ಸೋಮವಾರ, ಜನವರಿ 7, 2008

ತಾರೆ ಜಮೀನ್ ಪರ್ ಎಂಬ 'must watch' ಸಿನೆಮಾ

तारे जमीन पर
ಭುವಿಯಲ್ಲಿನ ನಕ್ಷತ್ರಗಳು


ಸತ್ತು ಹೋದ ಪ್ರೇಮ ಕಥೆಗಳು, ಕಿತ್ತು ಹೋದ ಸಂಸಾರದ ಕಥೆಗಳು, ಬಾಲಿಶ ಹಾಸ್ಯ ಕಥೆಗಳು, ಅಪರಾಧ/ಹಿಂಸೆ ವಿಜೃಂಭಿತ ಕಥೆಗಳು, ಅನೈತಿಕ ಸಂಬಂಧಗಳ ಕಥೆಗಳು, NRI ಕಥೆಗಳು, ವಿವಾಹೇತರ ಸಂಬಂಧದ ಕಥೆಗಳು , ಅರೆಬೆತ್ತಲೆ ನೃತ್ಯ, ಅತಿಅತಿ ಗ್ಲಾಮರ್, ಸೆಕ್ಸು, ಅರ್ಧ ಇಂಗ್ಲೀಷ್ ತುಂಬಿದ ಸಂಭಾಷಣೆ, ಅಶ್ಲೀಲತೆ, ಬೊಗಳೆ ... ಇತ್ಯಾದಿಗಳಿಂದ ತುಂಬಿಹೋಗಿರುವ ಹಿಂದಿ ಚಿತ್ರರಂಗದಲ್ಲಿ ಒಂದು ಒಳ್ಳೆಯ ಚಿತ್ರ ಬಂದಿದೆ.

ಕೆಲ ವರುಷಗಳಿಂದ ಹಿಂದಿ ಚಿತ್ರರಂಗದ ಬಗ್ಗೆ ಬೇಸರ ಬಂದಿದ್ದ ನಾನು ಯಾರಿಗೂ ಯಾವ ಚಿತ್ರವನ್ನೂ ಸಲಹೆ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ "ತಾರೆ ಜಮೀನ್ ಪರ್" ಎಂಬ ಚಿತ್ರ ಮಾತ್ರ ಇದಕ್ಕೆಲ್ಲಾ ಅಪವಾದವಾಗಿದ್ದು ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ದಿನದಿಂದಲೇ ಆ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬರುತ್ತಿದ್ದವು. ಹಿಂದಿ ಚಿತ್ರ ರಂಗದಲ್ಲಿ ಅಮೀರ್ ಖಾನ್ ಎಂಬ ಹೆಸರಿನ ಮೇಲೆ ಒಳ್ಳೆಯ ಅಭಿಪ್ರಾಯ, ಭರವಸೆಗಳಿವೆ. ಅದಕ್ಕೆ ಕಾರಣ ಅವನ ಸರ್ಫರೋಷ್, ದಿಲ್ ಚಾಹ್ತಾ ಹೈ, ಲಗಾನ್, ಮಂಗಲ್ ಪಾಂಡೆ ಇನ್ನಿತರ ಉತ್ತಮ ಚಿತ್ರಗಳು. ಅದೇ ಧೈರ್ಯದಿಂದ ತಾರೆ...... ಚಿತ್ರಕ್ಕೆ ಹೋಗಿ ನೋಡಿದಾಗ ಅವನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಇದು ಇನ್ನೂ ಚೆನ್ನಾಗಿದ್ದುದು ಸಂತೋಷ ತಂದಿತು.



ತನ್ನ ಮೊದಲ ನಿರ್ದೇಶನದ ಈ ಚಿತ್ರದಲ್ಲಿ ಅಮಿರ್ ಖಾನ್ ಜಗತ್ತಿನ ಕಣ್ಣಿಗೆ ಅಸಹಜ ಎನ್ನಿಸುವ ಹುಡುಗನೊಬ್ಬನ ಕಥೆಯೊಂದನ್ನು ತೆಗೆದುಕೊಂಡು ಪ್ರತಿ ಮಗುವೂ ಕೂಡ ವಿಶೇಷವಾಗಿಯೇ ಇರುತ್ತದೆ ಎಂಬುದನ್ನು ತೋರಿಸಿದ್ದಾನೆ.
ಎಲ್ಲರಲ್ಲೂ ಅವರದ್ದೇ ಆದ ಪ್ರತಿಭೆಗಳಿದ್ದು ಅದಕ್ಕೆ ತಕ್ಕ ಪ್ರೋತ್ಸಾಹ ಸಿಗಬೇಕೆಂಬುದು ಇದರ ಉದ್ದೇಶ. ಇದರಲ್ಲಿ ಮಕ್ಕಳಿಗೆ ಖುಷಿ ಇದೆ, ಅಪ್ಪ ಅಮ್ಮರಿಗೆ ಬುದ್ದಿವಾದವಿದೆ, ಶಿಕ್ಷಕರಿಕೆ ತಿಳುವಳಿಕೆ ಇದೆ, ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠವಿದೆ. ಬರಿ ಗುಮಾಸ್ತರನ್ನು ತಯಾರು ಮಾಡುತ್ತಿರುವ, ಉದ್ಯೋಗಕ್ಕೆ ಮಾತ್ರವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳಿವೆ. ಮಕ್ಕಳ ಕುತೂಹಲಗಳಿಗೆಲ್ಲಾ ಉತ್ತರ ಸಿಗದಂತೆ ಮಾಡಿರುವ, ಪ್ರಕೃತಿಯಿಂದ ಅವರನ್ನು ದೂರ ಮಾಡಿ ಕೃತಕ ಜೀವನ ಶೈಲಿಯನ್ನು ಹೇರಿರುವ ಈ ಸಮಾಜ ವ್ಯವಸ್ಥೆಯ ಬಗ್ಗೆ ವಿಷಾದವಿದೆ. ಮಕ್ಕಳಲ್ಲಿನ ಪ್ರತಿಭೆಗೆ ತಕ್ಕನಾಗಿ ಆಸಕ್ತಿಗೆ ತಕ್ಕನಾಗಿ ಬದುಕು ರೂಪಿಸಿಕೊಳ್ಳಲು ಅವಕಾಶ ಸಿಗದಿರುವ, ಹಣಗಳಿಕೆಯ ಅನಿವಾರ್ಯತೆಯ ವಿಷಯವಿದೆ. ಆದರೆ ಎಲ್ಲಿಯೂ ಬೋಧನೆ ಮಾಡಲಾಗಿಲ್ಲ. ಒಂದು ಕ್ಷಣವೂ ಬೇಸರವೆನಿಸದಂತೆ ನಿರೂಪಣೆ ಮಾಡಲಾಗಿದೆ. ಅರ್ಥಗರ್ಭಿತ ಹಾಡುಗಳಿವೆ. ಆ ಚಿತ್ರದಲ್ಲಿನ ಹುಡುಗ ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದಂತೆಯೇ ಅನ್ನಿಸುತ್ತಾನೆ. ಶಾಲೆಯಲ್ಲಿದ್ದಾಗ ನಮ್ಮ ತರಗತಿಯಲ್ಲೂ ಅದೇ ತರಹದ ಮಕ್ಕಳಿದ್ದಿದ್ದು ನೆನಪಾಗುತ್ತದೆ. ಅವರ ಪ್ರತಿಭೆಗೆ ತಕ್ಕನಾದ ಪ್ರೋತ್ಸಾಹ, ಅವಕಾಶ ಸಿಗದೆ ದುಸ್ಥಿತಿಯಲ್ಲಿರುವುದನ್ನು ಕಂಡು ಮನ ಮರುಗುತ್ತದೆ. ಬಾಲಕನ ಅದ್ಭುತಾಭಿನಯ ಬಲು ಮೆಚ್ಚುಗೆಯಾಗುತ್ತದೆ. ಜೊತೆಗೆ ಮನಸ್ಸಿನ ತುಂಬ ವಿಷಾದ ವಿಷಾದ :(

ಕನ್ನಡದಲ್ಲಿಯೂ ಹಿಂದೆ ಸುರೇಶ್ ಹೆಬ್ಳೀಕರ್ ಅಂತವರಿಂದ ’ಚುಕ್ಕಿ ಚಂದ್ರಮ’ ಇತ್ಯಾದಿ ಚಿತ್ರಗಳು ಇದೇ ನಿಟ್ಟಿನಲ್ಲಿ ಬಂದಿದ್ದರೂ ಕೂಡ ಅವು ಸ್ಟಾರ್ ಗಳ, ಪ್ರಚಾರದ ಕೊರತೆಯಿಂದ ಬರೀ ಡಾಕ್ಯುಮೆಂಟರಿಗಳಾಗಿ,’ಕ್ಲಾಸ್ ಫಿಲಂ’ ಗಳಾಗೇ ಉಳಿದುಬಿಟ್ಟಿದ್ದವು. ’ಲಗಾನ್’ ನಂತರ ಬಹಳ ದಿನಗಳ ಮೇಲೆ ನಾನು ನನ್ನ ಅಪ್ಪ ಅಮ್ಮರಿಗೂ Taare zameen par ಚಿತ್ರವನ್ನು ಸಲಹೆ ಮಾಡಿದ್ದೇನೆ. ನಿನ್ನೆ ಭಾನುವಾರ ಯಾವುದೋ ಪತ್ರಿಕೆಯೊಂದು ಚಿತ್ರ ವಿಮರ್ಶೆಯಲ್ಲಿ ಇದೊಂದು ಉತ್ತಮ ಮಕ್ಕಳ ಚಿತ್ರವೆಂದು ಬರೆದಿತ್ತು. ಆದರೆ ಇದು ಖಂಡಿತ ಮಕ್ಕಳ ಚಿತ್ರವಲ್ಲ, ಇದು ’ಎಲ್ಲರ ’ ಚಿತ್ರ. ಟಾಕೀಸೋ, ಸೀಡಿನೋ , ಡೀವೀಡಿನೋ, ಇಂಟರ್ನೆಟ್ಟೋ ಯಾವುದ್ರಲ್ಲೋ ಒಂದರಲ್ಲಿ ತಪ್ಪದೇ ನೋಡಿ. ಮಧ್ಯದಲ್ಲಿ ಸುಮಾರು ಬಾರಿ ಮನಸ್ಸನ್ನು ತಟ್ಟಿದ ಕುರುಹಾಗಿ ಕಣ್ಣಂಚಿನಿಂದ ಸಣ್ಣದೊಂದು ನೀರಹನಿ ಜಾರದಿದ್ದರೆ ಕೇಳಿ.

*********
ನಾನು ಭಾರತ ಚಿತ್ರರಂಗದಲ್ಲಿ ಬಹುವಾಗಿ ಮೆಚ್ಚುವುದು 'ಜೀವಂತ ದಂತಕಥೆ' ಎನಿಸಿಕೊಂಡಿರುವ "ಕಮಲ್ ಹಾಸನ್”. ಅವನ ನಂತರ ಯಾಕೋ ಅಮೀರ್ ಖಾನ್ ಇಷ್ಟವಾಗತೊಡಗಿದ್ದಾನೆ ;)

20 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಈಗಾಗಲೇ ಮೂರು ಬಾರಿ ನೋಡಿದ್ದಾಗಿದೆ... ಮತ್ತೆ ನೋಡುವುದಾದರೆ ನನ್ನದೇನೂ ತಕರಾರಿಲ್ಲ ;)

Sushrutha Dodderi ಹೇಳಿದರು...

ನಾನೂ ಮೊನ್ನೆ ಭಾನುವಾರ ಹೋಗಿ ನೋಡಿಬಂದೆ. ನಾನು ನೋಡಿದ ಟಾಪ್ ಟೆನ್ ಸಿನಿಮಾಗಳಲ್ಲಿ ಒಂದು 'ತಾರೆ ಜಮೀನ್ ಪರ್'. ಹ್ಯಾಟ್ಸ್ ಆಫ್ ಟು ಅಮೀರ್ ಖಾನ್!

ಅನಾಮಧೇಯ ಹೇಳಿದರು...

ವಿಕಾಸ,
ಬಾಳ ಚಂದ ಬರದೀರಿ..ನಾ ಇನ್ನೂ ಈ ಚಿತ್ರ ನೋಡಿಲ್ಲಾ..ನಕ್ಕೀ ನೋಡತೀನ್ರಿ..ಅದರ ಜೊತೆಗೆ ಕಾಕಿರಲ್ಲ..ಆ ಕಡ್ಡಿಚಿತ್ರ ಅದು ನಿಮ್ಮ ಬರಹಕ್ಕ ಪೂರಕ ಐತ್ರಿ..
ಒಳ್ಳೆಯದು ಹಿಂಗ ಬರೀತಾಯಿರಿ..
ನಿಮ್ಮ,
ಗಿರೀಶ ರಾಜನಾಳ.

Shankar Prasad ಹೇಳಿದರು...

ವಿಶ್ಲೇಷಣೆ ಚೆನ್ನಾಗಿ ಕೊಟ್ಟಿರುವೆ ವಿಕಾಸ್.
ನಾನು ಈ ಬಾರಿಯಾ ನ್ಯೂ ಇಯರ್ ಆಚರಿಸಿದ್ದು ಈ ಚಿತ್ರವನ್ನು ಮನೆಯಲ್ಲಿ ನೋಡಿ.
ಚಿತ್ರ ಬಹಳ ಇಷ್ಟ ಆಯ್ತು, ಜೊತೆಗೆ ನಿನ್ನ ಬರವಣಿಗೆಯಲ್ಲಿ ಈ ಚಿತ್ರವನ್ನು ಮತ್ತೆ ಕಂಡ ಹಾಗೆ ಆಯ್ತು.
ಇದು ಮಕ್ಕಳ ಚಿತ್ರ ಖಂಡಿತಾ ಅಲ್ಲ... ಚಿಣ್ಣರ ಮೇಲೆ ಎಲ್ಲೂ ಇಲ್ಲದ ಪ್ರೆಶರ್ ಹಾಕಿ, ಅವರ ನ್ಯಾಚುರಲ್ TALENT ಅನ್ನು ಹಾಳುಮಾಡುವ ತಂದೆ ತಾಯಂದಿರಿಗೆ ಇದು ಎಚ್ಚರಿಕೆಯ ಘಂಟೆ.
ಯಾರು ಮಿಸ್ ಮಾದಬಾರದಂಥಾ ಚಿತ್ರವಿದು.

ನಿಮ್ಮವನು,
ಕಟ್ಟೆ ಶಂಕ್ರ

Unknown ಹೇಳಿದರು...

Good Maga, Chennagi Bardiddiya..
Bahala dinagalaada mele Hindi nalli olle chitra nodida anubhava, haage yenanno kalita anubhava.
Makkalu heege aagabeku.. anno appa amma na hata, Munde bere field nalli bhavishya illveno yendu
bari Enginner Dr maadbeku anno hambala.. idelladdakinta innu yeno ide..Makkalannu sookshma vaagi gamanisi
protsaahisi yendu chennagi torisikottiruva chitra..

Hats off to Aamir Khan and to that Small kid really acted very well...

ಅನಾಮಧೇಯ ಹೇಳಿದರು...

ಹರೀಶ, ನಾನಂತೂ ಡಿವಿಡಿ ತಂದು ನನ್ನ ಸಂಗ್ರಹಕ್ಕೆ ಸೇರ್ಸೋತೀನಿ ;)

ಸುಶ್ರುತ, ಶಂಕ್ರಣ್ಣ, ಚಂದ್ರು ಗುಡ್ ;)

ಗಿರೀಶ್, ಮಿಸ್ ಮಾಡ್ಕೋಬೇಡ್ರಿ, ಲಗೂನ್ ಹೋಗ್ ನೋಡ್ರಿ. thanx

Seema S. Hegde ಹೇಳಿದರು...

ವಿಕಾಸ,
ಚೊಲೊ ಇದ್ದು ಹೇಳಿ ಎಲ್ಲರೂ ಹೇಳದು ಕೇಳಿದಿದ್ದಿ. DVD
ಸಿಕ್ಕಿತ್ತಿಲ್ಲೆ, ನಿನ್ನೆ ನೋಡಿ ಅನುಭವಿಸಿದಿ.
Movie ನೂ ಇಷ್ಟ ಆತು, ನೀನು ಬರೆದಿದ್ದೂ ಇಷ್ಟ ಆತು.
Movie ನೋಡಿದ ಮೇಲೆ ನೀನು ಬರೆದಿದ್ದನ್ನು ಇನ್ನೊಮ್ಮೆ ಒದ್ಜಿ; ಆಗ ಇನ್ನೊ ಹೆಚ್ಚು ಇಷ್ಟ ಆತು.

ಸುಧನ್ವಾ ದೇರಾಜೆ. ಹೇಳಿದರು...

ಈ ತಾಣದಲ್ಲಿ ಕೆಲ ಹೊತ್ತು ಸುಖವಾಗಿ ಕಳೆದಿದ್ದೇನೆ. ಥ್ಯಾಂಕ್ಸ್.
ಹೌದು, ಸಿನಿಮಾ ಮಧುರವಾಗಿದೆ.

Supreeth.K.S ಹೇಳಿದರು...

ನಾನೂ ಆ ಸಿನೆಮಾ ನೋಡಿದೆ. ನಟ ಅಮೀರ್ ಖಾನ್ ರನ್ನು ಮೀರಿಸುವಂತಿದ್ದಾನೆ ನಿರ್ದೇಶಕ ಅಮೀರ್ ಖಾನ್. ಒಳ್ಳೆಯ ಸಂದೇಶವನ್ನು ಹೊತ್ತ ಕಮರ್ಶಿಯಲ್ ಸಿನೆಮಾ.

ಚಿತ್ರದ ಬಹುತೇಕ ಸಂದರ್ಭಗಳಲ್ಲಿ ನನ್ನ ಬಾಲ್ಯದಲ್ಲಿ ನಾನು ನನ್ನದೇ ತರಗತಿಯ ಹಲವಾರು ಮಂದ ಓದಿನ ವಿದ್ಯಾರ್ಥಿಗಳೊಂದಿಗೆ ವರ್ತಿಸುತ್ತಿದ್ದದ್ದು ನೆನಪಾಯಿತು. ತುಂಬಾ ಪಿಚ್ಚೆನಿಸಿತು. ಈ ವ್ಯವಸ್ಥೆ ನಮ್ಮನ್ನೆಲ್ಲಾ ಪ್ರತಿಸ್ಪರ್ಧಿಗಳನ್ನಾಗಿಸಿ ಬಿಡುತ್ತದಲ್ಲಾ ಅದಕ್ಕಿಂತ ಬೇರೆ ದುರಂತ ಇದೆಯಾ? ಬಹಳ ಸಂದರ್ಭಗಳಲ್ಲಿ ವ್ಯವಸ್ಥೆ ನಮ್ಮನ್ನು ಪುರಸ್ಕರಿಸಿ ಸತ್ಕರಿಸುವಾಗ ನಮಗೆ ಅದರ ಹುಳುಕುಗಳು ಕಾಣುವುದಿಲ್ಲ ಮೆರೆದುಬಿಡುತ್ತೇವೆ, ಕೆಳಗೆ ಬಿದ್ದಾಗ ಸೋತಾಗ, ನೆಪಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತೇವೆ.

ತೇಜಸ್ವಿನಿ ಹೆಗಡೆ ಹೇಳಿದರು...

ನಾನು ಈ ಚಿತ್ರವನ್ನು ಈ ವರೆಗೆ ನೋಡಿಲ್ಲ. ಆದರೆ ತಮ್ಮ ಅನಿಸಿಕೆಯ ನಂತರ ನೋಡಬೇಕೆಂದಿರುವೆ.

ಅನಾಮಧೇಯ ಹೇಳಿದರು...

ಸೀಮಕ್ಕ, ಕಣ್ಣಲ್ಲಿ ನೀರು ಬಂತಾ? ;-)

ಸುಧನ್ವಾ, ಸ್ವಾಗತ. ಮೆಚ್ಚಿಕೊಂಡಿದ್ದಕ್ಕೆ ನಿಮಗೂ ಧನ್ಯವಾದಗಳು. ಬರುತ್ತಿರಿ.

ಹೌದು ಸುಪ್ರೀತ್, ನೀವು ಹೇಳಿದ್ದು ಸರಿಯೆನಿಸುತ್ತಿದೆ.

ತೇಜಸ್ವಿನಿಯವರೇ, ಖಂಡಿತ ನೋಡಿ.

jomon varghese ಹೇಳಿದರು...

ನಮಸ್ಕಾರ.

ಮೊದಲ ಬಾರಿ ನಿಮ್ಮ ಬ್ಲಾಗಿಗೆ ಭೇಟಿ ಕೊಡ್ತಾ ಇದೀನಿ.ನಿಮ್ಮ ವಾದ ಫೆಂಟಾಸ್ಟಿಕ್.

"ಅಮೀರ್ ಖಾನ್ ಇದಾನಲ್ಲ, ಆತ ನಿಜವಾದ Film Maker"ತಾರೆ ಜಮೀನ್ ಪರ್ ನೋಡಿ ಅಂತ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಅವರು ಮೊನ್ನೆ ಭೇಟಿಯಾದಾಗ ಹೇಳುತ್ತಿದ್ದರು. ಬೇರೊಬ್ಬರು ಹೇಳಿದ್ದರೆ ಇದರಲ್ಲೇನೂ ವಿಶೇಷ ಇರುತ್ತಿರಲಿಲ್ಲ. ಆದರೆ ಕೃಪಾಕರ್ ಮತ್ತು ಸೇನಾನಿ ಜೋಡಿ ಜಗತ್ತಿನ ಅತ್ಯುತ್ತಮ ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದವರು.ಚಿತ್ರಕ್ಕೂ ಚಿತ್ರನಿರ್ಮಾಣಕ್ಕೂ ನಡುವಿನ ವ್ಯತ್ಯಾಸ ತಿಳಿದವರು.

ಭುವಿಯಲ್ಲಿನ ನಕ್ಷತ್ರಗಳು ಬಲು ಸೊಗಸಾದ ಅನುವಾದ. ಹ್ಯಾಟ್ಸ್ ಆಫ್ ಟು ಯು.

ಧನ್ಯವಾದಗಳು.
ಜೋಮನ್.

ವಿ.ರಾ.ಹೆ. ಹೇಳಿದರು...

ಜೋಮನ್ ಅವ್ರೇ ಬ್ಲಾಗ್ ಗೆ ಸ್ವಾಗತ, ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ. ಹೌದು, ಆ film making ಪ್ರತಿಭೆಯಿಂದಲೇ ಅಮಿರ್ ಖಾನ್ ನಿಂದ ಇಷ್ಟು ಒಳ್ಳೆಯ ಚಿತ್ರ ಕೊಡಲು ಸಾಧ್ಯವಾಗಿದೆ. ನಾನೀಗ ನಿಮ್ಮ ’ಮಳೆಹನಿ’ಯಲ್ಲಿ ತೋಯ್ತಾ ಇದ್ದೇನೆ. ;)

ಬರುತ್ತಾ ಇರಿ.

Lakshmi Shashidhar Chaitanya ಹೇಳಿದರು...

ಮಧ್ಯದಲ್ಲಿ ಸುಮಾರು ಬಾರಿ ಮನಸ್ಸನ್ನು ತಟ್ಟಿದ ಕುರುಹಾಗಿ ಕಣ್ಣಂಚಿನಿಂದ ಸಣ್ಣದೊಂದು ನೀರಹನಿ ಜಾರದಿದ್ದರೆ ಕೇಳಿ.

ಸಣ್ಣದೊಂದು ಹನಿಯಲ್ಲ...ಪ್ರವಾಹ...ಪ್ರವಾಹವಾಯಿತು !!ಮೊದಲಿಂದಲೂ ನಾನು ಆಮಿರ್ ಅಭಿಮಾನಿ. ಅವರ ಈವರೆಗಿನ ಎಲ್ಲ ಚಿತ್ರಗಳಲ್ಲಿ ನನ್ನ ಟಾಪ್ ಟೂ - ದಿಲ್ ಚಾಹ್ತಾ ಹೈ, ತಾರೇ ಜಮೀನ್ ಪರ್ !!ನಿಮ್ಮ ವಿಶ್ಲೇಷಣೆಯ ಶೈಲಿ ಅದ್ಭುತ !

ಅನಾಮಧೇಯ ಹೇಳಿದರು...

ನಮಸ್ತೇ ವಿಕಾಸ್
ಒಟ್ಟಾರೆ ನಿಮ್ಮ ಬ್ಲಾಗ್ ಸೊಗಸಾಗಿದೆ. ಖುಶಿ ಕೊಟ್ಟಿತು.
ತಾರೇ ಜಮಿನ್ ಪರ್ ನೋಡಿ ವಾರ ಕಳೆದರೂ ಕಾಡುವಿಕೆ ನಿಂತಿಲ್ಲ.
ಲೇಖನಕ್ಕೆ ಧನ್ಯವಾದ
- ಚೇತನಾ ತೀರ್ಥಹಳ್ಳಿ

ಅನಾಮಧೇಯ ಹೇಳಿದರು...

ಲಕ್ಷ್ಮಿಯವರೆ, ನಮ್ಗೂ ಒಳಗೆ ಪ್ರವಾಹ ಉಕ್ಕಿ ಹೊರಗೆ ಬಂದಿದ್ದು ಹನಿಗಳು ಮಾತ್ರ. ಎಷ್ಟಂದ್ರೂ ಗಂಡು ಜೀವ ನೋಡಿ ;).ಮೆಚ್ಚುಗೆಗೆ ಥ್ಯಾಂಕ್ಸ್. ಬರುತ್ತಿರಿ.


ಚೇತನಾ ಅವರೇ, ಆ ಕಾಡುವಿಕೆಯಲ್ಲೇ ಚಿತ್ರವೊಂದರ ಸಾರ್ಥಕತೆ ಅಡಗಿದೆ ಅನಿಸುತ್ತದೆ. ಬ್ಲಾಗ್ ಮೆಚ್ಚಿಕೊಂಡಿದ್ದಕ್ಕೆ ಬಹಳ ಥ್ಯಾಂಕ್ಸ್. ಖುಷಿಯಾಯಿತು. ಬರುತ್ತಿರಿ.

ಶ್ರೀ ಹೇಳಿದರು...

ವಿಕಾಸ್,

ನಿಜವಾಗ್ಲು ರೀ. ಈದು ಉತ್ತಮ ಚಿತ್ರ. ಚಿತ್ರದಲ್ಲಿಯೇ ಹೇಳಿರುವಂತೆ ಎಲ್ಲಾ ತಂದೆ-ತಾಯಿಗಳಿಗೂ ತಮ್ಮ ಮಕ್ಕಳು ತರಗತಿಯಲ್ಲಿ ಮೊದಲು ಬರಬೇಕೆಂಬುದೇ ಉದ್ದೇಶ. ಆದರೆ ತಮ್ಮ ಮಕ್ಕಳಿಗೆ ಅದಕ್ಕೆ ಬೇಕಾದ ಬುದ್ಧಿಮತ್ತೆ ಇದೆಯೆ ಅನ್ನೋಯೊಚನೆ ಮಾಡಕ್ಕೆ ಆಗಲ್ಲ - ಇಲ್ಲಿ ಆ ತಂದೆ-ತಾಯಿಗಳಿಗೆ ಬುದ್ಧಿ ಇದೆಯೇ ಅಂತ ಅನುಮಾನಬಾಗುತ್ತೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರಮಾಣದಲ್ಲಿ ಬುದ್ಧಿ ಇರ್ರುತ್ತೆ. ಅದನ್ನ ಗುರುತಿಸಿ ಹಿಚ್ಚಿಸಲು ಸಾಧ್ಯವೇ ಎಂದು ಪ್ರಯತ್ನಿಸಬೇಕೇ ವಿನಃ ಮೊದಲು ಯಾಕೆ ಬರಲಿಲ್ಲ ಅಂತ ಮಕ್ಕಳಿಗೆ ಥಳಿಸುವುದರಲ್ಲಿ ಯಾವ ದೊಡ್ಡತನವಿದೆ ಹೇಳಿ. ಈ ಚಿತ್ರದಲ್ಲೂ ಇದನ್ನೇ ಹೇಳಿರುವುದು.

ನೀವು ಕನ್ನಡದ ಒಂದು ಚಿತ್ರವನ್ನು ಇಲ್ಲಿ ಮರೆತಿದ್ದೀರಿ ಚುಕ್ಕಿ ಚಂದ್ರಮದ ಜೊತೆಗೆ - ಪ್ರಥಮ ಆಶಾಕಿರಣ, ನಮ್ಮ ಅಶೋಕ್ ಪೈ ಅವರದು. ಇದರಲ್ಲಿ ಮಕ್ಕಳ ಬಗ್ಗೆ ತುಂಬಾ ಹೇಳಿದ್ದಾರೆ - ಮನೋಶಾಸ್ತ್ರದ ಜೊತೆಗೆ. As usual, this film was a flop!! ಆದ್ರೆ ಆಮಿರ್ ತುಂಬ ಚೆನ್ನಾಗಿ ತಿಳಿಸಿದ್ದಾರೆ.

ಮೋಸಮಾಡದೆ ಇದಕ್ಕೆ ಸಿಗಬೇಕಾದ ಬಹುಮಾನಗಳು ಸಿಗಲಿ. ಇನ್ನೂ ಇಂಥಹ ಉತ್ತಮ ಚಿತ್ರಗಳು ಬರಲಿ.

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್ ಅವರೆ.. ತಾರೆ ಜಮೀನ್ ಪರ್ ನೋಡಿದೆ, ಅದನ್ನು ನನ್ನ ಡಿ.ವಿ.ಡಿ Collection ಗೆ ಸೇರಿಸಿರುವೆ. ಅತ್ಯುತ್ತಮ ಚಿತ್ರ. ಚಿತ್ರ ನೋಡುವಾಗ ನಾನು ನೋಡಿದ, ನೋಡುತ್ತಿರುವ ಹುಡುಗಿಯ ಕಥೆ ನೆನಪಾಗುತ್ತಿದೆ. ವ್ಯತ್ಯಾಸವೆಂದರೆ ಆ ಹುಡುಗಿಯ ಪಾಲಿಗೆ ಅವಳನ್ನು ಹೆತ್ತವರೇ "ತಾರೇ ಜಮೀನ ಪರ್"

ಅನಾಮಧೇಯ ಹೇಳಿದರು...

ಹೌದು ಶ್ರೀಧರ್.ಇಂತ ಚಿತ್ರಗಳು ಇನ್ನಷ್ಟು ಒಳ್ಳೊಳ್ಳೆಯ ಚಿತ್ರಗಳಿಗೆ ಸ್ಪೂರ್ತಿಯಾದರೆ ಒಳ್ಳೆಯದು.thanQ

ಹ್ಮ್... ಹೌದು ತೇಜಸ್ವಿನಿಯವರೆ, ಇನ್ನೂ ಹೀಗೆ ಅನೇಕ ರೀತಿಯ ತಾರೆಗಳಿವೆ ನಮ್ಮ ಜಮೀನ್ ಪರ್ :( thanQ

Vishwesh Bhat ಹೇಳಿದರು...

Perfect comment :) Even I felt the same. Naanu DVD thandu nodiddini .... full feel aagoythu ...... Nan DVD collection ge add agiro ondu beautiful cinema. Almost watching daily .. :) Totally impressed. Title song kelthaane irthini ....