ಶನಿವಾರ, ಸೆಪ್ಟೆಂಬರ್ 19, 2020

ಡಬ್ಬಿಂಗ್: ಸಿನೆಮಾ & ಟೀವಿವಾಹಿನಿ - ಒಂದಿಷ್ಟು ಸಂಗತಿಗಳು

ಆಯಾ ಕಾಲಘಟ್ಟದಲ್ಲಿ ಫೇಸ್ಬುಕ್ಕಲ್ಲಿ ಬರೆದಿದ್ದ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ದಾಖಲಿಸಿಡುತ್ತಿದ್ದೇನೆ. ಕನ್ನಡದಲ್ಲಿ ಡಬ್ಬಿಂಗ್ ತೆರೆದುಕೊಳ್ಳಬೇಕೆಂದು ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಕಾನೂನಾತ್ಮಕ ಹೋರಾಟವು ಯಶಸ್ವಿಯಾದ ನಂತರ ಹಲವು ತೊಡಕುಗಳನ್ನು ದಾಟಿ ಬಂದಿದ್ದರಿಂದ ಈ ಸಂಗತಿಗಳು ಮುಖ್ಯವಾಗಿವೆ.

ನವೆಂಬರ್ 1, 2019 · ಭದ್ರಾವತಿ, ಕರ್ನಾಟಕ
: ನವೆಂಬರಲ್ಲಿ ಹಾಲಿವುಡ್ದಿನ ಖ್ಯಾತ 'ಟರ್ಮಿನೇಟರ್ ಡಾರ್ಕ್ ಫೇಟ್' ಸಿನೆಮಾ ಕನ್ನಡದಲ್ಲೂ ಬಿಡುಗಡೆ ಆಯಿತು. ಭಾರತದಲ್ಲಿ ಇತರ ಭಾಷೆಗಳ ಜೊತೆಯಲ್ಲೇ ಏಕಕಾಲಕ್ಕೆ ಕನ್ನಡದಲ್ಲೂ ಬಿಡುಗಡೆಯಾಗ್ತಿರೋ ಮೊಟ್ಟಮೊದಲ ಹಾಲಿವುಡ್ ಸಿನೆಮಾ ಇದು. ಭದ್ರಾವತಿಯಲ್ಲಿ ಈ ಸಿನೆಮಾವನ್ನು ನೋಡಿದೆ. ಸಣ್ಣವನಿದ್ದಾಗಿನಿಂದ ಹಲವು ಇಂಗ್ಲೀಶ್ ಸಿನೆಮಾಗಳನ್ನು ಅನಿವಾರ್ಯವಾಗಿ ಇಂಗ್ಲೀಶಲ್ಲಿ ನೋಡಿದ್ದೆ. ಟೈಟಾನಿಕ್, ಜುರಾಸಿಕ್ ಪಾರ್ಕ್ ನಂತಹ ಜನಪ್ರಿಯ ಸಿನೆಮಾಗಳು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದ್ದಾಗ ಇವೆಲ್ಲಾ ಕನ್ನಡದಲ್ಲಿ ಏಕೆ ಬರುವುದಿಲ್ಲ ಎಂಬಂತಹ ಪ್ರಶ್ನೆ ಮತ್ತು ಅಸಮಾಧಾನ ಚಿಕ್ಕಂದಿನಿಂದಲೂ ಇತ್ತು.  ಅದಾಗಿ ದಶಕಗಳ ನಂತರ ಅಂತೂ ಕನ್ನಡದಲ್ಲಿದ್ದ ಡಬ್ಬಿಂಗ್ ಬ್ಯಾನ್ ತೊಡೆದುಹಾಕಿ ಹಾಲಿವುಡ್ ಸಿನೆಮಾಗಳೂ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಸಾಧ್ಯವಾಗಿಸಿದ್ದು ಸಂತೋಷದ ಸಂಗತಿ.

  


ಅಕ್ಟೋಬರ್ 6, 2019 · ಬೆಂಗಳೂರು: 'ಸೈರಾನರಸಿಂಹರೆಡ್ಡಿ' ಅನ್ನುವ ಸಿನೆಮಾ ನೋಡಿದೆ. ಮೂಲತಃ ತೆಲುಗು ಚಿತ್ರವಾದರೂ ಇದು ನಾಲ್ಕೈದು ಭಾಷೆಗಳಲ್ಲಿ ಒಂದೇ ಸಲಕ್ಕೆ ಬಿಡುಗಡೆಯಾಗಿದೆ‌. ಕನ್ನಡದಲ್ಲಿ ಇದರ ಡಬ್ಬಿಂಗ್ ಕ್ವಾಲಿಟಿ ಅದ್ಭುತವಾಗಿದೆ‌. ಮೂಲ ತೆಲುಗು ಸಿನೆಮಾ ಎಂಬುದು ನೆನಪಿಗೇ ಬಾರದಂತೆ ಕನ್ನಡ ಸಂಭಾಷಣೆಗಳು ಮತ್ತು ಲಿಪ್ ಟೈಮಿಂಗ್ ಹೊಂದಿಕೆಯಾಗಿದೆ. ಇಷ್ಟು ವರ್ಷ‌ ದೊಡ್ಡ ಬಜೆಟ್ಟಿನ ಚಿತ್ರಗಳು ಕರ್ನಾಟಕದಾದ್ಯಂತ ತೆಲುಗು ಭಾಷೆಯಲ್ಲೇ ಇನ್ನೂರು ಮುನ್ನೂರು‌ ಕಡೆ ಬಿಡುಗಡೆಯಾಗುತ್ತಿದ್ದವು. ಕನ್ನಡ ಚಿತ್ರರಂಗದ ಕೆಲವರ ಸ್ವಾರ್ಥದಿಂದ ಈಸ್ಥಿತಿ ಬಂದಿತ್ತು.ಈ ಹಿಂದೆ ಕೆಲವು ಸಿನೆಮಾಗಳು ಏಕಕಾಲಕ್ಕೆ ಕನ್ನಡದಲ್ಲೂ ಬಂದಾಗ ಅದಕ್ಕೆ ಟಾಕೀಸ್ ಸಿಗದಂತೆ ಮಾಡಲಾಗಿತ್ತು. ನರಸಿಂಹರೆಡ್ಡಿ ಸಿನೆಮಾದ ಕನ್ನಡ ಆವೃತ್ತಿಗೂ ಶೋಗಳು ಸಿಗದಂತೆ ಮಾಡಲು ಪ್ರಯತ್ನಗಳು ನಡೆದರೂ ಸಹ ಈ ಬಾರಿ ಹೆಚ್ಚು ತೆರೆಗಳಲ್ಲಿ ಪ್ರದರ್ಶನ ಸಾಧ್ಯವಾಗಿ ಜನರು ನೋಡುತ್ತಿದ್ದಾರೆ. ಸಿನೆಮಾ ಬಗ್ಗೆ ಹೇಳುವುದಾದರೆ, ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ಅದನ್ನು ಪ್ರಜಾಂದೋಲನದಂತೆ ಮಾಡಿದ ನರಸಿಂಹ ರೆಡ್ಡಿಯ ಹೋರಾಟ ಕಥನ. ಸ್ವಲ್ಪ ಹೀರೋಯಿಸಂ ವೈಭವೀಕೃತವಾಗಿ, ನಾಟಕೀಯ ಸನ್ನಿವೇಶಗಳಿದ್ದರೂ ಸಿನೆಮಾ ಅದ್ದೂರಿಯಾಗಿದೆ ಮತ್ತು ದೃಶ್ಯಗಳು ರೋಚಕವಾಗಿವೆ. ಮುಖ್ಯಪಾತ್ರವೊಂದರಲ್ಲಿ ಸುದೀಪ ಇರುವುದು ಪ್ಲಸ್ ಪಾಯಿಂಟ್. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಒಂದು ಮಜಲನ್ನು ಯಶಸ್ವಿಯಾಗಿ ತೋರಿಸಿದೆ ಈ ಸಿನೆಮಾ. ನವೆಂಬರಲ್ಲಿ 'ಟರ್ಮಿನೇಟರ್'‌ ಸಿನೆಮಾಕೂಡ ಕನ್ನಡದಲ್ಲಿ ಬರಲಿದೆ. ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವಂತಾಗಿ ಭಾಷೆ ಸಮೃದ್ದ, ಸಶಕ್ತವಾಗಬೇಕೆಂಬ ಡಬ್ಬಿಂಗ್ ಪರ ಆಶಯಕ್ಕ ಗೆಲುವಾಗಲಿ. ನಿಮ್ಮೂರಿನ ಟಾಕೀಸ್ ಗಳಲ್ಲಿ ಕನ್ನಡ ಆವೃತ್ತಿಗಳನ್ನೇ ಹಾಕಲು ಆಗ್ರಹಿಸಿ. ಕನ್ನಡ ಆವೃತ್ತಿಯಲ್ಲೇ ಸಿನೆಮಾ ನೋಡಿ ಪ್ರೋತ್ಸಾಹಿಸಿ. 
(ಹಿಂದಿಯ 'ದಬಾಂಗ್ ೩' ಸಿನೆಮಾ ಕೂಡ ಇದೇ ಸಮಯದಲ್ಲಿ ಕನ್ನಡದಲ್ಲೂ ಬಿಡುಗಡೆಯಾಗಿ ಟಾಕೀಸುಗಳಲ್ಲಿ ಪ್ರದರ್ಶನಗೊಂಡಿತು.)

ಜೂನ್ ೨೧, ೨೦೧೯: ಇನ್ನು ಕೆಲವು ದಿನಗಳಲ್ಲಿ 'ಡಿಸ್ಕವರಿ' ಮತ್ತು 'ಡಿಸ್ಕವರಿ ಕಿಡ್ಸ್' ಚಾನಲ್ ಗಳಿಗೆ 'ಕನ್ನಡ' ಫೀಡ್ ಶುರುವಾಗಲಿದೆ. ನಿಕೆಲೊಡಿಯೋನ್, ಸೋನಿಕ್ ಚಾನಲ್ ಗಳ ನಂತರ ಇವು ಕನ್ನಡ ಫೀಡ್ ಹೊಂದಿರುವ ಚಾನಲ್ ಗಳ ಪಟ್ಟಿಗೆ ಸೇರಲಿವೆ. 'ಸ್ಟಾರ್ ಸ್ಫೋರ್ಟ್ ಕನ್ನಡ' ಚಾನಲ್ ಅಂತೂ ಯಶಸ್ವಿಯಾಗಿ ನಡೆಯುತ್ತಿರುವುದು ಗೊತ್ತಿರುವ ವಿಚಾರ. ನಮ್ಮದೇ ಭಾಷೆಯಲ್ಲಿ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಸುಲಭ ಮತ್ತು ಪರಿಣಾಮಕಾರಿ. ಇದರೊಂದಿಗೆ ಕನ್ನಡ ಇನ್ಫೋಟೈನ್ ಮೆಂಟ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಒಂದು ಭಾಷೆ ಗಟ್ಟಿಯಾಗಿ ನೆಲೆ ನಿಲ್ಲಬೇಕಾದರೆ, ಜನರು ಭಾಷೆಯ ಕಲಿಕೆಗೆ ಆಸಕ್ತಿ ಹೊಂದಬೇಕಾದರೆ ಈಗಿನ ಕಾಲದಲ್ಲಿ ಅದಕ್ಕೆ ಆರ್ಥಿಕ ಕೋನ ಇರಲೇಬೇಕು. ಕನ್ನಡ ಉದ್ಯೋಗ ಕೊಡುವ ಭಾಷೆಯಾಗಿಯೂ ಮುಂದುವರೆಯಬೇಕು. ಚೆನ್ನಾಗಿ ಕನ್ನಡ ಗೊತ್ತಿರುವವರಿಗೆ, ಕನ್ನಡ ಬರಹಗಾರರಿಗೆ ಮತ್ತು ಆಯಾ ಕ್ಷೇತ್ರದ ಅನುಭವಿಗಳಿಗೆ, ಪರಿಣಿತರಿಗೆ ಬೇಡಿಕೆ ಒದಗಿಸುವಂತಹ ಇಂತಹ ಹಲವು ಯೋಜನೆಗಳಿಗೆ ನಾವು ಬೆಂಬಲ ಕೊಡಬೇಕಾಗಿದೆ.
(2019 ರಲ್ಲಿ ಡಿಸ್ಕವರಿ ಕನ್ನಡ ಆಡಿಯೋ ಫೀಡ್ ಶುರುವಾಗಿದೆ)

******

 ಸೆಪ್ಟೆಂಬರ್ ೨೦, ೨೦೨೦: ೨೦೨೦ರಲ್ಲಿ ಮೊದಲ ಬಾರಿಗೆ ಉದಯ ಟೀವಿಯು ಕನ್ನಡ ಕ್ಕೆ ಡಬ್ ಆದ ಕೆಲವು ತಮಿಳು ಸಿನೆಮಾಗಳನ್ನು ಪ್ರಸಾರ ಮಾಡಿತು. ಅತ್ಯುತ್ತಮ ಡಬ್ಬಿಂಗ್ ಕ್ವಾಲಿಟಿ ಹೊಂದಿದ್ದ ಅವುಗಳಿಗೆ  ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ೨೦೨೦ ರ   ಮಾರ್ಚ್ ನಂತರ ಕೊರೊನಾ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಶೂಟಿಂಗ್  ಸ್ಥಗಿತಗೊಂಡಿದ್ದರಿಂದ  ಅನೇಕ ಟೀವಿ ವಾಹಿನಿಗಳು ಕನ್ನಡಕ್ಕೆ ಡಬ್ ಆದ  ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿದವು. ಮಹಾಭಾರತ, ಸೀತೆಯರಾಮ, ಮಾಲ್ಗುಡಿ ಡೇಸ್, ಮಹಾನಾಯಕ ಅಂಬೇಡ್ಕರ್, ರಾಧಾಕೃಷ್ಣ, ಅಲಾದ್ದಿನ್ ಮುಂತಾದ  ಹಲವು ಧಾರಾವಾಹಿ, ಕಾರ್ಯಕ್ರಮಗಳು  ಮತ್ತು ಸಿನೆಮಾಗಳು ಪ್ರಸಾರವಾದವು / ಆಗುತ್ತಿವೆ.  ಡಬ್ಬಿಂಗ್ ಸಿನೆಮಾ/ಕಾರ್ಯಕ್ರಮಗಳನ್ನೇ ಮುಖ್ಯವಾಗಿ ಪ್ರಸಾರ ಮಾಡುವ  ಒಂದು ಟೀವಿ ಚಾನಲ್  Dangal Kannada ಕೂಡ  ಸೆಪ್ಟೆಂಬರಲ್ಲಿ ಪ್ರಾಯೋಗಿಕ ಪ್ರಸಾರ  ಶುರುಮಾಡಿದೆ. 


ಗುರುವಾರ, ಸೆಪ್ಟೆಂಬರ್ 10, 2020

ಡಬ್ಬಿಂಗ್: ತೆರೆದಿದೆ ಆಯ್ಕೆ ಸ್ವಾತಂತ್ರ್ಯದ ಬಾಗಿಲು

ಡಬ್ಬಿಂಗ್ ಇಂದ ಕನ್ನಡ ಸಂಸ್ಕೃತಿಗೆ ಧಕ್ಕೆ, ನಮ್ಮ ಜಾಯಮಾನಕ್ಕೆ ತಕ್ಕುದಲ್ಲ ಎಂಬೆಲ್ಲಾ ಹಳೆ ವಾದವನ್ನು ಇನ್ನೂ ಮಾಡುತ್ತಿರುವ, ಪಾಳೆಗಾರಿಕೆ ಧೋರಣೆಯಲ್ಲಿರುವ 'ಗಣ್ಯ'ರಿಗೆ ನನ್ನದೊಂದು ಚುಟುಕಾದ ಉತ್ತರ. (20 ಜುಲೈ 2020 ಪ್ರಜಾವಾಣಿಯಲ್ಲಿ)


ಜುಲೈ ೧೮, ೨೦೨೦ ರ ವಾಚಕರವಾಣಿಯಲ್ಲಿ ಹಲವು ಗಣ್ಯರು ಡಬ್ಬಿಂಗ್ ಕಾರ್ಯಕ್ರಮಗಳ ಪ್ರಸಾರಕ್ಕೆ ವಿರೋಧಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದಿನ ಹಲವಾರು ವರ್ಷಗಳಿಂದ ಡಬ್ಬಿಂಗ್ ಇಲ್ಲದೇ ಕರ್ನಾಟಕದ ಹಿರಿತೆರೆಯು ಪರಭಾಷೆ ಚಿತ್ರಗಳ ಹಾವಳಿ, ರೀಮೇಕ್ ಹಾವಳಿಗಳಿಂದ ನಲುಗಿದೆ. ಅದೇ ಸಂಸ್ಕೃತಿಯು ಕನ್ನಡ ಕಿರುತೆರೆಗೂ ಬಂದಿತ್ತು. ಪ್ರಸಾರವಾಗುತ್ತಿದ್ದ ಬಹಳಷ್ಟು ಧಾರಾವಾಹಿಗಳು ಹಿಂದಿ, ತಮಿಳು, ಮರಾಠಿ ಧಾರಾವಾಹಿಗಳ ರೀಮೇಕ್ ಆಗಿದ್ದು ಅಲ್ಲಿಂದ ಉಡುಪು, ಸಂಪ್ರದಾಯಗಳನ್ನೂ ನಕಲು ಮಾಡಲಾಗುತ್ತಿತ್ತು. ಹಾಗಾಗಿ ಇಲ್ಲಿ ಕನ್ನಡ ಸಂಸ್ಕೃತಿಯ ಕಾಳಜಿಯು ವಿರೋಧಾಭಾಸವಾಗಿದೆ. ಇನ್ನು ಮಹಾಭಾರತದಂತಹ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕ ನೋಡಲು ಸಾಧ್ಯವಾಗಿಸಿದ್ದು ಈ ಡಬ್ಬಿಂಗ್. ವೀಕ್ಷಕರಿಗೆ ಕಿರಿಕಿರಿಯೆನಿಸಿದಲ್ಲಿ ಟಿ ಆರ್ ಪಿ ಬಿದ್ದುಹೋಗಿ ವಾಹಿನಿಗಳು ತಾವೇ ನಿಲ್ಲಿಸುತ್ತಾರೆ. ನಮ್ಮ ಶಂಕರನಾಗ್ ನಿರ್ಮಿಸಿದ ಮಾಲ್ಗುಡಿ ಡೇಸ್ ಇಷ್ಟು ವರ್ಷ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲದಿದ್ದುದ್ದು ವಿಪರ್ಯಾಸವಾಗಿತ್ತು. ಈಗ ಅದು ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ನಮಗೆ ಅತ್ಯಂತ ಖುಷಿ ತಂದಿದೆ. ಇದರಿಂದ ಕನ್ನಡ ಪ್ರೇಕ್ಷಕನಿಗೆ ಹೊಸ ಆಯ್ಕೆ ಸ್ವಾತಂತ್ರ್ಯದ ಬಾಗಿಲು ತೆರೆದಿದ್ದು, ಪರಭಾಷೆಗಳ ಮೇಲೆ ಅವಲಂಬಿತನಾಗಬೇಕಾದ ಅನಿವಾರ್ಯತೆಗಳನ್ನು ಈ ಡಬ್ಬಿಂಗ್ ಹೋಗಲಾಡಿಸಿದೆ. ಆದ್ದರಿಂದ ಕನ್ನಡ ಸಂಸ್ಕೃತಿ, ಜಾಯಮಾನ ಎಂಬುದನ್ನು ಒಂದಿಷ್ಟೇ ಜನರು ತೀರ್ಮಾನಿಸುವುದು ಅಸಾಂವಿಧಾನಿಕವಾಗುತ್ತದೆ ಮತ್ತು ನಾವು ಕೊಟ್ಟಿದ್ದನ್ನೇ ನೋಡಬೇಕೆನ್ನುವ ಏಕಮುಖ ಧೋರಣೆಯಿಂದ ವೀಕ್ಷಕನ ಆಯ್ಕೆ ಸ್ವಾತಂತ್ರದ ಹರಣವಾದಂತಾಗುತ್ತದೆ. ಈಗ ಕೊರೊನಾ ಕಾರಣದಿಂದ ಶೂಟಿಂಗ್ ಸ್ಥಗಿತವಾಗಿ ಮೂಲಕನ್ನಡ ಕಾರ್ಯಕ್ರಮಗಳ ಕೊರತೆಯಿಂದ ತಾತ್ಕಾಲಿಕವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿರಬಹುದು. ವಾಹಿನಿಗಳಿಗೂ ಸಹ ಇದು ಕೆಲಕಾಲ ಅನಿವಾರ್ಯವಾಗಿದೆ ಮತ್ತು ಪ್ರೇಕ್ಷಕರೂ ಅದಕ್ಕೆ ಸ್ಪಂದಿಸಿದ್ದಾರೆ. ಇದರಿಂದ ಪಾಠ ಕಲಿತಾದರೂ ಮುಂದೆ ಕನ್ನಡ ಸಿನೆಮಾ ಮತ್ತು ಧಾರಾವಾಹಿ ತಯಾರಕರು ಕನ್ನಡ ಸೊಗಡಿನ, ಕನ್ನಡ ನೆಲದ ಕತೆಗಳನ್ನುಳ್ಲ, ಪಾತ್ರಗಳನ್ನುಳ್ಳ ಉತ್ತಮ ಧಾರಾವಾಹಿಗಳ ತಯಾರಿಕೆಗೆ ಗಮನ ಹರಿಸಿದಲ್ಲಿ ಆತಂಕ ಪಡಬೇಕಿರುವುದಿಲ್ಲ. ಕಲಾವಿದರು, ನಿರ್ಮಾಪಕರು ಮತ್ತು ವಾಹಿನಿಗಳು ಚರ್ಚಿಸಿ ಒಂದು ಹಾದಿಯನ್ನು ಕಂಡುಕೊಂಡರೆ ನಮ್ಮ ಅಸ್ಮಿತೆಗೆ ಡಬ್ಬಿಂಗ್ ಯಾವುದೇ ತೊಂದರೆ ಕೊಡುವುದಿಲ್ಲ.

-----

ವೈಯಕ್ತಿಕವಾಗಿ ನಾನು ಕೂಡ ಸಾಮಾಜಿಕ, ಕೌಟುಂಬಿಕ, ಸಮಕಾಲೀನ ಧಾರಾವಾಹಿಗಳ ಡಬ್ಬಿಂಗ್ ಇಷ್ಟ ಪಡುವುದಿಲ್ಲ. ಆದರೆ ಅವುಗಳನ್ನೇ ಬೇರೆ ಭಾಷೆಗಳಿಂದ ರೀಮೇಕ್ ಮಾಡಿ ಕೆಟ್ಟದಾಗಿ ಪ್ರೇಕ್ಷಕನಿಗೆ ಬಡಿಸುತ್ತಿರುವಾಗ ಕನ್ನಡ ಸಂಸ್ಕೃತಿ, ಜಾಯಮಾನದ ಹೆಸರಿನಲ್ಲಿ ಡಬ್ಬಿಂಗ್ ವಿರೋಧಿಸುವುದು ಸಮರ್ಥನೀಯವಲ್ಲ. ಒಟ್ಟಿನಲ್ಲಿ ವೀಕ್ಷಕನ ಆಯ್ಕೆ ಸ್ವಾತಂತ್ರ್ಯ ಮುಖ್ಯ. ನಮ್ಮದು ಉದಾರವಾದ. ಯಾವುದು ಮಾಡಬೇಕು, ಯಾರು ಮಾಡಬಾರದು, ಏನು ಮಾಡಬೇಕು/ ಬಾರದು, ಎಂತದ್ದು ನೋಡಬೇಕು/ಬಾರದು ಎಂಬುದನ್ನು ಯಾವ ಹತೋಟಿಕೂಟಗಳು, ಯಾವ ವ್ಯಕ್ತಿಗಳು ನಿಯಂತ್ರಿಸಬಾರದು. ಜನರ ಆಯ್ಕೆಗೆ ಬಿಡಬೇಕು. ಅಂತಹ ಸಮಕಾಲೀನ ಧಾರಾವಾಹಿಗಳು ವೀಕ್ಷಕರಿಗೆ ಇಷ್ಟವಾಗದಿದ್ದಲ್ಲಿ ಅವು ತಿರಸ್ಕೃತಗೊಳ್ಳುತ್ತವೆ. ಎಲ್ಲವನ್ನೂ ನಮ್ಮಲ್ಲಿ ಮಾಡಲು ಆಗುವುದಿಲ್ಲ, ಹಾಗಾಗಿ ನಾವು ಮಾಡುವುದಷ್ಟನ್ನೇ ನೋಡಲು ಕೊಡುತ್ತೇವೆ, ಬೇರೆ ಬೇಕಾದಲ್ಲಿ ಬೇರೆ ಭಾಷೆಗಳ ಮೊರೆಹೋಗಿ ಎಂದು ಪರೋಕ್ಷವಾಗಿ ಕನ್ನಡ ವೀಕ್ಷಕರನ್ನು ಹೊರತಳ್ಳುತ್ತಿರುವುದು ಕೆಲವರ ಸ್ವಾರ್ಥ ತುಂಬಿದ ಈ ಡಬ್ಬಿಂಗ್ ವಿರೋಧೀ ನೀತಿ. ಹಾಗಾಗಿ ಒಂದು ಹೊಸ ಅಲೆ ಬರುವಾಗ ಕೊಂಚಕಾಲ ಈ ಚರ್ಚೆಗಳು ನಡೆಯಬೇಕು. ಅನಂತರ ಒಂದು ನಡುಹಾದಿ ತೆರೆದುಕೊಳ್ಳಬಹುದು. ಧನ್ಯವಾದಗಳು.

ಸೋಮವಾರ, ಏಪ್ರಿಲ್ 20, 2020

ಕನ್ನಡ ಯುನಿಕೋಡ್ ಅಕ್ಷರಶೈಲಿ/ಫಾಂಟ್'ಗಳು - Kannada Unicode Fonts

ಕನ್ನಡದ ಹಲವು ಯುನಿಕೋಡ್ ಅಕ್ಷರ ಶೈಲಿಗಳು (ಫಾಂಟ್ಸ್) ಲಭ್ಯ ಇವೆ. ನನಗೆ ಗೊತ್ತಿರುವಷ್ಟು ಈ ಕೆಳಗೆ ಪಟ್ಟಿಮಾಡಿದ್ದೇನೆ. ಕೆಲವು ಫಾಂಟುಗಳು ಬೇರೆ ಫಾಂಟುಗಳ derived ಆವೃತ್ತಿಗಳಾದ್ದರಿಂದ ನೋಡಲು ಸ್ವಲ್ಪ ಒಂದೇ ತರ ಕಾಣುತ್ತವೆ. ಬಹುತೇಕ ಫಾಂಟುಗಳಲ್ಲಿ ಮೂರು  ಬಗೆ (ಸಾಮಾನ್ಯ, ಓರೆ, ದಪ್ಪ - Normal, Bolt, Italic ಮತ್ತು ಇವುಗಳ ಕಾಂಬಿನೇಶನ್) ಇವೆ.
'ಗೋದಾ', 'ವಾಗೀಶ' ಇವು ಸಂಪಿಗೆ ಮತ್ತು ಕೇದಗೆ ಫಾಂಟನ್ನು ಆಧರಿಸಿವೆ. ಅರ್ಥಾತ್ ಅವನ್ನು ಸುಧಾರಿಸಿದ ಫಾಂಟ್‌ಗಳು. ಇವುಗಳ ವಿಶೇಷವೆಂದರೆ ಇವುಗಳಲ್ಲಿ ಕನ್ನಡ ಲಿಪಿಯಲ್ಲಿ ಮಂತ್ರ, ವೇದ, ಸಂಸ್ಕೃತ ಶ್ಲೋಕಗಳನ್ನು ಬರೆಯಲು ಬೇಕಾದ ಚಿಹ್ನೆಗಳಿವೆ.

ಮೇಲಿನ ಎಲ್ಲಾ ಫಾಂಟುಗಳ ಡೌನ್ಲೋಡ್ ಕೊಂಡಿ, ಪರವಾನಗಿ (ಗೊತ್ತಾದರೆ) ಮುಂತಾದ ಹೆಚ್ಚಿನ ಮಾಹಿತಿಗಳನ್ನು ಮುಂದೆ ನವೀಕರಿಸುತ್ತೇನೆ.

ಶನಿವಾರ, ಫೆಬ್ರವರಿ 1, 2020

ಕೈಲಾಸ ಮಾನಸ ಸರೋವರ ಯಾತ್ರೆಗೆ ಸಹಾಯಧನ


ಭಾರತದಲ್ಲಿ ಕೆಲವು ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆ ಕೈಗೊಂಡವರಿಗೆ ಸಹಾಯಧನ ಕೊಡುತ್ತಿವೆ. ಅದರಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ಸರ್ಕಾರವು ಕೈಲಾಸ ಯಾತ್ರೆಗೆ ಮೂವತ್ತು ಸಾವಿರ ಮತ್ತು ಚಾರ್ ಧಾಮ್ ಯಾತ್ರೆಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದೆ. ನನ್ನ ತಾಯಿಯವರು ಆಗಸ್ಟ್ ೨೦೧೯ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದರು. ಅದರ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದೆವು. ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಯಾರು ಅರ್ಜಿಸಲ್ಲಿಸ ಬಹುದು?
  • ಯಾತ್ರೆ ಕೈಗೊಂಡ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. 
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. (ಪಾಸ್ ಪೋರ್ಟ್/ ವೋಟರ್ ಐಡಿ/ ರೇಶನ್ ಕಾರ್ಡ್ ದಾಖಲೆ)
  • ಖಾಸಗಿ ಟೂರ್ ಏಜೆನ್ಸಿ ಅಥವಾ ಸರ್ಕಾರದ ಯಾತ್ರಾ ವ್ಯವಸ್ಥೆ ಮೂಲಕ ಹೋದವರು ಅಥವಾ ಸ್ವತಂತ್ರವಾಗಿ ಹೋದವರು.
  • ಯಾವುದೇ ಆದಾಯದ, ಆರ್ಥಿಕ ಮಟ್ಟದ ಮಿತಿಯಿಲ್ಲ.
ಯಾವಾಗ ಸಲ್ಲಿಸಬೇಕು?
ಸಾಮಾನ್ಯವಾಗಿ ಈ ಯಾತ್ರೆಗಳು ಮೇ ಇಂದ ಪ್ರಾರಂಭವಾಗಿ ಆಗಸ್ಟ್ ಸೆಪ್ಟೆಂಬರ್ ವರೆಗೆ ನಡೆಯುತ್ತವೆ. ಅಕ್ಟೋಬರಿನಲ್ಲಿ ಪ್ರಾರಂಭವಾಗಿ ಈ ಸಹಾಯದಧನ ಅರ್ಜಿಗಳನ್ನು ಸಲ್ಲಿಸಬಹುದು.  ಡಿಸೆಂಬರ್ ೧೫ರ ವರೆಗೆ ಕಾಲಾವಕಾಶವಿರುತ್ತದೆ. (೨೦೧೯ರ ಮಾಹಿತಿ)

ಎಲ್ಲಿ ಅರ್ಜಿ ಸಲ್ಲಿಸಬೇಕು?
ಬೆಂಗಳೂರಿನಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಚಾಮರಾಜಪೇಟೆಯಲ್ಲಿರುವ ಟಿಪ್ಪು ಅರಮನೆಯ ರಸ್ತೆಯಲ್ಲಿ ಈ ಕಛೇರಿ ಇದೆ. ಅರಮನೆಯ ಪಕ್ಕದಲ್ಲಿ AIMS ಕಟ್ಟಡ, ಅದರ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ಈ ಕಛೇರಿ ಎರಡನೇ ಮಹಡಿಯಲ್ಲಿದೆ. ಬೆಂಗಳೂರಲ್ಲಿ ಅರ್ಜಿ ಸಲ್ಲಿಸಲು ಆಗದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ತುಂಬಿ, ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.  ಆನ್ ಲೈನ್ ಕೊಂಡಿಗಳು ಇಂತಿವೆ:
೧. ಕೈಲಾಸ ಯಾತ್ರೆ:http://nemaka.kar.nic.in/manasa_2019/
೨. ಚಾರ್ ಧಾಮ್ ಯಾತ್ರೆ: http://nemaka.kar.nic.in/chardham_2019/
(ಕೊನೇ ದಿನಾಂಕ ಮುಗಿದಿದೆ. ಈ ಕೊಂಡಿಗಳು ಮುಂದಿನ ವರ್ಷಕ್ಕೆ ಬದಲಾಗಬಹುದು. ಇಲಾಖೆಯ ವೆಬ್ ಸೈಟ್ ನೋಡಿದರೆ ಅದರಲ್ಲಿ ಪ್ರಸಕ್ತ ವರ್ಷದ ಕೊಂಡಿಗಳಿರುತ್ತವೆ. ಜಾಲತಾಣ: https://temples.karnataka.gov.in/)

ಕೈಲಾಸ ಯಾತ್ರೆಯ ಸಹಾಯಧನ ಅರ್ಜಿಗೆ ಏನೇನು ದಾಖಲೆಗಳು ಬೇಕಾಗುತ್ತವೆ?
೧. ಭರ್ತಿಮಾಡಿದ ಅರ್ಜಿ (ಒಂದೇ ಪುಟ, ಕೆಲವು ಸಾಮಾನ್ಯ ವಿವರಗಳನ್ನು ಕೇಳಲಾಗಿರುತ್ತದೆ)
೨. ಒಂದು ಪಾಸ್ ಪೂರ್ಟ್ ಗಾತ್ರದ ಫೋಟೋ
೩. ಯಾತ್ರಿಯ ಪಾಸ್ ಪೋರ್ಟಿನ ಮೊದಲ, ಕೊನೆಯ ಪುಟಗಳ ಮತ್ತು ನೇಪಾಳ-ಚೀನಾ ಇಮ್ಮಿಗ್ರೇಶನ್ ಸೀಲ್ ಆಗಿರುವ ಪುಟದ ಬಣ್ಣದ ನೆರಳಚ್ಚು.  (ಕಲರ್ ಝೆರಾಕ್ಸ್)
೪. ಚೀನಾದ ಗ್ರೂಪ್ ವೀಸಾ ಮತ್ತು ಪರ್ಮಿಟ್ ಪ್ರತಿ
೫. ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಮೊದಲ ಪುಟದ ಪ್ರತಿ (ಹೆಸರು , ವಿಳಾಸ, ಖಾತೆ ಸಂಖ್ಯೆ, IFSC ಹೊಂದಿರುವಂತದ್ದು)
೮. ರದ್ದುಗೊಳಿಸಿದ ಒಂದು ಚೆಕ್  (ಖಾತೆದಾರರ ಹೆಸರು ಮತ್ತು IFSC ಇರುವಂತದ್ದು)
೯. ಈವರೆಗೆ ಈ ಯಾತ್ರೆಗೆ ಸರ್ಕಾರದಿಂದ ಯಾವುದೇ ಸಹಾಯಧನ ಪಡೆದಿಲ್ಲ ಎಂಬ ಸ್ವಯಂಘೋ‍ಷಣೆಯ ಪತ್ರ. (ಅಫಿಡವಿಟ್). ಇದು ೨೦ ರೂಪಾಯಿಯ ಇ-ಸ್ಟ್ಯಾಂಪ್ ಕಾಗದದ ಮೇಲೆ ಆಗಬೇಕು. ಇದಕ್ಕೆ ನೋಟರಿ ಸಹಿ ಹಾಕಿಸುವ ಅಗತ್ಯವಿಲ್ಲ. ಅರ್ಜಿದಾರರು ಸಹಿ ಹಾಕಿದರೆ ಸಾಕು. ಏನು ಬರೆಯಬೇಕೆಂಬ ಮಾಹಿತಿಯಿರುವ ಪ್ರತಿಯೊಂದನ್ನು ಅರ್ಜಿಯ ಜೊತೆ ಕೊಡುತ್ತಾರೆ.
೧೦. CIPSC Document ಪ್ರತಿ (ಇದು ಯಾತ್ರೆಗೆ ಕೊಡುವ ಪ್ರಮಾಣಪತ್ರ, ಚೀನೀ ಭಾಷೆಯಲ್ಲಿರುತ್ತದೆ. ಯಾತ್ರೆಗೆ ಕರೆದುಕೊಂಡ ಹೋದ ಟ್ರಾವೆಲ್ ಏಜೆನ್ಸಿಯವರಲ್ಲಿ ಪಡಯಬಹುದು )
೧೧. ಕೇಂದ್ರ ಸರ್ಕಾರದ ಪ್ರಮಾಣಪತ್ರ. (ಇದು ಸರ್ಕಾರದಿಂದ ಆಯೋಜಿಸಲ್ಪಟ್ಟ ಯಾತ್ರೆಯ ಮೂಲಕ ಹೋದವರಿಗೆ ಮಾತ್ರ)

ನನ್ನ ಅನುಭವ
ನಾನು ನವೆಂಬರಲ್ಲಿ ಮೇಲೆ ಹೇಳಿದ ಇಲಾಖೆಯ ಕಛೇರಿಗೆ ಇದರ ಬಗ್ಗೆ ವಿಚಾರಿಸಲು ಹೋದೆ. ಅದಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿತ್ತು. ಕೈಲಾಸಯಾತ್ರೆಗೆ ಮತ್ತು ಚಾರ್ ಧಾಮ್ ಯಾತ್ರೆಗೆ ಪ್ರತ್ಯೇಕ ಕೌಂಟರ್ ಗಳನ್ನು ಮಾಡಿದ್ದರು. ಎರಡರಲ್ಲೂ ಸಿಬ್ಬಂದಿ ಅರ್ಜಿಯನ್ನು ಕೊಟ್ಟು ಅಗತ್ಯ ಮಾಹಿತಿ ಒದಗಿಸುತ್ತಿದ್ದರು. ಅರ್ಜಿಯನ್ನು ಮನೆಗೆ ತಂದು ಭರ್ತಿಮಾಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಂಡು ಒಂದು ವಾರದ ನಂತರ ಎಲ್ಲವನ್ನೂ ಸಲ್ಲಿಸಿದೆ. ತೆಗೆದುಕೊಳ್ಳುವಾಗ ಎಲ್ಲಾ ಫೋಟೋಕಾಪಿಗಳ (ಝೆರಾಕ್ಸ್) ಮೂಲಪ್ರತಿಗಳನ್ನು ಪರಿಶೀಲನೆ ಮಾಡಿದರು. ಯಾವ ತೊಂದರೆ ತೊಡಕು ಇಲ್ಲದೇ ಮೇಜಿನಿಂದ ಮೇಜಿಗೆ ಓಡಾಡುವ ಪ್ರಮೇಯ ಇಲ್ಲದೇ ಕೆಲಸ ಆಯಿತು. ಕಛೇರಿಯು ನೀಟಾಗಿ ಇತ್ತು ಮತ್ತು ಸಿಬ್ಬಂದಿಯೂ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು. ಸಾಮಾನ್ಯ 'ಸರ್ಕಾರಿ ಕಛೇರಿ'ಯಂತಿರದೇ  ವ್ಯವಸ್ಥಿತವಾಗಿ ನಡೆಯುತ್ತಿದ್ದಂತೆ ಕಂಡುಬಂತು. ಒಮ್ಮೆ ಅರ್ಜಿ ತರಲು, ಒಮ್ಮೆ ಅರ್ಜಿ ಸಲ್ಲಿಸಲು, ಒಟ್ಟು ಎರಡು ಬಾರಿ ಕಛೇರಿಗೆ ಹೋಗಬೇಕಾಯಿತು. ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರೆ ಮೊದಲ ದಿನವೇ ಅರ್ಜಿ ಸಲ್ಲಿಸಬಹುದಿತ್ತು. ಬೇಕಿದ್ದಲ್ಲಿ ಅಫಿಡವಿಟ್ ಮಾಡಿಸಲು ಅಲ್ಲೇ ಪಕ್ಕದ ಪಂಪಮಹಾಕವಿ ರಸ್ತೆಯಲ್ಲಿ ಸ್ಟ್ಯಾಂಪ್ ಪೇಪರ್ ಮತ್ತು ಟೈಪ್ ಮಾಡಿಕೊಡುವ ಜನ ಇದ್ದಾರೆ. ದತ್ತಿ ಇಲಾಖೆಯ ಸಿಬ್ಬಂದಿಗೆ ಕೇಳಿದರೆ ಆ ಮಾಹಿತಿ ಕೊಡುತ್ತಾರೆ.

ಅರ್ಜಿ ಸಲ್ಲಿಸಲು ಆದ ಒಟ್ಟು ಖರ್ಚು(ತಿರುಗಾಟ ಹೊರತುಪಡಿಸಿ):
  • ಸ್ಟ್ಯಾಂಪ್ ಪೇಪರ್ : ಮೂವತ್ತು ರೂಪಾಯಿ (೨೦ ರೂ ಬೆಲೆ + ೧೦ ರೂ ಕಮಿಶನ್) - ನಾನೇ ಟೈಪ್ ಮಾಡಿ ಪ್ರಿಂಟ್ ಹಾಕಿಕೊಂಡಿದ್ದರಿಂದ  ಟೈಪಿಂಗ್  ಮಾಡಿಸುವ ಖರ್ಚು ಉಳಿಯಿತು.
  • ಪಾಸ್ ಪೋರ್ಟಿನ ಮೂರು ಪುಟ ಗಳ ಕಲರ್ ಝೆರಾಕ್ಸಿಗೆ ಮೂವತ್ತು ರೂ
  • ಬೇರೆಲ್ಲಾ ದಾಖಲೆಗಳ ಝೆರಾಕ್ಸಿಗೆ ಒಟ್ಟು ೧೦ ರೂ.
ಇತರ ಒಂದಿಷ್ಟು ಮಾಹಿತಿಗಳು:
  • ಯಾತ್ರಿಗಳ ಪರವಾಗಿ ಬೇರೆಯವರು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಯಾತ್ರಿಯ ಸಹಿ ಮತ್ತು ಎಲ್ಲಾ ದಾಖಲೆಗಳ ಮೂಲಪ್ರತಿಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯ. (ನನ್ನ ತಾಯಿಯವರ ಸಹಿಯನ್ನು ಹಾಕಿಸಿಕೊಂಡು ಅವರ ಪರವಾಗಿ ಹೋಗಿ ನಾನು ಅರ್ಜಿ ಸಲ್ಲಿಸಿದ್ದೇನೆ)
  • ಚಾರ್ ಧಾಮ್ ಯಾತ್ರೆಗೆ ಮುಖ್ಯವಾಗಿ ಪಿಲಿಗ್ರಿಮೇಜ್ ಕಾರ್ಡ್ ಜೊತೆಗೆ ಮೇಲೆ ಹೇಳಿದ ಕೆಲವು ದಾಖಲೆಗಳು ಸಾಕಾಗುತ್ತವೆ.
  • ಸಹಾಯಧನಕ್ಕೆ ಅಂತ ಇಂತಿಷ್ಟು ಬಜೆಟ್ ನಿಗದಿಯಾಗಿರುವುದರಿಂದ ಹೆಚ್ಚು ಜನ ಅರ್ಜಿ ಸಲ್ಲಿಸಿದರೆ ಸಾಮಾನ್ಯವಾಗಿ ಲಾಟರಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. (ಸುಮಾರು ೧೫೦೦ ಕೈಲಾಸ ಯಾತ್ರಿಕರಿಗೆ ಸಿಗಬಹುದು)
  • ಜನವರಿಯಲ್ಲಿ ಈ ಪ್ರಕ್ರಿಯೆ ನಡೆದು ಅರ್ಜಿದಾರದ ಖಾತೆಗೆ ಹಣ ಜಮೆಯಾಗುತ್ತದೆ ಎಂದು ತಿಳಿಸಲಾಗಿದೆ.  (ಜನವರಿ ತಿಂಗಳ ಕೊನೆಯ ದಿನವಾದ ಇಂದಿವರೆಗೆ ಬಂದಿಲ್ಲ, ಮುಂದೆ ಮಾಹಿತಿ ನವೀಕರಿಸುತ್ತೇನೆ)
ಫೆಬ್ರವರಿ ಹದಿಮೂರನೇ ತಾರೀಖು ಮೂವತ್ತು ಸಾವಿರ ರೂಪಾಯಿಗಳ ಸಹಾಯಧನವು ಸರ್ಕಾರದಿಂದ ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆ.

ಭಾನುವಾರ, ನವೆಂಬರ್ 17, 2019

’ವಿಶ್ವದರ್ಶನ, ಬಜೆಟ್’ನಲ್ಲಿ!' ಪುಸ್ತಕ ಪರಿಚಯ

ಶ್ರೀನಿಧಿ ಹಂದೆ ಚೆನ್ನೈಯಲ್ಲಿ ನೆಲೆಸಿರುವ ಒಬ್ಬ ಟ್ರಾವೆಲ್ ಬ್ಲಾಗರ್. ಮೂವತ್ತೈದಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವ ಇವರು ತಮ್ಮ ಪ್ರತಿ ಪ್ರವಾಸದ ವಿವರಗಳನ್ನು ಒಂದು ದಶಕದಿಂದ ತಮ್ಮ ಬ್ಲಾಗಿನಲ್ಲಿ ಬರೆಯುತ್ತಾ ಬಂದಿದ್ದಾರೆ. ಅದಲ್ಲದೇ ಇನ್ನೂ ಅನೇಕ ಉಪಯುಕ್ತ ವಿಷಯಗಳ ಬಗ್ಗೆ ಬರೆಯುತ್ತಿರುತ್ತಾರೆ. ಅವರು ೨೦೦೬ರಲ್ಲಿ ಬ್ಲಾಗ್ ಶುರುಮಾಡಿದ್ದು ನಾನು ಕೂಡ ಸುಮಾರು ಅದೇ ಕಾಲಾವಧಿಯಲ್ಲಿ ಬ್ಲಾಗ್ ಬರವಣಿಗೆ ಆರಂಭಿಸಿದ್ದು. ಅಂದಿನಿಂದಲೂ ಸಹ ಅವರ ಬ್ಲಾಗ್ ಬರಹಗಳನ್ನು ಓದಿಕೊಂಡು ಬಂದಿದ್ದೇನೆ. ಹಲವು ಒಳ್ಳೆಯ ತಾಣಗಳ ಬಗ್ಗೆ ಆವರ ಬ್ಲಾಗಿನಿಂದ ಮಾಹಿತಿ ದೊರೆತು ಅಲ್ಲಿಗೆ ನಾನು ಭೇಟಿಕೊಟ್ಟಿದ್ದೇನೆ. ಪ್ರಯಾಣಕ್ಕೆ ಮತ್ತು ತಯಾರಿಗೆ ಸಹಾಯವಾಗುವ ಮಾಹಿತಿಗಳು. ಟಿಪ್ಸ್ ಗಳು ಅವರ ಬ್ಲಾಗಿನಿಂದ ದೊರಕಿವೆ.

ನವೆಂಬರ್ ಒಂದರಂದು ಅವರು ಹೊರತಂದಿರುವ ಅವರ ಮೊದಲ ಪುಸ್ತಕ ’ವಿಶ್ವದರ್ಶನ, ಬಜೆಟ್’ನಲ್ಲಿ’! - ಅತಿ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರಯಾಣ ಕೈಗೊಳ್ಳುವುದು ಹೇಗೆ? . ಈ ಪುಸ್ತಕ ಪ್ರಿಂಟ್ ಆನ್ ಡಿಮ್ಯಾಂಡ್ ರೂಪದಲ್ಲಿ ದೊರೆಯುತ್ತಿದೆ. ಅಂದರೆ, ಯಾರಾದರೂ ಆರ್ಡರ್ ಮಾಡಿದರೆ ಪ್ರಿಂಟ್ ಮಾಡಿಕೊಡಲಾಗುತ್ತದೆ. Notionpress ಎಂಬ ಪ್ರಕಾಶನ ತಾಣದಲ್ಲಿ ಖರೀದಿಸಿ ಆರ್ಡರ್ ಮಾಡಿದರೆ ಪುಸ್ತಕವನ್ನು ಮುದ್ರಿಸಿ ಕಳಿಸಿಕೊಡುತ್ತಾರೆ. ನಾನು ಆರ್ಡರ್ ಮಾಡಿದ ನಾಲ್ಕೈದು ದಿನಗಳಲ್ಲಿ ಪುಸ್ತಕ ತಲುಪಿತು. ಪುಸ್ತಕದ ರಕ್ಷಾಪುಟ ಮತ್ತು ಒಳಹಾಳೆಗಳ ಗುಣಮಟ್ಟ ಚೆನ್ನಾಗಿದೆ. ಪುಸ್ತಕದ ವಿಷಯ ಪ್ರಸ್ತುತಿಯು ಅವರ ಬ್ಲಾಗ್ ಶೈಲಿಯಲ್ಲಿಯೇ ಬಹಳ ನೀಟಾಗಿ ಹೋಲಿಕೆಯ ಕೋಷ್ಟಕಗಳು, ಉಪಶೀರ್ಷಿಕೆಗಳು, point wise ಮಾಹಿತಿಗಳನ್ನು ಒಳಗೊಂಡಿದೆ. ಪುಸ್ತಕದ ಒಂದು ಸಣ್ಣ ಪರಿಚಯ ಮಾಡಿಕೊಡುತ್ತಿದ್ದೇನೆ.

ವಿದೇಶಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಸುಂದರ, ಆಸಕ್ತಿಕರ ಸ್ಥಳಗಳಿಗೆ ಭೇಟಿಕೊಡುವುದು ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವಿದೇಶಗಳಿಗೆ ಪ್ರಯಾಣಿಸಲು ಬರೀ ಆಸಕ್ತಿ, ಇಷ್ಟ ಇದ್ದರೆ ಸಾಲದಲ್ಲ. ನಮ್ಮ ಜೀವನದ ಕೆಲಸಗಳ ನಡುವೆ ಸಮಯ ಬೇಕು, ಅದನ್ನು ಹೇಗೋ ಹೊಂದಿಸಿಕೊಂಡರೂ ಮುಖ್ಯವಾದ ಇನ್ನೊಂದು ಅಂಶವೆಂದರೆ ಹಣ! ವಿದೇಶ ಪ್ರವಾಸದ ಪ್ಯಾಕೇಜ್ ಟೂರ್ ಗಳು ದುಬಾರಿ ಅನ್ನಿಸುವಷ್ಟಿರುತ್ತದೆ. ಕುಟುಂಬ ಸಮೇತ ಹೋದರಂತೂ ಉಳಿತಾಯದ ಹಣಕ್ಕೆ ದೊಡ್ಡಮಟ್ಟದ ಕತ್ತರಿ ಬಿದ್ದಂತೆ. ಹಾಗಂತ ಯಾವುದೋ ದೇಶಕ್ಕೆ ನಾವೇ ಯೋಜನೆ ಹಾಕಿಕೊಂಡು ಕಡಿಮೆ ಖರ್ಚಿನಲ್ಲಿ ಪ್ರಯಾಣಿಸುವುದು ಸಾಧ್ಯವಿಲ್ಲವಾ ಅಂತ ಕೇಳಿದರೆ ಖಂಡಿತ ಸಾಧ್ಯವಿದೆ. ಆದರೆ ಅದಕ್ಕೆ ತಕ್ಕುದಾದ ತಯಾರಿಬೇಕು, ಮಾಹಿತಿಗಳನ್ನು ತಿಳಿದುಕೊಳ್ಳುವ ದಾರಿ ಗೊತ್ತಿರಬೇಕು, ಕಡಿಮೆ ಖರ್ಚಿನ ಪ್ರಯಾಣ, ಒಳನಾಡಿನ ಓಡಾಟಗಳು, ಆಹಾರ, ವಸತಿಗಳನ್ನು ಸೂಕ್ತಬೆಲೆಯಲ್ಲಿ ನಿರ್ವಹಣೆ ಮಾಡಿಕೊಳ್ಳುವ ಜಾಣ್ಮೆ ಬೇಕಾಗುತ್ತದೆ. ಈಗಿನ ಅಂತರಜಾಲದ ಯುಗದಲ್ಲಿ ಇವೆಲ್ಲವೂ ಬಹಳ ಕಷ್ಟದ ವಿಚಾರಗಳೇನಲ್ಲ, ಆದರೆ ಯಾವುದನ್ನು ಎಲ್ಲೆಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬ ಮಾರ್ಗದರ್ಶಕ ಮಾಹಿತಿಯ ಅಗತ್ಯವಂತೂ ಇದೆ.
ಕನ್ನಡದಲ್ಲಿ ಪ್ರವಾಸ ಸಾಹಿತ್ಯಗಳಿಗೇನೂ ಕೊರತೆಯಿಲ್ಲ. ನೂರಾರು ಪ್ರವಾಸಕಥನದ ಪುಸ್ತಕಗಳಿವೆ. ಆದರೆ ವಿದೇಶ ಪ್ರವಾಸದ ಯೋಜನೆಯನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಪೂರೈಸಿಕೊಳ್ಳಬಹುದು ಅಂತ ಇದುವರೆಗೂ ಯಾವ ಪುಸ್ತಕ ಬಂದಹಾಗಿಲ್ಲ. ಈ ನಿಟ್ಟಿನಲ್ಲಿ ಉಪಯೋಗವಾಗುವಂತೆ ಬಂದಿರುವ ಪುಸ್ತಕ - ’ವಿಶ್ವದರ್ಶನ, ಬಜೆಟ್’ನಲ್ಲಿ’! ಇದರ ಲೇಖಕರು ಬಹುತೇಕ ಪ್ರವಾಸಗಳನ್ನು ತಾವೇ ಯೋಜಿಸಿಕೊಂಡು ಪೂರೈಸಿದ್ದಾರೆ. ಹೀಗಾಗಿ ಈ ಪುಸ್ತಕವು ಸ್ವಾನುಭವಗಳ ಆಧಾರದಿಂದ ಮೂಡಿಬಂದಿರುವ ಫಸ್ಟ್ ಹ್ಯಾಂಡ್ ಮಾಹಿತಿಯಾಗಿದ್ದು ಪ್ರಸ್ತುತವೆನಿಸುತ್ತದೆ.
ಪ್ರವಾಸಕ್ಕೆ ದೇಶದ ಆಯ್ಕೆ ಹೇಗೆ, ಕಡಿಮೆಖರ್ಚಿನ ವಿಮಾನಪ್ರಯಾಣ ಬುಕ್ ಮಾಡುವುದು ಹೇಗೆ, ವೀಸಾ ಮಾಡಿಸಿಕೊಳ್ಳುವುದು, ವಿದೇಶಿ ಕರೆನ್ಸಿ ಪಡೆದುಕೊಳ್ಳುವುದು, ನಮ್ಮ ಆಸಕ್ತಿಯ ಸ್ಥಳಗಳನ್ನು ಹುಡುಕಿಕೊಳ್ಳುವುದು ಎಂಬಂತಹ ವಿಷಯಗಳಿಂದ ಹಿಡಿದು ವಿದೇಶಗಳಲ್ಲಿ ಭಾಷೆ, ಆಹಾರ, ತಿರುಗಾಟ, ಆಹಾರ, ವಸತಿ, ಚಟುವಟಿಕೆಗಳು, ಸುರಕ್ಷತೆ, ಆಗಬಹುದಾದ ತೊಂದರೆ ನಷ್ಟಗಳನ್ನು ನಿಭಾಯಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಪುಸ್ತಕದಲ್ಲಿ ಒದಗಿಸಿದ್ದಾರೆ. ಇದಕ್ಕೆ ನೆರವಾಗುವ ಕೆಲವೊಂದು ಜಾಲತಾಣಗಳು, ಹಣ ಉಳಿಸುವ ವಿಧಾನಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆಗಳ ವಿವರಗಳಿವೆ. ಬೇರೆ ಬೇರೆ ಕೆಲ ದೇಶಗಳಲ್ಲಿ ಭಾರತೀಯರನ್ನು ಒಳಗೆ ಬಿಟ್ಟುಕೊಳ್ಳಲು ಅವರಿಗಿರುವ ಧೋರಣೆಗಳು, ಪ್ರವಾಸಿಗರನ್ನು ದೋಚುವ, ಮೋಸಮಾಡುವ ಘಟನೆಗಳು, ಊಹಿಸಿರದಂತಹ ಕೆಲ ವ್ಯತಿರಿಕ್ತ ವಿದ್ಯಮಾನಗಳ ಅನುಭವಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ.

ಒಟ್ಟಾರೆ ಪುಸ್ತಕವನ್ನು ಮಾಹಿತಿಯ ದೃಷ್ಟಿಯಿಂದ ಬರೆದಿರುವುದು ಸ್ಪಷ್ಟವಾಗಿದ್ದು ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವ ಆಸಕ್ತಿಗೆ ಮಾರ್ಗದರ್ಶನ ನೀಡುವಂತಹ ಕೈಪಿಡಿಯಂತೆ ಈ ೧೦೦ ಪುಟಗಳ ಪುಸ್ತಕ ಮೂಡಿಬಂದಿದೆ. ಈ ಕೆಳಗಿನ ತಾಣಗಳಲ್ಲಿ ಪುಸ್ತಕ ಖರೀದಿಸಬಹುದು.

*********

ನವೆಂಬರ್ ೧೯, ೨೦೧೯ ರಂದು ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಈ ಪುಸ್ತಕ ಪರಿಚಯ ಪ್ರಕಟವಾಗಿದೆ.