ಸೋಮವಾರ, ಜುಲೈ 6, 2009

ವಿದ್ಯೆ ಮತ್ತು ಔದ್ಯಮಿಕತೆ

ಇತ್ತೀಚೆಗೆ ಇ-ಮೇಲಿನಲ್ಲಿ ಸಣ್ಣ ಕಥೆಯೊಂದು ಬಂದಿತ್ತು. ಅದು ಹೀಗಿದೆ. ಒಬ್ಬ ಹುಡುಗ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಕೆಲಸ ಕೇಳಿಕೊಂಡು ಹೋಗಿರುತ್ತಾನೆ. ಅಲ್ಲಿನ admin ಇವನನ್ನು ಸಂದರ್ಶನ ಮಾಡಿ ಇವನು ಕೆಲಸಕ್ಕೆ ಲಾಯಕ್ಕಿದ್ದಾನೆ ಎಂದು ತೀರ್ಮಾನಿಸುತ್ತಾನೆ. ಅನಂತರ ಆ ಹುಡುಗನ ಹತ್ತಿರ ನಿನ್ನ ಇ-ಮೇಲ್ ಐಡಿ ಕೊಡು ಅದಕ್ಕೊಂದು ಅರ್ಜಿ ಕಳಿಸುತ್ತೇನೆ, ಅದನ್ನು ತುಂಬಿ ಕಳಿಸಿದ ಮೇಲೆ ನಿನಗೆ ಅಪಾಯಿಟ್ಮೆಂಟ್ ಲೆಟರ್ ಕಳಿಸುತ್ತೇನೆ ಅದರ ಪ್ರಿಂಟ್ ತೆಗೆದುಕೊಂಡು ಬಂದು ನೀನು ಇಲ್ಲಿ ಸೇರಿಕೊಳ್ಳಬಹುದು ಎನ್ನುತ್ತಾನೆ. ಆಗ ಆ ಹುಡುಗ "ನನಗೆ ಯಾವುದೇ ಇಮೇಲ್ ಐಡಿ ಇಲ್ಲ ಮತ್ತು ನನಗೆ ಇಂಟರ್ನೆಟ್ ಬಳಕೆಯೂ ಗೊತ್ತಿಲ್ಲ" ಎನ್ನುತ್ತಾನೆ. ಆಗ ಆ ಅಡ್ಮಿನ್ ಈ ಕಾಲದಲ್ಲಿ ಇಮೇಲ್ ಐಡಿ ಇಲ್ಲ ಎಂದ ಮೇಲೆ ನಿನ್ನ ಅಸ್ತಿತ್ವಕ್ಕೇ ಬೆಲೆಯೇ ಇಲ್ಲ ನೀನು ಇಲ್ಲಿ ಕೆಲಸ ಮಾಡಲು ನಾಲಾಯಕ್ ಎಂದು ಬೈದು ಓಡಿಸುತ್ತಾನೆ. ಏನು ಮಾಡುವುದು ಎಂದು ತಿಳಿಯದೇ ಹುಡುಗ ಹೊರಗೆ ಬಂದು ಸ್ವಲ್ಪ ಹೊತ್ತು ಯೋಚಿಸುತ್ತಾನೆ. ಅವನ ಜೇಬಿನಲ್ಲಿ ೫೦ ರೂಪಾಯಿ ಮಾತ್ರ ಇರುತ್ತದೆ. ಅದು ಇನ್ನು ಒಂದು ದಿನಕ್ಕೆ ಸಾಕು. ಆಮೇಲೆ ಹೇಗೆ ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದು ಸೀದ ಟೊಮ್ಯಾಟೋ ಮಾರುಕಟ್ಟೆಗೆ ಹೋಗಿ ೧೦ ಕೆ.ಜಿ ಟೊಮ್ಯಾಟೋ ಕೊಂಡು ಅದನ್ನು ಮನೆ ಮನೆಗೆ ಮಾರುತ್ತಾನೆ. ಲಾಭ ಮಾಡಿಕೊಳ್ಳುತ್ತಾನೆ, ಹೀಗೆ ಮಾರನೇ ದಿನ ಇನ್ನೂ ಹೆಚ್ಚು ಮಾರಿ ಇನ್ನೂ ಹೆಚ್ಚಿನ ಲಾಭ ಬರುತ್ತದೆ. ಹೀಗೆಯೇ ನಿಷ್ಠೆಯಿಂದ ದುಡಿದು ಒಳ್ಳೆಯ ಲಾಭದಿಂದ ಅವನೇ ಒಂದು ತಳ್ಳುಗಾಡಿ ತೆಗೆದುಕೊಳ್ಳುತ್ತಾನೆ, ಅನಂತರ ಒಂದು ಲಗ್ಗೇಜ್ ಆಟೋ, ಟ್ರಕ್ ಹೀಗೆ ಮುಂದುವರೆಯುತ್ತಾ ಹೋಗಿ ಬೇರೆ ಬೇರೆ ವ್ಯಾಪಾರಗಳಲ್ಲೂ ತೊಡಗಿ ೫ ವರ್ಷಗಳ ನಂತರ ಆ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬನಾಗುತ್ತಾನೆ. ಒಂದು ದಿನ ಅವನಿಗೆ ತನ್ನ ಕುಟುಂಬಕ್ಕೆ ವಿಮೆ ಮಾಡಿಸಬೇಕು ಎಂಬ ಯೋಚನೆ ಬಂದು ವಿಮಾ ಏಜೆಂಟೊಬ್ಬನನ್ನು ಮನೆಗೆ ಕರೆಯುತ್ತಾನೆ. ಅರ್ಜಿ ಎಲ್ಲ ತುಂಬಿ ಆದ ಮೇಲೆ ಆ ಏಜೆಂಟ್ ಇದ್ದವನು ನಿಮ್ಮ ಇಮೇಲ್ ಐಡಿ ಕೊಡಿ ಎಂದು ಕೇಳಿದಾಗ ನನಗೆ ಯಾವ ಇಮೇಲ್ ಐಡಿಯೂ ಇಲ್ಲ, ನೆಟ್ ಬಳಕೆಯೂ ಗೊತ್ತಿಲ್ಲ ಎನ್ನುತ್ತಾನೆ. ಆಗ ವಿಮಾ ಏಜೆಂಟನು ನೀವು ಇಷ್ಟು ದೊಡ್ಡ ಬಿಸಿನೆಸ್ ಮನ್ ಆಗಿ ಒಂದು ಇಮೇಲ್ ಐಡಿ ಇರದೇ ಇರುವುದು ಆಶ್ಚರ್ಯ, ಆದರೂ ಇಷ್ಟು ಯಶಸ್ವಿಯಾಗಿದ್ದೀರಿ, ಇನ್ನು ನಿಮಗೆ ಇಂಟರ್ನೆಟ್ ಬಳಕೆ ಗೊತ್ತಿದ್ದರೆ ಇನ್ನೂ ಏನಾಗುತ್ತಿದ್ದಿರಿ ಎನ್ನುತ್ತಾನೆ. ಆಗ ಅವನು ನಿಟ್ಟುಸಿರಿಟ್ಟು "ದುರದೃಷ್ಟಕ್ಕೆ ನಾನು ಇಮೇಲ್ ಐಡಿಯೊಂದನ್ನು ಮಾಡಿಕೊಂಡಿದ್ದರೆ ಇವತ್ತು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿರುತ್ತಿದ್ದೆ" ಎನ್ನುತ್ತಾನೆ.

ಈ ಕತೆಯನ್ನು ಯಾವುದೇ ಉದ್ದೇಶಕ್ಕೆ ಬರೆದಿರಬಹುದು. ಆದರೆ ಇದು ಬಿಂಬಿಸುವುದು ಒಬ್ಬ ಉದ್ಯಮಿ ಹುಟ್ಟುವ ಅಂಶವನ್ನು. ಒಬ್ಬ ಸಾಮಾನ್ಯ ಮನುಷ್ಯ ಉದ್ಯಮಿಯಾಗಿ, ಮಾಲೀಕನಾಗಿ ಬೆಳೆಯಲು ಕಾರಣಗಳನ್ನು, ಪರಿಸ್ಥಿತಿಗಳನ್ನು ಈ ಕತೆಗಳು ಸೂಕ್ಷ್ಮವಾಗಿ ತಿಳಿಸಿಕೊಡುತ್ತವೆ. ಉದ್ಯಮಿ ಎಂದ ಮಾತ್ರಕ್ಕೆ ಟಾಟಾ, ಬಿರ್ಲಾ, ನೀಲೇಕಣಿ, ನಾಣಿಗಳೇ ಆಗಬೇಕಂತಿಲ್ಲ. ಇವತ್ತು ನಮ್ಮ ಸುತ್ತಮುತ್ತಲೇ ಇರುವ ಸಾವಿರಾರು ವ್ಯಾಪಾರಸ್ಥರೂ, ಬಗೆಬಗೆಯ ಬಿಸಿನೆಸ್ ಗಳನ್ನು ನೆಡೆಸುತ್ತಿರುವವರೂ ಕೂಡ ಉದ್ಯಮಿಗಳೇ. ತಂದೆಯಿಂದ ಬಂದ ಬಿಸಿನೆಸ್ ಅನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಎಲ್ಲರೂ ಕೂಡ ಒಬ್ಬ ಉದ್ಯಮಿಯಾಗಿ ರೂಪುಗೊಳ್ಳಲು ಕಾರಣ ಒಂದಲ್ಲಾ ಒಂದು ರೀತಿಯ ಪರಿಸ್ಥಿತಿಯೇ ಕಾರಣವಾಗಿರುತ್ತದೆ ಮತ್ತು ಮುಖ್ಯವಾಗಿ ಅವರಲ್ಲಿರುವ ರಿಸ್ಕ್ ತೆಗೆದುಕೊಂಡು ಮುನ್ನುಗ್ಗಿರುವ ಗುಣ ಕಾರಣವಾಗಿರುತ್ತದೆ. ಈ ರೀತಿಯ ಪರಿಸ್ಥಿತಿಗೆ, ರಿಸ್ಕ್ ತೆಗೆದುಕೊಂಡು ಬೆಳೆದಿರುವುದಕ್ಕೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿರಬಹುದು ಅಥವಾ ಛಲದಿಂದ ಆಗಿರಬಹುದು. ನನ್ನ ಗೆಳೆಯನೊಬ್ಬ ಕೆಲಸ ಮಾಡುವ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯವಿರುವ ಅವರು ತಾವು ಉದ್ಯಮಿಯಾಗಿ ಬೆಳೆದಿದ್ದರ ಬಗ್ಗೆ ಹೇಳಿದರು. "ನಾನು ಬಿ.ಕಾಂ. ಜಸ್ಟ್ ಪಾಸಾಗಿ ಯಾವುದೋ ಒಂದು ಕಂಪನಿಯಲ್ಲಿ ಸಣ್ಣ ಸಂಬಳವೊಂದಕ್ಕೆ ಕೆಲಸಕ್ಕೆ ಸೇರಿಕೊಂಡೆ, ಮುಂದೆ ಓದುವ ಅನುಕೂಲ ಇರಲಿಲ್ಲ, ಎಲ್ಲರೂ ನನ್ನನ್ನು ಆಗ ವೇಸ್ಟ್ ಎಂದು, ಇವನ ಕೈಯಲ್ಲಿ ಏನೂ ಆಗುವುದಿಲ್ಲವೆಂದೂ ದೂಷಿಸುತ್ತಿದ್ದರು, ಅವಮಾನದಿಂದ ಕುಗ್ಗಿಹೋಗುತ್ತಿದ್ದೆ, ಆದರೆ ಹಾಗೆಯೇ ಒಂದೊಂದಾಗಿ ಅನುಭವಗಳನ್ನು ಪಡೆದುಕೊಂಡು ಒಮ್ಮೆ ಅವಕಾಶ ಸಿಕ್ಕಾಗ ರಿಸ್ಕ್ ತೆಗೆದುಕೊಂಡು ನುಗ್ಗಿಬಿಟ್ಟೆ, ಮೊದಲ ದಿನಗಳಲ್ಲಿ ಬಹಳ ಕಷ್ಟವಾದರೂ ಆನಂತರ ನಾ ನೆಡೆದದ್ದೇ ಹಾದಿಯಾಯಿತು, ಇವತ್ತು ಈ ಮಟ್ಟಿಗೆ ಬೆಳೆದಿದ್ದೇನೆ, ಕೋಟಿರೂಪಾಯಿಗೆ ತೂಗುತ್ತೇನೆ ಎಂದು ಹೇಳಿಕೊಳ್ಳಲು ನನಗ್ಯಾವ ಅಹಂಕಾರವೂ ಇಲ್ಲ , ಸಂಕೋಚವೂ ಇಲ್ಲ. ಆದರೆ ಅವತ್ತು ನನ್ನನ್ನು ಹೀಯಾಳಿಸಿದವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿದ್ದಾರೆ". ಹೀಗೆ ಹೇಳಿದ ಅವರು ನೆಡೆಸುತ್ತಿರುವುದು ತಾವು ಓದಿದ್ದಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಟ್ರಾನ್ಸ್ ಫಾರ್ಮರ್ ತಯಾರಿಕಾ ಕಾರ್ಖಾನೆ! ಇವೆಲ್ಲವನ್ನೂ ಸುಮ್ಮನೇ ಅವಲೋಕಿಸಿದಾಗ ಸದ್ಯದ ಸಮಾಜದಲ್ಲಿ ಹೆಚ್ಚು ಹೆಚ್ಚು ಓದಿರುವರಿಗಿಂತಲೂ ಕಡಿಮೆ ಓದಿದವರೇ ಉದ್ಯಮಿಗಳಾಗಿರುವ ಉದಾಹರಣೆ ಬಹಳ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ಇಲ್ಲಿ ತುಂಬ ಕಡಿಮೆ ಓದಿದವರು, ಯಾವುದೇ ವಿಶೇಷ, ವೃತ್ತಿಪರ ಕೋರ್ಸುಗಳನ್ನು ಮಾಡದೇ ಇರುವವರು ಇವತ್ತು ಉದ್ಯಮಿಗಳಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಎಲ್ಲ ಉದ್ಯಮಿಗಳನ್ನು ಕೇಳಿದರೂ ಕೂಡ ಅವರದ್ದೆಲ್ಲಾ ಸಾಮಾನ್ಯವಾಗಿ ಒಂದೇ ಉತ್ತರವಿರುತ್ತದೆ. ಈ ಮಟ್ಟಿಗೆ ಅವರು ಬೆಳೆಯಲು ಕಾರಣ ಅನಿವಾರ್ಯತೆ, ಅನುಭವ, ಪೂರಕ ಪರಿಸ್ಥಿತಿ, ಅದೃಷ್ಟ ಹಾಗೂ ಅದಕ್ಕೆ ತಕ್ಕುನಾದ, ಸರಿಯಾಗಿ ಬಳಸಿಕೊಂಡ ಶ್ರಮ. ಇನ್ಫೋಸಿಸ್ ನ ನಂದನ್ ನೀಲೇಕಣಿಯವರೂ ಕೂಡ ತಾವು ಬರೆದಿರುವ ಪುಸ್ತಕದಲ್ಲಿ ತಮ್ಮನ್ನು ’ಆಕಸ್ಮಿಕ ಉದ್ಯಮಿ’ ಎಂದೇ ಕರೆದುಕೊಳ್ಳುತ್ತಾರೆ.

ಇದಕ್ಕೆ ಉಲ್ಟಾ ಪರಿಸ್ಥಿತಿ ಎಂದರೆ ಇವತ್ತಿನ ವಿದ್ಯಾವಂತರದ್ದು. ಇವತ್ತು ಮಾರುಕಟ್ಟೆಯಲ್ಲಿ ಹಲವು ಕೋರ್ಸುಗಳಿವೆ. ಮ್ಯಾನೇಜ್ ಮೆಂಟ್ ಕೋರ್ಸುಗಳಿವೆ. ಆದರೆ ಅದರಲ್ಲಿ ತಯಾರಾಗಿ ಬರುತ್ತಿರುವ ವಿದ್ಯಾವಂತರಲ್ಲಿ ಈ ಉದ್ಯಮಿ ಗುಣಗಳೇ(enterpreneurship qualities) ಕಂಡುಬರುತ್ತಿಲ್ಲ ಎನ್ನುವುದು ಕಟು ಸತ್ಯ. ಅವೆಲ್ಲವೂ ಹೆಚ್ಚೆಂದರೆ ಮೆನೇಜರ್ ಗಳನ್ನು ತಯಾರು ಮಾಡುತ್ತಿವೆಯೇ ಹೊರತು Entrepreneur ಗಳನ್ನಲ್ಲ. ಇವತ್ತು ವಾಣಿಜ್ಯ, ಕಲೆ, ಎಂಜಿನಿಯರಿಂಗ್ ಎಲ್ಲಾ ಕೋರ್ಸ್ ಗಳಲ್ಲೂ ಕೂಡ managementಬಗ್ಗೆ, Entrepreneurship ಬಗ್ಗೆ ಪಠ್ಯಗಳಿವೆ. ಆದರೆ ಅವು ಕೇವಲ ಥಿಯರಿಗಳಾಗೇ ಉಳಿಯುತ್ತಿರುವುದು ವಿಪರ್ಯಾಸ. ಈ ಥಿಯರಿಗಳನ್ನು ಓದಿಕೊಂಡು ಬಂದ ಯುವಕ ಯುವತಿಯರು ಯಾವುದೋ ಕಂಪನಿಯಲ್ಲಿ ಅಥವಾ ಮತ್ತೆಲ್ಲೋ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಬಿಡುತ್ತಾರೆ. ಅದಕ್ಕೆ ಕಾರಣ ಆಕರ್ಷಕ ಸಂಬಳ, ಸವಲತ್ತುಗಳು ಹಲವಿರಬಹುದು. ಆದರೆ ಇಲ್ಲಿ ಪ್ರಶ್ನೆಯೆಂದರೆ ವಿದ್ಯೆ ಎನ್ನುವುದು ಅವನನ್ನು ಆ ಔದ್ಯಮಿಕತೆಯಿಂದ ದೂರ ಇಡುತ್ತಿದೆಯೇ ಎಂಬುದು. ದೊಡ್ಡ ದೊಡ್ಡ ಉದ್ಯಮಿಗಳಾದವರು, ಆಗುವವರು ಮ್ಯಾನೇಜ್ ಮೆಂಟ್ ಬಗ್ಗೆಯಾಗಲೀ, ಔದ್ಯಮಿಕತೆ ಬಗ್ಗೆಯಾಗಲೀ ಯಾವುದೇ ಪುಸ್ತಕಗಳನ್ನು ಓದಿರುವುದಿಲ್ಲ, ಯಾವುದೇ ಪದವಿ ಪಡೆದಿರುವುದಿಲ್ಲ. ಆದರೆ ಪುಸ್ತಕ ಓದಿದವರು, ಪದವಿ ಪಡೆದವರು ಉದ್ಯಮಿಗಳಾಗುತ್ತಿಲ್ಲ. ೧೦೦% ಈ ಸ್ಥಿತಿ ಇಲ್ಲದಿರಬಹುದು , ಆದರೆ ಬಹುತೇಕ ಈ ರೀತಿ ಇದೆ. ಪ್ರಸಕ್ತ ಉದ್ಯಮಿಗಳು ಪುಸ್ತಕ ಓದುತ್ತಾ ಕೂತಿದ್ದರೆ ಖಂಡಿತ ಆ ಮಟ್ಟಿಗೆ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಸಾಮಾನ್ಯ ನೌಕರರಾಗಿಬಿಡುತ್ತಿದ್ದರೆನೋ! stay hungry, stay foolish ಎನ್ನುವ ಪುಸ್ತಕವೊಂದಿದೆ. ನಮ್ಮ ದೇಶದ ದೊಡ್ಡ ದೊಡ್ಡ ಐ‌ಐ‌ಎಂ ಗಳಲ್ಲಿ ಓದಿದ ಹಲವು ಪದವಿಧರರು ಉದ್ಯಮಿಗಳಾಗಿ ಬೆಳೆದಿರುವ ಯಶೋಗಾಥೆಯ ಕತೆಗಳಿವೆ. ಆದರೆ ಪ್ರತಿವರ್ಷ ಹೊರಬರುವ ಪದವೀಧರರ ಸಂಖ್ಯೆಗೆ ಹೋಲಿಸಿದರೆ ಉದ್ಯಮಿಗಳಾದವರ ಸಂಖ್ಯೆ ತೀರಾ ಕಡಿಮೆ ಇದೆ. ಇದು ಹೇಳುವಷ್ಟು ಸುಲಭವಲ್ಲ , ಇದಕ್ಕೆ ಆಸಕ್ತಿಯಿಂದ ಹಿಡಿದು ಬಂಡವಾಳದ ತನಕ ಹಲವಾರು constraintಗಳಿವೆ ನಿಜ. ಆದರೂ ಕೂಡ ತುಲನಾತ್ಮಕವಾಗಿ ನಮ್ಮ ದೇಶದಲ್ಲಿ ಔದ್ಯಮಿಕತೆ ಎಂಬುದಕ್ಕೆ ವಿದ್ಯೆಯೇ constraint ಆಗುತ್ತಿದೆಯೇ ಎಂಬ ಅನುಮಾನ ಸಹಜವೆನಿಸುತ್ತದೆ. ಅದು ಯುವಜನಾಂಗವನ್ನು ಕಣ್ಣು ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಿದೆ. ಇವತ್ತು ಜಗತ್ತಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದ, ಹೆಸರು ಮಾಡಿರುವ, ಸಾಧನೆ ಮಾಡಿರುವ ಬಹುತೇಕ ಜನರು ಹೆಚ್ಚು ಓದಿರದಂತವರೇ ಆಗಿದ್ದಾರೆ. ಹೆಚ್ಚು ಓದಿದವರು, ಪದವಿ ಪಡೆದವರು ಯಾವುದೋ ಕಂಪನಿ ಕೆಲಸಗಳಲ್ಲಿ ತೊಡಗಿಕೊಂಡರೆ ದೊಡ್ಡಸ್ತಿಕೆ ಎಂಬ ಸಾಮಾಜಿಕ ಅಂಶವೂ ಕೂಡ ಅವರನ್ನು ಹಿಡಿದಿಡುತ್ತಿದೆ. ಹಾಗೆಂದು ಹೆಚ್ಚಿನ ವಿದ್ಯೆಯಿಲ್ಲದೇ ಕೂರುವುದು, ಓದದಿರುವುದು ಮೂರ್ಖತನವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯೆಯ ಜೊತೆಜೊತೆಗೆ ಬೇರುಮಟ್ಟದ ಚಿಂತನೆಗಳನ್ನು ವಿದ್ಯಾವಂತ ಯುವಕರಲ್ಲಿ ಬೆಳೆಸುವ ಅಗತ್ಯವಿದೆ. ಉದ್ಯಮಿಯಾಗಲು ಇರುವ ಅವಕಾಶಗಳು, ಸೌಲಭ್ಯಗಳು, ಜಾಗತಿಕ ಮಾರುಕಟ್ಟೆಗಿಂತ ಹೆಚ್ಚಾಗಿ ನಮ್ಮ ದೇಶದ ಹಾಗೂ ನಮ್ಮ ಸುತ್ತಲಿನ ಸಾಮಾನ್ಯ ಮಾರುಕಟ್ಟೆಯ ಬಗೆಗಿನ ಅರಿವು ಮುಖ್ಯವಾಗಿ ಬೇಕಾಗಿದೆ.

ಇದರಲ್ಲಿ ಯಾವುದೂ conclusion ಅಲ್ಲ, ಸುಮ್ಮನೇ ಯೋಚನೆಯನ್ನು ಹಂಚಿಕೊಂಡದ್ದಷ್ಟೆ.

17 ಕಾಮೆಂಟ್‌ಗಳು:

Shankar Prasad ಶಂಕರ ಪ್ರಸಾದ ಹೇಳಿದರು...

ವಿಕ್ಕಿ,
ಸಮಯೋಚಿತವಾದ ಲೇಖನ ಎಂದು ಹೇಳಬಲ್ಲೆ.
ಅಷ್ಟೇ. ಬರಹ ಚೆನ್ನಾಗಿದೆ :)

ಶಂಕ್ರ

Shetty ಹೇಳಿದರು...

Excellent post!

"If you help enough people get what they want, they will in turn help you get all that you want." Filling in the need-gap is the hallmark of an entrepreneur.

One does not have to quit their day job to test the waters of entrepreneurship. One can do part-time consulting, teaching etc. to see if they can branch out to something more than the so called stable job.

Hopefully, this recessionary economic conditions will sprout more entrepreneurs.

Unknown ಹೇಳಿದರು...

ವಿಕಾಸ
ಬದುಕುವುದು ಹೇಗೆ ಅಂತ ಪುಸ್ತಕ ಬರಿಲಕ್ಕು. ಒಳ್ಳೆ ಕತೆ.

Pramod ಹೇಳಿದರು...

ನಿಮ್ಮ ಯೋಚನೆಯು ಸರಿಯಾಗಿದೆ. ಈ ಉದ್ಯಮಿ ಗುಣಗಳು 'ರೆಡಿಮೇಡ್' ಆಗಿ ಯಾವ ವಿದ್ಯಾ ಸ೦ಸ್ಥೆಯಲ್ಲೂ ಸಿಗೋದಿಲ್ಲ. ಯಾವುದೇ ಉದ್ಯಮದ ನಾಡಿಬಡಿತ 'ಅರ್ಥೈ'ಸಿ ಕೊ೦ಡರೆ ಮಾತ್ರ 'entrepreneur' ಆಗಬಹುದು.

Unknown ಹೇಳಿದರು...

tu0ba uttama haagu sogasaada baraha .. pratiyobba manuShyanalli suptavaagiiruva inobba manuShyana bagge sariyaage eccarisiddiri. nannannu tu0baa yocisuva0te haagu naavu Iga maaDuttiruva kelasadi0da namma sutta iruva samaajakke naavu nIDida koDuge ???
sakaalika lEKana ..

Unknown ಹೇಳಿದರು...

vikaas avare,
tu0ba uttama haagu sogasaada baraha .. pratiyobba manuShyanalli suptavaagiiruva inobba manuShyana bagge sariyaage eccarisiddiri. nannannu tu0baa yocisuva0te haagu naavu Iga maaDuttiruva kelasadi0da namma sutta iruva samaajakke naavu nIDida koDuge ???
sakaalika lEKana ..

ಅನಾಮಧೇಯ ಹೇಳಿದರು...

hmm ee kathe bahala hinde mail alli odidde.. adannu neenu vishleshisida reeti thumbaa ishta aaytu

ಮೃತ್ಯುಂಜಯ ಹೊಸಮನೆ ಹೇಳಿದರು...

ಈಗಿನ ವಿದ್ಯಾಭ್ಯಾಸದ ಕ್ರಮ ಮನುಷ್ಯನ ಸಾಮರ್ಥ್ಯವನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ. ಮಾಹಿತಿಗಳ ಸಂಗ್ರಹವೇ,ಅದರ ಪ್ರಾಯೋಗಿಕ ಬಳಕೆಗಿಂತ,ಹೆಚ್ಚು ಮುಖ್ಯವಾಗಿಬಿಟ್ಟಿದೆ. ಮಾಹಿತಿಗಳನ್ನು ಸಂಗ್ರಹಿಸಿ ಅದಕ್ಕೆ ಗಿರಾಕಿಗಳನ್ನು ಹುಡುಕುತ್ತಾ ಕೂರುತ್ತೇವೆ!

ಅನಾಮಧೇಯ ಹೇಳಿದರು...

ವಿಕಾಸ್,
ಈ ಬರಹ ಸ್ಪೂರ್ತಿದಾಯಕವಾಗಿದೆ.
ನಾವೂ ಸಹ ಮೂವರು ಸ್ನೇಹಿತರು ಸೇರಿ ಈ ತಿಂಗಳಿನಿಂದ ಸಣ್ಣ ಉದ್ದಿಮೆಯೊಂದನ್ನು ಪ್ರಾರಂಭಿಸುತ್ತಿದ್ದೇವೆ:http://www.diganthamediasolutions.com/
ಎಂಟು ಹತ್ತು ತಿಂಗಳುಗಳಿಂದ ನಿರಂತರವಾಗಿ ಇದರ ಕುರಿತು ಕನಸು ಕಾಣುತ್ತಾ, ಅಂತೂ ಈಗ ಪ್ರಾರಂಭವಾಗಿದೆ. ರಿಸೆಶನ್ ಕಾರಣದಿಂದಾಗಿ ತುಸು ಹಿಂಜರಿಯಬೇಕಾಯಿತು. ನೀವು ಹೇಳಿದ Stay Hungry Stay Foolish ಸದ್ಯ ಓದಬೇಕು ನಾನು.

ವಂದನೆಗಳು..

Krishnaveni ಹೇಳಿದರು...

Very Nice article! Thumba chennagi bardiddiri..

sunaath ಹೇಳಿದರು...

ಉತ್ತಮ ವಿಶ್ಲೇಷಣೆಯ ಲೇಖನ. ನಮ್ಮ ವಿದ್ಯಾಭ್ಯಾಸ ಕ್ರಮವು
ಈ ನಿಟ್ಟಿನಲ್ಲಿ ಸುಧಾರಿಸುವದು ಅವಶ್ಯವಾಗಿದೆ.

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ಬರಹ ನೋಡಿ ಖುಷಿಯಾಯ್ತು.

ಶ್ರೀನಿಧಿ.ಡಿ.ಎಸ್ ಹೇಳಿದರು...

hmmmm...

ಧರಿತ್ರಿ ಹೇಳಿದರು...

ಇದೇ ವಿಚಾರವನ್ನು ಯಾವುದಾದ್ರೂ ಪತ್ರಿಕೆಗೆ ಬರೆಯಬಹುದಿತ್ತು ಮಾರಾಯರೇ...ಚೆನ್ನಾಗಿದೆ ಲೇಖನ. ಸಡನ್ ಆಗಿ ಗಂಭೀರವಾಗಿದ್ದೀರಿ
-ಧರಿತ್ರಿ

Prabhuraj Moogi ಹೇಳಿದರು...

ಈ ರಿಸ್ಕ್ ತೆಗೆದುಕೊಳ್ಳೋದೊ ಇಲ್ಲಿ ಬಹಳ ಕಷ್ಟ ಸಾರ್ ಕಲಿತು ಮುಗಿಸುತ್ತಿದ್ದಂಗೆ ಎರಡು ತಿಂಗಳು ಖಾಲಿ ಕೂತರೂ ಏನೂ ಕೆಲ್ಸ ಯಾಕೆ ಸಿಕ್ಕಿಲ್ಲ ಅಂತ ಗುಸುಗುಸು ಶುರು ಮಾಡಿ ಬಿಡುತ್ತಾರೆ... ಹೀಗೆ ಎನೊ ಕೆಲ್ಸ ಅಂತ್ ಸುರುವಾಗಿ ಏನೋ ಮಾಡಿಕೊಂಡಿದ್ದರೆ ಮದುವೆ ಆಗಿ ಸಂಸಾರ ಎಲ್ಲಾ ಬಂದು ರಿಸ್ಕ್ ಜಾಸ್ತಿ ಆಗಿ ಬಿಡ್ತದೆ... ವಿದೇಶದಲ್ಲಿ ಒಂದು ಕಾರು ಒರೆಸುವ ಕೆಲ್ಸಕ್ಕೂ ಬೆಲೆ ಗೌರವ ಇದೆ ಹಾಗೆ ಮಾಡಿ ಅಲ್ಲಿ ನಮಗೆ ಇಷ್ಟವಾದ ವೃತ್ತಿಯಲ್ಲಿ ಬೆಳೆಯಬಹುದು ಆದರೆ ಇಲ್ಲಿ ಇಂಜನೀಯರು ಡಾಕ್ಟರಗಳೆ ಕೆಲ್ಸಗಳು...

ವಿ.ರಾ.ಹೆ. ಹೇಳಿದರು...

@ಶಂಕ್ರು, ಥ್ಯಾಂಕ್ಸ್

@ಶೆಟ್ಟಿ, u r rite. thank u.

@ಶ್ರೀ.ಶಂ, ಮೊದಲು ನಾನು ಬದುಕೋದು ಕಲೀತೇನೆ, ಆಮೇಲೆ ಪುಸ್ತಕ ಬರಿಯೋದು. ಪುಸ್ತಕ ಬರಿಯಲಿಕ್ಕೆ ಕಲಿತರೂ ಅದೂ ಒಂಥರಾ ಬದುಕೋದು ಕಲಿತಂತೆ ಅಲ್ವಾ :)

@ಪ್ರಮೋದ್, ಹೌದು, ಈ ಉದ್ಯಮಿತನ ಅನ್ನೋದು ಎಲ್ಲಿಯೂ ಕಲಿಯಲು ಸಿಗುವಂತದ್ದಲ್ಲ.

@ರೂಪ, ನಾವು ಮಾಡುತ್ತಿರುವ ಕೆಲಸದಿಂದ ಸಮಾಜಕ್ಕೆ ಒಂದಲ್ಲ ಒಂದು ರೀತಿ ಕೊಡುಗೆ ಇದ್ದೇ ಇರತ್ತೆ. ಆದ್ರೆ ಅದು ತಲುಪೋದು ಯಾರನ್ನ ಅನ್ನುವುದು ಮುಖ್ಯ. any how..thanx

@ವಿಜಯ್, ಥ್ಯಾಂಕ್ಸ್

@ಹೊಸಮನೆ ಸರ್, thanx for ur response, ನೀವು ಹೇಳಿದ್ದು ನಿಜ.

@ರಾಘವೇಂದ್ರ, ನಿಮ್ಮ ಪ್ರಯತ್ನಕ್ಕೆ ಶುಭಹಾರೈಕೆಗಳು. ಯಶಸ್ವಿಯಾಗಲಿ ನಿಮ್ಮ ಪ್ರಯತ್ನ.

@ರುಚಿ ರುಚಿ, ಥ್ಯಾಂಕ್ಸ್ :)

@ಸುನಾಥ ಕಾಕಾ, ಹೌದು ಸುಧಾರಿಸಬೇಕು, ಆದರೆ ಯಾವಾಗ ಆಗುತ್ತದೋ ಅದು ಗೊತ್ತಿಲ್ಲ! ನಾವಿನ್ನೂ ಬೇಸಿಕ್ ವಿಷಯಗಳಲ್ಲೇ ಹೊಡೆದಾಡುತ್ತಿದ್ದೇವೆ :(

@ಅಗ್ನಿಹೋತ್ರಿ, ಥ್ಯಾಂಕ್ಸ್

@ನಿಧಿ, hmmmmm

@ಧರಿತ್ರಿ, ಸಡನ್ ಏನಿಲ್ಲ, ಗಾಂಭೀರ್ಯ ಇದ್ದೇ ಇರತ್ತೆ ಒಳಗೆ ಯಾವಾಗ್ಲೂ. :)

@ಪ್ರಭು, ಹೌದು, ಇಲ್ಲಿ ಈ ಥರದ ಕೌಟುಂಬಿಕ, ಸಾಮಾಜಿಕ ಅಂಶಗಳ ಪ್ರಭಾವ ಜಾಸ್ತಿ. ಬ್ಯಾಡದ ಕಡೆ ರಿಸ್ಕ್ ತೆಗೆದುಕೊಳ್ಳೋದೇ ಜಾಸ್ತಿ ಆಗಿ ಬೇಕಾದ ಕಡೆ ರಿಸ್ಕ್ ತೆಗೆದುಕೊಳ್ಳಲು ಕೊನೆಯವರೆಗೂ ಆಗುವುದೇ ಇಲ್ಲ.

Chaithrika ಹೇಳಿದರು...

ಒಳ್ಳೆಯ ಯೋಚನೆ.

ನಿಮ್ಮ ಏರೋನಾಟಿಕ್ಸ ಮ್ಯೂಸಿಯಂ ಬರಹ ಹುಡುಕುತ್ತಾ ಇದ್ದೆ. ಈ ಬರಹ ಓದಿದೆ. ಮ್ಯೂಸಿಯಂ ಬರಹ ಸಿಗುತ್ತಲೇ ಇಲ್ಲ. :-(