ಗುರುವಾರ, ಜೂನ್ 25, 2009

ನನಗಂತೂ ಅನಿಸಿದೆ !

ನಿನಗೆ ಅನ್ನಿಸಿದೆಯೋ ಗೊತ್ತಿಲ್ಲ. ನನಗಂತೂ ಅನಿಸಿದೆ. ಉಹುಂ, ಬಿಡುವಿದ್ದಾಗ ಪ್ರೀತಿಸುವುದು ಪ್ರೀತಿಯಲ್ಲ. ಹೋಗಲಿ ಇಲ್ಲಿ ಪ್ರೀತಿ ವಿಷಯ ಬೇಡ. ಬಿಡುವಿದ್ದಾಗ ಮಾತ್ರ ಇರುವುದು ಸ್ನೇಹವಲ್ಲ. ಗೆಳೆತನದಲ್ಲಿ ಬಂದಾಗ ಭರಿಸಿಕೋ ಎನ್ನುವುದು ತರವಲ್ಲ. ನದಿಯು ಸಮುದ್ರವನ್ನು ಸೇರುವಲ್ಲಿನ ಮೇಲ್ಮೈ ಪ್ರಶಾಂತತೆಯನ್ನು ನೀನು ನಿರ್ಲಿಪ್ತತೆ ಎನ್ನುವುದಾದರೆ ನಿನಗೆ ಒಳಗಿನ ಚಕ್ರಸುಳಿಗಳ ಅರಿವಿಲ್ಲ. ಆಚೆಯ ದಡದ ಭೋರ್ಗರೆಯುತ್ತಿರುವ ಅಲೆಗಳು ಕಾಣುತ್ತಿಲ್ಲ. ಏಕೆಂದರೆ ಈ ದಡದಲ್ಲೇ ಮಲಗಿಬಿಟ್ಟೆ ನೀನು. ಎಚ್ಚರಗೊಳಿಸುವ ಗೋಜಿಗೆ ಸಮಯ ಕಳೆದುಹೋದಾಗ ಅದು ಸಾಯುವ ಸ್ಥಿತಿ ತಲುಪಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿದುದ್ದನ್ನು ನದಿ ಎಂದುಕೊಂಡೆನೋ ಎಂದು ಬೇಸರವಾಗುತ್ತಿದೆ. ಬೇಸಿಗೆ ಸೃಷ್ಟಿಸಿದ ಬರದ ಗಾಳಿಗೆ ಹರಿವಿನ ಪಾತ್ರವೂ ಮುಚ್ಚಿಹೋಗುತ್ತಿದೆ. ಸಂಬಂಧಗಳು ಅಸಡ್ಡೆ, ನಿರ್ಲಕ್ಷದ ಹೊರತಾಗಿ ಕೆಲವೇ ಕೆಲವು ಸಣ್ಣ ಸೂಚನೆಯನ್ನಾದರೂ ಉಳಿಸುತ್ತವೆ. ಮತ್ತೆ ಮಳೆ ಹನಿಯುವುದಾ ನದಿ ತುಂಬಿ ಹರಿಯುವುದಾ ಪ್ರಶ್ನೆ ಕೇಳಿಕೊಳ್ಳಲೂ ಮನಸಾಗುತ್ತಿಲ್ಲ. ಮೋಡ ಕಟ್ಟುವ ಸುಳಿವೇ ಇಲ್ಲ. ಹನಿ ಹನಿಗೂ ಗೋಗರೆಯುವದರಲ್ಲಿ ಅರ್ಥವಿಲ್ಲ. ಪರಸ್ಪರ ತತ್ವಕ್ಕೆ ಬೆಲೆಯಿಲ್ಲದ ಕಡೆ ಬೆಲೆ ಕೊಟ್ಟು ಕೊಟ್ಟು ಈಗಿನ ಆಬದಿಯ ನಿರಾಳತೆ ಕಂಡು ದಂಗಾಗಿದ್ದೇನೆ. ಗುದ್ದಿದ್ದು ಸಮಾಧಾನವಾಗಿಲ್ಲ, ಆದರೆ ಬೆನ್ನು ತಿರುಗಿಸಿ ಹೋದ ಬೆನ್ನಿನ ಹಿಂದೆ ಬಿದ್ದು ಅಭ್ಯಾಸವಿಲ್ಲ. ಬಲವಂತದ ಬಳ್ಳಿಯಾಗಿ ಸುತ್ತಿಕೊಂಡಿದ್ದ ವಿಷಾದ ಭಾವ. ಎಲ್ಲವನ್ನೂ ನಿರ್ಧರಿಸಿ ಆಗಿರುವಾಗ ಮತ್ತೇನು ಹೇಳುವುದು ಫಲವಿಲ್ಲ ಎಂದು ನುಣುಚಿಕೊಂಡೆಯಾ? ಕೆಲವೊಂದು ಸಂದರ್ಭಗಳಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದೇ ಒಳ್ಳೆಯ ನಿರ್ಧಾರವೆನ್ನುತ್ತಾರೆ. ಅದೇ ರೀತಿ ನಾನೂ ಕೂಡ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ ಈಗ ಏನಾದರೊಂದು ನಿರ್ಧರಿಸಿಬಿಡಬೇಕು ಎಂಬ ನಿರ್ಧಾರಕ್ಕೆ ಬರೋಣವೆನಿಸುತ್ತಿದೆ. ನೀ ಕೊಟ್ಟ ಎರಡು ರೂಪಾಯಿ ನಾಣ್ಯ ಪರ್ಸಿನ ಒಳಖಾನೆಯಲ್ಲಿ ಹಾಗೇ ಇದೆ. ಅದಕ್ಕೆ ಇನ್ನೆರಡೂವರೆ ರೂಪಾಯಿ ಸೇರಿಸಿದರೆ ಅದು ನನ್ನೆದೆಯ ದಹಿಸಿ, ಭಾರ ಇಳಿಸಿ, ಬೂದಿಯಾಗುತ್ತದೆ. ನಾ ಅಂತವನೇನಲ್ಲ!

16 ಕಾಮೆಂಟ್‌ಗಳು:

ಬಾಲು ಹೇಳಿದರು...

ಮಾರಾಯ ಏನಾಯ್ತು ನಿಂಗೆ? ಹೆವಿ ಪತ್ರ ಬರೆದಿದ್ದೀಯ?

ಒಟ್ಟಾರೆ ಬೆನ್ನು ತಿರುಗಿಸಿ ಹೋದವಳು, ಮುಂಗಾರಿನ ಮಳೆ ಅಂತೆ ಬರಲಿ.
ಕೊನೆ ಸಾಲುಗಳು ತುಂಬ ಚೆನ್ನಾಗಿದೆ. ಬೆನ್ನು ತಿರುಗಿಸಿದಕ್ಕು, ೪.೫೦ ಇರೋದಕ್ಕೂ ITC ಗೆ ಒಂದು ಥ್ಯಾಂಕ್ಸ್ ಇರಲಿ.

ತುಂಬ ಚೆನ್ನಾಗಿದೆ ಮಾರಾಯ.

Unknown ಹೇಳಿದರು...

tu0baa ogaTaagi maataaDuttiddIri . arthavaaguttilla. adhyaatmada guru aagalikke horaTa haage ide. :-) :-) nIve hELi.

Shankar Prasad ಶಂಕರ ಪ್ರಸಾದ ಹೇಳಿದರು...

ನಾಲ್ಕೂವರೆ ರುಪಾಯಿ ಕೊಟ್ಟು ಒಂದು ದಂ ಹೊಡಿಯೋದನ್ನ ಎಷ್ಟು ಕಲಾತ್ಮಕವಾಗಿ ಹೇಳಿದೀಯ ಸಿವಾ..
ನೈಸ್...

ಕಟ್ಟೆ ಶಂಕ್ರ

PARAANJAPE K.N. ಹೇಳಿದರು...

ಕಾವ್ಯಮಯ ಬರಹ, ಚೆನ್ನಾಗಿದೆ.

ಧರಿತ್ರಿ ಹೇಳಿದರು...

ಏನ್ರೀ ಭಾಳ ಪ್ರಬುದ್ಧವಾಗಿ ಏನೋ ಹೇಳಹೊರಟಿದ್ದೀರಿ? ಯಾರಿದು? 'ನೀರಿ'ನಾ? ನಮಗೆಲ್ಲಾ ಗೊತ್ತು...ವಿಕಾಸ್ ಗುಡ್ಡು ಹುಡ್ಗ ಅಂತ!! ತಡವಾದ್ರೂ ಒಳ್ಳೆ ಬರಹ..ಗುಡ್ ಲಕ್ಕು!
-ಧರಿತ್ರಿ

ಸುಧೇಶ್ ಶೆಟ್ಟಿ ಹೇಳಿದರು...

ವಿಕಾಸ್....

ಏನಿದು ತು೦ಬಾ ಭಿನ್ನವಾಗಿ ವಿಶೇಷ ಶೈಲಿಯಲ್ಲಿ ಬರಿದಿದ್ದೀರಿ...ಹೊಸ ಪ್ರಯೋಗವೇನು?

ಪ್ರತಿವಾಕ್ಯಗಳನ್ನು ಎರಡೆರಡು ಬಾರಿ ಓದಿಕೊ೦ದು ಅದರ ಒಳಾರ್ಥವನ್ನು ಅರ್ಥೈಸಿಕೊ೦ಡೆ.

"ಕೆಲವೊಂದು ಸಂದರ್ಭಗಳಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದೇ ಒಳ್ಳೆಯ ನಿರ್ಧಾರವೆನ್ನುತ್ತಾರೆ"... ಹೌದು... ತು೦ಬಾ ನಿಜವೆನಿಸಿತು...

Chandra Kengatte ಹೇಳಿದರು...

Vikas,

Padagala jodane mattu adara kaalpanika arta tumba channagide.. Aadare idanna bareda ninnalli yeno Dwandavide anisutta ide... But its very good..

Thanks,
CK

ರಾಜೀವ ಹೇಳಿದರು...

ವಿಕಾಸ್ ಅವರೇ,
ನಿಮ್ಮ ಬರಹಗಳಿಗೆ ಇದು ನನ್ನ ಮೊದಲನೆಯ ಪ್ರತಿಕ್ರಿಯೆ.
ಆದರೆ ಏನು ಪ್ರತಿಕ್ರಯಿಸಬೇಕು ಎಂಬುದೇ ತಿಳಿಯುತ್ತಿಲ್ಲ.
ಈ ಬ್ಲಾಗು ನಿಮ್ಮ ದುಖ್ಖದ ಪ್ರೇರಣೆಯಿಂದಲೋ ಅಥವಾ ನಿಮ್ಮೊಳಗಿರುವ ಕವಿಯ ಪ್ರೇರಣೆಯಿಂದಲೋ ತಿಳಿಯದಂತಾಗಿದೆ.
ಏನೇ ಇದ್ದರೂ ಬಹಳ ಸೊಗಸಾಗಿದೆ. ಹೀಗೇ ಬ್ಲಾಗುತ್ತಿರಿ.

ಆಲಾಪಿನಿ ಹೇಳಿದರು...

ವಿಕ್ಸ್‌,
ನಿನ್ನ ಎಲ್ಲಾ ಬರಹಕ್ಕಿಂತ ಇದು ತುಂಬಾ ತುಂಬಾ ಇಷ್ಟ ಆಯ್ತು. ಈಗ ನಿರಾಳ ನಾ? ಬರೆದು ನಿರಾಳವಾಗುವವನಾ ನೀನು?

asha ಹೇಳಿದರು...

taawu eno tumba dukka tumbkondu bardriri haagide anistide sir. 1 sala odidre arta aagalla nimma e baraha.... aaadru chenagide.... ogataagi bardirodu... niwu bardirodu nimma hattiradavrige maatra arta aagutte saryagi....

ವಿಕ್ರಮ ಹತ್ವಾರ ಹೇಳಿದರು...

ಬೆನ್ನು ತಿರುಗಿಸಿ ಹೋದ ಬೆನ್ನಿನ ಹಿಂದೆ ಬಿದ್ದು ಅಭ್ಯಾಸವಿಲ್ಲ.........Superb!!!

ಅನಾಮಧೇಯ ಹೇಳಿದರು...

ninna shailiginta swalpa vibhinna baraha... ishta aaytu :-)

ರಂಜನಾ ಹೆಗ್ಡೆ ಹೇಳಿದರು...

ವಿಕಾಸ್,
ಚನ್ನಾಗಿ ಇದೆ ಶೈಲಿ... ಎರೆಡು ಸಾರಿ ಓದಿದೆ,,
ಬೆನ್ನು ತಿರುಗಿಸಿ ಹೋದವಳು ಮತ್ತೆ ನಿನ್ನೆಡೆಗೆ ಮುಖ ಮಾಡಿ ಚಂದದ ನಗೆ ಬಿರಲಿ ಅಂತಾ ಹಾರೈಸ್ತಿನಿ...
ಯಾವುದೋ ಸಂಬಂಧ ಮುಗಿದೇ ಹೋಯ್ತು ಅಂದುಕೊಂಡರು ಅದು ಅಲ್ಲೆ ಎಲ್ಲೊ ನಿಂತು ಕೈ ಚಾಚತಾ ಇರುತ್ತೆ....
ಡೋಟ್ ವರಿ....

ವಿ.ರಾ.ಹೆ. ಹೇಳಿದರು...

ಪ್ರತಿಕ್ರಿಯೆಗಳಿಗೆ ಥ್ಯಾಂಕ್ಸ್

ಬಾಲು, ಮುಂಗಾರು ಮಳೆ ಈ ಸಲ ಬರೋ ಲಕ್ಷಣವೇ ಇಲ್ವಲ್ಲ :)

ರೂಪಾ, ಕೆಲವೊಮ್ಮೆ ಮನಸು ಒಗಟು ಒಗಟಾಗಿದ್ದಾಗ ಮಾತುಗಳೂ ಹಾಗೇ ಇರುತ್ತವೆ ಅಲ್ವಾ?! ಆಧ್ಯಾತ್ಮ ಏನಿಲ್ಲ, ಎಲ್ಲಾ ಲೌಕಿಕವೇ. ;-)

ಶಂ.ಪ್ರ, ಪರಾಂಜಪೆ ಸಾರ್, ಥ್ಯಾಂಕ್ಸ್ ;-)

ಧರಿತ್ರಿ, ಇದೊಂದಾದ್ರೂ ಪ್ರಬುದ್ಧವಾಗಿ ಕಾಣ್ತಲ್ಲ ಸದ್ಯ. ಹೌದು ನೀರಿನೆ. ನಾ ಗುಡ್ ಹುಡ್ಗ ಹೌದು ಬಿಡಿ :)

ಸುಧೇಶ್, ಹೊಸಪ್ರಯೋಗ ಏನಿಲ್ಲಪ, ಹಾಗೇ instantaneous (spelling ಸರಿನಾ?). ಬರ್ತಾ ಇರು.

ಚಂದ್ರು, ಹ್ಮ್.. ದ್ವಂದ್ವ.. ಇದೆ ನಿಜಕ್ಕೂ..

ರಾಜೀವ, ಸ್ವಾಗತ , ಪ್ರತಿಕ್ರಯಿಸಿದ್ದಕ್ಕೆ ಥ್ಯಾಂಕ್ಸ್.
ಎಲ್ಲರೊಳಗೂ ಒಬ್ಬ ಕವಿ ಇರ್ತಾನಂತೆ. ನನಗೂ ಗೊತ್ತಿಲ್ಲದೆ ಅವ ದುಖದಲ್ಲಿ ಏನೇನೋ ಬರೆದಿರಬಹುದು :-)

ಆಲಾಪಿನಿ, ನಿರಾಳತೆ ಸಾಧ್ಯ ಇಲ್ಲ, ಆದ್ರೂ ಪ್ರಯತ್ನ..

ಆಶಾ, ಥ್ಯಾಂಕ್ಸ್, ಹತ್ತಿರದವ್ರಿಗೆ.. ಹ್ಮ್ಮ್.. ಅವ್ರಿಗಾದ್ರೂ ಅರ್ಥಾಗತ್ತಾ ನೋಡೋಣ..

ಹತ್ವಾರ್, ಓಹ್, ಏನ್ ಸಾರ್ ಅಪರೂಪಕ್ಕೆ ಇಷ್ಟು ದೂರ! any how.. thanx..ಬರ್ತಾ ಇರಿ.

ವಿಜಯ್, ಥ್ಯಾಂಕ್ಸ್ ಕಣೋ.

ರಂಜನಾ, ಹಾಗಂತೀರಾ? ಒ.ಕೆ I dnt worry. ;)

ಶರಶ್ಚಂದ್ರ ಕಲ್ಮನೆ ಹೇಳಿದರು...

ತುಂಬಾ ಭಾವುಕತೆಯಿಂದ ಬರದ್ದ್ಯಲ್ಲೋ... ಒಳ್ಳೆ ಬರಹ.. ಪದಗಳ ಜೋಡಣೆ ತುಂಬಾ ಇಷ್ಟ ಆತು.. "ನದಿಯು ಸಮುದ್ರವನ್ನು ಸೇರುವಲ್ಲಿನ ಮೇಲ್ಮೈ ಪ್ರಶಾಂತತೆಯನ್ನು ನೀನು ನಿರ್ಲಿಪ್ತತೆ ಎನ್ನುವುದಾದರೆ ನಿನಗೆ ಒಳಗಿನ ಚಕ್ರಸುಳಿಗಳ ಅರಿವಿಲ್ಲ." ಈ ಸಾಲಂತೂ ತುಂಬಾ ಇಷ್ಟ ಆತು..

ಶರಶ್ಚಂದ್ರ ಕಲ್ಮನೆ

ತೇಜಸ್ವಿನಿ ಹೆಗಡೆ ಹೇಳಿದರು...

ವಿಕಾಸ್,

ಇದನ್ನು ನೀನೇ ಬರೆದದ್ದಾ ಎಂದು ಆಶ್ಚರ್ಯವಾಗಿತ್ತಿದೆ.. ಹಳೆಯ ಪೋಸ್ಟಿನಲ್ಲಿ ಹೊಸ ವಿಕಾಸ ದರ್ಶನವಾಯಿತು :)