ಮಂಗಳವಾರ, ಫೆಬ್ರವರಿ 8, 2011

ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !

ಇದು ನನಗೆ ಎರಡನೆ ಸಾಹಿತ್ಯ ಸಮ್ಮೇಳನ. ಎರಡು ವರ್ಷದ ಹಿಂದೆ ಶಿವಮೊಗ್ಗದಲ್ಲಿ ನಡೆದಾಗ ಹೋಗಿದ್ದೆ. ಅರ್ಧ ದಿನವಷ್ಟೆ ಅಲ್ಲಿದ್ದದ್ದು.  ಸಮ್ಮೇಳನ ಹೇಗಿರುತ್ತದೆ ಎಂದು ನೋಡಲು ಹೋಗಿದ್ದೆ ಎನ್ನುವುದಕ್ಕಿಂತ ಹೆಚ್ಚಿನ ಉದ್ದೇಶ ಇರಲಿಲ್ಲ ಆಗ. ಆದರೆ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದಾಗ ಸರಿಯಾಗಿ ಪಾಲ್ಗೊಳ್ಳಬೇಕು ಎಂಬ ಆಸೆ ಇತ್ತು. ಅದರಂತೆ ಕಾರ್ಯಕ್ರಮದ ಪಟ್ಟಿ ನೋಡಿ ನನಗೆ ಆಸಕ್ತಿಯಿದ್ದ ಕೆಲವನ್ನು ಗುರುತು ಹಾಕಿಕೊಂಡಿದ್ದೆ.

ಕನ್ನಡ ಜಾತ್ರೆಗೆ ದಾರಿಯಾವುದಯ್ಯಾ.. ಎಂದು ಕೇಳಿಕೊಂಡು ೫ನೇ ತಾರೀಕು ಶನಿವಾರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋದರೆ ಜನವೋ ಜನ. ಅವತ್ತು ೪ ಗಂಟೆಗೆ ನಾನು ಹೋಗಬೇಕೆಂದುಕೊಂಡಿದ್ದ ಗೋಷ್ಠಿಯೊಂದಿತ್ತು. ಹೋದಕೂಡಲೇ ಅಲ್ಲಿ ಕಾಣಿಸಿದ್ದು ಸಮ್ಮೇಳನದ ಮುಖ್ಯ ವೇದಿಕೆ. ಖುದ್ದು ವೆಂಕಟಸುಬ್ಬಯ್ಯನವರೇ ಮಾತಾಡುತ್ತಿದ್ದರು. ಕೇಳುತ್ತಾ ಇರುವಾಗ ಒಂದಿಬ್ಬರು ಗೆಳೆಯರು ಜೊತೆಯಾದರು. ಪುಸ್ತಕದಂಗಡಿಗಳಿಗೆ ಹೋದೆವು. ಹೋದೆವು ಅನ್ನುವುದಕ್ಕಿಂತ ಅದರ ಬಾಗಿಲಲ್ಲಿ ಹೋಗಿ ನಿಂತೆವು ಅಷ್ಟೆ, ಜನ ನಮ್ಮನ್ನು ತಳ್ಳಿಕೊಂಡು ಒಳಗೆ ತಂದುಬಿಟ್ಟರು. ಛಂದ ಪುಸ್ತಕದ ಮಳಿಗೆಯಲ್ಲಿ ವಸುಧೇಂದ್ರ ನಗುಮುಖದಿಂದ ಕೂತಿದ್ದರು. ವಿಪರೀತ ರಶ್ಶಿನಿಂದ ಇವತ್ತು ಯಾವುದೂ ಸರಿಯಾಗಿ ನೋಡಲಾಗುವುದಿಲ್ಲ ಎಂದು ಗೊತ್ತಾದರೂ ನಾಳೆ ಭಾನುವಾರ ಇದಕ್ಕೂ ಜಾಸ್ತಿ ರಶ್ಶು ಇರುತ್ತದೆ ಎಂದು ನೆನಪಿಗೆ ಬಂತು. ಇವತ್ತೇ ಮುಗಿಸಿಬಿಡೋಣ ಎಂದು ಒಂದೊಂದೇ ಸಾಲಿನೊಳಕ್ಕೆ ಹೋಗುತ್ತಾ ಕಳೆದುಹೋಗಿಬಿಟ್ಟೆ. ಗೆಳೆಯರು ಎಲ್ಲೋ ತಪ್ಪಿಹೋದರು. ಕರ್ನಾಟಕದಲ್ಲಿ ಇಷ್ಟೆಲ್ಲಾ ಪಬ್ಲಿಷರ್ ಗಳು ಇದ್ದಾರೆ ಎಂದು ಗೊತ್ತಾಗಿದ್ದೇ ಅಲ್ಲಿ. ಕೆಲವು ಲೇಖಕರೂ ಕಂಡರು. ’ಬನವಾಸಿ ಬಳಗ’ದ ಮಳಿಗೆಯಲ್ಲಿ ಹುಡುಗರು ಉತ್ಸಾಹದಿಂದ ಜನರನ್ನು ಮಾತಾಡಿಸುತ್ತಿದ್ದರು. ಎಲ್ಲಾ ಸಾಲುಗಳನ್ನೂ, ಎಲ್ಲಾ ಸ್ಟಾಲುಗಳನ್ನೂ ಮುಗಿಸಿಕೊಂಡು ಒಂದಿಷ್ಟು ಪುಸ್ತಕ ಎತ್ತಾಕಿಕೊಂಡು ಆಗುವಷ್ಟರಲ್ಲಿ ಅಲ್ಲಿ ಸುಮಾರು ೩-೪ ತಾಸುಗಳನ್ನು ಕಳೆದುಬಿಟ್ಟಿದ್ದೆ. ಸಂಜೆ ಕಾವ್ಯವಾಚನ ಮತ್ತು ಗಾಯನ ನಡೆಯುತ್ತಿತ್ತು. ಕೂತು ಕೇಳಿ ಸುಧಾರಿಸಿಕೊಂಡದ್ದಾಯ್ತು.

ಮಾರನೇ ದಿನ ಭಾನುವಾರದ ಎರಡು ಗೋಷ್ಠಿಗಳಿಗೆ ಹೋಗಲು ಗುರುತುಹಾಕಿಕೊಂಡಿದ್ದೆ. ಬೆಳಗ್ಗಿನ ಗೋಷ್ಠಿಗೆ ನಾನು ಹೋಗುವುದು ತಡವಾಗಿಬಿಟ್ಟಿತ್ತು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಅನಂತರ ಉನ್ನತಿ ಸಭಾಂಗಣದಲ್ಲಿದ್ದ ಎರಡನೇ ಗೋಷ್ಠಿಗೆ ಹೋದೆ. ಅತಿಥಿಗಳು ಮಾತನಾಡಿದರು. ಚೆನ್ನಾಗಿತ್ತು. ನನ್ನ ಆಸಕ್ತಿಯ ಹಲವು ವಿಷಯಗಳು ತಿಳಿದವು. ಅದನ್ನು ಮುಗಿಸಿ ಹೊರಗೆ ಬಂದು ಮುಖ್ಯ ವೇದಿಕೆಯ ಬಳಿ ಬರುತ್ತಿದ್ದಂತೇ ಗೆಳೆಯರು ಜೊತೆಯಾದರು. ಆಮೇಲೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ.

********

ಈಗ ವಿಷಯಕ್ಕೆ ಬಂದರೆ, ಇದು ಸಾಹಿತ್ಯ ಸಮ್ಮೇಳನವಾ ಅಥವಾ ಒಂದು ಜಾತ್ರೆಯಾ ಎಂಬ ಸಂಶಯ ಎಲ್ಲರಿಗೂ ಬಂದಿರುವಂತೆ ನನಗೂ ಬಂದಿದ್ದಂತೂ ಹೌದು. ಅದು ಹಾಗೆ ಇದ್ದಿದ್ದೂ ಹೌದು. ನನ್ನ ಆಸುಪಾಸಿನ ವಯಸ್ಸಿನ ಬಹುತೇಕ ಹುಡುಗಹುಡುಗಿಯರಿಗೆ ಇದು ಮೊದಲನೇ ಸಮ್ಮೇಳನ. ಮಾಧ್ಯಮಗಳಲ್ಲಿ ಪ್ರಚಾರ, ಸಂಭ್ರಮ ನೋಡಿ ಸಮ್ಮೇಳನ ಅಂದರೆ ಏನೋ ವಿಶೇಷವಾದದ್ದು ಅಂದುಕೊಂಡು ಬಂದವರು ಬಹಳಷ್ಟು ಜನ. ನಾವು ಎಷ್ಟೇ ಸಕಾರಾತ್ಮಕವಾಗಿ ತೆಗೆದುಕೊಂಡು ಹೆಮ್ಮೆ ಪಡೋಣವೆಂದರೂ ಕೂಡ  ಭ್ರಮನಿರಸನವಾಗಿದೆ. ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂದು ಗೊತ್ತಿದೆ. ಆಯೋಜಕರನ್ನು ಟೀಕಿಸುವುದು, ಅದು ಸರಿಯಿಲ್ಲ ಇದು ಸರಿಯಿಲ್ಲ ಹಾಗಿರಬೇಕು ಹೀಗಿರಬೇಕು ಎನ್ನುವುದು ಸರಿಯಲ್ಲ ನಿಜ. ನಾವೇನೋ ಅಕ್ಷರ ಜಾತ್ರೆ ಎಂಬ ಸುಂದರ ಹೆಸರನ್ನಿಟ್ಟು ಕರೆದುಬಿಡುತ್ತೇವೆ. ಆದರೆ ಜಾತ್ರೆ ಅಂದರೆ ಅದು ಈ ಪಾಟಿ ಜಾತ್ರೆಯೇ ಆಗಿಬಿಡುತ್ತದೆಂದರೆ ಸಾಹಿತ್ಯ ಸಮ್ಮೇಳನದ ಉದ್ದೇಶ ಖಂಡಿತ ಇದಲ್ಲ.

ಮೂರುದಿನಗಳಲ್ಲಿ ಲಕ್ಷಾಂತರ ಜನ ಬಂದಿದ್ದು ನಿಜ. ಆದರೆ ಅಲ್ಲಿ ಬಂದಿದ್ದ ಜನರಲ್ಲಿ ಇಲ್ಲಿ ಎಂತದ್ದೋ ಸಮ್ಮೇಳನ ನಡೆಯುತ್ತಿದೆ ಎಂದು ಸುಮ್ಮನೇ ನೋಡಲು ಬಂದವರೇ ಹೆಚ್ಚು. ನಿಜವಾದ ಆಸಕ್ತಿಯಿದ್ದವರಿಗೆ ಬೇಕಾದ ಒಂದು ಗಂಭೀರ ವಾತಾವರಣವೇ ಅಲ್ಲಿ ಸಿಗಲಿಲ್ಲ. ಮುಖ್ಯವೇದಿಕೆ ಮುಂದೆ ಕುಳಿತವರಿಗಷ್ಟೆ ಎಂಬಂತಾಗಿತ್ತು. ಹಿಂದೆ ಕೂತವರಿಗೆ ದೃಶ್ಯವೂ ಇಲ್ಲ, ಸರಿಯಾದ ಶ್ರವ್ಯವೂ ಇಲ್ಲ! ಪುಸ್ತಕದಂಗಡಿಗಳಲ್ಲಿ ಬರೀ ಧೂಳು. ಆದರೂ ಅದು ಕನ್ನಡದ ಧೂಳು. ಗೋಷ್ಠಿಗಳ ವಿಷಯಗಳು ಚೆನ್ನಾಗಿದ್ದವಷ್ಟೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿರದ ಜನರೂ ಆ ಬಾಗಿಲಿನಿಂದ ಒಳಬಂದು ಈ ಬಾಗಿಲಿನಿಂದ ಹೊರಗೆ ಹೋದರು. ಮತ್ತೊಂದು ಕಡೆ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಒಂದಿಷ್ಟು ಸಂಕುಚಿತ ಮನಸ್ಸುಗಳು ಸೇರಿ ಡಬ್ಬಿಂಗ್ ವಿರುದ್ಧ ಕೂಗಾಡಿಬಿಟ್ಟರು.

ಇದೆಲ್ಲಾ ನೋಡಿದರೆ ಒಂದು ಮೌಲ್ಯಯುತ ಸಮ್ಮೇಳನ ಮತ್ತು ಜಾತ್ರೆ ಎರಡನ್ನೂ ಬೆರೆಸಿಬಿಟ್ಟಂತೆ ಕಾಣುತ್ತದೆ. ಕಡ್ಲೇಕಾಯಿ ಪರಿಷೆಯಂತೆ, ಮಾರಿಕಾಂಬಾ ಜಾತ್ರೆಯಂತೆ ಒಂದು ದೊಡ್ಡ ಜಾತ್ರೆ ಮತ್ತು ಮಾರಾಟ ಮಾಡಬೇಕೆಂದರೆ ಅದನ್ನೇ ಮಾಡಬಹುದು. ಅದನ್ನು ಕನ್ನಡದ ಸೊಗಡಿನೊಂದಿಗೇ ಮಾಡಬಹುದು. ಅದ್ಬುತ ಕನ್ನಡ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನಿಡಿಸಿ ಮಾಡಬಹುದು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತೇ ಬೇಡ. ಈ ಭಾಷಣಗಳು, ಗೋಷ್ಠಿಗಳಲ್ಲಿ ಟೈಂಪಾಸಿಗೆ ಬಂದು ತೂಕಡಿಸುವ ಕೆಲ ಮುದುಕರು, ಪುಕ್ಸಟ್ಟೆ ತಿರುಗುವ ಪಡ್ಡೆಗಳು, ಐಟಂ ಹುಡ್ಗೀರು, ಕಡ್ಲೆಕಾಯಿ ಮಾರುವವರು, ಐಸ್ ಕ್ಯಾಂಡಿ ಚೀಪುವವರು, ತಿಂಡಿ ಹುಡುಕುವವರು, ಯಾವತ್ತೂ ಕಂಡಿಲ್ಲದವರಂತೆ ಚಾಟ್ಸ್ ತಿನ್ನುವವರು, ರಸ್ತೆ ಬದಿಯ ಮಾರಾಟಗಾರರು, ಕಯ್ಯಪಿಯ್ಯಗುಡುವ ಚಿಳ್ಳೆಗಳು, ಪಿಕ್ನಿಕ್ಕಿಗೆ ಬಂದಂತೆ ಬರುವವರು, ಯಾವುದೋ ಊರಿಂದ ಆನ್ ಡ್ಯೂಟಿ ರಜೆ ಮೇಲೆ ಬಂದು ಸುಮ್ಮನೇ ಇಲ್ಲಿ ಉಂಡು ತಿಂದು ತಿರುಗುವವರು, ಆ ಕಸದ ರಾಶಿ .... ಇವೆಲ್ಲಾ ‘ಸಾಹಿತ್ಯ ಸಮ್ಮೇಳನ‘ಕ್ಕೆ ಬೇಕಾಉಚಿತ ಊಟ, ಹಾಜರಾತಿ ರಜೆ ರದ್ದಾಗಲಿ. ಆಗ ಜೊಳ್ಳು ಹೋಗಿ ಗಟ್ಟಿಕಾಳುಗಳಷ್ಟೇ ಉಳಿಯುತ್ತವೆ ಮತ್ತು ಕನ್ನಡ ಕಟ್ಟಲು ಅಷ್ಟು ಸಾಕು ಕೂಡ.

ಇದು ಬೆಂಗಳೂರಿನಲ್ಲಿ ಆಗಿದ್ದಕ್ಕೆ ವಿಪರೀತ ಜನಸಂದಣಿಯಿಂದ ಹೀಗಾಯಿತಾ? ಅಥವಾ ಎಲ್ಲ ಕಡೆಯೂ ಹಿಂಗೇನಾ? ಆಯೋಜಕರು ಇಷ್ಟೆಲ್ಲಾ ಜನರನ್ನು ನಿರೀಕ್ಷಿಸಿರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಮ್ಮೇಳನ ವ್ಯರ್ಥ ಅಂತ ಅನ್ನಿಸದಿದ್ದರೂ ಸಮಾಧಾನವಾಗಲಿಲ್ಲ. ಮುಖ್ಯವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿ, ಜೊತೆಗೆ ಕೊನೇಪಕ್ಷ ಸಾಹಿತ್ಯ ಗೋಷ್ಠಿಗಳಿಗಾದರೂ ಸಂಬಂಧಪಟ್ಟ ಬರಹಗಾರರು, ಸಾಹಿತಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು, ತಂತ್ರಜ್ಞರು,  ಕ್ಷೇತ್ರಗಳ ಪರಿಣಿತರು  ಮತ್ತು ಆಸಕ್ತಿ ಇರುವ ಸಾರ್ವಜನಿಕರು ಮಾತ್ರ ನೋಂದಾಯಿಸಿಕೊಂಡು ಭಾಗವಹಿಸಿ ಒಂದು ಕ್ಯಾಂಪಸ್ಸಿನಲ್ಲಿ ಮಾಡಬಹುದಾಗುವಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಮತ್ತು ಇನ್ನೂ ವ್ಯವಸ್ಥಿತವಾಗಬೇಕಿದೆ. ಏನೇ ಆಗಲಿ ಇದು ನಮ್ಮದೇ ಸಮ್ಮೇಳನ. ಮುಂದಿನ ದಿನಗಳಲ್ಲಿ ಚೆನ್ನಾಗಿ ಆಗುತ್ತಾ ಹೋಗುತ್ತದೆ ಅಂತ ಆಶಿಸೋಣ.  ಒಟ್ಟಾರೆ ಈ ಸಮ್ಮೇಳನ ಒಂದು ಒಳ್ಳೆಯ ಅನುಭವ. ನನಗನ್ನಿಸಿದ್ದು ಹೇಳಿದ್ದೇನೆ. ಇನ್ನುಳಿದದ್ದು ಆ ತಾಯಿ ಭುವನೇಶ್ವರಿಗೆ ಬಿಟ್ಟದ್ದು.

9 ಕಾಮೆಂಟ್‌ಗಳು:

sunaath ಹೇಳಿದರು...

ಕನ್ನಡ ಸಮ್ಮೇಳನ ಮತ್ತು ಜಾತ್ರೆ ಇವುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಿ ಉತ್ತಮ ವಿಶ್ಲೇಷಣೆ ಬರೆದಿರುವಿರಿ. ಜಾತ್ರೆಗಳ ಬದಲಾಗಿ ಸಮ್ಮೇಳನಗಳು ಜರುಗಲಿ ಎಂದು ಹಾರೈಸೋಣ!

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ವಿ...
‘ಅಕ್ಷರ ಯಾತ್ರೆ’ಯಾಗಬೇಕಿತ್ತೇನೋ, ಗೊತ್ತಿದ್ದೇ ‘ಅಕ್ಷರ ಜಾತ್ರೆ’ ಅಂತ ಕರೆದಿರಬೇಕು.
ಲೇಖನವೂ ಚಂದ ಇದೆ. ಟೈಟಲ್ಲೂ ಇಷ್ಟವಾಯ್ತು.
ಬರೀತಿರು.

ಪ್ರೀತಿಯಿಂದ,
-ಶಾಂತಲಾ ಭಂಡಿ

Sree ಹೇಳಿದರು...

ಚೆನ್ನಾಗಿದೆ...ಬಹುಪಾಲು ಒಪ್ತೀನಿ, ಆದ್ರೆ campus ಒಳಗೆ ಮಾಡೋ ಅಂಥ ಗೋಷ್ಠಿಗಳು ಆಗ್ತಾನೆ ಇರತ್ವಲ್ಲ್ವ? ಆ ಅಕಾಡೆಮಿಕ್ ಗುಂಪುಗಳ ಆಚೆಗೂ ಒಂದಷ್ಟು ಜನ ಆಸಕ್ತಿ ಇರೋವ್ರೋ/ ಆಸಕ್ತಿ ಬೆಳೆಸಿಕೊಳ್ಳಬಯಸುವವ್ರೋ ಬರೋದಕ್ಕೆ ಇಂಥ ಸಮ್ಮೇಳನ ಬೇಕೇನೋ ಅನ್ನಿಸುತ್ತೆ ನಂಗೆ...ಆನ್ ಡ್ಯೂಟಿ ಬಂದು ತಿಂದುಂಡು ಎದ್ದುಹೊಗೋದು ನಿಲ್ಲಬೇಕು ಸರಿ(ಇದು campus ಗೋಷ್ಠಿಗಳಲ್ಲಿ ನಡೆಯದ ವಿಷಯವಲ್ಲ!), ಆದ್ರೆ ಒಟ್ಟು ಇದಕ್ಕಿರೋ ಒಂದು ಸಾರ್ವಜನಿಕ ರೂಪ ನನಗೇನೋ ಇರಬೇಕನ್ನಿಸುತ್ತೆ....

Anand ಹೇಳಿದರು...

ಹಾಯ್ ವಿಕಾಸ್
ತಲೆಬರಹ ಚೆನ್ನಾಗಿದೆ
ನೀವು ಹೇಳಿದ್ದು ನಿಜ ನಮ್ಮ ಘನತೆವೆತ್ತ ಸರಕಾರ ಎಲ್ಲರು ಬರ್ತಾರೆ ಅನ್ನೊ ನಂಬಿಕೆಯ ಮೇಲೆ ಉತ್ತಮವಾದ ಸೌಕರ್ಯಗಳನ್ನ ಇಂತಹ ಸಮ್ಮೇಳನಕ್ಕೆ ಓದಗಿಸಬೇಕು
ನಿಮಗೆ ಗೊತ್ತ ನ್ಯಾಶನಲ್ ಕಾಲೇಜ್ ನ ಒಂದು ಭಾಗ ಪಬ್ಲಿಕ್ ಶೌಚಾಲಯವಾಗಿತ್ತು
ಅದು ಮುಖ್ಯ ವೇದಿಕೆಯ ಪಕ್ಕದಲ್ಲೆ ಇತ್ತು ಅನ್ನೋದು ಒಂದು ಆಘಾತ

Subrahmanya ಹೇಳಿದರು...

ಸಮಸ್ಯೆ ಅಂದ್ರೆ, ಸಮ್ಮೇಳನದಲ್ಲಿ ಸಾಹಿತ್ಯ ಸೇರ್ಕೊಂಡಿರೋದು.
ಇರಲಿ,..ಗೊತ್ತಿದ್ದೋ ಗೊತ್ತಿಲ್ದೇನೋ ಬೆಂಗಳೂರು ಜನ ಬಂದು ಅಲ್ಲಿ ಸೇರುದ್ರಲ್ಲಾ ಅದೇ ಸಮಾಧಾನ. ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಂಡು ಮುಂದಿನ ವರುಷಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಜರುಗಲಿ ಎಂದು ಆಶಿಸೋಣ. (ಮುಖ್ಯ ತಿದ್ದುಪಡಿ ಅಂದ್ರೆ, ಊಟ-ತಿಂಡಿ ಕ್ಯಾನ್ಸಲ್ ಮಾಡಬೇಕು !).

ಅನಾಮಧೇಯ ಹೇಳಿದರು...

ಏನೇ ಅವ್ಯವಸ್ಥೆ ಆಗಿರಲಿ, ಆದರೆ ಬೆಂಗಳೂರಿನಲ್ಲಿ ಕನ್ನಡದ ಜನ ಇದ್ದಾರೆ ಮತ್ತು ಅವರಿಗೆ ಕನ್ನಡದ ಬಗ್ಗೆ ಆಸಕ್ತಿ ಇದೆ ಅಂತ ಬೆಂಗಳೂರಿನಲ್ಲಿರೋ ಪರಭಾಷಿಕರಿಗೆ ತಿಳಿಸೋದಿಕ್ಕಾದರೂ ಇಂತಹಾ ಸಮ್ಮೇಳನಗಳು ಬೆಂಗಳೂರಿನಲ್ಲಿ ನಡೆಯುತ್ತಿರಬೇಕು, ಸಾರಸ್ವತಲೋಕಕ್ಕೆ ಈ ತರಹದ ವ್ಯವಸ್ಥೆ ಕಿರಿಕಿರಿ ಅನ್ನಿಸೋದು ಸಹಜ. ಆದರೆ ಕನ್ನಡದಿಂದ ದೂರ ಹೋಗುತ್ತಿರೋ ಕನ್ನಡಿಗರನ್ನು ಮತ್ತೆ ಕನ್ನಡದೆಡೆಗೆ ತರಲು ಇಂತಹಾ ಸಮ್ಮೇಳನಗಳ ಅಗತ್ಯ ಖಂಡಿತಾ ಇದೆ

ಶಿವಪ್ರಕಾಶ್ ಹೇಳಿದರು...

ಈ ಕಾರ್ಯಕ್ರಮಕ್ಕೆ ಬರುವ ಬಹಳಷ್ಟು ಜನರು ಕನ್ನಡದ ಪ್ರೀತಿ ಮತ್ತು ಅಭಿಮಾನದಿಂದ ಬರುತ್ತಾರೆ ಎನಿಸುತ್ತದೆ.
ಆದರೆ, ಅಲ್ಲಿ ನಡೆಯುವ ಚಿಂತನೆಯ ವಿಷಯಗಳ ಬಗ್ಗೆ ಗಮನ ಹರಿಸುವವರು ತುಂಬ ವಿರಳ ಇರಬಹುದು ಎಂದು ನನ್ನ ಅನಿಸಿಕೆ.

ವಿ.ರಾ.ಹೆ. ಹೇಳಿದರು...

@ಸುನಾಥ ಕಾಕಾ, ಹೌದು. ಆಗಬೇಕು. ಧನ್ಯವಾದ.

@ಶಾಂತಲಾ, ಧನ್ಯವಾದಗಳು. :)

@ಶ್ರೀ, ಹೌದು, ಸಾರ್ವಜನಿಕ ರೂಪ ಬೇಕು ನಿಜ. ಆದರೆ ಎಲ್ಲ ಕಾರ್ಯಕ್ರಮಗಳಿಗೂ ಸಾರ್ವಜನಿಕ ರೂಪ ಕೊಟ್ಟು ಬಿಟ್ಟರೆ ಅದು ಸಂತೆಯಾಗಿ ಕೊನೆಗೆ ಅವುಗಳ outcome ಏನೂ ಇರದಂತಾಗುತ್ತದೆ. ಎರಡೂ ರೀತಿಯ ಕಾರ್ಯಕ್ರಮಗಳಿದ್ದರೆ ಒಳ್ಳೆಯದು ಅಂತ ಅನ್ನಿಸುತ್ತದೆ. ಆದರೆ ಆ ಎರಡಕ್ಕೂ ಸ್ಪಷ್ಟ ಗೆರೆಗಳಿರಬೇಕು. ಬೆರೆತುಹೋಗಬಾರದು.

@ಆನಂದ, @ಸುಬ್ರಹ್ಮಣ್ಯ, ಸಮ್ಮೇಳನ ಇನ್ನೂ ವ್ಯವಸ್ಥಿತವಾಗಿ ಆಗಲಿ ಅಂತ ಆಸೆ ಪಡೋಣ. ಧನ್ಯವಾದಗಳು.

@ಅನಾಮಧೇಯ, ಈ ರೀತಿ ಸಮ್ಮೇಳನಗಳಿಂದ ಪರಭಾಷಿಕರಿಗೆ ಕನ್ನಡ ಜನ ಇದ್ದಾರೆ ಅಂತ ವಿಶೇಷವಾಗಿ ಏನೂ ಗೊತ್ತಾಗುವುದಿಲ್ಲ ಅಂತ ನನಗನ್ನಿಸುತ್ತೆ. ಅದು ದಿನನಿತ್ಯ ಗೊತ್ತಾಗಬೇಕು, ಎಲ್ಲಾ ಕಡೆ ಕನ್ನಡ ಬಳಕೆ ಮೂಲಕ. ಆಮೇಲೆ ದೂರ ಹೋಗುತ್ತಿರುವ ಕನ್ನಡಿಗರು ಇಂತಹ ಜಾತ್ರೆಯಿಂದ ಹತ್ತಿರ ಬರುತ್ತಾರೆ ಎಂಬ ನಂಬಿಕೆಯೂ ನಿಜವನಿಸುತ್ತಿಲ್ಲ. ದೂರ ಹೋಗುವವರು ಇಂತಹ ಸಮ್ಮೇಳನಗಳಿಗೆ ಬರುವುದೂ ಇಲ್ಲ. ಎಷ್ಟೋ ಜನಕ್ಕೆ ಸಮ್ಮೇಳನ ನಡೆದಿದ್ದೇ ಗೊತ್ತಿಲ್ಲ.

@ಶಿವಪ್ರಕಾಶ, ಬಹಳಷ್ಟು ಜನ ಅಭಿಮಾನದಿಂದ ಬಂದಿರುತ್ತಾರೆ ನಿಜ, ಆದರೆ ಅದರ ಜೊತೆ ಜಾತ್ರೆ ಮಾಡೋರೆ ಜಾಸ್ತಿ ಜನ ಆಗೋದ್ರೆ ಕಾರ್ಯಕ್ರಮದ ಗಂಭೀರತೆ ಹೋಗಿಬಿಡುತ್ತದೆ. ಫಲಿತಾಂಶ ಏನೂ ಇರೋದಿಲ್ಲ.

ಅನಾಮಧೇಯ ಹೇಳಿದರು...

Ala...