ಬ್ಲಾಗಿಂಗ್ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಹೊಸಬರಿಗೆ ಬ್ಲಾಗಿಂಗ್ ಬಗ್ಗೆ ಪರಿಚಯಿಸಲು, ೨೬ ಫೆಬ್ರವರಿ ೨೦೧೪ರಂದು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
ಇಂಟರ್ನೆಟ್ ಇವತ್ತು ಯುವಜನಾಂಗಕ್ಕೆಲ್ಲಾ ಚಿರಪರಿಚಿತೆ. ಹೊತ್ತುಕಳೆಯಲು
ಎಷ್ಟು ಬಳಕೆಯಾಗುತ್ತದೆಯೋ, ಅಷ್ಟೇ ಒಳ್ಳೆಯ ರೀತಿಯಲ್ಲಿ ಸಂವಹನಕ್ಕೂ, ಮಾಹಿತಿ ವಿನಿಮಯಕ್ಕೂ ಬಳಕೆಯಾಗುತ್ತದೆ.
ಇದೊಂದು ಮುಕ್ತಮಾಧ್ಯಮವೂ ಹೌದು. ನೀವು ಎಲ್ಲೋ ಪ್ರವಾಸ ಹೋಗಿಬರುತ್ತೀರ, ಸಿನೆಮಾ ನೋಡುತ್ತೀರ, ಪುಸ್ತಕ ಓದುತ್ತೀರ,
ದಿನನಿತ್ಯದ ಜೀವನದಲ್ಲಿ ಹಲವು ಅನುಭವಗಳಾಗುತ್ತವೆ, ಬಾಲ್ಯದ
ನೆನಪುಗಳಿರುತ್ತವೆ, ಸುಂದರ ಕನಸುಗಳಿರುತ್ತವೆ. ಬರವಣಿಗೆ ಬಗ್ಗೆ ಸ್ವಲ್ಪ
ಒಲವಿದ್ದರೂ ಸಾಕು, ಎಲ್ಲಾ ಬರೆದು ದಾಖಲಿಸಬೇಕು ಅನ್ನಿಸುತ್ತದೆ.. ಬರೀ ಇಷ್ಟೇ
ಅಲ್ಲ, ಹಲವರಿಗೆ ದಿನಚರಿ ಬರೆಯುವ ಅಭ್ಯಾಸವಿರುತ್ತದೆ, ಕತೆ, ಕವನ ಬರೆಯುವ ಹವ್ಯಾಸವಿರುತ್ತದೆ. ಸೃಜನಾತ್ಮಕ ಬರವಣಿಗೆ
ಮಾಡುವ ಸಾಮರ್ಥ್ಯವಿರುತ್ತದೆ, ಯಾವುದೋ ವಿಷಯದ ಬಗ್ಗೆ ಅಭಿಪ್ರಾಯ ಹೇಳಬೇಕಿರುತ್ತದೆ,
ತಮ್ಮ ಪರಿಸರದಿಂದ, ಉದ್ಯೋಗದಿಂದ, ಅನುಭವದಿಂದ, ಹಿರಿಯರಿಂದ ಅನೇಕ ಮಾಹಿತಿಗಳು ಮತ್ತು ಜ್ಞಾನವು ಗೊತ್ತಿರುತ್ತವೆ. ಅವುಗಳನ್ನು ನಾವೇ ಇಟ್ಟುಕೊಂಡರೆ ಏನು ಪ್ರಯೋಜನ. ಅದು ಹಲವರನ್ನು ತಲುಪಿದರೆ
ಉಪಯೋಗವಾಗಬಹುದು. ಅದನ್ನು ಬರೆದ ಮೇಲೆ ನಾಲ್ಕು ಜನ ಓದುವಂತಾಗಬೇಕು. ಹಾಗೆ ಓದುವಂತೆ ಮಾಡುವುದು ಹೇಗೆ?
ಪುಸ್ತಕದಲ್ಲಿ ಬರೆದಿಟ್ಟುಕೊಂಡರೆ ನಿಮ್ಮ ಆಪ್ತ ಬಳಗದಲ್ಲಿರುವ ಆಸಕ್ತರಿಗೆ ಮಾತ್ರ
ಓದಿಸಬಹುದು. ಪತ್ರಿಕೆಗಳಿಗೆ ಕಳಿಸಿದರೆ ಪ್ರಕಟವಾಗುತ್ತದೋ ಇಲ್ಲವೋ ಎಂದು ಖಾತ್ರಿ ಇರುವುದಿಲ್ಲ. ಹಾಗಿದ್ದರೆ
ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರ ಎಂದರೆ ಬ್ಲಾಗಿಂಗ್.
ಫೇಸ್ಬುಕ್ ಮತ್ತು ಬ್ಲಾಗ್: ಫೇಸ್ ಬುಕ್ , ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ತಮಗನಿಸಿದ್ದನ್ನು ಬರೆದುಹಾಕಿ ಅದಕ್ಕೆ ಮೆಚ್ಚುಗೆಗಳನ್ನು, ಒಕ್ಕಣೆಗಳನ್ನು ಪಡೆಯುವುದು ನಮಗೆಲ್ಲಾ ತಿಳಿದಿರುವಂತದ್ದು. ಆದರೆ ಈ ಸಾಮಾಜಿಕ ತಾಣಗಳಲ್ಲಿ ಇರುವ ಕೊರತೆ ಎಂದರೆ ಇವು ಹೆಚ್ಚಾಗಿ ಚುಟುಕು ಬರಹಗಳಿಗೆ ಪ್ರಶಸ್ತವಾಗಿರುತ್ತವೆ.
ಅದೂ ಅಲ್ಲದೇ ಇವು ಒಂದು ರೀತಿಯ ನೀರಿನ ಮೇಲಿನ ಗುಳ್ಳೆಗಳಿದ್ದಂತೆ. ಅಲ್ಲಿ ಎಲ್ಲವೂ ಕ್ಷಣಿಕ. ಇವತ್ತು ಬರೆದದ್ದು
ನಾಳೆಯಾಗುವಷ್ಟರಲ್ಲಿ ಎಲ್ಲೋ ಹೋಗಿಬಿಡುವ ಸಾಧ್ಯತೆಗಳು ಹೆಚ್ಚು ಮತ್ತು ಎಲ್ಲವನ್ನೂ ವ್ಯವಸ್ಥಿತವಾಗಿಟ್ಟುಕೊಳ್ಳಲು
ಕಷ್ಟ. ಹಾಗಿದ್ದರೆ ಇದಕ್ಕೆ ಪರಿಹಾರ ಎಂದರೆ ಅಂತರಜಾಲದಲ್ಲಿ ಒಂದು ನಮ್ಮದೇ ಜಾಗವನ್ನಿಟ್ಟುಕೊಂಡು ಅದರಲ್ಲಿ
ನಮ್ಮ ಬರವಣಿಗೆಗಳನ್ನು ಹಾಕುತ್ತಾ ಹೋಗುವುದು. ಇದಕ್ಕೆ ಅವಕಾಶ ಮಾಡಿಕೊಡುವ ತಾಣಗಳೇ ಬ್ಲಾಗ್ ಗಳು.
ಬ್ಲಾಗ್ ಗಳು ಬಂದು ದಶಕದ ಮೇಲಾಗಿವೆ. ಅವು ಎಷ್ಟು ಜನಪ್ರಿಯವಾಗಿವೆ ಎಂದರೆ ಜಗತ್ತಿನಾದ್ಯಂತ ಲಕ್ಷಾಂತರ ಜನ ಬ್ಲಾಗ್ ಗಳಲ್ಲಿ ಬರೆಯುತ್ತಿದ್ದಾರೆ. ಬ್ಲಾಗುಗಳಲ್ಲಿ ನಿಮ್ಮ ಬರಹಗಳನ್ನು ಹಾಕಿದರೆ ಆ ಬ್ಲಾಗಿನ ವಿಳಾಸದ ಕೊಂಡಿಯ ಮೂಲಕ ಯಾರು ಬೇಕಿದ್ದರೂ ಜಗತ್ತಿನ ಯಾವ ಮೂಲೆಯಲ್ಲಿ ಕುಳಿತೂ ಸಹ ಅದನ್ನು ನೋಡಬಹುದು. ಅದಕ್ಕೆ ಅನಿಸಿಕೆಗಳನ್ನು ಬರೆಯಬಹುದು. ನೀವು ನಿಮ್ಮ ಊರಿನಲ್ಲೇ ಕೂತು ಬರೆದ ಬರಹವನ್ನು ಬೇರೆ ಊರಿನ ನಿಮ್ಮ ಗೆಳೆಯರಿಗೆ ಓದಿಸಬಹುದು. ಇಂತದ್ದೇ ವಿಷಯ ಅಂತ ಏನಿಲ್ಲ. ನಿಮ್ಮ ಮನಸ್ಸಿಗೆ ಏನು ಬರೆಯಬೇಕಿನಿಸುತ್ತದೋ ಅವುಗಳನ್ನೆಲ್ಲಾ ಬರೆದು ಹಾಕಬಹುದು. ನಿಮ್ಮ ಬ್ಲಾಗಿನ ವಿಳಾಸ ಅಂತರಜಾಲದಲ್ಲಿ ಹಂಚಿಕೆಯಾಗುತ್ತಾ ಹೋಗಿ ನಿಮಗೆ ಗೊತ್ತಿಲ್ಲದೇ ಓದುಗ ಬಳಗವೂ ಸೃಷ್ಟಿಯಾಗಬಹುದು. ಇದು ಯಾರ ಹಂಗಿಲ್ಲದ ಬ್ಲಾಗರಮನೆ. ಇಲ್ಲಿ ನೀವೇ ಲೇಖಕರು, ನೀವೇ ಸಂಪಾದಕರು ಹಾಗೂ ನೀವೇ ಪ್ರಕಾಶಕರು. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳೂ ಸಹ ಬ್ಲಾಗುಗಳಲ್ಲಿ ಬರೆಯುವವರನ್ನು ಗುರುತಿಸುತ್ತಿವೆ. ಬ್ಲಾಗು ಬರಹಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿವೆ. ಬ್ಲಾಗುಗಳಲ್ಲಿ ಪ್ರಕಟವಾಗುವ ಬರಹಗಳಿಂದ ಅವರ ಬರವಣಿಗೆಯ ಪ್ರತಿಭೆಯನ್ನು ಗುರುತಿಸಿ ಅವರಿಂದ ಲೇಖನಗಳನ್ನೂ ಬರೆಸಿ ಪ್ರಕಟಿಸುತ್ತಿವೆ. ಬರವಣಿಗೆಯ ಅಭ್ಯಾಸವನ್ನು ಕಾಪಾಡಿಕೊಳ್ಳಲು, ನಿಮ್ಮ ಪ್ರತಿಭೆಗೆ ವೇದಿಕೆಯಾಗಿ, ಮಾಹಿತಿ, ಜ್ಞಾನದ ಹಂಚುವಿಕೆಗೆ ಮತ್ತು ಸಂವಹನಕ್ಕೆ ಇದೊಂದು ಒಳ್ಳೆಯ ಮಾಧ್ಯಮ. ಇದ್ಯಾವುದಕ್ಕೂ ಅಲ್ಲದೇ ಬ್ಲಾಗುಗಳನ್ನು ದಿನಚರಿ ಬರೆಯಲು ಬಳಸಬಹುದು ಮತ್ತು ಈ ರೀತಿಯಲ್ಲಿ ಒಂದು ವೈಯಕ್ತಿಕ ತಾಣವನ್ನಾಗಿಯೂ ನಿರ್ವಹಿಸಿಟ್ಟುಕೊಳ್ಳಬಹುದು.
ಬ್ಲಾಗ್ ಮಾಡೋದು ಹೇಗೆ? : ಬ್ಲಾಗ್ ಗಳಿಗೆ ಉಚಿತವಾಗಿ ಜಾಗವನ್ನು ಒದಗಿಸುವ ಹಲವಾರು ತಾಣಗಳಿವೆ. ಎಲ್ಲಾ ತಾಣಗಳಲ್ಲೂ ಬ್ಲಾಗುಗಳನ್ನು
ರಚಿಸುವ ಬಗೆ ಬಹುತೇಕ ಒಂದೇ ರೀತಿ ಇರುತ್ತದೆ. ನಾವಿಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಎರಡು ತಾಣಗಳನ್ನು
ಪರಿಚಯಿಸಿಕೊಳ್ಳೋಣ. ಮೊದಲನೆಯದು ಗೂಗಲ್ ನವರ ಬ್ಲಾಗರ್(www.blogger.com),
ನೀವು ಅಂತರಜಾಲದಲ್ಲಿ ಬ್ಲಾಗರ್ ತಾಣವನ್ನು ತೆರೆದರೆ ಅದು ಲಾಗಿನ್ ಕೇಳುತ್ತದೆ. ನೀವು
ಈಗಾಗಲೇ ಜಿ-ಮೇಲ್ ಬಳಕೆದಾರರಾಗಿದ್ದರೆ ಅದೇ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಬಹುದು. ಜಿಮೇಲ್ ಬಳಕೆದಾರರಿಗೆ ಬ್ಲಾಗರ್ ತಾಣವನ್ನು ಕೂಡ ಒದಗಿಸಿಕೊಟ್ಟಿರುತ್ತಾರೆ.
ಒಂದು ವೇಳೆ ನೀವು ಜಿಮೇಲ್ ಬಳಕೆದಾರರಲ್ಲದಿದ್ದರೆ ಹೊಸ ಗೂಗಲ್ ಖಾತೆಯೊಂದನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ.
ಎರಡನೆಯದು ವರ್ಡ್ ಪ್ರೆಸ್ (www.wordpress.com). ಈ ತಾಣದಲ್ಲಿಯೂ ಕೂಡ ಬ್ಲಾಗ್
ರಚಿಸಿಕೊಳ್ಳಬೇಕಾದರೆ ಮೊದಲಿಗೆ ನೋಂದಾಯಿಸಿಕೊಂಡು ಲಾಗಿನ್ ಮಾಡಿಕೊಳ್ಳಬೇಕಾಗುತ್ತದೆ. ಇದು ಇ-ಮೇಲ್ ಖಾತೆಯನ್ನು ರಚಿಸಿಕೊಂಡಷ್ಟೇ ಸುಲಭ. ಒಮ್ಮೆ ಇದರಲ್ಲಿ ನಿಮ್ಮ ಖಾತೆಯನ್ನು ರಚಿಸಿಕೊಂಡು ಒಳಪ್ರವೇಶಿಸಿದ ಅನಂತರ ಅಲ್ಲಿರುವ
ಸೂಚನೆಗಳಂತೆ ಮುಂದುವರೆದು ನೀವು ನಿಮ್ಮ ಬ್ಲಾಗ್ ತಾಣವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಬ್ಲಾಗ್ ತಾಣದ ಹೆಸರು ಏನಿರಬೇಕು, ಅದರ ವಿಳಾಸದ ಕೊಂಡಿ ಏನಿರಬೇಕು ಎಂಬುದನ್ನು ನೀವು ನಮೂದಿಸಬಹುದು. ಬ್ಲಾಗಿನಲ್ಲಿ
ಯಾವ ಮಾದರಿಯ ಟೆಂಪ್ಲೇಟ್ ಬಳಸಬಹುದು, ಯಾವ ಹಿನ್ನೆಲೆ ಬಣ್ಣಗಳು ಬೇಕು ಎಂಬಂತಹ
ಹಲವಾರು ಆಯ್ಕೆಗಳು ಲಭ್ಯವಿರುತ್ತವೆ. ಇವೆಲ್ಲಾ ಆಯ್ಕೆಗಳ ಮೂಲಕ ನಿಮ್ಮಿಷ್ಟದಂತೆ ಬ್ಲಾಗ್ ಮಾಡಿಕೊಳ್ಳಬಹುದು.
ನೀವೂ ಬರೆಯಿರಿ…
ಈಗ ನಿಮ್ಮ ಬರಹಗಳನ್ನು ಹಾಕಲು ನಿಮ್ಮದೇ ಒಂದು ತಾಣವನ್ನು ಮಾಡಿಕೊಂಡದ್ದಾಯಿತು. ಅದರಲ್ಲಿ ಬರಹವೊಂದನ್ನು
ಹಾಕಲು ಹೊಸ ಪೋಸ್ಟ್ ಆಯ್ಕೆಯನ್ನು ಕೊಟ್ಟರೆ ನಿಮಗೆ ಅಕ್ಷರಗಳನ್ನು ಟೈಪ್ ಮಾಡಲು ಅವಕಾಶ ಮಾಡಿಕೊಡುವಂತಹ
ವಿಂಡೋ ಒಂದು ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮಗೆ ಬರೆಯಬೇಕೆನಿಸಿದ್ದನ್ನು ನೇರವಾಗಿ ಟೈಪ್
ಮಾಡಬಹುದು ಅಥವಾ ಈಗಾಗಲೇ ಬೇರೆಡೆ ಟೈಪ್ ಮಾಡಿಟ್ಟುಕೊಂಡಿದ್ದರೆ ಅದನ್ನು ಇಲ್ಲಿಗೆ ಕಾಪಿ ಪೇಸ್ಟ್ ಮಾಡಬಹುದು.
ಬರೇ ಅಕ್ಷರಗಳಲ್ಲದೇ ಚಿತ್ರಗಳನ್ನು ಹಾಕಲು, ಆಡಿಯೋ ವೀಡಿಯೋ
ಫೈಲುಗಳನ್ನು ಹಾಕಲು, ಅಕ್ಷರಶೈಲಿಗಳನ್ನು, ಬಣ್ಣಗಳನ್ನು,
ಗಾತ್ರವನ್ನು ಬದಲಾಯಿಸಲು ಮತ್ತು ಇನ್ನೂ ಹಲಬಗೆಯ ಸೌಲಭ್ಯಗಳೂ ಅಲ್ಲೇ ಇರುತ್ತವೆ. ನಿಮಗೆ ಬೇಕಾದಂತೆ ಎಲ್ಲವನ್ನೂ ತಯಾರು
ಮಾಡಿಕೊಂಡ ನಂತರ ಅದನ್ನು ಪ್ರಕಟಿಸಬಹುದು. ಒಮ್ಮೆ ಅದು ಪ್ರಕಟಗೊಂಡು ಅಂತರಜಾಲಕ್ಕೆ ಸೇರಿದ ಮೇಲೆ ಬ್ಲಾಗಿನ ವಿಳಾಸದ ಕೊಂಡಿಯ ಮೂಲಕ ಅದು ಜಗತ್ತಿನಲ್ಲಿ ಎಲ್ಲಿಂದ ಬೇಕಾದರೂ ಕೂಡ ತೆರೆದುನೋಡಬಹುದಾಗಿರುತ್ತದೆ. ಮತ್ತೊಂದು ಬರಹವನ್ನು ಹಾಕುವಾಗಲೂ ಇದೇ ರೀತಿ ಹೊಸ ಪೋಸ್ಟ್
ತಯಾರು ಮಾಡಿಕೊಂಡು ಪ್ರಕಟ ಮಾಡಬೇಕಾಗುತ್ತದೆ. ನಿಮಗೆ ಬರೆಯಬೇಕೆನಿಸಿದಾಗಲೆಲ್ಲಾ ಹೊಸ ಹೊಸ ಬರಹಗಳನ್ನು
ಪ್ರಕಟಿಸುತ್ತಿರಬಹುದು. ಬ್ಲಾಗುಗಳ ಭಾಷೆಗೆ ಮತ್ತು
ವಿಷಯಗಳಿಗೆ ಯಾವುದೇ ನಿರ್ಬಂಧ ಇಲ್ಲ. ನಮಗೆ ಬೇಕಾದ ಭಾಷೆಯಲ್ಲಿ ನಮಗೆ ಬರೆಯಬೇಕಿನಿಸಿದ ವಿಷಯವನ್ನು
ಬರೆಯಬಹುದು. ನಿಮ್ಮ ಅಭಿವ್ಯಕ್ತಿಯ ಭಾಷೆ ಯಾವುದು ಮತ್ತು ನಿಮ್ಮ ಓದುಗರ ವ್ಯಾಪ್ತಿ ಎಲ್ಲಿವರೆಗಿದೆ
ಎಂಬುದರ ಆಧಾರದ ಮೇಲೆ ಇದನ್ನು ತೀರ್ಮಾನಿಸಿಕೊಳ್ಳಬಹುದು. ನಮ್ಮ ಕನ್ನಡದಲ್ಲೇ ಪ್ರಕಟಗೊಳ್ಳುವ ಸಾವಿರಾರು
ಬ್ಲಾಗ್ ಗಳಿವೆ.. ವಿವಿಧ ವಿಷಯಗಳನ್ನು ಬರೆಯುವ ಬ್ಲಾಗುಗಳ ಜೊತೆಗೆ ಅಡುಗೆ, ಹಾಸ್ಯ, ವಿಜ್ಞಾನ, ಕತೆಕವನ, ರಾಜಕೀಯ ವಿಶ್ಲೇಷಣೆ ಇತ್ಯಾದಿ ನಿರ್ದಿಷ್ಟ ವಿಷಯಗಳನ್ನೇ ಬರೆಯುವ ಬ್ಲಾಗುಗಳಿವೆ. ಫೋಟೋಗ್ರಫಿ
ಬ್ಲಾಗುಗಳು, ಆಡಿಯೋ, ವಿಡಿಯೋ ಬ್ಲಾಗುಗಳೂ ಇವೆ. ಉದಾಹರಣೆಗೆ ಪ್ರವಾಸಕ್ಕೆ ಮೀಸಲಾಗಿರುವ ‘ಅಲೆಮಾರಿಯ ಅನುಭವಗಳು’ ಬ್ಲಾಗ್ (http://rajesh-naik.blogspot.com/),
ಅಡುಗೆಗಳಿಗೆ ಮೀಸಲಾಗಿರುವ ‘ಅಡುಗೆ-ಸವಿರುಚಿ’ ಬ್ಲಾಗ್ (http://indiankannadarecipes.blogspot.com),
ಸಿನೆಮಾ ವಿಷಯಕ್ಕೆ ಮೀಸಲಾಗಿರುವ ‘ಸಾಂಗತ್ಯ’ ಬ್ಲಾಗ್ (http://saangatya.wordpress.com).
ಕನ್ನಡದಲ್ಲಿ ಬರೆಯಲು ಹತ್ತುಹಲವಾರು ತಂತ್ರಾಂಶಗಳಿವೆ. ಅವುಗಳ ಪಟ್ಟಿಯನ್ನು ಇಲ್ಲಿ ನೋಡಬಹುದು: KannadaTyping.
ಇಷ್ಟೆಲ್ಲಾ ಸೌಲಭ್ಯಗಳಿದ್ದಾಗ ತಡವೇಕೆ? ನಿಮ್ಮದೇ ಒಂದು ಬ್ಲಾಗ್ ಮಾಡಿಕೊಳ್ಳಿ. ಬರವಣಿಗೆ ಶುರುಮಾಡಿ. ಆದರೆ ಎಚ್ಚರ ಇರಲಿ. ಯಾವುದೇ ವ್ಯಕ್ತಿಯನ್ನು ಹಳಿಯಲು, ತೇಜೋವಧೆ ಮಾಡಲು ಬ್ಲಾಗುಗಳನ್ನು ಬಳಸಬೇಡಿ. ಅಶ್ಲೀಲ, ಅಸಭ್ಯ ವಿಷಯ, ಚಿತ್ರಗಳನ್ನು ಹಾಕದಿರಿ ಮತ್ತು ಯಾವುದೇ ದುರುದ್ದೇಶಕ್ಕಾಗಿ ಬ್ಲಾಗ್ ಬಳಕೆಯಾಗದಿರಲಿ. ಬ್ಲಾಗುಗಳನ್ನು ನಿಮ್ಮ ವ್ಯಕ್ತಿತ್ವದ ಅರಳುವಿಕೆಯ ಭಾಗವಾಗಿಟ್ಟುಕೊಳ್ಳಿ.
ಇಷ್ಟೆಲ್ಲಾ ಸೌಲಭ್ಯಗಳಿದ್ದಾಗ ತಡವೇಕೆ? ನಿಮ್ಮದೇ ಒಂದು ಬ್ಲಾಗ್ ಮಾಡಿಕೊಳ್ಳಿ. ಬರವಣಿಗೆ ಶುರುಮಾಡಿ. ಆದರೆ ಎಚ್ಚರ ಇರಲಿ. ಯಾವುದೇ ವ್ಯಕ್ತಿಯನ್ನು ಹಳಿಯಲು, ತೇಜೋವಧೆ ಮಾಡಲು ಬ್ಲಾಗುಗಳನ್ನು ಬಳಸಬೇಡಿ. ಅಶ್ಲೀಲ, ಅಸಭ್ಯ ವಿಷಯ, ಚಿತ್ರಗಳನ್ನು ಹಾಕದಿರಿ ಮತ್ತು ಯಾವುದೇ ದುರುದ್ದೇಶಕ್ಕಾಗಿ ಬ್ಲಾಗ್ ಬಳಕೆಯಾಗದಿರಲಿ. ಬ್ಲಾಗುಗಳನ್ನು ನಿಮ್ಮ ವ್ಯಕ್ತಿತ್ವದ ಅರಳುವಿಕೆಯ ಭಾಗವಾಗಿಟ್ಟುಕೊಳ್ಳಿ.
2 ಕಾಮೆಂಟ್‌ಗಳು:
Aaha, sakkath. Monmonne paaTha maaDde, blogging bagge makLge.. ee article na share maadteeni makLge, adesht makLge Kannada arthvaagutto aagli.. :)
Aaha, sakkath. Monmonne paaTha maaDde, blogging bagge makLge.. ee article na share maadteeni makLge, adesht makLge Kannada arthvaagutto aagli.. :)
ಕಾಮೆಂಟ್ ಪೋಸ್ಟ್ ಮಾಡಿ