಹೋದಾಗ ನಾವು ಕೋಜಿಕೋಡ್ ಅಂತಿದ್ವಿ, ಅಲ್ಲಿರೋರೆಲ್ಲಾ ವಿಚಿತ್ರವಾಗಿ ನೋಡೋರು ಕೊನೆಗೆ ಅವ್ರ ಭಾಷೆಲ್ಲಿ 'ಕೋಯಿಕೋಡೆ' ಅಂತ ಗೊತ್ತಾಯ್ತು ;)